ಸಾಗರದಾಚೆಯ ಸೂರು…

ರಂಜನಾ ಹೆಚ್

ಬೆಚ್ಚಗಿನ ಮನೆಯಿರಲು ವೆಚ್ಚಕ್ಕೆ ಹೊನ್ನಿರಲು ಇಚ್ಛೆಯನರಿತು ನಡೆವ ಸತಿಯಿರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ. ಈ ಮಾನವನಿಗೆ ಹೋದೆಡೆಯಲ್ಲೆಲ್ಲಾ ಬೆಚ್ಚಗೆ ತಲೆ ಮರೆಸಿಕೊಳ್ಳಲು ಮನೆಯೊಂದು ಬೇಕೇ ಬೇಕು. ನಾಲ್ಕು ಜನ ಸೇರಿದರೆ ಮೊದಲು ಮಾತು ಬರುವುದೇ ಮನೆಯದು. ನಿಮ್ಮ ಮನೆಯೆಲ್ಲಿ? ಅಂತಲೋ, ಎಲ್ಲಿ ಮನೆ ಮಾಡಿದ್ದೀರಾ? ಅಂತಲೋ ಮಾತು ಪ್ರಾರಂಭವಾಗುವುದು. ಅದಾದ ಮೇಲೆ ಮನೆ ಸ್ವಂತದ್ದೋ, ಬಾಡಿಗೆಯದೋ ಎಂಬ ವಿಚಾರಣೆ.

ನಾನು ಊರಲ್ಲಿದ್ದಾಗ ಮನೆಯಿಲ್ಲವೆಂಬ ಸಮಸ್ಯೆಯನ್ನು ನೋಡಿರಲೇ ಇಲ್ಲ, ಏಕೆಂದರೆ ಅಪ್ಪ ಮಾಡಿಟ್ಟ ಭದ್ರ ಛಾವಣಿಯಿತ್ತಲ್ಲ. ಓದು, ಕೆಲಸಕ್ಕಾಗಿ ಕೆಲಕಾಲ ಮನೆಯಿಂದ ಹೊರಗಿದ್ದರೂ, ಹಾಸ್ಟೆಲ್, ಪೇಯಿಂಗ್ ಗೆಸ್ಟ್, ಸ್ನೇಹಿತರೊಟ್ಟಿಗೆ ಸೇರಿ ವಾಸ. ಹೀಗೆ ತಾತ್ಕಾಲಿಕ ವಸತಿಯೊಂದಿಗೇ ದಿನಗಳು ಸರಿದು ಹೋಗಿದ್ದವು. ನಿಜದಲ್ಲಿ ಮನೆಯೊಂದು ಬೇಕೆಂಬ ವಾಂಛೆ ಮತ್ತು ಅಗತ್ಯ ಹುಟ್ಟಿದ್ದು ಮದುವೆಯಾಗಿ, ಊರಿಂದೂರಿಗೆ ವಲಸೆ ಬಂದು ಬದುಕು ಕಟ್ಟಿಕೊಳ್ಳುವ ಹಂತದಲ್ಲಿ.

ಊರು, ಕೇರಿ, ದೇಶ, ಭಾಷೆಯನ್ನು ಬೆನ್ನ ಹಿಂದೆ ಬಿಟ್ಟು, ಸಮುದ್ರದಾಚೆಯ ಸಿಂಗಾಪುರಕ್ಕೆ ಹಾರಿ, ಹೊಸ ನೆಲದಲ್ಲಿ ಕೊಂಚ ಬೇರೂರುವ ಪ್ರಯತ್ನದ ಸೊಲ್ಲಿದು. ಹೇಳಿಕೊಳ್ಳಲೂ ನಮ್ಮದಲ್ಲದ ಮನೆಯಿಂದ ಬಾಡಿಗೆ ಮನೆಗಳ ಹಂತಕ್ಕೇರಿ ಸಂಭ್ರಮಿಸಿದ ದಿನಗಳ ನೆನಪಿದು. ಮತ್ತೆ ವರುಷ ಎರಡು ವರ್ಷಕ್ಕೊಮ್ಮೆ ಪೆಟ್ಟಿಗೆ ಕಟ್ಟಿ ಹೊರಟು, ವಿಳಾಸ ಬದಲಿಸುವ ಬವಣೆಯಿಂದ ಬೇಸತ್ತು, ಕಾಂಕ್ರೀಟ್ ಕಾಡೊಳಗೆ ನಮ್ಮದೆಂದು ಹೇಳಿಕೊಳ್ಳುವ ಗೂಡೊಂದರಲ್ಲಿ ನೆಲೆಯಾಗುವ ಹಾದಿಯ ಕಥೆಯಿದು. ಹೊಸ ನೆಲದಲ್ಲಿ ಸಣ್ಣದಾಗಿ ಬೇರೂರುವ ಹಂತದ ಹಾಡಿದು.

ಬಹಳ ಹಿಂದಿನ ಘಟನೆಯೇನಲ್ಲ, ೨೦೦೮ರ ಸಮಯವದು. ನಮ್ಮ ಮದುವೆ ನಿಶ್ಚಯವಾದ ಮೇಲೆ ಎಲ್ಲರಂತೇ ನನ್ನ ಗಂಡ ಮಾಡಿದ ಮೊದಲ ಕೆಲಸವೆಂದರೆ ವಾಸಕ್ಕೊಂದು ಬಾಡಿಗೆ ಮನೆ ಹುಡುಕುವುದು. ಅದಾಗಲೇ ಸಿಂಗಾಪುರದಲ್ಲಿ ತನ್ನ ೨-೩ ಬ್ಯಾಚುಲರ್ ಸ್ನೇಹಿತರೊಂದಿಗೆ ವಾಸಿಸುತ್ತಿದ್ದ ಅವರು, ಈಗ ಹೆಂಡತಿಯೊಂದಿಗೆ ವಾಸಿಸಲು ತಕ್ಕ ವ್ಯವಸ್ಥೆ ನಡೆಸಬೇಕಲ್ಲ! ಕೆಲವು ಕಡೆಗಳಲ್ಲಿ ಮನೆ ನೋಡಿ, ಯಾವುದೂ ತಾಳೆಯಾಗದ ಹೊತ್ತಿಗಾಗಲೇ ಮದುವೆಯ ದಿನ ಹತ್ತಿರವಾಗಿ, ಭಾರತಕ್ಕೆ ಬರುವ ಸಮಯವಾಗಿತ್ತು. ನೋಡ ನೋಡುತ್ತಿದ್ದಂತೆಯೇ ದಿನ ಕಳೆದು, ಊರ ವಿಶಾಲ ಅಂಗಳದ ಚಪ್ಪರ, ಶಾಮಿಯನದ ಮಧ್ಯೆ ಅಡಿಕೆ, ತೆಂಗು, ಬಾಳೆ, ಮಾವು, ಎಲೆ, ಹೂಗಳಿಂದೊಡಗೂಡಿದ ಮಂಟಪದಲ್ಲಿ ಕಲ್ಯಾಣ ಮುಗಿದು, ಹೊಸ ಊರಿನ ಹೊಸ ಮನೆಗೆ ಹೊರಟಿದ್ದೆ. 

ಮೆಟ್ಟಿದ ಮನೆಯೊಂದಿಗೆ ಹುಟ್ಟಿದ ಮನೆಯೂ ಎಂದಿಗೂ ನನ್ನದೇ, ನಾನು ಬೆಳೆದ ಮನೆಗೆ ಪರಕೀಯಳೂ ಅಲ್ಲ, ನೆಂಟರೂ ಅಲ್ಲವೆಂದು ಮನದಲ್ಲಿ ನಿರ್ಧರಿಸಿ, ಸೇರಕ್ಕಿ ಒದ್ದು, ಬಲಗಾಲಿಟ್ಟು ಹೊಸ ಜನರ ಮಧ್ಯ ನಡೆದಿದ್ದೆ. ಕೆಲ ದಿನಗಳ ಕಾರ್ಯಕ್ರಮಗಳು, ಓಡಾಟದ ನಂತರ ಯಜಮಾನರು ಸಿಂಗಾಪುರಕ್ಕೆ ಹಿಂತಿರುಗುವ ಸಮಯ. ತಿಂಗಳಲ್ಲಿ ಮನೆಯೊಂದರ ವ್ಯವಸ್ಥೆ ಮಾಡಿದ  ನಂತರ, ನಾನು ಸಿಂಗಾಪುರಕ್ಕೆ ಪಾದಾರ್ಪಣೆ ಮಾಡುವುದೆಂದು ನಿರ್ಧರಿಸಿ ನಮ್ಮವರು ಹಿಂತಿರುಗಿ ಬಂದಾಯ್ತು.

ವಾರಾಂತ್ಯದಲ್ಲಿ ಅಲೆದು, ಮನೆ ಹುಡುಕಿ, ಅಂತೂ ಎರಡು ಬೆಡ್ ರೂಮಿನ ಮನೆಯೊಂದು ಹೊಂದಿಕೆಯಾಗಿ, ಅಗ್ರೀಮೆಂಟ್ ಹಂತಕ್ಕೆ ಬಂತು. ೧೫೦೦ ಡಾಲರ್ ಗಳನ್ನು ಮನೆಯ ಡೆಪಾಸಿಟ್ (ಒಂದು ತಿಂಗಳ ಬಾಡಿಗೆಯಷ್ಟು ಹಣ) ಎಂದು ಕೊಟ್ಟು, ಮನೆಯ ಓನರ್ ತಂದ ಅಗ್ರೀಮೆಂಟ್ ಹಿಡಿದು, ಇನ್ನೆರಡು ವಾರ ಬಿಟ್ಟು ಮನೆಯ ಕೀಲಿ ಪಡೆಯುವುದೆಂಬ ಮಾತುಕಥೆ ನಡೆಸಿ, ಉತ್ಸಾಹದಲ್ಲಿ ಹಿಂತಿರುಗಿದರು ಪತಿರಾಯ. ಜೊತೆಗಿದ್ದ ಸ್ನೇಹಿತರಿಗೆ ಇನ್ನೆರಡು ವಾರಗಳಲ್ಲಿ ಮನೆ ಬಿಡುವುದಾಗಿ ತಿಳಿಸಿ, ಮನೆ ಸಿಗುವ ದಿನದ ೪ ದಿನ ನಂತರ ನನಗೂ ಸಿಂಗಾಪುರಕ್ಕೆ ತೆರಳಲು ಟಿಕೆಟ್ ಕಾದಿರಿಸಲಾಯ್ತು.

ಕಳೆದುಕೊಳ್ಳುವಾಗಲೇ ಇನ್ನೂ ಬೇಕೆಂಬ ಹಂಬಲ, ಬಿಟ್ಟು ಹೊರಡುವಾಗಲೇ ಇನ್ನಷ್ಟು ಇರಬೇಕೆಂಬ ಬಯಕೆ ಸಹಜ. ಇನ್ನು ಕೆಲವೇ ದಿನ ಹುಟ್ಟಿದೂರು ಮತ್ತು ಬೆಳೆದ ಮನೆಯಲ್ಲಿನ ವಾಸ, ಮತ್ಯಾವಾಗ ಮರಳುವೆನೋ ಎಂಬ ಭಾವದ ಜೊತೆಗೆ, ಹೊಸ ಜೀವನದ ಕನಸು ಹೊತ್ತು, ದಿನಗಳು ಕ್ಷಣಗಳಂತೆ ಉರುಳಿದವು.

ಅತ್ತ ಸಿಂಗಾಪುರದಲ್ಲಿ ನನ್ನವರು, ೨ ವಾರ ಕಳೆದು ನಿಗದಿಪಡಿಸಿದ ದಿನ ಸಾಯಂಕಾಲ ಕೀಲಿ ಪಡೆಯಲೆಂದು ಬಾಡಿಗೆ ಮನೆಯತ್ತ ಹೋದರೆ, ಮನೆಯಲ್ಲಿ ಯಾರೂ ಇಲ್ಲ. ಬೀಗವೇ ಯಜಮಾನರನ್ನು ಎದುರುಗೊಂಡಿದ್ದು. ಅವರ ಬಳಿಯಿದ್ದ ಪೋನ್ ನಂಬರಿಗೆ ಪೋನಾಯಿಸಿದರೆ ಕಾಲ್ ಹೋಗುತ್ತಲೇ ಇಲ್ಲ. ಇಲ್ಲೇ ಎಲ್ಲೋ ಹೊರಗೆ ಹೋಗಿರಬಹುದು, ಈಗ ಬರುತ್ತಾರೆಂದು ಸುಮಾರು ಹೊತ್ತು ಕಾದರೂ ಯಾರೂ ಪತ್ತೆಯಿಲ್ಲ. ನಿಂತು ನಿಂತು ಸಾಕಾಗಿ ಕೊಂಚ ಹೊರಗೆ ಹೋಗಿ ಸುತ್ತಾಡಿ ಬರೋಣವೆಂದು ಕಾಲೆಳೆಯುತ್ತಾ, ತಿರುಗಾಡಿ ಮತ್ತೆ ಬಂದಾಗ, ಆ ಮನೆಯ ಹೊರಗೆ ಅಪರಿಚಿತ ಆಸಾಮಿಯೊಬ್ಬ ನಿಂತಿದ್ದ.

ಮನೆಯ ಬೀಗ ಮಾತ್ರ ಹಾಕಿಯೇ ಇತ್ತು. ಇವರು ಅನುಮಾನಿಸುತ್ತಾ ನಿಧಾನವಾಗಿ ಹೋಗಿ ಆ ಮನುಷ್ಯನನ್ನು ಮಾತನಾಡಿಸಿದ್ದಾರೆ. ಆತನೂ ಆ ಮನೆಯ ಕೀಲಿ ಪಡೆಯಲು ಬಂದಿರುವುದಾಗಿ ತಿಳಿಸಿದ್ದಾನೆ! ತಲೆ ಕೆಟ್ಟಂತಾಗಿ ನಮ್ಮವರು “ಅದು ಹೇಗೆ ಸಾಧ್ಯ? ನಾನು ಅಡ್ವಾನ್ಸ ಕೊಟ್ಟಿದ್ದೇನೆ, ಅಗ್ರೀಮೆಂಟ್ ಕೂಡಾ ಇದೆ” ಎಂದಾಗ ಆ ಆಸಾಮಿ ತನ್ನ ಅಗ್ರೀಮೆಂಟ್ ಪೇಪರನ್ನು ಇವರತ್ತ ಚಾಚಿ “ನಾನೂ ಅಡ್ವಾನ್ಸ್ ಕೊಟ್ಟಿದ್ದೇನೆ ಎಂದ” ಕಕ್ಕಾಬಿಕ್ಕಿಯಾದೆವು. ನಡೆದ ಮೋಸದ ಅರಿವಾಗುತ್ತಿದ್ದಂತೇ ಇಬ್ಬರೂ ಸೇರಿ ಪೊಲೀಸ್ ಠಾಣೆಯತ್ತ ದಾಪುಗಾಲಿಡುತ್ತಾ ಧಾವಿಸಿ ಕಂಪ್ಲೇಂಟ್ ಕೊಟ್ಟು ಬರಿಗೈಯಲ್ಲಿ ಹಿಂತಿರುಗಿದ್ದಾಯ್ತು.

ಎಲ್ಲವೂ ನಮ್ಮಿಷ್ಟದಂತೆ ನಡೆಯಲಾರದೆಂಬ ಎಚ್ಚರಿಕೆಯ ಏಟೋ ಅಥವಾ ಪರಸ್ಥಳದಲ್ಲಿ ಇನ್ನಷ್ಟು ಹುಷಾರಾಗಿರಬೇಕೆಂಬ ಕಿವಿ ಮಾತೋ, ಒಟ್ಟಿನಲ್ಲಿ ನಾವೊಂದು ಬಗೆದರೆ ದೈವವೊಂದು ಬಗೆಯಿತು. ಊರಲ್ಲಿ ಈ ವಿಷಯ ತಿಳಿಯುತ್ತಿದ್ದಂತೇ ಮೊದಲು ಬಂದ ಮಾತು, ನಾನು ಹೊರಡುವ ದಿನಾಂಕ ಮುಂದೂಡುವುದು. ಇನ್ನೊಂದು ಸರಿಯಾದ ಮನೆ ಸಿಗುವ ತನಕ ನಾನು ಊರಲ್ಲಿಯೇ ಇರುವುದು.

ಹಣ ಕಳೆದುಕೊಂಡ ಉರಿ, ಮತ್ತೆ ಮನೆ ಹುಡುಕುವ ಯೋಚನೆಯ ಜೊತೆಗೆ, ನನ್ನ ಗಂಡ ಮಾರನೇ ದಿನ ಆಫೀಸಿಗೆ ಹೋಗಿ ಅಲ್ಲಿಯ ಸ್ನೇಹಿತರಲ್ಲಿ ವಿಷಯ ಹರಡಿದ್ದಾರೆ. ಯಾವಾಗಲೂ ಕೊಂಚ ಸುಮ್ಮನೇ ಇರುವ ತಮಿಳಿನವನೊಬ್ಬ “ನೀವು ನಮ್ಮ ಮನೆಯಲ್ಲಿ ಒಂದು ತಿಂಗಳು ಬಂದಿದ್ದು ಮನೆ ಸಿಕ್ಕಮೇಲೆ ಹೋಗಬಹುದು, ಹೇಗೂ ನಾಲ್ಕು ಬೆಡ್ ರೂಮಿನ ಮನೆಯಿದೆ, ಮನೆಯಲ್ಲಿರುವುದು ನಾವು ಗಂಡ ಹೆಂಡತಿ ಇಬ್ಬರೇ” ಎಂದಿದ್ದಾನೆ.

೧-೨ ತಿಂಗಳ ನಂತರ ಅವರ ಸ್ನೇಹಿತನೊಬ್ಬ ಪತ್ನಿ ಸಮೇತ ಅವರೊಂದಿಗೆ ಬಂದು ವಾಸಿಸುವವನಿದ್ದ.  ಅಲ್ಲಿಯವರೆಗೆ ಮನೆ ದೊಡ್ಡದಾಗಿದ್ದು, ಇರುವವರು ಇಬ್ಬರು ಮಾತ್ರ. ಇದನ್ನು ಕೇಳಿದ ನನ್ನ ಪತಿರಾಯ ನನಗೆ ಪೋನಾಯಿಸಿ “ಹೀಗೆ ಸ್ನೇಹಿತನ ಮನೆಯಲ್ಲಿರಲು ಜಾಗವಿದೆ, ನೀನೂ ಬಂದರೆ ಇಬ್ಬರೂ ಸೇರಿ ಮನೆ ಹುಡುಕಬಹುದು” ಎಂದರು.

ನನಗೂ ಅದು ಸರಿಯೆನಿಸಿ  ಹೊರಡಲು ನಿರ್ಧರಿಸಿ, ಒಪ್ಪಿಗೆ ನೀಡಿದೆ. ಆದರೆ ಮನೆಯಲ್ಲಿ ಯಾರಿಗೂ ಮೊದಲ ಬಾರಿಗೆ ಹೋಗುತ್ತಿರುವ ನನ್ನನ್ನು ಈ ಸ್ಥಿತಿಯಲ್ಲಿ ಕಳಿಸಲು ಇಷ್ಟವಿಲ್ಲ. ಅಂತೂ ಇಂತೂ ಎಲ್ಲರಿಗೂ ಧೈರ್ಯಹೇಳಿ ಒಪ್ಪಿಸಿ ಹೊರಟಿದ್ದಾಯ್ತು. ಹೋದ ನಂತರ ಅದು ಬೇಕಾಗಬಹುದು, ಇದರ ಅವಶ್ಯಕತೆ ಬೀಳಬಹುದೆನ್ನುತ್ತಾ ತುಂಬಿದ ಭಾರೀ ಸೂಟ್ಕೇಸ್ ಗಳು ಸಿದ್ಧವಾದವು.

ಹೋಗುವ ಒಬ್ಬಳನ್ನು ಬೀಳ್ಕೊಡಲು ವಿಮಾನ ನಿಲ್ದಾಣದವರೆಗೂ ಬಂದವರು ಐದು ಜನ! ಕೊನೆಗೂ ಜೊತೆಗೆ ಬಂದ ಕುಟುಂಬದ ಎಲ್ಲರಿಂದ ಬೀಳ್ಕೊಂಡು, ಕಣ್ತುಂಬಿ ನಿಂತವರಿಗೆ ನಾನೇ ಸಮಾಧಾನಿಸಿ, ಮನದಲ್ಲಿ ಅವ್ಯಕ್ತ ಭಯ, ದುಗುಡ, ದೂರ ಹೋಗುವ ದುಃಖವಿದ್ದರೂ ತೋರಿಸಿಕೊಳ್ಳದೇ ನಗುತ್ತಲೇ ನಿಲ್ದಾಣದೊಳಗೆ ಕಾಲಿರಿಸಿದೆ.

ಈಗ ಸುತ್ತಲೂ ಕಾಣುವ ಸಾವಿರಾರು ಜನಗಳ ನಡುವೆ ನಾನೊಬ್ಬಳೇ. ಅಳುಕು, ಕುತೂಹಲ ಮತ್ತು ರೋಮಾಂಚನದ ಮಿಶ್ರ ಅನುಭವಗಳೊಡನೆ ಅವಶ್ಯಕ ಇಮಿಗ್ರೇಷನ್ ಮತ್ತು ಚೆಕಿಂಗ್ ಮುಗಿಸಿ ವಿಮಾನ ಏರಿದೆ. ರಾತ್ರಿಯ ವಿಮಾನವಾದ್ದರಿಂದ ಕಿಟಕಿಯಿಂದ ಹೊರಗೆ ಇಣುಕಿ ನೋಡಿದರೂ ಏನೂ ಕಾಣುವಂತಿಲ್ಲ, ನನ್ನ ಕಣ್ಣಿಗೋ ನಿದ್ದೆಯ ಸುಳಿವೇ ಇಲ್ಲ. “ವಿಮಾನವನ್ನು ಯಾರಾದರೂ ಅಪಹರಿಸಿದರೆ? ಏನಾದರೂ ಅವಘಡ ನಡೆದರೆ?” ಹೀಗೇ ಏನೇನೋ ವಿಚಾರಗಳು ಮತ್ತು ಹೊಸ ಊರಿನ ಬಗೆಗೆ ನೂರಾರು ಕಲ್ಪನೆಗಳು.

ಯೋಚನೆಗಳು ಬಣ್ಣ ಬಳಿದುಕೊಂಡು ರೆಕ್ಕೆ ಪುಕ್ಕ ಕಟ್ಟಿ ಹಾರಾಡಲು ಕಾಸು ಕೊಡಬೇಕೇ? ನಾಲ್ಕೂವರೆ ಘಂಟೆಯ ಪಯಣ ಮುಗಿಸಿ, ಸೂರ್ಯನ ಹೊಂಗಿರಣಗಳು ಕಾಣುವ ಹೊತ್ತಿನಲ್ಲಿ ಕಿಟಕಿಯಲ್ಲಿ ಪುಟ್ಟ ಗೊಂಬೆಗಳಂತೆ ಕಾಣುವ ಜಲರಾಶಿ, ಕಟ್ಟಡಗಳನ್ನು ಕಣ್ತುಂಬಿಕೊಳ್ಳುತ್ತಾ ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣಕ್ಕೆ ಬಂದಿಳಿದೆ. ಹೊರ ಬಂದು ಕಾಯುತ್ತಿರುವ ಗಂಡನನ್ನು ಕಂಡಾಗ ಒಂಟಿತನದ ದುಗುಡ ಕಮ್ಮಿಯಾದರೂ ಮನಸ್ಸು ಇನ್ನೂ ತಹಬಂದಿಗೆ ಬಂದಿರಲಿಲ್ಲ. ಟ್ಯಾಕ್ಸಿ ಹಿಡಿದು ಇವರ ಸ್ನೇಹಿತನ ಮನೆಯತ್ತ ಚಲಿಸುತ್ತಿದ್ದಂತೇ ನನಗೆ ಸುತ್ತಲಿನ ಪರಿಸರ ನೋಡಿ ಅಗಾಧ ನೀರವತೆಯ ಆಭಾಸ.

ಒಂದರ್ಧ ಗಂಟೆ ಪ್ರಯಾಣಿಸಿ, ಮುಖ ಕಂಡರಿಯದ ಜನರ ಮನೆಯಲ್ಲಿ ನನ್ನ ಹೊಸ ಸಂಸಾರದ ಆ ಆ ಇ ಈ ಬರೆಯಲು ಬಂದು ತಲುಪಿದ್ದೆ. ಮಣಭಾರದ ಬ್ಯಾಗ್ ಮತ್ತು ಸೂಟ್ಕೇಸ್ಗಳನ್ನು ಎಳೆದುಕೊಂಡು ಅವರ ಮನೆಯ ಬಾಗಿಲಿಗೆ ಬಂದು, ಕರೆಗಂಟೆ ಒತ್ತುತ್ತಲೇ ಅಜಮಾಸು ನನ್ನದೇ ವಯಸ್ಸಿನ ಹೆಣ್ಣುಮಗಳು ಮತ್ತು ಆಕೆಯ ಗಂಡ ಮುಖದ ತುಂಬ ನಗು ತುಂಬಿಕೊಂಡು ಒಳಗೆ ಸ್ವಾಗತಿಸಿದಾಗ ಕೊಂಚ ನಿರಾಳವಾದೆ. ಮನೆಯಾಕೆ ಕುಡಿಯಲು ನೀರು ಕೊಟ್ಟು, ಮನೆಯನ್ನೆಲ್ಲಾ ಸುತ್ತಿಸಿ ಪರಿಚಯಿಸಿ, ಕೊನೆಯಲ್ಲಿ “ಇಲ್ಲಿ ನೀವಿರಬಹುದು, ನಿಮ್ಮ ಗಂಡನೂ ಅವರ ಸಾಮಾನುಗಳನ್ನು ಇಲ್ಲಿಯೇ ತಂದಿಟ್ಟಿದ್ದಾರೆ” ಎನ್ನುತ್ತಾ ಬೆಡ್ ರೂಮೊಂದಕ್ಕೆ ಕರೆದೊಯ್ದಳು.

ಆಯಾಸ, ನಿದ್ದೆ ತೀರಿಸಿಕೊಂಡು, ಸಂಕೋಚದಿಂದ ಮುದ್ದೆಯಾಗಿಯೇ ಅಂದಿನ ದಿನ ಕಳೆಯಿತು. ಊರಿಂದ ಕೊಂಡೊಯ್ದ ತಿಂಡಿಗಳು, ಚಟ್ಣಿ, ಗೊಜ್ಜು, ಉಪ್ಪಿನಕಾಯಿಗಳನ್ನು ಹೊರತೆಗೆದು ಇವರಿಗೆ ಇಷ್ಟವಾಗುವುದೋ ಇಲ್ಲವೋ ಎಂದುಕೊಳ್ಳುತ್ತಲೇ ನೀಡಿದಾಗ, ಲೊಟ್ಟೆ ಹೊಡೆದು ಆಸ್ವಾದಿಸಿದ್ದನ್ನು ನೋಡಿ ತೃಪ್ತಿಯಾಯಿತು. ಬೆಳಗ್ಗೆ ಆ ಗಂಡ ಹೆಂಡಿರಿಬ್ಬರೂ ಕೆಲಸಕ್ಕೆ ಹೊರಡುವಾಗ ಎಳನೀರು ಕುಡಿದು ಬ್ರೆಡ್ ಅಥವಾ ಕಾರ್ನ ಪ್ಲೇಕ್ಸ್ ತಿಂದು ಹೋಗುವ ರೂಢಿ. ನನಗೂ ಸಹ ಇಲ್ಲಿ ಶೆಖೆ ಜಾಸ್ತಿ, ಎಳನೀರು ಕುಡಿಯುತ್ತಿರಬೇಕು ಎಂದು ಎಳನೀರಿನ ಲೋಟ ಮುಂದೊಡ್ಡಿ ಅವರೊಟ್ಟಿಗೆ ಎಳನೀರು ಕುಡಿಯುವ ಅಭ್ಯಾಸ ಮಾಡಿಸಿದರು.

ಇಂತಹ ಚಿಕ್ಕ ಪುಟ್ಟ ಸಂಗತಿಗಳೇ ಅಲ್ಲವೇ ಬಾಂಧವ್ಯ ಬೆಸೆಯುವ ಕೊಂಡಿಗಳು?  ನನಗೆ ತಿಳಿದ ಹರುಕು ಮುರುಕು ತಮಿಳಿನಲ್ಲಿ ಅವರೊಂದಿಗೆ ಹರಟುವ ಅಭ್ಯಾಸವೂ ಆಯ್ತು. ಹೀಗೇ ಒಂದೆರಡು ದಿನ ಕಳೆಯುವಷ್ಟರಲ್ಲಿ ಅವರುಗಳ ಆದರಾತಿಥ್ಯದ ಜೊತೆಯಲ್ಲಿ, ಇಲ್ಲಿ ನಾನು ಪರಕೀಯಳಲ್ಲ ಎಂಬ ಭಾವನೆ ಕೊಂಚ ಬರತೊಡಗಿತು ಜೊತೆಗೆ ಮನೆಯ ಆಗು ಹೋಗುಗಳು ಕೊಂಚ ಅರ್ಥವಾಗತೊಡಗಿತ್ತು.

ಅವರು ಮಾಂಸಾಹಾರಿಗಳೆಂದು ತಿಳಿದುಬಂದಿದ್ದು ನಾನಲ್ಲಿ ಹೋದ ನಂತರವೇ.. ಇದನ್ನು ತಿಳಿದು ಅಪ್ಪಟ ಸಸ್ಯಾಹಾರಿಯಾದ ನಾನು ಹೌಹಾರಿದ್ದೆ. ಮಾಂಸದಡುಗೆ ಮಾಡಿದರೆ ನಾನೇನು ಮಾಡಲಿ? ಹೇಗೆ ಊಟ ಮಾಡಲಿ? ಇತ್ಯಾದಿ ಯೋಚನೆ. ಆದರೆ ಸ್ವಂತದವರು, ಹತ್ತಿರದ ಬಂಧು ಬಾಂಧವರೇ ಕಷ್ಟದ ಸಮಯದಲ್ಲಿ ಕೈ ಬಿಡುವ ಈ ಕಾಲದಲ್ಲಿ, ಇವರು ಮನೆಯಲ್ಲಿರಲು ಅನುವು ಮಾಡಿಕೊಟ್ಟಿದ್ದಷ್ಟೇ ಅಲ್ಲದೇ ನಾವು ಸಸ್ಯಾಹಾರಿಗಳು ಎಂದು ತಿಳಿದು, ನಾವಿರುವಷ್ಟು ದಿನ ಒಮ್ಮೆಯೂ ಮಾಂಸದಡುಗೆ ಮಾಡಿದ್ದಿಲ್ಲ. ಬಾಂಧವ್ಯಕ್ಕೆ, ಮಾನವೀಯತೆಗೆ ರಕ್ತ ಸಂಬಂಧವೇ ಬೇಕೆಂದಿಲ್ಲ ಎಂಬುದನ್ನು ಇನ್ನೊಮ್ಮೆ ಮನದಟ್ಟು ಮಾಡಿದ ಸಂದರ್ಭವಿದು.

ಸಾಯಂಕಾಲ ಅಡುಗೆ ಮನೆಯಲ್ಲಿ ಸೇರಿ ಹರಟುತ್ತಾ, ನಮ್ಮೂರ ಖಾದ್ಯಗಳು, ಅವರೂರ ತಿನಿಸುಗಳನ್ನು ಮಾಡಿ ಸವಿದ ದಿನಗಳನ್ನು ಮರೆಯುವಂತಿಲ್ಲ. ತಿಳಿಯದೂರಿನಲ್ಲಿ ಬಂದಾಕ್ಷಣವೇ ಒಂಟಿತನದ ಭಾವ ಕಾಡದಿರುವಂತಿರಲು ಈ ಜೀವನ ಅವಶ್ಯವಿತ್ತೇನೋ…. ವಾರಾಂತ್ಯದಲ್ಲಿ ಬೆಳಗ್ಗೆಯೇ ಮನೆಯಿಂದ ಹೊರಟು ಕೊಂಚ ಹೊರಗಡೆಯ ಸುತ್ತಾಟ ಮತ್ತು ಮನೆಯ ಹುಟುಕಾಟ ನಡೆಸಿ ಅಂತೂ ತಿಂಗಳೊಳಗೆ ಮನೆಯೊಂದನ್ನು ಬಾಡಿಗೆಗೆ ಗೊತ್ತುಮಾಡಿದ್ದಾಯ್ತು.

ನಿಶ್ಚಿತ ದಿನ ಸಾಮಾನು ಸರಂಜಾಮು ಕಟ್ಟಿಕೊಂಡು ಹೊರಡುವಾಗ ಅವರಿಗೂ ಒಂದು ರೀತಿ ಖಾಲಿತನ ಮತ್ತು ನಮಗೂ ಏನೋ ಕಳೆದುಕೊಂಡ ಭಾವ. ಹಾಗಂತ ಅಲ್ಲಿಯೇ ಇರಲು ಸಾಧ್ಯವಿಲ್ಲವಲ್ಲ. ಸಿಹಿ ಇಷ್ಟವೆಂದು ಅದನ್ನೇ ತಿಂದುಕೊಂಡಿರಲು ಸಾಧ್ಯವೇ? ಎಲ್ಲವೂ ಹಿತ, ಇತಿ ಮಿತಿಯಲ್ಲಿದ್ದರೆ ಚಂದ. ನಮ್ಮ ಇರುವಿಕೆ ಹೊರೆಯಾಗದೇ, ಇನ್ನು ಕೊಂಚ ಇರಬಹುದಿತ್ತು ಎನ್ನುವಾಗಲೇ ನಾವು ಅಲ್ಲಿಂದ ಹೊರಬಂದಿದ್ದೆವು.  ನಮ್ಮ ಸಂಬಂಧ ಇಂದಿಗೂ ಅಂತೆಯೇ ಇದೆ.

ಊರಿಗೆ ಬರುವಾಗ ನಮ್ಮೂರಿನ ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ಸಾರಿನ ಪುಡಿಗಳ ಬೇಡಿಕೆ ಅವರಿಂದ ಈಗಲೂ ಇದೆ. ಅವರ ಕಡೆಯ ವಿವಿಧ ಸಂಡಿಗೆಗಳು ನನಗೆ ರವಾನೆಯಾಗುವುದರ ಜೊತೆಗೆ ನಾನು ಇಷ್ಟ ಪಡುವ ಮೋರ ಕೊಳಂಬು, ಪುಳಿ ಕೊಳಂಬುಗಳನ್ನು ನಾನು ಹೋದಾಗಲೆಲ್ಲ ಮಾಡಿ ಮನೆಗೆ ಕಟ್ಟಿಕೊಡುವ ಅಭ್ಯಾಸ ಇನ್ನೂ ಮುಂದುವರಿದಿದೆ. ಊರು, ಜಾತಿ, ಭಾಷೆಗಿಂತ ನೀತಿ ನಮ್ಮನು ಗೆದ್ದಿದೆ. ನಾವೆಲ್ಲರೂ ಮಾನವರು ಎಂಬ ಭಾವನೆಯಿಲ್ಲಿ ಮೆರೆದಿದೆ. ಹೊರ ಜಗತ್ತಿನ ವಿಶಾಲತೆಗೆ ನಮ್ಮನ್ನು ತೆರೆದುಕೊಳ್ಳುತ್ತಾ ಹೋದಂತೆ ಮನಸ್ಸಿನ ಕದವೂ ತೆರೆದು ಹಿಗ್ಗುವುದು. ತೆರೆವ ಮನಸ್ಸು ಬೇಕಷ್ಟೆ!  ಹೊಸ ಮನೆಯ ಪುರಾಣದೊಂದಿಗೆ ಮುಂದಿನ ಭೇಟಿ…..

‍ಲೇಖಕರು Avadhi

January 23, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸುಧಾ ಆಡುಕಳ ಅವರ ‘ಬಕುಲದ ಬಾಗಿಲಿನಿಂದ’ಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಸುಧಾ ಆಡುಕಳ ಅವರ ‘ಬಕುಲದ ಬಾಗಿಲಿನಿಂದ’ಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಸುಧಾ ಆಡುಕಳ ಅವರ ಪ್ರಬಂಧ ಸಂಕಲನ 'ಬಕುಲದ ಬಾಗಿಲಿನಿಂದ' ೨೦೧೯ನೇ ಸಾಲಿನ ಸಾಹಿತ್ಯ ಅಕಾಡೆಮಿ ಪುರಸ್ಕಾರಕ್ಕೆ ಪ್ರಾಪ್ತವಾಗಿದೆ. ಕರ್ನಾಟಕ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This