“…ಸುಳ್ಳನ್ನಲ್ಲದೆ ಬೇರೇನನ್ನೂ ಹೇಳುವುದಿಲ್ಲ!”

gali.gif“ಗಾಳಿ ಬೆಳಕು”

 

 

 

ನಟರಾಜ್ ಹುಳಿಯಾರ್

ಪ್ರಾಯಶಃ ಇವರಿಗೆಲ್ಲಾ ಯಾರೋ “ಸುಳ್ಳನ್ನಷ್ಟೆ ಹೇಳುತ್ತೇನೆ; ಸುಳ್ಳನ್ನು ಬಿಟ್ಟರೆ ಬೇರೇನನ್ನೂ ಹೇಳುವುದಿಲ್ಲ” ಎಂದು ಪ್ರಮಾಣ ಮಾಡಿಸಿರಬೇಕು ಎಂದು ನಿಮಗೆಲ್ಲ ಅನ್ನಿಸಿದ್ದರೆ ಆಶ್ಚರ್ಯವಲ್ಲ. ಬೆಳಗ್ಗೆ, ಮಧ್ಯಾಹ್ನ, ರಾತ್ರಿಗಳಿರಲಿ, ಅಕಸ್ಮಾತ್ ಮಧ್ಯರಾತ್ರಿ ನಿದ್ದೆಯಿಂದ ಎಬ್ಬಿಸಿದರೂ ಈ ಕುಮಾರಸ್ವಾಮಿ, ದೇವೇಗೌಡ, ಯಡಿಯೂರಪ್ಪ, ಸದಾನಂದಗೌಡ, ಶಿವಕುಮಾರ್… ಎಲ್ಲರೂ “ಸತ್ಯವನ್ನೆಂದೂ ನುಡಿಯುವುದಿಲ್ಲ” ಎಂಬ ಪ್ರಮಾಣವಚನವನ್ನು ಉಲ್ಲಂಘನೆ ಮಾಡಲು ಸುತರಾಂ ಸಿದ್ಧವಿಲ್ಲವೇನೋ ಎಂದು ನಿಮ್ಮಂತೆ ನನಗೂ ಅನಿಸತೊಡಗಿತ್ತು…

ಅಷ್ಟು ಹೊತ್ತಿಗೆ ಸರಿಯಾಗಿ ಪ್ರೊ. ರಾಜಾರಾಂ ಅವರು ಜೋಸೆಫ್ ಡನ್ ಬರೆದ “ಪೆಯ್ನ್ ಫುಲ್ ಪೀಪಲ್” ಎಂಬ ಪುಸ್ತಕ ಕೊಟ್ಟರು. ಈ ಪುಸ್ತಕ ಓದುತ್ತಿದ್ದಂತೆ ನಾವು ದಿನನಿತ್ಯ ಎದುರಾಗುವ ಜನರು ಹಾಗೂ ಆ ಜನರು ಆರಿಸಿದ ನಾಯಕರು ಉಸಿರಾಟದಷ್ಟೇ ಸಹಜವಾಗಿ ಹೇಳುವ ಸುಳ್ಳುಗಳ ಬಗ್ಗೆ ಅಷ್ಟಿಷ್ಟು ಸ್ಪಷ್ಟತೆ ಸಿಕ್ಕತೊಡಗಿತು. ಡನ್ ಪ್ರಕಾರ, ಸಾಮಾನ್ಯವಾಗಿ ನಾಲ್ಕು ಬಗೆಯ ಸುಳ್ಳುಗಳಿರುತ್ತವೆ. ಇಲ್ಲಿ “ಸುಳ್ಳು” ಎಂದರೆ ಅಸತ್ಯಗಳು, ತಪ್ಪು ಮಾಹಿತಿಗಳು, ನೀವು ನಂಬಲಾಗದ ಹಾಗೂ ನಂಬಬಾರದ ಸಂಗತಿಗಳು ಎಂದು ಡನ್ ಅರ್ಥೈಸಿಕೊಳ್ಳುತ್ತಾನೆ.

ಈ ನಾಲ್ಕು ಸುಳ್ಳುಗಳೆಂದರೆ, ೧)ಬಿಳಿ ಸುಳ್ಳುಗಳು, ೨)ಸಿ ಆರ್ ಎ ಪಿ, ೩)ಕರಿ ಸುಳ್ಳುಗಳು, ೪)ಭ್ರಾಂತಿಗಳು.

ಇವುಗಳಲ್ಲಿ ಕೊನೆಯಲ್ಲಿರುವ “ಭ್ರಾಂತಿಗಳು” ಎಂದರೆ ನಿಜವಾದ ಅರ್ಥದಲ್ಲಿ ಸುಳ್ಳುಗಳಲ್ಲ. ಯಾಕೆಂದರೆ, ಇವನ್ನು ಹೇಳುತ್ತಿರುವ ವ್ಯಕ್ತಿಗೆ ಅವೆಲ್ಲ ನಿಜವೆಂಬುದು ಖಾತ್ರಿಯಾಗಿಬಿಟ್ಟಿದೆ. ಉದಾಹರಣೆಗೆ, ಈತ ಹರಕಲು ಬಟ್ಟೆಯಲ್ಲಿದ್ದಾನೆ. ದೇವರು ನನ್ನನ್ನು ಯಾವುದೋ ಒಂದು ಕೆಲಸಕ್ಕೆ ನೇಮಿಸಿದ್ದಾನೆ ಎಂದು ನಂಬಿರುವ ಈತ ಆ ಕೆಲಸದ ಬಗ್ಗೆ ಎಲ್ಲೆಡೆ ಹೇಳುತ್ತಾ ಓಡಾಡುತ್ತಿದ್ದಾನೆ. ಆ ಸುಳ್ಳನ್ನು ಅವನು ನಂಬಿಯೂ ಇದ್ದಂತಿದ್ದಾನೆ. ಡನ್ ಪ್ರಕಾರ ಗ್ಯಾರಂಟಿ ಇದು ಮತಿಭ್ರಾಂತಿಯ ಕೇಸ್.

ಡನ್ ಪ್ರಕಾರ, ಕರಿಸುಳ್ಳು ಹೀಗಿರುತ್ತದೆ: ಯಾರೋ ಬಾಗಿಲು ಬಡಿಯುತ್ತಾರೆ. ನೀವು ಬಾಗಿಲು ತೆರೆದರೆ “ಚಂದ್ರು ಇದಾನಾ?” ಎನ್ನುತ್ತಾನೆ ಆತ. “ಇಲ್ಲ, ಚಂದ್ರು ಅನ್ನೋರು ಯಾರೂ ಇಲ್ಲವಲ್ಲ?” ಎಂದು ನಿಮ್ಮ ಉತ್ತರ. “ಬೇರೆ ಯಾವುದೋ ಮನೆಗೆ ತಪ್ಪಿ ಬಂದಿದೀನಿ” ಎಂದು ಗೊಣಗುತ್ತಾ ಆತ ಹೊರಡುತ್ತಾನೆ. ಆತ ಬಂದಿರುವುದೇ ನಿಮಗೆ ಟೋಪಿ ಹಾಕಿ ನಿಮ್ಮ ಮನೆಯ ವಿಸಿಆರ್ ಕದಿಯಲು. ಆದರೆ ಯಾಕೋ ಗಿಟ್ಟಲಿಲ್ಲ ಎಂದು ಆತ ಹೊರಡುತ್ತಾನೆ.

ಇನ್ನು ಡನ್ ಹೇಳುವ ಸಿ ಆರ್ ಎ ಪಿ ಅಥವಾ “ಕಾನ್ಫಿಡೆಂಟ್ ರ್‍ಯಾಷನಲೈಸೇಷನ್ ಅಂಡ್ ಪ್ರೊಜೆಕ್ಷನ್” ಮಾದರಿಯಲ್ಲಿ ವ್ಯಕ್ತಿ, ಅದರಲ್ಲೂ ಸಾಮಾನ್ಯವಾಗಿ ಗಂಡು ತನಗೆ ಬೇಕಾದ ರೀತಿಯ ಹಾಗೂ ತನಗೆ ಅನುಕೂಲವಾದ ಸತ್ಯ ಹೇಳುತ್ತಿರುತ್ತಾನೆ. ಜೊತೆಗೆ, ಆ “ಸತ್ಯ”ವನ್ನು ಒಂದು ರೀತಿಯಲ್ಲಿ ನಂಬಿಯೂ ಇರುತ್ತಾನೆ. ಅತಿಯಾದ ಆತ್ಮವಿಶ್ವಾಸದಿಂದ ಎಲ್ಲರೂ ಒಪ್ಪುವಂತೆ ಅದನ್ನು ಹೇಳಲು ಈ ಥರದ ನಂಬಿಕೆ ಆತನಿಗೆ ಅಗತ್ಯ. ಈ ಕೆಲಸವನ್ನು ಧಾರ್ಮಿಕ ನಾಯಕರು, ವೃತ್ತಿ ರಾಜಕಾರಣಿಗಳು ಅತ್ಯಂತ “ದಕ್ಷ”ವಾಗಿ ಮಾಡುತ್ತಿರುತಾರೆ. ಅದರ ಜೊತೆಗೇ ಈ “ಕ್ರ್ಯಾಪ್” ಕಲಾವಿದರು ತಮ್ಮ ಸರಿತನದಲ್ಲಿ ಹಾಗೂ ಪಾವಿತ್ರ್ಯದಲ್ಲಿ ಅಪಾರ ನಂಬಿಕೆಯಿಟ್ಟುಕೊಂಡಿರುತ್ತಾರೆ. ಉಳಿದವರೆಲ್ಲಾ ಕೆಟ್ಟವರು, ತಪ್ಪು ಹಾದಿಯಲ್ಲಿರುವವರು, ಪಾಪಿಗಳು ಎಂದು ಅವರ ನಂಬಿಕೆ. ಆದರೆ ಈ ಕ್ರ್ಯಾಪ್ ಗಳ ಸುಳ್ಳು ಒಂದಲ್ಲ ಒಂದು ದಿನ ಗೊತ್ತಾಗುವ ಸಾಧ್ಯತೆಯೂ ಇರುತ್ತದೆ. ಈ ಸುಳ್ಳು ಗೊತಾದಾಗ, ಆ ಸುಳ್ಳಿಗೆ ಬಲಿಯಾದವರು ಮೆಲ್ಲಗೆ ಅಲ್ಲಿಂದ ಬಿಡಿಸಿಕೊಳ್ಳಲೆತ್ನಿಸುತ್ತಾರೆ.

ಕೊನೆಯದು “ಬಿಳಿಸುಳ್ಳು”. ಅದು ಹೀಗಿರುತ್ತದೆ: ನಿಮಗೆ ಯಾರೋ ಫೋನ್ ಮಾಡುತ್ತಾರೆ. ನೀವೀಗ ಅವರ ಜೊತೆ ಪಾರ್ಟಿಗೆ ಬರಬೇಕು; ಅಥವಾ ಟೂರಿಗೆ ಹೊರಡಬೇಕು… ಹೀಗೆ ಏನೋ ಒಂದು ಕೋರಿಕೆ ಅವರದು. ಆದರೆ ನಿಮಗೆ ಆ ವ್ಯಕ್ತಿಯ ಜೊತೆ ಹೋಗಲು ಮನಸ್ಸಿಲ್ಲ. ಆ ವ್ಯಕ್ತಿಯ ಬಗ್ಗೆ ನಿಮಗೆ ಯಾವ ಆಸಕ್ತಿಯೂ ಇಲ್ಲ. ಹೀಗಾಗಿ “ನನಗೆ ಬೇರೆ ಯಾವುದೋ ಕಾರ್ಯಕ್ರಮ ಇದೆ. ಇನ್ನೊಂದು ವಾರ ಬಿಡುವಿಲ್ಲ” ಎನ್ನುತ್ತೀರಿ. ಫೋನಿನ ಆ ಕಡೆಯಲ್ಲಿರುವ ವ್ಯಕ್ತಿಗೆ ಸ್ವಲ್ಪ ನೋವಾಗುತ್ತದೆ. ನೀವೂ ಕೂಡ “ಛೆ, ಬರಲಾಗುತ್ತಿಲ್ಲವಲ್ಲ” ಎಂದು ನಿಟ್ಟುಸಿರಿಡುತ್ತಾ ಫೋನಿಡುತ್ತೀರಿ. ಇದು ಬಿಳಿಸುಳ್ಳು ಯಾಕೆಂದರೆ, ಈ ಸುಳ್ಳು ಹೇಳಿದ್ದರ ಬಗ್ಗೆ ನಿಮಗೆ ಸ್ವಲ್ಪ ಪಾಪಪ್ರಜ್ಞೆ ಇದೆ. ಆದರೆ ಇದನ್ನು ಕೇಳಿಸಿಕೊಂಡ ವ್ಯಕ್ತಿಗೆ ಇದರಿಂದ ಹೆಚ್ಚು ನೋವಾದಂತಿಲ್ಲ. ಈ ರೀತಿಯ ಸುಳ್ಳು ಸಾಮಾನ್ಯವಾಗಿ ಎಲ್ಲರಿಗೂ ಹೊಳೆಯುತ್ತದೆ. ಹೇಳಿದವರಿಗೂ ಕೇಳಿಸಿಕೊಂಡವರಿಗೂ ಇದು ಸುಳ್ಳು ಎಂಬುದು ಗೊತ್ತಾಗುತ್ತದೆ. “ನಿನ್ನಂಥವನ ಜೊತೆಯಲ್ಲಿ ಈ ಸಂಜೆ ಕಳೆಯಲು ಇಷ್ಟವಿಲ್ಲ” ಎಂದು ಯಾರಿಂದಲಾದರೂ ಹೇಳಿಸಿಕೊಳ್ಳುವುದಕ್ಕಿಂತ “ಬೇರೇನೋ ಕಾರ್ಯಕ್ರಮವಿದೆ” ಎಂದು ಹೇಳಿಸಿಕೊಳ್ಳುವುದು ಹೆಚ್ಚು ಸಮಾಧಾನಕರವಾದುದು!

ಇದೆಲ್ಲವನ್ನೂ ಚರ್ಚಿಸುತ್ತಾ, ಈ ಸುಳ್ಳುಗಳನ್ನು ಹೇಗೆ ನಿಭಾಯಿಸುವುದು ಎಂಬ ಬಗ್ಗೆ ಡನ್ ಹೀಗೆ ಹೇಳುತ್ತಾನೆ:

ಬಿಳಿಸುಳ್ಳಿನ ಬಗ್ಗೆ ನಕ್ಕು ಸುಮ್ಮನಾಗಿ. ಯಾಕೆಂದರೆ ನಾವೆಲ್ಲಾ ಆಗಾಗ್ಗೆ ಈ ಥರದ ಸುಳ್ಳು ಹೇಳುತ್ತಲೇ ಇರುತ್ತೇವೆ.

ಆದರೆ ಕರಿಸುಳ್ಳುಗಳ ಬಗ್ಗೆ ಮಾತ್ರ ಸಂದೇಹ ಇಟ್ಟುಕೊಂಡೇ ಇರಿ. ಈ ಸುಳ್ಳುಗಾರರ ಸುಳ್ಳುಗಳ ಬಗ್ಗೆ ಎಚ್ಚರವಾಗಿರಿ.

ಇನ್ನು ಕ್ರ್ಯಾಪ್ಟ್ ಗಳ ಬಗ್ಗೆ ಡನ್ ಹೇಳುವ ಮಾತು: “ನಿಮ್ಮನ್ನು ಸದಾ ಕನಿಷ್ಠ ಸ್ಥಾನದಲ್ಲೇ ಇರಿಸಲು, ನಿಮ್ಮ ಮೇಲೆ ನಿಯಂತ್ರಣ ಇಟ್ಟುಕೊಳ್ಳಲು ಈ ಕ್ರ್ಯಾಪ್ಟ್ ಗಳು ಹೇಳುತ್ತಿರುವ ಸುಳ್ಳುಗಳನ್ನು ಕೇಳಿಸಿಕೊಳ್ಳುತ್ತಲೇ ಇದ್ದರೆ ನಿಮಗೆ ಅಪಾಯ ತಪ್ಪಿದ್ದಲ್ಲ. ಅವರ ಜೊತೆ ಹೇಗೋ ಸಂಭಾಳಿಸಿಕೊಳ್ಳಿ ಅಥವಾ ಅವರನ್ನು ಬದಲಾಯಿಸಲು ಪ್ರಯತ್ನಿಸಿ ಅಥವಾ ಜಾಗ ಖಾಲಿಮಾಡಿ. ಅಂಥವರಿದ್ದರೆ, ನಾನು ಜಾಗ ಖಾಲಿ ಮಾಡುವವನೇ.”

“ಇನ್ನು ಭ್ರಾಂತುಗಳ ವಿಚಾರದಲ್ಲಿ ನೀವೇ ಸ್ವತಃ ಏನನ್ನಾದರೂ ಮಾಡುವುದು ಕಷ್ಟ. ಆ ಭ್ರಾಂತುಗಳ ಜೊತೆ ಅವರ ಭ್ರಾಂತಿಗಳ ವಿರುದ್ಧ ವಾದ ಮಾಡುವುದು ಅಸಾಧ್ಯ. ಅವರು ತಮ್ಮ ಭ್ರಾಂತಿಯನ್ನು ಬಿಟ್ಟುಕೊಡುವಂತೆ ಮಾಡುವುದೂ ಸಾಧ್ಯವಿಲ್ಲ. ಅವರನ್ನು ಚಿಕಿತ್ಸೆಗೆ ಒಳಪಡಿಸುವುದೊಂದೇ ನಮಗಿರುವ ದಾರಿ” ಎನ್ನುತ್ತಾನೆ ಡನ್.

ಡನ್ ಪುಸ್ತಕದಲ್ಲಿ ಸೈಕೋಪಾಥ್ ಗಳ ಅಥವಾ ಮನೋವಿಕಾರಿಗಳ ಬಗೆಗಿನ ಈ ವಿವರಗಳನ್ನು ಗಮನಿಸುತ್ತಲೇ ಮತ್ತೆ ನಮ್ಮ ಜನನಾಯಕರ ಮಾತುಗಳನ್ನು ಕೇಳಿಸಿಕೊಳ್ಳತೊಡಗಿದೆ. ಮಿಂಚಿಗಿಂತ ವೇಗವಾಗಿ ಬದಲಾಗುತ್ತಿದ್ದ ಅವರ ಹರಕು ನಾಲಗೆಯ ವ್ಯಾಖ್ಯಾನಗಳು ಡನ್ ನ ನಾಲ್ಕೂ ಸುಳ್ಳುಗಳ ಮಾದರಿಗಳಿಗೆ ಒಗ್ಗದೆ ಐದನೆಯ ಭಾರತೀಯ ಮಾದರಿಯೊಂದನ್ನು ರೂಪಿಸಲು ಹವಣಿಸುತ್ತಿರುವಂತೆ ಕಂಡವು. ಆದರೂ ಡನ್ ಕೊಡುವ “ಕರಿಸುಳ್ಳು”ಗಳ ಪಟ್ಟಿಗೆ ಈ ನಮ್ಮ ನಾಯಕರು ಸಾಕಷ್ಟು ಫಿಟ್ ಆಗುತ್ತಾರೆ ಎನ್ನಿಸಿತು.

ಇಷ್ಟಾಗಿಯೂ ಪಶ್ಚಿಮದ ಮಾದರಿಗಳನ್ನು ಬಿಟ್ಟು ಸ್ವತಂತ್ರವಾಗಿ ಅಧ್ಯಯನ ಮಾಡಬೇಕೆನ್ನುವ ದೇಶೀವಾದಿಗಳು ಪುಣ್ಯಭೂಮಿ ಭಾರತದ ಸುಳ್ಳುಗಾರರ ಬಗ್ಗೆ ದೇಶೀ ಮಾನದಂಡಗಳನ್ನು ಆಧರಿಸಿ ಮುಂದೆ ಮಾಡಬಹುದಾದ ಸಂಶೋಧನೆಗೆ ವಿಸ್ತಾರವಾದ ಸ್ಕೋಪ್ ಇದೆ ಎಂದು ವಿನಮ್ರವಾಗಿ ಸೂಚಿಸಬಹುದು!

‍ಲೇಖಕರು avadhi

November 8, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಆ ತಾಯಿಯ ನೆನಪಲ್ಲಿ….

ಇವರು ಮಿಡ್ ಡೇ ಸಂಪಾದಕರಾದ ಎಸ್ ಆರ್ ರಾಮಕೃಷ್ಣ ಅವರ ತಾಯಿ ಇಂದಿರಾ ಸ್ವಾಮಿ ಎಂದು ಪರಿಚಯಿಸಿಕೊಟ್ಟರೆ ತಪ್ಪಾದೀತು. ಎಲ್ಲ ತಾಯಂದಿರನ್ನೂ...

ಬರಲಿರುವ ದುರಂತದ ಮುನ್ಸೂಚನೆ..

'ರೈತ, ದಲಿತ ಸಂಘಟನೆಗಳ ಜೊತೆ ಮತ್ತೆ ಹೊರಡೋಣ' ಗಾಳಿಬೆಳಕು -ನಟರಾಜ್ ಹುಳಿಯಾರ್ ನಾನು ಮತ್ತು ನನ್ನ ವಾರಗೆಯವರು ನಮ್ಮ ಹದಿಹರೆಯದಲ್ಲಿ ಕ್ಲಾಸ್...

೧ ಪ್ರತಿಕ್ರಿಯೆ

  1. chandra shekar n.p.

    Huiliyar Sir,
    Really it is a very good article. I would like to know ‘how do you define “HASI SULLU”, which is being used very often in our kannada language’. And Iam interesented to be in touch with you as I am pursuing Ph.D in kannda translations , under the guidance of Prof. T.S. Satyanath, at Delhi University. Pl. you my kindly be sent you Cell no. to my E.mail.or message to my cell no. 0987157656. Thank you, sir
    Chandra shekar, n.p new delhi.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: