
ಈ ಬದುಕು ಸಾಗುವ ದಾರಿಯುದ್ದಕ್ಕೂ ಪ್ರತಿ ಗಳಿಗೆಯಲ್ಲೂ ಏನೋ ಒಂದು ಆಶ್ಚರ್ಯವೋ, ನಂಬಲಾಗದ ಘಟನೆಗಳೋ ತಮ್ಮ ತಮ್ಮ ನೆರಳನ್ನು ಹಾಸಿಯೇ ಮುಂದೆ ಸಾಗ್ತಾವೆ. ಅದರ ಅರಿವು ನಮಗೆ ಆ ಕ್ಷಣಕ್ಕೆ ಅಷ್ಟೊಂದು ಮಹತ್ವದ್ದು, ಕಷ್ಟದ್ದು ಅನಿಸದೇ ಸಹಜವಾಗಿಯೇ ನಡೆದು ಬಿಡ್ತೀವಿ, ಇದು ಹೀಗೇ ಇರೋದು ಅನ್ಕೊಂಡು. ಮುಂದೆ ಮುಂದೆ ಸಾಗಿ ಒಂದು ಹಂತಕ್ಕೆ ಬಂದು ತಿರುಗಿ ನೋಡಿದಾಗ, ಅಚ್ಚರಿಯೋ, ಆಘಾತವೋ ಹೇಳಲಾಗದಂಥದ್ದು ಒಂದು ಮಿಶ್ರ ಭಾವ ಉಂಟಾಗಿ, ನಾನೇನಾ ಈ ದಾರಿಗುಂಟ ಸಾಗಿ ಬಂದದ್ದು? ಅದು ಹೇಗೆ ಎದುರಿಸಿದೆ ನಾ ಅದನ್ನೆಲ್ಲಾ? ಆ ಕಗ್ಗಂಟುಗಳನ್ನು ಹೇಗೆ ಬಿಚ್ಚಿ ಪಾರಾದೆ ಎಂಬ ಯೋಚನೆ ಗಾಢವಾಗಿ ಆವರಿಸಿಕೊಳ್ಳುವುದಂತೂ ಖಂಡಿತ.
ನನಗಂತೂ ಇಂತಹ ನೂರಾರು ಪ್ರಶ್ನೆಗಳು ಎಡೆ ಬಿಡದೆ ಕಾಡ್ತಾನೇ ಇರ್ತಾವೆ, ಹಿಂದಿನದನ್ನೆಲ್ಲ ನೆನಪಿಸುತ್ತಾ, ಅದೇ ದಾರಿಯಲ್ಲಿ ನಡೆದು ಬಂದ ನಾನೇ ಅದನ್ನು ನಂಬಲಾಗದಂಥ ವಿಚಿತ್ರ ಮನಃಸ್ಥಿತಿಗೆ ನನ್ನ ದೂಡುತ್ತಾ. ನನ್ನದೇ ಈ ಅಯೋಮಯ ಸ್ಥಿತಿಯಾದರೆ ಇದನ್ನು ಕೇಳಿದ ಎರಡನೇಯವರಿಗೆ? ನಿಜ ಅದೊಂದು ಜೀರ್ಣಿಸಿಕೊಳ್ಳಲಾಗದ ಕಟು ಸತ್ಯ! ಇದನ್ನೆಲ್ಲಾ ಬರೆಯುವಾಗ ನನಗೇ ಗೊತ್ತಿಲ್ಲದಂತೆ ಒಂದು ನಡುಕ ಮೈಯಲ್ಲಿ ತುಂಬಿಕೊಂಡ ಅನುಭವವಾಗಿ ಎಷ್ಟೋ ಸಲ ಅಲ್ಲಿಗೇ ನಿಲ್ಲಿಸಿ ಮತ್ತೆ ಮುಂದುವರಿಸೀನಿ!
ನಾವು ತಿಳವಳ್ಳಿಯಲ್ಲಿದ್ದ ಬಾಡಿಗೆ ಮನೆಯ ಪರಿಸ್ಥಿತಿ ಎಷ್ಟು ವರ್ಣಿಸಿದರೂ, ಬರೆದರೂ ಕಮ್ಮಿಯೇ. ಎಷ್ಟು ಬೇಕೋ ಅಷ್ಟೇ ಸಾಮಾನುಗಳನ್ನು ಬಿಚ್ಚಿ ತೆಗೆದುಕೊಂಡು ಉಳಿದ ಪ್ಯಾಕ್ ಎಲ್ಲಾ ಹಾಗೇ ಇಟ್ಟು ಬಿಟ್ವಿ. ದೂರದ ಆಸೆಯ ಮಿಣುಕು ದೀಪದ ಬೆಳಕಿನ ನೆರಳಲ್ಲಿ. ಹೊರಗಿನ ವ್ಹೆರಾಂಡಾ ಬರೀ ಸಿಟ್ಟೌಟೇ. ನಮ್ಮ ಆ ಎರಡು ದೊಡ್ಡ ಪೆಟ್ಟಿಗೆಗಳ cot, ಎರಡು ಸಿಂಗಲ್ ಸೋಫಾ ಚೇರ್ ಅಷ್ಟೇ ಇಡಲಾಯ್ತು ಅಲ್ಲಿ. ಮಡಿಚಲು ಬರೋವನ್ನೆಲ್ಲ ಮಡಿಚಿಟ್ಟು ದೊಡ್ಡ ಸೋಫಾ ಒಂದನ್ನು ಎರಡನೇ ಕೋಣೆ ಅದೇ Hall cum Dining hall ನಲ್ಲಿ ಇಟ್ಟಿದ್ದಾಗಿತ್ತು. ಮೂರನೇ ಕೋಣೆ ಬೆಡ್ ರೂಂ ಸೇರಿ ಅಡಿಗೆ ಮನೆ. ಇನ್ನುಳಿದಂತೆ ಆ ಎರಡು ಕೋಣೆಗಳಲ್ಲಿ ಸಾಮಾನು ಹಾಗೇ ಕಟ್ಟು ಬಿಚ್ಚಿಸಿಕೊಳ್ಳದೇ ಕೂತಿದ್ವು! ಆ ಮನೆಯ ಒಂದೇ ಒಂದು ಬಾಗಿಲನ್ನೂ ಸರಿಯಾಗಿ ಮುಚ್ಚಲು ಬರ್ತಿರ್ಲಿಲ್ಲ. ಇಷ್ಟು ದೊಡ್ಡ ಕಿಂಡಿ ಬಿಡೋದು. ಆ ಪೊಳ್ಳಿನಿಂದ ಏನು ಬೇಕಾದ್ರೂ ಒಳಗೆ ನುಸುಳಿ ಬರಬಹುದಿತ್ತು. ಹೀಗಾಗಿ ಮೈಯೆಲ್ಲಾ ಕಣ್ಣಾಗಿರಬೇಕಾಗಿತ್ತು ನಾನು.

ತಿಳವಳ್ಳಿಯ ದುಸ್ತರ ದುರ್ಗಮ ಹಾದಿಯತ್ತ ಯಾವ ಅಧಿಕಾರಿಯೂ ತಿರುಗಿ ನೋಡುವ ಸಾಹಸ ಮಾಡುತ್ತಿರಲಿಲ್ಲ. ನಾವು ಗೊತ್ತಾಗದೇ ಸವಣೂರು (ನನ್ನ ಪತಿಯ ಊರು ಅದು) ಹತ್ರ ಅನ್ನೋ ಒಂದೇ ಒಂದು ಕಾರಣಕ್ಕೆ ಆ ಊರಿಗೆ ಬಂದಾಗಿತ್ತು. ಹೀಗಾಗಿ ಅತಿಥಿಗಳ ಹಾವಳಿ, ಚಹಾ-ಕಾಫಿ-ತಿಂಡಿ-ಊಟಗಳ ಸರಬರಾಜಿನ ಗೊಂದಲ, ಗದ್ದಲ ಕಡಿಮೆಯಾಗಿತ್ತು.
ನಮಗೇ ಕುಳಿತು ಮಾತಾಡಲು ಹಾಯಾಗಿ ಕಾಲು ನೀಡಿ ಮಲಗಲು ಸ್ಥಳ ಇರದ ಆ ಮನೆಗೆ ಯಾರನ್ನೂ ಕರೆಯುವ ಸಾಧ್ಯತೆಯೂ ಇರಲಿಲ್ಲ. ಅದಕ್ಕೂ ಮಿಕ್ಕಿ ಯಾರಾದರೂ ಬಂದ್ರೆ ನನಗೆ ನನ್ನ ಸತ್ವ ಪರೀಕ್ಷೆ ನಡೀತಿದೆ ಅನ್ನೋ ಭಾವನೆ ಬರ್ತಿತ್ತು. ಆದರೂ ಸಮರ್ಥವಾಗಿ ನಿಭಾಯಿಸ್ತಿದ್ದೆ. ಇದು ನನಗೆ ತಿಳವಳ್ಳಿ ವಾಸದ ಬಳುವಳಿ, ಇಂದಿಗೂ ನನ್ನ ಕೈ ಬಿಟ್ಟಿಲ್ಲ ಅದು! ಒಟ್ಟಿನಲ್ಲಿ ನವರಸಭರಿತ ಅಂತೂ ಹೌದೇ ಹೌದು, ಅದರ ಜೊತೆಗೆ ಹೊಸ ರಸವೊಂದನ್ನು ಸೇರಿಸಿಕೊಂಡಿದ್ದೆ ನನ್ನ ಜೀವನದಲ್ಲಿ ಅದು ಸಮಯಾನುಸಂಧಾನ ರಸ. (ಇದು ನನ್ನ ನಾಮಕರಣ, ಕ್ಷಮಿಸಿ) ಈ ರಸ ನನ್ನಲ್ಲಿ ಆ ಮನೆಯಲ್ಲಿ ಕ್ಷಣ ಕ್ಷಣಕ್ಕೂ ಉಕ್ಕಿ ನನ್ನ ಅದರಲ್ಲಿ ಮೀಯಿಸುತ್ತಿತ್ತು. ಡಾಕ್ಟರ್ ಸಾಹೇಬ್ರ ಹೆಂಡತಿ, ಮಕ್ಕಳು! ಅವರಿಗೇನು ಕಮ್ಮಿ? ಮಜವಾಗಿ ಆರಾಮಾಗಿ ಇರ್ತಾರೆ ಅನ್ನುವ ಸಾಮಾನ್ಯ ಮಾತಿಗೆ ಒಂದು ಸವಾಲಾಗಿತ್ತು ನಮ್ಮ ಜೀವನ ಶೈಲಿ, ಸ್ಥಿತಿ!
ಯಾವ ಗಳಿಗೆಯಲ್ಲಿ ನನ್ನ ಮನದಲ್ಲಿ ತಿಳವಳ್ಳಿಯ ಹಂಚಿನ ಮನೆ, ತೂಗು ಹಾಕಿದ ಲಾಟೀನು, ಹೆಂಚುಗಳ ಸಂದೀಲಿ ಓಡಾಡೋ ಇಲಿಗಳ ಚಿತ್ರಣ ಮೂಡಿ ಬಂತೋ ಏನೋ! ನಿಜವೇ ಆಗಬೇಕಾ ಅದು? ಕಿಚನ್ ಕಂ ಬೆಡ್ ರೂಂ ಗೆ ಖಡೇಪಾಟ (ಅಟ್ಟ) ಇತ್ತಾದ್ರೂ ರಾತ್ರಿ ಆದಂತೆ ಎಲ್ಲಿಂದ ಆ ಇಲಿಗಳ ದಂಡು ನುಗ್ಗಿ ಬರುತ್ತಿತ್ತೋ ಅನ್ನೋದು ನನಗೆ ಇಂದಿಗೂ ಒಂದು ಒಗಟಾಗಿದೆ.
ರಾತ್ರಿ ಪೂರ್ತಿ ಎಚ್ಚರಾನೇ ಇದ್ದು ಮಕ್ಕಳನ್ನು ಕಾಯಬೇಕಾಗ್ತಿತ್ತು. ಪೇಷಂಟ್ ಗಳ ಕಾಟ, ರಾತ್ರಿ ಎಲ್ಲಾ ನನ್ನ ಪತಿಯ ಓಡಾಟ, ಅದರ ಜೊತೆ ಇಲಿಗಳ ಹರಿದಾಟ, ಒಂದು ಬಾಗಿಲೂ ಸರಿಯಾಗಿ ಮುಚ್ಚಲಾಗದೇ ಪರದಾಟ ಅಬ್ಬಬ್ಬಾ! ನೂರೆಂಟು ಥರದ ಆಟಗಳ, ಸಮಯಾನುಸಂಧಾನ ರಸಗಳ ಮಿಶ್ರಕೂಟ ನನ್ನ ಅಲ್ಲಿನ ಜೀವನ! ಆ ಉಪಯೋಗವಿಲ್ಲದ, ಮೆಟ್ಟಿಲಿಲ್ಲದ ಅಟ್ಟದ ಪ್ರವೇಶದ್ವಾರ ಅಲ್ಲೇ ನಾವು ಮಲಗುವ ಸ್ಥಳದ ಮೇಲೇ ಬರ್ತಿತ್ತು. ಅಲ್ಲಿಂದಲೇ ಆ ಮೂಷಿಕ ದಂಡು ದಾಳಿ ಇಡ್ತದೋ ಏನೋ ಅಂತ ಮಾಲೀಕರಿಗೆ ದುಂಬಾಲು ಬಿದ್ದು ಅದನ್ನೂ ಮುಚ್ಚಿಸಿ ಆಯ್ತು. ಆದರೂ ನಿಲ್ಲಲಿಲ್ಲ ಆ ಇಲಿಗಳ ಕಾಟ. ಗೊತ್ತಾಯ್ತು ಕೊನೆಗೆ ಎಲ್ಲಿಂದ ಬರತಾವೆ ಅನ್ನೊದು – ಈ ಕೋಣೆಯ ನಂತರ ಬರುವ ಆ ಕತ್ತಲು ಕೋಣೆ, ಹಿಂದಿನ ಬಚ್ಚಲು ಕೋಣೆ ಆ ಇಲಿಗಳ ಭದ್ರಕೋಟೆ ಆಗಿತ್ತು. ಮಧ್ಯದ ಬಾಗಿಲುಗಳನ್ನು ಮುಚ್ಚಿದ್ರೂ ಆ ತೆರೆದ ಸಂದಿಯಿಂದ ನುಗ್ಗುತ್ತಿದ್ವು ಅವು ಅಟ್ಟಹಾಸ ಗೈಯುತ್ತ! ಎಲ್ಲಾ ಕಡೆ ಲೈಟ್ಸ್ ಹಾಕೇ ಇಟ್ಟು ಸಂದೀಲಿ ಬಟ್ಟೆ ತುರುಕಿ ಬಂದ್ ಮಾಡಿದ್ರೂ ಕಿತ್ತು ಹಾಕಿ ನುಗ್ಗೋವು ಅವು.
ಒಂದೊಂದು ಇಲಿಗಳೂ ಚಿಕ್ಕ ಬೆಕ್ಕಿನ ಮರಿ ಸೈಜಿನವು. ತರಹೇವಾರಿ ಆಟ ಅವುಗಳದು. ಯಾವ ಮುಲಾಜಿಲ್ಲದೆ ನಮ್ಮ ಮಂಚಕ್ಕೆ ಹಾಕಿದ ಮಚ್ಛರದಾನಿಯ (mosquito net) ಮೇಲೆ ಹೊರಳಾಟ, ಜಿಗಿದಾಟ! ಮಂಚದ ಸರಳುಗಳ ಗುಂಟ ಹರಿದಾಟ! ನಾನಾ ಥರದ ಸರ್ಕಸ್ಸು ಅವುಗಳದು. ಅಸಹಾಯಕತೆಯ ಪರಮಾವಧಿ ನನ್ನದು. ಮಕ್ಕಳು ಇಡೀ ದಿನ ಶಾಲೆ, ಆಟ, ಅಭ್ಯಾಸ ಅಂತ ಸಾಕಾಗಿ ಮಲಗಿ ಬಿಡ್ತಿದ್ವು- ಸುರೇಶ ಅವರೂ ದಣಿದು ಮಲಗಿ ಬಿಡೋರು.

ನನಗೂ ಕೆಲಸ, ಅಲ್ಲಿನ ಪರಿಸ್ಥಿತಿಯೊಡನೆ ಏಗಿ ನಿಭಾಯಿಸಿ ಸಾಕಾಗಿ ಹೋಗ್ತಿದ್ರೂ ಮಲಗೋದೇ ಸಾಧ್ಯವಾಗದ ಪರಿಸ್ಥಿತಿ! ಮೊದಲೇ ನಿದ್ದೆ ಹಂಗಂಗೇ ನನಗೆ. ಇಲ್ಲಂತೂ ಇನ್ನಷ್ಟು ನಿಚ್ಬಳವಾಗಿ ಬಿಡ್ತಿದ್ದೆ ರಾತ್ರಿಯಾದಂತೆ. ನಿದ್ರೆ ಹತ್ರಾನೂ ಸುಳೀತಿರಲಿಲ್ಲ. ಅವೆಲ್ಲಿಯಾದ್ರೂ ಮಚ್ಛರದಾನಿ ಕಚ್ಚಿ ಒಳಗೆ ಬಂದ್ರೆ ಅಂತ ವಿಚಿತ್ರ ಭಯ ಆಗೋದು. ಆದರೆ ಯಾಕೋ ಆ ಕೆಲಸಕ್ಕೆ ಕೈ ಹಾಕಿರಲಿಲ್ಲ ಆ ಇಲಿಗಳು.
ಒಂದು ಚಿಕ್ಕ ಜಿರಳೆ ಕಂಡ್ರೆ ಹೆದರಿ ಚೀರೋಳು ನಾನು. ಇಲ್ಲೂ ಮೊದಲೆರಡು ದಿನ ಗಾಬರಿಯಲ್ಲಿ ಹಾರ್ಟ್ ಫೇಲ್ ಆಗ್ತದೋ ಎಂಬಂತಹ ಪರಿಸ್ಥಿತಿಯಲ್ಲಿ ಅರಿಯದೇ ಚೀತ್ಕಾರ ಹೊರಡುತ್ತಿತ್ತು. ಇದರಿಂದ ಮಕ್ಕಳೂ ಹೆದರಲಾರಂಭಿಸಿದ್ವು. ಅದಕ್ಕೇ ಕಷ್ಟಪಟ್ಟು ಬಾಯಿ ಮುಚ್ಚಿಕೊಂಡು, ಕಣ್ಣು ಅಗಲವಾಗಿ ತೆರೆದು ಕೊಂಡು ಮಕ್ಕಳಿಗೆ ಕಾವಲಾಗಿ ಕೂತು ಬಿಡುತ್ತಿದ್ದೆ. ಯಾವಾಗಲೋ ಒಮ್ಮೆ ತೂಕಡಿಕೆ.
ಲೈಟ್ ಆರಿಸೋ ಹಾಗಿರಲಿಲ್ಲ. ಲೈಟ್ ಹಾಕಿನೇ ಮಲಗಬೇಕು ಜೀವ ಮುಷ್ಟಿಯಲ್ಲಿ ಹಿಡಿದು. ಇದೊಂದು ಕಲ್ಪನೆಯಲ್ಲೂ ಊಹಿಸಲಾಗದ ಭಯಾನಕ ಅನುಭವ ನನಗೆ. ಇನ್ನು ನನ್ನ ಪತಿಗೆ ದವಾಖಾನೆಗೇನಾದ್ರೂ ಹೋಗಬೇಕಾಗಿ ಬಂದ್ರೆ ನನ್ನ ಪರಿಸ್ಥಿತಿ ವಿಚಿತ್ರ ಆಗಿರುತ್ತಿತ್ತು. ಅದು ಹೇಗೆ ಏನು ಅಂತ ವಿವರಿಸಲು ತಾಕತ್ತಿಲ್ಲ ನನಗೆ!
ತಿಳವಳ್ಳಿಗೆ ಬರೋವಾಗ ದಾರೀಲಿ ಅಡ್ಡಲಾಗಿ ಮಲಗಿದ್ದ ಹೆಬ್ಬಾವು ನನ್ನ ಮನದಿಂದ ಸರಿದಿರಲೇ ಇಲ್ಲ ಇನ್ನೂ. ಅದು ಹುಟ್ಟು ಹಾಕಿದ ಹೆದರಿಕೆ – ಮನೆಯ ಹೆಂಚುಗಳಲ್ಲಿ ಹರಿದಾಡಿಯಾವೇ ಹಾವು ಎಂಬ ಚಿಂತೆ ಇನ್ನೂ ಪ್ರಖರವಾಗಿ ಧಮನಿ ಧಮನಿಗಳಲ್ಲೂ, ಅನುಕ್ಷಣವೂ ಹರಿದಾಡಲಾರಂಭಿಸ್ತು ಈ ಭಯಂಕರ ಇಲಿಗಳ ಕಾಟದಿಂದ.
ಆ ಕೊನೆಯ ‘ಅಡಿಗೆ ಕೋಣೆ’ ಎಂಬ ಹೆಂಚು ಹೊದಿಸಿದ್ದ ಬಚ್ಚಲು ಮನೆಯಲ್ಲಿ ಸ್ನಾನ ಮಾಡುವಾಗ ಹಾವು ಹೆಂಚಿನ ಸಂದಿಯಿಂದ ನುಸುಳಿ ಬಂದ್ರೇನು ಗತಿ ಎಂಬ ಭೀತಿ ಕಾಡ್ತಿತ್ತು ಯಾವಾಗಲೂ. ದೇವರು ‘ತಥಾಸ್ತು’ ಎಂದನೋ ಏನೋ, ಅಷ್ಟೇ ಸುಮಾರು ಮೂರು ವಾರಗಳಾಗಿರಬೇಕು ನಾವಲ್ಲಿಗೆ ಬಂದು, ಆ ದಿನ ಬೆಳಗ್ಗೆ 7 ಗಂಟೆ. ಮಕ್ಕಳಿಗೆ ಸ್ಕೂಲ್ ಗಡಿಬಿಡಿ. 7.30 ಕ್ಕೆಲ್ಲಾ ಹೊರಡಬೇಕಿತ್ತು ಅವರು. ಮಗಳು ಸ್ನಾನ ಮುಗಿಸಿ ಬಂದವಳಿಗೆ uniform ಕೊಟ್ಟು ತಲೆ ಬಾಚಲು ಬಾಚಣಿಗೆ ತಗೊಂಡೆ ಕೈಯಲ್ಲಿ, ಸ್ನಾನಕ್ಕೆ ಹೋದ ಮಗ ಕೆಟ್ಟ ಧ್ವನಿಯಲ್ಲಿ ‘ಅಮ್ಮಾ’ ಅಂತ ಕಿರುಚಿದ. ಧಡಬಡಿಸಿ ಹೋದೆ. ಎಷ್ಟು ವೇಗದಿಂದ ಹೋಗಿದ್ದೆನೋ ಅಷ್ಟೇ ರಭಸದಿಂದ ಬ್ರೆಕ್ ಹಾಕಿದಂತೆ ನಿಂತು ಬಿಟ್ಟೆ ಮಗ ಕೈ ತೋರಿಸಿದತ್ತ ನೋಡುತ್ತಾ. ಗೋಧಿ ಬಣ್ಣದ ದೊಡ್ಡ ಗಾತ್ರದ ನಾಗರ ಹಾವೊಂದು ಹೆಂಚಿನ ಕೆಳಗಿರುವ ತೊಲೆಯ ಮೇಲಿಂದ ಜೋತು ಬಿದ್ದು ನೇತಾಡುತ್ತಿತ್ತು. ನನ್ನ ಹಿಂದೆಯೇ ಓಡಿ ಬಂದ ಮಗಳು ಹೆದರಿಕೆಯಿಂದ ಜೋರಾಗಿ ಕಿರಚಿದ್ಲು.
ಈ ಗಲಾಟೆಗೆ ಹೆದರಿಯೋ, ಸಿಟ್ಟಿನಿಂದಲೋ ಆ ಹಾವು ಭುಸ್ ಭುಸ್ ಅಂತ ಭುಸಗುಡಲಾರಂಭಿಸ್ತು. ಹಾವಿನ ಭುಸಗುಡುವಿಕೆ ಕೇಳಿಯೇ ಇರಲಿಲ್ಲ ನಾ. ಬರೀ ಪುಸ್ತಕದಲ್ಲಿ ಓದಿದ್ದು. ನಮ್ಮ ಕಿರುಚಾಟ, ಹಾವಿನ ಭುಸಗುಡುವಿಕೆ ಕೇಳಿ ಪಕ್ಕದ ಮನೆಯ ಪೋಲೀಸ್ ಅವರ ಹೆಂಡತಿ ಓಡಿ ಬಂದು ‘ಏನಾತ್ರಿ ಅಕ್ಕಾರ’ ಅಂದ್ಲು. ತೋರಿಸಿದೆ ನನ್ನ ಮತ್ತು ನನ್ನ ಮಗನ ನಡುವೆ ನೇತಾಡುವ ದಪ್ಪ ಹಾವನ್ನು.
ನನ್ನ ಪತಿ ಏನೋ ಎಮರ್ಜೆನ್ಸಿ ಕೇಸ್ ಅಂತ ಹಾಸ್ಪಿಟಲ್ ಗೆ ಹೋಗಿದ್ರು. ಇಲ್ಲಿ ಇವರೊಬ್ಬರೇ ಡಾಕ್ಟ್ರು. ಅದಿರಲಿ. ಈಗ ಇಲ್ಲಿ ಆಕೆ ಹಿಂದಿನಿಂದ ಮೆಲ್ಲಗೆ ಬಂದು ನನ್ನ ಮಗನನ್ನು ಆಚೆ ಕರೆದು ಕೊಂಡು ಹೋದ್ರು ಟವೆಲ್ಲು ಸುತ್ತಿ. (ಒಂದು ವಿಷಯ- ಪಕ್ಕದ ಮನೆಯವ್ರಿಗೆ ಹಿಂದಿನ ಮೂರು ಕೋಣೆಗಳನಷ್ಟೇ ಕೊಟ್ಟು ಮಾಲೀಕರು ಮುಂದಿನೆರಡು ಕೋಣೆಲಿ ತಮ್ಮದೇನೋ ಸಾಮಾನಿಟ್ಟಿದ್ರು. ಹೀಗಾಗಿ ನಮ್ಮ ಹಿಂಬಾಗಿಲು ಅವರ ಮುಂಬಾಗಿಲು ಪಕ್ಕ ಪಕ್ಕ) ಆಮೇಲೆ ಮನೆ ಸುತ್ತು ಹಾಕಿ ಮಗನನ್ನು ನಮ್ಮ ಮುಂಬಾಗಿಲಿಗೆ ತಂದು ಬಿಟ್ರು.ಜನ ಎಲ್ಲ ಕೂಡಿದ್ರು.ಅದರಲ್ಲಿ ಯಾರೋ ಓಡಿ ಹೋಗಿ ಅಲ್ಲಿದ್ದ ಹಾವು ಹಿಡಿಯುವವನನ್ನು ಕರೆದು ಕೊಂಡು ಬಂದ್ರು. ಅವರಿಗೆ ಇದೆಲ್ಲ ಮಾಮೂಲು. ನಮಗೆ ಹೊಸ ಅನುಭವ.
Toilet ಬಗ್ಗೆ ನಾ ಹಿಂದೆ ಬರೆದ ಹಾಗೆ ಅಲ್ಲಿದ್ದ Common toilet ಬಳಸಬೇಕಿತ್ತು. ಅಲ್ಲಿ ನಮ್ಮ ಹಿತ್ತಿಲು ದಾಟಿ ಆಚೆ ಬದಿಗೆ ಅದರ ಬಾಗಿಲು, ಆ ಕೊನೇ ಎರಡು ಮನೆಗಳ ಹಿತ್ತಿಲಲ್ಲಿ. ಅಲ್ಲಿನ ಪ್ರತಿಯೊಬ್ಬರ ಮನೆ ಹಿತ್ತಿಲಲ್ಲೂ ಪುಟ್ಟ ಕಾಡೇ. ದಟ್ಟವಾದ ಹಸಿರಿನ ರಾಶಿ. ಆ ದಟ್ಟವಾದ ಹಸಿರಿನ ನಡುವೆ ಹಾವುಗಳ ಹರಿದಾಟ. ಆ ದಟ್ಟ ಕಾಡಿನಂಥಲ್ಲೆ Toilet. ಒಮ್ಮೆ ನನ್ನ ಮಗಳು ಅಲ್ಲಿ ಹೋದಾಗ ಮೂಲೆಯಲ್ಲಿ ಸುರುಳಿ ಸುತ್ತಿ ಕೂತಿದೆ ಒಂದು ಚಿಕ್ಕ ಹಾವು ಬೆಚ್ಚಗೆ. ಗಾಬರಿಯಿಂದ ಓಡಿ ಬಂತು ಮಗು. ನಾವೆಲ್ಲ ಟಾರ್ಚ್, ಕೋಲು ತಗೊಂಡು ಹೋಗೋ ಅಷ್ಟ್ರಲ್ಲಿ ಅದು ಸರಿದು ಹೋಗಿತ್ತು ಅಲ್ಲಿಂದ. ಇದು ಒಂದಿನದ ಅನುಭವ ಅಲ್ಲ, ಸುಮಾರು ಸಲ. ಮಳೆಗಾಲದಲ್ಲಂತೂ ಬಹಳ. ಅಂದಿನಿಂದ ಮಕ್ಕಳ ಜೊತೆ ನಾನೂ ಹೋಗಿ, ಮೊದಲು ಟಾರ್ಚ್ ಬೆಳಕಿನಲ್ಲಿ ಎಲ್ಲಾ ಕಡೆ ನೋಡೋದು. (ಆ ಟಾಯ್ಲೆಟ್ ಗೆ ಒಂದು ಚಿಕ್ಕ ಕಿಟಕಿ, ಒಂದು ಝೀರೋ ಬಲ್ಬು. ಆ ಮಬ್ಬು ಬೆಳಕಿನಲ್ಲಿ ಏನೂ ಕಾಣುತ್ತಿರಲಿಲ್ಲ.) ಆ ಮೇಲೆ ಮಕ್ಕಳನ್ನು ಒಳಗೆ ಬಿಟ್ಟು, ಅಲ್ಲೇ ನಿಂತು ಅವರನ್ನು ಕರೆದುಕೊಂಡು ಬರ್ತಿದ್ದೆ.

ಮೈಯೆಲ್ಲಾ ಕಣ್ಣಾಗಿರಬೇಕು ಅಂದುಕೊಂಡ ಆ ರೂಢಿಯನ್ನು ಇಂದಿಗೂ ಬಿಡಲಾಗಿಲ್ಲ ನನಗೆ. ಅಚ್ಚೊತ್ತಿ ಆಳವಾಗಿ ಮನದಲ್ಲಿಳಿದು ಬಿಟ್ಟಿದೆ ಅದು. ನನಗೆ ಇಂದಿಗೂ ಆ ಹಾವಿನ ಭಯದಿಂದ ಹೊರ ಬರಲಾಗಿಲ್ಲ ಹಾಗೇ ಆ ಹಾವು ಹಿಡಿಯುವವನ ನೆನಪಿಂದ್ಲೂ! ಹೌದು, ಹಾವು ಹಿಡಿಯುವ ಆ ಮನುಷ್ಯನ್ನ ಕಂಡ್ರೆ ನನಗೆಂಥದೋ ವಿಚಿತ್ರ ಭಯ ಆವರಿಸುತ್ತಿತ್ತು. ಕಪ್ಪಗಿನ ಮನುಷ್ಯ ಆತ. ಒಂದು ಲುಂಗಿ ಸುತ್ತಿ ಎತ್ತಿ ಮೇಲಕ್ಕೆ ಕಟ್ಟಿದ್ರೆ ಆಯ್ತು, ಅದೇ ಅವನ ವೇಷ ಭೂಷಣ.
ನಮ್ಮ ಮನೆಯ ಮುಂದಿನಿಂದಲೇ ಆತ ತನ್ನ ಮನೆಗೆ ಹೋಗಬೇಕಿತ್ತು. ಹೀಗಾಗಿ ದಿನಕ್ಕೆ 2-3 ಸಲವಾದ್ರೂ ಆತನ ದರ್ಶನ. ದೊಡ್ಡ ಕುಡುಕ ಆತ. ಮುಂದಿನ ನಮ್ಮ ವ್ಹೆರಾಂಡಾ ಅಂತೂ Open air Theatre! ಆತನ ಕೈಯಲ್ಲಿಯ ಹಾವು ಜಿಗಿದು ಕಿಟಕಿಯಿಂದ ಒಳಗೆ ಬಂದೀತಾ ಅಂತ ಹೆದರಿಕೆ ನಂಗೆ. ಕುಡಿದ ಮತ್ತಿನಲ್ಲಿ ಕೈಯಲ್ಲಿ ಹಿಡಿದ ಹಾವನ್ನು ರಸ್ತೆ ಮೇಲೆ ಹರಿಯ ಬಿಟ್ಟು ಮತ್ತೆ ಅದನ್ನು ಹಿಡಿಯೋದು ಒಂದು ಆಟ ಅವನಿಗೆ. ಇನ್ನೊಂದು ಕೆಟ್ಟ ಚಟ ಆತಗೆ – ಹಾವನ್ನು ಕಿಟಕಿಯಿಂದ ಒಳಗೆ ಬಿಟ್ಟು ಆ ಮನೆಯವರನ್ನು ಹೆದರಿಸಿ ದುಡ್ಡು ಕೀಳ್ತಿದ್ದನಂತೆ.
ನಮ್ಮನೆ ಮಾಲೀಕರ ಮಗಳು ಹೇಳಿದ್ಲು. ಹುಷಾರಾಗಿರಿ ಅಕ್ಕಾರ ಅಂತ ಎಚ್ಚರಿಕೆನೂ ಕೊಟ್ಟಿದ್ಲು! ಆತ ಹಾವು ಒಳಗೆ ಬಿಟ್ರೇನು ಮಾಡೋದು ಅಂತ ಭಯ ಆಗ್ತಿತ್ತು. ಆತ ಅಲ್ಲಿಂದ ಸರಿದು ಹೋಗುವ ವರೆಗೂ ನನಗೆ ಜೀವದಲ್ಲಿ ಜೀವ ಇರ್ತಿರಲಿಲ್ಲ. ವಿಪರ್ಯಾಸವೆಂದರೆ ಹಾವು ಹಿಡಿಯುವ ಆ ಮನುಷ್ಯ, ಹಾವಿನೊಂದಿಗೆ ಸರಸ ಆಡುವ ಆ ಮನುಷ್ಯ ಒಮ್ಮೆ ಹಾವು ಹಿಡಿಯುವಾಗ ಹಾವು ಕಚ್ಚಿಯೇ ಸತ್ತ! ನಾವು ಅಲ್ಲಿಗೆ ಹೋದ ಮೂರು ವರ್ಷಗಳ ನಂತರ. ಆಗ ನಾವು ಹೊಸ ಕ್ವಾರ್ಟರ್ಸ್ ಗೆ ಶಿಫ್ಟ್ ಆಗಿದ್ವಿ. ಇಂತಹ ನೂರಾರು ಎಂದೆಂದಿಗೂ ಮರೆಯಲಾಗದ ಅನುಭವಗಳ ಗೂಡು ಮಲೆನಾಡಿನ ಆ ಸುಂದರ ಪುಟ್ಟ ಊರು.
ಈ ಕಂತೂ ನಿರಾಶೆ ಮಾಡಿಲ್ಲ! ಸರಿಯಾದ ‘ ಸರೀಸೃಪ ಸ್ಪೇಶಲ್’ ಇದು. ಟೆನ್ಷನ್ ಓವರ್ ಡ್ರೈವ್ – ‘Hitchcock meets Indiana Jones’ ಅನುಭವ. ಓದಿದ ಮೇಲೆ ಮೈಮೇಲೆಲ್ಲ ಇನ್ನೂ (ಹಾ)ಅವು ಹರಿದಾಡುತ್ತಿವೆಯೋ ಅಂತ ನೋಡಿಕೊಳ್ಳುವಂತೆ ಮಾಡುವ ವರ್ಣನೆ- ಅವುಗಳಿಂದ ತಪ್ಪಿಸಿಕೊಂಡ ಮೂಷಕಗಳ ಸೊಳ್ಳೆಪರೆದೆಯಮೇಲಿನ ರಂಗದ ನೃತ್ಯ, ಸರಳುಗಳ ಮೇಲಿನ ಸರ್ಕಸ್! ವ್ಹಾ!
ಡಾಕ್ಟರರು ಅಡ್ರಿನಲಿನ್ ಇಂಜಕ್ಷನ್ ಕೊಟ್ಟಂತಾಯಿತು. ಮುಂದಿನ ಕಂತಿನಲ್ಲಾದರೂ ಶಾಂತಿ ಪರ್ವವನ್ನು ಅಪೇಕ್ಷಿಸೋಣವೆ? Show must go on! –Shrivatsa
ಹಿಂದಿನಕ್ಕಿಂತ ಈ ಸಲದ ಚಿತ್ರಗಳು ಪೂರಕವಾಗಿವೆ. ವಿನ್ಯಾಸ ಮಾಡಿದ ಕಲಾಕಾರರಿಗೆ ಅಬಿನಂದನೆಗಳು. ಶ್ರೀವತ್ಸ ದೇಸಾಯಿ
“ಪೇಷಂಟ್ ಗಳ ಕಾಟ” :O
ಇದು ಯಾಕೋ ಸರಿ ಇಲ್ಲ.. ? ಸಲೀಸಾಗಿ ಇದ್ರ ಬಳಕೆ ಇಲ್ಲಿ ಮಾಡಿರೋದು ನೋಡಿದ್ರೆ.. ನಿಮ್ಮಗಳ ಸೇವೆ ಹೇಗಿತ್ತು ಅಂತ ಭಯ ಪಡುವ ಹಾಗಿದೆ..
ಪ್ರದೀಪ್ ಹೆಗಡೆಯವರ ಕಮೆಂಟ್ ಓದಿ ಆಶ್ಚರ್ಯವಾಯಿತು. ವೈದ್ಯನ ಪತ್ನಿ ಅಂಥ ಅನಾನುಕೂಲ ಪರಿಸ್ಥಿತಿಯಲ್ಲಿ ಎರಡು ಪುಟ್ಟ ಮಕ್ಕಳೊಂದಿಗೆ ಸಂಭಾಳಿಸ ಬೇಕಾಗಿ ಬಂತು ಅಂತ ಮೊದಲ ಎರಡು ಪ್ಯಾರಾದ ಪೀಠಿಕೆಯಲ್ಲಿ ಹೇಳಿ ಆ ಮನೆಯ ಭಯಾನಕ ಅನುಭವಗಳನ್ನು ವರ್ಣಿಸುವಾಗ ಆ ‘ಅತಿರೇಕ’ ಅನಿಸಬಹುದಾದ ಶಬ್ದ ಉಪಯೋಗಿಸಿದ್ದಾರೆ. ಓದುಗ ಸಹಾನುಭೂತಿ ಯಿಂದ ಓದಬೇಕಲ್ಲದೆ ಅವರ ಮತ್ತು ಅವರ ಪತಿಯ ಸರ್ವಿಸ್ ಬಗ್ಗೆ ‘ಜಜ್ಮೆಂಟ್’ ಕೊಡುವದು ಅಸಾಧು ಅಂತ ನನಗೆ ಅನಿಸುತ್ತದೆ. ಅವರ ಪತಿಯ ಸರ್ವಿಸ್ ಹೇಗಿತ್ತೆಂದು ಅವರ ಪೇಶಂಟ್ ಗಳ ಪ್ರತಿಕ್ರಿಯೆ ಅವರನ್ನು ತಡೆಯಲು ಧರಣಿ ಹೂಡಿದರು ಎಂದು ೭ ನೆಯ ಕಂತಿನಲ್ಲಿ ಓದಿದೆ. (ಹೆಗಡೆಯವರ ಪ್ರತಿಕ್ರಿಯೆ ಇಂದು ತಡವಾಗಿ ಹಾಕಿದ್ದಾರೆ). ವೈದ್ಯನ ಪತ್ನಿಯ ಸೇವೆಯನ್ನು ಅರಿಯಲು. ಕೋಡಿನಿಂದ ತೊಡೆಗೆ ಅಂತ ಘಾಸಿಯಾದ ಬಡಪಾಯಿಗೆ ಸ್ವಂತ ತನ್ನ ಮನೆಯಿಂದ ಊಟ, ಉಪ್ಪಿನಕಾಯಿ ಕಳಿಸಿದ ಆ ಅನ್ನಪೂರ್ಣೆಯನ್ನು ದೇವರೆಂದು ಕರಣೆಯಿದ್ದ ನೋಡುವವರುಂಟು ಅಂತ ಓದಿ ಕಣ್ಣು ತೇವವಾಗುತ್ತದೆ. ಲೋಕೋ ಭಿನ್ನ ಜನಾ: ! ಶ್ರೀವತ್ಸ ದೇಸಾಯಿ (ನಿವೃತ್ತ ವೈದ್ಯ)
ಅಬ್ಭಾ ಎನ್ನುವಂತಿದೆ
ಶ್ರೀವತ್ಸ ದೇಸಾಯಿಯವರಿಗೆ ಅನಂತ ಧನ್ಯವಾದಗಳು.ನಿಮ್ಮ ಆಸಕ್ತಿ ಪೂರ್ಣ ಓದುವಿಕೆ, ಒಬ್ಬ ವೈದ್ಯನ ಪತ್ನಿಯ ಮನ: ಸ್ಥಿತಿ ಅರ್ಥಮಾಡಿಕೊಂಡು ವ್ಯಕ್ತಪಡಿಸುವ ರೀತಿ ಆತ್ಮೀಯ ಅನಿಸಿಕೆ ಗೆ ಇನ್ನೊಮ್ಮೆ ಧನ್ಯವಾದಗಳು.
ಪ್ರದೀಪ ಅವರೇ, ನೀವು ಹೇಳೋದು ಸರಿ.ರೋಗಿಗಳ ಚಿಕಿತ್ಸೆ ಮಾಡುವವರು ವೈದ್ಯರಾದ ನನ್ನ ಪತಿ. ಅವರಿಗೆ ಅದು ಕಾಟ ಅನ್ನಿಸಿದ್ರೆ ಆ ಕಗ್ಗ ಹಳ್ಳಿಯಲ್ಲಿ, ಒಂದು ಒಳ್ಳೆಯ ಮನೆ ಬಾಡಿಗೆ ಗೆ ಸಿಗದ ಕೊಡದ ತಯಾರಿರಲು ಜನರ ಮಧ್ಯೆ ಇರುವಂತಹ ಅವಶ್ಯಕತೆ ಇರಲಿಲ್ಲ.ನಮಗೂ ಅದು ಅನಿವಾರ್ಯವೂ ಆಗಿರಲಿಲ್ಲ.ಕುಟುಂಬದ ಕಾಳಜಿ ಇರದೆ ನಿರಾತಂಕವಾಗಿ ರೋಗಿಗಳ ಕಾಳಜಿ ತಗೋಳ್ಳಲಿ ಅಂತಲೇ ಚಿಕ್ಕ ಚಿಕ್ಕ ಮಕ್ಕಳೊಂದಿಗೆ ಅಲ್ಲೇ ಇದ್ದದ್ದು. ಆ ಇಲಿ ಹಾವುಗಳೊಡನೆ ಜೀವ ಕೈಯಲ್ಲಿ ಹಿಡಿದು ಇದ್ದ ನಮ್ಮ ಕಠಿಣ ಪರಿಸ್ಥಿತಿಯ ಅರಿವು ಮೂಡಿಸುವ ಸಲುವಾಗಿ ಮುದ್ದಾಂ ಆ ಪದಪ್ರಯೋಗ. ಆ ದೃಷ್ಟಿಯಿಂದ ವಿಚಾರ ಮಾಡೋದು ಮುಖ್ಯ ಅನಕೋತೀನಿ ಹಾಗೂ ಅರ್ಥ ಆದೀತು ಎಂಬ ಆಶಯ ನಂದು.
ಶ್ರವಣಕುಮಾರಿಯವರೇ ವಂದನೆಗಳೊಂದಿಗೆ ಧನ್ಯವಾದಗಳು ನಿಮಗೆ.