ಸುನೀತಾಗೆ ಮಲ್ಲಿಗೆ ಎಂದರೆ ಇಷ್ಟ

ಸುನೀತಾಗೆ ಮಲ್ಲಿಗೆ ಎಂದರೆ ಇಷ್ಟ (ಕಥಾ ಸಂಕಲನ)
ಭಾಸ್ಕರ ಹೆಗಡೆ
ಸುಂದರ ಪ್ರಕಾಶನ `ಚಿತ್ರಶ್ರೀ’, 43, ಕಲಾಮಂದಿರ, 5ನೆಯ ಅಡ್ಡರಸ್ತೆ ಅ.ನ.ಸುಬ್ಬರಾವ್ ರಸ್ತೆ, ಹನುಮಂತನಗರ, ಬೆಂಗಳೂರು – 560 019
ಪುಟಗಳು:105+6
ಬೆಲೆ:ರೂ.100
ಇದು ಭಾಸ್ಕರ ಹೆಗಡೆಯವರ ಮೊದಲ ಕಥಾಸಂಕಲನ. ಇಲ್ಲಿನ ಹತ್ತೂ ಕಥೆಗಳಲ್ಲಿನ ಸಮಾನ ಅಂಶ ಯಾವುದು ಎಂದು ಯೋಚಿಸಿದರೆ ಮನುಷ್ಯನ ಆಳದಲ್ಲಿ ಹುದುಗಿರುವ ತಣ್ಣನೆಯ ಕ್ರೌರ್ಯ, ಎಲ್ಲೋ ಧಿಗ್ಗನೆ ಎದ್ದು ಬರುವ ಮಾನವೀಯ ಪ್ರೀತಿಯ ಸೆಲೆ, ಮನುಷ್ಯ ಸಂಬಂಧಗಳು ಕೂಡುವ, ಕಾಡುವ ಅನನ್ಯ ಪರಿ, ಆಧುನಿಕತೆ ನುಂಗುತ್ತಿರುವ ಅವನ ಸ್ಮೃತಿಗಳು, ಭ್ರಷ್ಟನಾಗುತ್ತಿರುವ ಅವನ ಹಪಹಪಿ ಎಲ್ಲವೂ ಕಣ್ಣೆದುರು ಬರುತ್ತದೆ. ಹೀಗೆ ಬದುಕನ್ನು ಅದರ ವಿಶಿಷ್ಟತೆಯಲ್ಲಿ ಮತ್ತು ಸಮಗ್ರತೆಯಲ್ಲಿ ಒಟ್ಟಿಗೇ ಹಿಡಿಯಲು ಭಾಸ್ಕರ ಹೆಗಡೆಯವರು ಪ್ರಯತ್ನಿಸುತ್ತಾರೆ. ಹಾಗಾಗಿ ಒಂದೇ ಸಂಕಲನದಲ್ಲಿ ತೀರ ಭಿನ್ನವೆನಿಸುವ ಬಗೆಯ ರಚನೆಗಳನ್ನು ಅವರು ನಮ್ಮೆದುರು ಇಡುತ್ತಾರೆ.
ಮೊದಲಿಗೆ ಗಮನಸೆಳೆಯುವುದು ಇವರು ಬಳಸುವ ಆಧುನಿಕತೆಯ ಸ್ಪರ್ಶವಿರುವ ನುಡಿಕಟ್ಟುಗಳು, ರೂಪಕಗಳು. ಉದಾಹರಣೆಗೆ ಗಮನಿಸಿ:
“ಅಮೆರಿಕೆಗೆ ಹೋದಾಗಿನಿಂದ ತನ್ನ ಮನಸ್ಸಿನಲ್ಲಿ ಕುಳಿತಿದ್ದ ಅಪ್ಪನ ನೆನಪೆಂಬ ಕ್ಯಾಟ್ರೀನಾ ಪದೇ ಪದೇ ಸುಳಿಯುತ್ತಿತ್ತು.”
“ಅಪ್ಪ ಅಮ್ಮನ ನೆನಪೆನ್ನುವ ಬ್ಯಾಟರಿಯ ಸೆಲ್ಲು ತೆಗೆದಿಟ್ಟಿದ್ದ.”
“ಮೆಟಲ್ ಇಂಡಸ್ಟ್ರಿಯವನ ಫ್ಯಾಕ್ಟರಿಯ ಅಂಗಳದಲ್ಲಿ ಮಗುವೊಂದು ನಡೆದಂತಿತ್ತು.”
ಎರಡನೆಯದಾಗಿ ಇಲ್ಲಿನ ಮಾತಿನ ಹರಿತ, ಮೊನಚು. ಇಲ್ಲಿನ ಹತ್ತೂ ಕಥೆಗಳ ಶೀರ್ಷಿಕೆಯಲ್ಲೇ ಆ ಕಿಚ್ಚು ಅಡಗಿದೆ ಅನಿಸುವಷ್ಟು ಈ ಕಥೆಗಳಲ್ಲಿ ನಂಜು, ನೋವು, ದುರಂತ ಎಲ್ಲ ಅಡಗಿವೆ. ಇಲ್ಲಿನ ಕಥೆಗಳಲ್ಲಿ ಬರುವ ವಿವರಗಳ ನವಿರು ಹೆಚ್ಚಾದಷ್ಟೂ ಆಳದ ವ್ಯಂಗ್ಯ, ವಿಪರ್ಯಾಸಗಳು ಹೆಚ್ಚುತ್ತವೆಯೋ ಎಂಬಂತಿವೆ. ಉದಾಹರಣೆಗೆ ಸುನೀತಾಗೆ ಮಲ್ಲಿಗೆ ಎಂದರೆ ಇಷ್ಟ ಕಥೆ ನಮ್ಮನ್ನು ಒಮ್ಮೆಗೇ ತಟ್ಟುವ, ಆಘಾತಕ್ಕೆ ತಳ್ಳುವ ಪರಿಯೇ ದಿಗ್ಭ್ರಮೆಗೊಳಿಸುವಂಥದ್ದು. ಅದನ್ನು ತಣ್ಣನೆಯ ಮಾತುಗಳಲ್ಲಿ, ವಿವರಗಳಲ್ಲಿ ನಿರೂಪಿಸಿರುವುದೇ ಕಥೆಯ ಯಶಸ್ಸಿಗೆ ಕಾರಣವೆನಿಸುತ್ತದೆ. ಆದರೆ ಹೀಗೆ ಓದುಗನ್ನು ಒಮ್ಮೆಗೇ ತಡಕುವುದರಿಂದ ಏನು ಅನ್ನುವುದು ಪ್ರಶ್ನೆ. ನಾಯಿಕೆಮ್ಮು ಕೂಡಾ ಇದೇ ಬಗೆಯ ಕಥೆ. ಮನುಷ್ಯನ ಆಳದ ಕ್ರೌರ್ಯ ಯಾವತ್ತೂ ಮೇಲ್ ಸ್ತರದಲ್ಲಿ ಗೋಚರಕ್ಕೆ ಬರುವುದಿಲ್ಲ. ಅದು ತಡವಿದಾಗ ಒಮ್ಮೆಗೇ ಬೆಚ್ಚಿಬೀಳುವುದು ತಪ್ಪುವುದಿಲ್ಲ. ಗೋಮುಖದ ಮನುಷ್ಯನ ಈ ಗುಪ್ತವಾದ ಇನ್ನೊಂದು ಮುಖವೇ ಕ್ರೌರ್ಯದ ವಿರುದ್ಧ ಮಾನವೀಯತೆಯ ಕುರಿತು ಇರುವ ಆಸೆ, ಭರವಸೆ, ಪ್ರೀತಿಗಳನ್ನು ಪೊರೆಯುತ್ತಿರುವ ಶಕ್ತಿಯಿದ್ದರೂ ಇದ್ದೀತು. ಈ ಎರಡೂ ಕಥೆಗಳ ಮಟ್ಟಿಗಂತೂ ಇಂಥ ಪರಿಣಾಮಕಾರತ್ವ ಇರುವುದು ಸತ್ಯ.
ಮೂರನೆಯದಾಗಿ ಮೇಲಿನ ಎರಡೂ ಅಂಶಗಳು ಸೇರಿಕೊಂಡೇ ರೂಪಿಸಲ್ಪಟ್ಟಿರುವ ಭಾಸ್ಕರ ಹೆಗಡೆಯವರ ಕಥೆ ಹೇಳುವ ಶೈಲಿ. ಒಂದೊಂದು ಕಥೆಯನ್ನೂ ಇಡಿಯಾದ ಒಂದು ರೂಪಕವನ್ನಾಗಿಸಲು ಭಾಸ್ಕರ ಹೆಗಡೆಯವರು ವಹಿಸಿರುವ ಪರಿಶ್ರಮ ಇಲ್ಲಿ ಎದ್ದು ಕಾಣುತ್ತದೆ. ಅದರಲ್ಲೂ ಸುನೀತಾಗೆ ಮಲ್ಲಿಗೆ ಎಂದರೆ ಇಷ್ಟ, ನಾಯಿ ಕೆಮ್ಮು, ಎರಡನೆಯ ವಿಶ್ವ, ಭಾವಚಿತ್ರ, ರಘುಪತಿ ಭಟ್ಟರ ಎಮ್ಮೆ ಕಥೆಗಳು ಬಹುಕಾಲ ಮನಸ್ಸಿನಲ್ಲಿ ಅಚ್ಚೊತ್ತಿ ನಿಲ್ಲುವಂತಾಗಲು ಬಹುಮುಖ್ಯ ಕಾರಣವೇ ಭಾಸ್ಕರ ಹೆಗಡೆಯವರ ರೂಪಕ ಶೈಲಿ ಎಂದರೆ ತಪ್ಪಾಗಲಾರದು.
ಆದರೆ ಬ್ಯಾಡಗಿ ಮೆಣಸಿನ ಕಾಯಿ, ಮುಖವಿಲ್ಲದವನ ಹೆಜ್ಜೆಗುರುತು, ಶವ ಹೊತ್ತ ಗಾಡಿ ಕಥೆಗಳು ವಿಭಿನ್ನ ಕಾರಣಗಳಿಗಾಗಿ ಮನಸ್ಸನ್ನು ತಟ್ಟುವಲ್ಲಿ ಸೋತಿವೆ. ಮೊದಲಿಗೆ ಬ್ಯಾಡಗಿ ಮೆಣಸಿನ ಕಾಯಿ ಕಥೆ ಕೊನೆಗೂ ಒಂದು ಚೌಕಟ್ಟು ಪಡೆಯುವಲ್ಲಿ ಸಫಲವಾಗುವುದಿಲ್ಲ. ಸಣ್ಣ ಕಥೆಗೆ ವಿವರಗಳ ತಂಪು, ರೂಪಕದ ಬೆಡಗು, ಕಥಾನಕದ ಹರಹು ಎಲ್ಲ ಇದ್ದೂ ಇವಕ್ಕೆಲ್ಲ ಒಂದು ನಿರ್ದಿಷ್ಟ ಚೌಕಟ್ಟು ನಿರ್ಮಾಣವಾಗದೇ ಹೋದರೆ ಅದು ಎಲ್ಲ ಇದ್ದೂ ಏನೋ ಇಲ್ಲದ, ಹಾಗಾಗಿ ಇರುವ ಎಲ್ಲ ಗುಣಾತ್ಮಕ ಅಂಶಗಳು ಪೋಲಾದಂಥ ಒಂದು ಶೂನ್ಯವನ್ನು ಸೃಜಿಸುತ್ತದೆ.
ಶವ ಹೊತ್ತ ಗಾಡಿ ಕಥೆ ಭಾಸ್ಕರ ಹೆಗಡೆಯವರ ಎಂದಿನ ಶೈಲಿಗೆ ಒಂದು ಅಪವಾದದಂತೆ ಮೂಡಿ ಬಂದಿದೆ. ಇಲ್ಲಿನ ಕಥಾನಕದ ಹರಹು ದೊಡ್ಡದಾಗಿ ಅದರ ವಾಚ್ಯ ನಿರೂಪಣೆ ಅನಿವಾರ್ಯವಾದಂತಿದೆ. ಅದೂ ಅಲ್ಲದೆ ಭಾಸ್ಕರ ಹೆಗಡೆಯವರದೇ ಉಳಿದ ಕಥೆಗಳಲ್ಲಿ ಸಿಗುವ ಒಂದು ರೂಪಕದ ಆಕೃತಿ ಇಲ್ಲಿ ಕಂಡು ಬರದೆ ನೇರ ಸರಳ ವಿವರಗಳ ಅನಾಕರ್ಷಕ ನಿರೂಪಣೆಯಿದೆ.
ಮುಖವಿಲ್ಲದವನ ಹೆಜ್ಜೆಗುರುತು ಒಂದು ಹಂತದಲ್ಲಿ ಆಧುನಿಕ ಜೀವನ ಶೈಲಿ, ವೃತ್ತಿಜೀವನದ ಒತ್ತಡ ಅಥವಾ ನಗರದ ಬದುಕಿನ ಯಾಂತ್ರೀಕತೆಯ ಫಲಶೃತಿಗಳ ಚಿತ್ರಣಕ್ಕೆ ಹೊರಟ ಕಥಾನಕ ಎನಿಸಿದರೂ ಮುಂದೆ ಅದು ಹಾಗೆ ಸಾಗದೆ ಕೇವಲ ವ್ಯಕ್ತಿಗತ ಸಮಸ್ಯೆಯೊಂದರ ಹಂದರವಾಗಿ ಬಿಡುತ್ತದೆ. ಲೈಂಗಿಕ ವಸ್ತುವನ್ನು ಹೊಂದಿದೆ ಎಂಬ ಕಾರಣಕ್ಕೋ ಏನೋ ಭಾಸ್ಕರ ಹೆಗಡೆಯವರು ಮುಜುಗರದಿಂದಲೇ ಇದಕ್ಕೆ ಕೊಂಚ ಲಘುಧಾಟಿಯ ಹೂರಣ ಒದಗಿಸಲು ಹೋಗಿ ನಿರಾಸೆ ಹುಟ್ಟಿಸುತ್ತಾರೆ.
ಅಮ್ಮ ನನಗೆ ಗಿಳಿ ತಂದುಕೊಡು ಕಥೆ ಭಾಸ್ಕರ ಹೆಗಡೆಯವರ ಅತ್ಯಂತ ಸಾವಧಾನದ, ನಿರುದ್ವಿಗ್ನ ಶೈಲಿಯಲ್ಲಿ ಕಥೆ ಹೇಳುವ ವಿಶಿಷ್ಟ ವಿಧಾನದ ಅತ್ಯುತ್ತಮ ಉದಾಹರಣೆಯೆನ್ನಬಹುದು. ಅನುಭವವನ್ನು ಗ್ರಹಿಸುವ ರೀತಿ ಮತ್ತು ಅದನ್ನು ಕಥೆಯಾಗಿಸಿ ಆ ಮಾಧ್ಯಮದ ಮೂಲಕ ಸಂವಹನಕ್ಕೆ ಅಣಿಗೊಳಿಸುವ ಕ್ರಮ – ಈ ಅಣಿಗೊಳಿಸಿಕೊಳ್ಳುವ ಹಾದಿಯಲ್ಲಿ ಭಾಸ್ಕರ ಹೆಗಡೆಯವರು ಬಳಸಿಕೊಳ್ಳುವ ರೂಪಕಗಳು, ವಿವರಗಳು, ಆಕೃತಿಯ ಕುರಿತ ಅವರ ಯೋಜನೆಗಳು – ಮತ್ತು ಈ ಕ್ರಮದಲ್ಲಿ ಸಮರ್ಥವಾಗಿ ಅವರು ತಮ್ಮ ಅನುಭವವನ್ನು ಓದುಗನಿಗೆ ಮುಟ್ಟಿಸುವಲ್ಲಿ ಹೇಗೆ ಮತ್ತು ಎಷ್ಟು ಯಶಸ್ವಿಯಾಗುತ್ತಾರೆ ಎನ್ನುವುದಕ್ಕೆ ಈ ಕಥೆ, ಇದು ಸಂಕಲನದ ಅತ್ಯುತ್ತಮ ಕಥೆಯಲ್ಲದಿದ್ದಾಗ್ಯೂ, ಒಂದು ದೃಷ್ಟಾಂತದಂತಿದೆ.
ಎರಡನೆ ವಿಶ್ವದ ಸ್ಕೂಲ್ ಮಾಸ್ತರ್ ತನ್ನನ್ನು ಎಂದೂ ತಾನು ಈ ಊರಿನವನಲ್ಲ ಎಂದು ಭಾವಿಸುವುದಿಲ್ಲ. ಊರ ಸಮಸ್ಯೆಗಳಿಗೆಲ್ಲ ತಲೆಕೊಡುತ್ತ, ಪರಿಹಾರ ಹುಡುಕುತ್ತ ಓಡಾಡುವ ಈತನಿಗೆ ಶಿಕ್ಷಕನಾಗಿಯೂ, ಊರಿಂದೂರಿಗೆ ವರ್ಗವಾಗಿ ಹೋಗುವವನಾಗಿಯೂ ಇದೆಲ್ಲ ನಿಮ್ಮ ಕೆಲಸಗಳಲ್ಲ ಎಂದು ಹೇಳುವವರಿದ್ದಾರೆ. ಆದರೆ ಮನುಷ್ಯರನ್ನು ಬೆಸೆಯುವ ಕ್ರಿಯೆಯಲ್ಲಿ ಅಪಾರ ನಂಬುಗೆಯುಳ್ಳವನಾಗಿ ಕಾಣುವ ಈ ಪಾತ್ರ ಮತ್ತು ಅದರಿಂದಾಗಿ ಒಂದು ಘನತೆ ಪಡೆದುಕೊಳ್ಳುವ ಈ ಕಥೆ ಎರಡೂ ನೆನಪಿನಲ್ಲುಳಿಯುತ್ತವೆ.
ರಘುಪತಿ ಭಟ್ಟರ ಎಮ್ಮೆ ಅತ್ತೆ ಸೊಸೆಯರ ನಡುವಿನ ಬಾಂಧವ್ಯವನ್ನು ಬೆಸೆಯುವ, ಕಸಿಯುವ ಮತ್ತು ಕಸಿಕಟ್ಟುವ ಒಂದು ನಿರ್ಣಾಯಕ ಜೀವವಾಗಿ ಬಿಡುವ, ಭಾವನಾತ್ಮಕವಾಗಿ ಎಮ್ಮೆ ಒಂದು ಸ್ಥಾಯೀಭಾವವಾಗಿ ಮನದಲ್ಲಿ ನಿಲ್ಲುವ ಸುಂದರವಾದ ಚಿತ್ರಣವಿದೆ. ಕೆ.ಸದಾಶಿವರ ನಲ್ಲಿಯಲ್ಲಿ ನೀರು ಬಂದಿತು ಕಥೆಯನ್ನು ನೆನಪಿಸುವ ಕಥೆಯಿದು.
ಭಾವಚಿತ್ರ ಕಥೆ ಕೆಲವೊಂದು ಕಾರಣಗಳಿಗಾಗಿ ವಿಶಿಷ್ಟವಾದದ್ದು. ದೈವೀಕಲೆಯು ಮಾನವನ ಭ್ರಷ್ಟಮುಖವನ್ನು ಒಳಗುಗೊಳ್ಳಲು ನಿರಾಕರಿಸುವ ಒಂದು ಹಂತ ಮತ್ತು ಕಲಾವಿದನ ವೈಯಕ್ತಿಕ ಭ್ರಷ್ಟತೆ ಅದನ್ನು ಸಾಧ್ಯಗೊಳಿಸುವ ಇನ್ನೊಂದು ಹಂತ ಇಲ್ಲಿ ಬಹಳ ನವಿರಾಗಿ ನಿರೂಪಿತವಾಗಿದೆ. ಈ ಎರಡೂ ಭ್ರಷ್ಟತೆ ಸ್ವರೂಪದಲ್ಲಿ ಭಿನ್ನವಾದುದಾದರೂ ತಾತ್ವಿಕವಾಗಿ ಒಂದೇ ಸ್ವರೂಪದ್ದೆನ್ನುವ ನಿಲುವನ್ನು ಕತೆಗಾರ ಒಪ್ಪಿಕೊಂಡಂತಿದೆ. ಕಲಾವಿದನ ವೈಯಕ್ತಿಕ ಪಾಪಪ್ರಜ್ಞೆ ರಾಜಕಾರಣಿಯೊಬ್ಬನ ಭ್ರಷ್ಟತನದ ಜೊತೆ ಕಲೆ ರಾಜಿ ಮಾಡಿಕೊಳ್ಳಲು ನೆಲೆ ಒದಗಿಸುವುದನ್ನು ಒಪ್ಪುತ್ತೇವೋ ಬಿಡುತ್ತೇವೋ ಎನ್ನುವುದು ಬೇರೆಯೇ ಪ್ರಶ್ನೆ. ಈ ಮುಖಾಮುಖಿಯೊಂದು ಎಬ್ಬಿಸುವ ತಳಮಳ ಏನಿದೆ ಅದು ಈ ಕಥೆಯಲ್ಲಿ ಮುಖ್ಯವಾಗುತ್ತದೆ.
ರೂಟ್ ಕೆನಾಲ್ ಥೆರಪಿ ಕೂಡ ಈ ಸಂಕಲನದ ಉತ್ತಮ ಕಥೆಗಳಲ್ಲಿ ಒಂದು. ಇಡೀ ಕಥೆಯೊಂದು ರೂಪಕದಂತೆ ನಮ್ಮ ವ್ಯಕ್ತಿತ್ವದ ಬೇರುಗಳಿಂದ, ಸ್ಮೃತಿಗಳಿಂದ ನಮ್ಮನ್ನು ಬೇರ್ಪಡಿಸುವ ಆಧುನಿಕತೆಯು ಇನ್ನೊಂದೆಡೆ ನಮ್ಮ ಮೇಲೇರುವ, ಗುರಿ ಸಾಧಿಸುವ ಉಪಕ್ರಮಗಳನ್ನು ಸಂಕೇತಿಸುವಂತಿರುವುದರ ಸಂಕೀರ್ಣ ಚಿತ್ರವನ್ನು ಕಟ್ಟಿಕೊಡಲು ಯತ್ನಿಸುತ್ತದೆ.
ಮೊದಲ ಸಂಕಲನದಲ್ಲೇ ಸಾಕಷ್ಟು ಭರವಸೆ ಹುಟ್ಟಿಸುವ ಕಥೆಗಳನ್ನು ನೀಡಿರುವ ಭಾಸ್ಕರ ಹೆಗಡೆ ತಮ್ಮ ಹತ್ತೂ ಕಥೆಗಳಲ್ಲಿ ಹಂಚಿಹೋದಂತಿರುವ ಹಲವಾರು ಉತ್ತಮ ಅಂಶಗಳನ್ನು ಮುಂದಿನ ಪ್ರತಿಯೊಂದು ಕಥೆಯಲ್ಲೂ ಮೈಗೂಡಿಸಿಕೊಂಡು ಬರುವ ಸಾವಧಾನ, ಪೋಷಣೆ, ಶ್ರಮ ವಹಿಸಿದರೆ ಕನ್ನಡಕ್ಕೆ ಕೆಲವು ಅತ್ಯುತ್ತಮವಾದ ಕಥೆಗಳನ್ನು ನೀಡಬಲ್ಲರು ಎನ್ನುವುದರಲ್ಲಿ ಸಂಶಯವಿಲ್ಲ.

 

‍ಲೇಖಕರು avadhi

May 2, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅಮೃತಾ ಪ್ರೀತಮ್ ರ ‘ಪಿಂಜರ್’

ಅಮೃತಾ ಪ್ರೀತಮ್ ರ ‘ಪಿಂಜರ್’

ಪಿಂಜರ್ ಅಂದರೆ ಕನ್ನಡದಲ್ಲಿ ಪಂಜರ ಅಥವಾ ಮಾನವನ ಅಸ್ಥಿಪಂಜರ ಎಂದು ಹೇಳಬಹುದು. ಏನು ಈ ಕಾದಂಬರಿಯ ಹೆಸರು ಹೀಗಿದೆ? ಇದು ಸತ್ತವರ ಕತೆಯನ್ನು...

ಅಭಿನಂದನೆಗಳು ಎಚ್ಚೆಸ್ವಿ, ಇದು ನಿಮ್ಮ ಮ್ಯಾಗನಂ ಓಪಸ್!

ಅಭಿನಂದನೆಗಳು ಎಚ್ಚೆಸ್ವಿ, ಇದು ನಿಮ್ಮ ಮ್ಯಾಗನಂ ಓಪಸ್!

ಜಿ.ಎನ್.ರಂಗನಾಥರಾವ್ ಪ್ರಿಯ ಎಚ್ಚೆಸ್ವಿ,ನಿಮ್ಮ 'ಬುದ್ಧಚರಣ'ಮಹಾಕಾವ್ಯವನ್ನುಸಾವಧಾನದಿಂದ ಓದಿ ಸುಖಿಸುತ್ತಾ ಹೋದಂತೆ, "ಹುತ್ತಗಟ್ಟದೆ ಚಿತ್ತ...

ಕೂಡ್ಲಿ ಗುರುರಾಜ ಹೊಸ ಕೃತಿಯೊಂದಿಗೆ..

ಕೂಡ್ಲಿ ಗುರುರಾಜ ಹೊಸ ಕೃತಿಯೊಂದಿಗೆ..

ಕೂಡ್ಲಿ ಗುರುರಾಜ ಆತ್ಮೀಯ ಸ್ನೇಹಿತರೇ, ನಾನು ಬರೆದಿರುವ ಸುದ್ದಿ ಬರಹ ಮತ್ತು ವರದಿಗಾರಿಕೆ ಎಂಬ ಪಸ್ತಕ ಈಗ ಬಿಡುಗಡೆಗೆ ಸಿದ್ದವಾಗಿದೆ....

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This