ಸುನೀತಾ ಅನಂತಸ್ವಾಮಿ ಕಾಲಂ: ನನ್ನ 'ಅಣ'

ಕನ್ನಡ ಲೋಕದ  ‘ದೊರೆ’ ಎಂದೇ ಕರೆಯಲ್ಪಡುತ್ತಿದ್ದ ಮೈಸೂರು ಅನಂತಸ್ವಾಮಿಯವರ ಜನ್ಮ ದಿನ ಇಂದು.

ವಿಜಯದಶಮಿಯ ದಿನ ಹುಟ್ಟಿದ ಅನಂತಸ್ವಾಮಿಯವರು ಸುಗಮ ಸಂಗೀತ ಲೋಕವನ್ನು ಅಕ್ಷರಷಃ ದೊರೆಯಂತೆಯೇ ಆಳಿಹೋದರು.

ಅನಂತಸ್ವಾಮಿಯವರ ಬಗ್ಗೆ ತಿಳಿದಷ್ಟೂ ಇನ್ನೂ ತಿಳಿಯಬೇಕೆಂಬ ಹಂಬಲ ಕನ್ನಡ ಮನಸ್ಸುಗಳದ್ದು

ಹಾಗಾಗಿ ಮಗಳು ಸುನೀತಾ ಅನಂತಸ್ವಾಮಿ ಅವರನ್ನು ‘ಅಪ್ಪನ ಆಪ್ತ ನೆನಪುಗಳನ್ನು ಕಟ್ಟಿಕೊಡಿ’ ಎಂದು ‘ಅವಧಿ’ ಕೇಳಿತು

ಅದರ ಫಲ ಇಲ್ಲಿದೆ

ಇನ್ನು ಮುಂದೆ ಪ್ರತೀ ಸೋಮವಾರ ಸುನೀತಾ ನೆನಪುಗಳ ಗೊಂಚಲನ್ನೇ ಹೊತ್ತು ತರಲಿದ್ದಾರೆ

mysore-anantaswamy1ನಾವೆಲ್ಲಾ ನಮ್ಮ ತಂದೆನ “ಅಣ್ಣ” ಅಂತ ಕರಿತಾ ಇದ್ವಿ, ಆದರೆ ಅದರಲ್ಲಿ ‘ಣ’ ಒತ್ತಿನ  ಉಚ್ಚಾರಣೆ ಬಹಳ ಅಪರೂಪವಾಗಿ ಆಗೋದು.

ಈಗ ಇದ್ದಿದ್ದರೆ , ಅಣ್ಣನ  ವಯಸ್ಸು, ೮೦.  ಅಕ್ಟೋಬರ್ ೨೫, ೧೯೩೬, ವಿಜಯದಶಮಿಯಂದು ಜನಿಸಿದ ಅವರಿಗೆ ಅವರ ತಾಯಿ ಕಮಲಮ್ಮ , ಪ್ರೀತಿಯಿಂದ ‘ದೊರೆ’ ಅಂತ ಕರೆಯುತ್ತಿದ್ದರು . ಅವರ ಬಂಧು ಬಳಗದವರೆಲ್ಲ  ಅವರನ್ನು ‘ದೊರೆ’ ಎಂದೇ ಕರೆಯುತ್ತಿದ್ದರು.

ಈ ‘ದೊರೆ’ನ ಜ್ಞಾಪಿಸಿಕೊಂಡಾಗ ನನ್ನ ಕಣ್ಮುಂದೆ ಬರೋದು, ಅವರ ಬಿಳೀ ಪಂಚೆ-ಬನಿಯನ್, ಅವರು ಕೂರುತ್ತಿದ್ದ style, ಅವರು ನಡೆಯುತ್ತಿದ್ದ style, ಅವರು ಮಾತನಾಡುತ್ತಿದ್ದ style, ಅವರು ಏನೇ ಮಾಡಿದ್ರೂ ಅವರದೇ ಒಂದು style ಇರುತ್ತಿತ್ತು.

ಸಿಂಪಲ್ ಮನುಷ್ಯ, ಆಡಂಬರ ಇರಲಿಲ್ಲ, ಹಾಸಿಗೆ ಇದ್ದಷ್ಟು ಕಾಲು ಚಾಚೋರು. ತಮ್ಮ ಅಪಾರ ಪ್ರತಿಭೆಯಿಂದ ಹೆಸರು ಗಳಿಸಿದ್ರೇ ಹೊರತು, ಎಂದೂ, ಯಾರನ್ನೂ ದುರುಪಯೋಗ ಇರಲಿ, ಉಪಯೋಗ ಕೂಡ ಪಡಿಸಿಕೊಳ್ಳುತ್ತಿರಲಿಲ್ಲ.

ಸುಮಾರು 28-30 ವರ್ಷಗಳ ಹಿಂದಿನ ಮಾತು;

ನಾನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕಲಿಕೊಡುಗೆ, ಸ್ಕಾಲರ್ಶಿಪ್ ಗೆ, ಅರ್ಜಿ ಹಾಕಿದ್ದೆ. ಧ್ವನಿ ಪರೀಕ್ಷೆಯಂದು ನನ್ನ ತಂಬೂರಿ ಜೊತೆ ಅಕಾಡೆಮಿಗೆ ಹೋದೆ. ಅಲ್ಲಿ ಅಣ್ಣನ ಜೊತೆ ಅಕಾಡೆಮಿಯ ಮಿಕ್ಕ ಸದಸ್ಯರೆಲ್ಲಾ ತೀರ್ಪುಗಾರರಾಗಿದ್ದರು. ನನ್ನ ಸರದಿ ಬಂತು. ‘ನಿನ್ನೆಡೆಗೆ ಬರುವಾಗ..’ ಹಾಡಿದೆ. ಎಲ್ಲರ ಮುಖದ ಮೇಲೆ ಒಂದು ಮೆಚ್ಚುಗೆಯ ನಸುನಗೆ ಕಂಡಂತ್ತಿತ್ತು. ಮನೆಗೆ ಹೊರಟೆ, ‘ಆಟೋಗೆ ಚಿಲ್ರೆ ಇದ್ಯಾ’ ಅಂತ ಅಣ್ಣ ಕೇಳಿದ್ರು, ‘ಹೂಂ’ ಅಂದು ಹೊರಟೆ.

ರಾತ್ರಿ ಅದರ ಬಗ್ಗೆ ಮಾತೇ ಇಲ್ಲ. ಮಾರನೆ ದಿನ ಅಮ್ಮನನ್ನು ಕೇಳಿದೆ. ಅಮ್ಮ “ನಿನ್ನೆ ನೀನು ತುಂಬ ಚೆನ್ನಾಗಿ ಹಾಡ್ದಿ ಅಂತ ಹೇಳಿದ್ರು. ಆದ್ರೆ ಸ್ಕಾಲರ್ಶಿಪ್ ಬೇರೆ ಯಾರಿಗೋ ಕೊಟ್ರಂತೆ. ನಿನಗೆ ಕೊಟ್ಟಿದ್ರೆ  ಜನ ‘ಅವರ ಮಗಳಿಗೆ ಅವರು ಕೊಟ್ಕೊಂಡ್ರು’ ಅಂತೆಲ್ಲಾ ಮಾತಾಡ್ತಾರೆ, ಅಂತ ಕೊಡಲಿಲ್ಲ” ಅಂತ ಅಣ್ಣ ಹೇಳಿದ್ರು.

ಅಂದು ಸ್ಕಾಲರ್ಶಿಪ್ ಸಿಗಿಲಿಲ್ಲ ಅನ್ನೋ ಬೇಜಾರು, ಅಣ್ಣ ನನ್ನ ಹಾಡನ್ನ ಮೆಚ್ಚಿಕೊಂಡ ಸಂತೋಷದಲ್ಲಿ ಅಡಗಿಹೋಯಿತು.

ಸುಮಾರು ಸಲ ನಮಗೆ ಬೈದು ಬುದ್ದಿವಾದ ಹೇಳೋವಾಗ ಡಿವಿಜಿ ಅವರ ಈ ಸಾಲುಗಳನ್ನ ಹೇಳೋರು:

ಗರುವಭಂಗವನಾಗಿಸಿದನು ಗರುಡಂಗೆ ಹರಿ|

ಮುರಿಯಿಸಿದನಂತೆ ಫಲುಗುಣನ ಹೆಮ್ಮೆಯನು||

ಕರುಬುವಿಧಿಸೈರಿಸನು ದರ್ಪವನದಾರೊಳಂ|

ಶಿರವ ಬಾಗಿಹುದೆ ಸಿರಿ – ಮಂಕುತಿಮ್ಮ||

ಈ ಸಾಲುಗಳಿಂದ ಬೈಗುಳ ಶುರುವಾದರೇ, ನಮಗೆ ದೊಡ್ಡ ಲೆಕ್ಚರ್ ಕಾದಿದೆ ಅಂತ ಒಂದು ಸೂಚನೆ.

ಅಂದು ಮುಖ ಚಿಕ್ಕದಾಗಿ ಮಾಡಿಕೊಂಡು ಕೇಳುತ್ತಾ ಇದ್ದದ್ದು ಇಂದಿನ ತನಕ ಮನಸಿನಾಳದಲ್ಲಿ ದೊಡ್ಡದಾಗಿ ನೆಲೆಸಿಬಿಟ್ಟಿದೆ.

 

ಅದೇ ರಾಗ ಅದೇ ಭಾವ

mysore-anantaswamy2ಅಣ್ಣ ತಮ್ಮ ಮುಂದಿನ ಹಲವಾರು ಪೀಳಿಗೆಗೆ ಆಗುವಷ್ಟು ಭಾವಗೀತೆಗಳ ಆಸ್ತಿಯನ್ನು  ಬಿಟ್ಟುಹೋಗಿದ್ದಾರೆ. ಇವತ್ತಿಗೂ ಅವರು ಸುಮಾರು ೪೫ ವರುಷಗಳ ಹಿಂದೆ ರಚಿಸಿರುವ ಭಾವಗೀತೆಗಳು ಜನಪ್ರಿಯವಾಗಿವೆ.

ಸುಗಮಸಂಗೀತಗಾರರಲ್ಲಿ ಬಹಳ ಭಕ್ತಿ ಹಾಗು ನಮ್ರತೆಯಿಂದ ‘ಅನಂತಸ್ವಾಮಿ ಅವರ ಹಾಡುಗಳನ್ನು ಹಾಡಿ ನಾವು ಜೀವನ ನಡೆಸುತ್ತಿದ್ದೇವೆ’ ಅಂತ ಹೇಳುವವರೂ ಇದ್ದಾರೆ.

ಆದರೆ ಒಬ್ಬ ಕಲಾವಿದ ಎಷ್ಟೇ ಜನಪ್ರಿಯತೆಗಳಿಸಿದ್ರೂ, ಎಲ್ಲರನ್ನೂ ಮೆಚ್ಚಿಸಕ್ಕೆ ಆಗೊಲ್ಲ.

ಈ ವಿಷಯವನ್ನು ಅಣ್ಣ ಚೆನ್ನಾಗಿ  ತಿಳಿದುಕೊಂಡಿದ್ದರು ಆ ಬಗ್ಗೆ ಆಲೋಚಿಸುತ್ತಿದ್ದರು. ಸಂಗೀತದಲ್ಲಿ ಏಕೆ, ಎಷ್ಟು ಪ್ರಕಾರಗಳಿವೆ, ಒಂದೇ ಪ್ರಕಾರದಲ್ಲಿ ಏಕೆ ಹಲವಾರು ಶೈಲಿಗಳಿವೆ, ಒಬ್ಬರಿಗೆ ಒಂದು ಶೈಲಿ ಇಷ್ಟವಾದರೆ, ಮತ್ತೊಬ್ಬರಿಗೆ ಆಗದು, ಯಾಕೆ ಎಂಬುದರ ಬಗ್ಗೆ ವಿಚಾರ ಕೂಡ ಮಾಡುತ್ತಿದ್ದರು.

ಸಾಮಾನ್ಯವಾಗಿ ಕೇಳುಗರು ತಮಗೆ ಇಷ್ಟವಿಲ್ಲದ ಕಲಾವಿದರ ಹಾಡುಗಳನ್ನು ಕೇಳುವುದಿಲ್ಲ ಅಥವಾ ಅವರ ಕಚೇರಿಗಳಿಗೂ ಹೋಗುವುದಿಲ್ಲ. ಆದರೆ ಒಬ್ಬರೋ – ಇಬ್ಬರೋ , ಕಿತಾಪತಿಗಳು ತಮ್ಮ ಕುಚೋದ್ಯವನ್ನು ವ್ಯಕ್ತಪಡಿಸಲೆಂದೇ ತಮಗೆ ಮೆಚ್ಚುಗೆಯಿಲ್ಲದ ಕಲಾವಿದರ ಕಚೇರಿಗಳಿಗೆ ಹೋಗುತ್ತಾರೆ. ಅಣ್ಣನ ಕಚೇರಿಗಳಿಗೆ ಆಗ ಈಗ ಇಂತಹ  ಕಿತಾಪತಿಗಳು ತಮ್ಮ ಪಾಂಡಿತ್ಯವನ್ನು ತೋರಿಸಿ time-pass  ಮಾಡಲು ಬರುತ್ತಿದ್ದರು.

ಇಂಥವರೊಬ್ಬರು ಒಮ್ಮೆ ಒಂದು ಕಚೇರಿಯಲ್ಲಿ ಬಂದು ಮುಂದೆ ಕುಳಿತಿದ್ದರು. ಅವರ ಮುಖದಲ್ಲಿ ಯಾವ ತರಹದ ಹಾವ-ಭಾವಗಳೂ ಕಾಣುತ್ತಿರಲಿಲ್ಲ. ಚಪ್ಪಾಳೆಯಂತೂ ಇಲ್ಲವೇ ಇಲ್ಲ. ಕಚೇರಿ ಮುಗಿದನಂತರ ಬಂದು ‘ನಿಮ್ಮ ಹಾಡುಗಳನ್ನ ಹೊಸದಾಗಿ ಹಾಡಿ, ಅದೇ ಸೇಮ್ ಟ್ಯೂನ್ ಹೇಳ್ತೀರಲ್ಲ, ಸ್ವಲ್ಪ ಚೇಂಜ್ ಮಾಡಿ’ ಅಂತ ಹೇಳಿದ್ರು.  ಅದಕ್ಕೆ ಅಣ್ಣ ಕೈ ಮುಗಿದು ಬಹಳ ನಯವಾಗಿ ಅವರಿಗೆ ಹೇಳಿದ್ರು, ‘ಕ್ಷಮಿಸಿ ಸ್ವಾಮೀ, ಈ ಹಾಡಿರೋದೇ ಹೀಗೆ, ನಮಗೆ ಹಾಡಲಿಕ್ಕೆ ಬರುವುದೂ ಹೀಗೆ.  ಸಧ್ಯ ನನ್ನ  ಹಾಡುಗಳಿಗೆ  ಹೀಗ್ ಹೇಳಿದ್ರಿ ಪರ್ವಾಗಿಲ್ಲ. ಎಲ್ಲಾದ್ರೂ  ಶಾಸ್ತ್ರೀಯ ಸಂಗೀತದ ಕಚೇರಿಗೆ ಹೋಗಿ ಅಪ್ಪಿ ತಪ್ಪಿ ತ್ಯಾಗರಾಜರ ಕೀರ್ತನೆ ಟ್ಯೂನ್ ಚೇಂಜ್ ಮಾಡಕ್ಕೆ ಹೇಳ್ಬಿಟ್ಟೀರಿ ಹುಷಾರು.’

 

ಆಸ್ಥಾನ ವಿದ್ವಾಂಸರು

ಒಂದೇ ಹೋಲಿಕೆ ಇದ್ದ ಚಿಕ್ಕರಾಮ ರಾವ್ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ೪

ಒಂದೇ ಹೋಲಿಕೆ ಇದ್ದ ಚಿಕ್ಕರಾಮ ರಾವ್ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ೪

ಸಂಗೀತಗಾರರ ಮಕ್ಕಳೆಲ್ಲಾ ಸಂಗೀತಗಾರರಾಗೋದಿಲ್ಲ ಅಥವಾ ಪೊಲೀಸ್ ನವರ ಮಕ್ಕಳೆಲ್ಲಾ ಪೊಲೀಸ್ ಆಗೋದಿಲ್ಲ. ನಾನು ಸಂಗೀತ ವಾತಾವರಣದಲ್ಲಿ ಹುಟ್ಟಿಬೆಳೆದವಳು, ನನ್ನ ಜೀವ, ಉಸಿರು ಸಂಗೀತ. ನನ್ನ ತಂದೆ ಸಂಗೀತಗಾರ, ನನ್ನ ಅಜ್ಜಿ ಕಮಲಮ್ಮ, ಸಂಗೀತಗಾರ್ತಿ, ನನ್ನ ಮುತ್ತಜ್ಜ ಚಿಕ್ಕರಾಮರಾಯರು ಸಂಗೀತಗಾರ, ಅವರ ತಂದೆ ಪೊಲೀಸು . ಬಹುಷಃ ಚಿಕ್ಕರಾಮರಾಯರಿಗೆ ಅವರ ತಾಯಿ ಕಡೆಯಿಂದ ಸಂಗೀತ ಬಂದಿರಬೇಕು.

ಚಿಕ್ಕರಾಮರಾಯರು ೫ ವರ್ಷದನಾಗಿದ್ದಾಗ ಅವರ ತಾಯಿ ಮಡಿಲಲ್ಲಿ ಕೂತು ಅರಮನೆ ಹೆಬ್ಬಾಗಿಲಲ್ಲಿರುವ ಆಂಜನೇಯನ ಗುಡಿಯ ಮುಂದೆ ಹಾಡುವವರಂತೆ.

ಇದನ್ನು ಕಂಡ  ನಾಲ್ವಡಿ ಕೃಷ್ಣರಾಜ ವೊಡೆಯರ್ ಇವರನ್ನು ೫ ವರುಷದ ಬಾಲಕನಾಗಿದ್ದಾಗಲೇ ಅರಮನೆಗೆ ಕರೆತಂದು ಆಸ್ಥಾನ ಸಂಗೀತಗಾರನಾಗಿ ಮಾಡಿದರಂತೆ. ಚಿಕ್ಕರಾಮರಾಯರು ಒಬ್ಬ ಅದ್ಭುತ  ಸಂಗೀತಗಾರರಷ್ಟೇ ಅಲ್ಲ, ಒಳ್ಳೆ ನಾಟಕಕಾರರೂ ಕೂಡ ಆಗಿದ್ದರು.

‘ಶಾಕುಂತಲೆ’ ನಾಟಕದಲ್ಲಿ, ದುಷ್ಯಂತನ ಪಾತ್ರ ಅದ್ಭುತವಾಗಿ ನಟಿಸುತ್ತಿದ್ದರಂತೆ. ಮೈಸೂರು ಜಗನ್ಮೋಹನ್ ಪ್ಯಾಲೇಸ್ ನಲ್ಲಿ ನಡೆಯುತ್ತಿದ್ದ, ರಾತ್ರಿ ೯.೩೦  ಶೋ ಗೆ ಮಹಾರಾಜರು ಬಂದು ನೋಡುವರಂತೆ.

ನಾಟಕದ ಓಪನಿಂಗ್ ಸೀನ್ ನಲ್ಲಿ ದುಷ್ಯಂತ ಜಿಂಕೆಯನ್ನು ಅಟ್ಟಿಸಿಕೊಂಡು ಬರುವ ದೃಶ್ಯ ; ಕೆಲವೊಮ್ಮೆ ಈ ದೃಶ್ಯದಿಂದ ನಾಟಕ ಮುಂದೆ ಹೋಗುತ್ತಲೇ ಇರಲಿಲ್ಲವಂತೆ. ಯಾಕೆಂದರೆ, ಚಿಕ್ಕರಾಮರಾಯರು ಆ ಹಾಡನ್ನು ಎಷ್ಟು ಚೆನ್ನಾಗಿ ಹಾಡುವವರೆಂದರೆ, ಮಹಾರಾಜರು ಅದನ್ನು ಮತ್ತೆ ಮತ್ತೆ ಹಾಡಿಸುವವರಂತೆ.

ಚಿಕ್ಕರಾಮರಾಯರ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಮುಖ ಲಕ್ಷಣಗಳು ಭಿನ್ನವಾಗಿದ್ದರೂ, ಅವರ ಎತ್ತರ, ಮೈಕಟ್ಟು ತುಂಬಾ ಹೋಲುತ್ತಿತ್ತಂತೆ. ಇವರು ರಾಜ ದುಷ್ಯಂತನ ಪಾತ್ರವಹಿಸಿದಾಗ ಮಹಾರಾಜರನ್ನು ಬಹಳ ಹೋಲುತ್ತಿದ್ದರಂತೆ. ಆ ಕಾರಣಕ್ಕೆ ಮಹಾರಾಜರು ಅವರಿಗೆ, ‘ನೀನು ರಾತ್ರಿ ರಾಜ ನಾನು ಹಗಲಿನ ರಾಜ’ ಎಂದು ಪರಿಹಾಸ ಮಾಡುವರಂತೆ.

mysore-anantaswamy-column-sunitha-anantaswamy1

‍ಲೇಖಕರು Admin

October 25, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅಂದು, ನಾನು ವಿದ್ಯಾರ್ಥಿಗಳ ಮುಂದೆ ತಲೆ ತಗ್ಗಿಸಿದೆ…

ಅಂದು, ನಾನು ವಿದ್ಯಾರ್ಥಿಗಳ ಮುಂದೆ ತಲೆ ತಗ್ಗಿಸಿದೆ…

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ...

‘ಫಿರ್ ಭೀ ದಿಲ್ ಹೈ ಹಿಂದೂಸ್ತಾನಿ’

‘ಫಿರ್ ಭೀ ದಿಲ್ ಹೈ ಹಿಂದೂಸ್ತಾನಿ’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ 'ಅರೇ... ಹೋದ......

5 ಪ್ರತಿಕ್ರಿಯೆಗಳು

 1. Arundhathi Ramesh

  ಮೈಸೂರು ಅನಂತಸ್ವಾಮಿಯವರ ಒಳದನಿಯ ರಾಗ ತಾಳ ಭಾವ ಮತ್ತು ಕಾಲಕ್ಕೆ ವೇವ್ ಲೆಂಗ್ತ್ ಆಗಿರುವ
  ಗಾಯಕರಲ್ಲಿ ಮುಖ್ಯವಾಗಿ ರಾಜೂಕೂಡ ಒಬ್ಬರು….ಈ ಅಲೆಗಳ ಆಲಾಪಕ್ಕೆ ಸಾಕ್ಷಿ ಸುನೀತ. ಅಣ್ಣನ ನೆನಪುಗಳು ಬರುತ್ತಲೇ ಇರಲಿ….

  ಪ್ರತಿಕ್ರಿಯೆ
 2. sa. jagannatha

  ಅಣ್ಣನ ನೆನಪುಗಳು ಶುಭಾರಂಭ ಸುಂದರವಾಗಿ ಮೂಡಿ ಬಂದಿದೆ. ಅಭಿನಂದನೆಗಳು ಸುನೀತಾ

  ಪ್ರತಿಕ್ರಿಯೆ
 3. Premanath

  Hats of to Sri Ananthswamy… & Rajuananthaswamy…. Haledallvannu nenapisidakke nemage nanna dhanyavadagalu….

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: