ಸುವರ್ಣ ಶಿವಪ್ರಸಾದ್ ಕಥೆ- ಜನುಮ ಜನುಮದ ಅನುಬಂಧ

ಸಿ.ಸುವರ್ಣ ಶಿವಪ್ರಸಾದ್

ಡಾಕ್ಟರ್ ಶಿವಪ್ರಸಾದ್ ಆಸ್ಪತ್ರೆಗೆ ಹೋಗಲು ತಯಾರಾಗುತ್ತಿದ್ದ ಅಷ್ಟರಲ್ಲಿ ಅವನ ಮೊಬೈಲ್ ರಿಂಗ್ ರಿಂಗುಣಿಸಿತು. ʼಅಯ್ಯೋ ಯಾರ್ ಸತ್ತರೋ ಏನ್ ಕಥೆಯೋ ನೆಮ್ಮದಿಯಾಗಿ ತಿಂಡಿ ತಿನ್ನೋಕೂ ಬಿಡಲ್ಲ ಈ ಜನ ಅಂತ ಗೊಣಗುತ್ತಲೆ ಮೊಬೈಲ್ ಕೈಗೆತ್ತಿಕೊಂಡು ನೋಡ್ದಾ ರಿಂಗಾದ ಕರೆ ಅದೊಂದು ಅನೌನ್ ನಂಬರ್ ಆಗಿತ್ತು. ಮುಖ ಗಂಟಿಕ್ಕಿಕೊಂಡೇ ಯಾರದಪ್ಪ ಇದು ಕರೆ ಅಂದುಕೊಂಡೆ… ಹಲೋ ಹೂ ಇಸ್ ಸ್ಪೀಕಿಂಗ್…? ಆ ಕಡೆಯಿಂದ ಸುಮಧುರವಾದ ಕೋಗಿಲೆಯ ಕಂಠದಲ್ಲಿ ಡಾಕ್ಟರ್ ರಂಜಿತಾ ಗೈನೋಕೊಲಿಜಿಸ್ಟ್ ನಿಮ್ ನರ್ಸಿಂಗ್ ಹೋಮ್‍ಗೆ ನಾನು ಹೊಸದಾಗಿ ಅಪಾಯಿಂಟ್‍ಮೆಂಟ್ ಆಗಿದ್ದೀನಿ ಸರ್. ಇಲ್ಲಿಗೆ ಬಂದು ಒಂದು ವಾರವಷ್ಟೇ ಆಯ್ತು, ನಿಮ್ಮನ್ನ ಮೀಟ್ ಮಾಡೋಣ ಅಂತ ನಿಮ್ ಚೇಂಬರ್ ಗೆ ಬಂದಿದ್ದೆ, ನೀವು ಇರ್ಲಿಲ್ಲ ರಿಸ್ಪಷನಿಸ್ಟ್ ನೀವು ಊರಲ್ಲಿ ಇಲ್ಲ ಬರೋದು ಒಂದು ವಾರ ಆಗುತ್ತೆ ಅಂದ್ರು, ಅದಕ್ಕೆ ನೀವು ಬಂದ ಮೇಲೆ  ಭೇಟಿ ಆಗೋಣ ಅಂದ್ಕಂಡೆ ಸರ್.

ಅವಳ ಕೋಗಿಲೆಯ ಕೋಮಲವಾದ ಕಂಠಕ್ಕೆ ಅವನು ಫಿದಾ ಆಗಿಬಿಟ್ಟ. ಹೌದಾ ಮೇಡಂ ನಾನು ಊರಲ್ಲಿ ಒಂದು ವಾರದಿಂದಲೂ ಇರ್ಲಿಲ್ಲ ನಿನ್ನೆಯಷ್ಟೇ ಊರಿಗೆ ಬಂದೆ ಇವತ್ತು ನರ್ಸಿಂಗ್ ಹೋಂಗೆ ಬರ್ತಿನಿ ನಿಮ್ಮನ್ನ ಭೇಟಿ ಮಾಡ್ತೀನಿ ಈಗ ಫೋನ್ ಮಾಡಿದ್ದು ಏನ್ ವಿಷ್ಯ ಏನೂ ಎತ್ತ ಎಂದೆಲ್ಲಾ ವಿಚಾರಿಸಿದ. ಆ ಕಡೆಯಿಂದ ರಂಜಿತಾ ಏನೂ ಇಲ್ಲ ಸರ್ ನಿನ್ನೆ ಒಂದು ಕೇಸ್ ನೋಡ್ದೆ ನಿಮ್ಮಿಂದ ನಂಗೆ ಆ ರೋಗಿಯ ಇನ್‍ಫರ್ಮೇಷನ್ ಬೇಕಾಗಿತ್ತಲ್ಲ ಎಂದ್ಲು. ಶಿವಪ್ರಸಾದ್ ಅವಳ ಮಾತು ಕೇಳಿ ಹೌದಾ ಅದನ್ನ ಫೋನ್ ನಲ್ಲಿ ಹೇಳೋಕೆ ಆಗೋಲ್ಲ ನಾನು ಈಗ ನರ್ಸಿಂಗ್ ಹೋಂಗೆ ಹೊರಡ್ತಾ ಇದ್ದೆ. ಇನ್ನೊಂದು ಅರ್ಧ ಗಂಟೆಲಿ ಅಲ್ಲಿರ್ತಿನಿ ಆಗಬಹುದಾ ಎಂದು ಬಹಳ ನಮ್ರತೆಯಿಂದಲೆ ಅವಳಿಗೆ ಹೇಳಿದ. ರಂಜಿತಾ ಓಕೆ ಸರ್ ನೋ ಪ್ರಾಬ್ಲಮ್ ನೀವು ಬರೋವರೆಗೆ ಕಾಯುತ್ತೇನೆ ಬನ್ನಿ ಎಂದು ಹೇಳಿ ಫೋನ್ ಇಟ್ಟಳು.

ಡಾಕ್ಟರ್ ಶಿವಪ್ರಸಾದ್ ನಸುನಕ್ಕು ಮನಸ್ಸಿನಲ್ಲೆ ಯಾರಪ್ಪ ಇದು ಹೊಸ ಡಾಕ್ಟ್ರು ಇವಳ ದನಿ ಎಲ್ಲೋ ಕೇಳಿದಂಗಿದೆಯಲ್ಲ ಗಿಳಿ ಹೇಗಿದೆ ವಸಿ ನೋಡೋವಾ. . .  ಅಂದ್ಕಂಡು ತರಾತುರಿಯಲ್ಲಿ ತಲೆ ಬಾಚಿಕೊಂಡು ಇನ್ ಷರ್ಟ್ ಎಲ್ಲಾ ಸರಿಮಾಡಿಕೊಂಡು ಡ್ರಸ್‍ನ್ನು ಒಂದು ಸಾರಿ ಕನ್ನಡಿ ಮುಂದೆ ನಿಂತ್ಕಂಡು ಆ ಕಡೆ ಈ ಕಡೆ ಹಿಂದೆ ಮುಂದೆ ತಿರುಗಿ ನೋಡಿಕೊಂಡು ಟೇಬಲ್ ಮೇಲಿದ್ದ ಕಾರ್ ಕೀ ತಗೊಂಡು ಅಮ್ಮ ನಂಗೆ ಅರ್ಜೆಂಟ್ ಕೆಲ್ಸ ಇದೆ ಬರ್ತಿನಿ ಅಂತೇಳ್ಕಂಡು ಗಡಿಬಿಡಿಯಲ್ಲಿ ಹೊರಟ.

ಆಸ್ಪತ್ರೆಗೆ ಶಿವಪ್ರಸಾದ್ ಮನೆಯಿಂದ ಸುಮಾರು ಐದು ಕಿ.ಲೋ ದೂರ ಇತ್ತು. ಅವನ ತಂದೆತಾಯಿ ಇಬ್ಬರೂ ಕೂಡ ವೈದ್ಯರೇ. ತಂದೆ ಡಾ.ರಂಗನಾಥ್ ಖ್ಯಾತ ಹೃದಯ ತಜ್ಞ ಆಗಿ ಒಳ್ಳೆಯ ಹೆಸರನ್ನೂ ಗಳಿಸಿದ್ರು. ತಾಯಿ ಡಾ.ಸವಿತಾ ಕೂಡ ಸ್ತ್ರೀರೋಗ ತಜ್ಞೆಯಾಗಿದ್ದು ತಮ್ಮದೆ ಆದ ಸ್ವಂತ ನರ್ಸಿಂಗ್ ಹೋಮ್ ಕೂಡ ಹೊಂದಿದ್ರು. ಊರಿನಲ್ಲಿ ಕಡಿಮೆ ಫೀ ತೆಗೆದುಕೊಂಡು ಜನರ ಸೇವೆಯನ್ನು ದಂಪತಿಗಳಿಬ್ಬರು ಸುಮಾರು ಮೂವತ್ತು ವರುಷದಿಂದ ಮಾಡುತ್ತಿದ್ದರಿಂದ ಇಡೀ ಊರಿಗೆ ಇವರ ಹೆಸರು ಚಿರಪರಿಚಿತವಾಗಿತ್ತು.

ಇದರ ಜೊತೆಗೆ ಇವರಿಗಿದ್ದ ಇಬ್ಬರು ಮಕ್ಕಳನ್ನೂ ಕೂಡ ವೈದ್ಯರನ್ನಾಗಿ ಮಾಡಿದ್ದರು. ಮಗಳು ಅಳಿಯ ಇಬ್ಬರು ಆಮೇರಿಕಾದಲ್ಲಿ ವೈದ್ಯರಾಗಿ ಕೆಲಸ ನಿರ್ವಹಿಸ್ತಾ ಇದ್ದರೆ, ಶಿವಪ್ರಸಾದ್ ಬೆಂಗಳೂರಿನಲ್ಲಿ ವೈದ್ಯಕೀಯ ಪದವಿ ಮುಗಿಸಿ ವಿದೇಶದಲ್ಲಿ ಉನ್ನತ ವ್ಯಾಸಂಗ ಮುಗಿಸಿಕೊಂಡು ತಂದೆಯ ನರ್ಸಿಂಗ್ ಹೋಮ್ ನಲ್ಲಿಯೇ ತನ್ನ ವೃತ್ತಿಯನ್ನ ಆರಂಭಿಸಿದ್ದ. ನರ್ಸಿಂಗ್ ಹೋಮ್ ಜವಾಬ್ದಾರಿಯೆಲ್ಲಾ ತಂದೆಯೇ ನಿರ್ವಹಿಸುತ್ತಿದ್ದರಿಂದ ಶಿವಪ್ರಸಾದ್‍ಗೆ ಜವಾಬ್ದಾರಿ ಕಡಿಮೆ ಇತ್ತು. ತಂದೆಗೆ ಬೇಕಾದ ಸಹಾಯ ಮಾಡುತ್ತಿದ್ದ. ಆಸ್ಪತ್ರೆಗೆ ಬೇಕಾಗುವ ಹೆಚ್ಚುವರಿ ಸಿಬ್ಬಂದಿಗಳನ್ನ ಡಾ.ರಂಗನಾಥರೇ ನೇಮಿಸಿಕೊಳ್ಳುತ್ತಿದ್ದರು. ಆದ್ದರಿಂದ ಶಿವಪ್ರಸಾದ್ ಗೆ ಹೊಸದಾಗಿ ನೇಮಕ ಮಾಡಿಕೊಂಡಿದ್ದ ವೈದ್ಯರು ಯಾರೂ ಎನ್ನೋದು ತಿಳಿಯುತ್ತಿರಲಿಲ್ಲ.  ಸೃಜನಾ ನರ್ಸಿಂಗ್ ಹೋಮ್‍ಗೆ ರಂಜಿತಾ ಆಯ್ಕೆಯಾಗಿರೋದು ಶಿವಪ್ರಸಾದ್‍ಗೆ ತಿಳಿದಿರಲಿಲ್ಲ. ಅವಳು ಹೇಳಿದಾಗಲೆ ಅವನಿಗೆ ಗೊತ್ತಾಗಿದ್ದು.

ರಂಜಿತಾ ಕಳೆದ ವರ್ಷವಷ್ಟೇ  ವೈದ್ಯಕೀಯ ಪದವಿ ಮುಗಿಸಿ ನರ್ಸಿಂಗ್ ಹೋಮ್ ಗೆ ಕೆಲ್ಸಕ್ಕೆ ಸೇರಿದ್ದಳು. ಈಕೆ ಹೆಸರಿಗೆ ತಕ್ಕಂತೆ ಬಹಳ ಸುರದ್ರೂಪಿ ಹೆಣ್ಣುಮಗಳು. ಬಹಳ ಸೌಮ್ಯ ನಡವಳಿಕೆಯ ಮಿತಭಾಷೆಯ ಮಾನವೀಯತೆವುಳ್ಳ ಗುಣವಂತ ಹೆಣ್ಣುಮಗಳಾಗಿದ್ದಳು. ತಂದೆ ಸರ್ಕಾರಿ ಇಲಾಖೆಯಲ್ಲಿ ಗುಮಾಸ್ತರಾಗಿದ್ದರು, ತಾಯಿ ಗೃಹಿಣಿ. ಇವಳ ತಾಯಿಗೆ ಆರು ಜನ ಹೆಣ್ಣುಮಕ್ಕಳು ಇವಳೆ ಕೊನೆಯ ಮಗಳು. ರಂಜಿತಾ ಎಂದರೆ ಮನೆಯಲ್ಲಿ ಎಲ್ಲರಿಗೂ ಬಹಳ ಪ್ರೀತಿ. ತಂದೆತಾಯಿಗಂತೂ ಕೊನೆಯ ಮಗಳು ಎಂದು ಬಹಳ ಮುದ್ದು. ತಂದೆಗೆ ಇವಳನ್ನ ಡಾಕ್ಟರ್ ಓದಿಸಬೇಕು ಎನ್ನೋದು ಬಹಳ ಆಸೆ. ಅದಕ್ಕೆ ತಕ್ಕಂತೆ ರಂಜಿತಾ ಕೂಡ ಓದಿನಲ್ಲಿ ಬಹಳ ಜಾಣೆ. ಪ್ರತಿ ವರ್ಷವು ಶಾಲೆಯಲ್ಲಿ ಪ್ರಥಮ ಸ್ಥಾನವನ್ನು ಯಾರಿಗೂ ಬಿಟ್ಟುಕೊಡುತ್ತಿರಲಿಲ್ಲ. ಓದು ಅಷ್ಟೇ ಅಲ್ಲ ಕ್ರೀಡೆ ಚರ್ಚಾ ಸ್ಪರ್ಧೆ ಹೀಗೆ ಪಠ್ಯೇತರ ಚಟುವಟಿಕೆಯಲ್ಲೂ ಮುಂದೆ ಇದ್ಲು. ಇವಳ ಚಟುವಟಿಕೆ ಕಂಡು ಶಾಲೆಯಲ್ಲಿ ಶಿಕ್ಷಕರಿಗೂ ಇವಳೆಂದರೆ ಅಚ್ಚುಮೆಚ್ಚಿನ ಶಿಷ್ಯೆಯಾಗಿದ್ದಳು.

ವರ್ಷಗಳು ಕಳೆದವು ಕಾಲೇಜು ಮೆಟ್ಟಿಲು ಅತ್ತಿದಳು. ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಪಡೆದು ಉತ್ತೀರ್ಣಳಾದಳು. ಬೆಂಗಳೂರಿನ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಪದವಿಗೆ ಮೆರಿಟ್ ಸೀಟು ಕೂಡ ಸಿಕ್ಕಿತು. ಮನೆಯಲ್ಲಿ ಎಲ್ಲರೂ ಅವಳಿಗೆ ಯಾವುದೇ ತೊಂದರೆಯನ್ನು ಕೊಡದಂತೆ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಿದರು. ರಂಜಿತಾ ಕೂಡ ಬಹಳ ಶ್ರಮವಹಿಸಿ ಶ್ರದ್ದೆಯಿಂದ ಓದಿ ವೈದ್ಯಕೀಯ ಪದವೀಧರಳಾದಳು. ಸರಕಾರಿ ಕೆಲಸ ಮಾಡುವ ಇಚ್ಚೆ ಇದ್ದರು ಅದು ಸುಲಭವಾಗಿ ದೊರಕದ ಕಾರಣ ನರ್ಸಿಂಗ್ ಹೋಮ್ ನಲ್ಲಿ ಕೆಲಸ ಸಿಗೋವರೆಗೆ ಪ್ರಾಕ್ಟೀಸ್ ಮಾಡೋಣ ಎಂದು ಶಿವಪ್ರಸಾದ್ ಅವರ ಸೃಜನಾ ನರ್ಸಿಂಗ್ ಹೋಮ್ ಗೆ ಕೆಲಸಕ್ಕೆ ಸೇರಿಕೊಂಡಳು.

ಡಾ.ಶಿವಪ್ರಸಾದ್ ರಂಜಿತಳಿಗೆ ಹೇಳಿದ್ದಂತೆ ಅರ್ಧಗಂಟೆಯಲ್ಲೆ ಸೃಜನಾ ನರ್ಸಿಂಗ್ ಹೋಂಗೆ ಬಂದ. ಕಾರ್ ಪಾರ್ಕ್ ಮಾಡಿ ತನ್ನ ಛೇಂಬರ್ ಗೆ ಹೋಗಿ ಕುಳಿತ. ಒಂದೈದು ನಿಮಿಷವಾದ ಮೇಲೆ ನರ್ಸ್ ಬಳಿ ಡಾಕ್ಟರ್ ರಂಜಿತಾಳನ್ನ ಕರೆಯಲು ಕಳುಹಿಸಿದ. ಹತ್ತು ನಿಮಿಷವಾದ ಬಳಿಕ ರಂಜಿತಾ ಛೇಂಬರ್ ಬಾಗಿಲ್ಲನು ದೂಡಿ ಒಳ ಬಂದಳು. ಕುರ್ಚಿಯಲ್ಲಿ ಕುಳಿತಿದ್ದ ಡಾ.ಶಿವಪ್ರಸಾದ್ ನನ್ನೂ ನೋಡಿ ಅವಳಿಗೆ  ಸಿಡಿಲು ಬಡಿದಂತೆ ಆಯ್ತು ಆಶ್ಚರ್ಯಚಕಿತಳಾದಳು. ಅವಳಿಗೆ ಮಾತುಗಳೇ ಹೊರಡದಂತಾಯ್ತುು,  ಏನೂ ಹೇಳಬೇಕು ಹೇಳಬಾರದು ಅನ್ನೋದೆ ಅವಳಿಗೆ ತಿಳಿಯದಾಯಿತು. ನಾನು ಶಿವಪ್ರಸಾದ್‍ನನ್ನ… ನೋಡ್ತಾ ಇರೋದು ಕನಸೋ… ನಿಜವೋ ಗೊತ್ತಾಗುತ್ತಿಲ್ಲವಲ್ಲ ಎಂದು ಮನಸ್ಸಿನಲ್ಲೆ ಅಂದುಕೊಂಡು ಒಂದಷ್ಟೋತ್ತು ಮೌನಕ್ಕೆ ಶರಣಾಗಿ ನಿಂತು ಬಿಟ್ಟಳು. ರಂಜಿತಾಳನ್ನು ನಿರೀಕ್ಷಿಸದ ಶಿವಪ್ರಸಾದ್‍  ಕೂಡ ಮೂಕ ವಿಸ್ಮಿತನಾಗಿ ಕುಳಿತನು. ಒಂದೈದು ನಿಮಿಷವಾದ ತಕ್ಷಣ ಅವನೇ ಸಮಾಧಾನ ಮಾಡಿಕೊಂಡು ನೀವೇನಾ? ಹೊಸದಾಗಿ ಬಂದ ಡಾಕ್ಟರ್… ಎಂದ.

ರಂಜಿತಾ ಕತ್ತು ಅಲ್ಲಾಡಿಸುತ್ತಾ ಹೌದು ಎಂದಳು. ಹುಸಿನಗೆ ಬೀರಿ ಬಾ ರಂಜಿತಾ ಕುಳಿತುಕೋ ಎಂದು ತನ್ನ ಮುಂದಿರುವ ಕುರ್ಚಿಯ ಕಡೆಗೆ ಕೈ ಮಾಡಿ ತೋರಿಸಿದ ರಂಜಿತಾ ಮರು ಮಾತನಾಡದೆ ಕುಳಿತುಕೊಂಡಳು. ಇಬ್ಬರಿಗೂ ಏನೂ ಮಾತನಾಡಬೇಕೆಂದು ತೋಚದೆ ಎಷ್ಟೊ ಹೊತ್ತು ಹಾಗೆ ಸುಮ್ಮನೆ ಕುಳಿತರು. ಶಿವಪ್ರಸಾದ್ ನಾನೇ ಸೋತುಬಿಡುತ್ತೇನೆ ಎಂದು ಮನಸ್ಸಿನಲ್ಲೆ ಅಂದುಕೊಂಡು ಮೌನದ ಕಟ್ಟೆ ಹೊಡೆದು ಮಾತಿಗಾರಂಭಿಸಿದ.

ರಂಜಿತಾ ನೀನು ಅಂದು ನನ್ನಿಂದ ಕೋಪಿಸಿಕೊಂಡು ಹೋದ ಮೇಲೆ ನಾನು ನಿನ್ನನ್ನು ನೋಡಲು ಮಾತನಾಡಲು ಎಷ್ಟು ಪ್ರಯತ್ನ ಪಟ್ಟೆ ನೀನು ಭೇಟಿಯಾಗಲಿಲ್ಲ. ಅಲ್ಲದೇ ನಿನ್ನ ಮೊಬೈಲ್ ಕೂಡ ಯಾವಾಗಲೂ ಸ್ವಿಚ್ ಆಫ್ ಅಂತಾನೆ ಹೇಳುತ್ತಲಿತ್ತು. ನಿನ್ನ ಫ್ರೆಂಡ್ಸ್ ಅನ್ನು ಕೇಳಿದಾಗ ನಿಮ್ಮ ತಂದೆಗೆ ಮೈಸೂರಿಗೆ ವರ್ಗವಾಗಿದೆ ಅವರು ಮನೆಯನ್ನು ಮೈಸೂರಿಗೆ ಶಿಫ್ಟ್ ಮಾಡಿದರು ಎಂದು ಹೇಳಿದರು. ನೀನು ಒಂದು ಬಾರಿಯೂ ನನಗೆ ಪೋನ್ ಮಾಡಲೇ ಇಲ್ಲ ಏಕೆ ಅಷ್ಟು ಕೋಪನಾ ನನ್ನ ಮೇಲೆ….!? ನಿನಗೋಸ್ಕರ ನಾನು ಮೈಸೂರಿನ ವೈದ್ಯಕೀಯ ಕಾಲೇಜಿಗೆ ಬಂದು ಅಲ್ಲೆಲ್ಲಾ ನಿನ್ನ ಹುಡುಕಿದೆ ವಿಚಾರಿಸಿ ಅಲ್ಲಿಯೂ ನಿನ್ನ ಸುಳಿವಿಲ್ಲ. ಅಷ್ಟೇ ಅಲ್ಲದೇ ನಿನ್ನ ಗೆಳತಿಯರನ್ನೆಲ್ಲಾ ವಿಚಾರಿಸಿದೆ ಯಾರು ಸರಿಯಾಗಿ ಹೇಳಲಿಲ್ಲ. ನಿನ್ನಗೊಸ್ಕರ ನಾನು ಅಲ್ಲಿ ಗಲ್ಲಿಗಲ್ಲಿ ಸುತ್ತಿದೆ, ಕಂಡಕಂಡವರನೆಲ್ಲಾ ಕೇಳಿದೆ ನೀನು ನನಗೆ ಎಲ್ಲಿಯೂ ಸಿಗಲಿಲ್ಲ. ಅಲ್ಲಿ ನೀನೂ ಇಲ್ಲ ಅನ್ನೋದು  ನಂಗೆ ಗೊತ್ತಾದ ಮೇಲೆ ನಾನು ನಿನ್ನ ಹುಡುಕಾಟ ನಿಲ್ಲಿಸಿದ್ದು ಎಂದು  ಶಿವಪ್ರಸಾದ್ ಹಳೆಯ ಆ ದಿನದ ಘಟನೆಗಳನ್ನು ಒಂದೊಂದಾಗಿ ಅವಳ ಮುಂದೆ ತೆರೆದಿಟ್ಟುತ್ತಾ ಇದ್ದ. 

ರಂಜಿತಾ ಅವನ ಮಾತಿಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡದೆ ಸುಮ್ಮನೆ ಕುಳಿತಿದ್ದಳು. ಆದರೆ ಅವಳ ಕಣ್ಣಿನಲ್ಲಿ ಧಾರಕಾರವಾಗಿ ನೀರು ಸುರಿಯುತಲಿತ್ತು. ಶಿವಪ್ರಸಾದ್ ಕುರ್ಚಿಯಿಂದ ಎದ್ದುಬಂದು ಅವಳ ಕೈ ಹಿಡಿದು ಸಂತೈಸಿದ, ಯಾಕೆ ಆಳ್ತಾ ಇರೋದು ಕಳೆದುಹೋದ ದಿನವನ್ನ ಮರು ನೆನಪಿಸುವುದು ಬೇಡ, ಸಮಾಧಾನ ಮಾಡಿಕೋ ಎಂದೊಡನೆ ರಂಜಿತಾ ಬಿಕ್ಕಳಿಸುತ್ತಾ ನಾನು ನಿನ್ನನ್ನು ಪುನಃ ನೋಡುತ್ತೇನೆ ಎಂದು ಕನಸುಮನಸಿನಲ್ಲಿಯೂ ಎಣಿಸಿರಲಿಲ್ಲ ಶಿವ. ನೀನು ಅಂದು ನನಗೆ ನಾನು ಉನ್ನತ ಶಿಕ್ಷಣ ಮುಗಿಸೋವರೆಗೆ ನಿನ್ನ ಮದುವೆಯಾಗಲಾರೆ ಎಂದು ಹೇಳಿದೆ. ಆದರೆ ನಮ್ ಮನೆಲೀ ನಮ್ಮ ತಂದೆ ಅವ್ರ ಅಕ್ಕನ ಮಗನ ಜೊತೆ ಮದುವೆ ಮಾಡೋಕೆ ನಿಂತಿದ್ರು. ಅವ್ನ ಮದುವೆ ಮಾಡಿಕೊಳ್ಳೋಕೆ ನಂಗೆ ಒಂದುಚೂರು ಇಷ್ಟ ಇರ್ಲಿಲ್ಲ. ಅವನು ಕೂಡ ಡಾಕ್ಟ್ರು ಅಮೆರಿಕಾದಲ್ಲಿದ್ದ ಆದರೆ ಅವ್ನ ಸ್ವಭಾವ, ಬುದ್ದಿ ಅಷ್ಟು ಒಳ್ಳೆದಿರ್ಲಿಲ್ಲ. ಆದ ಕಾರಣ ನಾನು ಅವ್ನ ಮದುವೆ ಆಗೋಲ್ಲ ಎಂದೆ. ನಿಂಗೆ ನಾನು ಮದುವೆ ವಿಷ್ಯ ಹೇಳೋಕೆ ಬಂದಾಗ್ಲೆಲ್ಲಾ ಆ ವಿಷ್ಯ ಬಿಟ್ಟು ಬೇರೆ ವಿಷ್ಯ ಮಾತಾಡು ಈಗ್ಲೇ ಮದುವೆ ಬೇಡ. ನಾನು ಎಂಎಸ್ ಮಾಡಬೇಕು. ಅದು ಮುಗಿದ ಮೇಲೆ  ಮದುವೆ ಅಂತೇಳ್ಕಂಡು ಮದುವೆ ಅನ್ನೋ ವಿಷ್ಯವನ್ನೇ ದೂರ ಮಾಡ್ತಾ ಇದ್ದೆ. ನಂಗೆ ನಿನ್ನ ಕನ್ವನ್ಸ್ ಮಾಡೋಕೆ ಆಗದೆ ಯಾವ ನಿರ್ಧಾರ ನಾನು ತಗೊಬೇಕು ಅನ್ನೋದು  ತೋಚದೆ ಆದುದ್ದು ಆಗಲಿ ಅಂದ್ಕಂಡು ನಿನ್ನ ಮೇಲೆ ಕೋಪ ಮಾಡ್ಕಂಡು  ದೂರ ಹೋದೆ ಅಂದ್ಲು.

ಅವ್ಳ ಮಾತುನ್ನ ಬಹಳ ಗಂಭೀರವಾಗಿ ಕೇಳಿಸಿಕೊಂಡ ಶಿವಪ್ರಸಾದ್ ಸರಿ, ಮತ್ತೇ ನೀವು ಮನೆನಾ ಎಲ್ಲಿಗೆ  ಶಿಫ್ಟ್ ಮಾಡಿದ್ದು. ನಿನ್ನ ತಂದೆ ನಿನ್ನನ್ನು ಅತ್ತೆ ಮಗನ ಜೊತೆ ಮದುವೆ ಮಾಡ್ಲಿಲ್ವಾ…? ರಂಜಿತಾ ನಾನು ಹೌಸ್ ಮೆನ್ ಶಿಫ್ ನ್ನು ಬೆಂಗಳೂರಿನಲ್ಲಿ ನನ್ನ ದೊಡ್ಡಪ್ಪನ ಮನೇಲಿ ಇದ್ದು ಮಾಡಿದೆ. ನಮ್ ದೊಡ್ಡಪ್ಪಂಗೆ ಮಕ್ಕಳಿಲ್ಲ ಆಗಾಗಿ ನನ್ನನ್ನೇ ಅವ್ರ ಸ್ವಂತ ಮಗಳಂಗೆ ನೋಡ್ತಾ ಇದ್ರು. ಅವ್ರ ಆರೋಗ್ಯ ಅಷ್ಟು ಸರಿ ಇರ್ಲಿಲ್ಲ  ಹಲವಾರು ತೊಂದರೆಯಿಂದ ಬಳಲುತ್ತಿದ್ದರು. ಅದಕ್ಕಾಗಿ ನಾನು ಅವ್ರ ಹತ್ರನೇ ಇದ್ದೆ. ಅವರು ಹೋದ ವರ್ಷವಷ್ಟೇ ತೀರಿ ಕೊಂಡ್ರು. ಅವರು ಹೋದ ಮೇಲೆ ಮತ್ತೆ ನಾನು ನಮ್ಮ ದೊಡ್ಡಮ್ಮ ಇಬ್ಬರು ನಮ್  ತಂದೆ ಮನೆಗೆ ಬಂದ್ವಿ. ನಮ್ ಅತ್ತೆ ಮಗ ನಾನು ಮದುವೆ ಆಗೋದಿಲ್ಲ ಅನ್ನೋದು ಗೊತ್ತಾಗಿ ಕಳೆದ ವರ್ಷ ಅವನು ಬೇರೆ ಹುಡುಗಿ ಜೊತೆ ಮದುವೆ ಮಾಡಿಕೊಂಡ. ನಾನು ಇನ್ನೂ ಮದುವೆ ಆಗಿಲ್ಲ ಎಂ.ಎಸ್ ಮಾಡಬೇಕು ಅಂದುಕೊಂಡಿದ್ದೀನಿ ಅಂದಳು.

 ಶಿವಪ್ರಸಾದ್‍ಗೆ ಓಹೋ ಇವಳು ಇನ್ನೂ ಮದುವೆ ಆಗಿಲ್ಲ ಅನ್ನೋದು ಖಾತರಿ ಆಯ್ತು… ಉಸಿರೆಳೆದುಕೊಂಡು ರಂಜಿತಾ ನಾನು ನಿಂಗೆ ಬಹಳ ತೊಂದರೆ ಕೊಟ್ಟೆ ಕ್ಷಮಿಸು ಎಂದೊಡನೆ ರಂಜಿತಾ ಇಲ್ಲ ಶಿವ ಆಗಿದ್ದೆಲ್ಲ ಒಳ್ಳೆಯದೇ… ವಿನಾಃ ಕಾರಣ ನಾನು ನನ್  ತಂದೆ ಮಾತು ಕೇಳ್ತಾ ಇರ್ಲಿಲ್ಲ.  ಅವ್ರ ಇಷ್ಟಕ್ಕೆ ವಿರುದ್ದವಾಗಿ ನಡೆದುಕೊಳ್ಳುತ್ತಾ ಇದ್ದೆ. ಅವರಿಗೆ ನಂಗೆ ಅವ್ನ ಜೊತೆ ಮದುವೆ ಆಗೋದು ಇಷ್ಟ ಇರ್ಲಿಲ್ಲ ಅನ್ನೋದು ಗೊತ್ತಾಯ್ತು. ಆದರೆ ನಮ್ ಅತ್ತೆಗೆ ನಾನು ಅಂದ್ರೆ ತುಂಬಾ ಪ್ರೀತಿ. ನನ್ನನ್ನೆ ಅವ್ರ ಸೊಸೆ ಮಾಡಿಕೊಳ್ಳಬೇಕು ನಮ್ಮ ತವರು ಮನೆ ಸಂಬಂಧ ಉಳಿಸಿಕೊಳ್ಳಬೇಕು ಅನ್ನೋ ಆಸೆ. ಅದಕ್ಕೆ ನಮ್ ತಂದೆನೂ ತಂಗಿ ಆಸೆಯಂತೆ ಒಪ್ಪಿದ್ದರು. ನನ್ನ ಅದೃಷ್ಠಕ್ಕೆ ಆ ದೇವರು ಎಲ್ಲ ಸಮಸ್ಯೆಗಳನ್ನು ಪರಿಹರಿಸಿದ.

ಈಗ ನನ್ನ ಸಮಸ್ಯೆ ಅಲ್ಲಿರಲಿ ಶಿವ, ನಂಗೆ ಈ ರೋಗಿ ಬಗ್ಗೆ ಸಂಪೂರ್ಣ ಮಾಹಿತಿ ಬೇಕು ಹೇಳು.

ಹೌದಾ ನೋಡು ರಂಜಿತಾ ಈ ಫೈಲ್ ನಲ್ಲಿ ಎಲ್ಲಾ ಮಾಹಿತಿ ಇದೆ. ಒಮ್ಮೆ ನೋಡು ಎಂದು ಅವಳ ಕೈಗೆ ಫೈಲ್ ಕೊಟ್ಟು ನಮ್ ನರ್ಸಿಂಗ್ ಹೋಮ್ ಹೇಗೆ ಅನಿಸ್ತಾ ಇದೆ… ಕೆಲ್ಸ ಮಾಡಬಹುದಾ. 

ರಂಜಿತಾ ಫೈಲ್ ನೋಡ್ತಾ ನಿಜ ಹೇಳ್ಲಾ…? ಬೇಸರ ಮಾಡಿಕೊಳ್ಳಬಾರದು. ಇದು ನಿನ್ ನರ್ಸಿಂಗ್ ಹೋಮ್ ಅಂತ ನಂಗೆ ಮೊದ್ಲೆ ಗೊತ್ತಿದ್ದರೆ ಇಲ್ಲಿಗೆ ನಾನು ಬರ್ತಾ ಇರಲಿಲ್ಲ. ಡಾಕ್ಟರ್ ರಂಗನಾಥ್ ಸಾವಿತ್ರಿ ತುಂಬಾ ಒಳ್ಳೆಯವರು. ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡಿದರೆ ಒಳ್ಳೆ ಅನುಭವ ಬರುತ್ತದೆ ಎಂದು ನಂಗೆ ನನ್ನ ಸೀನಿಯರ್ ಒಬ್ಬರು ಹೇಳಿದ್ರು. ಅದುಕ್ಕೆ ನಾನು ಇಲ್ಲಿ ಬಂದೆ ಎಂದಳು. ಶಿವಪ್ರಸಾದ್ ಹೌದಾ ಈಗ ಇದು ನನ್ನ ನರ್ಸಿಂಗ್ ಹೋಂ ಎಂದು ಗೊತ್ತಾದ ಮೇಲೆ ಇಲ್ಲಿ ನಿಂಗೆ ಕೆಲಸ ಮಾಡೋಕೆ ಇಷ್ಟ ಇಲ್ಲವಾ ….!? ರಂಜಿತಾ. ಹಾಗೆ ಅಂದುಕೋ ಬರ್ಲಾ ಎಂದು ಹಾಸ್ಯ ಚಟಾಕಿ ಹಾರಿಸಿ ಅಲ್ಲಿ ಒಂದು ಕ್ಷಣವೂ ನಿಲ್ಲದೆ ಬಾಗಿಲು ತೆರೆದು ಹೊರಹೋದ್ಲು. ರಂಜಿತಾ ಹೋದ ಮೇಲೆ ಶಿವಪ್ರಸಾದ್ ಗೆ ತಾನು ರಂಜಿತಾ ಪರಸ್ಪರ ಪ್ರೀತಿಸುತ್ತಿದ್ದು, ತನಗಿಂತ ಎರಡು ವರ್ಷ ಜ್ಯೂನಿಯರ್ ಆಗಿದ್ದರೂ ಅವಳ ಒಡನಾಟ ಹೇಗೆ ಕೂಡಿ ಬಂತು ಎಂದು ನೆನಪು ಮಾಡಿಕೊಳ್ಳ ತೊಡಗಿದ.

ಅಂದು ಕಾಲೇಜು ಫಂಕ್ಷನ್ ರಂಜಿತಾ ತುಂಬಾ ಚೆನ್ನಾಗಿ ಹಾಡುತ್ತಿದ್ದಳು. ಕಾಲೇಜಿನಲ್ಲಿ ಅವಳನ್ನು ಕಂಡರೆ ಎಲ್ಲರಿಗೂ ಪ್ರೀತಿ. ಅವಳೊಟ್ಟಿಗೆ ಒಮ್ಮೆ ಪಿಕ್‍ನಿಕ್ ಗೆ ಗೆಳತಿ ಗೆಳಯರೆಲ್ಲಾ ಜೊತೆಯಾಗಿ ಹೋಗಿದ್ದಾಗ ಅವಳು ಅಲ್ಲಿ ಹಾಡಿದ ಹಾಡುಗಳು ಅವನ ಕಿವಿಯನ್ನು ಇಂಪು ಮಾಡಿತ್ತಲ್ಲದೆ ಅವಳ ಮೇಲೆ ಅವನಿಗೆ ತಿಳಿಯದಂತೆ ಪ್ರೀತಿ ಹುಟ್ಟಿತು. ಅವಳನ್ನು ಕಂಡರೆ ಏನೋ ಆಕರ್ಷಣೆ ಅವಳ ಮನಮೋಹಕ ಚೆಲುವಿಗೆ ಮಾರು ಹೋಗಿದೆ ಅವಳ ಕೊಗೀಲೆಯ ಇಂಪಾದ ಗಾಯನ ಕೇಳಿದಾಗ ಅವನ ಅನಿಸಿಕೆಯನ್ನು ಅವಳಿಗೆ ತಿಳಿಸಿದಾಗ ಅವಳು ನಸುನಾಚಿ ನಿಂತಿದ್ದು ಇನ್ನೂ ನನ್ನ ಕಣ್ಣ ಮುಂದೆ ಕಟ್ಟಿದಂತೆ ಇದೆ. ಅಂದಿನಿಂದ ಅವಳನ್ನು ನೋಡುವುದು ಮಾತನಾಡಿಸುವುದು ನಡೆಯಿತು.

ರಂಜಿತಾ ತನಗೆ ಓದಿನಲ್ಲಿ ಯಾವುದೇ ಸಮಸ್ಯೆ ಇದ್ದರು ನನ್ನನ್ನೂ ಹುಡುಕಿಕೊಂಡು ಗೆಳತಿಯರ ಜೊತೆಗೆ ಬರತೊಡಗಿದಳು. ಕ್ರಮೇಣ ನಾನು ಅವಳ ಪ್ರೀತಿಯಲ್ಲಿ ಬಂಧಿತನಾದೆ. ಆದರೆ ರಂಜಿತಾ ಮಾತ್ರ ನನ್ನನ್ನು ಆ ದೃಷ್ಟಿಯಿಂದ ನೋಡದೆ ಸ್ನೇಹಿತನನ್ನಾಗಿ ನೋಡುತ್ತಿದ್ದಳು. ಒಂದು ಬಾರಿ ನಾನು ಅವಳಿಗೆ ನನ್ನ ಪ್ರೀತಿಯನ್ನು ನಿವೇದಿಸಿದಾಗ ಯಾವ ಮಾತು ಆಡದೆ ಜಾಗ ಖಾಲಿ ಮಾಡಿ ಹೋಗಿದ್ದಳು. ಒಂದು ತಿಂಗಳವರೆಗೆ ನನಗೆ ಮುಖ ತೋರಿಸದೆ ತಿರುಗುತ್ತಿದ್ದಳು. ರಂಜಿತಾಳ ಬಗ್ಗೆ ನನಗೆ ವೇದನೆ ಉಂಟು ಮಾಡಿದ್ದರಿಂದ ನಾನೇ ಅವಳಿರುವಲ್ಲಿಗೆ ಹೋಗಿ ಕ್ಷಮಾಪಣೆ ಕೇಳಿ ಬಂದೆ. ಮತ್ತೆ ರಂಜಿತಾ ಮೊದಲಿನ ಹಾಗೆ ನನ್ನ ಜೊತೆಗೆ ಬೆರೆಯ ತೊಡಗಿದಳು. ಆದರೆ ಮೊದಲಿನ ಸಲುಗೆ ಮಾತ್ರ ಅವಳಲ್ಲಿ ಇರಲಿಲ್ಲ.

ಒಂದು ದಿನ ನಾನು ಬೈಕ್‍ನಲ್ಲಿ ಹೋಗುವಾಗ ಅಪಘಾತವಾಯಿತು ಆಸ್ಪತ್ರೆಯಲ್ಲಿದ್ದೆ. ಆಗ ರಂಜಿತಾಳಿಗೆ ವಿಷಯ ತಿಳಿದೊಡನೆಯೇ ಓಡಿ ಬಂದು ನನ್ನ ಎದೆಯ ಮೇಲೆ ತಲೆ ಇಟ್ಟು ರೋಧಿಸತೊಡಗಿದಳು. ಅಂದೆ ನಾವಿಬ್ಬರು ಪ್ರೀತಿಯ ಬಂಧದಲ್ಲಿ ಬಂಧಿಯಾಗಿದ್ದದ್ದು. ಎಂಎಸ್ ಮುಗಿದ ನಂತರ ನಾನು ರಂಜಿತಾಳನ್ನು ಹುಡುಕದ ಸ್ಥಳವಿಲ್ಲ. ದೇವರು ಅವಳನ್ನು ನನಗಾಗಿಯೇ ಮತ್ತೆ ಇಲ್ಲಿಗೆ ಕಳುಹಿಸಿದ್ದಾನೆ. ಈ ಅವಕಾಶವಾದರೂ ನನ್ನ ಕೈಯಿಂದ ತಪ್ಪದೇ ಇರಲಿ. ನಾನು ಅವಳ ನೆನಪಲ್ಲಿಯೇ ಎಷ್ಟೊ ರಾತ್ರಿಗಳನ್ನು ಕಳೆದೆ. ಈಗ ಮತ್ತೆ ಆ ಮಧುರ ಘಳಿಗೆ ನನ್ನದಾಗಲು ಬಂದಿದಿಯೆನೋ ತಡ ಮಾಡುವುದು ಬೇಡ ಎಂದು ಶಿವಪ್ರಸಾದ್ ತನ್ನಷ್ಟಕ್ಕೆ ಹೇಳಿಕೊಂಡನು.

ಡಾ.ರಂಜಿತಾ ರೋಗಿಯ ಮಾಹಿತಿಯನ್ನು ಶಿವಪ್ರಸಾದ್ ನಿಂದ ಪಡೆದುಕೊಂಡು ಬಂದಿದ್ದು ಬಹಳ ಕಾಂಪ್ಲಿಕೇಷನ್ ಕೇಸ್ ಎನಿಸಿತು. ಇದರಲ್ಲಿ ಶಿವಪ್ರಸಾದ್ ಸಹಾಯವಿಲ್ಲದೇ ತಾನು ಆಪರೇಷನ್ ಮಾಡುವುದು ಕಷ್ಟ ಸಾಧ್ಯ. ಎಷ್ಟು ಬಾರಿ ಓದಿದರು ತಾನು ಒಬ್ಬಳೆ ಹ್ಯಾಂಡಲ್ ಮಾಡಲಾಗುವುದಿಲ್ಲ. ಮತ್ತೆ ಅವನ್ನನೇ ತನ್ನ ಸಹಾಯಕ್ಕಾಗಿ ಕೇಳಬೇಕು ಇದು ಅನಿವಾರ್ಯ ಎಂದುಕೊಂಡಳು. ಸುಶೀಲ ಅನ್ನುವ ಒಂಬತ್ತು ತಿಂಗಳ ಗರ್ಭಿಣಿ ಹೆಂಗಸು ಬಹಳ ಅಶಕ್ತಳು. ಅವಳಿಗೆ ಹಾರ್ಟ್ ಸಮಸ್ಯೆ ಬೇರೆ ಎಂದು ಯೋಚಿಸಿದಳು. ರಂಜಿತಾ ಆ ರೋಗಿಯ ಹತ್ತಿರ ಹೋಗಿ ಮತ್ತೊಮ್ಮೆ ಅವಳಿಗೆ ಸಮಾಧಾನ ಹೇಳಿ ನರ್ಸ್ ಮೇರಿಗೆ ಅವಳನ್ನು ಆಪರೇಷನ್ ಥಿಯೇಟರ್ ಗೆ ಕರೆದೊಯ್ಯಲು ಹೇಳಿ ಸೀದಾ ಮತ್ತೆ ಡಾಕ್ಟರ್ ಶಿವಪ್ರಸಾದ್ ಛೇಂಬರ್ ಗೆ ಹೋಗಿ ಅವನ ಸಹಾಯ ಕೋರಿದಳು. ಶಿವಪ್ರಸಾದ್ ಇದನ್ನು ನಿರೀಕ್ಷಿಸಿದವನಂತೆ ಆಗಲಿ ಈಗಲೇ ಬಂದೆ ನೀನು ಎಲ್ಲಾ ಸಿದ್ದತೆ ಮಾಡಿಕೊಂಡ ಮೇಲೆ ತಿಳಿಸು ಬರುತ್ತೇನೆ ಎಂದು ಅವಳ ಭುಜದ ಮೇಲೆ ಕೈಇಟ್ಟು ಹೇಳಿದ.

ರಂಜಿತಾ ಅವನನ್ನ ತೀಕ್ಷ್ಣ ದೃಷ್ಟಿಯಿಂದ ನೋಡಿದಳು. ಆಗ ಶಿವಪ್ರಸಾದ್ ಏನೇ ಹುಡುಗಿ ನನ್ನ ಅಂಗೆ ನೋಡ್ತಾ ಇದಿಯ. ನೀನು ನಂಗೆ ಗುರಾಯಿಸಿದ್ರು  ನೀನು ನನ್ನವಳೆ ! ದೇವರೇ ಬೆಸೆದ ಬೆಸುಗೆ ಎಂದು ನಗುತ್ತಾ ಅವಳ ಕೆನ್ನೆ ತಟ್ಟಿದ. ರಂಜಿತಾ ಒಂದು ಕ್ಷಣವು ಅಲ್ಲಿ ನಿಲ್ಲದೇ ಬಾಗಿಲು ದೂಡಿ ಹೊರ ಹೋದಳು. ಆಫರೇಷನ್ ಥಿಯೇಟರ್ ನಲ್ಲಿ ಎಸಿ ರೂಂ ನಲ್ಲಿ ಕುಳಿತರೂ ರಂಜಿತಳ ಮೈ ಬೆವೆತು ಹೋಗಿತ್ತು. ಶಿವಪ್ರಸಾದ್ ತನ್ನ ಬಾಳಲ್ಲಿ ಮತ್ತೆ ಹೀಗೆ ಬರುವೆನೆಂದು ಅವಳು ಕನಸಿನಲ್ಲೂ ಊಹಿಸಿರಲಿಲ್ಲ. ಮೇಲಾಗಿ ತನಗಾಗಿ ಮದುವೆನೇ ಮಾಡಿಕೊಳ್ಳದೇ ಇರುವುದನ್ನು ನೋಡಿ ಅವನ ಮೇಲೆ ಮತ್ತೆ ಅಭಿಮಾನ ಮೂಡತೊಡಗಿತು. ಅವನ ಬಗ್ಗೆ ತನಗೆ ಪ್ರೀತಿ ಇದ್ದರೂ ತಾನೇಕೆ ಹಾಗೆ ವರ್ತಿಸಿದೆ. ಅವನು ಮದುವೆಯನ್ನು ನಿರಾಕರಿಸಿದ್ದಕ್ಕಾಗಿಯೇ ….! ಅಥವಾ ತನ್ನ ಮಾತನ್ನು ಧಿಕ್ಕರಿಸಿದನೆಂದು, ತಾನು ಅವನನ್ನು ಬಿಟ್ಟು ಬೇರೆಯವರನ್ನು ಕನಸಿನಲ್ಲಿಯು ಬಯಸುವುದಿಲ್ಲ. ಮತ್ತೇಕೆ ನಾನು ಹೀಗಾಡುತ್ತಿರುವೆ? ನನ್ನ ಸ್ವಾಭಿಮಾನಕ್ಕೆ ಧಕ್ಕೆ ತಂದನೆಂದು ನನಗೆ ಅವನ ಪ್ರೀತಿಯನ್ನು ಒಪ್ಪಿಕೊಳ್ಳು ಅಹಂ ಅಡ್ಡಿಯಾಗುತ್ತಿದ್ದಿಯೇ ? ನಾನು ಈ ಕೆಲಸಕ್ಕೆ ರಾಜಿನಾಮೆ ಕೊಟ್ಟು ಇಲ್ಲಿಂದ ಹೊರಟುಬಿಡಲೇ ? ಎಂದು ಯೋಚಿಸುತ್ತಾ ಕುಳಿತಳು. 

ನರ್ಸ್ ಮೇರಿ ಬಾಗಿಲು ತೆಗೆದು ಒಳ ಬಂದು ಮೇಡಂ ಅಪರೇಷನ್ ಗೆ ಎಲ್ಲಾ ಸಿದ್ದತೆಯಾಗಿದೆ ತಾವಿನ್ನೂ ಬರಬಹುದು ಎಂದು ಆಹ್ವಾನಿಸಿದಾಗ ಮನಸ್ಸು ಮನಸ್ಸಿಲ್ಲದೆ ರಂಜಿತಾ ಸರಿ, ನಾನು ಈಗಲೇ ಬಂದೆ ನೀನು ನಡೆ ಎಂದು ಹೇಳಿ ಡಾಕ್ಟರ್ ಶಿವಪ್ರಸಾದ್ ಗೆ ರಿಂಗ್ ಮಾಡಿದ್ಲು. ಆ ಕಡೆಯಿಂದ ಶಿವಪ್ರಸಾದ್ ಹಲೋ ಎಂದಾಗ ಶಿವ ನಾನು ರಂಜಿತಾ ಅಪರೇಷನ್ ಗೆ ಎಲ್ಲಾ ರೆಡಿಯಾಗಿದೆ ಎಂದ್ಲು. ಅತ್ತಲಿನಿಂದ ಶಿವಪ್ರಸಾದ್ ಸರಿ ಸರಿ ಎನ್ನುತ್ತಾ ಆಪರೇಷನ್ ಥೀಯೆಟರ್ ಅತ್ತ ನಡೆದ. ಒಂದು ಗಂಟೆಯೊಳಗೆ ಅಪರೇಷನ್ ಯಶಸ್ವಿಯಾಯಿತು. ಮಗು ಮತ್ತು ತಾಯಿಯನ್ನು ನೋಡಿದ ರಂಜಿತಾಳಿಗೆ ಖುಷಿಯೋ ಖುಷಿ. ಡಾ. ಶಿವಪ್ರಸಾದ್ ಬಳಿ ಬಂದು ಕೈ ಕುಲುಕಿ ಧನ್ಯವಾದ ಹೇಳುವಾಗ ಡಾ. ಶಿವಪ್ರಸಾದ್ ನಗುತ್ತಾ, ಓಕೆ ಇಟಸ್ ಮೈ ಪ್ಲೆಸರ್ ನೀನು ಸದಾ ಹೀಗೆ ನಗುತಿರು ಎಂದಾಗ ರಂಜಿತಾ ನಸು ನಕ್ಕು ನಾಚಿ ತಲೆ ಕೆಳಗೆ ಮಾಡಿ ಅವನ ಕೈಲಿರುವ ತನ್ನ ಕೈ ಬಿಡಿಸಿಕೊಳ್ಳಲು ಹರಸಾಹಸ ಮಾಡುತ್ತಾಳೆ. ಆದರೆ ಡಾ ಶಿವಪ್ರಸಾದ್ ಅವಳ ಕೈ ಗಟ್ಟಿಯಾಗಿ ಹಿಡಿದು ಇನ್ನೂ ಈ ಕೈ ನಾನು ಬಿಡಲಾರೆ ಎಂದಾಗ ರಂಜಿತಾ ಕೈನ್ನ ಕೊಸರಿಕೊಂಡು ಹೋಗಿ ದೂರ ನಿಂತಳು.

ಮನೆಗೆ ಬಂದ ಡಾ ಶಿವಪ್ರಸಾದ್ ತಂದೆ ತಾಯಿಗೆ ತಾನು ಮದುವೆಯಾಗುವುದಾಗಿ ವಿಷಯ ಹೇಳಿದಾಗ ಆಶ್ಚರ್ಯವೇ ಆಶ್ಚರ್ಯ. ಇದೇನೂ ಈ ತರಹ ನಿರ್ಧಾರ ಎನ್ನುತ್ತಾ ಇಬ್ಬರು ಮುಖ ಮುಖ ನೋಡಿಕೊಂಡರು. ರಂಗನಾಥ್ ಮಗನಿಗೆ ಕಳೆದ ಒಂದೆರಡು ದಿನದ ಹಿಂದೆಯಷ್ಟೇ ಮದುವೆಯ ವಿಷಯ ಪ್ರಸ್ತಾಪ ಮಾಡಿದಾಗ ಶಿವಪ್ರಸಾದ್ ಬಿಲ್ ಖುಲ್ ಬೇಡ ಎಂದಿದ್ದ. ಈಗ ದಿಢೀರ್ ಮದುವೆ ನಿರ್ಧಾರ ಮಾಡಿರುವುದು ಕೇಳಿ ಏನಪ್ಪ ನಿನ್ ಸಮಾಚಾರ. ಮದುವೆ ಬೇಡ ಡ್ಯಾಡಿ ಅಂತಿದ್ದೆ ಎಂದ. ಅಪ್ಪನ ಮಾತು ಕೇಳುತ್ತಿದ್ದಂತೆ  ಶಿವಪ್ರಸಾದ್ ತಲೆಕೆರೆದುಕೊಂಡು ಹೌದಾಪ್ಪ ಮದುವೆ ಬೇಡ ಅಂದಿದ್ದೆ ಆದರೆ ನಂಗೆ ಇಷ್ಟವಾದ ಹುಡುಗಿ ಸಿಕ್ಕಿದಳು. ಅದಕ್ಕೆ ಮದುವೆ ಆಗುತ್ತೆನೆ ಎಂದ. ಅದ್ಯಾರಪ್ಪ ಹುಡುಗಿ ಎಂದು ನಸುನಗುತ್ತಾ ಕೇಳಿದ ರಂಗನಾಥ್. ಶಿವಪ್ರಸಾದ್ ರಂಜಿತಾಳ ವಿಷಯ ಪ್ರಸ್ತಾಪಿಸಿದ. ವಿಷ್ಯ ಕೇಳುತ್ತಿದ್ದಂತೆ ರಂಗನಾಥ್, ಸವಿತಾ ಇಬ್ಬರಿಗೆ ಶಾಕ್. ಸವಿತಾ ಮಗನಿಗೆ ಈಗಾ ವಿಷ್ಯ ಇಷ್ಟು ದಿವಸ ಆ ಹುಡುಗಿ ಎಲ್ಲಿದ್ದಳು ? ಅವಳ ತಂದೆ ತಾಯಿ ಎಲ್ಲಿದ್ದಾರೆ ಎಂದು ಕೂಲಂಕುಷವಾಗಿ ಪ್ರಶ್ನೆ ಮಾಡಿ ವಿಷಯ ತಿಳಿದುಕೊಂಡಳು.

ರಂಗನಾಥ್ ಮಗನಿಗೆ ನೀನ್ಯಾಕೆ  ಹಾಗೆ ಮಾಡಿದೆ. ಮದುವೆಯಾಗಿ ನಿನ್ನ ಡಿಗ್ರಿಯನ್ನು ಮುಂದುವರೆಸಬಹುದಿತ್ತು. ಏನೋ ದೇವರ ದಯೆಯಿಂದ ಅವಳು ನಮ್ಮ ನರ್ಸಿಂಗ್ ಹೋಂಗೆ ಬಂದಳು ಅಂತ ಮತ್ತೆ ನಿನ್ನ ಪ್ರೀತಿ ನಿನಗೆ ದೊರಕಿತು. ಇಲ್ಲದಿದ್ದರೆ ನೀನು ಭಗ್ನಪ್ರೇಮಿಯಾಗಿಯೇ ಇರುತ್ತಿದೆ. ನಾವು ಎಷ್ಟು ನೋವು ಅನುಭವಿಸುತ್ತಾ ಇದ್ದೀವಿ ಎಂದರು.

ಡಾಕ್ಟರ್ ಶಿವಪ್ರಸಾದ್ ಕ್ಷಮಿಸಿ ನನ್ನ ಎಂದನು. ಸಾವಿತ್ರಿ ಸರಿ ನಾಳೆ ನಾನು ಆ ಹುಡುಗಿನಾ ಮಾತನಾಡಿಸುವೆ ಆದಷ್ಟು ಬೇಗನೆ ನಿಮ್ಮಿಬ್ಬರ ಮದುವೆ ಮಾಡುವೆ ಎಂದಳು. ರಂಜಿತಾ ಆಸ್ಪತ್ರೆಗೆ ಕಾಲಿಡುವುದೇ ತಡ ಆಸ್ಪತ್ರೆಯ ಹೆಡ್ ನರ್ಸ್ ಮೇರಿ ಬಂದು ರಂಗನಾಥ್ ಸರ್ ನಿಮ್ಮನ್ನು ಕರೆಯುತ್ತಿದ್ದಾರೆ ಬರಬೇಕು ಎಂದಳು. ರಂಜಿತಾಳಿಗೆ ಗಾಬರಿ ಏನಪ್ಪ ಬಾಸ್ ಕರೆಯುತ್ತಾ ಇದ್ದಾರೆ ಅಂದ್ರೆ ಏನ್ ಕಾದಿದೆ ಎಂದುಕೊಂಡು ಅಳುಕುತ್ತಲೆ ರಂಗನಾಥ್ ಛೇಂಬರ್ ಗೆ ಹೋದಳು. ಅಲ್ಲಿ ಸವಿತಾ ಶಿವಪ್ರಸಾದ್ ಇದ್ದದ್ದು ನೋಡಿ ಮರಳಿ ಬರಬೇಕೆಂದವಳಿಗೆ ರಂಗನಾಥ ಒಳಗೆ ಬರಲು ಸನ್ನೆ ಮಾಡಿದರು. ಎಲ್ಲರಿಗೂ ನಮಸ್ಕಾರ ಮಾಡಿದಳು. ಸಾವಿತ್ರಿ ಕುಳಿತುಕೊಳ್ಳುವಂತೆ ಕುರ್ಚಿ ತೋರಿಸುತ್ತಿದ್ದಂತೆ ರಂಜಿತಾ ಕುಳಿತಳು.

ಶಿವಪ್ರಸಾದ್ ರಂಜಿತಾಳನ್ನು ಸಾವಿತ್ರಿಗೆ ತೋರಿಸುತ್ತಾ ಇವರೆ ಅಮ್ಮ ರಂಜಿತಾ ನಾವಿಬ್ಬರು ಬಂದೆ ಕಾಲೇಜಿನಲ್ಲಿ ಓದಿದ್ದು ಎಂದ. ರಂಗನಾಥ್ ಮಗನ ಕಡೆ ಕೈ ಸನ್ನೆ ಮಾಡಿ ಸುಮ್ಮನಿರುವಂತೆ ಹೇಳಿ‌, ರಂಜಿತಳತ್ತ ಮುಖ ಮಾಡಿ ನೋಡಿ ಡಾಕ್ಟರ್ ರಂಜಿತಾ ಅವರೇ ನನಗೆ ನನ್ನ ಮಗ ಡಾಕ್ಟರ್ ಶಿವಪ್ರಸಾದ್ ನಿಮ್ಮ ಬಗ್ಗೆ ಎಲ್ಲಾ ವಿಷ್ಯ ತಿಳಿಸಿದ್ದಾನೆ. ನಿಮ್ಮಿಬ್ಬರನ್ನು ಮದುಮಕ್ಕಳನ್ನಾಗಿ ನೋಡಲು ನಮಗೆ ತುಂಬಾ ಆಸೆ ಕಣಮ್ಮ. ದಯವಿಟ್ಟು ನೀನು ದೊಡ್ಡ ಮನಸ್ಸು ಮಾಡಿ ಈ ಮದುವೆಗೆ ಒಪ್ಪಿಕೊಳ್ಳಮ್ಮ ಎಂದಾಗ ರಂಜಿತಾ ರಂಗನಾಥ್ ಮಾತಿಗೆ ಮರು ಉತ್ತರ ಕೊಡದೆ ತನ್ನ ಚೇರ್ ದಿಂದ ಎದ್ದು ಬಂದು ಸವಿತಾ ಮತ್ತು ರಂಗನಾಥ್ ಕಾಲಿಗೆ ನಮಸ್ಕಾರ ಮಾಡುತ್ತಾಳೆ. ಶಿವಪ್ರಸಾದ್‍ಗೆ ನಮಸ್ಕಾರ ಮಾಡದೆ ಹೋದಾಗ ನಗುತ್ತಾ ನನಗೆ ಮಾಡೋದಿಲ್ಲವಾ !? ಎಂದು ಛೇಡಿಸಿದ. ರಂಜಿತಾ ಹತ್ತಿರ ಬಂದು ಮೆಲ್ಲಗೆ ಯಾರಿಗೂ ಕಾಣದೇ ಹಾಗೆ ಕಿವಿಹಿಂಡಿ ಸರಿನಾ ಎಂದು ಕಿರುನಗೆ ಬೀರಿದಳು. ಶಿವಪ್ರಸಾದ್ ಸಣ್ಣಧ್ವನಿಯಲ್ಲೇ ಅಮ್ಮಾ ಎನ್ನುವುದನ್ನು ಕಂಡು ಸವಿತಾ ಏನಾಯಿತಪ್ಪ ಎಚಿದೊಡನೆ ಶಿವಪ್ರಸಾದ್ ಏನಿಲ್ಲ ಅಮ್ಮ ಎಂದು ಹುಸಿನಗೆ ಬೀರಿದ. ರಂಗನಾಥ್ ಏ ಅವನ್ನೇನು ಕೇಳೋದು ನೀನು ನನಗೆ ಮಾಡಿದ ಕೆಲಸವನ್ನೇ ಈಗ ನಿನ್ನ ಸೊಸೆ ಅವನಿಗೆ ಮಾಡಿದ್ಲು ಎಂದೊಡನೆ ರಂಜಿತಾ ನಾಚಿ ತಲೆ ಕೆಳಗೆ ಮಾಡಿದಳು.

ರಂಗನಾಥ್ ರಂಜಿತಾಳಿಗೆ ನಿಮ್ಮ ತಂದೆ ತಾಯಿಯನ್ನು ನೋಡಬೇಕು ಎಂದಾಗ ನಾನು ಮನೆಗೆ ಹೋದ ಮೇಲೆ ನನ್ನ ತಂದೆ ತಾಯಿ ಜೊತೆಗೆ ಮಾತನಾಡಿ ಎಲ್ಲ ವಿಷ್ಯ ತಿಳಿಸುತ್ತೇನೆ ಸರ್ ಒಂದು ದಿನ ನಿಮ್ಮ ಮನೆಗೆ ಅವರನ್ನ ಕರೆದುಕೊಂಡು ಬರುವೆ ಎಂದಳು. ರಂಗನಾಥ್ ಹೌದಾ  ಹಾಗೆ ಮಾಡಮ್ಮ ಆದಷ್ಟು ಬೇಗ ನಿಮ್ಮ ಮದುವೆಯನ್ನು ನಾವು ನೋಡಬೇಕಾಗಿದೆ, ತಡ ಮಾಡಬೇಡ ಎಂದು ಹೇಳ್ತಾ ಮಾತು ಮುಂದುವರಿಸಿ ಈಗ ಎಲ್ಲವೂ ನಿಮ್ಮ ನಿಮ್ಮ ಕೆಲಸ ಮುಗಿಸಿಕೊಂಡು ಬನ್ನಿ ಮಧ್ಯಾಹ್ನ  ನಾವೆಲ್ಲರೂ ಲಂಚ್ ಹೊರಗಡೆ ಮಾಡೋಣ ಎಂದಾಗ ಶಿವಪ್ರಸಾದ್ ಸರಿ ಹಾಗಾದರೆ ನನಗೆ ಒಂದು ಅರ್ಜೆಂಟ್ ಆಪರೇಷನ್ ಇದೆ ಬರ್ತಿನಿ ಎಂದು ಹೊರಹೋದ.

ರಂಜಿತಾಳಿಗೆ ಸವಿತಾ ಮತ್ತು ರಂಗನಾಥ್ ಮಧ್ಯೆ ಹಾಗೇಗೋ ಮುಜುಗರವೆನಿಸಿ ಹೊರಡಲು ಹೋಗುತ್ತಾಳೆ.  ಆಗ ರಂಗನಾಥ್ ನಿನ್ನದು ಅವನ ಹಾಗೆ ಅರ್ಜೆಂಟ್ ಹಾ ?? ಎಂದು ಕೇಳಿದಾಗ  ರೌಂಡ್ಸ್ ಮುಗಿದ ಮೇಲೆ ಬಂದು ಹೋಗುವೆ ಎಂದು ಹೋಗುತ್ತಾಳೆ. ರಂಜಿತಾ ಹೋದ ಮೇಲೆ ಪತಿಪತ್ನಿ ಒಳ್ಳೆಯ ಹುಡುಗಿಯನ್ನು ಶಿವಪ್ರಸಾದ್ ಆರಿಸಿದ್ದಾನೆ ಎಂದು ಸಂತೋಷಪಟ್ಟರು

ರಂಜಿತಾ ರೌಂಡ್ಸ್ ಗೆ ಹೋದಾಗ ಎಲ್ಲಾ ರೋಗಿಗಳನ್ನು ಪ್ರೀತಿಯಿಂದ ಅಕ್ಕರೆಯಿಂದ ಮಾತನಾಡಿಸಿ ಅವರ ನೋವುಗಳನ್ನು ಮಾತಿನಿಂದಲೇ ಅರ್ಧ ಗುಣಮುಖವಾಗುವ ಹಾಗೆ ಮಾಡುವ ಜಾಣ್ಮೆ ಅವಳದು. ಒಬ್ಬ ಮಹಿಳೆಯ ಮಗುವಿಗೆ ಜ್ವರ. ಮಗು ಎದೆ ಹಾಲು ಕುಡಿಯದೆ ತಾಯಿಯ ಎದೆ ಭಾರವಾಗಿ ನೋವು ಅನುಭವಿಸುವುದನ್ನು ಕೇಳಿ ರಂಜಿತಾ ತಾನೇ ಮುಂದೆ ನಿಂತು ಹಾಲು ಹೇಗೆ ತೆಗೆದು ಹೊರಗೆ ಹಾಕಬೇಕು ಎಂದು ಹೇಳುತ್ತಾಳೆ ಮತ್ತು ಅವಳಿಗೆ ಸಹಾಯ ಮಾಡುತ್ತಾಳೆ. ನೋವಿನಿಂದ ಬಳಲುತ್ತಿದ್ದ ಯುವತಿ ರಂಜಿತಾಳ ಕೈಹಿಡಿದು ಡಾಕ್ಟರ್ ನೀವು ದೇವತೆಯಮ್ಮ ಎಂದು ಕೈ ಮುಗಿದಾಗ ಮೃದುವಾಗಿ ಅವಳ ತಲೆ ಸವರಿ ಮುಂದೆ ಹೋಗುತ್ತಾಳೆ.

ಅದು ಜನರಲ್ ವಾರ್ಡ್ ಆಗಿರುವುದರಿಂದ ಅಲ್ಲಿ ಇರುವ ಎಲ್ಲಾ ಸ್ತ್ರೀಯರ ಒಂದೊಂದು ಗೋಳು ರಂಜಿತಾ ಡಾಕ್ಟರ್ ನನಗೆ ಈ ನೋವು ತಡಿಯಲಾಗುತ್ತಿಲ್ಲ ಅಸಾಧ್ಯ ನೋವು ಎಂದು ಅಳುವಾಗ ರಂಜಿತಾ ಅಲ್ಲಮ್ಮಾ ನಿಮ್ಮದು ಗರ್ಭಾಶಯದ ಅಪರೇಷನ್ ಆಗಿದೆ ನೋವು ಇರುವುದು ಸಹಜ ತಾನೇ ಹೇಳಿ. ಕೈಗೆ ಗಾಯವಾದರೆ ಎಷ್ಟು ನೋವು ಆಗುತ್ತದೆ. ಇದು ಅಪರೇಷನ್ ನೋವು ಕಡಿಮೆಯಾಗುತ್ತೆ ಸ್ವಲ್ಪ ಸಹಿಸಿಕೊಳ್ಳಿ ಇಂಜೆಕ್ಷನ್ ಮಾತ್ರೆ ಎಲ್ಲಾ ತಗೊಳಿ ಮೂರು ದಿನಕ್ಕೆ ಕಡಿಮೆ ಆಗುತ್ತೆ. ಹೇಮಲತಾ ಭಾರತಿ ಡಾಕ್ಟರ್ ಬಂದರೆ ಏನೂ ಹೇಳುವುದಿಲ್ಲ ರಂಜಿತಾ ಸವಿತಾ ಡಾಕ್ಟರ್ ಬಂದರೆ ಸಾಕು ಇವರ ಸಮಸ್ಯೆಯೇ ಸಮಸ್ಯೆಗಳು.

ರಂಜಿತಾ ಅಂದರೆ ಎಲ್ಲರಿಗೂ ಅದೇನೋ ಆತ್ಮೀಯತೆ. ಈ ನರ್ಸಿಂಗ್ ಹೋಂ ಬಂದು ಇನ್ನೂ ಒಂದು ತಿಂಗಳು ಕಳೆದಿಲ್ಲ ಆಗಲೇ ಎಲ್ಲರ ಪ್ರೀತಿಗೆ ಪಾತ್ರಳಾಗಿದ್ದಾಳೆ. ರೌಂಡ್ ಮುಗಿಸಿ ತನ್ನ ರೂಂಗೆ ಬಂದ ರಂಜಿತಾ ಯಾವುದೋ ಕೇಸ್ ಪೇಪರ್ ನೋಡುವಾಗ ಡಾಕ್ಟರ್ ಶಿವಪ್ರಸಾದ್ ಒಳಗೆ ಬರುತ್ತಾನೆ ರೌಂಡ್ಸ್ ಮುಗಿತಾ !!? ಎನ್ನುತ್ತಾ. ಕುಳಿತುಕೊಳ್ಳುವಂತೆ ಹೇಳುತ್ತಾಳೆ ರಂಜಿತಾ. ನಿಮ್ಮ ಆಪರೇಷನ್ ಕೆಲಸ ಮುಗಿತಾ !? ಎನ್ನುತ್ತಾಳೆ. ಮುಂದುವರೆದು ಯಾವ ಅಪರೇಷನ್ ಏನಾಗಿತ್ತು ಎಂದಾಗ ಶಿವಪ್ರಸಾದ್ ಒಬ್ಬರು ಅಪಘಾತವಾಗಿ ತಲೆಗೆ ತೀವ್ರತರವಾದ ಪೆಟ್ಟು ಬಿದ್ದು ಸದ್ಯ ಸಾವಿನಿಂದ ತಪ್ಪಿಸಿಕೊಂಡಿದ್ದಾನೆ. ಈಗ ಇನ್ನೂ ಸೆಕೆಂಡ್ ಇಯರ್ ಇಂಜಿನಿಯರಿಂಗ್ ಏನೋ ಓದ್ತಾ ಇದೆ. ಅಪರೇಷನ್ ಮಾಡಿ ಬಂದೆ ಪೆಷೇಂಟ್  ಓಕೆ ಎನ್ನುತ್ತಾ ರೋಗಿಯ ಬಗ್ಗೆ ಕೇಳುತ್ತಾ ಕೂರುತ್ತಿಯಾ ಅಥವಾ ಏನಾದ್ರು ಎನ್ನುತ್ತಾ ಇರುವಾಗ ರಂಜಿತಾ ಪ್ಲಾಸ್ಕ್ ನಲ್ಲಿ ಇದ್ದ ಕಾಫಿ ತೆಗೆದು ಕೊಡುತ್ತಾಳೆ. ಆಗ ಶಿವಪ್ರಸಾದ್ ಕಾಫಿ ಇಲ್ಲಿಯೇ ಸಿಗುತ್ತಲ್ಲ ಮನೆಯಿಂದ ಯಾಕೆ ತರುತ್ತಿಯಾ ರಂಜಿತಾ. ಹೌದು ನನಗೆ ಇವತ್ತೆ ಗೊತ್ತಾಗಿದ್ದು ನರ್ಸ್ ಮೇರಿ ಹೇಳಿದ್ದಳು ಎನ್ನುತ್ತಾಳೆ. ರಂಜಿತಾ ಪ್ಲಾಸ್ಕ್ ತೆಗೆದು ಕಾಫಿಯನ್ನು ಶಿವಪ್ರಸಾದ್ ಗೆ ಕೊಡುತ್ತಾಳೆ. ಶಿವಪ್ರಸಾದ್ ರಂಜಿತಾಳನ್ನು ನೋಡುತ್ತಾ ಮೂರು ವರ್ಷದ ಹಿಂದೆ ಹೇಗಿರುವಿಯೋ ಹಾಗೆ ಇರುವೆ ಸ್ವಲ್ಪ ಬಣ್ಣ ಕಪ್ಪಾಗಿದೆ. ನಿನ್ನ ನೆನಪಿನಿಂದ ಬಣ್ಣ ಹೀಗಾಗಿರಬೇಕು ಎನ್ನುತ್ತಾಳೆ. ಆಗ ರಂಜಿತಾ ನೀವು ಹೇಗೆ ಭಾವಿಸುವಿರೋ ಹಾಗೇ ನಾನು ಯಾರನ್ನೂ ಜ್ಞಾಪಿಸಿಕೊಳ್ಳದೆ ಹಾಯಾಗಿದ್ದೆ.

‍ಲೇಖಕರು Avadhi

December 28, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಂಘರ್ಷ-ಸಂಭ್ರಮ

ಸಂಘರ್ಷ-ಸಂಭ್ರಮ

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ...

ಎದೆಬಿಲ್ಲೆಯೂ ಮಾತುಕತೆಯೂ…

ಎದೆಬಿಲ್ಲೆಯೂ ಮಾತುಕತೆಯೂ…

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್...

‘ಲೇಖ’ಕಿ ‘ಲೋಕ’ದ ಅನಾವರಣ

‘ಲೇಖ’ಕಿ ‘ಲೋಕ’ದ ಅನಾವರಣ

ಗಿರಿಜಾ ಶಾಸ್ತ್ರಿ ಕರ್ನಾಟಕ ಲೇಖಕಿಯರ ಸಂಘವು ಕೆಲವು ವರ್ಷಗಳಿಂದ ಲೇಖಕಿಯರು ತಮ್ಮ ಜೀವನಾನುಭವಗಳನ್ನು ಹಂಚಿಕೊಳ್ಳುವ 'ಲೇಖಕಿಯರ ಆತ್ಮ ಕಥೆಗಳ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This