ಒಂದು ಹಳೆಯ ಪತ್ರ
– ಪ್ರಜ್ಞಾ ಶಾಸ್ತ್ರಿ
ಪ್ರತಿ ನಾಗರ ಪಂಚಮಿಗೆ ಎರಡೆರಡು ಸಂಭ್ರಮ ಅವಳಿಗೆ. ಹಳೆಯ ಮಾವಿನ ಮರಕ್ಕೆ ಕಟ್ಟುತ್ತಿದ್ದ ಹಗ್ಗದ ಜೋಕಾಲಿ ಮತ್ತು ರಾತ್ರಿ ಕೈಯ ಎಲ್ಲಾ ಬೆರಳುಗಳಿಗೆ ಮೆತ್ತಿಕೊಳ್ಳುತ್ತಿದ್ದ ಮದರಂಗಿ. ನಿಂಬೆ ರಸ, ಸುಣ್ಣ ಮತ್ತಿನ್ನೇನೇನೋ ಸೇರಿಸಿ ಹಿತ್ತಲಲ್ಲಿ ಬೆಳೆದ ಮದರಂಗಿಯ ಸೊಪ್ಪನ್ನು ಒರಳುಕಲ್ಲಿನಲ್ಲಿ ಅರೆದು…ರಾತ್ರಿ ಮಲಗುವಾಗ ಎಲ್ಲಾ ಬೆರಳುಗಳ ತುದಿಗೆ ಮೆತ್ತಿಕೊಳ್ಳುವುದು. ಹಾಸಿಗೆ ಹೊಲಸಾಗದಿರಲೆಂದು ಬೇಲಿ ಸಾಲಿನ ಆಡುಮೆಟ್ಲ ಗಿಡದ ಎಲೆಗಳನ್ನು ಬೆಂಕಿಯಲ್ಲಿ ಬಾಡಿಸಿ ಬೆರಳ ತುದಿಗೆ ಕಟ್ಟಿಕೊಳ್ಳುವುದು…ಬೆಳಿಗ್ಗೆ ಏಳುತ್ತಿದ್ದಂತೆ ಕಟ್ಟು ಬಿಚ್ಚಿ ಮದರಂಗಿ ಎಷ್ಟು ರಂಗೇರಿದೆ ಎಂದು ನೋಡಿಕೊಳ್ಳುವುದು… ಜರ ಜರ ಎಂದು ಸುರಿವ ಜಡಿ ಮಳೆ ಮಬ್ಬು ಕತ್ತಲಿನ ಜಗುಲಿಯ ತುದಿಯಲ್ಲಿ ಕವಳ ತುಂಬಿಕೊಂಡು ಕೂತ ಅಜ್ಜನ ತುಟಿಗೆ ಅವಳ ಮದರಂಗಿಯ ರಂಗು! ನಿರಿಗೆಯ ಲಂಗವನ್ನು ತುಸುವೆ ಎತ್ತಿ ಮಾವಿನ ಮರದ ಜೋಕಾಲಿಯ ಬಳಿ ಓಡುವಾಗ… ಅವನಿರಲಿಲ್ಲ! ಅಂಥ ಎಷ್ಟೋ ಪಂಚಮಿಗಳು ಸರಿದ ಮೇಲೊಂದು ದಿನ… ಅವನ ಕೈ ಅವಳ ಬೆರಳುಗಳ ಜತೆ ಆಟವಾಡುತ್ತ ಆಡುತ್ತ ಪಕ್ಕದಲ್ಲೇ ಆಳೆತ್ತರಕ್ಕೆ ಬೆಳೆದ ಮದರಂಗಿಯ ಟಿಸಿಲೊಂದನ್ನ ಮುರಿದಿತ್ತು. ಮುರಿದ ಟಿಸಿಲಿಗೆ ಸಣ್ಣ ಹೂಗಳೂ ಇದ್ದವು. ಮದರಂಗಿಯ ಹೂಗಳು. ತಿಳಿ ನಿಂಬೆ ಬಣ್ಣದ ಚಿಕ್ಕ ಚಿಕ್ಕ ಹೂಗಳ ಗೊಂಚಲು, ಅಲ್ಲಲ್ಲಿ ಎಲೆಗಳು. ಹೊತ್ತು ಸರಿಯುವವರೆಗೆ ಮಾತಾಡುತ್ತಿದ್ದ ಅವನ ಕೈಗಳು ಆ ಟಿಸಿಲಿನ ಜತೆ ಆಟವಾಡುತ್ತಿದ್ದವು. ಒಮ್ಮೆ ಅದನ್ನು ಸವರುತ್ತಿದ್ದ, ಮತ್ತೊಮ್ಮೆ ಅದರಿಂದ ತನ್ನ ಕೆನ್ನೆ ಸವರಿಕೊಳ್ಳುತ್ತಿದ್ದ. ಅವನು ಹೋದ ಎಷ್ಟೋ ಹೊತ್ತಿನ ನಂತರ ಮನೆ ಸೇರಿದ ಇವಳ ಜಡೆಯಲ್ಲಿ ಆ ಗೊಂಚಲು. ಅವನ ಮೊದಲ ಪ್ರೇಮ ಪತ್ರ ಹಾಗಂದುಕೊಂಡು ನೋಟುಬುಕ್ಕಿನ ಬಿಳಿಹಾಳೆಯೊಂದನ್ನ ಕಿತ್ತು ಅದರೊಳಗೆ ಬಚ್ಚಿಟ್ಟಳು ಅವಳು ಎದೆಯ ಢವಢವ, ಬೇಸಗೆಯ ಧಗೆ, ಹೂ ಕನಸುಗಳ ನಿದ್ದೆಗೂ ಮದರಂಗಿಯ ರಂಗು!
ಹೆಸರಿರದ ಎಲ್ಲ ಹೆಸರಿಡಬಲ್ಲ ಭಾವ
ಸ್ವರ್ಣಾ
wah wah gadyadalli padya athava padyadalli gadya anthanu helabahudu.