ಸುರುಳಿ ಹೋಳಿಗೆ ಎಂಬ ನೆನಪಿನ ಸುರಳಿ..

ಪ್ರಿಯದರ್ಶಿನಿ ಶೆಟ್ಟರ್

ಹೋಳಿಗೆ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ರುಚಿರುಚಿಯಾದ ಹೂರಣವನ್ನೋ, ಸೂಸಲವನ್ನೋ ಹದವಾಗಿ ನಾದಿದ ಕಣಕದಲ್ಲಿಟ್ಟು ಸುತ್ತಲಿನ ಹಿಟ್ಟನ್ನು ಕಲಾತ್ಮಕವಾಗಿ ಮೇಲೆತ್ತಿ ಅಂಟಿಸಿ, ತಟ್ಟಿ, ಎಣ್ಣೆ ಅಥವಾ ಹಿಟ್ಟು ಹಚ್ಚಿ ಲಟ್ಟಿಸಿ, ಬೇಯಿಸಿ ಚಿಬ್ಬಲದಲ್ಲಿ ಜೋಡಿಸಿಟ್ಟಿದ್ದನ್ನು ಕಂಡರೆ ಯಾವಾಗ ಒಂಚೂರು ಹೋಳಿಗೆ ಮುರಿದು ಬಾಯಿಗಿಡುತ್ತೇವೋ ಎಂದೆನಿಸದೇ ಇರದು. ಬೇಸಿಗೆಯಲ್ಲಾದರೆ ಮಾವಿನಹಣ್ಣಿನ ಸೀಕರಣೆ, ಹಬ್ಬಗಳಲ್ಲಾದರೆ ಹಾಲು, ತುಪ್ಪ, ಬೆಲ್ಲದ ಹಾಲು ಕೆಲವರು ಕಟ್ಟಿನ ಸಾರು ಅಥವಾ ಹೋಳಿಗೆ ಸಾರು ಹಾಕಿಕೊಂಡು ತಿಂದರೆ.. ಆಹಾ!!

ಇನ್ನು ನನಗಂತೂ ಕಡಲೆಬೇಳೆ ಹೋಳಿಗೆ ಇಷ್ಟವಾಗುವುದೇ ಮಮ್ಮಿ ಕಟ್ಟಿನ ಸಾರನ್ನೂ ಮಾಡುತ್ತಾರೆಂಬ ಕಾರಣಕ್ಕೆ. ಹಬ್ಬದ ಮಾರನೇ ದಿನ, ಮತ್ತೆ ಮರುದಿನ, ಅಷ್ಟೇ ಏಕೆ ದೊಡ್ಡ ಬೋಗುಣಿಯಲ್ಲಿ ಮಾಡಿಟ್ಟಿದ್ದು ಸಣ್ಣ ಗಿಂಡಿಯಲ್ಲಿ ಹಾಕುವಷ್ಟು ಉಳಿದು ಅದು ಮುಗಿಯುವವರೆಗೂ, ಒಂದೇ ಒಂದು ಹನಿಯನ್ನೂ ವ್ಯರ್ಥ ಮಾಡಲು ಮನಸ್ಸು ಬರುವುದಿಲ್ಲ. ದಿನಕ್ಕೆರಡು ಹೊತ್ತು ಕಟ್ಟಿನ ಸಾರಿನ ರುಚಿ ಆಸ್ವಾದಿಸುವುದರೊಂದಿಗೆ ಹಬ್ಬ ಪೂರ್ಣವಾಗುತ್ತದೆ.

ಕಡಲೆಬೇಳೆ ಹೂರಣ ಅಥವಾ ತೊಗರಿಬೇಳೆ ಹೂರಣ ಬಳಸಿ ಹೋಳಿಗೆ ಮಾಡುವುದು ಸಾಮಾನ್ಯ. ಇನ್ನೂ ಅನೇಕ ತರಹದ ಹೋಳಿಗೆಗಳಿವೆ. ಕೊಬ್ಬರಿ ಹೋಳಿಗೆ, ಸಜ್ಜಕದ ಹೋಳಿಗೆ, ಗೆಣಸಿನ ಹೋಳಿಗೆ, ಶೇಂಗಾ ಹೋಳಿಗೆ, ಹುರಕ್ಕಿ ಹೋಳಿಗೆ, ಸುರುಳಿ ಹೋಳಿಗೆ… ಎಷ್ಟು ವಿಧಗಳು!

ಒಮ್ಮೆ ಮನೆಯಲ್ಲಿ ಶೇಂಗಾ ಹೋಳಿಗೆ ಮಾಡಿದ್ದೆವು. ಎಲ್ಲ ಮಾಡಿಯಾದ ನಂತರ ಸ್ವಲ್ಪ ಹಿಟ್ಟು ಮತ್ತು ಸೂಸಲು ಉಳಿದಿತ್ತು. ನಾನು ಸುರುಳಿ ಹೋಳಿಗೆ ಮಾಡಲು ಉತ್ಸುಕಳಾಗಿದ್ದೆ. ಹೋಳಿಗೆ ಮಾಡುವುದರಲ್ಲಿ ಮೊದಲಿನಿಂದಲೂ ಆಸಕ್ತಿ. ಹೋಳಿಗೆ ಮಾತ್ರವಲ್ಲ ಒಟ್ಟಾರೆ ಸಾಂಪ್ರದಾಯಕ ಅಡುಗೆಯನ್ನು ಇಷ್ಟಪಡುವಂತೆ ಮಾಡಿದ್ದು ನನ್ನ ಪಪ್ಪನ ಅಕ್ಕನವರಾದ ಗೌರಕ್ಕ ಅಮ್ಮ.

ಅವರು ಹೋಳಿಗೆ ಮಾಡುವುದನ್ನು ನೋಡಿ, ಗಮನಿಸಿ ನಾನು ಪ್ರಯತ್ನಿಸಿದೆ ಹೊರತು ಮಾಡುತ್ತಾ ಕಲಿತಿದ್ದಲ್ಲ. ತಕ್ಕಮಟ್ಟಿಗೆ ಚೆನ್ನಾಗಿ ಮಾಡುತ್ತೇನೆ ಕೂಡಾ. ಹಾಗಾಗಿ ಮಾರನೇ ದಿನ ನನ್ನ ಮಮ್ಮಿಯ ತಾಯಿಯವರಾದ ಶಾಂತಕ್ಕ ಅಮ್ಮನಿಗೆ ಫೋನ್ ಮಾಡಿ ಸುರುಳಿ ಹೋಳಿಗೆ ಮಾಡುವ ವಿಧಾನ ಕೇಳಿ ತಿಳಿದುಕೊಂಡು ಅಮ್ಮ ಹೇಳಿದ್ದನ್ನು ನೆನಪಿಟ್ಟುಕೊಂಡು ಹಿಟ್ಟು ಸೂಸಲು ಬಳಸಿ ಹೊಸ ಪ್ರಯೋಗಕ್ಕೆ ಸಿದ್ಧಳಾದೆ.

ಸ್ಟೋವ್ ಮೇಲೆ ಹಂಚನ್ನಿಟ್ಟು, ಹಿಟ್ಟನ್ನು ಚಿಕ್ಕ ಚಿಕ್ಕ ಉಂಡೆಗಳಾಗಿ ಮಾಡಿ ಲಟ್ಟಿಸಿದೆ. ಅಮ್ಮ ಹೇಳಿದಂತೆಯೇ ಅಂಗೈ ಅಗಲ ಲಟ್ಟಿಸಿದ ಹಿಟ್ಟನ್ನು ತವಾ ಮೇಲೆ ಹರಡಿ, ಸೂಸಲನ್ನು ಮಧ್ಯದಲ್ಲಿ ಹಾಕಿ, ಆಚೀಚೆ ಉಳಿದಿರುವ ಹಿಟ್ಟನ್ನು ಮಡಚಿ ಮಧ್ಯಕ್ಕೆ ಹಾಕಿ, ತಿರುವಿ, ಬೇಯಿಸಿ… ಇಷ್ಟೆಲ್ಲ ಮಾಡುವಷ್ಟರಲ್ಲಿ ಬೆವರಿಳಿದು ಹೋಗಿತ್ತು.

ಪ್ರಥಮ ಪ್ರಯತ್ನದ ಫಲವಾಗಿ 10-12 ಹೋಳಿಗೆ ತಯಾರಾದವು. ನೋಡಲು ಕೋಮಲವಾಗಿದ್ದವು ಆದರೆ ತಿನ್ನುವುದಕ್ಕಲ್ಲ! ರಾತ್ರಿ ಊಟವಾದ ನಂತರ ಹುರುಪಿನಿಂದ ಎಲ್ಲರಿಗೂ ಸುರುಳಿ ಹೋಳಿಗೆ ಹಾಕಿದೆ. ಮೇಲೆ ಹಾಲು ಹಾಕಿ ಇನ್ನೇನು ತಿನ್ನಬೇಕು… ಆಗ ಹೋಳಿಗೆ ಬಹಳ ಬಿರುಸಾಗಿರುವುದು ಅನುಭವಕ್ಕೆ ಬಂತು. ಹಾಲು ಹಾಕಿಕೊಂಡರೂ ಮೆತ್ತಗಾಗದಷ್ಟು ಗಟ್ಟಿ!

ಬೇರೆಯವರೇನಾದರೂ ಕಮೆಂಟ್ ಮಾಡುವುದಕ್ಕೆ ಮೊದಲೇ ನಾನೇ “ಮೊದಲ ಬಾರಿ ಮಾಡಿದ್ದು, ಸ್ವಲ್ಪ ಬಿರುಸಾದರೂ ರುಚಿಯಾಗಿದೆ”, ಅಂತ ಎಲ್ಲರ ತಾಟಿಗೂ ಇನ್ನಷ್ಟು ಹಾಲು ಹಾಕಿದೆ. ರುಚಿಯಾಗಿರಲೇಬೇಕಲ್ಲ, ಯಾಕೆಂದರೆ ಹಿಂದಿನ ದಿನ ಶೇಂಗಾ ಹೋಳಿಗೆಗೆ ಮಮ್ಮಿ ತಯಾರಿಸಿದ ಸೂಸಲು ಅದು! ಹಿಟ್ಟು ಫ್ರಿಜ್ ನಿಂದ ಹೊರ ತೆಗೆದದ್ದಕ್ಕೋ ಏನೋ ಗಟ್ಟಿಯಾಗಿದ್ದಿರಬೇಕು, ಇಲ್ಲ ನಾನೇ ಬೇಯಿಸುವಲ್ಲಿ ತಡವಾಗಿರಬೇಕು.

ಒಂದಲ್ಲ ಎರಡಲ್ಲ, ಒಂದು ಡಜನ್ ಹೋಳಿಗೆ ಮಾಡಿದ್ದೆ ಬೇರೆ. ಮಾಡಿದ್ದಾಗಿತ್ತು ತಿಂದು ಮುಗಿಸಲೇಬೇಕಲ್ಲ! ಪಪ್ಪ ಒಂದೂ ಮಾತಾಡದೆ ಮರುದಿನದಿಂದ ಊಟಕ್ಕೆ ಮುಂಚೆ ಒಂದು ಬೇರೆ ತಾಟಲ್ಲಿ ಮೂರ್ನಾಲ್ಕು ಸುರುಳಿ ಹೋಳಿಗಿ ಇಟ್ಟು ಮೇಲೆ ಬಿಸಿ ಹಾಲು ಹಾಕಿಡುತ್ತಿದ್ದರು. ನಮ್ಮ ಊಟ ಮುಗಿಯುವವರೆಗೂ ಅವು ನೆನೆದು ತಿನ್ನುವ ಹದಕ್ಕೆ ಬರುತ್ತಿದ್ದವು. ಅಂತೂ ಮೊದಲ ಪ್ರಯತ್ನದಲ್ಲಿ ತಯಾರಾದ ಹೋಳಿಗೆ ಹಾಲಿಲ್ಲದೆ ತಿನ್ನುವಂತಿರಲಿಲ್ಲ.

ಕೆಲ ದಿನಗಳ ನಂತರ ಅಮ್ಮ ಮನೆಗೆ ಬಂದಾಗ ಸುರುಳಿ ಹೋಳಿಗಿ ಹೇಗಾಗಿದ್ದವೆಂದು ಕೇಳಿದಾಗ ಅದರ ವೃತ್ತಾಂತವನ್ನೆಲ್ಲ ಹೇಳಿ ನಕ್ಕಿದ್ದೇ ನಕ್ಕಿದ್ದು. ಆಮೇಲೆ ಮರಳಿಯತ್ನಕ್ಕೆ ಕೈ ಹಾಕೇ ಇಲ್ಲ!! ಆದರೆ ನಮ್ಮ ಪಾರಂಪರಿಕ ಆಹಾರ ವೈವಿಧ್ಯತೆಯಲ್ಲಿ ವಿಶೇಷ ಸ್ಥಾನವಿರುವ ಸುರುಳಿ ಹೋಳಿಗೆಯನ್ನು ಮಾಡುವ ನನ್ನ ಕನಸನ್ನು ನಾನೀಗಲೂ ಜೀವಂತವಿಟ್ಟುಕೊಂಡಿದ್ದೇನೆ. ಯಾವುದೇ ಅಡುಗೆ ಎಣ್ಣೆ ಬಳಸದೇ ತಯಾರಾಗುವ ಈ ಸಿಹಿಪದಾರ್ಥ ಆರೋಗ್ಯದ ದೃಷ್ಟಿಯಿಂದಲೂ ಎಲ್ಲ ವಯೋಮಾನದವರಿಗೂ ಒಗ್ಗುತ್ತದೆ.

ದೀಪಾವಳಿಯ ಸಮಯದಲ್ಲಿ ನೆರೆಯವರೊಂದಿಗೆ, ಆತ್ಮೀಯರೊಂದಿಗೆ ನಡೆಯುವ ಸಿಹಿತಿನಿಸುಗಳ ವಿನಿಮಯದ ವೇಳೆ ಕಂಡ ಸುರುಳಿ ಹೋಳಿಗೆ ಈ ಪುಟ್ಟ ಬರಹಕ್ಕೆ ಕಾರಣವಾಯಿತು.

‍ಲೇಖಕರು Avadhi

December 11, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This