ಸರೋಜಿನಿ ಪಡಸಲಗಿ ಸರಣಿ 2: ಎಲ್ಲಾದಕ್ಕೂ ಒಂದು ದಾರಿ ಇರ್ತದೆ..

ಈ ಜೀವನದ ಗಾಲಿ ಎತ್ತ ಓಡ್ತದೆ, ಹೆಂಗೆ ಸಾಗ್ತದೆ ಎಂಬ ಅಂದಾಜೇ ಸಿಗದೇ ಇರೋದ್ರಿಂದ ನಾವು ಮುಂದೆ ಸಾಗ್ತಿದ್ದೇವೆ. ಇಲ್ಲವಾದರೆ ದಾರಿ ಸವೆಯೋದು ಕಷ್ಟ. ಅಥವಾ ಮುಂದೆ ಸಾಗಲಾರದೇ ಅಲ್ಲೇ ನಿಂತು ಬಿಡ್ತಿದ್ವೋ ಏನೋ ಯಾರು ಬಲ್ಲರು? ಅದಕ್ಕೇ ಏನೋ ಆ ಸೃಷ್ಟಿಕರ್ತ ಎಲ್ಲರ  ಜೀವನದಲ್ಲೂ ದೂರದಲ್ಲಿ ಆಸೆಯ ಮಿಣುಕು ದೀಪ ಒಂದನ್ನು ಬೆಳಗಿಸಿ ಇಟ್ಟಿರತಾನೆ. ಬಲು ಜಾಣ ಆತ. ಅದೇ ಆಸೆಯ ಮಿಣುಕು ದೀಪದ ಬೆಳಕು ಕಂಡೂ ಕಾಣದ ನಗೆ ಮಿಂಚನ್ನು ನನ್ನ ಮುಖದಲ್ಲಿ ಮೂಡಿಸಿತ್ತು ಅನಿಸ್ತದೆ, ನಮ್ಮ ತಿಳವಳ್ಳಿಯ ಮೊದಲ ಭೇಟಿ ಮುಗಿಸಿ ಮರಳಿ ಬರುವ ದಾರಿಗುಂಟ. ಬಂಕಾಪುರ ತಲುಪಿ ಮಕ್ಕಳನ್ನು ನೋಡಿದಾಗ ಅದರ ಪ್ರಕಾಶ ಚೆನ್ನಾಗೇ ಮಿಂಚಿ ಮಾಮೂಲಿನ ನನ್ನತನಕ್ಕೆ ಮರಳಿ ನಾನು ನಾನಾಗಿದ್ದೆ ಮತ್ತೆ.

ತಿಳವಳ್ಳಿ ಮಲೆನಾಡಿನ ಮಡಿಲಲ್ಲಿರುವ ಹಳ್ಳಿಯಾದ್ರಿಂದ ಊರು ಬಲು ಸುಂದರ. ಅಲ್ಲಿಗೆ ಮುಟ್ಟುವ ದಾರಿಯೂ ಹಾಗೇ. ಹಾನಗಲ್ಲ ದಾಟಿ ಮಕರವಳ್ಳಿ ಕ್ರಾಸ್ ದಾರಿ ಸೇರಿದ್ವಿ ಅಂದರೆ ಪೂರ್ತಿ ಕಾಡಲ್ಲೇ ಪ್ರವೇಶಿಸಿದ ಅನುಭವ. ನನ್ನ ನಿಸರ್ಗಪ್ರೇಮ ಎಚ್ಚರಾಗಿ ಒಂದು ಹೊಸ ಲೋಕ ನಿರ್ಮಾಣ ಆಯ್ತು. ಮಕರವಳ್ಳಿ ಕ್ರಾಸ್ ನಿಂದ ತಿಳವಳ್ಳಿ ಸುಮಾರು 14-15 ಕಿ.ಮೀ. ದೂರ. ಅಲ್ಲಿಂದ ಹೊಂಕಣ ದಾಟೀನೇ ನಾವು ತಿಳವಳ್ಳಿಗೆ ಹೋಗಬೇಕು. ಹೊಂಕಣದ ನದಿ ದಾಟಿದ್ರೆ ತಿಳವಳ್ಳಿ ಬಂದಂತೆಯೇ ಲೆಕ್ಕ.

ಕುಲಕರ್ಣಿ ಸಿಸ್ಟರ್ ಹೇಳಿದ ಹೊಂಕಣದ ದಾರಿಯಲ್ಲೇ ಸಾಗಬೇಕು ನಾವು ತಿಳವಳ್ಳಿಗೆ. ನಮ್ಮ ಹಿರಿಯರು ಎಷ್ಟು ಜಾಣತನದಿಂದ ಈ ಗಾದೆ ಮಾತು, ಹೇಳಿಕೆಗಳನ್ನು ಮಾಡಿದಾರಲ್ಲ ಅನ್ಕೊಂಡೆ ನಾ. ಮಕ್ಕಳ ಕುತೂಹಲ ಭರಿತ  ಪ್ರಶ್ನೆಗಳಿಗೆಲ್ಲ ನನ್ನ ಕಲ್ಪನೆಯ ಬಣ್ಣವನ್ನೂ ಬಳಿದು ತಿಳವಳ್ಳಿ ಅಂದರೆ ಸುಂದರವಾದ ಪುಟ್ಟ ಊರು ಅಂತ ಮನದಟ್ಟು ಮಾಡಿಸಿದಾಗ ಅವಕ್ಕೂ ಖುಷಿ ಆಯ್ತು. ದೊಡ್ಡ ಮಗ ಅಂತೂ ತನ್ನ ‘ಉನ್ನತ ವ್ಯಾಸಂಗಕ್ಕಾಗಿ’ ನನ್ನ ತೌರೂರಿನಲ್ಲಿದ್ದ. ಇಲ್ಲಿ ನನ್ನ ಮಗಳು ಮತ್ತು ಚಿಕ್ಕಮಗ ನಮ್ಮೊಂದಿಗೆ. ಅವರು ಅಲ್ಲಿನ ತಮ್ಮ ಸ್ನೇಹಿತರ ದಂಡು, ಆ ದೊಡ್ಡ ಕ್ಯಾಂಪಸ್ ಬಿಟ್ಟು ಹೊರಡಲು ಅವರಲ್ಲಿ ಒಂದು ಹುರುಪು, ಉತ್ಸಾಹ ತುಂಬುವ ಮಟ್ಟಿಗೆ ನಾನೂ ತಯಾರಾಗಿದ್ದೆ.

ನಮಗೆ‌ ಬಂಕಾಪುರ ಬಿಟ್ಟು ಹೊರಡಲು ಇನ್ನು ಕೇವಲ ಒಂದು ವಾರವಷ್ಟೇ ಟೈಂ ಉಳಿದಿತ್ತು. ಪ್ಯಾಕಿಂಗ್ ಕೆಲಸ ಭರದಾಂಡ ನಡೆದು ತಿಳವಳ್ಳಿಯ ಕಾಳಜಿ ಸ್ವಲ್ಪ ದೂರ ಸರಿದು ಹೊಸದೊಂದು ದಾರಿಯತ್ತ ಕಣ್ಣು, ಮನಸ್ಸು ಆಗಾಗ ಹೊರಳುತ್ತಿತ್ತು. ಕೊನೆಗೂ ಆ ದಿನ – ನಾವು ಬಂಕಾಪುರ ಬಿಡುವ ದಿನ ಬಂದೇ ಬಿಟ್ಟಿತು. ಯಾವುದೇ ತೋರಿಕೆಯ ಆಡಂಬರದ ಬೀಳ್ಕೊಡುಗೆ ಅದಲ್ಲ. ಜನರಿಂದ ಆಸ್ಪತ್ರೆಯ ಆವರಣ ತುಂಬಿ ಹೋಗಿತ್ತು. ಹಾಗೇ ನಮ್ಮ ಮನವೂ ತುಂಬಿ ಬಂದಿತ್ತು. ಆ ಬಯಲು ಸೀಮೆಯ ವೈಶಾಲ್ಯವನ್ನು ಬಿಟ್ಟು, ಹಸಿರು ತುಂಬಿದ್ದರೂ , ಬೆಟ್ಟ ಗುಡ್ಡಗಳಿರುವ  ಕಾಡನ್ನು ಪ್ರವೇಶಿಸುತ್ತಿದ್ದೆವೆಂಬ ಭಾವನೆ ಯಾಕೋ ಫಳಕ್ಕನೇ ಮಿಂಚಿ ಮರೆಯಾಯ್ತು. ತುಂಬಿನಿಂದ ಕಣ್ಣೀರಲ್ಲೇ ಆ ಹಸಿರು ಸಿರಿಯ ಸೌಂದರ್ಯ ಮಿನುಗಿ ಅಳುಕು ಕೊಂಚ ಮರೆಯಾದಂತಾಗಿ, ಅಗಮ್ಯದತ್ತ ನೆಟ್ಟ ದೃಷ್ಟಿಯೊಡನೆ ನಡೆದೆವು ತಿಳವಳ್ಳಿಯತ್ತ.

ಸಾಮಾನು ತುಂಬಿದ ಲಾರಿಯ ಜೊತೆ ರಾಮಣ್ಣ, ಸೀತವ್ವ ಸೋಮಣ್ಣ ಮುಂದೆ ಹೋದ್ರು. ನಾವು ಜೀಪಿನಲ್ಲಿ ಅವರ ಹಿಂದೆ. ನಾವಲ್ಲಿಂದ ಹೊರಟಿದ್ದು ಬೆಳಗಿನ ಒಂಬತ್ತು ಗಂಟೆಗೆ. ಅಂದರೆ ಊಟದ ಸಮಯಕ್ಕೆ ಅಲ್ಲಿಗೆ ತಲುಪುವ ನಿರೀಕ್ಷೆ. ಬಂಕಾಪುರಕ್ಕಿಂತ  ಅಧ್ವಾನ್ನ ತಿಳವಳ್ಳಿ. ಚಿಕ್ಕ ಪುಟ್ಟ ಹೋಟೆಲ್ ಗಳಿದ್ದವು. ಆದರೆ ನಮಗೆ ಎಲ್ಲಾ ಹೊಸದು. ನಾವಿಬ್ಬರು, ನನ್ನ ಎರಡು ಮಕ್ಕಳು, ರಾಮಣ್ಣ, ಸೋಮಣ್ಣ , ಸೀತವ್ವ, ಡ್ರೈವರ್ ಬಿಸ್ತಿ ಇಷ್ಟು ಜನರ ಊಟದ ಯೋಚನೆ ಮಾಡಬೇಕಿತ್ತು.

ಯಾರ ಗುರುತು- ಪರಿಚಯ ಇರದ ಊರು, ಅಂಥ ಮನೆ! ಸ್ವಲ್ಪ ಅಳುಕು ಇದ್ದೇ ಇತ್ತು.ಅದಕ್ಕೇ ಅಲ್ಲಿಂದಲೇ ತಯಾರಿ ಮಾಡಿಕೊಂಡೇ ಬಂದಿದ್ದೆ. ಕುಕ್ಕರ್ ಡಬ್ಬಿಗಳಲ್ಲಿ ಅಕ್ಕಿ, ಬೇಳೆ, ತರಕಾರಿ ಹೋಳುಗಳನ್ನೂ ಹೆಚ್ಚಿ ಹಾಕಿ ಕುಕ್ಕರ್ ಮುಚ್ಚಿ ಬ್ಯಾಗ್ ನಲ್ಲಿಟ್ಟು ಕೊಂಡಿದ್ದೆ ನಮ್ಮ ಜೊತೆಗೇ. ಗ್ಯಾಸ್ ಸ್ಟೌ, ಸಿಲಿಂಡರ್ ನೂ ನಮ್ಮ ಜೊತೆಗೇ, ಒಂದು ಮುತ್ತುಗದೆಲೆಯ ಕಟ್ಟು. ಅಲ್ಲಿಳಿದ ಮೇಲೆ ಸಾಮಾನು ಇಳಿಸೋದ್ರಲ್ಲಿ ಕುಕ್ಕರ್ ಕೂಗಿಸೋ ತಯಾರಿ ನಂದು. ಅಲ್ಲೇ ಹಿತ್ತಿಲು ಬಾವಿಯ ನೀರು ಸಿಹಿನೇ ಇತ್ತು. ಯಾರಾದ್ರೂ ಒಂದು ಕೊಡ ನೀರು ಸೇದಿ ಕೊಟ್ರೆ ಸಾಕಿತ್ತು.

ಈಗ ಮಕ್ಕಳನ್ನು ಅಲ್ಲಿನ ವಾತಾವರಣ, ಸ್ಥಿತಿ ಗತಿಗೆ ಹೇಗೆ ಹೊಂದಿಸೋದು ಅನ್ನೋದು ದೊಡ್ಡ ಯೋಚನೆ ಆಗಿತ್ತು ನಂಗೆ. ಮಗಳು ನಾಲ್ಕನೇ ಕ್ಲಾಸ್, ಮಗ ಎರಡನೇ ಕ್ಲಾಸ್. ಶಾಲೆ ಹೇಗೋ. ಈ ಎಲ್ಲ ಯೋಚನೆಗಳ ತಲೆಬಿಸಿಯಲ್ಲಿ ನಾವು ಮಕರವಳ್ಳಿ ಕ್ರಾಸ್ ದಾರಿ ಸೇರಿದ್ದೇ ಗೊತ್ತು ಆಗಲಿಲ್ಲ ನಂಗೆ. ಅಲ್ಲಿಯ ದಟ್ಟ ಕಾಡು, ಹಸಿರನ್ನು ತುಂಬ ಖುಷಿ, ಬೆರಗಿನಿಂದ ನೋಡ್ತಿದ್ರು ಮಕ್ಕಳು. ಆ ಹಸಿರು ಕಾಡಿನ ನಡುವೆ ಒಂದು ಜಿಂಕೆ ಹಿಂಡು ಜಿಗಿದು ಓಡಿ ಹೋದದ್ದನ್ನು ಕಂಡು ಅವಕ್ಕೆ ಬಲು ಅಚ್ಚರಿ, ಖುಷಿ. ಮಧ್ಯೆ ಮಧ್ಯೆ ತಮಗೆ ತಿಳಿದ ಹಾಗೆ ಕಾಮೆಂಟ್ ಬೇರೆ! ನನ್ನ ಮನವೂ ಕೊಂಚ ಹಗುರವಾಗಿ, ಅಲ್ಲಿಳಿದ ಮೇಲಿನ ಕೆಲಸಗಳ ಪ್ಲಾನ್ ನಲ್ಲಿ ಮುಳುಗಿ ಹೋದೆ. ಸೀತವ್ವ ಸ್ವಲ್ಪ ದಿನ ಜೊತೆಗೆ ಇರ್ತಾಳೆ ಎಂಬುದೊಂದು ಸಮಾಧಾನದ ವಿಷಯವಾಗಿತ್ತು.

ಇದ್ದಕ್ಕಿದ್ದಂತೆ ಬಿಸ್ತಿ ಬ್ರೆಕ್ ಹಾಕಿದಾಗ ಕೆಟ್ಟ ಸದ್ದು ಮಾಡುತ್ತಾ ಜೀಪು ನಿಂತಿತು. ಆ ಜೆರ್ಕ್ ಗೆ ನಾ ಮುಂದಕ್ಕೆ ವಾಲಿ ಒಮ್ಮೆಲೇ ಈ ಲೋಕಕ್ಕೆ ‌ಮರಳಿದೆ. ‘ಏನಾಯ್ತು’ ಅಂದೆ ಗಾಬರಿಯಿಂದ. ನನ್ನ ಪತಿ ಏನೂ ಮಾತಾಡಲಿಲ್ಲ. ಬಿಸ್ತಿ ಕೈಚಾಚಿ ರಸ್ತೆಯೆಡೆ ತೋರಿಸಿದ. ಮಕ್ಕಳೂ ಎದ್ದೆದ್ದು ಬಗ್ಗಿ ಬಗ್ಗಿ ನೋಡಿ ‘ ಅಮ್ಮಾ’ ಅಂತ ಭಯದಿಂದ ನನ್ನ ಗಟ್ಟಿಯಾಗಿ ಹಿಡಕೊಂಡ್ರು. ನಾ ಅತ್ತ ನೋಡಿದಾಗ ನನ್ನ ಕಣ್ಣೂ ಇಷ್ಟಗಲ ಆಗಿ ಭಯದಿಂದ ನಡುಗಿದೆ ಒಂದು ಕ್ಷಣ. ಅಲ್ಲಿ ರಸ್ತೆಯ ಮೇಲೆ ಅಡ್ಡಲಾಗಿ ಇಷ್ಟು ದಪ್ಪದ, ಕರ್ರಗೆ ಮಿಂಚುವ ಹೆಬ್ಬಾವು! ಅದರ ತಲೆ – ಬಾಲ ಒಂದೂ ಕಾಣ್ತಿಲ್ಲ, ಅಷ್ಟುದ್ದದ ಹಾವು ಅದು! ನಾ ಹೆಬ್ಬಾವು ನೋಡಿದ್ದು ಅದೇ ಮೊದಲು.

ಆ ದಾರಿಯಲ್ಲಿ ವಾಹನಗಳ ಓಡಾಟವೂ ತುಂಬಾ ಕಮ್ಮಿ- ಇಲ್ಲವೇ ಇಲ್ಲ ಎನ್ನುವಷ್ಟು. ಹೀಗಾಗಿ ಆ ಹೆಬ್ಬಾವು ಬಿಸಿಲಿಗೆ ಮೈಯೊಡ್ಡಿ  ಹಾಯಾಗಿ ಮಲಗಿತ್ತು. ಮಾಡೋದೇನೀಗ? ನಮ್ಮ ಜೀಪ್ ನಿಂದ  8-10 ಫೂಟ್ ನ ಅಂತರದಲ್ಲಿ ಆ ಕರೀ ಹೆಬ್ಬಾವು ದಾರಿಗೆ ಅಡ್ಡವಾಗಿ ಮಲಗಿದೆ. ಹೋಗೋದು ಹೇಗೆ ಈಗ? ಏನು ಎಂತ ಒಂದೂ ತಿಳಿಯದ ಸ್ಥಿತಿ. ಪೂರ್ತಿ ದಾರಿ, ಕಣ್ಣು ಹರಿದಷ್ಟು ದೂರ ಹಿಂದಕ್ಕೂ ಮುಂದಕ್ಕೂ ಏಕದಂ ಸ್ತಬ್ಧ, ನಿಶ್ಯಬ್ದ! ಆ ಹಾವು ಸರಿದು ಹೋಗುವ ದಾರಿ ಕಾಯುತ್ತಾ ನಾವೂ ಹಾಗೇ ಸ್ತಬ್ಧ, ನಿಶ್ಯಬ್ದವಾಗಿಯೇ ಇರಬೇಕಾಯ್ತು. ಚೀರದಂತೆ ಮಕ್ಕಳನ್ನು ಗಟ್ಟಿಯಾಗಿ ತಬ್ಬಿ ಹಿಡಿದುಕೊಂಡು ಕುಳಿತೆ.

ಸುಮಾರು ಅರ್ಧಗಂಟೆ  ಹೀಗೆಯೇ ಕಳೀತು. ನಮ್ಮದೇ ಪುಣ್ಯವೋ ಏನೋ ಅದು ಮೆಲ್ಲಗೆ ತೆವಳುತ್ತಾ ಕಾಡಿನೊಳಗಡೆಯತ್ತ ಚಲಿಸಿತು. ಅದು ಸರಿದು ಹೋಗಲು ಮತ್ತೆ ಸುಮಾರು ಅರ್ಧ ಗಂಟೆಯೇ ಬೇಕಾಯ್ತು. ಅಬ್ಬಾ ಎಂದು ಉಸಿರು ಬಿಟ್ರೂ ಇನ್ನೊಂದು ಯೋಚನೆ ಕಾಡಲಾರಂಭಿಸಿತು. ನಾವಿರಬೇಕಾದ ಆ ಮನೆಯ ಹೆಂಚಿನ  ಸಂದಿಯಲ್ಲೂ ಹಾವು ಹರಿದಾಡಿಯಾವೇ ಅಂತ. ಈ ವಿಷಯ ತಲೆಗೆ ಹೊಳೆದಿದ್ದೇ ಇಲ್ಲ! ಏನೂ ತಿಳಿಯದೇ ಕಣ್ಮುಚ್ಚಿ ನಮ್ಮನೆ ದೇವರಲ್ಲಿ ಪ್ರಾರ್ಥಿಸಿ ಉಸಿರು ಬಿಟ್ಟೆ ನೀಳವಾಗಿ. ಜೀಪ್ ಮೆಲ್ಲಗೆ ಚಲಿಸಿ ಮುಂದೆ ಸಾಗಿತು. ಹೊಂಕಣಾ ದಾಟಿ ತಿಳವಳ್ಳಿ ಪ್ರವೇಶಿಸಿ ಆ ಮನೆ ಮುಂದೆ ನಿಂತಿತು. ಮಕ್ಕಳಿಗೋ ಕುತೂಹಲ. ಅತ್ತಿತ್ತ ನೋಡುತ್ತಾ  ಕೆಳಗಿಳಿದರು.

ಹೌದು, ಮಕ್ಕಳು ಕೆಳಗಿಳಿದರು. ಒಮ್ಮೆ ನನ್ನತ್ತ ಒಮ್ಮೆ ಮನೆಯತ್ತ, ಒಮ್ಮೆ ಸುತ್ತಲೂ ನೋಡುತ್ತ ಮನೆ ಒಳ ಹೊಕ್ಕರು ನನ್ನ ಮಕ್ಕಳು! ಬಿಸ್ತಿ ಜೀಪ್ ನಲ್ಲಿಯ ನಮ್ಮ ಸಾಮಾನೆಲ್ಲ ಒಳಗೆ ತಂದು ಇಡೋಷ್ಟ್ರಲ್ಲಿ ನಮ್ಮ ಸಾಮಾನು ತುಂಬಿದ ಲಾರೀನೂ ಬಂದು ನಿಂತಾಯ್ತು. ತಿಳವಳ್ಳಿಯ ಆಸ್ಪತ್ರೆಲಿ ಆಯಾ ಇರಲಿಲ್ಲ. ಮೂರು ಜನ ಮೇಲ ಅಟೆಂಡರ್ಸ ಇದ್ರು. ಅವರೂ ಬಂದಿದ್ರು. ಭರಮಣ್ಣ, ಅಲ್ಲಿನ ಒಬ್ಬ ಅಟೆಂಡರ್, ಅವನಿಗೆ ಹೇಳಿ ಒಂದು ಕೊಡ ನೀರು ತರಿಸಿಕೊಂಡೆ. ಸೀತವ್ವ ಒಳಗೆ ಬಂದು ಸುಮ್ಮನೇ ನಿಂತಳು ನನ್ನ ಕಡೆ ನೋಡುತ್ತಾ. ನಾ ನಕ್ಕು ಯಾಕ ಸೀತವ್ವಾ ಏನಾತು ಅಂದೆ. ಏನೂ ಹೇಳಲಿಲ್ಲ ಆಕೆ. ನಾನೂ ಮತ್ತೆ ಏನೂ ಕೇಳಲಿಲ್ಲ. ಬಿಸ್ತಿ ಜೋಡಿಸಿಟ್ಟ ಗ್ಯಾಸ್ ಸ್ಟೌವ್ ಮೇಲೆ ಆ ಹಿಂದಿನ ಕೊನೇಲಿದ್ದ ಅಡಿಗೆ ಕೋಣೆಯಲ್ಲಿ, ಒಂದು ಕಡೆ ಕುಕ್ಕರ್ ಇಟ್ಟು ಇನ್ನೊಂದು ಸ್ಟೌವ್ ಮೇಲೆ ಚಹಾಕ್ಕಿಟ್ಟೆ. ಸೀತವ್ವನೂ ಮೆಲ್ಲಗೆ ಬಂದು ಕೈ ಜೋಡಿಸಿದ್ಲು ನನ್ನ ಜೊತೆ ಕೆಲಸಕ್ಕೆ.

ಸುಮಾರು ನಾಲ್ಕೂವರೆ ತಾಸಾಗಿತ್ತು ನಾವು ಬಂಕಾಪುರ ಬಿಟ್ಟು. ಆ ಹೆಬ್ಬಾವಿನ ಸಲುವಾಗಿ ಒಂದು ತಾಸು ಲೇಟಾಯ್ತು. ಮಕ್ಕಳೂ ಹಸಿದಿದ್ರು. ಆದರೂ ಕುತೂಹಲ ಅವಕ್ಕೆ. ಒಳ- ಹೊರಗೆ ಸುತ್ತಾಡಿ ಬಂದು ನನ್ನ ಸುತ್ತ ಸುಳಿದಾಡಲಾರಂಭಿಸಿದ್ರು. ನನ್ನ ಮಗಳಿಗೆ ಏನೋ ಹೇಳಬೇಕಾಗಿತ್ತು. ಅದು ತಿಳೀತು ನಂಗೆ. “ಏನು ಪುಟ್ಟಾ, ಏನು ಬೇಕು? ಆ ಡಬ್ಬದಲ್ಲಿ ಬೇಸನ್ ಲಾಡು ಇದೆ, ಚೂಡಾ ಇದೆ. ನೀನೂ ತಗೋ, ತಮ್ಮನಿಗೂ ಕೊಡು” ಅಂದೆ. ಬೇಡ ಅಂತ ತಲೆ ಅಲ್ಲಾಡಿಸಿ ಹಾಗೇ ನಿಂತ್ಲು. ‘ಮತ್ತೆ ಏನು ಹೇಳು’ ಅಂದೆ. “ಅಮ್ಮಾ ಮನಿ ಹೆಂಗ ಅದಲಾ? ಹೆಂಗಮ್ಮಾ ಇಲ್ಲಿ ಇರೂದು? ಈ ಹೆಂಚು ಎಷ್ಟರೇ ಕರ್ರಗ, ಹೊಲಸ ಅವಲಾ? ಇಲ್ಲೇ ಅಡಿಗಿ ಮಾಡೂದ? ಛೀ ಅಂದ್ಲು!” ಇಲ್ಲವಾ ಈಗಷ್ಟೇ ಇಲ್ಲಿ ಮಾಡ್ತೀನಿ. ಆ ಮೇಲೆ ಆ ರೂಂ ನ್ಯಾಗ ಎಲ್ಲಾ ಹೊಂದಿಸಿಕೋತೀನಿ” ಅಂದೆ. ಸುಮ್ಮನೇ ಹೊರಗೆ ಹೋದ್ಲು. ಏನು ಹೇಳಬೇಕೋ ನನಗೂ ಯಾಕೋ ತಿಳೀಲಿಲ್ಲ.

ಹೊರಗೆ ಲಾರಿ unload ಮಾಡಲು ಹರಸಾಹಸ ನಡೆದಿತ್ತು. ಯಾವುದೋ ಒಂದು ಕಗ್ಗಂಟು ಬಿಚ್ಚಲಾಗದೇ ಹೆಣಗಾಡುತ್ತಿದ್ರು ಅವರೆಲ್ಲಾ. ಯಾಕೋ ಆ ಲಾರಿಗೆ ಖಾಲಿ ಆಗೋ ಮನಸ್ಸಿಲ್ಲೋ ಏನೋ! ನನ್ನಂತೆಯೇ ಎಲ್ಲಾ ತನ್ನೊಳಗೇ ತುಂಬಿಕೊಂಡು ನಿಲ್ಲಬೇಕೆಂದು ಅನಕೊಂಡಿದೆಯೋ ಏನೋ ಅಂತ ಅನಿಸ್ತು ಒಂದು ಗಳಿಗೆ. ಆದರೆ ಮರುಕ್ಷಣವೇ ಬಂಕಾಪುರದಿಂದ ಬೆಳೆದು ಬಂದಿದ್ದ ನಾನು ಈಗ ಇನ್ನೊಂದು ಸ್ವಲ್ಪ ಬೆಳೆದಂತೆನಿಸಿ ಹೊಸ ಪರಿಸರದಲ್ಲಿ ಹೊಸಬಳಾಗಿ ಇನ್ನಷ್ಟು ಬೆಳೀಬೇಕು ನಾ ಅಂತ ನಿಡಿದಾದ ಉಸಿರು ಬಿಟ್ಟಾಗ ಏನೋ ಹಗುರ ಭಾವ.

ಅಲ್ಲಿ ಹೊರಗೆ ಆ ಲಾರಿಯ ಕಗ್ಗಂಟು ಬಿಚ್ಚಿ ಸಾಮಾನು ಇಳಿಸಲಾರಂಭಿಸಿದ್ರು ಅವರೆಲ್ಲ. ನನ್ನ ಮಗ ಓಡಿ ಬಂದು- “ಅಮ್ಮಾ ಲಾರಿ ತುಂಬ ಭಾರೀ ಭಾರ ಸಾಮಾನ ಅವ. ಆ ಭಾರ ಇಳಿಸೋದ ಹೆಂಗ ಅಮ್ಮಾ?” ಅಂದ. ಮಗಳು “ಇಷ್ಟು ಸಣ್ಣ ಬಾಗಲಾದಾಗ ದೊಡ್ಡ ಸಾಮಾನೆಲ್ಲ ಹೆಂಗ ಹಾಯ್ತಾವ ಅಮ್ಮಾ? ಆ ಕಪಾಟಿನ ಕನಡಿ ಒಡದ್ರ? ಶೋ ಕೇಸ್ ನ ಗ್ಲಾಸು?” ಅಂದ್ಲು. ಮಕ್ಕಳ ಪ್ರಶ್ನೆ ಕೇಳಿ ನನಗೇ ಅರ್ಥವಾಗದ ನಗು ಬಂತು ನನಗೆ.” ಎಲ್ಲಾದಕ್ಕೂ ಒಂದು ದಾರಿ ಇರ್ತದೆ” ಅಂತ ನಕ್ಕೆ ನಾ ಏನೋ ಯೋಚಿಸುತ್ತ!

‍ಲೇಖಕರು Avadhi

December 16, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಕಥೆಗಳನ್ನು ಹುಡುಕಿಕೊಂಡು ಹೀಗೆ ಸಾಗುವುದು ಇತ್ತೀಚಿಗೆ ನನ್ನ ರೂಢಿಯೇ ಆಗಿ ಹೋಗಿದೆ. ಕಥೆಯ ಹುಡುಕಾಟವೆಂದರೆ ಅದು ಬದುಕಿನ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This