ಸುಧಾ-ಮಯೂರಗಳಲ್ಲಿ…

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ..

ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು.

‘ಸಂಯುಕ್ತ ಕರ್ನಾಟಕ’ ‘ವಾರ್ತಾ ಬಾರತಿ’ಯಲ್ಲಿ ಅಂಕಣ ಬರೆದ ರಂಗನಾಥರಾವ್ ಅವರು ‘ಅವಧಿ’ಯ ಆಹ್ವಾನವನ್ನು ಮನ್ನಿಸಿ ತಮ್ಮ ಮಾಧ್ಯಮ ಲೋಕದ ಪಯಣದ ಬಗ್ಗೆ ಬರೆಯಲಿದ್ದಾರೆ.

1989ರಲ್ಲಿ ಪ್ರಜಾವಾಣಿ ಹುಬ್ಬಳ್ಳಿ ಆವೃತ್ತಿ ಶುರುವಾಯಿತು. ಈ ಸಡಗರವನ್ನು ಬೆನ್ನಿಗಿಟ್ಟುಕೊಂಡೇ ಬಂದ ತೊಂಬತ್ತರ ದಶಕ ಉದ್ದಕ್ಕೂ ತವಕತಲ್ಲಣಗಳ ದಶಕವಾಗಿತ್ತು. ದಶಕದ ಶುರುವಿಗೇ ಎಂ.ಬಿ.ಸಿಂಗ್ ನಿವೃತ್ತಿ ಹೊಂದಿದರು. ಸಿಂಗ್ ಅವರ ನಿವೃತ್ತಿಯೊಂದಿಗೆ ಸಿಬ್ಬಂದಿ ವರ್ಗದವರೆ ಸಂಪಾದಕರಾಗುವ ಸಂಪ್ರದಾಯ ಕೊನೆಗೊಂಡಿತು. ಆ ವೇಳೆಗಾಗಲೇ ಪತ್ರಿಕೆಯ ಮಾಲೀಕರೇ ಸಂಪಾದಕರಾಗುವ ಹೊಸ ಸಂಪ್ರದಾಯವೊಂದು ಅಖಿಲ ಭಾರತ ಮಟ್ಟದಲ್ಲಿ ಶುರುವಾಗಿತ್ತು.

ಹಿಂದೂಸ್ತಾನ್ ಟೈಮ್ಸ್, ದಿ ಹಿಂಡೂ, ಟಿ ಟೈಮ್ಸ್ ಆಫ್ ಇಂಡಿಯಾ ಮೊದಲಾದ ಪತ್ರಿಕೆಗಳಲ್ಲಿ ಮಾಲೀಕರೇ ಸಂಪಾದಕರಾಗಿದ್ದರು. ಈ ವೇಳೆಗಾಗಲೇ ಡೆಕ್ಕನ್ ಹೆರಾಲ್ಡ್ ಗೆ ಪ್ರಧಾನ ಸಂಪಾದಕಾರಿಗಿದ್ದ ಶ್ರೀ ಹರಿಕುಮಾರ್ ಅವರು ಪ್ರಜಾವಾಣಿ/ಸುಧಾ/ಮಯೂರ ಪತ್ರಿಕೆಗಳಿಗೂ ಪ್ರಧಾನ ಸಂಪಾದಕರಾದರು. ಅವರ ಮಾರ್ಗದರ್ಶನದಲ್ಲಿ ಅಸೋಸಿಯೇಟೆಡ್ ಎಡಿಟರ್/ಎಕ್ಸುಕ್ಯುಟಿವ್ ಎಡಿಟರ್ ಸಂಪಾದಕೀಯ ವಿಭಾಗದ ಜವಾಬ್ದಾರಿಗಳನ್ನು ನೋಡಿಕೊಳ್ಳುತ್ತಿದ್ದರು.

ಸಿಂಗ್ ಅವರ ಜಾಗಕ್ಕೆ ಸುದ್ದಿ ಸಂಪಾದಕ ಬಿ.ಎಂ.ಕೃಷ್ಣಸ್ವಾಮಿಯವರನ್ನು ಅಸೋಸಿಯೇಟೆಡ್ ಎಡಿಟರ್ ಆಗಿ ಬಡ್ತಿ ನೀಡಿ ನೇಮಿಸಲಾಗಿತ್ತು. ಮ.ಶ್ರೀಧರಮೂರ್ತಿಯವರ ನಿವೃತ್ತಿಯ ನಂತರ ಗೋಪಾಲ್ ಕಣ್ಣನ್ ಒಬ್ಬರೇ ಸಂಪಾದಕೀಯ ಪುಟ ನೋಡಿಕೊಳ್ಳುತ್ತಿದ್ದರು. ಕಣ್ಣನ್ ಅವರು ನಿವೃತ್ತಿ ಹೊಂದಿದಾಗ ಜನರಲ್ ನ್ಯೂಸ್ ಡೆಸ್ಕ್ ನಲ್ಲಿ ಮುಖ್ಯ ಉಪಸಂಪಾದಕರಾಗಿದ್ದ ಪಿ.ರಾಮಣ್ಣನವರಿಗೆ ಸಹಾಯಕ ಸಂಪಾದಕರಾಗಿ ಬಡ್ತಿ ಕೊಟ್ಟು ಕಣ್ಣನ್ ಅವರ ಜಾಗಕ್ಕೆ ನೇಮಿಸಲಾಯಿತು.

ʼಸುಧಾ’ – ʼಮಯೂರ’ಗಳಿಗೆ ಸಹಾಯಕ ಸಂಪಾದಕರಾಗಿದ್ದ ಜಿ.ಎಸ್.ಸದಾಶಿವ ಅವರನ್ನು ʼಪ್ರವಾʼ ಸಂಪಾದಕೀಯ ಪುಟ ವಿಭಾಗಕ್ಕೆ ವರ್ಗಾಯಿಸಲಾಯಿತು. ಇದರ ಜೊತೆಗೆ ʼಪ್ರವಾ’ ಸಂಪಾದಕೀಯ ವಿಭಾಗದಲ್ಲಿ ಆಗತಾನೆ ಶುರುವಾಗಿದ್ದ ಕಂಪ್ಯೂಟರಿಕರಣದ ಹೊಣೆಯನ್ನೂ ಸದಾಶಿವನಿಗೆ ವಹಿಸಲಾಯಿತು. ನನಗೆ ಸಹಾಯಕ ಸಂಪಾದಕ ಹುದ್ದೆಗೆ ಬಡ್ತಿ ನೀಡಿ ʼಸುಧಾʼ – ʼಮಯೂರ’ಗಳ ಜವಾಬ್ದಾರಿ ವಹಿಸಲಾಯಿತು. ಪ್ರಜಾವಾಣಿಯ ಅಸೋಸಿಯೇಟೆಡ್ ಎಡಿಟರ್ ಅವರ ನೇತೃತ್ವದಲ್ಲಿ ಸಹಾಯಕ ಸಂಪಾದಕರೊಬ್ಬರು ʼಸುಧಾ’ ಮತ್ತು ʼಮಯೂರ’ಗಳ ಪ್ರಕಟಣೆಯ ಹೊಣೆಗಾರಿಕೆ ನೋಡಿಕೊಳ್ಳಲು ಸಾಕೆಂಬುದು ಆಡಳಿತ ವರ್ಗದ ನೀತಿ ಇದ್ದಂತಿತ್ತು.

ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿ, ಸುಧಾ, ಮಯೂರ ಇವೆಲ್ಲ ದಿ ಪ್ರಿಂಟರ್ಸ್ ಮೈಸೂರು‌ (ಪ್ರೈವೆಟ್) ಲಿಮಿಟೆಡ್ ಸಂಸ್ಥೆಯ ಪ್ರಕಟಣೆಗಳು, ಸಂಪಾದಕೀಯ ಸಿಬ್ಬಂದಿಯನ್ನು ಈ ಪ್ರಕಟಣೆಗಳಲ್ಲಿ ಎಲ್ಲಿಗೆ ಬೇಕಾದರೂ ವರ್ಗ ಮಾಡಬಹುದು ಎಂದು ಸಂಸ್ಥೆಯ ಸ್ಟಾಂಡಿಂಗ ಆರ್ಡರ್ಸ್ ಹೇಳುತ್ತಿತ್ತು. ʼಸುಧಾ’ ಶುರುವಾದಾಗ ಸಂಪಾದಕ ಇ.ಆರ್.ಸೇತುರಾಮ್, ಸಹಾಯಕ ಸಂಪಾದಕ ಸಿಂಗ್, ಉಪಸಂಪಾದಕ ಕೆ.ನಾಗರಾಜ್ ಅವರೆಲ್ಲ ʼಪ್ರವಾ’ದಿಂದ ವರ್ಗವಾಗಿ ಹೋದವರೇ. ಆದರೆ ಈ ವರ್ಗದ ವ್ಯವಸ್ಥೆ ಸಿಬ್ಬಂದಿಗೆ ಹಿಡಿಸಿರಲಿಲ್ಲ. ಒಂದೊಂದು ಪತ್ರಿಕೆಯ ಸಂಪಾದಕಿಯ ಸಿಬ್ಬಂದಿಯನ್ನು ಪ್ರತ್ಯೇಕವಾಗಿ ಪರಿಗಣಿಸಿ ಆ ವಿಭಾಗದಲ್ಲಿ ಹುದ್ದೆಗಳು ಖಾಲಿಯಾದಾಗ ಅಲ್ಲಿಯವರಿಗೆ ಬಡ್ತಿ ನೀಡಬೇಕೆಂಬುದು ಕಾಮಿಖ್ ಸಂಘಟನೆಯ ನಿಲುವಾಗಿತ್ತು.

ನಾನು ಆಗ ʼಪ್ರವಾ’ ಮತ್ತು ʼಸುಧಾ’ ಎರಡರ ಸಿಬ್ಬಂದಿಯನ್ನು ಪರಿಗಣಿಸಿದಾಗ ನಾನೇ ಮೋಸ್ಟ್ ಸೀನಿಯರ್ ಆಗಿದ್ದೆ ಹಾಗೂ ನಿಯತಕಾಲಿಕ ಪತ್ರಿಕೊದ್ಯಮದಲ್ಲಿ ಅನುಭವಿಯೂ ಆಗಿದ್ದೆ. ಹೀಗಾಗಿ ನನ್ನ ಬಡ್ತಿ ಮತ್ತು ಸುಧಾ/ಮಯೂರಗಳಿಗೆ ವರ್ಗಾವಣೆ ನ್ಯಾಯೋಚಿತವಾಗಿಯೇ ಇತ್ತು. ಆದರೆ ʼಸುಧಾ’ದಲ್ಲಿ ಕೆಲವರಿಗೆ ಇದರಿಂದ ಅಸಮಾಧಾನವಾಗಿತ್ತು. ತಮಗೇ ಈ ಹುದ್ದೆ ದೊರೆಯಬೇಕಿತ್ತೆಂಬುದು ಈ ಅಸಮಾಧಾನಕ್ಕೆ ಕಾರಣವಿದ್ದೀತು.

ಒಂದಷ್ಟು ದಿನ ಈ ಅಸಮಾಧಾನ ಅಸಹಕಾರದ ರೂಪದಲ್ಲಿ ವ್ಯಕ್ತವಾಯಿತು. ನಾನು ಅಧಿಕಾರ ವಹಿಸಿಕೊಂಡ ನಂತರದ ಮೊದಲ ಸಂಚಿಕೆ. ಪ್ಲಾನ್ ಮಾಡಲು ಸಾಕಷ್ಟು ಸಮಯವಿರಲಿಲ್ಲ. ಲೇಖನಗಳು/ನುಡಿಚಿತ್ರಗಳು ‘ಧಾರಾವಾಹಿಗಳು/ಕಥೆಗಳು/ಬಾಲವಿಹಾರ ಹೀಗೆ ಕೆಲಸವನ್ನು ಉಪಸಂಪಾದಕರುಗಳಿಗೆ ಸದಾಶಿವ ಗೊತ್ತುಪಡಿಸಿದ್ದರು. ಅವರುಗಳು ಲೇಖನ/ಕಥೆ/ಧಾರಾವಾಹಿ ಇತ್ಯಾದಿಗಳನ್ನು ಆಯ್ಕೆ ಮಾಡಿ ಸಹಾಯಕ ಸಂಪಾದಕರ ಅಂಗೀಕಾರ ಪಡೆಯಬೇಕಾಗಿತ್ತು. ನಂತರ ಅವುಗಳ ಪರಿಷ್ಕರಣೆ, ಚಿತ್ರಗಳನ್ನು ಬರೆಸುವುದು/ಫೋಟೋಗಳ ಆಯ್ಕೆ, ಪುಟ ವಿನ್ಯಾಸ ಹೀಗೆ ಮುದ್ರಣಕ್ಕೆ ಹೋಗುವವರೆಗೆ ಅವುಗಳ ನಿರ್ವಹಣೆ ಉಪಸಂಪಾದಕರುಗಳ ಹೊಣೆಯಾಗಿತ್ತು.

ಸಹಾಯಕ ಸಂಪಾದಕರು ಡೆಮ್ಮಿ ಮಾಡಿ ಸ್ಥಳ ಗೊತ್ತುಪಡಿಸಿದ ನಂತರ ಪುಟಗಳನ್ನು ರೂಪಿಸಿ ಓಕೆ ಮಾಡಿ ಸಹಾಯಕ ಸಂಪಾದಕರಿಗೆ ತೋರಿಸಿ ಫಾರಮ್ ನ್ನು ಮುದ್ರಣಕ್ಕೆ ಬಿಡುಗಡೆ ಮಾಡುವುದು ಅವರುಗಳ ಜವಬುದಾರಿಯಾಗಿತ್ತು. ಆಗ 74 ಪುಟಗಳ ʼಸುಧಾ’ವನ್ನು ಹದಿನಾರು ಪುಟಗಳ ನಾಲ್ಕು ಹಾಗೂ ಎಂಟು ಪುಟಗಳ ಒಂದು ಫಾರಮ್. ಅಂದರೆ ಒಟ್ಟು ಐದು ಫಾರಮ್ ಗಳನ್ನಾಗಿ ವಿಂಗಡಿಸಿ ಪುಟ ವಿನ್ಯಾಸ ಮಾಡಿ ಮುದ್ರಣಕ್ಕೆ ಬಿಡುಗಡೆ ಮಾಡುತ್ತಿದ್ದವು. ಅಂದು ಸಂಜೆ 5 ಗಂಟೆ. ಕೊನೆಯ ಫಾರಮ್‍ ನ್ನು ಇನ್ನೂ ಎರಡು ಪುಟ ಬರಬೇಕಾಗಿದೆಯೆಂದು ಪೇಸ್ಟಪ್ ವಿಭಾಗದಿಂದ ಫೋನ್ ಬಂತು. ಸಂಬಂಧಪಟ್ಟ ಉಪಸಂಪಾದಕರನ್ನು ಕೇಳಲಾಗಿ ʼಎರಡು ಪುಟ ಖಾಲಿ ಇದೆ. ಅದನ್ನು ತುಂಬಲು ನನ್ನ ಬಳಿ ಯಾವ ಲೇಖನವೂ ಇಲ್ಲʼ ಎಂದು ತಾರತಮ್ಯ ಆಡಿಸಿದರು. ಫೀಚರ್ ಯಾವುದಾದರೂ ಇದೆಯೇ ಎಂದು ಕೇಳಿದಾಗ ಫೀಚರ್ ರೈಟರ್ ಸಹ ನನ್ನ ಹತ್ತಿರ ಯಾವುದೂ ಇಲ್ಲ ಎಂದು ಕೈ ಝಾಡಿಸಿಕೊಂಡು ನಡೆದುಬಿಟ್ಟರು. ಉಳಿದೆರಡು ಪುಟಗಳನ್ನು ನಾಳೆ ಕೊಡುವುದಾಗಿ ಹೇಳಿ, ಸಂತೆ ಹೊತ್ತಿಗೆ ಎರಡು ಮೊಳ ಎಂಬಂತೆ ಸಂಜೆ ಕೂತು ಒಂದು ಲೇಖನ ಬರೆದು ಕಂಪೋಸಿಂಗಿಗೆ ಕೊಟ್ಟು ಮನೆಗೆ ಹೋದೆ. ಸಂಚಿಕೆ ಪ್ರಕಟವಾಯಿತು. ಲೇಖನದ ಬಗ್ಗೆ ಕುಹಕದ ಮಾತುಗಳು ಕೇಳಿ ಬಂದವು. ಹೀಗೆ ಒಂದು ಸಣ್ಣ ಕಹಿಯೊಂದಿಗೆ ʼಸುಧಾ’ದಲ್ಲಿ ನನ್ನ ವೃತ್ತಿ ಜೀವನ ಶುರುವಾಯಿತು.

ಸಂಪಾದಕೀಯ ಒಂದು ಪತ್ರಿಕೆಯ ಆತ್ಮವಿದ್ದಂತೆ .ಇ.ಆರ್.ಸೇತೂರಾಮ್ ʼಸುಧಾ’ ಸಂಪಾದಕೀಯ ಬರೆಯುತ್ತಿದ್ದರು. ಅವರು ನಿವೃತ್ತಿಹೊಂದಿದ ನಂತರ, ಏಕೋ ಎನೋ ಸಿಂಗ್ ಅವರು ಸಂಪಾದಕೀಯ ಅಂಕಣ ನಿಲ್ಲಿಸಿಬಿಟ್ಟಿದ್ದರು. ನಾನು ಸಂಪಾದಕೀಯ ಮತ್ತೆ ಶುರುಮಾಡಿದೆ. ನಾನೇ ಬರೆಯುತ್ತಿದ್ದೆ. ಮುಖ್ಯವಾಗಿ ಕಲೆ, ಸಾಹಿತ್ಯ, ಸಂಸ್ಕøತಿ ವಿಷಯಗಳನ್ನು ಕುರಿತು ಬರೆಯುತ್ತಿದ್ದೆ. ಮುಂದೆ ʼಸುಧಾ’ ಸಂಪಾದಕೀಯಗಳು ʼಸೃಜನಶೀಲ’ ಎಂದು ಪುಸ್ತಕ ರೂಪದಲ್ಲಿ ಪ್ರಕಟಗೊಂಡಿತು.

ಮುಖ ಪುಟ ಲೇಖನ ಎಂಬುದು ನಿಯತಕಾಲಿಕಗಳಲ್ಲಿ ಆಗಷ್ಟೇ ಮೂಡಿದ ಹೊಸ ಚಿಂತನೆ ಯಾಗಿತ್ತು. ಈ ಮೊದಲು ʼಸ್ಟಾಲ್ ವ್ಯಾಲ್ಯೂ’ ಗಮನದಲ್ಲಿಟ್ಟುಕೊಂಡು. ಅಂದರೆ ಸ್ಟಾಲ್ ನಲ್ಲಿ ನೇತುಹಾಕಿದಾಗ ಅಷ್ಟು ದೂರದಿಂದಲೇ ಗ್ರಾಹಕರ ಕಣ್ಸೆಳೆಯುವಷ್ಟು ಮುಖ ಪುಟ ಆಕರ್ಷಕವಾಗಿರಬೇಕು ಎಂಬುದೇ ಮುಖಪುಟದ ಮಾನದಂಡವಾಗಿತ್ತು. ಸಾಮಾನ್ಯವಾಗಿ ರೂಪದರ್ಶಿಯರು, ಸಿನಿಮಾ ತಾರೆಯರು ಅಥವಾ ಪುರಾಣ, ರಾಮಾಯಣ, ಮಹಾಭಾರತಗಳ ವರ್ಣಚಿತ್ರಗಳನ್ನು ಮುಖಪುಟಕ್ಕೆ ಆಯ್ಕೆ ಮಾಡಲಾಗುತ್ತಿತ್ತು.

ದೀಪಾವಳಿ/ಯುಗಾದಿ ವಿಶೇಷಾಂಕಗಳ ಮುಖಪುಟಕ್ಕೂ ಇದೇ ಮಾನದಂಡವನ್ನು ಅನುಸರಿಸಲಾಗುತ್ತಿತ್ತು. ʼತರಂಗ’ ಬಂದ ನಂತರ ಇದು ಬದಲಾಯಿತು. ಮುಂಬಯಿ ಪತ್ರಿಕಾ ಪ್ರಪಂಚ ಕಂಡಿದ್ದ ಸಂತೋಷ ಕುಮಾರ್ ಗುಲ್ವಾಡಿ ಪ್ರತಿವಾರವೂ ಕವರ್ ಸ್ಟೋರಿ ಎಂದು ಪ್ರಚಲಿತ ವಿಷಯಗಳನ್ನು ಕುರಿತು ವಿಶೇಷ ಲೇಖನ ಪ್ರಕಟಿಸಲಾರಂಭಿಸಿದರು. ಈ ವಿಶೇಷ ಲೇಖನದ ಚಿತ್ರವೇ ಮುಖಪುಟದಲ್ಲಿ ರಾರಾಜಿಸುತ್ತಿತ್ತು. ಇದರಲ್ಲಿ ʼಸುಧಾ’ ಹಿಂದೆ ಬೀಳಲಿಲ್ಲ. ಪ್ರತಿಸ್ಪರ್ಧಿಯನ್ನು ಹಿಂದಿಕ್ಕುವಷ್ಟು ರಾಜಕೀಯ, ವಿಜ್ಞಾನ, ತಂತ್ರಜ್ಞಾನ, ಸಿನಿಮಾ, ರಂಗಭೂಮಿ ಇತ್ಯಾದಿ ಕ್ಷೇತ್ರಗಳಲ್ಲಿ ಪ್ರಚಲಿತ ವಿದ್ಯಮಾನಗಳನ್ನು ಕುರಿತ ಮುಖಪಟ ಲೇಖನಗಳನ್ನು ಪೈಪೋಟಿ ಎಂಬಂತೆ ಪ್ರಕಟಿಸಲಾರಂಭಿಸಿತು. ಇದನ್ನು ಓದುಗರು ಮೆಚ್ಚಿಕೊಂಡರೂ ಕೂಡ. ಹೊಸ ಧಾರಾವಾಹಿ, ಫೋಟೋಕಾಮಿಕ್ಸ್, ವಿಶೇಷವಾಗಿ ಹೇಳಿ ಬರೆಸಿದ ಸಣ್ಣ ಕಥೆಗಳೂ ಸಹ ಮುಖಪುಟದ ಮರ್ಯಾದೆಗೆ ಪಾತ್ರವಾಗುತ್ತಿದ್ದವು.

ಪ್ರತಿವಾರ ಮುಖಪುಟ ಲೇಖನ ಹೊಂದಿಸುವುದು ಒಂದು ಬೌದ್ಧಿಕ ಕಸರತ್ತೇ ಆಗುತ್ತಿತ್ತು. ವಸ್ತು ವಿಷಯ ಹುಡುಕಿ ತೆಗೆದು, ಸಮರ್ಥರಿಂದ ಲೇಖನ ಬರೆಸಿ ಅಥವಾ ನಾವೇ ಬರೆದು, ಅದಕ್ಕೆ ಪೂರಕವಾದ ಗ್ರಾಫಿಕ್ಸ್ ಹೊಂದಿಸುವುದು ಇವೆಲ್ಲವೂ ಬುದ್ಧಿಮತ್ತೆ ಮತ್ತು ಶ್ರಮಗಳೆರಡನ್ನೂ ಬೇಡುವ ಕೆಲಸವಾಗಿತ್ತು. ಧಾರಾವಾಹಿ ಕಾದಂಬರಿಗಳು ʼಸುಧಾ’ದ ಮುಖ್ಯ ಆಧಾರ ಸ್ತಂಭವಾಗಿದ್ದವು. ಮುಖಪುಟ ಲೇಖನದಂತೆ ಧಾರಾವಾಹಿ ಕಾದಂಬರಿಗಳ ಆಯ್ಕೆ ಸಂಪಾದಕೀಯ ವಿಭಾಗದ ಬಹುಪಾಲ ವೇಳೇಯುನ್ನು ತಿಂದುಹಾಕುತ್ತಿತ್ತು.

ಜನಪ್ರಿಯ ಲೇಖಕರಿಗೆ ಹೇಳಿ ಬರೆಯಿಸುವುದು, ಬಂದ ಹಸ್ತಪ್ರತಿಗಳಲ್ಲಿ ಅತ್ಯುತ್ತಮವಾದುದನ್ನು ಆಯ್ಕೆ ಮಾಡುವುದು, ಹೊಸ ಪ್ರತಿಭೆಗಳನ್ನು ಗುರುತಿಸುವುದು ಹೀಗೆ ಧಾರಾವಾಹಿ ಆಯ್ಕೆ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿತ್ತು. ಶರತ್ ಕಲ್ಕೋಡ್ ಮೊದಲ ಸುತ್ತಿನ ಆಯ್ಕೆ ಮಾಡಿ ತಮ್ಮ ಶರಾದೊಂದಿಗೆ ನನ್ನೆಡೆ ಕಳುಹಿಸುತ್ತಿದ್ದರು. ನಾನು ಸಂಜೆ ಐದರ ನಂತರ ದಿನದ ಕೆಲಸ ಮುಗಿದ ಮೇಲೇ ಹಾಗೂ ಭಾನುವಾರಗಳಂದು ಕಾದಂಬರಿ ಹಸ್ತಪ್ರತಿಗಳನ್ನು ಸಾವಧಾನವಾಗಿ ಓದಲು ಅನುವು ಮಾಡಿಕೊಳ್ಳುತ್ತಿದ್ದೆ.

ನೀವು ಕೇಳಿದಿರಿ, ವಿಚಾಲಹರಿ, ವ್ಯಕ್ತಿ ವಿಷಯ, ಸುದ್ದಿಯ ಹಿನ್ನೆಲೆ, ಕೆಣಕು ತಿಣುಕು ಇವು ಕೆಲವು ʼಸುಧಾ’ದ ಜನಪ್ರಿಯ ಅಂಕಣಗಳಾಗಿದ್ದವು. ಇವುಗಳ ಜೊತೆಗ ನಾನು, ಶ್ರೀಮತಿ ಸುನಂದಾ ಬೆಳಗಾಂವಕರ್ ಅವರ ʼಕೈತುತ್ತುʼ ಚಲಚಿತ್ರ ತಾರೆಯರ ‘ನನ್ನ ನಾ ಕಂಡಂತೆ’ ಮೊದಲಾದ ಹೊಸ ಅಂಕಣಗಳನ್ನು ಪ್ರಾರಂಭಿಸಿದೆ. ಹೀಗೆ ಹಳೆಯ ಸತ್ವಗಳ ಜೊತಗೆ ಹೊಸದನ್ನೂ ಮೈಗೂಡಿಸಿಕೊಂಡು ʼಸುಧಾ’ ಇನ್ನಷ್ಟು ದಷ್ಟಪುಷ್ಟವಾಯಿತು. ಪ್ರಸರಣ ಸಂಖ್ಯೆಯಲ್ಲಿ ಇದು ವ್ಯಕ್ತವಾಯಿತು.

ಎಚ್ಚೆಸ್ವಿ ಯವರ ಸುದ್ದಿಯ ಹಿನ್ನೆಲೆ ಮತ್ತು ವ್ಯಕ್ತಿ ವಿಷಯ ಬಹಳ ಉಪಯುಕ್ತ ಅಂಕಣಗಳಾಗಿದ್ದವು. ಒಂದು ದಿನ ಅದೇತಾನೇ ಐ ಎ ಎಸ್ ಪರೀಕ್ಷೆ ಪಾಸು ಮಾಡಿದ ಶಿವರಾಮ್ ಎಂಬುವರು ಶ್ರೀಹರಿಕುಮಾರ್ ಅವರನ್ನು ಭೇಟಿಯಾಗಿ, ತಾನು ʼಸುಧಾ’ ಸುದ್ದಿಯ ಹಿನ್ನೆಲೆ ಮತ್ತು ವ್ಯಕ್ತಿ ವಿಷಯ ಅಂಕಣಗಳನ್ನು ತಪ್ಪದೆ ಓದಿ, ಕನ್ನಡ ಮಾಧ್ಯಮದಲ್ಲೇ ಪರೀಕ್ಷೆ ಬರೆದು ಐ ಎ ಎಸ್ ಪಾಸು ಮಾಡಿರುವುದಗಾಗಿ ಹಿಗ್ಗಿನಿಂದ ಹೇಳಿದ್ದರು. ಹರಿಕುಮಾರ್ ಅವರು ಶಿವರಾಮ್ ಅವರನ್ನು ನನ್ನ ಬಳಿ ಕಳುಹಿಸಿದ್ದರು. ಆತ ಹಿಗ್ಗು ಹೆಮ್ಮೆಯಿಂದ ʼಸುಧಾ’ ಬಗ್ಗೆ ಮಾತನಾಡಿದ್ದು ನಮ್ಮಲ್ಲಿ ಆ ಕ್ಷಣ ಸಾರ್ಥಕತೆಯ ಭಾವವನ್ನು ಮೂಡಿಸಿತ್ತು.

ʼಸುಧಾ’ ಮತ್ತು ʼಮಯೂರ’ ಎರಡನ್ನೂ ನಿರ್ವಹಿಸುವುದು ಒಬ್ಬ ಸಹಾಯಕ ಸಂಪಾದಕರಿಂದ ಸಾಧ್ಯವಿಲ್ಲ ಎನ್ನುವ ಅಬಿಪ್ರಾಯವಿತ್ತಾದರೂ, ʼಏಕೆ ಸಾಧ್ಯವಿಲ್ಲ? ಕೈಕೆಳಗೆ ನಾಲ್ಕೈದು ಮಂದಿ ಉಪಸಂಪಾದಕರಿರುತ್ತಾರಲ್ಲ. ಅವರಿಂದ ಕೆಲಸ ಮಾಡಿಸಬೇಕುʼ ಎನ್ನುವುದು ಇನ್ನೊಂದು ವಾದವಾಗಿತ್ತು. ನಿಯತಕಾಲಿಕ ಪತ್ರಿಕೋದ್ಯಮವೂ ಒಂದು ಸೃಜನಶೀಲ ಕೆಲಸ ಅದಕ್ಕೆ, ಅಧ್ಯಯನ, ಸಮಯ, ಸಾವಧಾನ ಚಿತ್ತಗಳು ಬೇಕಾಗುತ್ತವೆ ಎನ್ನುವುದು ಅರಿವಿಗೆ ಬರಲಿಲಲ್ಲ. ಕೊನೆಗೆ ಗೆದ್ದದ್ದು ಎರಡನೆಯ ವಾದವೇ. ಉಪ ಸಂಪಾದಕಿ ವಿಜಯಶ್ರೀ ʼಮಯೂರ’ದ ಮೊದಲ ಸುತ್ತಿನ ಆಯ್ಕೆ ಮತ್ತು ಪೇಜ್ ಮೇಕಪ್ ಗ್ರಾಫಿಕ್ಸ್ ಮೊದಲಾದ ಪೂರಕ ಸಾಮಗ್ರಿ ಸಜ್ಜುಗೊಳಿಸುವುದು ಮೊದಲಾದ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದರು.

ಕಥೆ/ಕಾದಂಬರಿ/ಲೇಖನಗಳ ಅಂತಿಮ ಆಯ್ಕೆ ಮತ್ತು ಸಂಚಿಕೆಯ ಹೊಣೆಗಾರಿಕೆ ನನ್ನದೇ ಆಗಿತ್ತು. ಹೇಗೋ ಏನೋ ಪ್ರಬುದ್ಧ ಓದುಗರ ಪತ್ರಿಕೆ ಎನ್ನುವ ಇಮೇಜ್ ʼಮಯೂರ’ಕ್ಕೆ ಬಂದು ಬಿಟ್ಟಿತ್ತು. ಪ್ರತಿ ತಿಂಗಳೂ ಪತ್ರಿಕೆಯನ್ನು ರೂಪಿಸುವಾಗ ಇದನ್ನು ಮನಸ್ಸಿನಲ್ಲಿಟ್ಟುಕೊಂಡೇ ಶ್ರೇಷ್ಠವಾದುದನ್ನು ಕೊಡುವ ಹೆಣಗಾಟ ನಡೆಸುತ್ತಿದ್ದೆವು. ನಾನು ವಹಿಸಿಕೊಂಡ ನಂತರ ಕನ್ನಡದ ಹೊಸ ತಲೆಮಾರಿನ ಕಥೆಗಾರರ ಶ್ರೇಷ್ಠ ಕಥೆಗಳು, ವಿಶ್ವದ ಶ್ರೇಷ್ಠ ಕಥೆಗಳ ವಿಶ್ವಕಥಾ ಮಾಲಿಕೆ, ಕೆ.ಎಸ್.ನಿಸಾರ ಅಹಮದ್ ಅವರ ʼವಿಚಾರ ವಿಹಾರ’ ಮತ್ತು ಬಿ.ಎಸ್.ವೆಂಕಟಲಕ್ಷ್ಮಿಯವರ ʼಪತ್ನಿಯರು ಕಂಡಂತೆ ಪ್ರಸಿದ್ಧರು’ ಮೊದಲಾದ ಹೊಸ ಅಂಕಣಗಳನ್ನು ಪ್ರಾರಂಭಿಸಿದೆ. ಹೀಗೆ ಹಳೆ ಬೇರು ಹೊಸ ಚಿಗುರು ಸೇರಿ ʼಮಯೂರ’ ಮತ್ತಷ್ಟು ಚಂದಗಾಣಿಸಿತು.

December 31, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ದಿಲ್ಲಿ ಹೈ ದಿಲ್ ಹಿಂದೂಸ್ತಾನ್ ಕಾ – 2’

‘ದಿಲ್ಲಿ ಹೈ ದಿಲ್ ಹಿಂದೂಸ್ತಾನ್ ಕಾ – 2’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ |ಕಳೆದ ಸಂಚಿಕೆಯಿಂದ|...

2 ಪ್ರತಿಕ್ರಿಯೆಗಳು

 1. Madhu B N

  “ಎಚ್ಚೆಸ್ವಿ ಯವರ ಸುದ್ದಿಯ ಹಿನ್ನೆಲೆ ಮತ್ತು ವ್ಯಕ್ತಿ ವಿಷಯ ಬಹಳ ಉಪಯುಕ್ತ ಅಂಕಣಗಳಾಗಿದ್ದವು…” ಎಂದು ಬರೆಯುವ ಲೇಖಕರು, ‘ಎಚ್ಚೆಸ್ವಿ’ ಯವರ ಬದಲಾಗಿ ‘ಎಚ್ಚೆಸ್ಕೆ’ ಎಂದು ಉಲ್ಲೇಖಿಸಬೇಕಿತ್ತು ಎಂದು ನನ್ನ ನಂಬಿಕೆ

  ಪ್ರತಿಕ್ರಿಯೆ
 2. Name *G N Ranganatha Rao

  Yes Sir, You are right.It should be HSK not hsv.Sorry for the mistake.
  Regards
  G N Ranganath Rao

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: