’ಸಾಹಿಲ್ ಗೊ೦ದು ಉತ್ತರ..’ – ದಿನೇಶ್ ಕುಮಾರ್ ಬರೆಯುತ್ತಾರೆ

ನಿನ್ನೆ ಅವಧಿಯಲ್ಲಿ ಡಬ್ಬಿ೦ಗ್ : ಹಾಗೊ೦ದು… ಹೀಗೊ೦ದು ಎ೦ಬ ಲೇಖನ ಪ್ರಕಟವಾಗಿತ್ತು.  ಅದಕ್ಕೆ ಮು೦ದುವರೆದು ಸಾಹಿಲ್ ತಮ್ಮ ಪ್ರತಿಕ್ರಿಯೆಯನ್ನು ಬರೆದಿದ್ದರು. ಅದಕ್ಕೆ ಮು೦ದುವರೆದ ಭಾಗವಾಗಿ ದಿನೇಶ್ ಕುಮಾರ್ ಇಲ್ಲಿ ಬರೆದಿದ್ದಾರೆ….

– ಎಸ್ ಸಿ ದಿನೇಶ್ ಕುಮಾರ್

ಪ್ರತಿಯೊಂದಕ್ಕೂ ನಿರ್ದಯವಾದ ಟೀಕೆ ಇರಲೇಬೇಕಾ?

  “ruthless criticism of everything” ಇರಬೇಕು ಎನ್ನುತ್ತಾರೆ ಕಾರ್ಲ್ ಮಾರ್ಕ್ಸ್. ಆಜನ್ಮ ಸಿನಿಕರೆಂದು ಕರೆದುಕೊಳ್ಳುವ ಸಂವರ್ಥ ಸಾಹಿಲ್ ಅವರ ಮಾತುಗಳನ್ನು ಗಮನಿಸಿದಾಗ ಈ ಮಾತುಗಳು ನೆನಪಿಗೆ ಬಂದವು. ಸಂವರ್ಥ, ಹರ್ಷ ಕುಗ್ವೆ ಮತ್ತು ಟಿ.ಎನ್.ಸೀತಾರಾಂ ಅವರುಗಳು ಮುಂದಿಟ್ಟಿರುವ ವಿಷಯಗಳು ಅತ್ಯಂತ ನಾಜೂಕಿನವು. ಇಂಥ ಚರ್ಚೆಯ ಸಂದರ್ಭದಲ್ಲಿ ಮೊದಲು ಏಳುವ ಪ್ರಶ್ನೆ `ಹೀಗೆಲ್ಲ ಮಾತಾಡುತ್ತಿರುವ ನೀವು ಯಾರು?’ ಎಂಬುದೇ ಆಗಿರುತ್ತದೆ. ಇಂಥ ನಾಜೂಕಿನ, ಸಂದಿಗ್ಧದ ಸ್ಥಿತಿಗೆ ನಮ್ಮ ಬೌದ್ಧಿಕ ಚರ್ಚೆಗಳು ತಲುಪಿರುವುದೇ ಒಂದು ದೊಡ್ಡ ಸಮಸ್ಯೆ. ಸಂವರ್ಥ ತಮ್ಮ ಪ್ರತಿಕ್ರಿಯೆಗೂ ಮುನ್ನವೇ ತಾನು ಎಡಪಂಥೀಯನೂ ಅಲ್ಲ, ಮಾರ್ಕ್ಸ್ ವಾದಿಯೂ ಅಲ್ಲ ಎಂದು ಮೊದಲೇ ಅಫಿಡೆವಿಟ್ಟು ಹೂಡಿದ್ದಾರೆ. ಅದನ್ನು ಒಪ್ಪಿಕೊಂಡೇ ಈ ಚಚರ್ೆಯನ್ನು ಬೆಳೆಸೋಣ. ನನ್ನ ಮೂಲಭೂತವಾದ ಪ್ರಶ್ನೆ ಏನೆಂದರೆ, ಸಮಾಜದ ಆಮೂಲಾಗ್ರ ಬದಲಾವಣೆ ಮತ್ತು ಸಮತಾ ಸಮಾಜದ ಸ್ಥಾಪನೆಯೇ ಸತ್ಯಮೇವ ಜಯತೆಯ ಉದ್ದೇಶ ಎಂದು ಎಲ್ಲಾದರೂ ಅಮೀರ್ ಹೇಳಿಕೊಂಡಿದ್ದಾರೆಯೇ? ಅಥವಾ ಸತ್ಯಮೇವ ಜಯತೆಯ ಮೂಲಕ ಸಂಪೂರ್ಣ ಕ್ರಾಂತಿಗೆ ಕರೆಕೊಡುವುದಾಗಿ ಅಮೀರ್ ಹೇಳಿದ್ದಾರೆಯೇ? ಹಾಗೇನಾದರೂ ಹೇಳಿಕೊಂಡಿದ್ದರೆ ಸಂವರ್ಥ ಮಾತುಗಳಿಗೆ ಅರ್ಥ ಬರುತ್ತಿದ್ದವೋ ಏನೋ? ಸಾಯಿನಾಥ್, ಹಷರ್್ ಮಂದರ್, ರಾಯ್ರಂತವರು ಬುದ್ಧಿಜೀವಿಗಳು. ಹಲವಾರು ಸಿದ್ದಾಂತಗಳನ್ನು ಓದಿ ಅರಗಿಸಿಕೊಂಡವರು. ಅವರಿಗೆ ಬಂಡವಾಳಶಾಹಿ, ಸಮಾಜವಾದಿ, ವಸಾಹತುಶಾಹಿ ಸಾಮ್ರಾಜ್ಯಶಾಹಿ ಇತ್ಯಾದಿಗಳ ಒಂದೊಂದು ಸೂಕ್ಷ್ಮ ಎಳೆ ಎಳೆಯೂ ತಿಳಿದಿರುತ್ತದೆ. ಆದರೆ ಅಮೀರ್ನಂತಹ ಪಾಪ್ಯುಲರ್ ನಟನಿಂದ ಅಷ್ಟನ್ನೆಲ್ಲಾ ನಿರೀಕ್ಷಿಸುವುದು ಸರಿನಾ ಎನ್ನುವುದು ಪ್ರಮುಖ ಪ್ರಶ್ನೆ. ಅಮೀರ್ ಮಾಡುತ್ತಿರುವುದು ಟಿವಿ ಚಾನಲ್ ಗಳಿಗೆ ಹದಿಮೂರು ಎಪಿಸೋಡ್ಗಳನ್ನು ಮಾತ್ರ. ಜಯಪ್ರಕಾಶ ನಾರಾಯಣರಂತೆ ಅವರು ಸಂಪೂರ್ಣ ಕ್ರಾಂತಿಗೆ ಕರೆಯನ್ನೇನು ಕೊಟ್ಟಿಲ್ಲ. ಅಷ್ಟಕ್ಕೂ ಭ್ರಷ್ಟಾಚಾರದ ವಿರುದ್ಧ ಕ್ರಾಂತಿಗೆ ಕರೆ ನೀಡಿರುವ ಅಣ್ಣಾ ತಂಡವೇ ಈ ದೇಶದ ಸಾಮಾಜಿಕ ಸ್ಥಿತಿಗತಿಯ ಬಗ್ಗೆ ಒಂದು ನಿಲುವನ್ನು ಇವತ್ತಿಗೂ ಸ್ಪಷ್ಟಪಡಿಸಿಲ್ಲ. ಸಾಮಾಜಿಕ ಅನ್ಯಾಯಗಳು, ಧರ್ಮದ ಹೆಸರಿನ ದೌರ್ಜನ್ಯಗಳು, ಮೀಸಲಾತಿಯ ಪ್ರಶ್ನೆಗಳು ಇತ್ಯಾದಿಗಳಿಗೆ ಅಣ್ಣಾ ತಂಡ ಇನ್ನೂ ಮುಖಾಮುಖಿಯಾಗಿಲ್ಲ. ಹೀಗಿರುವಾಗ ಅಮೀರ್ನನ್ನು ಕ್ರಾಂತಿಕಾರಿಯೆಂದು ಭಾವಿಸಿ ಪ್ರಶ್ನಿಸುವುದರಲ್ಲೇ ದೋಷವಿದೆ ಅನಿಸುತ್ತದೆ.   ಅಮೀರ್ಗೆ ಸಮಾಜದಲ್ಲಿ ಕಷ್ಟ ಕೋಟಲೆಗಳಿವೆ ಎಂದು ಅನ್ನಿಸಿದೆ, ತಾನು ಅದಕ್ಕೆ ಏನೋ ಮಾಡಬೇಕು ಅಂತ ಹೊರಟಿದ್ದಾನೆ. ಅದಕ್ಕೆ ಆತನ ಜನಪ್ರಿಯತೆಯೂ ನೆರವಾಗಿದೆ, ನಿಜ. ಹೌದು, ರಿಲಯನ್ಸ್ ತನ್ನ ಪಾಪ ಕರ್ಮಗಳನ್ನು ಮುಚ್ಚಿಕೊಳ್ಳಲು ನೀತಾ ಅಂಬಾನಿ ಮುಖವನ್ನು ಮುಂದೆ ಮಾಡಿ ಎನ್ಜಿಒ ಮಾಡಿಕೊಂಡು ಇಂತಹ ಕೆಲಸಗಳನ್ನು ಮಾಡುತ್ತಿರಬಹುದು. ಆದರೆ ಈ ಟಾಟಾ, ಬಿರ್ಲಾ, ಅಂಬಾನಿಗಳನ್ನು ಪಕ್ಕಾ ಮಾರ್ಕ್ಸ್ ವಾದಿ ಅಂತ ಹೇಳಿಕೊಳ್ಳುವ ಸಿಪಿಎಂ (ಅದರಲ್ಲಿರೋ ನಾಯಕರೆಲ್ಲಾ ದಾಸ್ ಕ್ಯಾಪಿಟಲ್ ಓದಿರೋರು!) ಪಕ್ಷವೇ ಜನರ ಕೊಲೆಯನ್ನಾದರೂ ಮಾಡಿ ಪಶ್ಚಿಮ ಬಂಗಾಳಕ್ಕೆ ತಂದಿತು. ಅಂಥದ್ದರಲ್ಲಿ ಯಾವ ಸಿದ್ಧಾಂತವೂ ಗೊತ್ತಿರದ ಯಕಶ್ಚಿತ್ ಒಬ್ಬ ನಟ ಅಮೀರ್ ಇದನ್ನೆಲ್ಲ ಹೇಗೆ ನೋಡಲು ಸಾಧ್ಯ? ಅಮೀರ್ ಖಾನ್ ಜಾತಿ ಪ್ರಶ್ನೆ, ಖಾಪ್ ಪಂಚಾಯತ್ ಇತ್ಯಾದಿಗಳನ್ನೆಲ್ಲಾ ಮಾತಾಡೋದಿಲ್ಲ ಎಂದು ಸಾಹಿಲ್ ಭವಿಷ್ಯ ನುಡಿದಿದ್ದಾರೆ, ಅದು ನಿಜವಾಗಬಹುದೇನೋ? ಆದರೆ ಆತ ಏನು ಮಾಡಿದ, ಏನು ಬಿಟ್ಟ ಎಂದು ತಿಳಿಯೋದು, ಅದರ ಬಗ್ಗೆ ವಿಮರ್ಶೆ ವಿಶ್ಲೇಷಣೆ ಮಾಡಲು ಸಾಧ್ಯವಿರೋದು ಎಲ್ಲಾ ಎಪಿಸೋಡುಗಳು ಮುಗಿದ ಮೇಲೇಯೇ ಅಲ್ಲವೇ? ಈಗಲೇ ಹೇಗೆ ಹೇಳಲು ಸಾಧ್ಯ? ಹದಿಮೂರು ಎಪಿಸೋಡ್ಗಳ ಕಾರ್ಯಕ್ರಮ ಇದು. ಮೂರು ಎಪಿಸೋಡಿಗೇ ಪೋಸ್ಟ್ ಮಾರ್ಟ೦ ರಿಪೋರ್ಟ್ ಕೊಡುವುದು ಸಹಜನ್ಯಾಯದ ಉಲ್ಲಂಘನೆಯಲ್ಲವೇ? ಸಾಹಿಲ್ರಂಥವರು ಅಮೀರ್ನನ್ನು ನೋಡುವ ದೃಷ್ಟಿಯಲ್ಲೇ ಒಂದು ಪೂರ್ವಾಗ್ರಹ ಇದೆ ಎನ್ನುವುದನ್ನು ಇದು ಸೂಚಿಸುವುದಿಲ್ಲವೇ?   ಮತ್ತೆ ಮಾರ್ಕ್ಸ್ ವಾದಿಗಳನ್ನೇ ಉದಾಹರಣೆಗೆ ನೀಡುವುದಾದರೆ ಈ ದೇಶದಲ್ಲಿ ಜಾತಿ ಅನ್ನುವ ಒಂದು ಕಟು ವಾಸ್ತವವನ್ನು ಒಪ್ಪಿಕೊಳ್ಳುವುದಕ್ಕೆ ಈ ದೇಶದ ಚಪ್ಪನ್ನಾರು ಎಡಪಂಥೀಯ ಗುಂಪುಗಳಿಗೆ ಇನ್ನೂ ಸಾಧ್ಯವಾಗಿಲ್ಲ. (ಇತ್ತೀಚಿಗಷ್ಟೆ ಆ ಪಕ್ಷಗಳು ಎಸ್ಸಿ ಎಸ್ ಟಿ ಘಟಕಗಳನ್ನು ಆರಂಭಿಸಿವೆ, ಆರಂಭಿಸುತ್ತಿವೆ) ತಮ್ಮದೇನಿದ್ದರೂ ವರ್ಗ ಸಂಘರ್ಷ ಅಂತ ಹೇಳಿ ಅಂಬೇಡ್ಕರ್ ರನ್ನು ಉದಾರವಾದಿ ಬಂಡವಾಳಶಾಹಿ ಚಿಂತಕ ಅನ್ನೋ ಪಟ್ಟಕೊಟ್ಟು ತಾವು ಮಾತ್ರ ಬಂಡವಾಳಶಾಹಿಗಳೊಂದಿಗೆ ರಾಜಿ ಮಾಡಿಕೊಂಡೇ ಬಂದಿರುವ ಎಡಪಂಥೀಯರ ಇತಿಹಾಸ ಎಲ್ಲರಿಗೂ ಗೊತ್ತಿರುವಂಥದ್ದೇ. ಹೀಗಿರುವಾಗ ಅಮೀರ್ ಖಾನ್ ಜಾತಿ ಬಗ್ಗೆ ಮಾತನಾಡಲೇಬೇಕು ಇಲ್ಲವಾದರೆ ಅದು ಅವನ ದೌರ್ಬಲ್ಯ ಅಂತ ಝಾಡಿಸುವುದು ನ್ಯಾಯಾವೇ? ಸಾಯಿನಾಥ್, ಹಷರ್್ ಮಂದರ್, ರಾಯ್ಗೂ ಅಮೀರ್ ಖಾನ್ಗೂ ವ್ಯತ್ಯಾಸ ಇದೆ. ನಿಜ. ಆದರೆ ಇವತ್ತು ಅಮೀರ್ ಖಾನ್ ಕಾರ್ಯಕ್ರಮ ಒಟ್ಟಾರೆ ಪರಿಸ್ಥಿತಿಯಲ್ಲಿ ದೇಶದ ಒಂದಷ್ಟು ಜನರ ಪ್ರಜ್ಞೆಯನ್ನಾದರೂ ವಿಸ್ತರಿಸುತ್ತವೆಯೇ ಹೊರತು ಹಿಂದಕ್ಕೆ ಕೊಂಡೊಯ್ಯುವುದಿಲ್ಲ ಎಂಬ ವಾಸ್ತವಕ್ಕೂ ನಾವು ಕುರುಡಾಗಬೇಕೆ?   ಮೀಸಲಾತಿ ವಿಷಯ ಅಮೀರ್ಖಾನ್ ಮಾತಾಡಬೇಕು ಎನ್ನುತ್ತಾರೆ ಸಾಹಿಲ್, ಏನ್ನನ್ನು ಮಾತಾಡಬೇಕು ಹೇಳಿ? ದಲಿತರಿಗೆ ನೀಡಿದ ಮೀಸಲಾತಿ ಸರಿ, ಆದರೆ ಇತರ ಹಿಂದುಳಿದವರಿಗೆ ನೀಡಿದ ಮೀಸಲಾತಿ ದಲಿತರನ್ನು ಹಿಂದುಳಿದವರು ತುಳಿಯಲಿಕ್ಕೇ ಸಹಾಯ ಮಾಡಿದೆ ಎಂದು ಆನಂದ್ ತೇಲ್ ತುಂಬ್ಡೆಯಂಥವರು ವಿಶ್ಲೇಷಣೆ ಮಾಡ್ತಾರೆ. ಮೀಸಲಾತಿಯೇ ಸರಿಯಿಲ್ಲ, ಒಳಮೀಸಲಾತಿ ಬೇಕೇಬೇಕು ಎಂದು ಮೀಸಲಾತಿ ಒಳಗಿನ ಒಂದೊಂದೇ ಸಮಾಜ ಎದ್ದುನಿಲ್ಲುತ್ತಿವೆ. ಮುಸ್ಲಿಮ್ ಮೀಸಲಾತಿ ಪ್ರಶ್ನೆಯಂತೂ ಹಿಂದುಳಿದವರನ್ನು-ಮುಸ್ಲಿಮರನ್ನು ಮುಖಾಮುಖಿ ಸಂಘರ್ಷಕ್ಕೆ ತಂದು ನಿಲ್ಲಿಸಿದೆ. ಇಂತಹ ಸಂಕೀರ್ಣಗೊಂಡಿರೋ ವಿಷಯವನ್ನು ಹೇಗೆ ಪ್ರೆಸೆಂಟ್ ಮಾಡಬೇಕು? ಅಮೀರ್ಗೆ ಇದನ್ನೆಲ್ಲ ಹೇಳಿಕೊಡಬಲ್ಲ ಸಾಹಿಲ್ಗಳ್ಯಾರಿದ್ದಾರೆ?   ಮೀಸಲಾತಿ ಮಾತ್ರವಲ್ಲ, ಇವತ್ತಿಗೂ ಪ್ರತಿದಿನವೂ ಜಾತಿ ಹೆಸರಲ್ಲಿ ದೌರ್ಜನ್ಯಕ್ಕೆ ಒಳಗಾಗುತ್ತಿರುವ ದಲಿತರು, ಮಲದ ಗುಂಡಿಯಲ್ಲಿ ಬಿದ್ದು ವಿಷಾನಿಲ ಕುಡಿದು ಸಾಯುತ್ತಿರುವ ಜನರು, ಕ್ರಿಮಿನಲ್ ಟ್ರೈಬ್ಗಳೆಂದು ಕರೆಸಿಕೊಂಡು ಕಳ್ಳರ ಹಣೆಪಟ್ಟಿ ಹಚ್ಚಿಕೊಂಡು ಬದುಕುತ್ತಿರುವ ಬುಡಕಟ್ಟುಗಳು, ಇವತ್ತಿಗೂ ಈ ದೇಶದ ನಾಗರಿಕರೆನಿಸಿಕೊಳ್ಳುವ ಕಿಂಚಿತ್ ದಾಖಲೆಯೂ ಇಲ್ಲದ ಅಲೆಮಾರಿ ಜನಸಮುದಾಯ, ಕಾಡಲ್ಲಿ ಮಾತ್ರ ಬದುಕಲು ಸಾಧ್ಯವಿದ್ದರೂ ಕಾಡಿನಿಂದ ನಾಡಿಗೆ ನಿರ್ದಯವಾಗಿ ಎಸೆಯಲ್ಪಡುತ್ತಿರುವ ಆದಿವಾಸಿ ಜನಸಮೂಹ, ಮುಟ್ಟುವುದಿರಲಿ ನೋಡಿದರೂ ಅಶುಭ ಎಂದು ಸಮಾಜದ ಇತರ ವರ್ಗಗಳಿಂದ ಅಸ್ಪೃಶ್ಯತೆಗೆ ಒಳಗಾಗಿರುವ ಹಿಂದುಳಿದ ಜಾತಿ ಜನವರ್ಗಗಳು…. ಹೀಗೆ ಅಮೀರ್ ಮಾತನಾಡುತ್ತ ಹೋದರೆ ವಾರಕ್ಕೆ ಒಂದೇನು, ಪ್ರತಿನಿತ್ಯವೂ ಒಂದು ಸಮಸ್ಯೆ ಹಿಡಿದುಕೊಂಡು ಮಾತನಾಡಬಹುದು. ಸಾವಿರ ಸಮಸ್ಯೆಗಳಿವೆ. ಒಂದು ವೇಳೆ ಅಮೀರ್ ಯಾವುದಾದರೂ ಪಕ್ಷದ ನಾಯಕನಾಗಿದ್ದರೆ ಕ್ರಾಂತಿ ಹೇಗೆ ಮಾಡ್ತೀಯ, ಜಾತಿ ಬಗ್ಗೆ ಮಾತನಾಡದೆ? ಎಂದು ಕೇಳಬಹುದಿತ್ತು. ಅಷ್ಟಕ್ಕೂ ಮೂರು ಕೋಟಿ ಹೆಣ್ಣುಭ್ರೂಣಗಳ ಹತ್ಯೆ ನಡೆದಿರುವುದು ಮತ್ತ್ಯಾವುದೇ ಸಾಮಾಜಿಕ ಸಮಸ್ಯೆಗಿಂತ ಕಡಿಮೆ ತೂಕದ್ದೇ? ಭ್ರೂಣ ಹತ್ಯೆ, ವರದಕ್ಷಿಣೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದಂಥ ವಿಷಯಗಳು ಕೇವಲ ಮಧ್ಯಮ ವರ್ಗಗಳನ್ನು ಕಾಡಿಸುವ ಸಮಸ್ಯೆಗಳೇ? ಬಡಜನರಿಗೂ ಈ ಸಮಸ್ಯೆಗಳು ತಟ್ಟಿಲ್ಲವೇ?   ಅಮೀರ್ ಕೂಡಾ ಒಬ್ಬ ಬಂಡವಾಳ ಶಾಹಿಯೇ, ನಿಜ. ಆದರೆ ಸ್ವಲ್ಪ ಉದಾರತೆ ಇರುವವ; ನಮ್ಮವರೇ ಆದ ಟಿ.ಎನ್.ಸೀತಾರಾಂ, ಬಿ.ಸುರೇಶ್ ಅವರಂತೆ. ನನಗೆ ಸೈದ್ಧಾಂತಿಕ ಸತ್ಯವೇ ಹೆಚ್ಚು ಪ್ರಿಯ ಎನ್ನುವ ಟಿ.ಎನ್.ಸೀತಾರಾಂ ಅವರು ಅನಿವಾರ್ಯವಾಗಿ ಜನರನ್ನು ತಲುಪಲು ಬಳಸುತ್ತಿರುವುದು ಈ ಟಿವಿ ವಾಹಿನಿಯನ್ನು. ಅದು ರಾಮೋಜಿರಾವ್ ಎಂಬ ಇನ್ನೊಬ್ಬ ಬಂಡವಾಳಶಾಹಿಯದ್ದು. ಸಾಹಿಲ್ ಇಲ್ಲಿ ಪ್ರಸ್ತಾಪಿಸಿರುವ ಬಂಡವಾಳಶಾಹಿ ರಿಲಯನ್ಸ್ನ ಅಂಬಾನಿಗಳೇ ಈ ಟಿವಿಯ ಮೇಲೂ ಬಂಡವಾಳ ಹೂಡುತ್ತಿದ್ದಾರೆ. ಸೈದ್ಧಾಂತಿಕ ಸತ್ಯ ಪ್ರಿಯವಾದರೂ, ಅಪ್ರಿಯವಾದ (ಅಥವಾ ಕಡಿಮೆ ಪ್ರಿಯವಾಗಿರಬಹುದಾದ) ಬುದ್ಧಿಯ ತರ್ಕವನ್ನೇ ಸೀತಾರಾಂ ಅವರೂ ನೆಚ್ಚಿಕೊಳ್ಳಲೇಬೇಕು. ಸೈದ್ಧಾಂತಿಕ ಸತ್ಯದ ಬೆನ್ನ ಹಿಂದೆಯೇ ಹೋಗಿದ್ದರೆ ಸೀತಾರಾಂ ತಮ್ಮ ಮುಕ್ತ ಧಾರಾವಾಹಿಯಲ್ಲಿ ಕಾಣಿಸಿಕೊಂಡ ನಕ್ಸಲೈಟನ ಪಾತ್ರವನ್ನು ಏಕಾಏಕಿ ಮಾಯವಾಗಿಸಬೇಕಾಗಿರಲಿಲ್ಲ.   ಸಿನಿಕರಾಗಿ ಒಂದೆರಡು ಮಾತು ಆಡಿಬಿಡೋಣ: ಬಿ.ಸುರೇಶರ ಪುಟ್ಟಕ್ಕನ ಹೈವೇ ಜಾಗತೀಕರಣದ ಸಂದರ್ಭದಲ್ಲಿ ಸಮಕಾಲೀನ ಸಮಸ್ಯೆಯೊಂದನ್ನು ಬಿಚ್ಚಿಡುವ ಸಿನಿಮಾ. ಅದಕ್ಕೆ ಪ್ರಶಸ್ತಿಯ ಗರಿಯೂ ಲಭಿಸಿತು. ಹೀಗಿರುವಾಗ ಸುರೇಶರು ಎಸ್ಇಜಡ್ಗಳ ವಿರುದ್ಧದ ಹೋರಾಟಕ್ಕೆ ಏಕೆ ಬರಲಿಲ್ಲ? ಕಾರಿಡಾರ್ ರಸ್ತೆಯಿಂದ ಸಂತ್ರಸ್ಥರಾದವರ ಪರವಾಗಿ ಯಾಕೆ ನಿಲ್ಲಲಿಲ್ಲ? ಸಂವೇದನೆ ಅಂದರೆ ಸಮಸ್ಯೆಗಳನ್ನು ಚಿತ್ರಿಸುವ ಸಿನಿಮಾ ಮಾಡುವುದಕ್ಕೆ, ಸಂವೇದನಾಶೀಲ ಲೇಖನ ಬರೆಯೋಕೆ ಮಾತ್ರವೇ? ಜನರ ಕಷ್ಟವನ್ನು ಬಂಡವಾಳ ಮಾಡಿಕೊಂಡು ರಾಷ್ಟ್ರ ಪ್ರಶಸ್ತಿ, ಹೆಸರು ಗಳಿಸುವುದು ಸೋಗಲಾಡಿತನವಲ್ಲವಾ? ಹೀಗೆಲ್ಲ ಪ್ರಶ್ನಿಸುತ್ತ ಹೋಗಬಹುದು. ಪ್ರಶ್ನೆಗಳಿಗೇನು ಬರವೇ ಇವತ್ತಿನ ಪ್ರಶ್ನೆಗಳ ಜಗತ್ತಿನಲ್ಲಿ?   ನಮಗೆ ಇವತ್ತು ಮುಖ್ಯ ಏನೆಂದರೆ ಅಮೀರ್ ಕಾರ್ಯಕ್ರಮ ಜಡ್ಡುಗಟ್ಟಿರುವ ಸಮಾಜದ ಮೇಲೆ ಯಾವ ಪರಿಣಾಮ ಬೀರುತ್ತೆ ಅನ್ನುವುದಷ್ಟೆ. ಅಷ್ಟಕ್ಕೂ ಅಮೀರ್ ಹಿಂದಿ ಚಿತ್ರರಂಗದ ಇತರರ ಹಾಗೆ ಗುರುತಿಸಿಕೊಂಡವನಲ್ಲ. ಅವನ ಹಲವಾರು ಸಿನಿಮಾಗಳು ಸಾಮಾಜಿಕ ಸಮಸ್ಯೆಗಳನ್ನು ಗುರಿಯಾಗಿಟ್ಟುಕೊಂಡವು. ಸತ್ಯಮೇವ ಜಯತೆಗೆಂದೇ ಆತ ಹೊಸ ವೇಷವನ್ನೇನು ಹಾಕಿಕೊಂಡು ಬಂದಿಲ್ಲ. ನನ್ನ ಕಾರ್ಯಕ್ರಮದಿಂದಾಗಿ ಒಂದೇ ಒಂದು ಹೆಣ್ಣುಭ್ರೂಣ ಹತ್ಯೆಯಾದರೂ ನಿಂತರೆ ಅದೇ ನನಗೆ ಸಾರ್ಥಕತೆ ತರುತ್ತದೆ ಎನ್ನುತ್ತಾನೆ ಅಮೀರ್ ಖಾನ್. ಇದನ್ನು ಅಕ್ಷರಶಃ ಅರ್ಥ ಮಾಡಿಕೊಂಡರೆ ಸಮಸ್ಯೆಯೇ ಇಲ್ಲವೆನಿಸುತ್ತದೆ.   ಕೊನೆಯಲ್ಲೊಂದು ಮಾತು: ಪ್ರತಿಯೊಂದಕ್ಕೂ ನಿರ್ದಯವಾದ ಟೀಕೆಗಳಿರಬೇಕು ಎನ್ನುವ ಮಾರ್ಕ್ಸ್ ಚಿಂತನೆ ಇವತ್ತಿನ ಸಂಕೀರ್ಣ ಜಗತ್ತಿಗೆ ಹೇಗೆ ಅನ್ವಯಿಸಬೇಕು ಎನ್ನುವ ಮರುಚಿಂತನೆ ನಡೆಯಲೇಬೇಕಿದೆ.      ]]>

‍ಲೇಖಕರು G

May 31, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಡಿ ಎಸ್ ರಾಮಸ್ವಾಮಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದೂ ಕರೆಯುವುದು ವಾಡಿಕೆ. ಕನ್ನಡ ಭಾಷೆಯು ಕೊಡ ಮಾಡಿದ...

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ವಿ ಎಲ್‌ ನರಸಿಂಹಮೂರ್ತಿ ನಮ್ಮ ಘನತೆವೆತ್ತ ರಾಜ್ಯ ಸರ್ಕಾರ ಒಂದಾದ ಮೇಲೊಂದರಂತೆ ಜಾತಿಗೊಂದು, ಸಮುದಾಯಕ್ಕೊಂದು ಅಭಿವೃದ್ಧಿ ನಿಗಮ ಸ್ಥಾಪನೆ...

13 ಪ್ರತಿಕ್ರಿಯೆಗಳು

 1. Ramesh Megaravalli

  ದಿನೇಶ್ ಕುಮಾರ್ ಅವರ ಈ ಪ್ರತಿಕ್ರಿಯೆ ಒಣ ಬೌಧ್ಧಿಕ ಚರ್ಚೆಯಾಗದೇ, ವಿಚಾರಗಳ ಸ್ಪಶ್ಟತೆಯಿ೦ದ ಗಮನಾರ್ಹವಾಗಿದೆ.. ದಿನೇಶ್ ಹೇಳುವ ಹಾಗೆ ಆಮೀರ್ ಖಾನ್ ಒಬ್ಬ ಕಲಾವಿದ. ಮಾರ್ಕ್ಸ್. ಏನ್ಗಲ್ಸ್, ರಾಯ್ ರ ವಿಚಾರಧಾರೆಗಳ ಬಗ್ಗೆ ಹೆಚ್ಚಿಗೆ ಗೊತ್ತಿಲ್ಲದೆ ಇರಬಹುದು. ಆದರೆ ಬ೦ಡವಾಳಶಾಹಿಯಾಗಿದ್ದೂ ಅವನಲ್ಲಿರುವ ಸಮಾಜಿಕ ಬಧ್ಧತೆ ಮತ್ತು ಕೆಳವರ್ಗದ ಜನರ ಬಗ್ಗೆ ಇರುವ ಕಾಳಜಿಗಳು ಮುಖ್ಯವಾಗುತ್ತವೆ. ಅವನ ಕಾರ್ಯಕ್ರಮದಿ೦ದ ದೊಡ್ಡದೊ)೦ದು ಸಾmaajika ಕ್ರಾ೦ತಿ ಘಟಿಸದಿರ ಬಹುದು. ಆದರೆ ಅವನು ಇದುವರೆಗೆ ಎತ್ತಿಕೊ೦ಡಿರುವ ವಿಚಾರಗಳು ಈ ದೇಶದ ಜ್ವಲ೦ತ ಸಮಸ್ಯೆಗಳೆ ಆಗಿದ್ದು ಸಮಾಜದ ಗಮನ ಸೆಳೆಯುವ೦ತಹವು ಆಗಿವೆ. ಜನರಲ್ಲಿ ಸಮಸ್ಯೆಗಳನ್ನು ಕುರಿತು ಎಚ್ಚರ ಮೂದಿಸುವಲ್ಲಿ ಸಫಲ ವಾಗಿವೆ. ಮು೦ದೆಯೂ ಇ೦ತಹ ಉತ್ತಮ ಎಪಿಸೋಡ್ಳುಗ್ನ್ಳಳನ್ನ ನಿರೀಕ್ಶಿಸೋಣ.
  ಊತ್ತಮ ವಿಚಾರಗಳನ್ನು ಮ೦ಡಿಸಿದ ದಿನೇಶ್ ಗೆ ನನ್ನ ಅಭಿನ೦ದನೆಗಳು.
  —ರಮೇಶ್ ಮೇಗರವಳ್ಳಿ

  ಪ್ರತಿಕ್ರಿಯೆ
 2. ಸುಧಾ ಚಿದಾನಂದಗೌಡ

  ಬುನಾದಿಯಿರುವ ಚರ್ಚೆಗಳು ನಿರ್ದಯವೆನಿಸಿದರೂ ಅಂತವುಗಳಿಗೆ ಸತ್ಯದ ಕಠೋರತೆಯೇ ಮೂಲ. ಸಿನಿಕತನಕ್ಕೂ ಸತ್ಯಕ್ಕೂ ಇರುವ ವ್ಯತ್ಯಾಸಗಳು ಸುಲಭಕ್ಕೆ ಅರ್ಥವಾಗದಿರುವುದರಿಂದ, ಅಥವಾ ಯಾವ್ಯಾವುದೊ ಕಾರಣಕ್ಕೆ ವಾಸ್ತವವನ್ನೆ ಮರೆಮಾಚುವ ತರ್ಕಗಳಿಂದಾಗಿ ಬುದ್ಧಿಜೀವಿ ನಟ ಅಮೀರ್ ಖಾನ್ಗೆ ವಿವಾದ ಸುತ್ತಿಕೊಂಡಿದೆ ಎನ್ನಬಹುದು.
  ಆತನ ಕಾಳಜಿಯ ಕುರಿತು ಎರಡು ಮಾತಿನಾಡಲಾಗದು.ಪ್ರಸ್ತುತ ಸಮುದಾಯ ಹಿಮ್ಮುಕ ಚಲನೆಯಲ್ಲಿದೆಯೇನೊ ಎಂಬಂತಿರುವಾಗ ಸತ್ಯಮೇವ ಜಯತೆಯಂಥವು ಅಗತ್ಯ.

  ಪ್ರತಿಕ್ರಿಯೆ
 3. T.N.Seetharam

  Dinesh kumar mattu Saahil nadesuttiruva charche tanna sooksmate mattu bhouddhika proudime yinda nannannu aneka reetiyalli educate kooda maaduttive
  Dinesh aagali Saahil aagali vichaaravannu virodhakkaagi virodhisuva chapalakke hoguttilla mattu tamma vaichaarika vijayagaLa bagge attahaasavannoo maaduttilla..
  adakkaagi ibbarannu mattu harish avarannoo abhinandisuttene
  Innu mele charchegalalli bhaagavahisabaaradu endu aneka baari anisittu..aadare intha vyaktigala madhye charche manasige muda needuttade..
  eegaloo naanu charcheyalli bhaagavahisuttilla..yaarado vaadakke prativaada hooduttilla..
  badalige dinesh avaru nanna bagge prastaapa maadiruva vichaarada bagge maatra eradu maatu heLabekennisitu
  Nanage vyaavahaarika satya kkinta saiddhaanthika sathyave naanage hechhu priya endaddu sathya..
  aadare nanage priya vaadaddannu maatra maaduttiddene nanna aatma saakshige shekada noorarashtu
  sariyaagi nadekolluttiddene endu naanu heluttilla..
  ollada vedikegalu, sallada bhramegalu,edurisalu aagada shaktigaLu ivugalannu sutta ittukonde naanu nanna badukannu mattu vruttiyannu kattikolla bekaaguttade..iruva vedikegaLu nanna saiddhhantika sathyakke viruddhavaagiddaroo kooda ade vedikagalalle naavu nambida sathyagalannu svalpavaadaroo gonagikondu aatmavannu mechhisa bekaada anivaaryate eega bandu nintide..adu Ramojiyavaraagabahudu athava reliance aagabahudu..intha vedikegalu bittu saiddhaantika sathyagalannu idiyaagi oppikolluva vedike nanna vruttige ellide?
  Sathya mattu aathmada danigale nanage atynta doddadu enisidaaga vruttiyanne bidabekaagutteno..gottilla
  aadare ondu sathya..naavu episode ge 10saavira athava 15 saavira ee vedike galinda sambhaavane padedukondaroo kooda naavu nambida sathyavannu mellagaagi aadaroo gonagi aaggaaga geddiddeve..nanna maattu suresh sthiyannu heLuttiddene
  Amirkhan nanna athyanta ishtada nata, avara bahuteka ella project galalloo praamanikate mattu ghanate mukhyavaagi nintide..avaru yaavude vedike yaagirabahudu social issues bagge kaaryakrama maaduvudu khanditha tappilla..Kannadakke dub aagi ellaroo nodidaru nanage santosha
  Aadare nanage arthavaadante Sahil avaru HEluttiruvudu; Amirkhan heLuttruva sankatagalu mattu badathana mattu asahaayakate ivakke market illadiddare ee kaaryakrama baruttiralilla- BADATHANA MATTU SANKATA kooda MARKETABLE COMMODITY galu..anta
  Naanu mattu aneka kannadada nirdeshakaru intha aneka sangathigalannu namma dhaaravaahigalalli jana ishta paduvante charche maadiddeve…aaga adu marketable commodity aagi illadiddaroo kooda.. nanna bagge jambhakke idannu heLalilla..VIPARYAASAkke heLide ashte
  Amirkhan ge agaadhavaada AURA iruvudarinda intha sambhrama saadhyavaaguttade..Uddesha yaavude irali..noduga ee kaaryakramakke spandisuttddaane..sankatada bagge sahaanubhoothi huttuttide..haagaagi saahil avarannu naanu oppidaroo kooda ee SJ kaaryakrama yashasvi aagali endu nanna haaraike..
  THE BRITTLE BUILDING OF IDEALISM mattu CONCRETE WALL OF REALITY ivugala madhye namma feeble voice galoo keLuvante aadare eshtu chennu..! Athava nanage maatra chennavo..!

  ಪ್ರತಿಕ್ರಿಯೆ
 4. ಬಿ.ಸುರೇಶ

  ಆತ್ಮೀಯ ದಿನೇಶಣ್ಣ,
  ನಿಮ್ಮ ಲೇಖನ ಚೆನ್ನಾಗಿದೆ.
  ಆದರೆ ನನ್ನ ಬಗ್ಗೆ ಮಾತಾಡುತ್ತಾ ಯಾಕೆ ಸುರೇಶ ಇಂತಹ ಚಳುವಳಿಯಲ್ಲಿ ಇಲ್ಲ ಎಂದಿದ್ದೀರಿ. ಅದಕ್ಕಾಗಿ ಈ ಪ್ರತಿಕ್ರಿಯೆ ಬರೆಯುತ್ತಾ ಇದ್ದೇನೆ.
  ೧. ನೈಸ್ ಕಾರಿಡಾರ್ ವಿರುದ್ಧ ಹೋರಾಟ ಮಾಡುತ್ತಿರುವ ಸಂಘಟನೆಯ ಜೊತೆಗೆ ನಾನು ನೇರವಾಗಿ ಭಾಗವಹಿಸುತ್ತಲೇ ಇದ್ದೇನೆ. ಅವರು ತಮ್ಮ ಚಳುವಳಿಯನ್ನು ನಡೆಸುತ್ತಾ ಇರುವ ಹಳ್ಳಿಗಳಲ್ಲಿ ನನ್ನ ಸಿನಿಮಾದ ಪುಕ್ಕಟೆ ಪ್ರದರ್ಶನ ಮಾಡುವುದಕ್ಕೂ ಅವಕಾಶ ಕೊಟ್ಟಿದ್ದೇನೆ. ಇದಲ್ಲದೆ ಅರ್ಬನ್ ಡೆವಲಪ್‌ಮೆಂಟ್‌ ಅಂಡ್ ಡಿಸೆಪ್ಲೇಸ್ಡ್‌ ಪೀಪಲ್ ಕುರಿತಂತೆ ಕೆಲಸ ಮಾಡುತ್ತಾ ಇರುವ ಎನ್‌ಜಿಒಗಳ ಜೊತೆಗೂ ನಾನು ಸಹಕರಿಸುತ್ತಾ ಇದ್ದೇನೆ.
  ೨. ಗದಗದ ಪೋಸ್ಕೋ ಚಳುವಳಿಯ ಬಂಧುಗಳ ಜೊತೆಗೆ ನಾನು ನೇರವಾಗಿ ಎರಡು ದಿನ ಹೋರಾಟದಲ್ಲಿ ಭಾಗವಹಿಸಿದ್ದೇನೆ. ದೂರದ ಕಾರಣವಾಗಿ ನಿರಂತರವಾಗಿ ಅವರೊಂದಿಗೆ ಭಾಗವಹಿಸಲು ಆಗಿಲ್ಲ. ಆದರೆ ಆ ಚಳುವಳಿಯ ಜನರ ಜೊತೆಗೆ ಸದಾ ಸಂಪರ್ಕದಲ್ಲಿದ್ದೇನೆ. ಈಚೆಗೆ ಆ ಚಳುವಳಿಯಲ್ಲಿ ಬಂದಿರುವ ತೊಂದರೆಗಳನ್ನು ಸ್ವತಃ ಬಲ್ಲೆ.
  ೩. ಬಳ್ಳಾರಿಯ ರೈತರ ಜಮೀನು ಕೊಳ್ಳುವ ಹುನ್ನಾರದ ಹಿಂದಿದ್ದ ಹೋರಾಟವು ಸಂಪೂರ್ಣ ಕುಸಿದಿದ್ದಾಗ ‘ಪುಟ್ಟಕ್ಕನ ಹೈವೇ’ ಸಿನಿಮಾದಿಂದಲೇ ಇಡೀ ಹೋರಾಟಕ್ಕೆ ಮರುಜೀವ ಬಂದಿದ್ದನ್ನು ಸ್ವತಃ ಕಂಡಿದ್ದೇನೆ. ಅಲ್ಲಿನ ರೈತರು ಮತ್ತವರ ಮನೆಯಲ್ಲಿ ಸ್ವತಃ ಉಂಡು, ಮಾತಾಡಿ ಆ ಸಮಸ್ಯೆಯನ್ನು ಅರಿಯುವ ಮೂಲಕವೇ ಆ ಹೋರಾಟದ ನಾಯಕರಾದ ರೆಡ್ಡಿ ಮುಂತಾದವರಿಗೆ ಸಹಕಾರ ನೀಡಿದ್ದೇನೆ. ಈ ಎಲ್ಲಾ ಕಾರಣಗಳಿಂದಾಗಿ ರೈತರ ಜಮೀನನ್ನು ಸರ್ಕಾರ ಸ್ವಾಧೀನಕ್ಕೆ ತೆಗೆದುಕೊಳ್ಳಬಾರದು ಎಂದು ಹೈಕೋರ್ಟ್‌ ನೀಡಿದ ಆಜ್ಞೆಯನ್ನು ಓದಿ ಸ್ವತಃ ಸಂತೋಷಪಟ್ಟಿದ್ದೇನೆ. ಇನ್ನು ಮುಂದೆಯೂ ಆ ಚಳುವಳಿಯ ಜೊತೆಗೆ ನನ್ನನ್ನು ಗುರುತಿಸಿಕೊಳ್ಳಲು ಸಿದ್ಧನಿದ್ದೇನೆ.
  ೪. ಇದಲ್ಲದೆ ಬೆಂಗಳೂರಿನ ಪೌರಕಾರ್ಮಿಕರ ಸಂಘಟನೆ, ಊದುಬತ್ತಿ ಮತ್ತು ಬೀಡಿ ಕಾರ್ಮಿಕರ ಸಂಘಟನೆ ಹಾಗೂ ಸಿದ್ಧ ಉಡುಪು ತಯಾರಕರ ಸಂಘಟನೆಗಳಿಗೆ ಸಲಹೆಗಾರನಾಗಿದ್ದೇನೆ. ನನ್ನ ಈ ಎಲ್ಲಾ ಕೆಲಸಗಳನ್ನು ನಿರಂತರವಾಗಿ ಮಾಡುತ್ತಲೇ ನನ್ನ ವೃತ್ತಿಯಾದ ಸಿನಿಮಾ-ಟೆಲಿವಿಷನ್ ಮತ್ತು ಹವ್ಯಾಸವಾದ ರಂಗಭೂಮಿಯ ಕೆಲಸವನ್ನು ಮಾಡುತ್ತಾ ಇದ್ದೇನೆ.
  ಇಷ್ಟೆಲ್ಲಾ ಮಾತು ಕೇವಲ ನಿಮ್ಮ –
  “ಎಸ್ಇಜಡ್ಗಳ ವಿರುದ್ಧದ ಹೋರಾಟಕ್ಕೆ ಏಕೆ ಬರಲಿಲ್ಲ? ಕಾರಿಡಾರ್ ರಸ್ತೆಯಿಂದ ಸಂತ್ರಸ್ಥರಾದವರ ಪರವಾಗಿ ಯಾಕೆ ನಿಲ್ಲಲಿಲ್ಲ? ಸಂವೇದನೆ ಅಂದರೆ ಸಮಸ್ಯೆಗಳನ್ನು ಚಿತ್ರಿಸುವ ಸಿನಿಮಾ ಮಾಡುವುದಕ್ಕೆ, ಸಂವೇದನಾಶೀಲ ಲೇಖನ ಬರೆಯೋಕೆ ಮಾತ್ರವೇ? ಜನರ ಕಷ್ಟವನ್ನು ಬಂಡವಾಳ ಮಾಡಿಕೊಂಡು ರಾಷ್ಟ್ರ ಪ್ರಶಸ್ತಿ, ಹೆಸರು ಗಳಿಸುವುದು ಸೋಗಲಾಡಿತನವಲ್ಲವಾ? ಹೀಗೆಲ್ಲ ಪ್ರಶ್ನಿಸುತ್ತ ಹೋಗಬಹುದು. ಪ್ರಶ್ನೆಗಳಿಗೇನು ಬರವೇ ಇವತ್ತಿನ ಪ್ರಶ್ನೆಗಳ ಜಗತ್ತಿನಲ್ಲಿ?”
  ಎಂಬ ಮಾತಿಗಾಗಿ ಹೇಳಬೇಕಾಯಿತು. ಉತ್ತರ ಉದ್ದ ಆಗಿದ್ದರೆ ಕ್ಷಮೆ ಇರಲಿ.
  ಇಷ್ಟಾದರೂ ನನ್ನ ಕೆಲಸಗಳು ಸೋಗಲಾಡಿತನದ್ದು ಎಂದು ನೀವು ಕರೆಯುವುದಾದರೆ ನಿಮ್ಮ ಅಭಿಪ್ರಾಯಕ್ಕೆ ನಾನು ಗೌರವ ಕೊಡುತ್ತೇನೆ.

  ಪ್ರತಿಕ್ರಿಯೆ
 5. T.N.Seetharam

  maretha maathu..ee charcheyalli sinikatana hechhu popular aadante kaanuttade..
  nannadoo ondu cynic maathu;
  Amirkhan kaaryakramakke episodege 8 koti vechha aaguttade..Amir khange sumaaru 4 koti endu keLiddene
  kannadammana bada makkala kaaryakramakke 60 saavira vechha..nammanthavarige 10 saavira..
  8 kotige beeluva beeLuva chappaLE 60 saavirakke saadhya illa..!
  ASOOYEYA Dhvani keLuttideya?
  Chappalege apekshe ashte..asooye alla
  ee vyavastheyalli antara eshtu ide andare asooye arthaheena..!

  ಪ್ರತಿಕ್ರಿಯೆ
  • ಮಂಸೋರೆ

   ಸೀತಾರಾಂ ಸರ್.. ನಿಮ್ಮ ಪ್ರತಿಕ್ರಿಯೆಯಲ್ಲಿ ಅಸೂಯೆಗಿಂತ ನೀವೇ ಹೇಳಿಕೊಂಡ ಸಿನಿಕತನ ಮಾತ್ರ ಇದೆ. ಕಾರಣ ದೃಶ್ಯಮಾಧ್ಯಮದ ಮಾರುಕಟ್ಟೆಯ ವಿಸ್ತಾರ ತಮಗೆ ತಿಳಿದೇ ಇರುತ್ತದೆ. ಬಾಲಿವುಡ್ ಕಾರಯಕ್ರಮಗಳ ನಿರ್ಮಾಣ ವೆಚ್ಚ, ನಿರ್ಮಾಣ ಪೂರ್ವ, ನಿರ್ಮಾಣೋತ್ತರ ವೆಚ್ಚಗಳು ಹಾಗು ಅದು ಎಷ್ಟು ಜನರನ್ನು ತಲುಪುತ್ತದೆ ಎಂಬುದು ಕೂಡ ಮುಖ್ಯವಲ್ಲವೆ, ಜೊತೆಗೆ ಶೂಟಿಂಗ್ಅಲ್ಲಿ ಅವರು ಖರ್ಚಿಗು, ಟ್ರೈಪಾಡ್ ಮೇಲೆ ಕ್ಯಾಮೆರಾ ಇಟ್ಟು ಅಲುಗಾಡದಂತೆ ಕ್ಲೋಸ್ ಅಪ್ ಫ್ರೇಂಲ್ಲೇ ಇಡೀ ಎಪಿಸೋಡ್ ಶೂಟ್ ಮಾಡೋದಿಕ್ಕು ವ್ಯತ್ಯಾಸ ಇದ್ದೇ ಇದೆಯಲ್ವಾ ಸರ್.

   ಪ್ರತಿಕ್ರಿಯೆ
 6. Harsha

  ಸೀತಾರಾಂ ಅವರೇ, ಇಂಗ್ಲಿಷಿನಲ್ಲಿ ಬರುವ average ಹಾಡೊಂದು ಜಗತ್ತಿನಾದ್ಯಂತ ಕೋಟಿ ಕೋಟಿ ಜನರನ್ನ ತಲುಪುತ್ತೆ ಮತ್ತು ಮಿಲಿಯನ್ ಗಟ್ಟಲೆ ಹಣವನ್ನ ಬಾಚುತ್ತೆ. ಅಮೇರಿಕಾದಲ್ಲಿ ಟಿವಿ ಸೀರಿಯಲ್ ಗಳಲ್ಲಿ ನಟನೆ ಮಾಡೋ ಒಬ್ಬ average ನಟ ಪ್ರತಿ ಎಪಿಸೋಡ್ ಗೆ ಏಳು ಕೋಟಿ ರೂಪಾಯಿಗೂ ಹೆಚ್ಚಿನ ಸಂಭಾವನೆ ಪಡೆಯುತ್ತಾನೆ. ಇದರ ಬಗ್ಗೆ ಅಮೀರ್ ಖಾನ್ ಅಸೂಯೆ ಪಡಬಹುದೇ? ಇಂಗ್ಲಿಷಿನಲ್ಲಿ ಬರೆಯುವ ಒಬ್ಬ ಅತ್ಯಂತ average ಲೇಖಕನ ಪುಸ್ತಕ ನಮ್ಮ ಭೈರಪ್ಪನವರ ಪುಸ್ತಕಗಳಿಗಿಂತ ನೂರು ಪಟ್ಟು ಹೆಚ್ಚು ಮಾರಾಟವಾಗುತ್ತವೆ. ನಿಮಗೆ ಗೊತ್ತಿರಬಹುದು, ಅಮೇರಿಕಾದಲ್ಲಿ ಲೇಖಕರು, ಕವಿಗಳು ಒಂದು ಸೆಲೆಬ್ರಿಟಿ ಇದ್ದ ಹಾಗೆಯೇ. ತುಂಬಾ ಪ್ರಸಿದ್ಧರಾಗಿರುತ್ತಾರೆ ಮತ್ತು ಆರ್ಥಿಕವಾಗಿ ತುಂಬಾ ಗಳಿಸುತ್ತಾರೆ. ಇದರ ಬಗ್ಗೆ ಭೈರಪ್ಪನವರಿಗೆ ಅಸೂಯೆಯೇ? ಇತ್ತೀಚೆಗೊಮ್ಮೆ ವಿಜಯ ಕರ್ನಾಟಕದಲ್ಲಿ ಭೈರಪ್ಪ ಇಂತಹುದರ ಬಗ್ಗೆ ಅತ್ಯುತ್ತಮವಾಗಿ ವಿಶ್ಲೇಷಣೆ ಮಾಡಿದ್ದರು. ಅತ್ಯಂತ ಹೊಸ ಮತ್ತು ಪ್ರಭುದ್ಧ ಆಲೋಚನೆ.

  ಪ್ರತಿಕ್ರಿಯೆ
 7. ಸಂದೀಪ್ ಕಾಮತ್

  ಪ್ರೀತಿಯ ಸೀತಾರಾಂ ಸರ್,
  ನಿಮಗೆ ಒಂದು ಕಾರ್ಯಕ್ರಮ ಮಾಡುವ ಕಷ್ಟ ಗೊತ್ತು. ಹಾಗಾಗೆ ನೀವು ಆಮೀರ್ ಕಾರ್ಯಕ್ರಮಕ್ಕೆ ಎಷ್ಟು ಖರ್ಚಾಯಿತು ಅನ್ನೋದನ್ನು analyse ಮಾಡಿದ್ದೀರ. ಹಾಗಾಗಿ ನಿಮಗೆ ಅದಕ್ಕೆ ಎಂಟು ಕೋಟಿ ಖರ್ಚಾಯಿತು, ಆಮೀರ್ ಗೆ ೪ ಹೋಯ್ತು ಅನ್ನೋದು ಗೊತ್ತಾಯ್ತು.
  ಆದರೆ ನಮ್ಮಂತ ಸಾಮಾನ್ಯ ಜನರು ಅದಕ್ಕೆ ಎಷ್ಟು ಖರ್ಚಾಯಿತು ಅನ್ನೋ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಹಾಗಾಗಿ ಚಪ್ಪಾಳೆ ತಟ್ಟೋಕೆ ನಮಗೆ ಅದು ಎಂಟು ಕೋಟಿಯ ಕಾರ್ಯಕ್ರಮ ಅನ್ನೋದು ಮುಖ್ಯವಾಗಲಿಲ್ಲ!
  ನಿಮ್ಮ ‘ಮುಕ್ತ ಮುಕ್ತ’ ವನ್ನು ನಾವು ಖುಷಿಯಿಂದಲೇ ನೋಡ್ತೀವಿ. ದೇವರಾಣೆಗೂ ಒಂದು ಎಪಿಸೋಡ್ ಗೆ ಎಷ್ಟು ಖರ್ಚಾಗುತ್ತೆ ನನಗೆ ಗೊತ್ತಿಲ್ಲ! ನೀವು ರವಿ ಬೆಳಗೆರೆಯವರಿಗೆ ಎಷ್ಟು ಕೊಡ್ತೀರಾ, ಮಂಗಳತ್ತೆಗೆ ಎಷ್ಟು ಕೊಡ್ತೀರ, ಕೋರ್ಟ್ ನಲ್ಲಿ ಕೈ ಕಟ್ಟಿ ನಿಲ್ಲುವ ಸಪೋರ್‍ಟಿಂಗ್ ಆಕ್ಟರ್ಸ್ ಎ ಎಷ್ಟು ಕೊಡ್ತೀರ, ಸ್ವಥ ನೀವೇ ಎಷ್ಟು ತಗೋತೀರಾ ಒಂದೂ ಗೊತ್ತಿಲ್ಲ!!! ಅದು ನಮಗೆ ಮುಖ್ಯವೂ ಅಲ್ಲ!
  ಆದರೆ ನಾವು ನಿಮಗೆ ಚಪ್ಪಾಳೆ ತಟ್ಟುತ್ತಾನೆ ಇದ್ದೀವಿ!
  ನಾಳೆ ಕನ್ನಡಮ್ಮನ ಈ ಟಿ.ವಿಗಿಂತ ಬಡವಾಗಿರೋ ಚ್ಯಾನೆಲ್ ಒಂದು ಕಡಿಮೆ ಖರ್ಚಿನಲ್ಲಿ ಸೀರಿಯಲ್ ಮಾಡಿ ಕೊಡಿ ಅಂದ್ರೆ ನೀವು ಒಪ್ಕೋತೀರಾ ಸರ್?
  ಅಮಿತಾಬ್ ‘ಕೌನ್ ಬನೇಗಾ ಕರೋಡ್ ಪತಿ ‘ ಗೆ ಅಷ್ಟು ತಗೋತಾನೆ ಇಷ್ಟು ತಗೋತಾನೆ ಅನ್ನೋದು ನಮಗೆ ಮುಖ್ಯವಾಗುತ್ತೆ. ಅಸೂಯೆ ನೂ ಆಗುತ್ತೆ. ಆದರೆ ಅದೇ ಅಮಿತಾಬ್ ವಿಶ್ವಸುಂದರಿ ಕಾರ್ಯಕ್ರಮ ಮಾಡಿ ಪಾಪರ್ ಆಗಿದ್ದು, ಅವನ ಮನೆ ಹರಾಜಿಗೆ ಬಂದಿದ್ದು ಯಾವುದೂ ನಮಗೆ ನೆನಪಿರೋದೇ ಇಲ್ಲ! ಅವನ ಮನೆ ಹರಾಜಿಗೆ ಬಂದಾಗ ನಾವ್ಯಾರದರೂ ಒಂದು ಪೈಸಾ ಕೊಟ್ಟಿದ್ದೀವಾ ಅಮಿತಾಬ್ ಗೆ?
  ಆಮೀರ್ ಜನಪ್ರಿಯತೆಯಿಂದಾಗೇ ‘ಸತ್ಯಮೇವ ಜಯತೇ’ ಜನಪ್ರಿಯವಾಯಿತು ವಿನಃ ಅವನು ಹೇಳೋ ವಿಷಯದಿಂದ ಅಲ್ಲ!
  ಕೃಷ್ಣ ಹೇಳಿದ್ದಕ್ಕೇ ಅದು ಭಗವದ್ಗೀತೆಯಾಗಿದ್ದು! ನಕುಲ, ಸಹದೇವ ಹೇಳಿದ ಯಾವ ಮಾತೂ ನಮಗೆ ಮುಖ್ಯ ಅನಿಸಿಲ್ಲ!

  ಪ್ರತಿಕ್ರಿಯೆ
 8. Sharadhi

  I think the opinions expressed by Dinesh kumar are pretty matured, and realistic. I appreciate it.

  ಪ್ರತಿಕ್ರಿಯೆ
 9. prasad raxidi

  ಸೈದ್ಧಾಂತಿಕ ಹಿನ್ನೆಲೆ ಮತ್ತು ಸ್ಪಷ್ಟತೆ ಇಲ್ಲದ ಹೋರಾಟಗಳು, ಹಾಗೇ ಯಾವದೇ ಹೋರಾಟಕ್ಕಿಳಿಯದ ಸೈದ್ಧಾಂತಿಕ ಚರ್ಚೆಗಳು ಯಾವದೇ ಬದಲಾವಣೆಯನ್ನು ತರಲಾರವೆಂಬ ನಂಬಿಕೆ-ಅರಿವು ಇರುವ ನಾವೆಲ್ಲ ಈಗ ಮತ್ತೊಮ್ಮೆ ಹೊಸದಾರಿಗಳನ್ನು ಕಂಡುಕೊಳ್ಳಬೇಕಾದ ಅನಿವಾರ್ಯದಲ್ಲಿದ್ದೇವೆ. ಇದಕ್ಕೆ ಇಂತಹ ಚರ್ಚೆ ಖಂಡಿತ ಬೇಕು. ಸುರೇಶರ ಪಟ್ಟಕ್ಕನ ಹೈವೇಯೂ ಬೇಕು- ರೈತರಪರ ಹೋರಾಟವೂ ಬೇಕು. ಅಮೀರಖಾನ್- ಸೀತಾರಾಂ ಜೊತೆ, ಕೇಸರಿಹರವು- ರವಿಕೃಷ್ಣಾ ರೆಡ್ಡಿಗಳೂ ಬೇಕು. ಡಬ್ಬಿಂಗ್ ಬಗ್ಗೆ- ಅವಕಾಶನೀಡಿದರೆ ಎಲ್ಲ ಛಾನಲ್ ಗಳು ದಬ್ಬಂಗ್ ಧಾರಾವಾಹಿಗಳನ್ನು ತೋರಿಸಲು ಪ್ರಾರಂಭಿಸಿದರೆ ತಮ್ಮ ಗತಿಯೇನು ಎಂಬ ಕನ್ನಡ ಕಿರೆತೆರೆಯ ಕಲಾವಿದರ ತಂತ್ರಜ್ಞರ ಆತಂಕವನ್ನು ಅರ್ಥಮಾಡಿಕೊಳ್ಳಬಹುದು ಆದರೆ ಸಿನಿಮಾದವರು ಇದನ್ನು ಸವಾಲಾಗಿ ತೆಗೆದುಕೊಳ್ಳಬೇಕು.ಸದಾಕಾಲಕ್ಕೂ ದಬ್ಬಂಗ್ ಅನ್ನು ವಿರೋಧಿಸುವುದು ಸಾಧುವೂ ಅಲ್ಲ ಸಾಧ್ಯವೂ ಇಲ್ಲ ಅಲ್ಲವೇ .. ಏನಂತೀರಿ ಸುರೇಶ್

  ಪ್ರತಿಕ್ರಿಯೆ
 10. Mallikarjuna

  ಈ ಸಮಾಜವಾದಿಗಳ ತೊಂದರೆಯೇ ಇದು,
  ತಮ್ಮ ಮೂಗಿನ ನೇರಕ್ಕೆಯೇ ಎಲ್ಲವನ್ನೂ ಅಳೆಯುತ್ತಾರೆ.
  ಸಂಪೂರ್ಣ ಕ್ರಾಂತಿ, ವರ್ಗ, ಜಾತಿ, ಬಂಡವಾಳಶಾಹಿ, ….. ಈ ಪದಗಳನ್ನ ಬಳಸದೆ ಇದ್ರೆ ಅದು ಒಳ್ಳೆ ಪ್ರಯತ್ನವೇ ಅಲ್ಲ.
  ಅಮೀರ್ ಖಾನ್ ಅದರ ಬಗ್ಗೆ ಮಾತನಾಡುತ್ತಾನೆ, ಜಡ್ಡುಗಟ್ಟಿರೋ ನಮ್ಮ ಮಂಡೆಗಳ್ನ ಸ್ವಲ್ಪ ಆದ್ರೂ ಬಿಸಿ ಮಾಡ್ತಾನೆ,
  ಎಲ್ಲವನ್ನೂ ಓದಿರುವ ಹರ್ಷ ಮಂದರ್, ಅರುಣಾ ರಾಯ್ ಇವರುಗಳು ಮಾಡೊದಾದ್ರೂ ಏನು?
  ದುಡಿಯೋರ ಕಾಸನ್ನ ದುಡಿಯದೇ ಇರೋರಿಗೆ ಹಂಚೋದು,
  ಬಿ ಸುರೇಶ ಅವರಿಗೆ ಸಾಧ್ಯವಾದದ್ದನ್ನ ಸಾಮಥ್ಯ ಇದ್ದಷ್ಟು ಮಾಡ್ತಾರೆ (ಹೈವೇ, …., ಡಬ್ಬಿಂಗ್ ವಿರೋಧ).
  ಆದ್ರೆ, ನಮಗೆ ಮುಖ್ಯವಾದದನ್ನ ಯಾಕೆ ಮಾಡ್ಲಿಲ್ಲ (ಎಸ್ ಈ ಜ಼ೆಡ್, ,……) ಅಂತ ಕೇಳಿದ್ರೆ, ಪಾಪ ಅವರೇನು ಮಾಡ್ಲಿಕ್ಕೆ ಆಗುತ್ತೆ.

  ಪ್ರತಿಕ್ರಿಯೆ
 11. ಜೋಗಯ್ಯ

  ದಿನೇಶ್ ಬಹಳ ಸುಂದರವಾಗಿ ಬರೆದಿದ್ದೀರಿ. ನನ್ನ ಅಭಿನಂದನೆಗಳು. ಇವತ್ತಿಗೂ ಒಬ್ಬೇ ಒಬ್ಬ ದಲಿತ ಕನ್ನಡ ಚಿತ್ರೋದ್ಯಮ, ಟಿವಿ ವಾಹಿನಿಯಲ್ಲಿ ದೊಡ್ಡ ಹೆಸರು ಮಾಡಿದ್ದಾನೆಯೇ? ಬಹುಸಂಖ್ಯಾತರಾಗಿರುವ ಹಿಂದುಳಿದ ವರ್ಗದ ಕತೆ ಹೇಳುವ ಒಂದೇ ಒಂದು ಧಾರಾವಾಹಿ ನಮ್ಮ ನಡುವೆ ಇದೆಯೇ? ಬಂಡವಾಳ ಶಾಹಿ, ಪುರೋಹಿತಶಾಹಿ ಅಂತೆಲ್ಲ ಕೂಗು ಹಾಕುವ ಜನರು ಮಾಡುವ ಧಾರಾವಾಹಿಗಳು, ಸಿನೆಮಾಗಳು ಹೆಚ್ಚಾಗಿ ಮಧ್ಯಮ, ಮೇಲ್ ಮಧ್ಯಮ ವರ್ಗವನ್ನೇ ಗಮನದಲ್ಲಿಟ್ಟುಕೊಂಡೇ ಎಲ್ಲವನ್ನೂ ಮಾಡುತ್ತವೆ. ಯಾಕೆಂದರೆ ದುಡ್ಡಿರುವುದೇ ಅವರ ಬಳಿ ನೋಡಿ. — ತರಹದವರು ಬೊಂಬಾಟ್ ಕಾರ್ ಅಲ್ಲಿ ಓಡಾಡುತ್ತಾರೆ. ಸರ್ಕಾರಿ ಪ್ರಯೋಜನಗಳನ್ನು ಪಡೆದೇ ಕೆಲಸ ಮಾಡುತ್ತಾರೆ, ಆದರೆ ದಲಿತರು, ಹಿಂದುಳಿದವರ ಬಾಯಲ್ಲೇ ಇಂದು ಉಳಿದಿರುವ ಕನ್ನಡ ನುಡಿಯಲ್ಲಿ ಅವರ ವಿಕಾಸಕ್ಕೆ ಬೇಕಿರುವ ಜಗತ್ತಿನ ಒಳ್ಳೆಯದೆಲ್ಲ ಅವರಿಗೆ ಸಿಗುವಂತೆ ಮಾಡುವುದನ್ನು ವಿರೋಧಿಸುತ್ತಾರೆ. ನಾನು ಓದಿದ ಹರಪನಹಳ್ಳಿಯ ಸರ್ಕಾರಿ ಶಾಲೆಯ ದಲಿತ ಮಕ್ಕಳಿಗೆ ಇಂಗ್ಲಿಶ್ ಕಬ್ಬಿಣದ ಕಡಲೆ, ಹಿಂದಿ ಎಂದಿಗೂ ಒಲಿಯದ ಮಾರಿ,, ಕನ್ನಡವೊಂದೇ ಅವರಿಗೆ ಬರುತ್ತಿದ್ದ ನುಡಿ. ಇವತ್ತು ಅವರ ಮನೆಯಲ್ಲೂ ಟಿವಿ ಬಂದಿದೆ, ಅವರೂ ಆಗಾಗ ಸಿನೆಮಾ ನೋಡುತ್ತಾರೆ,, ಆದರೆ ಕನ್ನಡದಲ್ಲಿ ಪ್ರಪಂಚ ಅವರನ್ನು ತಲುಪುವುದು ಅವರ ಹಿತಾಸಕ್ತಿಯ ಗುತ್ತಿಗೆ ಹಿಡಿದಿರುವ ಹಲವರಿಗೆ ಬೇಡ,, ಯಾಕೆಂದರೆ ಅದಕ್ಕಿಂತ ಮುಖ್ಯ ಅವರಿಗೆ ಅವರ ಹೊಟ್ಟೆ ಪಾಡು.

  ಪ್ರತಿಕ್ರಿಯೆ
 12. Harsha Kugwe

  ಸೀತಾರಾಂ ಸರ್ ನಿಮ್ಮ ಪ್ರತಿಕ್ರಿಯೆ ಓದಿ ತುಂಬಾ ಖುಷಿಯಾಯಿತು. ನಿಜ ಸರ್, ಇವತ್ತಿನ ಸಂಕೀರ್ಣತೆಗಳೇ ಹಾಗಿವೆ. ನನಗನ್ನಿಸುವಂತೆ ನಾವು ಎಷ್ಟೇ ಸಿದ್ದಾಂತಕ್ಕೆ ಬದ್ಧರಾಗಿದ್ದರೂ ವಾಸ್ತವ ಬದುಕು ಹಲವಾರು ರಾಜಿಗಳನ್ನು ಕೇಳುತ್ತೆ. ಆದರೆ ನಮ್ಮ ರಾಜಿ (flexibility) ಎಂಬುದು ಒಂದು ಅನ್ಯಾಯದ ವ್ಯವಸ್ಥಯನ್ನು ಸಮರ್ಥಿಸುವ ಮಟ್ಟಕ್ಕೆ ಹೋಗದಂತೆ ನೋಡಿಕೊಳ್ಳೋದು ನಮ್ಮ ಧರ್ಮ ಅನ್ನಿಸುತ್ತೆ. ಅಮೀರ್ ಖಾನ್ ಬಗ್ಗೆಯೂ ನಮಗೇನೂ ಭ್ರಮೆಗಳಿರಬೇಕಿಲ್ಲ. ಆತನ ಮಿತಿಗಳಲ್ಲಿಯೇ ಆತ ಸಮಾಜಕ್ಕೆ ಏನು ಕೊಡುತ್ತಿದ್ದಾನೆಯೋ ಅದನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ನಮ್ಮ ನಮ್ಮ ಪ್ರಜ್ಞಾವಲಯವನ್ನು ಗಟ್ಟಿಕೊಳಿಸಿಕೊಳ್ಳುವ ಅಗತ್ಯತೆ ಇಂದಿದೆ. ಅದರ ಬದಲು ಆತ ಸೋಗಲಾಡಿಯೆಂದು ಜರಿಯುತ್ತಾ ಕುಳಿತರೆ ನಷ್ಟ ಅನುಭವಿಸುವುದು ನಮ್ಮ ಜನರೇ ಎಂಬುದು ನನ್ನ ಗಟ್ಟಿ ಅಭಿಪ್ರಾಯ. ಅಣ್ಣಾ ಹಜಾರೆ ಹೋರಾಟವನ್ನೂ ಹೀಗೇ ಸಿನಿಕವಾಗಿ ನೋಡುವ ದಾಟಿಯೊಂದು ನಮ್ಮಲ್ಲಿದೆ. ಇಂದು ಅಣ್ಣಾ ಟೀಂ ತಾನೇ ಮಾಡಿಕೊಂಡ ಎಟವಟ್ಟುಗಳಿಂದಾಗಿ ಮತ್ತು ದೇಶದ ಯುವಜನತೆಯನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಲು ಕೈಯಲ್ಲೊಂದು ಸ್ಪಷ್ಟ ಯೋಜನೆಯಾಗಲೀ, ಒಂದು ಸೂಕ್ತ vision ಆಗಲೀ ಇಲ್ಲದ್ದರಿಂದ ನಿರಾಸೆ ಮೂಡಿಸಿರಬಹುದು. ಆದರೆ ದೇಶದ ಬ್ರಹ್ಮಾಂಡ ಭ್ರಷ್ಟಾಚಾರದ ವಿರುದ್ಧ ಮಧ್ಯಮ ವರ್ಗವನ್ನು ಕೊಂಚ ಮಟ್ಟಿಗಾದರೂ ಕದಲಿಸಿತ್ತಲ್ಲ. ಮಾಧ್ಯಮಗಳೂ ಚಳವಳಿಗಳನ್ನು ಕಡೆಗಣಿಸಿ ಕುಳಿತಿದ್ದ ಸಂದರ್ಭದಲ್ಲಿ ಅದೊಂದು ಬ್ರೇಕ್ ಅದು ನೀಡಿದ್ದು ಸುಳ್ಳಲ್ಲ. ಪಿ.ಸಾಯಿನಾಥ್, ಅರುಂದತಿ ರಾಯ್ ಅಂಥವರು ಗುರುತಿಸಿರುವ ಅಣ್ಣಾ ಹೋರಾಟ ಮತ್ತು ಅಣ್ಣಾ ಟೀಂನ ಮಿತಿಗಳನ್ನು ಒಪ್ಪಿಕೊಂಡೇ ನಾನು ಈ ಮಾತುಗಳನ್ನು ಹೇಳುತ್ತಿದ್ದೇನೆ.
  ಇಲ್ಲಿ ಕೂಡ, ಸಂವರ್ಥ ಸಾಹಿಲ್ ಹೇಳಿದ ವಿಷಯಗಳಾಗಲೀ ನಾನು, ದಿನೇಶ್ ಕುಮಾರ್ ಅಭಿಪ್ರಾಯಗಳಾಗಲೀ ಎಲ್ಲೂ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ನಿಲ್ಲುತ್ತವೆ ಎಂದು ನನಗೆ ಅನ್ನಿಸಿಲ್ಲ. ನಮಗೆ ಸೈದ್ದಾಂತಿಕ ಖಚಿತತೆ ಖಂಡಿತಾ ಮುಖ್ಯ. ಆದರೆ ಸಂದರ್ಭದ ಮಿತಿಗೊಳಪಟ್ಟ ವಾಸ್ತವವೂ ಅಷ್ಟೇ ಮುಖ್ಯ. ಆ ಮಿತಿಗಳಲ್ಲಿ ನಮ್ಮ ಅರಿವನ್ನು ಜನರಿಗೆ ದಾಟಿಸುವ ದಾರಿಗಳೂ ನಮಗೆ ಮುಖ್ಯ. ಈಗ ಮುಕ್ತ ಮುಕ್ತ ಅಥವಾ ಪುಟ್ಟಕ್ಕನ ಹೈವೇಗಳಿಲ್ಲವೇ ಹಾಗೆ. ನನಗೆ ಈ ಹೊತ್ತಿಗೆ ಬಹಳ ಮುಖ್ಯ ಅಂತ ಅನ್ನಿಸುವುದು ಸತ್ಯಮೇವ ಜಯತೆಯ 13 ಎಪಿಸೋಡ್ ಗಳು ಮುಗಿಯುವ ಹೊತ್ತಿಗೆ ಅಲ್ಲಿ ವ್ಯಕ್ತವಾಗುವ ಕಾಳಜಿ, ಆತಂಕ ಹೆಚ್ಚೆಚ್ಚು ಜನರನ್ನು ಹೇಗೆ ತಲುಪುತ್ತದೆ, ಅದಕ್ಕೆ ನಾವೇನು ಮಾಢಬೇಕು ಎನ್ನುವುದಷ್ಟೆ ನನ್ನ ಕಾಳಜಿಯಾಗಿದೆ.
  ಬೇರೆಲ್ಲರಿಗಿಂತ ಅಮೀರ್ ನಮ್ಮನ್ನು ಮತ್ತಷ್ಟು ಹತ್ತಿರ ಮಾಡಿಕೊಳ್ಳಲು ಕಾರಣ ತಾರೆ ಜಮೀನ್ ಪರ್, ಪೀಪ್ಲಿ ಲೈವ್ ನಂತಹ ಆತನ ಹಿಂದಿನ ಪ್ರಯತ್ನಗಳೂ ಎನ್ನುವುದನ್ನು ವಿಶೇಷವಾಗಿ ಹೇಳಬೇಕಿಲ್ಲ. ಆದರೆ ಗಂಗಾಧರ ಮೊದಲಿಯಾರರಂತಹ ನಾವು ಬಹಳ ಗೌರವಿಸುವ ಹಿರಿಯರು ಆ ಡಬ್ಬಾ ಬದುಕು ಜಟಕಾ ಬಂಡಿಯಂತ ಕಾತ್ಯಕ್ರಮದೆದುರು SMJ ಯನ್ನು ಚೀ ತೂ ಎಂದಾಗ ಸಹಜವಾಗಿ ನೋವಾಯಿತು. ಜನಮಾನಸದ ಪ್ರಜ್ಞಾವಲಯವನ್ನು ವಿಸತರಿಸುವಲ್ಲಿ SMJ ವಿಶೇಷ ಪಾತ್ರವನ್ನೇ ವಹಿಸಬಲ್ಲುದು. ಆದರೆ ಒಂದಾಗಿ ಬಾಳಬಹುದಾದವರನ್ನೂ ತಲೆಯೆತ್ತಿ ಬದುಕಲಾರಂತೆ ಮಾಡಿರುವ ಕನ್ನಡದ ಅಂತಹ ರಿಯಾಲಿಟಿ ಶೋಗಳು ಮಾಡಿರುವ ಉಪಯೋಗಕ್ಕಿಂತ ಹಾನಿಯೇ ಹೆಚ್ಚು.
  ಮತ್ತೆ ನಿಮ್ಮ ಮಾತನ್ನೇ ಪುನರುಚ್ಛರಿಸುವುದಾದರೆ “ಒಲ್ಲದ ವೇದಿಕೆಗಳು, ಸಲ್ಲದ ಭ್ರಮೆಗಳು, ಎದುರಿಸಲು ಆಗದ ಶಕ್ತಿಗಳು, ಇವುಗಳನ್ನು ಸುತ್ತ ಕಟ್ಟಿಕೊಂಡು ಬದುಕು -ವೃತ್ತಿಗಳನ್ನು ಕಟ್ಟಿಕೊಳ್ಳುವ ಅನಿವಾರ್ಯತೆಯಲ್ಲಿ ನಾವಿದ್ದೇವೆ. ಎಷ್ಟೊಂದು ಸತ್ಯ! ಆದರ್ಶ ಮತ್ತು ಬದುಕುಗಳನ್ನು ಒಟ್ಟಿಗೇ ಕೊಂಡೊಯ್ಯಲು ಹೆಣಗುವವರೇ ನಗೆಪಾಟಲಿಗೀಡಾಗಿಬಿಡುವಂತಹ ಜಿಗಿಮಿಗಿ ಕಾಲ ಇದು. ಆದರೆ ಹಾಗಿಲ್ಲದೇ ಹೋದರೆ ಮುಂದೊಂದು ದಿನ ನಾವೆದುರಿಸಬಹುದಾದ ಭೀಕರತೆಗಳನ್ನು ನೆನೆಸಿಕೊಂಡಾದರೂ ನಮ್ಮ ನಮ್ಮ ಮಿತಿಗಳಲ್ಲಿ ನಮ್ಮಷ್ಟಕ್ಕೆ ಮತ್ತು ಸಾಧ್ಯವಾದರೆ ಒಂದಷ್ಟು ಅಕ್ಕಪಕ್ಕದವರಿಗೆ ಈ ಆದರ್ಶಗಳನ್ನು ದಾಟಿಸಿಕೊಂಡು ಹೀಗಬೇಕಾಗಿದೆ. ನಮ್ಮ ಸಂವಾದ ಕೂಡ ಅದಕ್ಕೆ ನೆರವಾದರೆ ಖುಷಿ. ಧನ್ಯವಾದಗಳು ಸರ್.- ಹರ್ಷಕುಮಾರ್ ಕುಗ್ವೆ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: