ಸರೋಜಿನಿ ಪಡಸಲಗಿ ಸರಣಿ 3: ಲೋಕೋ ಭಿನ್ನ ಜನಾಃ..

ಈ ಸೃಷ್ಟಿ ವೈಚಿತ್ರ್ಯಗಳ ಅಗಾಧ ಗೂಡು. ಒಂದರಂತೆ ಇನ್ನೊಂದಿಲ್ಲ. ಅಲ್ಲಿನ ಮಾತನಾಡದ ಮೌನಿ ಗಿಡ ಮರ ಬಳ್ಳಿಗಳು, ಕಿಚಗುಟ್ಟುವ ಪಕ್ಷಿ-ಪ್ರಾಣಿ ಸಂಕುಲದಲ್ಲೇ ಅಷ್ಟೊಂದು ಭಿನ್ನತೆ  ಇರೋವಾಗ ಎಲ್ಲಾನೂ ಹೇಳಬಲ್ಲ, ತನಗೆ ಅನಿಸಿದ್ದನ್ನು ನೇರವಾಗಿ ವ್ಯಕ್ತಪಡಿಸಬಲ್ಲ ಮನುಷ್ಯರಲ್ಲಿ ಅದೆಷ್ಟು ಭಿನ್ನತೆ ಇರಬೇಡ? ಒಂದೂರಿನಂತೆ  ಇನ್ನೊಂದು  ಊರಿಲ್ಲ. ಅಂದ ಮೇಲೆ ಒಂದು ಪ್ರದೇಶದ ಜನರಂತೆ ಇನ್ನೊಂದು ಪ್ರದೇಶದ ಜನರೂ ಇರಬೇಕು ಅಂತೇನಿಲ್ಲವಲ್ಲ? ಲೋಕೋ ಭಿನ್ನ ರುಚಿಃ ಅನ್ನುವಂತೆ ಲೋಕೋ ಭಿನ್ನ ಜನಾನೂ ಇರಲೇ ಬೇಕಲ್ಲ!

ಈ ಊರೂರಿನ ತಿರುಗಾಟ ನನಗೆ ಇದನ್ನು ಬಲು ಚೆನ್ನಾಗಿ ಹೇಳಿ ಕೊಟ್ತು ಅನ್ನೋದ್ರಲ್ಲಿ ಸಂಶಯವೇ ಇಲ್ಲ. ಈ ಗೊತ್ತು ಗುರಿಯಿಲ್ಲದ ತಿರುಗಾಟದ ದಾರಿಯಲ್ಲಿನ ಪ್ರತಿ ಅನುಭವಗಳು ತೋರಿಸಿ ತಿಳಿಸಿ ಕೊಟ್ಟ ಒಂದೊಂದು ಆಯಾಮವೂ ಜೀವನದ ನಿತ್ಯ ಸತ್ಯ. ಜೀವನ ಪರ್ಯಂತದ ಪಯಣದ ದಾರಿ ದೀಪಗಳು ಅನಕೋತೀನಿ ನಾ. ಕಹಿಯೋ-ಸಿಹಿಯೋ, ನೋವೋ-ನಲಿವೋ ಪ್ರತಿಯೊಂದರಲ್ಲೂ ಒಂದು ಪಾಠ, ಒಂದು ಕಲಿಕೆ, ಒಂದು ತಿಳಿವು. ಇದರಿಂದಾಗಿ ಒಂದೊಂದು ದಿನಕ್ಕೂ ಒಂದೊಂಚೂರು ತೆರೆದು ಕೊಳ್ಳುತ್ತಾ ಹೋಯ್ತು ನನ್ನ ಪ್ರಪಂಚ.

ನಾ ನನ್ನ ಮಕ್ಕಳಿಗೆ ಹೇಳಿದ ಮಾತು ಎಲ್ಲಕ್ಕೂ ಒಂದು ದಾರಿ ಇರ್ತದೆ, ನಿಧಾನವಾಗಿ ನಿಜವಾಗ್ತಾ ಹೋಯ್ತು. ತಿಳವಳ್ಳಿಯಲ್ಲಿ ಮೆಲ್ಲ ಮೆಲ್ಲಗೆ ಎಲ್ಲಾದಕ್ಕೂ ಮಾನಸಿಕವಾಗಿ, ದೈಹಿಕವಾಗಿ ಹೊಂದಿಕೊಳ್ಳುತ್ತಾ ಸಾಗಿತು ನಮ್ಮ ಜೀವನ. ಅಷ್ಟು ದೊಡ್ಡ ಕ್ವಾರ್ಟರ್ಸ್ ನಿಂದ ಈ ಚಿಕ್ಕ ಮೂರು ಕೋಣೆಗಳ ಸಂಸಾರಕ್ಕೇ ಒಗ್ಗಿತು ನಮ್ಮ ಬದುಕು. ಮಕ್ಕಳೂ  ಹೊಂದಿಕೊಳ್ಳುವ ದಾರಿಯಲ್ಲಿ ಸಾಗಿದರು.

ನನಗೆ ಬಲು ಹೆಮ್ಮೆ ನನ್ನ ಮಕ್ಕಳ ಅಗಾಧ ತಿಳುವಳಿಕೆಯ ಬಗ್ಗೆ – ಅಲ್ಲಿ ಆ ದೂರದ ನನ್ನ ತೌರಿನಲ್ಲಿ ನನ್ನ ತಂದೆ ತಾಯಿಯೊಂದಿಗೆ ತನ್ನ ತಂದೆ ತಾಯಿಯಿಂದ ದೂರವಾಗಿ ಇದ್ದ ನನ್ನ ದೊಡ್ಡ ಮಗ, ಇಲ್ಲಿ ಗೊತ್ತೇ ಇರದ, ಯಾವುದೇ ಸುಖ ಸಾಧನಗಳಿಲ್ಲದ ಸ್ಥಳಗಳ ಪರಿಸರಕ್ಕೆ ಹೊಂದಿಕೊಂಡು ಹೋಗುತ್ತ ನಮ್ಮೊಡನಿರುವ ಈ ಪುಟ್ಟ ಕಂದಮ್ಮಗಳು. ಅವರ ಈ ಚಿಕ್ಕ ವಯಸ್ಸಿನಲ್ಲೇ ವಿವೇಚನೆಯುಳ್ಳ ನಡವಳಿಕೆಗೂ ಈ ಗೊತ್ತು ಗುರಿಯಿಲ್ಲದ ತಿರುಗಾಟವೇ ಕಾರಣ ಅನಕೋತೀನಿ. ಈ ಇಬ್ಬರೂ ಮಕ್ಕಳೂ ಸಣ್ಣಗೆ ಸ್ನೇಹಿತರ ಬಳಗವನ್ನು ಹೆಚ್ಚಿಸಿಕೊಳ್ಳುತ್ತಾ ಹೋದರು. ಮೂರನೇ ಮನೇಲಿದ್ದ ಸಿಸ್ಟರ್ ಮಕ್ಕಳೂ ನನ್ನ ಮಕ್ಕಳ ವಯಸ್ಸಿನವರೇ. ಪೋಸ್ಟ ಮಾಸ್ತರರ ಮಗಳು ನನ್ನ ಮಗಳಿಗಿಂತ 2-3 ವರ್ಷ ದೊಡ್ಡವಳು. ಆದರೂ ಸ್ನೇಹಕ್ಕೇನೂ ಬಾಧೆ ಬರಲಿಲ್ಲ.

ನಮ್ಮ ಪಕ್ಕದ ಮನೆಯ ಪೋಲೀಸ್ ಅವರ ಮಕ್ಕಳೂ ಸುಮಾರು ಅದೇ ವಯಸ್ಸು. ನಡೀತು ಹೀಗೇ ನಮ್ಮ ಜೀವನ. ಸುರೇಶ ಆಸ್ಪತ್ರೆಗೆ ಸ್ಕೂಟರ್ ನಲ್ಲಿ ಹೋದ್ರೆ 7-8 ನಿಮಿಷಗಳ ದಾರಿ. ನಿಧಾನಕ್ಕೆ ಎಲ್ಲ ಒಂದು ಮೆಟ್ಟಿಗೆ ಕೂತಂತಾದ್ರೂ ನನ್ನ ಮನದಲ್ಲಿ ಒಂದು ಅಳುಕು, ಅಪರಾಧೀ ಭಾವ, ಇಂದಿಗೂ ಮಾಯ ಆಗಿಲ್ಲ. ಅದು ನಮ್ಮ ಜೊತೆ ನಮ್ಮ ಮಕ್ಕಳನ್ನೂ ಎಂಥೆಂಥಾ ಕಷ್ಟದ ಪರಿಸ್ಥಿತಿಗೆ ಸಿಕ್ಕಿಸಿದೆವಲ್ಲಾ ಅಂತ. ಬೇರೆ ದಾರಿ ಇರಲಿಲ್ಲ ಅದರ ಹೊರತು ಅಂತ ನಾನೇ ಸಮಾಧಾನ ಮಾಡ್ಕೋತೀನಿ. ಅಲ್ಲಿನ ಸ್ಕೂಲ್ ಮಾತ್ರ ತುಂಬ ಚೆನ್ನಾಗಿತ್ತು. ಮಗಳದೂ ಅಷ್ಟೇ, ಮಗಂದೂ ಅಷ್ಟೇ. ಅದೊಂದು ಸಮಾಧಾನದ ಸಂಗತಿ ಆಗಿತ್ತು ನಂಗೆ. ಮಗಳು ನಾಲ್ಕನೇ ಕ್ಲಾಸ್, ಮಗ ಎರಡನೇ ಕ್ಲಾಸ್. ಮಗಳ ಸ್ಕೂಲ್ ತುಂಬ ದೂರ, ಊರ ಆರಂಭಕ್ಕೇ, ನಮ್ಮ ಮನೆ ಈ ಕೊನೆಗೆ. ಮಗನ ಸ್ಕೂಲ್ ಮಾತ್ರ ಹತ್ರ ಇತ್ತು.

ತಿಳವಳ್ಳಿಯಲ್ಲಿ ನಾವಿದ್ದದ್ದು 1985ರಿಂದ 1989 ರ ವರೆಗೆ, ಸುಮಾರು ನಾಲ್ಕೂವರೆ ವರ್ಷಗಳು. ನಾ ಈಗಲೇ ಹೇಳಿದಂತೆ ಅದು ತುಂಬು ಮಲೆನಾಡಿನ ಒಂದು ಪುಟ್ಟ ಸುಂದರ ಹಳ್ಳಿ. ಯಾವ ದೊಡ್ಡ ಊರೂ ಹತ್ರ ಇರಲಿಲ್ಲ. ಇದ್ದ ಹತ್ತಿರದ ಊರುಗಳಿಗೂ ಹೋಗುವುದು ಅಷ್ಟು ಸರಳ ಇರಲಿಲ್ಲ. ಹೀಗಾಗಿ ಜನ ತಮಗೆ ಬೇಕಾದ  ಅನುಕೂಲಗಳನ್ನು ತಕ್ಕ ಮಟ್ಟಿಗೆ ಅಲ್ಲೇ ಮಾಡ್ಕೊಂಡಿದ್ರು ತಮಗೆ ಬೇಕಾದ ರೀತಿ ಅಂತ ಅನಿಸ್ತು ನಂಗೆ.

ಲೋಕೋ ಭಿನ್ನ ಜನಾ ಎಂಬಂತೆ ಬಂಕಾಪುರದ ಜನತೆಗೂ, ಇಲ್ಲಿನ ಜನಕ್ಕೂ ಸ್ವಲ್ಪ ವ್ಯತ್ಯಾಸ ಕಂಡು ಬರುತ್ತಿತ್ತು, ಎಂಥದು ಎಂದು ಪಕ್ಕಾ ಗುರುತಿಸಲಾಗದ್ದು. ಅಲ್ಲಿ ನಾವು ದವಾಖಾನೆಯ ಆವರಣದಲ್ಲಿಯೇ ಇದ್ದುದರಿಂದ ನಮಗೆ ಸ್ಥಳೀಕರ ಸಂಪರ್ಕ ಅಷ್ಟಾಗಿ ಬರುತ್ತಿರಲಿಲ್ಲ. ಬರೀ ಪೇಷಂಟ್ ಗಳದ್ದಷ್ಟೇ. ನಮ್ಮದೇ ಒಂದು ಲೋಕ ಇತ್ತು ಅಲ್ಲಿ. ಆದರೆ ಇಲ್ಲಿ ನಾವಿದ್ದದ್ದೂ ಒಂದು ಬಾಡಿಗೆ ಮನೆಯಲ್ಲಿ. ಆದ್ರಿಂದ ನಮಗೆ ಊರಿನ ಸಂಪರ್ಕ ತುಸು ಹೆಚ್ಚೇ ಬರ್ತಿತ್ತು ಇಲ್ಲಿ.

ಇಲ್ಲಿನ ಜನರೂ ಮುಗ್ಧರೇ ಆದರೆ ಆ ಮುಗ್ಧತೆ ಕೊಂಚ ಭಿನ್ನ. ಹೀಗಾಗಿ ತರಹೇವಾರಿ ಅನುಭವಗಳು ನನ್ನ ಗಂಟಿನಲ್ಲಿ! ಅನುಸೂಯಾ ಅಂತ ಒಂದು ಹುಡುಗಿ ಸಿಕ್ಕಿದ್ಲು ಮನೆಗೆಲಸಕ್ಕೆ. ಭರಮಣ್ಣ (ದವಾಖಾನೆಯಲ್ಲಿನ ಒಬ್ಬ ಅಟೆಂಡರ್) ನೀರು ಸೇದಿ  ಕೊಡ್ತಿದ್ದ. ಕೆಲ ದಿನಗಳಲ್ಲಿ ನಲ್ಲಿ ನೀರು ಸರಬರಾಜು ಶುರು ಆಯ್ತು. ಹೀಗಾಗಿ ನೀರಿನದೇನೂ  ಅಷ್ಟು ತಾಪತ್ರಯ ಆಗಲಿಲ್ಲ. ಮಲೆನಾಡು ಅದು, ನೀರೂ ಸಾಕಷ್ಟಿತ್ತು.

ನಾವಿದ್ದ ಮನೆಯ ಹತ್ರ ಮೂಲೆಯಲ್ಲಿ ಒಂದು ಲೈಟ್ ಕಂಬ ಇತ್ತು. ಆದರೆ ಏನು ಸಮಸ್ಯೆಯೋ ಏನೋ, ಆ ಲೈಟೇ ಹತ್ತುತ್ತಿರಲಿಲ್ಲ. ಮನೆ ಮುಂದೆ ನಾವೇ ಬಲ್ಬ್ ಹಾಕಿ ದೀಪ ಹಾಕಬೇಕು ಅಂದ್ರೆ ಅದಕ್ಕೆ ಯಾವ ವ್ಯವಸ್ಥೆಯೂ ಇರಲಿಲ್ಲ. ಹೀಗಾಗಿ ಮನೆ ಮುಂದೆ ಗವ್ವೆನ್ನೋ ಕತ್ತಲು ರಾತ್ರಿ ವೇಳೆ. ಮಲೆನಾಡು-ಹುಳು-ಹುಪ್ಪಡಿಗಳ ಕಾಟ ಜಾಸ್ತಿ. ಸುರೇಶ  ಹಗಲು ರಾತ್ರಿ ಎನ್ನದೆ ಆಸ್ಪತ್ರೆಗೆ ಓಡಾಡಬೇಕಾಗ್ತಿತ್ತು. ಆ ಕತ್ತಲೇಲಿ ಏನಾದರೂ ಹುಳು ಹುಪ್ಪಡಿ ಬಂದ್ರೆ ಅನ್ನೋ ಹೆದರಿಕೆ ನಂಗೆ. ಮಕ್ಕಳೂ ಒಳ ಹೊರಗೆ ಓಡಾಡುತ್ತಿದ್ದರು. ಏನು ಮಾಡೋದು ಅಂತ ಯೋಚನೆಯಾಗಿತ್ತು. ಆ ದಿನ ಅಕಸ್ಮಾತ್ತಾಗಿ ಲೈನ್ಮನ್ ಬಂದ ಡಾಕ್ಟರ್ ಇದ್ದಾರಾ ಎಂದು. ಆಗ ನಾಲ್ಕು ಗಂಟೆ ಆಗಿತ್ತು.

ನನ್ನ ಪತಿ ಊಟ ಮುಗಿಸಿ ಆಸ್ಪತ್ರೆಗೆ ಹೋಗಿದ್ರು. ನಾನು ಆತಗೆ ಹೇಳ್ದೆ – “ಡಾಕ್ಟರು ದವಾಖಾನೆಗೆ ಹೋಗ್ಯಾರ. ನೀ ಬಂದಿ ಭಾಳ ‌ಛಲೋ ಆತ ನೋಡು. ಈ ಮೂಲೆ ಕಂಬದ ಲೈಟ್ ಯಾಕೋ ಹತ್ತೋದೇ ಇಲ್ಲ. ಸ್ವಲ್ಪ ನೋಡಿ ದೀಪ ಹತ್ತೋ ಹಾಗೆ ಮಾಡು. ರಾತ್ರಿ ಡಾಕ್ಟರ್ ಗೆ ಆಸ್ಪತ್ರೆಗೆ ಓಡಾಡ ಬೇಕಾಗ್ತದ. ಈ ದಾರಿ ಉದ್ದಕ್ಕೂ ಕತ್ತಲ ಆಗಿಬಿಡ್ತದ . ಕತ್ತಲದಾಗ ಓಡಾಡೋದು ಕಷ್ಟ” ಅಂದೆ. “ಮೊದಲ ಹೇಳಬಾರದೇನ್ರೀ ಅಕ್ಕಾರ. ಹಂಗೆಲ್ಲಾ ಕತ್ತಲದಾಗ ಹೋಗಬ್ಯಾಡನ್ರಿ ಸಾಹೇಬ್ರಿಗೆ. ಹುಳದ(ಹಾವು) ಕಾಟ ಭಾಳ ಇಲ್ಲಿ. ಅದೆಷ್ಟೊತ್ತಿನ ಕೆಲಸ್ರೀ. ಈಗ ಮಾಡ್ತೀನಿ” ಅಂತ ಹೇಳಿ ಹೋದ. ಮುಂದೆ ಒಂದು ತಾಸಿನಲ್ಲಿಯೇ ಸಾಮಾನು ತಗೊಂಡು ಬಂದು ರಿಪೇರಿ ಮಾಡಿ ಲೈಟ್ ಹತ್ತೋ ಹಾಗೆ ಮಾಡಿದ.

ಮನೆ ಮುಂದೆ ಬೆಳಕು ತುಂಬಿಕೊಂಡ್ತು. ನಾ ನಿರಾಳ ಆದೆ. ಮಾಮೂಲಿನಂತೆ ಪಕ್ಕದ ಮನೆಯ ಪೊಲೀಸ್ ಅವರ ಹೆಂಡತಿ ಬಂದು ಮಾತಾಡ್ತಾ ಕೂತಿದ್ರು. ಲೈಟ್ ಹತ್ತಿದ್ದು  ನೋಡಿ “ನೋಡ್ರಿ ಅಕ್ಕಾರ ಎಷ್ಟು ಪಟ್ಟನ ಕೆಲಸಾ ಮಾಡ್ಯಾನ ನೋಡ್ರಿ. ನಾ ನಮ್ಮ ಯಜಮಾನ್ರಿಗೆ ಹೇಳಿದ್ದೆ, ಡಾಕ್ಟರ್ ಮನಿ ಮುಂದ ಭಾಳ ಕತ್ತಲಾಗ್ತತಿ. ಲೈನ್ಭನ್ನಗ ಹೇಳಿ ಲೈಟ್ ಹಾಕಸ್ರಿ ಅಂತ. ಅವರು ಹೇಳಿದ ಕೂಡಲೇ ರಿಪೇರಿ ಮಾಡೇ ಬಿಟ್ಟಾನ ನೋಡ್ರಿ” ಅಂದ್ರು. ನಾ ಏನೋ ಹೇಳೋಷ್ಟ್ರಲ್ಲಿ ಮನೆ ಮಾಲೀಕರು ಬಂದು “ಅಕ್ಕಾರ ಎಷ್ಟು ಲಗೂನ ಕೆಲಸ ಆಗಿ ಹೋತ ನೋಡ್ರಿ ‌ ನನ್ನ ಮಾತs ಹಂಗ್ರಿ. ನಮ್ಮ ಸಾಹೇಬ್ರ ಮನೀ ಮುಂದ ಕತ್ತಲಾಗೇತೋ ತಮ್ಮಾ, ಒಂಚೂರ ನೋಡು ‌ಅನೂದ್ರಾಗ ಲೈಟ್ ಹಾಕಿ ಹೋಗ್ಯಾನ” ಅಂದ್ರು.

ನನಗೆ ಏನು ಹೇಳಲಿ ಗೊತ್ತೇ ಆಗಲಿಲ್ಲ! ನಾ ನನ್ನ ಮಾತು ನನ್ನಲ್ಲೇ ಉಳಿಸಿಕೊಂಡು ಸಣ್ಣಗೆ ನಕ್ಕು ಹೇಳಿದೆ- “ಛಲೋ ಆತ ನೋಡ್ರಿ. ಯಾರ ಹೇಳಿದ್ದಕ್ಕರೇ ಮಾಡವಲ್ಲನ್ಯಾಕ, ನಮ್ಮ ಮನೆ ಮುಂದೆ ಬೆಳಕಾತು. ಕತ್ತಲಾಗ ಮಕ್ಕಳು, ನಿಮ್ಮ ಸಾಹೇಬ್ರು ಅಡ್ಡಾಡೋದ ತಪ್ಪಿ ನನಗೆ ಕಾಳಜಿ ಕಡೀತು” ಅಂದೆ. ಅವರ ತಮ್ಮಿಂದಲೇ ಈ ಕೆಲಸ ಆತು ಅನ್ನೋ ಭಾವನೆಗೆ ನಾ ಯಾಕೆ ಧಕ್ಕೆ ತರಬೇಕು? ಏನಾಗಬೇಕಾಗಿದೆ ಅದರಿಂದ? ಒಂದೊಳ್ಳೆ ವಿಷಯ ನನ್ನ ಖಜಾನೆಗೆ ಅನ್ಕೊಂಡೆ.

ನಲ್ಲಿ ನೀರಿನ  ಸರಬರಾಜು ಶುರು ಆಗಿದ್ರೂ ನೀರು ಸರೀಗೆ ಬರ್ತಿರ್ಲಿಲ್ಲ. ನಾ ಮತ್ತೆ ಮತ್ತೆ ಭರಮಣ್ಣಗೆ ನೀರು ಸೇದಿ ಕೊಡಪಾ ಅನ್ನಬೇಕಾಗೊದು. ಆ ದಿನ ನೀರು ಬಿಡಲು ಬಂದ ವಾಲ್ವ್ ಮನ್ ಗೆ ಆ ಬಗ್ಗೆ ಹೇಳಿದಾಗ “ಹಿಂಗೇನ್ರೀ ಅಕ್ಕಾರ. ನಂಗ ಗೊತ್ತ ಇರಲಿಲ್ರೀ. ಆತರೀ ಅಕ್ಕಾರ ನೋಡ್ತೀನಿ ಏನಾಗೇತಿ ಅಂತ. ಸರಿ ಮಾಡಿ ಕೊಡ್ತೀನಿ” ಅಂತ ಹೇಳಿ ಹೋದ ಆತ. ಮಾರನೇ ದಿನ ಬಂದು ಪೈಪ್ ಬದಲೀ ಮಾಡಿ ಸರಿ ಆಯ್ತಾ ಅಂತ ನೋಡಿ, ನಾ ಕೊಟ್ಟ ದುಡ್ಡು ಬೇಡ ಬೇಡ ಅನತಾ ತಗೊಂಡು ಹೋದ ಟೀ ಕುಡಿದು. ಸಂಜೆ ಮಕ್ಕಳು ಐದು ಗಂಟೆಗೆ ಸ್ಕೂಲ್ ನಿಂದ ಬಂದು ಹಾಲು-ತಿಂಡಿ ನಡೆದಿತ್ತು ಅವರದು. ನಾ ಹಾಕಿ ಕೊಡೋವಾಗ ಪೋಸ್ಟ್ ಮನ್ ಬಂದು “ಅಕ್ಕಾರ ಏನು ಮಾಡ್ಲಿಕ್ಹತ್ತೀರಿ?” ಅಂದ.

ಅಲ್ಲೇ ಪಕ್ಕದಲ್ಲೇ ಪೋಸ್ಟ್ ಆಫೀಸ್. “ಬಾರಪಾ ಶ್ರೀಪಾದ. ಮಕ್ಕಳಿಗೆ ತಿಂಡಿ- ಹಾಲು ನಡೆಸಿದ್ದೆ. ನೀ ಚಹಾ ತಗೋತಿ ಏನು” ಅಂದೆ. “ಹೇ ಬ್ಯಾಡ್ರೀ. ನಳಾ ರಿಪೇರಿ ಮಾಡಪಾ. ಸಣ್ಣಗೆ ಬರತದ. ಅಕ್ಕಾರಿಗೆ ನೀರಿನ ತ್ರಾಸ ಆಗಗೊಡಬ್ಯಾಡ ನೋಡ ಅಂತ ಒಂದ ಮಾತ ಹೇಳಿದೆ ನಿನ್ನೆ ನೀರು ಬಿಡಾಂವಗ. ಈ ಹೊತ್ತು ಬಂದು ಪೈಪ್ ಬದಲೀ ಮಾಡಿ ಹೋಗ್ಯಾನ ನೋಡ್ರಿ. ಅದನ ಹೇಳಲಿಕ್ಕೆ ಬಂದಿದ್ದೆ” ಅಂದ ಅವನು.”ಭಾಳ ಛಲೋ ಮಾಡಿದಿ ನೋಡಪ್ಪಾ” ಅಂದೆ ನಗು ನುಂಗಿ. ಮತ್ತೆ ಇಲ್ಲೂ ಅದೇ. ಅವರ ಹೆಗ್ಗಳಿಕೆಗೆ ಅಡ್ಡಿ ಯಾಕೆ ಮಾಡಬೇಕು ಅಂತ ಮತ್ತೊಮ್ಮೆ ಅನ್ಕೊಂಡೆ. ಒಳ್ಳೆ ಪಾಠ ಇದು ಅನಿಸ್ತು ನನಗೆ. ಆದರೆ ಈ ಥರದ ಹೋಗಲಿ ಬಿಡು ಅನ್ನೋ ಭಾವ ಕಷ್ಟಕ್ಕೆ ಸಿಕ್ಕಿಸುವ ಪರಿಸ್ಥಿತಿನೂ ತಂದಿಡ್ತಿತ್ತು ಒಮ್ಮೊಮ್ಮೆ.

ನಮಗೆ ಗ್ಯಾಸ್ ಸಿಲಿಂಡರ್ ಹಾವೇರಿಯಿಂದ ತರಬೇಕಾಗ್ತಿತ್ತು ಬಂಕಾಪುರದಲ್ಲೂ ಅಷ್ಟೇ. ಅದನ್ನೇ ಇಲ್ಲಿಯೂ ಮುಂದುವರಿಸೋದಿತ್ತು. ಅಲ್ಲಿ ರಾಮಣ್ಣ ತಂದು ಕೊಡ್ತಿದ್ದ. ಈಗ ಇಲ್ಲಿ ಭರಮಣ್ಣ “ನೀವೇನೂ ಕಾಳಜಿ ಮಾಡಬ್ಯಾಡ್ರಿ ಅಕ್ಕಾರ. ನಾ ತಂದ ಕೊಡ್ತೀನಿ. ನಂಗೆಲ್ಲಾ ಗೊತ್ತೈತಿ ತಗೋರಿ” ಅಂತ ಹೇಳಿ ಹೊರಟ ಖಾಲಿ ಸಿಲಿಂಡರ್ ತಗೊಂಡು. ಆಗ ನಾ ಅವನಿಗೆ ಹೇಳಿದೆ-“ನೋಡ ಭರಮಣ್ಣಾ ಸೀಲ್ ಚೆಕ್ ಮಾಡಿ ತಗೊಂಡು ಬಾ. ಗ್ಯಾಸ್ ಲೀಕ ಆಗಬಾರದು”.. ಇನ್ನೂ ನನ್ನ ಮಾತು ಮುಗಿದಿರಲಿಲ್ಲ, ಹೇಳಿದ ಆತ- “ಅಷ್ಟ ಗೊತ್ತಿಲ್ಲ ಏನ್ರೀ ಅಕ್ಕಾರ ನಂಗೆ? ಬಲೇ ಹೇಳಾವ್ರು ನೀವೂ. ಅದು ಹಂಗೇನರ ಲೀಕ್ ಆಗ್ತಿದ್ರ ಅಲ್ಲೇ ವೆಲ್ಡಿಂಗ್ ಅಂಗಡ್ಯಾಗ ವೆಲ್ಡಿಂಗ್ ಮಾಡಿಸಿ ಗಟ್ಟಿ ಮಾಡಸೇ ತಗೊಂಡು ಬರ್ತೀನಿ” ಅಂದಾ.

ನನಗೆ ಗಾಬರಿಯಿಂದ ಜೀವ ಹೋಗೋ ಹಾಗಾಯ್ತು. ಗಡಿಬಿಡಿಸಿ ಹೇಳ್ದೆ ಅವನಿಗೆ “ಅಪಾ ಭರಮಣ್ಣಾ ಹಂಗೆಲ್ರೆ ಮಾಡೀ ಮತ್ತ. ಸಿಲಿಂಡರ್ ಫಟ್ ಅಂತ ಹಾರಿ ಬೆಂಕಿ ಹತ್ತೀತು ಎಲ್ಯರೇ. ಸುಮ್ಮನೆ ಎಲ್ಲಾ ಸರಿ ಇದ್ದ ಸಿಲಿಂಡರ್ ನೋಡಿ ತಗೋಂಡ ಬಾ. ಸರಿ ಇರಲಿಲ್ಲ ಅಂದರ ಹಂಗೇ ಬಾ” ಅಂದು ಇನ್ನೊಮ್ಮೆ ಇವನ್ನ ಕಳಿಸೋದು ಬೇಡ ಅನ್ಕೊಂಡೆ. ಆಗಲೇ ಬೇಡ ಅಂದ್ರೆ ಏನನಕೋತಾನೋ ಅನ್ನೋ ಆತಂಕ. ಒಟ್ಟಲ್ಲಿ ಫಜೀತಿ.

ಆ ದಿನ ಆತ ಸಿಲಿಂಡರ್ ತಗೊಂಡು ಬರೋವರೆಗೆ ನನ್ನ ಪರಿಸ್ಥಿತಿ ಹೇಗಿತ್ತು ಅಂತ ಹೇಗೆ ಹೇಳಲಿ? ಈ ರೀತಿಯ ಹೆಚ್ಚುಗಾರಿಕೆ ಗತ್ತು ಕಂಡಾಗ ಅನಕೋತಿದ್ದೆ ನಾ ಇವರೂ ಎಲ್ಲ ಹುಡಿ ರಾಜಕಾರಣಿಗಳೇ ಅಂತ. ಅಲ್ಲಿನ ವಾತಾವರಣ ಹಾಗೇ ಇತ್ತು. ಸರ್ಕಾರಿ ಸೇವೆಯಲ್ಲಿರುವ ವೈದ್ಯರಿಗೆ ಇಂಥ ಹುಡಿ ರಾಜಕಾರಣಿಗಳ ಒತ್ತಡ ಬಹಳ. ಅದರ ಪ್ರಭಾವ ಅವರ ಹೆಂಡತಿಯನ್ನೂ ಕಾಡುತ್ತಿತ್ತು, ಸಣ್ಣಗೆ ಮಕ್ಕಳೂ. ಇಲ್ಲೊಂದು ಘಟನೆ ಹೇಳ್ತೀನಿ.

ಅಲ್ಲೊಂದು ಪ್ರತಿಷ್ಠಿತ ಕುಟುಂಬದ ಹೆಣ್ಮಗಳು ಬಂದು ನನ್ನ ಪರಿಚಯ ಮಾಡಿಕೊಂಡ್ರು. ಡಾಕ್ಟರ ಪತ್ನಿ ಅಲ್ವಾ ನಾನು? ಅವರು ಸಮಾಜ ಕಾರ್ಯ, ಸಣ್ಣಪುಟ್ಟ ರಾಜಕಾರಣ ಅಂತ ಓಡಾಡೋರು. ಆ ದಿನ ಒಂದು ಆತ್ಮಹತ್ಯೆ ಕೇಸ್ ನ ಪೋಸ್ಟ್ ಮಾರ್ಟಂ ಆಗಿತ್ತು, ಆಸ್ಪತ್ರೆಲಿ. ಸಂಜೆ ನಾನು ಪರಿಚಿತರೊಬ್ಬರ ಮನೇಲಿ ಮಗುನ ಹುಟ್ಟು ಹಬ್ಬದ ಕಾರ್ಯಕ್ರಮಕ್ಕೆ ಹೋಗಿದ್ದೆ. ಅಲ್ಲಿ ಆ ಲೇಡಿನೂ ಬಂದಿದ್ರು.

ಔಪಚಾರಿಕ ಮಾತು ಆದ ಮೇಲೆ ಆಕೆ “ಏನ್ರೀ ಅಕ್ಕಾರ, ನಿಮ್ಮ ಡಾಕ್ಟ್ರು ಈ ಹೊತ್ತು ಆ ಮನುಷ್ಯನ ಜೀವ ಇದ್ದಾಗಲೇ ಪೋಸ್ಟ್ ಮಾರ್ಟಂ ಮಾಡ್ಯಾರಂತಲ್ರೀ” ಅಂದ್ರು. ನನ್ನ ತಲೆ ಕೆಟ್ಟು ಹೋಯ್ತು “ನಿಮಗೆ ಹೇಗೆ ಗೊತ್ತು” ಅಂದೆ. “ಹೇ ನನಗೆಲ್ಲಾ ಗೊತ್ತಿರತತ್ರಿ” ಅಂದ್ರು. ನಾ ಹೇಳ್ದೆ ನಯವಾಗಿಯೇ, ಆದರೆ ಸ್ಪಷ್ಟವಾಗಿ.”ಡಾಕ್ಟ್ರು ಇರೋದು ಸಾಯೋರನ್ನ ಬದುಕಿಸಲಿಕ್ಕೆ ಹೊರತು ಬದುಕಿರೋರನ್ನ ಸಾಯಿಸಲಿಕ್ಕಲ್ರಿ ಇಂಥಾ ಮಾತು ನಾ ಕೇಳಿದ್ದು ಇದೇ ಮೊದಲು. ಈ ವಿಷಯ ಸಾಮಾನ್ಯರಿಗೆ ಗೊತ್ತಾಗೋದಲ್ಲ. ಆದ್ರ ನಿಮಗೆ ಅರ್ಥಾಗೇದ ಅನಕೋತೀನಿ. ಇಲ್ಲಾಂದ್ರ ತಿಳ್ಕೊಂಡ ಮಾತಾಡೋದು ಭಾಳ ಛಲೋ. ನಿಮಗೆ ಗೊತ್ತಿರಬೇಕು, ವೈದ್ಯೋ ನಾರಾಯಣೋ ಹರಿಃ ಅಂತಾರೆ. ಆದರೆ ಕಾಯುವ ಆ ದೇವರ ದಾರೀಲಿ ದೆವ್ವಗಳು ಬಂದ್ರೆ ಕಷ್ಟ. ಆತ್ರೀ ಅಕ್ಕಾರ ಮತ್ತ ಸಿಗೋಣಂತ ಬರತೀನಿ” ಅಂತ ಹೇಳಿ ಎದ್ದೆ. ಆಕೆ ಮುಖ ಕಪ್ಪಿಟ್ಟಿತ್ತು. ಆ ಮೇಲೆ ಮನೆಗೆ ಬಂದು ಕ್ಷಮೆ ಕೇಳಿದ್ಲು.”ನಗೆಚಾಟಿಕೆಗೆ ಅಂದನ್ರಿ ಅಕ್ಕಾರ” ಅಂದ್ಲು. ಆದರೂ ನಾ ಭಾಳ disturbed ಆಗಿದ್ದೆ. ಸಲಿಗೆಯಲ್ಲಿ ಅಡ್ಡಾದಿಡ್ಡಿ ಮಾತು ಬರಬಾರದು ಅನ್ನೋ ಒಂದೇ ಕಾರಣಕ್ಕೆ ನಾನು ಊರವರ ಸಂಪರ್ಕ ಸ್ವಲ್ಪ ಕಮ್ಮೀನೇ ಇಟ್ಟುಕೋತಿದ್ದೆ.

ಒಣ ಕೆಮ್ಮಿನ ಈ ರೋಗಕ್ಕೆ ಏನು ಔಷಧಿ ಅಂತ ಯೋಚಿಸಿ ನಕ್ಕು ಸುಮ್ಮನಾಗಿ ಬಿಟ್ಟೆ. ಇದೇನು ಮುಗ್ಧತೆಯ ಪರಮಾವಧಿಯೋ ಅಥವಾ ಇದಕ್ಕೆ ಮತ್ತೆನಾದರೂ ಹೆಸರಿದೆಯೋ ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ ಇನ್ನೂ! ಅದೇನಾದರೂ ಆಗಿರಲಿ, ಸೂಕ್ಷ್ಮ ಪರಿಸ್ಥಿತಿಯನ್ನು ಸಂಬಾಳಿಸಿ ವ್ಯವಹರಿಸಬೇಕು ಎಂಬುದರಲ್ಲಿ ಒಳ್ಳೇ ಟ್ರೇನಿಂಗ್ ಸಿಕ್ತು ನಂಗೆ ಅಲ್ಲಿ ತಿಳವಳ್ಳೀಲಿ. ಅದು ನನಗೆ ಇಂದಿಗೂ ಅಮೂಲ್ಯ ಪಾಠ, ಮುಂದೆಯೂ, ಎಂದೆಂದಿಗೂ! 

‍ಲೇಖಕರು Avadhi

December 17, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸುಧಾ ಆಡುಕಳ ಅವರ ‘ಬಕುಲದ ಬಾಗಿಲಿನಿಂದ’ಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಸುಧಾ ಆಡುಕಳ ಅವರ ‘ಬಕುಲದ ಬಾಗಿಲಿನಿಂದ’ಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಸುಧಾ ಆಡುಕಳ ಅವರ ಪ್ರಬಂಧ ಸಂಕಲನ 'ಬಕುಲದ ಬಾಗಿಲಿನಿಂದ' ೨೦೧೯ನೇ ಸಾಲಿನ ಸಾಹಿತ್ಯ ಅಕಾಡೆಮಿ ಪುರಸ್ಕಾರಕ್ಕೆ ಪ್ರಾಪ್ತವಾಗಿದೆ. ಕರ್ನಾಟಕ...

4 ಪ್ರತಿಕ್ರಿಯೆಗಳು

 1. Shrivatsa Desai

  ಈ ಸರಣಿ-೨ ರ ಗಂಟು ಬಿಚ್ಚಿದಾಗ, ತೆರೆದ Pandora’s Box ತರ ’’ಅಮೂಲ್ಯ, ಅನಿರೀಕ್ಷಿತ’ ವ್ಯಕ್ತಿ, ಅನುಭವಗಳನ್ನು ಕೊಡುತ್ತಿದೆ! ಸಧ್ಯ ದಾರಿಯಲ್ಲಿಯ ’ಸ್ಪೀಡ್ ಚೆಕ್ಕರ್’ ಹೆಬ್ಬಾವಿನ ಧದಕಿಯಲ್ಲೇ ತೆರೆದುಕೊಳ್ಳಲಿಲ್ಲವಲ್ಲ! ಆ ಅನುಭವಗಳನ್ನು ಬದುಕಿನ ಸತ್ಯದೊಂದಿಗೆ ಬೆರೆಸಿ ಹಂಚುವ ಬರಹದ ಕೌಶಲ್ಯದಲ್ಲೇ ಇಂಥ ಸರಣಿಗಳ ಸಾಫಲ್ಯವಿದೆಯೇನೋ ಅಂತ ನನ್ನ ಅನಿಸಿಕೆ. ಇಂದಿನ ೩ ನೆಯ ಅಂಕದಲ್ಲಿ, ಆ ಬಡಪಾಯಿಯನ್ನು ಸಾಯುವ ಮೊದಲೇ ವೈದ್ಯ ನೋಡಿದ್ದರೆ ಆತ್ಮಹತ್ಯೆಯಿಂದ ಉಳಿಸುತ್ತಿರಲಿಲ್ಲವೆ? Post mortem ದ ಅರ್ಥವರಿಯದ ಆ ’ಪ್ರತಿಷ್ಠಿತೆ’ ಹೆಣ್ಣುಮಗಳಿಗೆ ಬಾಯಿ ತೆರೆಯುವ ಮೊದಲು ಅದು ಹೇಗೆ ಹೊಳೆಯಲಿಲ್ಲವೋ? ಆಗಿನ ( ?) ಮಲೆನಾಡಿನ ಜೀವನದ ಸ್ವಾರಸ್ಯಕರವಾದ ಚಿತ್ರಣ ಮುಂದುವರೆಯಲಿ! ಶ್ರಿವತ್ಸ ದೇಸಾಯಿ

  ಪ್ರತಿಕ್ರಿಯೆ
 2. Sarojini Padasalgi

  ತುಂಬಾ ಛಂದದ ಅನಿಸಿಕೆ ತಮ್ಮದು.ಆ ಪುಟ್ಟ ಊರು ತುಂಬಾ ಸುಂದರ.ಅಲ್ಲಿನ ಮಳೆ, ಆ ಮಲ್ಲಿಗೆ , ರಾಶಿ ರಾಶಿ ಹಸಿರಿನಲ್ಲಿ ಮೈಮರೆಯಲು ಅವಕಾಶ ಸಿಗದ ಹಾಗೆ ಅನಾನುಕೂಲ ಗಳು
  . ಆ ಮಳೆಯಲ್ಲಿ ತೊಯ್ದು ನಿಂತ ಮರ ನಾನಾಗಬಾರದೇ ಅಂತ ಅನಿಸುತ್ತಿತ್ತು ನಂಗೆ ಆ ಕಠಿಣ ಪರಿಸ್ಥಿತಿ ಯಲ್ಲೂ.ಈಗ ಅದನ್ನು ನೆನೆದು ಖುಷಿ ಪಡ್ತೀನಿ ಆ ಸೌಂದರ್ಯವನ್ನು.
  ಧನ್ಯವಾದಗಳು ಶ್ರೀವತ್ಸ ದೇಸಾಯಿ ಯವರೇ.

  ಪ್ರತಿಕ್ರಿಯೆ
 3. Sarojini Padasalgi

  ಚಂದದ ಅನಿಸಿಕೆ ತಮ್ಮದು ಶ್ರವಣಕುಮಾರಿಯವರೇ. ತುಂಬು ಹೃದಯದ ಧನ್ಯವಾದಗಳು ನಿಮಗೆ.ಹಾಗೇ ಅವಧಿಗೂ ನನ್ನ ಧನ್ಯವಾದಗಳು ಮತ್ತು ವಂದನೆಗಳು

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: