ಸೇನಾ ಹಸಿರು ಪತಂಗವೆಂಬ ಅಚ್ಚರಿ…

ಸಿದ್ಧರಾಮ ಕೂಡ್ಲಿಗಿ

ನಿನ್ನೆ ಸಂಜೆ ಮನೆಯ ಮುಂದೆಯೇ ತಿರುಗಾಡುತ್ತಿರುವಾಗ, ಕಂಪೌಂಡಿಗೆ ಹೊಂದಿಕೊಂಡಂತೆಯೇ ಕಲ್ಲುಬಂಡೆಯ ಮೇಲೆ ಏನೋ ಹಸಿರು ಬಣ್ಣದ ವಸ್ತು ಕಾಣಿಸಿತು. ಹತ್ತಿರ ಹೋಗಿ ನೋಡಿದರೆ ಅದೊಂದು ಸುಂದರ ವಿನ್ಯಾಸದ ಚಂದದ ಪತಂಗ. ನೋಡಲು ಥೇಟ್ ನಮ್ಮ ಮಿಲಿಟರಿ ಯುದ್ಧ ವಿಮಾನದಂತೆಯೇ ಕಂಡಿತು. ಆದರೆ ರೆಕ್ಕೆಗಳ ವಿನ್ಯಾಸ, ಹಸಿರು ಬಣ್ಣ ಎಲ್ಲವೂ ಯುದ್ಧ ವಿಮಾನವೇ. ಇದನ್ನು ನೋಡಿಯೇ ಯುದ್ಧ ವಿಮಾನಗಳನ್ನು ರೂಪಿಸಿದ್ದಾರೇನೋ ಎಂಬಂತೆ.

ನಾನೂ ನೋಡುತ್ತಲೇ ಇದ್ದೆ ಅದೇನೂ ಅಲ್ಲಿಂದ ಮಿಸುಕಾಡಲಿಲ್ಲ. ಅದೇನೂ ಸತ್ತಿರಲಿಲ್ಲವಾದರೂ ಅದೇಕೆ ಹಾಗೆ ಅಲ್ಲಿ ಕುಳಿತಿತ್ತೋ ಗೊತ್ತಿಲ್ಲ. ಇನ್ನು ಯಾವಾಗ ಹಾರಿಹೋಗಿಬಿಡುವುದೋ ಎಂದು ಸರಸರನೆ ನನ್ನ ಬಳಿಯಿದ್ದ ಮೊಬೈಲ್ ನಲ್ಲಿ ಕ್ಲಿಕ್ ಮಾಡಿದೆ. ಎಷ್ಟೊತ್ತು ಕ್ಲಿಕ್ ಮಾಡಿದರೂ ಅದು ತೆಪ್ಪಗೇ ಕುಳಿತಿತ್ತು. ನಾನು ಅದಕ್ಕೆ ತೊಂದರೆ ಕೊಡಲಿಲ್ಲ. ಮತ್ತೆ ಅದಕ್ಕೆ ಯಾವುದೇ ತೊಂದರೆ ಕೊಡದೇ ಅಲ್ಲಿಂದ ಬಂದೆ.

ಚಿಟ್ಟೆಗಳಿಗೂ ಪತಂಗಗಳಿಗೂ ವ್ಯತ್ಯಾಸವಿದೆ. ಚಿಟ್ಟೆಗಳು ಹಗಲು ಹೊತ್ತಿನಲ್ಲಿ ಹೂಗಳ ಮಕರಂದ ಹೀರಲು ಸಂಚರಿಸುತ್ತವೆ. ಅವುಗಳ ಕಾಲಿನ ರಚನೆ, ಮೀಸೆ ಎಲ್ಲವೂ ತೆಳು. ರೆಕ್ಕೆಗಳೂ ಸೂಕ್ಷ್ಮ ಹಾಗೂ ತೆಳು. ಪತಂಗಗಳು ನಿಶಾಚರಿಗಳು. ದೀಪದ ಬೆಳಕಿನಲ್ಲಿ ಸಂಚರಿಸುವ ಇವುಗಳು ಹೂಗಳ ಮಕರಂದವನ್ನೇ ಹೀರುತ್ತವೆ. ಆದರೆ ಇವುಗಳ ಮೀಸೆ, ಕಾಲುಗಳು ಚಿಟ್ಟೆಗಳಿಗಿಂತಲೂ ಗಾತ್ರದಲ್ಲಿ ಸ್ವಲ್ಪ ದೊಡ್ದವೇ. ರೆಕ್ಕೆಗಳು ಸೂಕ್ಷ್ಮವಾದರೂ ಅವುಗಳ ಮೇಲೆ ಸಣ್ಣಗೆ ಎಳೆಗಳಿರುತ್ತವೆ. ಸಾಮಾನ್ಯವಾಗಿ ಕತ್ತಲಲ್ಲಿಯೇ ದೀಪದ ಬೆಳಕಿನಲ್ಲಿ ಸಂಚರಿಸುವ ಇವು ಕೆಲವೊಮ್ಮೆ ಮನೆಯೊಳಗೂ ಹೊಕ್ಕುಬಿಡುತ್ತವೆ.

ಇಲ್ಲಿ ನಾನು ನೋಡಿದ ಪತಂಗದ ಹೆಸರು “ ಸೇನಾ ಹಸಿರು ಪತಂಗ “ ಇಂಗ್ಲೀಷ್ ನಲ್ಲಿ Oleander Hawk Moth ಅಥವಾ Army Green Moth. ಇದರ ಬಣ್ಣ ಸೇನಾ ಹಸಿರು ಇದ್ದುದರಿಂದಲೇ ಇದಕ್ಕೆ Army Green Moth ಎಂಬ ಹೆಸರು ಬಂದದ್ದು. ಪತಂಗಗಳ Sphingidae ಎಂಬ ಕುಟುಂಬದ್ದು. ವಿಜ್ಞಾನಿಗಳ ಪ್ರಕಾರ ಪತಂಗಗಳಲ್ಲೇ 1,50,000 ದಿಂದ 5,00,000ದವರೆಗೂ ವಿಧಗಳಿವೆ ಎಂದರೆ ಇವುಗಳ ವ್ಯಾಪ್ತಿಯನ್ನು ನಾವು ಊಹಿಸಬಹುದಾಗಿದೆ.

ಈಗ ನಾನು ನೋಡಿರುವ ಪತಂಗಗಳು ಏಶಿಯಾ, ಆಫ್ರಿಕಾ, ಹವಾಯಿ ದ್ವೀಪಗಳಲ್ಲಿ ಕಂಡು ಬರುತ್ತವೆ. ಸಾಮಾನ್ಯವಾಗಿ ತೋಟಗಳಲ್ಲಿಯು ಇವನ್ನು ನೋಡಬಹುದಾಗಿದೆ. ಇದರ ವಿಶೇಷತೆಯೆಂದರೆ ಪತಂಗಗಳ ರೀತಿಯಲ್ಲಿ ರೆಕ್ಕೆಗಳಿರದೆ ವಿಮಾನದ ರೀತಿಯಲ್ಲಿ ರೆಕ್ಕೆಗಳಿರುವುದು.

ಇನ್ನು Oleander Hawk Moth ಎಂಬ ಹೆಸರು ಯಾಕೆ ಬಂತೆಂದರೆ ಇದು ಮೊಟ್ಟೆಗಳನ್ನಿಡಲು ಸಾಮಾನ್ಯವಾಗಿ ಕಣಗಿಲೆ ಗಿಡವನ್ನೇ ಆಶ್ರಯಿಸುವುದು. ಕಣಗಿಲೆ ಗಿಡದ ಎಲೆಯ ಎರಡೂ ಬದಿಗಳಲ್ಲಿ ಇದು ಮೊಟ್ಟೆ ಇಡುತ್ತದೆ. ಸಂಜೆಯಾದೊಡನೆ ಹೊರಹೊರಡುವ ಈ ಪತಂಗಗಳಲ್ಲಿ ವಯಸ್ಕ ಪತಂಗಗಳ ಭರ್ಜರಿ ಹಾರಾಟ ಮೇ ದಿಂದ ಸೆಪ್ಟೆಂಬರ್ ವರೆಗೆ.

ಇಂಥ ಅಪರೂಪದ ಚಂದದ ಪತಂಗ ನಮ್ಮ ಭಾಗದಲ್ಲಿ ಹೇಗೆ ಬಂತೆಂದು ಯೋಚಿಸಿದಾಗಲೇ, ಇದರ ವಿವರಗಳನ್ನು ಹುಡುಕಿದಾಗಲೇ ಗೊತ್ತಾದದ್ದು. ನಮ್ಮ ಮನೆಯ ಎದುರಿಗೇ ಕಣಗಿಲೆ ಗಿಡವಿದೆ. ಹೀಗಾಗಿ ಈ ಪತಂಗ ಬಂದಿರುವ ಸಾಧ್ಯತೆ ಇದೆ.

ಏನೇ ಇರಲಿ ಪ್ರಕೃತಿಯಲ್ಲಿ ಇಂಥ ಎಷ್ಟು ಅಚ್ಚರಿಗಳಿವೆಯೋ. ಅಂತಹ ಅಚ್ಚರಿಗಳಲ್ಲಿ ನಾನು ಕಂಡದ್ದು ಇಂತಹ ಒಂದು ಪತಂಗದ ಅಚ್ಚರಿ. ಜೀವಂತ ವಿಮಾನವೊಂದನ್ನು ನೋಡಿದ ಅಚ್ಚರಿ.

‍ಲೇಖಕರು Avadhi

February 2, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಕಥೆಗಳನ್ನು ಹುಡುಕಿಕೊಂಡು ಹೀಗೆ ಸಾಗುವುದು ಇತ್ತೀಚಿಗೆ ನನ್ನ ರೂಢಿಯೇ ಆಗಿ ಹೋಗಿದೆ. ಕಥೆಯ ಹುಡುಕಾಟವೆಂದರೆ ಅದು ಬದುಕಿನ...

ಅಮ್ಮ…

ಅಮ್ಮ…

ಸಹನಾ ಹೆಗಡೆ ವೃತ್ತಿಯಿಂದ ಉಪನ್ಯಾಸಕರೂ ಪ್ರವೃತ್ತಿಯಿಂದ ಲೇಖಕರೂ ಸಾಹಿತ್ಯಾಸಕ್ತರೂ ಆದ ಶ್ರೀಯುತ ಪ್ರವೀಣ ನಾಯಕ ಹಿಚ್ಕಡ ಅವರು ತಮ್ಮ ತಾಯಿ...

೧ ಪ್ರತಿಕ್ರಿಯೆ

  1. raghav

    ಏಕೋ, ಇದನ್ನು ಓದುತ್ತಿದ್ದಾಗ ದೆಹಲಿಯ ಮಿಲಿಟರಿ ಮತ್ತು ರೈತರ ಹಸಿರು ಮನಸ್ಸಿಗೆ ಬಂತು. ನನಗೆ ಈ ಬರಹಕ್ಕೆ ಮತ್ತು ಆ ಘಟನೆಗಳಿಗೆ ತುಂಬ ಸಾಮ್ಯ ಕಂಡಿತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: