ರಾಜಾರಾಂ ತಲ್ಲೂರು
ಪುಸರಾಲ ವೆಂಕಟ ಸಿಂಧುವಿನ ಈ ಬೆಳ್ಳಿ ಜಯ ಭಾರತಕ್ಕೆ ಎಷ್ಟು ಅಗತ್ಯ ಇತ್ತೋ ಅದಕ್ಕಿಂತ ಹತ್ತುಪಾಲು ಹೆಚ್ಚು ಅಗತ್ಯ ಆಕೆಯ ಕೋಚ್ ಮತ್ತು ಭಾರತದ ರಾಷ್ಟ್ರೀಯ ಕೋಚ್ ಪುಲ್ಯೆಲ್ಲ ಗೋಪಿಚಂದ್ ಗೆ ಇತ್ತು. ಈ ಜಯದೊಂದಿಗೆ ಗೋಪಿ ತಾನು ಮಾಡುತ್ತಿದ್ದುದೇನೆಂಬುದನ್ನು ಸಂಬಂಧಪಟ್ಟವರಿಗೆಲ್ಲ ಸಾಬೀತುಪಡಿಸಿದಂತಾಗಿದೆ.
ಭಾರತೀಯ ಬ್ಯಾಡ್ಮಿಂಟನ್ ಫೆಡರೇಶನ್ ಒಲಿಂಪಿಕ್ಸ್ ತಯಾರಿ ಆರಂಭಿಸಿದಾಗ ಎಲ್ಲವೂ ನೆಟ್ಟಗಿರಲಿಲ್ಲ. ಅನಾದಿಯಿಂದಲೂ ಗೋಪಿಚಂದ್ ಜೊತೆ ಇಗೋ ಜಗಳ ಇರಿಸಿಕೊಂಡೇ ಬಂದಿರುವ ಶಟಲ್ ಬ್ಯಾಡ್ಮಿಂಟನ್ ಡಬಲ್ಸ್ ಆಟಗಾರ್ತಿ ಜ್ವಾಲಾ ಗುಟ್ಟ ತನ್ನನ್ನು ಮತ್ತು ತನ್ನ ಡಬಲ್ಸ್ ಜೊತೆಗಾತಿ ಅಶ್ವಿನಿ ಪೊನ್ನಪ್ಪರನ್ನು Target Olympic Podium (TOP) ಅಡಿ ಆರ್ಥಿಕ ಬೆಂಬಲಕ್ಕೆ ಆಯ್ಕೆ ಮಾಡದ ಕುರಿತಾಗಿ ಮಾಧ್ಯಮಗಳೆದುರೇ ತಗಾದೆ ತೆಗೆದಿದ್ದರು. ನ್ಯಾಷನಲ್ ಕೋಚ್ ಆಗಿ ಗೋಪಿಯ ಪಾತ್ರ ಈ ಪ್ರಕರಣದಲ್ಲಿ ಬಹಳ ನಾಜೂಕು ಸ್ಥಿತಿಗೆ ತಲುಪಿತ್ತು, ಆತ ಎಲ್ಲರಿಗೂ ಸ್ಪಷ್ಟೀಕರಣಗಳನ್ನು ಕೊಟ್ಟು ಸುಸ್ತಾಗಬೇಕಾಯಿತು. ಜ್ವಾಲಾ ತನಗಿರುವ ಅಭಿಮಾನಿಗಳ ಬೆಂಬಲವನ್ನು ಇದಕ್ಕೆ ಚೆನ್ನಾಗಿಯೇ ಬಳಸಿಕೊಂಡರು. ಇದೆಲ್ಲ ನಡೆದದ್ದು 2015ರ ಮಧ್ಯಭಾಗದಲ್ಲಿ. ಮುಂದೆ ಇಂಟರ್ನ್ಯಾಷನಲ್ ನ್ಯಾಷನಲ್ ರಾಂಕಿಂಗ್ 13ಕ್ಕೇರಿದಾಗ ಜ್ವಾಲಾ-ಅಶ್ವಿನಿ ಜೋಡಿ ಜೊತೆಗೆ ಪುರುಷರ ಡಬಲ್ಸ್ ಜೋಡಿ ಸುಮಿತ್ ರೆಡ್ಡಿ-ಮನು ಅತ್ರಿ ಕೂಡ TOP ಗೆ ಆಯ್ಕೆ ಆದರು.
ತನ್ನ ಕಾಲದ ಅತ್ಯುತ್ತಮ ಆಟಗಾರ, ಆಲ್ ಇಂಗ್ಲಂಡ್ ಚಾಂಪಿಯನ್ ಕೂಡ ಆಗಿದ್ದ ಗೋಪಿ ತನ್ನ ಸ್ವಂತ ಮನೆ ಅಡವಿಟ್ಟು ಮೂರು ಕೋಟಿ ಸಾಲ ಪಡೆದು ಹೈದರಾಬಾದಿನಲ್ಲಿ ನಿರ್ಮಿಸಿದ ಬ್ಯಾಡ್ಮಿಂಟನ್ ಅಕಾಡೆಮಿ ಕಳೆದ ವರ್ಷ ಒಲಂಪಿಕ್ಸ್ ತಯಾರಿಗೆ ನ್ಯಾಷನಲ್ ಕ್ಯಾಂಪ್ ತಾಣ ಕೂಡ ಆದಾಗ ಜ್ವಾಲಾ – ಗೋಪಿ ನಡುವಿನ ಗದ್ದಲ ಇನ್ನಷ್ಟು ಹೆಚ್ಚಾಯಿತು. ಕೋಚಿಂಗ್ ವೇಳೆ ಅಸಹಕಾರ, ಮಾಧ್ಯಮಗಳಲ್ಲಿ ಕೆಸರೆರಚಾಟ ನಡೆದೇಇತ್ತು. ಗೋಪಿ ಕೋಚ್ ಆಗಿ ತನ್ನ ಆಟ – ಬೆಳವಣಿಗೆಗಳ ಬಗ್ಗೆ ಬೇಕೆಂದೇ ಆಸಕ್ತಿ ವಹಿಸುತ್ತಿಲ್ಲ ಎಂಬುದು ಜ್ವಾಲಾ ಅಸಮಾಧಾನದ ಮೂಲ.
ಈ ನಡುವೆ ಇನ್ನೊಂದು ಹಠಾತ್ ಬೆಳವಣಿಗೆಯಲ್ಲಿ ಭಾರತದ ತಾರಾ ಆಟಗಾರ್ತಿ ಸೈನಾ ನೆಹವಾಲ್ ತನ್ನನ್ನು ದೀರ್ಘಕಾಲ ಆಡಿಸಿ ಬೆಳೆಸಿದ ಕೋಚ್ ಗೋಪಿಯನ್ನು ತೊರೆದು ಬೆಂಗಳೂರು ಸೇರಿ ಇನ್ನೊಬ್ಬ ಆಟಗಾರ ವಿಮಲ್ ಕುಮಾರ್ ಅವರನ್ನು ತನ್ನ ಕೋಚ್ ಆಗಿ ಮಾಡಿಕೊಂಡಿದ್ದರು. ಗೋಪಿ ಜೊತೆ ತನ್ನ ಆಟ ನಿಂತ ನೀರಾಗತೊಡಗಿತ್ತು; ತನಗೆ ಅಲ್ಲಿ ಬೇಕಿದ್ದಷ್ಟು ಅಟೆನ್ಷನ್ ಸಿಗಲಿಲ್ಲ; ಒಂದು ಹಂತದಲ್ಲಿ ಆಟದಿಂದ ನಿವ್ರತ್ತಿಯ ಯೋಚನೆ ಮಾಡಿದ್ದ ತಾನು ವಿಮಲ್ ಕುಮಾರ್ ಜೊತೆ ಸೇರಿದ ಮೇಲೆ, ತನಗೆ ಚಾಂಪಿಯನ್ ಆಗಬಹುದೆಂಬ ಕಾನ್ಫಿಡೆನ್ಸ್ ಬಂದಿದೆ ಎಂಬ ಮಾತಾಡಿದ್ದರು.
ಹೀಗೆ, ಒಂದಾದ ಮೇಲೊಂದು ವಿವಾದಗಳು ಎದುರಾದಾಗ ಗೋಪಿ ತಣ್ಣಗೆ, ಎಲ್ಲ ನೋವು ನುಂಗಿಕೊಂಡು ತನ್ನ ಟ್ರಂಪ್ ಕಾರ್ಡ್ ಸಿದ್ಧಪಡಿಸುತ್ತಿದ್ದರು. ಸಿಂಗಲ್ಸ್ ಗೆ ಸಂಬಂಧಿಸಿದಂತೆ ದೇಶದ ಅತ್ಯಂತ ಯಶಸ್ವಿ ಕೋಚ್ ಗಳಲ್ಲೊಬ್ಬರಾದ ಗೋಪಿಗೆ, ತನ್ನ ತಾಕತ್ತನ್ನು ಪ್ರೂವ್ ಮಾಡಿ ತೋರಿಸಲು ಉಳಿದಿದ್ದ ಏಕೈಕ ಹಾದಿ – ಸಿಂಧು.
ಒಂದು ವೇಳೆ, ಈ ಬಾರಿ ಸಿಂಧು ಮತ್ತು ಕಿಡಾಂಬಿ ಶ್ರೀಕಾಂತ್ ಸಾಧನೆ ಒಲಂಪಿಕ್ಸ್ ನಲ್ಲಿ ಕಳಪೆ ಇರುತ್ತಿದ್ದರೆ, ಗೋಪಿಗೆ ತನ್ನ ಮೇಲೆ ಬಂದಿರುವ ಅಪವಾದಗಳಿಗೆ ಸಮರ್ಥನೆಗಳನ್ನು ಕೊಡುವುದು ಬಹಳ ಕಷ್ಟವಾಗುತ್ತಿತ್ತು. ಆದರೆ ಸಿಂಧು ತನ್ನ ಗುರುವಿಗೆ ಕೂಡ ಕವಿದಿದ್ದ ಕಾರ್ಮೋಡವನ್ನು ಸರಿಸಿ “ಬೆಳ್ಳಿ ರೇಖೆ”ಮೂಡಿಸಿದ್ದಾರೆ!
ಸಿಂಧು ತನ್ನ ಗುರುವಿಗೆ ಕೂಡ ಕವಿದಿದ್ದ ಕಾರ್ಮೋಡವನ್ನು ಸರಿಸಿ “ಬೆಳ್ಳಿ ರೇಖೆ”ಮೂಡಿಸಿದ್ದಾರೆ!
ನಿಮ್ಮ ಇಂತಹ ಸೂಕ್ಷ್ಮ ಒಳ ನೋಟಕ್ಕೆ ಸಲಾಂ.