ಸಲೀಂ ನನ್ನ ಜೀವದ ಅವಿಭಾಜ್ಯ ಅಂಗ

ಅಂಜಲಿ ರಾಮಣ್ಣ

ಇಂದು ಅಂತಾರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಪ್ತಾಹದ ಕೊನೆಯ ದಿನ

ಇದರ ಅಂಗವಾಗಿ ‘ಮಕ್ಕಳ ಕಲ್ಯಾಣ ಸಮಿತಿ’ ಅಧ್ಯಕ್ಷರೂ, ‘ಅಸ್ತಿತ್ವ ಟ್ರಸ್ಟ್’ ನ ಸಂಸ್ಥಾಪಕಿಯೂ ಆದ ಅಂಜಲಿ ರಾಮಣ್ಣ ಅವರ ವಿಶೇಷ ಲೇಖನ ಇಲ್ಲಿದೆ.

ಈ ಸಂಪರ್ಕ ಸಂಖ್ಯೆಯೊಡನೆ ಮಾತು ನಿಂತು ಮೂರು ತಿಂಗಳಾಗಿತ್ತೇ?! ಗಮನಕ್ಕೇ ಬರಲಿಲ್ಲವಲ್ಲ. ಎಂದುಕೊಳ್ಳುತ್ತಲೇ ಬಂದಿದ್ದ ಆಡಿಯೋ ಸಂದೇಶವನ್ನು ತೆರೆದೆ “ ಲೇ ಲೇ ರಾಮಣ್ಣನ ಮಗಳೇ. . .” ಎಂದು ರಾಗವಾಗಿ ಹಾಡಿದ್ದ ಅವನು. ಆ ರಾಗಕ್ಕೆ ತಾಳವಾಗುವ ಮನಸ್ಸು ಇರಲಿಲ್ಲ. ಆದರೆ ಉತ್ತರಿಸುವುದು ಬೇಕಾಗಿತ್ತು. ಪ್ರಾಮಾಣಿಕವಾಗಿ ಹೇಳಿದೆ “ ಪಾಪ ಆ ಹುಡುಗಿ ಹತ್ತಿರ ಸೆಕ್ಷನ್ 94ರಲ್ಲಿ ಹೇಳಿರುವ ಯಾವ ದಾಖಲೆಯೂ ಇಲ್ಲ. ಏನು ಮಾಡೋದು ಅಂತ ಯೋಚಿಸ್ತಿದ್ದೀನಿ” ಎಂದೆ.

ಪ್ರತಿ ಬಾರಿಯಂತೆ ಈಗ ಅವನು ಸಿಡುಕಲಿಲ್ಲ. “ನೀನೊಂದು ಗೂಬೆ’ ಎಂದು ದೂರಲಿಲ್ಲ. “ನಿನ್ನಿಂದ ರೊಮ್ಯಾಂಟಿಕ್ ಮಾತು impossible” ಎಂದು ಬೈಯಲಿಲ್ಲ. 

ಸಮಾಧಾನದಿಂದ “ಓಹ್ ಹೌದಾ. . .” ಎನ್ನುತ್ತಲೇ ಒಂದೆರಡು ಸಲಹೆಗಳನ್ನು ಕೊಟ್ಟ. ಸಲೀಂ ನನ್ನ ಜೀವದ ಅವಿಭಾಜ್ಯ ಅಂಗ. ಜೀವನವನ್ನು ಹಂಚಿಕೊಂಡವ. ಅಮೇರಿಕೆಯಲ್ಲಿ ಇದ್ದಾನೆ. ನಮ್ಮಿಬ್ಬರದು ಹುಟ್ಟಿದಾರಭ್ಯ ಏತಿ ಎಂದರೆ ಪ್ರೇತಿ ಎನ್ನುವ ಬಂಧ. ನನ್ನ ಯಾವ ಗುರಿಗಳೂ ಅವನದಲ್ಲ. ಅವನ ಯಾವ ಕನಸುಗಳೂ ನನ್ನನ್ನು ರೋಮಾಂಚನ ಗೊಳಿಸಿದ್ದೇ ಇಲ್ಲ. ಕಲ್ಪನೆಗಳಲ್ಲೂ ನಮ್ಮಿಬ್ಬರ ಸಾಮ್ಯತೆಯೇ ಇಲ್ಲ.

ಅವನದ್ದು ಬೆಳಗ್ಗೆ ಒಂಭತ್ತರಿಂದ ಸಂಜೆ ಐದಕ್ಕೆ ನಿಗಧಿಗೊಂಡ ಶೈಲಿ. ನನ್ನದು ಹಿಡಿದ ಕೆಲಸ ಮುಗಿಸಿ, ತಕ್ಷಣವೇ ಮತ್ತೊಂದನ್ನು ತೆರೆದಿಟ್ಟುಕೊಂಡು ಕೂರುವ ಹೊತ್ತುಗತ್ತು ಇಲ್ಲದ ಅಭಿರುಚಿ. ಅಗಾಧ ವ್ಯತ್ಯಯಗಳಲ್ಲೂ ನನ್ನನ್ನು ಹುಚ್ಚನಂತೆ ಪ್ರೀತಿಸುತ್ತಾನೆ ಅವ.

ಒಂದಷ್ಟು ವರ್ಷಗಳಿಂದ ಅವನ ಎಲ್ಲಾ ಮಾತುಗಳಿಗೂ ನನ್ನ ಉತ್ತರ ಮಕ್ಕಳ ನ್ಯಾಯ ಕಾಯಿದೆಯ ಸೆಕ್ಷನ್‍ಗಳೇ ಆಗಿರುತ್ತಿತ್ತು. ಇತ್ತ ಕಡೆಯಿಂದ ಹಂಚಿಕೆ ಎಂದರೆ POCSO ಕಾಯಿದೆಯ ಅರ್ಥೈಸುವುಕೆಯೇ ಆಗಿರುತ್ತತ್ತು. ಸಾಹಿತ್ಯ ಎಂದರೆ ಬಾಲ ಕಾರ್ಮಿಕ ನಿಷೇಧ ವಿಷಯ. ಕಣ್ಣೀರು ಎಂದರೆ ಬಾಲ್ಯ ವಿವಾಹದ ಪ್ರಕರಣಗಳು ನಗು ಎಂದರೆ ಮಕ್ಕಳು ನನಗೆ ಕೊಟ್ಟ ’ಪ್ರೇಮಪತ್ರಗಳು’. ಇವೆಲ್ಲವನ್ನೂ ಮೀರದ ಮಾತುಗಳು ಎಂದರೆ ಅಂತರಾಷ್ಟ್ರೀಯ ಮಕ್ಕಳ ಹಕ್ಕುಗಳ ಒಡಂಬಡಿಕೆ.

ಹೇಳಿದ ಹೇಳಿದ ಹೇಳುತ್ತಲೇ ಇದ್ದ ಬುದ್ಧಿ ಮಾತನ್ನು. ಇವೆಲ್ಲವನ್ನೂ ಮೀರಿದ ಬದುಕು ಇದೆ ಎಂದು ನನಗೆ ಉಪದೇಶಿಸುತ್ತಿದ್ದ. ನನಗೋ ಇವುಗಳೇ ಬ್ರಹ್ಮಾಂಡ. ಪಾಪ ಅವನ ತಾಳ್ಮೆ ಕೈಕೊಟ್ಟಿತ್ತು. ಎಂಟು ತಿಂಗಳಿಂದ ಮಾತು ಕಡಿಮೆ ಮಾಡಿದ್ದ. ಮೂರು ತಿಂಗಳಿಂದ ಫೋನ್ ಸಂದೇಶಗಳನ್ನೂ ಬಂದ್ ಮಾಡಿದ್ದ. ನನ್ನ ಗಮನಕ್ಕೇ ಬಂದಿರಲಿಲ್ಲ ಎನ್ನುವುದು ಅಹಂಕಾರ ಎನಿಸಿದರೂ ಸತ್ಯ.

ಅರೆ, ಈ ಬಾರಿ ಇವನು ಯಾಕೆ ಸಿಟ್ಟಾಗುತ್ತಿಲ್ಲ ಎನ್ನುವ ಗುಮಾನಿಯಿಂದಲೇ ಮಾತು ಮುಂದುವರೆಸಿದೆ. ಈ ವರ್ಷದ ಮಕ್ಕಳ ಸ್ನೇಹಿ ಸಪ್ತಾಹಕ್ಕೆ ಸಂಯೋಜಿಸಿದ್ದ ಕಾರ್ಯಕ್ರಮಗಳ ಬಗ್ಗೆ ವಿವರಿಸಿದಾಗಲೂ ಉತ್ಸಾಹ ತೋರುತ್ತಿದ್ದ. ಹದಿಮೂರು ವರ್ಷದ ಆ ಹುಡುಗಿ ತುಂಬು ಗರ್ಭಿಣಿ ಸಾವು ಬದುಕಿನ ನಡುವೆ ಹೋರಾಡಿ ಮಗು ಕಳೆದುಕೊಂಡ ಘಟನೆಯನ್ನು ಹೇಳಿದಾಗಲೂ “ಸಾಕು ಮಾಡು ಗೋಳು” ಎನ್ನಲಿಲ್ಲ ಅವ.

ಹತ್ತೊಂಬತ್ತೇ ವರ್ಷದ ಹುಡುಗ ತಾನು ಪ್ರೀತಿಸಿದವಳನ್ನು ಓಡಿಸಿಕೊಂಡು ಬಂದು ಮಕ್ಕಳ ನ್ಯಾಯ ಮಂಡಳಿಯ ಎದುರು ಆಪಾದಿತನಾಗಿ ನಿಂತಿದ್ದ ವಿಷಯ ಹೇಳಿದಾಗ “ಅಯ್ಯೋ ಪಾಪ” ಎಂದ. “ತನ್ನ ತಂದೆ ಕುಡಿದು ಬಂದು ಕಾಟ ಕೊಡುತ್ತಾನೆ. ತನಗೆ ರಕ್ಷಣೆ ಕೊಡಿ” ಎಂದು ರಾತ್ರಿ ಹನ್ನೆರಡು ಗಂಟೆಗೆ ಮನೆ ಬಿಟ್ಟು ಬಂದು ಕದ ತಟ್ಟಿದ ಹದಿನಾರರ ಬಾಲೆಯ ಕಥೆ, ಶಾಲೆಯಲ್ಲಿ ಟೀಚರ್ ತುಂಬಾ ಹೊಡೆಯುತ್ತಾರೆ ಎಂದು ಅಳುತ್ತಿದ್ದ ಎಂಟರ ಪೋರನ ಮಾತು ಯಾವುದಕ್ಕೂ ಅವನ ಆಸಕ್ತಿ ಕಡಿಮೆ ಆಗಲೇ ಇಲ್ಲ. ನನ್ನ ಅನುಮಾನ ಈಗ ಮಿತಿ ಇರದ ಆಶ್ಚರ್ಯವಾಗಿ ತಿರುಗಿತ್ತು. ಕೊನೆಗೂ ಬಾಯಿಬಿಡಿಸಿದೆ ಅವನ ಬದಲಾದ ಚರ್ಯೆಯ ಕಾರಣವನ್ನು!

ಈಗ ಅವನು ಮಕ್ಕಳ ಹಕ್ಕುಗಳ ಬಗ್ಗೆ ಒಂದು ವರ್ಷದ ಡಿಪ್ಲೊಮಾ ತರಬೇತಿಗೆ ಸೇರಿದ್ದಾನೆ. ಅಮೇರಿಕೆಯಲ್ಲಿನ ಬೀದಿ ಮಕ್ಕಳ ಜೊತೆ ಸಂಪರ್ಕಕ್ಕೆ ಬಂದು ಅವರಿಗೆ ಮಾರ್ಗದರ್ಶಿ ಆಗಿದ್ದಾನೆ. ವಿಚ್ಚೇಧನ ಪಡೆದ ಕುಟುಂಬದ ಮಕ್ಕಳ ಮಾನಸಿಕ ಸ್ಥಿತಿಗೆ ಸ್ನೇಹಿತನಾಗಿ ಕೆಲಸ ಮಾಡುತ್ತಿದ್ದಾನೆ. ಅಪ್ರಾಯಸ್ಥ ಗರ್ಭಧಾರಣೆಯ ಕೆಡುಕುಗಳನ್ನು ಹರೆಯಕ್ಕೆ ತಿಳಿ ಹೇಳುವ ಗುರು ಆಗಿದ್ದಾನೆ. 

ಅವನು ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಜೀವನದ ಟೆಸ್ಟ್ ಮ್ಯಾಚ್ ಆಡಲು ಕಣಕ್ಕಿಳಿದಿದ್ದಾನೆ. ಅದಕ್ಕೇ ಅವನೀಗ ಹಗುರವಾಗಿದ್ದಾನೆ , ನನ್ನೊಡನೆ ನಿಜಾರ್ಥದಲ್ಲಿ ರೊಮ್ಯಾಂಟಿಕ್ ಆಗಿದ್ದಾನೆ!

ಮಕ್ಕಳಿಗೆ ದೊರಕಲೇ ಬೇಕಾದ ಬದುಕನ್ನು ದಕ್ಕಿಸಿಕೊಡಲು ನಾನು ಇನ್ನೂ ದೂರ ಸಾಗಬೇಕಿದೆ ಜನ್ಮ‌ಜನ್ಮಗಳಲ್ಲಿ. ಆದರೆ ಸಲೀಂಗೆ ನಿಜದ ಬದುಕನ್ನು ಅರ್ಥ ಮಾಡಿಸಿಕೊಟ್ಟ ಸಾಧಕಳಾಗಿದ್ದೇನೆ. ಮಕ್ಕಳ ಪರವಾಗಿ ದನಿ ಎತ್ತಿ ನನ್ನ ಮೊದಲ ಹುಡುಗ ನನ್ನನ್ನು ಅಮ್ಮ ಮಾಡಿದ್ದಾನೆ. 

ಜಗತ್ತು ಆತಂಕದ ಪರಿಸ್ಥಿತಿಯಿಂದ ಹೊರಬರಬಹುದು ಎನ್ನುವ ಬೆಳಕಿನ ಕಿರಣ ಮೂಡಿದೆ. ಒಂದು ಸಣ್ಣ ಕನಕನ ಕಿಂಡಿ ಮಕ್ಕಳ ಬದುಕಿನಲ್ಲಿ ವಿಶ್ವರೂಪಿ ಬದಕನ್ನು ತೆರೆದಿಡಿಲಿ ಎನ್ನುವ ಆಶಯ ಈ ದಿನದ ಅಂತರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಚರಣಾ ದಿನಕ್ಕೆ.

‍ಲೇಖಕರು Avadhi

November 20, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ರೈತರ ‘ಚಲೋ ದಿಲ್ಲಿ’

ರೈತರ ‘ಚಲೋ ದಿಲ್ಲಿ’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ಹಿಂದೆ ದಿಲ್ಲಿ ಮತ್ತು...

ಎಸ್‌ ಸಾಯಿಲಕ್ಷ್ಮಿ ಸರಣಿ 5: ಮರಿ ಕೋಗಿಲೆ ಬಾಯಿ ತೆರೆಯಿತು…

ಎಸ್‌ ಸಾಯಿಲಕ್ಷ್ಮಿ ಸರಣಿ 5: ಮರಿ ಕೋಗಿಲೆ ಬಾಯಿ ತೆರೆಯಿತು…

ಎಸ್. ಸಾಯಿಲಕ್ಷ್ಮಿ ಸ್ನೇಹಗಾನಕ್ಕೆ ರಿತೀಷಾ ಎಂಬ ಬಾಲಾದ್ಭುತದ ಪ್ರವೇಶ ಆಕಾಶವಾಣಿ ಬೆಂಗಳೂರು ಕೇಂದ್ರದಲ್ಲಿ ಸಹಾಯಕ ನಿರ್ದೇಶಕಿಯ ಸ್ಥಾನವನ್ನು...

ಮಾಯಾ ಏಂಜೆಲೊ

ಮಾಯಾ ಏಂಜೆಲೊ

ಆರ್ ವಿಜಯರಾಘವನ್ ಮಾಯಾ ಏಂಜೆಲೊ ತಮ್ಮ 86ನೇ ವಯಸ್ಸಿನಲ್ಲಿ ತೀರಿಕೊಂಡರು. ತನ್ನ ಕ್ಯಾನ್ಸರ್ ಕುರಿತು ಆಕೆ ಹೇಳಿಕೊಂಡಿದ್ದು ತನ್ನ ನಲವತ್ತು...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: