ಸಭೆಗೆ ಬರುತ್ತೇನೆ ಎಂದವರು ತಪ್ಪಿಸಿದರು… ಆದರೆ ಬೀದಿಗೇ ಬರಬೇಕಾಯಿತು

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು.

ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.

ಸಾಮಾಜಿಕ ವಿಷಯಗಳ ಬಗ್ಗೆ ಆಳನೋಟವನ್ನು ಹೊಂದಿರುವ ಶರ್ಮಾ ಅವರ ಜೊತೆ ಮಾತಿಗೆ ಕುಳಿತರೆ ಜಗತ್ತಿನ ಒಂದು ಸುತ್ತು ಬಂದಂತೆ..

ಪ್ರತೀ ವಾರ ಇವರು ಮಕ್ಕಳ ಹಕ್ಕುಗಳ ಬಗ್ಗೆ ನಾವು ಕೇಳರಿಯದ ಸಂಗತಿಗಳನ್ನು ನಮ್ಮ ಮುಂದೆ ಇಡಲಿದ್ದಾರೆ.. 

|ಕಳೆದ ಸಂಚಿಕೆಯಿಂದ|

“ಇನ್ನೂ ಬಂದಿಲ್ವಾ… ಸರಿ ಎಷ್ಟು ಹೊತ್ತೂಂತ ಕಾಯೋದು” ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ದೊರೆಸ್ವಾಮಿಯವರು ಕೇಳುತ್ತಿದ್ದರು. ನಾವೊಂದೈದಾರು ಜನ ಅವರೊಂದಿಗೆ ವೇದಿಕೆಯ ಪಕ್ಕ ನಿಂತಿದ್ದೆವು. ಪರಿಸ್ಥಿತಿ ಕೊಂಚ ಕೊಂಚವೇ ಬಿಸಿಯಾಗುತ್ತಿತ್ತು.

ಫೆಬ್ರವರಿ ೨೦೦೧. ಬಾಲಕಾರ್ಮಿಕ ಪದ್ಧತಿ ವಿರೋಧೀ ಆಂದೋಲನ – ಕರ್ನಾಟಕ, ನಾಫ್ರೇ (ನ್ಯಾಷನಲ್‌ ಅಲೆಯನ್ಸ್‌ ಫಾರ್‌ ಫಂಡಮೆಂಟಲ್‌ ರೈಟ್‌ ಟು ಎಜುಕೇಷನ್‌) ಮತ್ತು ವಿವಿಧ ಸಂಘಟನೆಗಳು ಜಂಟಿಯಾಗಿ ಆಯೋಜಿಸಿದ್ದ ʼಶಿಕ್ಷಣ ಹಕ್ಕು ರಾಜ್ಯ ಮಟ್ಟದ ಸಮಾವೇಶʼಕ್ಕಾಗಿ ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿ (ಕಿತ್ತೂರ ರಾಣಿ ಚೆನ್ನಮ್ಮ ವೃತ್ತದ ಬಳಿ) ಇರುವ ಬನ್ನಪ್ಪ ಪಾರ್ಕ್‌ ಆವರಣಕ್ಕೆ ಜನ ಬಂದು ಸೇರುತ್ತಿದ್ದರು. ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಿಂದ ವಿವಿಧ ಸಮುದಾಯಗಳ ಪ್ರತಿನಿಧಿಗಳು ಬೆಳಗ್ಗೆ ಆರೇಳು ಗಂಟೆಗೆಲ್ಲಾ ಬಂದು ಬಿಟ್ಟಿದ್ದರು.

ಬೆಂಗಳೂರು ನಗರ ಮತ್ತು ಸುತ್ತಮುತ್ತಲಿಂದ ಅದೆಷ್ಟೋ ಜನ ಅದರಲ್ಲೂ ಮಹಿಳಾ ಸಂಘಗಳ ಸದಸ್ಯರು ಬಂದಿಳಿಯುತ್ತಲೇ ಇದ್ದರು. ಬೆಳಗ್ಗೆ ೧೦.೩೦ಕ್ಕೆ ಆರಂಭವಾಗಬೇಕಿದ್ದ ಸಭೆ ೧೧.೩೦ ಕಳೆದರೂ ಆರಂಭವಾಗುವ ಲಕ್ಷಣ ಕಾಣುತ್ತಿರಲಿಲ್ಲ. ಕಾರಣ ಸಭೆಗೆ ಬರಬೇಕಿದ್ದ ಮುಖ್ಯ ಆಹ್ವಾನಿತರೊಬ್ಬರು ಪತ್ತೆ ಇರಲಿಲ್ಲ.

ವೇದಿಕೆಯಿಂದ ಸಂಘಟನೆಗಳ ಕಾರ್ಯಕರ್ತರು ಒಂದಾದರ ಮೇಲಂತೆ ಒಂದು ಮಕ್ಕಳ ಹಕ್ಕುಗಳ ಪರವಾದ ಹಾಡುಗಳನ್ನು ಹಾಡುತ್ತ ಇಡೀ ಪರಿಸರದಲ್ಲಿ ಕಾರ್ಯಕ್ರಮದ ಉದ್ದೇಶವನ್ನು ಮೇಲಿಂದ ಮೇಲೆ ನೆನಪಿಸುತ್ತಲೇ ಇದ್ದರು. ಕಾರ್ಯಕ್ರಮದ ಉದ್ಘೋಶಕರು ʼಇನ್ನೇನು ಕೆಲವೇ ನಿಮಿಷಗಳಲ್ಲಿ ಕಾರ್ಯಕ್ರಮ ಆರಂಭವಾಗಲಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ರಾಜ್ಯದ ಶಿಕ್ಷಣ ಸಚಿವರು ಇನ್ನೇನು ಬರಲಿದ್ದಾರೆʼ ಎಂದು ಆಗಾಗ್ಗೆ ಬಂದು ಹೇಳುತ್ತಿದ್ದರು. ಬಿಸಿಲೇರುತ್ತಿತ್ತು. ಜನರೂ ಎದ್ದು ಹೋಗಿ ನೀರು ಕುಡಿದು ಬಂದರು. ಸೇರಿದ್ದ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನರಲ್ಲಿ ತಾಳ್ಮೆ ನಿಧಾನವಾಗಿ ಕರಗಿ ಅಸಮಾಧಾನದ ಉದ್ಗಾರಗಳು ಕೇಳಲಾರಂಭಿಸಿತು. ಸಾಕಷ್ಟು ಮಹಿಳೆಯರ ಕಂಕುಳಲ್ಲಿ ಪಕ್ಕದಲ್ಲಿ ಪುಟ್ಟ ಪುಟ್ಟ ಮಕ್ಕಳಿದ್ದವು.

ಸಮಾವೇಶಕ್ಕೆ ಸೇರಿದ್ದ ಜನರಿಗಾಗಿಯೇ ಸೇವಾರ್ಥವಾಗಿ ಜಲರಾಮ ಚಾರಿಟಿ ಸಂಸ್ಥೆಯವರು ಮಧ್ಯಾಹ್ನದ ಊಟ ತಂದು ಆಗಲೇ ಇಳಿಸಲಾರಂಭಿಸಿದ್ದರು.

“ಕಾರ್ಯಕ್ರಮ ಶುರು ಮಾಡಿ. ಆಮೇಲೆ ನೋಡೋಣ, ಏನು ಮಾಡೋದೂಂತ…” ದೊರೆಸ್ವಾಮಿಯವರು ಸೂಚಿಸಿದರು.

ಸಾರ್ವಜನಿಕ ಕಾರ್ಯಕ್ರಮಕ್ಕೆ ಬಂದೋಬಸ್ತಿಗೆ ಬಂದಿದ್ದ ಪೊಲೀಸರನ್ನು ಸಂಘಟಕರ ಪರವಾಗಿ ನಾನು, ರಾಷ್ಟ್ರೀಯ ಕಾನೂನು‌ ಶಾಲೆಯ ಡಾ. ನಿರಂಜನಾರಾಧ್ಯ, ಪರಸ್ಪರದ ವೆಂಕಟೇಶ್‌, ಸಿಕ್ರಂನ ಮಾಥ್ಯೂ ಫಿಲಲಿಪ್ಸ್, ಸಮಾಜ ವಿಕಾಸ ಟ್ರಸ್ಟ್ ನ ಉದಯಕುಮಾರ್‌ ಮತ್ತಿತರ ಕೆಲವರು ಹೋಗಿ ಕೇಳಿದೆವು. ಅವರು ತಮಗೇನೂ ಗೊತ್ತಿಲ್ಲ. ತಮ್ಮ ಕೆಲಸ ಬಂದೋಬಸ್ತು ಅಷ್ಟೆ ಎಂದರು. ಮಂತ್ರಿಗಳ ಕಚೇರಿಗೆ ಸಂಘಟಕರ ಪರವಾಗಿ ಯಾರೋ ಹೋಗಿ ಫೋನ್‌ ಮಾಡಿದರು (ಮೊಬೈಲ್‌ ಇಲ್ಲದ ಕಾಲ). ಮಾನ್ಯ ಮಂತ್ರಿಗಳು ತುರ್ತು ಸಭೆಯಲ್ಲಿದ್ದಾರೆ. ಸಭೆಗೆ ಬರುವುದು ಅನುಮಾನ!  

* * *

ಸರ್ವೋಚ್ಚ ನ್ಯಾಯಾಲಯದಲ್ಲಿ ಉನ್ನಿಕೃಷ್ಣನ್‌ ಮತ್ತು ಆಂಧ್ರಪ್ರದೇಶ ಸರ್ಕಾರದ ನಡುವಿನ ವ್ಯಾಜ್ಯ ೪ ಫೆಬ್ರವರಿ ೧೯೯೩ರಂದು ಇತ್ಯರ್ಥವಾಗಿತ್ತು. ಉನ್ನತ ಶಿಕ್ಷಣ (ಮುಖ್ಯವಾಗಿ ವೈದ್ಯಕೀಯ ಮತ್ತು ಎಂಜನಿಯರಿಂಗ್‌) ನಡೆಸುವ ಸರ್ಕಾರೇತರ/ಖಾಸಗಿ ಶಿಕ್ಷಣ ಸಂಸ್ಥೆಯವರ ಮೇಲೆ ಕ್ಯಾಪಿಟೇಷನ್‌ ಶುಲ್ಕ ವಸೂಲಿ ಮಾಡುವುದರ ವಿರುದ್ಧ ಆಂಧ್ರಪ್ರದೇಶ ರಾಜ್ಯದ ಸರ್ಕಾರ ನಿರ್ದೇಶನ ನೀಡಿತ್ತು. ಇದನ್ನು ಪ್ರಶ್ನಿಸಿ ಉನ್ನಿಕೃಷ್ಣನ್‌ ಅವರು ೧೯೮೦ರ ದಶಕದ ಕೊನೆಯಲ್ಲಿ ನ್ಯಾಯಾಲಯಗಳ ಮೊರೆ ಹೊಕ್ಕಿದ್ದರು. ಹೈದರಾಬಾದಿನ ಉಚ್ಚ ನ್ಯಾಯಾಲಯ ಸರ್ಕಾರದ ಪರ ತೀರ್ಪು ನೀಡಿತು. ಅದನ್ನು ಪ್ರಶ್ನಿಸಿ ಅವರು ಸರ್ವೋಚ್ಚ ನ್ಯಾಯಾಲಯದ ಬಾಗಿಲು ತಟ್ಟಿದ್ದರು.

೧೯೮೦ರ ದಶಕದಲ್ಲಿ ದಕ್ಷಿಣ ಭಾರತದಲ್ಲಿ ʼರಾಮʼರಾಜ್ಯಗಳು. ಕರ್ನಾಟಕದಲ್ಲಿ ರಾಮಕೃಷ್ಣ ಹೆಗ್ಡೆಯವರು, ಆಂಧ್ರಪ್ರದೇಶದಲ್ಲಿ ಎನ್ ಟಿ ರಾಮರಾವ್ ಮತ್ತು ತಮಿಳುನಾಡಿನಲ್ಲಿ ಎಂ ಜಿ ರಾಮಚಂದ್ರನ್‌ ಮುಖ್ಯಮಂತ್ರಿಗಳು. ಕರ್ನಾಟಕದಲ್ಲಿ ಎಂಜನಿಯರಿಂಗ್‌ ಮತ್ತು ಮೆಡಿಕಲ್‌ ಕಾಲೇಜುಗಳ ಸುಗ್ಗಿ! ಶಿಕ್ಷಣ ಸಂಸ್ಥೆಗಳು, ಮಠಗಳು, ವಿವಿಧ ಹಂತಗಳ ಗುತ್ತಿಗೆದಾರರು, ಹಣವಿದ್ದವರು, ರಾಜಕೀಯ ಪ್ರಭಾವವಿರುವವರು, ಶಿಕ್ಷಣದ ಏಳ್ಗೆಯ ಕನಸಿರುವವರು, ದುಡ್ಡು ಮಾಡುವ ಬಯಕೆಯವರು ಎಲ್ಲರಿಗೂ ಎಂಜನಿಯರಿಂಗ್‌ ಮತ್ತು ಮೆಡಿಕಲ್‌ ಕಾಲೇಜುಗಳನ್ನು ಆರಂಭಿಸುವ ತವಕ. ಒಂದಷ್ಟು ಜನರಿಗೆ… ಸಿಕ್ಕವರಿಗೆ ಸೀರುಂಡೆ.

ಊರೂರುಗಳಿಂದ, ರಾಜ್ಯ ದೇಶಗಳಿಂದ ವಿದ್ಯಾರ್ಥಿಗಳು ಕರ್ನಾಟಕಕ್ಕೆ ಎಂಜನಿಯರ್ ಡಾಕ್ಟರ್ ಆಗಲು ಮುಗಿ ಬಿದ್ದಿದ್ದರು. ಕ್ಯಾಪಿಟೇಶನ್‌, ಡೊನೇಶನ್‌ ಪದಗಳು ಎಲ್ಲೆಲ್ಲೂ ಬಿದ್ದು ಉರುಳಾಡುತ್ತಿತ್ತು. ಇಂತಹ ಸಂದರ್ಭದಲ್ಲಿ ಅಕ್ಕಪಕ್ಕದ ರಾಜ್ಯಗಳಲ್ಲೂ ಇದೇ ಅಲೆ ಎದ್ದಿತ್ತು. ಆದರೆ ಎನ್ ಟಿ ರಾಮರಾಯರ ಸರ್ಕಾರ ಸರ್ಕಾರೇತರರ ಮೆಡಿಕಲ್‌ ಮತ್ತು ಎಂಜಿನಿಯರಿಂಗ್‌ ಕಾಲೇಜುಗಳ ಕನಸಿಗೆ ಮತ್ತು ಕ್ಯಾಪಿಟೇಷನ್‌ ಅತ್ಯಾಸೆಗೆ ಕಡಿವಾಣ ಹಾಕಿಬಿಟ್ಟಿತ್ತು. ಇದು ನ್ಯಾಯಾಲಯದೆದುರು ಹೋಗಿತ್ತು.   

ನ್ಯಾಯಾಧೀಶ ಜೀವನ್‌ ರೆಡ್ಡಿ ಮತ್ತಿತರ ಐದು ನ್ಯಾಯಾಧೀಶರಿದ್ದ ಸರ್ವೋಚ್ಚ ನ್ಯಾಯಾಲಯದ ಸಾಂವಿಧಾನಿಕ ಪೀಠ ಉನ್ನಿಕೃಷ್ಣನ್‌ ಪ್ರಕರಣವನ್ನು ದೀರ್ಘವಾಗಿ ವಿಶ್ಲೇಷಿಸಿ ನೀಡಿದ ತೀರ್ಪು ಬಹಳ ಮುಖ್ಯವಾಗಿ ಉನ್ನತ ಶಿಕ್ಷಣದ ವಿಚಾರವನ್ನೇ ಪಕ್ಕಕ್ಕಿಟ್ಟು ʼ೧೪ ವರ್ಷದೊಳಗಿನ ಮಕ್ಕಳಿಗೆ ಭಾರತ ಸರ್ಕಾರ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಅವಕಾಶ ಇನ್ನೂ ಏಕೆ ಮಾಡಿಕೊಟ್ಟಿಲ್ಲʼ ಎಂದು ಪ್ರಶ್ನಿಸಿತು. ಅಷ್ಟೇ ಅಲ್ಲ ಮಕ್ಕಳಿಗೆ ಈಗಾಗಲೇ ಶಿಕ್ಷಣದ ಹಕ್ಕು ಇದೆ ಎಂದೇ ಪ್ರತಿಪಾದಿಸಿತು. ವಿಶ್ವಸಂ‍ಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ ೧೯೮೯ರಲ್ಲಿನ ಪರಿಚ್ಛೇದ ೨೮ನ್ನೂ (ಶಿಕ್ಷಣದ ಹಕ್ಕು) ಉಲ್ಲೇಖಿಸಿ ಇವುಗಳನ್ನು ಜಾರಿ ಮಾಡುವುದರಿಂದ ದೇಶದ ಉನ್ನತಿಗೆ ಹೆದ್ದಾರಿ ತೆರೆದಂತೆ ಎಂದೂ ಹೇಳಿತು.

ಸಂವಿಧಾನದ ರಾಜ್ಯ ನಿರ್ದೇಶಕ ತತ್ತ್ವಗಳಲ್ಲಿನ ಶಿಕ್ಷಣ ನಿರ್ದೇಶನ ತತ್ತ್ವವನ್ನು (ವಿಧಿ ೪೧ – ಉದ್ಯೋಗ ಹಾಗೂ ಶಿಕ್ಷಣದ ಹಕ್ಕು ಮತ್ತು ಕೆಲವು ಪ್ರಕರಣಗಳಲ್ಲಿ ಸರ್ಕಾರದ ನೆರವು ಪಡೆಯುವ ಹಕ್ಕು) ವಿಧಿ ೨೧- ವೈಯಕ್ತಿಕ ಸ್ವಾತಂತ್ರ್ಯ ಮತ್ತು ಜೀವಿಸುವ ಮೂಲಭೂತ ಹಕ್ಕಿನ ಮೂಲಕ ಸೂಚಿಸಲಾಗುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯವು ಅಭಿಪ್ರಾಯಪಟ್ಟಿತು. ಹೀಗಾಗಿ ಮೂಲಭೂತ ಶಿಕ್ಷಣದ ಹಕ್ಕು ಜೀವಿಸುವ ಹಕ್ಕಿನೊಂದಿಗಿದೆ ಎಂದೂ ಹೇಳಿತು. 

ಸಂವಿಧಾನದ ಪ್ರಾರಂಭದಿಂದ ಹತ್ತು ವರ್ಷಗಳ ಅವಧಿಯೊಳಗೆ ಸರ್ಕಾರವು ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ೧೪ ವರ್ಷದೊಳಗಿನ ಎಲ್ಲ ಮಕ್ಕಳಿಗೆ ಒದಗಿಸಲು ಪ್ರಯತ್ನಿಸಬೇಕು ಎಂದು ಹೇಳಿರುವ ೪೫ನೇ ವಿಧಿಯನ್ನು ಒಳಗೊಂಡಂತೆ ರಾಜ್ಯ ನಿರ್ದೇಶಕ ತತ್ತ್ವಗಳ ಹಿನ್ನೆಲೆಯಲ್ಲಿರುವ ಉದ್ದೇಶಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು.  

ಭಾರತ ಸಂವಿಧಾನ ತನ್ನ ಪ್ರಜೆಗಳಿಗೆ ವಿಧಿ ೨೧ರಲ್ಲಿ ಜೀವಿಸುವ ಹಕ್ಕನ್ನು ಮೂಲಭೂತವಾಗಿ ಒದಗಿಸಿದೆ, ಅರ್ಥಪೂರ್ಣವಾಗಿ ಜೀವಿಸಲು ಶಿಕ್ಷಣದ ಆವಶ್ಯಕತೆಯಿದೆ. ಹೀಗಾಗಿ ೧೪ ವರ್ಷದೊಳಗಿನ ಎಲ್ಲ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಮೂಲಭೂತ ಹಕ್ಕು ಎಂದು ವಿಧಿ ೨೧ರಡಿಯಲ್ಲಿ ಪರಿಗಣಿಸುವುದೇ ಸಿಂಧು ಎಂದು ನ್ಯಾಯಾಲಯ ಸ್ಪಷ್ಟವಾಗಿ ಸರ್ಕಾರಕ್ಕೆ ನಿರ್ದೇಶಿಸಿತು. ಆದರೆ ೧೪ ದಾಟಿದ ವ್ಯಕ್ತಿಗಳಿಗೆ ವಿಧಿ ೨೧ರಡಿಯಲ್ಲಿ ಉನ್ನತ ಶಿಕ್ಷಣದ ಹಕ್ಕನ್ನು ಖಾತರಿಪಡಿಸಲಾಗದು ಎಂದಿತು.

ಮುಖ್ಯವಾಗಿ ಕೇಳಿ ಬಂದದ್ದು, ಸಂವಿಧಾನ ಜಾರಿಯಾಗಿ ಮತ್ತು ವಿಧಿ ೪೫ರಲ್ಲಿ ಹೇಳಿಕೆ ನೀಡಿ ೪೪ ವರ್ಷ ಕಳೆದರೂ (೧೯೯೨ರಲ್ಲಿ) ಸಂವಿಧಾನ ೧೪ ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣದ ಅವಕಾಶ ಏಕೆ ಮಾಡಿಕೊಟ್ಟಿಲ್ಲ ಎಂಬ ಪ್ರಶ್ನೆ ಮತ್ತು ರಾಜ್ಯ ನಿರ್ದೇಶಕ ತತ್ತ್ವಗಳನ್ನು ನ್ಯಾಯಾಲಯದಲ್ಲಿ ಜಾರಿಗಾಗಿ ಒತ್ತಾಯಿಸಿ ಕೇಳುವಂತಿರಲಿಲ್ಲವಾದರೂ, ವಿಧಿ ೪೫ರಡಿಯಲ್ಲಿರುವ ಪ್ರಾಥಮಿಕ ಶಿಕ್ಷಣವನ್ನು ಕಾನೂನಿನ ಅಡಿಯಲ್ಲಿ ಜಾರಿಗೊಳಿಸಬಹುದಾದ, ಆಗ್ರಹಿಸಬೇಕಾದ ಹಕ್ಕು ಆಗಿ ನ್ಯಾಯಾಲಯ ಪರಿವರ್ತಿಸಿತು.

ಆ ನಂತರದ ಶಿಕ್ಷಣದ ಹಕ್ಕಿನ ಸಾಧ್ಯತೆಯನ್ನು ದೇಶದ ಆರ್ಥಿಕ ಸಾಮರ್ಥ್ಯ ಮತ್ತು ಅಭಿವೃದ್ಧಿಯ ಮಿತಿಗಳಿಗೆ ಒಳಪಟ್ಟಿರುತ್ತದೆ ಎಂದು ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಕುರಿತಾದ ಅಂತಾರಾಷ್ಟ್ರೀಯ ಒಡಂಬಡಿಕೆಯ ೧೩ನೇ ವಿಧಿಯನ್ನು ಉಲ್ಲೇಖಿಸಿ ನ್ಯಾಯಾಲಯ ಹೇಳಿತು.

ಈ ತೀರ್ಪನ್ನು ಆಧರಿಸಿಕೊಂಡು ಯಾವುದಾದರೂ ಸಮುದಾಯ ʼನಮ್ಮಲ್ಲಿ ಮಕ್ಕಳಿಗೆ ಶಾಲೆಯಿಲ್ಲ, ಇಲ್ಲಿ ಪ್ರಾಥಮಿಕ ಶಾಲೆ ಒದಗಿಸಿʼ ಎಂದು ಸರ್ಕಾರಕ್ಕೆ ಒಂದು ಅರ್ಜಿ ಸಲ್ಲಿಸಿದರೆ, ಸರ್ಕಾರ ದಡಬಡಿಸಿಕೊಂಡು ಹೋಗಿ ಅಲ್ಲಿ ಶಾಲೆ, ಕಟ್ಟಡ, ಶಿಕ್ಷಕ ವರ್ಗ ಮತ್ತು ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ನಿರ್ದಿಷ್ಟ ಸಮಯದಲ್ಲಿ ಮಾಡಿಕೊಡಬೇಕಿತ್ತು. ಇಲ್ಲವಾದರೆ ಅದು ನ್ಯಾಯಾಲಯ ನಿರ್ದೇಶನದ ನಿಂದನೆಯಾಗಿ ಸರ್ಕಾರ ನ್ಯಾಯಾಲಯದ ಮುಂದೆ ಹೋಗಬೇಕಾಗುತ್ತಿತ್ತು. [ದುರಾದೃಷ್ಟವಶಾತ್‌ ಇಂತಹದೊಂದು ವ್ಯಾಖ್ಯಾನವನ್ನು ೧೯೯೭ರವರೆಗೆ ಅದೇಕೋ ಯಾರೂ ಬಹಿರಂಗವಾಗಿ ವಿವರಿಸಿರಲಿಲ್ಲ].

ಈ ತೀರ್ಪು ಆಧರಿಸಿ ದೇಶದಾದ್ಯಂತ ʼಶಿಕ್ಷಣ ಹಕ್ಕುʼ ಕುರಿತು ಚರ್ಚೆಗಳು ನಡೆದಿತ್ತು. ಅದೇ ಸಂದರ್ಭದಲ್ಲಿ ʼವಾಯ್ಸ್‌ ಆಫ್‌ ಪೀಪಲ್‌ʼ ಎಂಬ ಹೆಸರಿನಲ್ಲಿ ಒಂದು ಜನಾಭಿಪ್ರಾಯದ ಚಳವಳಿ ಮುಂಬೈನ ಪ್ರಥಮ್‌ ಸಂಸ್ಥೆಯ ಮಧುಕರ್‌ ಎನ್ನುವವರ ಮುಂದಾಳತ್ವದಲ್ಲಿ ಆರಂಭವಾಗಿತ್ತು. ದೇಶದಾದ್ಯಂತ ಅನೇಕ ಸಂಘಟನೆಗಳು, ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಗ್ರಾಮಪಂಚಾಯತಿಗಳ ಚುನಾಯಿತ ಸದಸ್ಯರು, ಮಕ್ಕಳ ಸಂಘಗಳು, ಮಹಿಳಾ ಸಂಘಗಳು ತಮ್ಮ ದನಿಗೂಡಿಸಿದರು.

ಹಳ್ಳಿಹಳ್ಳಿಗಳಿಂದ ಜನರು ತಮ್ಮ ಮಕ್ಕಳಿಗೆ ಶಿಕ್ಷಣ ಬೇಕು ಎಂಬ ಪತ್ರ ಚಳವಳಿಯಲ್ಲಿ ಸೇರಿದರು. ಪ್ರಧಾನ ಮಂತ್ರಿಗಳು ಮತ್ತು ರಾಷ್ಟ್ರಪತಿಗಳ ನಿವಾಸಕ್ಕೆ ಲಕ್ಷಾಂತರ ಜನ ಕೈಬರಹದಲ್ಲಿ ತಮ್ಮ ಆಗ್ರಹದ ಪೋಸ್ಟ್‌ ಕಾರ್ಡ್‌ಗಳನ್ನು ತಲುಪಿಸಿದರು. ಕ್ರೈನ ಪರವಾಗಿ ನಾವೂ ನಮ್ಮ ಸಹವರ್ತಿಗಳೊಂದಿಗೆ ʼವಾಯ್ಸ್‌ ಆಫ್‌ ಪೀಪಲ್‌ʼ ಚಳವಳಿಯ ಭಾಗವಾದೆವು.

ʼಪ್ರಾಥಮಿಕ ಶಿಕ್ಷಣ ಚಳವಳಿʼ ಕೆಲವೇ ದಿನಗಳಲ್ಲಿ ದೇಶದಾದ್ಯಂತ ಹಬ್ಬಿತು. ಬಾಲಕಾರ್ಮಿಕ ಪದ್ಧತಿ ವಿರೋಧೀ ಆಂದೋಲನವೂ ಸೇರಿದಂತೆ ಹತ್ತಾರು ಸಂಘಟನೆಗಳು ಜೊತೆಗೂಡಿದವು. ಕ್ರೈ ಕೂಡಾ ಈ ಆಂದೋಲನದ ಮುಂಚೂಣಿಗೆ ಬಂತು. ೧೯೯೫ರ ಮಹಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದ ರಾಜಕೀಯ ಪಕ್ಷಗಳೆದುರು ನಮ್ಮ ಆಗ್ರಹ ತಲುಪಿತು. ಜನತಾದಳ ಪಕ್ಷವು ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿಸುವ ಭರವಸೆಯನ್ನು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನಮೂದಿಸಿ ಎಲ್ಲರಿಂದ ಸೈ ಎನಿಸಿಕೊಂಡಿತ್ತು.

ಆದರೆ ೧೯೯೭ರಲ್ಲಿ ಎಚ್.ಡಿ. ದೇವೇಗೌಡರ ಸರ್ಕಾರದಲ್ಲಿ ಮಾನವ ಸಂಪನ್ಮೂಲ ಸಚಿವರಾಗಿದ್ದ ಎಸ್‌ ಆರ್‌ ಬೊಮ್ಮಾಯಿಯವರು ರಾಜ್ಯ ಸಭೆಯಲ್ಲಿ ಜುಲೈ ೨೮ರಂದು ಮಂಡಿಸಿದ ೮೩ನೇ ತಿದ್ದುಪಡಿ ನಮ್ಮೆಲ್ಲರ ನಿರೀಕ್ಷೆಯನ್ನು ಬುಡಮೇಲು ಮಾಡಿತು. ಮೇಲ್ನೋಟಕ್ಕೆ ಅದು ವಿಧಿ ೨೧ ಎ ಎಂದು ೬ರಿಂದ ೧೪ ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣವನ್ನು ಮೂಲಭೂತ ಹಕ್ಕಾಗಿ ನೀಡುವ ಭರವಸೆ ಕೊಟ್ಟಂತೆ ಕಾಣುತ್ತಿತ್ತು. ಆದರೆ ಅದು ಕೇವಲ ಸರ್ಕಾರ ನಡೆಸುವ ಶಾಲೆಗಳಿಗೆ ಮಾತ್ರ ಸೀಮಿತವಾಗಿತ್ತು. ಸರ್ಕಾರೇತರರು ನಡೆಸುವ (ಖಾಸಗಿ ಶಿಕ್ಷಣ ಸಂಸ್ಥೆಗಳು ಎನ್ನುವುದು) ಶಾಲೆಗಳು ಈ ಸಾಂವಿಧಾನಿಕ ನಿರ್ದೇಶನದಿಂದ ಹೊರಗಿಡಲಾಗಿತ್ತು.

ಚಳವಳಿಗಾರರೆಲ್ಲರೂ ಈ ವಿಚಾರವನ್ನು ತೆಗೆದುಕೊಂಡು ಸರ್ಕಾರವನ್ನು ಬಹಿರಂಗವಾಗಿ ಪ್ರಶ್ನೆ ಮಾಡಲಾರಂಭಿಸಿದೆವು. ಈ ಮಸೂದೆಯ ಉದ್ದೇಶ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಕಾವನ್ನು ಇಳಿಸುವುದಷ್ಟೇ. ಆ ನಿರ್ದೇಶನವನ್ನು ಜಾರಿ ಮಾಡುವ ಯಾವುದೇ ಉದ್ದೇಶ ಇದರಲ್ಲಿ ಕಾಣುತ್ತಿಲ್ಲ ಎಂದೇ ಹರಿಹಾಯ್ದೆವು.

ಅದೃಷ್ಟವಶಾತ್‌ ಎಚ್ ಡಿ ದೇವೇಗೌಡರ ಸರ್ಕಾರದ ಪತನದೊಂದಿಗೆ ರಾಜ್ಯಸಭೆಯಲ್ಲಿ ಮಂಡಿಸಿದ್ದ ಎಸ್ ‌ಆರ್‌ ಬೊಮ್ಮಾಯಿಯವರ ಮಸೂದೆ ಅವಧಿ ಕಳೆದುಕೊಂಡು ನಶಿಸಿಹೋಯಿತು.

ಮುಂದೇನು?    

* * *

ʼಕಾರ್ಯಕ್ರಮ ಶುರು ಮಾಡಿರಪ್ಪ. ಇನ್ನು ಕಾಯಲು ಸಾಧ್ಯವಿಲ್ಲ…ʼ ಹಿರಿಯರಾದ ದೊರೆಸ್ವಾಮಿಯವರ ಮಾತಿನಂತೆ ಕಾರ್ಯಕ್ರಮ ಆರಂಭವಾಯಿತು.

ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಪ್ರಾಧ್ಯಾಪಕರಾಗಿದ್ದ ಬಾಬು ಮಾಥ್ಯೂ ಅವರು ಶಿಕ್ಷಣ ಹಕ್ಕು ಎಂದರೆ ಏನು, ಸರ್ವೋಚ್ಚ ನ್ಯಾಯಾಲಯ ಏಕೆ ಜೀವಿಸುವ ಹಕ್ಕಿನೊಂದಿಗೆ ಸಂವಿಧಾನದಲ್ಲಿ ಶಿಕ್ಷಣ ಹಕ್ಕನ್ನು ಸೇರಿಸಿ ಹೇಳಿದೆ. ನಾವು ಈಗ ಆ ತೀರ್ಪನ್ನು ಯಾಕೆ ಸಾಂವಿಧಾನಿಕ ಹಕ್ಕು ಎಂದೂ ನೋಡಬೇಕು ಎಂದು ವಿವರಿಸಿದರು. ಡಾ. ನಿರಂಜನಾರಾಧ್ಯ ಹಳ್ಳಿ ಹಳ್ಳಿಗಳಲ್ಲಿ ಗುಣಮಟ್ಟದ ಶಿಕ್ಷಣ ಎಂದರೆ ಅಲ್ಲಿ ಪ್ರತಿ ತರಗತಿಗೊಂದು ಕೋಣೆ, ಮತ್ತು ಪ್ರತಿ ವಿಷಯಕ್ಕೆ ಒಬ್ಬ ಶಿಕ್ಷಕರು, ಶೌಚಾಲಯ, ಕುಡಿಯುವ ನೀರು, ಮಧ್ಯಾಹ್ನದ ಬಿಸಿಯೂಟ, ಪಠ್ಯ ಪುಸ್ತಕಗಳು, ಆಟದ ಮೈದಾನ ಎಂದು ವಿವರಿಸುತ್ತಿದ್ದರು.

ನನ್ನ ಪ್ರವಾಸಗಳು ಮತ್ತು ಕ್ಷೇತ್ರಾಧ್ಯಯನದ ಅನುಭವದ ಹಿನ್ನೆಲೆಯಲ್ಲಿ ಬಾಲಕಾರ್ಮಿಕ ಪದ್ಧತಿ ಕೊನೆಗಾಣಲು ನಮಗೆ ಶಿಕ್ಷಣ ಏಕೆ ಮುಖ್ಯ ಎಂದು ನಾನೂ ಮಾತನಾಡಿದೆ. ನಾಫ್ರೆಯ ರಾಷ್ಟ್ರೀಯ ಸಂಯೋಜಕ ಸಂಜೀವ್‌ ಕೌರಾ ಚಳವಳಿಯು ಸದ್ಯದಲ್ಲೇ ರಾಷ್ಟ್ರೀಯ ಮಟ್ಟದಲ್ಲಿ ಸಮಾವೇಶವನ್ನು ಆಯೋಜಿಸಲಿದೆ ಎಂದೂ, ಈ ರಾಜ್ಯ ಸಮಾವೇಶಗಳೆಲ್ಲವೂ ಅದಕ್ಕೊಂದು ತಯ್ಯಾರಿ ಎಂದು ಹೇಳಿದರು. ಜೊತೆಗೆ ರಾಷ್ಟ್ರೀಯ ಮಟ್ಟದಲ್ಲಿ ಶಿಕ್ಷಣದ ಸ್ಥಿತಿಗತಿಯ ವರದಿಯನ್ನು ಬಿಡುಗಡೆ ಮಾಡಿ ಸರ್ವರಿಗೂ ಪ್ರಾಥಮಿಕ ಶಿಕ್ಷಣ ಖಾತರಿಪಡಿಸಲು ಸರ್ಕಾರದಿಂದ ಕ್ರಿಯಾ ಯೋಜನೆ ಮತ್ತು ಹಣ ನಿಗದಿ ಪಡಿಸಲು ಒತ್ತಾಯಿಸಲಾಗುತ್ತದೆ ಎಂದರು.

ಬೀದರ್‌ನಿಂದ ಬಂದಿದ್ದ ಮಹಿಳಾ ಸಂಘದ ಪ್ರತಿನಿಧಿಗಳು ತಮ್ಮ ಮಕ್ಕಳಿಗೆ ಶಿಕ್ಷಣ ಸಿಕ್ಕರೆ ಜೀತ ಪದ್ಧತಿ ಹೋಗುತ್ತದೆ ಎಂದರೆ, ವಿಜಯಪುರದ ವಾಸುದೇವ ತೋಳಬಂದಿ ತಮ್ಮ ಕಾರ್ಯಕ್ಷೇತ್ರದಿಂದ ಸಾವಿರ ಪತ್ರಗಳನ್ನು ಕೇಂದ್ರ ಸರ್ಕಾರಕ್ಕೆ ಜನ ಶಿಕ್ಷಣ ಹಕ್ಕು ಬೇಕು ಎಂದು ಕಳುಹಿಸಿದ್ದಾರೆ ಎಂದು ಹೇಳುತ್ತಿದ್ದರು.

ಹಿಂದುಳಿದ ಜಾತಿಯವರಾದ ನಮಗೆ ಶಿಕ್ಷಣ ಸಿಗುವುದು ಬಹಳ ಮುಖ್ಯ ಎಂದು ಕೋಲಾರ, ಚಾಮರಾಜನಗರ ಮತ್ತು ಕಲ್ಬುರ್ಗಿಯ ಜನ ಹೇಳುತ್ತಿದ್ದರು. ಬೆಂಗಳೂರಿನ ಕೊಳೆಗೇರಿಯ ಜನರ ಅಹವಾಲು ತಮ್ಮ ಮಕ್ಕಳಿಗೆ ತಮ್ಮ ಭಾಷೆಯಲ್ಲಿ ಶಿಕ್ಷಣ ಬೇಕು ಎಂದು. ಹೆಣ್ಣು ಮಕ್ಕಳಿಗೆ ಮತ್ತು ಅಂಗವಿಕಲತೆಯಿರುವವರಿಗೆ ಶಿಕ್ಷಣ ಕೊಡಿಸಲು ಏರ್ಪಾಡು ಮಾಡಿ ಎಂದು ಕೋಲಾರದ ಪ್ರತಿನಿಧಿಗಳು ದೊಡ್ಡ ದನಿಯೆತ್ತಿದರು. ಗಡಿನಾಡಿನ ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ಸಿಗದಿದ್ದರೆ ಆ ಪ್ರಾಂತಗಳನ್ನು ಮರೆತು ಬಿಡಿ ಎಂದು ಬೆಳಗಾವಿಯ ಗೆಳೆಯರು ಗುಡುಗಿದರು. 

