ಸರೋಜಿನಿ ಪಡಸಲಗಿ ಸರಣಿ 7: ಅರೆಗಳಿಗೆ ಬಿಟ್ಟಗಲದ ನೆರಳು ಅವು…

ಅರೆ ಗಳಿಗೆ ಬಿಟ್ಟಗಲದ ನೆರಳು ಅವು…

ಸಂಜೆಯ ತಂಗಾಳಿಯ ಅಲೆ ಮೃದುವಾಗಿ ಸೋಕಿದಾಗ, ಚಿತ್ತ ಎತ್ತೆತ್ತಲೋ ತೇಲಿ ಏನೋ ಯೋಚಿಸುತ್ತ ಯಾವುದೋ ನೆನಪಿನ ಎಳೆಯಲ್ಲಿ ಸಿಲುಕಿ ಹಿಗ್ಗಾಮುಗ್ಗಾ ಜಗ್ಗಾಡಿದ್ರೂ, ಒಂದಿನಿತೂ ಅಲುಗದೇ ಅಲ್ಲೇ ಸಿಲುಕಿಕೊಂಡಾಗ ಹತ್ತು ಹಲವು ಅನುಭವಗಳು ತಕಧೀಂ ಅಂತ ಕಣ್ಮುಂದೆ ಕುಣೀತಾವೆ. ಅವನ್ನು ಅಲ್ಲಿಯೇ ಬಿಟ್ಟು ಮುನ್ನೋಡಿ ನಡೆದು ಸಾಗಿ ಬಂದಿದ್ರೂ, ಅರೆಗಳಿಗೆ ಬಿಡದ ನೆರಳು ಅವು. ಬಗೆದಷ್ಟೂ, ಬತ್ತದ ನೀರಿನ ಒರತೆಯಂತೆ ಪುಟಿಯುತ್ತಲೇ ಇವೆ ಆ ನೆನಪುಗಳು.

ತಿಳವಳ್ಳಿಯೇ ಪುಟ್ಟ ಗ್ರಾಮವಾದರೆ ಅದರ ಸುತ್ತಲೂ ಇನ್ನೂ ಚಿಕ್ಕ ಚಿಕ್ಕ ಹಳ್ಳಿಗಳು. ಆ ಎಲ್ಲ ಊರಿನ ಜನತೆಗೂ ಇದೇ ಒಂದೇ ಆಸ್ಪತ್ರೆ. ಹಾಗೇನಾದರೂ ಪೇಷಂಟ್ ಸ್ಥಿತಿ ಗಂಭೀರ ಅನಿಸಿ ಮುಂದೆ ದೊಡ್ಡಾಸ್ಪತ್ರೆಗೆ ಕಳಿಸಬೇಕು ಅಂದ್ರೆ ಕಳಿಸೋದಾದ್ರೂ ಎಲ್ಲಿಗೆ? ಕಳಿಸಿದ್ರೂ ಆ ಪೇಷಂಟ್ ಗಳು  ಅಲ್ಲಿಗೆ ಹೋಗೋದ್ಹೇಗೆ? ಅಲ್ಲಿ ಯಾವುದೇ ಟ್ಯಾಕ್ಸಿ ಇಂಥಾದ್ದು ಸಿಗ್ತಿದ್ದಿಲ್ಲ. ಬಸ್ಸುಗಳದಂತೂ ಈ ಕಥೆ, ಆ ಅಧ್ವಾನ್ನ ರಸ್ತೆಯಲ್ಲಿ ಆ ದೊಡ್ಡಾಸ್ಪತ್ರೆಗೆ ಹೋಗಿ ಮುಟ್ಟೋದ್ರಲ್ಲಿ ದಾರೀಲೇ ಏನಾದರೂ ಅವಘಡ ಸಂಭವಿಸಿದ್ರೆ ಅದರಲ್ಲಿ ಆಶ್ಚರ್ಯವೇನೂ ಇರಲಿಲ್ಲ. ಹಾಗೆಯೇ ಇತ್ತು ಪರಿಸ್ಥಿತಿ. ಶತಾಯಗತಾಯ ಇಲ್ಲೇ ಗುಣಪಡಿಸಲು ಪ್ರಯತ್ನಿಸಬೇಕು. ಅದೊಂದು ದೊಡ್ಡ ಸವಾಲು ನಿಜಕ್ಕೂ. ಅದ್ರಲ್ಲಿ ನನ್ನ ಪತಿ ಮುಳುಗಿ ಹೋಗಿದ್ರೆ, ಅವು ಗುಣವಾಗುವವರೆಗೂ ನನಗೆ ಟೆನ್ಶನ್! ಒಂದೆರಡೇ ಘಟನೆಗಳ ಬಗ್ಗೆ ಬರೀತೀನಿ ಇಲ್ಲಿ.

ಆ ದಿನ ಬೆಳಿಗ್ಗೆ ಮಕ್ಕಳು ಸ್ಕೂಲ್ ಗೆ ಹೋಗಿ ಆಗಿತ್ತು. ನನ್ನ ಪತಿ ಸುರೇಶ ಅವರೂ ರೆಡಿಯಾಗಿ ಇನ್ನೇನು ತಿಂಡಿ ತಗೋಬೇಕು ಅಷ್ಟ್ರಲ್ಲಿ, ಸರ್ ಸರ್ ಅಂತ ಕೂಗುತ್ತಾ ಏದುಸಿರು ಬಿಡುತ್ತಾ ಓಡಿ ಬಂದಿದ್ದ ದೀಪಕ. ‘ಯಾಕೆ ಹೀಗೆ ಗಾಬರಿ ಆಗಿ? ಏನಾಯ್ತು’ ಅಂದೆ. ದವಾಖಾನೆ ಮುಂದೆ ಒಂದು ಚಕ್ಕಡಿ ಗಾಡಿ, ಹಿಂಡು ಜನ, ಯಾರೋ ಕೂಗುತ್ತಿದ್ದರು ತಡೆಯಲಾರದ ನೋವಿನಿಂದ. ಮತ್ತೆ ಕೇಳಿದೆ ‘ಏನಾಯ್ತು’ ಅಂತ. “ಅಕ್ಕಾರ ಲಗೂನ ಸಾಹೇಬ್ರನ್ನ ಕಳಸ್ರಿ. ಒಂದು ಸೀರಿಯಸ್ ಕೇಸ್ ಐತ್ರಿ. ವಯಸ್ಸಾದ ಮನುಷ್ಯ” ಅಂದ. ಅಷ್ಟ್ರಲ್ಲಿ ಈ ಗಲಾಟೆ ಕೇಳಿ ಸುರೇಶ ಅವರೂ ತಿಂಡಿ ಬಿಟ್ಟು ಬಂದಿದ್ರು. ಅವಸರವಸರವಾಗಿ ಆಸ್ಪತ್ರೆಗೆ ಹೋದರು.

ಆ ಪೇಷಂಟ್ ಅಲ್ಲೇ ಪಕ್ಕದ ಹಳ್ಳಿಯವನು. ಆ ದಿನ ಕಾರಹುಣ್ಣಿಮೆ. ಎತ್ತುಗಳನ್ನು ರೆಡಿ ಮಾಡೋವಾಗ ಏನಾಯ್ತೋ ಆ ಎತ್ತಿಗೆ, ಗೊತ್ತಿಲ್ಲ. ಯಾವಾಗಲೂ ತಮ್ಮ ಜೊತೆಗೆ ಇರ್ತಿದ್ದ ಈ ತಮ್ಮ ಮನುಷ್ಯನನ್ನೇ, ತನ್ನ ಕೋಡಿನಿಂದ ಆತನ ತೊಡೆಯ ಖಂಡ ಮಾಂಸಕ್ಕೇ ಇರಿದು ಮೇಲಕ್ಕೆತ್ತಿ ನೆಲಕ್ಕೆ ಅಪ್ಪಳಿಸಿ ಕೆಡವಿತ್ತು ಆತನನ್ನು. ಅವನ ಸ್ಥಿತಿ ಊಹಿಸಲಾಗದಷ್ಟು ಭಯಾನಕ ಆಗಿತ್ತು- ತೊಡೆಯ ಕೆಳಗೆ ಇಷ್ಟುದ್ದ ಕೊಯ್ದುಕೊಂಡು ಹೋಗಿ ಅಗಲವಾಗಿ ಬಾಯಿ ತೆರೆದು, ಒಳಗಿನಿಂದ ಖಂಡ, ಮಾಂಸ, ಚರ್ಮ ಎಲ್ಲಾ ಜೋತಾಡುತ್ತಿತ್ತು. ಪಾಪ ಆ ಮನುಷ್ಯನ ಯಾತನೆ ನೋಡಿ ಕರುಳು ಕಿತ್ತು ಬರುವಂಥ ಸಂಕಟ ನನಗೆ.

ಆ ಸ್ಥಿತಿಯಲ್ಲಿ ಆತನ್ನ ಕಳಿಸುವುದ್ಯಾವ ದೊಡ್ಡಾಸ್ಪತ್ರೆಗೆ? ಅಂಥ ಅಸ್ತವ್ಯಸ್ತ ದಾರೀಲಿ? ದವಾಖಾನೆಯ ಜೀಪು ಕೆಟ್ಟು ತಣ್ಣಗೇ ನಿಂತು ಬಿಟ್ಟಿತ್ತು. ಆಂಬ್ಯುಲೆನ್ಸ ಹೆಸರಾದರೂ ಗೊತ್ತಿತ್ತೋ ಇಲ್ವೋ ಅನಕೋತೀನಿ ಅಲ್ಲಿನ ಜನಕ್ಕೆ. ಸುರೇಶ ಅವರೇ ಗುದ್ದಾಡಿ ಅದನ್ನೆಲ್ಲ ಜೋಡಿಸಿ ಹೊಲಿಗೆ ಹಾಕಿ ಆತನ್ನ ಅಲ್ಲೇ admit ಮಾಡಿ ಕೊಂಡರು. ಆ ಪೇಷಂಟ್ ಆಸ್ಪತ್ರೆಯಲ್ಲಿ ಸುಮಾರು ಎರಡೂವರೆ – ಮೂರು ತಿಂಗಳವರೆಗೆ ಇದ್ದ. ಆತನಿಗೆ ಬೇಕಾದ ಗಂಜಿ, ಹಾಲು, ಟೀ ಕಳಸ್ತಿದ್ದೆ ಆಗಾಗ. ಬಿಸಿ ಅನ್ನ ಉಪ್ಪಿನಕಾಯಿ ತಗೊಂಡು ಹೋಗ್ತಿದ್ರು ಅವನ ಜೊತೆ ಇದ್ದವ್ರು ಅವನಿಗಾಗಿ.

ಆತನ ತೊಡೆಯ ಗಾಯ ಕಡಿಮೆಯಾಗಿ ನಿಧಾನಕ್ಕೆ ಕೋಲು ಹಿಡಿದು ಓಡಾಡಲಾರಂಭಿಸಿದ. ಮನೆಗೆ ಹೋಗುವಾಗ ಬಂದು ನಮ್ಮಿಬ್ಬರ ಕಾಲು ಗಟ್ಟಿಯಾಗಿ ಹಿಡಿದುಕೊಂಡು ಅಳೋದು ನೋಡಿ ನನ್ನ ಕಣ್ಣೂ ತುಂಬಿ ಬಂತು. ಆಗ ನನಗೆ ಪಟ್ಟನೇ ಆ ಮಹಿಳೆಯ (ಪೋಸ್ಟ್ ಮಾರ್ಟಂ ಬಗ್ಗೆ ಮಾತಾಡಿದವಳು) ನೆನಪು ಬಂತು. ನನಗೆ ನಾನೇ ಹೇಳಿಕೊಂಡೆ – ಮನುಷ್ಯ ಅದೆಷ್ಟು ಅಸಹಾಯಕನಾಗ್ತಾನಲ್ಲ ಒಮ್ಮೊಮ್ಮೆ! ಇಂಥ ಅಸಹಾಯಕರನ್ನು ಕಂಡು ಮರುಗಿ ಇಲ್ಲಿರಬೇಕೋ, ಅಂಥವರನ್ನು ನೋಡಿ ಎದ್ದು ಹೋಗಬೇಕೋ ಅಂತ ಪ್ರಶ್ನೆ. ಇದಕ್ಕೆ ಒಂದೇ ಉತ್ತರ – ಸಮಾಜ ಅಂದ ಮೇಲೆ ಜನ ಹಾಗೂ ಇರ್ತಾರೆ ಹೀಗೂ ಇರ್ತಾರೆ, ಘಟನೆ, ನೆನಪು ಎಲ್ಲಾ. ಯಾವುದು ಬೇಕು ಅದನ್ನು ತಗೊಂಡು ಇನ್ನುಳಿದದ್ದನ್ನು ಅಲ್ಲಿಯೇ ಅದರ ಜಾಗದಲ್ಲಿಯೇ ಬಿಟ್ಟು ಹೊರಡುವ ಮನೋಭಾವವೇ ಗಟ್ಟಿತನದ ಬುನಾದಿ.‌

ಈಗ ಇನ್ನೊಂದು ಇಂತಹುದೇ ಅನುಭವ ಹೇಳ್ತೀನಿ. ಆ ದಿನ ರಾತ್ರಿ 12.30 ಆಗಿದೆ. ಬೆಲ್ ಮಾಡೋದು,’ಅಕ್ಕಾರ ‘ ಅಂತ ಕೂಗೋದು ನಡೆದೇ ಇತ್ತು. ಡಾಕ್ಟ್ರ ಮನೇಲಿ, ಆಸ್ಪತ್ರೆಯ ಆವರಣದಲ್ಲಿ ಹಗಲು – ರಾತ್ರಿಗೆ ವ್ಯತ್ಯಾಸವೇ ಇರುವುದಿಲ್ಲ. ಎದ್ದು ಹೋಗಿ ಕಿಟಕಿಯಿಂದ ನೋಡಿದಾಗ ಹೊರಗೆ ಭರಮಣ್ಣ ನಿಂತಿದ್ದ ಬಾಗಿಲ ಮುಂದೆ. ಕೆಟ್ಟ ಛಳಿ ಬೇರೆ. ‘ಯಾಕೋ ಭರಮಣ್ಣಾ ಏನಾತೋ ‘ ಎಂದೆ. ‘ಅಕ್ಕಾರ, ಅಲ್ಲಿ ದವಾಖಾನೆ ಕಟ್ಟೀ ಮ್ಯಾಲೆ ಯಾರೋ ಒಬ್ಬ ಮನುಷ್ಯ ಮಲಗ್ಯಾನ್ರಿ. ಅಂವಗ ಎಚ್ಚರ ಇದ್ದಾಂಗಿಲ್ರೀ. ಲಗೂನ ಸಾಹೇಬ್ರನ್ನ ಕಳಸ್ರೀ’ ಅಂದ.

ಆ ದಿನ ಪೇಷಂಟ್ ಗಳ ಗಲಾಟೆ ಜಾಸ್ತಿ ಇತ್ತು ದಿನಕ್ಕಿಂತ. ಎರಡು ಹೆರಿಗೆ ಕೇಸ್ ಗಳು, ಐದಾರು ಕುಟುಂಬ ಯೋಜನೆ ಆಪರೇಶನ್ ಕೇಸ್ ಗಳು. ಹೀಗಾಗಿ ದಣಿದು ಮಲಗಿದ ನನ್ನ ಪತಿಯನ್ನು ಎಬ್ಬಿಸಿ ಹೇಳಿದೆ. ಬೇರೆ ದಾರಿ ಇರಲಿಲ್ಲ.ಅವರೂ ಎದ್ದು ಆಸ್ಪತ್ರೆಗೆ ಹೋಗಿ ಎಚ್ಚರು ತಪ್ಪಿದ ಆ ಮನುಷ್ಯನ್ನ ಚೆಕ್ ಮಾಡಿ ನೋಡಿದರೆ ಶುಗರ್ ಲೆವೆಲ್ ಪೂರ್ತಿ ಕೆಳಗೆ ಇಳಿದು ಹೋಗಿತ್ತು. ತಕ್ಷಣ ಗ್ಲೂಕೋಸ್ ಏರಿಸಿ ಅಲ್ಲೇ ಕುಳಿತು ಆತನ ಶುಗರ್ ಲೆವೆಲ್ ಏರಿದಂತೆ ಸ್ವಲ್ಪ ಹುಷಾರದದ್ದನ್ನು ನೋಡಿ ಮನೆಗೆ ಬಂದಾಗ ಬೆಳಗಿನ ಜಾವ ನಾಲ್ಕು ಗಂಟೆ. ಅವರಿಗೂ ಜಾಗರಣೆ, ನನ್ನ ನಿದ್ದೆ ಅಂತೂ ಸಂಚಾರಕ್ಕೆ ಹೋಗಿರ್ತದೆ. ಆ ಪೇಷಂಟ್ ಸ್ಥಿತಿ ಪರವಾಗಿಲ್ಲ ಈಗ ಅಂತ ಹೇಳಿದಾಗ ನಾನೂ ಮಲಗಿದೆ.

ಮುಂಜಾನೆ ಎದ್ದು ಓಡಾಡಲಾರಂಭಿಸಿದ್ದ ಆ ಮನುಷ್ಯ. ಆಗ ಬಸ್ಸೊಂದು ಆಸ್ಪತ್ರೆ ಆವರಣದಲ್ಲಿಯೇ ಬಂದು ನಿಂತಿತು. ಮತ್ತೇನಪಾ ಇದು ಅನೋಷ್ಟ್ರಲ್ಲಿ ಕಂಡಕ್ಟರ್ ಡ್ರೈವರ್ ಕೆಳಗೆ ಇಳಿದು ಬಂದರು. ಆತ ಅಡ್ಡಾಡುವುದನ್ನು ನೋಡಿ ಆಶ್ಚರ್ಯ ಅವರಿಗೆ! ಹಿಂದಿನ ದಿನ ನಡೆದಿದ್ದು ಇಷ್ಟು – ಸಂಜೆ ಹಾನಗಲ್ಲಿನಿಂದ ಹೊರಟ ತಿಳವಳ್ಳಿ ಬಸ್ಸು ಹತ್ತಿದ್ದ ಆತ ಬಸ್ಸು ಊರು ದಾಟೋ ಮೊದಲೇ ಎಚ್ಚರ ತಪ್ಪಿದನಂತೆ. ಜೊತೇಲಿ ಯಾರೂ ಇಲ್ಲ. ಏನು ಮಾಡೋದು? ಡ್ರೈವರ್ ಮತ್ತೆ ಬಸ್ಸ್ ತಿರುಗಿ ಹಾನಗಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಯ್ದು ಆತನನ್ನು ಅಲ್ಲಿಯ ಡಾಕ್ಟರ್ ಗೆ ತೋರಿಸಿ ಹೇಳಿದಾಗ ಅವರು – ಪೇಷಂಟ್ ಸ್ಥಿತಿ ಭಾಳ ಚಿಂತಾಜನಕ ಇದೆ. ಹುಬ್ಬಳ್ಳಿಗೆ ಕರೆದೊಯ್ಯುವುದು ವಾಸಿ. ಅದೂ ಆದಷ್ಟು ಬೇಗ’ ಅಂದ್ರಂತೆ. ಏನು ಮಾಡಬೇಕು ಅವರು? ಜೊತೆಗೆ ಯಾರೂ ಇರಲಿಲ್ಲ. ಅದ್ಕೇ ಇಲ್ಲಿ ತಂದು ಮಲಗಿಸಿ ಹೋಗಿ ಬಿಟ್ಟಿದ್ರು. 

ಸುರೇಶ ಸಿಟ್ಟಿನಿಂದ, ‘ಒಳಗೆ ಬಂದು ಯಾರಿಗಾದರೂ ಹೇಳಿ ಹೋಗಬೇಕಲಾ ? ಇನ್ನರ್ಧ ಗಂಟೆ ಕಾಲ ಯಾರೂ ನೋಡಿರಲಿಲ್ಲ ಅಂದರೆ  ಆತನದು ಮುಗಿದ ಕಥೆ ಆಗಿರೋದು’ ಅಂದ್ರು. ಅದಕ್ಕೆ ಆ ಡ್ರೈವರ್ -” ಏನ ಮಾಡೋಣ್ರಿ ಸರ್? ಅಲ್ಲಿ ಹಾನಗಲ್ಲ ಡಾಕ್ಟರ್ ಹಂಗಂದ್ರು. ನೀವು ಮತ್ತೇನರ ಹೇಳಿದ್ರ ನಾವೇನ ಮಾಡಬೇಕಿತ್ರಿ ಸರ್? ಅದ್ಕೇ ಹಂಗೇ ಹೋಗಿ ಬಿಟ್ವಿ” ಅಂದ. ಪಾಪ ಆ ಮನುಷ್ಯ ಸುರೇಶ ಅವರ ಕಾಲಿಗೆ ಬಿದ್ದ. ಆತನ ಹತ್ರ ದುಡ್ಡೂ ಇರಲಿಲ್ಲ. ನಮ್ಮ ಮನೇಲಿ ಆತನಿಗೆ ಚಹಾ – ತಿಂಡಿ ತಿನಿಸಿ , ಆತ ಆರಾಮ ಇದ್ದದ್ದು ಖಾತ್ರಿ ಮಾಡಿಕೊಂಡು, ಬಸ್ ಚಾರ್ಜ್ ಕೊಟ್ಟು ಅವನೂರಿಗೆ ಅವನ್ನ ಕಳಿಸಿ ಆಯ್ತು. ಏನೋ ಸಮಾಧಾನ ಮನಸ್ಸು ಈಗ.

ಇದನ್ನೆಲ್ಲಾ ಕೆನ್ನೆಗೆ ಕೈ ಆನಿಕೆ ಕೊಟ್ಟು ನೋಡುತ್ತಾ ಕುಳಿತ ಮಕ್ಕಳನ್ನು ನೋಡಿ ನಕ್ಕು ಒಳಗೆ ಹೋದೆ. ಇಂಥ ಎಷ್ಟೋ ಕೇಸ್ ಗಳು. ಮನ ಕಲಕಿ  ಅಲ್ಲಾಡಿ ಹೋಗಿದೆ ನನಗೇ ಗೊತ್ತಿಲ್ಲದಂತೆ. ಅಲ್ಲಿ ಬಡತನವೂ ಸ್ವಲ್ಪ ಜಾಸ್ತಿಯೇ. ನಮಗೆ ಅಲ್ಲಿಂದ ಟ್ರಾನ್ಸ್ಫರ್ ಆದಾಗ ಮನೆ ಮುಂದೆ ಜನಜಂಗುಳಿ. ಒಬ್ಬನಂತೂ – “ನಾ ಒಂದ ಮಾತ ಹೇಳಲ್ರಿ? ಅಕ್ಕಾರ, ಸಾಹೇಬ್ರ ನಂದು ಎಂಟೆಕರೆ ಗದ್ದಿ ಐತ್ರಿ. ಅದರಾಗಿಂದ ನಾಕ ಎಕರೆ ನಿಮ್ಮ ಹೆಸರಿಗೆ  ಹಚ್ಚತೇನ್ರಿ. ನಮ್ಮನ್ನ ಬಿಟ್ಟು ಹೋಗಬ್ಯಾಡ್ರೀ” ಅಂದಾಗ ನಾ ಕಣ್ಣೀರು ಒರೆಸಿಕೊಂಡು ಸುಮ್ಮನೇ ನಿಂತಿದ್ದೆ. ಬಂಕಾಪುರ ನಿರ್ಲಕ್ಷಿತ ಸ್ಥಳ ಅಂದುಕೊಂಡ ನಮಗೆ ಈ ಪ್ರದೇಶ ಅದಕ್ಕೂ ಮೀರಿದ್ದು ಅನಿಸಿತಿತ್ತು ಸಾವಿರ ಸಲ. ದೂರದ ಈ ಕಾಡಿನಲ್ಲಿ ಬದುಕುತ್ತಿದ್ದ ಈ ಅಸಹಾಯಕ ಜನ  ಹೊರ ಜಗತ್ತಿಗೆ ತಮ್ಮನ್ನು ತೆರೆದು ಕೊಳ್ಳದೇ ಮುಗ್ಧತೆಯಲ್ಲೋ, ಅಜ್ಞಾನದಲ್ಲೋ ಮುಳುಗಿರುವಾಗ, ಇದಕ್ಕೆ ತದ್ವಿರುದ್ಧವಾಗಿ  ಹೊರ ಜಗತ್ತಿಗೆ ತಮ್ಮನ್ನು ತೆರೆದು ಕೊಳ್ಳದೇ ತಮ್ಮದೇ ಶ್ರೇಷ್ಠತೆಯನ್ನು ಪ್ರತಿಷ್ಠಾಪಿಸುವ ಜನತೆಯೂ ಇಲ್ಲಿದೆ. ಲೋಕೋ ಭಿನ್ನ ಜನಾ: ….‌ಈಗ  ಅಲ್ಲೂ ಕೂಡ ಬದಲಾವಣೆ ಗಾಳಿ ಬೀಸಿರಬಹದು.

ಇದ್ಯಾವುದರ ಪರಿವೆಯೇ ಇಲ್ಲದೆ ತನ್ನ ಚೆಲುವಿನ ಸೆರಗು ಹಾಸಿ ಎಲ್ಲವನ್ನೂ ತನ್ನ ಮಡಿಲಲ್ಲಿ ಹುದುಗಿಸಿಟ್ಟು ಕೊಂಡಿದೆ ನಿಸರ್ಗ ತಿಳವಳ್ಳಿಯಲ್ಲಿ. ಎಲ್ಲದಕ್ಕೂ, ಎಲ್ಲರಿಂದಲೂ ದೂರ ನಿಂತ ಅಲ್ಲಿನ ಜನ ತಮ್ಮವೇ ಆದ ಅಭಿರುಚಿ ಆಸಕ್ತಿಯನ್ನು ಬೆಳೆಸಿಕೊಂಡಿದ್ರು ತಮಗೆ ಬೇಕಾದ ರೀತಿ. ತಮ್ಮವೇ ಕೆಲವು ಚಟುವಟಿಕೆಗಳು. ನನ್ನ ಮಗಳನ್ನೂ ಅಲ್ಲಿಯೇ ಭರತನಾಟ್ಯ ಕ್ಲಾಸ್ ಗೆ ಸೇರಿಸಿದ್ದೆ. ಮೂರು ವರ್ಷ ಕಲಿತು, ಆ ಮೇಲೆ ನಿಂತು ಹೋಯಿತು ಅಲ್ಲಿಂದ ಹೊರ ಬಂದ ಮೇಲೆ. ನನಗೆ ಸಂಗೀತದ ಹುಚ್ಚು. ಆದರೆ ಅಲ್ಲಿ ಹಿಂದೂಸ್ಥಾನಿ ಸಂಗೀತ ಇರ್ಲಿಲ್ಲ. ಹೀಗಾಗಿ ಅಲ್ಲಿನ ಕರ್ನಾಟಕಿ ಸಂಗೀತ ಕ್ಲಾಸ್ ಗೆ ಸೇರಿ ಕಲಿತೆ ಕೆಲವೇ ದಿನಗಳು ಮಾತ್ರ.

ಊರಿನ  ಮಧ್ಯದಲ್ಲಿ ಶ್ರೀಮಂತ ವಾಸ್ತುಶಿಲ್ಪದ ಕಲಾಕೃತಿ ಶಾಂತೇಶ್ವರ ದೇವಾಲಯ. ಅದೂ ಜಕಣಾಚಾರ್ಯರ ಕಟ್ಟಡ ಅಂತ ಹೇಳ್ತಾರೆ. ಆ ಪ್ರದೇಶದ ಸುತ್ತಲೂ ಇದೇ  ಥರದ ಶಿವನ ದೇವಾಲಯಗಳು. ಇವೆಲ್ಲವೂ ದ್ರಾವಿಡ ಶೈಲಿಯ, ಒಂದೊಂದು ಒಂದು ಬಗೆಯ ವೈವಿಧ್ಯಮಯ ವೈಶಿಷ್ಟ್ಯ ಹೊಂದಿದ ದೇವಾಲಯಗಳು. ಶಿವರಾತ್ರಿಯ ದಿನ ರಾತ್ರಿ ಪೂರ್ತಿ ಯಾಮ ಪೂಜೆ, ಅಭಿಷೇಕ, ಮಂಗಳಾರತಿ ಶಾಂತೇಶ್ವರ ದೇವಾಲಯದಲ್ಲಿ ನಾವು ಆ ದಿನ ರಾತ್ರಿ ಎರಡು ಗಂಟೆ ಸುಮಾರಿಗೆ ದೇವಾಲಯಕ್ಕೆ ಹೋಗ್ತಿದ್ವಿ. ವಿದ್ಯುತ್ ದೀಪ ಇಲ್ಲದೇ ಬರೀ ಎಣ್ಣೆ ದೀಪಗಳ ತಂಪು ಬೆಳಕಿನಲ್ಲಿ ಶಾಂತೇಶ್ವರನ ಪ್ರಶಾಂತ ಸನ್ನಿಧಾನ! ಅದೊಂದು ಅದ್ಭುತ ದೈವಿಕ ಅನುಭವ! 

ಅಲ್ಲಿಯೇ ಹತ್ತಿರದಲ್ಲಿ ಇದ್ದ ಶೇಷಗಿರಿಯಲ್ಲಿ ಒಂದು ಅಪರೂಪದ ಕಲಾಕೃತಿ ನೋಡ್ದೆ ನಾ. ಅಲ್ಲಿ ಒಬ್ಬರ ಮನೇಲಿ ಎರಡು ಪುರಾತನ ಕಾಲದ ಕೌದಿಗಳನ್ನು ಸಾರ್ವಜನಿಕ ದರ್ಶನಕ್ಕೆ ಇಡ್ತಿದ್ರು ವರ್ಷದಲ್ಲಿ ಒಂದು ಬಾರಿ- ಗಣೇಶ ಚತುರ್ಥಿ, ಅಷ್ಟಮಿ ಮುಗಿದ ಮೇಲೆ ಬರುವ ದಶಮಿ ದಿನದಂದು. ಆ ಎರಡು ಕೌದಿಗಳಲ್ಲಿ – ಒಂದರಲ್ಲಿ ಸಂಪೂರ್ಣ ರಾಮಾಯಣ, ಇನ್ನೊಂದರಲ್ಲಿ ಮಹಾ ಭಾರತ! ಕಸೂತಿಯಲ್ಲಿ ಹೆಣೆದಿದ್ದಾರೆ, ಬಣ್ಣ ಬಣ್ಣದ ರೇಷ್ಮೆ ದಾರದಲ್ಲಿ. ಅವು ಎಂಟು ನೂರು ವರ್ಷಗಳ ಹಿಂದಿನದು ಅಂತ ಆ ಅಜ್ಜ ಹೇಳಿದರು. ಆದರೆ ಇಂದಿಗೂ ವರುಷಗಳೇ ಉರುಳಿದ್ದರೂ, ಒಂಚೂರೂ ಬಣ್ಣ ಮಾಸಿರಲಿಲ್ಲ, ಬಟ್ಟೆ ಹರಿದಿರಲಿಲ್ಲ. ನಿಜಕ್ಕೂ ಅದ್ಭುತ ಅದು!

ಇಲ್ಲೂ ಅಂದರೆ ತಿಳವಳ್ಳಿಯಲ್ಲೂ ಕೂಡ ಮಕ್ಕಳಿಗೆ ಯಾವುದೇ ಮನರಂಜನೆ ಸಾಧನೆಗಳು ಇರ್ಲಿಲ್ಲ. ಒಂದು ಸಿನಿಮಾ ಥೀಯೇಟರ್ ಇತ್ತು. ಮಕ್ಕಳು ಆಗಾಗ ಹೋಗ್ತಿದ್ರು. ಇನ್ನುಳಿದಂತೆ ಎಲ್ಲಾ ಸಾಮಾನ್ಯವಾಗಿ ನಡೆದಿತ್ತು. ನಾವು ತಿಳವಳ್ಳಿ ಬಿಡೋವರೆಗಂತೂ ಯಾವ ಸುಧಾರಣೆಯನ್ನೂ ಕಂಡಿರಲಿಲ್ಲ ಆ ಊರು. ಹಾಗೇ ನಮ್ಮ ಆಸ್ಪತ್ರೆಯ ಕ್ಯಾಂಪಸ್ ನಲ್ಲೂ ವಿಶೇಷ ಚಟುವಟಿಕೆಗಳು ಇರ್ಲಿಲ್ಲ. ಬಹಳ ಜನ ತಮ್ಮ ಕುಟುಂಬ ಸಹಿತ ಇರಲೇ ಇಲ್ಲ ಅಲ್ಲಿ. ಒಬ್ಬೊಬ್ರೇ ಇರತಿದ್ರು. ಒಂದೋ ಎರಡೋ ಅಷ್ಟೇ ಕುಟುಂಬಗಳು. ನನಗೆ ಈಗ ಒಮ್ಮೊಮ್ಮೆ ಅನಿಸುತ್ತದೆ, ನಾವೂ ಹಾಗೇ ಮಾಡಬಹುದಿತ್ತು ಏನೋ ಅಂತ.‌ ಆದರೆ ಆ ಊರಿನ ಪರಿಸ್ಥಿತಿ ನೋಡಿದ್ರೆ ಅದು ಅಸಾಧ್ಯದ ಮಾತೇ. ಆ ಅಸಹಾಯಕ ಜನತೆ ನೆನಪಾದಾಗ ನಮ್ಮ ನಿರ್ಧಾರ ಸರಿಯಾದದ್ದೇ ಅನಿಸ್ತದೆ.

ನಮಗೆ 1989 ಜೂನ್ ನಲ್ಲಿ ಅಲ್ಲಿಂದ ಧಾರವಾಡ ಹತ್ತಿರದ ಗರಗ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಟ್ರಾನ್ಸ್ಫರ್ ಆಯ್ತು. ಧಾರವಾಡದಿಂದ 15 ಕಿ.ಮೀ. ದೂರ ಅಷ್ಟೇ. ಮಗಳು ಎಂಟನೇ ಕ್ಲಾಸ್ ನಲ್ಲಿ, ಮಗ ಆರನೇ ಕ್ಲಾಸ್ ನಲ್ಲಿ. ದೊಡ್ಡ ಮಗ S.S.L.C. ಅಲ್ಲೇ ಹುಕ್ಕೇರಿಯಲ್ಲಿ. ಪಿ.ಯು.ಸಿ.ಗೆ ಬಹಳ ಅನುಕೂಲ ಆಯ್ತು. ಸರಿಯಾದ ಸಮಯಕ್ಕೆ ಸರಿಯಾದ ಸ್ಥಳಕ್ಕೆ ವರ್ಗಾವಣೆ  ಆಗಿದ್ದು ಖುಷಿ ತಂದಿತ್ತು. ಯಾರೂ ಒಂದೆರಡು ವರ್ಷ ಕೂಡ ಇರದ ಆ ಊರಿನಲ್ಲಿ ಮಕ್ಕಳು ಮರಿ ಸಹಿತ ನಾಲ್ಕೂವರೆ ವರ್ಷ ಇದ್ವಿ, ಚಿತ್ರ ವಿಚಿತ್ರ ಅನುಭವಗಳಲ್ಲಿ ಮುಳುಗೇಳುತ್ತ! ಆದರೆ ನಾವು ಅಲ್ಲಿಂದ ಹೊರಡೋ ದಿನದ ಆ ಅನುಭವ, ಆ ಚಿತ್ರ ಮಾತ್ರ ನಾ ಕೊನೇ..ವರೆಗೂ ಮರೆಯಲು ಸಾಧ್ಯವೇ ಇಲ್ಲ –

ನಮ್ಮ ಸಾಮಾನೆಲ್ಲ ಲಾರೀಲಿ ತುಂಬಿ ಆಗಿತ್ತು. ಲಾರಿ  ಜೊತೆ ನನ್ನ ತಮ್ಮ ಹೊರಟಿದ್ದ. ನಾವು ಹಾನಗಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ಜೀಪಿನಲ್ಲಿ ಹೋಗೋದು ಅಂತ ಆಗಿತ್ತು, ಜೀಪು ಬಂದೂ ನಿಂತಿತ್ತು. ಕೆಲಸದ ಹುಡುಗಿ ಅನಸೂಯಾನ ತಾಯಿನೂ ಬಂದ್ಲು ನಮ್ಮ ಜೊತೆ ಗರಗಕ್ಕೆ. ಬೀಳ್ಕೊಡಲು ನಮ್ಮನ್ನು ಸ್ಟಾಫ್ ನವರು, ಊರ ಮುಖಂಡರು ಎಲ್ಲಾ ಬಂದಿದ್ರು. ಆಗ ದೀಪಕ ಇದ್ದಕ್ಕಿದ್ದಂತೆ ‘ಅಕ್ಕಾರ, ಸಾಹೇಬ್ರ’ ಅಂತ ಕೂಗಿದ. ಏನಾಯ್ತು ಅಂತ ತಿರುಗಿ ನೋಡಿದಾಗ, ಲಾರಿ ಮುಂದೆ ಹಳ್ಳಿ ಜನ ಸಾಲಾಗಿ ಮಲಗಿ ಬಿಟ್ಟಿದ್ದಾರೆ, ಹೇಗೆ ಹೋಗ್ತಿರೋ ಹೋಗ್ರಿ ಅಂತ! ಮೂಕರಾಗಿ ನಿಂತು ಬಿಟ್ವಿ! ಅರಿಯದೇ ನಮ್ಮ ತಲೆ ಬಾಗಿತು, ಕೈ ಜೋಡಿಸಿತು.ಕೊನೆಗೆ ಊರ ಮುಖಂಡರು ಸ್ಟಾಫ್ ನವರು ಎಲ್ಲಾ ಸೇರಿ ಆ ಜನರನ್ನು ಸಮಾಧಾನ ಪಡಿಸಿ ನಮಗೆ ಹೊರಡಲು ದಾರಿ ಮಾಡಿ ಕೊಟ್ರು. ಆ ತಿಳವಳ್ಳಿಯನ್ನು, ಆ ಜನರನ್ನು ಕಣ್ಣಲ್ಲಿ ತುಂಬಿಕೊಳ್ಳುತ್ತಾ ನಿಧಾನವಾಗಿ ಸಾಗಿದೆವು ಗರಗದತ್ತ ಭಾರವಾದ ಮನದಲ್ಲಿ ನುಸುಳಿದ ಬಿಡುಗಡೆಯ ಒಂದು ಎಳೆಯೊಂದಿಗೆ ಹೊಸ ಅನಭವಗಳ ಲೋಕದತ್ತ……

‍ಲೇಖಕರು Avadhi

December 22, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅವಳಿಗೆ ಕೊಡುವ ಪರ್ಫೆಕ್ಟ್ ಗಿಫ್ಟ್…

ಅವಳಿಗೆ ಕೊಡುವ ಪರ್ಫೆಕ್ಟ್ ಗಿಫ್ಟ್…

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ...

ಕಾಡಿದ ‘ನಾರಸಿಂಹ’

ಕಾಡಿದ ‘ನಾರಸಿಂಹ’

ಕಿರಣ್ ಭಟ್ ಅಭಿನಯ: ನೃತ್ಯನಿಕೇತನ ಕೊಡವೂರುರಚನೆ: ಸುಧಾ ಆಡುಕಳಸಂಗೀತ, ವಿನ್ಯಾಸ, ನಿರ್ದೇಶನ: ಡಾ.ಶ್ರೀಪಾದ ಭಟ್ನೃತ್ಯ: ಮಾನಸಿ ಸುಧೀರ್,...

ಕಾಲದಾ ಕನ್ನಡಿ

ಕಾಲದಾ ಕನ್ನಡಿ

ವಿಜಯಾ ಮೋಹನ್ ಇದ್ಯಾಕುಡುಗಿ ಇಂಗೆ ಕಂಬ ನಿಂತಂಗೆ ನಿಂತು ಬುಟ್ಟೆ, ಇದು ಕಳ್ಳು ಬಳ್ಳಿಯೆಂಬ ಅತ್ತಿಗೆಯ ದೊಡ್ಡಮ್ಮನ ಮಾತು. ಅವಳು ಅಂಗೆ...

2 ಪ್ರತಿಕ್ರಿಯೆಗಳು

  1. Shrivatsa Desai

    ನಮ್ಮನ್ನೂ ಸಹ ಬಿಟ್ಟಗಲದ ಅನುಭವಗಳನ್ನು ವರ್ಣಿಸಿದ ಸರಣಿ. ನಾವೂ ‘ಅಕ್ಕಾವ್ರ ಮತ್ತ ಯಾವಾಗ ಭೆಟ್ಟಿ ರಿ? ಅನ್ನುವಂತೆ ಮಾಡಿ ಹೋದ ವೈದ್ಯರ ಪತ್ನಿಗೆ ಅಭಿನಂದನೆಗಳು. ಈ ಎರಡು ಸರಣಿ ಪ್ರಕಟಿಸಿ ಉಣಬಡಿಸಿದ ಅವಧಿಗೂ ಕೃತಜ್ಞತೆಗಳು!

    ಪ್ರತಿಕ್ರಿಯೆ
  2. Sarojini Padasalgi

    ತುಂಬು ಹೃದಯದ ಧನ್ಯವಾದಗಳು ಶ್ರೀವತ್ಸ ದೇಸಾಯಿ ಯವರೇ. ಅವಕಾಶ ಸಿಕ್ಕರೆ ಮತ್ತೆ ಖಂಡಿತಾ ಭೇಟಿ ಯಾಗೋಣ. ಆ ಖಜಾನೆ , ಗಂಟು ಅಕ್ಷಯ. ಈ ಅವಕಾಶ ಒದಗಿಸಿದ್ದಕ್ಕೆ ಅವಧಿಗೆ ಅನಂತ ವಂದನೆಗಳು ಹಾಗೂ ಕೃತಜ್ಞತೆಗಳು.ತಮ್ಮ ಅಮೂಲ್ಯ ಅನಿಸಿಕೆ ತಿಳಿಸಿ ಬರೆದ ಓದುಗ ಬಂಧುಗಳಿಗೆ ಅನೇಕ ಧನ್ಯವಾದಗಳು, ವಂದನೆಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: