ಸಿದ್ದಣ್ಣ, ಪುಟ್ಟಮ್ಮ: ಶ್ರಮ ಸಂಸ್ಕೃತಿಯ ಶುದ್ಧ ಶಕ್ತಿಗಳು

ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು.

ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ,  ರಂಗಭೂಮಿ,  ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ.  ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ.

ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ ದೊಡ್ಡದು.

‘ಅಲ್ಲೆ ಆ ಕಡೆ ನೋಡಲಾ…’ ಎಂದು ನಿಮಗೆ ತೋರಿಸುತ್ತಿರುವುದು ಅವರ ಊರಿನ ಆತ್ಮವನ್ನು.

ಕಣ್ಣಿನಲ್ಲಿ ನೋಡುವಡೆ ತೊಗಲಿನವನಲ್ಲ, ಕೈಯಲ್ಲಿ ಹಿಡಿವಡೆ ಮೈಯ್ಯವನಲ್ಲ,
ಭಾವದಲ್ಲಿ ನೋಡುವಡೆ ಬಯಲ ಸ್ವರೂಪ!
(ಮನುಮುನಿ ಗುಮ್ಮಟಯ್ಯ)

ಸಿದ್ದಣ್ಣ ಪುಟ್ಟಮ್ಮನನ್ನು ಬಿಟ್ಟು ನನ್ನ ಊರನ್ನು ಒಳಗೆ ಉಳಿಸಿಕೊಳ್ಳಲು ನನಗೆಂದೂ ಆಗಿಲ್ಲ. ಊರಿನಲ್ಲಿ ಮೈಲಿಗೆ ಎಂಬ ಅಸಹನೆಯನ್ನು ಯಾರು ಹುಟ್ಟುಹಾಕಿದರೋ? ಈ ಮೈಲಿಗೆಯ ದಬ್ಬಾಳಿಕೆ ಹೆಣ್ಣು ಮಕ್ಕಳ ಮೇಲೆ ಎಸೆದ ಭ್ರಮೆ ಕವಲೊಡೆಯುತ್ತಲೇ ಇದೆ. ಎಷ್ಟೇ ವೈಚಾರಿಕತೆಯನ್ನು ಇಂಥ ನೆಲೆಗಳಿಗೆ ಉಗ್ಗಿದರೂ ಹೊಸತನದ ಅರಿವು ಹುಟ್ಟದಂತೆ ಕಟ್ಟಿಬಿಡುವ ಆಳುವ ಮನಸುಗಳಿರುತ್ತವೆ. ಎಲ್ಲೆಲ್ಲಿ ನುಸುಳಿ ಏನೇನು ಅಪಾಯಗಳನ್ನು ತರುತ್ತವೆಯೋ? ಮುಟ್ಟು ಎನ್ನುವ ಸಹಜ ಕ್ರಿಯೆಯನ್ನು ಮುಂದಿಟ್ಟುಕೊಂಡು ಅದೆಷ್ಟು ವಿಕಾರಗಳನ್ನು ಕಾಲದ ಜೊತೆಗೆ ಸಾಗಹಾಕಲಾಗುತ್ತಿದೆ.

ಮುಟ್ಟಾದ ಹೊಲೆಯೊಳಗೆ ಹುಟ್ಟಿಹುದು ಜಗವೆಲ್ಲ
ಮುಟ್ಟಬೇಡೆಂದು ಅಡಿಗಡಿಗೆ ಆರುತಿಹ ಹಾರುವವ ಹುಟ್ಟಿರುವುದೆಲ್ಲಿ ಸರ್ವಜ್ಞ….

ಹಳ್ಳಿಯಲ್ಲಿ ಹುಟ್ಟಿ ಬೆಳೆದ ನಾನು ಹಲವು ಹಳ್ಳಿಗಳಲ್ಲಿ ಹಾದು ಬಂದಿದ್ದೇನೆ. ಎಲ್ಲೆಲ್ಲಿಯೂ ಮುಟ್ಟನ್ನು ಮುಂದಿಟ್ಟುಕೊಂಡು ಹೆಣ್ಣು ಮಕ್ಕಳ ಮೇಲೆ ಒತ್ತಡ ಹೇರಿದ ಭಿನ್ನ ಮೌಢ್ಯಗಳು ಊರಿಂದಾಚೆಗಿನ ಯಾವುದೋ ಒಂದು ಧ್ರುಮದ ಅಡಿಯಲ್ಲಿಯೋ, ಪಾಳುಬಿದ್ದ ಕಣಗಳಲ್ಲಿಯೋ ಇಲ್ಲವೇ ದೊಡ್ಡ ಗಾಳಿ ಹೊಯ್ದರೆ ಮಗುಚಿಬಿಡುವ ಸ್ವಾಗೆ ಗುಡ್ಲುಗಳಲ್ಲಿಯೋ ಮುಟ್ಟಿನ ಕಾಲವನ್ನು ಎದುರುಗೊಳ್ಳುವಂತೆ ಸಾಗಾಕಿ ಊರು ಶುದ್ಧವಾದಂತೆ ಕಂದಾಚಾರಗಳನ್ನು ಮರುಸೃಷ್ಟಿಸಿವೆ.

ಶೋಷಣೆಗೆ ಮಹಿಳೆಯರೊಳಗೆ ತರವಲ್ಲದ ಒಪ್ಪಿತ ಅಸಹಾಯಕತೆಯನ್ನು ತುಂಬಿದ ಮನಸುಗಳ ಜಾಲವೇ ಬೇರಿಳಿದು ಬೆಳೆದಿದೆ. ಇಷ್ಟೆಲ್ಲಾ ವಿಕೃತಿಗಳು ಹರಡಿಕೊಂಡು ಹಾರಾಡುವಾಗ ದನಿ ಎತ್ತದಂತೆ ಹಳ್ಳಿಗಳ ಹೆಣ್ಣು ಮಕ್ಕಳನ್ನು ಮೈಲಿಗೆಯೆಂಬ ಬೇಡದ ಪ್ರಜ್ಞೆಯ ಜೊತೆಗೆ ನೇತುಹಾಕಿ ಸರಿಸ್ಥಿತಿಯೆಂಬಂತೆ ಒಪ್ಪಿಸಲಾಗುತ್ತಿರುವ ಹಿಡಿತಗಳು ಉಸಿರು ಕೀಳುವಷ್ಟು ವಿಕೃತವಾಗಿವೆ. ಇಂಥವನ್ನೆಲ್ಲ ನೋಡಿಕೊಂಡು ಒಂದಷ್ಟು ಕಾಲದವರೆಗೆ ಸರಿಯೆಂಬಂತೆ ತಲೆದೂಗಿದ ನಾನು ಸಾಹಿತ್ಯ ಸಖ್ಯಕ್ಕೆ ಬಿದ್ದ ಮೇಲೆ ಬೇರೆಯದೇ ಚಿಂತನೆಗೆ ಒಳಗಾಗಲು ಆಯಿತು.

ಒರಗ್ಲು ಬಟ್ಟೆ ನೀರಕಾಕ್ಲಿ ಸಿದ್ದಣ್ಣುನ್ನೋ, ಪುಟ್ಟಮ್ಮುನ್ನೋ ಕರ್ಕಂಬರ್ರಿ ಅಂತ ಮನೇಲಿ ಯಾರನ್ನಾದ್ರೂ ಕಳಿಸೋರು. ನನ್ನ ಊರಿನಿಂದ ನಡೆದು ಹೋಗುವಷ್ಟು ಸಮೀಪವಿರುವ ಪಕ್ಕದ ಊರಿನಲ್ಲಿ ಈ ಸಿದ್ದಣ್ಣ ಪುಟ್ಟಮ್ಮ ದಂಪತಿಗಳು ವಾಸವಿದ್ದದ್ದು. ಇಬ್ಬರ ನಡತೆಯೂ ನನ್ನ ಮೇಲೆ ಬೀರಿದ  ಪರಿಣಾಮ ಮಹತ್ವದ್ದು. ಸಿದ್ದಣ್ಣ ಅನೇಕ ಸಲ ದಾರ್ಶನಿಕರಾಚೆಗೂ ಬೆಳೆದು ಮಹಾತ್ಮನಂತೆ ಕಂಡಿದ್ದಾರೆ. ನಮ್ಮ ಊರಿನಲ್ಲಿ ಎಲ್ಲಾ ಹೆಣ್ಣು ಮಕ್ಕಳ ಮುಟ್ಟಿನ ಬಟ್ಟೆಯನ್ನು ಒಗೆದು ಕೊಡುವ ಈ ಸಿದ್ದಣ್ಣ ಪುಟ್ಟಮ್ಮನ ತನ್ಮಯತೆ ಅನಂತದಂತೆ ಕಂಡಿದೆ ನನಗೆ.

ಪರ್ವ, ಯಾತ್ರೆ ಗಳು ನಡೆಯುವಾಗ ಜನಮೆಚ್ಚಿ ಸಾಗಿಸಿಕೊಂಡು ಬಂದ ಆಚರಣೆಗಳಿಗೆ ಮೆರುಗು ಮೂಡುವುದೇ ಈ ಸಿದ್ದಣ್ಣ ಪುಟ್ಟಮ್ಮನ ಪ್ರಾಮಾಣಿಕತೆಯಿಂದ. ದೇವ್ರೊಳ್ಟವೆ ಸಿದ್ದಣ್ಣ ಬಂದ್ನೇನ್ರೋ ಪತ್ತಿಡಿಬೇಕು ಎನ್ನುವ ಊರಿನ ಮುಖಂಡರೆನಿಸಿಕೊಂಡವರ ಹುಡುಕಾಟಗಳು ಜಡಗೊಂಡು ಸಿದ್ದಣ್ಣನ ನಿಯತ್ತಿನ ಬಯಲಲ್ಲಿ ಚಲನೆ ಕಂಡಿವೆ. ವರ್ಷ ಒಂಭತ್ತು ಕಾಲವೂ ಏನು ಕಾರ್ಯಗಳು ಜರುಗಿದರು ಸಿದ್ದಣ್ಣ ಮನೆಮನೆಗೂ ಗೋವಾಕಿದರೆ ಅಂಟ್ಮುಂಟು ಆಗಿಲ್ಲವೆಂಬಂತೆ ವಿಶ್ವಾಸವೊಂದು ಉಳಿದಿದೆ.

ಊರಿನಲ್ಲಿ ಯಾರ ಮನೆಯಲ್ಲಿ ಪರಿಣಯಗಳಾದರೂ ಸಿದ್ದಣ್ಣನಿಲ್ಲದೆ ಪೂರ್ಣಗೊಳ್ಳುವುದೇ ಇಲ್ಲ. ಮನೆಮನೆಯ ಚಲನೆಗೂ ಶುದ್ಧಿಗೂ ಈ ದಂಪತಿಗಳ ಕೈಕೂಡಬೇಕು. ಉಪ್ಪಿಕ್ದರ್ನ ಮುಪ್ಪಿಂತಕ ನೆನಿಬೇಕು ಅಂತಾರೆ. ಈ ಎರಡೂ ಜೀವಗಳು ಊರಿಗಾಗಿ ತೇದುಕೊಂಡ ಪರಿಯನ್ನು ಪದಗಳ ಜೊತೆಗಿಟ್ಟು ವರ್ಣಿಸುವುದಕ್ಕಿಂತ ಆಂತರ್ಯದ ಚೇತನಗಳಾಗಿ ಧರಿಸುವುದು ಊರಿನೆಲ್ಲ ಮಂದಿಗೂ ಮುಖ್ಯವೆ.

ಪ್ರತೀ ವರ್ಷವೂ ಇವರನ್ನು ಕಾಳು ಕಡ್ಡಿ, ಬುತ್ತಿ, ಹಣಕ್ಕೆ ಮಾತನಾಡಿ ಒಪ್ಪಿಸಿಕೊಳ್ಳಲಾಗುತ್ತದೆ. ನನ್ನೂರಿನ ಆತುಮವಾಗಿರುವ ದೊಡ್ಡಳ್ಳದ ಪ್ರತಿಬಿಂಬ ಸಿದ್ದಣ್ಣ ಪುಟ್ಟಮ್ಮ. ಗಂಡೀಕೆರೆಯೆಂಬ ಕೆರೆಯೊಂದು ಕೋಡಿಬಿದ್ದು ಅನೇಕ ಊರುಗಳ ಮಗ್ಗುಲಿಗೆ ಬೆಸೆದುಕೊಂಡು ಹರಿಯುತ್ತಾ ನನ್ನೂರನ್ನು ಸದಾ ಪಸ್ಮೆಯಲ್ಲಿಟ್ಟು ತಣ್ಣಗೂ, ಅಬ್ಬರಿಸಿಯೂ ಹರಿದು ಮುಂದಿನೂರಿನ ಕೆರೆಕಟ್ಟೆ ತುಂಬಿಸಿ ಜೀವಕುಲಕ್ಕೆ ಎದೆಯಾದ ಕಸುವೇ ಜನಕ್ಕೆ, ನೆಲಕ್ಕೆ ಜೀವ.

ಪ್ರತಿ ವಾರಕ್ಕೊಮ್ಮೆ ಸಿದ್ದಣ್ಣ ಪುಟ್ಟಮ್ಮ ಇಬ್ಬರೂ ಎರಡು ಮೂರು ಮನೆಗಳ ಒಗ್ಯ ಬಟ್ಟೆ ಎಣಿಸ್ಕಮಕೆ ಬರೋರು. ಕೆಲವೊಮ್ಮೆ ಹೊತ್ತು ಮೂಡುವ ಮುನ್ನವೇ ಬಟ್ಟೆಗಂಟುಗಳ ಜೊತೆಗೆ ಹಳ್ಳದಲ್ಲಿ ಇರೋರು. ರಜೆ ದಿನಗಳಲ್ಲಿ ನಾವು ಇವರಿಗೆ ಬುತ್ತಿ ತಗಂಡು ಹಳ್ಳಕ್ಕೆ ಹೋಗ್ತಾ ಇದ್ವಿ. ತಾಪ, ಮಳೆ, ಕೊರೆತ ಯಾವೊಂದನ್ನು ಲೆಕ್ಕಿಸದೆ ಉರ್ಕ್ಬಂಡೆ ಮೇಲೆ ನಿರಂತರವಾಗಿ ಬಟ್ಟೆ ಶುದ್ದಗೊಳಿಸುತ್ತಲೇ ಬದುಕಿದ ಇವರ ಏಕಾಗ್ರತೆ ಯಾವ ಮಹಾಕಾವ್ಯಕ್ಕೂ ಕಡಿಮೆ ಇಲ್ಲ. ಕಾದ ಮರಳಲ್ಲಿ ದಿರಿಸುಗಳನ್ನು ಹರಡುತ್ತ, ಹಗಲಿಡೀ ಕಾಯುವ ನೆತ್ತಿಗೆ ತಣ್ಣನೆಯದೊಂದು ಅರಿವೆಯೂ ಸವರದಂತೆ ಶ್ರದ್ದೆ ತೋರುವ ಈ ಎರಡು ಮನಸುಗಳು ಶ್ರಮ ಸಂಸ್ಕೃತಿಯ ಶುದ್ಧ ಶಕ್ತಿಗಳಾಗಿ ನನ್ನೊಳಗೆ ನಿತ್ಯವೂ ಅಪೂರ್ವ ಸ್ಮರಣೆಗಳಾಗಿ ಅಚಲಗೊಂಡಿದ್ದಾರೆ.

ಮಣ್ಕಾಲವರೆಗೆ ಇರುತ್ತಿದ್ದ ನೀರಿನಲ್ಲಿ ಕುಂತು ನಿಂತು ಹಗಲಿಡೀ ಹಳ್ಳದಲ್ಲಿ ರಜೆ ಕಳೆಯುತ್ತಿದ್ದ ನನ್ನೊಳಗೆ ದೊಡ್ಡಳ್ಳವು ಲೌಕಿಕದಾಚೆಗಿನ ಮತ್ತೇನೋ ಒಂದಾಗಿ ಸೆಳೆದಿದೆ. ಕೊಡ್ಪಾನ ಹೊತ್ತು ಊರ ಅಮ್ಮಂದಿರು ಅಕ್ಕಂದಿರೆಲ್ಲಾ ಹಳ್ಳದ ಅರ್ಗಿನಲ್ಲಿ ಒರ್ತೆ ತಗ್ದು ಕುಡ್ಯಕೆ ನೀರು ತರುತ್ತಿದ್ದದ್ದು. ಈ ಹಳ್ಹದ ಸೀ ನೀರೆ ಎಂಥಾ ಒಣಕಾಳುಗಳನ್ನು ಹದವಾಗಿ ಬೇಯಿಸಿ ಅಡುಗೆಯಲ್ಲಿ ಸವಿ ತುಂಬುತ್ತಿದ್ದುದು ಅನನ್ಯ.

ಹಳ್ಳದ ಧ್ಯಾನವಿಲ್ಲದೆ ನಾವೆಂದೂ ದಿನಮುಗಿಸಿಲ್ಲ. ಎಷ್ಟೋ ಸಲ ಕಣ್ಮುಚ್ಚಿ ಬಿಡವತ್ಗೆ ಮನೆ ಇಂದ ಓಡೋಗಿ ಹಳ್ಳಬಿದ್ದಿರ್ತಿದ್ವಿ. ಹಳ್ಳದ ನೀರು ಕುಡಿಯುವುದೆಂದರೆ ಅಸಾಧ್ಯ ಸಡಗರ. ಅರ್ಯನೀರಗೆ ನೀರಂಗೆ ಅರ್ದು ನೀರಾಗಿ ಮುದಗೊಂಡಿದ್ದೇವೆ. ಎಡಗಡ್ಡೆಯ ಹಳ್ಳಿಮಂದಿ, ಬಲಗಡ್ಡೆಯ ಹಳ್ಳಿ ಮಂದಿ ದೊಡ್ಡ ಸಿಬ್ಬಲುಗಳಲ್ಲಿ ಮುಸ್ರೆ ತುಂಬ್ಕಂಡು ಬಂದು ದೊಡ್ಡಳ್ಳದಲ್ಲೇ ಮಡಿ ಮಾಡುತ್ತಿದ್ದದ್ದು. ಹಳ್ಳ ನಮಗೆಲ್ಲ ಅಮ್ಮನಂತೆ. ಎಲ್ಲಾ ಅಮ್ಮಂದಿರ ಒಳನೋವುಗಳು ಈ ಹಳ್ಳದ ನೀರಿನೊಂದಿಗೆ ಸೇರಿ ಹಗುರವಾದವೇನೊ? ಇಪ್ಪತ್ತು ವರ್ಷಗಳ ಹಿಂದೆ ಕಡುಬೇಸಿಗೆಯ ನಡುವಿನಲ್ಲಿ ಕೂಡ ತಿಳಿಯಾಗಿ ಹರಿಯುತ್ತಿತ್ತು.

ಹಳ್ಳದ ಸಖ್ಯವೆಂದರೆ ಅದೊಂದು ಅದ್ಭುತ ಕಾಯಕವೇ. ತಮ್ಮ ಬದುಕಿನ ಶಕ್ತ ಕಾಲವನ್ನು ಊರಿನೆಲ್ಲ ಬಟ್ಟೆಗಳನ್ನು ಶುದ್ಧ ಮಾಡಲು ವಿನಿಯೋಗಿಸಿದ ಸಿದ್ದಣ್ಣ ಪುಟ್ಟಮ್ಮನೊಳಗೆ ಇರುವ ಅಭೂತಪೂರ್ವ ಸಹನೆಗೆ ಎಷ್ಟು ಶರಣೆಂದರೂ ಸಾಲದು. ಇಷ್ಟಲ್ಲದೆ ಮನೆಮನೆಗೂ ಬಂದು ಇಸ್ತ್ರಿ ಬಟ್ಟೆ ತಗಂಡೋಗರು. ಇವರು ವಿಶ್ರಾಂತಿ ಎಂಬಂತೆ ಸುಖಿಸಿದ್ದನ್ನು ನಾನು ಕಂಡೇ ಇಲ್ಲ. ತಂಗಾಳಿ ಪರಿಮಳದೊಡಗೂಡಿ ಸುಳಿವಂತೆ ನೆಟ್ಟನೆ ಜಂಗಮರಾಗಿ ಸುಳಿದ ಮಹಾಜೀವಿಗಳಿವರು. ಈಗ ಮಕ್ಕಳು ಬೆಂಗಳೂರು ಸೇರಿ ಇಸ್ತ್ರಿ ಕಾಯಕವನ್ನೇ ರೂಢಿಸಿಕೊಂಡು ಆರ್ಥಿಕವಾಗಿ ಸಬಲಗೊಂಡಮೇಲೆ ಇವರ ವೈಯಕ್ತಿಕ ಬದುಕಿನಲ್ಲಿ ಒಂದಿಷ್ಟು ನೆಮ್ಮದಿ ಬಂದಿದೆ.

ಮರಳು ದಂಧೆಗೆ ಸಿಕ್ಕು ಹಳ್ಳ ಜೀವಬಿಟ್ಟ ಮೇಲೆ ಇವರು ನರಳಿದ್ದಾರೆ. ಈಗಲೂ ಹಳ್ಳಿಗೆ ಬಂದರೆ ನಮಗೆಲ್ಲ ಸಿಕ್ಕು ಪೂರ್ವ ಸ್ಮೃತಿಗಳನ್ನು ನೆನೆದು ಭಾವುಕಗೊಳ್ಳುವ ಇವರೊಳಗಿನ ದಟ್ಟ ಭಾವವಲಯದ ತಣ್ಣನೆಯ ಪಸ್ಮೆಗೆ ಊರ್ಮಂದಿ ಎಷ್ಟು ಋಣಿಗಳಾದರೂ ಕಡಿಮೆಯೇ? ಇವರದೆ ಮನೆಯ ಇನ್ನೊಬ್ಬ ಎಳೆವಯಸ್ಸಿನವ ಹಳ್ಳಿ ಸೇರಿ ಮುಟ್ಟಿನ ಬಟ್ಟೆ ನೀರಿಗಾಕುವ ಹಾಗೂ ಮನೆಯ ಕಲ್ಲಿನ ತೊಟ್ಟಿಗಳಲ್ಲಿ ತುಬಿಟ್ಟುಕೊಳ್ಳುವ ಗುರ್ಜ್ಲು ನೀರಲ್ಲಿ ಕಾಯಕ ಮುಂದುವರಿಸಿದ್ದಾನೆ.

ಹಬ್ಬಹರಿದಿನಗಳಲ್ಲಿ ತಳ್ವಾರರ ಜೊತೆ ಸಿದ್ದಣ್ಣನ ಕುಟುಂಬದ ಕುಡಿ ದುಡಿಮೆಗಿಳಿದಿರುವುದು ಸೋಜಿಗ. ಎಲ್ಲವೂ ಬದಲಾದಂತೆ ಕಂಡರೂ ವೈಚಾರಿಕತೆಯನ್ನು ಸೀಳಿ ಮೌಢ್ಯಗಳು, ಶೋಷಣೆಗಳು ಜಾಗಹಿಡಿದು ಬೇರುಬಿಡುತ್ತವೆ. ಆತ್ಮಶುದ್ಧರಾಗಿ ಬದುಕುವ ಶ್ರಮಿಕರ ನಡುವೆ ನಾಜೂಕಿನ ಪೊಳ್ಳು ಜನ ಗರ್ವಬಿಡದೆ ದಬ್ಬಾಳಿಕೆ ಮಾಡುತ್ತಲೇ ಹೋಗುವುದು ಲಜ್ಜೆಗೇಡಿನದು.

“ಊರಿನೆಲ್ಲರೊಳಗೂ ಇಂಥಾ ನಿತ್ಯದುಡಿವ ಜನ ಮೊದಲಿನ ಚೇತನಗಳಾದ ದಿನ ಊರಿಗೆ ಘನತೆಗಳು ಮೂಡುತ್ತವೆ. ಹಳ್ಳವೂ ಸಿದ್ದಣ್ಣ ಪುಟ್ಟಮ್ಮರು ನನ್ನೊಳಗೆ ಭವ್ಯಗೊಂಡು ನಿಂತಿರುವುದಕ್ಕೆ ನಾನು ಸುಖಿ.”

ತವನಿಧಿಯ ಬೆಳೆವಂಗೆ ಕಣಜದ ಹಂಗುಂಟೆ?
ವಿರಕ್ತರಿಗೆ ಆರೈಕೆಗೊಂಬವರುಂಟೆ?
ಕಾಯಕವ ಮಾಡುವ ಭಕ್ತಂಗೆ
ಇನ್ನಾರುವ ಕಾಡಲೇತಕೆ?
ಆ ಗುಣ ಅಮರೇಶ್ವರ ಲಿಂಗಕ್ಕೆ ದೂರ.
(ಆಯ್ದಕ್ಕಿ ಮಾರಯ್ಯ)

January 20, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಚಳಿಗಾಲದ ದೌಲತ್ತಿನಲ್ಲೊಂದು ನಿಮಿಷ!

ಚಳಿಗಾಲದ ದೌಲತ್ತಿನಲ್ಲೊಂದು ನಿಮಿಷ!

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ...

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಕಥೆಗಳನ್ನು ಹುಡುಕಿಕೊಂಡು ಹೀಗೆ ಸಾಗುವುದು ಇತ್ತೀಚಿಗೆ ನನ್ನ ರೂಢಿಯೇ ಆಗಿ ಹೋಗಿದೆ. ಕಥೆಯ ಹುಡುಕಾಟವೆಂದರೆ ಅದು ಬದುಕಿನ...

2 ಪ್ರತಿಕ್ರಿಯೆಗಳು

  1. K.N.Ashwini

    Halli jeevanada sogadu ade bhasheyalli chendavagi moodibandide idu namma baalyada dinagalannu nenapiside, hageye muttina bagge iruva moudyada aacharanegala bagge thilisi avugala badalavanege nayavagi prerepiside..

    ಪ್ರತಿಕ್ರಿಯೆ
  2. ಶೈಲಜನಾಗರಘಟ್ಟ

    ಚೆಂದದ ನಿರೂಪಣೆಯಾಗಲು ಗೀತಮ್ಮ ಮುನ್ನೆಲೆಯಾಗಿ ದಕ್ಕಿಸಿಕೊಂಡಿರುವ ಗಾಢ,ನೈಜ ಅನುಭವ ನಿಜಕ್ಕೂ ಶ್ರೀ ಮಂತ ಸಂಪತ್ತು….ಯಂತ್ರ-ತಂತ್ರಗಳ ಜಗತ್ತಿಗೆ ಇಂಥದೊಂದು ನೈಜತೆಯ ಅನಿವಾಯ೬ತೆಯಿದೆ…ಇಂದಿನ ಒತ್ತಡದ ಬದುಕಿನಿಂದ ಓದಿ,ತಮ್ಮೊಳಗೆ ಇಳಿಸಿಕೊಂಡ ಒಂದರೆ ಗಳಿಗೆಯಾದರೂ ಹಳ್ಳಿಗಾಡ ಹಸನುಮನಗಳ ಪರಿಚಯದಿಂದ ನಾನಂತೂ ನನ್ನ ಆ ದಿನಗಳನ್ನು ನೆನೆದು ಉಲ್ಲಸಿತಳಾದೆ..ಧನ್ಯವಾದಗಳು ಗೀತಮ್ಮ…ಇನ್ನಷ್ಟು ಮತ್ತಷ್ಟು ನಿನ್ನ ಅನುಭವದ ಮೂಸೆಯನ್ನು ಅಗೆದಗೆದು ವಾಸ್ತವದಲ್ಲಿ ಬೆಂದು ತೊಳಲುತ್ತಿರುವ ಮನಗಳಿಗೆ ಹಿಂಡಿಬಿಡು…ಖುಷಿಗೊಳ್ಳಲಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: