ಸಾಹಿತ್ಯ ಸಮ್ಮೇಳನ ಹಣಕಾಸಿನ ವಹಿವಾಟೂ ಆಗಿಬಿಟ್ಟಿದೆ..

ಒಂದು ಸಾಹಿತ್ಯ ಸಮ್ಮೇಳನದ ಸುತ್ತಮುತ್ತ…
ಸಾಹಿತ್ಯದ ಘನತೆ-ಗೌರವಗಳೊಂದಿಗೆ
ನಡೆಯಬೇಕಿದೆ ಸಮ್ಮೇಳನ ಸಮಾರಂಭ

d-s-nagabhushan

ಡಿ.ಎಸ್.ನಾಗಭೂಷಣ

ಈಗ ನಮ್ಮ ಸರ್ಕಾರದ ಬಳಿ ಹಣ ಜಾಸ್ತಿಯಾಗಿ ಜಿಲ್ಲಾ ಮತ್ತು ತಾಲ್ಲೂಕು ಸಮ್ಮೇಳನಗಳಿಗೂ ಲಕ್ಷಾಂತರ ರೂಪಾಯಿಗಳ ಅನುದಾನ ಘೋಷಿತವಾಗಿರುವುದರಿಂದ ಸಾಹಿತ್ಯ ಸಮ್ಮೇಳನಗಳೆಂದರೆ, ಹಣಕಾಸಿನ ವಹಿವಾಟೂ ಆಗಿಬಿಟ್ಟಿದೆ. (ಇಲ್ಲದಿದ್ದರೆ ಈಗ ಇಷ್ಟೊಂದು ಜಿಲ್ಲಾ, ತಾಲ್ಲೂಕು ಸಮ್ಮೇಳನಗಳು ಎಲ್ಲಿ ನಡೆಯುತ್ತಿದ್ದವು!)

ನಾನು ಇತ್ತೀಚೆಗೆ ಸಾಹಿತ್ಯ ಸಮ್ಮೇಳನವೊಂದಕ್ಕೆ ಹೋಗಿದ್ದೆ. ಅದು ಹಳ್ಳಿಯೊಂದರಲ್ಲಿ ನಡೆದ ಸಾಹಿತ್ಯ ಸಮ್ಮೇಳನ. ನನ್ನ ಗೆಳೆಯರೊಬ್ಬರು ಅದರ ಸರ್ವಾಧ್ಯಕ್ಷತೆಗೆ ಆಯ್ಕೆಯಾಗಿದ್ದುದರಿಂದ ಕೆಲವರು ಗೆಳೆಯರು ಸೇರಿ ಅಲ್ಲಿಗೆ ಹೋಗಿದ್ದೆವು. ಊರಿನ ಜನ ತಮ್ಮೂರಿನಲ್ಲಿ ಏನೋ ಮಹತ್ವದ್ದು ನಡೆಯುತ್ತಿದ್ದು, ಸುತ್ತಮುತ್ತಲೂರಿನ ದೊಡ್ಡ ಜನರು ಬರುತ್ತಿದ್ದಾರೆಂಬ ನಿರೀಕ್ಷೆಯಲ್ಲಿ ತುಂಬು ಸಂಭ್ರಮದಲ್ಲಿದ್ದಂತಿದ್ದರು. ಮಹಿಳೆಯರು ತಮ್ಮ ಮನೆಗಳ ಮುಂದೆ ರಂಗೋಲಿ ಹಾಕಿ ಊರಿಗೆ ಕಳೆ ತಂದಿದ್ದರು. ಮಕ್ಕಳು ಮರಿಗಳು ಗರಿಗರಿಯಾದ ಶಾಲಾ ಯೂನಿಫಾರ್ಮ್ಗಳನ್ನು ತೊಟ್ಟು ಸಮ್ಮೇಳನದ ಚಪ್ಪರದ ತುಂಬ ಗಲಾಟೆ ಮಾಡುತ್ತಾ ಓಡಾಡುತ್ತಿದ್ದರು.

ಈ ಸಂಭ್ರಮವನ್ನು ಅನುಭವಿಸುತ್ತಾ ಕೂತಿದ್ದ ನಮಗೆ ಎಲ್ಲರೂ ಎದ್ದು ನಿಲ್ಲಬೇಕೆಂಬ ಸೂಚನೆ ಧ್ವನಿವರ್ಧಕದಿಂದ ಹೊರಬಿತ್ತು. ನಾವು, ಬಹುಶಃ ಸಮ್ಮೇಳನಾಧ್ಯಕ್ಷರ ಮೆರವಣಿಗೆ ವೇದಿಕೆಯನ್ನು ತಲುಪುತ್ತಿದ್ದು, ಸಮ್ಮೇಳನಾಧ್ಯಕ್ಷರು ವೇದಿಕೆಯ ಮಧ್ಯಭಾಗದಲ್ಲಿದ್ದ ಸಿಂಹಾಸನದಲ್ಲಿ ಆಸೀನರಾಗುವುದನ್ನು ಗೌರವಿಸಲು ಈ ಸೂಚನೆ ಎಂದು ಎದ್ದು ನಿಲ್ಲುವ ಪ್ರಯತ್ನ ಮಾಡುತ್ತಿದ್ದಂತೆ, ಧ್ವನಿವರ್ಧಕದಿಂದ ಮುಂದಿನ ಉದ್ಘೋಷಣೆಯಾಯಿತು: ‘ಶ್ರೀ ಮಠದ ಶ್ರೀ ಶ್ರೀ… ಸ್ವಾಮಿಗಳು ವೇದಿಕೆಗೆ ಆಗಮಿಸುತ್ತಿದ್ದು, ಅವರು ತಮ್ಮ ಆಸನದಲ್ಲಿ ಆಸೀನರಾಗುವವರೆಗೆ ಅವರಿಗೆ ಗೌರವವಾಗಿ ಜನ ಎದ್ದುನಿಲ್ಲಬೇಕು’

ಆಸೀನರಾಗಿದ್ದವರೆಲ್ಲ ಎದ್ದುನಿಂತರು. ಆಗ ನಾವು ಮತ್ತು ಗೆಳೆಯರು ನಾವೇನಾದರೂ ತಪ್ಪಿ ಯಾವುದಾದರೂ ಮಠದ ಜಾತಿ ಸಮ್ಮೇಳನಕ್ಕೆ ಬಂದುಬಿಟ್ಟಿದ್ದೇವೋ ಎಂಬ ಗೊಂದಲ-ಗಾಬರಿಗಳಿಂದ ವೇದಿಕೆಯತ್ತ ಕಣ್ಣು ಹಾಯಿಸಿದರೆ, ಅದಕ್ಕೆ ಒಂದು ಜಾತಿಯ, ಒಂದು ಪಂಗಡದ ಸ್ವಾಮೀಜಿಯ ಹೆಸರು ಇಡಲಾಗಿತ್ತು. ಈಗ ಸಮ್ಮೇಳನದ ಉದ್ಘಾಟನೆಗೆಂದು ವೇದಿಕೆಯೇರಿ ಸಿಂಹಾಸನಾಧೀಶರಾಗುತ್ತಿದ್ದವರು ಅದೇ ಜಾತಿಯ ಇನ್ನೊಂದು ಪಂಗಡ (ಮಠ)ದ ಸ್ವಾಮೀಜಿ. ಈ ಎರಡೂ ಪಂಗಡಗಳಿಗೆ ಸೇರಿದ ಜನರೇ ಪ್ರಾಬಲ್ಯದಲ್ಲಿದ್ದ ಆ ಊರಿಗೆ ತಕ್ಕಂತೆ ಸಾಹಿತ್ಯ ಸಮ್ಮೇಳನದ ಸಂಘಟಕರು ಈ ಒಂದು ಜಾತಿ ಪಂಗಡಗಳ ಸಮನ್ವಯದ ಪ್ರಯತ್ನ ಮಾಡಿದ್ದರು.

ಆ ಸ್ವಾಮೀಜಿ ಇನ್ನೂ ಯುವಕರು. ಬಂದು ಸಿಂಹಾಸನದ ಮೇಲೆ ಆಸೀನರಾದರು. ಆ ಸಿಂಹಾಸನದ ಅಕ್ಕಪಕ್ಕಗಳಲ್ಲಿದ್ದ ಸಾಮಾನ್ಯ ಕುರ್ಚಿಗಳ ಮೇಲೆ ಆ ಪ್ರದೇಶದ ಗ್ರಾಮ ಪಂಚಾಯಿತಿ ಸದಸ್ಯರಿಂದ ಹಿಡಿದು ವಿವಿಧ ಸ್ತರಗಳ ಜನಪ್ರತಿನಿಧಿಗಳು ಧನ್ಯಭಾವದಿಂದ ಕುಳಿತಿದ್ದರು.

ನಮ್ಮ ಗೆಳೆಯ ಸಮ್ಮೇಳನದ ಸರ್ವಾಧ್ಯಕ್ಷರು ಎಲ್ಲಿ ಎಂದು ಹುಡುಕಾಡಿದರೆ, ಅವರು ಸ್ವಾಮೀಜಿಯ ಪಕ್ಕದ ಕಬ್ಬಿಣದ ಕುರ್ಚಿಯಲ್ಲಿ ಕಂಡೂ ಕಾಣದಂತೆ ಗುಬ್ಬಚ್ಚಿಯಂತೆ ಕುಳಿತ್ತಿದ್ದರು. ಸಮಾಜವಾದಿ ಹಿನ್ನೆಲೆಯಿಂದ ಬಂದ ಅವರು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹೀಗೆ ಕರುಣಾಜನಕವಾಗಿ ಕೂತಿರುವುದನ್ನು ಕಂಡು ಜುಗುಪ್ಸೆಯಾಯಿತು. ಅವರು ಪ್ರತಿಭಟಿಸುವ ವಿಶ್ವಾಸದಲ್ಲಿ ನಾವೂ ನಮ್ಮ ಪ್ರತಿಭಟನೆಯ ಮೂಲಕ ಅವರಿಗೆ ಬೆಂಬಲ ವ್ಯಕ್ತಪಡಿಸಬೇಕೆಂಬ ತುಡಿತ ಹೆಚ್ಚಾಯಿತು.

ಆದರೆ, ಸ್ವಾಮೀಜಿ ವೇದಿಕೆಯೇರಿದಾಗ ಎದ್ದುನಿಂತ ಜನಸ್ತೋಮವನ್ನು ಗಮನಿಸಿದ್ದ ನಮಗೆ ನಮ್ಮ ಸುರಕ್ಷೆಯ ಆತಂಕವೂ ಉಂಟಾಗಿದ್ದು ಸಹಜವೇ! ಅಷ್ಟರಲ್ಲಿ ಇದ್ದಕ್ಕಿದ್ದಂತೆ ನಮ್ಮ ಮತ್ತು ಸಮ್ಮೇಳನಾಧ್ಯಕ್ಷರ ಪೀಕಲಾಟ ತಪ್ಪಿಸುವಂತೆ ಸಂಘಟಕರು ವೇದಿಕೆಯ ಮೇಲೆ ಇನ್ನೊಂದು ಸಿಂಹಾಸನವನ್ನು ತಂದು ಸ್ವಾಮೀಜಿ ಪಕ್ಕದಲ್ಲಿರಿಸಿದರು. ಸಮ್ಮೇಳನಾಧ್ಯಕ್ಷರು ಎದ್ದು ಆ ಸಿಂಹಾಸನದ ಮೇಲೆ ಆಸೀನರಾದರು. ನಮಗೆ ಚಪ್ಪಾಳೆ ತಟ್ಟಿ ಅದಕ್ಕೆ ಮೆಚ್ಚುಗೆ ಸೂಚಿಸಬೇಕೆನಿಸಿದರೂ, ನಾವು ನಾಲ್ಕಾರು ಜನರಷ್ಟೆ ಚಪ್ಪಾಳೆ ತಟ್ಟಿ ಹಾಸ್ಯಾಸ್ಪದರೆನಿಸುವ ಅನುಮಾನದಿಂದ ಸುಮ್ಮನಾದೆವು.

ಅನಂತರ ಸಮ್ಮೇಳನ ಆರಂಭವಾಯಿತು. ಅರ್ಧ ಶಬ್ದ ಮತ್ತು ಅರ್ಧ ವಾಕ್ಯಗಳನ್ನಷ್ಟೇ ಉಚ್ಚರಿಸಬಲ್ಲವರಾಗಿದ್ದ ನಿರೂಪಕರು ಮೊದಲು, ಶ್ರೀ ಶ್ರೀ … ಸ್ವಾಮೀಜಿಯವರ ಪಾದಾರವಿಂದಗಳಿಗೆ ಪೊಡಮಡುತ್ತಾ ತಮ್ಮ ನಿರೂಪಣೆಯನ್ನು ಆರಂಭಿಸಿ, ವೇದಿಕೆಯ ಮೇಲಿದ್ದ ಎಲ್ಲ ಸಣ್ಣ ಪುಟ್ಟ ರಾಜಕಾರಣಿ ಮತ್ತು ಊರ ಹಿರಿಯರಿಗೂ, ಸದ್ಯ ಅವರವರ ಪಾದಾರವಿಂದಗಳನ್ನು ಅವರಿಗೇ ಬಿಟ್ಟು ಸುಮ್ಮನೆ ಪೊಡಮಟ್ಟು, ಕೊಟ್ಟಕೊನೆಗೆ ನಮ್ಮ ಸಮ್ಮೇಳನಾಧ್ಯಕ್ಷರಿಗೂ ಪೊಡಮಟ್ಟರು! ಅನಂತರ ಸ್ವಾಗತ. ಅದೂ ಅದೇ ಕ್ರಮದಲ್ಲಿ ಪೊಡಮಡುವಿಕೆಯ ಬೊಗಳೆ ಮಾತು! ಅಂತೂ ಕೊನೆಗೆ ಸಮ್ಮೇಳನದ ಸರ್ವಾಧ್ಯಕ್ಷರಿಗೂ ಒಂದು ಔಪಚಾರಿಕ ಸ್ವಾಗತ ದೊರೆಯಿತು.

ಇದನ್ನೆಲ್ಲ ಕಸಿವಿಸಿಯಲ್ಲಿ ನೋಡುತ್ತಾ, ವೇದಿಕೆಯ ಮೇಲೆ ನಡೆಯುತ್ತಿದ್ದುದರ ಬಗ್ಗೆ ಯಾವುದೇ ಗಮನವಿರದೆ ಸುಮ್ಮನೆ ಗುಜುಗುಡುತ್ತಿದ್ದ ಹೆಂಗಸರು-ಮಕ್ಕಳಿಂದಲೇ ತುಂಬಿದ್ದ ಆ ಜನಸ್ತೋಮದ ಮಧ್ಯೆ ಕೂತಿದ್ದ ನಮಗೆ, ಮತ್ತೆ ನಿರೂಪಕರಿಂದ ಸದ್ಯ ಬಾಯಿಯಲ್ಲೇ ಪಾದಾರವಿಂದಗಳಿಗೆ ಪೊಡಮಡಿಸಿಕೊಂಡು ಎದ್ದು, ದೀಪ ಬೆಳಗಿ ಸಮ್ಮೇಳನವನ್ನು ಉದ್ಘಾಟಿಸಿದ ಸ್ವಾಮೀಜಿ ತಮ್ಮ ಉದ್ಘಾಟನಾ ನುಡಿಗಳನ್ನಾಡತೊಡಗಿದಾಗ ಆಶ್ಚರ್ಯ ಕಾದಿತ್ತು.

ಆ ಸ್ವಾಮೀಜಿ ಅಂದು ಎಂತಹ ಅದ್ಭುತ ಭಾಷಣ ಮಾಡಿದರೆಂದೆರೆ, ನಾವು ದಂಗಾಗಿ ಹೋದೆವು. ಕನ್ನಡ ನಾಡು ನುಡಿಗಳ ಹೆಮ್ಮೆಯ ಚರಿತ್ರೆಯಿಂದ ಆರಂಭಿಸಿದ ಅವರು, ಇಂದು ಕನ್ನಡ ಶಾಲೆಗಳನ್ನು ಕುರಿತ ಜನರ ಉಪೇಕ್ಷೆಯ ಹಿನ್ನೆಲೆಯಲ್ಲಿ ಕನ್ನಡ ಎದುರಿಸುತ್ತಿರುವ ಅಪಾಯಗಳನ್ನೂ, ಇಂತಹ ಸಂದರ್ಭದಲ್ಲಿ ಕನ್ನಡಪರ ಚಳವಳಿ, ಹೋರಾಟಗಳು ದಾರಿ ತಪ್ಪುತ್ತಿರುವ ಬಗೆಯನ್ನೂ ತಮ್ಮ ತಿಳಿಗನ್ನಡದಲ್ಲಿ ಎಷ್ಟು ಸ್ಪಷ್ಟವಾಗಿ ವಿವರಿಸಿದರೆಂದರೆ, ಅವರ ಉಪಸ್ಥಿತಿಯ ಸುತ್ತ ನಮ್ಮಲ್ಲಿ ಬೆಳೆದಿದ್ದ ಪ್ರತಿಕೂಲ ಭಾವನೆಗಳೆಲ್ಲ ಹಾಗೇ ಕರಗಿಹೋದವು.

ನಮ್ಮ ಗೆಳೆಯರಾದ ಸಮ್ಮೇಳನಾಧ್ಯಕ್ಷರು ಮುಖ್ಯವಾಗಿ ಶಿಕ್ಷಣ ಹಕ್ಕು ಕಾಯಿದೆ ಹೇಗೆ ಕನ್ನಡ ಶಾಲೆಗಳಿಗೆ ಗಂಡಾಂತರ ತಂದಿದೆ ಎಂಬ ಅಂಶದ ಸುತ್ತ ತಮ್ಮ ಮಾತುಗಳನ್ನು ಕೇಂದ್ರೀಕರಿಸಿ ಮಾಡಿದ ಭಾಷಣವೂ ತುಂಬ ಚೆನ್ನಾಗಿತ್ತಾದರೂ, ಆ ಪರಿಸರದಲ್ಲಿ ಅದಕ್ಕಿಂತ ಸ್ವಾಮೀಜಿಯ ಉದ್ಘಾಟನಾ ಭಾಷಣವೇ ಹೆಚ್ಚು ಸಾರ್ವತ್ರಿಕವಾಗಿ ಪರಿಣಾಮಕಾರಿಯಾಗಿತ್ತೆಂಬುದು ನನ್ನ ಅಭಿಮತ.

ಇದರಿಂದ ಯಾರ ಹೆಸರನ್ನು ಈ ಸಮ್ಮೇಳನದ ಮುಖ್ಯ ವೇದಿಕೆಗೆ ಇಡಲಾಗಿತ್ತೋ, ಅವರ ನೇತೃತ್ವದ ಮಠವೇ ಈ ಹಳ್ಳಿಯ ಬಳಿ ನಡೆಸುತ್ತಿರುವ ಭರ್ಜರಿ ಇಂಗ್ಲಿಷ್ ಶಾಲೆಯನ್ನು ಕುರಿತ ಈ ಹಳ್ಳಿಗರ ಮೋಹ ಕಡಿಮೆಯಾದೀತೆಂಬುದು ನನ್ನ ಆಸೆ!

ಸಮ್ಮೇಳನದ ಉದ್ಘಾಟನಾ ಸಮಾರಂಭ ನಮ್ಮ ಎಲ್ಲ ಸಾಹಿತ್ಯ ಸಮ್ಮೇಳನಗಳಲ್ಲಾದಂತೆ ಕಾಲಮಿತಿಯನ್ನು ಬಹುವಾಗಿ ಮೀರಿ ಹೊರಗಿಂದ ಬಂದ ಜನ ಸಂಪೂರ್ಣ ಖಾಲಿಯಾಗಿತ್ತಂತೆ. ಗಂಡಸರೆಲ್ಲ ವೇದಿಕೆಯ ಮೇಲೆ ಮತ್ತು ಸುತ್ತಮುತ್ತಲ ಸಂಘಟನಾ ಕೆಲಸಗಳಲ್ಲಿ ಹಂಚಿಹೋಗಿದ್ದರೂ, ಮುಂದಿನ ಗೋಷ್ಠಿಗಳಿಗೆ ಹೇಗೂ ಆ ಹಳ್ಳಿಯ ಹೆಂಗಸರೂ-ಮಕ್ಕಳೂ ಇದ್ದರಲ್ಲ!

ಉದ್ಘಾಟನಾ ಸಮಾರಂಭದ ಅನಂತರ ಗೆಳೆಯ ಸಮ್ಮೇಳನಾಧ್ಯಕ್ಷರೊಂದಿಗೆ ಮಾತನಾಡಿದಾಗ ಗೊತ್ತಾಗಿದ್ದು, ಸಮ್ಮೇಳನಾಧ್ಯಕ್ಷರಿಗೆ ತಮಗೆ ಹಾಕಿದ್ದಂತಹ ಸಿಂಹಾಸನ ತಂದು ಹಾಕಲು ಸೂಚಿಸಿದ್ದು ಸ್ವಾಮೀಜಿಯಂತೆ! ಸಮ್ಮೇಳನದ ಹುಂಬ ಸಂಘಟಕರಿಗೆ ಇಲ್ಲದ ಸಂಸ್ಕೃತಿಯನ್ನು ಸ್ವಾಮೀಜಿ ಮೆರೆದಿದ್ದರು. ಅಂದು ಬಹುಶಃ ಸ್ವಾಮೀಜಿ ಮಾಡಬಹುದಾಗಿದ್ದುದು ಅಷ್ಟನ್ನೇ. ಏಕೆಂದರೆ, ಆ ಹಳ್ಳಿಯ ಜನಕ್ಕೆ ಸಾಹಿತ್ಯ ಸಮ್ಮೇಳನವೂ ಒಂದೇ, ಧರ್ಮದ ಹೆಸರಿನಲ್ಲಿ ನಡೆಯುವ ಜಾತಿ ಸಮ್ಮೇಳನವೂ ಒಂದೇ!

ಆದರೆ, ಸಾಹಿತ್ಯ ಪರಿಷತ್ತಿನ ಜನಕ್ಕಾದರೂ ಏನಾಗಿದೆ? ಈ ಪ್ರಶ್ನೆಗೆ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಅರ್ಥವೇ ಇಲ್ಲವೆಂದು ಕಾಣುತ್ತದೆ. ಏಕೆಂದೆರೆ, ಸಾಹಿತ್ಯ ಪರಿಷತ್ತಿಗೂ, ಸಾಹಿತ್ಯ- ಸಂಸ್ಕೃತಿಗಳಿಗೂ ಸಂಬಂಧ ಕಳಚಿಹೋಗಿ ಬಹಳ ವರ್ಷಗಳೇ ಆಗಿವೆ ಎಂಬುದೀಗ ರಹಸ್ಯದ ಮಾತೇನಲ್ಲ. ರಾಜ್ಯ ಮಟ್ಟದಿಂದ ಹಿಡಿದು ಜಿಲ್ಲಾ ಮಟ್ಟದ ಸಾಹಿತ್ಯ ಪರಿಷತ್ ಚುನಾವಣೆಗಳು ನಡೆಯುವುದು ಒಂದು ರಾಜಕೀಯ ಚುನಾವಣೆಯಂತೆಯೇ! ಜಾತಿ, ವ್ಯಕ್ತಿಕೇಂದ್ರಿತವಾಗಿದೆ.

ಈಗ ಜಿಲ್ಲಾ, ತಾಲ್ಲೂಕು ಸಮ್ಮೇಳನಗಳಿಗೂ ಲಕ್ಷಾಂತರ ರೂ. ಅನುದಾನ ಘೋಷಿತವಾಗಿರುವುದರಿಂದ ಸ್ಪರ್ಧೆ ರಾಜಕೀಯವಾಗಿ ಇನ್ನೂ ಬಿರುಸಾಗಿ, ಯಾರು ಯಾರೋ-ಊರ ಪುಢಾರಿಗಳೆಲ್ಲ-ಸಾಹಿತ್ಯ ಪರಿಷತ್ತಿನ ಪದಾಧಿ ಕಾರಿಗಳಾಗಿ ಆಯ್ಕೆಯಾಗುತ್ತಿದ್ದಾರೆ, ಇಲ್ಲವೇ ನಾಮನಿರ್ದೇಶಿತರಾಗುತ್ತಿದ್ದಾರೆ. ಹೀಗಾಗಿ ಸಾಹಿತ್ಯ ಸಮ್ಮೇಳನವೆಂದರೆ, ಸ್ವಾಗತ ಸಮಿತಿ, ವೇದಿಕೆ ಸಮಿತಿ, ಚಪ್ಪರ ಸಮಿತಿ, ಮೆರವಣಿಗೆ ಸಮಿತಿ, ವಸತಿ ಸಮಿತಿ, ಊಟೋಪಚಾರಗಳ ಸಮಿತಿ ಇತ್ಯಾದಿ ಸಮಿತಿಗಳಲ್ಲದೆ, ಪ್ರತಿ ಗೋಷ್ಠಿಯ ಪ್ರಾರ್ಥನೆ, ಸ್ವಾಗತ, ನಿರೂಪಣೆ, ವಂದನಾರ್ಪಣೆಗಳ ಹೆಸರಲ್ಲಿ ಆಹ್ವಾನ ಪತ್ರಿಕೆಯಲ್ಲಿ ಮತ್ತು ವೇದಿಕೆಯ ಮೇಲೆ ಕಾಣಿಸಿಕೊಂಡು ‘ಮಿಂಚ’ ಬಯಸುವ ಹುಂಬ ಪ್ರದರ್ಶನವೇ ಎಂಬಂತಾಗಿದೆ. ಸದರಿ ಒಂದು ದಿನದ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯಲ್ಲಿ ಸುಮಾರು ನೂರಕ್ಕೂ ಹೆಚ್ಚು ಜನರ ಹೆಸರು ಮುದ್ರಿತವಾಗಿವೆ! ಇಂತಹವರ ಮಧ್ಯೆ ಅಲ್ಲಲ್ಲಿ ಸೂಕ್ಷ್ಮತೆಗಳುಳ್ಳ ಜನರೂ ಇದ್ದಾರೆಂಬುದೂ ನಿಜ. ಆದರೆ ಅವರು ಅಲ್ಪಸಂಖ್ಯಾತರು; ಅಸಹಾಯಕರು.

ಮೇಲೆ ತಿಳಿಸಿದ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಪಟ್ಟ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ನನ್ನನ್ನು ಕಂಡು `ತಾವು ಈ ಸಮ್ಮೇಳನಕ್ಕೆ ಬಂದದ್ದು ನನಗೆ ಸಂತೋಷವಾಗಿದೆ’ ಎಂದರು. ಅದಕ್ಕೆ, ‘ಆದರೆ ನನಗೆ ಸಂತೋಷವಾಗಿಲ್ಲ’ ಎಂದ ನಾನು, ‘ಸಾಹಿತ್ಯ ಸಮ್ಮೇಳನ ಸಾಹಿತ್ಯದ ಘನತೆ-ಗೌರವಗಳೊಂದಿಗೆ ನಡೆಯಬೇಕು. ಇಂತಹ ಸಮಾರಂಭಗಳು ಹಳ್ಳಿಯ ಜನ ತಮ್ಮ ಜಾತಿ ನಡವಳಿಕೆಗಳನ್ನು ಮೀರಿ ನಡೆಯುವಂತಹ ಸಾಂಸ್ಕೃತಿಕ ವಾತಾವರಣ ನಿರ್ಮಿಸಬೇಕು. ಆದರೆ ಇಲ್ಲಿ ಅಂತಹ ನಡವಳಿಕೆಗಳನ್ನು ಪುಷ್ಟೀಕರಿಸುವಂತೆ ನಡೆಯುತ್ತಿದೆಯಲ್ಲ?’ ಎಂದು ನನ್ನ ಮತ್ತು ನನ್ನ ಗೆಳೆಯರ ಬೇಸರವನ್ನು ವ್ಯಕ್ತಪಡಿಸಿದೆ.

ಜೊತೆಗೆ ಈ ಮಾತುಗಳನ್ನೂ ಹೇಳಿದೆ: ‘ಸ್ವಾಮೀಜಿಗಳನ್ನು ಸಾಹಿತ್ಯ ಸಮ್ಮೇಳನಗಳಿಗೆ ಕರೆಯಬಾರದೆಂದಲ್ಲ. ಏಕೆಂದರೆ ನಮ್ಮ ಸಾಹಿತಿಗಳಲ್ಲನೇಕರು ಸ್ವಾಮೀಜಿಗಳಂತೆಯೇ ಸಾಹಿತ್ಯ ಮಠಗಳನ್ನು ಕಟ್ಟಿಕೊಂಡಿದ್ದಾರೆ! ಇಂತಹ ಒಬ್ಬ ಮಠಾಧೀಶರೇ ಅಲ್ಲವೆ ಈ ಬಾರಿಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು? ಅದು ಬೇರೆ ವಿಷಯ! ಆದರೆ ಮಠಾಧೀಶರಿಗೆ ಈ ಸಂದರ್ಭಕ್ಕೆ ಎಷ್ಟು ಉಚಿತವೋ ಅಷ್ಟು ಮಾತ್ರ ಗೌರವ ಸಲ್ಲಿಸಬೇಕು. ಅವರಿಗೆ ಸಾಹಿತ್ಯ ಸಮ್ಮೇಳನಾಧ್ಯಕ್ಷರಿಗೆ ಮೀರಿದ ಗೌರವಗಳನ್ನು ಪ್ರದರ್ಶಿಸಬಾರದು. ಅದು ಸಾಧ್ಯವಾಗದಿದ್ದರೆ ಅವರನ್ನು ಕರೆಯಲೇಬಾರದು. ಅದನ್ನೂ ತಡೆಯಲಾಗದಿದ್ದರೆ, ಆ ಊರಿಗೆ ಸಾಹಿತ್ಯ ಸಮ್ಮೇಳನ ನಡೆಸುವ ಅವಕಾಶ ನೀಡಬಾರದು.

ಇಂದು ಬಂದ ಸ್ವಾಮೀಜಿ ನಿಜವಾಗಿ ಪ್ರಬುದ್ಧರೆಂದು ಕಾಣುತ್ತದೆ. ಅವರು ಸಮ್ಮೇಳನದ ಸಂಘಟಕರು ತೋರಿದ್ದ ಅವಿವೇಕವನ್ನು ತಿದ್ದಿದರು, ಸರಿ. ಆದರೆ ಎಲ್ಲರೂ ಹಾಗಲ್ಲ’. ಇದಕ್ಕೆ ಪ್ರತಿಯಾಗಿ ಅಧ್ಯಕ್ಷರೇನೋ ‘ಹೌದು ನಮ್ಮಿಂದ ತಪ್ಪಾಗಿದೆ. ನಿಮ್ಮಂತಹವರು ತಿದ್ದಿ ಹೇಳಬೇಕು. ಕಲಿತುಕೊಳ್ಳುತ್ತೇವೆ’ ಎಂಬ ವಿನಯದ ಮಾತುಗಳನ್ನಾಡಿದರು. ಆದರೆ ನೂರು ವರ್ಷಗಳ ಇತಿಹಾಸವಿರುವ ಸಾಹಿತ್ಯಿಕ ಸಂಸ್ಥೆಯ ಪದಾಧಿಕಾರಿಗಳಿಗೆ ಇಂತಹ ಪ್ರಾಥಮಿಕ ಸಂಗತಿಗಳನ್ನೂ ಹೇಳಬೇಕಾದ ಸ್ಥಿತಿ ನಮ್ಮದಾಗಿದೆ.

ಅನಂತರದ ಒಂದೆರಡು ದಿನಗಳಲ್ಲಿ ಸಮ್ಮೇಳನವನ್ನು ಉದ್ಘಾಟಿಸಿದ ಸ್ವಾಮೀಜಿ ವಿವಾಹ ಸಮಾರಂಭವೊಂದರಲ್ಲಿ ನನಗೆ ಕಂಡರು.. ನಾನೇ ಹೋಗಿ ಅವರನ್ನು ಮಾತನಾಡಿಸಿ, ‘ನಿಮ್ಮ ಅಂದಿನ ಭಾಷಣ ತುಂಬ ಚೆನ್ನಾಗಿತ್ತು. ಅಭಿನಂದನೆಗಳು’ ಎಂದೆ. ಈಗಾಗಲೇ ನನ್ನ ಬಗ್ಗೆ ಗೊತ್ತಿದ್ದ ಅವರು ‘ನಿಮ್ಮ ಈ ಪ್ರೋತ್ಸಾಹದ ಮಾತುಗಳು ನನಗೆ ನಿಜವಾಗಿಯೂ ಸಂತೋಷ ತಂದಿದೆ.’ ಎಂದರು. ಅದು ಬರೀ ಸೌಜನ್ಯದ ಮಾತುಗಳಾಗಿರದೆ, ಪ್ರಾಮಾ ಣಿಕತೆ ಅವರ ಮಾತುಗಳಲ್ಲಿ, ಮುಖದಲ್ಲಿ ವ್ಯಕ್ತವಾಗಿತ್ತು. ನಾನು `ನಿಮ್ಮಂಥವರು ಮಠಗಳ ಒಳಗಿಂತ ಹೆಚ್ಚಾಗಿ ಹೊರಗೆ ಹೆಚ್ಚು ಕೆಲಸ ಮಾಡಬೇಕಿದೆ’ ಎಂದು ನನ್ನ ಮನದಾಳದ ಮಾತನ್ನು ಹೇಳಿದೆ. ಅದಕ್ಕೆ ಅವರು ಪ್ರತಿಕ್ರಿಯೆ ನೀಡು ಮುನ್ನವೇ, ಅವರ ಜೊತೆಗಿದ್ದ ಭಕ್ತರೊಬ್ಬರು ಗಾಬರಿಯಾದವರಂತೆ, `ಅಯ್ಯೋ, ಈಗಿರುವ ಕೆಲಸಗಳಿಗೇ ಅವರಿಗೆ ಬಿಡುವಿಲ್ಲ. ಇನ್ನು ಹೆಚ್ಚು ಕೆಲಸಗಳಿಗೆ ಅವರನ್ನು ಹಚ್ಚಬೇಡಿ’ ಎಂದು ಮಾತು ಮುಗಿಸುವ ಸೂಚನೆ ನೀಡಿದರು. ಆದರೂ ಸ್ವಾಮೀಜಿ ತಡೆದು, ‘ನೀವೊಮ್ಮೆ ಮಠಕ್ಕೆ ಬನ್ನಿ. ಮಾತಾಡೋಣ’ ಎಂದು ಹೇಳಿ ನಮಸ್ಕರಿಸಿದರು. ನಾನೂ ನಮಸ್ಕರಿಸಿದೆ.

ಆಂದೋಲನ

‍ಲೇಖಕರು Admin

December 2, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಯಾವ ‘ಮೋಹನ’ ಮುರಲಿ ಕರೆಯಿತೋ…

ಯಾವ ‘ಮೋಹನ’ ಮುರಲಿ ಕರೆಯಿತೋ…

ಸಂಗೀತ ರವಿರಾಜ್ ನನ್ನನ್ನು ಅತಿಯಾಗಿ ಕಾಡಿದ ಅಗಲಿಕೆಗಳಲ್ಲಿ ಇದೂ ಒಂದು. ನಿರಂತರ ಒಡನಾಟದಲ್ಲಿ, ಮಾತುಕತೆಯಲ್ಲಿ ಇಲ್ಲದೆ ಇದ್ದರು ಕೆಲವುಸಾವು...

ನರೇಂದ್ರ ಪೈ ಅವರ “ಕನಸುಗಳು ಖಾಸಗಿ”

ನರೇಂದ್ರ ಪೈ ಅವರ “ಕನಸುಗಳು ಖಾಸಗಿ”

ಕಮಲಾಕರ ಕಡವೆ ಕತೆಯಿರುವುದು ಕಣ್ಣಲ್ಲಿ. ಕತೆಗಾರರ ಕಣ್ಣು ಕಾಣಲು ನಿರ್ಧರಿಸುವ ಜಗತ್ತು ಅವರ ಸುತ್ತಲಿನದೋ, ಒಳಗಿನದೋ, ಹಿಂದೆಂದಿನದೋ,...

ಅಂದಿನಿಂದಿಂದಿಗೆ

ಅಂದಿನಿಂದಿಂದಿಗೆ

ಶ್ಯಾಮಲಾ ಮಾಧವ ಮೊರೆಯುವ ಕಡಲು. ವಿಶಾಲ ಮರಳ ಹಾಸು. ಗಾಳಿಯಲೆಯಾಡುವ ಸುವಿಶಾಲ ಚಬುಕಿನ ತೋಪು. ಅದರ ನಡುವೆ ವೃತ್ತಾಕಾರದ, ಕಟ್ಟೆಯಿರದ, ಇಳಿಯಲು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This