‘ಸೋನಾ’ ಎಂಬ ಅಪ್ಪಟ ಚಿನ್ನ

ಸುಧಾ ಆಡುಕಳ

ಕೆಲವು ವ್ಯಕ್ತಿಗಳೇ ಹಾಗೆ. ಒಮ್ಮೆ ಪರಿಚಿತರಾದರೆ ಮತ್ತೆ, ಮತ್ತೆ ನಮ್ಮೊಳಗೆ ನೆನಪಾಗಿ ಬೆಳೆಯುತ್ತಲೇ ಇರುತ್ತಾರೆ. ಭೇಟಿಯಾಗದೆಯೂ ನಮ್ಮೊಳಗೆ ಮಾತಾಗುತ್ತಲೇ ಇರುತ್ತಾರೆ. ಅಂಥದೊಂದು ವ್ಯಕ್ತಿತ್ವ ಮೋಹನ ಸೋನಾ ಅವರದ್ದು.

ಸೋನಾ ಎಂಬ ವ್ಯಕ್ತಿ ಪರಿಚಿತರಾದದ್ದೇ ಒಂದು ವಿಶಿಷ್ಠ ಘಟನೆಯ ಮೂಲಕ. ಆಗತಾನೇ ಬಯಲುಸೀಮೆಯ ಧಾರವಾಡದಿಂದ ಗಡಿನಾಡು ಸುಳ್ಯಕ್ಕೆ ವರ್ಗಾವಣೆಗೊಂಡಿದ್ದೆ. ವಾರ್ಷಿಕೋತ್ಸವದ ಕಾರ್ಯಕ್ರಮಗಳ   ಆಯ್ಕೆ ಮಾಡುವಾಗ ಸಿಂಧು ಎಂಬ ಪುಟ್ಟ ಶಿಲಾಬಾಲಿಕೆಯಂತಿರುವ ಹುಡುಗಿ ತಲೆಯ ಮೇಲೆ ಕರಗಾವನ್ನಿಟ್ಟು ಲೀಲಾಜಾಲವಾಗಿ ನರ್ತಿಸಿ ನನ್ನನ್ನು ಅಚ್ಛರಿಗೊಳಿಸಿದ್ದಳು.

ಅವಳ ನೃತ್ಯವನ್ನು ಹೊಗಳುತ್ತಿರುವಾಗ ಸಹಶಿಕ್ಷಕರೊಬ್ಬರು ಅವಳು ಸೋಣಂಗೇರಿ ಶಾಲೆಯಿಂದ ಬಂದ ಹುಡುಗಿಯೆಂದೂ, ಅಲ್ಲಿ ಮೋಹನ ಸೋನಾ ಮತ್ತು ತಂಡದವರು ಅಳಿಲುರಾಮಾಯಣ ಎಂಬ ಬಯಲು ನಾಟಕ ಮಾಡಿಸಿದಾಗ ಈ ಹುಡುಗಿ ಅಳಿಲಿನ ಪಾತ್ರ ನಿರ್ವಹಿಸಿ ಎಲ್ಲರ ಮನಸೂರೆಗೊಂಡಿದ್ದಳೆಂಬ ವಿಷಯವೆಲ್ಲವನ್ನು ತಿಳಿಸಿದರು. ಆಗಿನಿಂದಲೇ ಸೋನಾ ಪರಿಚಿತರು ಎನಿಸತೊಡಗಿತು.

ಮುಂದೆ ಅವರ ಬಯಲು ಚಿತ್ರಾಲಯದ ವಿವರಗಳು ತಿಳಿದವಾದರೂ ಬಸ್ಸಿನಲ್ಲಿ ಹೋಗುವಾಗ ರಸ್ತೆಯಂಚಿನ ಪಾಗಾರದಲ್ಲಿ ಬರೆದ ಚಿತ್ರಗಳನ್ನು ನೋಡಿದ್ದೆನಾದರೂ ಚಿತ್ರಾಲಯಕ್ಕೆ ಪ್ರವೇಶಿಸಿರಲಿಲ್ಲ. ಮುಂದೆ ಶಿಕ್ಷಕ ತರಬೇತಿಯ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವಾಗ  ಎಲ್ಲರೂ ಸೇರಿ ಇಡಿಯ ಗ್ರಾಮವೇ ಕಲಾಶಾಲೆಯಾದ ವಿಸ್ಮಯವನ್ನು ಕಣ್ತುಂಬಿಕೊಂಡಿದ್ದೆವು.

ಸೋನಾ ಆ ದಿನ ಅಲ್ಲಿರಲಿಲ್ಲ. ಅವರ ಮನೆಯಲ್ಲಿ ಪ್ರದರ್ಶನಕ್ಕಿಟ್ಟಿದ್ದ ಕಟ್ಟಿಗೆಯ ಕಲಾಕೃತಿಯನ್ನು ತೋರಿಸಿದ ನನ್ನ ಸ್ನೇಹಿತರೊಬ್ಬರು ತುಂಬಾ ಮೌಲ್ಯವಿರುವ ಕಲಾಕೃತಿಯಿದು, ಆದರೆ ಸೋನಾ ಅದನ್ನು ವಿಕ್ರಯಿಸಲು ಮುಂದಾಗಲಿಲ್ಲ ಎಂದಾಗ ನಾನು ಇದನ್ನು ಮಾರಿ ಇಂಥದ್ದೇ ಇನ್ನೊಂದು ತಯಾರಿಸಿಟ್ಟುಕೊಳ್ಳಬಹುದಲ್ಲ ಎಂದು ಹೇಳಿ ಕಲೆಯ ಬಗ್ಗೆ ನನ್ನ ಅಜ್ಞಾನವನ್ನು ವ್ಯಕ್ತಪಡಿಸಿದ್ದೆ.

ಅಲ್ಲಿರುವ ಹತ್ತಾರು ಮನೆಗಳ  ಬಾವಿಯ ಕಟ್ಟೆ, ಗೇಟು, ಗೋಡೆ, ಬಾಗಿಲು ಎಲ್ಲವೂ ಕ್ಯಾನವಾಸ್ ಆದ ಬಗೆ ಹೊಸದು ಎನಿಸಿತ್ತು. ಆ ಮನೆಯವರೆಲ್ಲ ತಮ್ಮ ಮನೆಗಳಲ್ಲಿ ಉಳಿದು ಚಿತ್ರ ರಚಿಸಿದವರ ಬಗ್ಗೆ ಬಾಯ್ತುಂಬ ಮಾತನಾಡಿದ್ದರು.

ಮುಂದೆ ಶಿಕ್ಷಕರಿಗೆ ನಡೆಸಿದ ರಂಗತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಅವರ ಕಾರ್ಯವೈಖರಿಯನ್ನು ನೋಡಿದ್ದೆನಾದರೂ ಪರಿಚಯ ಮಾತುಕತೆಯ ಹಂತದ್ದೇನೂ ಆಗಿರಲಿಲ್ಲ. ಅವರ ನಿರ್ದೇಶನದ ಮಕ್ಕಳ ನಾಟಕಗಳನ್ನು ಸುಳ್ಯದ ರಂಗಮನೆಯಲ್ಲಿ ನೋಡುತ್ತ ಸೋನ ಮನದೊಳಗೆ ಬೆಳೆಯುತ್ತಲೇ ಹೋದರು.

ಮುಂದೆ ನಾವು ಕುಂದಾಪುರದಲ್ಲಿ ಬಂದು ನೆಲೆಸಿದ ಮೇಲೆ ಸಮುದಾಯದ ಶಿಬಿರಕ್ಕೆ ಬಂದ ಸೋನಾ ಸ್ನೇಹಿತರೊಂದಿಗೆ ಮನೆಗೂ ಬಂದರು. ಹಳ್ಳಿಯಿಂದ ತಂದಿದ್ದ ಸುಲಿದ ಹಸಿಗೇರುಬೀಜವನ್ನು ತಿನ್ನಲು ಕೊಟ್ಟಾಗ ಕಣ್ಣರಳಿಸಿ, ಅದನ್ನು ತುಂಡಾಗಿಸದೇ ತೆಗೆಯುವ ಕ್ರಮದ ಬಗ್ಗೆ ಕೇಳಿ ತಿಳಿದುಕೊಂಡಿದ್ದರು. ಹಳ್ಳಿಯ ಜೀವನವನ್ನು ಗಾಢವಾಗಿ ಪ್ರೀತಿಸುತ್ತಿದ್ದ ಅವರೊಂದಿಗಿನ ಮಾತುಕತೆ ತೀರ ಆಪ್ತವಾದುದಾಗಿತ್ತು.

ಬಣ್ಣಗಳ ಬಗೆಗೆ ಸೋನಾ ಅವರಿಗೆ ಅಸೀಮ ಆಸಕ್ತಿ. ಉಡುಪಿಯ ಮಕ್ಕಳ ಶಿಬಿರದಲ್ಲಿ ಅವರು ಪ್ರತಿ ಮಗುವಿನ ಸ್ವಭಾವವನ್ನೂ ಬಣ್ಣದ ಮೂಲಕವೇ ಹೇಳುತ್ತಿದ್ದ ಕೌತುಕಕ್ಕೆ ನಾನು ಬೆರಗಾಗಿದ್ದೆ. ಆಗತಾನೆ ಹದಿಹರೆಯಕ್ಕೆ ಕಾಲಿಟ್ಟಿದ್ದ ನನ್ನ ಮಗ ತನ್ನ ಇಷ್ಟದ ಬಣ್ಣ ಕಪ್ಪು ಎಂದಾಗ ಅವನನ್ನೊಮ್ಮೆ ದೀರ್ಘವಾಗಿ ದಿಟ್ಟಿಸಿ, ಅವನ ಚಿತ್ರ, ಕವನಗಳನ್ನೆಲ್ಲ ತಿರುಗಿಸಿ ಹಾಕಿ, ಅವನ ಚಟುವಟಿಕೆಗಳನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿ, ಸಂಜೆಯಾಗುವಾಗ ಮತ್ತೆ ಕರೆದು ನಿನ್ನ ಬಣ್ಣ ಕಡುನೀಲಿ.

ಕಪ್ಪು ಅಲ್ಲ ಅನಿಸ್ತದೆ. ಇನ್ನೊಮ್ಮೆ ಯೋಚಿಸಿ ಹೇಳು ಎಂದಾಗ ಅವನು ಹೌದೆಂದು ತಲೆಯಾಡಿಸಿದ್ದ. ಪರಿಸರದ ಬಣ್ಣಗಳನ್ನೇ ಉಪಯೋಗಿಸಿ ಚಿತ್ರ ಬಿಡಿಸುವ ಚಟುವಟಿಕೆಯನ್ನು ಅವರು ಮಾಡಿಸಿದ್ದರು.

ಅವರು ಗಾಢವಾಗಿ ನನ್ನನ್ನು ತಟ್ಟಿದ್ದು ಮಿಸ್ಟೇಕ್ ನಾಟಕದ ಹಿನ್ನೆಲೆಗಾಗಿ ಅವರು ಕೆ. ಜಿ. ಗಟ್ಟಲೇ ಬಣ್ಣ ಉಪಯೋಗಿಸಿ ರಚಿಸಿದ್ದ ಪರದೆಯ ಮೂಲಕ. ಬೆಳಕಿನ ಬದಲಾವಣೆಗನುಸಾರವಾಗಿ ಅದು ಪಡೆಯುತ್ತಿದ್ದ ವಿವಿಧ ವಿನ್ಯಾಸಗಳ ಸೊಬಗು ಇಡಿಯ ನಾಟಕಕ್ಕೊಂದು ಕಳೆ ನೀಡುವಂತಿತ್ತು. ಶಾಂತಿ, ಕ್ರೌರ್ಯ, ಅಸಹನೆ, ನಿರಾಸೆ….. ಹೀಗೆ ಮಾಂಟೋನ ಭಾವಗಳಿಗನುಸಾರವಾಗಿ ಪರದೆ ತನ್ನ ರೂಪ ಬದಲಿಸಿಕೊಳ್ಳುತ್ತಿತ್ತು. ಇದು ಬಣ್ಣಗಳ ಜೊತೆಗೆ ಸಾಹಚರ್ಯವನ್ನು   ಸಾಧಿಸಿದವರಿಗೆ ಮಾತ್ರ ಸಾಧ್ಯವೇನೊ?

ರಾಧಾ ಏಕವ್ಯಕ್ತಿಗಾಗಿ ರಂಗವಿನ್ಯಾಸವನ್ನು ಸೋನಾ ಮಾಡಿದ್ದರು. ಕಾರಂತರ ಜನದಿನೋತ್ಸವದ ಪ್ರಯುಕ್ತ ಕೋಟದಲ್ಲಿ ಅದರ ಪ್ರದರ್ಶನವಿರುವಾಗ ಸೋನಾ ಬರುವುದಾಗಿಯೂ, ಅಲ್ಲಿಂದಲೇ ಕಾರವಾರಕ್ಕೆ ಹೋಗಬೇಕಾಗಿರುವುದರಿಂದ ರಾತ್ರಿಯನ್ನು ನಮ್ಮ ಮನೆಯಲ್ಲಿ ಕಳೆಯುತ್ತಾರೆಂದು ಮಂಜುಳಾ ಕರೆಮಾಡಿದ್ದರು.

ತೀವ್ರ ಅನಾರೋಗ್ಯ ಪೀಡಿತರಾಗಿದ್ದ ನನ್ನ ತಂದೆ  ಮನೆಯಲ್ಲಿರುವುದರಿಂದ ಸೋನಾ ಅವರಿಗೆ ನಮ್ಮ ಮನೆಯಲ್ಲಿ ಉಳಿದುಕೊಳ್ಳಲು ಅನಾನುಕೂಲವಾಗಬಹುದೇನೋ ಎಂದು ಅಳುಕುತ್ತಲೇ ನಾನು ಒಪ್ಪಿಗೆ ಸೂಚಿಸಿದ್ದೆ. ಆದರೆ ಅನಾರೋಗ್ಯದಿಂದಾಗಿ ಆ ದಿನ ಅವರು ಬರಲಿಲ್ಲ. ಅವರಿಗೆ ಆತಿಥ್ಯ ನೀಡುವ  ಅವಕಾಶವೊಂದು ಹೀಗೆ ಕೈಜಾರಿಹೋಯಿತು.

ಸ್ನೇಹಿತರಿಂದ ಸುದ್ಧಿ ತಿಳಿಯುತ್ತಿತ್ತು. ಆರೋಗ್ಯ ಸರಿಯಿಲ್ಲವೆಂದು. ಆದರೂ ವಿಧಿ ಇಷ್ಟೊಂದು ಅವಸರಿಸಬಾರದಿತ್ತು. ಸೋನಾ ಅಪ್ಪಟ ಬಂಗಾರವಾಗಿದ್ದರು. ಬೆರಕೆಯಾಗಿ, ಗಟ್ಟಿಗೊಂಡು ಪ್ರದರ್ಶನಗೊಳ್ಳುವ ಯಾವ ತಹತಹಿಕೆಯೂ ಅವರಲ್ಲಿರಲಿಲ್ಲ. ಒಂದು ಗಾಢವಾದ ವಿಷಾದವನ್ನು ಎದೆಯಲ್ಲಿಟ್ಟುಕೊಂಡ ಸಂತನಂತೆ ಅವರು ಕಾಣುತ್ತಿದ್ದರು. ಬೆಳಗಿನಿಂದ ಅವರ ಅನೇಕ ಆತ್ಮೀಯರು ಬರೆದ ಸಾಲುಗಳನ್ನು ಓದುತ್ತಿದ್ದೇನೆ. ಎಲ್ಲರೂ ಅವರ ನಿಗೂಢ ಮೌನವನ್ನೇ ಧ್ಯಾನಿಸುತ್ತಿದ್ದಾರೆ. ಹೌದು, ಬಣ್ಣ ಅವರ ಭಾಷೆಯಾಗಿತ್ತು. ಅದರಲ್ಲೇ ನಾವು ಅವರನ್ನು ಓದಿಕೊಳ್ಳಬೇಕು.

‍ಲೇಖಕರು Avadhi

October 14, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ವಿಫಲ ಪ್ರೇಮಕ್ಕೆ ಐದು ಉದಾಹರಣೆಗಳು

ವಿಫಲ ಪ್ರೇಮಕ್ಕೆ ಐದು ಉದಾಹರಣೆಗಳು

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ...

7 ಪ್ರತಿಕ್ರಿಯೆಗಳು

 1. Smitha Amrithraj.

  ಸುಧಾ ಬರಹ ಕಣ್ಣಂಚಿನಲ್ಲಿ ನೀರು ಜಿನುಗಿಸಿತು.ನನ್ನೂರಿನ ಅಪ್ಪಟ ಪ್ರತಿಭೆಯೊಂದು ಸದ್ದಿಲ್ಲದೆ ಮರೆಯಾದ ನೋವೊಂದು ಕಾಡುತ್ತಲೇ ಇದೆ. ಮತ್ತೊಮ್ಮೆ ಹುಟ್ಟಿ ಬರಲಿ ಅವರು ಅನ್ನುವುದೇ ಈ ಹೊತ್ತಿನ ಪ್ರಾರ್ಥನೆ.

  ಪ್ರತಿಕ್ರಿಯೆ
 2. Abhilasha S

  ನಮ್ಮೆಲ್ಲರ ಸಂಕಟವನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಿದ್ದೀರಿ ಸುಧಾ

  ಪ್ರತಿಕ್ರಿಯೆ
 3. Shyamala Madhav

  ಅಶ್ರುತರ್ಪಣ ಮನವನ್ನು ಗಾಢವಾಗಿ ತಟ್ಟಿತು, ಸುಧಾ.

  ಪ್ರತಿಕ್ರಿಯೆ
 4. SUDHA SHIVARAMA HEGDE

  ಧನ್ಯವಾದಗಳು ಅಭಿಲಾಷಾ ಹಾಗೂ ಶ್ಯಾಮಲಾ ಮೇಡಂ

  ಪ್ರತಿಕ್ರಿಯೆ
 5. Purushothama Bilimale

  ಸುಧಾ ಅವರು ಮೋಹನ ಸೋನ ಬಗ್ಗೆ ಬರೆದದ್ದು ಓದಿ ಭಾವುಕನಾದೆ.
  ೧೯೮೦ರ ದಶಕದಲ್ಲಿ ನಾನು ಮತ್ತು ಮೋಹನ ಮಾಡಿದ ಕಿತಾಪತಿಗಳಿಗೆ ಕೊನೆಯೇ ಇರಲಿಲ್ಲ.‌ ಸುಳ್ಯ ತಾಲೂಕಿನ ಎಲ್ಲ ಹಳ್ಳಿಗಳನ್ನೂ ಬಹುತೇಕವಾಗಿ ಕಾಲ್ನಡಿಗೆಯಿಂದಲೇ ಸುತ್ತಿದವರು ನಾವು. ಹಾಗೆ ಸುತ್ತುವಾಗ ಅಡಿಕೆ ತೋಟಗಳಲ್ಲಿ ಕಾಲು ಜಾರಿ ಬಿದ್ದ ಹೊಂಡಗಳ ಲೆಕ್ಕ ಇಟ್ಟವರಿಲ್ಲ. ಚೋಮ, ನಾಳೆ ಯಾರಿಗೂ ಇಲ್ಲ, ತೆರೆಗಳು ಮೊದಲಾದ ನಾಟಕಗಳಲ್ಲಿ ಜೊತೆಯಾಗಿ ಅಭಿನಯಿಸಿದೆವು. ಪುಸ್ತಕಗಳ ಪ್ರಕಟನೆ ಮಾಡಿದೆವು. ಸುದೇಶ್ ಮಹಾನ್ ಜೊತೆಗೂಡಿ ಬಳ್ಳಿ ಮತ್ತು ಎಕ್ಕಡ ಚಿತ್ರಕಲಾ ಪ್ರದರ್ಶನ ಮಾಡಿದೆವು. ದಣಿವರಿಯದ ಆತ ಸೋಣಂಗೇರಿಯಲ್ಲಿ ಬಯಲು ಚಿತ್ರಾಲಯ ಮಾಡಿ ಇಡೀ ರಾಜ್ಯದ ಗಮನ ಸೆಳೆದ. ಮಕ್ಕಳ ರಂಗಭೂಮಿಗೆ ದುಡಿದ. ಕಾರವಾರದ ಕಡಲ ತೀರದಲಿ ಶಿಲ್ಪಗಳ ನಿಲ್ಲಿಸಿದ. ಮಂಗಳೂರಿನ ಅಜಂತ ಕಲಾವಿದರಿಗೆ ಸೋನನೇ ಸ್ಫೂರ್ತಿ.

  ಅವನಿಗೆ ಮೋಸವೆಂದರೇನೆಂದೇ ತಿಳಿಯುತ್ತಿರಲಿಲ್ಲ. ಸ್ನೇಹವೆಂದರೆ ಮತ್ತೆ ಅದರಲ್ಲಿಯೇ ತಲ್ಲೀನ. ಮಾತು ಕಡಿಮೆ, ಯೋಚನೆ ಹೆಚ್ಚು. ಅವರ ತಂದೆ, ಅಣ್ಣ, ತಮ್ಮಂದಿರು, ತಂಗಿ- ಎಲ್ಲರೂ ಸಜ್ಜನಿಕೆಗೆ ಹೆಸರಾದವರು.

  ಈಗ ವರುಷದ ಹಿಂದೆ ಬಿಳಿಮಲೆಯಲ್ಲಿ ನಡೆದ ಪುಸ್ತಕ ಬಿಡುಗಡೆಗೆ ಬಂದಿದ್ದ. ಸಮಾರಂಭದ ಗಡಿಬಿಡಿಯಲ್ಲಿ ಹೆಚ್ಚು ಮಾತಾಡಲಾಗಲಿಲ್ಲ. ಉಷಾರಿಲ್ಲ ಅಂದಿದ್ದ. ಈಗ ಹೊರಟೇ ಹೋದ. ಇನ್ನೆಲ್ಲಿಯ ಮಾತು?
  ಸಾವುಗಳ ಸುದ್ದಿ ಕೇಳಿ ದಣಿವಾಗಿದೆ. ಅದೆಲ್ಲೋ ಕದ ತಟ್ಟುತ್ತಿರುವ ಹಾಗೆ ಭಾಸವಾಗುತ್ತಿದೆ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: