ಸಿನಿಮಾ ಯಾನ

ಡಾ. ಕೆ. ಪುಟ್ಟಸ್ವಾಮಿ

ಎಪ್ಪತ್ತೈದರ ನೆವದಲ್ಲಿ…

ಇಪ್ಪತ್ತನೆಯ ಶತಮಾನದ ಕತೆ ಹೆಳುವವರು ಸಿನಿಮಾವನ್ನು ಬಿಟ್ಟು ಮುಂದುವರೆಯುವಂತಿಲ್ಲ. ಕಾಲದೇಶ ಮತ್ತು ನೆನಪುಗಳನ್ನು ಹಲವು ಬಗೆಯಲ್ಲಿ ಒಡೆದು ಕಟ್ಟಿದ ಈ ಮಾಧ್ಯಮ ನಮ್ಮ ಕಣ್ಣುಕಿವಿಗಳನ್ನು ಜೊತೆಗೆ ಸಮಾಜದ ನಡಾವಳಿಗಳನ್ನು ಪ್ರಭಾವಿಸಿರುವ ಬಗೆಯನ್ನು ತಿಳಿಯುವುದು ಅಗತ್ಯ.

ಹಾಗೆ ಇದು ಸಂಗೀತ ನೃತ್ಯಗಳಂತೆ ಕಾಲಬದ್ಧವಲ್ಲ. ನಾಟಕದಂತೆ ದೇಶಬದ್ಧವೂ ಅಲ್ಲ. ಈ ಎಲ್ಲವನ್ನೂ ಒಳಗೊಂಡೂ ಮೀರಿನಿಂತ ಸಿನಿಮಾವನ್ನು ಕಲೆಯನ್ನಾಗಿ, ಸಮುಹ ಮನರಂಜನೆಯ ಮಾಧ್ಯಮವನ್ನಾಗಿ, ಉದ್ಯಮವನ್ನಾಗಿ, ಸಾಮಾಜಿಕ ಪರಿವರ್ತನೆಯ ಸಾಧನವನ್ನಾಗಿ ಹಲವು ನಿಟ್ಟಿನಲ್ಲಿ ನೋಡಿರುವುದುಂಟು.

ಇಂತಹ ಸಿನಿಮಾದ ಚರಿತ್ರೆ ಬರೆಯುವುದು ನಾವು ತಿಳಿದಷ್ಟು ಸುಲಭವಲ್ಲ. ಏಕೆಂದರೆ ಯಾವುದನ್ನು ಕುರಿತು ಮಾತನಾಡುತ್ತಿರುತ್ತಾರೋ ಆ ಸಿನಿಮಾಗಳು ಈಗ ಹೀಗೆ ನಮ್ಮ ನೋಟಕ್ಕೆ ಸಿಗುವಂತೆ ಇರುವುದಿಲ್ಲ. ಇದು ಒಂದು ಬಗೆಯಲ್ಲಿ ತನಗೆ ಕಂಡದ್ದನ್ನು ಯಾರೋ ನಮಗೆ ಹೇಳುವ ಮಾದರಿ. ಅವರು ನೋಡಿದವರಾದ್ದರಿಂದ ಅವರು ಹೇಳಿದ್ದನ್ನು ನಾವು ನಂಬಬೇಕು.

ಆದರೆ ಅವರು ಹೇಳುವುದು ಸುಳ್ಳೋ ದಿಟವೋ ಎಂಬುದಕ್ಕಿಂತ ಅವರು ಏನನ್ನು ಹೇಳಲು ಆಯ್ದುಕೊಳ್ಳುತ್ತಾರೆ ಮತ್ತು ಏನೆಲ್ಲವನ್ನು ಹೇಳದೇ ಬಿಡುತ್ತಾರೆ ಎಂಬುದು ಮುಖ್ಯವಾಗಿಬಿಡುತ್ತದೆ. ಅಲ್ಲದೆ ಸಿನಿಮಾದ ಚರಿತ್ರೆ ಅದರ ಒಳ ಹೂರಣದ ಕತನವಾಗಿರುವಂತೆ ಅದರ ನಿರ್ಮಾಣ ಸಂಬಂಧದ ವಿವರಗಳ ಕಥನವೂ ಆಗಿರುತ್ತದೆ. ಗೆಳೆಯ ಪುಟ್ಟಸ್ವಾಮಿಯವರ ಈ ಕಥನ ಈ ಎರಡೂ ನೆಲೆಗಳನ್ನೂ ತೂಗಿಸಿಕೊಂಡು ಹೋಗಿರುವ ಪರಿಯನ್ನು ಯಾರಾದರೂ ಗುರುತಿಸಬಹುದು.

ಹಾಗೆ ನೋಡಿದರೆ ಸಿನಿಮಾಗೂ ಭಾಷೆಗೂ ನೇರ ಸಂಬಂಧವಿರುವುದಿಲ್ಲ. ಈ ಮಾತನ್ನು ಕೊಂಚ ಎಚ್ಚರಿಕೆಯಿಂದ ಹೇಳುತ್ತಿದ್ದೇನೆ. ಸಿನಿಮಾದಲ್ಲಿ ಪಾತ್ರಗಳು ಗೊತ್ತಾದ ಸಾಮಾಜಿಕ ಸನ್ನಿವೇಶದಲ್ಲಿ ಇರುತ್ತವೆಯಾದ್ದರಿಂದ ಒಂದು ಭಾಷೆಯನ್ನು ಮಾತಾಡುತ್ತವೆ ಎನ್ನುವುದು ದಿಟ.

ಆದರೆ ಕನ್ನಡ ಸಿನಿಮಾ, ತಮಿಳು ಸಿನಿಮಾ. ಮರಾಠಿ ಸಿನಿಮಾ ಎಂದು ಬೇರೆ ಮಾಡಿ ನೋಡಲು ಬರುವುದೇ? ಈ ಪ್ರಶ್ನೆಗೆ ಎರಡು ರೀತಿಯ ಉತ್ತರ ಸಾಧ್ಯ. ಸಿನಿಮಾವನ್ನು ಒಂದು ತಂತ್ರಜ್ಞಾನವೆಂದು ನೋಡುವುದಾದರೆ ಬೇರೆ ಬೇರೆ ಭಾಷೆಯ ಸಿನಿಮಾಗಳು ಎಂದು ಇರುವುದಿಲ್ಲ ಆದರೆ ಸಿನಿಮಾವನ್ನು ಸಂಸ್ಕೃತಿಯ ನೆಲೆಯಲ್ಲಿ ನೋಡಿದಾಗ ಭಾಷೆಯ ಚೌಕಟ್ಟಿನಲ್ಲಿ ನೋಡುವುದು ಸಾಧ್ಯ.

’ಸಿನಿಮಾ ಯಾನ’ ಎರಡನೆಯ ನೆಲೆಯನ್ನು ಆಯ್ದುಕೊಂಡ ಕಥನ. ಆದ್ದರಿಂದ ಇಲ್ಲಿ ಕನ್ನಡ ಸಿನಿಮಾಗಳ ಕಥನವಿದೆ.

ಚರಿತ್ರೆಯನ್ನು ಬರೆಯುವವರು ಕಾಲಾನುಕ್ರಮಣಿಕೆಯನ್ನು ಆಯ್ದುಕೊಳ್ಳುತ್ತಾರೆ. ಯಾವುದು ಮೊದಲು ಯಾವುದು ಬಳಿಕ ಎಂದು ಹೇಳುವ ಬಗೆಯದು. ಆದರೆ ಹೀಗಲ್ಲದೆ ಕನ್ನಡ ಸಿನಿಮಾಗಳನ್ನು ರೂಪಿಸಿದ ಹಲವು ನೆಲೆಗಳನ್ನು       ಆಧಾರವಾಗಿಟ್ಟುಕೊಂಡು

ಅವೆಲ್ಲವನ್ನೂ ಬೇರೆಬೇರೆಯಾಗಿ ನೋಡುವ ಬಗೆ ಇನ್ನೊಂದು. ಸಿನಿಮಾದಲ್ಲಿ ನಟ, ನಟಿಯರಿರುತ್ತಾರೆ; ನಿರ್ದೇಶಕರಿರುತ್ತಾರೆ; ಚಿತ್ರಕಥೆ ಸಂಭಾಷಣೆಗಳನ್ನು ಬರೆದವರಿರುತ್ತಾರೆ; ಸಂಗೀತ ನಿರ್ದೇಶಕರಿರುತ್ತಾರೆ; ಹಲವು ಬಗೆಯ ತಂತ್ರಜ್ಞರಿರುತ್ತಾರೆ.                                     ಇವೆಲ್ಲ ನೆಲೆಗಳಿಂದಲೂ ಕಥನವೊಂದನ್ನು ಕಟ್ಟಲು ಬರುತ್ತದೆ. ’ಸಿನಿಮಾ ಯಾನ’ದಲ್ಲಿ ಎರಡನೆಯ ಹಾದಿಯನ್ನು ಹಿಡಿಯಲಾಗಿದೆ. ಇಲ್ಲಿನ ವಿವರಗಳಿಂದ ಮತ್ತೊಂದು ಸಂಗತಿ ನಮ್ಮ ಗಮನಕ್ಕೆ ಬರುವಂತಿದೆ. ಅದನ್ನಿಲ್ಲಿ ಹೇಳಬೇಕಿದೆ.

ಎಪ್ಪತ್ತೈದು ವರ್ಷಗಳ ಕನ್ನಡ ಸಿನಿಮಾಗಳ ಸಾಧನೆಯನ್ನು ಕುರಿತು ಮಾತನಾಡುವ ಹಲವರು ಕನ್ನಡದಲ್ಲಿ ಬಂದ ಶ್ರೇಷ್ಠ ಸಿನಿಮಾ, ಇಲ್ಲಿನ ಶ್ರೇಷ್ಠ ನಿರ್ದೇಶಕರು ಮುಂತಾದವರನ್ನು ಚರ್ಚಿಸುತ್ತಾರೆ. ಬುದ್ಧಿಜೀವಿಗಳು, ಸಿನಿಮಾ ಮಾಧ್ಯವನ್ನು ಅರಿತವರು ಕನ್ನಡದಲ್ಲಿ ತಯಾರಿಸಿದ ಸಿನಿಮಾಗಳನ್ನು ಹೆಮ್ಮೆಯಿಂದ ಎತ್ತಿ ಹೇಳುತ್ತಾರೆ. ಈ ಬಗೆಯ ಇತಿಹಾಸ ’ಸಂಸ್ಕಾರ’ದಿಂದ ಮೊದಲಾಗುತ್ತದೆ.

ಆದರೆ ಈ ಇತಿಹಾಸದಲ್ಲಿ ಜಗ ಪಡೆಯದ ನೂರಾರು ಕನ್ನಡ ಸಿನಿಮಾಗಳು ದಿಟವಾಗಿ ಸಿನಿಮಾ ಮಾಧ್ಯಮವನ್ನು ಕನ್ನಡೀಕರಿಸುವ ಕೆಲಸವನ್ನು ಮಾಡಿವೆ. ಅಂದರೆ ಕನ್ನಡ ಸಮಾಜ ಒಪ್ಪಿಕೊಂಡು ಬಂದ ದೃಶ್ಯ ಮತ್ತು ಶ್ರವ್ಯ ಕಲೆಗಳ ಪರಂಪರೆಯೊಡನೆ ನಿಕಟ ಸಂಬಂದವನ್ನು ಉಳಿಸಿಕೊಳ್ಳುತ್ತಲೇ ಸಿನಿಮಾವನ್ನು ಹೊಸದಾಗಿ ವ್ಯಾಖ್ಯಾನಿಸಿವೆ.

ಸಾಹಿತ್ಯ ವಿಮರ್ಶೆ ಹುಟ್ಟುಹಾಕಿರುವ ’ನಾಟಕೀಯ’ ಮತ್ತು ’ಸಿನಿಮೀಯ’ ಎಂಬ ಎರಡು ಪದಗಳನ್ನು ನೋಡಿ. ಇವೆರಡೂ ಪದಗಳ ತಿರುಳನ್ನು ಗಮನಿಸಿದರೆ ಸಾಹಿತ್ಯ ವಿಮರ್ಶೆ ಮಂಡಿಸುತ್ತಿದ್ದ ವಾಸ್ತವತೆಯ ವ್ಯಾಖ್ಯೆಗೆ ಹೊಂದಿಕೊಳ್ಳದ ಅನುಭವಗಳನ್ನು ಸಿನಿಮಾ ಮಂಡಿಸುತ್ತಿದೆ ಎಂಬ ತಿಳುವಳಿಕೆ ಅಡಕವಾಗಿರುವಂತೆ.

ಆದರೆ ಸಿನಿಮಾ ಇಪ್ಪತ್ತನೆಯ ಶತಮಾನದ ಮೊದಲ ಹೊತ್ತಿಗೆ ಚಿತ್ರಕಲೆಗಳಲ್ಲಿ ಉದ್ದ ಮತ್ತು ಅಗಲಗಳೆಂಬ ಎರಡು ಆಯಾಮಗಳ ಜೊತೆಗೆ ಬಣ್ಣದಲ್ಲಿ ಆಳವೆಂಬ ಮೂರನೆಯ ಆಯಾಮವನ್ನು ತರುವ ಬಗೆಯನ್ನು ತಿಳಿದುಕೊಳ್ಳಲಾಗಿತ್ತು. ಆದರೆ ಪಾರಂಪರಿಕ ಚಿತ್ರಕಲೆಗಳು ಆಳವೆಂಬ ಮೂರನೆಯ ಆಯಾಮದ ಬಗೆಗೆ ತಲೆಕೆಡಿಸಿಕೊಂಡಿರಲಿಲ್ಲ. ಭಿತ್ತಿಚಿತ್ರಗಳನ್ನು ನೋಡಿದರೆ ಈ ಅಂಶ ನಮಗೆ ಗೊತ್ತಾಗುತ್ತದೆ.

ನಮ್ಮ ಸಿನಿಮಾಗಳು ಕೂಡಾ ಕಪ್ಪು ಬಿಳುಪು ಚಿತ್ರಗಳಲ್ಲಿ ನಮ್ಮೆದುರು ಮಂಡಿಸುತ್ತಿದ್ದುದು ಎದೇ ಬಗೆಯ ಆಳದ ಭ್ರಮೆಯನ್ನು ಉಂಟು ಮಾಡದ ಲೋಕವನ್ನು. ಸಿನಿಮಾಗಳನ್ನು ನೋಡುತ್ತಿದ್ದ ಮೊದಮೊದಲ ನೋಟಕರು ಅಲ್ಲಿ ವೇಗವಾಗಿ ಬರುತ್ತಿದ್ದ ವಾಹನಗಳು ತಮ್ಮ ಮೇಲೇ ಬಂದವೇನೋ ಎಂಬ ಭ್ರಮೆಗೆ ಒಳಗಾಗಿ ಹೆದರಿ ಓಡಿಹೋದರೆಂದು ಕತೆ ಕಟ್ಟಿ ಹೇಳುತ್ತಾರೆ.

ಆದರೆ ಸಿನಿಮಾಗಳು ರೂಪಿಸಿಕೊಡುವ ಭ್ರಮೆ ಮತ್ತು ವಾಸ್ತವಗಳ ನೆಲೆಯನ್ನು ಎಷ್ಟು ಬೇಗ ನಮ್ಮ ನೋಟಕರು ಒಪ್ಪಿಕೊಂಡರೆಂದರೆ ಅವರೊಡನೆ ಸಂವಾದಿಸುವುದು ನಮ್ಮ ಸಿನಿಮಾ ಕರ್ತೃಗಳಿಗೆ ಸುಲಭವಾಯಿತು. ನಾವೀಗ ಜನಪ್ರಿಯ ಎಂದು ಪಟ್ಟಿಕಟ್ಟಿ ನೂರಾರು ಸಿನಿಮಾಗಳನ್ನು ನಾವು ಅರಿತುಕೊಳ್ಳಬೇಕಾದ ಬಗೆಯನ್ನು ಬದಲಿಸಿಕೊಳ್ಳಬೇಕಿದೆ. ನನ್ನ ಓದಿಗೆ ’ಸಿನಿಮಾ ಯಾನ’ದಲ್ಲಿ ಇಂತಹ ಗ್ರಹಿಕೆಗೆ ಅನುವು ಮಾಡಿಕೊಡುವ ಸಾಮಾಗ್ರಿ ತುಂಬ ಇದೆ.

ಕಿವಿಯ ನೆಲೆಯಲ್ಲಿದ್ದ ಪುರಾಣ, ಐತಿಹ್ಯ, ಚರಿತ್ರೆ, ಜಾನಪದಗಳನ್ನು ಕಣ್ಣಿನ ನೆಲೆಗೆ ತರುವ ಕೆಲಸವನ್ನು ಒಂದು ರೀತಿಯಲ್ಲಿ ಪಾರಂಪರಿಕ ದೃಶ್ಯಕಲೆಗಳು ಮಾಡಿದ್ದವು. ಆದರೆ ಸಿನಿಮಾದ ತಂತ್ರಜ್ಞಾನ ಒದಗಿಸಿದ ಅಪಾರವಾದ ಬೀಸಿನಿಂದಾಗಿ ಹೀಗೆ ಕಣ್ಣಿನ ಅನುಭವಗಳ ನೆಲೆಗೆ ಪುರಾಣ ಇತ್ಯಾದಿಗಳನ್ನು ತರುವ ಬಗೆಯೇ ಬೇರೆಯಾಗಿ ಬಿಟ್ಟಿತು. ಈ ಅವಕಾಶ ಮತ್ತು ತೆರಪನ್ನು ನಮ್ಮ ಸಿನಿಮಾಗಳು ಹೇಗೆ ತುಂಬಿದವು ಎನ್ನುವುದನ್ನು ನಾವಿನ್ನೂ ಅಭ್ಯಾಸ ಮಾಡಬೇಕಿದೆ.

ಹೀಗೆ ಕಿವಿಯ ಅನುಭವಗಳನ್ನು ಕಣ್ಣಿನ ಅನುಭವಗಳನ್ನಾಗಿ ಬದಲಿಸುವಾಗ ಕೇವಲ ಮಂಡನೆಯ ಕೆಲಸವನ್ನು ಮಾತ್ರ ಮಾಡದೆ ಮರು ವ್ಯಾಖ್ಯಾನದ ಕೆಲಸವನ್ನೂ ನಮ್ಮ ಸಿನಿಮಾಗಳು ಮಾಡಿವೆ. ಬಸವಣ್ಣ, ಕನಕದಾಸ, ಪುರಂದರದಾಸ, ಕಬೀರ ಮುಂತಾದವರನ್ನು ಸಿನಿಮಾಗಳು ಮಂಡಿಸಿರುವ ಬಗೆಯನ್ನು ನೋಡಿ.

ಅವರು ಚರಿತ್ರೆಗೆ ಬದ್ಧರಾಗಿಯೂ ಬದ್ಧರಾಗದೆ ಉಳಿಯುವಂತೆ ಮಾಡುವ ಒಂದು ವಿಶಿಷ್ಟ ಸಾಧ್ಯತೆಯನ್ನು ಸಿನಿಮಾಗಳು ಕಂಡುಕೊಂಡವು. ಈ ಮಾತನ್ನು ಚರಿತ್ರೆ, ಜಾನಪದ ವಸ್ತುಗಳನ್ನು ಆಧರಿಸಿದ ಸಿನಿಮಾಗಳಿಗೂ ಹೊಂದಿಸಿಕೊಳ್ಳಬಹುದಾಗಿದೆ. ಒಟ್ಟಾರೆ ಹೇಳಬೇಕಿದ್ದಿಷ್ಟೆ. ನಮ್ಮ ಸಿನಿಮಾಗಳು ಜನರ ಸ್ಮೃತಿಯನ್ನು ತಮ್ಮದೇ ಆದ ರೀತಿಯಲ್ಲಿ ಉತ್ಖನನ ಮಾಡಿದವು. ಜೊತೆಗೆ ಜನರಿಗೆ ಅವರವರ ಸ್ಮೃತಿಗಳನ್ನು ಗ್ರಹಿಸಿಕೊಳ್ಳಲು ದಾರಿಗಳನ್ನು ಹುಡುಕಿಕೊಟ್ಟವು.

ಜಗತ್ತಿನ ಯಾವ ಭಾಷೆಯ ಸಿನಿಮಾಗಳಲ್ಲೂ ಇಂಡಿಯಾದ ಸಿನಿಮಾಗಳಲ್ಲಿರುವಂತೆ ಹಾಡುಗಳನ್ನು ಬಳಸುವುದಿಲ್ಲ. ಸರಿ ತಾನೇ. ಆದರೆ ಇದು ನಮ್ಮ ನಾಟಕ, ಯಕ್ಷಗಾನ, ಹರಿಕತೆಗಳಲ್ಲಿ ಇದ್ದದ್ದೇ ಎಂದು ತಿಳಿದು ಸುಮ್ಮನಾಗುವಂತಿಲ್ಲ. ಹಾಡುಗಳನ್ನು ಸಿನಿಮಾಗಳು ಬಳಸುವ ಮತ್ತು ಮಂಡಿಸುವ ಬಗೆಯನ್ನು ಎಚ್ಚರದಿಂದ ನೋಡಬೇಕಿದೆ. ಇದರಲ್ಲಿ ಹಲವಾರು ಸಾಧ್ಯತೆಗಳನ್ನು ನಮ್ಮ ಸಿನಿಮಾಗಳು ಕಂಡುಕೊಂಡಿವೆ.

ಈ ಹಾಡುಗಳು ಸಿನಿಮಾದಲ್ಲಿದ್ದರೂ ಅಲ್ಲಿಂದ ಸಿಡಿದು ಹೊರಬಂದು ತಮ್ಮದೇ ಆದ ಬೇರೆ ಜಗತ್ತನ್ನು ಕಟ್ಟಿಕೊಂಡಿವೆ. ಇದೆಲ್ಲ ಆದುದು ಹೇಗೆ? ಆ ಹಾಡುಗಳ ಭಾಷಿಕ ನೆಲೆಯ ಚರ್ಚೆಗಳನ್ನು ನಾವಿನ್ನೂ ಆರಂಬಿಸಿಲ್ಲ. ಸಿನಿಮಾ ಮಾಧ್ಯಮದಲ್ಲಿ ಅವುಗಳ ಸೇರ್ಪಡೆ ಮತ್ತು ಅವುಗಳ ಮಂಡನಾಕ್ರಮಗಳನ್ನು ಅರಿಯುವ ಮಾತಂತೂ ದೂರ ಉಳಿದಿದೆ.

ಸಿನಿಮಾಗಳನ್ನು ಒಳ್ಳೆಯ ಇಲ್ಲವೇ ಕೆಟ್ಟ ಎಂದಾಗಲೀ, ಕಲಾತ್ಮಕ ಇಲ್ಲವೇ ಜನಪ್ರಿಯ ಎಂದಾಗಲೀ ಗ್ರಹಿಸಿ ಚರ್ಚಿಸುವುದರಿಂದ ಆಗುವ ಉಪಯೋಗ ಕಡಿಮೆ. ಕಳೆದ ಮುಕ್ಕಾಲು ಶತಮಾನದ ಕನ್ನಡ ಸಂಸ್ಕೃತಿಯೊಡನೆ ಈ ಸಿನಿಮಾಗಳು ಹೊಂದಿರುವ ನಂಟನ್ನು ಅರಿತುಕೊಳ್ಳುವತ್ತ ಹೆಜ್ಜೆಗಳನ್ನು ಇಡಬೇಕಿದೆ.

ಈ ದಿಕ್ಕಿನಲ್ಲಿ ಗೆಳೆಯ ಡಾ. ಪುಟ್ಟಸ್ವಾಮಿ ಅವರ ಈ ’ಸಿನಿಮಾ ಯಾನ’ ಒಂದು ಮುಖ್ಯ ಹೆಜ್ಜೆ ಎಂದು ನಾನು ತಿಳಿದಿದ್ದೇನೆ. ಅಪೂರ್ವ ಲವಲವಿಕೆಯ ಬರಹವಿರುವ ಈ ಹೊತ್ತಿಗೆ ಇಂತಹ ಹಲವು ಯಾನಗಳನ್ನು ಪ್ರಚೋದಿಸುವ ಕಸುವು ಇದೆ. ಈ ಸಾಧನೆಗಾಗಿ ಈ ಗೆಳೆಯರನ್ನು ನಾನು ಮನಸಾರೆ ಅಭಿನಂದಿಸುತ್ತೇನೆ .

– ಡಾ.ಕೆ.ವಿ. ನಾರಾಯಣ

‍ಲೇಖಕರು avadhi

July 19, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಒಣ ನಾಡಿಗೆ ಹಸಿ ಬರ: ಒದಗೀತೆ ಪರಿಹಾರ?

ಒಣ ನಾಡಿಗೆ ಹಸಿ ಬರ: ಒದಗೀತೆ ಪರಿಹಾರ?

ಡಿ. ಎಮ್. ನದಾಫ್ ಹವಾಮಾನ ವೈಪರೀತ್ಯಗಳ ಕಾರಣದಿಂದಾಗಿ ಋತುಮಾನಗಳು ಬದಲಾದಂತೆ ಭಾಸವಾಗುತ್ತಿದೆ. ಕಡು ಬೇಸಿಗೆಯ ದಿನದಲ್ಲಿ ಮಳೆ ಆರಂಭವಾಗುವುದು,...

ತಪ್ಪು

ತಪ್ಪು

ಅಂಜನಾ ಗಾಂವ್ಕರ್ ಸುತ್ತ ಹಸುರಿನ ಹುಲ್ಲು ಹಾಸು. ಸಂಜೆಯ ವಾಕಿಂಗ್ ಮುಗಿಸಿ ಕಲ್ಲುಬೆಂಚಿನ ಮೇಲೆ ಕುಳಿತಿದ್ದೆ. ಮನದಲ್ಲಿ ಮಾತ್ರ ಆ ಹಸುರು,...

೧ ಪ್ರತಿಕ್ರಿಯೆ

  1. madhura chenna

    ಕೆ.ಪುಟ್ಟಸ್ವಾಮಿರವರ ‘ಸಿನಿಮಾ ಯಾನ’ ಪುಸ್ತಕ ನಿಜಕ್ಕೂ ಸಿನಿಮಾ ಕ್ಷೇತ್ರದ ಒಂದು ಸುಗಮ ಪಯಣ ಹೈವೇ ರೋಡ್ ನಲ್ಲಿ ಗಾಡಿ ಓಡಿಸುವಂತಹ ಅನುಭವ. ಸ್ಪೀಡ್ ಹೆಚ್ಚಾದರೂ ಕೂಡ ಯಾವು ಕಣ್ಣಿಂದ ಬೇರ್ಪಡುವುದಿಲ್ಲ. ಅವರ ಬರಹಗಳೇ ಹಾಗೆ, ಓಟಕ್ಕೂ ನೋಟಕ್ಕೂ ಮತ್ತು ಮಾಟಕ್ಕೂ ನಿಲುಕಿ ವರ್ಣಮಯವಾಗಿರುತ್ತದೆ. ಸರ್ ನಿಮ್ಮ ಬರಹಗಳು ಹೀಗೆ ವಿವಿಧ ವಿಷಯಗಳನ್ನೊಳಗೊಂಡು ನಮಗೆ ಮಾಹಿತಿಯುಕ್ತವಾಗಿ ಸಂಗ್ರಹಯೋಗ್ಯವಾಗಲಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: