ಸಿ.ಎನ್.ರಾಮಚಂದ್ರನ್ ‘ಆಖ್ಯಾನ-ವ್ಯಾಖ್ಯಾನ’ :’ಯಾತ್ರಿಕ’ನ ಮುಕ್ತ ಪ್ರಯಾಣ

ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ-

ಪ್ರೊ.ಸಿ.ಎನ್.ರಾಮಚಂದ್ರನ್ ಅವರ ಹೊಸ ವಿಮರ್ಶಾ ಸಂಕಲನ ‘ಆಖ್ಯಾನ -ವ್ಯಾಖ್ಯಾನ’ ಮೊನ್ನೆ ನವಂಬರ ೧ರನ್ದು ಮುಕ್ತ ಪ್ರಯಾಣ ಹೊರಟಿದೆ.(ಸಪ್ನಾ ಬುಕ್ ಹೌಸ್ ,ಬೆಂಗಳೂರು .೨೦೧೧).ಅವರ ಮೊದಲ ವಿಮರ್ಶಾ ಸಂಕಲನ ‘ಶಿಲ್ಪ ವಿನ್ಯಾಸ’ (ಕರ್ನಾಟಕ ಸಂಘ ,ಪುತ್ತೂರು,೧೯೮೬ )ಕ್ಕೆ ಮುನ್ನುಡಿಯನ್ನು  ಬರೆಯುವ ಅವಕಾಶವನ್ನು ನನಗೆ ವಿಶ್ವಾಸದಿಂದ ಅವರು ಕಲ್ಪಿಸಿಕೊಟ್ಟಿದ್ದರು.ಕಳೆದ  ಇಪ್ಪತ್ತೈದು ವರ್ಷಗಳಲ್ಲಿ ಕನ್ನಡ ವಿಮರ್ಶೆಯ ಕ್ಷೇತ್ರದಲ್ಲಿ ಸಿ ಎನ್ ಆರ್  ಬಹಳ ದೂರ ಪ್ರಯಾಣ ಮಾಡಿದ್ದಾರೆ.ತೀರ ಹತ್ತಿರದಿಂದ ಅವರು ಸಾಗಿದ ದಾರಿಯನ್ನು ಬೆರಗಿನಿಂದ ನಾನು ಕಂಡಿದ್ದೇನೆ.ಅಮೇರಿಕ ಮತ್ತು ವಿದೇಶಗಳಲ್ಲಿ ಬಹಳ ವರ್ಷಗಳ ಕಾಲ ಇಂಗ್ಲಿಶ್ ಭಾಷೆ -ಸಾಹಿತ್ಯವನ್ನು ಅಧ್ಯಯನ -ಅಧ್ಯಾಪನ ಮಾಡಿದ ಇಂಗ್ಲಿಶ್ ಪ್ರೊಫೆಸರ್ ಒಬ್ಬರು ಕನ್ನಡದ -ಹಳಗನ್ನಡ ,ನಡುಗನ್ನಡ ಮತ್ತು ಹೊಸಗನ್ನಡ -ಕಾವ್ಯಗಳನ್ನು ಕೃತಿಗಳನ್ನು ಮೂಲರೂಪದಲ್ಲಿ ಪೂರ್ಣಪ್ರಮಾಣದಲ್ಲಿ ಅಧ್ಯಯನ ಮಾಡಿ ,ಕನ್ನಡ ಸಾಹಿತ್ಯ ವಿಮರ್ಶೆಗೆ ಹೊಸಜೀವ ಕೊಟ್ಟ ನಿದರ್ಶನಗಳು ಕನ್ನಡದ ಇಂದಿನ ಸಂದರ್ಭದಲ್ಲಿ ತೀರಾ ವಿರಳ.ಇನ್ನೊಂದು ಮಹತ್ವದ ಬೆಳವಣಿಗೆ ಎಂದರೆ ಕನ್ನಡದ ಲಿಖಿತ ಸಾಹಿತ್ಯವನ್ನು ಸಮಗ್ರವಾಗಿ ಅಧ್ಯಯನ ಮಾಡಿದ  ಸಿಎನ್ ಆರ್ ,ಕನ್ನಡ ಮೌಖಿಕ ಪರಂಪರೆಯ ಜನಪದ ಮಹಾಕಾವ್ಯಗಳನ್ನುವ್ಯಾಪಕವಾಗಿ  ಅಭ್ಯಾಸಮಾಡಿ ,ಜಾನಪದದ ವಿನ್ಯಾಸಗಳನ್ನು ಚಿಂತನೆಗಳನ್ನು ತಮ್ಮ ಸಾಹಿತ್ಯವಿಮರ್ಶೆಯ ಆಲೋಚನಾ ಕ್ರಮದ ಜೊತೆಗೆ ಸೇರಿಸಿಕೊಂಡದ್ದು.ಜನಪದ ಮಹಾಕಾವ್ಯಗಳ ದೃಷ್ಟಿಯಿಂದ ಜಾಗತಿಕ ಮತ್ತು ಭಾರತೀಯ ನೆಲೆಯಲ್ಲಿ ಕರ್ನಾಟಕ ಮೊದಲನೆಯ ಸ್ಥಾನದಲ್ಲಿ ಇದೆ.ಜನಪದ ಮಹಾಕಾವ್ಯಗಳನ್ನು ಕುರಿತ ಅನೇಕ ಅಂತಾರಾಷ್ಟ್ರೀಯ ಸಮ್ಮೇಳನ -ವಿಚಾರಗೊಷ್ಟಿಗಳಲ್ಲಿ ಭಾಗವಹಿಸಿ ,ಗ್ರಂಥಗಳನ್ನು ಓದಿ,ಕಳೆದ ಎರಡು ವರ್ಷಗಳಿಂದ ‘ಮೌಖಿಕ ಪರಂಪರೆ -ಜನಪದ ಮಹಾಕಾವ್ಯ’ ವನ್ನು ಜರ್ಮನಿಯಲ್ಲಿ ಪಾಠ ಮಾಡಿದ ಅನುಭವದಿಂದ ಈ ಮಾತು ಹೇಳುತ್ತಿದ್ದೇನೆ .ಕನ್ನಡದಲ್ಲಿ ಸಂಗ್ರಹವಾಗಿ ಪ್ರಕಟ ಆಗಿರುವಷ್ಟು ಸಂಖ್ಯೆಯ ಜನಪದ ಮಹಾಕಾವ್ಯಗಳು ಜಗತ್ತಿನ ಬೇರೆ ಯಾವ ಭಾಷೆಯಲ್ಲೂ ಆಗಿಲ್ಲ.ಆದರೆ ಇದು ಹೊರಜಗತ್ತಿಗೆ ಗೊತ್ತೇ ಇಲ್ಲ.ಯಾಕೆಂದರೆ ಇವು ಇಂಗ್ಲಿಶ್ ಸಹಿತ ಬೇರೆ ಭಾಷೆಗಳಿಗೆ ಅನುವಾದ ಆಗಿಲ್ಲ.ಸಿ ಎನ್ ಆರ್ ಅವರು ಮಾಡಿದ  ‘ಮಲೆ ಮಾದೇಶ್ವರ ‘ ಕನ್ನಡ ಜನಪದ ಮಹಾಕಾವ್ಯದ ಇಂಗ್ಲಿಶ್ ಅನುವಾದ ಒಂದೇ ಈ ವರೆಗೆ ಪೂರ್ಣವಾಗಿ ಕನ್ನಡ  ಜನಪದ ಮಹಾಕಾವ್ಯಗಳಲ್ಲಿ ಇಂಗ್ಲಿಷಿಗೆ ಭಾಷಾಂತರ ಆದದ್ದು.(ಸಾಹಿತ್ಯ ಅಕಾಡೆಮಿ ,ದೆಹಲಿ,೨೦೦೧).( ತುಳುವಿನ ‘ಸಿರಿ ‘ಜನಪದ ಮಹಾಕಾವ್ಯ ಇಂಗ್ಲಿಷಿಗೆ ಅನುವಾದ ಆಗಿದೆ :ಲೌರಿ ಹಾಂಕೋ,ಅನೆಲಿ ಹಾಂಕೋ,ವಿವೇಕ ರೈ,ಚಿನ್ನಪ್ಪ ಗೌಡ :ಹೆಲ್ಸಿಂಕಿ,ಫಿನ್ ಲೆಂಡ್ ,೧೯೯೮ .)ರಾಮಚಂದ್ರನ್ ಅವರ  ‘ಹೊಸಮಡಿಯ ಮೇಲೆ ಚದುರಂಗ ‘(೨೦೦೭) -ಜಗತ್ತಿನ ಮಹತ್ವದ ೨೫ ಮೌಖಿಕ ಮಹಾಕಾವ್ಯಗಳ ಅಧ್ಯಯನ.ನಾನು ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಇದ್ದಾಗ ನನ್ನ ಕೋರಿಕೆಗೆ ಸ್ಪಂದಿಸಿದ ರಾಮಚಂದ್ರನ್ ಅವರು ಪದ್ಮಾ ರಾಮಚಂದ್ರ ಶರ್ಮರ ಜೊತೆಗೆ ಕನ್ನಡದ ಮೌಖಿಕ ಮಹಾಕಾವ್ಯಗಳ ಆಯ್ದ ಭಾಗಗಳನ್ನು ಇಂಗ್ಲಿಷಿಗೆ ಅನುವಾದಮಾಡಿ ಕೊಟ್ಟಿದ್ದಾರೆ:’Strings and Cymbals ‘ (ಪ್ರಸಾರಾಂಗ ,ಕನ್ನಡ ವಿಶ್ವವಿದ್ಯಾಲಯ ,ಹಂಪಿ,೨೦೦೭ ).

ಸಿ ಎನ್ ಆರ್ ಮತ್ತೆ ಅವರ ‘ ಆಖ್ಯಾನ -ವ್ಯಾಖ್ಯಾನ’ ಕ್ಕೆ ಮುನ್ನುಡಿ ಬರೆಯಲು ಕೋರಿದಾಗ ನನಗೆ  ಸಂಕೋಚ ಆಯಿತು.ಸರಿಯಾಗಿ ಮೂವತ್ತು ವರ್ಷಗಳ ಕಾಲ ಅವರ ನಿಕಟ ಸ್ನೇಹ ಇದ್ದೂ ಅವರ ರೀತಿಯ ಬರವಣಿಗೆ -ಅನುವಾದದಂತಹ ಕೆಲಸಗಳನ್ನು ಮಾಡಲಾಗಲಿಲ್ಲ ಎನ್ನುವ ಸಂತಾಪ ಮತ್ತು ಸಂಕೋಚ ನನ್ನದು .ಸಂಸ್ಥೆಗಳನ್ನು ಕಟ್ಟುವುದು,ಸರಿಮಾಡುವುದು,ನಿರ್ವಹಿಸುವುದು -ಇಂತಹ ಆಡಳಿತ ನಿರ್ವಹಣೆಯ ಜಂಜಡದಿಂದಾಗಿ ,ಶೈಕ್ಷಣಿಕವಾಗಿ ಬರವಣಿಗೆ ಮಾಡಲಾಗದ ಅರಕೆಯ ಭಾವ ನನ್ನನ್ನು ಕಾಡುತ್ತಿತ್ತು .ಆದರೆ ಸಿ ಎನ್ ಆರ್ ಒಡನಾಟ ದೊರಕಿಸಿಕೊಟ್ಟ ಬೌದ್ಧಿಕ ಲಾಭದ ಬಡ್ಡಿ (‘ವೃದ್ಹಿ’ ಪದದ ತದ್ಭವ )ಯನ್ನು ತೀರಿಸುವುದಕ್ಕಾಗಿ ಈ ಗ್ರಂಥಕ್ಕೆ ಮುನ್ನುಡಿಯ ಹೆಸರಿನಲ್ಲಿ ಕೆಲವು ಮಾತುಗಳನ್ನು ಬರಹದ ರೂಪದಲ್ಲಿ ಕೊಟ್ಟೆ.ಅಲ್ಲಿನ ಕೆಲವು ಅಭಿಪ್ರಾಯಗಳನ್ನುಮಾತ್ರ  ಆರಿಸಿಕೊಂಡು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.

“ಆಖ್ಯಾನ ಮತ್ತು ವ್ಯಾಖ್ಯಾನ ಎನ್ನುವ ಪರಿಭಾಷೆಗಳು ಇಲ್ಲಿನ ಲೇಖನಗಳ ಮೂಲಕ ಮತ್ತೆ ಮತ್ತೆ ಮರುನಿರ್ವಚನಗಳಿಗೆ ಒಳಗಾಗಿವೆ.ಪಾಠವೊಂದು ಸ್ಥಳ,ಕಾಲ,ಧರ್ಮ,ಸಂಸ್ಕೃತಿ ,ಧೋರಣೆಗಳಿಗೆ ಅನುಸಾರವಾಗಿ ಹೊಂದುವ ಎಲ್ಲಾ ರೂಪಾಂತರಗಳನ್ನು ಸಮಾನ ಶ್ರದ್ಧೆಯಿಂದ ನೋಡುವ ವ್ಯಾಖ್ಯಾನದ ಕ್ರಮ ಸಿ ಏನ್ ಆರ್ ಅವರ ಬರಹಗಳ ಅನನ್ಯತೆ.ಮೌಖಿಕ ಪರಂಪರೆಯ ವಿಸ್ತಾರವಾದ ಅವರ ಅಧ್ಯಯನವು ರಾಮಾಯಣ-ಮಹಾಭಾರತದಂತಹ ಮಹಾಕಾವ್ಯಗಳ ಸಹಿತ ನಮ್ಮ ಪ್ರಾಚೀನ ಕೃತಿಗಳನ್ನು ಕುರಿತ ಈವರೆಗಿನ ಅನೇಕ ಅಪವ್ಯಾಖ್ಯಾನಗಳನ್ನು ಸರಿಪಡಿಸುವ ದಾರಿಯನ್ನು ತುಳಿದಿದೆ.ಮೌಖಿಕ ಪರಂಪರೆಯ ಅಧ್ಯಯನದ ವಿಧಾನಶಾಸ್ತ್ರವನ್ನು ಬಳಸಿಕೊಂಡು ,ಶಿಷ್ಟ ಮಹಾಕಾವ್ಯ ಮತ್ತು ಸಾಹಿತ್ಯ ಕೃತಿಗಳನ್ನು ನೋಡುವ ಆ ಅಧ್ಯಯನ ವಿಧಾನ ಸಿಎನ್ ಆರ್ ಅವರ ವಿಶಿಷ್ಟ ಕೊಡುಗೆ .”

‘ಭಗವದ್ಗೀತೆಯನ್ನು ಕುರಿತು …’ ಲೇಖನವು  ಮುಕ್ತತೆಯ ವ್ಯಾಖ್ಯೆಯನ್ನು ವಿಶಿಷ್ಟವಾಗಿ ಮಾಡುತ್ತದೆ.ಇತ್ತೀಚಿಗೆ ಕರ್ನಾಟಕದಲ್ಲಿ ಶಾಲೆಗಳಲ್ಲಿ ಭಗವದ್ಗೀತೆಯನ್ನು ಕಲಿಸುವ ಪ್ರಸ್ತಾವಕ್ಕೆ ಸಂಬಂಧಿಸಿದಂತೆ ನಡೆದ ಚರ್ಚೆಗಳ ಹಿನ್ನೆಲೆಯಲ್ಲಿ ಈ ಬರಹ ಎಲ್ಲ ಪಂಥದವರಿಗೂ ನಿಜವಾದ ಗೀತೋಪದೇಶವನ್ನು ಮಾಡುತ್ತದೆ.ಸ್ವಾಮಿ ಅಗೇಹಾನಂದ ಭಾರತಿ ಅವರ ವ್ಯಾಖ್ಯಾನವನ್ನು ಪ್ರಧಾನವಾಗಿ ಇಟ್ಟುಕೊಂಡು ,ಶಂಕರ-ರಾಮಾನುಜ-ಮಧ್ವರ ವ್ಯಾಖ್ಯಾನಗಳು ಅವರವರ ಅದ್ವೈತ ,ವಿಶಿಷ್ಟಾದ್ವೈತ  ಮತ್ತು ದ್ವೈತ ಸಿದ್ಧಾಂತಗಳ ಆಖ್ಯಾನಗಳಾಗಿ ರೂಪುಗೊಂಡ ಬಗೆಗಳ ವಿಶ್ಲೇಷಣೆ ಅದ್ಭುತವಾಗಿದೆ.ಆದುನಿಕ ಕಾಲದಲ್ಲಿ ತಿಲಕ್,ಗಾಂಧಿ,ಅರವಿಂದರು ಭಗವದ್ಗೀತೆಯನ್ನು ತಮ್ಮ ತಾತ್ವಿಕ ಮತ್ತು ಸಾಮಾಜಿಕ ಉದ್ದೇಶಗಳಿಗೆ ಪ್ರೇರಣೆಯಾಗಿ ಪಡೆದದ್ದು ಮತ್ತು ಬಳಸಿದ್ದು – ಈ ವಿಶ್ಲೇಷಣೆಯ ತಿಳುವಳಿಕೆ ಬಹಳ ಮುಖ್ಯ.ಸಿ ಎನ್ ಆರ್ ಲೇಖನದ ಕೊನೆಯಲ್ಲಿ ಕೇಳುವ ಪ್ರಶ್ನೆಗಳು ನಮ್ಮನ್ನು ಕಾಡುತ್ತವೆ.ದುರ್ಬಲ ಕೃತಿಯನ್ನು ಕೂಡಾ ಸಮರ್ಥಿಸುವ ವ್ಯಾಖ್ಯಾನಗಳು ಇದ್ದಾಗ ಏನು ಮಾಡಬೇಕು ?ಇಂತಹ ಸಿದ್ಧಾಂತಗಳ ಬಳಕೆ ಮತ್ತು ದುರ್ಬಳಕೆಗಳ ಬಗ್ಗೆ ಕೂಡಾ ಚರ್ಚೆ ಮಾಡಬಹುದು ಅನ್ನಿಸುತ್ತದೆ.”

“ಭಕ್ತಿ ಚಳುವಳಿ ಮತ್ತು ಭಕ್ತಿ ಸಾಹಿತ್ಯವನ್ನು ‘ಪ್ರತಿರೋಧ ಮತ್ತು ಅನುಸಂಧಾನ’ಗಳ ನೆಲೆಯಲ್ಲಿ ನೋಡುವ ಚರ್ಚೆ ಈ ಗ್ರಂಥದ ಒಟ್ಟು ಧೋರಣೆಯನ್ನು ಸೂಚಿಸುವ ಲೇಖನ.ಪ್ರಾದೇಶಿಕ,ಭಾಷಿಕ ಮತ್ತು ಸಾಮಾಜಿಕ ನೆಲೆಗಳಲ್ಲಿ ಭಾರತದ ಭಕ್ತಿ ಚಳುವಳಿಗಳನ್ನು ಇಲ್ಲಿ ಪರಿಚಯಿಸಲಾಗಿದೆ.ಸಾಮಾನ್ಯವಾಗಿ ಭಕ್ತಿಸಾಹಿತ್ಯವನ್ನು ಇಡೀ ಭಾರತಕ್ಕೆ ಅನ್ವಯಿಸುವಂತೆ ಗೋಲಾಕಾರದಲ್ಲಿ ನೋಡುವ ಕ್ರಮಗಳೇ ನಮ್ಮಲ್ಲಿ ಅಧಿಕವಾಗಿವೆ.ಮರಾಟಿ ,ತಮಿಳು,ಹಿಂದಿ,ಇಸ್ಲಾಂ,ಸಿಖ್ ,ಸೂಫಿ,ವೈಷ್ಣವ,ಶೈವ ,ಕರ್ನಾಟಕದಲ್ಲಿ ಶರಣ ಮತ್ತು ದಾಸ -ಇವೆಲ್ಲವೂ  ಅವುಗಳ ತತ್ವ ,ಸಂರಚನೆ ,ಭಕ್ತರ ಅಪೇಕ್ಷೆ -ಇಂತಹ ಅನೇಕ ಪರಿಮಾಣಗಳ  ಮೂಲಕ ‘ಭಕ್ತಿ ಸಾಹಿತ್ಯ’ವು ರೂಪು ತಾಳುತ್ತದೆ.ಅಧ್ಯಾತ್ಮಿಕ ನೆಲೆಯ ಭಕ್ತಿ ಚಳುವಳಿಗಳು ಜನಸಾಮಾನ್ಯರನ್ನು ಒಳಗೊಂಡ ಸಾಮಾಜಿಕ ಚಳುವಳಿಗಳಿಗೆ ತಳಹದಿ ಆದುವು ಎನ್ನುವ ಚಿಂತನೆಯನ್ನು ಧನಾತ್ಮಕವಾಗಿ ಪರಿಶೀಲಿಸಬಹುದು.ಮತೀಯವಾದಕ್ಕೆ ಭಕ್ತಿ ಪಂಥ ಪ್ರತಿರೋಧವೇ ? ಇದು ಯೋಚಿಸಬೇಕಾದ ವಿಷಯ.”

“ಮಹಾಭಾರತವನ್ನು ಕುರಿತ ವಿಸ್ತಾರವಾದ ಓದು -ತೌಲನಿಕ ಪ್ರಭೇದದ ವ್ಯಾಖ್ಯಾನವಾಗಿ ಈ ಕುರಿತ ಅನೇಕ ನಿಲುವುಗಳನ್ನು ಮರುಪರಿಶೀಲಿಸುವ ಕೆಲಸವನ್ನು ಮಾಡಿದೆ.ಭಿನ್ನ ಪರಂಪರೆಗಳ ರಾಮಾಯಣ-ಮಹಾಭಾರತಗಳ ತೌಲನಿಕ ಚರ್ಚೆ ,ಜನಪದ ಸಮಾಜದೊಳಗಿನ ಅವುಗಳ ಹರಿಯುವಿಕೆಯನ್ನು ಗುರುತಿಸುತ್ತದೆ.ಇಲ್ಲಿ ಪ್ರೇರಣೆ  -ಪ್ರಭಾವಗಳಿಗಿಂತ ಅಳವಡಿಕೆಗಳ ಸಾಧ್ಯತೆಗಳು  ಹೆಚ್ಚು ಪ್ರಸ್ತುತವಾಗುತ್ತವೆ.ಈವರೆಗಿನ ಮಹಾಕಾವ್ಯ ಚರ್ಚೆಯ ಜೊತೆಗೆಯೇ ‘ವಾಲ್ಮೀಕಿ ರಾಮಾಯಣ:ಮೊದಲ ನಾಲ್ಕು ಸರ್ಗಗಳು ‘ ಲೇಖನವನ್ನು ಗಮನಿಸಬಹುದು.ಮೌಖಿಕ ಮಹಾಕಾವ್ಯಗಳ ಹೊಸ ಶೋಧಗಳ ಹಿನ್ನೆಲೆಯಲ್ಲಿ ‘ಶಿಷ್ಟ ಮಹಾಕಾವ್ಯ’ ಎನ್ನುವ ವಾಲ್ಮೀಕಿ ರಾಮಾಯಣದ ಮೊದಲ ನಾಲ್ಕು ಸರ್ಗಗಳ ಪ್ರವೇಶವನ್ನು ವಿವರಿಸಲಾಗಿದೆ.”

” ‘ಕನ್ನಡ ಸಾಹಿತ್ಯದ ಇತ್ತೀಚಿನ ಒಲವುಗಳು :ಮಾದರಿಗಳ ಪಲ್ಲಟ ‘-ಇದು ಪ್ರಸ್ತುತ ಚಲಾವಣೆಯಲ್ಲಿ ಇರುವ ಬೀಸುಹೇಳಿಕೆಗಳನ್ನು ಸಕಾರಣವಾಗಿ ನಿರಾಕರಿಸುತ್ತಲೇ ,ಈಗಿನ ಕಾಲದ ಸಾಹಿತ್ಯ ಒಂದು ಪ್ರವೃತ್ತಿ,ಒಂದು ಚಳುವಳಿ,ಒಂದು ಮಾದರಿ ಎಂಬ ಘಟ್ಟವನ್ನು ಮೀರಿ ,ಸಂಕೀರ್ಣ ಆಗಿರುವ ವಿನ್ಯಾಸಗಳನ್ನು ಚರ್ಚಿಸುತ್ತದೆ.ಮಹಾಕಾವ್ಯಗಳು ಮತ್ತು ಬ್ಲಾಗ್ ಬರಹಗಳು,ಕವನಗಳು ಮತ್ತು ಕತೆ ಕಾದಂಬರಿಗಳು,ನಾಟಕಗಳು ಮತ್ತು ವಿಮರ್ಶೆಗಳು – ಹೀಗೆ ಪ್ರಭೇದಗಳ ಒಳಗೆಯೇ ಹೊಸಮಾದರಿಗಳ ರೂಪುಗೊಳ್ಳುವಿಕೆ ಮತ್ತು ಹೊಸಪ್ರಭೇದಗಳ ನಿರ್ಮಾಣ -ಇವು ಹೊಸ ಸಮಾಜದ ಶೋಧಕ್ಕಾಗಿ ತುಡಿಯುವ ಪ್ರಕ್ರಿಯೆಯ ಸಂಕಥನವು ಕನ್ನಡದ ಉದಾಹರಣೆಗಳ ಮೂಲಕ ವಿವರಿತವಾಗಿದೆ.ವೇದಿಕೆಗಳ ಸಾಮಾನ್ಯೀಕೃತ ಉದ್ಘೋಷಗಳ ನಡುವೆ ಇಂತಹ ಸೂಕ್ಷ್ಮ ಸತ್ಯಗಳನ್ನು ಹೇಳುವ ಬರಹಗಳು ನಮಗೆ ಇನ್ನಷ್ಟು ಬೇಕಾಗಿವೆ.”

“ಸಿಎನ್ ಆರ್ ಅವರ ಈ ಸಂಕಲನದ ಒಂದು ಲೇಖನ ‘ಪ್ರಯಾಣ, ಗುರಿ  ತಲಪುವುದಲ್ಲ.’ಈ ಮಾತು ಇಂತಹ ಒಳ್ಳೆಯ ವಿಮರ್ಶೆಯ ಬರಹಗಳಿಗೂ ಅನ್ವಯವಾಗುತ್ತದೆ.ಇಂತಹ ಪ್ರಯಾಣ ಯಾವ ಮಾದರಿಯದ್ದು ಎನ್ನುವ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬಹುದು.ಒಂದು ಕಾಲಕ್ಕೆ ನಮ್ಮ ಪ್ರಯಾಣಿಕರು  ’ಯಾತ್ರಿಕ’ರಾಗಿದ್ದರು.ಮುಂದೆ ಅವರು ‘ತಿರುಗುಳಿ’ ಆದರು. ಬಳಿಕ ‘ಅಲೆಮಾರಿ’ ಆಗಿ, ಮುಂದೆ ‘ಪ್ರವಾಸಿಗರು’ ಆದರು. ಮತ್ತೆ ಆಧುನಿಕ ಕಾಲದಲ್ಲಿ ಅವರೇ ‘ಆಟಗಾರರು’ ಆಗಿದ್ದಾರೆ.ಇದು ಸಂಸ್ಕೃತಿಯ ಎಲ್ಲ ಕ್ಷೇತ್ರಗಳಲ್ಲೂ ಆಗುತ್ತಿರುವ ಪಲ್ಲಟ.ಅಂತಹ ಸನ್ನಿವೇಶದಲ್ಲಿ ‘ಯಾತ್ರಿಕ’ನ ಶ್ರದ್ಧೆಯನ್ನು ಕಳೆದುಕೊಂಡರೆ ,ನಾವು ಏನನ್ನೂ ಕಾಣಲಿಕ್ಕೆ ಸಾಧ್ಯವಿಲ್ಲ.ಇದು ‘ಆಟ’ ‘ಹುಡುಗಾಟ’ದ ರಂಗ ಅಲ್ಲ. ಜಾಗತೀಕರಣ ಉದಾರೀಕರಣಗಳ ಆಟದ ಬಯಲಿನಲ್ಲಿ ಸಾಹಿತ್ಯದ ಶ್ರದ್ಧೆಯ ಯಾತ್ರಿಕರಾಗಬಯಸುವವರಿಗೆ ‘ಆಖ್ಯಾನ-ವ್ಯಾಖ್ಯಾನ’ದಲ್ಲಿ ನಿಜದ ಸೋಪಾನಗಳು ಏರಲು ದೊರೆಯುತ್ತವೆ.”

 

‍ಲೇಖಕರು avadhi

November 7, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಜರ್ಮನಿಯಲ್ಲಿ ಹೀಗೊಂದು ಕನ್ನಡ ಶಿಬಿರ

ಅಂತಾರಾಷ್ಟ್ರೀಯ ಕನ್ನಡ ಬೇಸಗೆ ಶಿಬಿರ ಪ್ರೊ ಬಿ ಎ ವಿವೇಕ ರೈ ಜರ್ಮನಿಯ ವ್ಯೂರ್ತ್ಸ್ ಬುರ್ಗ್ ವಿಶ್ವವಿದ್ಯಾನಿಲಯದ ಇಂಡಾಲಜಿ ವಿಭಾಗದ...

ತುಳು ’ಸಿರಿ’ಯನ್ನು ದಾಖಲಿಸಿದ ಪ್ರೊ .ಲೌರಿ ಹಾಂಕೊ – ಪ್ರೊ ಬಿ ಎ ವಿವೇಕ ರೈ

ಪ್ರೊ ಬಿ ಎ ವಿವೇಕ್ ರೈ ಪ್ರೊ .ಲೌರಿ ಹಾಂಕೊ (1932 -2002 ) ಫಿನ್ ಲೆಂಡ್ ದೇಶದ ತುರ್ಕು ವಿಶ್ವವಿದ್ಯಾಲಯದಲ್ಲಿ ಜಾನಪದ ವಿಜ್ಞಾನ ಮತ್ತು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This