ಸಿದ್ದು ಪಿನಾಕಿ ಕಂಡ ‘ವಿಚಿತ್ರ’

ಸಿದ್ದು ಪಿನಾಕಿ

ನಿಜಕ್ಕೂ ನಗು ತಡೆಯಲಾಗ್ತಿಲ್ಲ. ನಿಮಗೆ ಒಂದು ವಿಚಿತ್ರ ವ್ಯಕ್ತಿಯನ್ನು ಪರಿಚಯಿಸಲೇಬೇಕು. ಇವನ ಬಗ್ಗೆ ಕೇಳಿದ್ರೆ, ನೀವೂ ಬಿದ್ದೂ ಬಿದ್ದೂ ನಗ್ತೀರಾ… ಬಂಡೀಪುರಕ್ಕೆ ಹೋದ್ರೆ, ಕಾಡಿನ ಸುತ್ತಲೂ ಅನೇಕ ಗೆಳೆಯರಿದ್ದಾರೆ. ಗೆಳೆಯರು ಅಂದ್ರೆ, ಬಹುತೇಕ ಬುಡಕಟ್ಟು ಹುಡುಗರೇ. ಕೆಲವರು, ಅರಣ್ಯ ಇಲಾಖೆಯಲ್ಲಿ ವಾಚರ್ ಗಳು.

ನನ್ನನ್ನು ಕಂಡ್ರೆ, ಈ ಹುಡುಗರಿಗೆ ಅದೇನೋ ಪ್ರೀತಿ, ವಿಶ್ವಾಸ. ಅವರ ಮಕ್ಕಳಿಗೆ ಸ್ಕೂಲ್ ಫೀಸ್ ಕಟ್ಟಬೇಕಾದ್ರೆ, ಮನೆಯಲ್ಲೇನೋ ಪ್ರಾಬ್ಲಂ ಆದಾಗ, ಮೊದಲು ಕಾಲ್ ಬರೋದೇ ನನಗೆ. ಅಣ್ಣಾ ಅಂತಾರೆ. ಅವರು ರಾಗ ಎಳೆದಾಗಲೇ, ಟ್ರಿಗರ್ ಒತ್ತುತ್ತಿದ್ದಾರೆ ಅನ್ನೋದು ಗೊತ್ತಾಗುತ್ತೆ. ಸರೀ ಕಣ್ರಪ್ಪಾ, ಸೆಂಡ್ ಮಾಡ್ತೇನೆ ಅಂತೇನೆ. ಇದು ಗೊತ್ತಾಗಿ, ನನ್ನ ಆತ್ಮೀಯ ಹಿರಿಯ ಅರಣ್ಯಾಧಿಕಾರಿ ಮಿತ್ರರು, ಹುಸಿಕೋಪ ತೋರಿಸ್ತಾರೆ. ಸಿದ್ದೂ, ನೀನು ದುಡ್ಡು ಕೊಡು, ಆ ಮುಂಡೇವು, ಡ್ಯೂಟಿ ಮುಗೀತ್ತಿದ್ದಂತೇ, ಗುಂಡ್ಲುಪೇಟೆಯಲ್ಲಿ ಗುಂಡುಮೇಜಿನ ಸಭೆ ನಡೆಸ್ತಾರೆ ಅಂತಾರೆ. ನಕ್ಕ ನಾನು, ಇರಲಿ ಬಿಡಿ ಸಾರ್, ಎನ್ನುತ್ತಿದ್ದಂತೇ, ಸರೀ ಯಾವಾಗ ಬರ್ತೀರಿ, ಎನ್ನುತ್ತಾರೆ. ಇದನ್ನು ದಯವಿಟ್ಟು ಅಹಂಕಾರ ಎಂದುಕೊಳ್ಳಬೇಡಿ.

ನಾವು ಮೂರ್ನಾಲ್ಕು ಸ್ನೇಹಿತರು ವೀಕೆಂಡ್’ನಲ್ಲಿ ಸಿಟ್ಟಿಂಗ್ ಮಾಡಿದ್ರೆ, ಟೇಬಲ್ ಬಿಲ್ ಏಳೆಂಟು ಸಾವಿರವಾದ್ರೂ ಆಗೇ ಆಗುತ್ತೆ ಕಣ್ರೀ. ತಿಂಗಳಲ್ಲಿ ಎರಡು ಬಾರಿ ಹೀಗೆ ಕೂತರೂ, ಹದಿನೈದು, ಹದಿನಾರು ಸಾವಿರವಾದರೂ ಆಗುತ್ತೆ. ಈ ಕಾಡ ಮಕ್ಕಳಿಗೆ ಸಂಬಳ ಎಷ್ಟೂ ಅಂತೀರಾ…? ! ಅದೂ ಇದೂ ಎಂದು ಕಳೆದು, ಕೈಗೆ ಬರೋದೇ ಏಳೂವರೆ ಸಾವಿರ. ಮಕ್ಕಳ ಫೀಸು, ಮನೆ ಖರ್ಚು, ಅಪ್ಪ ಅಮ್ಮನ ಆರೋಗ್ಯ, ಏನೆಲ್ಲಾ ನೋಡಿಕೊಳ್ಳಬೇಕು. ಇಡೀ ತಿಂಗಳು ಸಂಸಾರವನ್ನು ಈ ಏಳು, ಏಳೂವರೆ ಸಾವಿರದಲ್ಲೇ ನಡೆಸಬೇಕು ಕಣ್ರೀ. ಮಕ್ಕಳು ಇಷ್ಟಪಟ್ಟು, ಅಪ್ಪಾ ಏನಾದ್ರೂ ಕೊಡಿಸಪ್ಪಾ ಅಂತಾ ಕೇಳಿದ್ರೆ, ಕರುಳು ಚುರುಕ್ ಅನ್ನದೇ ಇರುತ್ತಾ. ಹೀಗಾಗೇ, ಆಗಾಗ್ಗ, ಈ ಕಾಡ ಸ್ನೇಹಿತರ ಮಕ್ಕಳಿಗೆ ಬಟ್ಟೆ, ಬರೆ ಕೊಡಿಸ್ತೇನೆ. ಅವರು, ತೀರಾ ಅನಿವಾರ್ಯವಾದ್ರೆ ಮಾತ್ರವೇ ನನಗೆ ಕಾಲ್ ಮಾಡೋದು.

ನಾನು ಹೀಗೆ ಹೋದಾಗ, ಅಷ್ಟೋ ಇಷ್ಟೋ ಕೈಗಿಡುತ್ತೇನೆ. ಮಕ್ಕಳ ಕೈಗೆ ಚಾಕೋಲೇಟ್, ಒಂದಷ್ಟು ಬಟ್ಟೆ, ಬೇಕರಿ ತಿಂಡಿ ಕೊಡ್ತೇನೆ. ಆಗ ಅವರ ಕಣ್ಣುಗಳನ್ನು ನೋಡ್ಬೇಕು, ಎಷ್ಟು ಖುಷಿಯಾಗುತ್ತೆ ಗೊತ್ತಾ.ಆಗ್ಲೇ ಹೇಳಿದೆನಲ್ಲಾ, ನಾನೊಬ್ಬನನ್ನು ಪರಿಚಯ ಮಾಡಿಕೊಡ್ತೇನೆ ಅಂತಾ. ಇವನೇ ಸೂರಿ. ಬಂಡೀಪುರ ಕಾಡಿನ ಸೆಲೆಬ್ರಿಟಿ ಊರು ಮಂಗಲದವನು. ಸೆಲೆಬ್ರಿಟಿ ಊರು ಅಂದ್ರೆ, ಬಂಡೀಪುರದ ಬಹುತೇಕ ಹೈ ಫೈ ರೆಸಾರ್ಟ್ಗಳೆಲ್ಲವೂ ಈ ಊರಿನ ಸುತ್ತಮುತ್ತಲೇ ಇವೆ. ದೂರದಲ್ಲೆಲ್ಲೋ ಒಂದು ಮರದ ಎಲೆ ಬಿದ್ದರೂ ಸಾಕು, ಅಲ್ಲಿರೋದು, ಆನೆಯೇ, ಮರದ ಮೇಲೆ ಚಿರತೆ ಇದೆ ಎಂದು ಪಕ್ಕಾ ಹೇಳ್ತಾನೆ ಈ ಸೂರಿ.

ಸಾರ್, ಯಾವುದಾದರೂ ಟಿವಿಯಲ್ಲಿ ನನ್ನನ್ನೂ ಆಂಕರ್ ಮಾಡೀ ಸಾರ್ ಎಂದು ಸೀರಿಯಸ್ಸಾಗೇ ಕೇಳ್ತಾನೆ. ಲೋ, ನಿನಗ್ಯಾಕೋ ಆಂಕರ್ ಆಗೋ ಹುಚ್ಚು ಅಂದ್ರೆ, ಯಾಕ್ ಸಾರ್, ನನಗೂ ಒಂದು ರೆಡ್ ಕಲರ್ ಕೋಟ್ ಹಾಕಿಸಿ ಕೂರಿಸಿ, ಹೆಂಗ್ ಮಾತಾಡ್ತೀನಿ ನೋಡಿ ಅಂತಾನೆ. ಸರೀ ಬಿಡಪ್ಪಾ, ಮಾಡೋಣ ಎನ್ನುತ್ತೇನೆ. ಇವನು ಹೇಗಂದ್ರೆ, ಸಿಗೋದೇ ಹುಣ್ಣಿಮೆಗೋ, ಅಮವಾಸೆಗೋ. ಇವತ್ತು ಬಂಡೀಪುರದಲ್ಲಿದ್ರೆ, ನಾಳೆ ಅದ್ಯಾವುದೋ ರೆಸಾರ್ಟ್ನಲ್ಲಿ ಪಾತ್ರೆ ತೊಳೀತಿರ್ತಾನೆ. ಏನೋ ನಿನ್ನ ಕತೆ ಅಂದ್ರೆ, ಸಾರ್, ನಿನ್ನೆ ಒಂದು ಚಿರತೆ ನೋಡ್ದೆ ಸಾರ್, ಅದು ನಮ್ಮೂರಿ ( ಬಂಡೀಪುರ )ನದ್ದಲ್ಲ ಸಾರ್, ಹೊಳೆ ದಾಟಿ, ತಮಿಳುನಾಡಿನಿಂದ ಬಂದುಬಿಟ್ಟಿದೆ ಸಾರ್ ಅಂತಾನೆ. ಒಳ್ಳೇ ಹುಲಿ, ಹುಲೀ ಇದ್ದಂಗೆ ಐತೆ ಸಾರ್ ಅಂತಾನೆ. ಲೋ ನೀನು ನೋಡಿದ್ದು ಹುಲಿಯೇ ಇರ್ಬೇಕು ಕಣೋ ಅಂತಾ ನಕ್ಕಿದ್ರೆ, ಹಾ…ಇರಬಹುದು ಸಾರ್ ಅಂತಾ ಇನ್ನೂ ಜೋರಾಗಿ ನಗ್ತಾನೆ.

ಸಾರ್, ಇದ್ಯಾವುದೋ ಕಂತ್ರಿ ಕಂಪನಿ ಚಪ್ಪಲಿ ಸಾ…. ತಗಂಡು ಎರಡು ವರ್ಷ ಆಗಿಲ್ಲ, ಆಗ್ಲೇ ಕಿತ್ತೋಗದೆ ಅಂತಾನೆ. ಇವನಿಗೆ ದುಡ್ಡು ಕೊಟ್ರೆ ಮುಟ್ಟೋದೇ ಇಲ್ಲ. ಹೇ ಬಿಡಿ ಸಾರ್, ಇದನ್ನು ತಗಂಡು ನಾನೇನು ಮಾಡ್ಲಿ ಅಂತಾನೆ. ಒಂದೆರಡು ಬಾರಿ, ಸಾರ್… ಒಂದು ಲುಂಗಿ ಕೊಡಿಸಿ ಸಾರ್, ಇದು ಹರಿದುಹೋಗಿದೆ ಸಾ…ಅಂತಾನೆ. ಅಲ್ವೋ ದುಡ್ಡು ಕೊಟ್ರೆ ಬೇಡ ಅಂತೀಯಲ್ಲೋ ಅಂದ್ರೆ, ದುಡ್ಡು ಬೇಡಿ ಸಾರ್, ಅಂತಾನೆ.

ಅದ್ಯಾವುದೋ ಒಂದು ಮೊಬೈಲ್ ಇಟ್ಟುಕೊಂಡವ್ನೆ. ಅದು ಯಾವ ಕಾಲದ್ದೋ, ರಬ್ಬರ್ ಬ್ಯಾಂಡ್ ಹಾಕಿ, ಬ್ಯಾಟರಿ ಬೀಳದಂತೆ ಕಟ್ಟಿಕೊಂಡಿರ್ತಾನೆ. ಈ ಫೋನ್ಗೆ ಕಾಲ್ ಮಾಡಿದ್ರೆ, ಇನ್ ಕಮ್ಮಿಂಗ್ ಬಾರ್ ಅಂತಾ ಬರುತ್ತೆ. ಇನ್ನು ಇವನನ್ನು ಹುಡುಕೋದೆಲ್ಲಿ..? ಅವನಾಗೇ ಫೋನ್ ಮಾಡಿದರೆ ಅಷ್ಟೇ, ಯಾವಾಗಲೋ ಒಮ್ಮೊಮ್ಮೆ ಕಾಲ್ ಮಾಡ್ತಾನೆ. ಬಡ್ಡೀ ಮಗ, ಅದೆಷ್ಟು ತಿಂಗಳಾಗಿತ್ತು ಮಾತನಾಡಿ ಅಂತಾ, ಏನೋ ಬದುಕಿದ್ಯೇನೋ ಅನ್ನುತ್ತಿದ್ದಂತೇ, ಆ ಕಡೆಯಿಂದ, ಸಾರ್, ಇಲ್ಲಿ ನೆಟ್ವರ್ಕ್ ಇಲ್ಲ, ಆಮೇಲೆ ಮಾತನಾಡ್ತೇನೆ ಅಂತಾ ಕಾಲ್ ಕಟ್ ಮಾಡ್ತಾನೆ. ನಾನೇ ವಾಪಸ್ ಮಾಡಿದ್ರೆ, ತಮಿಳಿನಲ್ಲಿ, ನಾಟ್ ರೀಚಬಲ್ ಅಂತಾ ಬರುತ್ತೆ. ಅವನಾಗೇ ಕಾಲ್ ಮಾಡ್ಬೇಕು, ಹೆಂಗಿದ್ದೀರ ಸಾರ್… ನೀವು ಚೆನ್ನಾಗಿರಬೇಕು ಸಾರ್, ಅನ್ನ ಹಾಕಿದ ಧಣಿ ಸಾರ್ ಅಂತಾನೆ, ಸಾರ್….ನೆಟ್ವರ್ಕ್ ಇಲ್ಲ ಸಾರ್ ಅನ್ನುತ್ತಿದ್ದಂತೇ ಕಾಲ್ ಕಟ್ ಆಗುತ್ತೆ. ಅವನಾಗೇ ಕಾಲ್ ಮಾಡ್ತಾನೆ, ನಾನು ಏನೋ ಅನ್ನುತ್ತಿದ್ದಂತೇ, ನೆಟ್ವರ್ಕ್ ಇಲ್ಲಾ ಸಾರ್, ಆಮೇಲೆ ಮಾಡ್ತೇನೆ ಅಂತಾ ಕಟ್ ಮಾಡ್ತಾನೆ.

ಒಳ್ಳೇ ಲೂಸ್ ಬಡ್ಡೆತ್ತದ್ದು. ಮಾತಾಡುವಾಗ ವಾಯ್ಸ್ ಚೆನ್ನಾಗೇ ಕೇಳಿಸ್ತಾ ಇತ್ತು, ನೆಟ್ವರ್ಕ್ ಇಲ್ಲಾ ಅಂತಾನಲ್ಲ ಬಡ್ಡೀಮಗ ಎಂದು ಬೈದುಕೊಂಡು ಸುಮ್ಮನಾಗ್ತೇನೆ. ಬಂಡೀಪುರಕ್ಕೆ ಹೋದಾಗ, ಕಾಲ್ ಮಾಡಿದ್ರೆ ಕನೆಕ್ಟ್ ಆದ್ರೆ ತಾನೇ…?! ಯಾವ ಕಾಡಲ್ಲಿರುತ್ತಾನೋ, ಅದ್ಯಾವ ದೇವಸ್ಥಾನದ ಜಗುಲಿ ಮೇಲೆ ಮಲಗಿರ್ತಾನೋ…? ಇವತ್ತು ಬೆಳಿಗ್ಗೆಯೂ ಕಾಲ್ ಮಾಡ್ದ. ಅವನು ಹೇಳೋದು ಇಷ್ಟೇ. ಸಾರ್, ಇಲ್ಲಿ ನೆಟ್ವರ್ಕ್ ಇಲ್ಲಾ ಸಾರ್, ಆಮೇಲೆ ಕಾಲ್ ಮಾಡ್ತೇನೆ ಸಾರ್ ಅಂತಾ ಕಟ್ ಮಾಡಿದ.

ನಾನಂತೂ, ಮಂಡ್ಯದ ಅಷ್ಟೂ ಬೈಗುಳಗಳನ್ನೂ ಬಾಯಿಗೆ ಬಂದಂತೆ ಬೈದುಕೊಂಡೆ. ಆಮೇಲೆ ನನಗೇ ನಗು ತಡೀಲಾಗಲಿಲ್ಲ. ರಾಜೇ ಅಂತೂ, ರೀ…ನಿಮ್ಮ ಕಾಡಿನ ಫ್ರೆಂಡ್ಸ್ಗಳಲ್ಲಿ, ಇವನೊಂಥರಾ ವಿಚಿತ್ರ ಕಣ್ರೀ, ನೀವೇ ಒಂಥರಾ ಬಾಂಡ್ ಅಂದ್ರೆ, ಇವನೊಂಥರಾ ಬಾಂಡು ಅಂತಾ ನಗ್ತಾಳೆ.

‍ಲೇಖಕರು Avadhi

February 9, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಾನೂನು ‌ಕಾಯ್ದೆಯ ವಿರುದ್ಧ ಎಲ್ಡ್ರೆಡ್ ನ ಹೋರಾಟ…

ಕಾನೂನು ‌ಕಾಯ್ದೆಯ ವಿರುದ್ಧ ಎಲ್ಡ್ರೆಡ್ ನ ಹೋರಾಟ…

ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು. ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ...

ಕಥೆ – ಮಕ್ಳು ಮರೀಗೆ ಒಳ್ಳೇದಲ್ಲ…

ಕಥೆ – ಮಕ್ಳು ಮರೀಗೆ ಒಳ್ಳೇದಲ್ಲ…

ಡಾ. ಎಸ್.ಬಿ.ರವಿಕುಮಾರ್ ಒಂದು ಮಧ್ಯಾಹ್ನ ಉಪನಿರ್ದೇಶಕರ ಕಛೇರಿಗೆ ಸಲ್ಲಿಸಬೇಕಾಗಿದ್ದ ವರದಿಗಳನ್ನು ತಯಾರಿಸುತ್ತಿದ್ದೆ. ಪಕ್ಕದ ಕಿಟಕಿ ಕಡೆಯಿಂದ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This