ಇದೆಲ್ಲವನ್ನೂ ತಾಳ್ಮೆಯಿಂದ ಕೇಳುತ್ತಿದ್ದ ದೊರೆಸ್ವಾಮಿಯವರು ಆಗಾಗ್ಗೆ ಕೇಳುತ್ತಿದ್ದುದು ʼಶಿಕ್ಷಣ ಮಂತ್ರಿಗಳು ಕಾರ್ಯಕ್ರಮಕ್ಕೆ ಬಂದರೇನು… ಬರುವರೇನು?ʼ

***

ಬೆಂಗಳೂರಿನ ಸಮಾವೇಶಕ್ಕೆ ಮೊದಲು ಬಾಲಕಾರ್ಮಿಕ ಪದ್ಧತಿ ವಿರೋಧೀ ಆಂದೋಲನದ ನಾವೊಂದಷ್ಟು ಮುಂದಾಳುಗಳು ವಿವಿಧ ಜಿಲ್ಲೆಗಳನ್ನು ಹಂಚಿಕೊಂಡು ಇಡೀ ರಾಜ್ಯದಲ್ಲಿ ಪ್ರಚಾರಾಂದೋಲನ ಕೈಗೊಂಡಿದ್ದೆವು. ಜಾಯ್‌ ಮಲೈಕಲ್‌, ನಿರಂಜನ್‌, ಉದಯ್‌, ಮಾಥ್ಯೂ, ಸರೋಜ, ರೆನ್ನಿ ಡಿʼಸೋಜಾ, ರಾಘವೇಂದ್ರ, ವರ್ಗೀಸ್‌ ಕ್ಲೀಟಸ್‌, ಪ್ರಸನ್ನ, ವೆಂಕಟೇಶ್‌, ಮಂಜುನಾಥ, ಗಿರೀಶ, ವಿಕ್ಟರ್‌ ತಾರೋ, ವಿಶ್ವಸಾಗರ, ರವಿ, ಪಳ್ಳಿಪುರಂ ಮುಂತಾದವರು ಓಡಾಡಿದೆವು. ನಾನು ಶಿವಮೊಗ್ಗ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶಿಕ್ಷಣ ಹಕ್ಕು ಏನು ಎತ್ತ ಎಂದೆಲ್ಲಾ ಮಾಹಿತಿ ಹಂಚಿಕೊಂಡು ಬೆಂಗಳೂರಿನ ಕಾರ್ಯಕ್ರಮಕ್ಕೆ ಬನ್ನಿ ಎಂದು ಸಾರಿ ಬಂದಿದ್ದೆ. [ಶಿವಮೊಗ್ಗದಲ್ಲಿ ಕಾಗೋಡು ತಿಮ್ಮಪ್ಪನವರು ಬಂದಿದ್ದ ಸಭೆಯಲ್ಲಿ ಸಭಿಕರಿಗೆಲ್ಲಾ ಆದ ಮುಜುಗರದ ಬಗ್ಗೆ ಮುಂದೆಂದಾದರೂ ಬರೆಯುವೆ].

ಬೆಂಗಳೂರಿನ ಸಮಾವೇಶದ ತಯ್ಯಾರಿಗೆ ಕೆಲಸಗಳು ನಡೆಸುತ್ತಿದ್ದಂತೆ ನಿರಂಜನಾರಾಧ್ಯ ಮತ್ತು ನಾನು ಆಗಿನ ಶಿಕ್ಷಣ ಮಂತ್ರಿಗಳನ್ನು ಅವರ ನಿವಾಸದಲ್ಲಿ (ಗಾಲ್ಫ್‌ ಗ್ರೌಂಡ್ಸ್‌ ಎದುರಿನ ಇರುವ ಮಂತ್ರಿಗಳ ಕ್ವಾರ್ಟರ್ಸ್‌) ಭೇಟಿಯಾದೆವು. ಅಂದು ಅವರ ಮನೆಯಲ್ಲಿ ಒಬ್ಬರು ಶಿಕ್ಷಕರು ತಮ್ಮ ಯೋಜನೆಗಳನ್ನು ಕುರಿತು ಸಭೆ ನಡೆಸುತ್ತಿದ್ದರು. ಆ ವಾತಾವರಣದಲ್ಲಿ ಉತ್ಸಾಹದಿಂದಲೇ ಶಿಕ್ಷಣ ಚಳವಳಿಯ ಕಾರ್ಯಕ್ರಮಕ್ಕೆ ಬರುವುದಾಗಿ ಎಚ್‌ ವಿಶ್ವನಾಥ ಅವರು ಭರವಸೆ ನೀಡಿದರು.

ನಾವು ಅತ್ಯುತ್ಸಾಹದಿಂದ ನಮ್ಮ ಗುಂಪಿನಲ್ಲಿ ಹೇಳಿಕೊಂಡು ʼನಮ್ಮ ಅಡ್ವೋಕೆಸಿಯ ರೊಟ್ಟಿ ತುಪ್ಪದಲ್ಲಿ ಜಾರಿತು. ರಾಜ್ಯವೊಂದರ ಶಿಕ್ಷಣ ಮಂತ್ರಿಗಳು ಸಭೆಗೆ ಬಂದು ಶಿಕ್ಷಣ ಹಕ್ಕಿನ ಹೊರಾಟಕ್ಕೆ ಬೆಂಬಲ ಕೊಡುವುದು ಎಂದರೇನು?!ʼ ಎಂದು ಸಂಭ್ರಮದಿಂದ ಇಡೀ ಕಾರ್ಯಕ್ರಮಕ್ಕೆ ರಾಷ್ಟ್ರ ಮಟ್ಟದಲ್ಲೂ ಹೆಚ್ಚಿನ ಪ್ರಚಾರ ಕೊಟ್ಟಿದ್ದೆವು.   

ಆದರೆ ರಾಜ್ಯದ ನಾನಾ ಭಾಗಗಳಿಂದ ಸಾವಿರಕ್ಕೂ ಹೆಚ್ಚು ಮಕ್ಕಳು, ಮಹಿಳೆಯರು, ಪುರುಷರು, ವೃದ್ಧರು, ಚಳವಳಿಗಾರರು, ಅಭಿವೃದ್ಧಿ ಕೆಲಸಗಾರರು, ಶಿಕ್ಷಣ ತಜ್ಞರು, ಹಿರಿಯ ಸ್ವಾತಂತ್ರ್ಯ ಹೋರಾಟಗಾರರಿದ್ದ ಕಾರ್ಯಕ್ರಮಕ್ಕೆ ಶಿಕ್ಷಣ ಮಂತ್ರಿಗಳು ಬರಲಿಲ್ಲ!

ಸಭೆಯಲ್ಲಿ ಸೇರಿದ್ದ ಜನ ತಂಡ ತಂಡವಾಗಿ ಊಟ ಮಾಡಿ ಬಂದು ಸೇರುತ್ತಿದ್ದರು. ತಾವು ಊಟದ ಬಿಡುವನ್ನೂ ತೆಗೆದುಕೊಳ್ಳದೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಎಲ್ಲರ ಮಾತುಗಳನ್ನು ಆಲಿಸಿದ ವಯೋವೃದ್ಧರಾದ ದೊರೆಸ್ವಾಮಿಯವರು ಮಾತಿಗೆ ನಿಂತರು. ತಮ್ಮ ಎಂದಿನ ಶೈಲಿಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡರು. ಜನರ ಅಹವಾಲನ್ನು ಕೇಳಲಾದರೂ ಮಂತ್ರಿಗಳು ಬರಬೇಕಿತ್ತು ಎಂದರು.

ಬರದಿರುವುದು ಅವರು ಈ ವಿಚಾರಕ್ಕೆ ತೋರುತ್ತಿರುವ ಅಪಚಾರದಂತೆ ಕಾಣುತ್ತಿದೆ, ಶಿಕ್ಷಣ ಹಕ್ಕಿನ ಹೋರಾಟ ಸ್ವಾತಂತ್ರ್ಯ ಹೋರಾಟದಷ್ಟೇ ಮುಖ್ಯವಾಗಿದೆ, ಇದನ್ನು ಸಾಧಿಸುವ ತನಕ ನಿಮ್ಮೊಡನೆ ನಾನೂ ಇದ್ದೇನೆ ಎಂದರು.  ಮಾತು ಮುಂದೆ ಸಾಗುತ್ತಾ, ʼಮಂತ್ರಿಗಳು ಇಲ್ಲಿಗೆ ಬರುವುದಿಲ್ಲವಾದರೆ ನಾವೆಲ್ಲಾ ಮಂತ್ರಿಗಳಿರುವ ಕಡೆಗೇ ಹೋಗಿ ನೀವು ಶಿಕ್ಷಣ ಹಕ್ಕಿನ ಪರ ಇದ್ದೀರೋ ಇಲ್ಲವೋ ಕೇಳೋಣʼ ಎಂದೇ ಬಿಟ್ಟರು. ಅದರ ಆಗುಹೋಗುಗಳ ಬಗ್ಗೆ ಯೋಚನೆಯ ಅಲೆ ಬರುವ ಹೊತ್ತಿಗೆ, ದೊರೆಸ್ವಾಮಿಯವರ ಮಾತಿಗೆ ಸಭೆಯಲ್ಲಿ ಸೇರಿದ್ದ ಜನರೆಲ್ಲರೂ ಚಪ್ಪಾಳೆ ತಟ್ಟಿ ಒಪ್ಪಿಯಾಗಿತ್ತು.

ಸಭೆಯನ್ನು ಔಪಚಾರಿಕವಾಗಿ ಮುಗಿಸಿ ಊಟ ಮಾಡುತ್ತಿದ್ದಾಗ, ದೊರೆಸ್ವಾಮಿಯವರು ಮಂತ್ರಿಗಳ ಮನೆ ಎಲ್ಲಿ ಎಂದು ವಿಚಾರಿಸಿದರು. ಆಯಿತೆಂದು ಎದ್ದರು. ಆ ಎತ್ತರದ ಮನುಷ್ಯ ಹೆಜ್ಜೆ ಹಾಕುತ್ತಿದ್ದಂತೆ ಇಡೀ ಜನಸ್ತೋಮ ಕಿಂದರಿಜೋಗಿಯ ಹಿಂದೆ ಹೊರಟವರಂತೆ ನಾವೂ.

ನಾವೆಲ್ಲಾ ಬನ್ನಪ್ಪ ಪಾರ್ಕ್‌ ಬಿಟ್ಟು ಸಾಲಿನಲ್ಲಿ ಕೆಂಪೇಗೌಡ ರಸ್ತೆಯಲ್ಲಿ ಸೇಂಟ್‌ ಮಾರ್ಥಾಸ್ ಆಸ್ಪತ್ರೆ ಪಕ್ಕದಲ್ಲಿ ನಡೆಯಲು ಶುರುಮಾಡಿದಾಗ ಪೊಲೀಸರಿಗೆ ವಾಸ್ತವವಾಗಿಯೂ ಇವರು ಹೊರಟರು ಎಂದು ಅರಿವಾದದ್ದು. ನಾವು ಯಾರೂ ಯಾರಿಗೂ ಸಾಲಿನಲ್ಲಿ ಬರಬೇಕು, ಶಿಸ್ತಿನಲ್ಲಿರಬೇಕು ಇತ್ಯಾದಿ ಯಾವುದೇ ನಿರ್ದೇಶನಗಳನ್ನು ನೀಡಲಿಲ್ಲ. ಜನ ತಾವೇ ತಾವಾಗಿ ನಡೆದರು. ಪೊಲೀಸರು ನಾವೆಲ್ಲಾ ಕಾವೇರಿ ಭವನ ತಲುಪುವ ಮೊದಲು ಚಿಕ್ಕಪುಟ್ಟದಾಗಿ ತಡೆದರು. ಇಲ್ಲ. ನೂರಾರು ಜನರ ನಡಿಗೆ ತಡೆಯಾಗಲಿಲ್ಲ. ಪೊಲೀಸರ ವಾಕಿಟಾಕಿಗಳು ಮಾತನಾಡಿದವು. ದೊಡ್ಡ ದೊಡ್ಡ ಪೊಲೀಸ್‌ ಅಧಿಕಾರಿಗಳು ದಡಬಡ ಬಂದರು. ಜೊತೆಯಲ್ಲಿ ಪೊಲೀಸರ ಪಡೆ. 

ದೊರೆಸ್ವಾಮಿಯವರ ಬಳಿ ಯಾರೋ ಹಿರಿಯ ಪೊಲೀಸ್‌ ಅಧಿಕಾರಿ ಹೋಗಿ ಏನೋ ಹೇಳಲೆತ್ನಿಸಿದರು. ಅವರು ನಗುನಗುತ್ತಲೇ ‘ನಮ್ಮನ್ನು ಈ ಹೋರಾಟವನ್ನು ತಡೆಯಬೇಡಿರಪ್ಪ. ನಮ್ಮ ಹೋರಾಟ ನಿಮ್ಮ ಮಕ್ಕಳೂ ಸೇರಿದಂತೆ ಎಲ್ಲಾ ಮಕ್ಕಳಿಗೂ ಶಿಕ್ಷಣ ಹಕ್ಕು ಆಗಿ ದೊರೆಯಬೇಕು ಎಂದು, ನಮ್ಮ ಹೋರಾಟಕ್ಕೆ ಕೈ ಜೋಡಿಸಿ. ಸೇರಿಕೊಳ್ಳಿ’ ಎಂದರು. ಅವರನ್ನು ಪೊಲೀಸರು ಇನ್ನೇನು‌ ಮಾಡಲಾಗುತ್ತದೆ. ಪೊಲೀಸರು ಈ ಗುಂಪಿನ ನಾಯಕರಾರು ಎಂದು ಅವರಿವರನ್ನು ಕೇಳಿ ಹುಡುಕಲಾರಂಭಿಸಿದರು. ಎಲ್ಲರದೂ ಒಂದೇ ಉತ್ತರ. ʼನಾವೆಲ್ಲರೂ ನಾಯಕರು!ʼ. ಪೊಲೀಸರಿಗೆ ತಾಳ್ಮೆ ತಪ್ಪಿತು. 

ಅಷ್ಟು ಹೊತ್ತಿಗೆ ಸ್ಥಳಕ್ಕೆ ಆಗಮಿಸಿದ ಹಿರಿಯ ಪೊಲೀಸ್‌ ಅಧಿಕಾರಿಗಳು ಕಿರಿಯ ಅಧಿಕಾರಿಗಳ ಮೇಲೆ ಎಲ್ಲರಿಗೂ ಕಾಣುವಂತೆ ಕೇಳುವಂತೆ ಕೂಗಾಡುತ್ತಿದ್ದರು. ʼಇವರಿಗೆ ಈ ಯೋಜನೆ ಇತ್ತು ಅಂತ ನೀವು ಯಾಕೆ ಮೊದಲೇ ಹೇಳಲಿಲ್ಲ. ಇವರು ಹೀಗೆ ಮಾರ್ಚ್‌ ಮಾಡಕ್ಕೆ ಯಾರು ಅನುಮತಿ ಕೊಟ್ಟಿದ್ದು? ಯಾವ ಪೊಲೀಸ್‌ ಸ್ಟೇಷನ್‌ ಸಭೆಗೆ ಅನುಮತಿ ಕೊಟ್ಟಿದ್ದು. ಕರೆಯಿರಿ ಅವರನ್ನ. ತಡೆಯಿರಿ ಇವರನ್ನ. ಹೀಗೆಲ್ಲಾ ಮುಖ್ಯರಸ್ತೆಯಲ್ಲಿ ಅನುಮತಿ ಇಲ್ಲದೆ ಹೋಗೋದು ಅಂದ್ರೇನು? ನಿಲ್ಲಿಸ್ರಿ ಎಲ್ರನ್ನʼ. ಆದರೆ ಆ ಜನಸಮೂಹದಲ್ಲಿ ಇದ್ದವರು ಹೆಚ್ಚಿನವರು ಮಹಿಳೆಯರು, ಮಕ್ಕಳು. ಎಲ್ಲರೂ ಉತ್ಸಾಹದಿಂದ ಹೆಜ್ಜೆ ಹಾಕುತ್ತಿದ್ದಾರೆ. ಮುಂದೆ ಸ್ವಯಂಪ್ರೇರಣೆಯಿಂದ ಹಾಡುತ್ತಾ ಹಲಗೆ ಬಾರಿಸುತ್ತಾ ಕುಣಿಯುತ್ತಾ ಕಾರ್ಯಕ್ರಮದ ಬ್ಯಾನರ್‌ ಹಿಡಿದು ಹೊರಟ ಸ್ವಯಂಸೇವಕರು. 

ಕೂಡ್ಲಿಗಿಯ ಸ್ನೇಹಾ ಸಂಸ್ಥೆಯ ರಾಮಾಂಜನೇಯ ಆಟೋದಲ್ಲಿ ಕುಳಿತು ಮೈಕಿನಲ್ಲಿ ಆಗಲೇ ಸಿದ್ಧವಾದ ಘೋಷಣೆಗಳನ್ನು ಕೂಗುತ್ತಿದ್ದರು, ʼಶಿಕ್ಷಣ ನಮ್ಮ ಮಕ್ಕಳ ಹಕ್ಕುʼ, ʼಈಗಲೇ ಬೇಕು ಶಿಕ್ಷಣ ಕಾನೂನು ತನ್ನಿ ತಕ್ಷಣʼ, ʼಹಿಂದುಳಿದ ಜಾತಿ ವರ್ಗಗಳ ಜನರ ಏಳಿಗೆಗೆ ಬೇಕೇ ಬೇಕು ಉಚಿತ ಮತ್ತು ಕಡ್ಡಾಯ ಶಿಕ್ಷಣʼ, ʼನಮ್ಮ ನಡಿಗೆ ಎಲ್ಲಿಗೆ, ಶಿಕ್ಷಣ ಮಂತ್ರಿಗಳ ಮನೆಗೆʼ ಇತ್ಯಾದಿ. ನಡೆಯುತ್ತಾ ಬಂದ ದೊರೆಸ್ವಾಮಿಯವರು ಒಂದಷ್ಟು ದೂರ ರಾಮಾಂಜನೇಯ ಅವರೊಡನೆ ಆಟೋದಲ್ಲಿ ಬಂದರು. ರಾಮು ಈಗಲೂ ಆ ಘಟನೆ ನೆನೆದು‌ ಪುಳಕಗೊಳ್ಳುತ್ತಾರೆ. 

ಪೊಲೀಸರು ಮೊದಲು ನಮ್ಮನ್ನು ಆಗಿನ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ತಡೆಯಲೆತ್ನಿಸಿದರು. ಊಹು. ಆಗಲಿಲ್ಲ. ಮುಂದೆ ಅರಮನೆ ರಸ್ತೆಯ ಕಡೆ ಹೊರಟಿತು ಮೆರವಣಿಗೆ. ಮಹಾರಾಣಿ ಕಾಲೇಜಿನ ಬಳಿ ದೊಡ್ಡ ಸಂಖ್ಯೆಯಲ್ಲಿ ನಿಂತಿದ್ದ ಪೊಲೀಸರು ಹೆಚ್ಚಿನ ಪ್ರತಿರೋಧ ತೋರದೆ ದಾರಿ ಬಿಟ್ಟರು. ಮುಂದೆ ನಮ್ಮ ನಡೆಗೆ ಅಡೆತಡೆ ಇರಲಿಲ್ಲ. ಪೊಲೀಸರೇ ಮುಂದಾಗಿ ನಾವು ವಿಧಾನ ಸೌಧದ ಕಡೆ ತಿರುಗದಂತೆ ನೋಡಿಕೊಂಡು ಕಾರ್ಲಟನ್‌ ಭವನ ದಾಟುವಂತೆ ಮಾಡಿದರು. 

ಹರಿದು ಬಂದ ನದಿಗೆ ಇದ್ದಕ್ಕಿದ್ದ ಹಾಗೆ ಅಣೆಕಟ್ಟು ಎದುರಾದಂತೆ ಬಸವೇಶ್ವರ ವೃತ್ತದಲ್ಲಿ ದೊಡ್ಡ ಪ್ರಮಾಣದ ಬ್ಯಾರೀಕೇಡ್‌ಗಳು ಪೊಲೀಸ್‌ ವ್ಯಾನುಗಳು, ಕೈಯಲ್ಲಿ ಲಾಠಿ ಹಿಡಿದು ನಿಂತ ಪುರುಷ ಮತ್ತು ಮಹಿಳಾ ಪೊಲೀಸರು. ಮುಂದೆ ಸಾಗಲಾಗದೆ ನಿಂತೆವು. ಸುತ್ತಮುತ್ತಲ ವಾಹನದ ಟ್ರಾಫಿಕ್‌ ಅನ್ನು ಪೊಲೀಸರು ಬೇರೆಡೆಗೆ ತಿರುಗಿಸುತ್ತಿದ್ದರು.  

ನಾವೆಲ್ಲಾ ಅಲ್ಲೇ ಕುಳಿತೆವು. ಧರಣಿ! ಕ್ರೈ ಸಂಸ್ಥೆಯ ರೆಜಿನಾ ಥಾಮಸ್‌, ಶೆಫಾಲಿ, ಹಿರಿಯ ಪತ್ರಕರ್ತೆ ಕಾತ್ಯಾಯಿನಿ ಚಾಮರಾಜ್‌ ಜೊತೆಗಿದ್ದರು. ಒಂದಷ್ಟು ಜನರಿಗೆ ಗಾಬರಿ! ಕೆಲವರು ಹಿಂದಿನಿಂದ ಜಾಗ ಖಾಲಿ ಮಾಡಿದರು. ಯಾರು ಕಾಲು ಕಿತ್ತಿದ್ದರೂ, ದೊರೆಸ್ವಾಮಿಯವರು ಏಳುವ ಯಾವ ಲಕ್ಷಣಗಳೂ ಇರಲಿಲ್ಲ. ನಿಮ್ಮಲ್ಲಿ ನಾಲ್ಕೈದು ಜನ ನಾಯಕರು ಬನ್ನಿ, ಮಂತ್ರಿಗಳ ಬಳಿಗೆ ಕರೆದೊಯ್ಯುವ ಏರ್ಪಾಟು ಮಾಡುತ್ತೇವೆ ಎಂದು ಪೊಲೀಸರು ರಾಜಿ ಮಾಡಲು ಬಂದರು. ನಾವು ತಕ್ಷಣ ಸಭೆ ನಡೆಸಿ ಅದಾಗದು ಎಂದೆವು. ಚಡಪಡಿಸಿದ ಪೊಲೀಸರು ಅಂತೂ ಒಂದು ಭರವಸೆ ನೀಡಿದರು. ಅದರಂತೆ ನಡೆದುಕೊಂಡರು.

ಬಂದರು. ಮಾನ್ಯ ಶಿಕ್ಷಣ ಮಂತ್ರಿಗಳು ರಸ್ತೆಗೆ ಬಂದರು.

ರಸ್ತೆಯಲ್ಲಿ ನಿಂತಿದ್ದ, ಇನ್ನೇನು ತಾಳ್ಮೆ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದ ಜನರೆದುರು ನಿಂತು ಕೈಜೋಡಿಸಿ ಹೇಳಿದರು. ʼಹೌದು. ಶಿಕ್ಷಣ ಮೂಲಭೂತ ಹಕ್ಕು ಆಗಬೇಕು.ʼ

|ಮುಂದಿನ ಸಂಚಿಕೆಯಲ್ಲಿ|

‍ಲೇಖಕರು ವಾಸುದೇವ ಶರ್ಮ

December 10, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಾನೂನು ‌ಕಾಯ್ದೆಯ ವಿರುದ್ಧ ಎಲ್ಡ್ರೆಡ್ ನ ಹೋರಾಟ…

ಕಾನೂನು ‌ಕಾಯ್ದೆಯ ವಿರುದ್ಧ ಎಲ್ಡ್ರೆಡ್ ನ ಹೋರಾಟ…

ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು. ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ...

ಕಥೆ – ಮಕ್ಳು ಮರೀಗೆ ಒಳ್ಳೇದಲ್ಲ…

ಕಥೆ – ಮಕ್ಳು ಮರೀಗೆ ಒಳ್ಳೇದಲ್ಲ…

ಡಾ. ಎಸ್.ಬಿ.ರವಿಕುಮಾರ್ ಒಂದು ಮಧ್ಯಾಹ್ನ ಉಪನಿರ್ದೇಶಕರ ಕಛೇರಿಗೆ ಸಲ್ಲಿಸಬೇಕಾಗಿದ್ದ ವರದಿಗಳನ್ನು ತಯಾರಿಸುತ್ತಿದ್ದೆ. ಪಕ್ಕದ ಕಿಟಕಿ ಕಡೆಯಿಂದ...

೧ ಪ್ರತಿಕ್ರಿಯೆ

  1. Kamalakar Bhat

    ಕುತೂಹಲ ಕೆರಳಿಸಿ ಧಾರಾವಾಹಿಯಂತೆ ಸಶೇಷ ಮಾಡಿಬಿಟ್ಟೆಯಲ್ಲ. ಮುಂದೇನು ಆಯ್ತು ನೋಡಬೇಕಲ್ಲ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: