ಸುಬ್ಬಣ್ಣ ಮೇಷ್ಟ್ರ ಸುತ್ತಮುತ್ತ…

door_number1422.jpg

“ಡೋರ್ ನಂ. 142”

ಬಹುರೂಪಿ

“ಕನ್ನಡದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ್ದಕ್ಕಾಗಿ ರಾಘವೇಂದ್ರಸ್ವಾಮಿಗೆ ಸುಬ್ಬಣ್ಣ ಮೇಷ್ಟ್ರಿಂದ ವಿಶೇಷ ಬಹುಮಾನ…”

ಚಡ್ಡಿ ಏರಿಸಿಕೊಂಡು ಐದನೇ ಕ್ಲಾಸಿನಲ್ಲಿದ್ದ ನಾನು ನಾಟಕ ನೋಡಲು ಕಣ್ಣು ಕಿವಿಯಾಗಿ ಕೂತಿದ್ದೆ. ನಮ್ಮ ಸ್ಕೂಲ್ ವಾರ್ಷಿಕೋತ್ಸವದಲ್ಲಿ ಏಳನೆಯ ಕ್ಲಾಸಿನವರು “ಭಕ್ತ್ ಧ್ರುವ” ಆಡುತ್ತಾರೆ ಅನ್ನುವುದನ್ನು ಘೋಷಿಸಿ ಆಗಿತ್ತು. ಹಾಗಾಗಿ ಊರಿಗೆ ಮುಂಚೆ ಅನ್ನುವಂತೆ ಹಾಜರಾಗಿ ಅತಿ ಮುಂದಿನ ಸಾಲಿನಲ್ಲಿ ಕುಳಿತುಬಿಟ್ಟಿದ್ದೆ. ಆಗಲೇ ಈ ಅನೌನ್ಸ್ ಮೆಂಟ್ ಬಂದದ್ದು.

ನನಗೋ ಇನ್ನಿಲ್ಲದ ಅಚ್ಚರಿ. ಅಣ್ಣನಿಗೆ ಪ್ರೈಜ್ ಕೊಡ್ತಾ ಇದಾರೆ ಅಂತ. ಅದರಲ್ಲೂ ಯಾವಾಗಲೂ ಉರಿ ಉರಿ ಎನ್ನುತ್ತಿದ್ದ, ಕ್ಲಾಸಿನಲ್ಲೇ ಇತರ ಉಪಾಧ್ಯಾಯರೊಂದಿಗೆ ಜಗಳ ಆಡುವ ತಾಖತ್ತಿದ್ದ ಸುಬ್ಬಣ್ಣ ಮೇಷ್ಟ್ರಿಂದ ಈ ಸ್ಪೆಷಲ್ ಪ್ರೈಜ್ ಅನ್ನೋದು ಇನ್ನೂ ವಿಸ್ಮಯಕ್ಕೆ ಕಾರಣವಾಗಿತ್ತು. ಅಲ್ಲದೆ ಇದು ಸ್ಕೂಲಿನವರು ಕೊಡ್ತಾ ಇರೋ ಪ್ರೈಜ್ ಅಲ್ಲ. ಸುಬ್ಬಣ್ಣ ಮೇಷ್ಟ್ರು ತಮ್ಮ ಕೈಯಿಂದ ಖರ್ಚು ಮಾಡಿ ಇಂಡಿಯಾ ಮ್ಯಾಪ್ ಕೊಂಡುಕೊಂಡು ಬಂದು ಕೊಡ್ತಾ ಇದಾರೆ.

sogasu1.jpg

ಆಗಿದ್ದೇನಪ್ಪಾ ಅಂದ್ರೆ… ಕನ್ನಡದಲ್ಲಿ ಇಬ್ರಿಗೆ ಒಂದೇ ಮಾರ್ಕ್ಸ್ ಬಂದುಬಿಟ್ಟಿತ್ತು. ಆದರೆ ಇರೋದು ಒಂದೇ ಪ್ರೈಜ್. ಹಾಗಾಗಿ ಸ್ಕೂಲಿನವರು ಲಕ್ಕಿ ಡಿಪ್ ತೆಗೆಯೋಣ, ಯಾರಿಗೆ ಬರುತ್ತೋ ಅವರಿಗೆ ಬಹುಮಾನ ಅಂತ ತೀರ್ಮಾನ ಮಾಡಿದರು. ಪ್ರಜ್ ಇನ್ನೊಬ್ಬ ಹುಡುಗಿಯ ಪಾಲಾಯ್ತು. ಅಣ್ಣನಿಗೆ ಬರಲಿಲ್ಲ. ಆದ್ರೆ ಇದು ಸುಬ್ಬಣ್ಣ ಮೇಷ್ಟ್ರನ್ನ ಕಾಡಿದ್ದು ಏಕೆ ಅನ್ನೋದೇ ನನಗೆ ಅವತ್ತಿನಿಂದ ಇವತ್ತಿನವರೆಗೂ ತಲೆಯೊಳಗೆ ನಾಟ್ಯವಾಡ್ತಿದೆ. ಸದಾ ಗರಂ ಆಗಿರೋ ಸುಬ್ಬಣ್ಣ ಮೇಷ್ಟ್ರು ಯಾಕೆ ಈ ನಿರ್ಧಾರ ಕೈಗೊಂಡರು? ಯಾಕೆ ಖರ್ಚು ಮಾಡಿದರು?

ನಮ್ಮ ಸ್ಕೂಲು ಸರ್ಕಾರಿ ಸ್ಕೂಲೇ. ಆದರೆ ತುಂಬಾ ಫೇಮಸ್ಸು. ಆವಾಗ ಕಾನ್ವೆಂಟ್ ಅನ್ನೋ ಕ್ರೇಜೂ ಇರಲಿಲ್ಲ. ಹೀಗಾಗಿ ದುಡ್ಡಿದ್ದೋರು, ಇಲ್ಲದೋರು, ಇವೆರಡರ ಮಧ್ಯದಲ್ಲಿರೋರು ಎಲ್ಲಾ ಒಂದೇ ಸ್ಕೂಲಲ್ಲಿ ಸೇರ್‍ತಿದ್ರು. ಒಂದು ಕಡೆ ಸುಬ್ಬಣ್ಣ ಮೇಷ್ಟ್ರು. ಇನ್ನೊಬ್ಬರಿದ್ದರು, ಶಾಸ್ತ್ರಿ ಮೇಷ್ಟ್ರು. ಕನ್ನಡಾನ ಅದ್ಭುತವಾಗಿ, ಕಣ್ಣಿಗೆ ಕಟ್ಟೋ ಹಾಗೆ, ಮನಸ್ಸಿಗೆ ಮುಟ್ಟೋ ಹಾಗೆ, ಪರೀಕ್ಷೆ ಹಾಳೆಯಲ್ಲಿ ಚಕಚಕಾ ಉತ್ತರ ಬರೆಯೋ ಹಾಗೆ ಪಾಠ ಮಾಡ್ತಿದ್ರು. ಅವ್ರು ಕ್ಲಾಸಿನಲ್ಲಿ ಸದಾ, “ಮನೇಲಿರೋ ಹಳೇ ಎಕ್ಕಡಾ ತಗೊಂಡು ನಾಲಿಗೆ ತಿಕ್ಕಿಕೊಂಡು ಬನ್ರೋ” ಅಂತಾ ಬಯ್ಯೋರು.

ಎಲ್ಲರ್‍ಗೂ ಬೈದಿದ್ರೆ ಪರವಾಗಿಲ್ಲ. ಆದ್ರೆ ನಮ್ಮ ಸ್ಕೂಲ್ ಪಕ್ಕಾನೇ ಆಗ ಹಳ್ಳಿ ಅನ್ನಿಸ್ಕೊಂಡ ಹಳ್ಳಿ ಇತ್ತು. ಅಲ್ಲಿಂದ ಎಲ್ಲಾ ಮಕ್ಕಳೂ ಈ ಶಾಲೆಗೇ ಬರ್‍ತಿದ್ರು. ಅವ್ರ ಮೇಲೆ ಮಾತ್ರ ಈ ವಕ್ ಪ್ರವಾಹ ಇರ್‍ತಿತ್ತು. ಉತ್ತರ ಹೇಳದಿದ್ರೆ ಮೂಗು ಹಿಡಿಸಿ ಕಪಾಳಕ್ಕೆ ಬಡಿಸೋರು. “ಮೂಗಲ್ಲಿ ಗೊಣ್ಣೆ ನೋಡು” ಅಂತಾ ಹಂಗಿಸ್ತಿದ್ರು. “ನಾಲಗೆ ತಿರುಗಲ್ಲ” ಅಂತಾ ಚುಚ್ಚುತಿದ್ರು.

ಡಿಗ್ರಿಗೆ ಬಂದಾಗ ಮೇಡಂ ಒಬ್ಬರಿದ್ರು. ನಾಟಕದ ಸ್ಕ್ರಿಪ್ಟ್ ಓದಬೇಕಾಗಿತ್ತು. ಹೇಗೆ ಓದಿದರೂ ತಪ್ಪು. ಮಾತೆತ್ತಿದರೆ “ನಿನ್ನ ಕಣ್ಣ ಸುತ್ತ ಇರೋ ಕಪ್ಪು ರಿಂಗ್ಸ್ ನೋಡು” ಅನ್ನೋರು. ಬೇರೆಯವರನ್ನ ನೋಡ್ತಿದ್ದೆ. ಕ್ಲಾಸಲ್ಲಿ ನನ್ನ ಬಿಟ್ರೆ ಇದ್ದಿದ್ದೇ ಇನ್ನಿಬ್ರು. ಅವರು ನನಗಿಂತ ಕೆಟ್ಟದಾಗಿದಾರೆ ಅಂತಾನೇ ನನಗನಿಸ್ತಾ ಇತ್ತು. ಆದ್ರೆ ಮೇಡಂ ಏನೂ ಹೇಳ್ತಾ ಇರ್‍ಲಿಲ್ಲ. ನನಗೆ ಮಾತ್ರ ಈ ಕಪ್ಪು ರಿಂಗ್ಸ್ ಜ್ವರ ಹಿಡಿಸಿಬಿಟ್ರು.

ಈ ಎಲ್ಲದಕ್ಕೂ ಸುಬ್ಬಣ್ಣ ಮೇಷ್ಟ್ರ ಘಟನೇಗೂ ಸಂಬಂಧ ಇದೆಯಾ ಅಂತ ಯೋಚಿಸ್ತೀನಿ. ಸುಬ್ಬಣ್ಣ ಮೇಷ್ಟ್ರು ಅಷ್ಟು ಉರ ಉರಾ ಅಂತಾ ಇದ್ದದ್ದಕ್ಕೆ ಕಾರಣ ಇರಬೇಕೇನೋ ಅನ್ಸುತ್ತೆ.

ರಾಗಿ ಮಿಷಿನ್ನಿಗೆ ಹೋಗಿ ರಾಗಿಯನ್ನು ಚೆನ್ನಾಗಿ ಹಿಟ್ಟು ಮಾಡಿಸಿಕೊಂಡು ಬರಬೇಕಿತ್ತು. ಒಂದ್ಸಲಾ ರಾಗಿ ಮಿಷಿನ್ನಿಗೆ ಹೋದಾಗ “ಮುಟ್ಟಬೇಡ, ಹತ್ರ ನಿಲ್ಲಬೇಡ” ಅಂತಾ ಒಬ್ಬ ಅಜ್ಜಿ ವರಾತ ಶುರು ಮಾಡ್ಬಿಟ್ರು. ನಾನು ಹತ್ರಾನೂ ಹೋಗಿರ್‍ಲಿಲ್ಲ. ಮುಟ್ಟೂ ಇರ್‍ಲಿಲ್ಲ. ಆದ್ರೆ ಮುಖ ನೋಡಿದ್ದೇ ದರಿದ್ರ ಅನ್ನೋ ಹಾಗೆ ಬೈಯ್ತಾ ಇದ್ರು. ನನಗೂ ಆಸೆ ಆಯ್ತು, ಮುಟ್ಟೇಬಿಡಬೇಕು ಅಂತಾ. ಮಿಷಿನ್ನಿನಿಂದ ಬರೋವಾಗ ಅಕಸ್ಮಾತ್ ಅನ್ನೋ ಹಾಗೆ ಮುಟ್ಟೇಬಿಟ್ಟೆ. ರಂಪರಾಮಾಯಣ ಆಗೋಯ್ತು. ನನಗೂ ಒಂಥರಾ ಖುಷಿ ಆಯ್ತು. ಹೀಗೆ ಮಾಡ್ದಾಗ ನನ್ನ ಮನಸ್ಸಲ್ಲಿ ಸುಬ್ಬಣ್ಣ ಮೇಷ್ಟ್ರು ಇದ್ದರಾ?

ತುಂಬಾ ಕ್ಲೋಸ್ ಫ್ರೆಂಡ್ ಮದುವೆ ಇತ್ತು. ಊಟಕ್ಕೆ ಕೂತ್ವಿ. ತಕ್ಷಣ ಊಟ ಮಾಡ್ಬಾರ್‍ದು, ಬಂದಿರೋ ಪುರೋಹಿತರು ತಿನ್ನೋವರ್‍ಗೂ ಅಂದ್ರು. ನನಗೂ ಹೊಟ್ಟೆ ಇತ್ತಲ್ಲಾ, ಹಸೀತಿತ್ತು. ಪುರೋಹಿತರ ಜೊತೆಗೇ ಊಟ ಮುಗಿಸ್ಬಿಟ್ಟೆ. ಅಕ್ಕಪಕ್ಕ ಇರೋರು ಬೈಕೊಂಡ್ರು. ಆದ್ರೆ ನಾನು ಕೂತಿದ್ದು ಊಟಕ್ಕಲ್ಲವಾ, ಊಟ ಮುಗಿಸಿದೆ. ಯಾರೂ ಎದ್ದೇಳೋ ಹಾಗಿಲ್ಲ. ಪಂಕ್ತಿ ಬಿಟ್ಟೇಳಬಾರದು ಅಂದ್ರು. ನನ್ನ ಊಟ ಮುಗಿದ ಮೇಲೆ ಅವರ ಮುಖ, ಇವರ ಮುಖ ನೋಡ್ತಾ ಕೂತಿರೋವಷ್ಟು ತಾಳ್ಮೆ ಆ ದೇವರೇ ನನಗೆ ಕೊಟ್ಟಿಲ್ಲ. ಎದ್ದೆ. ಕೈತೊಳಕೊಂಡೆ. ಹೀಗೆ ಮಾಡ್ದಾಗ ನನ್ನ ಮನಸ್ಸಲ್ಲಿ ಸುಬ್ಬಣ್ಣ ಮೇಷ್ಟ್ರು ಇದ್ದರಾ?

ನಮ್ಮಪ್ಪ “ಆಚೆ ನಿಂತ್ಕೊಳ್ಳಿ” ಅಂತ ಅವರ ಆಫೀಸಿನವರನ್ನೇ ಬೈದ್ರಲ್ಲಾ, ಅದು ಸುಬ್ಬಣ್ಣ ಮೇಷ್ಟ್ರಿಗೆ ಗೊತ್ತಿತ್ತಾ? ದೇವಸ್ಥಾನದಲ್ಲಿ ಅವತ್ತು ತುಂಬಾ ಬಲವಂತ ಮಾಡಿದ್ರು, ಊಟ ಮಾಡ್ಕೊಂಡೆ ಹೋಗ್ಬೇಕು ಅಂತಾ. ಮುಲಾಜಿಗೆ ಊಟಕ್ಕೆ ಕೂತಿದ್ದು. ನಮ್ಮನೇಲಿ ಎಷ್ಟು ಚೆನ್ನಾಗಿ ಬಡಿಸ್ತಾರೆ ಅಮ್ಮ. ಬಡಿಸೋದ್ರಲ್ಲೇ ಪ್ರೀತಿ ಗೊತ್ತಾಗಿಬಿಡುತ್ತೆ. ಆದ್ರೆ ದೇವಸ್ಥಾನದಲ್ಲಿ ಸೌಟು ಹಿಡಿದಿದ್ದ ಕೈ ಅಮ್ಮಂದಲ್ಲಾ ಅಂತಂತೂ ಗೊತ್ತಾಗಿ ಹೋಯ್ತು. ಸುಬ್ಬಣ್ಣ ಮೇಷ್ಟ್ರು ಸೌಟು ಹಿಡ್ಕೊಂಡರೆ ಹೇಗಿರಬಹುದು ಅಂತ ಅನ್ಕೋತೀನಿ.

“ಮಣೆಗಾರ” ಪುಸ್ತಕ ಓದ್ತಾ ಇದ್ದೆ. ಮರಾಠಿಯ ಆತ್ಮಕಥೆಗಳನ್ನು ಓದಿದೆ. ಅಯ್ಯೋ ಶಿವನೆ! ನಮ್ಮನೇಲಿ ಹಸು ಇದ್ದಾಗ ಆ ಸಗಣಿ ಎಲ್ಲಾ ಎತ್ತಾಕು ಅಂದ್ರೆ ಎಷ್ಟು ಒದ್ದಾಡಿ ಹೋಗ್ತಿದ್ದೆ. ಅಂಥಾ ಸಗಣೀನಲ್ಲಿರೋ ಕಾಳು, ಅದೂ ಹಸು ಹೊಟ್ಟೇಲಿ ಜೀರ್ಣ ಆಗದೇ ಹೊರಗೆ ಬಿದ್ದಿರೋ ಕಾಳು ಆಯ್ದುಕೊಂಡು ಅದನ್ನೇ ತಿನ್ತಾರಲ್ಲಾ, ಹೇಗಾಗಿರಬಹುದು? ಚಪ್ಪಲಿ ಹೊಲೀತಾನೇ ಕೊಳಲು ತನ್ನ ಜೋಳಿಗೇನಲ್ಲಿ ಸೇರ್‍ಕೊಂಡಿದ್ದು ಗೊತ್ತಾಗ್ಲಿಲ್ಲವಲ್ಲ? ಇದನ್ನೆಲ್ಲ, ಈ ಪುಸ್ತಕಾನೆಲ್ಲ ಸುಬ್ಬಣ್ಣ ಮೇಷ್ಟ್ರಿಗೆ ಕೊಡಬೇಕು ಅನ್ಸುತ್ತೆ.

ಎಷ್ಟೊಂದು ಜನಾ, ಎಷ್ಟೊಂದು ಹುಮ್ಮಸ್ಸು, ಎಷ್ಟೊಂದು ಕೆಲಸ… ಸುಬ್ಬಣ್ಣ ಮೇಷ್ಟ್ರು ತಲೇನಲ್ಲಿ ಸದಾ ಇರ್‍ತಾರೇನೋ. ನಾಲಗೆ ಉಜ್ಜು ಎಕ್ಕಡದಲ್ಲಿ ಅಂತ ಹೇಳಿದ ಮೇಷ್ಟ್ರೂ ಇರ್‍ತಾರೇನೋ… ನಾನು ಇಬ್ಬರನ್ನೂ ಅವರವರಿಗೇ ಎದುರಾಬದುರಾ ಕೂರಿಸ್ಬಿಡ್ತೀನಿ. ಯಾರ ಕಣ್ಣು ಹೊಳೆಯುತ್ತೋ, ಭೂಮಿ ಮೇಲೇ ಇದ್ರೂ ಬರೀ ಆಕಾಶ ಕಾಣುತ್ತೋ ಅಂಥವರನ್ನು ಆಯ್ದು ಬಗಲಲ್ಲಿ ಇಟ್ಕೋತೀನಿ.

“ಯೂ ಬ್ಲಡೀ ಆಯಿಲ್ ಫೇಸ್” ಅಂತಾ ಆ ಮೇಷ್ಟ್ರು ಹೈಸ್ಕೂಲಿನಲ್ಲಿ ಬೈಯ್ತಾ ಇದ್ದದ್ದು ಜ್ಞಾಪಕ ಬರುತ್ತೆ. ಹರಣೆಣ್ಣೆ ಕುಡಿದ ಮುಖ ಅಂತಾ ಅನ್ತಾ ಇದ್ರೇನೋ. ನನಗೆ ತಕ್ಷಣ ಗಾಬರಿ ಆಗ್ತಿತ್ತು. ಮುಖಾ ಎಲ್ಲಾ ಮುಟ್ಟಿ ನೋಡ್ಕೊಳ್ತಾ ಇದ್ದೆ. ಹರಳೆಣ್ಣೆ ಅಮ್ಮ ಭಾನುವಾರ ಮಾತ್ರ ಮೆತ್ತೋರು. ನನಗೆ ಗೊತ್ತಿಲ್ದೆ ಏನಾದ್ರೂ ಸ್ಕೂಲ ಇರೋ ದಿನಾನೂ ಹಾಕಿದ್ದರಾ? ಅದು ಸುರೀತ ಮುಖಕ್ಕೆ ಇಳಿದುಬಿಟ್ಟಿದೆಯಾ ಅಂತ ಚೆಕ್ ಮಾಡಿಕೊಳ್ತಿದ್ದೆ. ಅವಕಾಶ ಸಿಕ್ರೆ ನೊಟೀಸ್ ಬೋರ್ಡಿನಲ್ಲಿರೋ ಗಾಜಲ್ಲಿ ಮುಖ ನೋಡಿಕೊಳ್ತಿದ್ದೆ. ಹರಳೆಣ್ಣೆ ಇಲ್ಲ. ಸುಬ್ಬಣ್ಣ ಮೇಷ್ಟ್ರಿಗೆ ಹರಳೆಣ್ಣೆ ಕಥೆ ಗೊತ್ತಿದೆಯೊ ಇಲ್ಲವೊ ಯಾರಿಗ್ಗೊತ್ತು?

ನಿಮ್ಮೆಸ್ರು… ಗೊತ್ತಾಗಲಿಲ್ಲ… ನಿಮ್ಮ ಅಪ್ಪನ ಹೆಸರು… ನಿಮ್ಮ ಇನಿಶಿಯಲ್ ಎಕ್ಸ್ಪಾನ್ಷನ್ ಏನು… ಈ ಪ್ರಷ್ನೆ ಎಲ್ಲಾ ಈಗ ರೂಢಿ ಆಗ್ಬಿಟ್ಟಿದೆ. ನನ್ನ ಹೆಸ್ರು, ನಮ್ಮಣ್ಣಂದಿರ ಹೆಸರು ಅಕ್ಕತಂಗಿಯರ ಹೆಸರು… ನಮ್ಮಪ್ಪ ನಮಗೆ ನಾಮಕರಣ ಮಾಡೋವಾಗ ಅವರ ತಲೇಲೇನಾದ್ರೂ ಸುಬ್ಬಣ್ಣ ಮೇಷ್ಟ್ರು ಇದ್ರಾ? ಬ್ರಹ್ಮನಿಗೂ ಹುಡುಕೋಕ್ಕೆ ಸಾಧ್ಯವಿಲ್ಲ, ಅಂಥಾ ಹೆಸರು ಕೊಟ್ರು.

ರಾಘವೇಂದ್ರಸ್ವಾಮಿ ಭಜನೆ ಮಾಡಿ, ಅವರು ಬರೆದಿರೋ ಗ್ರಂಥ “ಪರಿಮಳ” ಅಂತಾ ಗೊತ್ತಿರೋ ನಮಗೆ, ರಾಘವೇಂದ್ರರ ಮಂತ್ರಾಲಯಕ್ಕೆ ತಪ್ಪದೇ ಹೋಗಿಬರೋ ಅಪ್ಪ ಅಮ್ಮ ಇರೋ ನಮಗೆ, ತಪ್ಪದೆ ಗುರುವಾರ ಒಂದು ಹೊತ್ತು ಉಪವಾಸ ಮಾಡೋ ನಮಗೆ ನಮ್ಮಪ್ಪ ಇನ್ನೇನು ಹೆಸರು ಇಡೋಕ್ಕೆ ಸಾಧ್ಯ?

ಇವರಿಗೆ ಪ್ರಶಸ್ತಿ ಕೊಡಲೇಬೇಕು ಅಂತಾ ಯಾರಾದ್ರೂ ಹೇಳಿದರೆ ಪ್ರಶಸ್ತೀನ ಮೂಸಿ ಮೂಸಿ ನೋಡೊಕಾಗುತ್ತೆ. ನಾನು ಯಾರು ಅಂತಾನೇ ಗೊತ್ತಿಲ್ಲದೋರಿಗೆ ನಾನು ಬಯೋಡೇಟಾದಲ್ಲಿ ಬರೀದೇ ಇರೋ ಒಂದು ವಿಷಯ ಅಂತೂ ಗೊತ್ತಾಗಿಬಿಟ್ಟಿರುತ್ತೆ. ಪ್ರಶಸ್ತಿ ತಗೊ ಅನ್ತಾರಾ, ಬಂದವ್ರನ್ನ ಉಗಿದು ಅಟ್ಟು ಅನ್ತಾರ ಸುಬ್ಬಣ್ಣ ಮೇಷ್ಟ್ರು ಅನ್ನೋ ಯೋಚನೆ ಬರುತ್ತೆ.

“ತಕ್ಷಣ್ ಬಂದು ಪ್ರಿನ್ಸಿಪಾಲನ್ನ ನೋಡ್ಬೇಕಂತೆ” ಅಂತ ಮಗಳ ಸ್ಕೂಲಿನಿಂದ ಬುಲಾವ್ ಬಂದಾಗ ಏನಾಯ್ತೋ ಅಂತಾ ಎದ್ದೂಬಿದ್ದೂ ಓಡೋಗ್ತೀವಿ. ಬೈ ದ ಬೈ. ಈ ಜಾತಿ ಕಾಲಂ ಯಾಕೆ ಖಾಲಿ ಬಿಟ್ಟಿದೀರಿ? ವೈ? ಅಂತಾರೆ. ಖಾಲಿ ಬಿಡಬಹುದು ಅಂತಾ ಸುಪ್ರೀಂ ಕೋರ್ಟೇ ಹೇಳಿರೋ ಪೇಪರ್ ಕಟಿಂಗ್ ಜೇಬಲ್ಲಿ ಇಟ್ಕೊಂಡೆ ಇರ್‍ಬೇಕು. ನಮ್ಮ ಸ್ಕೂಲಿಗೆ ಅದು ಅಪ್ಲೈ ಆಗೋಲ್ಲ ಅಂತಾರೆ. ಥೂ… ಸುಪ್ರೀಂ ಕೋರ್ಟಿಗೂ ಮೀರಿದೋರು ಇದಾರಲ್ಲಪ್ಪಾ ಅನ್ಸುತ್ತೆ. ಸುಬ್ಬಣ್ಣ ಮೇಷ್ಟ್ರಿಗೆ ಹೇಳ್ತಾ ಕೂರ್‍ಲಾ, ಈ ಸುಪ್ರೀಂ ಕೋರ್ಟ್ ಕಥೆ…?

‍ಲೇಖಕರು avadhi

February 16, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಡೋರ್ ನಂ ೧೪೨: ಇವು ಶಬ್ದಚಿತ್ರಗಳು

ಡೋರ್ ನಂ ೧೪೨: ಇವು ಶಬ್ದಚಿತ್ರಗಳು

ಉದಯಕುಮಾರ್ ಹಬ್ಬು 'ಡೋರ್ ನಂ 142' ಈ ಕೃತಿ ನಮ್ಮೆಲ್ಲರ ಮನೆ ಮನದ ಡೋರ್ ನಂ ಆಗಿಬಿಟ್ಟಿದೆ. ನಮೆಲ್ಲರ ಬಾಲ್ಯದ ನೆನಪುಗಳು, ಹದಿಹರೆಯದ ಬಿಸಿ,...

ಯಾವುದೀ ಪ್ರವಾಹವು…

ಯಾವುದೀ ಪ್ರವಾಹವು…

ಡೋರ್ ನಂ 142 ಬಹುರೂಪಿ   ಮುಖ ಮುಖವೂ ಮುಖವಾಡವ ತೊಟ್ಟು ನಿಂತ ಹಾಗಿದೆ ಆಡುತಿರುವ ಮಾತಿನೊಳಗೆ ಹೃದಯ ಕಾಣದಾಗಿದೆ ಯಾವುದೀ ಪ್ರವಾಹವು... ರೇಡಿಯೋ...

೧ ಪ್ರತಿಕ್ರಿಯೆ

  1. gurubaliga

    ರಾಮ ಐತಾಳ ಮಾಸ್ತರು ಎಂಟು ಐದಲಿ ಎಷ್ಟು ಎನ್ನುತ್ತಾ ಬೆನ್ನ ಮೇಲೆ ಬಾಸುಂಡೆ ಬಾರಿಸಿದ್ದು ನೆನಪಾಯಿತು. ಅದೇ ಮಾಸ್ತರು ಅವನದ್ದು ಲೂಟಿಯಿಲ್ಲ ಎಂದು ವಹಿಸಿಕೊಂಡದ್ದು ಕೂಡ ನೆನಪಾಯಿತು. ಏನಾ ಬಾಳಿಗ ಎಂತ ಮಾಡ್ತಾ ಇದ್ದಿ ಈಗ ಅಂತ ೨೫ ವರ್ಷಗಳ ನಂತರವೂ ತಟಕ್ಕನೆ ಗುರುತು ಹಿಡಿದಿದ್ದರು.

    ಕಾಲೇಜಿನಲ್ಲಿ ನನ್ನ ಅಚ್ಚು ಮೆಚ್ಚಿನ ಉಪನ್ಯಾಸಕರು ೧೦ ವರ್ಷಗಳ ಬಳಿಕ ನಾನು ಅವರ ಬಳಿಗೆ ಹೋದಾಗ ಅವರಿಗೆ ನಾನು ವಿವರಿಸಿ ಹೇಳಿದರೂ ಗುರುತು ಸಿಗಲಿಲ್ಲ.

    ಸುಬ್ಬಣ್ಣ ಮೇಸ್ಟರು ಹೇಗೆ ನಮ್ಮಲ್ಲಿ ಸದಾ ಕಾಲ ಇರುತ್ತಾರೋ ಹಾಗೆ ಸುಬ್ಬಣ್ಣ ಮೇಸ್ತರಲ್ಲೂ ನಾವು ಸದಾಕಾಲ ಇರುತ್ತೆವೇನೋ ಅಂತ ಸಂಶಯ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: