ಸಮಾಜದ ಸ್ವರೂಪ ಮತ್ತು ಅದರ ಮುಖಗಳ ಅನಾವರಣ

ಕಲ್ಲೇಶ್ ಕುಂಬಾರ್

ಕವಿತೆಯ ವಿಚಾರದಲ್ಲಿ ಒಂದು ಮಾತಿದೆ. ಅದು, ಕಾವ್ಯ ಅನುಭವದ ಮೂಲಕವೇ ಅನಾವರಣವಾಗಬೇಕೆ ವಿನಃ ಅರ್ಥದ ಮೂಲಕ ಅಲ್ಲ ಎಂಬುದು. ಏಕೆಂದರೆ ಅರ್ಥವೆಂಬುದು ಕಾಲಬದ್ಧವಾದ ನೆಲೆಗಳಿಂದ ರೂಪಿಕೆ ಪಡೆದ ಆಕೃತಿಯಾಗಿದೆ. ಹೀಗಾಗಿ ಕವಿತೆಗೆ ಖಚಿತವಾದ ಅರ್ಥವೆಂಬುದು ಇಲ್ಲ. ಹಲವು ಓದುಗಳಲ್ಲಿ ಹಲವು ಅನುಭವಗಳನ್ನು ಕವಿತೆ ಕೊಡುತ್ತದೆ. ಅದಕ್ಕೇ ಅದರಿಂದ ಅರ್ಥ ಹುಡುಕುತ್ತ ಹೋಗುತ್ತೇನೆ ಎನ್ನುವುದು ವಿಪರ್ಯಾಸದ ಸಂಗತಿ.

ಇನ್ನು ಲೋಕದ ಕುರಿತಾದ ಕವಿಯ ಅನುಭವವನ್ನು ಹೀಗೆ ಅರ್ಥೈಸಬಹುದು: ಈ ಸೃಷ್ಟಿಯು ನಿರಂತರವಾದ ಬದಲಾವಣೆಯ ಸಾಧ್ಯತೆಗಳನ್ನು ತನ್ನಲ್ಲೇ ಇರಿಸಿಕೊಂಡಿದೆ. ಈ ಬದಲಾವಣೆ ಎಂಬುದು ಕಾಲಬದ್ಧವಾಗಿ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳುವ ಸಾಮಾಜಿಕ, ಆರ್ಥಿಕ, ಚಾರಿತ್ರಿಕ ಆಯಾಮಗಳು ಮನಸ್ಸಿನ ಮೇಲೆ ಪ್ರಭಾವವನ್ನು ಬೀರುವುದರಿಂದ ಕಾಲಕ್ಕೆ ಅನುಗುಣವಾಗಿ ಕವಿಯು ವಸ್ತುವನ್ನು ನೋಡುವ ಕ್ರಮ ಬದಲಾಗುತ್ತದೆ. ಹೀಗೆ, ಕಾಲಬದ್ಧ ಸಮಾಜದ ಸ್ವರೂಪವನ್ನು ಮತ್ತು ಅದರೆಲ್ಲರ ಮುಖಗಳನ್ನು ಸೃಜನಶೀಲ ಮನಸ್ಸಿನ ಕವಿಯು ಕಾವ್ಯದ ಅನುಸಂಧಾನದಲ್ಲಿ ತೊಡಗಿಸಿಕೊಳ್ಳುತ್ತಾನೆ. ಈ ಕಾರಣದಿಂದಲೇ ಕವಿಯ ದೃಷ್ಟಿಯು ಕಾಲ ಸಂದರ್ಭ ಪ್ರೇರಿತವಾದುದು ಆಗಿರುತ್ತದೆ.

ಅಂದ ಹಾಗೆ, ಈ ಮಾತುಗಳನ್ನು ಗಮನದಲ್ಲಿಟ್ಟುಕೊಂಡು ನೋಡಿದಾಗ ಇತ್ತೀಚೆಗೆ ಹೊಸದಾಗಿ ಕವಿತೆಗಳನ್ನು ಬರೆಯುತ್ತಿರುವ ಯುವ ಕವಯತ್ರಿ ಡಾ. ಶೃತಿ ಬಿ.ಆರ್. ಅವರ ‘ಝೀರೊ ಬ್ಯಾಲೆನ್ಸ್’ ಸಂಕಲನದಲ್ಲಿನ ಕವಿತೆಗಳು ವಿಶಿಷ್ಟವಾಗಿವೆ ಎಂದೆನಿಸುತ್ತದೆ. ಈ ಕವಿತೆಗಳ ವಿಶೇಷತೆಯೆಂದರೆ ಕಾಲಾಂತರದಲ್ಲಿ ಬದಲಾದ ಸಮಾಜದ ಸ್ವರೂಪ ಮತ್ತು ಅದರ ಎಲ್ಲ ತೆರನಾದ ಮುಖಗಳನ್ನು ತಮ್ಮೊಳಗೆ ಹಿಡಿದಿಟ್ಟುಕೊಂಡಿವೆ. ಹೀಗಾಗಿ, ಡಾ. ಶೃತಿ ಬಿ. ಆರ್. ಅವರು ಹೊಸ ಕವಯತ್ರಿ ಎಂಬ ರಿಯಾಯಿತಿಯನ್ನು ತೋರದೇ ಇಲ್ಲಿನ ಕವಿತೆಗಳನ್ನು ಗಂಭೀರವಾಗಿ ಪರಿಗಣಿಸಬಹುದಾದಷ್ಟು ವಿಭಿನ್ನವಾಗಿಯೂ ಮತ್ತು ಅರ್ಥಪೂರ್ಣವಾಗಿಯೂ ಇವೆ. ಇಲ್ಲಿನ ಒಂದೊಂದೇ ಕವಿತೆಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತ ಹೋದಾಗ ನಾವು ಕಂಡಿರಬಹುದಾದ ಆದರೆ ನಮ್ಮ ನಿರ್ಲಕ್ಷ್ಯಕ್ಕೊಳಪಟ್ಟಿರಬಹುದಾದ ಅನೇಕ ಸಂಗತಿಗಳು ಮುಖಾಮುಖಿಯಾಗುತ್ತ ಹೋಗುತ್ತವೆ.

ಡಾ. ಶೃತಿ ಅವರು ಕವಿಯ ಮನಸ್ಸು ಅದೆಷ್ಟು ಕ್ರಿಯಾಶೀಲವಾಗಿರಬೇಕು ಎಂಬುದನ್ನು ‘ಎಂದೋ ಮರೆತ ಉಪಮೆಗಳು’ ಪದ್ಯದಲ್ಲಿ ಹೇಳುತ್ತಾರೆ. ಸೃಜನಶೀಲವಾದ ಕವಿಯ ಮನಸ್ಸು ಕಾಲಬದ್ಧವಾದ ವ್ಯವಸ್ಥೆಯಲ್ಲಿನ ವಿದ್ಯಮಾನಗಳಿಗೆ ಸದಾ ಸ್ಪಂದಿಸುತ್ತಿರಬೇಕು. ಮತ್ತು ಆ ವಿದ್ಯಮಾನಗಳಿಗೆ ತನ್ನ ಗ್ರಹಿಕೆಯ ನೆಲೆಯಲ್ಲಿ ಪರ ವಿರೋಧಗಳ ಮಧ್ಯದ ಗೆರೆಯಲ್ಲಿ ನಿಂತು ಪ್ರತಿಕ್ರಿಯಿಸಬೇಕು:

ಕಾಲುದಾರಿಯಲ್ಲಿ ಕಂಡು,
ಕರೆದೊಯ್ಯೆಂದು ರಚ್ಚೆ ಹಿಡಿದ
ಕವಿತೆಗೆ ಕರಗದ
ನಿಷ್ಕರುಣಿ ಕವಿ!

ಕವಿಯೊಳಗಿನ ಸೃಜನಶೀಲತೆಯ ಬಗ್ಗೆ ಮತ್ತು ಅದನ್ನು ಸರಿಯಾದ ಸಮಯ ಮತ್ತು ಸರಿಯಾದ ಕ್ರಮದಲ್ಲಿ ದುಡಿಸಿಕೊಳ್ಳುವ ಪರಿಯ ಬಗ್ಗೆ ಈ ಮೇಲಿನ ಸಾಲುಗಳು ಮಾತನಾಡುತ್ತವೆಯಾದರೂ ನಮ್ಮ ಬದುಕಿಗೆ ಸಂಬಂಧಿಸಿದ ಹಲವಾರು ಸಾಧ್ಯತೆಗಳನ್ನು ಕೂಡ ಅರಿವಿಗೆ ತರುತ್ತವೆ.

ಸೃಜನಶೀಲತೆ ಎಂದರೆ ಸುಮ್ಮನೆ ಅಲ್ಲ. ಅದು ಬರಹವೇ ಆಗಲಿ, ಕಲೆಯೇ ಆಗಲಿ ಥಟ್ಟನೆ ಮನದೊಳಗೆ ಸಂಭವಿಸುವಾಗ ಕವಿಯ ಮನಸ್ಸು ಸ್ಪಂದಿಸದೇ ಹೋದರೆ ಮುಂದೆಯೂ ಅಂಥ ಸೃಜನಶೀಲ ಕ್ರಿಯೆಗಳು ನಮ್ಮೊಂದಿಗೆ ಮುಖಾಮುಖಿಯಾಗುವುದೇ ಇಲ್ಲ! ಅಂತೆಯೇ, ಕವಿಯು ನಿರಂತರವಾಗಿ ಬದಲಾವಣೆಗೊಳಪಡುತ್ತಲೇ ಇರುವ ಲೋಕವನ್ನು ನೋಡುವ ಕಲೆಯನ್ನು ಕರಗತ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ ಎಂಬುದು ಈ ಸಾಲುಗಳ ಆಶಯವಾಗಿದೆ. ‌

ಇನ್ನು, ಇದೇ ಸಾಲುಗಳು ಈ ಅರ್ಥಕ್ಕೆ ವಿರುದ್ಧವಾದ ಇನ್ನೊಂದು ಅರ್ಥವನ್ನು ಸಹ ಧ್ವನಿಸುತ್ತವೆ. ಭವಿಷ್ಯದಲ್ಲಿ ನಮ್ಮ ಬದುಕನ್ನು ನಿರ್ಧರಿಸಬಹುದಾದ ಅದೃಷ್ಟದ ಸಂಗತಿಗಳಿಗೆ ಆ ಸಂದರ್ಭದಲ್ಲಿ ಧನಾತ್ಮಕವಾಗಿ ಸ್ಪಂದಿಸದೇ ಹೋದಲ್ಲಿ ಇಡಿಯಾಗಿ ಬದುಕು ರೌರವ ನರಕವಾಗುತ್ತದೆ ಎಂಬ ಒಳಾರ್ಥವನ್ನು ಓದುಗನಿಗೆ ದಾಟಿಸುತ್ತದೆ. ಹೀಗೆ, ಎರಡು ಭಿನ್ನವಾದ ಆಯಾಮಗಳಲ್ಲಿ ಲೋಕದ ಸಂಗತಿಗಳೊಂದಿಗೆ ಕವಿತೆ ಮುಖಾಮುಖಿಯಾಗುತ್ತದೆ!

ಡಾ. ಶೃತಿ ಅವರಿಗೆ ಗಂಡು-ಹೆಣ್ಣು ಎಂಬ ತಾರತಮ್ಯದ ಭಾವವನ್ನು ಮೀರಿ ಮನುಷ್ಯ ಸಂಬಂಧಗಳ ನೆಲೆಯಲ್ಲಿ ಹೆಣ್ಣಿನ ಬದುಕಿಗೆ ಸಂಬಂಧಿಸಿದ ದುಃಖದ, ದುರಂತದ ಎಳೆಗಳನ್ನು ಶೋಧಿಸುವ ಇರಾದೆ ಇರುವುದರಿಂದಲೇ ‘ಅವಳು’ ಎಂಬ ಪದ್ಯದಲ್ಲಿ ಹೆಣ್ಣಿನ ನೋವಿನ ಮೂಲ ಮತ್ತು ಅದರ ಹಿಂದಿನ ಕಾರಣಗಳನ್ನು ಹಿಡಿದಿಡಲು ಪ್ರಯತ್ನಿಸಿದ್ದಾರೆ. ಈ ವ್ಯವಸ್ಥೆಯೊಳಗೆ ಹೆಣ್ಣಿನ ಮೇಲೆ ನಡೆದುಕೊಂಡು ಬಂದಿರಬಹುದಾದ ದೌರ್ಜ್ಯನ್ಯಗಳ ಕಾರಣವಾಗಿ ಆಕೆಯ ಆಂತರ್ಯದೊಳಗೆ ರೂಪುಗೊಂಡಿರುವ ನೋವು, ಸಂಕಟ, ಹತಾಶೆಗಳ ಅಗಾಧತೆಯನ್ನು ಈ ಪುರುಷ ಸಮಾಜ, ಹೆಣ್ಣಿನ ಲೋಕ ಇದಿಷ್ಟೇ.. ಎಂದು ಅಂದುಕೊಂಡಿರುವ ಅಡುಗೆ ಮನೆಯ ಪರಿಕರಗಳೊಂದಿಗೆ ಸಮೀಕರಿಸಿ ಹೇಳುವ ಮೂಲಕ ಗಂಡಿನ ಈ ಥರದ ಧೋರಣೆಗಳನ್ನು ವಿರೋಧಿಸುತ್ತಾರೆ. ಮನಸ್ಸನ್ನು ಬೆಚ್ಚಗಾಗಿಸುವ ಕವಿತೆಗಳನ್ನು ಬರೆಯುತ್ತಿದ್ದ ಹುಡುಗಿ ಇದ್ದಕ್ಕಿದ್ದಂಗೆ ನಾಲ್ಕು ಗೋಡೆಗಳ ನಡುವೆ ಕಳೆದು ಹೋಗುವುದಕ್ಕೆ ಗಂಡಿನ ವ್ಯವಸ್ಥೆ ಪ್ರೇರಿತವಾದ ಕ್ರೂರ ವರ್ತನೆಯೇ ಕಾರಣವಾಗಿದೆ. ಅಂತೆಯೇ, ಇಲ್ಲಿ ಕವಯತ್ರಿ ಹೆಣ್ಣನ್ನು ಗಂಡಿನ ಕೈ ಬೆರಳಿಗೆ ಸಿಲುಕಿದ ಚಿಟ್ಟೆಯೊಂದಿಗೆ ಸಮೀಕರಿಸಿದ ಪರಿಯು ಹಲವು ಅರ್ಥವನ್ನು ಧ್ವನಿಸುತ್ತದೆ:

ಹುಡುಗನೊಬ್ಬ ಚಿಟ್ಟೆಯ ಚಂದಕೆ
ಮರುಳಾಗಿ ಬಿಡದೆ ಹಿಂದೆ ಓಡಿ
ಪಟ್ಟು ಬಿಡದೆ ರೆಕ್ಕೆ ಹಿಡಿದು
ದೊಡ್ಡ ಪುಸ್ತಕದ ಮಧ್ಯೆ ಬಂಧಿಸಿದ..
ಬೆರಳಿಗಂಟಿದ ಬಣ್ಣಕೆ ಮರುಳಾದ

ಹೆಣ್ಣಿನ ದೇಹಭಾಷೆಯನ್ನು ಹಸಿ ಹಸಿಯಾಗಿ ಆಸ್ವಾದಿಸುವ ಗಂಡು, ತನ್ನ ವಾಂಛೆ ತೀರಿದ ಮೇಲೆ ಚಿಟ್ಟೆಯನ್ನು ಪುಸ್ತಕದ ಮಧ್ಯೆ ಬಂಧಿಸಿದಂತೆ ನಾಲ್ಕು ಗೋಡೆಗಳ ನಡುವೆ ಬಂಧಿಸಿಡುವ ಕ್ರಿಯೆಯು ಗಂಡಿನ ಕ್ರೌರ್ಯವೇ ಆಗಿದ್ದು, ಅದಕ್ಕೆ ಪರೋಕ್ಷವಾಗಿ ವ್ಯವಸ್ಥೆ ರೂಪಿಸಿದ ಕಟ್ಟಳೆಗಳ ಪ್ರೇರಣೆಯೇ ಆಗಿದೆ. ಕಡೆಗೂ ಅವಳನ್ನು ಭೋಗಿಸಿದ ನಂತರವೂ ಅವಳ ಆಂತರ್ಯವನ್ನು ತಿಳಿಯದ ಗಂಡು ಮಾತ್ರ ಪಶುವೇ ಹೌದು ಎಂದೆನಿಸಿ ಬಿಡುತ್ತಾನೆ. ಕವಿತೆ ವಾಚ್ಯವೆನಿಸಿದರೂ ಚಿಂತನೆಗೀಡು ಮಾಡುತ್ತದೆ.

ಡಾ. ಶೃತಿ ಅವರಿಗೆ ಲೋಕವನ್ನು ನೋಡುವ ಕಲೆ ಕರಗತವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿ ಈ ಸಂಕಲನದಲ್ಲಿ ‘ಬರೀ ಆಟ’ ಎಂಬ ಕವಿತೆ ಇದೆ. ಈ ಕವಿತೆಯಲ್ಲಿ ಲೋಕದ ನಿಯಮಗಳನ್ನು ಮೀರಿದ ಮತ್ತು ತಾನೇ ಸ್ವಯಂ ಸೃಷ್ಟಿಸಿರುವ ಆಟಗಳಲ್ಲಿ ಮೈಮರೆತು ಹೋಗಿರುವ ಮನುಷ್ಯ, ಮುಂದೊಂದು ದಿನ ತಾನಷ್ಟೇ ಗೆಲ್ಲುವೆನೆಂಬ ವಿಕ್ಷಿಪ್ತವಾದ ಭ್ರಮೆಯೊಳಗೆ ಕಳೆದು ಹೋಗುವುದರ ಮೂಲಕ ವಾಸ್ತವನ್ನು ಮರೆತು ಬಾಳುತ್ತಿದ್ದಾನೆ ಎಂಬ ಸತ್ಯವನ್ನು ಡಾ. ಶೃತಿ ಅವರು ತೆರೆದಿಡುತ್ತಾರೆ. ಇಡಿಯಾಗಿ ಕವಿತೆ ಅಮೂರ್ತವಾಗಿದ್ದು ಹಲವು ಓದಿನಲ್ಲಿ ಹಲವು ಅರ್ಥವನ್ನು ಧ್ವನಿಸುತ್ತದೆ. ಇಲ್ಲಿ ‘ಆಟ’ ಎನ್ನುವುದು ಮನುಷ್ಯ, ತನ್ನ ಗೆಲುವಿಗೆ ಸೃಷ್ಟಿಸಿಕೊಂಡಿರುವ ಕ್ರಿಯೆಯಂತಿದೆ! ಆದರೆ, ಹಾಗೆ ನೋಡಿದರೆ ಆತನಿಗೆ ಒಲಿದು ಬರುವ ’ಗೆಲುವು’ ಎಂಬ ಅಹಂಮಿಕೆ ಮಾತ್ರ ಲೋಕದ ನಿಯಮವನ್ನು ಮೀರುವುದೇ ಆಗಿದೆ. ಆದರೆ, ಹೀಗೆ ಏಕಮುಖವಾಗಿ ಒಲಿದು ಬಂದ ಮನುಷ್ಯನ ಯಾವ ಗೆಲುವೂ ಸಹ ಲೋಕದ ನಿಯಮಗಳ ಮುಂದೆ ಸಿಂಧುವಾಗುವುದೇ ಇಲ್ಲ!

ಈ ಕವಿತೆಯಲ್ಲಿ ಸಂಭವಿಸುವ ಕುಂಟೆಬಿಲ್ಲೆ ಆಟ, ನಡೆಯದ ಗೊಂಬೆ ಮದುವೆ ಮತ್ತು ಕಣ್ಣಾಮುಚ್ಚಾಲೆ ಆಟ- ಇವೆಲ್ಲ ಮನುಷ್ಯನು ಬದುಕಿನಲ್ಲಿ ಅಳವಡಿಸಿಕೊಂಡಿರಬಹುದಾದ ನಿಯಮ ಬಾಹಿರವಾದ ಬದುಕನ್ನು ನಿರ್ವಹಿಸುತ್ತಿರುವ ಕಾರಣವಾಗಿಯೇ ಆತ ಇತಿಹಾಸವಾಗದೇ ಕೇವಲ ಕಥೆಯಾಗುವುದರ ಮೂಲಕ ತನ್ನ ಕಥೆಯನ್ನು ತಾನೇ ಕೇಳಿಸಿಕೊಳ್ಳುವಂತಾಗಿರುವುದು ದುರಂತವೇ ಸರಿ ಎನ್ನಬೇಕು. ಕವಿತೆ ಓದಿದ ನಂತರವೂ ಬಹುವಾಗಿ ಕಾಡುತ್ತದೆ.

ಈ ಸಂಕಲನದಲ್ಲಿ ‘ಅಂತರ’ ಎಂಬ ಶೀರ್ಷಿಕೆಯ ಕವಿತೆ ಯೊಂದಿದೆ. ಅದು, ಈ ಸಮಾಜದಲ್ಲಿ ಹೆಣ್ಣಿನ ಸ್ಥಾನಮಾನದ ವಿಚಾರದಲ್ಲಿ ಧ್ವನಿಸುವ ಅರ್ಥದ ಕಾರಣವಾಗಿ ಓದುಗನನ್ನು ಆವರಿಸಿಕೊಳ್ಳುತ್ತದೆ. ನಮ್ಮ ಪುರುಷ ಪ್ರಧಾನವಾದ ವ್ಯವಸ್ಥೆ, ಮನುಷ್ಯ- ಮನುಷ್ಯರ ನಡುವೆ ತಂದೊಡ್ಡಿರುವ ಲಿಂಗ ಸಂಬಂಧವಾದ ತಾರತಮ್ಯದ ಕಾರಣವಾಗಿ ಗಂಡು ಹೆಣ್ಣಿನ ನಡುವೆ ಬೆಸೆದುಕೊಳ್ಳಬೇಕಾದ ಗಾಢವಾದ ಸಂಬಂಧವನ್ನು ಒಂದು ಹಂತದಲ್ಲಿ ಅಹಂಮಿಕೆಯು ಹೇಗೆಲ್ಲ ಆಳುತ್ತದೆ ಎಂಬುದನ್ನು ಅನಾವರಣ ಮಾಡುತ್ತದೆ. ಈ ಸಾಲುಗಳನ್ನು ಗಮನಿಸಿ:

ಸಾನಿಧ್ಯ, ಸಾಂತ್ವನ, ಸಂತಸ, ಸಂಗಾತಗಳೆಲ್ಲ
ಮರೆತು ಮೇರೆಯಿಲ್ಲದ ಮೌನದಲ್ಲಿ
ನಾವಿಂದು ಸಾಧಿಸಿದ್ದೇವೆ,
ಜೊತೆಯಲ್ಲೇ ಇರುವ ಎರಡು ಜೀವಗಳು
ತಲುಪಬಹುದಾದ ಗರಿಷ್ಠ ಅಂತರ..

ಹೆಣ್ಣನ್ನು ಆಳುವುದಕ್ಕೇನೆ ಇರುವೆನೆಂಬ ಭ್ರಮೆಯಲ್ಲಿರುವ ಗಂಡಸು, ಆಕೆಯನ್ನು ತನ್ನ ಸರಿ ಸಮಾನಳು ಎಂದು ಒಪ್ಪಿಕೊಳ್ಳದೇ ಇರುವುದು ದುರಂತ. ಆದರೆ, ಗಂಡಿನ ದುರಹಂಕಾರದ ಗೋಡೆಯೊಳಗೆ ಬದುಕನ್ನು ಸವೆಸುತ್ತಿರುವ ಹೆಣ್ಣಿನ ಸಹನೆಯ ಕಟ್ಟೆಯೊಡೆಯುವುದು ಮಾತ್ರ ಆಕೆಯ ಸಾಧನೆಯ ಮೂಲಕವೇ ಎನ್ನಬೇಕು. ಮೇಲರಿಮೆ ಎನ್ನುವುದು ಗೋಚರವಾಗುವುದೇ ಆಗ! ಗಂಡಿನ ಸಾನ್ನಿಧ್ಯ, ಸಾಂತ್ವನ, ಸಂಗಾತಗಳ ಮೇರೆಯನ್ನು ಮೀರುವಂತೆ ಮಾಡುವ ಹೆಣ್ಣಿನ ಅಹಂಮಿಕೆಯೂ ಕೂಡ ಒಂದೊಮ್ಮೆ ಆಕೆಯ ಹಿರಿಮೆಯನ್ನು ಎತ್ತಿ ಹಿಡಿಯಲು ಕಾರಣವಾಗುತ್ತದೆ. ತಪ್ಪು ಒಪ್ಪುಗಳ ಲೆಕ್ಕ ಹಾಕುವ ಕಾಲ ಎಂದೋ ಮುಗಿದು ಹೋಗಿರಲು ಈಗ ಅಂತರವನ್ನು ಅಳಿಸಿ ಹಾಕುವ ಕಾಲ ಸನ್ನಿಹಿತವಾಗಿದೆ ಎಂಬುದು ಕವಿತೆಯ ಆಶಯವಾಗಿದೆ.

ಕವಿತೆಯೆಂದರೆ ಸುಮ್ಮನೇ ಅಲ್ಲ. ಅದು ನಿರಂತರವಾದ ಧ್ಯಾನ. ಈ ಧ್ಯಾನದಲ್ಲಿ ವಸ್ತು ಪ್ರಪಂಚದ ಕುರಿತಾಗಿ ಕವಿಯ ಮನಸ್ಸಿನೊಳಗಿನ ನೋವು, ಸಂಕಟ, ಹತಾಶೆ, ಸಂತಸ, ಸಂಭ್ರಮ- ಇವೆಲ್ಲವೂ ಸೇರಿ ಹೊರಗಿನ ಅಭಿವ್ಯಕ್ತಿಯಾಗುವುದು. ಮತ್ತು ಅದೇ ಕವಿಯ ಸಮಾಧಾನಕ್ಕೆ ದಾರಿಯಾಗುವುದು. ಈ ತೆರದಲ್ಲಿ ಮೂಡಿದ ಕವಿತೆಗಳು ಓದುಗನನ್ನು ಬಿಡದೇ ಕಾಡುತ್ತವೆ. ಈ ಮಾತಿಗೆ ಪೂರಕವಾಗಿ ಈ ಸಂಕಲನದಲ್ಲಿನ ‘ರೂಪಾಂತರ’ ಕವಿತೆ ಇದೆ. ಈ ಕವಿತೆ ಅದೆಷ್ಟು ಗಹನವಾಗಿದೆಯೆಂದರೆ ಬರೀ ಎರಡೇ ಎರಡು ಸಾಲಿನಲ್ಲಿ ಕವಿತೆಗಿರಬಹುದಾದ ಶಕ್ತಿಯನ್ನು ಅರಿವಿಗೆ ತರುತ್ತದೆ. ಇಲ್ಲಿ, ಕಾಫಿ ಲೋಟಕ್ಕೆ ಬಿದ್ದ ಕೆಂಪಿರುವೆ ಕಟ್ಟಕಡೆಗೆ ಆನೆಯಂಥ ಬೃಹತ್ತಾದ ಆಕಾರವಾಗಿ ನಿಲ್ಲುವ ಪರಿ ಓದುಗನಿಗೆ ತತ್ ಕ್ಷಣದಲ್ಲಿಯೇ ಈ ಸಂದರ್ಭದಲ್ಲಿ ಜಾಗತೀಕರಣ ಪ್ರಕ್ರಿಯೆಯು ತಂದೊಡ್ಡಿರುವ ಅಪಾಯಗಳ ಕುರಿತಾಗಿ ಯೋಚಿಸುವಂತೆ ಮಾಡುತ್ತದೆ.

ಮನುಷ್ಯ, ಆಧುನಿಕ ಭೋಗ ಜಗತ್ತಿನ ವ್ಯಾಮೋಹಕ್ಕೆ ಒಳಗಾಗಿ ಒಂದು ಕಾಲದ ನಮ್ಮ ನೆಲದ ಸಂಸ್ಕೃತಿ, ಸಂಪ್ರದಾಯ ಮತ್ತು ರೀತಿ- ರಿವಾಜುಗಳನ್ನು ಮರೆತು, ತನ್ನ ಬದುಕಿನಲ್ಲಿ ಪಾಶ್ಚಿಮಾತ್ಯ ದೇಶಗಳ ಸಂಸ್ಕ್ರತಿಯನ್ನು ಅಳವಡಿಸಿಕೊಂಡು ನೈಜ ಸುಖದಿಂದ ವಂಚಿತನಾಗುತ್ತಿದ್ದಾನೆ. ಆದರೆ, ಹೀಗೆ ಸಾಂಪ್ರದಾಯಿಕ ಬದುಕಿನಲ್ಲಿರುವ ಸುಖವನ್ನು ಕಡೆಗಣಿಸಿ, ಕೃತ್ರಿಮವಾದ ಆಧುನಿಕ ಬದುಕಿನ ಸುಖದ ವ್ಯಾಮೋಹಕ್ಕೆ ಒಳಗಾಗುತ್ತಿರುವುದು ಮಾತ್ರ ಪರಿಸ್ಥಿತಿಯ ವ್ಯಂಗ್ಯದಂತಿದೆ. ‌

ಇನ್ನು, ಇದಕ್ಕೆ ಪೂರಕವಾಗಿ ಜಾಗತೀಕರಣ ಪ್ರಕ್ರಿಯೆಯೂ ಕೂಡ ನಮ್ಮ ಬದುಕನ್ನು ಅದೆಷ್ಟು ವೇಗವಾಗಿ ಆವರಿಸಿಕೊಳ್ಳುತ್ತಿದೆಯೆಂದರೆ ನಿದನಿದಾನವಾಗಿ ಗ್ರಾಮ ಬದುಕಿನ ಜೀವನ ಶೈಲಿಯೇ ಅದರೊಳಗೆ ಕಳೆದು ಹೋಗುತ್ತಿದೆ. ಈ ದೇಶದ ಗ್ರಾಮಗಳೆಲ್ಲ ನಗರಗಳಾಗಿ ‘ರೂಪಾಂತರ’ಗೊಂಡು ಅಲ್ಲೆಲ್ಲ ಆಧುನಿಕತೆಯ ಗಾಳಿ ಬೀಸುವುದರ ಮೂಲಕ ನೆಲಮೂಲ ಸಂಸ್ಕೃತಿಯ ಅಧಃಪತನಕ್ಕೆ ಕಾರಣವಾಗಿದೆ! ಇಂದು ನಾವೆಲ್ಲ ಅದರ ಸೆಳೆತಕ್ಕೆ ಸಿಲುಕಿ, ನಮ್ಮ ತನವನ್ನೇ ಕಳೆದುಕೊಂಡು ಡೈನೋಸಾರ್ ನ ಕಾಲಿನ ಒಂದು ಉಗುರಿನಂತೆ ಕ್ಷುಲ್ಲಕರಾಗುತ್ತ ಹೊರಟಿದ್ದೇವೆ- ಎಂದು ಡಾ.ಶೃತಿ ಅವರು ಆತಂಕ ವ್ಯಕ್ತಪಡಿಸುತ್ತಾರೆ. ಲೇಖಕಿ ಶೃತಿಯವರೊಳಗಿನ ಕವಿಯ ಸಾಮರ್ಥ್ಯವನ್ನು ಪರೀಕ್ಷಿಸಲು ಈ ಸಂಕಲನದಲ್ಲಿನ ಇದೊಂದೇ ಕವಿತೆ ಸಾಕು ಎನ್ನಬಹುದು.

ಹಾಗೆಯೇ, ‘ಎಲ್ಲ ಮುಗಿದ ಮೇಲೂ..’ ಪದ್ಯ ಮೇಲ್ನೋಟಕ್ಕೆ ಸರಳವೆನಿಸಿದರೂ ಅದರ ಆಳದಲ್ಲಿ ಅನೂಹ್ಯವಾದ ಅರ್ಥವನ್ನು ಧ್ವನಿಸುತ್ತದೆ. ಮನುಷ್ಯ, ತನ್ನ ಬದುಕನ್ನು ಕಟ್ಟಿಕೊಳ್ಳಲು ಇರಬಹುದಾದ ಸಾಧ್ಯತೆಗಳೆಲ್ಲವು ಮುಗಿದ ಮೇಲೂ; ಎಲ್ಲವೂ ನಿಂತ ನೀರಂತೆ ಜಡಗೊಂಡ ಸ್ಥಿತಿಯ ಕೊನೆಯಂಚಿನಲ್ಲಿ ಇನ್ನೊಂದು ಸಾಧ್ಯತೆ ತನ್ನ ತಾನೇ ಜೀವ ಪಡೆದುಕೊಂಡು ಬದುಕನ್ನು ಕೈ ಹಿಡಿದು ಮುನ್ನಡೆಸುತ್ತದೆಯೆಂದರೆ ಅದಕ್ಕೆ ಜೀವನೋತ್ಸಾಹ ಮತ್ತು ಬದುಕಿನ ಕುರಿತಾಗಿ ಇಟ್ಟುಕೊಂಡಿರಬಹುದಾದ ಅಗಾಧ ನಿರೀಕ್ಷೆಗಳೇ ಕಾರಣವಾಗುತ್ತವೆ. ಈ ಲೋಕವೆಂಬುದು ಅದರ ಪಾಡಿಗೆ ಅದು ನಡೆಯುತ್ತಿರುತ್ತದೆ ಎಂಬುದು ಬೇರೇನೂ ಅಲ್ಲದೇ ಅದು ನಿರಂತರವಾಗಿ ನಡೆದುಕೊಂಡು ಹೋಗುವ ಮನುಷ್ಯ ಬದುಕೇ ಆಗಿದೆ! ಅದು ಹಾಗೆ ನಡೆಯಲು ಹೊಸ ಹೊಸ ಸಾಧ್ಯತೆಗಳನ್ನು ಕಂಡುಕೊಳ್ಳುವುದು ಅನಿವಾರ್ಯವೂ ಹೌದು:

ಮುಪ್ಪಡರಿ, ಕೈ ನಡುಗಿ, ನಡು ಬಗ್ಗಿ..
ಅಟ್ಟದ ಮೇಲಿದ್ದ ಊರುಗೋಲು..

ಈ ಮನುಷ್ಯನ ದೇಹಕ್ಕೆ ಕಾಲಾಂತರದಲ್ಲಿ ಸಹಜವಾಗಿಯೇ ಅಡಗಿರುವ ವೃದ್ದಾಪ್ಯದಿಂದಾಗಿ, ಇನ್ನೇನು ಆತ ಚಟುವಟಿಕೆಯಿಂದಿರಲು ಸಾಧ್ಯವೇ ಇಲ್ಲ ಎನ್ನುವಾಗ ಊರುಗೋಲು ಎಂಬ ಉತ್ಸಾಹ ಜೊತೆಯಾಗುತ್ತದೆ ಎಂಬುದನ್ನು ಈ ಸಾಲುಗಳು ದೃಢೀಕರಿಸುತ್ತವೆ. ಹಾಗೆಯೇ, ಎಲ್ಲವೂ ಮುಗಿದ ಕೊನೆಯಲ್ಲಿ ಯಾವುದೂ ದಕ್ಕದಿನ್ನು ಎಂದು ಸೋತು ಕುಳಿತ ಹೊತ್ತಲ್ಲಿ ದಿಢೀರ್ ಎಂದು ಬಳಿಸಾರಿ ಬರುವ ಸಾವು, ನಮ್ಮ ಎಲ್ಲ ನೋವು, ಸಂಕಟ, ಹತಾಶೆಗಳಿಗೆ ಅಂತ್ಯವನ್ನು ಹಾಡುತ್ತದೆ! ಮತ್ತು ಈ ಕ್ರಿಯೆ ನಿರಂತರವಾಗಿ ನಡೆಯುತ್ತಲೇ ಇರುತ್ತದೆ ಎಂಬಲ್ಲಿಗೆ ಪದ್ಯ ಆಧ್ಯಾತ್ಮದ ಕುರಿತಾಗಿ ಮಾತಾಡುತ್ತದೆ.

ಡಾ. ಶೃತಿ ಅವರಿಗೆ ಜಾತಿ ವ್ಯವಸ್ಥೆ ರೂಪಿಸಿರುವ ಕಟ್ಟಳೆಗಳು ಪ್ರೀತಿ- ಪ್ರೇಮದಂಥ ವಿಚಾರಗಳನ್ನು ಅತ್ಯಂತ ಹೀನಾಯವಾಗಿ ಆಳುತ್ತಿರುವ ಬಗ್ಗೆ ಆಕ್ರೋಶವಿದೆ. ಆ ಆಕ್ರೋಶವನ್ನು ‘ನನ್ನೊಲವ ಸಮಾಧಿಯಿಂದ’ ಕವಿತೆಯಲ್ಲಿ ತೋಡಿಳ್ಳುವುದರ ಮೂಲಕ ಯುವ ಮನಸ್ಸುಗಳು ಈ ಥರದ ಪಿತೂರಿಯನ್ನು ಹೇಗೆಲ್ಲ ಪ್ರತಿರೋಧಿಸುವುದರ ಮೂಲಕ ಸಿಡಿದು ನಿಲ್ಲುತ್ತವೆ ಎಂಬುದನ್ನು ಹೇಳಿಕೊಳ್ಳುತ್ತಾರೆ.

ಅನಾದಿಕಾಲದಿಂದಲೂ ಒಲವನ್ನು ಧಿಕ್ಕರಿಸುತ್ತಲೇ ಬಂದ ಸಮಾಜದ ರಕ್ಕಸ ಮನಸ್ಥಿತಿಯ ಕಾರಣವಾಗಿ, ಪರಸ್ಪರ ಮನಸ್ಸುಗಳನ್ನು ಬೆಸೆಯುವಂಥ ಪ್ರೀತಿಗೆ ಬೆಂಕಿ ಬಿದ್ದಿದೆ. ಆದರೆ, ಹೀಗೆ ಬೆಂಕಿಗೆ ಮೈಯೊಡ್ಡಿದ ಪ್ರೀತಿಯ ಸಹನೆಯ ಕಟ್ಟೆ ಅದಾವಾಗಲೋ ಒಡೆದು ಹೋಗಿದ್ದು, ತನ್ನ ಸಮಾಧಿ ಕಟ್ಟಿದವರ ಸದೆ ಬಡಿಯಲೆಂದೇ ಸಮಾಧಿ ಕಲ್ಲನ್ನು ಸೀಳಿ ಹಸಿರು ಹಸಿರಾಗಿ ಚಿಗುರೊಡೆದು ನಿಂತಿದೆ ಎಂಬುದು ಕವಿತೆಯ ಆಶಯವಾಗಿದೆ.

ಇನ್ನು, ಈ ಕವನ ಸಂಕಲನದ ಶೀರ್ಷಿಕೆಯೂ ಆಗಿರುವ ‘ಝೀರೊ ಬ್ಯಾಲೆನ್ಸ್’ ಎಂಬ ಕವಿತೆ, ವ್ಯಕ್ತಿಯೋರ್ವ ತನ್ನ ಬಯಕೆಗಳನ್ನು ಈಡೇರಿಸಿಕೊಳ್ಳಲಾಗದ ಅಸಹಾಯಕತೆಗೆ ಕಾರಣವಾಗುವ ಆತನ ಆರ್ಥಿಕ ಸಂಕಷ್ಟದ ಕುರಿತಾಗಿ ಮಾತನಾಡುತ್ತಲೇ, ಮಧ್ಯಮ ವರ್ಗದ ಕುಟುಂಬಗಳ ಬದುಕನ್ನು ಹಣವೇ ಹೇಗೆಲ್ಲ ಆಳುತ್ತದೆ ಮತ್ತು ಅವರ ಬಯಕೆಗಳನ್ನೆಲ್ಲ ಹೇಗೆ ನಿಯಂತ್ರಿಸುತ್ತದೆ ಎಂಬ ಘೋರ ಸತ್ಯವನ್ನು ಅರಿವಿಗೆ ತರುತ್ತದೆ.

ಈ ಸಾಲುಗಳನ್ನು ಗಮನಿಸಿ:

ದಾನಿಯಾಗಲು ಮನಸಾರೆ ಹೊರಡುತ್ತೇನೆ,
ಖಾಲಿ ಪರ್ಸು ಅಣಕಿಸಿದಂತಾಗುತ್ತದೆ!

ಸಾಮಾನ್ಯವಾಗಿ ದಾನಿಯಾಗಬೇಕೆನ್ನುವ ಉದಾರ ಮನಸ್ಥಿತಿ ಇರುವುದು ಮಧ್ಯಮ ವರ್ಗದ ಜನರಿಗೆ ಮಾತ್ರ ಎನ್ನಬೇಕು. ತನ್ನಲ್ಲಿ ದೇಹಿ ಎಂದು ಬಂದವರಿಗೆಲ್ಲ ಏನಾದರೂ ಕೊಡಲೇಬೇಕು ಎಂದೆನಿಸುತ್ತಿರುತ್ತದೆ! ಆದರೆ, ತಾನಿರುವ ಸ್ಥಿತಿಯಲ್ಲಿ ತನ್ನ ಬಯಕೆಗಳನ್ನು ಈಡೇರಿಸಿಕೊಳ್ಳಲಾಗದ ಅಸಹಾಯಕ ಸ್ಥಿತಿಯಲ್ಲಿರುವಂಥ ಆತ ತನ್ನಲ್ಲಿದ್ದರೂ ಕೊಡಲಾಗದ ಸ್ಥಿತಿಗೆ ಒಳಗಾಗುತ್ತಾನೆ. ದಿನವೂ ಕನಸಿನ ಗೋಪುರವನ್ನು ಕಟ್ಟುತ್ತಲೇ ಅನುಗಾಲ ಬದುಕನ್ನು ಮುನ್ನಡೆಸುವ ಆತ ಕೇವಲ ಕಲ್ಪನೆಯಲ್ಲಿಯೇ ಬಯಕೆಗಳನ್ನು ಈಡೇರಿಸಿಕೊಳ್ಳುತ್ತ ಕೊನೆಗೊಮ್ಮೆ ಈ ಥರದ ವ್ಯಾಪಾರದಿಂದ ಮುಕ್ತಿ ಹೊಂದುತ್ತಾನೆ.

ಬದುಕಿನಲ್ಲಿ ಬಂದೊದಗುವ ಎಲ್ಲ ಸದಾವಕಾಶಗಳನ್ನು ಪಕ್ಕಕ್ಕೆ ಎತ್ತಿಡುತ್ತ, ಕೊನೆವರೆಗೂ ನೀರಸ ಬದುಕನ್ನೇ ಬಾಳುವಂತೆ ಮಾಡುವ ಹಣ ಎಂಬ ಮಾಯೆ ಆತನನ್ನು ತನ್ನ ಕೈಗೊಂಬೆಯಾಗಿಸಿಕೊಳ್ಳುವುದು ಮಾತ್ರ ದುರಂತವೇ ಸರಿ. ಹೀಗೆ ಎಲ್ಲವನ್ನೂ ಒಳಗೊಳಗೇ ನುಂಗಿಕೊಡು ಬದುಕನ್ನು ಸವೆಸುವ ಆತನಿಗೆ, ತನ್ನ ಅವಸ್ಥೆಗೆ ಕಾರಣವಾದರೂ ಏನು ಎಂಬುದು ಮಾತ್ರ ತಿಳಿಯುವುದೇ ಇಲ್ಲ ಎಂಬುದನ್ನು ಕವಿತೆ ಸೂಚ್ಯವಾಗಿ ಹೇಳುತ್ತದೆ.

ಇಡಿಯಾಗಿ ಕವಿತೆ ಈ ವ್ಯವಸ್ಥೆಯಲ್ಲಿ ಅತೀ ಶ್ರೀಮಂತ ಮತ್ತು ಅತೀ ಬಡವರಷ್ಟೇ ಖುಷಿಯಾಗಿದ್ದು, ಮಧ್ಯಮ ವರ್ಗದ ಕುಟುಂಬಗಳಷ್ಟೇ ಘನತೆಯನ್ನು ಕಾಪಾಡಿಕೊಳ್ಳುವ ನೆಪದಲ್ಲಿ ಆಗಾಗ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಲೇ ಇರುತ್ತವೆ ಎಂಬ ಸೂಕ್ಷ್ಮ ವಿಚಾರಕ್ಕೆ ಕನ್ನಡಿ ಹಿಡಿಯುತ್ತದೆ.

ಇದಲ್ಲದೆ ಕವಿಯ ಪ್ರಾಮಾಣಿಕತೆಯ ಬಗ್ಗೆ ವಿವರಿಸುವ ‘ನಿಷ್ಪ್ರಯೋಜಕ ಕವಿತೆ’ ಎಂಬ ಪದ್ಯ, ಕೇವಲ ಲೈಕು, ಕಮೆಂಟುಗಳಿಗಷ್ಟೇ ಸೀಮಿತವಾಗುವ ಕವಿಯ ಆಂತರ್ಯವನ್ನು ಒಳಹೊಕ್ಕು ನೋಡಲು ಪ್ರಯತ್ನಿಸುತ್ತದೆ. ಮತ್ತು, ಇಲ್ಲಿ ಕವಿತೆಯೇ ಕವಿಯನ್ನು ಪರಾಮರ್ಶೆಗೀಡುಮಾಡುವ ಪರಿಯು ಈ ಸಂದರ್ಭದ ನಮ್ಮ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಲೋಕದ ಒಳಸುಳಿಗಳನ್ನು ತೆರೆದಿಡುವಂತಿದೆ.

ಬಹುಮಾನಗಳನ್ನು ಬಾಚಿಕೊಂಡು ಬೀಗುವ ಕವಿತೆಯನ್ನು ಮೀರಿ ಯಾರ ಗಮನಕ್ಕೂ ಬಾರದ, ಪ್ರಕಟಗೊಳ್ಳದೇ ಇರುವ, ಓದುಗನ ಮನದಲ್ಲಿ ನಿಲ್ಲಬಹುದಾದ ಕವಿತೆ ಅದಕ್ಕೂ ಮಿಗಿಲಾಗಿರುತ್ತದೆ. ಬೀಗುವ ಕವಿತೆಗೆ ಬಹುಮಾನ ಬರುವುಕ್ಕೂ ಮತ್ತು ಲೈಕು, ಕಮೆಂಟುಗಳು ಬರುವದಕ್ಕೂ ಅದರದೇ ಆದ ಕಾರಣಗಳಿರುತ್ತವೆ. ಆದರೆ, ಹೀಗೆ ಪ್ರಕಟಗೊಳ್ಳದೇ ಅವಕಾಶಗಳಿಂದ ವಂಚಿತವಾಗುವುದಕ್ಕೆ ಕವಿಯ ಪ್ರಾಮಾಣಿಕತೆಯೇ ಕಾರಣವಾಗುತ್ತದೆ. ಲೈಕು, ಕಮೆಂಟುಗಳಿಗಷ್ಟೇ ಸೀಮಿತವಾಗುವ ಕವಿತೆಗೆ ಎಂದೆಂದಿಗೂ ನಿಲ್ಲುವ ಸಾಮರ್ಥ್ಯ ಇರುವುದಿಲ್ಲ. ಪ್ರಾಮಾಣಿಕ ಧ್ವನಿಯನ್ನು ಹೊಂದಿರದ ಕವಿತೆ ಕಾಡುವುದಿಲ್ಲ ಎಂಬರ್ಥವನ್ನು ಕವಿತೆ ಧ್ವನಿಸುತ್ತದೆ.

ಹೀಗೆ, ವಿಭಿನ್ನ ಅರ್ಥವನ್ನು ಧ್ವನಿಸುವ ಇನ್ನಷ್ಟು ಕವಿತೆಗಳು ಈ ಸಂಕಲನದಲ್ಲಿದ್ದು ಇವ್ಯಾವು ಹೊಸದಾಗಿ ಕಾವ್ಯಲೋಕವನ್ನು ಪ್ರವೇಶಿಸಿರುವ ಕವಿಯು ರಚಿಸಿರುವ ಕವಿತೆಗಳು ಎಂದೆನಿಸುವುದಿಲ್ಲ. ಏಕೆಂದರೆ, ಡಾ.ಶೃತಿಯವರು ಇಲ್ಲಿನ ಕವಿತೆಗಳನ್ನು ಬರೆಯಲೇಬೇಕು ಎಂಬ ಉಮ್ಮೇದಿಗೆ ಬಿದ್ದೋ ಅಥವಾ ಯಾರನ್ನೋ ಮೆಚ್ಚಿಸಲೆಂದೋ ಇಲ್ಲವೇ ಕವಿಗೋಷ್ಠಿಯ ಒತ್ತಡಕ್ಕೆ ತತಕ್ಷಣದಲ್ಲಿ ಬರೆದ ಕವಿತೆಗಳೋ ಆಗಿರದೆ, ಅವರು ನಿರಂತರವಾಗಿ ತಮ್ಮ ಸುತ್ತಣ ವಸ್ತು ಪ್ರಪಂಚದೊಂದಿಗೆ ಮುಖಾಮುಖಿಯಾಗಿರುವ ಕಾರಣವಾಗಿ ಇಲ್ಲಿರುವ ಕವಿತೆಗಳು ಅವರೊಳಗೆ ಸಂಭವಿಸಿವೆ ಎಂದು ಹೇಳಬಹುದು. ಹೀಗೆ ಮೊದಲ ಪ್ರಯತ್ನದಲ್ಲಿಯೇ ಓದುಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಕವನ ಸಂಕಲನದೊಂದಿಗೆ ಎದುರಾದ ಡಾ.ಶೃತಿ ಅವರು ಅಭಿನಂದನಾರ್ಹರು.

‍ಲೇಖಕರು Avadhi

December 30, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮಾಲತೇಶ ಅಂಗೂರರ ‘ಹಾವೇರಿಯಾಂವ್’

ಮಾಲತೇಶ ಅಂಗೂರರ ‘ಹಾವೇರಿಯಾಂವ್’

ಸತೀಶ ಕುಲಕರ್ಣಿ ಹಾವೇರಿ ನೆಲದ ಮಾತುಗಳಿಗೊಂದು ವಿಚಿತ್ರ ರುಚಿ ಇದೆ. ಸಿಟ್ಟು ಸೆಡವು, ಗಡಸು ಗಿಚ್ಚಿ ಹೊಡೆಯುವ ಮೊನಚು ಇವುಗಳದ್ದು. ವ್ಯಂಗ್ಯ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This