ಸಮಾಧಿಗಳ ಮಧ್ಯೆ ‘ಭಾರತಿ ಟೂಂಬ್’

ಇಡೀ ಜಾಗದ ತುಂಬ ಓಡಾಡಿ ಫೋಟೋಗಳನ್ನು ತೆಗೆದಿದ್ದಾದ ನಂತರ ಅಲ್ಲಿಯವರೆಗೆ ನಾವು ನಡೆದಿರುವುದು ಎರಡು ಕಿಲೋಮೀಟರ್‌ ಆಸುಪಾಸು ಅಂದ ಮಹಮ್ಮದ್.

ಹಾಗೆ ಹೇಳಿದ ಕೂಡಲೇ ಕಾಲು ಇರುವುದು ಮತ್ತು ಅದು ಅಸಾಧ್ಯ ನೋಯುತ್ತಿರುವುದು ಗಮನಕ್ಕೆ ಬಂತು!

ಇನ್ನೂ ಎಷ್ಟಿದೆ ಅಂತ ವಿಚಾರಿಸಿದಾಗ ಮತ್ತೆರಡು ಕಿಲೋಮೀಟರ್ ಅವನ ಜೊತೆ ನಡೆಯಬೇಕೆಂತಲೂ, ಆ ನಂತರ ಮೊನಾಸ್ಟರಿಗೆ ಅಥವಾ ಹೈ ಪ್ಲೇಸ್ ಆಫ್ ಸ್ಯಾಕ್ರಿಫೈಸ್‌ಗೆ ನಮ್ಮ ಪಾಡಿಗೆ ನಾವು ಹೋಗಬಹುದು ಎಂದ. ಇನ್ನೂ ಎರಡು ಕಿಲೋಮೀಟರ್ ಮುಗಿದ ನಂತರ ಎಲ್ಲಿಗೆ ಹೋಗುವುದೆಂದು ತೀರ್ಮಾನ ತೆಗೆದುಕೊಳ್ಳೋಣ ಎಂದು ನಿರ್ಧರಿಸಿದೆವು.

ಅಲ್ಲೇ ಇದ್ದ ಒಂದು ಕಾಫಿ ಶಾಪಿನಲ್ಲಿ ಜನ ಗಿಜಿಗುಡುತ್ತಿದ್ದರು. ಕಾಫಿಗೆ ನಿಂತರೂ ತಡವಾಗಬಹುದು, ಮುಂದೆ ಮತ್ತೊಂದು ಇದೆ, ಅಲ್ಲಿ ಕುಡಿಯೋಣ ಎಂದು ಅವಸರಿಸಿದ ಮಹಮ್ಮದ್. ತೀರಾ ಕಚ್ಚಾ ಇದ್ದ ರಸ್ತೆಯಲ್ಲಿ ನಡೆಯಲು ಶುರು ಮಾಡಿದಾಗ ಕಾಲುಗಳು ಸೋತ ಹಾಗೆ ಅನ್ನಿಸಲಾರಂಭಿಸಿತು. ಸುತ್ತಲಿದ್ದ ಕತ್ತೆ, ಒಂಟೆ, ಕುದುರೆಗಳ ಮಾಲಿಕರು ಸ್ಪಷ್ಟ ಇಂಗ್ಲಿಷಿನಲ್ಲಿ ಕತ್ತೆ, ಕುದುರೆ ಬೇಕೇ ಎಂದು ನಮ್ಮ ಸುತ್ತ ಉಪಗ್ರಹದ ಹಾಗೆ ಸುತ್ತಲಾರಂಭಿಸಿದರು. ಆದರೆ ಮತ್ತೂ ಹಾದಿಯುದ್ದಕ್ಕೂ ನೋಡುವ ಜಾಗಗಳಿರುವುದರಿಂದ ನಡೆಯಲು ಶುರು ಮಾಡಿದೆವು.

ಸಿಕ್‌ನ ಎತ್ತರದ ಬಂಡೆಗಳ ನೆರಳಿಲ್ಲದ್ದಕ್ಕೆ ಮತ್ತು ಮಧ್ಯಾಹ್ನ ಸಮೀಪಿಸಿದ್ದಕ್ಕೆ ಸೆಕೆ ಅನ್ನಿಸಲು ಶುರುವಾಯಿತು. ಅಲ್ ಖಾಜ಼್ನೆಯ ಬಗ್ಗೆ ನಾನು ಅದೆಷ್ಟು ಮೋಹಿತಳಾಗಿದ್ದೆನೆಂದರೆ ಅದರಿಂದಾಚೆಗೆ ಪೆಟ್ರಾದಲ್ಲಿ ಏನು ಇರಬಹುದು ಎಂದು ಯೋಚಿಸಲೂ ಹೋಗಿರಲಿಲ್ಲ. ಇನ್ನೂ ಎರಡು ಕಿಲೋಮೀಟರ್ ಏನಿರಬಹುದು ಅಂತ ಯೋಚಿಸುತ್ತ ನಡೆದೆ.

ಎದುರಾಗುವ ಅಸಂಖ್ಯಾತ ಪುಡಿ ವ್ಯಾಪಾರಿಗಳು ಹಳೆಯ ನಾಣ್ಯಗಳನ್ನು, ಸ್ಟೋಲ್‌ಗಳನ್ನು, ಪೋಸ್ಟ್ ಕಾರ್ಡ್‌ಗಳನ್ನು ನಮ್ಮೆದುರು ಒಡ್ಡಿ ಆಮಿಷ ತೋರಿಸುತ್ತಲೇ ಇದ್ದರು. ನಮ್ಮ ದೇಹವೇ ನಮಗೆ ಭಾರ ಅನ್ನಿಸುವಂಥ ನಡಿಗೆಯಲ್ಲಿ ಇಲ್ಲದ್ದೆಲ್ಲ ಭಾರ ಹೊರುವ ಉಪದ್ವಾಪ್ಯ ಯಾಕೆಂದು ನಾನು ಮನಸ್ಸು ಬಿಗಿ ಹಿಡಿದು ಅತ್ತ ತಿರುಗಿಯೂ ನೋಡದೇ ಹೆಜ್ಜೆ ಹಾಕಲಾರಂಭಿಸಿದೆ. ಅಲ್ ಖಾಜ಼್ನೆಯಿಂದ ಬಲಕ್ಕೆ ತಿರುಗಿದರೆ ಭೂಮಿಯ ಕೊನೆಯಾಗುತ್ತದೇನೋ ಎನ್ನುವ ಭ್ರಮೆ ಹುಟ್ಟಿಸುತ್ತಿತ್ತು. ಆದರೆ ಒಂದು ಇನ್ನೂರು ಹೆಜ್ಜೆ ಹಾಕಿದ ನಂತರ ಎಡಕ್ಕೆ ತಿರುಗಿ ಮುಂದೆ ಸಾಗಿದರೆ ಅಗೋ! ಅಲ್ಲಿ ಕಂಡ ದೃಶ್ಯ ಕಂಡು ಸ್ತಂಭೀಭೂತಳಾಗಿ ಹೋದೆ!!

ವಿಶಾಲವಾದ …. ಅಂದರೆ ತುಂಬ ವಿಶಾಲವಾದ ಆ ಬಟ್ಟಬಯಲಿನಲ್ಲಿ ಎಡಬಲಕ್ಕೆ ಎತ್ತ ತಿರುಗಿದರೂ ಬಂಡೆಗಳಲ್ಲಿ ಕೊರೆದ ಗುಹೆಗಳಂಥ ಜಾಗಗಳ ರಾಶಿ ರಾಶಿ! ಒಂದಿಷ್ಟು ನಡೆದರೆ ಮುಗಿದೇ ಬಿಡಬಹುದು ಅಂದುಕೊಳ್ಳುತ್ತಿದ್ದ ನನಗೆ, ಇದು ಮುಗಿಯುವ ಪಯಣವೇ ಅಲ್ಲ ಬಿಡು ಅನ್ನಿಸಲಾರಂಭಿಸಿತು! ಕಾಲು ನೋವು ಹೆಚ್ಚಾದ ಭಾವನೆ …

ನಮ್ಮಂಥ ಲಕ್ಷಾಂತರ ಪ್ರವಾಸಿಗರ ದೇಹಸ್ಥಿತಿ ಮತ್ತು ಮನಃಸ್ಥಿತಿ ಅರಿತ ಕತ್ತೆ, ಕುದುರೆಗಳ ಮಾಲಿಕರು ಹೆಜ್ಜೆಹೆಜ್ಜೆಗೂ ನಮ್ಮ ಆರೋಗ್ಯ ವಿಚಾರಿಸಲು ಶುರು ಹಚ್ಚಿಕೊಂಡರು! ಅಲ್ ಖಾಜ಼್ನೆಯಿಂದ ಮುಂದಕ್ಕೆ ಕುದುರೆ ಗಾಡಿಗಳನ್ನು ಬಿಡುವುದಿಲ್ಲ. ಹಾಗಾಗಿ ತೀರಾ ಸುಸ್ತಾದರೆ ಈ ಪ್ರಾಣಿಗಳೇ ನಮಗೆ ಆಧಾರ. ಬರುವಾಗ ನೋಡೋಣ ಎಂದುಕೊಂಡು ನಡಿಗೆ ಮುಂದುವರೆಸಿದೆವು. ಅಲ್ಲಿಂದ ಮಹಮ್ಮದ್ ಎಡಕ್ಕೆ ತಿರುಗಿದ.

ಬಂಡೆಗಳು ಎಲ್ಲೆಲ್ಲೂ ಇರುವುದರಿಂದ ಮುಂದೆ ಏನಿದೆ ಅನ್ನುವುದು ಯಾರಿಗೂ ಗೊತ್ತಾಗುವುದೇ ಇಲ್ಲ… ಥೇಟ್ ಬದುಕಿನಂತೆ!

ಎಡಕ್ಕಿದ್ದ 6000 ಜನ ಕೂರಬಹುದಾದಂಥ ಓಪನ್ ಥಿಯೇಟರ್, ರಸ್ತೆಯುದ್ದಕ್ಕೂ ಕೆತ್ತನೆಗಳಿಂದ ಆವೃತ್ತವಾದ ಅಗಾಧ ಬಂಡೆಗಳು (ರೋಡ್ ಆಫ್ ಫೆಕೇಡ್) ಎಲ್ಲವನ್ನೂ ಅಸಹಾಯಕತೆಯಿಂದ ನಿಂತಲ್ಲೇ ನಿಂತು ನೋಡಿದೆ. ಯಾವುದನ್ನು ಹತ್ತಬೇಕೆಂದರೂ ಮತ್ತಿಷ್ಟು ಕಾಲುಮುರಿದುಹೋಗುವಂಥ ನಡಿಗೆ. ಅಷ್ಟರಲ್ಲಿ ಓಪನ್ ಥಿಯೇಟರ್‌ಗೆ ಹೋಗಲಾರದಂತೆ ಹಾಕಿದ್ದ ಬ್ಯಾರಿಕೇಡ್ ಕಣ್ಣಿಗೆ ಬಿದ್ದು ಮನಸ್ಸಿನ ಗಿಲ್ಟ್ ತೊಳೆದು ಹೋದಂತಾಯಿತು. ಹೇಗೂ ಹತ್ತಲಾಗದ್ದಕ್ಕೆ ಅವರೇ ಬಿಡುವುದಿಲ್ಲ ಅಂದಾಗ ಒಂಥರಾ ಸಮಾಧಾನ!

ಅಲ್ಲೊಂದು ತಿರುವಿನಲ್ಲಿ ಇದ್ದಕ್ಕಿದ್ದಂತೆ ಮಹಮ್ಮದ್ ಕಾಫಿ ಬ್ರೇಕ್ ಅಂತ ಕೂಗಿದಾಗ ಬಹುಶಃ ನನ್ನ ಜೀವನದಲ್ಲೇ ಎಂದೂ ಅನುಭವಿಸದ ಖುಷಿ ಅನುಭವಿಸಿಬಿಟ್ಟೆ.

`ನಾವೀಗ ಕುಳಿತುಕೊಳ್ಳುತ್ತೇವೆ!’ ಎಂದು ಹರ್ಷದಿಂದ ಹೇಳಿಕೊಂಡು ಅತ್ತ ಧಾವಿಸಿದೆವು. ಕೆಂಪಗಿನ ಪೋರ್ಸಲೀನ್ ಹೆಣ್ಣು ಬಂದು ಮುರುಕು ಇಂಗ್ಲೀಷಿನಲ್ಲಿ ಏನು ಬೇಕೆಂದು ವಿಚಾರಿಸಿದಾಗ ಕಾಫಿ ಆರ್ಡರ್ ಮಾಡಿ ಕುಳಿತುಕೊಂಡೆವು. ಅವಳು ಕಾಫಿ ತರುವುದರಲ್ಲಿ ತಂದಿದ್ದ ಒಂದಿಷ್ಟು ಚಕ್ಕುಲಿ, ಚಿಕ್ಕಿ ಎಲ್ಲವನ್ನೂ ಹೊಟ್ಟೆಗೆ ಹಾಕಿಕೊಂಡೆವು. ಆ ನಂತರ ಕಾಫಿ ಕುಡಿದ ಮೇಲೆ ದೇಹದಲ್ಲಿ ತುಸುವೇ ಶಕ್ತಿ ಬಂದ ಹಾಗನ್ನಿಸಿತು. ಆದರೂ ನೆರಳಿನಲ್ಲಿ ಹಾಯಾಗಿ ಕುಳಿತ ನಾವು ಏಳುವ ಸೂಚನೆಯನ್ನೇ ತೋರದಿದ್ದಾಗ ಮಹಮ್ಮದ್ ಹೊರಡುವ ಸನ್ನೆ ಮಾಡಿದ.

ಹಣ ಎಷ್ಟು ಕೊಡಬೇಕು ಎಂದರೆ ಅವಳು ಜೋರ್ಡಾನಿಯನ್ ದಿನಾರಿನಲ್ಲಿ ಎಷ್ಟೋ ಹೇಳುತ್ತಾಳೆ … ಹಿಂದಿನ ದಿನ ನಡುರಾತ್ರಿ ಅಮ್ಮಾನ್‌ನಲ್ಲಿಳಿದ ನಮಗೆ ಇಲ್ಲಿಯವರೆಗೆ ಅಲ್ಲಿನ ಹಣದ ಅಗತ್ಯವೇ ಬಿದ್ದಿರಲಿಲ್ಲವಾಗಿ ಒಂದೇ ಒಂದು ದಿನಾರ್ ಕೂಡಾ ಗತಿಯಿಲ್ಲ! ಡಾಲರಿನಲ್ಲಿ ಹೇಳು ಅಂದರೆ, ಅದನ್ನು ತೆಗೆದುಕೊಳ್ಳುವುದಿಲ್ಲ ಅನ್ನುತ್ತಾಳೆ! ಏನು ಮಾಡಬೇಕು ಅನ್ನುವುದೇ ತೋಚದೇ ಮಂಕಾಗಿ ನಿಂತಿದ್ದವರಿಗೆ ಮಹಮ್ಮದ್ ತಾನು ಕೊಡುತ್ತೇನೆಂದೂ, ಅದಕ್ಕೆ ಬದಲಾಗಿ ಡಾಲರ್ ಪಡೆಯುತ್ತೇನೆಂದೂ ಆಶ್ವಾಸನೆ ಕೊಟ್ಟಾಗ ತಲೆಯ ಹಿಂದೆ ಪ್ರಭಾವಳಿ ಇರುವ ಕೃಷ್ಣನಂತೆ ಕಂಡನಾತ! ಆ ಗೂಡಂಗಡಿಯ ಕಾಫಿಗೆ ರೂಪಾಯಿ ಲೆಕ್ಕದಲ್ಲಿ ಇನ್ನೂರು ತೆತ್ತೆವು.

ಬದುಕಿನ ಯಾವುದೋ ಒಂದು ದಿವ್ಯ ಘಳಿಗೆಯಲ್ಲಿ ತಂತಾನೇ ಎಲ್ಲವೂ ತೀರ್ಮಾನವಾಗಿ ಹೋಗುತ್ತದೆ ಅನ್ನುವುದು ಸತ್ಯ! ಈ ಕ್ಷಣದಲ್ಲಿ ಯೂಸುಫ್ ನಾವು ಮಧ್ಯಾಹ್ನ ಊಟಕ್ಕೆ ಹೊರಬಂದು ಮತ್ತೆ ರಾತ್ರಿಯವರೆಗೆ ಇರುವುದಾಗಿ ಹೇಳಿದಾಗ ಆಗುವುದಿಲ್ಲ ಎಂದು ಯಾಕೆ ನಿರಾಕರಿಸಿದ ಎನ್ನುವ ಜ್ಞಾನೋದಯವಾಯ್ತು! ಅಲ್ಲಿಯವರೆಗಿನ ನಮ್ಮ ನಡಿಗೆ ಅತ್ಯಂತ ತ್ರಾಸದಾಯಕವಾಗಿತ್ತು. ಕಲ್ಲು ಮಣ್ಣಿನ ಹಾದಿಗೆ ಒಳ್ಳೆಯ ಶೂ ಹಾಕಿ ಬನ್ನಿ ಅನ್ನುವ ಎಚ್ಚರಿಕೆ ಮೊದಲೇ ಕೊಟ್ಟಿದ್ದರೂ, ನಾವು ಅದನ್ನೇ ಹಾಕಿದ್ದರೂ ಸಹ ಅತೀ ಸುಸ್ತಾಗಿ ಹೋಗಿತ್ತು. ಉಗುರುಗಳನ್ನು ಕತ್ತರಿಸಲು ಮರೆತಿದ್ದರಿಂದ ಶೂಗೆ ಒತ್ತಿ ಒತ್ತಿ ಹೆಬ್ಬೆರಳು ನೋಯಲು ಶುರುವಾಗಿತ್ತು.

ಪೆಟ್ರಾದ ಅಗಾಧತೆಗೆ ನಾವು ನಿಗದಿಪಡಿಸಿಕೊಂಡಿರುವ ಸಮಯ ಏನೇನೂ ಸಾಲದು ಅನ್ನುವ ದಿವ್ಯಜ್ಞಾನ ಮೂಡಲು ಆರಂಭವಾಗಿತ್ತು! ತಲೆಯ ಮೇಲಿನ ಸೂರ್ಯ, ಕಾಲ ಕೆಳಗಿನ ಭೂಮಿ, ಖಾಲಿಯಾದ ನೀರಿನ ಬಾಟಲ್, ಕರಗಿ ಹೋದ ಬೆಳಗ್ಗೆ ಆರಕ್ಕೆ ತಿಂದಿದ್ದ ತಿಂಡಿ ಮತ್ತು ಇಂದೇ ಎಲ್ಲ ನೋಡಿ ಮುಗಿಸಿ ವಾಪಸ್ ಆಗಬೇಕಾದ ಅಸಹಾಯಕತೆ … ಎಲ್ಲವೂ ನಮ್ಮಲ್ಲಿ ವಿಚಿತ್ರ ಚಡಪಡಿಕೆಯನ್ನುಂಟು ಮಾಡಿದವು. ಅಲ್ಲಿಂದ ನೂರಾರು ಮೆಟ್ಟಿಲೇರಿ ಮೊನಾಸ್ಟರಿಯನ್ನಾಗಲೀ, ಹೈ ಪ್ಲೇಸ್ ಆಫ್ ಸ್ಯಾಕ್ರಿಫೈಸ್ ನೋಡುವುದೆಲ್ಲ ಒತ್ತಟ್ಟಿಗಿರಲಿ, ಅದೇ ದಾರಿಯಲ್ಲಿ ಮರಳಿ ನಾಲ್ಕು ಕಿಲೋಮೀಟರ್ ನಡೆದು ಮೊದಲಿದ್ದ ಜಾಗ ಮುಟ್ಟುವುದೂ ಸಹ ಅತ್ಯಂತ ತ್ರಾಸದಾಯಕ ನಡಿಗೆ ಅನ್ನಿಸಲು ಶುರುವಾಯಿತು.

ಅಪ್ಪನಿಗಂತೂ ನಡೆಯುವುದು ತುಂಬ ಕಷ್ಟವಾಗಿ ಮೊದಲ ಬಾರಿಗೆ ಕತ್ತೆ ಪ್ರಯಾಣದ ಸುಯೋಗ ಒದಗಿ ಬಂದಿತ್ತು!

ಅಲ್ಲಿಂದ ಎರಡು ಕಿಲೋಮೀಟರ್ ದೂರದ ಅಲ್ ಖಾಜ಼್ನೆಗೆ ಒಂದು ಕತ್ತೆಗೆ 15 ಡಾಲರ್  ಬಾಡಿಗೆ … ಅಂದರೆ ಸಾವಿರ ರೂಪಾಯಿಗೂ ಹೆಚ್ಚು! ನಮ್ಮ ಅಸಹಾಯಕತೆ ಅಲ್ಲಿನ ವ್ಯಾಪಾರಿಗಳಿಗೆ ಗೊತ್ತಿರುತ್ತದೆ. ಹಾಗಾಗಿ ಕೇಳಿದಷ್ಟು ಹಣ ಕೊಡುತ್ತಾರೆ ಅನ್ನುವುದು ಅವರ ನಂಬಿಕೆ. ಜೊತೆಗೆ, ರೂಪಾಯಿಯಲ್ಲಿ ಸಂಪಾದಿಸುವ ನಮ್ಮಂಥವರಿಗೆ ಕತ್ತೆ ದುಬಾರಿ ಅನ್ನಿಸುತ್ತದಾದರೂ, ಡಾಲರಿನಲ್ಲಿ ಸಂಪಾದಿಸಿದವರಿಗೆ ಅದು ಹೆಚ್ಚೇನಲ್ಲ. ಹಾಗಾಗಿ ಹುಚ್ಚುಮುಂಡೆ ಮದುವೆಯಲ್ಲಿ ಉಂಡವನೇ ಜಾಣ! ಅಪ್ಪನನ್ನು ಕತ್ತೆ ಹತ್ತಿಸಿ ಕಳಿಸಿದ್ದಾಯ್ತು. ಅಮ್ಮ ನಿಧಾನವಾಗಿ ನಡೆಯುತ್ತ ಹಿಂದೆಯೇ ಹೊರಟಳು. ಅವರಿಬ್ಬರನ್ನೂ ಕಳಿಸಿದ ನಂತರ ನಾವು ಹಿಂತಿರುಗುವ ಮಾರ್ಗದಲ್ಲಿ ಎಷ್ಟು ಸಾಧ್ಯವೋ ಅದನ್ನು ಮಾತ್ರ ನೋಡಿ ಹೋಗಿಬಿಡೋಣ ಅನ್ನುವ ತೀರ್ಮಾನಕ್ಕೆ ಬಂದೆವು.

ಗ್ರೇಟ್ ಟೆಂಪಲ್‌ನ ಬಳಿ ಹೋದಾಗ ಬಿಸಿಲು ನೆತ್ತಿಗೇರಿ ಅಸಾಧ್ಯ ಸುಸ್ತಾಗಿತ್ತು. ಎದುರಿಗೆ ಕಾಣುತ್ತಿದ್ದ ಎರಡು ಹಂತದ ದೇಗುಲವನ್ನು ತಲುಪಲು – ಅಂದರೆ ಕಟ್ಟಡವೇನೂ ಉಳಿದಿಲ್ಲದ, ಬರಿಯ ಅವಶೇಷಗಳನ್ನು ನೋಡಲು 25-30 ಮೆಟ್ಟಿಲನ್ನು ಹತ್ತಬೇಕು. ಹತ್ತಲು ಕಾಲು ಏಳುತ್ತಲೇ ಇಲ್ಲ. ಹಾಗೂ ಹೀಗೂ ಸಾವರಿಸಿಕೊಂಡು ನಿಧಾನವಾಗಿ ಮೊದಲ ಹಂತದ 20 ಮೆಟ್ಟಿಲು ಹತ್ತಿದೆ. ಅಷ್ಟಾಗುವುದರಲ್ಲಿ ನನ್ನ ಗಂಡ ಮತ್ತೂ ಮೆಟ್ಟಿಲು ಹತ್ತಿ ಹೋಗುವುದು ಕಾಣಿಸಿತು. ಅಷ್ಟು ಹತ್ತಿದರೆ ಆಯ್ತೆಂದುಕೊಂಡಿದ್ದ ನನಗೆ ಮತ್ತೂ ಮೆಟ್ಟಿಲುಗಳನ್ನು ನೋಡಿ ಎಷ್ಟೇ ಮೋಟಿವೇಟ್ ಮಾಡಿಕೊಂಡರೂ ಕಾಲು ಮೇಲೇಳುತ್ತಲೇ ಇಲ್ಲ. ಅಸಹಾಯಕತೆಯಿಂದ ಉರಿಬಿಸಿಲಿನಲ್ಲಿ ನಿಂತುಬಿಟ್ಟೆ.

ನಾನು ನಿಂತ ಜಾಗದಲ್ಲಿ ಒಂದಿಷ್ಟು ಮಣಿಸರ, ಕಲ್ಲುಗಳನ್ನಿಟ್ಟುಕೊಂಡು ಒಬ್ಬರು ಹೆಂಗಸು ವ್ಯಾಪಾರಿ ಕುಳಿತಿದ್ದರು. ನನ್ನ ಸ್ಥಿತಿ ಅರ್ಥವಾಗಿ ಕನಿಕರದ ನಗೆ ನಗುತ್ತಾ ಆಕಾಶ ನೋಡಿ ಬಿಸಿಲು ಅಂತ ಸನ್ನೆ ಮಾಡಿದರು. ನಾನು ಹೌದು ಎನ್ನುವಂತೆ ತಲೆಯಾಡಿಸಿದೆ. ಏನಾದರೂ ಬೇಕೇ ಅಂತ ವಿಚಾರಿಸಿದರು. ನಾನು ಬೇರೆ ದೇಶಗಳಿಗೆ ಹೋದಾಗ ಕೈಲಿ ದುಡ್ಡು ಇಟ್ಟುಕೊಳ್ಳುವುದಿಲ್ಲ. ಹಾಗಾಗಿ ಏನನ್ನು ಕೊಳ್ಳಬೇಕೆಂದರೂ ಒಂದು ಕುರುಡುಕಾಸೂ ಗತಿಯಿರಲಿಲ್ಲವಾಗಿ ‘ಇಲ್ಲ’ ಎನ್ನುವಂತೆ ತಲೆಯಾಡಿಸಿದೆ. ನಾನು ವ್ಯಾಪಾರ ಮಾಡುವುದಿಲ್ಲ ಅಂತ ಅರ್ಥವಾದ ನಂತರ ಆ ಹೆಂಗಸು ಸುಮ್ಮನಾದರು. ನಾನೂ ಬಿಸಿಲಿನ ಝಳಕ್ಕೆ ಕಣ್ಣಿಗೆ ಅಡ್ಡಲಾಗಿ ಕೈ ಹಿಡಿದು ನನ್ನ ಗಂಡ ಕಾಣಿಸುತ್ತಾನಾ ಅಂತ ನೋಡಲಾರಂಭಿಸಿದೆ. ಅಷ್ಟರಲ್ಲಿ ಪಕ್ಕದಿಂದ ಗೊರಕೆ ಸದ್ದು! ನೋಡಿದರೆ ಆ ವ್ಯಾಪಾರಿ ಕೂತಲ್ಲೇ ಕಲ್ಲಿಗೆ ಒರಗಿ ಸುಖನಿದ್ರೆಯಲ್ಲಿ ತೇಲಾಡುತ್ತಿದ್ದಾರೆ! ಎಂಥ ಪುಣ್ಯಾತ್ಮಳು ಅಂದುಕೊಂಡೆ.

ಮತ್ತೆ ಐದು ನಿಮಿಷ ಕಳೆಯುವುದರಲ್ಲಿ ಚೈನಾದ ಪ್ರವಾಸಿಗರ ಒಂದು ದೊಡ್ಡ ಗುಂಪು ಅಲ್ಲಿಗೆ ಬಂದಿತು. ಭಾರತೀಯರಿಗಿಂತ ಜೋರು ದನಿಯಲ್ಲಿ ಕೂಗಾಟದಂತೆ ಮಾತಾಡುವವರು ಚೀನೀಯರು ಮಾತ್ರ ಅನ್ನುವುದು ನನಗೆ ಈವರೆಗೆ ಅನುಭವಕ್ಕೆ ಬಂದ ಸಂಗತಿ. ಆ ಜೋರು ದನಿಗೆ ನಿದ್ರೆ ಮಾಡುತ್ತಿದ್ದ ವ್ಯಾಪಾರಿ ಹೆಂಗಸಿಗೆ ಎಚ್ಚರವಾಯಿತು. ಎಲ್ಲರೂ ಮಾತನಾಡುತ್ತಾ, ಸಾಗಿ ಹೋದ ನಂತರ ಅವರ್ಯಾರೂ ತನ್ನಲ್ಲಿ ವ್ಯಾಪಾರ ಮಾಡುವುದಿಲ್ಲ ಎನ್ನುವ ಅರಿವು ಬಂದಂತೆ ಸುಮ್ಮನೆ ಕುಳಿತವರು, ಆಗಲೂ ಅಲ್ಲಿಯೇ ನಿಂತಿದ್ದ ನನ್ನನ್ನು ನೋಡುತ್ತಾ  ಬಿಸಿಲಿನಲ್ಲಿ ನಿಂತಿರುವುದನ್ನು ಆಗ ಗಮನಿಸಿದರು ಎಂದು ಕಾಣುತ್ತದೆ … ತಾನು ಕೂತಿದ್ದ ಜಾಗದಿಂದ ಸ್ವಲ್ಪ ಪಕ್ಕಕ್ಕೆ ಸರಿದು ಒರಗಿದ್ದ ಕಂಭದ ನೆರಳಿನಲ್ಲಿ ಜಾಗ ಮಾಡಿ ನನ್ನನ್ನು ಅಲ್ಲಿಗೆ ಬರುವಂತೆ ಸಂಜ್ಞೆ ಮಾಡಿದರು.

ಪೂರ್ತಿ ನೆರಳಿನಲ್ಲಿದ್ದ ಅವರ ದೇಹದ ಸ್ವಲ್ಪ ಭಾಗ ಈಗ ಬಿಸಿಲಿನಲ್ಲಿತ್ತು. ಪರವಾಗಿಲ್ಲ ಅನ್ನುವಂತೆ ತಲೆಯಾಡಿಸಿದರೂ ಬಿಡದೇ ಅಲ್ಲಿಗೆ ಹೋಗಿ ನಿಲ್ಲುವಂತೆ ಮಾಡಿದರು. ನಾನು ಯಾರು ಆಕೆಗೆ? ಗುರುತಿಲ್ಲ, ಪರಿಚಯವಿಲ್ಲ, ಮತ್ತೊಮ್ಮೆ ಸಿಗುವ ಅವಕಾಶವೂ ಇಲ್ಲ. ಹೋಗಲಿ ವ್ಯಾಪಾರ ಮಾಡಿದ್ದೀನಾ ಅಂದರೆ ಅದೂ ಇಲ್ಲ. ಆದರೂ ನನಗಾಗಿ ಸರಿದು ನೆರಳು ಮಾಡಿಕೊಟ್ಟರಲ್ಲಾ ಆ ಅರಬ್ ಹೆಂಗಸು! ಇಂಥ ಸಂದರ್ಭಗಳು ಯಾಕೋ ಮನಸ್ಸಿನಲ್ಲಿ ಕೆತ್ತಿದಂತೆ ಉಳಿದುಬಿಡುತ್ತವೆ ವರ್ಷವರ್ಷಗಳ ಕಾಲ ….

ಇನ್ನೊಂದು ಕಿಲೋಮೀಟರ್ ನಡೆದು ಎಡಕ್ಕೆ 40-50 ಮೆಟ್ಟಿಲು ಹತ್ತಿದರೆ ಅಲ್ಲಿ ರಾಯಲ್ ಟೂಂಬ್ ಸಿಗುತ್ತದೆ. ಮೊದಲು ಸಮಾಧಿಯಾಗಿದ್ದ ಅದು, ಕ್ರಿಸ್ತಶಕ ನಾಲ್ಕನೆಯ ಶತಮಾನದಲ್ಲಿ ಚರ್ಚ್ ಆಗಿ ಪರಿವರ್ತನೆಗೊಳ್ಳುತ್ತದೆ. ಬರುವಾಗ ಬೇಕಿದ್ದರೆ ಅದನ್ನು ನೋಡಬಹುದು ಎಂದಿದ್ದ ಮಹಮ್ಮದ್. ಆದರೆ ಐದು ಕಿಲೋಮೀಟರ್ ನಡೆದ ದೇಹಕ್ಕೆ ಮತ್ತೆ ಅಷ್ಟು ಮೆಟ್ಟಿಲು ಹತ್ತುವುದು ಅಸಾಧ್ಯ ಅಂದುಕೊಳ್ಳುವುದರಲ್ಲೇ ನನ್ನ ಗಂಡ ‘ಇಲ್ಲ ನೀನು ಬರಲೇ ಬೇಕು’ ಎಂದು ಬಲವಂತ ಮಾಡಲು ಶುರು ಮಾಡಿದ. ನನಗೆ ಸಿಟ್ಟು, ಅಸಹನೆ ಎರಡೂ ಸೇರಿ ಸಾಧ್ಯವಿಲ್ಲ ಅಂತ ಹೇಳಿದೆ. ಆದರೂ ಅವನು ಬಿಡದೇ ನನ್ನನ್ನು ಪುಸಲಾಯಿಸುತ್ತಾ ‘ಎಷ್ಟಾಗತ್ತೋ ಅಷ್ಟು ಹತ್ತು ಮಾರಾಯ್ತಿ. ಆಗದಿದ್ದರೆ ಅಲ್ಲಿಗೇ ನಿಲ್ಲಿಸು ಅಷ್ಟೇ’ ಅಂತ ಉಪಾಯ ಸೂಚಿಸಿದ.

ನಾನು ಗೊಣಗುತ್ತಾ ಇವನಿನ್ನು ನನ್ನನ್ನು ಬಿಡುವವನಲ್ಲ ಅಂತ ಅವನನ್ನು ಹಿಂಬಾಲಿಸಿದೆ. 20 ಮೆಟ್ಟಿಲು ಹತ್ತುವುದರಲ್ಲಿ ಹೈರಾಣಾಗಿ ಎದುರಿಗಿದ್ದ ಕಲ್ಲಿನ ಮೇಲೆ ಕೂತುಬಿಟ್ಟೆ. ಅವನೂ ಜೊತೆಯಲ್ಲೇ ಕೂತ. ಮಾತನಾಡುತ್ತಾ ಕೂತಿರುವಾಗಲೇ ಅಲ್ಲಿನ ಪುಟ್ಟ ಹುಡುಗಿಯೊಂದು ನಮ್ಮ ಪಕ್ಕ ಬಂದು ಕುಳಿತು ನನ್ನ ಗಂಡ ನೋಡುತ್ತಿದ್ದ ಫೋಟೋಗಳನ್ನು ತಾನೂ ನೋಡಲಾರಂಭಿಸಿದಳು. ಐದು ನಿಮಿಷ ಕಳೆಯುವುದರಲ್ಲಿ ನನ್ನ ಸುಸ್ತು ಸ್ವಲ್ಪ ಕಡಿಮೆಯಾಗಿ ಮತ್ತೆ ಎದ್ದು ಹೊರಟೆ. ಜೊತೆಗಿದ್ದ ಹುಡುಗಿ ನಮ್ಮನ್ನು ನೋಡಿ ನಗುತ್ತಾ ಕೆಳಗಿಳಿದು ಎಲ್ಲೋ ಮಾಯವಾದಳು.

ಅಲ್ಲಿಂದ ಮೆಟ್ಟಿಲ ಪಕ್ಕದಲ್ಲಿದ್ದ ಅಂಗಡಿಯ ನೆರಳಿನಲ್ಲಿ ನಿಂತು ಸುಧಾರಿಸಿಕೊಂಡು, ಕಷ್ಟಪಟ್ಟು ಇನ್ನೇನು ಹತ್ತಿಯೇ ಬಿಟ್ಟೆ ಅನ್ನುವುದರಲ್ಲಿ ಪಕ್ಕದ ಬಂಡೆಗಳ ಪಕ್ಕದಿಂದ ಕೆಳಗೆ ಹೋಗಿದ್ದ ಆ ಹುಡುಗಿ ಸಮತಟ್ಟಾದ ನೆಲದ ಮೇಲೆ ನಡೆಯುವಷ್ಟು ಲೀಲಾಜಾಲವಾಗಿ ಹತ್ತುತ್ತ ಬಂದವಳು, ಅವಳು ಪೂರ್ತಿ ಇಳಿದು, ಮತ್ತೆ ಹತ್ತಿ ಬಂದರೂ ಇನ್ನೂ ಹತ್ತುತ್ತಲೇ ಇದ್ದ ನನ್ನನ್ನು ನೋಡಿ ನಗು ತಡೆಯಲಾರದೇ ನಕ್ಕೇ ಬಿಟ್ಟಳು. ತುಸು ಅವಮಾನವಾದರೂ ‘ನಿಮಗೆಲ್ಲಾ ಅಭ್ಯಾಸವಮ್ಮಾ. ಜೊತೆಗೆ ನೀನು ಪುಟ್ಟ ಹುಡುಗಿ. ನಮಗೆ ಆಗುವುದಿಲ್ಲ’ ಅಂತ ಕನ್ನಡದಲ್ಲೇ ಒಬ್ಬಳೇ ಮಾತಾಡಿಕೊಂಡು ಸಮಾಧಾನ ಮಾಡಿಕೊಂಡೆ.

ರಾಯಲ್ ಟೂಂಬ್ ತಲುಪುವುದರಲ್ಲಿ ಅದು ‘ಭಾರತಿ ಟೂಂಬ್’ ಸಹಾ ಆಗಬಹುದು ಅನ್ನುವಂಥ ದುಸ್ಥಿತಿ ತಲುಪಿದ್ದೆ!

ಬಲವಂತ ಮಾಡಿ ಹತ್ತಿಸಿದ ನನ್ನ ಗಂಡನನ್ನು ಬಯ್ಯುತ್ತಿದ್ದವಳು, ಒಳಗಿನ ಗುಹೆಯ ತಾರಸಿಯಲ್ಲಿ ಮೂಡಿದ್ದ ಚಿತ್ತಾರ ನೋಡಿದ್ದೇ ತಡ ತೆರೆದ ಬಾಯಿ ಮುಚ್ಚಲಿಲ್ಲ… ಅಷ್ಟು ಸುಂದರವಾಗಿತ್ತು ಆ ತಾರಸಿ. ನಿಪುಣ ಕಲಾಕಾರನೊಬ್ಬ ಕುಳಿತು ಅತ್ಯದ್ಭುತ ತಾಳ್ಮೆಯಿಂದ ಚಿತ್ರ ಬಿಡಿಸಿದಂತಿದ್ದ ಅದನ್ನು ನೋಡಿ ನನಗೆ ಧನ್ಯತಾಭಾವ ಮೂಡಿದಂತಾಗಿ ‘ಅಂತೂ ನೀನು ಬಲವಂತ ಮಾಡಿದ್ದಕ್ಕೆ ನಾನೂ ಹತ್ತಿದೆ ಮಾರಾಯ. ಆಗ ಹತ್ತುವಾಗ ಮೈ ಉರೀತಿತ್ತು. ಬೋಳಿಮಗಂದು ಅದೇನು ಬಿಸಿಲು’ ಅಂದೆ. ಬೇರೆ ದೇಶಗಳಿಗೆ ಹೋದಾಗ ಇದೊಂದು ಸುಖ ನನಗೆ, ಯಾರಿಗೂ ನಮ್ಮ ಭಾಷೆ ಅರ್ಥವಾಗುವುದಿಲ್ಲ ಎಂದಾಗ ಅತ್ಯಂತ ಸೊಫಿಸ್ಟಿಕೇಟೆಡ್ ಆಗಿ ವರ್ತಿಸಬೇಕಾಗಿಲ್ಲವಲ್ಲ! ಒಂದಿಷ್ಟು ಕೆಟ್ಟ ಪದಗಳನ್ನು ಧಾರಾಳವಾಗಿ ಉಪಯೋಗಿಸಿ ನೆಮ್ಮದಿಯಾಗಿರಬಹುದು.

ಹಾಗೆ ಮಾತನಾಡುತ್ತ ನಡೆಯುವಾಗಲೇ ಯಾರೋ ಫೋಟೋ ತೆಗೆಯಲು ಸಿದ್ದರಾಗುತ್ತಿದ್ದವರಿಗೆ ನಾವು ಅಡ್ಡಲಾಗಿ ಬಂದಿದ್ದು ಗೊತ್ತಾಗಿ, ‘ಸಾರಿ’ ಎಂದು ಮತ್ತೆ ನಾಗರೀಕತೆಯ ಮುಖವಾಡ ಭದ್ರವಾಗಿ ಕೂರಿಸಿ ಹಿಂದೆ ಸರಿದು ನಿಂತೆ. ಫೋಟೋ ತೆಗೆಯುತ್ತಿದ್ದ ಹುಡುಗ ‘ಪರವಾಗಿಲ್ಲ ಮೇಡಂ, ಹೋಗಿ ನೀವು’ ಅಂತ ಕನ್ನಡದಲ್ಲಿ ಹೇಳಿದ! ಫಕ್ಕನೆ ನಾನು ಬೋಳಿಮಗ ಅಂದಿದ್ದು ಇವನು ಕೇಳಿಸಿಕೊಂಡನಾ ಅಂತ ಅವಮಾನವಾಗಿ ಹೋಯಿತು.

ಪೆದ್ದುಪೆದ್ದಾಗಿ ನಕ್ಕು ಅಲ್ಲಿಂದ ಜಾಗ ಖಾಲಿ ಮಾಡಿ ಮೆಟ್ಟಿಲಿಳಿಯುವಾಗ ಎದುರಾದ ಅದೇ ಹುಡುಗ ‘ನನ್ನ ಹೆಸರು ಸಂದೀಪ್ ಅಂತ. ನಾನು ಹೈದರಾಬಾದ್‌ನವನು, ಓದಿದ್ದು ಬೆಂಗಳೂರಿನಲ್ಲಿ ….’ ಅಂತ ಹರಟುತ್ತಾ ಜೊತೆಗೇ ನಡೆಯಲು ಶುರು ಮಾಡಿದ. ಸಿಂಗಪೂರ್‌ನಲ್ಲಿ ರಾಜಾಕುಳ್ಳ ಸಿನೆಮಾದಲ್ಲಿ ನಮ್ಮ ಕುಳ್ಳನಿಗೆ ಸಿಂಗಪೂರ್‌ನ ಫೆಲಿನಾ ‘ನಾಂಗೂ ಕಾನದಾ ಬರಥೆ. ನಾನು ಬ್ಯಾಂಗಲೋರಲ್ಲೇ ಓದಿದೂ’ ಅಂದಾಗ ‘ಈ ನನ್ಮಕ್ಕಳಿಗೆ ಎಲ್ಲೋದ್ರೂ ಕನ್ನಡ ಮಾತಾಡೋರು ಸಿಕ್ತಾರಪ್ಪ’ ಅಂತ ನಕ್ಕಿದ್ದು ನೆನಪಾಗಿ, ನನ್ನ ಅಜ್ಞಾನ ಮನ್ನಿಸಿ ಎಂದು ದ್ವಾರಕೀಶ್‌ ಅವರಿಗೆ ಮನಸ್ಸಿನಲ್ಲೇ ಕ್ಷಮೆ ಕೇಳಿಕೊಂಡೆ!

ಮೆಟ್ಟಿಲು ಇಳಿಯುವಾಗ ಅಲ್ಲಲ್ಲಿ ಲ್ಯಾಂಡಿಂಗ್ ಹತ್ತಿರವೆಲ್ಲ ಹಳೆಯ ನಾಣ್ಯ, ಮಣಿಸರ ಮುಂತಾದುವನ್ನು ಮಾರುತ್ತ ಕುಳಿತಿರುವ ಅರಬ್ ಸುಂದರಿಯರು ಬೆಳದಿಂಗಳಂಥ ನಗು ತುಳುಕಿಸುತ್ತಾ ‘ಯು ವಾಂತು ಬೈ ಎನಿಥಿಂಗ್ ಮ್ಯಾಮ್’ ಅನ್ನುತ್ತ ಆಹ್ವಾನ ನೀಡುತ್ತಿದ್ದರು. ನಾನು ಆ ಸೌಂದರ್ಯವನ್ನೇ ನೋಡುತ್ತಾ ಏನೂ ಬೇಡ ಎಂದು ಸೂಚಿಸುವಂತೆ ತಲೆ ಆಡಿಸುತ್ತಾ ಇಳಿಯುತ್ತಿದ್ದೆ. ಒಂದು ಅಂಗಡಿಯ ಹತ್ತಿರ ಬರುವಾಗ ಮಗುವಿನ ಅಳು ಕೇಳಿಸಿತು. ಅಂಗಡಿಯಲ್ಲಿ ಯಾರೂ ಇರಲಿಲ್ಲ. ಹಿಂದೆ ಹಾಕಿದ್ದ ಪರದೆ ಸೀಳಿ ಆ ಅಳು ನನ್ನನ್ನು ಮುಟ್ಟಿತು. ಹೆಣ್ಣು ಮೆಲುದನಿಯಲ್ಲಿ ಜೋಗುಳ ಹಾಡುತ್ತಾ ಮಗುವನ್ನು ಸಮಾಧಾನಗೊಳಿಸುತ್ತಿದ್ದುದು ಕೇಳಿಸಿತು.

ಓಹ್! ಅಷ್ಟು ಪುಟ್ಟ ಮಗುವನ್ನಿಟ್ಟುಕೊಂಡು ಹೇಗೆ ವ್ಯಾಪಾರ ಮಾಡುತ್ತಾಳೋ ಎಂದುಕೊಳ್ಳುತ್ತಾ ಮೆಟ್ಟಿಲಿಳಿದು, ಅವಳ ಅಂಗಡಿಯ ಮುಂದಿಂದ ಹಾಯುವುದರಲ್ಲಿ ಪರದೆಯ ಹಿಂದಿನಿಂದ ಹಾಡು ನಿಂತುಹೋಗಿ ‘ಯು ವಾಂತು ಬೈ ಎನಿತಿಂಗ್ ಸರ್? ಮ್ಯಾಮ್’ ಎನ್ನುವ ದನಿ ಕೇಳಿಸಿತು. ಆ ಜೋಗುಳ ಹಾಡುವಾಗಲೂ ಅವಳಿಗೆ ನನ್ನ ಹೆಜ್ಜೆಯ ಸಪ್ಪಳ ಕೇಳಿಸಿದ್ದು ಹೇಗೆ ಅನ್ನುವುದು ಇವತ್ತಿಗೂ ನನಗೆ ಅರ್ಥವಾಗಿಲ್ಲ. ಹಸಿವು ಕಿವಿಯನ್ನೂ ಚುರುಕಾಗಿಸುತ್ತದಾ? ಆ ಘಟನೆ ನೆನೆಸಿಕೊಂಡಾಗೆಲ್ಲ ದಟ್ಟದೊಂದು ವಿಷಾದ ನನ್ನನ್ನು ಆವರಿಸುತ್ತದೆ ……

ಮತ್ತೆ ಟ್ರೆಷರಿ ಹೌಸ್ ಎದುರು ಬರುವುದರಲ್ಲಿ ನಾನು ಸತ್ತೇ ಹೋಗುತ್ತೀನೇನೋ ಅನ್ನುವಷ್ಟು ಹಸಿವಾಗುತ್ತಿತ್ತು. ಅಪ್ಪ, ಅಮ್ಮ ನಮಗಾಗಿ ಕಾಯುತ್ತ ಅಲ್ಲಿದ್ದ ಹೋಟೆಲ್ಲಿನೆದುರಿನ ಮರದ ಬೆಂಚುಗಳಲ್ಲಿ ಕುಳಿತಿದ್ದರು.

‘ಮೂರು ಡಾಲರಿಗೆ ಒಳ್ಳೆಯ ಕಾಫಿ ಕೊಟ್ಟ’ ಅಂದರು ಅಪ್ಪ ನಗುತ್ತಾ. ಹಣವೆನ್ನುವುದರ ‘ಬೆಲೆ’ ಅರಿವಾಗುವುದು ಇಂಥ ಸಂದರ್ಭಗಳಲ್ಲೇ ಅನ್ನಿಸಿತು! ಆ ಮೊದಲು ನಾಲ್ಕು ಡಾಲರ್ ಕೊಟ್ಟು ಕಾಫಿ ಕುಡಿದಾಗ ‘ಹಕಪತಿ ನನ್ಮಗ’ ಅಂತ ಬಯ್ದುಕೊಂಡಿದ್ದ ನಮಗೀಗ ಸಧ್ಯ ಕುಡಿಯಲು ಕಾಫಿ ಸಿಕ್ಕರೆ ಅದೇ ಸ್ವರ್ಗ! ಅಂಗಡಿಯಾತ ನಾನು ನಿಂತ ಕೂಡಲೇ ‘ಕಾಫಿ ತೂ ದಾಲರ್ಸ್’ ಅಂದ. ಪಕ್ಕದಲ್ಲಿದ್ದ ಅಮ್ಮ ‘ಅಯ್ಯೋ ನಮಗೆ ಮೂರು ತಗೊಂಡ! ಈಗ ಎರಡು ಅಂತಾನಲ್ಲ’ ಅಂತ ಹೊಟ್ಟೆ ಉರಿದುಕೊಂಡಳು. ಕೇಳೋಣವಾ ಅಂದುಕೊಂಡವರು ‘ಓಹ್ ಹೌದು ಮೂರು ಡಾಲರಿಗೆ ತಪ್ಪಿ ಎರಡು ಅಂದುಬಿಟ್ಟೆ. ಈಗಿನದಕ್ಕೂ ಮೂರು ಡಾಲರ್ ಕೊಡಿ’ ಅಂತ ರಿವರ್ಸ್ ಹೊಡೆದುಬಿಟ್ಟರೆ ಎಂದೆಣಿಸಿ ಸುಮ್ಮನಾದೆವು.

20 ಡಾಲರ್ ಕೊಟ್ಟೆವು. ಕಾಫಿ ಕಪ್ ತುಂಬುತ್ತಿತ್ತು. ಆತ ಎಣಿಸಿ 18 ಡಾಲರ್ ಚಿಲ್ಲರೆ ಕೊಟ್ಟ. ನಾನು ಅದನ್ನು ತೆಗೆದುಕೊಂಡು ಅಪ್ಪನಿಗೆ ಕೊಟ್ಟು ಮರಳಿ ಬಂದೆ. ಅಷ್ಟರಲ್ಲಿ ಕಾಫಿ ಕಪ್ ಹಿಡಿದ ಅಂಗಡಿಯಾತ ಜೊತೆಗೆ ಎಣಿಸಿ ಮತ್ತೆ 18 ಡಾಲರ್ ಇಟ್ಟ! ಅಮ್ಮ ತಬ್ಬಿಬ್ಬಾಗಿ ‘ಆಪ್ ಚಿಲ್ಲರ್ ದಿಯೇತೇ ನಾ’ ಎಂದಳು. ಅಮ್ಮನಿಗೆ ನಮ್ಮ ಭಾಷೆ ಬಿಟ್ಟು ಮಾತನಾಡುವುದೆಂದರೆ ದೇಶದ ಹಂಗಿಲ್ಲದೇ ಮೊದಲು ಬಾಯಲ್ಲಿ ಬರುವುದೇ ಹಿಂದಿ! ಈಗಲೂ ಅವಳು ಹಿಂದಿಯಲ್ಲಿ ಕೇಳಿದಾಗ ಅವನು ನಾವು ಚಿಲ್ಲರೆ ಸರಿ ಕೊಟ್ಟಿಲ್ಲ ಎಂದು ಹೇಳುತ್ತಿದ್ದೇವೆ ಎಂದುಕೊಂಡು ‘ನೋ ಐ ಗೇವ್ ಕರೆಕ್ಟ್ ಛೇಂಜ್’ ಎಂದ. ‘ಬಟ್ ಯೂ ಹ್ಯಾವ್ ಆಲ್ರೆಡಿ ಗಿವೆನ್ ಛೇಂಜ್’ ಎಂದಾಗ ಅವನ ಮುಖದಲ್ಲಿ ದಿಗ್ಭ್ರಾಂತಿ ಮೂಡಿತು. ನಂಬಲಾರದವನಂತೆ ಅರೆಕ್ಷಣ ನಿಂತಿದ್ದವ, ನಾವು ಅವನ ಡಾಲರ್ ಹಿಂದಿರುಗಿಸಿದಾಗ ಮುಖದ ತುಂಬ ನಗು ಹರಡಿ ‘ಥ್ಯಾಂಕ್ ಯೂ’ ಎಂದ. ಒಂದು ಪ್ರಾಮಾಣಿಕತೆಗೆ ಬದಲಾಗಿ ಒಂದು ಮುಕ್ತ ನಗುವಿನ ಕಾಣಿಕೆ! ನಾಟ್ ಬ್ಯಾಡ್! ಅಲ್ಲವೇ … ಅಲ್ಲಲ್ಲ, ನಿಜಕ್ಕೂ ಹೇಳಬೇಕೆಂದರೆ ವೆರಿ ವೆರಿ ಗುಡ್ ಅಲ್ಲವೇ?!

ಕಾಫಿ ನಿಜಕ್ಕೂ ರುಚಿಯಾಗಿತ್ತು. ಕುಡಿಯುತ್ತ ಒಂದು ಸುದೀರ್ಘ ಬ್ರೇಕ್ ತೆಗೆದುಕೊಂಡೆವು. ಅಲ್ಲಿ ನಾನು ಗಮನಿಸಿದ ಮತ್ತೊಂದು ವಿಷಯವೆಂದರೆ ಅಲ್ಲಿದ್ದ ಅಸಂಖ್ಯಾತ ಬೆಕ್ಕುಗಳು! ಎಂಥ ಭಂಡ ಬೆಕ್ಕುಗಳೆಂದರೆ ಮನುಷ್ಯರು ಕುಳಿತಿರುವ ಟೇಬಲ್ಲಿನ ಮೇಲೆಲ್ಲ ತಮ್ಮದೇ ಸಾಮ್ರಾಜ್ಯವೆನ್ನುವಂತೆ ಬೀಡುಬಿಟ್ಟಿದ್ದವು. ಕೆಲವು ಬೆಕ್ಕುಗಳಂತೂ ಲೋಟದ ತಳದಲ್ಲಿದ್ದ ಕಾಫಿಯನ್ನು ಕಂಡರೆ, ಲೋಟಾ ಉರುಳಿಸಿ ಕಾಫಿ ಚೆಲ್ಲಿದಾಗ ನೆಕ್ಕಿ ಮುಗಿಸುತ್ತಿದ್ದವು.

ಇನ್ನು ಕೆಲವಂತೂ ನಾವು ವಿದ್ಯಾರ್ಥಿಭವನ ಹೋಟೆಲ್ಲಿನಲ್ಲಿ ಸೀಟಿಗಾಗಿ ಅದಾಗಲೇ ತಿನ್ನುತ್ತಿರುವವರ ಪಕ್ಕ ರಣಹದ್ದುಗಳಂತೆ ಕಾಯುತ್ತೇವಲ್ಲ, ಆ ರೀತಿ ಕುಡಿದು ಮುಗಿಸುವುದನ್ನೇ ಕಾಯುತ್ತ ನಿಂತಿದ್ದವು! ಬಹುಶಃ ಇನ್ನೊಂದಿಷ್ಟು ವರ್ಷ ಕಳೆದರೆ ನಾವು ಕುಡಿಯುವ ಮೊದಲೇ ಮೇಲೆ ಮುಗಿಬಿದ್ದು ಕಿತ್ತುಕೊಳ್ಳುತ್ತವೋ ಏನೋ ಅಂದುಕೊಂಡೆ…

‍ಲೇಖಕರು avadhi

August 20, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

… ಆಮೆನ್! 

… ಆಮೆನ್! 

ಸುಮಾರು ಹೊತ್ತು ಸುಧಾರಿಸಿಕೊಂಡ ನಂತರ ಎದ್ದು ನಮ್ಮ ನಡಿಗೆ ಮುಂದುವರೆಸುವ ತುಸು ಮಾತ್ರದ ತ್ರಾಣ ಬಂದಿತು. ಆದರೆ ಅಪ್ಪ-ಅಮ್ಮ ನಡೆಯುವ...

10 ಪ್ರತಿಕ್ರಿಯೆಗಳು

 1. Manjunath. S

  super writing BVB. Enjoyed reading it. I read it full. ಕೃಷ್ಣನ ಕಿರೀಟ, ಬೋ.ಮ (ಬೈಗುಳ) ಇಷ್ಟವಾಯ್ತು. ಎಲ್ಲವೂ ಕಣ್ಣಿಗೆ ಕಟ್ಟುವಂತೆ ಬರೆದಿದ್ದೀರ.

  ಪ್ರತಿಕ್ರಿಯೆ
  • ಭಾರತಿ ಬಿ ವಿ

   ಥ್ಯಾಂಕ್ಸ್ ಮಂಜುನಾಥ್ … ಖುಷಿಯಾಯ್ತು

   ಪ್ರತಿಕ್ರಿಯೆ
 2. ಹರೀಶ್ ಬೇದ್ರೆ

  ಮೇಡಂ,
  ನೀವು ನಿಮ್ಮ ಪ್ರವಾಸ ಕಥನವನ್ನು ಪುಸ್ತಕ ರೂಪದಲ್ಲಿ ತಂದರೆ, ಮೊದಲ ಪ್ರತಿ ನಾನೆ ಕೊಳ್ಳುವೆ.

  ಪ್ರತಿಕ್ರಿಯೆ
  • ಭಾರತಿ ಬಿ ವಿ

   ಥ್ಯಾಂಕ್ಸ್ ಹರೀಶ್ … Thanks for your kind words

   ಪ್ರತಿಕ್ರಿಯೆ
 3. Lalitha siddabasavayya

  ಭಾರತಿಯವರೆ , ಆರಂಭಿಸಿದ ಮೇಲೆ ನಿಲ್ಲಿಸುವಂತೆಯೆ ಇಲ್ಲ ಓದುವುದನ್ನು ! ಜೊತೆಗೆ ಉಚಿತವಾಗಿ ಮನೋಲ್ಲಾಸ, ತ್ಯಾಂಕ್ಯೂ

  ಪ್ರತಿಕ್ರಿಯೆ
  • ಭಾರತಿ ಬಿ ವಿ

   ಲಲಿತಾ ಮೇಡಂ I’m on cloud nine! ಥ್ಯಾಂಕ್ಸ್

   ಪ್ರತಿಕ್ರಿಯೆ
 4. ನೂತನ

  ಭಾರತಿ..ನಾನೂ ನಿಮ್ಮ ಜೊತೇನೇ ಇದ್ದೆ. ನೀವು ನೋಡಲೇ ಇಲ್ವಾ??

  ಪ್ರತಿಕ್ರಿಯೆ
  • ಭಾರತಿ ಬಿ ವಿ

   ಅರೆರೆ! ಅನ್ನಿಸ್ತು ನೀವೇ ಅಂತ
   ಆಮೇಲೆ ಇಲ್ಲಿ ಹೇಗೆ ಸಾಧ್ಯ ಅಂತ ಸುಮ್ಮನಾದೆ 😉

   ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: