ಸೌಮ್ಯಾ ಕಲ್ಯಾಣ್‌ಕರ್ ಬರೆದ 'ಜನ್ನೂ ಕಥೆ'

ಜನ್ನುವಿನ ಬಸ್ಸು ಪಯಣ

ಸೌಮ್ಯ ಕಲ್ಯಾಣ್‌ಕರ್

ಜನ್ನು ಇವತ್ತು ಖುಷಿಯಲ್ಲಿ ಮೂರಡಿ ಆರಡಿ ಲಾಗ ಹಾಕುತ್ತಿದ್ದ. ಅವನಿವತ್ತು ಜಬರ್ದಸ್ತಾಗಿ ಅಲಂಕಾರ ಮಾಡಿಕೊಂದ್ದ. ಚೆಂದದ ಶರ್ಟು, ಚೆಡ್ಡಿ, ಮುಖದ ತುಂಬಾ ಅಮ್ಮ ಹಾಕಿದ ಪೌಡರ್ರು. ಅಲ್ಲದೇ ಚೆಂದದ ಉದ್ದದ ಕಾಡಿಗೆಯ ನಾಮ ಬೇರೆ. ಅವನು, ಅವನಮ್ಮ ಇವತ್ತು ಅವನ ಪ್ರೀತಿಯ ಪಿನ್ನಮ್ಮನ ಮನೆಗೆ ಹೊರಟಿದ್ದರು. ಪಿನ್ನಮ್ಮನನ್ನು ಕಂಡರೆ ಜನ್ನುವಿಗೆ ಪ್ರಾಣ. ಪಿನ್ನಮ್ಮ ಅವನಮ್ಮ ಭಾಗೀರಥಿಯ ತಂಗಿ. ನಿಜಕ್ಕೂ ಅವಳ ಹೆಸರು ಪದ್ಮಾವತಿ. ಜನ್ನು ಅವರನ್ನು ಪಿನ್ನಮ್ಮ ಎಂದೇ ಕರೆದು ಕರೆದು ಎಲ್ಲರ ಬಾಯಿಯಲ್ಲೂ ಆದೇ ಹೆಸರು ಖಾಯಂ ಆಗಿ ಉಳಿದಿತ್ತು. ಜನ್ನುವನ್ನು ನೋಡಲು ಬಂದ ತಿಮ್ಮುವಿಗೆ ಅವನ ಹೊಸ ವೇಷ ನೋಡಿ ಅಚ್ಚರಿಯೊಂದಿಗೆ ಗಾಬರಿಯೂ ಆಯ್ತು. ತಿಮ್ಮುವನ್ನು ನೋಡಿ ಖುಷಿಯಿಂದ ಜನ್ನು, “ ಏ ತಿಮ್ಮು, ನಾನಿವತ್ತು ಪಿನ್ನಮ್ಮ ಮನೆಗೆ ಹೋಯ್ತಾ ಇದೀನೋ” ಎಂದು ಥೇಟ್ ಮಂಗನ ಹಾಗೆ ಲಾಗ ಹಾಕಿ ಕುಣಿದ.
ತಿಮ್ಮು ಮುಖ ಸಣ್ಣಗಾಗಿದ್ದನ್ನು ಗಮನಿಸದ ಜನ್ನು ಅಲ್ಲಿರುವ ಅವನ ಇಬ್ಬರು ತಂಗಿಯರು ಪುಟ್ಟಿ ಮತ್ತು ಜಾನು, ಟೈಗರ್ ನಾಯಿ, ಅವರ ಬಾವಿಯಲ್ಲಿನ ಚಿಕ್ಕ ಆಮೆ, ಅನ್ನ ಹಾಕಿದರೆ ತಿನ್ನಲು ಬರುವ ದೊಡ್ಡ ಮುಗುಡು ಮೀನು, ಮತ್ತೆ ಪಿನ್ನಮ್ಮನ ಮನೇಲಿರೋ ಚಿರಿಪಿರಿ ಅಜ್ಜಿ … ಎಲ್ಲವನ್ನೂ ಬಡ ಬಡ ಒದರುತ್ತಾ ಒದರುತ್ತಾ ಯಾಕೋ ತಿಮ್ಮು ಮಾತಾಡುತ್ತಿಲ್ಲ ಅನಿಸಿ, ಇದ್ದಕಿದ್ದಂತೆ ನಿಲ್ಲಿಸಿ ಅವನ ಮುಖ ನೋಡಿದ. ತಿಮ್ಮುವಿನ ಮುಖ ರಾಹು ಹಿಡಿದ ಚಂದ್ರನಂತಾಗಿತ್ತು. ಅವನ ಪ್ರಿಯ ಗೆಳೆಯ ಹೋದರೆ ಇವನ ಜೊತೆ ಆಡುವವರಾರು? ಅಮ್ಮ ಹೋದರೆ ಚೆಂದ ಚೆಂದ ಚಕ್ಕುಲಿ, ರವೆ ಲಾಡು ಕೊಡುವವರಾರು? ಎಲ್ಲದಕಿಂತ ಹೆಚ್ಚಾಗಿ ಜನ್ನುವಿಲ್ಲದೆ ಇರುವುದಾದರೂ ಹೇಗೆ? “ಏನೋ ತಿಮ್ಮು?” ಎಂದು ಜನ್ನು ಕೇಳುತ್ತಿದ್ದಂತೆ ಗೋಳೋ ಅಂತ ಅಳಲು ಶುರು ಮಾಡಿದ. ಅವನ ಅಳುವಿನ ಮಧ್ಯೆ ಅರೆ ಬರೆ ತೊದಲು ಮಾತುಗಳಲ್ಲಿ ಅವನ ಸಂಕಟ ಅರ್ಥವಾಗಿ ಜನ್ನುವಿಗೆ ಗಂಟಲು ಉಬ್ಬಿ ಬಂದಂತಾಗಿ ಅಳು ಬಂತು.

ದೇವಕಿಯತ್ತೆಗೆ, ಅತ್ತೆಗೆ ಕೊಡಬೇಕಾದ ಮದ್ದುಗಳ ಬಗ್ಗೆ ಹೇಳುತ್ತಿದ್ದ ಭಾಗೀರಥಿ ಮಕ್ಕಳ ಅಳು ಕೇಳಿಸಿ ಗಾಬರಿಯಿಂದ ಹೊರ ಧಾವಿಸಿ ನೋಡುತ್ತಾಳೆ! ಇಬ್ಬರೂ ಮಕ್ಕಳು ಆಕಾಶಕ್ಕೂ ಕೇಳುವಂತೆ ಬೊಬ್ಬೆ ಹಾಕಿ ಅಳುತ್ತಿದ್ದಾರೆ! ಅವರನ್ನು ಸಮಾಧಾನ ಮಾಡಿ ತಿಮ್ಮುವೂ ಅವರೊಂದಿಗೆ ಬರಬಹುದು ಎಂದಾಗ ಹಾಕಿದ ಮಕ್ಕಳ ಖುಷಿಯ ಬೊಬ್ಬೆ ಅವರ ಅಳುವಿನ ಬೊಬ್ಬೆಯನ್ನೂ ನಾಚಿಸುವಂತಿತ್ತು. ಆವಾಗಷ್ಟೇ ಕಾಲು ನೋವಿಗೆ ಎಣ್ಣೆ ತಿಕ್ಕಿಸಿಕೊಂಡು ಮಲಗಿದ್ದ ಅತ್ತೆ ಎಲ್ಲಿ ಎದ್ದು ಬರುತ್ತಾರೋ ಎಂದು ಹೆದರಿ ಭಾಗಿರಥಿ “ ಏ ತಿಮ್ಮು, ನಿನ್ನ ಬಟ್ಟೆ ತಾ ಮಾರಾಯ” ಎಂದು ಓಡಿಸಿದ್ದಾಯ್ತು. ಬಿದ್ದದ್ದೂ, ಮುಳ್ಳು ಕಂತಿದ್ದೂ ಏನೂ ಗಮನಕ್ಕೇ ಬಾರದಂತೆ ತಿಮ್ಮು ಸವಾರಿ ಮನೆಗೆ ಓಡಿದ್ದಾಯ್ತು, ಜಾತ್ರೆಯಲ್ಲಿ ಅಮ್ಮ ಕೊಡಿಸಿದ ಗುಲಾಬಿ ಅಂಗಿ, ನೀಲಿ ಚಡ್ಡಿ ಹಾಕಿ, ಕೈಲೊಂದು ಗಂಟು ಹಿಡಿದು ಬಂದದ್ದೂ ಆಯ್ತು. ಚಾವಡಿಯಲ್ಲಿ ಕುಳಿತಿದ್ದ ಭಾಗೀರಥಿ ಕಾಲ ಮಧ್ಯದಲ್ಲಿ ದಿಂಗಾಣ ಹಾಕುತ್ತಿದ್ದ ಜನ್ನುವಿಗೆ ಬಲವಂತವಾಗಿ ಹಾಲು ಅನ್ನ ತಿನ್ನಿಸಲು ಹೆಣಗಾಡುತ್ತಿದ್ದವಳು “ಅಮ್ಮ” ಎಂದು ಕರೆದಂತಾಗಿ ತಲೆಯೆತ್ತಿ ನೋಡಿದಾಗ ಕಂಡದ್ದು ಚೆಂದ ಮಾಡಿ ಸಿಂಗಾರ ಮಾಡಿ ಹೊರಟ ತಿಮ್ಮು ಮತ್ತವನ ಕೈಲಿದ್ದ ಪುಟ್ಟ ಗಂಟು. ಅವನ ಉತ್ಸಾಹಕ್ಕೆ ಅವಳಿಗೆ ನಗು ತಡೆಯಲಾಗಲಿಲ್ಲ. “ ಹೋಗು, ದೇವಕಿಯತ್ತೆ ನಿನಗೂ ಊಟ ಕೊಡ್ತಾರೆ “ ಅನ್ನುತ್ತಿದ್ದಂತೆ ತಿಮ್ಮು ಓಡಿಯಾಗಿತ್ತು. ಹಾಗೂ ಹೀಗೂ ಜನ್ನುವಿನ ಊಟ ಮಾಡಿಸಿ ತಿಮ್ಮುವಿನ ಬಟ್ಟೆ ಗಂಟನ್ನು ಇನ್ನೊಂದು ಬ್ಯಾಗ್ ಮಾಡಿ ಸೇರಿಸಿದ್ದೂ ಆಯ್ತು.
ಜನ್ನುವಿಗೆ ತಿನ್ನಿಸುತ್ತಿದ್ದಂತೆ ಭಾಗೀರಥಿಗೆ ಖುಷಿ, ಆತಂಕಗಳೆರಡೂ ಒಳಗೊಳಗೆ ಪುಟಿಯುತ್ತಿದ್ದವು. ಅಮ್ಮ ಎಲ್ಲೋ ಕಳೆದು ಹೋಗುವುದು ಜನ್ನುವಿಗೆ ಅರ್ಥವಾಗುತ್ತಿತ್ತು. ಆಗ ಅವನಿಗೇನು ಮಾಡಬೇಕೆಂದು ಕೂಡಾ ಗೊತ್ತು, ‘ ನಾನು ಅಳುವಾಗ ಅಮ್ಮ , ಬಂಗಾರಿ ಬಾಬು, ಕಂದಮ್ಮ, ಚಿನ್ನಾರಿ… ಅಂತೆಲ್ಲಾ ಕರೀತಾಳೆ, ನಾನೂ ಅಮ್ಮಂಗೆ ಅದೇ ಮಾಡ್ತೇನೆ’ ಎಂದುಕೊಂಡು ತನ್ನ ಮೃದು ಪುಟ್ಟ ಕೈಗಳಿಂದ ತನ್ನ ಚೆಂದದ ಅಮ್ಮನ ಮೆತ್ತಗಿನ ಮುಖ ಬಳಸಿ “ಬಂಗಾರಿ ಅಮ್ಮ, ಕಂದಮ್ಮ, ಚಿನ್ನಾರಿ… “ ಎಂದೆಲ್ಲಾ ಅಂದು ಮುತ್ತುಗಳ ಸುರಿಮಳೆ ಸುರಿಸಿದ. “ ಸಾಕೋ ಮಾರಾಯ, ನಿನ್ನ ಕೊಂಗಾಟ, ಪಿನ್ನಮ್ಮ ಸಿಕ್ಕರೆ ನಾನು ಬೇಡ ನಿನಗೆ! ಅವಳ ಉದ್ದ ಜಡೆ ಹಿಡಿದು ನೇತಾಡೋದೇ ಕೆಲ್ಸ ನಿಂಗೆ” ಎಂದು ತನ್ನ ಅನ್ಯಮಸ್ಕತೆಯಿಂದ ಹೊರಬಂದು, ಮಗನ ಮುದ್ದಿಗೆ ಕರಗಿ ಹೋದ ಅಮ್ಮ ಮುಖ ಒರೆಸುತ್ತಾ ಹುಸಿ ಮುನಿಸಿನಿಂದ ಬೈದಳು.
ಅಂತೂ ಇಂತೂ ಅಮ್ಮ, ಮಗ, ತಿಮ್ಮುವಿನ ಸವಾರಿ ಹೊರಟಿತು ಬಿಸಿಲು ಇಳಿದ ಮೇಲೆ. ಅಪ್ಪ ಮುಂದೆ ಹೆಗಲ ಮೇಲೆರಡು, ಕೈಲ್ಲೊಂದು ಬ್ಯಾಗ್ ಹಿಡಿದು ನಡೆದುಕೊಂಡು ಹೊರಟದ್ದನ್ನು ನೋಡಿ ಜನ್ನುವಿಗೆ ತಲೆ ಬಿಸಿಯಾಯಿತು. ‘ ಈ ಅಪ್ಪ ಬಂದರೆ ಅಲ್ಲೇನೋ ಮಾಡೋಕೆ ಬಿಡಲ್ಲ, ರಾಮಚಂದ್ರ ದೇವರೇ, ಅಪ್ಪ ಅಲ್ಲಿಗೆ ಬರುವುದು ಬೇಡಪ್ಪ’ ಎಂದು ಪಟದಲ್ಲಿ ನಗುವ ದೇವರ ಬೇಡಿಕೊಂಡ. ಅಷ್ಟರಲ್ಲೇ ಮಿಠಾಯಿ ಹೂವಿನ ಕಮಾನಿನ ಬಳಿ ನಿಂತು ಏನೋ ಮಾಡುತ್ತಿದ್ದ ಆಚೆ ಮನೆಯ ಕಿಟ್ಟು ಮಾಮ “ ಹೋಯ್! ರಾಮಣ್ಣ, ದೂರ ಹೊರಟದ್ದು ದಿಬ್ಬಣ ?” ಎಂದರು. ಜನ್ನುವಿಗೆ ಉಸಿರು ಸಿಕ್ಕಿ ಹಾಕಿಕೊಂಡಂತಾಯ್ತು, ಹೋದ ಸಲ ಅವರು ಬರೆದ ಚಿತ್ರವನ್ನು ಹಾಳು ಮಾಡಿ ಬಂದವನು ಆ ಕಡೆಗೆ ತಲೆಯೇ ಹಾಕಿರಲಿಲ್ಲ. ಎಲ್ಲಿ ಕಿಟ್ಟು ಮಾಮ ಎಲ್ಲವನ್ನೂ ಅಪ್ಪನಿಗೆ ಹೇಳಿಬಿಡ್ತಾರೋ ಅನ್ನುವ ಭಯ, ಅಷ್ಟರಲ್ಲಿ ಅಪ್ಪ “ ಇಲ್ಲ ಕಿಟ್ಟು, ಇವಳು ತಂಗಿ ಮನೆಗೆ ಹೊರಟಳು, ಬಸ್ ಹತ್ತಿಸಿ ಬರುವಾ ಅಂತ ಅಷ್ಟೇ “ ಅಂದರು. ಅದಕ್ಕೆ ನಕ್ಕ ಕಿಟ್ಟು ಮಾಮ, “ ಏನೋ ಜನ್ನು ಮರಿ, ಬರೋದೇ ಇಲ್ಲ ನಮ್ಮನೆಗೆ, ನನ್ನ ಮೇಲೆ ಸಿಟ್ಟೇನೋ ?, ಅರೇ, ತಿಮ್ಮು ಸವಾರಿನೂ ಹೊರಟಿದೆ, ಅತ್ತಿಗೆ, ಈ ಎರಡು ತರ್ಲೆಗಳನ್ನು ಹೊತ್ತುಕೊಂಡು ಹೇಗೆ ಹೋಗ್ತೀರಾ ?, ಜಾಗ್ರತೆ “ ಎಂದರು. ಕಿಟ್ಟು ಮಾಮ ಏನನ್ನೂ ಹೇಳಲಿಲ್ಲ ಎಂಬುದು ಒಂದು ಖುಷಿಯಾದರೆ, ಅಪ್ಪ ನಮ್ಮೊಟ್ಟಿಗೆ ಬರುವುದಿಲ್ಲ ಎಂಬುದು ಮತ್ತೊಂದು ಖುಷಿ ಜನ್ನುವಿಗೆ. ಕಿಟ್ಟು ಮಾಮನನ್ನು ನೋಡಿ ಹಲ್ಲು ಕಿರಿದ ಅಷ್ಟೇ. ಭಾಗೀರಥಿಯೂ ಅವರ ಮಾತಿಗೆ ನಸು ನಕ್ಕು “ಬರ್ತೇನೆ ಕಿಟ್ಟಣ್ಣಾ, ಕಮಲತ್ತೆಗೂ ಹೇಳಿಬಿಡಿ “ ಎಂದು ಮುಂದೆ ಹೆಜ್ಜೆ ಹಾಕಿದಳು. ಮುದ್ದು ಮುದ್ದಾಗಿ ಕಾಣುತ್ತಿದ್ದ,ಅಪ್ಪ ಇದ್ದಾರೆಂದು ಗಾಂಭೀರ್ಯದ ಸೋಗು ಹಾಕಿ ಮಹಾ ದೊಡ್ಡವನಂತೆ ಕಾಲು ಹಾಕುತ್ತಿದ್ದ ಜನ್ನುವನ್ನು ನೋಡಿ ಕಿಟ್ಟು ಮಾಮನಿಗೆ ನಗುವೋ ನಗು!
ಗದ್ದೆಯಲ್ಲಿ, ಕಾಲು ದಾರಿಯಲ್ಲಿ ಸಿಕ್ಕಿದ್ದವರೊಡನೆಯೆಲ್ಲಾ ಉಭಯಕುಶಲೋಪರಿ, ಮಾತು ಕಥೆಗಳೆಲ್ಲಾ ಮುಗಿದು ಎಲ್ಲರೂ ಬಸ್ ನಿಲ್ಲುವ ಜಾಗಕ್ಕೆ ಬಂದರು. ಈಗ ಹನುಮಾನ್ ಬಸ್ ಬರುವ ವೇಳೆ ಅಂತ ಅಪ್ಪ ಹೇಳುತ್ತಿದ್ದದ್ದು ಜನ್ನುವಿಗೆ ಕೇಳಿ ಅದು ತಿಮ್ಮುವಿನ ಕಿವಿಯಲ್ಲಿ ಉಸುರಿದ್ದೂ ಆಯ್ತು. ಮಕ್ಕಳು, ‘ ನಾನು ಆ ಸೀಟು, ನೀನು ಈ ಸೀಟು’ ಅಂತ ಮಾತನಾಡಿಕೊಳ್ಳುತ್ತಿದ್ದರೆ ಅಪ್ಪ ಅಮ್ಮನ ಕಿವಿಯಲ್ಲಿ ಏನೋ ಹೇಳುತ್ತಿದ್ದರು. ಅಮ್ಮನ ಮುಖದಲ್ಲಿ ಆತಂಕವೂ ಕಾಣುತ್ತಿದ್ದನ್ನು ಜನ್ನು ಗಮನಿಸಿದ. ಅಮ್ಮ ಮುಖ ಸಣ್ಣದು ಮಾಡಿದರೆ ಸಾಕು ಅಮ್ಮನ ಮುಖ ಹಿಡಿದು ಮುದ್ದು ಮಾಡಿ ಅಮ್ಮನ ಬೇಸರ ಓಡಿಸುವ ಚಿಲ್ಟಾರಿ ಡಾಕ್ಟರ್ರಿಗೆ ಈಗ ಹಾಗೆ ಮಾಡಲು ಹೆದರಿಕೆ. ಬಸ್ ಅಲ್ಲಿ ಕೂತು ಹೋಗೋದಿದೆ, ರಸ್ತೆ ಬದಿ ನಿಂತಿದ್ದು ಅದೂ ಸಾಲದು ಅಂತ ಈ ಅಪ್ಪ ಬೇರೆ ಇದ್ದಾರೆ. ಓರೆಗಣ್ಣಲ್ಲಿ ಅಮ್ಮನನ್ನೇ ನೋಡುತ್ತಿದ್ದ. ಅಗೋ, ಅಷ್ಟರಲ್ಲಿಯೇ ಬಂತು ಮಕ್ಕಳ ರಥ, ಕೆಂಪು ಬಣ್ಣದ ಹನುಮಾನ್ ಬಸ್ಸು. ಮುಕ್ಕಾಲಂಶ ಖಾಲಿಯಿದ್ದ ಬಸ್ಸಿಗೆ ಭಾಗೀರಥಿ ಮಕ್ಕಳನ್ನು ಹತ್ತಿಸಿ ತಾನೂ ಹತ್ತಿ ಗಂಡನಿಗೆ ತಲೆಯಾಡಿಸಿದಳು. ಮಹಾರಾಜ, (ಮಹಾರಾಜ ಅನ್ನೋದು ಡ್ರೈವರ್ ಭೀಮಣ್ಣನಿಗೆ ಮಕ್ಕಳಿಟ್ಟ ಹೆಸರು, ) “ಬರ್ತೆ ಧಣಿಗಳೇ” ಎಂದಿದ್ದೂ ಆಯ್ತು. ಕಂಡಕ್ಟರ್ ಪರಮೇಶಿ ನಮಸ್ಕಾರ ಹೊಡೆದದ್ದೂ ಆಗಿ ಕೊನೆಗೂ ಬಸ್ಸು ಹೊರಟಿತು. ಅಮ್ಮ ಇಬ್ಬರನ್ನೂ ಕಿಟಕಿಯ ಬಳಿ ಕುಳಿತುಕೊಳ್ಳಲು ಹೇಳಿದರೆ ಇಬ್ಬರ ಮುಖವೂ ಸಪ್ಪೆ, ಅವರಿಗೆ ಮಹಾರಾಜನ ಪಕ್ಕದಲ್ಲಿ ಉದ್ದಕ್ಕೆ ಇರುತ್ತಲ್ಲ, ಆ ಸೀಟ್ ಬೇಕಿತ್ತು. ಆದರೆ ಅಮ್ಮ ಬಿಡಲೇ ಇಲ್ಲ. ಡ್ರೈವರ್ ಮಾಮ ಬ್ರ‍ೇಕ್ ಹಾಕಿದರೆ ನೀವಿಬ್ಬರೂ ಬಸ್ಸಿನ ಗಾಜಿನ ಎದುರು ಇಟ್ಟಿದ್ದ ಹನುಮನ ಮೇಲೆ ಹೋಗಿ ಬೀಳುತ್ತೀರಿ ಅಂತ ಬೈದರು.
ಸರಿ, ಕಿಟಕಿಯ ಪಕ್ಕ ಜನ್ನು, ಅವನ ಪಕ್ಕ, ತಿಮ್ಮು, ಪಕ್ಕದಲ್ಲಿ ಅಮ್ಮ ಕೂತಿದ್ದಾಯ್ತು. ಬಸ್ ಹೊರಟಿದ್ದೇ ತಡ, “ಓ…….” ಎಂದು ಬಸ್ ಅಲ್ಲಿ ಕೂತಿದ್ದವರು ಬಿಡಿ, ದಾರಿಯಲ್ಲಿ ನಡೆದು ಹೋಗುತ್ತಿದ್ದ ನಾಯಿಗಳೂ ಬೆದರಿ ಓಡುವಂತೆ ಅರ್ಭಟ ಕೊಟ್ಟರು ಮಕ್ಕಳಿಬ್ಬರೂ. ಅಮ್ಮ ದೊಡ್ಡ ದೊಡ್ಡ ಕಣ್ಣು ಮಾಡಿ ನೋಡಿದರು. ಅದು ಅವರ ಉತ್ಸಾಹದ ಒಂದು ಇಂಚನ್ನೂ ಕಡಿಮೆ ಮಾಡಲಿಲ್ಲ! ಮಹಾರಾಜನ ಮೇಲೇ ಕಣ್ಣು ಇಬ್ಬರಿಗೂ. ಅವನ ಹುಲಿಯ ಹಾಗೆ ಪಟ್ಟೆ ಪಟ್ಟೆ ಶರ್ಟು, ಉದ್ದದ ಕೂದಲು, ಕೂದಲು ತುಂಬಿದ್ದ ಅವನ ದೊಡ್ಡ ದೊಡ್ಡ ಕೈ, ಕೈಲಿದ್ದ ದಪ್ಪದ ಬಳೆ, ಆ ಕೈ ಬಸ್ಸಿನ ಚಕ್ರವನ್ನು ತಿರುಗಿಸೋ ಪರಿ, ಮಧ್ಯೆ ಮಧ್ಯೆ ಪಕ್ಕದಲ್ಲಿದ್ದ ಉರುಟು ತಲೆಯ ಕೋಲನ್ನು ಬಲವಾಗಿ ಎಳೆಯೋ ಪರಿ ಕಂಡು ಇಬ್ಬರೂ ದಂಗು ಬಡಿದಂತೆ ಕೂತರು. ಅಷ್ಟರಲ್ಲಿ ತಿಮ್ಮು ಕಣ್ಣು ಗಾಜಿನ ಮೇಲೆ, ತುದಿಯಲ್ಲಿ ನೇತು ಹಾಕಿದ್ದ ಮೂರು ಪಟಗಳ ಮೇಲೆ ನೆಟ್ಟಿತು. “ಏ ಜನ್ನು, ಆ ಪಟ ನೋಡೋ” ಅಂತ ಅವನನ್ನು ಕರೆದು ತೋರಿಸಿದ್ದಾಯ್ತು. ಇಬ್ಬರೂ ಅದರಲ್ಲಿದ್ದ ಗಣೇಶನನ್ನು ಗುರುತು ಹಿಡಿದರು. ಅದರ ಪಕ್ಕದ ಚಂದ್ರ ಮತ್ತೆ ಉರುಟು ಗೋಡೆಯನ್ನು “ಏನೋ ಅದು, ಯಾಕೋ ಚಂದ್ರ ಅಲ್ಲಿದ್ದಾನೆ? “ ಅಂತೆಲ್ಲಾ ತಮ್ಮಲ್ಲೇ ಪಿಸಿ ಪಿಸಿ ಮಾತನಾಡಿಕೊಂಡರು. ಅದರ ಪಕ್ಕದಲ್ಲಿ ಬಿಳಿ ಬಿಳಿ, ಉದ್ದ ಕೂದಲಿನ ಈಶ್ವರನ ಕಣ್ಣಿದ್ದ ಹಾಗೇ ಕಣ್ಣಿದ್ದ ಚೆಂದದ ಮನುಷ್ಯನನ್ನ ನೋಡಿ ಹೇಳಲಾಗದ ಭಾವದಿಂದ ಒಬ್ಬರನ್ನೊಬ್ಬರು ನೋಡಿಕೊಂಡರು. ಆ ಮನುಷ್ಯನನ್ನ ಎಲ್ಲೋ ನೋಡಿದ್ದೇನೆ ಅನಿಸಿದ ಜನ್ನು ಕಣ್ಣು ಅಲ್ಲಿಂದ ಕೀಳಲಾಗದೇ ಅಮ್ಮನನ್ನ “ಅಮ್ಮ, ಅವರ್ಯಾರು? ಮತ್ತೆ ಪಕ್ಕದ ಪಟದಲ್ಲಿ ಚಂದ್ರ ಮತ್ತೆ ಉರುಟು ಗೋಡೆ ಯಾಕಿದೆ? “ ಎಂದು ಕೇಳಿದ. ಪರಮೇಶಿಗೆ ಕೊಡಲು ಬ್ಯಾಗಿಂದ ದುಡ್ಡು ರೆಡಿ ಮಾಡುತ್ತಿದ್ದ ಅಮ್ಮ ನಕ್ಕು ಸರ್ವ ಧರ್ಮಗಳ ಬಗ್ಗೆ ಮಕ್ಕಳ ತಲೆಗಿಳಿಯುವಂತೆ ಚಿಕ್ಕದ್ದೊಂದು ಉಪನ್ಯಾಸ ಕೊಟ್ಟಿದ್ದಾಯ್ತು. ಅಮ್ಮ ಹೇಳಿದ್ದು ಅಷ್ಟೇನೂ ಅರ್ಥವಾಗದ ಜನ್ನುವಿಗೆ ಉದ್ದ ಕೂದಲಿನ ಏಸು ಎಂಬ ದೇವರು ಮತ್ತವನ ಶಾಂತ ಕಣ್ಣು, ಉರುಟು ಗೋಡೆ ಮತ್ತು ಚಂದಿರ ಅಚ್ಚಳಿಯದಂತೆ ಉಳಿದುಬಿಟ್ಟರು. ಇದ್ದಕ್ಕಿದ್ದ ಹಾಗೆ ಅರೇ! ಹೌದಲ್ಲಾ? ಏಸು ದೇವರು ಇದ್ದಿದ್ದು ಲವೀನಕ್ಕನ ಮನೆಯಲ್ಲಿ, ಅಲ್ಲಿ ಕಟ್ಟಿಗೆಯ ಮೇಲೆ ನೇತು ಹಾಕಿದ ಚಿತ್ರವಿತ್ತಲ್ಲ ಎಂಬುದು ನೆನಪಾಯ್ತು. ಅದನ್ನ ತಿಮ್ಮುವಿಗೆ ಹೇಳಿ ಅವನು “ಅಯ್ಯೋ ಪಾಪ, ಇದು ಮೊದಲಿದ್ದ ಚಿತ್ರ, ಹಾಗಾದರೆ” ಎಂದ. ಜನ್ನುವಿಗೂ ಹೌದು ಅನಿಸಿತು. ಮತ್ತೆ ಭೀಮಣ್ಣನ ಹಿಂದಿದ್ದ ಗಾಜಿನ ಕಿಟಕಿಯ ಮೇಲೆ ಏನೋ ಚಿತ್ರ ಅಂಟಿಸಿದ್ದಾರೆ, ಅದರಲ್ಲಿ ಒಬ್ಬಳು ಹುಡುಗಿ ಪಾತ್ರೆ ತೊಳೆಯುತ್ತಿದ್ದಾಳೆ, ಹುಡುಗ ಒಬ್ಬ ಇವರು ಶಾಲೆಗೆ ಹೋಗುವ ಹಾಗೆ ಬ್ಯಾಗ್ ಎಲ್ಲಾ ಹಾಕಿಕೊಂಡು ಹೊರಟಿದ್ದಾನೆ. ಅದರ ಮೇಲೆ ಇಬ್ಬರಿಗೂ ಅರ್ಥವಾಗದಂತೆ ಏನೇನೋ ಬರೆದಿದ್ದರು. ಸರಿ ಮತ್ತೆ ಅಮ್ಮನ ಹತ್ತಿರ ಕೇಳಿದ್ದಾಯ್ತು. ಅಮ್ಮ “ಆ ಹುಡುಗಿಯನ್ನು ಶಾಲೆಗೆ ಕಳಿಸಲ್ಲ ಅವಳ ಅಪ್ಪ, ಅಮ್ಮ ಅದಕ್ಕೆ ಅವಳಿಗೆ ಬೇಜಾರು” ಅಂದರು. “ಮತ್ತೆ ಅವನು?” ಅಂದ ತಿಮ್ಮು. “ಹೂಂ, ಅದು ಅವಳ ತಮ್ಮ, ಅವನನ್ನ ಕಳಿಸ್ತಾರೆ ಶಾಲೆಗೆ, ಅವಳನ್ನ ಮನೆಕೆಲ್ಸಕ್ಕೆ ಮನೇಲೇ ಇಟ್ಟುಕೊಂಡಿದ್ದಾರೆ” ಎಂದರು ಅಮ್ಮ. ಅದ್ಯಾಕೆ ಅಂತ ಕೇಳೋಣ ಅನಿಸಿದರೂ ಇಬ್ಬರೂ ಸುಮ್ಮನಾದರು. ಜನ್ನು ತಿಮ್ಮು ಕಿವಿಯಲ್ಲಿ “ಪಾಪ, ಅಲ್ಲಾ ?” ಅಂದ.
ಓಡುವ ಮರಗಳು, ತಂತಿ ಕಂಬಗಳು, ದನಗಳು, ಅಲ್ಲಲ್ಲಿ ಕಾಣುವ ಎರಡೋ ಮೂರು ಮನೆಗಳು, ಚಿಕ್ಕ ಚಿಕ್ಕ ಅಂಗಡಿಗಳು ಎಲ್ಲದಕ್ಕೂ ಕೈ ಬೀಸಿ ಬೀಸಿ ಟಾಟಾ ಮಾಡಿದ್ದೇ ಮಾಡಿದ್ದು. ಗಾಳಿಗೆ ಮುಖ ಕೊಟ್ಟು ಆ ಅಂತ ಕಿರುಚಿದರೆ ಏನೋ ಬೇರೆ ಥರ ಕೇಳುತ್ತೆ ನೋಡು ಎಂದು ಮುಂದೆ ಬಂದು ಮುಖ ಕೊಟ್ಟಿದ್ದ ತಿಮ್ಮು ಹೇಳಿದ್ದಕ್ಕೆ ಅದನ್ನೂ ಮಾಡಿ ನೋಡಾಯ್ತು. ಇವತ್ತು ಭಾಗೀರಥಿ ಅಮ್ಮ ಬಂದಿದ್ದಾರೆಂದು ಯಾವತ್ತೂ ಹಾಡು ಹಾಡಿಕೊಂಡು ಬಸ್ಸು ಚಲಾಯಿಸುತ್ತಿದ್ದ ಭೀಮಣ್ಣನೂ ಗಪ್ ಚುಪ್ ಆಗಿದ್ದ. ಜನ್ನುವನ್ನು ಹತ್ತಿರ ಕರೆಯಬೇಕೆಂಬ ಆಶೆ ಅವನಿಗೆ. ಅವನಕ್ಕ ಸುನಂದಾನ ಗೆಳತಿ ಭಾಗೀರಥಿ. ಚಿಕ್ಕದಿಂದಲೂ ಅಕ್ಕ ಅಕ್ಕ ಎಂದೇ ಕರೆಯುತ್ತಿದ್ದ ಭೀಮಣ್ಣ ಭಾಗೀರಥಿಗೆ ಮದುವೆಯಾಗುತ್ತಿದ್ದಂತೆ ಅಮ್ಮ ಎಂದು ಕರೆಯಲಾರಂಭಿಸಿದ್ದ, ಮನದಲ್ಲಿ ಅದೇ ಆದರ, ಸ್ನೇಹ ಭಾವಗಳು. ಮಕ್ಕಳ ಬೊಬ್ಬೆ, ಅರ್ಭಟ, ಗುಸುಗುಸುವನ್ನು ಬಸ್ಸಿನ ಕಟಕಟ, ಕುಲಕಾಟಗಳ ನಡುವೆಯೂ ಕೇಳಿಸಿಕೊಳ್ಳುವ ಪ್ರಯತ್ನ ಮಾಡುತ್ತಾ ಒಳಗಿಂದೊಳಗೇ ಖುಷಿಪಡುತ್ತಿದ್ದ.
ಪರಮೇಶಿ ಬಂದು ಟಿಕೇಟು ಕೊಟ್ಟ, ಅವನು ಅಲ್ಲಾಡುವ ಬಸ್ಸಿನಲ್ಲೂ ನಿಂತು ಬರೆದಿದ್ದು, ಟಿಕೇಟು ಹರಿದಿದ್ದು ಬಿಟ್ಟ ಬಾಯಿ ಬಿಟ್ಟ ಹಾಗೆಯೇ ನೋಡಿದರು ಸ್ನೇಹಿತರಿಬ್ಬರೂ. ಅವನು ಇಬ್ಬರ ತಲೆ ಸವರಿ ಕಿಸೆಯಿಂದ ಪೆಪ್ಪರಮಿಂಟ್ ತೆಗೆದುಕೊಟ್ಟ. ತುಂಬಾ ಖುಷಿ ಮಕ್ಕಳಿಗೆ. ಅಮ್ಮನ ಮುಖ ನೋಡಿ ತಿನ್ನಬಹುದು ಅನ್ನೋ ಒಪ್ಪಿಗೆ ಮುದ್ರೆ ಕಂಡ ಮೇಲೆ ಇಬ್ಬರೂ ಸಿಹಿ ಸಿಹಿ ಪೆಪ್ಪರಮಿಂಟನ್ನು ಸವಿದರು. ಬಸ್ಸು ಹೊರಟು ಒಂದಿಪ್ಪತ್ತು ನಿಮಿಷಗಳಾಗಿರಬೇಕು. ಅಮ್ಮನ ಬ್ಯಾಗ್ ಇಂದ ಶಂಕರ ಪೋಳಿ, ಕರ್ಜಿಕಾಯಿ ಹೊರಬಂತು. ಮಕ್ಕಳದನ್ನ ತಿಂದಿದ್ದೂ ಆಯ್ತು, ಮೈಮೇಲೆ ಜಾಸ್ತಿ, ಬಾಯಿಗೆ ಕಮ್ಮಿ ಬೀಳುವಂತೆ ಅದೆಂಥದೋ ಬೋಟಲ ಅಂತೆ ಅದರಲ್ಲಿ ನೀರು ಕುಡಿದು ಆಯ್ತು. ಇಬ್ಬರಿಗೂ ಗಾಳಿಗೆ, ಬಸ್ಸಿನ ಸದ್ದಿಗೆ ಅದರ ಚಲನೆಗೆ ಕಣ್ಣು ಕೂರಲಾರಂಭಿಸಿತು. “ಅಮ್ಮ, ನೀ ಹೇಳಿದ್ದೀಯಲ್ಲಾ, ಚೇತುವೆ, ಬಂದರೆ ಎಬ್ಬಿಸು” ಅಂತ ಅಮ್ಮನಿಗೆ ಮುನ್ನೆಚರಿಕೆ ನೀಡಿ ಇಬ್ಬರೂ ಒಬ್ಬರ ಮೇಲೊಬ್ಬರು ಬಿದ್ದು ನಿದ್ದೆ ಹೊಡೆಯಲಾರಂಭಿಸಿದರು. ಅಮ್ಮ ಮೆಲು ನಗೆ ನಕ್ಕು ಇಬ್ಬರನ್ನೂ ಬಳಸಿ ಹಿಡಿದಳು.
 

‍ಲೇಖಕರು G

August 13, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿರುತ್ತರದ ಉತ್ತರ, ರಾಜೇಶ್ವರಿ ತೇಜಸ್ವಿ

ಕಲೀಮ್ ಉಲ್ಲಾ ತೇಜಸ್ವಿಯವರ ಸ್ಕೂಟರ್ ಚಳಿಗೆ ದುಪ್ಪಟ್ಟಿ ಹೊಚ್ಚಿಟ್ಟಂತೆ ಅದನ್ನೊಂದು ಕಪ್ಪು ಪ್ಲಾಸ್ಟಿಕ್ ನಿಂದ ಮುಚ್ಚಿಡಲಾಗಿತ್ತು. ತಕ್ಷಣ ಏನೋ...

ಅಂಬೇಡ್ಕರ್ ಇಲ್ಲಿದ್ದಾರೆ..

ಅಂಬೇಡ್ಕರ್ ಅವರ ಬರಹಗಳ ಎಲ್ಲಾ ಸಂಪುಟವನ್ನು ಉಚಿತವಾಗಿ ಕನಡದ ಓದುಗರಿಗೆ ಸಿಗಲಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈಗಾಗಲೇ ೫ ಸಂಪುಟಗಳನ್ನು...

’ಧರ್ಮ ನಿರಪೇಕ್ಷತೆ, ಕೋಮುವಾದ ಮತ್ತು ನಮ್ಮೆದುರಿನ ಸವಾಲುಗಳು’ – ಶಶಿಧರ ಭಟ್

ಶಶಿಧರ ಭಟ್ ಕುಮ್ರಿ ಧರ್ಮ ನಿರಪೇಕ್ಷತೆ ಮತ್ತು ಕೋಮುವಾದ ಎಂಬ ಶಬ್ದ ನನ್ನ ಕಿವಿಗೆ ಬಿದ್ದುದು ಯಾವಾಗ ಎಂಬ ಪ್ರಶ್ನೆಗೆ ನನ್ನ ಬಳಿ ಸರಳ...

5 ಪ್ರತಿಕ್ರಿಯೆಗಳು

  1. Gopaal Wajapeyi

    ಎಂದಿನಂತೆ ಚೇತೋಹಾರಿ ನಿಮ್ಮ ಕಥನ ಶೈಲಿ. ಇನ್ನು ನಿಮ್ಮ ಉಡುಪಿಯ ಭಾಷೆಯ ಮೆರುಗಂತೂ ನಮ್ಮನ್ನು ಮೋಹಕ್ಕೊಳಪಡಿಸಿಬಿಡುತ್ತದೆ. ಸೌಮ್ಯಾ, ಇವನ್ನೆಲ್ಲ ಒಂದು ಪುಸ್ತಕವಾಗಿ ಕೊಟ್ಟರೆ ಆಗೀಗ ಓದಿಕೊಂಡು ಖುಷಿಪಡುವೆವು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: