ಸಬಕೋ ಸನ್ಮತಿ ದೇ ಭಗವಾನ್


ಇಂದು ಗಾಂಧಿ ದಿನ. ‘ಸಬಕೋ ಸನ್ಮತಿ ದೇ ಭಗವಾನ್’ ಎಂದ ಗಾಂಧಿಯನ್ನು ‘ಋಜುವಾತು’ ಬ್ಲಾಗ್ ನಲ್ಲಿ ಯು ಆರ್ ಅನಂತಮೂರ್ತಿ ನೆನಪಿಸಿಕೊಂಡಿದ್ದಾರೆ. ಯಾರಿಗೆ ಈ ದಿನಗಳಲಿ ಸನ್ಮತಿ ಬೇಕಾಗಿದೆ ಎಂಬುದನ್ನು ಚರ್ಚಿಸಿದ್ದಾರೆ-

ಯು ಆರ್ ಅನಂತಮೂರ್ತಿ
ಪ್ರಾರ್ಥನೆಯಲ್ಲಿ ತೊಡಗಿರುವವರ ಮೇಲೆ-ಅವರು ಯಾವ ದೇವರಲ್ಲಿ ಪ್ರಾರ್ಥಿಸುತ್ತಿದ್ದರೂ-ದಾಳಿ ಮಾಡುವುದು ಅನಾಗರಿಕ ಮಾತ್ರವಲ್ಲ, ಅಧಾರ್ಮಿಕ ಕೂಡ. ಆದರೆ ಧರ್ಮ ರಕ್ಷಣೆಯ ಹೆಸರಿನಲ್ಲೇ ಸಂಘ ಪರಿವಾರದ ಸಂಘಟನೆಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾರ್ಥನೆಯಲ್ಲಿ ತೊಡಗಿರುವವರ ಮೇಲೆ ದಾಳಿ ನಡೆಸಿದ್ದಾರೆ. ‘ಯಾವ ದೇವರನ್ನು ಪ್ರಾರ್ಥಿಸಿದರೂ ಅದು ಕೇಶವನನ್ನು ತಲುಪುತ್ತದೆ’ ಎಂದು ನಂಬುವ ಹಿಂದೂ ಆದವನು ಹೀಗೆ ವರ್ತಿಸುವುದು ಹೇಯವಾದುದ್ದು. ಇಂಥ ದಾಳಿಗಳು ಹಿಂದೂ ನಾಗರಿಕತೆಯನ್ನು ನಾಶಗೊಳಿಸುತ್ತಿವೆ.
ಕ್ರೈಸ್ತರು ಹೊಸಗನ್ನಡದ ಅಭಿವೃದ್ಧಿಗೆ ತಮ್ಮದೇ ಆದ ಕಾಣಿಕೆಗಳನ್ನು ನೀಡಿದ್ದಾರೆ. ರೆವೆರೆಂಡ್ ಫಾದರ್ ಫರ್ಡಿನಾಂಡ್ ಕಿಟೆಲ್ ಮೊದಲ ಕನ್ನಡ ನಿಘಂಟನ್ನು ರಚಿಸಿದವರು. ಕರ್ನಾಟಕದ ಅಭಿವೃದ್ಧಿಯಲ್ಲಿಯೂ ಕ್ರೈಸ್ತರ ಪಾತ್ರ ಅನನ್ಯ. ಸರಕಾರ ತಲುಪಲೂ ಆಗದಿರುವ ಅನೇಕ ಕಡೆಗಳಲ್ಲಿ ಅವರು ಈಗಲೂ ಶಾಲೆಗಳು ಮತ್ತು ಆಸ್ಪತ್ರೆಗಳನ್ನು ನಡೆಸುತ್ತಿದ್ದಾರೆ.
ಈಗ ಕರ್ನಾಟಕದಲ್ಲಿ ನಡೆಯುತ್ತಿರುವುದು ಅಧಿಕಾರದಲ್ಲಿರುವ ಸರಕಾರದ ಚುನಾವಣಾ ಸಿದ್ಧತೆಯ ಸಿನಿಕ ತಂತ್ರವಲ್ಲದೆ ಬೇರೇನೂ ಅಲ್ಲ. ನಮ್ಮ ಮುಖ್ಯಮಂತ್ರಿ ಅಧಿಕಾರಕ್ಕೆ ಬಂದ ತಕ್ಷಣ ಕರ್ನಾಟಕವನ್ನು ಇನ್ನೊಂದು ಗುಜರಾತ್ ಮಾಡುವುದಾಗಿ ಹೇಳಿದ್ದರು. ಅಂದರೆ ಅವರಿಗೆ ಗುಜರಾತ್‌ನ ನರೇಂದ್ರ ಮೋದಿಯೇ ಆದರ್ಶ. ನಾನು ಹುಟ್ಟಿ ಬೆಳೆದ ಜಿಲ್ಲೆಯವರೇ ಆಗಿರುವ ರೈತ ನಾಯಕ ಬಿ.ಎಸ್ ಯಡಿಯೂರಪ್ಪ ಈಗ ಕರ್ನಾಟಕದ ಮೋದಿಯಾಗಲು ಹೊರಟಿದ್ದಾರೆ.! ಕುವೆಂಪು, ಶಾಂತವೇರಿಯಂತಹವರನ್ನು ಪಡೆದ ಜಿಲ್ಲೆಯಲ್ಲಿ ಬೆಳೆದ ನಮ್ಮ ಯಡ್ಯೂರಪ್ಪನವರು ಹೀಗಾಗಿರುವುದು ಒಂದು ದುರಂತ .”

ಮಂಗಳೂರು ಮತ್ತು ಉಡುಪಿಯಲ್ಲಿ ಅಲ್ಪಸಂಖ್ಯಾತ ಕ್ರೈಸ್ತರ ಮತಗಳು ತಮಗೆ ದೊರೆಯುವುದಿಲ್ಲ ಎಂಬುದು ಬಿಜೆಪಿಗೆ ತಿಳಿದಿದೆ. ಇದೇ ಕಾರಣಕ್ಕೆ ಅದು ಕ್ರೈಸ್ತರ ಮೇಲಿನ ದಾಳಿಗಳ ಕುರಿತು ಕಣ್ಣು ಮುಚ್ಚಿಕೊಂಡಿದೆ. ಈ ದಾಳಿಗಳು ತಮ್ಮ ಹಿಂದೂ ಮತ ಬ್ಯಾಂಕನ್ನು ಇನ್ನಷ್ಟು ಖಚಿತ ಪಡಿಸುತ್ತದೆಂದು ಸರಕಾರ ನಡೆಸುವವರೂ ಭಾವಿಸುವುದು ಸಿನಿಕತನದ ಪರಮಾವಧಿ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಬೇಕಾದ ಸರಕಾರವು, ಚರ್ಚ್‌ಗಳು ಮತ್ತು ಪ್ರಾರ್ಥನಾ ಮಂದಿರಗಳ ಮೇಲೆ ನಡೆದ ದಾಳಿಯನ್ನು ‘ಬಲವಂತದ ಮತಾಂತರ’ ಎಂಬ ವಾದವನ್ನು ಬಳಸಿಕೊಂಡು ಸಮರ್ಥಿಸುವುದು ಬೇಜವಾಬ್ದಾರಿಯ ದ್ಯೋತಕ.
ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುತ್ತಿರುವವರು ಯಾರು? ಕೆಳ ಜಾತಿಗಳಿಂದ ಬಂದವರು; ತಮ್ಮ ಜಾತಿ ಯಾವುದೆಂದು ಹೇಳಿಕೊಳ್ಳಲೇ ನಾಚಿಕೊಳ್ಳುವವರು. ಇದಕ್ಕೆ ಕಾರಣರಾದವರು ಹಿಂದೂಗಳಾದ ನಾವೇ ಅಲ್ಲವೆ?. ಕ್ರೈಸ್ತ ಧರ್ಮ ಅವರಿಗೊಂದು ಗೌರವಯುತ ಅನನ್ಯತೆಯನ್ನು ನೀಡುತ್ತದೆ. ಉದ್ಯೋಗ ಹಾಗೂ ಶಿಕ್ಷಣದ ಭರವಸೆಯೂ ಅವರನ್ನೂ ಇದರತ್ತ ಆಕರ್ಷಿಸಿರಬಹುದು. ಧರ್ಮದ ಪರಿವರ್ತನೆ ಹೃದಯದ ಪರಿವರ್ತನೆಯೂ ಆಗಿರಬೇಕೆಂಬುದು ಕ್ರೈಸ್ತರಿಗೆ ತಿಳಿದಿದೆ. ಕೇವಲ ಲೌಕಿಕ ಕಾರಣಕ್ಕಾಗಿ ಮತಪರಿವರ್ತನೆಯನ್ನು ಮಾಡುವುದು ತಮ್ಮ ಧರ್ಮಕ್ಕೇ ಅಪಚಾರವೆಸಗಿದಂತೆ ಎಂಬುದು ಮದರ್ ಥೆರೇಸಾರಂತಹ ಮಹಾತಾಯಿಗೂ ಗೊತ್ತಿತ್ತು
ಕೆಳ ಜಾತಿಯಲ್ಲಿ ಹುಟ್ಟಿದ್ದ ಕೇರಳದ ನಾರಾಯಣ ಗುರು ಜಾತೀಯತೆಯಿಂದ ನಾಶದತ್ತ ಸಾಗುತ್ತಿದ್ದ ಹಿಂದೂ ಸಮಾಜವನ್ನು ಸುಧಾರಣೆಗೆ ಒಳಪಡಿಸಿದರು. ಅಂಥವರು ಈಗಲೂ ಇದ್ದಿದ್ದರೆ ಕೆಳ ಜಾತಿಯ ಹಿಂದೂಗಳು ಕ್ರೈಸ್ತ ಧರ್ಮಕ್ಕೆ ಮತಾಂತರವಾಗಬೇಕಾದ ಪರಿಸ್ಥಿತಿಯೇ ಉದ್ಭವಿಸುತ್ತಿರಲಿಲ್ಲ. ನಾರಾಯಣ ಗುರುಗಳು ಒಬ್ಬ
ಅದ್ವೈತಿ; ಬಹುಶಃ ತಾತ್ವಿಕವಾಗಿ ಅದ್ವೈತದಲ್ಲಿ ನಂಬಿದ್ದ ಆದಿ ಶಂಕರಾಚಾರ್ಯರ ನಂತರದಲ್ಲಿ ವಾಸ್ತವದಲ್ಲೂ ಮಹಾ ಅದ್ವೈತಿಯಾಗಿದ್ದವರೆಂದರೆ ಇವರೇ ಇರಬೇಕು.
ಆಡಳಿತಾರೂಢ ಬಿಜೆಪಿ ಸರಕಾರದ ಅಧೀನದಲ್ಲಿರುವ ಪೊಲೀಸರು ಈಗ ನಡೆಯುತ್ತಿರುವ ದಾಳಿಗಳ ಬಗ್ಗೆ ಕುರುಡಾಗಿದ್ದಾರೆ. ಪೊಲೀಸರು ಈ ದಾಳಿಗಳನ್ನು ನೇರವಾಗಿ ಬೆಂಬಲಿಸದೇ ಇದ್ದರೂ ದಾಳಿ ನಡೆಸುವವರು ಮತ್ತು ಪೊಲೀಸರ ಮಧ್ಯೆ ಅನೈತಿಕ ಒಪ್ಪಂದವೊಂದಿರುವಂತೆ ಕಾಣಿಸುತ್ತದೆ. ಗುಜರಾತ್ ನ ಹಿಂಸೆಯ ನಾಟಕ ಇಲ್ಲಿ ಮರುಪ್ರದರ್ಶನಗೊಳ್ಳುತ್ತಿದೆ. ಹಿಂದೂ ಮತಾಚರಣೆಗಳನ್ನು ಕಟುವಾಗಿ, ನಿಷ್ಠುರವಾಗಿ ಟೀಕಿಸಲು ಹಿಂಜರಿಯದ ವೀರಶೈವ ವಚನಕಾರರನ್ನೂ, ವೈಷ್ಣವ ದಾಸರನ್ನೂ , ಈ ಎಲ್ಲರಿಗೂ ಹಿಂದೆ ಬುದ್ಧಗುರುವನ್ನೂ, ನಮ್ಮ ಕಾಲದಲ್ಲೇ ಕುವೆಂಪು, ರವೀಂದ್ರನಾಥ ಠಾಕೂರರನ್ನೂ, ಶಿವರಾಮ ಕಾರಂತರನ್ನೂ ಪಡೆದ ನಾವು
ಸಂಘಪರಿವಾರದವರ ನಂಜಿನ ಹಿಂದೂ ಕಲ್ಪನೆಯಿಂದ ತಲೆ ತಗ್ಗಿಸಬೇಕಾಗಿದೆ.
“ನೂರು ದೇವರನೆಲ್ಲ ನೂಕಾಚೆ ದೂರ
ಭಾರತಾಂಬೆಯೇ ದೇವಿ ನಮಗಿಂದು
ಪೂಜಿಸುವ ಬಾರಾ
ಶತಮಾನಗಳು ಬರಿಯ ಜಡಶಿಲೆಯ ಪೂಜಿಸಾಯ್ತು,
ಹಾವ್ಗಳಿಗೆ ಹಾಲೆರೆದು ಪೋಷಿಸಾಯ್ತು,
ಬಿಸಲು ಮಳೆ-ಗಾಳಿ ಬೆಂಕಿಯನೆಲ್ಲ ಬೇಡಿಯಾಯ್ತು,
ದಾಸರನು ಪೂಜಿಸಿಯೇ ದಾಸ್ಯವಾಯ್ತು.”
ಈ ಮಾತು ಕುವೆಂಪುರವರದು; ಯಾವ ಹಿಂದೂ ದ್ವೇಷಿ ಪಾದ್ರಿಯದೂ ಅಲ್ಲ.
“ವೇದವೆಂಬುದು ಓದಿನ ಮಾತು
ಶಾಸ್ರವೆಂಬುದು ಸಂತೆಯ ಸುದ್ದಿ
ಪುರಾಣವೆಂಬುದು ಪುಂಡರ ಗೋಷ್ಟಿ,
ತರ್ಕವೆಂಬುದು ತಗರ ಹೋರಟೆ
ಬಕುತಿ ಎಂಬುದು ತೋರುಂಬ ಲಾಭ.
ಗುಹೇಶ್ವರನೆಂಬುದು ಮೀರಿದ ಘನವು
ಇದು ನಮ್ಮ ಅಲ್ಲಮನ ಮಾತು; ಯಾವ ಮುಸ್ಲಿಮ್ ಮೌಲ್ವಿಯದೂ ಅಲ್ಲ.
ನಮ್ಮ ಬಿಜೆಪಿ ಆಡಳಿತದಲ್ಲಿ ಇವೆಲ್ಲವೂ ಕಾನೂನು ಬಾಹಿರ. ಕುವೆಂಪು ಮತ್ತು ಅಲ್ಲಮ ಶಿಕ್ಷಾರ್ಹರು. ಯಾಕೆಂದರೆ ಅವರು ನಾವು ನಂಬುವ ದೇವರನ್ನು ಹೀಗೆಳಿದಿದ್ದಾರೆ.
ನಾರಾಯಣ ಗುರು ನಮ್ಮ ನಾಲ್ಕು ವೇದಗಳ ಕಲ್ಪನೆಯನ್ನೇ ಬದಲಾಯಿಸಿಕೊಳ್ಳಬೇಕೆಂದು ಅಭಿಪ್ರಾಯ ಪಟ್ಟಿದ್ದರು. ಅವರು ಹೇಳುವಂತೆ ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದಗಳೆಂಬವು ಅವುಗಳ ಕಾಲಕ್ಕೆ ನಾಲ್ಕು ವೇದಗಳಾಗಿದ್ದವು. ಈಗ ಅರಿವು ವಿಸ್ತರಿಸಿದೆ. ಈ ನಾಲ್ಕು ವೇದಗಳನ್ನು ಒಂದು ವೇದವಾಗಿಯೂ ಬೈಬಲ್, ಕುರಾನ್ ಹಾಗೂ ಬೌದ್ಧ ಗ್ರಂಥಗಳನ್ನು ಇನ್ನುಳಿದ ಮೂರು ವೇದಗಳನ್ನಾಗಿಯೂ ಪರಿಗಣಿಸಬೇಕು. ಯಾವ ಕ್ರೈಸ್ತ ಪಾದ್ರಿಯೂ ನಮ್ಮ ಭಾರತೀಯ
ಸಂತ ಪರಂಪರೆ, ಸಾಹಿತ್ಯ ಪರಂಪರೆ ಟೀಕಿಸಿದಷ್ಟು ಕಟುವಾಗಿ, ಆಳವಾಗಿ ಹಿಂದೂ ಆಚರಣೆಗಳನ್ನು ಟೀಕಿಸಲಾರರು. ಸತತ ವಿಮರ್ಶೆಯ ಅಗ್ನಿದಿವ್ಯದಲ್ಲಿ ತನ್ನ ಚೈತನ್ಯವನ್ನು ಜೀವಂತಗೊಳಸಿಕೊಳ್ಳುವ ನಮ್ಮ ಹಿಂದೂ ನಾಗರಿಕತೆಯನ್ನು, ಕಾಪಾಡುವ ನೆವದಲ್ಲಿ, ಸಂಘಪರಿವಾರದವರು ನಾಶಮಾಡುತ್ತ ಇದ್ದಾರೆ. (ಒಂದು ಕಥೆಯಿದೆ: ವಿವೇಕಾನಂದರು ಕಾಶ್ಮೀರದಲ್ಲಿ ದೇವಿಯ ಎದುರು ನಿಂತು ಹಲಬುತ್ತಾರೆ: “ತಾಯಿ, ನಿನ್ನನ್ನು ನಾನು ಕಾಪಾಡಲಾರದೇ ಹೋದೆನಲ್ಲ!” ಆಗ ದೇವಿ ಹೀಗೆ ಉತ್ತರಿಸುತ್ತಾಳೆ: ” ನೀನು ನನ್ನನ್ನು ಕಾಪಾಡುವುದೊ? ಅಥವಾ ನಾನು ನಿನ್ನನ್ನು ಕಾಪಾಡಬೇಕಾದವಳೊ?”)
ದೇವರ ಅಗತ್ಯವನ್ನೇ ದಾಟಿಬಿಡಲು ಹವಣಿಸುವ ಆಧ್ಯಾತ್ಮಿಕ ಅನುಭಾವದ ಈ ನಾಡಿನ ಸಂಸ್ಕ್ರತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಬಿಜೆಪಿಯ ರಾಜಕಾರಣದ ಕ್ಷುದ್ರತೆಯನ್ನು ಅಲ್ಪತೆಯನ್ನು ನಾವೆಲ್ಲರೂ ಗಾಂಧೀಜಿ ತೋರಿದ ದಾರಿಯಲ್ಲಿ ನಡೆದು ತೊರೆಯಬೇಕು. ಯಾಕೆಂದರೆ
ಸಂಘಪರಿವಾರ ಬಿತ್ತಲು ಯತ್ನಿಸುವ ವಿಷದ ಬೀಜ ನಮ್ಮಲ್ಲಿ ಹಲವರಲ್ಲಿ ಗುಪ್ತವಾದ ಭಾವನೆಯಾಗಿರಬಹುದು ಎಂಬ ಅನುಮಾನ ನನಗೆ ಇದೆ. ಕ್ರೈಸ್ತಧರ್ಮ, ಹಾಗೂ ಇಸ್ಲಾಂ ಧರ್ಮ ನಮ್ಮ ಭಾರತವನ್ನು ಶ್ರೀಮಂತಗೊಳಿಸಿ, ನಮ್ಮ ಮಾನವೀಯ ಅನುಕಂಪವನ್ನು ವಿಶಾಲಗೊಳಿಸಿವೆ ಎಂದೇ ಹಿಂದೂಗಳಾದ ನಾವೆಲ್ಲರೂ ಕೃತಜ್ಷತೆಯಲ್ಲಿ ತಿಳಿಯಬೇಕು. ತಾವು ನಂಬುವ ದೇವರಲ್ಲಿ ಗಾಂಧಿಯಂತೆ ಎಲ್ಲರೂ ಪ್ರಾರ್ಥಿಸಬೇಕು: “ಸಬಕೋ ಸನ್ಮತಿ ದೇ ಭಗವಾನ್”

ಎಲ್ಲ ಬಗೆಯ ಭಯೋತ್ಪಾದಕತೆಯನ್ನು, ಅದು ಇಸ್ಲಾಮ್ ಹೆಸರಿನಲ್ಲಿ ಇರಬಹುದು, ಹಿಂದೂ ಸಂಘಟನೆಯ ಹೆಸರಿನಲ್ಲಿ ಇರಬಹುದು, ನಾವು ಈ ನೆಲದಿಂದ ಉಚ್ಛಾಟಿಸಬೇಕು. ಯಾಕೆಂದರೆ ಈ ಟೆರರಿಸಂ ಧರ್ಮ ವಿರೋಧಿ; ಜೀವ ವಿರೋಧಿ. “ಅಭಯ” ದಲ್ಲಿ ನಾವೆಲ್ಲರೂ ದುಕಬೇಕೆಂಬುದು ನಮ್ಮ ಉಪನಿಷತ್ತಿನ ಪ್ರಾರ್ಥನೆ

‍ಲೇಖಕರು avadhi

October 2, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿರುತ್ತರದ ಉತ್ತರ, ರಾಜೇಶ್ವರಿ ತೇಜಸ್ವಿ

ಕಲೀಮ್ ಉಲ್ಲಾ ತೇಜಸ್ವಿಯವರ ಸ್ಕೂಟರ್ ಚಳಿಗೆ ದುಪ್ಪಟ್ಟಿ ಹೊಚ್ಚಿಟ್ಟಂತೆ ಅದನ್ನೊಂದು ಕಪ್ಪು ಪ್ಲಾಸ್ಟಿಕ್ ನಿಂದ ಮುಚ್ಚಿಡಲಾಗಿತ್ತು. ತಕ್ಷಣ ಏನೋ...

ಅಂಬೇಡ್ಕರ್ ಇಲ್ಲಿದ್ದಾರೆ..

ಅಂಬೇಡ್ಕರ್ ಅವರ ಬರಹಗಳ ಎಲ್ಲಾ ಸಂಪುಟವನ್ನು ಉಚಿತವಾಗಿ ಕನಡದ ಓದುಗರಿಗೆ ಸಿಗಲಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈಗಾಗಲೇ ೫ ಸಂಪುಟಗಳನ್ನು...

’ಧರ್ಮ ನಿರಪೇಕ್ಷತೆ, ಕೋಮುವಾದ ಮತ್ತು ನಮ್ಮೆದುರಿನ ಸವಾಲುಗಳು’ – ಶಶಿಧರ ಭಟ್

ಶಶಿಧರ ಭಟ್ ಕುಮ್ರಿ ಧರ್ಮ ನಿರಪೇಕ್ಷತೆ ಮತ್ತು ಕೋಮುವಾದ ಎಂಬ ಶಬ್ದ ನನ್ನ ಕಿವಿಗೆ ಬಿದ್ದುದು ಯಾವಾಗ ಎಂಬ ಪ್ರಶ್ನೆಗೆ ನನ್ನ ಬಳಿ ಸರಳ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This