ಬಂಡೆ ಮತ್ತು ಚಿಟ್ಟೆ

ಜಿ ಎನ್ ಮೋಹನ್

ಅದೇ ಉರಿಬಿಸಿಲು, ಕೆಂಪುಹುಡಿ, ಅದೇ ಮರದ ನೆರಳು, ಬೀಸಿ ಬರುವ ಅದೇ ತೆಂಕಣಗಾಳಿ, ಮಾವಿನೆಳೆ ಚಿಗುರಿನಲ್ಲಿ ಚಿಮ್ಮುವ ಅದೇ ಹಾಡು. ಕವಚವ ತೊಟ್ಟು ಖಡ್ಗವನ್ನು ಟೊಂಕದಲ್ಲಿ ಬಿಗಿದಿಟ್ಟು ಕುದುರೆಗೆ ಥಡಿ ಹಾಕಿ ಮತ್ತೆ ಪಯಣಕ್ಕೆ ಸಿದ್ಧನಾದ ಆತನನ್ನು ಹೆಂಗಸು ಕೇಳುವ ಅದೇ ಪ್ರಶ್ನೆ-ekkundi3.jpg

ಮರೆತು ಬಿಟ್ಟೆನು ನಿಮ್ಮ ಹೆಸರು ಕೇಳಲು. ನೀವು
ನಡೆದ ದಾರಿಗೆ ಇರಲಿ ಶುಭದ ನೆರಳು
ಬಿರಿದ ಮಲ್ಲಿಗೆ ಕಂಡು, ಕೋಗಿಲೆಯ ದನಿ ಕೇಳಿ
ತುಂಬಿ ಬಂದಿತ್ತೇಕೆ ಕಣ್ಣು, ಕೊರಳು?

ಉತ್ತರ ಪಂಪ ಎಂದಾದರೂ ಆಗಬಹುದು. ಇಲ್ಲ ಎಕ್ಕುಂಡಿ ಎಂದಿದ್ದರೂ ಯಾರಿಗೂ ಆಶ್ಚರ್ಯವಾಗುತ್ತಿರಲಿಲ್ಲ. ಎದೆಯಲ್ಲಿ ಕಾವ್ಯ ಕೈಯಲ್ಲಿ ಖಡ್ಗ ಹಿಡಿದ ಪಂಪನ ಹಾಗೆಯೇ ಎಕ್ಕುಂಡಿ ಕೂಡಾ. ಅದಕ್ಕೇ ಅವರು ಹೇಳಿದ್ದು- “ಯೋಧ ನಡೆಯುವ ದಾರಿ ಕವಿಯ ದಾರಿಯು ಕೂಡಾ…”

ಕವಿ ಮತ್ತು ಕಲಿ ಎರಡರ ಬೆಸುಗೆಯಾದ ಪಂಪನಿಗೆ ಇಡೀ ವಿಶ್ವದಲ್ಲಿ ಅನೇಕ ಬಂಧುಗಳಿದ್ದಾರೆ. ದಕ್ಷಿಣ ಆಫ಼್ರಿಕಾದಲ್ಲಿ ಬೋಥಾರವರ ವರ್ಣದ್ವೇಷಿ ಸರ್ಕಾರ ಕಪ್ಪು ಜನರ ಪರವಾಗಿ ಹೋರಾಟ ನಡೆಸಿದ ಕವಿ ಬೆಂಜಮಿನ್ ಮೊಲಾಯಿಸ್ ಅವರನ್ನು ಗಲ್ಲಿಗೆ ಹಾಕಿದಾಗ ನನಗೆ ನೆನಪಾದದ್ದು ಎಕ್ಕುಂಡಿಯವರ ಈ “ಯೋಧ ಮತ್ತು ಹೆಂಗಸು”. ಬೆಂಜಮಿನ್ ಮೊಲಾಯಿಸ್ ಸತ್ತಾಗ ಪಂಪನ ಸೈನ್ಯದಲ್ಲಿ ಒಬ್ಬರು ಕಡಿಮೆಯಾದರಲ್ಲಾ ಎನಿಸಿತ್ತು. ಪಂಪ ಬಿಕ್ಕುತ್ತಾನೆ ಎಂದು ಎನಿಸಿತ್ತು. ಎಕ್ಕುಂಡಿಯವರು ನಿಧನರಾಗಿದ್ದಾರೆ. ಪಂಪ ಈಗ ಮತ್ತೊಮ್ಮೆ ಬಿಕ್ಕುತ್ತಿದ್ದಾನೆ.

ತಾಯಿ ಅಕಸ್ಮಾತ್ ಹಾಡಿದ ಒಂದು ಹಾಡಿನಿಂದ ಇಡೀ ಜಗತ್ತನ್ನು ನೋಡುವ ಒಂದು ಕಿಟಕಿಯನ್ನು ರೂಪಿಸಿಕೊಂಡ ಎಕ್ಕುಂಡಿ, ಕಡಲ ತೀರದ ದಂಡೆಗಳಲ್ಲಿ ಬೆಂಕಿ ಹಾಕಿ ಗುಮಟೆ ಹಿಡಿದು ಗಂಟೆಗಟ್ಟಲೆ ಕುಣಿಯುತ್ತಾ ಎದೆಯಿಂದ ಹಾಡುಗಳ ಹೊಳೆ ಹರಿಸುತ್ತಿದ್ದ ಹಾಲಕ್ಕಿ ಒಕ್ಕಲಿಗರ ಬದುಕಿನಿಂದಲೂ ರೆಕ್ಕೆಗಳನ್ನು ಪಡೆದರು. ಬದುಕಿನ ಬಹುಭಾಗ ಕೆಂಡದ ಮೇಲೆ ಕಾಲಿಟ್ಟು ನಡೆದ ಸುಬ್ಬಣ್ಣ ರಂಗನಾಥ ಎಕ್ಕುಂಡಿ ತಾವು ನಡೆದು ಬಂದ ಹಾದಿಗೆ ಕಾವ್ಯದ ಗರಿ ತೊಡಿಸಿದರು. ಕಾವ್ಯ ಹೇಗಿರಬೇಕು? ಎಂಬ ಪ್ರಶ್ನೆಗೆ ಎಕ್ಕುಂಡಿಯವರ ಬಳಿ ಸ್ಪಷ್ಟ ಉತ್ತರವಿತ್ತು- ಕವಿಯ ಹಾಗೆ, ಕಲಿಯ ಹಾಗೆ.

“ಕಾವ್ಯವಾಗಲಿ, ಸಾಹಿತ್ಯವಾಗಲಿ ಸಜೀವವಾಗಿರಬೇಕಾದರೆ ಅದರ ಬೇರುಗಳು ಜನತೆಯ ಬಾಳಿನಲ್ಲಿರಬೇಕೆಂದು ಕಾಡ್ವೆಲ್ ತನ್ನ “illution and reality“ಯಲ್ಲಿ ಹೇಳಿದ್ದಾನೆ. ಈ ಮಾತಿಗೆ ಇತಿಹಾಸ ಸಾಕ್ಷಿಯಾಗಿ ನಿಂತಿದೆ. ಎಂಥ ಅದ್ಭುತವಾದ ಸಂಪತ್ತಿದ್ದರೂ, ಅಲಂಕಾರಗಳಿದ್ದರೂ ನಮ್ಮ “ಮಹಾಕವಿ”ಗಳನ್ನು ನಾವು ನಮ್ಮ ಜನತೆಯ “ಗುಡಿಸಲು”ಗಳಲ್ಲಿ ಕೇಳುತ್ತಿಲ್ಲ. ಒಪ್ಪಿದರೂ ಸರಿ, ಒಪ್ಪದಿದ್ದರೂ ಸರಿ ಇಂದಿನದು ಜನಯುಗ. ಕವಿ ಜನವಾಣಿಯಾಗದಿದ್ದರೆ ಅವನು ಏನು ಬರೆದರೂ ಅಷ್ಟೆ, ಎಷ್ಟು ಬರೆದರೂ ಅಷ್ಟೆ. ಹೊಸಗನ್ನಡದಲ್ಲಿ ಇಂಥ ಕಾವ್ಯ ಈಚೆ ಬರುತ್ತಿರುವುದು ನಮ್ಮ ಉಜ್ವಲ ಭವಿಷ್ಯದ ಚಿಹ್ನೆಯಾಗಿದೆ. ಹೊಸಗನ್ನಡ ಕಾವ್ಯದ ಮೂರು ತಲೆಮಾರುಗಳಲ್ಲಿ ಕಾಣದ ಹೊಸದೃಷ್ಟಿಯೊಂದು ಈಗ ಒಡಮೂಡುತ್ತಿದೆ. “ಕಲೆಗಾಗಿ ಕಲೆ” “ಕಾವ್ಯಕ್ಕಾಗಿ ಕಾವ್ಯ” ಎಂದು ನಂಬಿದವರು ತಮ್ಮ ಮನಸ್ಸನ್ನು ನಿರ್ಧಾರವನ್ನು ಬದಲಿಸುತ್ತಿದ್ದಾರೆ. ಜನ ಓದಬೇಕೆಂದಲ್ಲವೆ ಬರೆಯುವುದು? ತಮ್ಮ ಆಸೆ, ನಿರಾಸೆ, ಸುಖದುಃಖಗಳು ಇಲ್ಲದ ಕಾವ್ಯ ಓದಿ ಜನ ಅಂಥದ್ದನ್ನು ಓದಬೇಕೆಂದು ಮತ್ತೊಮ್ಮೆ ಆಸೆಪಟ್ಟಾರೆ?

“ಈ “ಜನಯುಗ” ಕನ್ನಡದಲ್ಲಿ ಈಚೆಗೆ ಆರಂಭವಾಗಿದೆ. ದಿವಂಗತ ಶಿವೇಶ್ವರ ದೊಡ್ಡಮನಿಯಿಂದ ಆರಂಭವಾದ ಯುಗವಿದು. ಕಾವ್ಯವನ್ನು ಜನಜೀವನದ ಹೋರಾಟಕ್ಕೆ ಮೀಸಲಿಟ್ಟು ಅವರ ಬದುಕನ್ನು ಬೆಳಗುವುದು ಇದರ ಗುರಿ. ಇಂಥ ಕಾವ್ಯವನ್ನು “ಎಡ ಕಾವ್ಯ, ಕೆಂಪು ಕಾವ್ಯ” ಎಂದು ಕರೆಯುತ್ತಾರೆ. ಕರೆದರೂ ಸರಿಯೆ. ಈ ಕಾವ್ಯ ಕಾವ್ಯದ ಇತಿಹಾಸದಲ್ಲಿಯೆ ಸ್ಪಷ್ಟವಾಗಿ ಧೈರ್ಯವಾಗಿ ತಿಳಿದುಕೊಂಡಿದೆ. ಹಾಗೆ ಅದು ಸ್ಪಷ್ಟವಾಗಿ ಹೇಳಿದೆ. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ಅದು ಕಮ್ಯುನಿಸ್ಟ್ ಕಾವ್ಯ. ನಮ್ಮ ಪತ್ರಿಕೆಗಳು ಕೂಗುವಂತೆ- “ದರೋಡೆಗಾರರ ಕಾವ್ಯ”. ಇಂಥ ಕಾವ್ಯ, ಇಂಥ ಬಾಳು, ಒಪ್ಪಿದರೂ ಸರಿ, ಒಪ್ಪದಿದ್ದರೂ ಸರಿ, ಬರುವುದನ್ನು ಯಾರೂ ತಡೆಯಲಾರರು. “My own prejudice is in favour of poets whose worlds are not too esoteric. I would have a poet, able-bodied, fond of talking, a reader of newspapers, capable of pity and laughter, informed in economics, appreciative of women, involved in personal relationships, actively interested in politics, susceptible to physical impressions“. (-Louis MacNiece) ಹೀಗಿರಬೇಕು ನಮ್ಮ ಆಧುನಿಕ ಕವಿ” ಎಂದಿದ್ದರು ಎಕ್ಕುಂಡಿ.

ಹೀಗಾಗಿಯೇ ಎಕ್ಕುಂಡಿಯವರಿಗೆ ಕವಿ ದಂತಗೋಪುರದ ವ್ಯಕ್ತಿಯಲ್ಲ. ಎದೆಯಲ್ಲಿ ಕಾವ್ಯ ಕೈಯಲ್ಲಿ ಖಡ್ಗ ಹಿಡಿದ ಪಂಪನ ಬಂಧು.

ಎಕ್ಕುಂಡಿಯವರನ್ನು ಹಿರಿಯ ಕವಿ ಪು.ತಿ.ನ. ಅವರು ಸರಿಯಾಗಿಯೇ ಬಣ್ಣಿಸಿದ್ದಾರೆ. ಪು.ತಿ.ನ. ಅವರ ಪ್ರಕಾರ ಎಕ್ಕುಂಡಿ “ಸಹಜ ಕವಿ” ಈ ಕಾರಣಕ್ಕಾಗಿಯೇ-

ನಂ.೪, ಆಂಡರ್ಸನ್ ಬೀದಿಯಲ್ಲಿ ಮನೆಯ ತೊಟ್ಟಿಲು ಹಾಸಿಗೆ ದುಪ್ಪಟಿ ಲಾಲಿಯ ಹಾಡುಗಳು ಹರಾಜಾಗುತ್ತಿರುವುದನ್ನು ನೋಡುತ್ತಾ ನಿಂತ ಕಾರ್ಲ್ ಮಾರ್ಕ್ಸ್, ಬಿಕ್ಕುತ್ತಿರುವ ಹೆಂಡತಿ ಹೆಲೆನ್, ಬಂಡವಾಳ ಬರೆಯುವುದರಲ್ಲಿ ನಿರತನಾಗಿರುವ ಶ್ರಮಜೀವಿ ಬಂಧುವಿನ ಮನೆಗೆ ಬೆಳಕಾದ ಎಂಗೆಲ್ಸ್, ಹೆರಿಗೆ ಆಸ್ಪತ್ರೆಯ ಪೌಡರ್ – ಪಿಯರ್ಸ್ ಪರಿಮಳದ ಹೊದಿಕೆಯಿಂದ ದೂರವಾಗಿ ಎರಡು ಲಾರಿಗಳ ಕೆಳಗೆ ಸೀರೆ ತುಂಡನ್ನು ಅಪ್ಪಿ ಮಲಗಿರುವ ಚಿನ್ನಮ್ಮನ ಕಂದ, ಎಸೆದ ಬ್ರೆಡ್ಡಿನ ತುಂಡು ಆಯಲು ತೊಟ್ಟಿಯೊಳಗೆ ಇಳಿಯುವ ದುಡಿವ ಕಸುವಿರದ ಹಸಿದ ಕೈಗಳು, ಉಳ್ಳವರ ಎದೆಯಿಂದ ಬಂದಂಥ ಬೆಣಚು ಕಲ್ಲುಗಳ ಮೇಲೆ ಗಾಯಗೊಂಡ ಕೂಲಿಕಾರರು, ಕೆಲಸವೇ ಶಿವಧ್ಯಾನವಾದ ದಾಸಿಮಯ್ಯ, ಹಾಲೆಂದೇ ಹಿಟ್ಟುನೀರು ಕುಡಿದ ಅಶ್ವತ್ಥಾಮ, ಶ್ರೀಧರ ನಾಮದ ಖಜಾನೆ ತೆರೆಯುವ ಬೀಗದ ಕೈ ಹಿಡಿದು ಹಣದ ಖಜಾನೆಯಿಂದ ಹೊರಬಿದ್ದ ಪುರಂದರದಾಸ, ವಿಷದ ಬಟ್ಟಲಿಗೆ ಬಲಿಯಾದ ಸಾಕ್ರೆಟಿಸ್, ಎರಡು ದಂಡೆಯ ಬೆಸೆದು ದೂರವಿದ್ದವರನ್ನು ಹತ್ತಿರಕ್ಕೆ ತಂದ ಮಧ್ವಮುನಿ, ಏಸುಕ್ರಿಸ್ತ, ಜಬಾಲ, ರಂತಿದೇವ, ಪ್ರವಾದಿ, ಕಳ್ಳ, ಡಕಾಯಿತಿ ಅಂತೆಯೇ ಬಕುಲದ ಹೂಗಳನ್ನು ನೋಡಿ ಒಂದರೆಕ್ಷಣ ನೋವೆಲ್ಲವನ್ನೂ ಮರೆತ ಜೋಡಿ. ಸುಬ್ಬಣ್ಣ ರಂಗನಾಥ ಎಕ್ಕುಂಡಿಯವರ ಕವನಗಳ ಕ್ಯಾನ್ ವ್ಯಾಸ್ ನಲ್ಲಿ ಜನರೊಂದಿಗೆ ಸಂವಾದಿಸುವವರು ಅದೆಷ್ಟು ಜನ!

ಎಕ್ಕುಂಡಿಯವರು ದಂತಗೋಪುರದಲ್ಲಿ ಕುಳಿತ ಕವಿಯಾಗಿರದೆ “ಜನರು ಬೀದಿಯಲ್ಲಿದ್ದಾಗ ರಂಗಮಹಲುಗಳನ್ನೊದ್ದು ಕನಸುಗಳ ಕೋಟೆಯನ್ನೊಡೆದು ಭ್ರಮೆಯ ಲೋಕವ ದಾಟಿ” ಕಾವ್ಯವನ್ನು ಬೀದಿಗೆ ತಂದಿದ್ದರಿಂದಾಗಿಯೇ ಅಲ್ಲಿ ಅವರೇ ಬಣ್ಣಿಸುವ ಹಾಗೆ ಉಳುವ ಕೈಗಳೂ ಕಂಡವು. ಪ್ರಾರ್ಥಿಸುವ ಕೈಗಳೂ ಕಂಡವು. ಅವರ ಕಾವ್ಯ ಕೊರಗುವ ಹೃದಯಗಳ ಬಗ್ಗೆ ಮಾತನಾಡಲು ಆರಂಭಿಸಿತು. ನಿರಾಶ್ರಿತ ಮುದುಕರಿಗೆ ನಾಲಿಗೆಯನ್ನು ನೀಡಿತು. ಧೀರ ಚೇತನಗಳಿಗೆ ಸ್ಮಾರಕಗಳನ್ನು ನಿಲ್ಲಿಸಿತು. ಅದು ಚರಿತ್ರೆಯ ಗಾಲಿಗಳನ್ನು ತಿರುಗಿಸಿದವರ ಧೈರ್ಯ ಮತ್ತು ಕರುಣೆಗಳ ಕಥೆಗಳನ್ನು ಹೇಳಿತು.

ಎಕ್ಕುಂಡಿ ಸಹಾ ಚರಿತ್ರೆಯ ಗಾಲಿಗಳನ್ನು ತಿರುಗಿಸಲು ಶಸ್ತ್ರಾಸ್ತ್ರಗಳನ್ನು ತಯಾರಿಸಿದವರೇ. “ದರೋಡೆಕೋರರ ಕಾವ್ಯ”ವನ್ನು ಅಪ್ಪಿದ ಕವಿಗೆ ತನ್ನ ಕಾವ್ಯ ಯೋಧರಾಗಿ ರಣರಂಗಕ್ಕೆ ಹೋಗುವವರಿಗೆ ತಯಾರಿಸಿಕೊಟ್ಟ ಕತ್ತಿ ಗುರಾಣಿ ಎಂಬ ನೆಮ್ಮದಿಯಿತ್ತು.

ಎಕ್ಕುಂಡಿ ಕನಸುಗಾರರು. ಈ ಕನಸುಗಳು ಮಾತ್ರ ಮುನ್ನುಗ್ಗುವ ಕಸುವನ್ನು ನೀಡುತ್ತದೆ ಎಂದು ನಂಬಿದ್ದವರು. ಅಪಾರದಿಂದ ಅನಂತಕ್ಕೆ ಅನಂತದಿಂದ ಅಪಾರಕ್ಕೆ ಹಾರುವ ಬೆಳ್ಳಕ್ಕಿಗಳ ಹಾಗೆ ತಮ್ಮ ಕಾವ್ಯವೂ ಅಪಾರ ಅನಂತಗಳ ನಡುವಿನ ಕೊಂಡಿಯಾಗಿರಬೇಕು ಎಂಬ ಕನಸು ಹೊಂದಿದ್ದರು. ಈ ಅಪಾರದ ಹುಡುಕಾಟದಲ್ಲಿಯೇ ಮಾರ್ಕ್ಸ್, ಮಧ್ವ ಇಬ್ಬರೂ ಎಕ್ಕುಂಡಿಯವರ ಕಾವ್ಯಕ್ಕೆ ದಕ್ಕಿದರು. ಶಬರಿ, ಸುದಾಮ, ಗಜೇಂದ್ರ, ಕುಬ್ಜೆ ಹಾಗೂ ಪುರಂದಾಸರೂ. ಈ ಎಲ್ಲರಿಂದಲೂ ಜನಪದ ವಿಚಾರಗಳನ್ನು ಮಾತ್ರ ಆಯ್ದ ಎಕ್ಕುಂಡಿ ಎರಡು ದಂಡೆಯ ಬೆಸೆದು ದೂರ ಇದ್ದವರನ್ನು ಹತ್ತಿರಕ್ಕೆ ತರಲು ಪ್ರಯತ್ನಿಸಿದರು.

ಎಕ್ಕುಂಡಿಯವರಿಗೆ ರೊಟ್ಟಿಯಷ್ಟೇ ನಿಸರ್ಗವೂ ಮುಖ್ಯ. ಹೀಗಾಗಿಯೇ ಇವರ ಕವನಗಳಲ್ಲಿ ಬೆಳ್ಳಕ್ಕಿ ಸದಾ ಪಟಪಟ ರೆಕ್ಕೆ ಬಡಿಯುತ್ತದೆ. ಸಮುದ್ರ ಭೋರ್ಗರೆಯುತ್ತದೆ. ಇಂದಿನ ಹಸಿವಿನ ಕೂಗು ಮುಗ್ಧತೆಗೆ ಮಾರಕವಾಗುತ್ತಿದೆ ಎಂಬ ಕೊರಗು ಎಕ್ಕುಂಡಿಯವರನ್ನು ಸದಾ ಕಾಡುತ್ತಿತ್ತು. “ನಿಸರ್ಗ ಎನ್ನುವುದು ಬೆಳ್ಳಕ್ಕಿಯ ಹಾಗೆ. ಪ್ರತಿಯೊಂದು ಎದೆಯಲ್ಲಿ ಒಂದೊಂದು ಬೆಳ್ಳಕ್ಕಿ ಇರುತ್ತದೆ. ಬೆಳ್ಳಕ್ಕಿ ಶುದ್ಧತೆ ಸೌಂದರ್ಯದ ಪ್ರತೀಕ. ಈ ಜೀವನದಲ್ಲಿ ಗಂಜಿ ಎಷ್ಟು ಮುಖ್ಯವೋ ಬೆಳ್ಳಕ್ಕಿಗಳೂ ಅಷ್ಟೇ ಮುಖ್ಯ ಎನ್ನುವ ಸಮಾಜ ಸೃಷ್ಟಿಯಾಗಬೇಕು. ಹೊಳೆನೀರು, ಗದ್ದೆ, ಹಸಿರನ್ನು ನೋಡುವ ಕಣ್ಣನ್ನು ಗಂಜಿಯ ಸಮಸ್ಯೆ ಇಲ್ಲವಾಗಿಸಿದೆ” ಎನ್ನುತ್ತಿದ್ದುದರಿಂದಲೇ ಎಕ್ಕುಂಡಿಯವರ ಕವನದ ಪಾತ್ರಗಳಿಗೆ ಬಕುಲ ವೃಕ್ಷದ ತುಂಬಾ ಸುರಿದ ಹೂಗಳನ್ನು, ಟೊಂಗೆ ಟೊಂಗೆಗಳಲ್ಲಿ ಕುಳಿತ ಹಿಂಡು ಹಕ್ಕಿಗಳನ್ನೂ ಅವುಗಳ ಹಾಡುಗಳನ್ನೂ ಕೇಳಲು ಕಾಣಲು ಸಾಧ್ಯವಾಗುತ್ತದೆ. “ಇಷ್ಟು ದಿನ ಎಲ್ಲಿದ್ದವಿಷ್ಟು ಹೂವು? ಅನುಗಾಲ ಇಲ್ಲಿಂದಲೇ ಹಾದು ಹೋದವರು ಕಂಡಿದ್ದೆವೆ ಇಂಥ ಸೊಬಗ ನಾವು” ಎಂದು ಉದ್ಗರಿಸಲು ಸಾಧ್ಯವಾಗುತ್ತದೆ.

ಈ ಎಲ್ಲ ಕಾರಣಕ್ಕಾಗಿಯೇ ಪು.ತಿ.ನ. ಅವರು ಹೇಳುವಂತೆ “ಎಕ್ಕುಂಡಿಯವರ ಮಾತಿನಲ್ಲಿ ಸ್ವರ್ಗಲೋಕದ ಬೆಳೆಯಿದೆ. ವಿಷಾದಕ್ಕೆ ಸುಲಭವಾಗಿ ಪಕ್ಕಾಗದ ಸುದಾಮನಿದ್ದಾನೆ. ಕಾವ್ಯ ಕಲೆ ಇವರನ್ನು ನಿರ್ಬಂಧಿಸದೆ ಇವರಲ್ಲಿ ಭಿಕ್ಷೆ ಬೇಡಿ ಬಾಳುತ್ತದೆ.”

ಎಕ್ಕುಂಡಿಯವರ ನೆನಪಾದಾಗಲೆಲ್ಲಾ ನನಗೆ ಅವರ ಪ್ರೀತಿಯ ಕವನವೊಂದು ನೆನಪಾಗುತ್ತದೆ. Butterfly ಕವನದಲ್ಲಿ ಬಣ್ಣ ಬಣ್ಣದ ರೆಕ್ಕೆಗಳ ಚಿಟ್ಟೆಯೊಂದು ಹಾರಿ ಬಂದು ಬಂಡೆಯ ಮೇಲೆ ಕೂರುತ್ತದೆ. ಕ್ಷಣಕಾಲ ಅಷ್ಟೆ. ನಂತರ ಹಾರಿಹೋಗುತ್ತದೆ. ಕವಿ ತನ್ನ ಕವಿತೆಯಲ್ಲಿ ಉದ್ಗರಿಸುತ್ತಾನೆ – ಚಿಟ್ಟೆಯ ಸ್ಪರ್ಶಕ್ಕೆ ಬಂಡೆಯು ಹೂವಾಯಿತಲ್ಲ!

ಬಂಡೆಗಳನ್ನು ತನ್ನ ಸ್ಪರ್ಶ ಒಂದು ಮಾತ್ರದಿಂದ ಹೂವಾಗಿಸಿಬಿಡಬಲ್ಲ ತಾಖತ್ತು ಇದ್ದ ಎಕ್ಕುಂಡಿ ಎಂಬ ಚಿಟ್ಟೆ ಹಾರಿಹೋದದ್ದಾದರೂ ಎಲ್ಲಿಗೆ?

‍ಲೇಖಕರು avadhi

June 14, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಈಗ ‘ಅಮ್ಮ’ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ದೇಶಾಂಶ’ರು ಇನ್ನಿಲ್ಲ

ಈಗ ‘ಅಮ್ಮ’ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ದೇಶಾಂಶ’ರು ಇನ್ನಿಲ್ಲ

ಇಂದು ಸಂಜೆ ಜರುಗುವ 'ಅಮ್ಮ ಪ್ರಶಸ್ತಿ' ಕಾರ್ಯಕ್ರಮದಲ್ಲಿ ಗೌರವ ಪ್ರಶಸ್ತಿ ಸ್ವೀಕರಿಸಬೇಕಾಗಿದ್ದ ಬೀದರ್ ನ ದೇಶಾಂಶ ಹುಡುಗಿ ಅವರು ಇನ್ನಿಲ್ಲ.....

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This