ಸುಧಾ ಮೂರ್ತಿ ಮೇಡಂ ಬೇಡ ಅಂದ್ರು!

ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು. 

ಮೂರನೆಯ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ‘ಅವಧಿ ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು ಮೆಲುಕು ಹಾಕಿದ್ದಾರೆ. ಇವರ ಮೊದಲ ಚಿತ್ರ ‘ಹರಿವು’ ನಿರ್ಮಾಣಗೊಂಡ ಕಥನವೂ ‘ಅವಧಿಯಲ್ಲಿಯೇ ಪ್ರಕಟವಾಗಿತ್ತು.

|ಕಳೆದ ಸಂಚಿಕೆಯಿಂದ|

ತಂಡ ರಚಿಸಿಕೊಂಡು, ಚಿತ್ರಕಥೆಯ ರಚನೆ, ಸಂಗೀತ ನಿರ್ದೇಶಕರ ಹುಡುಕಾಟ ಹೀಗೆ ಮೈತುಂಬಾ ಕೆಲಸಗಳನ್ನು ಹೇರಿಕೊಂಡು ರಾತ್ರಿ ಹಗಲು ಕೆಲಸ ಮಾಡುತ್ತಿದ್ದೆವು. ಸಾಮಾನ್ಯವಾಗಿ ನಾನು ಸೋಮಾರಿ, ನನ್ನ ದಿನದ ಪ್ರಾರಂಭವಾಗುವುದೇ ಬಹುತೇಕ ಸೂರ್ಯ ನೆತ್ತಿಗೇರಿದ ಮೇಲೆ. ಆದರೆ ಯಾವುದಾದರೂ ಕೆಲಸ ಇದೆ ಎಂದರೆ ಸಮಯದ ಪರಿವೆ ಇಲ್ಲದೆ ಕೆಲಸ ಮಾಡುವ ಎನರ್ಜಿ ಅದೆಲ್ಲಿಂದಲೋ ಬಂದುಬಿಡುತ್ತದೆ. ನಾತಿಚರಾಮಿಗೆ ನಿರ್ಮಾಪಕರು ಕನ್ಫರ್ಮ್ ಆಗಿದ್ದೇ ತಡ ನಿದ್ದೆ ರೆಸ್ಟ್ ಅನ್ನೊ ಪದಗಳೇ ನೆನಪಿಗೆ ಬಾರದಷ್ಟು ಕೆಲಸಗಳು ತುಂಬಿಕೊಂಡಿತ್ತು.

ಚಿತ್ರಕಥೆಯ ರಚನೆಯ ನಡುವೆ ಲೊಕೇಷನ್ಸ್ ಒಮ್ಮೆ ನೋಡಿ ಕೊಳ್ಳೋಣ. ನಮಗೆ ಸೂಕ್ತವಾದ ಲೊಕೇಷನ್ಸ್ ಸಿಕ್ಕರೆ, ಚಿತ್ರಕಥೆಯಲ್ಲಿ ವಿವರವಾಗಿ ಬ್ಲಾಕಿಂಗ್ಸ್ ಬರೆದುಕೊಳ್ಳಬಹುದು ಎಂದು ಎಣಿಸಿ, ತಂಡದೊಂದಿಗೆ ಚರ್ಚೆ ಮಾಡಿದೆ. ಸಾಕಷ್ಟು ಚರ್ಚೆ ಮಾಡಿದ ನಂತರ, ಚಿತ್ರೀಕರಣ ಸರಾಗವಾಗಿ ಸಾಗಲು, ಸಂಪೂರ್ಣವಾಗಿ ಸಿನೆಮಾನ ಮೈಸೂರಿನಲ್ಲಿ ಚಿತ್ರೀಕರಿಸಿದರೆ, ಪ್ರೊಡಕ್ಷನ್ ನಿಭಾಯಿಸುವುದು ಸುಲಭವಾಗುತ್ತದೆ, ಸಮಯ ಅನವಶ್ಯಕವಾಗಿ ಹಾಳಾಗುವುದಿಲ್ಲ ಎಂಬ ಆಲೋಚನೆ ಬಂತು.

ಔಟ್ ಡೋರ್ ಚಿತ್ರೀಕರಣ ಮಾಡುವುದರಲ್ಲಿ ಇರುವ ಸೌಲಭ್ಯ ಏನೆಂದರೆ, ಸಂಪೂರ್ಣ ತಂಡ ಒಟ್ಟಿಗೆ ಇರುತ್ತದೆ. ಚಿತ್ರೀಕರಣ ನಂತರ ಚರ್ಚೆ ಮಾಡಲು, ಮುಂದಿನ ಚಿತ್ರೀಕರಣದ ಕುರಿತಂತೆ ಯೋಜನೆ ರೂಪಿಸಲು ಅನುಕೂಲವಾಗುತ್ತದೆ. ಅದಕ್ಕಿಂತ ಮುಖ್ಯವಾದದ್ದು, ಎಲ್ಲರೂ ಒಂದೇ ಸಮಯಕ್ಕೆ ಚಿತ್ರೀಕರಣ ಸ್ಥಳ ತಲುಪಬಹುದು.

ಬೆಳಗ್ಗೆ ಹೊತ್ತು ಸಮಯಕ್ಕೆ ಸರಿಯಾಗಿ ಚಿತ್ರೀಕರಣ ಪ್ರಾರಂಭಿಸಬಹುದು. ಅದರಲ್ಲೂ ಮೈಸೂರು ಇಡೀ ಊರು ಸಿನೆಮಾ ಸೆಟ್ಟಿದ್ದಂತೆ, ಎಲ್ಲಿಂದ ಯಾವ ಮೂಲೆಗೆ ಬೇಕಾದರು ಅರ್ಧ ಗಂಟೆ ಒಳಗೆ ತಲುಪಬಹುದು. ಅದೇ ಬೆಂಗಳೂರಿನಲ್ಲಾದರೆ, ಬಹುತೇಕ ಸಮಯ ಪ್ರಯಾಣದಲ್ಲೇ ಕಳೆದು ಹೋಗುತ್ತದೆ ಎಂಬ ಕಾರಣಕ್ಕೆ ಮೈಸೂರಿನಲ್ಲಿ ಚಿತ್ರೀಕರಣ ಮಾಡಿದರೆ ಒಳ್ಳೆಯದು ಎಂಬ ನಿರ್ಧಾರಕ್ಕೆ ಬಂದು ನಿರ್ಮಾಪಕರಿಗೆ ಕಾಲ್ ಮಾಡಿ ಈ ಪ್ಲಾನ್ ವಿವರಿಸಿದೆ. ಜೊತೆಗೆ ಮೈಸೂರಿಗೆ ಹೋಗಿ ಬರಲು ಸ್ವಲ್ಪ ಹಣ ಬೇಕಾಗುತ್ತದೆ ಎಂದೂ ಸಹ ತಿಳಿಸಿದೆ. ಅವರು ಸರಿ ನಾಳೆ ಆಫೀಸಿನ ಬಳಿ ಬಾ ಎಂದು ಹೇಳಿದರು.

ಮರುದಿನ ಬೆಳಗ್ಗೆ ಆಫೀಸಿನ ಬಳಿ ಅವರು ಹೇಳಿದ ಸಮಯಕ್ಕೆ ಹೋದೆ. ಲೊಕೇಷನ್ ಹುಡುಕಾಟಕ್ಕೆ ಇಂತಿಷ್ಟು ಬಡ್ಜೆಟ್ ಅದಾಗಲೇ ಕೊಟ್ಟಿದ್ದರಿಂದ ಹೋದ ಕೂಡಲೇ ಅಕೌಂಟೆಂಟ್ ಶರತ್ ಗೆ ಹೇಳಿ ಹಣ ಕೊಡಿಸಿದರು, ಹಣ ಪಡೆದು ಅಲ್ಲಿಯವರೆಗೂ ಆದ ಕೆಲಸಗಳ ಬಗ್ಗೆ ಅವರಿಗೆ ಮಾಹಿತಿ ನೀಡಿ ಹೊರಡಲು ಅನುವಾದೆ, ರಮೇಶ್ ಸರ್ ‘ಒಂದ್ನಿಮಿಶ ಮಂಜು ಕೂತ್ಕೋ ನಿನಗೊಂದು ವಿಷಯ ಹೇಳ್ಬೇಕು ಅಂತ ಹೇಳಿದ್ರು.’ ಸರಿ ಎಂದು ಕುಳಿತೆ, ಆನಂತರ ಅಲ್ಲಿಗೆ ಇಬ್ಬರು ವ್ಯಕ್ತಿಗಳು ಬಂದರು, ಒಬ್ಬರು ಜಗನ್‌ ಮೋಹನ ರೆಡ್ಡಿ, ಮತ್ತೊಬ್ಬರು ಶಿವಕುಮಾರ್ ರೆಡ್ಡಿ, ಇವರಲ್ಲಿ ಶಿವಕುಮಾರ್ ರೆಡ್ಡಿಯವರ ಪರಿಚಯ ಈ ಹಿಂದೆ ಆಗಿತ್ತು. ಜಗನ್ ಮೋಹನ್ ಸರ್ ಅವರ ಪರಿಚಯಾನ ರಮೇಶ್ ರೆಡ್ಡಿ ಸರ್ ಮಾಡಿಕೊಟ್ಟರು .

ಒಂದೆರೆಡು ನಿಮಿಷ ತಡೆದು ಏನೋ ಹೇಳಬೇಕು ಅನ್ನುವಷ್ಟರಲ್ಲಿ, ಅವರ ಮುಂದೆ ಸುಧಾಮೂರ್ತಿ ಮೇಡಂ ಕೊಡಲು ತೆಗೆದುಕೊಂಡು ಹೋಗಿದ್ದ ಸ್ಕ್ರಿಪ್ಟ್ ಅಲ್ಲಿತ್ತು. ಅದನ್ನು ನೋಡಿದ ಕೂಡಲೇ ಕುತೂಹಲ ತಡೆಯಲಾರದೇ ನಾನೇ ಕೇಳಿದೆ, ಸರ್ ಮೇಡಂ ಸ್ಕ್ರಿಪ್ಟ್ ಓದಿದ್ರಂತಾ? ಏನನಿಸ್ತಂತೆ? ಅವರಿಗೆ ಇಷ್ಟ ಆಯ್ತಂತಾ? ಅಂತ ಕೇಳಿದೆ. ಅವರು ‘ಅವರು ಕಥೆಯ ಬಗ್ಗೆ ಏನೂ ಹೇಳಲಿಲ್ಲಾ, ಅವರ ಸೆಕ್ರೆಟರಿಗೆ ಈ ಕಥೆ ತುಂಬಾ ಇಷ್ಟ ಆಗಿದೆ, ಆದರೆ ಅದೇನೋ? ಯಾಕೋ, ಮೇಡಂ ಈ ಕಥೆನಾ ಸಿನೆಮಾ ಮಾಡಬೇಡ ಅಂತ ಹೇಳ್ಬಿಟ್ರು,’ ಅಂತಂದ್ರು. ನನಗೆ ಎದೆ ಧಸಕ್ಕೆಂತು.

ಸುಧಾಮೂರ್ತಿ ಮೇಡಂ ಅವರ ಬಗ್ಗೆ ರಮೇಶ್ ರೆಡ್ಡಿ ಅವರಿಗೆ ಅಪಾರವಾದ ಗೌರವ. ಅವರನ್ನು ಹೆತ್ತ ತಾಯಿಯಂತೆ ಪೂಜಿಸುತ್ತಾರೆ. ಅವರ ಇಂದಿನ ಏಳ್ಗೆಗೆ ಕಾರಣವೇ ಅವರು. ಬಹುಶಃ ಉಪ್ಪು ಹುಳಿ ಖಾರ ಸಿನೆಮಾದಲ್ಲಿ ಆದಂತೆ ಮತ್ತೆ ನಷ್ಟ ಅನುಭವಿಸುವುದು ಬೇಡ ಎಂಬ ಕಾರಣದಿಂದಲೋ ಏನೋ ಅವರು ಈ ಸಿನೆಮಾ ನೀನು ಮಾಡಬೇಡ ಎಂದು ಹೇಳಿರಬೇಕು ಎಂದು ನಾನು ಭಾವಿಸಿಕೊಂಡೆ (ಆದರೆ ಅದಕ್ಕೆ ಕಾರಣ ಬೇರೆ ಎಂದು ಆನಂತರ ನನಗೆ ಅರಿವಾಯಿತು).

ಸರಿ ಈಗೇನಪ್ಪ ಮಾಡುವುದು? ಮುಂದೆ ದಾರಿ? ಅವರ ಮಾತು ಮೀರಿ ಇವರು ಸಿನೆಮಾ ಮಾಡುವುದಿಲ್ಲ, ಹಾಗಿದ್ದಲ್ಲಿ ಲೊಕೇಷನ್ ನೋಡಲು ಹಣ ಯಾಕೆ ಕೊಟ್ಟರು, ಇದೆಲ್ಲ ಗೊಂದಲಗಳು ತಲೆಯಲ್ಲಿ ಒಂದೇ ಕಾಲಕ್ಕೆ ಓಡಲು ಶುರುವಾಯಿತು. ಸರಿ ಅವರ ನಿರ್ಧಾರ ಏನಿದೆಯೋ ಎಂದು ತಿಳಿಯಲು ಅವರ ಮುಖವನ್ನೇ ನೋಡಿದೆ.

ಮುಂದೆ ಅವರೇ ಮಾತನಾಡಿದರು. ನೋಡು ಮಂಜು ಮೇಡಂ ಮಾತು ಮೀರಿ ನಾನು ಈ ಸಿನೆಮಾ ಮಾಡಲು ಆಗುವುದಿಲ್ಲ. ಹಾಗಂತ ನಿನಗೆ ಕೊಟ್ಟ ಮಾತು ಹಿಂತೆಗೆದುಕೊಳ್ಳುವುದೂ ಇಲ್ಲ. ನಿನ್ನ ಸಿನೆಮಾಗೆ ಇವರಿಬ್ಬರು ಹಣ ಹೂಡುತ್ತಾರೆ. ಬ್ಯಾನರ್ ನನ್ನದು, ಅವರ ಹಣಕ್ಕೆ ಗ್ಯಾರಂಟಿ ನಾನಿರ್ತೀನಿ. ಈಗ ಅವರಿಗೆ ಸಿನೆಮಾದ ಕಥೆ ಹಾಗೂ ಇದಕ್ಕೆ ಹೂಡಿದ ಹಣ ಹೇಗೆ ವಾಪಸ್ಸು ಬರುತ್ತದೆ ಎಂಬುದನ್ನೆಲ್ಲ ಒಮ್ಮೆ ವಿವರಿಸು ಎಂದು ಹೇಳಿದರು.

ಸರಿ ನಾನು ಸಿನೆಮಾದ ಕಥೆ, ಕಥೆಯ ಆಶಯ (ಇದನ್ನು ಸ್ವಲ್ಪ ಬುದ್ಧಿವಂತಿಕೆಯಿಂದಲೇ ಹೇಳಬೇಕಾಗುತ್ತದೆ. ಅವರು ರೆಡ್ಡಿ ಫ್ಯಾಮಿಲಿ ಹಿನ್ನೆಲೆಯವರು, ಅವರ ಮನಃಸ್ಥಿತಿಗಳ ಪರಿಚಯ ನನಗಿದ್ದೇ ಇದೆ. ತೀರ ನನ್ನ ಸಿದ್ಧಾಂತಗಳನ್ನು ಹೇಳಿದರೆ ಅವರು ಒಪ್ಪುವುದಿಲ್ಲ ಎಂದು) ಇದೊಂದು ಹೆಣ್ಣಿನ ಜೀವನದ ದುರಂತ ಕಥೆ ಎಂಬಂತೆ ಅವರಿಗೆ ಸಂಕ್ಷಿಪ್ತವಾಗಿ ವಿವರಿಸಿ, ಇದಕ್ಕೆ ಹೂಡುವ ಹಣ ಸಬ್ಸಿಡಿಯಲ್ಲಿ ಇಷ್ಟು ಬರುತ್ತದೆ, ಪ್ರಶಸ್ತಿ ಅಥವಾ ಚಿತ್ರೋತ್ಸವಕ್ಕೆ ಆಯ್ಕೆ ಆದರೆ ಇಷ್ಟು, ಇಲ್ಲವಾದರೆ ಇಷ್ಟು ಬರುತ್ತದೆ. ಟಿವಿ ರೈಟ್ಸ್ ಅಥವಾ ಓಟಿಟಿ ಅಲ್ಲಿ ಇಷ್ಟು ಹಣ ವಾಪಸ್ಸು ಬರುತ್ತದೆ. ಉಳಿದ ಹಣ ಥಿಯೇಟರ್ ಹಾಗೂ ಇನ್ನಿತರ ಮೂಲಗಳಿಂದ ಬರುತ್ತದೆ ಎಂದೆಲ್ಲ ವಿವರಿಸಿದೆ.

ಅವರಿಬ್ಬರು ಕಥೆ ಕೇಳಿ ಮೆಚ್ಚಿಕೊಂಡು, ಏನೋ ರಮೇಶ್ ಸರ್ ಕಥೆ ಕೇಳಿ ಅಂತ ಹೇಳಿದ್ದಕ್ಕೆ ಇದೆಲ್ಲ ಕೇಳಿಸಿಕೊಂಡ್ವಿ, ನಮಗೆ ಇದೆಲ್ಲ ಬೇಕಿಲ್ಲ, ರಮೇಶ್ ಸರ್ ಹೇಳಿದ ಮೇಲೆ ಮುಗೀತು. ನಮಗೆ ಅವರ ಮೇಲೆ ನಂಬಿಕೆ ಇದೆ. ಅವರು ಹೇಳಿದಷ್ಟು ಹಣ ಕೊಡ್ತೀವಿ ಅಂತ ಹೇಳಿದ್ರು.

ನಾನು ರಮೇಶ್ ಸರ್ ಕಡೆ ತಿರುಗಿ, ಸರ್ ಅವರು ಹಣ ಹಾಕಿದ್ರು, ಎಲ್ಲಾ ಸೈನಿಂಗ್ ಅಥಾರಿಟಿ ನಿಮ್ಮದೇ ಇರಲಿ. ಏನೇ ಲೆಕ್ಕ ಕೊಡೋದಿದ್ರು ನಿಮಗೇ ಕೊಡ್ತೀನಿ ಅಂತ ಹೇಳಿಬಿಟ್ಟೆ. ಅವರು ಸರಿ ಆಯ್ತು ಅಂತ ಒಪ್ಕೊಂಡ್ರು. ಮತ್ತಿನ್ನೇನೋ ಕಂಟಕ ಎದುರಾಗಬಹುದು ಎಂಬ ಆತಂಕ ಈ ರೀತಿಯಲ್ಲಿ ಪರಿಹಾರ ಆಯ್ತು.

ರಮೇಶ್ ರೆಡ್ಡಿ ಸರ್ ತಾವು ಕೊಟ್ಟ ಮಾತನ್ನು ಉಳಿಸಿಕೊಂಡು ಸಿನೆಮಾ ಪೂರ್ತಿ ಮಾಡಿಸಿದರು. ಸಿನೆಮಾ ತಯಾರಾಗಿ ಬಿಡುಗಡೆಯ ನಂತರ ಸಿನೆಮಾದ ಬಂಡವಾಳ ಬರುವುದು ತಡವಾದಾಗ ತಮ್ಮ ಸ್ವಂತ ಹಣವನ್ನು ಅವರಿಗೆ ನೀಡಿದರು. ಜೊತೆಗೆ ಸಿನೆಮಾ ನಿರ್ಮಾಣದ ಪೂರ್ಣ ಜವಾಬ್ದಾರಿ ವಹಿಸಿಕೊಂಡರು. ಯಾವ ಪತ್ರಿಕಾಗೋಷ್ಠಿಯಲ್ಲೂ ಅವರು ಮುಂದೆ ಕಾಣಿಸಿಕೊಳ್ಳಲಿಲ್ಲ.

ಲೊಕೇಷನ್ ಹುಡುಕಾಟಕ್ಕೆ ಮೈಸೂರಿಗೆ ತಂಡದೊಂದಿಗೆ ಹೊರಟು, ಒಂದು ವಾರದ ಕಾಲ ಇಡೀ ಮೈಸೂರನ್ನು ಜಾಲಾಡಿದೆ. ಅಲ್ಲಿ ನನಗೆ ಪರಿಚಿತರು ಹಾಗೂ ಒಂದು ಕಾಲದಲ್ಲಿ ಕೆಲಸವಿಲ್ಲದೆ ಖಾಲಿ ಕುಳಿತಿದ್ದಾಗ ಕರೆದು ಕೆಲಸ ಕೊಡಿಸಿ, ನಿರ್ಮಾಣ ನಿರ್ವಹಣೆಯ ಶಿಸ್ತುಗಳನ್ನು ಕಲಿಸಿದ್ದ ಹಿರಿಯ ಪ್ರೊಡಕ್ಷನ್ ಮ್ಯಾನೇಜರ್, ಹುಣುಸೂರು ಕೃಷ್ಣಮೂರ್ತಿಯವರ ಅಳಿಯರಾದ ಶಾಸ್ತ್ರಿ ಸರ್ ತಮ್ಮ ತಂಡದ ಹುಡುಗರೊಂದಿಗೆ ಬಂದು ಸಾಕಷ್ಟು ಲೊಕೇಷನ್ ಗಳನ್ನು ತೋರಿಸಿದರು.

ಆದ್ರೆ ನನಗೆ ನನ್ನ ಕಲ್ಪನೆಯಲ್ಲಿದ್ದ ಲೊಕೇಷನ್ ಗಳಿಗೆ ಸರಿ ಹೊಂದುವಂತಹ ಜಾಗಗಳು ಸಿಗದೆ ಅತೃಪ್ತಿಯಾಗುವುದರ ಜೊತೆಗೆ ಪ್ರೊಡಕ್ಷನ್ ಕಾಸ್ಟ್ ಜಾಸ್ತಿ ಬರುತ್ತಿದೆ ಎಂಬ ಕಾರಣಕ್ಕೆ ಮೈಸೂರಿನಲ್ಲಿ ಚಿತ್ರೀಕರಣ ಮಾಡುವ ಯೋಜನೆ ಕೈಬಿಟ್ಟು ಬೆಂಗಳೂರಿನಲ್ಲೇ ಹುಡುಕಾಟ ಆರಂಭಿಸಿದೆ. ಇಷ್ಟೆಲ್ಲಾ ತಯಾರಿ ನಡೆಸುತ್ತಿರುವ ಹೊತ್ತಲ್ಲೇ ಮತ್ತೊಂದು ಆತಂಕ ಎದುರಾಗಿತ್ತು. ಅದು ಸಂಪತ್ ಅವರ ಕಡೆಯಿಂದ.

|ಮುಂದಿನ ಸಂಚಿಕೆಯಲ್ಲಿ|

‍ಲೇಖಕರು ಮಂಸೋರೆ

January 8, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ʼನಕ್ಷತ್ರಗಳ ಸುಟ್ಟ ನಾಡಿನಲ್ಲಿʼ ಕೃತಿ ಬಿಡುಗಡೆ ಫೋಟೋ ಆಲ್ಬಂ

ʼನಕ್ಷತ್ರಗಳ ಸುಟ್ಟ ನಾಡಿನಲ್ಲಿʼ ಕೃತಿ ಬಿಡುಗಡೆ ಫೋಟೋ ಆಲ್ಬಂ

ʼಬಹುರೂಪಿʼಯ ಪ್ರಕಟಣೆ ʼನಕ್ಷತ್ರಗಳ ಸುಟ್ಟ ನಾಡಿನಲ್ಲಿʼ ಕೃತಿ ಬಿಡುಗಡೆ ಭಾರತಿ ಬಿ ವಿ ಅವರ ಪ್ರವಾಸ ಕಥನ ʼನಕ್ಷತ್ರಗಳ ಸುಟ್ಟ ನಾಡಿನಲ್ಲಿʼ...

ದಿಲ್ಲಿ ಹೈ ದಿಲ್ ಹಿಂದೂಸ್ತಾನ್ ಕಾ!

ದಿಲ್ಲಿ ಹೈ ದಿಲ್ ಹಿಂದೂಸ್ತಾನ್ ಕಾ!

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ಹೆಸರಿನಲ್ಲೇನಿದೆ ಎಂದು...

2 ಪ್ರತಿಕ್ರಿಯೆಗಳು

  1. na. damodara shetty

    ಮಂಸೋರೆಯವರ ಚಿತ್ರಸೂಕ್ಷ್ಮಗಳು ಕನ್ನಡ ಚಿತ್ರರಂಗದ ಮುಂದಿನ ದಿನಗಳ ಆಶಾಕಿರಣ.

    ಪ್ರತಿಕ್ರಿಯೆ
  2. ರಾಜಮ್ಮ ಪಿ ಸಿ

    ಮಾಧ್ಯಮದ ಪ್ರೇರಣೆ ವಾಸ್ತವದೊಂದಿಗೆ ಬೆರೆಯಲು, ಸಿನಿಕತೆ ದೂರಾಗಲು ಮಂಸೋರೆಯವರಂತಹ ನಿರ್ದೇಶಕರು ಮತ್ತು ಸಮಾನಮನಸ್ಕರ ಸಂಖ್ಯೆ ಬೆಳೆಯುತ್ತ ಸಾಗಬೇಕು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: