“ಸರ್ದಾರ್ಜಿಯೆಂಬ ದಿಲ್ಲಿಯ ಅನಭಿಷಿಕ್ತ ಸುಲ್ತಾನ”

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’

ಈಚೆಗೆ ಮಂಗಳೂರಿಗೆ ಬಂದಿದ್ದ ದುಬೈ ನಿವಾಸಿ ಮಿತ್ರನೊಬ್ಬ ಕರೆ ಮಾಡಿ ಯಾವ ಪುಸ್ತಕ ಖರೀದಿಸಲಿ ಎಂದು ನನ್ನಲ್ಲಿ ಸಲಹೆ ಕೇಳುತ್ತಿದ್ದ.

ನಿನಗ್ಯಾವ ಬಗೆಯ ಪುಸ್ತಕಗಳು ಇಷ್ಟವಪ್ಪಾ ಎಂದು ಕೇಳಿದರೆ ನಿಖರವಾಗಿ 'ಫಿಕ್ಷನ್ ಮತ್ತು ಹ್ಯೂಮರ್'ಎಂದಿದ್ದ ಆತ. ಕಳೆದ ಕೆಲ ವರ್ಷಗಳಿಂದ ನನ್ನ ಫಿಕ್ಷನ್ ಓದು ಇಲ್ಲವೇ ಇಲ್ಲವೆನ್ನುವಷ್ಟು ಕಮ್ಮಿಯಾಗಿದೆ.ಇನ್ನು ಹಾಸ್ಯ ಪ್ರಧಾನವಾಗಿರುವ ಹ್ಯೂಮರ್ ಕೆಟಗರಿಯ ಓದು ಅಲ್ಲೋ, ಇಲ್ಲೋ ಸಿಕ್ಕರಾಯಿತು; ಇಲ್ಲವಾದರೆ ಇಲ್ಲ ಎಂಬಂತಿನ ಪರಿಸ್ಥಿತಿ.

ನನ್ನ ಮಟ್ಟಿಗೆ ಅದು ಯಾವತ್ತೂ ಊಟದೊಂದಿಗೆ ನೆಂಚಿಕೊಳ್ಳಲು ಇರುವ ಉಪ್ಪಿನಕಾಯಿಯಂತೆ. ಊಟದ ಜೊತೆ ಸಿಕ್ಕರೆ ಅದೃಷ್ಟ. ಆದರೆ ವಿಶೇಷವಾಗಿ ಉಪ್ಪಿನ ಕಾಯಿಯನ್ನೇ ಹುಡುಕಿಕೊಂಡು ಹೋದಂತಹ ಸಂದರ್ಭಗಳು ಕಮ್ಮಿ.

ಪರಿಸ್ಥಿತಿಯು ಹೀಗಿದ್ದಾಗ ಪುಸ್ತಕವೊಂದನ್ನು ನನಗೆ ಸಜೆಸ್ಟ್ ಮಾಡಲು ಸಾಧ್ಯವಾಗದೆ ತಲೆ ಕೆರೆದುಕೊಂಡು ಫೋನಿಟ್ಟಾಯಿತು. ಫೋನಿಟ್ಟ ಸ್ವಲ್ಪ ಹೊತ್ತಿನ ನಂತರ ಖ್ಯಾತ ಪತ್ರಕರ್ತರೂ, ಲೇಖಕರೂ ಆಗಿದ್ದ ಸರ್ದಾರ್ ಖುಷ್ವಂತ್ ಸಿಂಗ್ ಥಟ್ಟನೆ ನೆನಪಾದರು.

ಖುಷ್ವಂತರ ಕಾದಂಬರಿಗಳನ್ನು ಅಥವಾ ಸಿಖ್ಖಿಸಂ ನಂತಹ ತೂಕದ ವಿಷಯಗಳ ಬಗ್ಗೆ ಬರೆಯಲಾಗಿದ್ದ ಅವರ ಕೃತಿಗಳನ್ನು ನಾನು ಓದಿದವನಲ್ಲ. ಆದರೆ ಬದುಕು, ಬರಹ, ಪ್ರೀತಿ, ಸ್ನೇಹ, ಸ್ಕಾಚು… ಹೀಗೆ ಹಲವು ಸಂಗತಿಗಳ ಬಗ್ಗೆ ಅವರು ಬರೆದಿರುವ ಲೇಖನಗಳನ್ನು ಪುಸ್ತಕ ರೂಪದಲ್ಲಿ ದಂಡಿಯಾಗಿ ಓದಿದ್ದೆ. ಹೀಗೆ ಓದಿದಾಗಲೆಲ್ಲಾ ಅವರ ಅಗಾಧ ಹಾಸ್ಯ ಪ್ರಜ್ಞೆಯನ್ನು ಆಸ್ವಾದಿಸುತ್ತಾ ಮನಸಾರೆ ನಕ್ಕಿದ್ದೆ ಕೂಡ.

ಕೂಡಲೇ ಗೆಳೆಯನಿಗೆ ಕರೆ ಮಾಡಿ ʼಫಾರ್ ಎ ಚೇಂಜ್’, ನಾನ್ ಫಿಕ್ಷನ್ ವಿಭಾಗದಲ್ಲೂ ಹ್ಯೂಮರ್ ಅನ್ನು ಪ್ರಯತ್ನಿಸು ಎಂಬ ಸಲಹೆ ಕೊಟ್ಟು, ಖುಷ್ವಂತರ ಹೆಸರು ಹೇಳಿ ಫೋನಿಟ್ಟುಬಿಟ್ಟೆ. ಅಲ್ಲಿಗೆ ಮನಸ್ಸು ನಿರಾಳ. ಖುಷ್ವಂತ್ ಸಿಂಗ್ ಎಂದರೆ ಇಂದು ಬಹಳಷ್ಟು ಮಂದಿಗೆ ಥಟ್ಟನೆ ನೆನಪಾಗುವುದು ಪೋಲಿ ಜೋಕುಗಳು ಮತ್ತು ʼಕಂಪೆನಿ ಆಫ್ ವಿಮೆನ್’ನಂತಹ ಇರೋಟಿಕ್ ಪುಸ್ತಕಗಳು ಮಾತ್ರ. ಆದರೆ ಅವರ ಸಾಹಿತ್ಯ ಕೃಷಿಯನ್ನು ಸಮಗ್ರವಾಗಿ ನೋಡಿದಾಗ ಸರ್ದಾರ್ ಖುಷ್ವಂತ್ ಸಿಂಗ್ ಅದೆಷ್ಟೋ ಸಂಗತಿಗಳ ಬಗ್ಗೆ ವಿಸ್ತಾರವಾಗಿ, ನಾಲ್ಕು ಜನ್ಮಗಳಿಗಾಗುವಷ್ಟು ದಂಡಿಯಾಗಿ ಬರೆದಿರುವುದು ಸ್ಪಷ್ಟವಿದೆ.

ಓದು, ಬರಹ, ಧರ್ಮ, ಢಾಂಬಿಕತೆ, ರಾಜಕೀಯ, ಸ್ನೇಹ, ಪ್ರೀತಿ, ಸೆಕ್ಸ್, ಸ್ಕಾಚ್, ಕವಿತೆ, ಇತಿಹಾಸ, ಸಣ್ಣಕತೆ, ನೆನಪು, ಟಿಪ್ಪಣಿ… ಹೀಗೆ ಎಲ್ಲದರ ಬಗ್ಗೆಯೂ ನಿರಂತರವಾಗಿ ಬರೆಯುತ್ತಾ ಹೋದ ಖುಷ್ವಂತರಿಗೆ ಎಲ್ಲೆಯೆಂಬುದಿರಲಿಲ್ಲ. ಯಾವುದರ ಬಗ್ಗೆ ಬರೆದರೂ ಆಕರ್ಷಕವಾಗಿ, ಗರಿಗರಿಯಾಗಿ ಓದಿಸಿಕೊಂಡು ಹೋಗುವ ಭಾರತದ ಕೆಲವೇ ಕೆಲವು ಬರಹಗಾರರಲ್ಲಿ ಅವರೂ ಒಬ್ಬರು.

ಅಂದಹಾಗೆ ಸರ್ದಾರ್ ಖುಷ್ವಂತ್ ಸಿಂಗ್ ಸಾವಿನ ಬಗ್ಗೆ ಬರೆದಿದ್ದ ಕೆಲವು ಲೇಖನಗಳು ಮತ್ತು ಟಿಪ್ಪಣಿಗಳ ಸಂಗ್ರಹವನ್ನೇ ಪುಸ್ತಕವಾಗಿಸಿದ್ದ ಕೃತಿಯನ್ನು ಈಚೆಗೆ ಓದಿದ್ದೆ. ಕೆಲ ವರ್ಷಗಳ ಹಿಂದೆ ಓದಿ ಮೆಚ್ಚಿಕೊಂಡು, ಮರು ಓದಿಗೆ ಸಿದ್ಧವಾಗಿದ್ದ ಕೃತಿಯಾಗಿತ್ತದು. ಸಾವಿನಂತಹ ಗಂಭೀರ ವಿಚಾರದ ಬರಹಗಳಲ್ಲೂ ಖುಷ್ವಂತರ ಹಾಸ್ಯಪ್ರಜ್ಞೆಯೇನೂ ಕಮ್ಮಿಯಾಗಿರಲಿಲ್ಲ. ಇಪ್ಪತ್ತರ ತುಂಟ ವಯಸ್ಸಿನಲ್ಲಿದ್ದಾಗಲೇ ತನ್ನ ನಿಧನ ವಾರ್ತೆಯೊಂದನ್ನು ಬರೆದು ಪ್ರಕಟಿಸಿದ್ದರು ಖುಷ್ವಂತ್. ಈ ವಿಶಿಷ್ಟ ಕೃತಿಯಲ್ಲಿ ಝುಲ್ಫಿಕಾರ್ ಅಲಿ ಭುಟ್ಟೋ ಸಾವಿನ ಬಗ್ಗೆ ಅವರು ದಾಖಲಿಸಿರುವ ನೆನಪೊಂದು ಹೀಗಿದೆ.

ಪಾಕಿಸ್ತಾನದ ಅಂದಿನ ಮಿಲಿಟರಿ ನಾಯಕನಾಗಿದ್ದ ಜನರಲ್ ಝಿಯಾ ಉಲ್ ಹಕ್, ದೇಶದ ಪ್ರಧಾನ ಮಂತ್ರಿಯಾಗಿ ಮೆರೆದಿದ್ದ ಝುಲ್ಫಿಕಾರ್ ಅಲಿ ಭುಟ್ಟೋರಿಗೆ ಮರಣದಂಡನೆ ನೀಡುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಅದರಂತೆ ಭುಟ್ಟೋರನ್ನು ಜೈಲಿಗಟ್ಟಲಾಗಿತ್ತು. ಆದರೂ ಇವತ್ತಲ್ಲ ನಾಳೆ ತಾನು ಬಿಡುಗಡೆಯಾಗುತ್ತೇನೆಂಬ ವಿಚಿತ್ರ ಆತ್ಮವಿಶ್ವಾಸವೊಂದು ಭುಟ್ಟೋರಿಗಿತ್ತು. ಭುಟ್ಟೋರ ದುರಾದೃಷ್ಟವೇನೋ; ಹಾಗಾಗಲಿಲ್ಲ. ಮರಣದಂಡನೆ ಖಾತ್ರಿಯಾಯಿತು. ಒಟ್ಟಿನಲ್ಲಿ ಭುಟ್ಟೋರ ಪಾಲಿಗೆ ಸಾವೆಂಬುದು ಯಾವುದೇ ಕ್ಷಣದಲ್ಲಿ ತನ್ನ ಮೇಲೆರೆಗಬಹುದಾದ ತೂಗುಗತ್ತಿಯಾಗಿ ಬಿಟ್ಟಿತ್ತು.

ಭುಟ್ಟೋ ರಾಜಕೀಯ ಖೈದಿಯಾಗಿ ಒಂದು ವರ್ಷಕ್ಕೂ ಹೆಚ್ಚಿನ ಅವಧಿಯನ್ನು ಜೈಲಿನಲ್ಲಿ ಕಳೆದಿದ್ದರು. ಅವರಿಗಾಗಿ ತಕ್ಕಮಟ್ಟಿನ ವಿಐಪಿ ಸೌಲಭ್ಯಗಳನ್ನು ಜೈಲಿನಲ್ಲಿ ನೀಡಲಾಗಿದ್ದರೂ ದೇಹ ಕೊಂಚ ಬಡವಾಗಿತ್ತು. ಗಡ್ಡ ಉದ್ದಕ್ಕೆ ಬೆಳೆದಿತ್ತು. ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ನೋಡುತ್ತಿದ್ದ ಭುಟ್ಟೋ ತನ್ನ ನೀಳವಾದ ಗಡ್ಡವನ್ನು ಸವರುತ್ತಾ ಹೀಗಂದಿದ್ದರಂತೆ: “ಸತ್ತ ನಂತರ ಮುಲ್ಲಾನಂತೆ ಕಾಣುವುದು ನನಗಿಷ್ಟವಿಲ್ಲ. ಬೇಗ ಗಡ್ಡ ಬೋಳಿಸಬೇಕು!”

ಭುಟ್ಟೋ ಗಡ್ಡ ಬೋಳಿಸಿದರು. ಈಗ ತನ್ನದೇ ಮುಖಾರವಿಂದವು ಕಾಣಲು ಕೊಂಚ ಸಹನೀಯವಾಯಿತೇನೋ. ಅವರ ಮುಖದಲ್ಲೀಗ ಮಂದಹಾಸ ಮೂಡಿತ್ತು. “ಅಬ್ಬಾ… ಈಗ ನಾನು ಫಸ್ಟ್ ವರ್ಲ್ಡ್ ನಾಯಕನಂತೆ ಕಾಣುತ್ತೇನೆ ನೋಡಿ,” ಎಂದು ಉದ್ಗರಿಸಿದ್ದರಂತೆ ಭುಟ್ಟೋ.

ಸರ್ದಾರ್ ಖುಷ್ವಂತರಿಗೆ ಭಾರತ ಸರ್ಕಾರದ ಗಣ್ಯಾತಿಗಣ್ಯರ ವಲಯದಲ್ಲಿ ಎಷ್ಟು ಮಂದಿ ಗೆಳೆಯರಿದ್ದರೋ, ಪಾಕಿಸ್ತಾನ ಸರ್ಕಾರದ ಗಣ್ಯರ ವಲಯದಲ್ಲೂ ಬಹುತೇಕ ಅಷ್ಟೇ ಗೆಳೆಯರಿದ್ದರು. ಪಾಕಿಸ್ತಾನದ ಖ್ಯಾತ ನ್ಯಾಯವಾದಿಯೂ, ವಿದೇಶ ವ್ಯವಹಾರಗಳ ಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದ ಮನ್ಝೂರ್ ಕಾದಿರ್ ಖುಷ್ವಂತರ ಖಾಸಾ ಗೆಳೆಯರಾಗಿದ್ದವರು. ಹೀಗಾಗಿ ಇಂತಹ ಸ್ವಾರಸ್ಯಕರ ಇನ್ ಸೈಡ್ ಸ್ಟೋರಿಗಳು ಅವರಿಗೆ ದಕ್ಕುತ್ತಿದ್ದವು. ಒಟ್ಟಿನಲ್ಲಿ ಸಾವಿನಂತಹ ಗಂಭೀರ ವಿಚಾರದ ಬಗ್ಗೆ ಬರೆಯುವಾಗ ಹಾಸ್ಯವನ್ನು ಕರೆತಂದ ಹೊರತಾಗಿಯೂ, ಬರಹದ ಪ್ರಧಾನ ವಿಷಯದ ತೂಕಕ್ಕೆ ಕುಂದು ತರದಂತೆ ಪ್ರಸ್ತುತಪಡಿಸುವ ಕಲೆಯು ಅವರಿಗೆ ಸಿದ್ಧಿಸಿತ್ತು.

ದಿಲ್ಲಿ ಕಾಲಮ್ಮಿನಲ್ಲಿ ಇದೇನು ಈ ಬಾರಿ ಸರ್ದಾರ್ ಖುಷ್ವಂತರಷ್ಟೇ ಬರುತ್ತಿದ್ದಾರೆ ಎಂದು ಅಚ್ಚರಿಪಟ್ಟುಕೊಳ್ಳಬೇಡಿ. ದಿಲ್ಲಿಗೂ ಸರ್ದಾರ್ ಖುಷ್ವಂತರಿಗೂ ಇರುವ ಸಂಬಂಧ ಹಳೆಯದ್ದು. ಖುಷ್ವಂತರ ತಂದೆಯಾಗಿದ್ದ ಸೋಭಾ ಸಿಂಗ್ ದಿಲ್ಲಿಯಲ್ಲಿ ಗುತ್ತಿಗೆದಾರರಾಗಿದ್ದವರು. ಖುಷ್ವಂತರ ತಾತ ಸುಜಾನ್ ಸಿಂಗ್ ಮತ್ತು ತಂದೆ ಸೋಭಾರ ಕಾಂಟ್ರಾಕ್ಟರ್ ಜೋಡಿ ಲ್ಯೂಟೆನ್ಸ್ ನಿರ್ಮಿತ ದಿಲ್ಲಿಯಲ್ಲಿ ಆಗಲೇ ಯಶಸ್ವಿಯಾಗಿತ್ತು.

ರಾಷ್ಟ್ರಪತಿ ಭವನದ ಕೆಲ ಭಾಗಗಳಲ್ಲದೆ ದಿಲ್ಲಿಯ ಇಂಡಿಯಾ ಗೇಟ್, ಕನಾಟ್ ಪ್ಲೇಸ್, ಸೌತ್ ಬ್ಲಾಕ್, ಸಿಂದಿಯಾ ಹೌಸ್, ಬರೋಡಾ ಹೌಸ್ ನಂತಹ ಪ್ರತಿಷ್ಠಿತ ಕಟ್ಟಡಗಳನ್ನೂ, ವಲಯಗಳನ್ನೂ ಇವರು ನಿರ್ಮಿಸಿದ್ದರು. ದಿಲ್ಲಿಯಲ್ಲಿ ಅಪಾರವೆನ್ನಿಸುವಷ್ಟಿನ ಭೂಮಿಯ ಮೇಲೆ ಹಿಡಿತವಿದ್ದ ಸೋಭಾ ಸಿಂಗ್ ರನ್ನು ʼಆಧೀ ದಿಲ್ಲಿ ಕಾ ಮಾಲಿಕ್’ (ಅರ್ಧ ದಿಲ್ಲಿಯ ಮಾಲೀಕ) ಎಂದೂ ಕರೆಯುತ್ತಿದ್ದರಂತೆ.

ಖುಷ್ವಂತ್ ಸಿಂಗ್ ಸ್ವತಃ ತನ್ನ ಜೀವಿತಾವಧಿಯ ಬಹುಭಾಗವನ್ನು ದಿಲ್ಲಿಯಲ್ಲಿ ಕಳೆದವರು. ಅವರ ಪುತ್ರ ರಾಹುಲ್ ಸಿಂಗ್ ನೆನಪಿಸಿಕೊಳ್ಳುವಂತೆ ಖುಷ್ವಂತ್ ದಿಲ್ಲಿಯ ಬರ್ಡ್ ವಾಚಿಂಗ್ ಸೊಸೈಟಿಯೊಂದರ ಭಾಗವಾಗಿದ್ದರು. ದಿಲ್ಲಿಯಲ್ಲಿದ್ದರೂ, ಕಸೌಲಿಗೆ ಹೋದರೂ ಕಾಲ್ನಡಿಗೆಯ ವಿಹಾರವು ಅವರಿಗೆ ಸದಾ ಪ್ರಿಯವಾಗಿತ್ತು. ದಿಲ್ಲಿ ಜಿಮ್ ಖಾನಾದಲ್ಲಿ ಅವರು ಎಂಭತ್ತೈದರ ವಯಸ್ಸಿನಲ್ಲೂ ತನ್ನ ಗೆಳೆಯರೊಂದಿಗೆ ಟೆನ್ನಿಸ್ ಆಡುತ್ತಿದ್ದರಂತೆ.

ಖುಷ್ವಂತರ ಬರಹಗಳಲ್ಲಿ ಸಾಕಷ್ಟು ಕಾಣಸಿಗುವ ಅದೆಷ್ಟೋ ಉರ್ದು ಸಾಲುಗಳನ್ನು ಕಂಡು ಅಚ್ಚರಿಪಟ್ಟವನು ನಾನು. ಫೈಝ್ ಅಹ್ಮದ್ ಫೈಝ್, ಇಕ್ಬಾಲ್, ಮಿರ್ಜಾ ಗಾಲಿಬ್.. ಹೀಗೆ ಅವರು ಆಗಾಗ ಉಲ್ಲೇಖಿಸುತ್ತಿದ್ದ ಉರ್ದು ಕವಿಗಳ ಸಂಖ್ಯೆಯು ನಿಲ್ಲದೆ ಸಾಗುತ್ತದೆ. ಇವುಗಳಲ್ಲದೆ ಹಿಂದೂ, ಇಸ್ಲಾಂ, ಕ್ರೈಸ್ತ, ಜೈನ ಮತ್ತು ಸಿಖ್ ಧರ್ಮಗಳ ಬಗ್ಗೆಯೂ ಸಿಂಗ್ ಆಳವಾಗಿ ಅಧ್ಯಯನವನ್ನು ನಡೆಸಿದ್ದರು. ಸಿಖ್ ಧರ್ಮ ಮತ್ತು ಅದರ ಸುದೀರ್ಘ ಇತಿಹಾಸದ ಬಗ್ಗೆ ಅವರು ಬರೆದಿರುವ ಕೃತಿಯು, ಸಿಖ್ಖಿಸಂ ಬಗ್ಗೆ ತಿಳಿದುಕೊಳ್ಳಲು ಬಯಸುವ ಆಸಕ್ತರಿಗೆ ಇಂದಿಗೂ ಮೌಲಿಕ ಕೃತಿಯಾಗಿದೆ.

ಹೀಗೆ ಅಪಾರವಾದ ಜ್ಞಾನ, ಓದು, ಬರಹ, ತಿರುಗಾಟಗಳಿಂದ ಕೂಡಿದ್ದ ಸಾಧನೆಯ ಮಾರ್ಗದಲ್ಲಿ ಸಾಗುತ್ತಲೇ ತನ್ನನ್ನು ತಾನು ಬಹಿರಂಗವಾಗಿ ಲೇವಡಿ ಮಾಡಿಕೊಂಡು ಹಾಯಾಗಿದ್ದವರು ಖುಷ್ವಂತ್. ಇಷ್ಟರ ಹೊರತಾಗಿಯೂ ಸರ್ದಾರ್ ಖುಷ್ವಂತ್ ಸಿಂಗ್ ದಿಲ್ಲಿಯ ಹವಾಮಾನ, ಸಸ್ಯ ಮತ್ತು ಜೀವಸಂಪತ್ತಿನ ವೈವಿಧ್ಯತೆಯ ಬಗ್ಗೆ ಬರೆದಿರುವ ಕೃತಿಯೊಂದು ನನಗೆ ಪುಸ್ತಕದಂಗಡಿಯೊಂದರಲ್ಲಿ ಆಕಸ್ಮಿಕವಾಗಿ ಕಾಣಸಿಕ್ಕಿತ್ತು.

ತನ್ನ ಕಾಲ್ನಡಿಗೆಯ ವಿಹಾರ, ಅಲ್ಲಿ ಕಾಣುತ್ತಿದ್ದ ಸಸ್ಯಗಳು, ಹೂವುಗಳು, ಪಕ್ಷಿಗಳು, ಚಿಟ್ಟೆಗಳು… ಹೀಗೆ ಬದುಕಿನ ಚಿಕ್ಕ-ಚಿಕ್ಕ ಸಂಗತಿಗಳನ್ನೂ ಆಸ್ವಾದಿಸುವ ವಿಶಿಷ್ಟ ಗುಣವು ಅವರಲ್ಲಿತ್ತು ಎಂಬುದಕ್ಕೆ (ಅವರ ಶೈಲಿಗೆ) ಅಷ್ಟಾಗಿ ಜನಪ್ರಿಯವಲ್ಲದ ಈ ಪುಸ್ತಕವೂ ಸಾಕ್ಷಿ. ಸಾಕಷ್ಟು ವರ್ಣಮಯ ಚಿತ್ರಗಳಿಂದ ಕೂಡಿದ ಈ ಸುಂದರ ಪುಸ್ತಕವನ್ನು ಓದಿ ಸವಿಯಲು ಮಕ್ಕಳಿಗೂ ನೀಡಬಹುದು.

ನಾನು ದಿಲ್ಲಿಯಲ್ಲಿದ್ದ ಆರಂಭದ ದಿನಗಳಲ್ಲಿ ಸರ್ದಾರ್ ಖುಷ್ವಂತ್ ಸಿಂಗ್ ಕೂಡ ದಿಲ್ಲಿಯಲ್ಲಿದ್ದರು. ಆದರೆ ಅವರನ್ನು ಭೇಟಿಯಾಗುವ ಭಾಗ್ಯ ಮಾತ್ರ ಎಂದಿಗೂ ಒದಗಿ ಬರಲಿಲ್ಲ. ಕೊಂಚ ಪ್ರಯತ್ನಿಸಿದರೆ ಸಾಧ್ಯವಾಗುತ್ತಿತ್ತೇನೋ. ಆದರೆ ಅವರ ಬಗೆಗಿನ ಗೌರವದ ಜೊತೆಗಿದ್ದ ಸಂಕೋಚ, ಹಿಂಜರಿಕೆಗಳೂ ಕೂಡ ಅಡ್ಡಗಾಲಿಕ್ಕಿದ್ದು ಸತ್ಯ.

ಖುಷ್ವಂತರ ಇಳಿವಯಸ್ಸು, ಅವರ ಸಂಜೆ ಏಳರ ಸ್ಕಾಚ್ ಸಮಯ, ಎಂಟರ ನಿದ್ದೆ, ಅಪಾರ ಶಿಸ್ತಿನ ಅವರ ಓದು-ಸಮಯ ಪರಿಪಾಲನೆ, ಸಿಂಗ್ ಗಂಡಸರ ಕಂಪೆನಿಗಿಂತ ಹೆಂಗಸರ ಕಂಪೆನಿಯನ್ನು ಹೆಚ್ಚು ಇಷ್ಟಪಡುತ್ತಾರೆಂಬ ಗಾಸಿಪ್… ಇತ್ಯಾದಿ ಹಲವು ಸಂಗತಿಗಳು ಕೊನೆಗೂ ಅವರ ಭೇಟಿಯನ್ನು ಸಾಧ್ಯವಾಗಿಸಲಿಲ್ಲ.

ಸಿಂಗ್ ಒಂದು ಕಡೆ ತನ್ನ ವಿದೇಶಿ ಪ್ರೇಯಸಿಯೊಬ್ಬಳ ಬಗ್ಗೆ ಬರೆಯುತ್ತಾ ಆಕೆ ಹೇಳಿದ ಸಾಲೊಂದನ್ನು ನೆನಪಿಸಿಕೊಳ್ಳುತ್ತಾರೆ. ‘ನೀವು ಸಿಖ್ ಯುವಕರು ನೋಡೋಕೇನೋ ಬಹಳ ಆಕರ್ಷಕವಾಗಿರುತ್ತೀರಿ.ಆದರೆ ಮುಖದ ಮೇಲೆ ಕಾಡಿನಂತೆ ಗಡ್ಡ ಬಿಡೋದ್ಯಾಕೆ?ʼ ಎಂದಿದ್ದಳಂತೆ ಆಕೆ (ಬಹುಷಃ ಆ ದಿನಗಳಲ್ಲಿ ಗಡ್ಡವು ಸ್ಟೈಲ್ ಸಿಂಬಲ್ ಆಗಿರಲಿಲ್ಲ.) ಆ ಯುವ ಖುಷ್ವಂತ್ ನಿಂದ ಹಿಡಿದು ‘ಅಗ್ನೋಸ್ಟಿಕ್ ಖುಷ್ವಂತ್’ ಕೃತಿಯ ಮುಖಪುಟದಲ್ಲಿರುವ ಇಳಿವಯಸ್ಸಿನ, ಬಿಳಿಗಡ್ಡದ ಖುಷ್ವಂತ್ ಸಿಂಗ್ ರವರ ಇಮೇಜು ಇಂದಿಗೂ ಮನದಲ್ಲಿ ಅಚ್ಚೊತ್ತಿದಂತಿದೆ. ತನ್ನ ಶೃದ್ಧಾಂಜಲಿಯ ಸಂದೇಶವನ್ನು ತಾನೇ ತಮಾಷೆಯಾಗಿ ಬರೆದಿದ್ದ ಸರ್ದಾರ್ಜಿಗೆ ಬಹುಷಃ ತನ್ನ ʼಫಿಲಾಸಫರ್ ಲುಕ್’ ಖುಷಿ ತಂದಿರಬಹುದೇನೋ!

ಸರ್ದಾರ್ ಖುಷ್ವಂತ್ ಸಿಂಗ್ ಸೆಂಚುರಿ ಬಾರಿಸಿಯೇ ಬಿಡುತ್ತಾರೆ ಮತ್ತು ಅದರ ಬಗ್ಗೆಯೂ ವಿಡಂಬನೆಯ ಪುಸ್ತಕವೊಂದನ್ನು ಹೊರತರುತ್ತಾರೆ ಎಂದು ಕಾಯುತ್ತಿದ್ದ ನನ್ನಂತಹ ಅಸಂಖ್ಯಾತ, ಅಜ್ಞಾತ ಓದುಗರಿಗೆ ಕೊನೆಗೂ ಆಗಿದ್ದು ನಿರಾಸೆ. ಖುಷ್ವಂತ್ ತೊಂಬತ್ತೊಂಭತ್ತಕ್ಕೆ ನಿಧನರಾಗಿದ್ದರು. ಇನ್ನೇನು ಶತಕದ ಹೊಸ್ತಿಲಿನಲ್ಲಿ ಉತ್ಸಾಹದಲ್ಲಿ ನಿಂತಿದ್ದ ಸಚಿನ್ ತೆಂಡುಲ್ಕರ್ ತೊಂಭತ್ತೊಂಭತ್ತಕ್ಕೆ ಔಟಾಗಿ ಪೆವಿಲಿಯನ್ ನತ್ತ ನಡೆದಂತಿನ ಭಾವ. ಮುಂದೆ ಖುಷ್ವಂತರ ಕೆಲ ಅಪ್ರಕಟಿತ ಬರಹಗಳು ಅವರ ದೇಹಾಂತ್ಯದ ನಂತರವೂ ಅವರ ಮಗಳಾದ ಮಾಲಾರವರ ಶ್ರಮದಿಂದಾಗಿ ಓದುಗರನ್ನು ತಲುಪಿದ್ದವು.

ಯಾವ ಸೆಲೆಬ್ರಿಟಿಗೂ ಕಮ್ಮಿಯಿರದಿದ್ದ ಸಿಂಗ್ ದೇಹಾಂತ್ಯದ ಸುದ್ದಿ ಸಹಜವಾಗಿಯೇ ಸದ್ದು ಮಾಡಿತ್ತು. ಶೋಭಾ ಡೇ ಸೇರಿದಂತೆ ಹಲವರು ಅವರೊಂದಿಗಿನ ಆಪ್ತ ನೆನಪುಗಳನ್ನು ತಮ್ಮ ಬರಹಗಳಲ್ಲಿ ಹಂಚಿಕೊಂಡರು. ಡೇ ಹೇಳುವಂತೆ ಖುಷ್ವಂತ್ ಸಿಂಗ್ ಎಂದರೆ ‘ಮೆಂಟಲ್ ಸ್ಪಾ; ಬೇಸತ್ತ ಮೆದುಳಿಗೆ ಆಹ್ಲಾದವನ್ನು ತರಬಲ್ಲಂತಹ ಮನುಷ್ಯ.ಖುಷ್ವಂತ್ ಸಿಂಗ್ ತನ್ನ ಬಗ್ಗೆ ತಾನೇ ಹುಟ್ಟುಹಾಕಿದ್ದ ವಿಚಿತ್ರ ಗಾಸಿಪ್ ಗಳ ಬಗ್ಗೆಯೂ ಕೆಲ ಖ್ಯಾತನಾಮರು ಹಿತವಾಗಿ ನೆನಪಿಸಿಕೊಂಡಿದ್ದರು.ಅಷ್ಟಕ್ಕೂ ಸಿಂಗ್ ಸಾಹೇಬ್ರು ತನ್ನ ವಿನೋದಮಯ ಸಾಹಸಗಳನ್ನು ಅಸಲಿಗೆ ಮಾಡಿಕೊಂಡಿದ್ದು’ ಕಮ್ಮಿ. ಆದರೆ ʼಆಡಿಕೊಂಡಿದ್ದೇ’ ಹೆಚ್ಚು ಎಂದೂ ಒಬ್ಬರು ಬರೆದ ನೆನಪು.

”ದಿಲ್ಲಿಯೆಂದರೆ ಅದೇ. ಜೀವನವು ತೀರಾ ಕಂಗೆಡಿಸುತ್ತಿದೆ ಎಂದನಿಸತೊಡಗಿದಾಗ ನಿಗಂಬೋಧ್ ಘಾಟ್ ಗೆ ಹೋಗಿ ಒಂದು ತಾಸು ಕಳೆಯಬೇಕು. ಅಲ್ಲಿ ತಂದಿಟ್ಟ ಶವಗಳು ಸುಡುವುದನ್ನೂ, ಮೃತರ ಬಂಧುಮಿತ್ರರು ರೋದಿಸುವುದನ್ನೂ ನೋಡಬೇಕು. ನಂತರ ಮನೆಗೆ ಬಂದು ಒಂದೆರಡು ಪೆಗ್ ವಿಸ್ಕಿ ಗಂಟಲಿಗಿಳಿಸಬೇಕು. ದಿಲ್ಲಿಯ ಬದುಕನ್ನು ಸಾರ್ಥಕಗೊಳಿಸಬಲ್ಲ ಅಂಶಗಳು ಎರಡೇ: ಡೆತ್ ಮತ್ತು ಡ್ರಿಂಕ್!”, ದಿಲ್ಲಿಯ ಬಗ್ಗೆ ಹೇಳುತ್ತಾ, ಬದುಕಿನ ಬಗ್ಗೆಯೂ ಹೀಗಂದಿದ್ದರು ಸರ್ದಾರ್ಜಿ. 

ಸರ್ದಾರ್ ಖುಷ್ವಂತ್ ಸಿಂಗ್ ಪಕ್ಕಾ ದಿಲ್ಲೀವಾಲಾ ಆಗಿದ್ದರಿಂದ ಅವರ ಮಾತನ್ನು ಖಂಡಿತವಾಗಿಯೂ ನಂಬಬಹುದು.

December 7, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪುಸ್ತಕ ಮುದ್ರಣದ ಹಿಂದೆ ಇದೆ ದುರಂತ ಕತೆ…

ಪುಸ್ತಕ ಮುದ್ರಣದ ಹಿಂದೆ ಇದೆ ದುರಂತ ಕತೆ…

ಸ್ವ್ಯಾನ್ ಕೃಷ್ಣಮೂರ್ತಿ ಈ ಫೋಟೋದಲ್ಲಿರುವ ಕೃಷ್ಣಪ್ಪ ಮೂಲತಃ ಬೆಂಗಳೂರಿನವರೇ ವಿದ್ಯಾಭ್ಯಾಸ ತಲೆಗೆಹತ್ತದೆ ಓದುವುದನ್ನು ಪ್ರಾರಂಭ ಹಂತದಲ್ಲೇ...

‘ನಮ್ಮ ಊರಿನ ರಸಿಕರು’ ಫೋಟೋ ಆಲ್ಬಂ

‘ನಮ್ಮ ಊರಿನ ರಸಿಕರು’ ಫೋಟೋ ಆಲ್ಬಂ

ಮಂಡ್ಯ ರಮೇಶ ಕನ್ನಡದ ಹೆಮ್ಮೆಯ ಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರ್ ರವರ ಪ್ರಖ್ಯಾತ 'ನಮ್ಮ ಊರಿನ ರಸಿಕರು' ಈಗ ತೆರೆಗೆ ಬರಲು...

ಎರಡು ಕೆಂಪು ದಾಸಾಳ ಹೂಂಗು

ಎರಡು ಕೆಂಪು ದಾಸಾಳ ಹೂಂಗು

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This