`ಸೀತೆ’ ಎಂಬ ಬದನೆಕಾಯಿ ಪುರಾಣ!

 chetana.jpg

“ಭಾಮಿನಿ ಷಟ್ಪದಿ”

ಚೇತನಾ ತೀರ್ಥಹಳ್ಳಿ

ಹ್ಹ್! ಈಗ ನಾನು ಸೀತೆಯಾಗೋದು ಇವರ್‍ಯಾರಿಗೂ ಬೇಕಿಲ್ಲ!!

ಇದೇ ಅಮ್ಮ ಆಗೆಲ್ಲ ಹೇಳ್ತಿದ್ದ ಮಾತು ನಂಗೆ ನೆನಪಿದೆ, “ತಗ್ಗಿ ಬಗ್ಗಿ ನಡೀಬೇಕಮ್ಮಾ, ಸೀತೆ ಹಾಗೆ ಬಾಳ್ಬೇಕು…”
ನಂಗೂ ಅದು ಇಷ್ಟವೇ ಇತ್ತೆನ್ನಿ. ಸರಭರದ ಉದ್ದನೆ ಲಂಗ, ಮುಸ್ಸಂಜೆ ಭಜನೆ, ಆರತಿ, ಬಣ್ಣದ ರಂಗೋಲಿ, ಘಮಘಮದ ಹೂವಲ್ಲಿ ಮಂಗಳ ಗೌರಿ ಪೂಜೆ….

niluvu.jpg

“ದೇವಿಗೆ ಒಳ್ಳೆ ಹೂವನ್ನ ಏರಿಸಿದ್ರೆ ಮಲ್ಲಿಗೆಯಂಥ ಗಂಡ ಸಿಗ್ತಾನೆ!” ವ್ರತದ ದಾರ ಕೈಗೆ ಸುತ್ತುತ್ತ ಅಮ್ಮ ರಂಗಾಗುತ್ತಿದ್ದಳು. “ನೀನು ಹತ್ತಿ ಹೂವು ಏರಿಸಿದ್ಯೇನೋ… ಮೆತ್ತಗಿದಾರೆ ನೋಡು ನನ್ನಪ್ಪ!” ನಾನು ಅವಳನ್ನ ಮತ್ತಷ್ಟು ಕೆಂಪಾಗಿಸ್ತಿದ್ದೆ.

ಈಗ, ಎಲ್ಲರ ಮುಖದ ಬಣ್ಣವೂ ಇಳಿದುಹೋಗಿದೆ. ಅಮ್ಮನಂತೂ ಪೂರಾ ಬಿಳುಚಿ ಹೋಗಿದ್ದಾಳೆ. ಮನೆ ಮರ್ಯಾದೆ ಬೀದಿಗೆ ಬಂದು ಕುಂತಿದೆ ಅಂದುಕೊಂಡು ಬೆದರಿದ್ದಾಳೆ. ಪಾಪ!

* * *

ಅಪ್ಪ `ಅನುಕೂಲಸ್ಥರ ಮನೆ’ ಅನ್ನೋ ಒಂದೇ ಕಾರಣಕ್ಕೆ ಪೂರ್ವಾಪರ ನೋಡದೆ ನನ್ನ ದಾನ ಮಾಡಿಬಿಟ್ಟ. ಧಾರೆ ನೀರಲ್ಲಿ ಕೈ ತೊಳೆದು ತಾನು ನಿಸೂರಾದ. ಶ್ರೀಮಂತಿಕೆಯ ಗೌಜಿಯಲ್ಲಿ ನಾನು ಹಾಗೇ ಕಳೆದುಹೋಗಿಬಿಟ್ಟೆ.
 
ಜಾಜಿ ಮಲ್ಲಿಗೆಯೇರಿಸಿ ಮಂಗಳಗೌರಿಗೆ ಅಡ್ಡ ಬಿದ್ದಿದ್ದ ನನಗೆ ಸಿಕ್ಕಿದ್ದು ಜೂಜುಕೋರ ಗಂಡು! ಯಾವ ಜನ್ಮದ ಕರ್ಮ ಉಳಿದಿತ್ತೋ ಅಂತ ಹಲ್ಲು ಕಚ್ಚಿ ಸುಮ್ಮನುಳಿದೆ.  ಅಷ್ಟೇ ಆಗಿದ್ದಿದ್ದರೆ ಇವತ್ತಿನ ಪಂಚಾಯತಿ ಅಗತ್ಯವಿರುತ್ತಿರಲಿಲ್ಲವೇನೋ? ಅಂವ ಒಬ್ಬ ಶುದ್ಧ ಅನುಮಾನದ ಪಿಶಾಚಿಯೂ ಆಗಿದ್ದ.
 
ಮನೆಗೆ ಬಂದು ಹೋಗುವ ಗಂಡಸರೆದುರು ನಾನು ಬರುವ ಹಾಗೇ ಇರಲಿಲ್ಲ. ತೀರಾ ಆಳುಮಕ್ಕಳ ಹತ್ತಿರ ಕೆಲಸದ ವಿಷಯ ಮಾತಾಡುತ್ತ ನಿಂತರೂ ಅಂವ ನನ್ನೇ ಕೆಕ್ಕರಿಸಿ ನೋಡುತ್ತಿದ್ದ. ಒಳ ಬಂದ ಕೂಡಲೇ, `ಭೋಸುಡೀ…’ ಅನ್ನುತ್ತ ಧಬಧಬ ಹೇರುತ್ತಿದ್ದ. ಅತ್ತೆ ಇಲ್ಲದಾಗಲಂತೂ ನನ್ನ ಒಳಗೆ ಹಾಕಿ ಬಾಗಿಲು ಬೀಗ ಜಡಿಯದೆ ಅಂವ ಹೊರಗೆ ಕಾಲಿಡುತ್ತಿರಲಿಲ್ಲ!

ಇದೆಲ್ಲ ಅತಿರೇಕಕ್ಕೆ ಹೋಗಿದ್ದು ಅವತ್ತು… ನನ್ನ ಹೈಸ್ಕೂಲಿನ ಗೆಳೆಯ ಮನೆ ಹುಡುಕಿಕೊಂಡು ಬಂದ ದಿನ. ಟ್ರೇಯಲ್ಲಿಟ್ಟಿದ್ದ ಕಾಫಿಯನ್ನು ಅವನೆದುರೇ ಮುಖಕ್ಕೆ ರಾಚಿ, ಕೆಟ್ಟಾಕೊಳಕ ಮಾತಾಡಿ, ಬಟ್ಟೆ ಬುಟ್ಟಿಯೊಡನೆ ಹೊರ ತಳ್ಳಿಬಿಟ್ಟನಲ್ಲ…. ಅವತ್ತು.

ಇವೆಲ್ಲಾ ನನ್ನಿಂದಲೇ ಆಗಿದ್ದು ಅಂತ ಮುಖ ಮುದುಡಿಕೊಂಡ ಅಂವ, ನನ್ನ ಇಲ್ಲಿ ತಂದು ಬಿಟ್ಟು ಹೋದ. ಇಲ್ಲಿಗೆ ಬಂದ ಮೇಲೆ ನಾನು ಬದಲಾಯಿಸುತ್ತಿರೋದು ಇದು ನಾಲ್ಕನೇ ಕ್ಯಾಲೆಂಡರು. ಹಳೆಯ ಪುಟಗಳ ಪ್ರತಿ ಡೇಟಿನ ಮುಂದೂ ಚುಕ್ಕಿ. ಆ ಎಲ್ಲ ಚುಕ್ಕಿಗಳಲ್ಲಿ ನನ್ನ ದುಡಿಮೆಯ ಲೆಕ್ಕ. ಸುಖವಿತ್ತು ನನಗಿಲ್ಲಿ, ಈ ಇವರೆಲ್ಲ ಬರುವ ತನಕ.

ಹೌದು.
ಅವನ ಬಿಸಿನೆಸ್ಸು ಮಖಾಡೆ ಮಲಗಿತಂತೆ. ತೋಟದ ರೇಟು ಬಿದ್ದು ಹೋಯ್ತಂತೆ. ಅಕ್ಕ, ತಮ್ಮ ಕೈಕೊಟ್ಟು ತಾರಮ್ಮಯ್ಯ ಅಂದುಬಿಟ್ಟರಂತೆ! ಜಾತಕ ಗುಣಿಸಿದ ಜ್ಯೋತಿಷಿ, ಮನೆ ಲಕ್ಷ್ಮಿಯನ್ನ ಕರಕೊಂಡು ಬಾ ಹೇಳಿದರಂತೆ…

ಹಾಗಂದುಕೊಂಡು ಬಂದಿದ್ದಾನೆ. ಬಲಕ್ಕಿರಲಿ ಅಂತ ಜೊತೆಗೆ ನನ್ನಪ್ಪ- ಅಮ್ಮನನ್ನೂ, ಊರ ನಾಲ್ಕು ಮಂದಿಯನ್ನೂ ಕರೆತಂದಿದ್ದಾನೆ!

ಈಗ, ಸುಮ್ಮಸುಮ್ಮನೆ ತಲೆ ತಗ್ಗಿಸಿ ನಿಂತ ಅಪ್ಪ ಅಮ್ಮ, ನನ್ನ ವಾದಕ್ಕೆ ಸಿಡುಕ್ತಿದ್ದಾರೆ. ಊರ ಜನ ಬಾಯಿಗೆ ಬಂದದ್ದೇ ಹದ ಹೇಳ್ತಿದ್ದಾರೆ. “ಹೆಣ್ಣಾದವಳು ಅನುಸರಿಸ್ಕೊಂಡು…” ಮತ್ತದೇ ಶತಶತಮಾನದ ಹಳೇಹಪ್ಪಟ್ಟು ಡೈಲಾಗು.

* * *

ಅವತ್ತು ರಾಮನಂಥ ರಾಮನ್ನೇ ನಿರಾಕರಿಸಿ ಗೆದ್ದಿದ್ದಳು ಸೀತೆ.
ಆದರೆ… ಯಾವ ಆದರ್ಶದ ಕಾರಣವೂ ಇಲ್ಲದೆ ನನ್ನ ಹೊರಗಟ್ಟಿದ ಈ ಗಂಡಸನ್ನ ನಿರಾಕರಿಸುತ್ತಿರುವ ನನಗೆ ಇವತ್ತು ಕವಡೆ ಕಿಮ್ಮತ್ತೂ ಇಲ್ಲ!
`ಸೀತೆಯಂತೆ ಬಾಳಿ ಬದುಕು’ ಅಂದಿದ್ದ ಇವರ್‍ಯಾರಿಗೂ ಈಗ, ನಾನು `ಸೀತೆ’ಯಾಗಿ ಗೆಲ್ಲೋದು ಬೇಕಿಲ್ಲ….!

‍ಲೇಖಕರು avadhi

January 24, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಚೇತನಾ ಎಂಬ ‘ಗಾನಾ ಜೋಯ್ಸ್

ಚೇತನಾ ಎಂಬ ‘ಗಾನಾ ಜೋಯ್ಸ್

' ಕನಸುಗಾರ ವೆಂಕಟ್ರಮಣ ಗೌಡರು 'ಹಂಗಾಮ' ಆರಂಭಿಸಿದಾಗ ಮೂಡಿ ಬಂದ ವಿಶಿಷ್ಟ ಲೇಖಕಿ ಗಾನಾ ಜೋಯ್ಸ್. ಈಗ ಈಕೆ ಚೇತನಾ ತೀರ್ಥಹಳ್ಳಿ. ಈಗಾಗಲೇ...

ಪ್ರೀತಿಯಿಂದ, ಚೇತನಾ ತೀರ್ಥಹಳ್ಳಿ

ಪ್ರೀತಿಯಿಂದ, ಚೇತನಾ ತೀರ್ಥಹಳ್ಳಿ

ಹಳೆಯ ನೆನಪು ಮತ್ತು ಒಂದು ಹೊಸ ಪುಸ್ತಕ ಈಗ ಅದೆಲ್ಲ ಮಜಾ ಅನಿಸತ್ತೆ. ನಾನು ಒಂದನೇ ಕ್ಲಾಸಿಂದ ಫಸ್ಟ್ ಬಿಎಸ್ಸಿ ವರೆಗೂ ಒಂದೇ ಒಂದು ನೋಟ್ಸೂ...

ಭಾಮಿನಿ ಷಟ್ಪದಿ ಎಂಬ “ಅಂಕಣ ಕಾದಂಬರಿ”

ಭಾಮಿನಿ ಷಟ್ಪದಿ ಎಂಬ “ಅಂಕಣ ಕಾದಂಬರಿ”

-ನಟರಾಜ್ ಹುಳಿಯಾರ್ 'ಕಾಲಲಿ ಕಟ್ಟಿದ ಗುಂಡು, ಕೊರಳಲಿ ಕಟ್ಟಿದ ಬೆಂಡಿ'ನ ಸ್ಥಿತಿಯನ್ನು ನಿಷ್ಠುರ ಸ್ತ್ರೀವಾದಿ ದೃಷ್ಟಿಕೋನದಿಂದ ಗ್ರಹಿಸಿ ಚೇತನಾ...

3 ಪ್ರತಿಕ್ರಿಯೆಗಳು

 1. Malathi S

  As usual soul stirring write up. I read all that u write. Somehow I am dumbstruck as to how to respond. You have a fantastic way with words. But then I wanted to show my appreciations of your amazing writing prowess. Well done.

  Malathi S

  ಪ್ರತಿಕ್ರಿಯೆ
 2. ರವಿ ಅಜ್ಜೀಪುರ

  ತೀರ್ಥಹಳ್ಳಿ ಅಂದ್ರೆ ನನ್ನ ಮನಸ್ಸೂ ಯಾಕೋ ಒಳಗೊಳಗೇ ಪುಳಕಗೊಳ್ಳುತ್ತೆ. ಅಲ್ಲೊಂದು
  ನಕ್ಷತ್ರವಿತ್ತು ಅನ್ನೋದನ್ನ ಹೇಗೆ ಹೇಳಲಿ.
  ನಿಮ್ಮ ಬರಹ ಸೂಪರ್. ತುಂಬಾ ಕಾಡಿಬಿಡ್ತು ಕಣ್ರಿ.
  ಬರಹ ನಿರಂತರವಾಗಿಲಿ…

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: