ಸಾರಥಿಗಳ ಸ್ವಗತಗಳು..

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’

ದಿಲ್ಲಿಯಲ್ಲಿ ನನಗೂ ಕ್ಯಾಬ್ ಗಳಿಗೂ ಒಂದು ವಿಚಿತ್ರ ನಂಟು.

”ಇವನೊಬ್ಬನಿಗೆ ಮನೆಯ ಹಾಲಿನಿಂದ ಅಡುಗೆಮನೆಗೆ ಹೋಗೋಕೂ ಕ್ಯಾಬ್ ಬೇಕು”, ಎಂದು ಗೆಳೆಯ ಸಂಜಯ್ ಕಶ್ಯಪ್ ನನ್ನನ್ನು ಗೇಲಿ ಮಾಡುತ್ತಿದ್ದ. ಇಂಥದ್ದೊಂದು ಕಿಲಾಡಿತನದ ಟೀಕೆಯನ್ನು ಆತ ಹೇಗೆ ಸೃಷ್ಟಿ ಮಾಡಿದ್ದನೋ ನನಗಂತೂ ಗೊತ್ತಿಲ್ಲ. ಆಫೀಸಿನ ಕೆಲಸದ ನಿಮಿತ್ತ ನಾನು ಕೆಲ ಬಾರಿ ಕ್ಯಾಬ್ ಸೌಲಭ್ಯವನ್ನು ಬಳಸಿದ್ದು ಆತ ನೋಡಿರಬಹುದೇನೋ. ಹೀಗಾಗಿ ನನ್ನ ಪಾದಗಳು ಕ್ಯಾಬ್ ಬಿಟ್ಟು ನೆಲಕ್ಕಿಳಿಯುವುದೇ ಇಲ್ಲವೇನೋ ಎಂಬಂತೆ ಆತ ಇಂಥದ್ದೊಂದು ಊಹಾಪೋಹವನ್ನು ಹರಿಯಬಿಟ್ಟಿದ್ದ.

ಇಂಥಾ ಮಾತುಗಳು ಬಹಳ ವೇಗವಾಗಿ ಹರಿದಾಡಿದ್ದಕ್ಕೋ ಅಥವಾ ಇದನ್ನು ಸತ್ಯವೆಂಬಂತೆ ಆತ ನಿರಂತರವಾಗಿ ಹೇಳುತ್ತಿದ್ದ ಕಾರಣಕ್ಕೋ… ಇದು ನಿಜವೆಂದೇ ನಾವು ನೆಲೆಸಿದ್ದ ಪರಿಸರದ ಕೆಲವರಿಗೆ ಭಾರೀ ನಂಬಿಕೆ ಬಂದುಬಿಟ್ಟಿತ್ತು. ಹೀಗಾಗಿ ಬಹುತೇಕ ಎಲ್ಲರೂ ನಾನೊಬ್ಬ ವಿಲಾಸಿಪ್ರಿಯ ಮನುಷ್ಯನೆಂದೂ, ಶೋಕಿಲಾಲನೆಂದೂ ಯಾವುದೇ ಆಧಾರವಿಲ್ಲದೆ ತಮ್ಮಷ್ಟಕ್ಕೇ ಒಪ್ಪಿಕೊಂಡಿದ್ದರು.

ಈ ಕಶ್ಯಪ ಸಾಹೇಬರ ನಂಟೂ ಕೂಡ ಒಂದು ರೀತಿಯಲ್ಲಿ ತಮಾಷೆಯದ್ದೇ. ಹಾಗೆ ನೋಡಿದರೆ ನಾವಿಬ್ಬರೂ ಒಂದೇ ವಯಸ್ಸಿನವರು. ನಾನು ಅಲ್ಪ ಸ್ವಲ್ಪ ಬರೆಯುತ್ತೇನೆ ಎಂಬ ವಿಷಯ ತಿಳಿದ ನಂತರವಂತೂ ನಾನು ಆತನದ್ದೊಂದು ಜೀವನಕಥನ ಬರೆಯಬೇಕು ಎಂದು ನಾನು ಸಿಕ್ಕಾಗಲೆಲ್ಲಾ ತಮಾಷೆಯಾಗಿ ಕಾಲೆಳೆಯುತ್ತಿದ್ದ. ಅದಕ್ಕೆ ‘ಹಳ್ಳಿಯಿಂದ ದಿಲ್ಲಿಯವರೆಗಿನ ಪಯಣ’ ಅನ್ನುವ ಟ್ಯಾಗ್ಲೈನ್ ಬೇರೆ ಇಡಬೇಕಿತ್ತಂತೆ.

ನನ್ನ ಪುಟ್ಟದಾದ ಶೆಲ್ಫ್ ಒಂದರಲ್ಲಿ ಪೇರಿಸಿಟ್ಟ ಪುಸ್ತಕಗಳನ್ನು ಕಂಡು ಇವನಿಗೆ ನನ್ನ ಮೇಲೆ ಭಾರೀ ಅನುಕಂಪ ಹುಟ್ಟುತ್ತಿತ್ತು. ಛೇ… ಓದ್ತಾ ಓದ್ತಾ ಜೀವನದ ಸುಖಗಳಿಗೆಲ್ಲಾ ಕೊಳ್ಳಿಯಿಟ್ಟೆಯಲ್ಲಾ ಮಾರಾಯಾ ಅನ್ನುತ್ತಿದ್ದ. ಅವನು ಹತ್ತರದ್ದೋ, ಹನ್ನೆರಡರದ್ದೋ ವಾರ್ಷಿಕ ಪರೀಕ್ಷೆಯಲ್ಲಿ ಪವಾಡವೆಂಬಂತೆ ಅರವತ್ತು ಪ್ರತಿಶತ ತೆಗೆದಾಗ ಇವನ ಮನೆಯವರು ವಠಾರದವರಿಗೆಲ್ಲಾ ಸಿಹಿ ಹಂಚಿದ್ದರಂತೆ.

”ನಾನು ನಿನ್ನಂತೆ ಇಡೀ ದಿನ ಓದಿದರೆ ಅದೆಷ್ಟು ಡಿಗ್ರಿಗಳನ್ನು ಹೊತ್ತು ತಂದು ರಾಶಿ ಹಾಕುತ್ತಿದ್ದೆ ಗೊತ್ತಾ? ಆದರೂ ಆ ಫಲಿತಾಂಶದೊಂದಿಗೆ ನಾನು ‘ಮೊಹಲ್ಲಾ ಟಾಪ್’ ಆಗಿಬಿಟ್ಟೆ”, ಅನ್ನುತ್ತಿದ್ದ. ಈ ‘ಮೊಹಲ್ಲಾ ಟಾಪ್’ ಅನ್ನುವುದು ಅವನ ಬಲುಪ್ರಿಯವಾದ ಪದಪುಂಜಗಳಲ್ಲೊಂದಾಗಿತ್ತು. ಮೊಹಲ್ಲಾ ಟಾಪ್ ಎಂದರೆ ವಠಾರಕ್ಕೇ ಮೊದಲನೆಯವನು ಎಂದರ್ಥ.

ಹೀಗೆ ಹೇಳುವಾಗಲೆಲ್ಲಾ ಈ ಪದವನ್ನು ತಾನೇ ಕಂಡುಹಿಡಿದೆನೆಂಬ ಹೆಮ್ಮೆಯೂ, ತನ್ನ ‘ಮೊಹಲ್ಲಾ ಟಾಪ್’ ಯಾವ ಆಕ್ಸ್‍ಫರ್ಡ್-ಹಾರ್ವರ್ಡ್ ಡಿಗ್ರಿಗಳಿಗೂ ಕಮ್ಮಿಯಿಲ್ಲವೆಂಬಂತೆ ತೋರಿಸಿಕೊಳ್ಳುವ ವಿನೋದದ ಪ್ರಸಂಗಗಳೂ ನಡೆಯುತ್ತಿದ್ದವು.

ಕೆಲವೊಮ್ಮೆ ಹೀಗೂ ಆಗುತ್ತವೆ. ಒಮ್ಮೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಸಮಾರಂಭವೊಂದನ್ನು ಮುಗಿಸಿ ಕ್ಯಾಬ್ ನಲ್ಲಿ ಕುಳಿತು ಮನೆಯ ಕಡೆ ಬರುತ್ತಿದ್ದರೆ ಒಂದು ಅಚ್ಚರಿಯ ಸಂಗತಿ ನಡೆಯಿತು. ಹಿಂದಿನ ಸೀಟಿನಲ್ಲಿ ಕುಳಿತಿದ್ದ ನಾನೂ, ಕನ್ನಡದ ಓರ್ವ ಹಿರಿಯ ಬರಹಗಾರರೂ ಲೋಕಾಭಿರಾಮವಾಗಿ ಹರಟುತ್ತಿದ್ದೆವು. ಅದೇಕೋ ನಮ್ಮ ಮಾತಿನಲ್ಲಿ ಅಂದು ಖ್ಯಾತ ಪ್ರತಿಭೆಗಳಾದ ಸಾಹಿರ್ ಲೂಧಿಯಾನ್ವಿಯೂ, ಫೈಝ್ ಅಹ್ಮದ್ ಫೈಝ್ ರೂ ಬಂದು ಹೋಗಿದ್ದರು. ನಮ್ಮ ಈ ಚರ್ಚೆಯನ್ನು ಗಾಡಿ ಓಡಿಸುತ್ತಲೇ ಕೇಳುತ್ತಿದ್ದ ಚಾಲಕನ ಕಿವಿಗಳು ನೆಟ್ಟಗಾದವೋ ಏನೋ.

”ದಕ್ಷಿಣಭಾರತದ ಇಬ್ಬರು ಸಾಹಿರ್ ಲೂಧಿಯಾನ್ವಿಯವರ ಬಗ್ಗೆ ಇಷ್ಟು ಆಸಕ್ತಿಯಿಂದ ಮಾತನಾಡುವುದು ನಾನು ಇದುವರೆಗೂ ನೋಡಿಲ್ಲ”, ಅಂದುಬಿಟ್ಟ ಆತ. ಹೀಗೆ ಹೇಳುವಾಗ ಆತನ ಮೊಗದಲ್ಲೊಂದು ಶುಭ್ರ ಮುಗುಳ್ನಗೆ.

ಆತನಿಂದ ಬಂದ ಅನಿರೀಕ್ಷಿತ ಪ್ರತಿಕ್ರಿಯೆಗೆ ನನಗೆ ಏನನ್ನಬೇಕೋ ತಿಳಿಯಲಿಲ್ಲ. ಹಿಂದಿ ಮತ್ತು ಉರ್ದು ಭಾಷೆಯ ಮಹಾಕವಿಗಳು ಕನ್ನಡದ ಓದುಗರಿಗೂ ಒಂದಷ್ಟು ಗೊತ್ತು ಎಂದೆಲ್ಲಾ ನಾನು ಆತನಿಗೆ ಸಂಕ್ಷಿಪ್ತವಾಗಿ ವಿವರಿಸಿದೆ. ”ಸಾಹಿರ್ ಎಷ್ಟು ದೊಡ್ಡ ಪ್ರತಿಭೆ ಸಾರ್… ಅದೇನ್ ಚಂದ ಬರೀತಿದ್ರು ಹಾಡುಗಳನ್ನು…”, ಎಂದು ಶುರುಹಚ್ಚಿಕೊಂಡ ಆತ ಸಾಹಿರ್ ಬಗ್ಗೆ ಹೇಳುತ್ತಲೇ ಹೋದ.

ಸಾಹಿರ್ ಬರೆದ ಪದ್ಯಗಳ ಕೆಲ ಸಾಲುಗಳನ್ನೂ, ಖುದ್ದು ತಾನೇ ಬರೆದ ಕೆಲ ಸಾಲುಗಳನ್ನೂ ಗಾಡಿ ಚಲಾಯಿಸುತ್ತಲೇ ಆಸಕ್ತಿಯಿಂದ ಕಣ್ಣರಳಿಸುತ್ತಾ ಹೇಳುತ್ತಿದ್ದ. ನಾವು ನಮ್ಮ ಹರಟೆಗೆ ಅಂತ್ಯ ಹಾಡಿ ಆತನ ಕಾವ್ಯಪ್ರೀತಿಯ ಬಗ್ಗೆ ಕೇಳುತ್ತಾ ಬೆರಗಾದೆವು. ನಿತ್ಯದ ಜಂಜಾಟಗಳ ಮಧ್ಯೆ ಇಂಥಾ ಅನಿರೀಕ್ಷಿತ ಮಾತುಕತೆಗಳು ಅದೆಷ್ಟು ಜೀವನಪ್ರೀತಿಯನ್ನು ಹುಟ್ಟಿಸಿಬಿಡುತ್ತವೆ ನೋಡಿ! ತನಗೆ ಸಿಕ್ಕ ಬಿರುದಿನಂತೆಯೇ ಸಾಹಿರ್ ಲೂಧಿಯಾನ್ವಿ ನಿಜಕ್ಕೂ ‘ಜನಸಾಮಾನ್ಯರ ಕವಿ’ ಎಂದನ್ನಿಸಿತು. 

ಜುಜುಬಿ ನೂರಿನ್ನೂರು ರೂಪಾಯಿಗಳನ್ನು ಹಿಡಿದುಕೊಂಡು ಕೆಲ ವರ್ಷಗಳ ಹಿಂದೆ ಆತ ಬಿಹಾರದಿಂದ ದೆಹಲಿಗೆ ವಲಸೆ ಬಂದಿದ್ದನಂತೆ. ”ನಿಷ್ಠೆಯಿಂದ ದುಡಿಯುವ ಮನುಷ್ಯ ಸಾರ್ ನಾನು. ಯಾರ ತಲೇನೂ ಒಡೀಲಿಲ್ಲ, ಹರಾಮಿನ ಸಂಪಾದನೆಗೂ ಕೈಚಾಚಲಿಲ್ಲ. ಬಿಸ್ನೆಸ್ ಚೆನ್ನಾಗಿದೆ.

ಇದು ನನ್ನದೇ ಸ್ವಂತದ ಕಾರು. ಊರಿನಲ್ಲಿ ಜಮೀನು ಖರೀದಿಸಿ ಪುಟ್ಟ ಮನೆ ಕಟ್ಟಿಸಿಕೊಂಡಿದ್ದೇನೆ. ನಿಯತ್ತಿನ ಅನ್ನ ತಿನ್ನುತ್ತೇನೆ. ಬದುಕು ಖುಷಿಯೆನ್ನಿಸುತ್ತಿದೆ”, ಅಂತೆಲ್ಲಾ ಖುಷ್ಕುಷಿಯಾಗಿಯೇ ಹೇಳಿದ. ಆತನ ದನಿಯಲ್ಲಿ ಬದುಕನ್ನು ಅರ್ಥಪೂರ್ಣವಾಗಿ ಬದುಕುವ ಜೀವನಶೈಲಿಯಲ್ಲಿರುವ ಸಾರ್ಥಕತೆ, ಜೀವನಪ್ರೀತಿ ಢಾಳಾಗಿ ಕಾಣುತ್ತಿತ್ತು.

”ಬಹಳ ಖುಷಿಯಾಯ್ತು ನಿಮ್ಮನ್ನು ಭೇಟಿಯಾಗಿ. ಮತ್ತೊಮ್ಮೆ ಖಂಡಿತ ಭೇಟಿಯಾಗೋಣ”, ಎಂದು ಕೊನೆಯಲ್ಲಿ ಆತನ ಕೈಕುಲುಕಿ ಬೀಳ್ಕೊಟ್ಟೆ. ಆತನೂ ಸಂತಸದಲ್ಲಿ ಪುಳಕಗೊಂಡವನಂತಿದ್ದ. ತನ್ನಿಷ್ಟದ ಕವಿಯ ಬಗ್ಗೆ ಮುಕ್ತವಾಗಿ ಮಾತಾಡಬಲ್ಲ ಗ್ರಾಹಕರು ನಿತ್ಯವೂ ಸಿಗುವುದಿಲ್ಲವಲ್ಲಾ!

ಹೀಗೆ ಪ್ರತೀ ಪಯಣವೂ ಹೊಸ ಅನುಭವಕ್ಕೊಂದು ಕಿಟಕಿಯಾಗುವುದೇ ಸಂತಸದ ಸಂಗತಿ. ಮತ್ತೊಮ್ಮೆ  ಸಿಕ್ಕ ಕ್ಯಾಬ್ ಚಾಲಕನೊಬ್ಬ ಮಹಾರಸಿಕನೂ, ಕಿಲಾಡಿಯೂ ಆಗಿದ್ದ. ಉತ್ತರಪ್ರದೇಶದಿಂದ ವಲಸೆ ಬಂದವನು ಈಗ ದೆಹಲಿಯಲ್ಲಿ ನೆಲೆಯಾಗಿದ್ದ. ಈಗ ಉತ್ತರಪ್ರದೇಶದಲ್ಲೊಂದು, ದೆಹಲಿಯಲ್ಲೊಂದು ಮದುವೆಯಾಗಿ ಇಬ್ಬರು ಹೆಂಡಿರ ಮುದ್ದಿನ ಗಂಡನಾಗಿದ್ದ. ಬದುಕು ಹೀಗೆ ಹಾಯಾಗಿದ್ದಾಗ ವಿಚಿತ್ರ ಘಟನೆಯೊಂದು ನಡೆಯಿತಂತೆ.

”ನಾನು ನಮ್ಮ ಸಾಹೇಬ್ರ ಗಾಡಿ ಓಡಿಸಿಕೊಂಡು ಹೋಗುತ್ತಿದ್ದೆ. ಸಾಹೇಬ್ರು ಸುಪ್ರೀಂಕೋರ್ಟಿನಲ್ಲಿ ದೊಡ್ಡ ವಕೀಲರು. ಅಂದು ಏನೋ ಕೆಲಸವೆಂದು ರಸ್ತೆ ಬದಿಯಲ್ಲಿ ಗಾಡಿಯನ್ನು ಪಾರ್ಕ್ ಮಾಡಿದ್ದೆ. ರಸ್ತೆಯ ಮೂಲೆಯಲ್ಲಿ  ಯುವಕನೊಬ್ಬ ಯಾರಿಗೋ ಕಾಯುತ್ತಿದ್ದ. ಕೆಲ ನಿಮಿಷಗಳ ಕಾಲ ಯಾರೂ ಬರಲಿಲ್ಲ. ಅಸಮಾಧಾನಗೊಂಡವನಂತೆ ಅತ್ತಿತ್ತ ಶತಪಥ ತಿರುಗಲಾರಂಭಿಸಿದ್ದ.

ಏಕಾಏಕಿ ಅದೇನಾಯಿತೋ! ಮೂಲೆಯಲ್ಲಿದ್ದ ಮರದ ಕೊರಡೊಂದನ್ನು ಎತ್ತಿಕೊಂಡು ನೇರವಾಗಿ ನಾನಿರುವತ್ತ ಬಂದಿದ್ದ. ಏನಾಗುತ್ತಿದೆ ಎಂದು ನೋಡುವಷ್ಟರಲ್ಲಿ ಅಷ್ಟು ದುಬಾರಿ ಕಾರಿನ ಗಾಜನ್ನೆಲ್ಲಾ ಧಡಧಡನೆ ಒಡೆದು ಹಾಕಿದ್ದ. ತಡೆಯಲು ಬಂದ ನನ್ನ ಮೇಲೂ ಹಲ್ಲೆಯಾಯಿತು. ಕೊನೆಗೂ ಅಲ್ಲಿಂದ ಬರುವಷ್ಟರಲ್ಲಿ ಸಾಕುಸಾಕಾಗಿತ್ತು”, ಎಂದ ಆತ.

”ಮುಂದೇನಾಯಿತು?”, ನಾನು ಕುತೂಹಲದಿಂದ ಪ್ರಶ್ನಿಸಿದೆ. ಕಾರಣವಿಲ್ಲದೆ ಕಾರಿನ ಮೇಲೆ ದಾಳಿ ಮಾಡಿದ್ದಕ್ಕೆ ಮತ್ತು ತನ್ನ ಮೇಲೆ ಹಲ್ಲೆ ನಡೆಸಿದ್ದಕ್ಕೆ ಆ ಯುವಕನ ಬಳಿ ಈತ ಜಗಳವಾಡಿದ್ದ. ಜಗಳವಾಡುವುದರಿಂದ ಪ್ರಯೋಜನವಿಲ್ಲವೆಂದು ಅರಿತ ನಂತರ ನಷ್ಟವಾದರೂ ಭರಿಸಿ ಕೊಡಿ ಸಾರ್ ಎಂದು ಅಂಗಲಾಚಿದ. ಪಕ್ಕಾ ಪುಂಡನಾಗಿದ್ದ ಆತ ಈತನ ಯಾವುದೇ ಆಗ್ರಹಕ್ಕೂ ಸೊಪ್ಪುಹಾಕಲಿಲ್ಲ. ನಮ್ಮ ಚಾಲಕನ ಸಾಹೇಬ್ರು ಇದನ್ನು ದೊಡ್ಡದು ಮಾಡದಿದ್ದರೂ ಈತ ತನ್ನ ಉಳಿತಾಯದ ಹಣವನ್ನೆಲ್ಲಾ ಹಾಕಿ ನಷ್ಟ ತುಂಬಿಸಿಕೊಡಬೇಕಾಯಿತಂತೆ.

”ಒಂದು-ಒಂದೂವರೆ ತಿಂಗಳ ಕಾಲ ಆತ ಬಿಡದೆ ನನ್ನನ್ನು ಗೊಂಬೆಯಂತೆ ಆಡಿಸತೊಡಗಿದಾಗ ನನಗೆ ಪಿತ್ತ ನೆತ್ತಿಗೇರಿತು ನೋಡಿ. ಇವನಿಗೆ ತಕ್ಕ ಪಾಠ ಕಲಿಸುತ್ತೇನೆ ಎಂದು ಲೆಕ್ಕಹಾಕಿದೆ. ಈ ಬಗ್ಗೆ ಸಾಹೇಬ್ರ ಬಳಿ ಗಂಭೀರವಾಗಿಯೇ ಚರ್ಚಿಸಿದೆ. ನನ್ನದೇನೂ ತಪ್ಪಿಲ್ಲವೆಂದು ಅವರಿಗೆ ಮನವರಿಕೆ ಮಾಡಿಸಿದೆ.

ಆ ಬೇಜವಾಬ್ದಾರಿ ಪುಂಡನಿಗೆ ಶಿಕ್ಷೆಯಾಗಲೇಬೇಕೆಂದು ಅವರಲ್ಲಿ ಬೇಡಿಕೆಯಿಟ್ಟೆ”, ಆತ ರಸ್ತೆ ನೋಡುತ್ತಾ, ಸ್ಟೇರಿಂಗ್ ತಿರುಗಿಸುತ್ತಲೇ ಕಥೆ ಹೇಳುತ್ತಿದ್ದ. ಸಾಹೇಬ್ರು ಅಸ್ತು ಎಂದಿದ್ದರು.

ನಮ್ಮ ಕಥೆಯ ವಿಲನ್ ಆಗಿದ್ದ ಪುಂಡನಿಗೆ ಗ್ರಹಚಾರ ಕೆಟ್ಟಿದ್ದೇ ಆಗ. ಸುಪ್ರೀಂಕೋರ್ಟಿನ ದೊಡ್ಡ ಹುದ್ದೆಯಲ್ಲಿದ್ದ ಸಾಹೇಬ್ರು ಆತನ ಮೇಲೆ ದೊಡ್ಡ ಕೇಸನ್ನೇ ಜಡಿದಿದ್ದರು. ಕ್ಯಾಬ್ ಚಾಲಕನೊಬ್ಬ ಈ ಮಟ್ಟಿಗೆ ಸೇಡು ತೀರಿಸಿಕೊಳ್ಳುವನೆಂಬ ಕಲ್ಪನೆಯೂ ಇರದಿದ್ದ ಆತ ಬೆಚ್ಚಿಬಿದ್ದಿದ್ದ. ಪ್ರಕರಣ, ಕೋರ್ಟು-ಕಚೇರಿಗಳ ಜಂಜಾಟ ಆತನನ್ನೀಗ ಚೆನ್ನಾಗಿ ರುಬ್ಬುತ್ತಿತ್ತು.

ಪ್ರಕರಣವನ್ನು ನ್ಯಾಯಾಲಯದಾಚೆಗೇ ಬಗೆಹರಿಸೋಣ ಎಂದು ಆತ ಈಗ ನಮ್ಮ ಕಾರು ಚಾಲಕನ ಕಾಲು ಹಿಡಿಯುವ ಪರಿಸ್ಥಿತಿ ಬಂದೊದಗಿತ್ತು. ಒಂದು ಕಾಲದಲ್ಲಿ ದರ್ಪದಿಂದ ಅಮಾಯಕನೊಬ್ಬನನ್ನು ಹಣಿಯುತ್ತಿದ್ದ ವ್ಯಕ್ತಿಯೊಬ್ಬ ಈಗ ತನ್ನ ಭಂಡತನವು ದುಬಾರಿಯಾಯಿತೆಂಬಂತೆ ಈತನ ಬಳಿ ಅಂಗಲಾಚುತ್ತಿದ್ದ. ಕಾಲ ಬದಲಾಗಿತ್ತು.

ಇತ್ತ ನಮ್ಮ ಸಂಭಾಷಣೆಯನ್ನು ಮಧ್ಯದಲ್ಲೇ ತುಂಡರಿಸುವಂತೆ ಒಂದು ಕರೆಯು ಈಗ ಚಾಲಕನ ಮೊಬೈಲಿಗೆ ಬಂದುಬಿಟ್ಟಿತು. ”ಸಾಲಾ… ಅವನೇ ನೋಡಿ”, ಎಂದು ಕುಹಕದ ನಗೆಯನ್ನು ನಕ್ಕು ಕರೆಯನ್ನು ರಿಸೀವ್ ಮಾಡಿ ಲೌಡ್ ಸ್ಪೀಕರಿಗೆ ಹಾಕಿದ. ಕರೆಯ ಮತ್ತೊಂದು ತುದಿಯಲ್ಲಿ ಯುವಕನೊಬ್ಬ ಪ್ರಕರಣವನ್ನು ನ್ಯಾಯಾಲಯದಾಚೆಗೆ ಇತ್ಯರ್ಥ ಮಾಡುವಂತೆ ಪುಸಲಾಯಿಸುವ ಮಾತನ್ನಾಡುತ್ತಿದ್ದ. ಕಾಟಾಚಾರಕ್ಕೆಂಬಂತೆ ಕ್ಷಮೆ ಕೇಳುತ್ತಿದ್ದ.

ಒಂದೆರಡು ನಿಮಿಷ ಮಾತಾಡಿ ”ಸದ್ಯ ನಾನು ಬ್ಯುಸಿ. ಆಮೇಲೆ ಕಾಲ್ ಮಾಡು”, ಎಂದು ಚಾಲಕನೇ ಗತ್ತಿನಿಂದ ಈ ಬಾರಿ ಕರೆಯನ್ನು ಕಟ್ ಮಾಡಿದ. ”ಇಂಥವರಿಗೆ ಬುದ್ಧಿ ಕಲಿಸಬೇಕು ಸಾರ್. ಇಲ್ಲಾಂದ್ರೆ ನಮ್ಮಂಥಾ ಬಡವರನ್ನು ಯಾರೋ ಕೇಳೋರಿಲ್ಲ, ನಮ್ಮನ್ನು ಏನೂ ಮಾಡಬಹುದು ಎಂಬಂತೆ ವ್ಯವಹರಿಸುತ್ತಾರೆ. ಕೈ ತುರಿಸಿದಾಗ ಪಶುಗಳಂತೆ ಬಡಿಯುತ್ತಾರೆ. ನಾನು ಎರಡು ತಿಂಗಳು ದುಡಿದದ್ದೆಲ್ಲಾ ಈ ಕಾರು ರಿಪೇರಿಗೇ ಆಯಿತು.

ನಮ್ಮ ಕಷ್ಟವೆಲ್ಲಾ ಇವರಿಗೆ ಅರ್ಥವಾಗುತ್ತಾ? ಕೋರ್ಟಿನಲ್ಲಿ ಆತನಿಗೆ ಶಿಕ್ಷೆ ಆಗೋವರೆಗೂ ನಾನು ಬಿಡೋದಿಲ್ಲ ನೋಡಿ”, ಎಂದು ಕುದಿಯುತ್ತಾ ಹೇಳುತ್ತಲೇ ಇದ್ದ ಆತ. ತಾನು ತಪ್ಪಿತಸ್ಥನಲ್ಲ ಎಂಬ ಖಚಿತತೆಯು ನೀಡುವ ಸಾತ್ವಿಕ ಧೈರ್ಯ, ಶ್ರಮಜೀವಿಯ ರೋಷ ಮತ್ತು ಬೆಂಬಲಕ್ಕೊಂದು ಶಕ್ತಿಯು ಸಿಕ್ಕಾಗ ಮೂಡುವ ಆತ್ಮವಿಶ್ವಾಸಗಳು ಅವನಲ್ಲಿ ಮಿಂಚುತ್ತಿದ್ದರೆ ನಾನು ಕತೆಯಲ್ಲೇ ಕಳೆದುಹೋಗಿದ್ದೆ.  

ಹೀಗೆ ದಿಲ್ಲಿಯ ಕ್ಯಾಬ್ ಚಾಲಕರ ಜೊತೆಗಿನ ಕೆಲ ಮಾತುಕತೆಗಳು ಆಗಾಗ ನನ್ನ ದಿನಗಳನ್ನು ಬೆಳಗಿಸುವುದುಂಟು. ಇವರ ಬಹುತೇಕ ಎಲ್ಲಾ ಕಥೆಗಳಿಗೂ ನಾನೊಬ್ಬ ಒಳ್ಳೆಯ ಕೇಳುಗ. ಹೀಗಾಗಿ ಸಾರಥಿಯೊಬ್ಬ ಒಳ್ಳೆಯ ಮಾತುಗಾರನಾಗಿದ್ದರಂತೂ ಟ್ರಾಫಿಕ್ ಜಾಮ್ ಗಳೂ ಸಹ್ಯವೆನಿಸತೊಡಗುವುದು ಸಾಮಾನ್ಯ.

”ಹೊಸ ಕಂಟೆಂಟ್ ಏನನ್ನೂ ನಾವುಗಳು ಸೃಷ್ಟಿಸಬೇಕಿಲ್ಲ. ನಮ್ಮ ನಡುವಿನ ಜನರೊಂದಿಗೆ ಒಂದಷ್ಟು ಹೊತ್ತು ಕಳೆದರೆ ಸಾಕು. ಬಹಳಷ್ಟು ಕಂಟೆಂಟ್ ಅಲ್ಲಿಂದಲೇ ಸಿಗುತ್ತದೆ”, ಎಂದು ಕಮೀಡಿಯನ್ ಕುನಾಲ್ ಕಾಮ್ರಾ ಹೇಳುವ ಮಾತುಗಳು ನನಗೆ ಇಂಥಾ ಸಂದರ್ಭಗಳಲ್ಲೆಲ್ಲಾ ಸತ್ಯವೆಂದೆನಿಸುತ್ತದೆ.

October 12, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ವಿಫಲ ಪ್ರೇಮಕ್ಕೆ ಐದು ಉದಾಹರಣೆಗಳು

ವಿಫಲ ಪ್ರೇಮಕ್ಕೆ ಐದು ಉದಾಹರಣೆಗಳು

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This