‘ಸ್ಪರ್ಶಕ್ಕೆಷ್ಟು ರೂಪಾಯಿ?’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ.

ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು.

ಈಗ ‘ಚಲೋ ದಿಲ್ಲಿ..’

”ಅದು ಕೈನಸ್ಥೆಟಿಕ್ ಇಂಟಿಲಿಜೆನ್ಸ್”, ಅಂದೆ ನಾನು.

ನಾನೇನೋ ಮಹಾಸಂಗತಿಯನ್ನು ಹೇಳಿದೆನೆಂಬಂತೆ ಆತ ಹಾಂ ಎಂದು ರಾಗವೆಳೆದ. ದೇಹವನ್ನೂ ಕೂಡ ಭಾಷೆಯಂತೆಯೇ ಬಳಸಬಹುದು ಎಂಬ ಅರಿವು ಸಾಮಾನ್ಯವಾಗಿ ಬಹಳಷ್ಟು ಮಂದಿಗಿರುವುದಿಲ್ಲ. ಆಂಗಿಕಭಾಷೆಯನ್ನು ‘ಬಾಡಿ ಲ್ಯಾಂಗ್ವೇಜ್’ ಎಂಬ ಹೆಸರಿನಲ್ಲಿ ಮಾರ್ಕೆಟಿಂಗ್ ಮಾಡಿ ಕೆಲವು ದಶಕಗಳೇ ಕಳೆದಿವೆ. ಆದರೆ ಸ್ಪರ್ಶ? ಕೈನಸ್ಥೆಟಿಕ್ ಇಂಟೆಲಿಜೆನ್ಸ್ ಬೇಕಾಗುವುದು ಇಂಥಾ ಸಂಗತಿಗಳಲ್ಲಿ. ಸ್ಪರ್ಶವನ್ನೂ ಕೂಡ ಸಂವಹನದ ಯಶಸ್ವಿ ಮಾಧ್ಯಮವಾಗಿ ಬಳಸುವ ಕಲೆಯು ಎಲ್ಲರಿಗೂ ಅಷ್ಟು ಸುಲಭವಾಗಿ ಒಲಿಯುವಂಥದ್ದಲ್ಲ. ಹೀಗಾಗಿಯೇ ಅದೆಷ್ಟೋ ಬಾರಿ ನಿರುಪದ್ರವಿ ಸ್ಪರ್ಶಗಳು ಅಪಾರ್ಥಕ್ಕೊಳಗಾಗಿ ಎಡವಟ್ಟುಗಳಾಗುತ್ತವೆ. ಮಾತಿನಲ್ಲಿ ತೋರಿಕೆಯ ಸಿಹಿಯಿದ್ದರೂ ಸ್ಪರ್ಶದ ಹಿಂದಿರುವ ತಣ್ಣನೆಯ ಕ್ರೌರ್ಯದ ಕಮಟು ಸ್ಪರ್ಶಿಸಲ್ಪಡುವವರನ್ನು ಕ್ಷಣಾರ್ಧದಲ್ಲಿ ಅಲರ್ಟ್ ಆಗಿಸಿಬಿಡುವ ಸಂದರ್ಭಗಳೂ ಉಂಟಾಗುತ್ತವೆ.

ಮೊದಲ ಬಾರಿ ಭೇಟಿಯಾಗುವವರನ್ನು ಹೊರತುಪಡಿಸಿದರೆ ಕೈಕುಲುಕುವುದೆಂದರೆ ನನಗೆ ಅಷ್ಟಕ್ಕಷ್ಟೇ. ಅದರಲ್ಲೂ ಆತ್ಮೀಯರೊಂದಿಗೆ ಸುಮ್ಮನೆ ಕೈಕುಲುಕಿದರಂತೂ ತೀರಾ ಕೃತಕವೆನ್ನಿಸಿಬಿಡುವಷ್ಟು ಕಿರಿಕಿರಿ. ಹೀಗಾಗಿ ಆತ್ಮೀಯರೊಂದಿಗೆ ವಿನಿಮಯ ಮಾಡಲಾಗುವ ಒಂದೊಳ್ಳೆಯ ‘ಹಗ್’ ನನ್ನಂಥವರ ದಿನವನ್ನೇ ಬೆಳಗಬಲ್ಲದು. ಕಾಮದ ಸೋಂಕಿಲ್ಲದ ಈ ಆಲಿಂಗನವು ನೀಡುವ ಅನುಭೂತಿಯೇ ಬೇರೆಯಾದ್ದರಿಂದ ಇದಕ್ಕೆ ಲಿಂಗಭೇದವಿಲ್ಲ. ಆಲಿಂಗನವು ಮೆದುಳಿನಲ್ಲಿ ಆಕ್ಸಿಟೋಸಿನ್ ಎಂಬ ಹಾರ್ಮೋನನ್ನು ಸ್ರವಿಸಿ ಪದಗಳಿಗೆ ನಿಲುಕದ ನಿರಾಳತೆಯನ್ನು ತರುತ್ತದೆ ಎನ್ನುತ್ತದೆ ಮನೋವಿಜ್ಞಾನ.

ಓಶೋ ರಜನೀಶರ ಆಶ್ರಮಗಳಲ್ಲಿ ಈ ವೈಜ್ಞಾನಿಕ ಸತ್ಯವನ್ನು ದಿನನಿತ್ಯದ ಭಾಗವನ್ನಾಗಿಸಿಕೊಂಡ ನಡೆಗಳನ್ನು ನಾನು ಹತ್ತಿರದಿಂದ ಕಂಡಿದ್ದೇನೆ. ಇಂಥಾ ಆಲಿಂಗನದಲ್ಲಿ ಕೊಂಚ ಬದುಕೂ ಇದೆ, ಒಂದಷ್ಟು ಆಧ್ಯಾತ್ಮವೂ ಇದೆ. ಸೈಯಾಂ… ತೂ ಜೋ ಛೂಲೇ ಪ್ಯಾರ್ ಸೇ, ಆರಾಮ್ ಸೇ ಮರ್ ಜಾವೂಂ… ಎಂದು ಕೈಲಾಶ್ ಖೇರ್ ಹಾಡಿದ್ದ ಸಾಲಿನಲ್ಲಿ ನಿಜಕ್ಕೂ ಅದೆಷ್ಟು ಬಿಸುಪಿತ್ತು!

ಏಕೆಂದರೆ ಸ್ಪರ್ಶವೆನ್ನುವುದು ಬೆಲೆಕಟ್ಟಲಾಗದ್ದು.

ಆದರೆ ಅಲ್ಲಿ ಇಂತಿಪ್ಪ ಸ್ಪರ್ಶವನ್ನೇ ಬಿಕರಿಗಿಡಲಾಗಿತ್ತು.

ಆ ಪುಟ್ಟ ಮಾರುಕಟ್ಟೆಯಲ್ಲಿ ತರಹೇವಾರಿ ಸ್ಪರ್ಶಗಳು ಮಾರಾಟಕ್ಕಿದ್ದವು. ಅದಕ್ಕೂ ಒಂದು ಪ್ರತ್ಯೇಕ ಮೆನು ಕಾರ್ಡ್ ಇದೆಯೇನೋ ಎಂಬಂತೆ. ಕಾಮವನ್ನು ಬಿಟ್ಟರೆ ಆ ಸ್ಪರ್ಶದಲ್ಲಿ ಬೇರೇನೂ ಇರಲಿಲ್ಲವಾದ್ದರಿಂದ ವ್ಯಾಪಾರವು ಕೊಂಚ ಜೋರಾಗಿಯೇ ಇತ್ತು ಎನ್ನಲಡ್ಡಿಯಿಲ್ಲ. ಅಲ್ಲಿ ಮುತ್ತಿಗೊಂದು ರೇಟು. ಕಾಮಾತುರಕ್ಕೆ ಬಿದ್ದವರಂತೆ ಒರಟೊರಟಾಗಿ ಸ್ಪರ್ಶಿಸಿ, ಒಳಗಿನ ಜ್ವಾಲೆಯನ್ನು ಒಂದಷ್ಟು ನಿಮಿಷಗಳ ಕಾಲ ತಣಿಸಿ ಕಳಚಿಕೊಳ್ಳುವುದಕ್ಕೊಂದು ರೇಟು. ಅದಕ್ಕಿಂತಲೂ ಹೆಚ್ಚಿನ ಸೇವೆಗೆ ಇನ್ನೇನೋ ದರಗಳು.

ಹದಿನಾರರಿಂದ ನಲವತ್ತರ ನಡುವಿನ ಹಲವು ಹೆಣ್ಣುಜೀವಗಳು ಅಲ್ಲಿ ಸ್ವತಃ ಸ್ಪರ್ಶವನ್ನು ಮಾರುತ್ತಿದ್ದವು. ಇನ್ನು ಕೊಳ್ಳುವವರ ಸಂಖ್ಯೆಯು ಮಾರುವವರ ಸಂಖ್ಯೆಗಿಂತ ಸಾಕಷ್ಟು ಹೆಚ್ಚಿದ್ದರಿಂದ ಮಾರುವವರಿಗೆ ಆಯ್ಕೆಗಳೂ, ಅವಕಾಶಗಳೂ ಧಾರಾಳ ಅನ್ನಿಸುವಷ್ಟಿದ್ದವು. ಸುಖದ ಮುಖವಾಡವನ್ನು ಹೊತ್ತಿದ್ದ, ಕೆಲವೇ ಕ್ಷಣಗಳ ಅಸ್ತಿತ್ವವಿದ್ದ ಆ ಸ್ಪರ್ಶಗಳು ಏನನ್ನುತ್ತಿದ್ದವು? ಕೇಳಲು ಯಾರಿಗೂ ಪುರುಸೊತ್ತಿದ್ದಂತೆ ಕಾಣಲಿಲ್ಲ.

ನಾವಂದು ಸಣ್ಣಗೆ ಕಂಪಿಸುತ್ತಾ ನಿಂತಿದ್ದು ಮೆಕ್ಸಿಕೋದ ಗಲ್ಲಿಯಲ್ಲೂ ಅಲ್ಲ, ಕಾಮಾಟಿಪುರದ ಬೀದಿಯಲ್ಲೂ ಅಲ್ಲ. ಬದಲಾಗಿ ಗುರುಗ್ರಾಮದ ಹೃದಯ ಭಾಗದಲ್ಲಿದ್ದ ಪ್ರತಿಷ್ಠಿತ ಶಾಪಿಂಗ್ ಮಾಲ್ ಒಂದರ ಡಿಸ್ಕೋಥೆಕ್ಕಿನಲ್ಲಿ. ”ಮಧ್ಯದಲ್ಲೊಂದು ಕಂಬವನ್ನೂರಿ ಪೋಲ್ ಡ್ಯಾನ್ಸ್ ಶುರು ಮಾಡಿಸಿಬಿಟ್ಟರೆ ಗುರ್ಗಾಂವ್ ಮಹಾನಗರಿಯ ಆಮ್‍ಸ್ಟರ್‍ಡ್ಯಾಮ್ ಇಲ್ಲೇ ಸೃಷ್ಟಿಯಾಗಲಿದೆ”, ಎಂಬರ್ಥ ಬರುವ ರೀತಿಯಲ್ಲಿ ನಮ್ಮ ಗುಂಪಿನ ಗೆಳೆಯನೊಬ್ಬ ತುಟಿ ಕುಣಿಸುತ್ತಾ ಕೈಸನ್ನೆಯ ಭಾಷೆಯಲ್ಲಿ ಹೇಳುತ್ತಿದ್ದ.

ಸೂರು ಹಾರಿಹೋಗುವ ಮಟ್ಟಿಗೆ ಗಾಯಕ ಹನೀ ಸಿಂಗನ ಐಟಂ ನಂಬರ್ ಗಳು ಬೆನ್ನುಬೆನ್ನಿಗೆ ಬರುತ್ತಿದ್ದರಿಂದ ಆತ ಬೇರೇನು ಹೇಳಿದನೆಂಬುದು ನನಗೆ ಕೊಂಚವೂ ಕೇಳಲಿಲ್ಲ. ಡಿ.ಜೆ ಸಾಹೇಬ್ರು ಭಾರೀ ಉತ್ಸಾಹದಲ್ಲಿ ಹಾಡುಗಳನ್ನು ಚಲಾಯಿಸುತ್ತಲೇ ಇದ್ದರೆ ಒಳಗಿರುವವರು ಡಿಸ್ಕೋಥೆಕ್ಕಿನ ಕತ್ತಲು-ಬೆಳಕಿನ ಕಣ್ಣುಮುಚ್ಚಾಲೆಯೊಂದಿಗೆ, ಮದ್ಯದ ನಶೆಯಲ್ಲಿ ಜಗವನ್ನೇ ಮರೆತವರಂತೆ ಕುಣಿಯುತ್ತಿದ್ದರು. ಆಗಂತುಕ ಹೆಂಗಳೆಯರ ಕೈಯಲ್ಲಿ ನೋಟುಗಳನ್ನು ತುರುಕುತ್ತಾ ಅವರನ್ನು ಕೆಲ ನಿಮಿಷಗಳ ಕಾಲ ತಮ್ಮದಾಗಿಸಿಕೊಳ್ಳುತ್ತಿದ್ದರು.

ಅಷ್ಟಕ್ಕೂ ತಮ್ಮ ಪಾಡಿಗೆ ಸಿನೆಮಾಗೆಂದು ಹೋಗಿದ್ದ ನಮ್ಮ ನಾಲ್ಕೈದು ಹುಡುಗರ ಗುಂಪು ಅಲ್ಲಿ ಬಂದು ತಲುಪಿದ್ದೇ ವಿಚಿತ್ರ. ಕೆಲವೊಮ್ಮೆ ತಪ್ಪು ದಾರಿಗಳೂ ಸರಿಯಾದ ಜಾಗಕ್ಕೆ ಕರೆದೊಯ್ಯುತ್ತವೆ ಅಂತಾರಲ್ಲಾ, ಹಾಗೆ! ಹಿಂದಿನ ದಿನವಷ್ಟೇ ನಗರದ ಮಲ್ಟಿಪ್ಲೆಕ್ಸಿನಲ್ಲಿ ಯಶ್ ಚೋಪ್ರಾರವರ ‘ಜಬ್ ತಕ್ ಹೈ ಜಾನ್’ ನೋಡಿಕೊಂಡು ಬಂದಿದ್ದೆವು. ಅದು ಸಂಜೆಯ ಶೋ. ಹತ್ತರೊಳಗೆ ಮನೆ ಸೇರಿಯಾಗಿತ್ತು.

ಆಗಷ್ಟೇ ಬ್ರೇಕಪ್ ಗೊಳಗಾಗಿದ್ದ ಉತ್ತರಪ್ರದೇಶ ಮೂಲದ ಗೆಳೆಯನೊಬ್ಬ ಮರಳಿ ಬರುವಾಗ ದುಃಖದಿಂದ ಇನ್ನಿಲ್ಲದಂತೆ ರೋದಿಸಿದ್ದ. ”ಯಾಕಾದರೂ ಇಂಥಾ ಸಿನೆಮಾಗಳನ್ನು ಮಾಡ್ತಾರೋ ಇವ್ರೆಲ್ಲಾ”, ಅಂತೆಲ್ಲಾ ವಿರಹದ ಬೇಗೆಯಲ್ಲಿ ಚೋಪ್ರಾರಿಗೆ ಹಿಡಿಶಾಪ ಹಾಕಿದ್ದ. ಇತ್ತ ನಾನೋ ಎಂಭತ್ತರ ವಯಸ್ಸಿನ ಪ್ರತಿಭಾವಂತ ನಿರ್ದೇಶಕನೊಳಗಿದ್ದ ಶೃಂಗಾರ ಶ್ರೀಮಂತಿಕೆಯನ್ನು ತೆರೆಯಲ್ಲಿ ಕಂಡು ದಂಗಾಗಿದ್ದೆ.

ಮರುದಿನವೇ ನಮ್ಮ ಸವಾರಿಯು ಮತ್ಯಾವುದೋ ಸಿನೆಮಾ ಒಂದರ ತಲಾಶೆಯಲ್ಲಿ ಹೊರಟಿತ್ತು. ರಾತ್ರಿ ಒಂಭತ್ತರ ಶೋ ಆಗಿದ್ದರಿಂದ ಸಿನೆಮಾ ಮುಗಿದಾಗ ಹನ್ನೊಂದೂವರೆ ದಾಟಿ, ಶಾಪಿಂಗ್ ಮಾಲ್ ನ ಉಳಿದ ಮಹಡಿಗಳು ಖಾಲಿಯಾಗಿ ಗವ್ವೆನ್ನುತ್ತಿದ್ದವು. ಆದರೆ ಡಿಸ್ಕೋಥೆಕ್ಕುಗಳಿಂದ ತುಂಬಿದ್ದ ಮೂರನೇ ಮಹಡಿಯಿಂದ ಮಾತ್ರ ಕಿವಿಗಡಚಿಕ್ಕುವ ಸಂಗೀತ, ಕ್ಲಬ್ಬಿನಿಂದ ಒಳಗೂ ಹೊರಗೂ ಬರುತ್ತಿರುವವರ ಜನದಟ್ಟಣೆಯು ಎಂದಿನಂತೆ ಸಾಮಾನ್ಯವಾಗಿತ್ತು.

ನೋಡನೋಡುತ್ತಿರುವಂತೆಯೇ ತೆಳ್ಳಗಿನ ಪೀಚಲು ಮುಖದ ಹುಡುಗನೊಬ್ಬ ಬಂದು ನಮ್ಮ ತಂಡದಲ್ಲಿದ್ದ ಸದಸ್ಯನೊಬ್ಬನನ್ನು ಪುಸಲಾಯಿಸಿ ಒಳಗೆ ಕರೆದುಕೊಂಡು ಹೋದ. ಹರಿಯಾಣವೀ ಭಾಷೆಯಲ್ಲಿ ಒರಟಾಗಿ ವ್ಯವಹರಿಸುತ್ತಾ, ತಮ್ಮ ಉಬ್ಬಿದ ಮಾಂಸಖಂಡಗಳನ್ನು ಹೆಮ್ಮೆಯಿಂದ ಪ್ರದರ್ಶನಕ್ಕಿಟ್ಟಿದ್ದ ಬೌನ್ಸರ್ ಗಳು ತಮ್ಮ ಪಾಡಿಗೆ ಗೊಣಗುತ್ತಿದ್ದರು.

ಅದೇನೋ ವಿಚಿತ್ರ ಉತ್ಸಾಹದಲ್ಲಿ ಆತ ಎಂಟ್ರಿ ಫೀ ಪಾವತಿಸುತ್ತಿರುವುದನ್ನು ನಾವು ನೋಡುವಷ್ಟರಲ್ಲೇ ನಮ್ಮ ಕೈಗಳ ಮೇಲೆ ಸ್ಟಾಂಪ್ ಮುದ್ರೆಗಳು ಬಿದ್ದಾಗಿದ್ದವು. ಥೇಟು ಸರಕಾರಿ ಕಡತಗಳಲ್ಲಿ ಕಾಣುವ ಸ್ಟಾಂಪಿನಂತೆ. ಇನ್ನು ಕೆಲವೇ ಕ್ಷಣಗಳಲ್ಲಿ ಹೊಸದೊಂದು ವಿಲಕ್ಷಣ ಲೋಕವೇ ನಮ್ಮ ಮುಂದೆ ತೆರೆದುಕೊಳ್ಳಲಿದೆ ಎಂಬ ಸತ್ಯವಾದರೂ ನಮಗೇನು ಗೊತ್ತಿತ್ತು?

ಹೀಗೆ ಆಕಸ್ಮಿಕವಾಗಿ ನಮಗಲ್ಲಿ ಕಂಡಿದ್ದೇ ಮೇಲೆ ಹೇಳಿರುವ ಬಾಜಾರು. ನೈಟ್ ಕ್ಲಬ್ ಎಂಬ ಹೆಸರೇ ಅದಕ್ಕೊಂದು ಮುಖವಾಡ. ಇತ್ತ ನಡುರಾತ್ರಿಯು ಕಳೆಯುತ್ತಿದ್ದಂತೆಯೇ ಕುಣಿಯುತ್ತಿದ್ದ ಯುವಕರ ಗುಂಪಿನಲ್ಲಿ ಮಧ್ಯವಯಸ್ಕರ ತಲೆಗಳೂ ಕಾಣತೊಡಗಿ ಶಹರದ ರಾತ್ರಿಯು ಮಗ್ಗುಲು ಬದಲಿಸಹೊರಟಿತ್ತು. ಡೊಳ್ಳುಹೊಟ್ಟೆಯವರು, ಬಕ್ಕತಲೆಯವರು, ಕೊಂಚ ಹೆಚ್ಚು ಕುಣಿದರೆ ಸೊಂಟ ಉಳುಕಿ ಬಿದ್ದೇ ಬಿಡುತ್ತಾರೇನೋ ಅಂತೆಲ್ಲಾ ಕಾಣುವವರು ಆ ಮಂದಬೆಳಕು ಮತ್ತು ಐಟಂ ಹಾಡುಗಳ ಅಬ್ಬರದ ಹಿನ್ನೆಲೆಯಲ್ಲಿ ನೀರೆಯರ ನಿಮಿಷಮಾತ್ರದ ಸಾಂಗತ್ಯಕ್ಕಾಗಿ ನೋಟುಗಳನ್ನು ಸಿಕ್ಕಸಿಕ್ಕವರ ಕೈಗಳಿಗೆ ತುರುಕುತ್ತಿದ್ದರು.

ಬಹಳಷ್ಟು ಬಾರಿ ದುಡ್ಡು ಕೈಸೇರಿದ ನಂತರ, ಡ್ರಿಂಕ್ ತೆಗೆದುಕೊಳ್ಳುವ ನೆಪದಲ್ಲಿ ಈ ಮಧ್ಯವಯಸ್ಕರಿಂದ ನಾಜೂಕಾಗಿ ತಪ್ಪಿಸಿಕೊಂಡು ಅವರನ್ನು ಯಾಮಾರಿಸುತ್ತಿದ್ದ ಹೆಂಗಸರ ಮತ್ತೊಂದು ವರ್ಗವೂ ಅಲ್ಲಿತ್ತು. ಆ ಭಯಂಕರ ಜನಜಂಗುಳಿಯಲ್ಲಿ, ಕ್ಷಣಮಾತ್ರಕ್ಕೆ ಕಣ್ಣಿಗೆ ರಾಚಿ ಮರೆಯಾಗುತ್ತಿದ್ದ ಬಣ್ಣಬಣ್ಣದ ಬೆಳಕಿನ ಹುಡುಗಾಟದಲ್ಲಿ, ಭೀಕರವಾಗಿ ಅರಚಿಕೊಂಡರೂ ಅರಣ್ಯರೋದನೆಯಾಗುವಷ್ಟಿನ ಸಂಗೀತದ ಆರ್ಭಟದಲ್ಲಿ ಯಾರನ್ನಾದರೂ ಒಂದು ಕ್ಷಣ ಹಿಡಿದಿಡುವುದಾದರೂ ಹೇಗೆ?  

‘ಸಿಕ್ಸ್ಟೀನ್’ ಎಂಬ ಬಾಲಿವುಡ್ ಚಿತ್ರದಲ್ಲೊಂದು ಸನ್ನಿವೇಶ ಬರುತ್ತದೆ. ಆ ಬಾಲಕಿಗೆ ಹದಿನಾರು-ಹದಿನೇಳರ ಹರೆಯ. ಭಾರೀ ಶ್ರೀಮಂತ ಕುಟುಂಬದ ಮಗಳು. ಮಹಾನಗರಿಯಲ್ಲೇ ಬೆಳೆದವಳು. ಆಧುನಿಕ ಜೀವನಶೈಲಿಯು ಅವಳಿಗೆ ಉಸಿರಾಟದಷ್ಟೇ ಸಲೀಸು. ಅಂದು ರಾತ್ರಿ ಗೆಳೆಯರೊಂದಿಗೆ ನೈಟ್ ಕ್ಲಬ್ಬೊಂದಕ್ಕೆ ತೆರಳುವ ಆಕೆ ಅಲ್ಲಿಯ ಮಬ್ಬು ಬೆಳಕಿನಲ್ಲಿ ತನ್ನದೇ ತಂದೆಯನ್ನು ಕಂಡು ಗಾಬರಿಯಾಗುತ್ತಾಳೆ. ತನ್ನ ಮಗಳೂ ಆ ಕ್ಲಬ್ಬಿನಲ್ಲಿದ್ದಾಳೆ ಎಂಬುದರ ಅರಿವಿಲ್ಲದ ಆತ, ತನ್ನ ಮಗಳ ವಯಸ್ಸಿನ ಯುವತಿಯೋರ್ವಳ ಜೊತೆಯಲ್ಲಿ ಸೊಂಟ ಕುಣಿಸುತ್ತಾ ಚಕ್ಕಂದವಾಡುತ್ತಿರುತ್ತಾನೆ.

ತಂದೆಯನ್ನು ಆ ರೂಪದಲ್ಲಿ ನೋಡಲಾಗದ ಮಗಳು ಗೊಂದಲಕ್ಕೊಳಗಾಗಿ ಮನೆಗೆ ವಾಪಾಸ್ಸಾಗುತ್ತಾಳೆ. ”ನಿನ್ನ ಗಂಡ ಅಲ್ಲಿ ಏನೇನು ಮಾಡುತ್ತಿದ್ದ ಗೊತ್ತಾ ನಿನಗೆ? ಕೊಂಚವೂ ನಿನಗೆ ಲೋಕಜ್ಞಾನವಿಲ್ಲ”, ಎಂದು ತನ್ನ ತಾಯಿಗೆ ದಬಾಯಿಸುತ್ತಾಳೆ. ”ನೋಡಮ್ಮಾ… ಈ ಕುಟುಂಬದಲ್ಲಿ ನಿನಗೆ ಗೊತ್ತಿಲ್ಲದ ಸಂಗತಿಗಳು ಬಹಳಷ್ಟಿವೆ. ನಿನ್ನ ತಂದೆಯ ಗೆಳೆಯರಾಗಿರುವ ಆ ಅಂಕಲ್ ಜೊತೆ ನನಗೂ ಸಂಬಂಧವಿದೆ. ಈ ಬಗ್ಗೆ ನಿನ್ನ ತಂದೆಗೂ ತಿಳಿದಿದೆ. ನಮ್ಮದು ಓಪನ್ ಮ್ಯಾರೇಜ್ ಮಗಳೇ”, ಎಂದು ತಣ್ಣಗೆ ಹೇಳುತ್ತಾಳೆ ಆಕೆ.

ತಾಯಿಯಿಂದ ಇಂಥಾ ಉತ್ತರವನ್ನು ನಿರೀಕ್ಷಿಸಿರದಿದ್ದ ಆಕೆಗೆ ಸಹಜವಾಗಿಯೇ ಆಘಾತವಾಗಿರುತ್ತದೆ. ತನ್ನ ಸೆಕ್ಷುವಾಲಿಟಿಯನ್ನು ಅರಿತುಕೊಳ್ಳಲು ಆಗಷ್ಟೇ ಪ್ರಯತ್ನಿಸುತ್ತಿದ್ದ ಹದಿನಾರರ ಹರೆಯದ ಮಗಳಿಗೆ ತನ್ನ ಪೋಷಕರು ತೊಡಗಿಕೊಂಡಿದ್ದ ಈ ಬಗೆಯ ಲೈಂಗಿಕ ಜೀವನಕ್ರಮವು ಅಕ್ಷರಶಃ ದಂಗು ಬಡಿಸಿರುತ್ತದೆ.

ಕೆಲವೊಮ್ಮೆ ಇಂಥಾ ಕಥೆಗಳು ನೈತಿಕತೆ-ಅನೈತಿಕತೆಗಿಂತಲೂ ಹೆಚ್ಚಿನದೇನನ್ನೋ ಹೇಳಲು ಪ್ರಯತ್ನಿಸುತ್ತಾ, ನಮ್ಮನ್ನು ಮತ್ತಷ್ಟು ಗೊಂದಲಕ್ಕೆ ತಳ್ಳುತ್ತಿವೆಯೇ ಎಂಬ ಸಂದೇಹಗಳು ಮೂಡುವುದು ಸಹಜ ಮತ್ತು ಸಾಮಾನ್ಯ. ಆದರೆ ನೈಜಬದುಕಿನ ಮುಖಗಳು ಕಾಲ್ಪನಿಕ ಕಥೆಗಳಷ್ಟೇ ವಿಚಿತ್ರವಾಗಿ ಕಂಡಾಗ ನಮ್ಮ ಅಸ್ತಿತ್ವವೇ ಏಕಾಏಕಿ ಅಲುಗಾಡಿದಂತಾಗುತ್ತದೆ. ಇಲ್ಲೂ ಮಹಾನಗರಿಯ ನೈಟ್ ಲೈಫ್ ಎಂಬುದು ಆ ಬಾಲಕಿಗೆ ಹೊಸ ಸಂಗತಿಯೇನಲ್ಲ.

ನೋಟುಗಳ ವಿನಿಮಯ ಮಾಡಿಕೊಳ್ಳುತ್ತಾ ಮಬ್ಬುಗತ್ತಲಿನ ಮೂಲೆಗಳಲ್ಲಿ ಆಗಂತುಕರು ಚೆಲ್ಲಾಟವಾಡುವುದು ಅವಳನ್ನು ಬೆಚ್ಚಿಬೀಳಿಸುವುದಿಲ್ಲ. ಆದರೆ ತನ್ನ ತಂದೆಯನ್ನು ಅಂಥದ್ದೇ ಕ್ಲಬ್ಬೊಂದರಲ್ಲಿ ನೋಡಿದಾಗ ಮಾತ್ರ ಆಕೆಯ ಕಾಲಕೆಳಗಿನ ನೆಲವು ಅದುರಿದಂತಾಗುತ್ತದೆ.

ಅಸಲಿಗೆ ಯಾರದ್ದೋ ಅಂತಃಪುರದ ದೃಶ್ಯಗಳನ್ನು ರಹಸ್ಯವಾಗಿ ನೋಡುತ್ತಾ ಚಪ್ಪರಿಸುವ ನಮ್ಮ ಮನಸ್ಸು, ತಮ್ಮದೇ ಪ್ರೀತಿಪಾತ್ರರನ್ನು ಅಂಥಾ ಸಂದರ್ಭಗಳಲ್ಲಿ ಕಂಡಾಗ ಮಾತ್ರ ದಿಗಿಲಿಗೆ ಬೀಳುತ್ತದೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ಅವರೂ ನಮ್ಮಂತೆಯೇ ಆಸೆ-ಆಕಾಂಕ್ಷೆಗಳನ್ನು ಹೊಂದಿರುವ ಹುಲುಮಾನವರು ಎಂಬುದೂ ಮರೆತುಹೋಗುತ್ತದೆ.

”ಇದೊಂದು ಈ ಶಹರದ ಓಪನ್ ಸೀಕ್ರೆಟ್”, ಎನ್ನುತ್ತಾರೆ ಇಲ್ಲಿಯ ಹಲವರು. ಗುರುಗ್ರಾಮದ ಎಂ.ಜಿ (ಮೆಹರೌಲಿ-ಗುರುಗ್ರಾಮ) ರೋಡಿನಲ್ಲಿರುವ ಅಷ್ಟೂ ಶಾಪಿಂಗ್ ಮಾಲ್ ಗಳಲ್ಲಿ ಇದೊಂದಕ್ಕೆ ಮಾತ್ರ ಆ ಮಟ್ಟಿನ ಕುಖ್ಯಾತಿ. ಹಾಗೆಂದು ಬೇರೆ ನೈಟ್ ಕ್ಲಬ್ಬುಗಳಲ್ಲಿ ಸತ್ಸಂಗ ಕಾರ್ಯಕ್ರಮಗಳೇನೂ ನಡೆಯುವುದಿಲ್ಲ. ಆದರೆ ಈ ಒಂದು ಭಾಗವು ಮಾತ್ರ ಅಷ್ಟೂ ರಾತ್ರಿಗಳ ಹಸಿ ರಹಸ್ಯಗಳನ್ನು ತನ್ನೆದೆಯ ಮೇಲೆ ಪದಕದಂತೆ ಧರಿಸಿಕೊಂಡು ಗೆದ್ದೆನೆಂಬಂತೆ ಬೀಗುತ್ತದೆ.

ಸೂರ್ಯಾಸ್ತದ ನಂತರ ಸಂಪ್ರದಾಯವಾದಿಗಳು ಅತ್ತ ಹೆಜ್ಜೆಹಾಕಲು ಹಿಂಜರಿಯುತ್ತಾರೆ. ಬಂದರೂ ಅವರ ನೋಟಗಳು ಆಟೋಗಳಿಂದ ಇಳಿದು ಕ್ಲಬ್ಬಿನತ್ತ ಸಾಗುವ ತರುಣಿಯರತ್ತ ಸಾಗಿ, ಕಂಡೂ ಕಾಣದಂತೆ ಮತ್ತೆಲ್ಲೋ ಮಗ್ನವಾಗುತ್ತವೆ. ವಿಪರೀತವೆಂಬಷ್ಟು ಮೇಕಪ್ ಹೊತ್ತ ಹೆಂಗಳೆಯರ, ಝಗಮಗ ಹೊಳೆಯುವ ಬಣ್ಣದ ಪುಟ್ಟ ದಿರಿಸುಗಳನ್ನು ಧರಿಸಿ ದೊಡ್ಡದಾಗಿ ನಗುಬೀರುತ್ತಾ ನಡೆಯುವವರ, ಮೇಲ್ನೋಟಕ್ಕೆ ಹೆಣ್ಣಿನಂತಿದ್ದರೂ ಸೂಕ್ಷ್ಮವಾಗಿ ಗಮನಿಸಿದರೆ ಲಿಂಗ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಂಡಂತಿರುವ ಜೀವಗಳ ಬಗ್ಗೆ ಇವರಿಗೆಲ್ಲಾ ಕುತೂಹಲಭರಿತ ಅಚ್ಚರಿಯಂತೂ ಇದ್ದೇ ಇದೆ.

ಇನ್ನು ರಾತ್ರಿಯಾದಂತೆ ಬೀದಿಯ ಕೆಲ ಆಟೋಗಳ ಹಿಂದಿನ ಸೀಟಿನ ಮರೆಯಲ್ಲಿ, ಇಷ್ಟಿಷ್ಟೇ ಕಾಣುವ ಮೋಹಕ ಕಾಲುಗಳನ್ನು ಕಂಡಾಗಲಂತೂ ಅವುಗಳು ತಮ್ಮನ್ನೇ ಅಣಕಿಸುತ್ತಿವೆಯೇನೋ ಎಂಬಷ್ಟರ ಮಟ್ಟಿನ ನಾಚಿಕೆ. ಇದು ಮಹಾನಗರಿಯ ಒಂದು ಮುಖ.

ಇನ್ನು ಮಹಾನಗರಿಯ ರಾತ್ರಿರಹಸ್ಯಗಳ ಇನ್ನೊಂದು ಮುಖವೆಂದರೆ ಇಂತಹ ಝಲಕ್ ಗಳನ್ನು ವಿಶೇಷವಾಗಿ ನೋಡುವ ಕುತೂಹಲದಿಂದಲೇ ಇತ್ತ ಬರುವವರು. ಅದು ಕಾಲೇಜು ವಿದ್ಯಾರ್ಥಿಗಳಿಂದ ಹಿಡಿದು, ಹಿರಿಯರವರೆಗೂ ಸತ್ಯ.

ತೀವ್ರ ಕುತೂಹಲಿಗಳಿಂದ ಹಿಡಿದು ಮಹಾನಗರಿಯ ಕಥೆಗಳನ್ನು ಹುಡುಕುತ್ತಾ ಹೊರಡುವ ಆಸಕ್ತರವರೆಗೂ. ಸಿರಿವಂತ ಶೋಕಿಲಾಲರಿಂದ ಹಿಡಿದು ತೀರಾ ಕಚ್ಚೆಹರುಕರವರೆಗೂ. ಹೀಗೆ ಮಬ್ಬುಗತ್ತಲಿನ ಇಂಥಾ ಪುಟ್ಟ ಜಾಗಗಳಲ್ಲಿರುವ ಅಪಾರ ಜನಸಂದಣಿಯು ಕೆಲವರಿಗೆ ಉಸಿರುಗಟ್ಟಿಸುವಂತಿದ್ದರೆ, ಇನ್ನು ಕೆಲವರಿಗೆ ಅನಾಮಿಕತೆಯ ವಿಲಾಸವನ್ನೂ ನೀಡಬಹುದು. ಎಲ್ಲಾ ಅವರವರ ಭಾವಕ್ಕೆ, ಅವರವರ ಭಕುತಿಗೆ!

”ಇಂಡಿಯಾ ಈಸ್ ಎ ಸೆಕ್ಸ್ ಸ್ಟಾವ್ರ್ಡ್ ಕಂಟ್ರಿ”, ಎನ್ನುತ್ತಾರೆ ಆತ್ಮೀಯರೂ, ‘ರೆಡ್ ವೂಂಬ್’ ಸಂಸ್ಥಾಪಕಿಯೂ ಆಗಿರುವ ಪಲ್ಲವಿ ಬರ್ನವಾಲ್. ಮಹಾನಗರಿಯ ಇಂಥಾ ಆಯಾಮಗಳು ನನಗೆ ನೆನಪಾದಾಗಲೆಲ್ಲಾ ಅವರ ಮಾತು ಅದೆಷ್ಟು ಸತ್ಯ ಎಂದನ್ನಿಸತೊಡಗುತ್ತದೆ!

September 14, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಶೇಷಗಿರಿ’ಯೆಂಬ ರಂಗಪಟ್ಟಣ

‘ಶೇಷಗಿರಿ’ಯೆಂಬ ರಂಗಪಟ್ಟಣ

ಕನ್ನಡ ರಂಗಭೂಮಿಯ ವಿಶಿಷ್ಠ ಹೆಸರು ಶ್ರೀಪಾದ್ ಭಟ್. ಕನ್ನಡ ಸಾಹಿತ್ಯಕ್ಕೆ ನೋಟದ ಆಯಾಮ ಕೊಟ್ಟ ಹೆಗ್ಗಳಿಕೆ ಇವರದ್ದು. ಬೆಂಗಳೂರಿನ...

ಅಣಬೆ ­ಎದ್ದವು ­ನೋಡಿ!

ಅಣಬೆ ­ಎದ್ದವು ­ನೋಡಿ!

'ಅಣಬೆ ಎಂದರೆ ಪಂಚಪ್ರಾಣ' ಎನ್ನುವ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಹಿ ಚಿ ಬೋರಲಿಂಗಯ್ಯ ಅವರು ಇಂದಿನ ‘ನನ್ನ ಕುಪ್ಪಳಿ’...

2 ಪ್ರತಿಕ್ರಿಯೆಗಳು

  1. SUDHA SHIVARAMA HEGDE

    ಬೆಳಕಿನರಮನೆಯಲ್ಲಿ ಎಷ್ಟೊಂದು ಕತ್ತಲು!
    ಹೊಸದೊಂದು ಲೋಕವನ್ನು ತೆರೆದಿಟ್ಟಿತು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: