ಸಾವಿಗೆ ಆಹ್ವಾನ : ನಾಯಕರು ಮತ್ತು ಅಮಾಯಕರು

ಪ್ರೊ. ಬಿ ಎ ವಿವೇಕ್ ರೈ ಅವರ ‘ಇರುಳ ಕಣ್ಣು’ ಸಂಕಲನದಿಂದ  ಆಯ್ದ ಲೇಖನ. ಪ್ರಜಾವಾಣಿಯಲ್ಲಿ ಈ ಲೇಖನ 11 ಸೆಪ್ಟೆಂಬರ್, 2009 ರಂದು ಅಂಕಣವಾಗಿ ಪ್ರಕಟಗೊಂಡಿದೆ. ————————- ಹೆಲಿಕಾಫ್ಟರ್ ಅಪಘಾತದಲ್ಲಿ ದುರ್ಮರಣಕ್ಕೆ ಈಡಾದ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ. ಎಸ್. ರಾಜಶೇಖರ ರೆಡ್ಡಿ ಅವರ ಸಾವಿನ ಸುದ್ದಿಯನ್ನು ಕೇಳಿ ಮತ್ತು ಮಾಧ್ಯಮಗಳಲ್ಲಿ ನೋಡಿ ಸಾವನ್ನು ಆಹ್ವಾನಿಸಿದ ಅಭಿಮಾನಿಗಳ ಸಂಖ್ಯೆ 344 ಎನ್ನುವ ವರದಿಯೊಂದು ಆಘಾತಕಾರಿಯಾದುದು. ರಾಜಕೀಯ ಉದ್ದೇಶಗಳಿಗೆ ಅನುಸಾರವಾಗಿ ಈ ಸಂಖ್ಯೆಯು ಸಾಕಷ್ಟು ಬದಲಾವಣೆಯನ್ನು ಕಂಡಿದೆ. ಆದರೆ ಅದು ನೂರರ ಗಡಿಯನ್ನು ದಾಟಿದೆ ಎನ್ನುವುದು ನಿಜವಿರಬಹುದು. ಇವರಲ್ಲಿ ಕೆಲವರು ಆತ್ಮಹತ್ಯೆಗೆ ಶರಣಾದರೆ, ಇನ್ನು ಕೆಲವರು ಹೃದಯಾಘಾತದಿಂದ ಸಾವನ್ನಪ್ಪಿದ ದುರಂತ ಸಂಭವಿಸಿದೆ. ನಾಯಕರ ಬಗೆಗಿನ ಅಭಿಮಾನಿಗಳ ಅಭಿಮಾನದ ಉದ್ವೇಗ, ಸಾವನ್ನು ಆಹ್ವಾನಿಸುವ ಅತಿರೇಕದ ಶಿಖರಕ್ಕೆ ಅಪ್ಪಳಿಸಿ, ನೂರಾರು ಕುಟುಂಬಗಳ ಭವಿಷ್ಯವನ್ನು ಚೂರುಚೂರು ಮಾಡಿದೆ. ಇವರಾರೂ ಸರಕಾರದ ಅಥವಾ ಸಾರ್ವಜನಿಕರ ಶ್ರದ್ಧಾಂಜಲಿ, ಅನುಕಂಪ ಅಥವಾ ನೆರವಿನ ಅವಕಾಶವನ್ನು ಪಡೆಯುವುದಿಲ್ಲ. ಅವರ ಕುಟುಂಬಗಳ ಅನಾಥ ಮಕ್ಕಳು ನಿರ್ಗತಿಕರಾಗುತ್ತಾರೆ, ಹೆಣ್ಣುಮಕ್ಕಳು ಅಸಹಾಯಕ ವಿಧವೆಯರಾಗುತ್ತಾರೆ. ಪ್ರಭು, ಒಡೆಯ ಅಥವಾ ಸ್ವಾಮಿಗಾಗಿ ಪ್ರಾಣಾರ್ಪಣೆ ಮಾಡುವ ಪ್ರಾಚೀನ ಮತ್ತು ಮಧ್ಯಯುಗೀನ ಪ್ರಭುತ್ವದ ಅಥವಾ ಪಾಳೆಯಗಾರಿಕೆಯ ಸಮಾಜವೊಂದು ಪ್ರಜಾಪ್ರಭುತ್ವದ ಯುಗದಲ್ಲಿಯೂ ಪಳೆಯುಳಿಕೆಯಾಗಿ ಉಳಿದುಕೊಂಡು ಬಂದು ಜೀವಂತವಾಗಿರುವುದು ಆತಂಕದ ಸಂಗತಿ. ದಕ್ಷಿಣ ಭಾರತದಲ್ಲಿ ಮುಖ್ಯವಾಗಿ ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡುಗಳಲ್ಲಿ ಒಡೆಯನಿಗಾಗಿ ಪ್ರಾಣತ್ಯಾಗ ಮಾಡುವ, ಆತ್ಮಬಲಿದಾನದ ನಿದರ್ಶನಗಳು ಇತಿಹಾಸದಲ್ಲಿ ಕಾಣಸಿಗುತ್ತವೆ. ಜೋಳದ ಪಾಳಿ, ವೇಳೆವಾಳಿ, ಲೆಂಕವಾಳಿಗಳ ಪ್ರಸ್ತಾವ ಕರ್ನಾಟಕದ ಪ್ರಾಚೀನ ಕಾವ್ಯಗಳಲ್ಲಿ ಮತ್ತು ಶಾಸನಗಳಲ್ಲಿ ದೊರೆಯುತ್ತದೆ. ವೈಷ್ಣವ ರಾಜರುಗಳ ಕಾಲಕ್ಕೆ ಪ್ರಚುರವಾದ ಗರುಡ ಪದ್ಧತಿಯು ಒಡೆಯನಿಗಾಗಿ ಸರ್ವಾರ್ಪಣೆ ಮಾಡುವ ‘ಲೆಂಕ’ ಅಥವಾ ಭಟನ ಸಮರ್ಪಣಾ ಭಾವವನ್ನು ತಿಳಿಸುತ್ತದೆ. ವಿಷ್ಣುವಿಗೆ ಗರುಡ ಇದ್ದ ಹಾಗೆ, ಒಬ್ಬ ರಾಜನಿಗೆ ಒಬ್ಬ ನಿಷ್ಠಾವಂತ ಸೇವಕ, ಅಭಿಮಾನಿ ಇರುತ್ತಾನೆ ಎನ್ನುವುದು ಅಲ್ಲಿನ ಕಲ್ಪನೆ. ‘ಕೀಳ್ಗುಂಟೆ’  ಎನ್ನುವ ಪದ ಕನ್ನಡ ಶಾಸನಗಳಲ್ಲಿ ದೊರೆಯುತ್ತದೆ. ಒಡೆಯನ ಚಿತೆ ಅಥವಾ ಸಮಾಧಿಯ ಕೆಳಗಡೆ ಸೇವಕ ಮಲಗಿ, ತನ್ನ ಪ್ರಾಣವನ್ನು ತ್ಯಜಿಸುವ ‘ಸ್ವಾಮಿಭಕ್ತಿ’ಯ ಒಂದು ಪರಮಾವಧಿ ಅದು. ಕರ್ನಾಟಕದ ವೀರಗಲ್ಲುಗಳಲ್ಲಿಯೂ ಆತ್ಮಬಲಿದಾನದ ಇಂತಹ ಮಾದರಿಗಳು ದೊರೆಯುತ್ತವೆ. (ಉಲ್ಲೇಖಗಳು : ಡಾ.ಎಂ.ಚಿದಾನಂದಮೂರ್ತಿ ಅವರ ‘ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ’ ಮತ್ತು ‘ಸಂಶೋಧನ ತರಂಗ’ ಸಂಪುಟಗಳು). ದಕ್ಷಿಣ ಭಾರತದ ಸ್ಮಾರಕ ಕಲ್ಲುಗಳ ಅಧ್ಯಯನ ಗ್ರಂಥ ಕೆ. ರಾಜನ್ ಅವರ ‘South Indian Memorial Stones’. (ತಂಜಾವೂರು,  2000). ಇದರಲ್ಲಿ ಆಂಧ್ರಪ್ರದೇಶದ ಸ್ಮಾರಕ ಕಲ್ಲುಗಳ ವಿವರಗಳನ್ನು ಕೊಡಲಾಗಿದೆ. ಒಟ್ಟು 476 ಇಂತಹ ಸ್ಮಾರಕ ಕಲ್ಲುಗಳಲ್ಲಿ 346 ರಾಯಲಸೀಮ ಪ್ರದೇಶದ ಅನಂತಪುರ, ಚಿತ್ತೂರು, ಕಡಪ ಮತ್ತು ಕರ್ನೂಲು ಜಿಲ್ಲೆಗಳಲ್ಲಿವೆ. ಚಿತ್ತೂರಿನಲ್ಲಿ 127 ಮತ್ತು ಕಡಪದಲ್ಲಿ 112 ಎಂದು ದಾಖಲಾಗಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ಆರ್ ಅವರ ಹುಟ್ಟೂರು ಕಡಪಜಿಲ್ಲೆಯಲ್ಲಿ ಇರುವುದು ಮತ್ತು ಬಹುತೇಕ ಅಭಿಮಾನಿಗಳ ಆತ್ಮಾಹುತಿಯ ಪ್ರಕರಣಗಳು ಈ ಭಾಗದಿಂದಲೇ ದಾಖಲಾಗಿರುವುದು ಆಕಸ್ಮಿಕವೆಂದು ಭಾವಿಸಬೇಕಾಗಿಲ್ಲ. ಪ್ರಾಚೀನ ಕಾಲದ ರಾಜಪ್ರಭುತ್ವ ಮತ್ತು ಮಧ್ಯಯುಗೀನ ಕಾಲದ ಸ್ಥಳೀಯ ಅರಸು ಮನೆತನಗಳು, ಆಧುನಿಕ ಕಾಲದ ಪಾಳೆಯಗಾರಿಕೆಯ ಕುಟುಂಬ ವ್ಯವಸ್ಥೆ, ರಾಜಕೀಯ ರಂಗದಲ್ಲೂ ಸ್ಪಷ್ಟವಾಗಿ ಗೋಚರಿಸುತ್ತದೆ. ಒಡೆಯ-ಭೃತ್ಯ, ಪ್ರಭು-ಪ್ರಜೆ, ನಾಯಕ-ಸೇವಕ-ಈ ಸಂಬಂಧ ಹೊಸ ರೂಪಾಂತರಗಳನ್ನು ಹೊಂದುತ್ತಾ ಬಂದು, ಅಭಿಮಾನವೆನ್ನುವ ಪರಿಭಾಷೆಯ ಒಳಗೆ ಊಳಿಗಮಾನ್ಯ ಪದ್ಧತಿಯು ರೂಪಾಂತರವನ್ನು ಹೊಂದಿ ಸಕ್ರಿಯವಾಗಿರುವುದನ್ನು ಕಾಣಬಹುದು. ಪ್ರಜಾಪ್ರಭುತ್ವದ ಆಧುನಿಕ ಸಂದರ್ಭದಲ್ಲಿ ಮಧ್ಯಯುಗೀನ ಕಾಲದ ಊಳಿಗಮಾನ್ಯ ಮತ್ತು ವಂಶಾಡಳಿತ ಪದ್ಧತಿಯನ್ನು ನಿವಾರಿಸಿಕೊಳ್ಳದಿದ್ದರೆ, ಜನರ ನಡುವಿನಿಂದ ಸಾಮುದಾಯಿಕ ನಾಯಕರು ಹುಟ್ಟಿಕೊಳ್ಳಲು ಸಾಧ್ಯವಾಗುವುದಿಲ್ಲ. ತಂದೆಯ ಬಳಿಕ ಮಗ ಅಥವಾ ಮಗಳು ಆಳಬೇಕು ಎನ್ನುವ ಆಲೋಚನೆಯೇ ಪ್ರಜಾಪ್ರಭುತ್ವದ ಸಾಮುದಾಯಿಕತೆಯ ತತ್ತ್ವಕ್ಕೆ ವಿರುದ್ಧವಾದುದು. ಜನಪ್ರಿಯ ನಾಯಕರ ಜನೋಪಯೋಗಿ ಕೆಲಸಗಳು ಸಹಜವಾಗಿಯೇ ಗೌರವವನ್ನು ವಿಶ್ವಾಸವನ್ನು ಅಭಿಮಾನವನ್ನು ಉಂಟುಮಾಡುತ್ತವೆ. ಹಾಗಾಗಿ, ಅಂತಹ ನಾಯಕರ ಅಕಾಲಿಕ ಅಗಲಿಕೆ, ಭಾವೋದ್ವೇಗವನ್ನು, ನೋವನ್ನು ತರುವುದು ಸಹಜವಾದುದು. ಅಂತಹ ಸಂದರ್ಭದಲ್ಲಿ ಭಾವನಾತ್ಮಕ ಸಂಬಂಧ ಹೊಂದಿರುವವರು ಅಳುವುದು, ರೋದಿಸುವುದು ತುಂಬ ಮಾನವೀಯವಾದುದು. ಆದರೆ, ಅವುಗಳನ್ನು ನಿಧಾನವಾಗಿಯಾದರೂ ನಿಯಂತ್ರಿಸುವ ವ್ಯವಸ್ಥೆಯನ್ನು ನಾವು ಕಲ್ಪಿಸಿಕೊಳ್ಳಬೇಕು. ನಾಯಕರೊಬ್ಬರ ದುರಂತ ಸಾವಿನ ವೇಳೆಗೆ ಮಾಧ್ಯಮಗಳಲ್ಲಿ, ಅದರಲ್ಲೂ ಪ್ರಧಾನವಾಗಿ ದೃಶ್ಯಮಾಧ್ಯಮಗಳಲ್ಲಿ ಮತ್ತೆ ಮತ್ತೆ ಪ್ರಸಾರವಾಗುವ ಭಾವೋತ್ಕರ್ಷದ ಸಂಗತಿಗಳು ಸಂವೇದನಾಶೀಲರಾದ ಯಾರನ್ನೇ ಆಗಲಿ ಕಲಕುತ್ತವೆ ಮತ್ತು ಭಾವೋದ್ವೇಗಕ್ಕೆ ಒಳಗು ಮಾಡುತ್ತವೆ. ಅಂತಹ ಸನ್ನಿವೇಶಗಳಲ್ಲಿ ಅದನ್ನು ಶಮನಮಾಡುವ, ನಿಯಂತ್ರಿಸುವ, ಮಾರ್ಗಗಳನ್ನು ಅಳವಡಿಸಬೇಕು ಮತ್ತು ಸಾವಿನ ವಿದ್ಯಮಾನವೊಂದು ಅತಿರಂಜಿತ ಸಂಕಥನವಾಗಿ ರೂಪಾಂತರಗೊಳ್ಳಬಾರದು. ಜೈನಧರ್ಮದಲ್ಲಿ ವ್ರತಾಚರಣೆಯ ಮೂಲಕ ಸಾವನ್ನು ಆಹ್ವಾನಿಸುವ ಪದ್ಧತಿ ಪ್ರಾಚೀನವಾದುದು. ಸಮಾಧಿ, ಸಲ್ಲೇಖನ, ಸನ್ಯಸಿನ ಮತ್ತು ನಿಸಿಧಿ ಎನ್ನುವ ಪರಿಭಾಷೆಗಳು ಜೈನಧರ್ಮದಲ್ಲಿ ಪ್ರಚಲಿತವಾಗಿವೆ. ಇವನ್ನು ಕುರಿತ ವಿಶೇಷವಾದ ಅಧ್ಯಯನ, ಷ. ಶೆಟ್ಟರ್ ಅವರ ‘ಸಾವಿನ ಆಹ್ವಾನ’ ಗ್ರಂಥದಲ್ಲಿದೆ (ಕನ್ನಡ ಪುಸ್ತಕ ಪ್ರಾಧಿಕಾರ, 2004). ಜೈನ ಯತಿಗಳ ಸಲ್ಲೇಖನ, ನಿಸಿಧಿ ಪದ್ಧತಿಗಳ ಬಗ್ಗೆ ಕೂಡ ಭಿನ್ನ ಅಭಿಪ್ರಾಯಗಳು ಇವೆ. ಇಚ್ಛಾಮರಣವನ್ನು ಕುರಿತು ನ್ಯಾಯಾಲಯಗಳು ಸಾಕಷ್ಟು ವಾಗ್ವಾದಗಳನ್ನು ನಡೆಸಿವೆ ಮತ್ತು ತೀರ್ಪುಗಳನ್ನು ನೀಡಿವೆ. ಯಾವುದು ಸ್ವಇಚ್ಛೆಯ ಮರಣ, ಯಾವುದು ಪ್ರಾಯೋಜಿತ ಮರಣ ಎನ್ನುವುದರ ನಡುವೆ ಗಡಿರೇಖೆಗಳನ್ನು ಎಳೆಯುವುದು ಬಹಳ ಕಷ್ಟವಾದುದು. ಸತಿಸಹಗಮನವನ್ನು ಒಂದು ಕಾಲಕ್ಕೆ ಸಂಸ್ಕೃತಿಯ ವ್ಯಾಖ್ಯೆಯ ಒಳಗಡೆ ಅರ್ಥೈಸುತ್ತಿದ್ದರು. ಆದರೆ, ಅದೊಂದು ಬರ್ಬರ ಪದ್ಧತಿ ಎನ್ನುವುದನ್ನು ಇವತ್ತು ಆಧುನಿಕ ಸಮಾಜ ಅರ್ಥಮಾಡಿಕೊಂಡಿದೆ. ಅದು ಇಚ್ಛಾ ಮರಣವಲ್ಲ, ಬಲವಂತದ ಸಾವು ಎನ್ನುವ ವಿಷಯ ಸಾಕಷ್ಟು ಅಧ್ಯಯನಕ್ಕೆ ಒಳಗಾಗಿದೆ. ರೈತರ ಆತ್ಮಹತ್ಯೆಯ ಕುರಿತು ಸಾಕಷ್ಟು ಚರ್ಚೆಗಳು ನಡೆದಿವೆ. ಆರ್ಥಿಕ, ಸಾಮಾಜಿಕ, ಮನೋವೈಜ್ಞಾನಿಕ ನೆಲೆಯ ಅಧ್ಯಯನ ವರದಿಗಳು ಬಂದಿವೆ. ರೈತರೊಬ್ಬರು ಮಾಡಿಕೊಳ್ಳುವ ಆತ್ಮಹತ್ಯೆಯನ್ನು ಕೂಡ ಸ್ವಯಂಪ್ರೇರಿತ ಎಂದು ಹೇಳಲು ಬರುವುದಿಲ್ಲ. ಅನೇಕ ಸಂದರ್ಭಗಳಲ್ಲಿ ಆರ್ಥಿಕ, ಸಾಮಾಜಿಕ ಮತ್ತು ಪ್ರಭುತ್ವಾತ್ಮಕವಾದ ಒತ್ತಡಗಳ ವ್ಯಾಪಕ ಸನ್ನಿವೇಶದಲ್ಲಿ ಇಂತಹ ಆತ್ಮಹತ್ಯೆಗಳು ನಡೆಯುತ್ತವೆ. ಹಾಗಾಗಿ, ‘ಆತ್ಮಹತ್ಯೆ’ ಮತ್ತು ‘ಕೊಲೆ’ ಎನ್ನುವ ಪರಿಭಾಷೆಗಳು ಹೊರನೋಟಕ್ಕೆ ಬೇರೆಬೇರೆ ಎಂದು ಅನ್ನಿಸಿದರೂ, ಅನೇಕ ಬಾರಿ ಅವು ಒಂದು ಇನ್ನೊಂದರೊಡನೆ ಬೇರ್ಪಡಿಸಲಾಗದಷ್ಟು ಬೆಸೆದುಕೊಂಡಿರುತ್ತವೆ. ‘ಸತಿಸಹಗಮನ’ ಮತ್ತು  ‘ರೈತರ ಆತ್ಮಹತ್ಯೆ’ಯ ಬಗ್ಗೆ ಹೇಳುವ ಮಾತುಗಳನ್ನೇ ಅಭಿಮಾನಿಗಳ ಆತ್ಮಹತ್ಯೆ ಮತ್ತು ಹೃದಯಾಘಾತಗಳ ಬಗ್ಗೆಯೂ ಅನ್ವಯಿಸಿಕೊಂಡು ಪರಿಶೀಲಿಸಬಹುದು. ಪ್ರಭುತ್ವವೊಂದು ನಿರ್ಮಾಣ ಮಾಡುವ ಸನ್ನಿವೇಶದ ಒತ್ತಡ ಮತ್ತು ಇಂತಹ ಪ್ರಭುತ್ವ ಇಲ್ಲದೇ ಅಸಹಾಯಕರಾಗುವಂತಹ ನಿರಾಶಾದಾಯಕ ದು:ಸ್ಥಿತಿ-ಇವು ಇಂತಹ ಅಮಾಯಕರ ಅನ್ಯಾಯದ ಸಾವುಗಳ ಹಿಂದೆ ಕೆಲಸ ಮಾಡುತ್ತಿರುತ್ತವೆ. ಈ ಸಾವು ನ್ಯಾಯವೇ ಎನ್ನುವ ಪ್ರಶ್ನೆ, ಬದುಕಿರುವ ನಮ್ಮನ್ನು ಕಾಡಿದಾಗ ಮಾತ್ರ ಇನ್ನಷ್ಟು ಸಮೂಹ ಸನ್ನಿಯ ಸಾವುಗಳನ್ನು ತಡೆಗಟ್ಟಬಹುದು. ದಕ್ಷಿಣ ಆಫ್ರಿಕಾದ ಲೇಖಕ Zakes Mdaನ ಜನಪ್ರಿಯ ಕಾದಂಬರಿ ‘Ways of Dying’ (1995). ಇದರಲ್ಲಿ ಬರುವ ಮುಖ್ಯ ಪಾತ್ರವಾದ ತೊಲೋಕಿ, ಒಬ್ಬ ವೃತ್ತಿಪರ ಸಂತಾಪಸೂಚಕ ವ್ಯಕ್ತಿ. ಯಾವುದೇ ಸಾವಿನ ಸಂದರ್ಭದಲ್ಲಿ ಸಾಂತ್ವನ ಹೇಳುವ, ಸಂತಾಪ ಸೂಚಕ ಮಾತುಗಳನ್ನು ಆಡುವ ಕೆಲಸವನ್ನು ವೃತ್ತಿಯನ್ನಾಗಿ ಮಾಡಿಕೊಂಡ ತೊಲೋಕಿ, ಸಾವಿನ ಬಗ್ಗೆ ಹೇಳುವ ಮಾತು ಈ ರೀತಿ ಇದೆ. ‘ಸಾವು ದಿನನಿತ್ಯ  ನಮ್ಮೊಡನೆ ಜೀವಿಸುತ್ತಿದೆ. ನಿಜವಾಗಿ ನಮ್ಮ ಸಾಯುವ ದಾರಿಗಳೆಂದರೆ, ನಮ್ಮ ಬದುಕುವ ದಾರಿಗಳು ಅಥವಾ ನಮ್ಮ ಬದುಕುವ ದಾರಿಗಳೆಂದರೆ, ಅವು ನಮ್ಮ ಸಾಯುವ ದಾರಿಗಳು’. ದಾರ್ಶನಿಕವೆಂಬಂತೆ ಕಾಣಿಸುವ ಈ ಮಾತುಗಳು, ಬದುಕು ಮತ್ತು ಸಾವುಗಳ ಸಂಬಂಧವನ್ನು ಅರ್ಥಪೂರ್ಣವಾಗಿ ತಿಳಿಸುತ್ತವೆ. ಕಾದಂಬರಿಕಾರ ಈ ಕಾದಂಬರಿಯಲ್ಲಿ ಅಂತಿಮವಾಗಿ ಹೇಳುವ ಮಾತೆಂದರೆ, ನಿರ್ದಿಷ್ಟ ಜನಸಮುದಾಯದಲ್ಲಿ ಹಿಂಸೆಯ ಭಾವನೆ ಇದ್ದರೆ ಅದಕ್ಕೆ ಪರಿಹಾರವೂ ಕೂಡ ಹಿಂಸೆಯಲ್ಲೇ ಇದೆ, ಎನ್ನುವ ದೃಷ್ಟಿಯಿಂದ ಜನರು ತಮ್ಮ ದೇವರುಗಳನ್ನು, ಹಿರಿಯರುಗಳನ್ನು, ದೈವಗಳನ್ನು ಸೃಷ್ಟಿಸಿಕೊಳ್ಳುತ್ತಾರೆ. ದಕ್ಷಿಣ ಆಫ್ರಿಕಾದಲ್ಲಿ ಮೊದಲನೇ ಚುನಾವಣೆಯ ಬಳಿಕ ರಚನೆಯಾದ ಈ ಕಾದಂಬರಿಯು ಆ ಕಾಲದ ಕಡುಬಡತನ ಮತ್ತು ಬರ್ಬರತೆಯನ್ನು ಬಿಂಬಿಸುತ್ತದೆ. ‘Ways of Dying’ :Death and its Meanings in South Asia Edited by Elisabeth Schombucher and Claus Peter Zoller (Manohar, 1999) – ಇದು ದಕ್ಷಿಣ ಏಷ್ಯಾದಲ್ಲಿ ಸಾವಿನ ಬಗೆಗಳು ಮತ್ತು ಅವುಗಳ ಅರ್ಥಗಳನ್ನು ಕುರಿತ ಅಧ್ಯಯನಾತ್ಮಕ ಲೇಖನಗಳ ಸಂಪುಟ. ಭಾರತವನ್ನು ಒಳಗೊಂಡು ಸಾಂಸ್ಕೃತಿಕ ವೀರರು, ದೈವಗಳು, ಭೂತಗಳು-ಮುಂತಾದ ಪೌರಾಣಿಕ ಆಕೃತಿಗಳನ್ನು ಪಡೆಯುವ ಮನುಷ್ಯರ ಸಾವಿನ ದುರಂತ ಕಥನದ ಬಹುರೂಪಗಳು ಇಲ್ಲಿ ಚರ್ಚಿತವಾಗಿವೆ. ಸ್ವೀಕರಿಸುವ ಜನವರ್ಗವೊಂದು ಭಕ್ತಿ, ಭಯ, ಅಪೇಕ್ಷೆ, ಹಾರೈಕೆ, ರಕ್ಷಣೆಯಂತಹ ಭಾವಗಳನ್ನು ಒಗ್ಗೂಡಿಸಿ ಲೌಕಿಕ ಸಾವುಗಳನ್ನು ಅಲೌಕಿಕಗೊಳಿಸುತ್ತದೆ. ಬದುಕಿನ ಅಸಹಾಯಕತೆ ಸಾವಿನಲ್ಲಿ ಪರ್ಯಾವಸಾನವಾದರೆ, ಸಾವಿನ ಪೌರಾಣಿಕತೆ ನಮ್ಮ ಬದುಕಿಗೆ ರಕ್ಷಣೆಯ ಭ್ರಮೆಯೊಂದಿಗೆ ಭಯದ ಪರಾವಲಂಬನೆಯ ಮನಸ್ಥಿತಿಯನ್ನು ಉಂಟುಮಾಡುತ್ತದೆ. ಸಾವಿನ ಬಳಿಕ ವೀರಸ್ವರ್ಗ, ಮೋಕ್ಷ, ಸದ್ಗತಿ, ಪ್ರಭುವಿನ ವಿಶ್ವಾತ್ಮಕ ಸಾಮ್ರಾಜ್ಯದಲ್ಲಿ ಸ್ಥಾನ-ಇತ್ಯಾದಿ ದೊರೆಯುತ್ತದೆ ಎನ್ನುವ ಪರಿಕಲ್ಪನೆಯೇ ಮರಣವನ್ನು ಮಹಾನವಮಿ ಎಂದು ಕೀರ್ತಿಸುತ್ತದೆ. ಬಡತನ, ಅಸಹಾಯಕತೆಗಳು ಒಟ್ಟು ಸೇರಿ ನಿರ್ಮಿಸುವ ಆತಂಕದ ಸನ್ನಿವೇಶವೊಂದು ತೆಗೆದುಕೊಳ್ಳುವ ಉದ್ವೇಗದ ತೀರ್ಮಾನ, ಆತ್ಮಬಲಿಯ ‘ಬಲಿಸ್ಥಾನ’. ಸರ್ವರಿಗೂ ಸಮಪಾಲನ್ನು ಕೊಡಬೇಕಾದ ಪ್ರಜಾಪ್ರಭುತ್ವದ ಆಧುನಿಕ ಸಮಾಜ, ಬಡತನ ನಿವಾರಣೆ ಮೂಲಕವೇ ಸಾವಿನ ನಿವಾರಣೆಯ ಕಡೆಗೆ ಆದ್ಯ ಗಮನ ಕೊಡಬೇಕಾಗಿದೆ. ಅಮೇರಿಕಾದ ಬ್ರೆಯರ್ ಸ್ಟೇಟ್ ವಿಶ್ವವಿದ್ಯಾನಿಲಯವು ಸಾವು ಮತ್ತು ಸಾವಿಗೆ ಸಂಬಂಧಿಸಿದ ದುಃಖ ನಿವಾರಣೆಯನ್ನು ಕುರಿತು ಸ್ನಾತಕೋತ್ತರ ಪದವಿಯ ಶಿಕ್ಷಣಕ್ರಮವೊಂದನ್ನು ನಡೆಸುತ್ತದೆ. ಇದರಲ್ಲಿ ಸಾವಿಗೆ ಸಂಬಂಧಿಸಿದ ಮತಪ್ರಕ್ರಿಯೆಗಳು, ಪದ್ಧತಿಗಳು ಮುಂತಾದವುಗಳ ಕುರಿತ ವೈಜ್ಞಾನಿಕ ಅಧ್ಯಯನಗಳಿವೆ. ಭಾರತದಲ್ಲಿ ಈ ಕುರಿತು ಸಾಕಷ್ಟು ಜಾನಪದ ಮತ್ತು ಸಾಂಸ್ಕೃತಿಕ ಅಧ್ಯಯನಗಳು ನಡೆದಿವೆ. ಮಧ್ಯಯುಗೀನ ಕಾಲದ ಪದ್ಧತಿ ಆಚರಣೆಗಳ ಅನುಸರಣೆಗಿಂತ, ಅವುಗಳ ವೈಜ್ಞಾನಿಕ ಅಧ್ಯಯನದ ಮೂಲಕವೇ ಸಾಮೂಹಿಕ ಸಾವುಗಳ ಪ್ರವಾಹಕ್ಕೆ ತಡೆಗೋಡೆಯನ್ನು ಒಡ್ಡಬೇಕು. 11 ಸೆಪ್ಟೆಂಬರ್, 2009]]>

‍ಲೇಖಕರು avadhi

June 22, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ವಿವೇಕ ರೈ ಅವರ ಹೊಸ ಕೃತಿಗಳ ಅನಾವರಣ

ವಿವೇಕ ರೈ ಅವರ ಹೊಸ ಕೃತಿಗಳ ಅನಾವರಣ

ಆಕೃತಿ ಆಶಯ ಪಬ್ಲಿಕೇಷನ್ಸ್ನ ಮೂಲಕ ಡಾ. ಬಿ.ಎ. ವಿವೇಕ ರೈ ಅವರ ಮೂರು ಪುಸ್ತಕಗಳ ಅನಾವರಣ ಕಾರ್ಯಕ್ರಮ ೨೨-೧೦-೨೦೧೭ ರಂದು ಕೆನರಾ ಕಾಲೇಜು,...

2 ಪ್ರತಿಕ್ರಿಯೆಗಳು

  1. Laxminarayana Bhat P

    ಪ್ರೀತಿಯ ಸರ್,
    ಭಾವೋದ್ವೇಗದ ಕ್ಷಣಿಕ ದೌರ್ಬಲ್ಯದ ಕುರಿತು ಅತ್ಯಂತ ಸಂಯಮವಹಿಸಿ ಮನಮುಟ್ಟುವಂತೆ ಬರೆದಿದ್ದೀರಿ. ನಮಸ್ಕಾರ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: