ಸೈಕಲ್ ಬಗೆಗಿನ ವ್ಯಾಮೋಹ

   

ಸತೀಶ ಕುಲಕರ್ಣಿ

ಶ್ರೀಮತಿ ಗಾಯತ್ರಿ ರವಿ ಅವರ ‘ಶಶೂನ ಸೈಕಲ್’ ಎಂಬ ಲಲಿತ ಪ್ರಬಂಧಗಳ ಪುಸ್ತಕ ಇದೀಗ ಬಂದಿದೆ. ಮಲೆನಾಡು ಪ್ರಕಾಶನ ಚಿಕ್ಕಮಗಳೂರು ಇದನ್ನು ಪ್ರಕಟಿಸಿದೆ. ಅದರ ಮುನ್ನುಡಿಯನ್ನು ಕವಿ ಸತೀಶ ಕುಲಕರ್ಣಿ ಅವರು ಬರೆದಿದ್ದಾರೆ. ಬೆನ್ನುಡಿಯು ಪ್ರೊ. ಚಂದ್ರಶೇಖರ ವಸ್ತ್ರದ ಅವರದು.

ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಸ್ವಲ್ಪ ಸೊರಗಿದ ಪ್ರಕಾರವೆಂದರೆ ಲಲಿತ ಪ್ರಬಂಧ. ಕುವೆಂಪು, ಕಾರಂತ, ಮೂರ್ತಿರಾಯರು ಮತ್ತು ನಮ್ಮ ಭಾಗದ ರಾಕು, ಬಿ.ಆರ್. ವಾಡಪ್ಪಿ, ಸುನಂದಾ ಬೆಳಗಾಂಕರ್‌ರ ಒಂದು ದೊಡ್ಡ ಪರಂಪರೆ ಲಲಿತ ಪ್ರಬಂಧಕ್ಕಿದೆ. ಕೆ. ಸತ್ಯನಾರಾಯಣ, ಚಂದ್ರಶೇಖರ ಆಲೂರ, ಕಂಬಳಿ ಈರಣ್ಣ ವಿಶೇಷವೆಂದರೆ ರಹಮತ್ ತರಿಕೇರಿ ಕೂಡ ಇದನ್ನು ವಿಸ್ತರಿಸುತ್ತಿದ್ದಾರೆ.

ಯಾವ ಸಂಘರ್ಷ, ತಾತ್ವಿಕ ತಿಕ್ಕಾಟಗಳಿಗೆ ಹೆಚ್ಚು ತುತ್ತಾಗದ ಪ್ರಕಾರವಿದು. ಒಂದು ರೀತಿಯಲ್ಲಿ ಜೀವನ ದರ್ಶನ ಮತ್ತು ಪ್ರೀತಿಯನ್ನು ಇಮ್ಮಡಿಸುವ, ಲಲಿತ ಪ್ರಬಂಧ ಕಾಲ ಕಾಲಕ್ಕೆ ತನ್ನ ಅಗತ್ಯತೆಯನ್ನು ಮತ್ತು ಇರುವಿಕೆಯನ್ನು ಪ್ರಕಟಿಸುತ್ತಲೇ ಬಂದಿದೆ.

ಭಾವ ಪ್ರಬಂಧ, ವಿಚಾರ ಪ್ರಬಂಧ, ಲಹರಿಯ ಲಲಿತ ಪ್ರಬಂಧ ಬೇರೆ ಬೇರೆ ರೀತಿಯಲ್ಲಿ ಓದಲು ಸಿಗುತ್ತವೆ. ಪ್ರಬಂಧವೇ ಇದರ ಮೂಲ ಚೌಕಟ್ಟು. ಸ್ವಲ್ಪ ಲಾಲಿತ್ಯ ಸೇರಿದಾಗ ಲಲಿತ ಪ್ರಬಂಧವುಂಟು.

ಶ್ರೀಮತಿ ಗಾಯತ್ರಿ ರವಿ ಸಾವಧಾನವಾಗಿ ಕಳೆದ ಮರ‍್ನಾಲ್ಕು ವರ್ಷಗಳಿಂದ ಪ್ರಬಂಧಗಳನ್ನು ಬರೆಯುತ್ತಿದ್ದಾರೆ. ಮೂಲತಃ ಕವಯತ್ರಿಯಾದ ಗಾಯತ್ರಿ,   ಕಾವ್ಯದ ಲಹರಿಯಲ್ಲಿ ಪ್ರಬಂಧ ಲೋಕಕ್ಕೂ ಕಾಲಿಟ್ಟಿದ್ದಾರೆ. ಶಶೂನ ಸೈಕಲ್ ಲೇಖಕಿಯ ಮೊದಲ ಸಂಕಲನ. ನಾನು ವ್ಯಾಟ್ಸಾಪ್ಗೆ  ಬಂದೆ ಎಂಬ ಪ್ರಬಂಧ ತುಷಾರ ಪತ್ರಿಕೆಯಲ್ಲಿ ಪ್ರಕಟವಾದಾಗ ಬೇರೆ ಬೇರೆ ಪತ್ರಿಕೆಯವರು ತಮಗೂ ಪ್ರಬಂಧಗಳನ್ನು ಬರೆದು ಕೊಡಿ ಎಂದು ಕೇಳಿದ್ದುಂಟು.

ನಾಲ್ಕಾರು ವರ್ಷಗಳಿಂದ ಶ್ರೀಮತಿ ಗಾಯತ್ರಿ ಮತ್ತು ಅವರ ಕುಟುಂಬದವರನ್ನು ಬಲ್ಲೆ. ಮೊದಲು ಹುಬ್ಬಳ್ಳಿಯ ಪೊಸ್ಟ್ ಆಫೀಸಿನಲ್ಲಿ ಅಂಚೆಯಕ್ಕಳಾಗಿ ದಾಜಿಬಾನಪೇಟ್, ಕಮರಿಪೇಟ್, ಗಣೇಶಪೇಟ್ ಮುಂತಾದ ಕಡೆಗಳಲ್ಲಿ ಟಪಾಲು ಹಂಚಿ ರಸ್ತೆಯ ಜೀವನಾನುಭವಗಳನ್ನು ಪಡೆದುಕೊಂಡವರು. ಆನಂತರ ಇಲಾಖಾ ಪರೀಕ್ಷೆ ಕಟ್ಟಿ ಹಾವೇರಿ ಪ್ರಧಾನ ಕಛೇರಿಗೆ ಬಂದವರು. ಕಳೆದ ವರ್ಷ ಹುಬ್ಬಳ್ಳಿಗೆ ವರ್ಗಾವಣೆಗೊಂಡು ಅಲ್ಲಿಯ ಪ್ರಧಾನ ಕಛೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಸರಳ ಸ್ವಭಾವದ ಗಾಯತ್ರಿ ಒಂದು ಇತಿಮಿತಿಯಲ್ಲಿ ತಮ್ಮ ಜೀವನಾನುಭಗಳನ್ನು, ಇಲ್ಲಿನ ೧೭ ಪ್ರಬಂಧಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಮನೆ, ಮಕ್ಕಳು, ಗಂಡ, ಕಛೇರಿ ಈ ತಿರುಗುಣಿಯಲ್ಲಿಯೇ ತೃಪ್ತರಾಗಿ ತನಗೊಲಿದಂತೆ ಹಾಡಿದ ಸಹಜ ಪ್ರತಿಭೆ.  ಶಶೂನ ಸೈಕಲ್ ಸಂಕಲನದ ಮುಖ್ಯ ಪ್ರಬಂಧ. ಅವರ ಮಗ ಶಶಾಂಕನಿಗೆ ಹೊಸ  ಸೈಕಲ್ಲೊಂದನ್ನು ತಂದುಕೊಟ್ಟಾಗ, ಅವನು ಸಂಭ್ರಮಿಸಿದ ರೀತಿ ಮತ್ತು ಅದರ ಸುತ್ತಲಿನ ಸಣ್ಣ ಸಣ್ಣ ಸಂಗತಿಗಳನ್ನು ರೋಚಕವಾಗಿ ಕಟ್ಟಿಕೊಟ್ಟಿದ್ದಾರೆ. ಈ ಪ್ರಬಂಧ ಇಡೀ ಗಾಯತ್ರಿ ಬರಹದ ಮೂಲ ಸ್ತೋತ್ರವಾಗಿದೆ.

ಅಣ್ಣನ ಮಗಳು ಸೃಷ್ಠಿ ಮತ್ತು ಪಕ್ಕದ ಮನೆಯ ಜಯಾ ಅತ್ತೆಯ ನಡುವೆ ನಡೆವ ಮುಗ್ಧ ಮಾತುಕತೆ, ತಮ್ಮ ಮನೆಯ ಅಡುಗೆ ಮನೆ, ಅಲ್ಲಿನ ಪುಟ್ಟ ಪುಟ್ಟ ವಸ್ತುಗಳು, ಜೀವನದಲ್ಲಿ ಅಗತ್ಯವಿರುವ ಸಣ್ಣ ಸಣ್ಣ ಸಂಗತಿಗಳು ಇಲ್ಲಿ ಅಕ್ಷರ ರೂಪ ಪಡೆದಿವೆ. ಈ ಮೊದಲು ಹೇಳಿದಂತೆ ತಮ್ಮದೇಯಾದ ಆಪ್ತ ಖಾಸಗಿ ಲೋಕವನ್ನು ಅಕ್ಷರಗಳಲ್ಲಿ ಹಾಸಿದ್ದಾರೆ.

ಧಾರವಾಡ. ಕಲಘಟಗಿ ಹಾಗೂ ಅವರು ಬೆಳೆದ ಹಳ್ಳಿ  ಹಟಗಿನಾಳದ ಆಡುಮಾತುಗಳಿಲ್ಲಿ   ಅರಳಿವೆ. ಜೊತೆಗೆ  ಕಥಾನಕವೂ ಅಲ್ಲಲ್ಲಿ ಅಡಗಿದೆ. ತೂಕದ ಭಾಷೆಯಲ್ಲಿ ಲೋಕದ ಅನುಭವಗಳನ್ನು ತೋಡಿಕೊಂಡಿದ್ದಾರೆ. ಎರಡು ಗಂಟೆಯ ಪಯಣ, ಸ್ವತಂತ್ರ ದಿನ ಮತ್ತು ಕಾಡಿನ ಪಯಣ ಈ ಮಾತುಗಳಿಗೆ ಅತ್ಯುತ್ತಮ ಉದಾಹರಣೆಗಳು.

ಯಾವ ಅಕಾಡೆಮಿಕ್ ಭಾರವಿಲ್ಲದೆ ಗಾಯತ್ರಿ ಕಾಡಿನ ಹೂಗೊಂಚಲಂತೆ ತಮ್ಮ ಬರಹಗಳ ಮೂಲಕ ಸೆಳೆಯುತ್ತಾರೆ. ಅಜ್ಜಿಯ ಮನೆಯಾರ್ಡರ್, ಅಪ್ಪ ಕೊಡಿಸಿದ ವಾಚು, ಅವ್ವಳಿಗೆ ನಾ ತಂಗಿ, ಸಂತೆಯ ದಿನವೂ ಮಾದೆವಪ್ಪನ ಲೆಕ್ಕವೂ, ಸವಾಲಿನಲ್ಲಿ ಸಿಕ್ಕ ಗಣೇಶ ಇವೆಲ್ಲ ಪ್ರಬಂಧಗಳು ನಮ್ಮ ಸುತ್ತಲಿನ ನಿತ್ಯ ಸತ್ಯಗಳಾಗಿವೆ. ಮನುಷ್ಯ ಪ್ರೀತಿಗೆ ಹಿಡಿದ ಕನ್ನಡಿಗಳು ಕೂಡ.

ಬೇರೆ ಬೇರೆ ಲೇಖಕರ ಪ್ರಬಂಧಗಳನ್ನು ಗಾಯತ್ರಿಯವರು ಓದಬೇಕು. ತನ್ನ ತನವನ್ನು ಉಳಿಸಿಕೊಂಡು, ವಿಶೇಷವಾಗಿ ಹೊಸ ಲೇಖಕಿಯರಲ್ಲಿ ಕೊರಿ ಇರುವ ಲಲಿತ ಪ್ರಬಂಧ ಪ್ರಕಾರದಲ್ಲಿ ತಮ್ಮದೇ ಹೆಜ್ಜೆ ಗುರುತುಗಳನ್ನು ಹಾಕುವಂತಾಗಲಿ.

ಚಂದ್ರಶೇಖರ ವಸ್ತ್ರದ

ಸಾಹಿತ್ಯದ ಉಳಿದ ಪ್ರಕಾರಗಳಿಗಿಂತ ಬಳಸುವ ಭಾಷೆ. ಭಾವನೆಗಳ ಲಾಲಿತ್ಯದಿಂದ ಭಿನ್ನವಾಗಿ ನಿಲ್ಲುವ  ಲಲಿತ ಪ್ರಬಂಧ ಸುಲಭವಾಗಿ ಸಹೃದಯರ ಮನಸ್ಸನ್ನು ಗೆದ್ದುಕೊಂಡು ಬಿಡುತ್ತದೆ. ನಿರೂಪಣೆ ಹಗುರವಾದರೆ, ಹರಟೆಯಾಗುವ, ಸಂಕೀರ್ಣವಾದರೆ ವೈಚಾರಿಕ ಪ್ರಬಂಧವಾಗುವ ಅಪಾಯದಿಂದ ಪಾರಾಗಿ ತನ್ನದೇ ಆದ ಸಹಜ ಸುಂದರ ಲಾಲಿತ್ಯಪೂರ್ಣ ಚೌಕಟ್ಟನ್ನು ನಿರ್ಮಿಸಿಕೊಳ್ಳುವುದು ಸುಲಭದ ಮಾತಲ್ಲ.

ಕನ್ನಡದಲ್ಲಿ  ಇಂಥದೊಂದು ಸಾಹಿತ್ಯ ಪ್ರಕಾರ ಹೇಳಿಕೊಳ್ಳುವಷ್ಟಲ್ಲದಿದ್ದರೂ ಸಮಾಧಾನಕರವೆನಿಸುವಷ್ಟು ಪ್ರಮಾಣದಲ್ಲಿ ಬೆಳೆದು ಬಂದಿದೆ. ಪ್ರಾರಂಭಿಕ ದಿನಗಳಲ್ಲಿ ಲೇಖಕರಿಗಷ್ಟೇ ಸೀಮಿತವಾಗಿದ್ದ ಈ ಸಾಹಿತ್ಯ ಪ್ರಕಾರದಲ್ಲಿ ಇತ್ತೀಚೆಗೆ ಲೇಖಕಿಯರೂ ಕೃಷಿ ಗೈಯುತ್ತಿರುವುದು ಶುಭ ಸೂಚನೆಯಾಗಿದೆ. ಈ ಸಾಲಿನಲ್ಲಿ ಎದ್ದು ಕಾಣುವ ಹೆಸುರುಗಳಲ್ಲಿ ಶ್ರೀಮತಿ ಗಾಯತ್ರಿ ರವಿ ಅವರ ಹೆಸರೂ ಒಂದು.

ಮಂಜಿನ ಹನಿಗಳು ಮತ್ತು ಕುರುಡನಿಗೆ ಕನ್ನಡಿ ಎಂಬ ಕವನಸಂಕಲನಗಳ ಮೂಲಕ ಸಾಹಿತ್ಯ ಲೋಕಕ್ಕೆ ಪ್ರವೇಶ ಪಡೆದ ಶ್ರೀಮತಿ ರವಿ ಅವರು ಹೃದ್ಯವಾದ ಗದ್ಯದಲ್ಲಿ ಸಿದ್ಧ ಹಸ್ತರು ಎಂಬುದಕ್ಕೆ ಶಶೂನ ಸೈಕಲ್ ಪ್ರಬಂಧ ಸಂಕಲನವೇ ಶಾಕ್ಷಿ. ಸೈಕಲ್ಲಿನ ಸಂಭ್ರಮವನ್ನು ತುಂಬ ರಸವತ್ತಾಗಿ ಲೇಖಕಿ ಚಿತ್ರಿಸಿದ್ದಾರೆ. ಮಗನ ಬದಲಾದ ದಿನಚರಿ, ಪುಟಿಯುತ್ತಿದ್ದ ಉತ್ಸಾ, ಸೈಕಲ್ ಬಗೆಗಿನ ವ್ಯಾಮೂಹ ನಮ್ಮೆಲ್ಲರ ಬಾಲ್ಯದ ದಿನಗಳಿಗೆ ಕೊಂಡೊಯ್ಯುತ್ತವೆ.

ನಿರೂಪಣೆಯೂ ಸೈಕಲ್ನಷ್ಟೇ ಸರಾಗವಾಗಿ ಓಡುತ್ತವೆ. ಇಲ್ಲಿಯ ಬಹುತೇಕ ಲೇಖನಗಳ ಮೂಲ ದ್ರವ್ಯ ಆದಮ್ಯ ಪ್ರೀತಿ. ಅಪ್ಪ ಕೊಡಿಸಿದ ವಾಚು, ನೆರೆಹೊರೆ , ಸಂತೆಯ ದಿನವೂ ಮಾದೇವಪ್ಪನ ಲೆಕ್ಕವೂ – ಪ್ರಬಂಧಗಳಲ್ಲಿ ಜೀವನ ಪ್ರೀತಿಯ ತುಡಿತವಿದೆ. ಪಾರ್ಸಲ್ ಪ್ರಬಂಧದಲ್ಲಿ ವೃತ್ತಿ ಬದುಕಿನ ಸ್ವಾರಸ್ಯಕರವಾದ ಮಿಡಿತವಿದೆ.. ಲೇಖಕಿ ಮೂಲತಃ ಕವಯತ್ರಿಯಾಗಿರುವುದರಿಂದ ಸಹಜವಾಗಿಯೇ ಪದ್ಯದಿಂದ ಗದ್ಯ ನಿರೂಪಣೆ ಸಿದ್ಧಿಸಿದೆ.

ಪ್ರಬಂಧದ ಉದ್ದೇಶ ಕೇವಲ ಅಷ್ಟಕ್ಕೆ ಮಾತ್ರ ಸೀಮಿತವಾಗದೇ ಇಂದಿನ ದಿನಮಾನದಲ್ಲಿ ಕಣ್ಮರೆಯಾಗುತ್ತಿರುವ ಜೀವನೋತ್ಸಾಹ, ಮಾನವೀಯತೆ, ಕೌಟುಂಬಿಕ, ಸಾಮಾಜಿಕ ಸಾಮರಸ್ಯ ಭಾವವನ್ನು ಉದ್ದೀಪಿಸುವಲ್ಲಿ ಯಶಸ್ವಿಯಾಗಿವೆ. ಲಲಿತ ಪ್ರಬಂಧ ಪ್ರಕಾರಕ್ಕೆ ವಿಶಿಷ್ಟ ಕಾಣಿಕೆಯನ್ನು ಲೇಖಕಿ ಗಾಯತ್ರಿ ಅವರು ನೀಡಿದ್ದಾರೆ.

‍ಲೇಖಕರು Avadhi

October 26, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಥೆಗಾರ, ಆರ್ಥಿಕ ವಿಶ್ಲೇಷಣಾಕಾರ ಎಂ ಎಸ್ ಶ್ರೀರಾಮ್ ಅವರ ಹೊಸ ಪುಸ್ತಕ ಮಾರುಕಟ್ಟೆಯಲ್ಲಿದೆ ಅಕ್ಷರ ಪ್ರಕಾಶನ ಈ ಕೃತಿಯನ್ನು ಹೊರತಂದಿದ್ದು...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: