ಸುಧಾ ಆಡುಕಳ ಅವರ ಒಟ್ರಾಶಿ, ಒಂದ್ರಾಶಿ ಸಾಲುಗಳು…

ಸುಧಾ ಆಡುಕಳ

೧.
ಏಕಾಏಕಿ ಹಕ್ಕಿಗಳು ಹಾರಿಹೋದವು
ಹೇಳದೇ ಕಾಣೆಯಾದ ನಿನ್ನ ಹಾಗೆ!
೨.
ಸಾಕಿ,
ಬೇರೇನೂ ಮಾಡದಿರು
ನಿನ್ನ ಮಧುಶಾಲೆಯ ಗೋಡೆಗೆ ನನ್ನ ಅಕ್ಷರಗಳನ್ನು ಪೋಣಿಸಿಬಿಡು
ಚಿಟ್ಟೆಯಂತೆ ಹಗುರಾಗಿ ಹಾರಿ ನೊಂದ ಹೃದಯವನ್ನು ನೇವರಿಸಲಿ
೩.
ಪ್ರೇಮವಿಲ್ಲದೇ ಬೇರೆ ಬದುಕಿಲ್ಲವೆ?
ಇದೆಯೆಂದೇ ಪ್ರೇಮವನ್ನು ಮಾತ್ರವೇ ಬರೆಯುತ್ತಿರುವೆ
೪.
ಕವನವೆಂದರೆ ಹಾಡಿಕೋ ಬದುಕಾದರೆ ಬದುಕಿಬಿಡು
ನಶೆಯೆಂದರೆ ಮೈಮರೆ
ಏನಿಲ್ಲವೆಂದರೆ ಸರಿಸಿಬಿಡು ಆಚೆ
ಬರೆಯದೇ ಬದುಕಲಾಗದು ಸಾಕಿ
೫.
ಗಾಲಿಬ್? ಯಾರವನು?
ಕೈಗೆ ಸಿಕ್ಕರೆ…..
ಬೇಡಬಿಡು ಸಾಕಿ,
ನಿನ್ನ ಮಧುಶಾಲೆ ತೆರೆದಿರಲಿ ಅವನ ಹೆಸರಲ್ಲಿ
೬.
ನಾಲ್ಕೇ ಸಾಲಿನಲ್ಲಿ ಮುಗಿಸಬೇಕೆಂದು ಹೊರಟೆ
ಸಾಕೀ,
ಅವನೆಂಥ ಚಾಲಾಕಿ ನೋಡು
ಬದುಕಿಡೀ ಬರೆಯುವಂತೆ ಮಾಡಿ ನಗುತ್ತಾನೆ!


೭.
ಹೊಗಳಬೇಡ ಸಾಕಿ,
ನಿನ್ನ ಹೊಗಳಿಕೆಯೂ ನಶೆಯೇರಿಸುತ್ತದೆ!
೮.
ಹೀರಿದಷ್ಟೂ ಮುಗಿಯದ ಒಂದು ಮಧುಬಟ್ಟಲನು
ನನಗಾಗಿ ಬಗ್ಗಿಸಿಡು ಸಾಕಿ
ಬದುಕು ಮುನಿಸಿಕೊಂಡಾಗ ನಿನ್ನ ಮಡಿಲಿಗೆ ಬರುವೆ
೯.
ಪ್ರೇಮವ ಕುಡಿದ ಮೇಲೆಯೇ
ಜಗದ ಕ್ರೌರ್ಯಗಳೆಲ್ಲ ಕಾಣತೊಡಗಿದ್ದು
ಪ್ರೇಮ ಕುರುಡು ಎಂಬುದು ಸುಳ್ಳಾದುದು
೧೦.
ಸಾಕು ಬಿಡು ಸಾಕಿ,
ಎಷ್ಟು ಬರೆದರೂ ಈ ವಿರಹ ತೀರದು
ಮತ್ತೇನಿದೆ,
ಕಾಡುವ ಪ್ರೇಮವೇ ಸದಾ ಕಾವ್ಯವಾಗುವುದು
೧೧.
ಮತ್ತೆ ಮತ್ತೆ ನಿನ್ನ ಮೈಖಾನೆಯ ಬಾಗಿಲು ತಟ್ಟುವೆ
ನನ್ನೆದೆಯ ತಿಜೋರಿಯ ಬೀಗ ಅಲ್ಲೆಲ್ಲೋ ಮರೆತಿರುವೆ…
೧೨.
ಮಧುಶಾಲೆಯೊಂದೇ ಬಿಡುಗಡೆಯ ಬಾಗಿಲು ಎಂದುಕೊಂಡವನ ಎದೆಯಲ್ಲಿ ಬಂಧಿಸುವ ಹುಕಿಯವಳಿಗೆ
ಮಧುಬಾಂಡವೂ ಮರುಗುವುದು ಅವಳ ಜ್ಞಾನಕ್ಕೆ
೧೩.
ಮಧುಶಾಲೆಗೆ ಬರುವ ಅವನ ಮೇಲೆ ಕರುಣೆಯಿರಲಿ ಸಾಕಿ,
ನನ್ನ ಕುಡಿದು ಅಮಲೇರಿರುವೆ ಎಂದಿದ್ದಾನೆ ಅಂದೇ
೧೪.
ನಿನ್ನ ಮಧುವು ಅಮಲೇರಿಸುವುದೆಂಬ ಭ್ರಾಂತಿಯ ಬಿಟ್ಟುಬಿಡು ಸಾಕಿ
ಅವಳ ತುಟಿ ಸೋಕದ ಹೊರತು ಅಮಲೇರದು ನೆನಪಿಡು!

೧೫.
ಸಾಕೀ,
ಪ್ರೇಮದ ಬೆಂಕಿ ಎದೆಯಲ್ಲಿ ಧಗಧಗಿಸುವಾಗ……
ಮಧುಪಾತ್ರೆಯ ಹಿಡಿದು ಮುಗುಳ್ನಗುವ ನೀನೇ
ನನ್ನೆದುರಿಗಿರುವ ಖಳನಾಯಕಿ!
೧೬.
ಧನ್ಯವಾದಗಳು ಸಾಕಿ,
ಯಾವ ಪಂಥಕ್ಕೂ ಸೇರದ
ಪ್ರೇಮದ ಬಟ್ಟಲನು ಕುಡಿಸಿ
ನನ್ನ ನಿರ್ಮೋಹಿಯಾಗಿಸಿದೆ!
೧೭.
ಹಕ್ಕಿಮರಿ ಗರಿಗೆದರುತ್ತಿದೆ
ಬಯಲೇ,
ಮತ್ತೊಂದು ಬೆರೆಗು ನಿನ್ನ
ತೆಕ್ಕೆ ಸೇರಲಿದೆ….
೧೮.
ಮತ್ತೆ ನನ್ನ ಮಗುವಾಗಿಸಿಬಿಡು
ಸಾಕೀ……
ಕಳೆದುಹೋಗಬೇಕಿದೆ ನಿನ್ನ ಮಡಿಲಿನಲ್ಲಿ……
೧೯.
ನಿನ್ನ ತುಟಿಯಲ್ಲಿದೆ ಶುದ್ಧ ಪ್ರೇಮದ ಅಮಲು
ಸಾಕೀ…….
ಚುಂಬಿಸಿದಾಗಲೆಲ್ಲ ಜಗದ ಕತ್ತಲು ಕಳೆದು ಬೆಳಕಾಗುತ್ತದೆ
೨೦.
ನಮ್ಮೂರ ಬಯಲಾಟದ ಕಾಳಗದಲ್ಲಿ ಯುದ್ಧ ಕೊನೆಗೊಳ್ಳುವುದು ಹೆಣ್ಣಿನ ಪ್ರವೇಶದೊಂದಿಗೆ…..
ಹೋರಾಟದ ಕೊನೆಯ ತುದಿ ಅವಳೆ….
೨೧.
ಹೆಣ್ಣಿಗ್ಯಾವ ಧರ್ಮ?
ಅವಳಿಗೆ ತಾಯ್ತನವೇ ಧರ್ಮ
ಮಕ್ಕಳನ್ನು ಸಾಯಗೊಡಬೇಡಿ
೨೨.
ನನ್ನ ಕೃಷ್ಣ ನಾರಿಯರ ಸೀರೆ, ಬೆಣ್ಣೆ ಕದ್ದಿದ್ದು ಹೌದು
ಆದರೆ…….
ಎಂದಿಗೂ ಪ್ರಭುತ್ವದೊಂದಿಗೆ ರಾಜಿಯಾಗಲಿಲ್ಲ, ರಾಜನಾಗಲಿಲ್ಲ
ರಾಧೆಯೀಗ ಅಳುತ್ತಿದ್ದಾಳೆ ….
೨೩.
ಸಾಹಿತ್ಯ ಸಮ್ಮೇಳನ,
ಶಹೀನಾ ಭಾಗ್
ಜಾಗ ಯಾವುದಾದರೇನು?
ಮಾತು ಮಹಿಳೆಯರದ್ದೇ…
೨೪.
ಶ್!
ಸೋಗಲಾಡಿತನವ ಬದಿಗಿಡು
ನೀ ನಲ್ಲನೆ(ವೆ)ಂದರೂ
ನಾ ದೂರ ಸರಿಯುವಳಲ್ಲ
ನನ್ನ ಪ್ರೀತಿ ನಿನ್ನ ಹೊಂದಿಕೊಂಡಿಲ್ಲ
೨೫.
ಸುಮ್ಮನಿರು ಮಾರಾಯ
ಮಾಗಿಯ ಚಳಿಯನ್ನೇ
ನೀನಿಲ್ಲದೆ ಕಳೆದಿರುವೆ
ಬರುವ ಬೇಸಿಗೆಯಿನ್ನು
ಯಾವ ಲೆಕ್ಕ?
೨೬.
ಅಕ್ಕ ಸಿಗದಿದ್ದರೇನಂತೆ?
ನಾನೇ ಹುಡುಕಿ ಹೊರಟಿರುವೆ
ಒಂದೇ ಕಲ್ಲಿಗೆ ಎರಡು ಹಕ್ಕಿ
ನನ್ನ ಗೊರವನಿಗಿದನು ಹೇಳಬೇಡಿ
೨೭.
ನೀನಾಡದ ಮಾತುಗಳು
ನನಗೆ ಕೇಳುವುದು
ನಾ ಹೇಳದೆ ಭಾವಗಳು
ನಿನ್ನ ತಾಕುವುದು
ಏನಿಲ್ಲದೆಯೂ ಎಲ್ಲ
ಒಳಗು ಮಾಡುವುದು
ನಿಜಕ್ಕೂ ಪ್ರೀತಿ ಮಾಯೆ
ಬಲೆಯೊಳಗಿದ್ದೂ ಬಯಲಾಗುವ
ಕೌತುಕದ ಜಾಲ!
೨೮.
ಪ್ರೀತಿಯೆಂದರೆ ಸಾವೆಂದೂ
ಅನಂತತೆಯ ಬದುಕೆಂದೂ
ನಿರಂತರತೆಯ ಹುಡುಕಾಟವೆಂದೂ
ಅಂತ್ಯವಿಲ್ಲದ ಹಾಡೆಂದೂ
ಕೊನೆಯಿಲ್ಲದ ಕಾಯುವಿಕೆಯೆಂದೂ
ಗೊತ್ತಾದ ಮೇಲೆಯೇ ಹೊರಟಿದ್ದು
ಈ ಮುಳ್ಳುದಾರಿಯ ಹಿಡಿದು
ಮನಸ್ಸನ್ನೇ ಸೀಳಿ ಎರಡಾಗಿಸಿದ ಮೇಲೆ
ಚಿಂತೆ ಇನ್ನೇತರದು ಬಿಡು
ನಿಶ್ಚಿಂತ, ಸದಾನಂದದ ಘಮಲು!

‍ಲೇಖಕರು Avadhi

February 21, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಭೂತಕಾಲದ ಗುಳಿಕೆನ್ನೆ

ಭೂತಕಾಲದ ಗುಳಿಕೆನ್ನೆ

ರಾಘವೇಂದ್ರ ದೇಶಪಾಂಡೆ ಹುಡುಕುವೆ ನನ್ನನು ಅವರಿವರಲ್ಲಿಸಿಗಬಹುದು ಹೂವಿನ ಗುಚ್ಛಬರುವದೋ...! ನೆನಪುಉಕ್ಕಿ ಹರಿಯುವದು ಸಾಗರ ಅಕ್ಷಿಯಂಗಳದಲಿ...

ಜೇನು ಸೈನ್ಯ ಮತ್ತು ನಾನು

ಜೇನು ಸೈನ್ಯ ಮತ್ತು ನಾನು

ಸಾವಿತ್ರಿ ಹಟ್ಟಿ ಶಾಲೆ ಮುಗಿಸಿ ಮನೆಗೆ ಬಂದೆ!ದರುಶನಾರ್ಥಿಗಳು ಕಾಯ್ದು ಸಾಲಾಗಿ ನಿಂತಿದ್ರು!ಕೆಲವರು ಕಿಟಕಿ ಸರಳುಗಳ ಮೇಲೆ!ಕೆಲವರು ಅಡುಗೆಮನೆಯ...

ನೆನಪಿನ ಹೂಜಿ ಜಾರಿ ಬೀಳಲಿ…

ನೆನಪಿನ ಹೂಜಿ ಜಾರಿ ಬೀಳಲಿ…

ಸದಾಶಿವ್ ಸೊರಟೂರು ಪ್ರತಿ ಕನಸಿನಲ್ಲೂ ಮೂಡುವಚಿತ್ರಗಳ ಮೂಲೆಯಲ್ಲಿಢಾಳಾಗಿ ಕಾಣುವವೃತ್ತಾಕಾರದ ಸೀಲುನಿನ್ನದಾ? ನಿನ್ನದೇ ಇರಬೇಕುಯಾರ-ಯಾರದೊ...

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: