ಸುದ್ದಿ ಕೂಡಾ ಇಂದು ಮನರಂಜನೆಯಾಗಿಬಿಟ್ಟಿದೆಯಲ್ಲ?

ಸ೦ದರ್ಶನ ಹರ್ಷಕುಮಾರ್ ಕುಗ್ವೆ ಕೃಪೆ : ದ ಸ೦ಡೆ ಇ೦ಡಿಯನ್      

ಚಿರ೦ಜೀವಿ ಸಿ೦ಗ್

ರಾಜ್ಯದ ಕಾರ್ಯಾಂಗದ ಭಾಗವಾಗಿ ಹಲವಾರು ವರ್ಷಗಳ ಉನ್ನತ ಹುದ್ದೆಯನ್ನು ಅಲಂಕರಿಸಿದ್ದೀರಿ. ನಿಮ್ಮ ಅನುಭವಗಳ ಹಿನ್ನೆಲೆಯಲ್ಲಿ ಸಮಾಜದಲ್ಲಿ ಒಬ್ಬ ಅಧಿಕಾರಿಯ ಪಾತ್ರವನ್ನು ಹೇಗೆ ನೋಡುತ್ತೀರಿ? ಅಧಿಕಾರಿಯ ಪಾತ್ರ ಎಂದರೆ ಜನತೆಯ ಸೇವೆ ಮಾಡುವುದಷ್ಟೇ ಆಗಿರುತ್ತದೆ. ಒಬ್ಬ ನಾಗರಿಕ ಸೇವೆಯಲ್ಲಿರುವಾತ ಜನತೆಯ ಸೇವಕನಾಗಿರಬೇಕು. ಹಲವಾರು ಅಧಿಕಾರಿಗಳು ವ್ಯವಸ್ಥೆಯ ಭ್ರಷ್ಟತೆಯೊಂದಿಗೆ ರಾಜಿಯಾಗಿ ಹೋಗುತ್ತಾರೆ. ಇಂತಹದ್ದರಲ್ಲಿ ಒಬ್ಬ ಪ್ರಾಮಾಣಿಕ ಅಧಿಕಾರಿಯಾಗಿ ಸೇವೆ ಸಲ್ಲಿಸಲು ನಿಮಗಿದ್ದ ಪ್ರೇರೇಪಣೆ ಏನು? ಮುಖ್ಯವಾಗಿ ಪ್ರಾಮಾಣಿಕತೆ ಎನ್ನುವುದು ವ್ಯಕ್ತಿಯೊಬ್ಬ ಅಳವಡಿಸಿಕೊಳ್ಳುವ ಮೌಲ್ಯಗಳ ಪ್ರಶ್ನೆಯಾಗಿರುತ್ತದೆಯಷ್ಟೆ. ಎರಡನೆಯದಾಗಿ ನನ್ನ ಮೇಲಿದ್ದ ಬಹಳಷ್ಟು ಅಧಿಕಾರಿಗಳು ಬಹಳ ಒಳ್ಳೆಯವರಾಗಿದ್ದರು. ಹೀಗಾಗಿ ಬೇರೆ ದಾರಿಯೂ ಗೊತ್ತಾಗದ ವಾತಾವರಣದಲ್ಲಿ ನಾನು ಕೆಲಸ ಮಾಡಿದ್ದು ಮತ್ತೊಂದು ಕಾರಣ. ಆದರೆ ಮುಖ್ಯವಾದದ್ದು ನಾವು ಯಾವ ಮೌಲ್ಯವನ್ನು ಹೊಂದಿರುತ್ತೇವೆ ಎನ್ನುವುದು. ನಮ್ಮ ರಾಜಕೀಯ ವ್ಯವಸ್ಥೆ ಪ್ರಾಮಾಣಿಕ ಅಧಿಕಾರಿಗಳ ಮೇಲೆ ಒಂದು ಒತ್ತಡ ನೀಡುತ್ತಿರುತ್ತದಲ್ಲಾ? ಇಲ್ಲಿ ಒತ್ತಡದ ಪ್ರಶ್ನೆ ಅಲ್ಲ. ಪತ್ರಕರ್ತರಾದ ನಿಮಗೆ ಒತ್ತಡ ಇರುವುದಿಲ್ಲವಾ? ಸೇವೆ ಸಲ್ಲಿಸಲು ನೀವು ಯಾವ ಹುದ್ದೆಯಲ್ಲಿದ್ದರೆ ಏನು? ಎಲ್ಲಿದ್ದರೇನು? ಹೆಚ್ಚೆಂದರೆ ಅವರು ನಿಮ್ಮನ್ನು ವರ್ಗಾವಣೆ ಮಾಡಬಹುದು. ಅದಕ್ಕಿಂತ ಜಾಸ್ತಿ ಏನೂ ಆಗುವುದಿಲ್ಲವಲ್ಲ? ಈಗ ಉದಾಹರಣೆಗೆ ನಾನು ಪಂಜಾಬ್‌ನಿಂದ ಬಂದಿದ್ದೇನೆ. ನನಗೆ ಗುಲ್ಬರ್ಗ, ಬೆಳಗಾವಿ ಯಾವುದಾದರೆ ಏನು? ಎಲ್ಲಾ ಒಂದೇ. ವರ್ಗಾವಣೆ ಎನ್ನುವುದು ಒಂದು ಒತ್ತಡ ಅಥವಾ ಭಯವಲ್ಲ. ಯಾರಿಗೂ ಈ ಭಯ ಇರಕೂಡದು. ಈಗಲೂ ಬಹಳಷ್ಟು ದಕ್ಷ ಆಧಿಕಾರಿಗಳಿದ್ದಾರೆ. ಅವರು ಎಲ್ಲೇ ಹೋಗಲಿ ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ. ನಾವು ಇಂದು ಪಾಲಿಸುತ್ತಿರುವ ಅಭಿವೃದ್ಧಿಯ ಮಾನದಂಡಗಳು ಬಹುತೇಕ ವಿಶ್ವಬ್ಯಾಂಕ್- ಐಎಂಎಫ್ ಪ್ರಣೀತ ಮಾನದಂಡಗಳೇ ಆಗಿವೆ. ಇದು ದೇಶದ ಅಭಿವೃದ್ಧಿಗೆ ಎಷ್ಟು ಸಹಾಯಕ? ಈ ಮಾನದಂಡಗಳು ತಪ್ಪು. ಯಾಕೆಂದರೆ ಅವು ಹೇಳುವುದು ಮಾರುಕಟ್ಟೆ ದೃಷ್ಟಿಕೋನವನ್ನು. ಪ್ರತಿಯೊಂದನ್ನೂ ಮಾರುಕಟ್ಟೆಯ ಮೇಲೆಯೇ ನಿರ್ಧರಿಸುವುದು ಸರಿಯಲ್ಲ. ಇದರಿಂದ ಹೊರಬರಲು ನಾವು ನಮ್ಮ ಸಾಂಪ್ರದಾಯಿಕ ದಾರಿಗಳನ್ನು ಕಂಡುಕೊಳ್ಳಬೇಕು. ಬರೀ ಶೇಕಡ ೯ರ ಅಭಿವೃದ್ಧಿ ದರವನ್ನು ಬೆನ್ನತ್ತಿಕೊಂಡು ಹೋಗುವುದೇ ನಮ್ಮ ಏಕೈಕ ಗುರಿಯಾಗಬೇಕಾದ ಅಗತ್ಯವಿಲ್ಲ. ಬಡವರ ಮತ್ತು ಶ್ರೀಮಂತರ ನಡುವಿನ ಅಂತರ ಯಾವ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ ಎಂದು ನೋಡಿ. ಕೆಲವರು ಶೇಕಡ ೯ರ ಬೆಳವಣಿಗೆ ಸಾಧಿಸುತ್ತಿರುವುದು ಸರಿ. ಆದರೆ ಬಹಳಷ್ಟು ಜನರು ಶೇಕಡ ಒಂದರಷ್ಟೂ ಅಭಿವೃದ್ಧಿ ಹೊಂದುತ್ತಿಲ್ಲವಲ್ಲ? ನನ್ನ ದೃಷ್ಟಿಯಲ್ಲಿ ಇದು ಸರಿಯಲ್ಲ. ಬೇಕಾದರೆ ಅಭಿವೃದ್ಧಿ ಸೂಚ್ಯಂಕಗಳಲ್ಲಿ ನಮ್ಮದು ಅಲ್ಪ ಬೆಳವಣಿಗೆ ದರ ಇರಲಿ. ಆದರೆ ಎಲ್ಲರೂ ಸಮಾನವಾಗಿ ಮುಂದೆ ಬರಲಿ. ಎಲ್ಲಾ ಸಮಸ್ಯೆಗಳಿಗೆ ಮಾರುಕಟ್ಟೆಯೇ ಪರಿಹಾರ ಎಂದುಕೊಂಡಿರುವುದು ಸರಿಯಲ್ಲ. ಉದಾಹರಣೆಗೆ ಈ ಹಿಂದೆ ಗಣಿಗಾರಿಕೆಗೆ ಸಂಬಂಧಿಸಿದ ರಫ್ತು ಉದ್ದಿಮೆ ಸಾರ್ವಜನಿಕ ಕ್ಷೇತ್ರದ ಹಿಡಿತದಲ್ಲಿತ್ತು. ಎನ್‌ಎಂಡಿಸಿಯನ್ನು ರಚಿಸಲಾಗಿತ್ತು. ಈಗ ಈ ಕ್ಷೇತ್ರವನ್ನು ಖಾಸಗಿಕರಿಸಿದ ಮೇಲೆ ಏನೆಲ್ಲಾ ಆಗಿದೆ ನೀವೇ ನೋಡುತ್ತಿದ್ದೀರಲ್ಲ. ನಮ್ಮ ಪರಿಸ್ಥಿತಿಯಲ್ಲಿ ಖಾಸಗೀಕರಣವೇ ಎಲ್ಲದಕ್ಕೂ ಪರಿಹಾರ ಅಲ್ಲ. ಹಾಗಂತ ಪ್ರತಿಯೊಂದಕ್ಕೂ ಸರ್ಕಾರ ಕೈಹಾಕಬಾರದು ಎನ್ನುವುದನ್ನು ನಾನು ಒಪ್ಪುತ್ತೇನೆ. ಪ್ರವಾಸೋದ್ಯಮ, ಹೋಟೆಲ್ ಉದ್ಯಮ ಮುಂತಾದವನ್ನು ಸರ್ಕಾರ ನಡೆಸಬೇಕಾಗಿಲ್ಲ. ಆದರೆ ಖನಿಜ ಸಂಪತ್ತು, ನೀರು ಸರಬರಾಜು, ವಿದ್ಯುತ್, ಮುಖ್ಯವಾಗಿ ಶಿಕ್ಷಣ ಇಂತವನ್ನೆಲ್ಲಾ ಸರ್ಕಾರವೇ ನಡೆಸಬೇಕು. ಕರ್ನಾಟಕದಲ್ಲಿ ಆಡಳಿತ ಭಾಷೆಯಾಗಿ ಕನ್ನಡವನ್ನು ಬೆಳೆಸುವ ವಿಚಾರ ಇನ್ನೂ ಕನಸಾಗಿಯೇ ಉಳಿದಿದೆ. ಈ ವಿಷಯದಲ್ಲಿ ಏನಾಗಬೇಕಿದೆ? ಆಡಳಿತ ಭಾಷೆ ಕನ್ನಡ ಅಲ್ಲ ಎಂದು ಹೇಳುವುದು ತಪ್ಪಾಗುತ್ತದೆ. ಹಿಂದಿ ಪ್ರದೇಶಗಳನ್ನು ಬಿಟ್ಟಂತೆ ಉಳಿದ ರಾಜ್ಯಗಳಲ್ಲಿ ಎಲ್ಲಕ್ಕಿಂತ ಹೆಚ್ಚು ಪ್ರಾದೇಶಿಕ ಭಾಷೆಯಲ್ಲಿ ಕೆಲಸವಾಗುತ್ತಿರುವುದು ಕರ್ನಾಟಕದಲ್ಲೇ. ಕಛೇರಿಗಳಲ್ಲಿ ಟಿಪ್ಪಣಿ (ಫೈಲ್ ನೋಟಿಂಗ್) ಕುರಿತು ಹೇಳುವುದಾದರೆ ಅದೇನೂ ಸಾರ್ವಜನಿಕರೊಂದಿಗೆ ನಡೆಸುವ ವ್ಯವಹಾರ ಅಲ್ಲ. ಜನತೆಯೊಂದಿಗೆ ನಡೆಸುವ ಎಲ್ಲಾ ವ್ಯವಹಾರ ಜನರ ಭಾಷೆಯಲ್ಲಿ ನಡೆಯಬೇಕು. ಅದು ನಡೆಯುತ್ತಿದೆ. ಮಾತ್ರವಲ್ಲ, ಶೇಕಡ ೯೦ರಷ್ಟು ಫೈಲ್ ಕೆಲಸಗಳು ನಡೆಯುವುದೂ ಸಹ ಕನ್ನಡದಲ್ಲೇ. ಆದರೆ ಈ ಆಡಳಿತ ಭಾಷೆ ಎನ್ನುವುದು ಅಷ್ಟು ಜನಸ್ನೇಹಿಯಾಗಿಲ್ಲವಲ್ಲ? ಇದು ಸಂಸ್ಕೃತೀಕರಣದ ಸಮಸ್ಯೆ. ಇಂದು ಹೊಸದಾಗಿ ಆಗುತ್ತಿರುವ ಪದಬಳಕೆ ಸಂಸ್ಕೃತದಲ್ಲಿ ಆಗುತ್ತಿದೆ. ಹಳೆಯ ಪದಬಳಕೆಯನ್ನು ಯಾಕೆ ನೀವು ಉಳಿಸಿಕೊಂಡು ಹೋಗುತ್ತಿಲ್ಲ? ಉದಾಹರಣೆಗೆ ನೋಡಿ. ಶೇಕ್‌ದಾರ್ ಎಂದರೆ ಎಲ್ಲರಿಗೂ ಗೊತ್ತಿದೆ. ಆದರೆ ಅದರ ಬದಲು ’ರಾಜಸ್ವ ನಿರೀಕ್ಷಕ’ ಎಂದು ಬಳಸುವ ಅಗತ್ಯ ಏನಿದೆ ಹೇಳಿ? ಶೇಕ್‌ದಾರ್ ಪದ ಪಾರ್ಸಿಯಿಂದ ಬಂದಿದೆ. ಸುಮಾರು ೨೦೦ ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಅದನ್ನು ಬಳಸುತ್ತಿದ್ದೇವೆ. ರಾಜಸ್ವ ನಿರೀಕ್ಷಕ ಎಂದರೆ ಯಾರಿಗೆ ತಾನೇ ಅರ್ಥವಾಗಬೇಕು? ಇಂಜಿನಿಯರ್ ಎಂದು ಎಲ್ಲರೂ ಹೇಳುತ್ತಾರೆ. ಅವರಿಗೆ ’ಅಭಿಯಂತರರು’ ಎಂದು ಯಾಕೆ ಕರೆಯಬೇಕು? ಹೀಗಾಗಿ ಆಡಳಿತ ಭಾಷೆಯ ಸಮಸ್ಯೆ ಕನ್ನಡದ ಸಮಸ್ಯೆಯಲ್ಲ. ಅದು ಸಂಸ್ಕೃತದ ಸಮಸ್ಯೆ. ಈಗ ನೋಡಿ ’ಇಲ್ಲಿ ಉಚ್ಚೆ ಮಾಡಬೇಡಿ’ ಎಂದು ಬರೆಯುವ ಬದಲು ’ಮೂತ್ರ ವಿಸರ್ಜನೆ ಮಾಡಬೇಡಿ’ ಎಂದು ಬರೆಯುವಲ್ಲಿನ ಮೇಲರಿಮೆಯನ್ನು ಗಮನಿಸಿ. ನಮ್ಮ ಆಡು ಭಾಷೆಯನ್ನು ಬಳಸುವುದು ನಮ್ಮಲ್ಲಿ ಕೀಳರಿಮೆ ಮೂಡಿಸಿದಂತೆ ಎಂದು ಯೋಚಿಸುತ್ತೇವೆ. ಇದು ಗ್ರಾಮ್ಯ ಭಾಷೆ. ಕೀಳು ಎಂಬ ಭಾವನೆ ನಮ್ಮಲ್ಲಿದೆ. ಇದು ನಮ್ಮ ಮಾನಸಿಕತೆಯ ಪ್ರಶ್ನೆ. ಪತ್ರಿಕೆಗಳಲ್ಲೇ ನೋಡಿ. ಸಂಸ್ಕೃತ ಪದಬಳಕೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಮುಂದಿಟ್ಟ ಬಡತನ ರೇಖೆಯ ಮಾನದಂಡ ಸೂಕ್ತವೆನಿಸುತ್ತದೆಯೇ? ಇದು ತುಂಬಾ ತಪ್ಪು ಕಲ್ಪನೆ. ಬಡತನ ರೇಖೆಯನ್ನು ೨೮ ರೂಪಾಯಿಗೆ ಇಳಿಸಿರುವುದು ಅತ್ಯಂತ ದಡ್ಡತನ. ಅಷ್ಟು ಹಣದಲ್ಲಿ ಯಾರು ಜೀವಿಸಲು ಸಾಧ್ಯ? ಅದು ಸಾಧ್ಯವಿಲ್ಲ. ಇಂದು ಪಿ. ಸಾಯಿನಾಥ್ ಕೂಡಾ ಇದೇ ವಿಷಯ ಬರೆದಿದ್ದಾರೆ ನೋಡಿ. ಕಾರ್ಪೊರೇಟ್ ಜಗತ್ತಿಗೆ ಎಷ್ಟೊಂದು ವಿನಾಯ್ತಿಗಳನ್ನು ನೀಡಿ ಬಡವರ ವಿಷಯದಲ್ಲಿ ಹೀಗೆ ಮಾಡುತ್ತಿರುವುದು ತಪ್ಪು. ಹೀಗೆ ಮಾಡುತ್ತಿರುವುದಕ್ಕೆ ಕಾರಣ ನನಗನ್ನಿಸುವಂತೆ ಬಜೆಟ್‌ನಲ್ಲಿ ಸಂಖ್ಯೆಯನ್ನು ಸೀಮಿತಗೊಳಿಸಲಿಕ್ಕೆ ಈ ರೀತಿ ಮಾಡಲಾಗಿದೆ. ಇದು ಬಜೆಟ್ ಪ್ರಶ್ನೆಯ ಜೊತೆಗೆ ಸರ್ಕಾರದ ಆದ್ಯತೆಯ ಪ್ರಶ್ನೆ ಕೂಡಾ ಹೌದು. ಶೇಕಡ ೯ ಅಭಿವೃದ್ಧಿ ದರ ಕಾರ್ಪೊರೇಟ್ ವಲಯದಿಂದ ಬಂದೊಡನೆ ಬಡತನ ನಿರ್ಮೂಲನೆಗೆ ಆದ್ಯತೆಯಿಲ್ಲದಂತಾಗುತ್ತದೆ. ನನ್ನ ಪ್ರಕಾರ ನಮಗೆ ಬಡತನ ನಿರ್ಮೂಲನೆಯೇ ನಮ್ಮ ಪ್ರಥಮ ಆದ್ಯತೆಯಾಗಬೇಕು. ನಿಮ್ಮ ಪ್ರಕಾರ ಭಾರತ ಸ್ವತಂತ್ರಗೊಂಡು ೬೦ ವರ್ಷಗಳಾದ ಮೇಲೂ ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಬಿಡುಗಡೆಯಾದ ಹಣಕ್ಕೆ ’ಉತ್ತರದಾಯಿತ್ವ’ ಸಾಧಿಸಲು ಒಂದು ನೀತಿಯಾಗಲೀ, ಯಂತ್ರಾಂಗವಾಗಲೀ ಇಲ್ಲದಿರಲು ಏನು ಕಾರಣ? ಇದು ಬಹಳ ಗಂಭೀರವಾದ ಸಮಸ್ಯೆ. ಈ ಹಿಂದೆ ಪಂಚಾಯತ್ ರಾಜ್ ಜಾರಿಯಾಗುವಾಗ ಈ ಸಮಸ್ಯೆ ಪರಿಹಾರವಾಗಬಹುದು ಎಂದು ಭಾವಿಸಲಾಗಿತ್ತು. ಆದರೆ ಅದು ಹಾಗೆ ಆಗಲೇ ಇಲ್ಲ. ಇದಕ್ಕೆ ಸುಲಭ ಪರಿಹಾರವೇನೂ ಇಲ್ಲ. ಜನರಲ್ಲಿ ಜಾಗೃತಿಯಾಗಬೇಕು. ಅವರೇ ಕ್ರಮ ಕೈಗೊಳ್ಳಬೇಕು. ಒಂದು ಗ್ರಾಮ ಪಂಚಾಯತಿಯಲ್ಲಿ ಎಷ್ಟು ಹಣ ಬಿಡುಗಡೆಯಾಗಿದೆ ಎಂದು ಜನರಿಗೆ ತಿಳಿದಿರುತ್ತದೆ. ಆದರೆ ತಮಗೆ ತಿಳಿದೂ ಜನರು ಮಾತನಾಡುವುದಿಲ್ಲ. ಇದಕ್ಕೆ ಬೇರೆ ಬೇರೆ ಕಾರಣಗಳಿರುತ್ತವೆ. ತಮಗೆ ಯಾಕೆ ಉಸಾಬರಿ ಬೇಕು ಎಂದು ಯೋಚಿಸುತ್ತಾರೆ ಇಲ್ಲವೇ ತಮ್ಮ ಜಾತಿಯವರೆಂದು ಅಂತವರನ್ನು ಪ್ರಶ್ನಿಸುವುದಿಲ್ಲ. ನಮ್ಮ ಜಾತಿಯ ಅಧಿಕಾರಿ ಅಥವಾ ಸಚಿವ ಇದ್ದರೆ ಆತ ಏನೇ ಮಾಡಿದರೂ ವಿನಾಯ್ತಿ ನೀಡುತ್ತೇವೆ. ಇಂತಹ ವಿಷಯಗಳಲ್ಲಿ ಕಾನೂನುಗಳ ಕೊರತೆಯಿಲ್ಲ. ಆದರೆ ಅದರ ಪಾಲನೆಗೆ ನಾವು ಮುಂದಾಗುವುದಿಲ್ಲ. ನಮ್ಮ ಬಜೆಟ್‌ಗಳು ಮಾತಿನಲ್ಲಿ ಮಾತ್ರ ’ಬಡವರ’ ಪರವಾಗಿವೆ. ಮಧ್ಯಮ ವರ್ಗದ ಹಿತವನ್ನೂ ಕಡೆಗಣಿಸಲಾಗಿರುತ್ತದೆ. ಜನರ ಜೀವನ ಮಟ್ಟದ ಅಭಿವೃದ್ಧಿಗೆ ಈ ಬಜೆಟ್‌ಗಳು ನಿಜಕ್ಕೂ ಸಹಕಾರಿಯಾಗುತ್ತಿವೆಯೇ? ನನ್ನ ಅನುಭವದ ಮೂಲಕ ಹೇಳುವುದಾದರೆ ಬಜೆಟ್‌ಗಳಲ್ಲಿ ಒಂದು ಕಡೆಯಿಂದ ನೀಡಿದರೆ ಮತ್ತೊಂದು ಕಡೆಯಿಂದ ಕಿತ್ತುಕೊಳ್ಳಲಾಗುತ್ತದೆ. ಬಲಗೈಯಲ್ಲಿ ಕೊಡುವುದು ಎಡಕೈಯಿಂದ ಕಿತ್ತುಕೊಳ್ಳುವ ನೀತಿ ಇದು. ಕೇಂದ್ರ ಸರ್ಕಾರದ ಬಜೆಟನ್ನೇ ತೆಗೆದುಕೊಳ್ಳಿ. ರಕ್ಷಣೆ, ವಿಮೆ, ವೇತನ ಮತ್ತು ಸಬ್ಸಿಡಿಗಳೇ ಇಡೀ ಬಜೆಟ್‌ನ ನಾಲ್ಕನೇ ಮೂರರಷ್ಟು ಆಗುತ್ತವೆ. ಉಳಿದಿದ್ದು ನಾಲ್ಕನೇ ಒಂದು ಭಾಗ ಮಾತ್ರ. ಇಲ್ಲಿ ಸಬ್ಸಿಡಿ, ವಿನಾಯಿತಿಗಳನ್ನು ನೀಡುವಾಗ ಮತ್ತೆ ಸರ್ಕಾರದ ಆದ್ಯತೆಯ ಪ್ರಶ್ನೆ ಬರುತ್ತದೆ. ಇಲ್ಲಿ ಮತ್ತೆ ಶೇಕಡ ೯ ಅಭಿವೃದ್ಧಿ ದರ ಬೇಕು ಅಂದರೆ ಅದು ಕೈಗಾರಿಕೆಯಿಂದ ಮಾತ್ರ. ಕೃಷಿ ಹಾಗೂ ಗ್ರಾಮಾಭಿವೃದ್ಧಿಯಿಂದ ಆ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ಹೀಗಾಗಿ ಶೇಕಡ ೮-೯ರ ಅಭಿವೃದ್ಧಿ ದರವನ್ನು ಸಾಧಿಸಲಿಕ್ಕಾಗಿ ಎಲ್ಲಾ ಸಬ್ಸಿಡಿ, ವಿನಾಯ್ತಿಗಳನ್ನು ಕೈಗಾರಿಕೆಗೆ, ಕಾರ್ಪೊರೇಟ್‌ಗಳಿಗೆ ನೀಡಲಾಗುತ್ತಿದೆ. ಅದೇ ನೀವು ಮುಂದುವರೆದ ದೇಶಗಳಲ್ಲಿ ನೋಡಿ. ಒಂದು ಹಂತದ ಪ್ರಗತಿಯಾದ ನಂತರ ಅಲ್ಲಿ ಅಭಿವೃದ್ಧಿ ದರ ಎನ್ನುವುದು ಕೇವಲ ಶೇಕಡ ೧ ಅಥವಾ ೨ ಅಷ್ಟೆ. ನಮ್ಮಲ್ಲಿ ಆ ಮಟ್ಟದ ಪ್ರಗತಿಯಾಗಿರದಿದ್ದರೂ ಸಹ ಇಲ್ಲಿಯೂ ಸಾಮಾಜಿಕ ನ್ಯಾಯದ ಕಡೆ ನಾವು ಹೆಚ್ಚು ಗಮನ ನೀಡಬೇಕು. ಜಾಗತೀಕರಣದ ಪರಿಣಾಮವಾಗಿ ನಗರೀಕರಣ ಕೂಡಾ ಎಗ್ಗಿಲ್ಲದೇ ನಡೆಯುತ್ತಿದೆ. ಇದರ ಪರಿಣಾಮ ಯಾವ ಬಗೆಯದ್ದು? ಪರಿಣಾಮ ಭೀಕರವಾದದ್ದು. ಬೆಂಗಳೂರಿಗೇ ಎಲ್ಲಾ ಪ್ರಾಮುಖ್ಯತೆ ನೀಡುತ್ತಿರುವುದು ಒಳ್ಳೆಯದು ಮಾಡುವುದಿಲ್ಲ. ವಾಸ್ತವವಾಗಿ ನಾನು ನಗರಾಭಿವೃದ್ಧಿ ಕಾರ್ಯದರ್ಶಿಯಾಗಿದ್ದಾಗ ಸರ್ಕಾರಕ್ಕೆ ಒಂದು ಪ್ರಸ್ತಾಪವನ್ನು ಸಲ್ಲಿಸಿದ್ದೆ. ತುಂಗಭದ್ರೆಯ ದಡದಲ್ಲಿ ಹರಿಹರ-ರಾಣಿಬೆನ್ನೂರಿನಲ್ಲಿ ಒಂದು ಹೊಸ ರಾಜಧಾನಿ ನಿರ್ಮಿಸಬೇಕು ಎಂಬುದು ಆ ಪ್ರಸ್ತಾಪವಾಗಿತ್ತು. ಇದರಿಂದ ಉತ್ತರ ಕರ್ನಾಟಕಕ್ಕೂ ಸಮಾಧಾನವಾಗುತ್ತದೆಯಲ್ಲದೇ ಅದು ಕೇಂದ್ರಸ್ಥಾನ ಕೂಡ. ಇದರಿಂದ ಬೆಂಗಳೂರಿಗೂ ಸಹಕಾರಿಯಾಗುತ್ತದೆ. ಆದರೆ ಈಗ ಆಗುತ್ತಿರುವುದು ಕೊನೆಗೆ ಕುಡಿಯುವ ನೀರೂ ಸಿಗದ ಪರಿಸ್ಥಿತಿಗೆ ಕೊಂಡೊಯ್ಯಲಿದೆ. ಇಲ್ಲಿ ಟ್ರಾಫಿಕ್ ಸಮಸ್ಯೆ ದೊಡ್ಡದೆಂಬಂತೆ ನೋಡುತ್ತೇವೆ. ಆದರೆ ಇಲ್ಲಿ ನೀರಿನ ಸಮಸ್ಯೆಯ ಮುಂದೆ ಸಾರಿಗೆ ಸಮಸ್ಯೆ ತೀರಾ ನಗಣ್ಯವಾಗಲಿದೆ. ರಾಜ್ಯ-ಕೇಂದ್ರಗಳೆರಡರಲ್ಲೂ ಭ್ರಷ್ಟಾಚಾರ ಎನ್ನುವುದು ಮೇರೆ ಮೀರಿದೆ. ಜನಲೋಕಪಾಲಕ್ಕಾಗಿ ಅಣ್ಣಾ ಹಜಾರೆ ಆಂದೋಲನವೂ ನಡೆದಿದೆ. ಭ್ರಷ್ಟಾಚಾರದ ನಿಯಂತ್ರಣ ಹೇಗೆ ಸಾಧ್ಯ? ಭ್ರಷ್ಟಾಚಾರ ಒಂದು ಸಾಮಾಜಿಕ ಕ್ಯಾನ್ಸರ್ ಆಗಿದೆ. ಜನಲೋಕಪಾಲದಿಂದಾಗಲೀ, ಲೋಕಪಾಲದಿಂದಾಗಲೀ ಭ್ರಷ್ಟಾಚಾರವನ್ನು ತಡೆಯಬಹುದು ಎಂಬುದು ಕಾರ್ಯಸಾಧುವಲ್ಲ. ಎಲ್ಲಿಯವರೆಗೆ ಲಂಚ ಕೊಡುವವರು ಇರುತ್ತಾರೋ ಅಲ್ಲಿಯವರೆಗೆ ತೆಗೆದುಕೊಳ್ಳುವವರೂ ಇರುತ್ತಾರೆ. ನಾವು ಮೊದಲು ನಿರ್ಧರಿಸಬೇಕು. ನಾವು ಕೊಡಬಾರದುದು ಎಂದು. ಇಂದು ಸೇನಾ ಮುಖ್ಯಸ್ಥರು ಹೇಳಿರುವ ಸಂಗತಿಯನ್ನೇ ನೋಡಿ. ಹತ್ತು, ಇಪ್ಪತ್ತು, ಐವತ್ತು ಕೋಟಿ ರೂಪಾಯಿಗಳ ಭ್ರಷ್ಟಾಚಾರದಲ್ಲಿ ಲೋಕಪಾಲ, ವಗೈರೆಗಳೆಲ್ಲಾ ಕೆಲಸ ಮಾಡುವುದಿಲ್ಲ. ಅಣ್ಣಾ ಹಜಾರೆ ಪಾಪ ಅಷ್ಟಾದರೂ ಭ್ರಷ್ಟಾಚಾರದ ವಿರುದ್ಧ ದನಿ ಎತ್ತಿದರು. ಇದು ಇನ್ನೂ ಮುಂದುವರೆದು ಜನತೆಯ ಸಾಮೂಹಿಕ ಚಳವಳಿಯಾದಾಗ ಮಾತ್ರ ಸಾಧ್ಯವಾಗುತ್ತದೆ, ಒದು ಲೋಕಪಾಲದಿಂದ ಏನೂ ಆಗುವುದಿಲ್ಲ. ಟ್ರಾಫಿಕ್ ಚೆಕ್‌ಪೋಸ್ಟ್‌ಗಳಲ್ಲಿ ಲೋಕಪಾಲರು ಬಂದು ನೋಡಲು ಆಗುತ್ತಾ? ಹಾಗೆಯೇ ಭ್ರಷ್ಟಾಚಾರದ ಮೂಲ ಇರುವುದೇ ಚುನಾವಣಾ ಭ್ರಷ್ಟಾಚಾರದಲ್ಲಿ. ಚುನಾವಣಾ ಸುಧಾರಣೆಗಳಿಂದಲೇ ಭ್ರಷ್ಟಾಚಾರ ನಿಯಂತ್ರಣ ಆರಂಭವಾಗಬೇಕಿದೆ. ಇದೇ ಹೊತ್ತಿನಲ್ಲಿ ಇಂದು ನೋಡಿದರೆ ಸಾರ್ವಜನಿಕ ಕ್ಷೇತ್ರದಲ್ಲಿನ ಭ್ರಷ್ಟಾಚಾರಕ್ಕಿತಲೂ ಹತ್ತು ಪಟ್ಟು ಹೆಚ್ಚು ಖಾಸಗಿ ಕ್ಷೇತ್ರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಇದರ ಬಗ್ಗೆ ಯಾರೂ ಮಾತನಾಡುತ್ತಿಲ್ಲವಲ್ಲ? ಈಗಿನ ಪರಿಸ್ಥಿತಿಯಲ್ಲಿ ಪತ್ರಿಕೋದ್ಯಮ ಕ್ಷೇತ್ರ ಸಾಗುತ್ತಿರುವ ದಿಕ್ಕಿನ ಕುರಿತು ನೀವು ಏನು ಹೇಳುತ್ತೀರಿ? ಪತ್ರಿಕೋದ್ಯಮ ಒಂದು ಕಡೆ ಕಾರ್ಪೊರೇಟೀಕರಣವಾಗುತ್ತಿದ್ದರೆ ಮತ್ತೊಂದು ಕಡೆ ಕೆಲವೇ ಮೀಡಿಯಾ ಹೌಸ್‌ಗಳು ಎಲ್ಲಾ ಸುದ್ದಿ ಮಾಧ್ಯಮಗಳನ್ನೂ ಕಬ್ಜ ಮಾಡಿಕೊಳ್ಳುತ್ತಿರುವುದು ಬಹಳ ಅಪಾಯಕಾರಿ ಬೆಳವಣಿಗೆ. ಕೆಲವೇ ಪತ್ರಿಕೆಗಳು ಬಿಟ್ಟರೆ ಎಲ್ಲಾ ಮನೋರಂಜನೆಯಾಗಿಬಿಟ್ಟಿದೆ. ಸುದ್ದಿ ಕೂಡಾ ಇಂದು ಮನರಂಜನೆಯಾಗಿಬಿಟ್ಟಿದೆಯಲ್ಲ? ’ನಕ್ಸಲಿಸಂ’ ಸಮಸ್ಯೆಯ ಕುರಿತು ಪ್ರಭುತ್ವದ ನಿಲುವು ಏನಾಗಿರಬೇಕು ಎನ್ನುತ್ತೀರಿ? ನಕ್ಸಲಿಸಂ ನಮ್ಮ ಕರ್ನಾಟಕ ರಾಜ್ಯದಲ್ಲಿ ಅಷ್ಟೊಂದು ದೊಡ್ಡ ಸಮಸ್ಯೆಯಾಗಿಲ್ಲ. ಆದರೆ ನೀವು ಜಾರ್ಖಂಡ್, ಛತ್ತೀಸ್‌ಗಢ, ಮಧ್ಯಪ್ರದೇಶ, ಒಡಿಶಾಗಳಲ್ಲಿ ನೋಡಿದಾಗ ಆದಿವಾಸಿ ಜನರ ಭೂಮಿಯನ್ನು, ಅವರ ನೀರನ್ನು ಕಿತ್ತುಕೊಂಡು ಕಾರ್ಪೊರೇಟ್‌ಗಳಿಗೆ ಒಪ್ಪಿಸಲಾಗುತ್ತಿದೆ. ಹೀಗೆ ಈ ಶೇಕಡ ೮-೯ರ ಅಭಿವೃದ್ಧಿ ದರಕ್ಕಾಗಿ ಜನರದ್ದೆಲ್ಲವನ್ನೂ ಕಿತ್ತುಕೊಳ್ಳಲಾಗುತ್ತಿದ್ದರೆ ಅವರಿಗೆ ಬೇರೆ ದಾರಿ ಏನಿದೆ? ಹೀಗಾಗಿ ಇದನ್ನು ಬರೀ ಕಾನೂನು ಸುವ್ಯವಸ್ಥೆಯ ಪ್ರಶ್ನೆಯನ್ನಾಗಿ ನೋಡುತ್ತೀರೋ ಅಥವಾ ಕಾರ್ಪೊರೇಟ್ ಲೂಟಿಯ ಪ್ರಶ್ನೆಯನ್ನಾಗಿ ನೋಡುತ್ತೀರೋ? ಕರ್ನಾಟಕದ ಲ್ಯಾಂಡ್ ಬ್ಯಾಂಕ್ ನೀತಿಯನ್ನೇ ನೋಡಿ. ಇಲ್ಲ್ಲಿ ದೊಡ್ಡ ಜಮೀನ್ದಾರರಿಲ್ಲ. ಇಲ್ಲಿ ಹತ್ತು ಎಕರೆ ಜಮೀನು ಇಟ್ಟುಕೊಂಡವನು ಚಿಕ್ಕಪೇಟೆಯಲ್ಲಿ ಒಂದು ಚಿಕ್ಕ ಅಂಗಡಿ ಇಟ್ಟುಕೊಂಡವನಿಗಿಂತ ಕಡಿಮೆ ಆದಾಯ ಹೊಂದಿರುತ್ತಾನೆ. ಅಂತಹ ರೈತರ ಜಮೀನನ್ನು ತೆಗೆದುಕೊಂಡು ಕಾರ್ಪೊರೇಟ್‌ಗಳಿಗೆ ಕೊಟ್ಟಾಗ ಅವರು ಹೇಗೆ ಧ್ವನಿ ಎತ್ತಬೇಕು? ಇಂತಹ ಪರಿಸ್ಥಿತಿಯನ್ನು ನಕ್ಸಲೀಯರು ಬಳಸಿಕೊಳ್ಳುತ್ತಿದ್ದಾರೆ. ಆದರೆ ನಕ್ಸಲೈಟ್ ಚಳವಳಿಯಿಂದ ದನಿ ಇಲ್ಲದವರಿಗೆ ದನಿ ಸಿಕ್ಕಿದೆ ಎಂಬುದನ್ನು ನಾವು ಮೊದಲು ಗುರುತಿಸಬೇಕು. ಜನರಿಗೆ ಸರ್ಕಾರ ಯಾಕೆ ಧ್ವನಿಯಾಗಿಲ್ಲ? ಕೇವಲ ಉದ್ಯಮಿಗಳ ಪರವಾಗಿ ಸರ್ಕಾರ ಏಕೆ ಕೆಲಸ ಮಾಡುತ್ತಿದೆ ಎಂಬ ಪ್ರಶ್ನೆ ಬರುತ್ತದೆ. ಇದೇ ವೇಳೆಗೆ ಒಬ್ಬ ರೈತರ ಕುಟುಂಬದಿಂದ ಬಂದ ಪೊಲೀಸ್ ಪೇದೆಗಳನ್ನು ಕೊಲ್ಲುವ ಮೂಲಕ ನಕ್ಸಲೀಯರು ಯಾವ ದೊಡ್ಡ ಕ್ರಾಂತಿ ಮಾಡಲೂ ಸಾಧ್ಯವಿಲ್ಲ. ಇದೂ ಕೂಡ ತಪ್ಪು. ಆದರೆ ನಕ್ಸಲೀಯರ ಹಿಂದೆ ಜನರು ಏಕೆ ಹೋಗುತ್ತಾರೆ ಎಂಬುದನ್ನು ಮುಖ್ಯವಾಗಿ ನೋಡಬೇಕು. ?  ]]>

‍ಲೇಖಕರು G

July 14, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎ ದಿಲ್ ಕಾ ಮಾಮ್ಲಾ ಹೈ…

ಎ ದಿಲ್ ಕಾ ಮಾಮ್ಲಾ ಹೈ…

ಶ್ರೀ ಮುರಳಿ ಕೃಷ್ಣ  ಈ ‘ಲವ್ ಜಿಹಾದ್’ ಎಂಬ ಪದಗಳ ಬ್ರಹ್ಮ ಯಾರು ಎಂಬುದು ನನಗೆ ತಿಳಿದಿಲ್ಲ. ಆದರೆ ಒಂದಂತೂ ನಿಜ, ಆ...

ಅಬ್  ಕಿ  ಬಾರ್  ಡೆಮೊಕ್ರಟಿಕ್  ಸರ್ಕಾರ್

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಮ ಶ್ರೀ ಮುರಳಿ ಕೃಷ್ಣ ಈ ಕಿರು ಬರಹಕ್ಕೆ ‘ಅಬ್ ಕಿ ಬಾರ್ ಬೈಡನ್ ಕಿ ಸರ್ಕಾರ್’ ಎಂಬ ಶೀರ್ಷಿಕೆಯನ್ನು ಬಳಸಲು ಮುಂದಾಗಿದ್ದೆ. ಆದರೆ ಒಬ್ಬ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This