ಸಿನಿಮಾ ತಯಾರಿಯ ತಮಾಷೆಗಳು…

-ಕೃಷ್ಣ ಮಾಸಡಿ

pic_cinema01ನಾನು ಬಾಲ್ಯದಲ್ಲಿ ಹೊನ್ನಾಳಿ ಮತ್ತು ರಾಂಪುರ ಜಾತ್ರೆಯಲ್ಲಿ ಹಾಕುತ್ತಿದ್ದ ಟೂರಿಂಗ್ ಟಾಕೀಸುಗಳಲ್ಲಿ ನೆಲದಲ್ಲಿ ಹಾಗೂ ಆಗಾಗ ಗ್ಯಾಲರಿಗಳಲ್ಲಿ ಕೂತು ಸಿನಿಮಾ ನೋಡುತ್ತಾ ಬಂದವನು. ರಾಜಕುಮಾರ್, ಕಲ್ಯಾಣ್ ಕುಮಾರ್, ಉದಯಕುಮಾರ್,ಲೀಲಾವತಿ, ಭಾರತಿ, ಜಯಂತಿ ನನ್ನ ಊಹೆಯ ಮತ್ತು ಕನಸಿನ ಲೋಕವನ್ನು ತೆರೆಯುತ್ತಿದ್ದ ಜನರು. ನಾನು ಲಂಕೇಶರ ಸಿನಿಮಾಗಳಿಗೆ ಕೆಲಸ ಮಾಡುತ್ತಲೇ ಇತರರ ಕೆಲವು ಸಿನಿಮಾಗಳಿಗೆ ಕೆಲಸ ಮಾಡಿದ್ದೆ. ಲಂಕೇಶರ ಸಿನಿಮಾಗಳು ಮತ್ತು ನಾನು ತೆಗೆದ ಸಿನಿಮಾ, ಸಾಕ್ಯ್ಷಚಿತ್ರಗಳು, ಧಾರಾವಾಹಿ ಮುಂತಾಗಿ ಕೆಲವು ಅನುಭವ, ನೆನಪುಗಳನ್ನು ಇಲ್ಲಿ ಹಂಚಿಕೊಳ್ಳಬಯಸುತ್ತೇನೆ.

ಎಸ್.ರಾಮಸ್ವಾಮಿ ಈಗಾಗಲೇ ಇಬ್ರಾಹಿಂ ಜೊತೆ ಸೇರಿಕೊಂಡು ಕನ್ನಡ ರಂಗಭೂಮಿಯ ಮೈಲಿಗಲ್ಲಾದ-ಸಂಕ್ರಾಂತಿ, ದೊರೆ ಈಡಿಪಸ್, ಜೋಕುಮಾರಸ್ವಾಮಿ ನಾಟಕಗಳನ್ನು ಬೆಂಗಳೂರಿನಲ್ಲಿ ಆಡಿಸಿದ್ದರು. ಶಿರಾಳಕೊಪ್ಪದಲ್ಲಿ ಜಮೀನಿದ್ದು, ಶಿವಮೊಗ್ಗ ಬಿಟ್ಟು ಬೆಂಗಳೂರಿಗೆ ವಾಸ ಬದಲಿಸಿದ್ದರು. ಅವರು ಸತ್ಯುರವರ ‘ಕನ್ನೇಶ್ವರರಾಮ’ ಮಾಡಿದಂದಿನಿಂದಲೂ ನನಗೆ ಪರಿಚಿತರು. 1978-79ರಲ್ಲಿ ಅವರಿಗೆ ಒಂದು ಸಿನಿಮಾ ಚಿತ್ರಕತೆ ಬರೆಯುವ ಅವಕಾಶ ಬಂತು. ಸರಿ, ಕೆಲಸವಿಲ್ಲದ ನನ್ನನ್ನು ಅವರ ಸಹಾಯಕ್ಕಾಗಿ ಆರಿಸಿಕೊಂಡರು. ಇಷ್ಟೆಲ್ಲಾ ದೀರ್ಘ ಮುನ್ನುಡಿ ಏಕೆಂದರೆ, ಆ ಸಿನಿಮಾದಲ್ಲಿ ಕಲ್ಯಾಣ್ ಕುಮಾರ್ ಉದಯಕುಮಾರ್, ಭಾರತಿ ನಟಿಸಿದರು.

ಆ ಚಿತ್ರದ ಹೆಸರು ‘ಚಿತ್ರಕೂಟ’. ಅದರ ನಿರ್ದೇಶಕರು ಗೌರಿಸುಂದರ್, ಮೃದುಮಾತಿನ ಇನ್ನೂಬ್ಬರ ಮನಸ್ಸನ್ನು ನೋಯಿಸದ ಗೌರಿಸುಂದರ್ ನನಗೆ ತಿಳಿದಂತೆ ಚಿತ್ರ ನಿರ್ಮಾಣ ಬಿಟ್ಟು ಈಗ ಪುಸ್ತಕ ಪ್ರಕಾಶನ ಮಾಡುತ್ತಿದ್ದಾರೆ. ಬೆಂಗಳೂರಿನ ಮಿನರ್ವದ ಕಾಮತ್ ಹೋಟೇಲಿನಲ್ಲಿ ನಮಗೆಲ್ಲಾ ಹಾಡುಗಳ ಸಂಯೋಜನೆ ಮತ್ತು ಚಿತ್ರಕಲೆ ತಯಾರಿಸಲು ಒಂದು ರೂಂ ಮಾಡಿದ್ದರು. ಮೈಸೂರು ಅನಂತಸ್ವಾಮಿ ಸಂಗೀತ ನಿರ್ದೇಶಕರು.

pic_cinema01ಚಿತ್ರದ ಸಂಕ್ಷಿಪ್ತ ಕತೆ-ಸಣ್ಣ ಊರಿನ ಒಂದು ಟೆಂಟ್ ನಲ್ಲಿ ಚಿಕ್ಕವಳಾಗಿದ್ದಾಗಳಿಂದ ಆಪರೇಟರೊಬ್ಬನ ಆರೈಕೆಯಲ್ಲಿ ಬೆಳೆದ ನಾಯಕಿ ಅಲ್ಲಿಗೆ ಬಂದ ಶೂಟಿಂಗ್ ನವರ ಕಣ್ಣಿಗೆ ಬಿದ್ದ ನಾಯಕಿಯಾಗುತ್ತಾಳೆ. ಅವಳ ಬದುಕು, ಕಷ್ಟ ಮತ್ತು ಪ್ರೇಮ, ಇದೇ ಹಂದರ.

ಬೆಳಗ್ಗೆ ಗೌರಿಸುಂದರ್ ಬರುತ್ತಿದ್ದರು. ಮೂರು ಜನ ಮಾತಾಡುವುದನ್ನು ನಾನು ಲೇಖನಿಗಿಳಿಸುತ್ತಿದ್ದೆ. ಕೆಲಸದಲ್ಲಿದ್ದ ಆನಂತಸ್ವಾಮಿ ಸಂಜೆ ಹೋಟೇಲಿಗೆ ಬರುತ್ತದ್ದರು. ಹೊಸ ರಾಗಗಳನ್ನು ಅನ್ವೇಷಿಸುವ ಮೊದಲು ಹಳೆಯ ನೆಚ್ಚಿನ ಹಾಡುಗಳನ್ನು ಹಾಡುತ್ತಿದ್ದರು ಹಾರ್ಮೋನಿಯಂ ಮುಂದೆ ಅವರು ತಲ್ಲೀನರಾಗುವ ಅವರ ಕ್ರಮ ಮತ್ತ ಉತ್ತಮ ಕವನಗಳ ಮೇಲಿದ್ದ ಅವರ ಪ್ರೀತಿ ನನಗೆ ಸದಾ ಹಸಿರು. ಕತ್ತಲು ಜಾಸ್ತಿಯಾದಂತೆ ರಾಮಸ್ವಾಮಿ ಕಳಚಿಕೊಳ್ಳಲು ನೋಡುತ್ತಿದ್ದರು. ಏಕೆಂದರೆ ರಂ ಬಾಟಲ್ ಬರುವ ಸಮಯವಾಗುತ್ತಿತ್ತು. ಗುಂಡು ಹಾಕದ ಅವರು, ಕುಡಿಯುವ ನನ್ನನ್ನು ಸಂಗೀತದೊಟ್ಟಿಗೆ ಬಿಟ್ಟು ಹೋಗುತ್ತಿದ್ದರು.

ರಾಮಸ್ವಾಮಿ, ಅನಂತಸ್ವಾಮಿ, ಪಾರ್ಥಸಾರಥಿ, ನಿಸಾರ್ ಅಹಮದ್ ಬಹಳ ಸ್ನೇಹಿತರು. ಗಾಂಧಿಬಜಾರಿನಲ್ಲಿ ಸೇರುತ್ತಿದ್ದರು. ಇವರು ಸೇರಿ ಪ್ರಥಮ ಕ್ಯಾಸೆಟ್ ‘ನಿತ್ಯೋತ್ಸವ’ ನಿರ್ಮಿಸಿದ್ದನ್ನು ಹತ್ತಿರದಿಂದ ನೋಡಿದ್ದೇನೆ.

ಮೊದಲು ಮೂಲ ಕತೆಯನ್ನು ಹಿಗ್ಗಿಸಿ ದೃಶ್ಯಗಳಿಗೆ ಸಂಬಾಷಣೆ ಬರೆಯುವುದೆಂದು ತೀರ್ಮಾನಿಸಿದೆವು. ಗೌರಿಸುಂದರ್ ಮೂಲಕತೆಯನ್ನು ತಂದುಕೊಟ್ಟರು. ರಾಮಸ್ವಾಮಿ ಬಹಳ ವಿನೋದಪ್ರಿಯರಾಗಿದ್ದು ಅವರು ಹೂಸುವುದನ್ನೇ ಅಗಾಗ ಸುದ್ದಿ ಮಾಡಿ ಅದನ್ನು ಬಿಟ್ಟು ನಾವು ರೂಂನಿಂದ ಹೊರಹೋಗುವಂತೆ ಮಾಡುತ್ತಿದ್ದರು. ಕತೆ ಓದುತ್ತಾ ಒಬ್ಬರೇ ನಗಾಡತೊಡಗಿದರು. ‘ಇಲ್ಲಿ ನೋಡು’ಎಂದು ಮೂಲಕತೆ ಕೊಟ್ಟರು. ಅದರಲ್ಲಿ ಹುಡುಗಿಯಾಗಿರುವ ನಾಯಕಿ ದನ ಮೇಯಿಸುವುದು ಮುಂತಾಗಿ ಮಾಡುತ್ತಿರುತ್ತಾಳೆ ಕರುವೊಂದನ್ನು ಹಿಡಿದುಕೊಂಡು ಬರುತ್ತಿರುವಾಗ ದೃಶ್ಯ ಬದಲಾಗಿ ಅವಳು ದೊಡ್ಡವಳಾಗಿ ಹಸುವನ್ನು

ಹಿಡಿದುಕೊಂಡು ಬರುವ ದೃಶ್ಯ ಕಂಡುಬರುತ್ತದೆ, ಎಂದು ಬರೆದು ಹಸು(ಹೆಣ್ಣು) ಎಂದು ಒತ್ತುಕೊಟ್ಟು ತಿದ್ದಿದ್ದು ಕೊಂಡು ಎಲ್ಲರೂ ನಕ್ಕರು. ಹಸು ಹೆಣ್ಣಲ್ಲದೆ ಗಂಡಾಗಿರುತ್ತದೆಯೇ?

pic_cinema01ಗೌರಿಸುಂದರ್ ಒಬ್ಬರೇ ಚಿತ್ರ ನಿರ್ಮಿಸಿದರೆಂದು ಕಾಣುತ್ತದೆ. ನಮ್ಮನ್ನೆಲ್ಲಾ ಹಣಕಾಸು ಊಟತಿಂಡಿಗಳಲ್ಲಿ ಚೆನ್ನಾಗೇ ನೋಡಿಕೊಂಡರು. ಹಾಗಾಗಿ ಅವರ ಕಷ್ಟ ನಮ್ಮ ಕಷ್ಟ ಅನ್ನುವ ಮಟ್ಟಕ್ಕೆ ನಾವೂ ಸಹ ಇದ್ದೆವು. ಚಿತ್ರಕತೆ-ಸಂಬಾಷಣೆ ಎಲ್ಲಾ ತಯಾರಾಯಿತು. ಎಲ್ಲರಿಗೂ ಕತೆ ಹೇಳುವ ಮತ್ತು ಅವರ ಅಭಿಪ್ರಾಯ ಕೇಳುವ ಸರದಿ ನಮಗೆ ದೊರೆಕಿತು. ನನಗೆ ನನ್ನ ಬಾಲ್ಯದ ಕನಸು ಹೀಗೆ ಯೌವನದಲ್ಲಿ ನಿಜವಾಗಿ ಕಂಡು ಉದಯಕುಮಾರ್, ಕಲ್ಯಾಣ್ ಕುಮಾರ್, ಭಾರತಿ ಅವರನ್ನು ಸಾಕ್ಷಾತ್ ಕಂಡು ಒಡನಾಡುವ ಗಳಿಗೆ ದೊರಕಿಬಿಟ್ಟಿತು. ಕೆಲವೊಮ್ಮೆ ನಿರ್ದೇಶಕರೇ ಕತೆ ಮುಂತಾಗಿ ಹೇಳುತ್ತಿದ್ದರು. ಭಾರತಿಯವರಿಗೆ ಮಾತ್ರ ನಾವು ಕತೆ ಹೇಳಬೇಕಾಗಿ ಬಂದಿತ್ತು. ಅವರು ಕತೆಯೆಲ್ಲಾ ಕೇಳಿ ‘ಸರಿ, ಆ ಚಿಕ್ಕ ಹುಡುಗಿಯ ಪಾತ್ರ ಯಾರ ಕೈಯಲ್ಲಿ ಮಾಡಿಸುತ್ತೀರಾ?’ ಎಂದು ಪ್ರಶ್ನೆ ಹಾಕಿದರು. ನಾವು ಅದು ನಿರ್ದೇಶಕರಿಗೆ ಬಿಟ್ಟ ವಿಚಾರವೆಂದೆವು. ಅವರು ಸ್ವಲ್ಪ ಹೊತ್ತು ಯೋಚಿಸಿ ‘ನೋಡಿ ಇಷ್ಟು ಒಳ್ಳೆ ಕತೆ, ಹುಡುಗಿ ದೊಡ್ಡವಳಾದ ಮೇಲೆ ನನ್ನ ತರ ಕಾಣಬೇಕಲ್ಲವೇ ಇನ್ನೇನು ಮಾಡಲಿಕ್ಕೇ ಆಗುತ್ತೇ ಅಲ್ವಾ. ನಿರ್ವಾಹವಿಲ್ಲದೆ ನಾನೇ ಲಂಗ ಹಾಕಿಕೊಂಡು ಮಾಡ್ತೇನೆ ಬಿಡಿ..’ ಅಂದರು.

ನಾನು, ರಾಮಸ್ವಾಮಿ ಮುಖಮುಖ ನೋಡಿಕೊಂಡೆವು. ನಂತರ ನಿರ್ದೇಶಕರು ಅವರನ್ನು ಒಪ್ಪಿಸಿದ ನಂತರ ಕನ್ನಡಪ್ರಭದ ನಾರಾಯಣಸ್ವಾಮಿಯವರ ಮಗಳು ಅಪರ್ಣರನ್ನು ಆ ಪಾತ್ರಕ್ಕೆ ಹಾಕಿದರು.

ಒಂದು ದಿನ ಗೌರಿಸುಂದರ್ ತುಂಬಾ ಚಿಂತೆಯಲ್ಲಿ ತೊಡಗಿದ್ದರಿಂದ ರಾಮಸ್ವಾಮಿ ‘ಯಾಕ್ ಸ್ವಾಮಿ ಭೇಝಾನ್ ಬೇಜಾರಲ್ಲಿದ್ದೀರೀ..’ ಎಂದು ಮಾತಿಗೆಳೆದರು. ‘ಅಯ್ಯೋ ಯಾಕ್ ಹೇಳಲಿ ನನ್ ಕಷ್ಟವಾ.. ಮೊದಲಿಗೆ ಇಷ್ಟು ಕೊಡುತ್ತೇನೆ. ಇದೊಂದು ಸಣ್ಣ ಬಜೆಟ್ ಚಿತ್ರ ಎಂದು ಹೇಳಿದ್ದರೂ ಜಾಸ್ತಿಕೊಡಿ ಅಂತಾ ಗಂಟು ಬಿದ್ದಿದ್ದಾರೆ.. ಈಗಲೇ ಹಿಂಗೆ ಆಮೇಲೆ ಡಬ್ಬಿಂಗ್ ಟೈಮಲ್ಲಿ..?’ ಅಂತಾ ಉದಯ ಕುಮಾರ್ ಕುರಿತು ಹೇಳಿದರು. ಅದನ್ನು ‘ನಾವು ನೋಡಿಕೊಳ್ಳುತ್ತೇವೆ ಬಿಡಿ ಎಂದು ರಾಮಸ್ವಾಮಿಗಳು ಹೇಳಿದರು. ಅಷ್ಟರಲ್ಲಿ ಸಿನಿಮಾ ತಯಾರಾಗಿ ಎಲ್ಲಾ ನಟನಟಿಯರಿಗೆ ಕೊಟ್ಟಾಗಿತ್ತು.

pic_cinema01ಉದಯಕುಮಾರ್ ಅವರದ್ದು ಟೆಂಟ್ ಆಪರೇಟರ್ ಪಾತ್ರ. ಅವರಿಗೆ ಒಳ್ಳೆಯ ಸಂಭಾಷಣೆಗಳನ್ನು ಬರೆಯಲಾಗಿತ್ತು. ಈಗ ಸಮಸ್ಯೆ ಇರುವುದರಿಂದ ಆ ಪಾತ್ರವನ್ನು ಮೂಕನನ್ನಾಗಿಸುವುದು, ಮುಂದೆ ಅವರು ಡಬ್ಬಿಂಗ್ ಸಮಯದಲ್ಲಿ ಕೊಡಬಹುದಾದ ಉಪಟಳದಿಂದ ಬಚಾವಾಗುವುದು ಇದೊಂದೇ ದಾರಿ ಎಂದು ಬಹಳ ಸೀಕ್ರೇಟ್ ಆಗಿ ತೀರ್ಮಾನಿಸಿದೆವು. ಸಿನಿಮಾದ ತಯಾರಿಕೆಯಲ್ಲಿ ಶೂಟಿಂಗ್ ನಷ್ಟೇ ಪ್ರಧಾನವಾಗಿ ಪ್ರದಾನವಾಗಿ ಅದೇ ನಟ-ನಟಿಯರು ಬಂದು ಅವರ ಪಾತ್ರಗಳಿಗೆ ದ್ವನಿಯನ್ನು ಕೊಡುತ್ತಾರೆ. ಇದನ್ನು ಡಬ್ಬಿಂಗ್ ಎಂದು ಕರೆಯುತ್ತಾರೆ.

ಮಿನರ್ವದಿಂದ ನಡೆದು ಹೋಗುವಷ್ಟು ದೂರದಲ್ಲಿ ಉದಯಕುಮಾರ್ ಮನೆ. ಡಾನ್ ಕ್ವಿಕ್ಸೋಟೆಯನ್ನು ಸಾಂಚೋಪಾಂಚಾ ಹಿಂಬಾಲಿಸಿದಂತೆ ರಾಮಸ್ವಾಮಿಯನ್ನು ನಾನು ಹಿಂಬಾಲಿಸಿದೆ. ಅಜಾನುಬಾಹು ಮತ್ತು ಗಡಸು ದ್ವನಿಯವರಾದ ಉದಯಕುಮಾರ್ ನಮ್ಮನ್ನು ಬಹಳ ಆದರದಿಂದ ಕಂಡರು. ನಾವು ಬರೆದ ಚಿತ್ರಕತೆ ಸಂಭಾಷಣೆ ಗಳನ್ನು ಅದರಲ್ಲೂ, ಅವರ ಪಾತ್ರಕ್ಕೆ ಬರೆದ ಸಂಭಾಷಣೆಗಳನ್ನು ಒಂದೇ ಸಮನೆ ಹೊಗಳಲಿಕ್ಕೆ ತೊಡಗಿದರು. ನಮಗೇ ಬೇಜಾರಾಗುವಷ್ಟು ಮುಖಮುಖ

ನೋಡಿಕೊಂಡೆವು. ಮೆಲ್ಲಗೆ ರಾಮಸ್ವಾಮಿ ‘ನಿಜ ನಿಜ ಚೆನ್ನಾಗಿದಾವೆ..ಯಾಕೇಂದ್ರೆ ಅವು ಹೇಳುವುದು ಅಲ್ಲ ನೋಡಿ ಅದಕ್ಕೆ.. ಹೇಳುವುದೇ ಆದರೆ ಅಷ್ಟು ಚೆನ್ನಾಗಿ ಬರ್ತಿರಲಿಲ್ಲ ಅನ್ಸುತ್ತೆ..’ ಎಂದು ಅತ್ಯಂತ ದೈರ್ಯ ತಗೊಂಡು ಹೇಳಿದರು.

ಒಂದು ಕ್ಷಣ ಉದಯಕುಮಾರ್ ಸಿನಿಮಾಗಳಲ್ಲಿಯಂತೆಯೇ ಕಣ್ಣುಮುಚ್ಚಿ ‘ಎಂಥ ಅದ್ಬುತ ಮಾತುಗಳು, ಏನ್ ಸಂಭಾಷಣೆ ಛೇ.. ನಾನು ಹೇಳುವುದೇ ಸರಿ.. ಎಂದು ಹಠಕ್ಕೆ ಬಿದ್ದರು. ಇಲ್ಲಾ..ಇಲ್ಲಾ ಕತೆಯ ಓಟ ಮತ್ತು ನಿಮಗೆ ಆ ಪಾತ್ರದ ಗುರಿಯಿರಲಿ ಎಂದೇ ಸಂಭಾಷಣೆ ಬರೆದದ್ದು ಬಿಟ್ಟರೆ ಇನ್ನೇನಿಲ್ಲ..ನೀವು ಮಾತಾಡಿದರೆ ಅಷ್ಟೊಂದು ತ್ಯಾಗಮಯಿ ಪಾತ್ರ ಏಕದಮ್ ಢಮಾರ್ ಆಗಿಬಿಡತ್ತೆ. ಎಂದು ಸಾಹಸಮಾಡಿ ಅವರನ್ನು ಮೂಕಪಾತ್ರಕ್ಕೆ ಒಪ್ಪಿಸಿ ಬಂದೆವು. ಅದರ ಪರಿಣಾಮವಾಗಿ ಅವತ್ತು ನಮ್ಮ ರಮ್ ಸಮಾರಂಭದಲ್ಲಿ ಅಂದು ಯಥಾರೀತಿ ಕಳಚಿಕೊಳ್ಳದೆ, ಆದರೆ ಕೂತು ಕುಡಿಯದೆ ರಾಮಸ್ವಾಮಿ ಸಂತೋಷಪಟ್ಟರು.

pic_cinema01ಬೆಳಗ್ಗೆ ಬಾಗಿಲು ತೆರೆದಾಗ ಉದಯಕುಮಾರ್ ಬಂದಿದ್ದರು. ಅವರ ಸರ್ವಿಸ್ ನಲ್ಲಿ ನಮ್ಮಂತ ಜನರನ್ನೆಷ್ಟು ನೋಡಿದ್ದರೋ ಏನು ಕತೆಯೋ ‘ನೋಡಿ ನಾನು ಪೂರ್ತಿ ಮೂಕನಾದರೆ ಅಷ್ಟೊಂದು ಅಭಿನಯ ತೋರಿಸಲು ಆಗುವುದಿಲ್ಲ. ಹಾಗಾಗಿ ಅರ್ದ ಮಾತುಗಳನ್ನು ತೊದಲುತ್ತಾ ಬ್ಬೆ..ಬ್ಬೆ ಎಂದು ಹೇಳುತ್ತೇನೆ.. ಡಬ್ಬಿಂಗ್ ಗೆ ಕೈಕೊಡ್ತೇನೆ ಅಂದ್ಕೋಬೇಡಿ..’ ಎಂದು ಹೇಳಿದರು. ಒಮ್ಮೆ ಅವರನ್ನು ಮೂಕರಾಗಿಸಿದ್ದ ನಮಗೆ ಅರ್ದಂಬರ್ದ ಮೂಕರನ್ನಾಗಿಸೋದು ಸರಿ ಕಾಣಲಿಲ್ಲ. ಕೊನೆಗೆ ಅವರು ಮೂಕರಾಗಿಯೇ ಪಾತ್ರ ಮಾಡಲು ಒಪ್ಪಿದರು. ಚಿತ್ರದ ಶೂಟಿಂಗ್ ಬನ್ನೇರುಘಟ್ಟದ ಬಳಿ ನಡೆದು ಚಿತ್ರ ತೆರೆ ಕಂಡಿತು. ಸಹಜವಾಗಿ ಖ್ಯಾತ ನಟ-ನಟಿಯರ ಅಭಿನಯವನ್ನು ಹತ್ತಿರದಿಂದ ನೋಡುವ ಕನಸು ನೆರೆವೇರಿತ್ತು.

ಎಸ್.ರಾಮಸ್ವಾಮಿ, ಮೈಸೂರು ಅನಂತಸ್ವಾಮಿ. ಉದಯಕುಮಾರ್, ಕಲ್ಯಾಣ್ ಕುಮಾರ್ ಇವರುಗಳು ಈಗ ನಮ್ಮಡನೆ ಇಲ್ಲ.

‍ಲೇಖಕರು avadhi

July 3, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. pranoo

    ಕನ್ನಡಪ್ರಭದ ನಾರಾಯಣಸ್ವಾಮಿಯವರ ಮಗಳು ಅಪರ್ಣ ಅಂದರೆ- ಟಿವಿ ಧಾರಾವಾಹಿಗಳಲ್ಲಿ ನಟಿಸುವ, ಅಧ್ಭುತ ಕನ್ನಡ ಮಾತನಾಡುವ ‘ಅಪರ್ಣಾ ವಸ್ತಾರೆ’ ಯೋ? ಹಾಗೆ ನಾರಾಯಣಸ್ವಾಮಿಯವರು ಕ ಪ್ರ ದ ಸಂಪಾದಕರಾಗಿದ್ದರೋ, ಅಥವಾ ಓನರೊ?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: