ಸಿ ಜಿ ಕೆ ಕಂಡ ಲೋಕೇಶ್

ಸುಮನ ಕಿತ್ತೂರು, ಸಿ ಜಿ ಕೆ, ಲೋಕೇಶ್ ಮೂವರ ಪರಿಚಯವನ್ನೂ ಒರೆಗೆ ಹಚ್ಚುವ ಒಂದು ಲೇಖನ ಇಲ್ಲಿದೆ. ಸುಮನಾ ಎಲ್ಲರ ಗಮನ ಸೆಳೆದಿದ್ದು ಲೋಕೇಶ್ ಅವರ ಬದುಕನ್ನು ನಿರೂಪಿಸುವ ಮೂಲಕ. ಆ ನಂತರ ‘ಸ್ಲಂ ಬಾಲ’ ನಿರ್ದೇಶಿಸುವ ವರೆಗೆ ಬೆಳೆದು ನಿಂತಿದ್ದಾರೆ.
ಅಗ್ನಿ ಪ್ರಕಾಶನ ಲೋಕೇಶ್ ಬದುಕಿನ ಪುಸ್ತಕ ಹೊರತಂದಿತು. ಇದಕ್ಕಾಗಿ ಸಿ ಜಿ ಕೆ ಮುನ್ನುಡಿ ಬರೆದರು. ಇದು ಕೇವಲ ಪುಸ್ತಕದ ಬೆನ್ನು ತಟ್ಟುವ ಕ್ರಿಯೆಯಾಗಿ ಉಳಿಯದೆ ಸಿ ಜಿ ಕೆ ಹಾಗೂ ಲೋಕೇಶ್ ಇಬ್ಬರ ಬದುಕಿನ ರೀತಿಯನ್ನೂ ಬಿಚ್ಚಿಡುವ ಪ್ರಯತ್ನವಾಗಿ ಕಂಡಿತು. ಅಷ್ಟೆ ಅಲ್ಲ, ಸುಮನಾ ಬೆಳೆದು ಬಂದ ರೀತಿಯನ್ನು ಈ ಲೇಖನ ಬಣ್ಣಿಸಿದೆ.
ಲೋಕೇಶ್-ಸಿ ಜಿ ಕೆ- ಸುಮನಾ ಈ ಮೂವರ ಬಗೆಗಿನ ಪ್ರೀತಿಗಾಗಿಯಾದರೂ ಓದಲೇ ಬೇಕಾದ ಪುಸ್ತಕ ಇದು. ಆ ಸಿ ಜಿ ಕೆ ಮುನ್ನುಡಿ ನಿಮ್ಮ ಮುಂದಿದೆ
ಅವಧಿಯಲ್ಲಿ ಈಗಾಗಲೇ ಪ್ರಕಟವಾಗಿದ್ದ ಈ ಲೇಖನ ಲೋಕೇಶ್ ನೆನಪು ಹೊತ್ತು ಮತ್ತೆ ನಿಮಗಾಗಿ-
ಸುಮನ್ ಕಿತ್ತೂರು ತನ್ನ ತಂದೆ ಸಂತೆಯಿಂದ ತಂದ ಪೊಟ್ಟಣಗಳನ್ನು ಬಿಚ್ಚಿ, ಪೊಟ್ಟಣ ಕಟ್ಟಿದ ಚಿಕ್ಕ-ಪುಟ್ಟ ಪೇಪರುಗಳನ್ನು ಓದುತ್ತಾ ಅಕ್ಷರ ಪ್ರೀತಿಗೆ ವಾಲಿದ ಕಿರಿಯ ಬರಹಗಾರ್ತಿ. ಮಂಡ್ಯ -ಮೈಸೂರು- ಹುಣಸೂರು ದಾಟಿದರೆ, ಒಮ್ಮಿಂದೊಮ್ಮೆಲೆ ದಟ್ಟ ಕಾಡಿನೊಳಗೆ ಮಾಯವಾಗಿಬಿಡುತ್ತೇವೆ. ಅಲ್ಲಿಂದ ಸಿಗುವ ಕಾವೇರಿ, ಆನೆ, ಕಾಡು ಅಕ್ಷರವನ್ನು ದೂರ ಇಡುತ್ತವೆ. ಆದರೆ ತನ್ನ ಚುರುಕುತನದಿಂದಲೇ ಕನ್ನಡವನ್ನು ಸ್ವಚ್ಛವಾಗಿ ಕಲಿಯುತ್ತಾ, ಬರೆಯುತ್ತಾ ತಾನು ಶಾಲೆಯಲ್ಲಿ ಪ್ರೇಯರ್ ಮುಗಿದ ನಂತರ ಪತ್ರಿಕೆಗಳಲ್ಲಿನ ಹೆಡ್ಡಿಂಗ್ ಓದುತ್ತಿದ್ದ ಹಾಗೆಯೇ ತಾನು ಬರೆದ ಅಂಕಣವನ್ನು ಬೇರೆಯ ವಿದ್ಯಾರ್ಥಿಗಳು ಇತರರಿಗೆ ಓದಿ ಹೇಳಬೇಕು ಎನ್ನುವ ಹಟದಿಂದ ಕತ್ತಿಗೆ ಬೀಳುವ ತಾಳಿಯನ್ನು ತಪ್ಪಿಸಿಕೊಂಡ ಸುಮನ್ ಬೆಂಗಳೂರು-ಮಡಕೇರಿ ತಿರುಗುತ್ತಾ ತನ್ನ ಸಹಜ ಪ್ರಕೃತಿ ಚಿಂತನೆಗಳೊಡನೆ ಲೋಕೇಶ್ ರ ಆತ್ಮಕತೆಗೆ ಕೈ ಹಾಕಿದ್ದು ನನ್ನಂಥವನಿಗೆ ವಿಸ್ಮಯ ಉಂಟು ಮಾಡಿತ್ತು.
ಲೋಕೇಶ್ ಅಂದರೆ, ನಾನು ಭಾವುಕನಾಗುತ್ತೇನೆ. ಲೋಕೇಶ್ ಪ್ರಗತಿಪರ, ನಾನ್ ವೆಜಿಟೇರಿಯನ್ ಮತ್ತು ರಂ ನ ಆಪ್ತಬಂಧು. ಕುಡಿದಾಗ ರಾಜರತ್ನಂರ ಪದಗಳು. ಜೇಬಲ್ಲಿ ಹಣವಿಲ್ಲದಿದ್ದರೆ ಆಕಾಶದ ಕಡೆ ನೋಡುತ್ತಾ, ‘ಲೋ ನೀನಿದೀಯಲ್ಲ’ ಎನ್ನುತ್ತಾ ತನ್ನ ಪ್ಯಾಂಟ್ ಜೇಬಿನಲ್ಲಿ ಇದ್ದ ಹಿಪ್ ಪ್ಲಾಸ್ಕ್ ತೆಗೆಯುತ್ತಾ ಅದರಲ್ಲಿದ್ದ ರಮ್ ಅನ್ನು ಗ್ಲಾಸಿಗೆ ಬಗ್ಗಿಸಿ, ನೀರು ಹಾಕಿಕೊಳ್ಳುತ್ತಾ ತನ್ನ ನೂರೆಂಟು ಕ್ರಿಯಾ ಬುತ್ತಿಗಳನ್ನು ಬಿಚ್ಚಿಕೊಡುತ್ತಿದ್ದರು. ಲೋಕೇಶ್ ಮೂಲತಃ ಅಂತಹ ವಿದ್ಯಾವಂತರಲ್ಲ. ಎಲ್ಲಾ ತಂದೆ-ತಾಯಿಗಳಂತೆ ಇವರ ತಂದೆತಾಯಿಗಳು ಮಗ ಡಾಕ್ಟರ್-ಇಂಜಿನೀಯರ್ ಆಗುವ ಆಸೆ ಇಟ್ಟುಕೊಂಡಿದ್ದರು. ಆದರೆ ಲೋಕೇಶ್ ಅನಿವಾರ್ಯವಾಗಿ ತಂದೆಯ ಜೊತೆ ‘ಪ್ರಹ್ಲಾದ’ ಪಾತ್ರಕ್ಕೆ ಸಿಕ್ಕಿ ಬಿದ್ದು ತನ್ನ ತಂದೆಯನ್ನೇ ಮೆಚ್ಚಿಸಿ ನಟರಾದವರು. ಇವರ ನಟನೆಯ ಹಾದಿ ಯಶಸ್ವಿ ಹಾದಿಯಲ್ಲ. ಕಾರಣ, ತಂದೆ ಸುಬ್ಬಯ್ಯನಾಯ್ಡು ತಿಳಿದದ್ದು ವೃತ್ತಿರಂಗಭೂಮಿಯನ್ನು. ಕನ್ನಡದಲ್ಲಿ ಮೊದಲ ಬಾರಿಗೆ ತಿರುಗುವ ರಂಗಸಜ್ಜಿಕೆ ನಿರ್ಮಿಸಿ ತಿರುಗುತ್ತಾ ನಾಟಕದ ಗುಂಗಿಗೆ ಬಿದ್ದು, ಅಪಾರ ಹಣವನ್ನು ನಾಟಕಕ್ಕೆ ಖರ್ಚು ಮಾಡಿ ಕೊನೆಗೊಂದು ದಿನ ಅವರು ಹಾಗೂ ಆರ್. ನಾಗೇಂದ್ರರಾಯರು ಒಟ್ಟಿಗೆ ಕಟ್ಟಿದ ಕಂಪನಿ ಬಿರುಕು ಬಿಟ್ಟಾಗ ನಾಯ್ಡುಗಳು ಆಯ್ದುಕೊಂಡಿದ್ದು ಕಂಪನಿಯ ಬೋರ್ಡ್ ಒಂದನ್ನೇ. ಅದನ್ನು ಕೇವಲ ಬೋರ್ಡ್ ಎಂದು ಲೋಕೇಶ್ ತಿಳಿಯಲಿಲ್ಲ. ಅದನ್ನು ತಂದೆ-ತಾಯಿ ತನ್ನ ಕಲೆಯ ಮೇಲಿಟ್ಟ ಸೂರು ಎಂದು ಭಾವಿಸಿ, ನಾಡಿನುದ್ದಕ್ಕೂ ಹೊತ್ತು ಅಡ್ಡಾಡಿದರು.
ಇವರ ತಂದೆ-ತಾಯಿ ಇಬ್ಬರೂ ಮಂಡ್ಯದ ಲಕ್ಷ್ಮೀ ಜನಾರ್ಧನ ಥೀಯೇಟರಿನಲ್ಲಿ ಒಮ್ಮಿಂದೊಮ್ಮೆಲೆ ಇಲ್ಲವಾದಾಗ, ನಾನು ಅವರಿಬ್ಬರನ್ನೂ ನೋಡಲು ಹೋದಾಗ ಅಲ್ಲಿ ಲೋಕೇಶ್ ರನ್ನು ಕಂಡಿದ್ದೆ. ನಂತರ ಲೋಕೇಶ್ ಆಕ್ರಮಿಸಿದ್ದು ಬೆಂಗಳೂರಿನ ಹವ್ಯಾಸಿ ರಂಗಭೂಮಿಯನ್ನು.
ಕಾಕನಕೋಟೆಯ ಕಾಕ ಒಮ್ಮಿಂದೊಮ್ಮೆಲೆ ತಮ್ಮ ಜೀವನ ಸಂಗಾತಿ ಗಿರಿಜಾರನ್ನು ಆರಿಸಿಕೊಂಡಿದ್ದು ಕಲಾಕ್ಷೇತ್ರದ ರಂಗದ ಮೇಲೆ. ಮದುವೆಯೂ ನಾಟಕದ ತಾಲೀಮಿನಂತೆ ಮುಗಿದು ಹೋಯಿತು. ಆಗ ಅವರು ವರದಣ್ಣ ಅವರ ಶೋಧದಿಂದ ಕನ್ನಡ ಖ್ಯಾತ ನಿರ್ದೇಶಕ ಸಿದ್ಧಲಿಂಗಯ್ಯ ಅವರ ಕಣ್ಣಿಗೆ ಬಿದ್ದಿದ್ದರು.
‘ಭೂತಯ್ಯನ ಮಗ ಅಯ್ಯು’ ಕನ್ನಡ ಚಿತ್ರರಂಗದ ‘ಶೋಲೆ’ ಎಂದರೆ ತಪ್ಪಿಲ್ಲ. ಆದರೆ ಲೋಕೇಶ್ ತಮ್ಮ ಪಾತ್ರಗಳ ಆಯ್ಕೆಯಲ್ಲಿ ಎಡವಲೇ ಇಲ್ಲ. ವ್ಯಾಪಾರಿ ಚಿತ್ರಗಳ ಪಾತ್ರದ ಜೊತೆ, ಅತ್ಯಂತ ಶ್ರೇಷ್ಟ ಅಭಿನಯದ ಚಿತ್ರಗಳನ್ನೂ ನೀಡುತ್ತಾ ಪ್ರಶಸ್ತಿಗಳ ಸರಮಾಲೆಯನ್ನು ತಮ್ಮದಾಗಿಸಿಕೊಂಡವರು.
ಇವರ ಆತ್ಮಕತೆಯನ್ನು ಸಮನಾಗಿ ಕಿತ್ತೂರು ಬರೆಯಲು ಇನ್ನೊಂದು ಕಾರಣವೂ ಇರಬಹುದು. ಕಾಕನಕೋಟೆಯ ‘ನೇಸರ’ ಹಾಡು ಇಂದಿನ ಹವ್ಯಾಸಿ ರಂಗಭೂಮಿ ‘ಸ್ವಾಮಿ ದೇವನೆ ಲೋಕಪಾಲನೆ.’ ಬಹುಷಃ ಸುಮನಾ ಕಿತ್ತೂರು ತನ್ನ ಪರಿಸರದ ಹಿನ್ನಲೆಯಲ್ಲಿ ಲೋಕೇಶ್ ರನ್ನು ಪರಿಪಕ್ವ ನಟನೆ ಬಲ್ಲ ವ್ಯಾಘ್ರನ ರೀತಿ ಹಿಡಿದಿಟ್ಟಿದ್ದಾರೆ. ಲೋಕೇಶ್ ಕೋಪಗೊಂಡು ಮಾಸ್ತಿಯವರ ಜೊತೆ, ರವೀ ಕಲಾವಿದರೊಡನೆ ಜಗಳಕ್ಕೆ ನಿಂತು ತಮ್ಮ ಶಿವಾಜಿನಗರದ (ಕ್ಷಮೆಯಿರಲಿ) ಮೂಲ ಸಂಸ್ಕೃತಿಯನ್ನು ಮರೆಯದೆ ಆ ಭಾಗದಲ್ಲಿ ಗೋಕುಲಾಷ್ಟಮಿಯ ಕೃಷ್ಣನ ಹಬ್ಬವನ್ನೂ ವಿಜೃಂಭಣೆಯಿಂದ ನಡೆಸುತ್ತಾ ಕನ್ನಡಕ್ಕಾಗಿ ಸೋಡಾ ಬಾಟಲ್ ಪುಡಿಪುಡಿ ಮಾಡುತ್ತಾ ಗೋಕಾಕ್ ಚಳುವಳಿಗೆ ಕಂಕಣ ತೊಟ್ಟು ರಾಜ್ ಕುಮಾರ್ ಜೊತೆ ಸೇನಾನಿಯಾಗಿ ನಿಂತು, ಕನ್ನಡಕ್ಕಾಗಿ ತಾನು ಎಂಬ ಪದವನ್ನೂ ಅರ್ಥೈಸುತ್ತಾ ಇದ್ದಾಗ ನಾನು ರಾಮಕೃಷ್ಣ ಹೆಗಡೆ ಹಾಗೂ ಡಾ. ಜೀವರಾಜ ಆಳ್ವಾರ ಪತ್ರಿನಿಧಿಯಾಗಿ ಅಂದಿನ ಜನತಾ ಪಕ್ಷದ ಟಿಕೆಟ್ ಹಿಡಿದು ಚಾಮರಾಜಪೇಟೆ ಕ್ಷೇತ್ರದಿಂದ ನಿಲ್ಲಬೇಕು ಎಂದಾಗ ನಗುತ್ತಾ, ‘ನೋ..’ ಎಂದುಬಿಟ್ಟು, ರಮ್-ಸೋಡಾ ಫ್ಯಾಕ್ಟರಿಗೆ ಕರೆದೊಯ್ದು ನನಗೆ ರಮ್ ಕುಡಿಸಿ ಕಳಿಸಿದ್ದರು.
ರಮ್, ಸಿಗರೇಟು, ಚಿಕನ್ ಲೋಕೇಶ್ ರ ಪ್ರಮುಖ ಆಯ್ಕೆಗಳು. ಅಂತಹ ಸಮಯದಲ್ಲಿ ಕಡ್ಡಾಯವಾಗಿ ಇಂತಿಂಥ ಸ್ನೇಹಿತರಿರಬೇಕು ಎನ್ನುವ ನಿಯಮ. ನಿಯಮಗಳಿಗೆ ಎಂದೂ ಕೂಡ ನೋ ಎಂದವರೇ ಅಲ್ಲ. ನಿಮಾರ್ಪಕ ಚಂದೂಲಾಲ್ ಜೈನ್ ರವರು ‘ಭಕ್ತ ಸಿರಿಯಾಳ’ ಚಿತ್ರ ಮಾಡುತ್ತಾ ಹೋದಾಗ, ಅವರು ಸಹಜ ಮಾರವಾಡಿ ಬುದ್ದಿಯಿಂದ ‘ಇದು ದೇವರ ಚಿತ್ರ. ಹಾಗಾಗಿ ಮಾಂಸಾಹಾರ ನೀಡುವುದಿಲ್ಲ’ ಎಂದಾಗ ಲೋಕೇಶ್ ನಕ್ಕು, ಮನೆಯಿಂದ ನಾನ್ವೆಜ್ ತರಿಸಿಕೊಂಡು ತಿನ್ನುತ್ತಾ, ‘ದೇವರು ಎನ್ನುವುದು ಮನಸ್ಸಿಗೆ ಬಿಟ್ಟಿದ್ದು, ಆಹಾರ ಎನ್ನುವುದು ದೇಹಕ್ಕೆ ಬಿಟ್ಟಿದ್ದು’ ಎನ್ನುತ್ತಾ ಬೂಟಾಟಿಕೆ ಆಡದೆ, ಸಿರಿಯಾಳ ಪಾತ್ರ ನಿರ್ವಹಿಸಿದ್ದರು.
ಸುಮನ್ ಕಿತ್ತೂರ್ ಗೂ ಅಕ್ಕಿರೊಟ್ಟಿ-ಪಂದಿ ಕರಿ ವಾಸನೆ ಇದ್ದುದರಿಂದ ಲೋಕೇಶ್ ರ ಈ ಮೂಕವನ್ನು ಸೆರೆ ಹಿಡಿಯುವುದರಲ್ಲಿ ಆಕೆ ಯಶಸ್ವಿಯಾಗಿದ್ದಾಳೆ. ಎಷ್ಟೇ ಕುಡಿದರೂ, ಬ್ಯಾಲೆನ್ಸ್ ತಪ್ಪದ ಲೋಕೇಶ್ ಹಟದ ತೀರ್ಮಾನಗಳನ್ನು ಮರುದಿನ ಜಾರಿಗೆ ತರುತ್ತಿದ್ದರು.
ಒಮ್ಮೆ ‘ಭುಜಂಗಯ್ಯನ ದಶಾವತಾರ’ ಕ್ಲೈಮಾಕ್ಸ್ ಚಿತ್ರೀಕರಣದ ದಿನ ಇಂತಹುದೇ ನಿಯಮ ತಪ್ಪಿದಾಗ, ‘ಪ್ಯಾಕಪ್’ ಎಂದು ಹೇಳಿ, ಮೀಸೆ-ಕಣ್ಣು ಒಂದು ಮಾಡಿ ಕೂತ್ತಿದ್ದರು. ನಾನು ತಮಾಷೆ ಮಾಡುತ್ತಾ, ‘ನೀವು ಪ್ರೊಡ್ಯೂಸರ್ ಕೂಡ. ನಾನು ಕೆಮೆರಾ ಹಿಂದೆ ನಿಂತು ಸ್ಟಾರ್ಟ್ ಹೇಳಬೇಕು ಹೋಗೋಣ’ ಎಂದಾಗ ಕಣ್ಣಲ್ಲಿದ್ದ ನೀರು ತಟಕ್ಕನೆ ಉದುರಿ ಕಾರು ಹತ್ತಿಯೇಬಿಟ್ಟರು. ಅಂದು ನಾನ್ಸ್ಟಾಪ್ ಡೇ ಅಂಡ್ ನೈಟ್ ಶೂಟಿಂಗ್. ಮಧ್ಯೆ ಒಂದು ಕಾಫಿ ಕುಡಿದದ್ದು ನೆನಪು. ಕಾರಣ ಪ್ರಾಯಶ್ಚಿತ್ತ ಇರಬೇಕು ಅಥವಾ ತನ್ನ ನಡವಳಿಕೆಗೆ ತಾನೇ ಬೇಸರಪಟ್ಟಿರಬೇಕು. ಈ ಮಾತನ್ನು ಏತಕ್ಕಾಗಿ ಬರೆಯುತ್ತಿದ್ದೇನೆ ಎಂದರೆ, ಸ್ವಲ್ಪವೂ ವ್ಯವಹಾರ ಜ್ಞಾನವಿಲ್ಲದ ಲೋಕೇಶ್ ‘ಭುಜಂಗಯ್ಯನ ದಶಾವತಾರ’ದ ಪಾಲುದಾರನೊಬ್ಬ ತನ್ನ ಹಣಬೇಕು ಎಂದಾಗ, ಅವನು ಪಾಲುದಾರ ಅನ್ನುವುದನ್ನೂ ಮರೆತು, ಅವನು ಕೊಟ್ಟ ಎಲ್ಲಾ ಹಣವನ್ನೂ ವಾಪಸ್ ನೀಡಿದ್ದರು. ಅದೇ ರೀತಿ ತನ್ನ ಷೇರು ಗಳನ್ನು , ಶೇರುಗಳಲ್ಲಿ ಬಂದ ಡಿವಿಡೆಂಟ್ ಅನ್ನೇ ಅಪಾರ ಹಣದ ರಾಶಿ ಎಂದೇ ತಿಳಿದು, ಕೈ-ಬದಲಾಯಿಸಿ ಅಪಾರ ಹಣ ದೋಚಿಕೊಂಡಿದ್ದವನ ಬಗ್ಗೆ ಒಂದು ದಿನ ಕ್ಷಮೆಯ ಆಶೀರ್ವಾದ ನೀಡಿದ್ದರು. ಬಹುಶಃ ಲೋಕೇಶ್ ಸುಮನ್ ಗೆ ಈ ವಿಷಯವನ್ನು ತಾನು ಮರೆತ ವಿಷಯವೆಂದು ಹೇಳಲಿಲ್ಲವೇನೋ.
ಇಂತಹ ವಿಷಯವನ್ನೇ ಆಧಾರವಾಗಿಟ್ಟುಕೊಂಡು ‘ಎಲ್ಲಿಂದಲೋ ಬಂದವರು’ ಚಿತ್ರವನ್ನು ರೂಪಿಸಿದವರು ಪಿ. ಲಂಕೇಶ್. ಜಿ.ಎಸ್. ಸದಾಶಿವ ಸಂಭಾಷಣೆ, ಎಸ್. ರಾಮಚಂದ್ರ ಕೆಮೆರಾ, ಜೈಪಾಲ್ ಮೆನನ್ ಈ ಚಿತ್ರದ ನಿರ್ಮಾಪಕರಾಗಿದ್ದರು. ಅಸಲೀ ನಿಮಾರ್ಪಕತ್ವ ಮೋಹನ್ ಕೊಂಡಜ್ಜಿ ಅವರದು. ನಾನು ಲಂಕೇಶ್ ರ ಅಸೋಸಿಯೇಟ್ ಕೂಡ. ಮಧ್ಯೆ ನನ್ನಕ್ಕನ ಮಗಳು ಸತ್ತಿದ್ದರಿಂದ ಒಂದು ದಿನ ಚಿತ್ರೀಕರಣಕ್ಕೆ ಗೈರು ಹಾಜರಿ. ಲೋಕೇಶ್ ಹಳ್ಳಿಯಲ್ಲಿ ಎಲ್ಲರ ಮನೆ-ಮಾತಾಗಿದ್ದರು ಅವರ ನಳಪಾಕತನದಿಂದ, ಮುದ್ದೆ, ಉಪ್ಪೆಸರು, ಬಸ್ಸಾರು. ಅವರು ಎಂತಹ ಪಾತ್ರಗಳಲ್ಲಿ ಇದ್ದರೂ ಆ ಪಾತ್ರದ ಉತ್ಕಟತೆಗೆ ಶ್ರಮಿಸುತ್ತಿದ್ದರು. ‘ವೀರಪ್ಪನ್’ ಚಿತ್ರದ ನಿರ್ಮಾಣಕ್ಕೆ ಚಂದೂಲಾಲ್ ಜೈನ್ ಮುಂದಾದಾಗ ಕಥೆ-ಸ್ಕ್ರೀನ್ ಪ್ಲೇ-ಸಂಭಾಷಣೆ ನನ್ನದು. ನಿರ್ದೇಶನ ರವೀಂದ್ರನಾಥ್ ರದ್ದು . ನಾನು-ರವಿ ಹಟ ಹಿಡಿದು ಲೋಕೇಶನ್ ಗೋಪಿನಾಥಂ ಆಗಬೇಕು ಅಂತ ಅಲ್ಲಿಗೆ ಹೊರಟಾಗ ದಾರಿಯಲ್ಲಿ ಸ್ಟೆನ್ ಗನ್ ಗಳು ಎದುರಾಗಿ ಚಂದೂಲಾಲ್ ಜೈನ್ ಪ್ಯಾಂಟ್ ಒದ್ದೆ ಮಾಡಿಕೊಂಡಿದ್ದರು. ಲೋಕೇಶ್, ನಾನು, ರವಿ, ವಿಜಿ ಕಾರ್ ಗ್ಲಾಸ್ ತೆಗೆದಾಗ ಅಪಾರ ಪೋಲಿಸರು ನಮ್ಮನ್ನು ಎದುರಾದರು. ಅವರನ್ನು ಮುನ್ನಡೆಸುತ್ತಿದ್ದವರು ಡಿಸಿಎಫ್ ಶ್ರೀನಿವಾಸ್ (ವೀರಪ್ಪನ್ ನಯವಂಚಕತನದಿಂದ ತಲೆ ಕತ್ತರಿಸಿಕೊಂಡವರು). ನಂತರ ಶ್ರೀನಿವಾಸರ ಜೊತೆ ವೀರಪ್ಪನ್ ಚಿತ್ರದ ಬಗ್ಗೆ ವ್ಯಾಪಕ ಚರ್ಚೆ ನಡೆಸಿ, ಲೋಕೇಶ್ ವೀರಪ್ಪನ್ ಗುರುವಿನ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದಾಗ ಶ್ರೀನಿವಾಸ್ ‘ವೀರಪ್ಪನ್ ಗುರು ಸೇವನ್ಗೌಂಡರ್ ಕೊಳತ್ತೂರಿನಲ್ಲಿದ್ದಾರೆ’ ಎಂದ ತಕ್ಷಣ, ‘ಹಾಗಿದ್ದರೆ ಅವರನ್ನು ನಾನು ನೋಡಬೇಕು, ಆ ಪಾತ್ರಕ್ಕೆ ಜೀವ ತುಂಬಬೇಕು’ ಎಂದಿದ್ದರು ಲೋಕೇಶ್. ಡಿಸಿಎಫ್ ಶ್ರೀನಿವಾಸ್ ಎರಡೂ ಕೈಯಲ್ಲೂ ರಿವಾಲ್ವರ್ ಹಿಡಿದು ನಮ್ಮನ್ನೆಲ್ಲ ಕೂರಿಸಿಕೊಂಡು ನಡೆದೇಬಿಟ್ಟರು ಕೊಳತ್ತೂರಿಗೆ.
ಸೇವನ್ಗೌಂಡರ್ ಮಗ ಕೊಳತ್ತೂರಿನಲ್ಲಿ ಮ್ಯಾಜಿಸ್ಟ್ರೇಟರ್ ಆಗಿದ್ದರು. ನಮ್ಮ ಪರಿಚಯವಾದ ನಂತರ ಅಸಲಿಯಲ್ಲ, ಸೇವನ್ಗೌಂಡರ್ ವೀರಪ್ಪನ್ ಬಗ್ಗೆ ಮಾತು ಹರಿಸಿದರು. ಆ ಮಾತುಗಳೇ ವೀರಪ್ಪನ್ ಕತೆಯಾಗಿದ್ದು. ಅವರು ಬಳಸುತ್ತಿದ್ದ ತಮಿಳ್ ಮಿಕ್ಸೆಡ್ ಇಂಗ್ಲಿಶ್ ಅನ್ನೂ ಲೋಕೇಶ್ ಅಭ್ಯಾಸ ಮಾಡುತ್ತಾ ಹೋದರು. ನಾನು ತಮಾಷೆಯಾಗಿ, ‘ನಿಮ್ಮ ಇಂಗ್ಲೀಷು ಆ ಪಾತ್ರಕ್ಕೆ ಸೂಟ್ ಆಗುತ್ತೆ ಅದು ಶಿವಾಜಿನಗರದ್ದು’ ಎಂದಾಗ ಕೋಪ ಮಾಡಿಕೊಳ್ಳಲೇಯಿಲ್ಲ.
ಹೀಗೆ ತಮ್ಮ ವ್ಯಕ್ತಿತ್ವದ ಎಲ್ಲಾ ಮನಸ್ಸುಗಳನ್ನೂ ನಟನೆಗೆ ಒಮ್ಮಿಂದೊಮ್ಮೆಲೇ ಜರ್ರೆನ್ದು ಜಾರಿಸಿಬಿಡುತ್ತಿದ್ದರು.
‘ಭುಜಂಗಯ್ಯನ ದಶಾವತಾರ’ ಚಿತ್ರ ನಟ-ನಟಿಯರ ಆಯ್ಕೆಯ ಸಂಪೂರ್ಣ ಜವಾಬ್ದಾರಿ ನನ್ನದು. ಸುಶೀಲಳ ಪಾತ್ರಕ್ಕೆ ಪಟ್ಟಿ ಮಾಡುತ್ತಿದ್ದೆವು. ಕೃಷ್ಣ ಆಲನಹಳ್ಳಿ ಈಷ್ಟೊತ್ತಿಗಾಗಲೇ ಕೆಲವು ಬದುಕಿರುವ ಪಾತ್ರಗಳನ್ನು ಪರಿಚಯಿಸಿದ್ದ. ಜೀವಂತವಿದ್ದ ಪುಂಡರಿ ಪಾತ್ರವನ್ನು ನನ್ನನ್ನು ಬಹಳ ಕಾಡಿದ್ದ. ಅವನು ಎಲ್ಲರ ಮನೆಯ ಹೆಂಡತಿಯರನ್ನೂ ತನ್ನ ಬಾಯಿಯ ರಸಗವಳವನ್ನಾಗಿ ಮಾಡಿಕೊಂಡು ಪೋಲಿ-ಪುಂಡರಿಗೆ ಕತೆ ಮಾಡಿ ಹೇಳುತ್ತಿದ್ದ. ಹೀಗಾಗಿ ಅವನು ಪುಂಡರಿಯಾಗಿದ್ದ ಒಮ್ಮೆ ಅವನು ತನ್ನ ಹೆಂಡತಿಯೇ ಬೇರೆಯವರ ಜೊತೆ ಮಲಗಿದ್ದನ್ನು ಕಂಡು ಆತನ ಮಾತೇ ನಿಂತು ಹೋಯಿತಂತೆ. ಅವನನ್ನು ಕೃಷ್ಣ ನನಗೆ ಪರಿಚಯಿಸುತ್ತಾ, ‘ಭುಜಂಗಯ್ಯನ ದಶಾವತಾರ ಸಿನಿಮಾದ ಮಾತನ್ನು ನಿಲ್ಲಿಸುತ್ತೇನೆ’ ಎಂದು ಹಣದ ತಕರಾರು ಎತ್ತಿದ್ದ. ಚಂದೂಲಾಲ್ ಜೈನ್ ಗೆ ಲೋಕೇಶ್ ಹಣ ನೀಡಿದ್ದರೂ, ಚಿತ್ರದ ಅಗ್ರಿಮೆಂಟನ್ನು ಚಂದೂಲಾಲ್ ಎಲ್ಲಿಯೋ ಕಳೆದುಕೊಂಡಿದ್ದರು. ನಮ್ಮೆಲ್ಲರಿಗೂ ಇಕ್ಕಳದಲ್ಲಿ ಸಿಕ್ಕಂತಾಗಿತ್ತು. ಚಂದೂಲಾಲ್ ಜೈನ್ ನನ್ನನ್ನು ‘ಸೂಜಿಕೇ’ ಎಂದು ಕರೆಯುತ್ತಿದ್ದರು. ಒಮ್ಮೆ ಚಂದೂಲಾಲ್ ಜೈನ್ ಬ್ರಾಂದಿ ಕುಡಿಯುತ್ತಾ ಮುಸುಕಿನ ಜೋಳ ತಿನ್ನುತ್ತಿದ್ದಾಗ ಅವರ ಚಾರ್ಟರ್ಡ್ ಆಕೌಂಟೆಂಟ್ ಬಂದು ‘ತೆಗೆದುಕೊಳ್ಳಿ ಕೃಷ್ಣ ಆಲನಹಳ್ಳಿಯ ಕರಾರು..’ ಎಂದಿದ್ದ. ಆಗ ಲೋಕೇಶ್ ತಟ್ಟನೆ, ‘ಸಿನಿಮಾದ ಮುಂದಿನ ಹೆಜ್ಜೆ ಸುಶೀಲಳ ಪಾತ್ರ’ ಎಂದು ‘ಭಾರತ್ ಏಕ್ ಕೋಜ್’ ಸೀರಿಯಲ್ ನಲ್ಲಿ ನಟಿಸುತ್ತಿದ್ದ ಪಲ್ಲವಿ ಜೋಶಿಯನ್ನು ತೋರಿಸಿದ್ದರು.
ಇದೊಂದು ಲೋಕೇಶ್ ರ ತಮ್ಮ ಚಿತ್ರದ ನಟಿಯ ಆಯ್ಕೆ ಗಮನಿಸಿ. ಅಂದು ಪಲ್ಲವಿ ಜೋಶಿ ತನ್ನ ನಟನೆಯಿಂದ ಹೆಸರು ಮಾಡಿದ್ದವಳು. ಆಕೆ ತಂದೆ ಪ್ರಬುದ್ಧ ಮರಾಠಿ ನಾಟಕಕಾರರಾಗಿದ್ದರು. ಸುಶೀಲಳ ಪಾತ್ರ; ಬಹಳ ಜ್ಯೂಸಿಯ ಪಾತ್ರ, ಕೃಷ್ಣ ಆಲನಹಳ್ಳಿ ಟ್ರೇಡ್ ಮಾರ್ಕ್. ಆದರೆ ಪಲ್ಲವಿ ಜೋಶಿ ಟೆನ್ನಿಸ್ ಕೋರ್ಟ್ ಇದ್ದಂತೆ. ಇವಳ ಸ್ನಾನದ ದೃಶ್ಯದ ಚಿತ್ರೀಕರಣ ಆಗುವಾಗ ಕೆಮೆರಾ ಹಿಂದೆ ನಾನು-ರವಿ ನಗುತ್ತಿದ್ದಾಗ ಲೋಕೇಶ್ ಮೀಸೆ ತಿರುವುತ್ತಾ ‘ನಾನೂ ನಿಮ್ಮ ಜೋಕಿನ ವಸ್ತುವಲ್ಲ ತಾನೇ.’ ಎಂದಾಗ, ‘ಇಲ್ಲ ನಿಮ್ಮ ನಟಿ’ ಎಂದೆ.
ಏನು? ‘
ಮತ್ತಿನ್ನೇನು, ಸ್ವಲ್ಪ ಎಕ್ಸ್ಪೋಸ್ ಮಾಡಿ ಎಂದರೆ, ಕಾಣುವುದು ಬಟ್ಟೆ ಪ್ಯಾಡಿಂಗ್’ ಎಂದಾಗ ‘ಅವುಳ್ ಕಣ್ ನೋಡ್ರೀ ಎಷ್ಟು ಚೆನ್ನಾಗಿ ಆಕ್ಟ್ ಮಾಡ್ತಾಯಿದ್ದಾಳೆ. ಚಿಟ ರಿಜಚಿಟಠಣ ಠಜಿ ಜಡಿ ಚಿಛಿಣಟಿರ..’ ಎಂದಿದ್ದರು ಲೋಕೇಶ್. ಇಲ್ಲಿ ನೋಡಿ ನಿಜ ಕಲಾವಿದನೊಬ್ಬ ತನ್ನ ಸಹಕಲಾವಿದೆಯೊಬ್ಬರನ್ನು ಗೌರವಿಸುತ್ತಾ, ಅವರ ಕಲಾ ಫ್ರೌಡಿಮೆಗೆ ಮನ್ನಣೆ ನೀಡುತ್ತಾ ಮುಂದೆ ಸಾಗಿ ಪ್ರಬುದ್ಧ ಅಭಿನಯವೇ ತಮ್ಮ ಅಭಿನಯದ ಉಸಿರು ಎಂದು ನನಗೆ ತನ್ನಲ್ಲಿದ್ದ, ಬೌನ್ಸ್ ಆಗಿದ್ದ ಚೆಕ್ಕುಗಳನ್ನು ತೋರಿಸಿ, ‘ಇದು ನಮ್ಮ ಸಿನಿಮಾ. ನಾನು ಇಂಥವನಾಗಬಾರದು..’ ಎಂದಿದ್ದರು. ‘ಭುಜಂಗಯ್ಯನ ದಶಾವತಾರ’ದ ಬಿಡುಗಡೆಯ ಹಿಂದಿನ ದಿನ ನನ್ನ ಕೈಗೆ ಅಳುಕಿನಿಂದಲೇ ಅತ್ಯಂತ ಕಮ್ಮಿ ಹಣ ನೀಡುತ್ತಿದ್ದೇನೆ ಎಂದು ಕೈಯಲ್ಲಿ ಹಣ ಇಟ್ಟು, ತನ್ನ ಹೆಂಡತಿಯ ಮುಂದೆ ‘ಅಂತೂ ಸಿಜಿಕೆಗೆ ಹಣ ನೀಡಕ್ಕಾಯ್ತು..’ ಎಂದಿದ್ದರು.
ಸುಮನ್ ಅವರು ಒಬ್ಬ ಹೆಣ್ಣಾಗಿದ್ದರಿಂದಲೋ ಏನೋ ಲೋಕೇಶರ ಮನಸ್ಸನ್ನು ಅರಿಯಲು ಗಿರಿಜಾರ ಬಾಯಿ ಬಿಡಿಸಿದ್ದಾರೆ. ನಾವು ಪ್ರೀತಿ-ವಿಶ್ವಾಸದಿಂದ ಗಿರಿಜಾಳನ್ನು ಲೋಕೇಶರ ರೀತಿಯಲ್ಲಿಯೇ ‘ಗೀ..’ ಎಂದು ಕರೆಯುತ್ತಿದ್ದೆವು. ಎಂದೂ ಗಂಡನ ವೈಯಕ್ತಿಕ ಅಭ್ಯಾಸಗಳಿಗಾಗಲಿ ಅಥವಾ ವೈಯಕ್ತಿಕ ವ್ಯವಹಾರಗಳಲ್ಲಾಗಲಿ ತಲೆ ತೂರಿಸಿದೇ ಇದ್ದ ‘ಗೀ..’ ಲೋಕೇಶ್ರ ಇನ್ನೊಂದು ಮುಖ. abundant talented actress and a perfect match to lokesh.
’ಗೀ..’ ಅವರಿಗೆ ಲೋಕೇಶ್ ರ ಬಗ್ಗೆ ಎಷ್ಟು ಕಾನ್ಫಿಡೆನ್ಸ್ ಇತ್ತೆಂದರೆ, ಒಮ್ಮೆ ಚಂದೂಲಾಲ್ ಜೈನ್ ಮದ್ರಾಸಿನಲ್ಲಿ ನಟಿ ಲಕ್ಷ್ಮಿಯೊಂದಿಗೆ ರಾತ್ರಿಯೆಲ್ಲಾ ಚೆಸ್ ಆಡುತ್ತಿದ್ದರು ಎಂದು ಸೀರಿಯಸ್ಸಾಗಿ ಮತ್ತು ಜೋಕ್ ಆಗಿ ದೂರು ನೀಡಿದಾಗ, ಗೀ ನಗುತ್ತಾ, ‘ನನ್ನ ಗಂಡ ಲೋಕೇಶ್ ರ್ರೀ’ ಎಂದಿದ್ದರು. A confidence partner with lokesh. ಇದು ‘ಗೀ’ಯ ಕಾನ್ಫಿಡೆನ್ಸ್ ಅಲ್ಲ, ಲೋಕೇಶ್ರ ಜೀವನದ ಇನ್ನೊಂದು ಮಜಲು.
ಹೀಗೆ ಲೋಕೇಶ್ ರ ಬಗ್ಗೆ ಬರೆಯುತ್ತಾ ಹೋದಂತೆ an endless journey ಎನಿಸುತ್ತದೆ ನನಗೆ. ಸುಮನಾ ಕಿತ್ತೂರು ಈ endless journey ಯಲ್ಲಿ ಅಲ್ಲಲ್ಲಿ ತೂರಿ, ಕಾಡಿ, ಬೇಡಿ ನೆನಪನ್ನು ಮರುಕಳಿಸಿ ಲೋಕೇಶ್ ರ ಮುಂದೆ ಪೆನ್ನು ಹಿಡಿದು ಕೂತಿದ್ದರಿಂದ ತಮ್ಮ ಜೀವನದ ಪುಟ್ಟ ಮತ್ತು ಕೊನೆಯ ಗೆಳತಿ ಎನ್ನುವ ಭಾವೋದ್ವೇಗದಲ್ಲಿ ತನ್ನ ಕತೆಯನ್ನು ಹೇಳಿಕೊಂಡಿದ್ದಾರೆ. ಈ ಕತೆ ಅಪೂರ್ಣ ಅನ್ನಿಸಬಹುದು, ಕಾರಣ, ಲೋಕೇಶ್ ರ ಸಾವಿರಬಹುದು. ಲೋಕೇಶ್ ರಿಗೆ ತಮ್ಮ ಚಿತ್ರೋದ್ಯಮದ ಬಗ್ಗೆ ಸಾಕಷ್ಟು ಅಪಸ್ವರದ ಧ್ವನಿಗಳಿದ್ದವು. ಕಾರಣ, ಫಿಲಂ ಇಂಡಸ್ಟ್ರಿ ಒಂದು ಮನೆಯಂತಿಲ್ಲ ಎನ್ನುವುದಾಗಿತ್ತು. ಇಲ್ಲಿ ಹಣ, ಗೆಜ್ಜೆ ಇಷ್ಟೇ ನಿರ್ಧರಿಸುತ್ತೆ. ಎಲ್ಲವೂ ಕೂಡ ವ್ಯಾಪಾರಿ ಮುಖದಲ್ಲಿ ಕಾಣಬೇಕು. ಆದರೆ ರಂಗಭೂಮಿಯಲ್ಲಿ ಎಷ್ಟೋ ವರ್ಷದ ಹಳೆಯ ಗೆಳೆಯ ಸಿಕ್ಕಿದರೆ, ಹೆಗಲಮೇಲೆ ಕೈ ಹಾಕಿಕೊಂಡು ‘ಏನ್ ಗುರೂ.’ ಅನ್ನುತ್ತಾರೆ. No distance at all.  ಅದಕ್ಕೆ ಲೋಕೇಶ್ ತಮ್ಮ ಆತ್ಮಕತೆಯಲ್ಲಿ ಹೇಳಿಕೊಂಡಿದ್ದಾರೆ; ತನ್ನ ತಂದೆ ಸಿನಿಮಾ-ನಾಟಕ ಕಂಡಿದ್ದರೂ, ನಾಟಕದಲ್ಲಿ ಗಳಿಸಿದ್ದನ್ನು ಅಲ್ಲಿಯೇ ಕಳೆದುಕೊಂಡಿದ್ದನ್ನು ಮತ್ತು ಇದನ್ನೇ ತಮ್ಮ ಬದುಕಿನ ಪಾಠವಾಗಿಸಿಕೊಂಡಿದ್ದನ್ನು.
ಮರೆಯುವ ಮುಂಚೆ ‘ಭುಜಂಗಯ್ಯನ’ ಸಾವಿನ ಬಗ್ಗೆ ಚರ್ಚೆ ಮಾಡುತ್ತಿದ್ದಾಗ, ಸಾವಿನ ನಂತರ ಏನು ಮನುಷ್ಯನ ಸ್ಥಿತಿ ಎಂದ ತಕ್ಷಣ ಅಂದಿನ ಪತ್ರಿಕೆಯಲ್ಲಿ ಬಂದಿದ್ದ ಸುದ್ದಿ ಗಮನಿಸಿ, ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೊಯ್ಯಲು ಹೆಣ ಸಿಗುವುದಿಲ್ಲ ಅನ್ನುವುದು ತಿಳಿದಾಗ, ತಕ್ಷಣವೆ ಕಣ್ಣು ದಾನ ಮಾಡಿ, ತಮ್ಮ ದೇಹವನ್ನು ರಾಮಯ್ಯ ಆಸ್ಪತ್ರೆಗೆ ದಾನ ಮಾಡಿದರು. Can you bel;ieve that he belongs to film industry? That is Lokesh.
ಸುಮನಾ ಕಿತ್ತೂರು ಓದುಗರ ಅಂಕಣದಲ್ಲಿ. ಅದರಲ್ಲೂ ಟ್ಯಾಬ್ಲಾಯ್ಡ್ನಲ್ಲಿ, ಒಬ್ಬ ಪ್ರಸಿದ್ದ ನಟ, ಅವನ ಕತೆ-ವ್ಯಥೆ, ಅವನು ಸವೆಸಿದ ಹಾದಿ ಇವೆಲ್ಲವನ್ನೂ ತನ್ನ ಪುಟ್ಟ ಕಂಗಳಲ್ಲಿ ಗ್ರಹಿಸಿ ನೇಸಾರದ ನೇಸರಕ್ಕೆ ದೃಷ್ಟಿ ತಾಗದ ರೀತಿ ಲೋಕೇಶ್ ಕತೆಯನ್ನು ನೋಡಿದ್ದಾರೆ. ಭೂಜಂಗಯ್ಯ ಚಿತ್ರದ endನಲ್ಲಿ ಭುಜಂಗಯ್ಯ ಮತ್ತು ಸುಶೀಲಳ ಅಂತಿಮ ಯಾತ್ರೆಯ ದೃಶ್ಯ ಚಿತ್ರೀಕರಿಸಲು ಚಟ್ಟದ ಮುಂದೆ ನಿಂತು ಸಿಗರೇಟ್ ಸೇದಿ ನಾನೂ ತಯಾರಿಯಲ್ಲಿದ್ದಾಗ ಹೆಣದ ಪಾತ್ರದಲ್ಲಿ ಮಲಗಿದ್ದ ಲೋಕೇಶ್ ‘ಒಂದು ನಿಮಿಷ..’ ಎಂದು ಎದ್ದು ಬಂದು, ಮಡಕೆಯನ್ನು ಈ ರೀತಿ ಹಿಡಿಯಬೇಕು ಎಂದು ಬಾಲ ನಟನಿಗೆ ವಿವರಣೆ ನೀಡಿ ಮತ್ತೆ ಚಟದ ಮೇಲೆ ಮಲಗಿ ನನ್ನ ಕಿವಿಯಲ್ಲಿ, ‘ನನ್ನ ತಂದೆ-ತಾಯಿ ಸತ್ತಾಗ ಹಾಗೆಯೇ ಹಿಡಿದು ಹೋಗಿದ್ದೆ..’ ಎಂದಿದ್ದರು.
Can i, ರವೀ, ವಿಜಿ, ಚಂದೂಲಾಲ್ ಜೈನ್, ಗೀ… Can we forget Lokesh ….?!
‘No’.
ಈ ಪುಸ್ತಕದಲ್ಲಿ ಈ ಉತ್ತರ ನೀಡಿದವರು ಸುಮನಾ ಕಿತ್ತೂರು.
ಹೇಗೆ ನೋಡಿದರೂ ಪರಸಂಗದ ಲೋಕೇಶ್, ಭುಜಂಗಯ್ಯ ಲೋಕೇಶ್… ಎಲ್ಲಿ ಹುಡುಕುವಿರಿ ಈಗ ಅಂತಹ ಪಾತ್ರಗಳಿಗೆ.
That is Lokesh.
-ಸಿ.ಜಿ.ಕೆ

‍ಲೇಖಕರು avadhi

February 27, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

3 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: