ಸುಖಕ್ಕೆ ಕಥೆಯಿಲ್ಲ…

-ಹರೀಶ್ ಖೇರ

…. ಸುಖವಾಗಿದ್ದರು ಎಂಬಲ್ಲಿಗೆ, ಭದ್ರಂ ಶುಭಂ ಮಂಗಳಂ. ಆಮೇಲೆ ?
ಅಲ್ಲಿಗೆ ಕತೆ ಮುಗಿಯುತ್ತದೆ. ಆಮೇಲೆ ಯಾವ ಕತೆಯೂ ಇಲ್ಲ. ಸುಖವಾಗಿದ್ದರು ಎಂದ ಮೇಲೆ ಅವರ ಕತೆಯನ್ನಾದರೂ ಯಾರು, ಯಾಕೆ ಕೇಳಬೇಕು ? ಹೇಳುವವರಾದರೂ ಯಾರು ?
ಸುಖದ ಕಡೆಗೆ ವಿಡಿಯೋ ಕೆಮರಾ ತಿರುಗುವುದಿಲ್ಲ. ಹಾಗೆ ತಿರುಗುವುದಿದ್ದರೆ ಅದು ಮದುವೆ ವಿಡಿಯೋ ಮಾತ್ರ.
ನಮಗೆ ಯಾರದಾದರೂ ಕಷ್ಟದ, ಸಂಕಟದ ಕತೆ ಹೇಳಿ. ದುಃಖದ ಕತೆ ನಿರೂಪಿಸಿ. ಹಾಗಂತ ಜನ ಕೇಳುತ್ತಾರೆ. ಸುಖವಾಗಿರುವ ಸಂಸಾರವನ್ನು ಟಿವಿಯಲ್ಲಿ ತೋರಿಸಿ. “ಎಷ್ಟು ಚೆನ್ನಾಗಿದ್ದಾರೆ ನೋಡಿ’ ಎಂದು ಬೊಮ್ಮಡ ಬಜಾಯಿಸಿ. ಯಾರೂ ನೋಡುವುದಿಲ್ಲ. ಟಿವಿ ಆಫ್ ಮಾಡಿ ಅವರ ಪಾಡಿಗೆ ಎದ್ದು ಹೋಗುತ್ತಾರೆ.
ಬರ್ಬರ ಕೊಲೆಯಾದ ವ್ಯಕ್ತಿ, ಹೊತ್ತಿನ ತುತ್ತಿಗೆ ಆತನನ್ನೇ ನಂಬಿದ್ದ ಅವನ ಮನೆಯವರು, ಆತ ತರುತ್ತಾನೆಂದಿದ್ದ ಐಸ್‌ಕ್ರೀಮ್ ನಂಬಿ ಕುಳಿತಿದ್ದ ಆತನ ಅಮಾಯಕ [ಟ್ಟ ಮಗಳು- ಎಲ್ಲವನ್ನೂ ತೋರಿಸಿ ಒಂದು ಕ್ರೈಂ ಡೈರಿ ಮಾಡಿ. ಮರುದಿನವೂ ಅದೇ ಹೊತ್ತಿಗೆ ಜನ ಟಿವಿ ಮುಂದೆ ಕುಳಿತಿರದಿದ್ದರೆ ಕೇಳಿ.
ಟಿವಿ ಸೀರಿಯಲ್‌ಗಳಲ್ಲಿ ಕೂಡ ಯಾರೂ ಸುಖವಾಗಿಲ್ಲ. ಎಲ್ಲರಿಗೂ ಅವರವರದೇ ಪಾಡು. ಗಂಡನಿಗೆ ಹೆಂಡತಿ ಕಾಟ, ಹೆಂಡತಿಗೆ ಗಂಡ ಇಟ್ಟುಕೊಂಡವಳ ಕಾಟ, ಅತ್ತೆಗೆ ಸೊಸೆ ಕಾಟ, ಸೊಸೆಗೆ ಸವತಿ ಕಾಟ, ಮಗುವಿಗೆ ಶಾಲೆಯ ಕಾಟ, ಪಾತ್ರಧಾರಿಗಳಿಗೆ ನಿರ್ದೇಶಕರ ಕಾಟ, ನಿರ್ದೇಶಕರಿಗೆ ಟಿಆರ್‌ಪಿ ಕಾಟ !
ಹೊಸ ಕತೆಗಳ ವಿಷಯ ಬಿಡಿ, ಹಳೆಯ ಕತೆಗಳನ್ನೇ ನೋಡಿ. ಅಪ್ಪ ಕೊಟ್ಟ ಮಾತು ಉಳಿಸಿಕೊಳ್ಳಲು ರಾಮ ಇಷ್ಟವಿಲ್ಲದಿದ್ದರೂ ಕಾಡಿಗೆ ಹೋದದ್ದು, ಅವನ ಹಿಂದೆ ಕಲ್ಲುಮುಳ್ಳುಗಳ ಮೇಲೆ ಸೀತೆ ನಡೆದದ್ದು, ಆಕೆಯನ್ನು ರಾವಣ ಹೊತ್ತು ಒಯ್ದದ್ದು, ವಾಲಿಯ ಹತ್ಯೆ, ಶೂರ್ಪನಖಿಯ ಆಕ್ರೋಶ, ರಾಮನ ವಿರಹ, ಸೀತೆಯ ಕಣ್ಣೀರು, ಅಣ್ಣನಿಗೆ ಕೈಕೊಟ್ಟ ವಿಭೀಷಣ, ಮಕ್ಕಳನ್ನೂ ಬಂಧುಗಳನ್ನು ಬಲಿಕೊಟ್ಟ ರಾವಣ, ಆಮೇಲೆ ರಾಮ ಸೀತೆಯನ್ನು ತೊರೆದದ್ದು, ಲವಕುಶರ ಕತೆಯನ್ನೂ ವಿಸ್ತಾರವಾಗಿ ವರ್ಣಿಸುತ್ತಾನೆ ವಾಲ್ಮೀಕಿ.ಆಮೇಲೆ ರಾಮ ಅಯೋಧ್ಯೆಗೆ ಬಂದು ಪಟ್ಟಾಭಿಷೇಕ ಮಾಡಿಸಿಕೊಂಡು ಹದಿನಾರು ಸಾವಿರ ವರ್ಷ ಸುಖವಾಗಿದ್ದ ಎಂದು ಒಂದೇ ವಾಕ್ಯದಲ್ಲಿ ಮುಗಿಸುತ್ತಾನೆ.
ಹದಿನಾಲ್ಕು ವರ್ಷದ ಸಂಕಟದ ಕತೆಗೆ ಹತ್ತಾರು ಕಾಂಡಗಳು, ಸಾವಿರಾರು [ಟಗಳು. ಹದಿನಾರು ಸಾವಿರ ವರ್ಷದ ಸುಖದ ಕತೆಗೆ ಒಂದು ವಾಕ್ಯ !
ಸುಖದಿಂದ ಇದ್ದರೆ ರಾಮಾಯಣ ಆಗುವುದಿಲ್ಲ. ಅಲ್ಲಿರುವುದು ರಾಮನ ದುಃಖ, ಸೀತೆಯ ವಿರಹ, ರಾವಣನ ವ್ಯಗ್ರತೆ, ಊರ್ಮಿಳೆಯ ಮೌನ.
ಮಹಾಭಾರತದಲ್ಲೂ ಅಷ್ಟೇ. ಗಂಗೆಯ ಮಾತಿಗೆ ತಪ್ಪಿದ ಶಂತನು ಮಹಾರಾಜನಿಂದ ಶುರುವಾಗುತ್ತದೆ ಮಾತು ಕೊಡುವ, ಮಾತಿಗೆ ತ[ವ, ಮಾತು ಉಳಿಸಿಕೊಳ್ಳುವ, ಶಪಥ ಮಾಡುವ, ಶಪಥಕ್ಕಾಗಿ ಮಹಾಸಂಗ್ರಾಮ ಮಾಡುವ ಕತೆ. ಕಷ್ಟದಿಂದ ಸುಖಕ್ಕೆ, ಸುಖದಿಂದ ಸಂಕಟಕ್ಕೆ, ಸಂಕಟದಿಂದ ವಿಷಾದಕ್ಕೆ ಜಿಗಿಯುತ್ತ ಹೋಗುವ ಮಹಾಭಾರತದ ಕತೆ ದ್ರೌಪದಿಯ ಸೀರೆಯಂತೆ ಬೆಳೆಯುತ್ತ ಹೋಗುತ್ತದೆ.
ಹುಡುಕಿ ನೋಡಿ ಬೇಕಿದ್ದರೆ- ಮಹಾಭಾರತದಲ್ಲಿ ಸುಖೀ ಮನುಷ್ಯರೇ ಇಲ್ಲ. ಇದು ಅವಮಾನ, ಬೇಗುದಿ, ಪ್ರತೀಕಾರಗಳ ಕತೆ. ಇವೆಲ್ಲದರ ಹಿನ್ನೆಲೆಯಲ್ಲಿ ನಡೆದ ಸಂಗ್ರಾಮದ ಬಳಿಕ ರಾಜ್ಯ ಪಡೆದ ಧರ್ಮರಾಯ ಸಿಂಹಾಸನದಲ್ಲಿ ಎಷ್ಟು ಕಾಲ ಕುಳಿತಿದ್ದ ಎಂಬ ವಿವರವನ್ನು ವ್ಯಾಸರು ನಾಲ್ಕೇ [ಟಗಳಲ್ಲಿ ಮುಗಿಸುತ್ತಾರೆ.
ಆಧುನಿಕ ಕಾಲದ ಎಲ್ಲ ಕತೆಗಾರರು, ಕಾದಂಬರಿಕಾರು ಬಾಯಿಬಿಟ್ಟು ಹೇಳದಿದ್ದರೂ ಈ ಒಂದು ವಿಷಯವನ್ನು ಒಪ್ಪುತ್ತಾರೆ. ಸುಖವೆಂದರೆ ಒಂದೇ ತೆರನಾಗಿರುತ್ತದೆ. ಆದರೆ ಎಲ್ಲರ ದುಃಖವೂ ಬೇರೆಬೇರೆ. ಎಲ್ಲ ಕತೆಗಳಿಗೂ ಇದೇ ಮೂಲ.
ದುಃಖದಲ್ಲಿ ಜಗತ್ತು ತನ್ನ ವೈವಿಧ್ಯಮಯ ವಿನ್ಯಾಸಗಳನ್ನು ತೋರಿಸಿ ಹೊಳೆಯುತ್ತದೆ.


ಟಾಲ್‌ಸ್ಟಾಯ್ ಹೇಳಿದ ಒಂದು ಮಾತನ್ನು ಕೂಡ ಇಲ್ಲಿ ನೆನೆಯಬಹುದು- ಎಲ್ಲ ಸುಖೀ ಸಂಸಾರಗಳೂ ಒಂದೇ ಥರ. ಆದರೆ ಪ್ರತಿಯೊಂದು ಸಂಸಾರವೂ ಅದರದೇ ಆದ ರೀತಿಯಲ್ಲಿ ದುಃಖಿ.

ಭೇಟಿ ಕೊಡಿ: ಬೆಟ್ಟದಡಿ

 

‍ಲೇಖಕರು avadhi

April 19, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

 1. chetana chaitanya

  ಬಹಳ ಹಿಂದೆ… ಒಂದೂವರೆ ದಶಕದ ಹಿಂದೆ… ಸುಧಾದಲ್ಲೋ ತರಂಗದಲ್ಲೋ ಒಂದು ಕಥೆ ಓದಿದ್ದೆ. ‘ಸಿಂಡರೆಲ್ಲಾಳ ಮದುವೆಯ ಅನಂತರ” ಅಂತ. ಬರೆದವರು ಯಾರು ಅಂತ ಆಗ ಓದಿಕೊಂಡಿರಲಿಲ್ಲ. ಆದರೆ ಕಥೆ ಮತ್ರ ಇನ್ನೂ ತಲೆಯಲ್ಲಿ ಹಾಗೆ ಕುಳಿತುಬಿಟ್ಟಿದೆ. ನಾವು ‘ಅಂತೂ ಎಲ್ಲಾ ಸುಖಂತ್ಯವಾಯ್ತು’ ಅಂದುಕೊಂಡಮೇಲೂ ಕಥೆಗೆ ಮತ್ತೊಂದು ತಿರುವು ಹೆಗೆ ಬರಬಹುದು ಅಂತ ಆ ಕಥೆ ತೋರಿಸ್ಕೊಟ್ಟಿತ್ತು.
  ಯಾಕೋ ಕೇರರ ಬರಹ ಓದುವಗ ನೆನಪಾಯ್ತು.
  ಥ್ಯಾಂಕ್ಸ್.
  ಅವಧಿಗೆ, ಕೇರರಿಗೆ.
  ಇನ್ನು ‘ಬೆಟ್ಟದಡಿ’ಗೆ ಹೋಗಬೇಕು.
  – ಚೇತನಾ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: