ಸೇತುವೆಯ ಮೇಲೊಂದು ಹುಣ್ಣಿಮೆಯ ಆಟ


-ವಿಕ್ರಮ್ ಹತ್ವಾರ್
ಗಂಡ ಮತ್ತು ಮಗಳ ಆರೈಕೆಯಲ್ಲೆ ಅರ್ಧ ಆಯಸ್ಸು ಸವೆದ ಹೆಂಗಸು ಅವಳು. ಮಗಳ ಮದುವೆ ನಿಶ್ಚಯವಾಗಿದೆ. ಅದೊಂದು ದಿನ ಮಗಳು ತಾಯಿಯನ್ನು ಎದುರು ಕೂರಿಸಿಕೊಂಡು, ‘ನನ್ನನ್ನು ನಿನ್ನದೇ ಪ್ರತಿರೂಪ ಅನ್ನುತ್ತಾರೆ ಎಲ್ಲ, ಎಲ್ಲಿ ನೋಡುವ…’ ಎಂದು ತನ್ನ ಮದುವೆಯ ದುಪಟ್ಟವನ್ನು (ಗೂಂಘಟ್) ತಾಯಿಯ ತಲೆಯ ಮೇಲೆ ಹೊದಿಸಿ, ತನ್ನ ಹೊಸ ಕೆಂಪು ಬಳೆಗಳಲ್ಲಿ ನಾಲ್ಕಾರನ್ನು ಅವಳಿಗೆ ತೊಡಿಸಿ ತಾಯಿಯನ್ನು ಕಣ್ತುಂಬ ನೋಡುತ್ತಾಳೆ. ಇವತ್ತೊಂದು ದಿನ ಇದನ್ನ ತೆಗೆಯಬೇಡ, ಇರಲಿ……ಅದ್ಯಾಕೆ ನೀನು ಬಣ್ಣಬಣ್ಣದ ಬಟ್ಟೆ ಹಾಕುವುದಿಲ್ಲ? ಎಷ್ಟು ಸುಂದರವಾಗಿ ಕಾಣಿಸುತ್ತೀಯ ಗೊತ್ತಾ?! ಅಂತ ಕಣ್ಣರಳಿಸುತ್ತಾಳೆ. ಮಗಳು ಹೀಗೆ ತಾಯಿಯನ್ನು ಸಿಂಗರಿಸಿ ಕಣ್ತುಂಬ ನೋಡುವ ಸನ್ನಿವೇಶವೇ ರಮ್ಯ. ಆ ಇಡೀ ದಿನ ಮಗಳ ಮದುವೆಯ ದುಪಟ್ಟವನ್ನೆ ಹೊದ್ದು ಅವಳು ಮನೆಗುಡಿಸುತ್ತಾಳೆ, ಅಡಿಗೆ ಮಾಡುತ್ತಾಳೆ, ಅಂಗಳಕ್ಕೆ ಬಂದ ಗೆಳತಿಯ ಕಣ್ಣಿಗೆ ಮಗಳಾಗಿ ಕಾಣುತ್ತಾಳೆ. ಆ ಇಡೀ ದಿನ ತಾಯಿ ಮಗಳಾಗಿರುತ್ತಾಳೆ.
ಹಾಗೇ ಕನ್ನಡಿಯ ಮುಂದೆ ನಿಂತು ತನ್ನನ್ನೊಮ್ಮೆ ಆಳವಾಗಿ ನೋಡಿಕೊಳ್ಳುತಾಳೆ. ಏನೋ ನೆನಪಾಗಿ ಅಲಮೆರಾದಿಂದ ಹಳೆಯ ಪತ್ರಗಳನ್ನು ತೆಗೆದು ಓದುತ್ತಾಳೆ. ಅವನೊಬ್ಬ ಇದ್ದ ಪ್ರೇಮಿ. ಅವಳಿಗಾಗಿ ಕಾಯುತ್ತಲೇ ಇರುತ್ತೇನೆ ಎಂದವನು. ಪ್ರತಿ ಹುಣ್ಣಿಮೆಯಂದು ನಿನ್ನ ಮನೆಬಾಗಿಲಲ್ಲಿ ಕಾಯುತ್ತಿರುತ್ತೇನೆ ಎಂದವನು. ಎಂದಿಗಾದರು ನಿನಗೆ ಬೇಕು ಅನಿಸಿದಾಗ ಸುಮ್ಮನೆ ಬಾಗಿಲು ತೆರೆ, ನಾನಲ್ಲಿರುತ್ತೇನೆ ಎಂದು ಬರೆದುಹೋದವನು.
ಆ ಹುಣ್ಣಿಮೆಯ ರಾತ್ರಿ ಅವಳು ಬಾಗಿಲು ತೆರೆಯುತ್ತಾಳೆ. ಅವನು ಅಲ್ಲಿರುತ್ತಾನೆ!. ಇಬ್ಬರೂ ಜೊತೆಯಾಗಿ ದೂರದ ಗೋಧಿ ಹೊಲದಲ್ಲಿ ಇರುಳು ಕಳೆಯುತ್ತಾರೆ. ಅವಳು ಹಿಂದಿರುಗುವಾಗ ಊರಿನ ಒಬ್ಬಾತ ಹಿಂದಿನಿಂದ ನೋಡುತ್ತಾನೆ. ಮತ್ತೊಬ್ಬನಿಗೆ ಹೊಲದಲ್ಲಿ ಅವಳ ಚೂರಾದ ಕೈಬಳೆ ಸಿಗುತ್ತದೆ. ಊರಿನವರೆಲ್ಲ ಮನೆಯೆದುರು ಬಂದು ‘ನಿನ್ನ ಮಗಳು ನಡತೆಗೆಟ್ಟವಳು, ಹೊಲದಲ್ಲಿ ಚಕ್ಕಂದ ಆಡಿಬಂದವಳು’ ಅಂತ ಗಲಾಟೆ ಎಬ್ಬಿಸುತ್ತಾರೆ. ನಿಮ್ಮ ಸಂಬಂಧ ಬೇಡ ಎನ್ನುತ್ತಾನೆ ಬೀಗ. ಇವಳಿಗೆ ಏನು ಹೇಳಬೇಕೋ ತಿಳಿಯುವುದಿಲ್ಲ. ಅಷ್ಟರಲ್ಲಿ ಗುಡಿಗೆ ಹೋಗಿದ್ದ ಮಗಳು ಮನೆಗೆ ಬರುತ್ತಾಳೆ. ಇವರ ಮಾತನ್ನೆಲ್ಲ ಕೇಳಿಸಿಕೊಂಡು ತನ್ನದೇನು ತಪ್ಪಿಲ್ಲವೆನ್ನುತ್ತಾಳೆ. ಹಿಂದಿನ ದಿನ ಅಮ್ಮನಿಗೆ ತನ್ನ ದುಪ್ಪಟ್ಟ ಹೊದಿಸಿ ಬಳೆ ತೊಡಿಸಿದ್ದು ನೆನಪಾಗಿ ಬೇರೇನೂ ಮಾತಾಡದೆ ಮನೆಯೊಳಕ್ಕೆ ನಡೆದುಬಿಡುತ್ತಾಳೆ. ತಾಯಿ ಕುಸಿದು ಕುಳಿತುಬಿಡುತ್ತಾಳೆ. ಹೊರಬಾಗಿಲಲ್ಲಿ ಇದನ್ನೆಲ್ಲ ನೋಡುತ್ತಿದ್ದ ಆಕೆಯ ಪ್ರಿಯಕರ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇದು ‘ದಸ್ ಕಹಾನಿಯಾ’ ಚಿತ್ರದ ಒಂದು ಕತೆ- ‘Fullmoon night’.
ಈ ಕತೆ ನೋಡಿದಾಗ ‘The Bridges of Madison County’ ಚಿತ್ರ ನೆನಪಾಯಿತು. ಆ ಚಿತ್ರದ ನಾಯಕಿ ಇಟಲಿಯ ಪುಟ್ಟಹಳ್ಳಿಯಲ್ಲಿ ಹುಟ್ಟಿ ಅಮೇರಿಕದವನನ್ನು ಮದುವೆಯಾದವಳು. ಅಮೇರಿಕದ ಆಕರ್ಷಣೆಯಲ್ಲಿ ತನ್ನ ತವರನ್ನು ತೊರೆದು ಹಾರಬಯಸಿದ ಲೋಕದ ಬಗ್ಗೆ ಅವಳ ಕನಸುಗಳು ಬೇರೆಯೇ ಇದ್ದವು. ಆದರೆ ಅವಳ ಪತಿ ಇರುವುದು ಅಮೇರಿಕದ ಒಂದು ಹಳ್ಳಿಯಾದ ಐಯೋವಾದಲ್ಲಿ. ಅಲ್ಲಿ ಝಗಮಗಿಸುವ ಬೆಳಕು, ಶಾಪಿಂಗ್ ಮಾಲ್, ಕೆಸಿನೊ, ಪಾರ್ಟಿ, ಥಿಯೇಟರ್, ಒಟ್ಟು ಅಮೇರಿಕದ ಹಿಪ್ಹಾಪ್ಗಳ ಬಗ್ಗೆ ಅವಳ ನಿರೀಕ್ಷೆಗಳೇನಿದ್ದವು- ಅದ್ಯಾವುದೂ ಇಲ್ಲ. ಅಲ್ಲಿನ ರಸ್ತೆಗಳಿಗೆ ಸೈನ್ ಬೋರ್ಡ್ ಕೂಡ ಇಲ್ಲ. ಅಕ್ಕಪಕ್ಕದಲ್ಲಿ ಹೆಚ್ಚು ಮನೆಗಳಿಲ್ಲ. ಗಂಡ ಒಳ್ಳೆಯವನು, ಸಭ್ಯ. ಮಕ್ಕಳು ಬೆಳೆದಿದ್ದಾರೆ. ಅವರೀಗ ಮಕ್ಕಳಲ್ಲ. ಆಕೆಯೊಂದಿಗೆ ಹೆಚ್ಚು ಮಾತಾಡುವುದಿಲ್ಲ.
ಹೀಗಿರುವಾಗ ಒಮ್ಮೆ, ನಾಲ್ಕು ದಿನದ ಮಟ್ಟಿಗೆ ಗಂಡ-ಮಕ್ಕಳು ಬೇರೊಂದು ಊರಿಗೆ ಹೊರಡುತ್ತಾರೆ. ಅವಳು ಒಂಟಿ. ಆಗ ಅಲ್ಲೊಬ್ಬ ಅಪರಿಚಿತ ಅಲೆಮಾರಿ ಫೊಟೊಗ್ರಾಫರ್ ಜೀಪಿನಲ್ಲಿ ಬಂದು ರೋಸ್ಮನ್ ಬ್ರಿಡ್ಜ್ ಎಲ್ಲಿದೆಯೆಂದು ಆಕೆಯನ್ನು ವಿಚಾರಿಸುತ್ತಾನೆ. ಹೆಸರಿಲ್ಲದ ರಸ್ತೆಗಳ ಗುರುತು ಹೇಳುವುದರಲ್ಲಿ ಸೋತು, ಬೇಕಿದ್ದರೆ ನಾನು ದಾರಿ ತೋರಿಸುತ್ತೇನೆ ಎನ್ನುತ್ತಾಳೆ. ನೀನೀಗ ಮಾಡುತ್ತಿರುವುದರಿಂದ ಬಿಡಿಸಿಕೊಂಡು ಹೋಗಲಾರೆ ಅನ್ನುತಾನೆ ಆತ. ಪರ್ವಾಗಿಲ್ಲ ಎಂದು ಅವನ ಜೊತೆ ಹೊರಡುತ್ತಾಳೆ. ಅವರಿಬ್ಬರ ನಡುವಿನ ಸಂಭಾಷಣೆಗಳಲ್ಲಿ ಇಬ್ಬರ ಬಯಕೆಗಳು ವ್ಯಕ್ತಿತ್ವಗಳು ತೆರೆದುಕೊಳ್ಳುತ್ತದೆ. ತನಗೆ ಬಹಳ ಇಷ್ಟವಾದ ಜಾಗ ಆಫ್ರಿಕಾ. There are no imposed morality. It is the way it is- ಎನ್ನುತ್ತಾನೆ ಅವನು. ಅವಳಿಗೂ ಅದನ್ನು ಕಾಣಬೇಕು ಅಂತ ಆಸೆಯಾಗುತ್ತದೆ. ಹೀಗೆ, ಪರಿಚಯ ಕೊನೆಗೆ ಪ್ರೇಮಕ್ಕೆ ತಿರುಗಿ ನಾಲ್ಕು ದಿನ ಅವರು ಸುಖವಾಗಿ ಕಳೆಯುತ್ತಾರೆ. ಅಳುತ್ತಾರೆ. ಒಬ್ಬರನ್ನೊಬ್ಬರು ಸಂತೈಸುತ್ತಾರೆ. ರಮಿಸುತ್ತಾರೆ. ಜೊತೆಗಿದ್ದ ನಾಲ್ಕೇ ದಿನದಲ್ಲಿ  ಅಕಸ್ಮಾತ್ತಾಗಿ ಸಿಕ್ಕ ಈ ಅಲೆಮಾರಿಯನ್ನು ಬಿಟ್ಟಿರಲು ಸಾಧ್ಯವೇ ಇಲ್ಲವೆನ್ನುವಷ್ಟು ಅವಳು ತನ್ನ ಪ್ರೀತಿಯನ್ನು ಕಂಡುಕೊಳ್ಳುತ್ತಾಳೆ. ಈ ಚಿತ್ರದಲ್ಲು ಆಕೆ ಅವನೊಂದಿಗೆ ಬೆರೆಯುವುದಕ್ಕೆ ಮುಂಚೆ ಕನ್ನಡಿಯಲ್ಲಿ ತನ್ನನ್ನು ತಾನು ನೋಡಿಕೊಂಡು ರೋಮಾಂಚಿತಳಾಗುತ್ತಾಳೆ.
ಅವನೊಬ್ಬ ಹಳ್ಳಿಗಳ ಬಗ್ಗೆ ವಿಶಿಷ್ಟವಾದ ಪ್ರೀತಿ ಇಟ್ಟುಕೊಂಡಿರುವ ಐವತ್ತು ವರ್ಷ ಸುಮಾರಿನ ಅಲೆಮಾರಿ ಫೊಟೊಗ್ರಾಫರ್. ಡೈವೊರ್ಸಿ. ಹೆಂಗಸರು ಅವನಿಗೆ ಹೊಸತಲ್ಲ. ಅವನಿಗೆ ಎಲ್ಲರನ್ನು ಪ್ರೀತಿಸಬೇಕು; ಎಲ್ಲರನ್ನು ಸಮಾನವಾಗಿ ಪ್ರೀತಿಸಬೇಕು. ಅದು ನನ್ನದು ಇದು ನಿನ್ನದು ಎನ್ನುವ ಭಾವನೆಯೇ ತಪ್ಪು ಅಂತ ನಂಬಿರುವವನು. ಅವನಿಗೂ ಅವಳಲ್ಲಿ ಬಿಟ್ಟಿರಲು ಸಾಧ್ಯವಿಲ್ಲವೆನ್ನುವಷ್ಟು ಪ್ರೀತಿ ಹುಟ್ಟುತ್ತದೆ. ‘ಕೆಲವರು ಇಡೀ ಜೀವಮಾನ ಹುಡುಕಿದರೂ ಇಂತದ್ದೊಂದು ಅಪೂರ್ವವಾದ ಅನುರಾಗದ ಅನುಭೂತಿ ಸಿದ್ಧಿಸುವುದಿಲ್ಲ. ಕೆಲವರಿಗೆ ಇಂತದ್ದೊಂದು ಪ್ರೀತಿಯ ಅಸ್ತಿತ್ವದ ಬಗ್ಗೆಯೇ ನಂಬಿಕೆ ಇರುವುದಿಲ್ಲ. ಅಂತದ್ದರಲ್ಲಿ ನಮ್ಮಿಬ್ಬರಿಗೆ ಇದು ಸಾಧ್ಯವಾಗಿದೆ. ನಾವು ಜೊತೆಯಾಗಿ ಜೀವಿಸಲೇಬೇಕು’ ಎನ್ನುತ್ತಾನೆ.
ಅವಳಿಗೂ ಅವನ ಜೊತೆ ಎಲ್ಲರನ್ನು ಬಿಟ್ಟು ಹೋಗಿಬಿಡಬೇಕು ಅಂತ ಮನಸ್ಸಾಗುತ್ತದೆ. ಆದರೆ ಗಂಡ ತನ್ನ ಜೀವಿತದಲ್ಲೇ ಯಾರಿಗೂ ನೋವುಂಟುಮಾಡಿಲ್ಲ. ಅವನಿಗೆ ಎಂತಹ ಆಘಾತ ಆಗಬಹುದು? ಮಗಳು ಈಗಷ್ಟೆ ವಯಸ್ಸಿಗೆ ಬರುತ್ತಿದ್ದಾಳೆ. ಅವಳು ನಾಳೆ ತನ್ನ ಸಂಗಾತಿಯನ್ನು ಹುಡುಕಿಕೊಳ್ಳಬೇಕಾದ ಋತುಮಾನ. ತನ್ನದೊಂದು ಸಂಸಾರವನ್ನು ಕಲ್ಪಿಸಿಕೊಳ್ಳಬೇಕಾದ ವಯಸ್ಸು. ನಾನು ಈಗ ಹೀಗೆ ಬಿಟ್ಟು ಹೊರಟರೆ ಅವಳ ನಿರ್ಧಾರಗಳ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು? ಅವಳ ಸಂಸಾರದ ಕಲ್ಪನೆಯೇ ಕಮರಿಹೋಗಬಹುದು. ನಾನು ಬರುವುದಿಲ್ಲ. We are choiceless ಎನ್ನುತ್ತಾಳೆ. ಈಗಲೇ ನಿರ್ಧರಿಸುವುದು ಬೇಡ, ನಾನು ಇನ್ನೊಂದು ನಾಲ್ಕು ದಿವಸ ಇಲ್ಲೇ ಇರುತ್ತೇನೆ, ನಿನ್ನ ಮನಸ್ಸು ಬದಲಾಗಬಹುದು ಎಂದು ಅವನು ಹೊರಡುತ್ತಾನೆ.
ಈ ಹಂತದಲ್ಲಿ ಇದೊಂದು ಹೆಣ್ಣಿನ ಕನಸುಗಳ ಕತೆ, ಅಮರ ಪ್ರೀತಿಯ ಕತೆ, ಅವಶ್ಯಕತೆಗಳ ಕತೆ, ಏಕಾಕಿತನದಿಂದ ಬೇಸತ್ತ ಹೆಣ್ಣಿನ ಅಭೀಪ್ಸೆಯ ಕತೆ, ಇನ್ನೊಂದಿಷ್ಟು ಅನಿಸಬಹುದು. ನನ್ನ ಸ್ನೇಹಿತನೊಬ್ಬ- ‘ಅದರಲ್ಲೇನಿದೆ ವಿಶೇಷ. ಬರೀ ಲಸ್ಟು. Story of a desperate women’ ಎಂದ. ಅವನಿಗೆ ಅಲ್ಲೆ ಎಗರಿಸಿ ಒದಿಯಬೇಕು ಅನಿಸಿತು. ‘Everything about hiim was so erotic’ ಅಂತ ಆಕೆ ಹೇಳುವ ಸನ್ನಿವೇಶ ಇದೆ. ಅದೊಂದೆ ತಲೆಯಲ್ಲಿ ಉಳಿದುಬಿಟ್ಟರೆ ಹೀಗಾಗುತ್ತೆ. ಅಷ್ಟಕ್ಕು ಹಾಗೆ ಯಾರ ಬಗ್ಗೆಯಾದರು ಎಲ್ಲವೂ ಎರೋಟಿಕ್ ಅಂತ ಅನಿಸಿಬಿಡುತ್ತದಾ? ಇರಲಿ, ಕತೆ ಮುಂದುವರೆಯುತ್ತದೆ.
ಅವಳ ಪತಿ ಮತ್ತು ಮಕ್ಕಳು ಮನೆಗೆ ಮರಳುತ್ತಾರೆ and so her life of details. ಆಗ ಒಂದು ದಿನ ಗಂಡನೊಟ್ಟಿಗೆ ಯಾವುದೋ ಅಂಗಡಿಯಲ್ಲಿ ಸಾಮಾನು ಖರೀದಿಸಿ ಕಾರಿನಲ್ಲಿ ಕುಳಿತಿರುವಾಗ ರಸ್ತೆಯಲ್ಲಿ ಅವನು ಕಾಣಿಸುತ್ತಾನೆ. ಮಳೆಯಲ್ಲಿ!!. ತಲೆಬಾಗಿ ಹೊರನೋಡಿ ಕಣ್ಣೀರಾಗುತ್ತಾಳೆ. ಗಂಡ ಕಾರಿನ ಬಳಿ ಬರುತ್ತಿದ್ದಂತೆ ಮುಖ ತಿರುಗಿಸುತ್ತಾಳೆ. ಕಾರ್ ಸ್ಟಾರ್ಟ್ ಮಾಡಿ ಹೊರಡುತ್ತಾರೆ. ಅವನ ಕಾರು ಮುಂದಿರುತ್ತದೆ. ಹೊರಟ ಎರಡು ಕ್ಷಣಕ್ಕೆ ಸಿಗ್ನಲ್ ಸಿಗುತ್ತದೆ. ಅವನ ಕಾರು ಮುಂದೆ ನಿಂತಿರುತ್ತದೆ. ಅವಳು ಕಾಣಿಕೆಯಾಗಿ ಕೊಟ್ಟಿದ್ದ ಚೈನೊಂದನ್ನು ಅವಳನ್ನು ಪುನಃ ಆಹ್ವಾನಿಸುವಂತೆ ಎದುರಿನ ಕನ್ನಡಿಗೆ ತೂಗಿಹಾಕುತ್ತಾನೆ. ಅವಳ ಕೈ ಕಾರಿನ ಬಾಗಿಲು ತೆರೆಯಲು ಮುಂದಾಗುತ್ತದೆ. ಸಿಗ್ನಲ್ ಬಿಡುತ್ತದೆ. ಅವನು ಮುಂದಕ್ಕೆ ಹೋಗುವುದಿಲ್ಲ. ಅವಳ ಕೈ ಇನ್ನೇನು ಎಲ್ಲ ಸಂಕೋಲೆಗಳನ್ನು ಛಿದ್ರಮಾಡಿ ಬಾಗಿಲನ್ನು ನೂಕಿಬಿಡಬೇಕು ಎನ್ನುವಾಗ ಅವಳ ಗಂಡ ಹಾರನ್ ಮಾಡುತ್ತಾನೆ. ಅವನು ಮುಂದೆ ಹೋಗಿ ಎಡಕ್ಕೆ ತಿರುಗುತ್ತಾನೆ. ಅವರು ಮುಂದೆ ಹೋಗುತ್ತಾರೆ. ಅವಳ ಕೈ ಸಡಿಲಾಗುತ್ತದೆ. ಹಿಂದೆ ತಿರುಗಿ ನೋಡುತ್ತಾಳೆ. ಕಣ್ಣೊರೆಸಿಕೊಳ್ಳುತ್ತಾಳೆ.
ಆಮೇಲೆ ಅವರು ಎಂದೂ ಭೇಟಿಯಾಗುವುದಿಲ್ಲ. ಆ ರೋಮಾಂಚಕಾರಿ, ಅನನ್ಯ ಅನುಭೂತಿ ನೀಡಿದ ಪ್ರೇಮದ ಆಯಸ್ಸು ಕೇವಲ ನಾಲ್ಕು ದಿನ. ನಾಲ್ಕು ದಿನ ಜೊತೆಗಿದ್ದು ನಿನ್ನ ದಾರಿ ನಿನಗೆ ನನ್ನ ದಾರಿ ನನಗೆ ಎಂದು ದೂರಾಗಿ ಬಿಡುತ್ತಾರೆ. ‘ಹೆಣ್ಣು ಕೊನೆಗೂ ತನ್ನ ಭದ್ರತೆಯನ್ನೇ ಕುರಿತು ಚಿಂತಿಸುತ್ತಾಳೆ. ಏನೇ ಪ್ರೀತಿ ಪ್ರೇಮ ಅಂದರೂ ಕೊನೆಗೆ ಏನು? ಅವಳು ಗಂಡ, ಮನೆ, ಮಕ್ಕಳು ಎಂದು ಸಾಮಾಜಿಕ ಭದ್ರತೆ ಬಯಸುತ್ತಾಳೆ. ಅವನು ತನ್ನ ಅಲೆಮಾರಿತನವನ್ನು ಮುಂದುವರೆಸಿದ. ನಾಲ್ಕು ದಿನದ ಆಕರ್ಷಣೆಯ ತೆವಳಿಗೆ ಪ್ರೇಮ ಪ್ರೀತಿ ಅಂತೆಲ್ಲ ಸಬೂಬು ಹೇಳಿಕೊಂಡು ಕಳೆದರು’- ಹೀಗೆಲ್ಲ ಅನ್ನಿಸಿಬಿಡಬಹುದಾಗಿತ್ತು, ಕತೆ ಇಲ್ಲಿಗೇ ಮುಗಿದಿದ್ದರೆ. ಕತೆ ಇನ್ನೊಂಚೂರು ಮುಂದುವರೆಯುತ್ತದೆ. ಕೊನೆಯಲ್ಲಿ ಆಕೆಯ ಪತಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವಾಗ ಕನ್ಫೆಸ್ ಮಾಡಿಕೊಳ್ಳುವ ರೀತಿಯಲ್ಲಿ ಆಕೆಗೆ ಹೇಳುತ್ತಾನೆ ‘ನನಗೆ ಗೊತ್ತಿದೆ. ನಿನ್ನ ಕನಸುಗಳು ಬೇರೆಯೇ ಇದ್ದವು. ಕ್ಷಮಿಸು, ನನ್ನಿಂದ ನಿನಗೆ ಅವನ್ನೆಲ್ಲ ಕೊಡಲಾಗಲಿಲ್ಲ. ನಾನು ನಿನ್ನನ್ನು ತುಂಬ ಪ್ರೀತಿಸುತ್ತೇನೆ’. ಅವಳು ಸುಮ್ಮನೆ ಅವನಿಗೆ ಮುತ್ತಿಡುತ್ತಾಳೆ.
ಗಂಡ ಸತ್ತ ಎರಡು ವರ್ಷಗಳ ನಂತರ ಅವಳಿಗೊಂದು ಪಾರ್ಸೆಲ್ ಬರುತ್ತದೆ. ಅದರಲ್ಲಿ ಆ ಪ್ರಿಯಕರನ ಕ್ಯಾಮೆರಾ, ಅವಳು ಕೊಟ್ಟಿದ್ದ ಚೈನು, Four Days ಎನ್ನುವ ಪುಸ್ತಕದ ಚಿತ್ರಗಳಲ್ಲಿ ಆ ನಾಲ್ಕು ದಿನಗಳ ಬೆಚ್ಚನೆ ನೆನಪುಗಳು. ಮುಂದೊಂದು ದಿನ ಅವಳೂ ಸಾಯುತ್ತಾಳೆ. ‘ನನ್ನ ದೇಹವನ್ನು ಸುಡಬೇಕು ಮತ್ತು ಆ ಬೂದಿಯನ್ನು ಮ್ಯಾಡಿಸನ್ ಕೌಂಟಿ ಬ್ರಿಡ್ಜಿನಿಂದ ಹೊರಚೆಲ್ಲಿ ಅಲ್ಲಿನ ಹವೆಯಲ್ಲಿ ಐಕ್ಯವಾಗಿಸಬೇಕು’ ಅಂತ ಸಾಯುವ ಮುಂಚೆ ಅವಳು ತನ್ನ ಮಕ್ಕಳಿಗೆ ಪತ್ರ ಬರೆದಿಟ್ಟಿರುತ್ತಾಳೆ. ಜೊತೆಗೆ ಈ ಪ್ರೇಮದ ಬಗ್ಗೆ ಮೂರು ಪುಸ್ತಕಗಳಲ್ಲಿ ತನ್ನ ಭಾವನೆಗಳನ್ನು ಬಿಚ್ಚಿಟ್ಟಿರುತ್ತಾಳೆ. ಅದನ್ನು ಆಕೆಯ ಮಕ್ಕಳು ಓದುವುದರೊಂದಿಗೆ ಚಿತ್ರ ಶುರುವಾಗುತ್ತದೆ. ತನ್ನ ತಾಯಿಗೆ ಬೇರೊಬ್ಬ ಗಂಡಸಿನೊಂದಿಗೆ ಸಂಬಂಧವಿತ್ತು ಅನ್ನುವುದನ್ನು ಅವಳ ಮಗನಿಂದ ಸಹಿಸಲು ಆಗುವುದಿಲ್ಲ. ಮಕ್ಕಳು ತಾಯಿಯನ್ನು ಶಂಕಿಸುವುದು, ತಾಯಿಯ ಮೇಲೆ ಸಿಟ್ಟಾಗುವುದು, ಆಕೆಯನ್ನು ಅರ್ಥ ಮಾಡಿಕೊಳ್ಳುವುದು ಚಿತ್ರದ ಮತ್ತೊಂದು ಎಳೆ. ಮಗಳು ತಾಯಿಯನ್ನು ಅರ್ಥಮಾಡಿಕೊಳ್ಳಲು ಡೈರಿಯಂತಹ ಪುಸ್ತಕವನ್ನು ಓದುತ್ತಾಳೆ. ಮಗ ಅಸಹನೆಯಿಂದಲೇ ಓದುತ್ತ ಓದುತ್ತ ಅರ್ಥಮಾಡಿಕೊಳ್ಳುತ್ತಾನೆ.
‘ಈ ಎಲ್ಲ ವಿಚಾರಗಳನ್ನು ನಾನು ಮುಚ್ಚಿಡಬಹುದಾಗಿತ್ತು. ಆದರೆ ವಯಸ್ಸಾಗುತ್ತ ವಯಸ್ಸಾಗುತ್ತ ಮನುಷ್ಯನಿಗೆ ತಾನು ಯಾರನ್ನು ನಿಜವಾಗಿ ಪ್ರೀತಿಸಿದ್ದೆನೋ ಅವರು ತನ್ನನ್ನು ಅರ್ಥಮಾಡಿಕೊಳ್ಳಬೇಕು, ನಿಜವಾದ ನಾನು ಅವರಿಗೆ ಗೊತ್ತಾಗಬೇಕು ಅಂತ ಬಯಸತೊಡಗುತ್ತಾನೆ. ನಾನು ಬಹಳ ಪ್ರೀತಿಸುವ ನಿಮಗೆ ನಾನಿದನ್ನೆಲ್ಲ ಗೊತ್ತುಪಡಿಸುತ್ತಿದ್ದೇನೆ. ನಾನು ನನ್ನ ಇಡೀ ಬದುಕನ್ನು ನನ್ನ ಕುಟುಂಬಕ್ಕೆ ನೀಡಿದೆ’ ಎಂದು ನನ್ನ ಉತ್ಕಟ ಸುಖವನ್ನು ತ್ಯಾಗ ಮಾಡಿದ್ದೇನೆ ಎನ್ನುವ ರೀತಿಯಲ್ಲಿ ಬರೆಯುತ್ತಾಳೆ. ಬದುಕು ಸುಂದರವಾಗಿದೆ, ನಿಮಗೆ ಸುಖ ಸಿಗುವ ಹಾಗೆ ಬದುಕಿ ಎನ್ನುತ್ತಾಳೆ. ಅದನ್ನು ಓದಿದ ಮೇಲೆ ಆಕೆಯ ಮಕ್ಕಳು ತಂತಮ್ಮ ಸಂಗಾತಿಯರೊಡನೆ ಇರುವ ಸಣ್ಣಪುಟ್ಟ ರಗಳೆಗಳನ್ನು ಮರೆತು ರಾಜಿ ಮಾಡಿಕೊಳ್ಳುತ್ತಾರೆ. ಮ್ಯಾಡಿಸನ್ ಬ್ರಿಡ್ಜಿನ ಬಳಿ ತಾಯಿಯ ಬೂದಿಯನ್ನು ಆ ಪರಿಸರದಲ್ಲಿ ಲೀನವಾಗಿಸುತ್ತಾರೆ.
ಎರಡೂ ಚಿತ್ರಗಳು ಒಂದಿಷ್ಟು ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಮೇಲ್ನೋಟಕ್ಕೆ ಪ್ರೀತಿ ಎನಿಸಬಹುದಾದ ಈ ಕತೆ ಆಂತರ್ಯದಲ್ಲಿ ಕುಟುಂಬದ ಮಹತ್ವ ತಿಳಿಸುವ ಕತೆಯೇ? ಅಂತ ಅನಿಸುತ್ತದೆ. ನಾಯಕಿ ಮೆರಿಲ್ ಸ್ಟ್ರೀಪ್ ಅಂತೂ ಬ್ಯೂಟಿಫುಲ್!. ಅಪರಿಚತನೊಂದಿಗೆ ಸ್ನೇಹ ಬೆಳೆಸುವ ಸನ್ನಿವೇಶ. ಅವನ ಕಾಮಚರಿತ್ರೆಯನ್ನು ಕೆದಕುವ ಸನ್ನಿವೇಶ, ಅವನು ಬಿಟ್ಟು ಹೋಗುವ ಹಿಂದಿನ ದಿನ ಅವಳ ಅಸಹನೆ, ಸಿಟ್ಟು, ಅಸಹಾಯಕತೆ, ಅವನು ಮತ್ತೆ ಕಾಣಿಸಿದಾಗ ಅವಳ ತಾಕಳಾಟ ನೋವಿನ ಅಭಿವ್ಯಕ್ತಿ- ಸಿನಿಮಾ ನೋಡಿದರೆ ಇವನ್ನೆಲ್ಲ ನೀವು ಮರೆಯಲು ಸಾಧ್ಯವೇ ಇಲ್ಲ.  I just fell in love with a 46 year young Meryl Streep.

ಈ ಕತೆಯನ್ನು ಈಗ ಮುಂಚೆ ಹೇಳಿದ ಕತೆಯೊಂದಿಗೆ ತಾಳೆ ಹಾಕಿ ನೋಡುವ. ಎರಡೂ ಚಿತ್ರದ ಕಥಾನಾಯಕಿಯರು ದೈನಂದಿನದ ಯಾಂತ್ರಿಕತೆಯಿಂದ ಆಂತರ್ಯದ ಒಂಟಿತನದಿಂದ ಬೇಸತ್ತವರು. ಒಂದು ಪಲ್ಲಟಕ್ಕಾಗಿ ಕನಸಿನ ರೋಮಾಂಚನದ ಅನುಭವಕ್ಕಾಗಿ ಹಾತೊರೆಯುತ್ತಿರುವವರು. ಅವಕಾಶ ಇಬ್ಬರಿಗೂ ದೊರೆಯುತ್ತದೆ. ಇಬ್ಬರೂ ಅನುಭವಿಸುತ್ತಾರೆ. ಮೊದಲನೆಯ ಕತೆಯಲ್ಲಿ ನಾಯಕಿ ತನ್ನ ಹಳೆಯ ಪ್ರಿಯಕರನೊಂದಿಗೆ ಒಂದು ರಾತ್ರಿಯ ಮಟ್ಟಿಗೆ ಕಳೆದುಕೊಂಡಿರುವ ಯಾವುದನ್ನೋ ಪಡೆದುಕೊಂಡರೆ, ಎರಡನೆಯ ನಾಯಕಿ ಯಾವುದಕ್ಕಾಗಿ ಕಾಯುತ್ತಿದ್ದಳು- ಅದು ಸಂಭವಿಸಿ- ಅದರಲ್ಲಿ ನಾಲ್ಕು ದಿನ ಜೀವಿಸಿದವಳು. ಒಟ್ಟಾರೆ, ಇಬ್ಬರೂ ತಾವು ಕಳೆದುಕೊಂಡ ಅಥವ ಬಯಸಿದ ಕನಸಿನಲ್ಲಿ ಕೊಂಚ ಕಾಲವಾದರು ಸುಖಿಸಿದವರು. ಮೊದಲನೆಯ ಕತೆ ಸಂದಿಗ್ಧತೆ; ನಾಯಕಿಯ ಕತೆ ದುರಂತ. ಎರಡನೆಯವಳದ್ದು ನಿಶ್ಚಿಂತ. ಪರಿಣಾಮಗಳಲ್ಲಿ ವ್ಯತ್ಯಾಸ ಏನು ಅಂತ ಕೇಳಿದರೆ- ಮೊದಲನೆಯವಳ ಗುಟ್ಟು ರಟ್ಟಾಯಿತು. ಎರಡನೆಯವಳದ್ದು ಗುಟ್ಟಾಗಿ ಉಳಿಯಿತು. ಮೊದಲನೆಯವಳ ಸಂಬಂಧ ಗುಟ್ಟಾಗಿ ಉಳಿದು ಅವಳ ಮಗಳ ಮದುವೆಯೂ ಆಗಿ ಎಲ್ಲವೂ ಸುಖವಾಗಿದ್ದು ಕೊನೆಯಲ್ಲಿ ಆಕೆ ಸಾಯುವಾಗ ತನ್ನ ಮಗಳಿಗೆ ಪ್ರಿಯಕರನ ಕತೆ ಹೇಳುವುದನ್ನು ಕಲ್ಪಿಸಿಕೊಳ್ಳಿ. ಅಥವ ಎರಡನೆಯವಳ ಸಂಬಂಧದ ವಿಚಾರ ಅವಳ ಗಂಡ ಮತ್ತು ಮಕ್ಕಳಿಗೆ ಅವಳು ಬದುಕಿದ್ದಾಗಲೇ ತಿಳಿದಿದ್ದರೆ ಹೇಗಿರುತ್ತಿತ್ತು ಯೋಚಿಸಿ. ತನ್ನ ಮಕ್ಕಳು ತನ್ನನ್ನು ಅರಿತುಕೊಳ್ಳಲಿ ಅಂತ ಬಯಸಿದವಳು ಬದುಕಿರುವಾಗಲೇ ಅವರಿಗ್ಯಾಕೆ ಈ ವಿಷಯ ತಿಳಿಸಲಿಲ್ಲ? ಸತ್ತ ಮನುಷ್ಯನ ಬಗ್ಗೆ ಮನಸ್ಸು ಹೆಚ್ಚು ಕಠೋರವಾಗಿರುವುದಿಲ್ಲ ಅನ್ನುವ ಕಾರಣಕ್ಕಾ? ಇಂತಹ ಬಾಹ್ಯ ಸಂಬಂಧಗಳ ನೆನಪನ್ನು ಸುಖವಾಗಿ ಸ್ಮರಿಸಲು ಸಾಧ್ಯವಾಗುವುದು ಅದು ಗುಟ್ಟಾಗಿರುವಷ್ಟು ಕಾಲ ಮಾತ್ರವಾ?  ಕತ್ತಲಲ್ಲಿ ಸುಖ ಎನಿಸುವ ಸಂಗತಿಗಳ ಬಗ್ಗೆ ಈ ಕತೆಗಳು ಹೇಳುತ್ತಿವೆಯಾ?
ಬ್ರಿಡ್ಜಸ್ ಆಫ್ ಮ್ಯಾಡಿಸನ್ ಕೌಂಟಿಯ ನಾಯಕಿ ಕೊನೆಯಲ್ಲಿ ಹೇಳುತ್ತಾಳೆ- ’ನನ್ನ ಮತ್ತು ಅವನ ನಡುವೆ ಇದ್ದದ್ದು ನಾವು ಒಟ್ಟಿಗಿದ್ದಿದ್ದರೆ ಉಳಿಯುತ್ತಿರಲಿಲ್ಲ. ನನ್ನ ಮತ್ತು ನನ್ನ ಪತಿಯ ನಡುವೆ ಇರುವಂತದ್ದು ನಾವು ಬೇರ್ಪಟ್ಟಾಗ ಮುಗಿದುಹೋಗುತ್ತಿತ್ತು. ಪ್ರೀತಿ ಯಾವತ್ತೂ ಮಿಸ್ಟರಿ. ಅದು ಎಂದಿಗೂ ನಮ್ಮ ನಿರೀಕ್ಷೆಗಳ ಭಾರವನ್ನು ಹೊರುವುದಿಲ್ಲ’. ಈ ಮಾತುಗಳಲ್ಲಿ ಅವಳು ಹೇಳಹೊರಟಿರುವುದು- ‘ನಾನು ಅವನೊಂದಿಗೆ ಇದ್ದಿದ್ದರೆ ಈ ಸಂಸಾರದ ಸುಖ ಸಿಗುತ್ತಿರಲಿಲ್ಲ. ಜೊತೆಗೆ ಆ ಪ್ರೀತಿಯೂ ಉಳಿಯುತ್ತಿರಲಿಲ್ಲ. ಅವನ ಜೊತೆ ಇದ್ದ ಋಣ ಬರೀ ನಾಲ್ಕು ದಿವಸ. ಅದು ಕ್ಷಣಿಕ ಆದ್ದರಿಂದ ಅಮೂಲ್ಯವಾಯಿತು’. ಹಾಗಿದ್ದರೆ ಅವಳು ಮೊದಲು ಹೇಳಿದ ತ್ಯಾಗದ ಮಾತು? ಹಾಗಿದ್ದರೆ ಅಷ್ಟು ಉತ್ಕಟವಾದ ಪವಿತ್ರವಾದ ಅಮೂಲ್ಯವಾದ ಪ್ರೀತಿ ಬಹಳ ಕಾಲ ಉಳಿಯುವುದಕ್ಕೆ ಸಾಧ್ಯವಿಲ್ಲವೇ? ಬಂದುಹೋಗುವ ಸಂಬಂಧಗಳ ಸುಖ ಶಾಶ್ವತವೇ? ಹೀಗೆ ಸರಳವೆನಿಸುವ ಎರಡೂ ಕತೆ ಸಂಕೀರ್ಣಗೊಳ್ಳುತ್ತ ಸಾಗುತ್ತದೆ, ಪ್ರಶ್ನೆ ಕೇಳಿಕೊಳ್ಳುವಷ್ಟು ಪುರುಸೊತ್ತಿದ್ದರೆ.
ಇದೆಲ್ಲ ಒಂದು ಕಡೆಯಾದರೆ, ಹಳ್ಳಿಗಳನ್ನು ವಿಶಿಷ್ಟವಾಗಿ ನೋಡುವ ಅದರ ಸುಗಂಧವನ್ನು ಬಹಳ ಪ್ರೀತಿಸಿ ಅನುಭವಿಸುವ ಪ್ರಪಂಚ ತಿರುಗುವ ಅಲೆಮಾರಿ, ಅದೇ ಹಳ್ಳಿಯಲ್ಲಿ ಅದೇ ಜನರನ್ನು ಮತ್ತೆ ಭೇಟಿಯಾಗುತ್ತ ಎಷ್ಟು ವರ್ಷದಿಂದ ಅಲ್ಲಿ ಬದುಕುತ್ತಿದ್ದೇನೆ ಅನ್ನುವುದು ಮರತೇ ಹೋಗಿರುವಂತೆ ಉಳಿದುಹೋಗಿ ಮತ್ಯಾವುದೋ ಲೋಕಕ್ಕೆ ಜಿಗುಯುವ ಕನಸು ಕಾಣುವ ಜೀವವನ್ನು ಮುಖಾಮುಖಿಯಾಗುವುದರಲ್ಲಿ ಇನ್ನೊಂದು ಬಗೆಯ ಒಳನೋಟ ಸಿಗುತ್ತದೆ. ಸಂಸಾರದ ಚೌಕಟ್ಟಿನಲ್ಲಿ ಬದುಕುತ್ತಿರುವವರು ಸಂಸಾರಹೀನರನ್ನು ಮುಖಾಮುಖಿಯಾಗುವುದು ಮತ್ತೊಂದು ಆಯಾಮ. ಹೀಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅಭಿಪ್ರಾಯವನ್ನು ಮೂಡಿಸಬಲ್ಲ ಕತೆಯಲ್ಲಿ ಕೊನೆಗೆ ಮುಖ್ಯವೆನಿಸುವುದು ಏನೆಂದರೆ- ಅವರುಗಳು ನಡುವಯಸ್ಸಿನಲ್ಲಾದರು ತಮ್ಮ ನಿಜವಾದ ಪ್ರೀತಿಯನ್ನು ಕಂಡುಕೊಂಡರು ಮತ್ತು ಅದನ್ನು ಕೆಲಹೊತ್ತಿನ ಮಟ್ಟಿಗಾದರು ಅನುಭವಿಸಿದರು ಎನ್ನುವುದು. ‘ಇನ್ನೇನು ಇಲ್ಲ ಕಣೋ. ಮಗಳು ದೊಡ್ಡವಳಾದ ಮೇಲೆ ಅವಳ ಮುಂದೆ ಇದನ್ನೆಲ್ಲ ಹೇಳಿ ಒಮ್ಮೆ ಅತ್ತುಬಿಡಬೇಕು. ಆಗ ನಾನು ನೆಮ್ಮದಿಯಾಗಿ ಸಾಯಬಹುದು’ ಅಂತ ಹೇಳಿದ ಗೆಳತಿ ಇವೆಲ್ಲದಕ್ಕಿಂತ ಒಂದು ಪಾವಟಿಗೆ ಎತ್ತರದಲ್ಲಿದ್ದಾಳೆ ಎನ್ನುವ ಗೌರವ ಭಾವ ಮೂಡಿಸುವಲ್ಲಿ ಇಷ್ಟೆಲ್ಲ ಕಥೆ-ಸಿನಿಮಾ-ಮಾತು ಸಾರ್ಥಕವಾದವು.

‍ಲೇಖಕರು avadhi

August 27, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

2 ಪ್ರತಿಕ್ರಿಯೆಗಳು

 1. Shwetha, Hosabale

  ಹೆಣ್ಣಿನ ಮನಸ್ಸಿನ ಒಳತೋಟಿಗಳನ್ನು ಬಿಚ್ಚಿಡುವ ಸಿನೆಮಾದ ಬಗ್ಗೆ ಓದಿದ ಮೇಲೆ
  ಆ ಸಿನೆಮಾ ನೋಡಲೇಬೇಕೆನಿಸಿತು ; ಒಂದು ಒಳ್ಳೆಯ ಸಿನೆಮಾ ಬಗ್ಗೆ ಬರೆದು
  ಪರಿಚಯಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್ . . .

  ಪ್ರತಿಕ್ರಿಯೆ
 2. HEMASHREE

  review ತುಂಬಾ sensitive ಆಗಿ ಇದೆ.ಎರಡೂ ಚಿತ್ರಗಳ ನಡುವಿನ ಸಾಮ್ಯತೆ ಮತ್ತು differencesಗಳನ್ನು ಚೆನ್ನಾಗಿ ವಿಶ್ಲೇಷಿಸಿದ್ದಾರೆ.
  what i think is,ನಾವು indians, ನಮ್ಮ cultural setup ಮತ್ತು mindsetಗಳನ್ನು ಇನ್ನೂ ethics , chastity ಅನ್ನೋ ಚೌಕಟ್ಟಿನಲ್ಲೇ ನೋಡ್ತಾ ಇದ್ದೇವೆ.
  ಉದಾಹರಣೆ: ಪೂರಣ್‍ಮಾಶಿ – Fullmoon Light , ಚಿತ್ರದ ಕೊನೆಯಲ್ಲಿ ಮಗಳು ಬಾವಿಗೆ ಹಾರುವ ಮೂಲಕ,ತಾಯಿ ತಪ್ಪು ಮಾಡಿದ್ದಾಳೆ ಎನ್ನುವುದನ್ನೇ ಮತ್ತೆ ಹೇಳಿದ ಹಾಗಾಯ್ತು.(ವಿಕ್ರಂ ಅವರ ಬರಹದಲ್ಲಿ , ನಾಯಕ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಅಂತ ಬರೆದಿದ್ದಾರೆ.ನನಗೆ ನೆನಪಿರುವ ಹಾಗೆ, ಮಗಳು ಬಾವಿಗೆ ಹಾರುತ್ತಾಳೆ. ಯಾಕಂದ್ರೆ, ಆಕೆಗೆ ಬೇರೆ ಆಯ್ಕೆ ಇಲ್ವಲ್ಲ. ನಾಯಕ ಕೊನೆಯಲ್ಲಿ ಸಾಯೋ ಹಾಗಾಗಿದ್ದಲ್ಲಿ, ಇಡೀ ಕತೆ ಅರ್ಥವೇ ಬೇರೆ ಆಗ್ತಿತ್ತು. ಒಬ್ಬ ಗಂಡಸು,ಅಂತಹ ನಿಲುವು ತೆಗೆದುಕೊಳ್ಳುತ್ತಾನಾ ಅನ್ನೋದು ಪ್ರಶ್ನೆ.ಅದೂ mainstream cinemaದಲ್ಲಿ.ಸಂದೇಹ !.
  indian audience is still not ready for that kind of characterization.
  ಇನ್ನೊಂದು ಉದಾಹರಣೆ ನೆನಪಾಯ್ತು: in the film ‘life in a metro’, at the end, shikha ( shilpa shetty )ಕೊನೆಗೂ ತನ್ನ ಕುಟುಂಬವನ್ನೇ ಆಯ್ಕೆ ಮಾಡುತ್ತಾಳೆ. ಅದೂ ತನ್ನ ಗಂಡನ extra marital affair ಬಗ್ಗೆ ತಿಳಿದ ಮೇಲೂ. Indian mainstram cinema has to go a long …way…

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: