ಸ್ಪ್ರೈಟ್ ಕುಡೀತೀಯಾ…?

ನವೋಮಿ ಎಂಬ ಕೂಲ್ ಕೂಲ್ ಹುಡುಗಿ ಮತ್ತೆ ಮಾತನಾಡಿದ್ದಾಳೆ

‘ಪ್ರೊಫೈಲ್ ನಲ್ಲಿ ರೆಡ್ ವೈನ್’ ಓದಿದಾಗಿನಿಂದ ನನಗೆ ಬರೆಯಲೇಬೇಕೆನಿಸಿದೆ. ಯಾರಾದರೂ ಗೊಲ್ಕೊಂಡಾ ರೆಡ್ ವೈನ್ ಎಂದ ಕೂಡಲೇ ನನ್ನ ಕಿವಿ ನೆಟ್ಟಗಾಗುತ್ತದೆ. ಹೆಸರು ಕೇಳಿಯೇ ಖುಷಿಯಾಗುತ್ತದೆ. ಸೌಮ್ಯಸ್ವಭಾವದ ಈ ಪಾನೀಯಕ್ಕೆ ಜನ, ಸಮಾಜ ಕ್ರಿಮಿನಲ್ ಪಟ್ಟ ಕಟ್ಟಿರುವ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ ಅದನ್ನು ಅಪ್ಪಿಕೊಂಡಿರುವುದನ್ನು ಬರೆಯಬೇಕೆನ್ನಿಸುತ್ತದೆ.

ಗೋಲ್ಕೊಂಡಾ ಇಷ್ಟ ಪಟ್ಟ ಸಂದರ್ಭಗಳನ್ನು ಹಂಚಿಕೊಳ್ಳುವ ಮುನ್ನ ಅದಕ್ಕೆ ವೇದಿಕೆ ಸೃಷ್ಟಿಯಾಗಿದ್ದು ಹೇಗೆ ಎಂಬುದನ್ನು ವಿವರಿಸಲೇ ಬೇಕು. ಆಗ ನಾವೊಂದಿಷ್ಟು ಜನ ಶಿವಮೊಗ್ಗದಲ್ಲಿದ್ವಿ. ಎರಡು ತಿಂಗಳ ಅಸೈನ್ ಮೆಂಟ್. ನಮ್ಮ ಟೀಮ್ ನಲ್ಲಿ ಹಿರಿಕಿರಿಯರು ಎನ್ನದೇ ಎಲ್ಲರೂ ಇದ್ದರು. ದಿನನಿತ್ಯದ ಕೆಲಸ ಮುಗಿದ ನಂತರ ನಾವು ಸಂಜೆ ಹೊತ್ತು ಅಲ್ಲಿ ಇಲ್ಲಿ ಸುತ್ತೋದು ವಾಡಿಕೆಯಾಗಿತ್ತು.. ನಮ್ಮ ಟೀಮ್ ಗೆ ಕಾರ್ಪೋರೆಟ್ ಸಂಸ್ಕೃತಿ ಇದ್ದ ಮಹಿಳೆಯೊಬ್ರು ಸಂಪನ್ಮೂಲ ವ್ಯಕ್ತಿಯಾಗಿದ್ದುದು, ಅವರ ಕುಟುಂಬವು ಶಿವಮೊಗ್ಗದಲ್ಲಿಯೇ ಇದ್ದ ಕಾರಣ ಆ ಕುಟುಂಬದೊಂದಿಗೆ ನಮ್ಮ ಪರಿಚಯ ಆಗಿತ್ತು. ಅವರ ಹೆಸರು ಸೀಮಾ ಅಂಥ ಇಟ್ಟುಕೊಳ್ಳಿ.

il_430xn7582846

ನಾವು ಶಿವಮೊಗ್ಗೆಗೆ ಕೆಲವೇ ದಿನಗಳ ಅತಿಥಿಯಾದ ಕಾರಣ ನಮ್ಮನ್ನು ಅವರು ಆಗಾಗ ತಮ್ಮ ಮನೆಗೆ ಆಹ್ವಾನಿಸುತ್ತಿದ್ದರು. ಆ ಮನೆಯಲ್ಲಿ ಭಾನುವಾರದ ದಿನ ಕಿಟ್ಟಿಪಾರ್ಟಿಗಳು ನಡೆಯುತ್ತಿದ್ದವು. ಹೆಂಗಸರು ಸಾಮಾನ್ಯವಾಗಿ ಜಿನ್, ರೆಡ್ ವೈನ್ ಹೀಗೆ ಲೈಟ್ ಅಂಥ ಕರೆಸಿಕೊಂಡಿರೋ ಪಾನೀಯಗಳನ್ನು ಸೇವಿಸೋರು. ಅಂಥ ಸಂಪ್ರದಾಯ ತೊರೆದ ತೀರಾ ಹೈಫೈ ಸಂಸ್ಕೃತಿಯವರಲ್ಲದಿದ್ದರೂ ಎಲ್ಲರೂ ಸೇರಿದಷ್ಟು ಹೊತ್ತು ಸಾಕಷ್ಟು ತಮಾಷೆ ಇರುತ್ತಿತ್ತು. ಬಿಡುವಿದ್ದಾಗ ನಾನು ನನ್ನ ಗೆಳತಿ ಆಗಾಗ ಅವರ ಮನೆಗೆ ಹೋಗೋದು, ಊಟ ಮಾಡೋದು ಇವೆಲ್ಲಾ ಆಗುತ್ತಿತ್ತು.

ನನ್ನ ಗೆಳತಿ, ಅನಿತಾ ಅಂತ ಇರ್ಲಿ. ತೀರ್ಥ ಕುಡಿದ್ರೆ ಥಂಡಿ, ಪ್ರಸಾದ ತಿಂದ್ರೆ ಉಷ್ಣ ಎನ್ನೋ ಅವ್ಳ ಮೂಗು ಯಾವಾಗ್ಲೂ ಸೊರಗುಟ್ಟತ್ತಲೇ ಇರುತ್ತಿತ್ತು. ಧೂಳಾಗಲ್ಲ, ಪೆಟ್ರೊಲ್ ವಾಸನೆ ಆಗಲ್ಲ, ಥಂಡಿ ಆಗಲ್ಲ, ಬಿಸಿಲು ಆಗಲ್ಲ ದಿನದ 24 ಘಂಟೆ ನೆಗಡಿ, ನೆಗಡಿ. ಯಾರಾದ್ರೂ ಅವಳ ಎದುರು ಕಸಗುಡಿಸೋಕೆ ಬಂದ್ರೆ ನೆಗೆದುಬಿಡೋಳು. ಮೂಗಾದ್ರೂ ಕುಯ್ಕೊಂಡು ಬಿಡೆ ಎಂದ್ರೆ ಹಾಳಾಗ್ಲಿ ಬಿಡು ಎನ್ನುತ್ತಿದ್ದಳು. ಇವಳಿಗೆ ಇವಳ ಥಂಡಿಗೆ ಏನಾದ್ರೂ ಒಂದು ಮಾಡಲೇ ಬೇಕು ಎನ್ನೋ ಹುಚ್ಚು ನನ್ನ ತಲೆ ಸೇರಿತ್ತು. ಅಂದು ಸೀಮಾ ಮನೆಗೆ ಹೋದವಳು, ಇವಳ ಮೂಗಿನ ಸಮಸ್ಯೆ ವಿವರಿಸಿದೆ. ಅವಳೂ ಸ್ವಲ್ಪ ಕೀಟಲೆ. ಈ ಸಾರಿ ಕಿಟ್ಟಿ ಪಾರ್ಟಿಗೆ ಬರ್ತಿರಲ್ಲಾ ಆವಾಗ ಏನಾದ್ರೂ ಮಾಡೋಣ ಬಿಡು ಎಂದು ಕಣ್ಣುಮಿಟುಕಿದಳು. ಸರಿ ನನಗೆ ಅರ್ಥವಾಯ್ತು. ಹೆಂಗಿರಬಹುದು ನೆನಪಿಸಿಕೊಂಡೇ ನಕ್ಕು ನಕ್ಕು ಸುಸ್ತಾದೆವು.

ಆ ಭಾನುವಾರ ಬಂದೇ ಬಿಟ್ಟಿತ್ತು. ಬಾರೇ ಹೋಗೋಣ ಎಂದೆ ಆಯ್ತು ಎಂದಳು ಅನಿತಾ. ಸಂಜೆ ಆರು ಘಂಟೆಗೆ ಸಾಕಷ್ಟು ಹೆಣ್ಣುಮಕ್ಕಳು ಸೇರಿದ್ದರು. ತಿನ್ನೋಕೆ ಸ್ಟಾರ್ಟರ್ಸ್ ಒಂದೋಂದೆ ಸರಬರಾಜಾಗುತ್ತಿತ್ತು. ಇವಳು ಪಕ್ಕಾ ಸಸ್ಯಾಹಾರಿ. ಅವಳಿಗೆಂದೇ ವೆಜಿಟೆಬಲ್ ಐಟೆಮ್ಸ್ ರೆಡಿ ಮಾಡಿದ್ದಳು. ಅಲ್ಲಿದ್ದ ಕೆಲವರು ಜಿನ್, ರೆಡ್ ವೈನ್ ಎಂಜಾಯ್ ಮಾಡತೊಡಗಿದ್ದರು. ಸಂಜೆ ಏಳಾಗುತ್ತಿದ್ದಂತೆ ಇವಳ ಮೂಗು ಸುರಿಯತೊಡಗಿತ್ತು. ಸರಿಯಾದ ಸಮಯ ಎಂದುಕೊಂಡು ಸ್ವಲ್ಪ ಸ್ಪ್ರೈಟ್ ಕುಡಿ ಎನ್ನುತ್ತಾಳೆ ಸೀಮಾ. ನಂಗೆ ಮೊದಲೇ ಮೂಗು ಸುರಿತಾ ಇದೆ. ಏನಾಗೊಲ್ಲ ಸರಿ ಹೋಗತ್ತೆ ಸೀಮಾ ಒತ್ತಾಯ ಸರಿ…ಅಂಥ ಒಂದೇ ಗುಟುಕಿಗೆ ಅನಿತಾ ಅದನ್ನು ಕುಡಿದುಬಿಡುತ್ತಾಳೆ.

ಇನ್ನೂ ಅನಿತಾಳನ್ನು ನೋಡುವ ಸರದಿ ಎಲ್ಲರದ್ದೂ. ಸಕತ್ತಾಗಿದೆ ಸ್ಪ್ರೈಟ್…ಇನ್ನೊಂದು ಚೂರು ಎನ್ನತ್ತಾಳೆ. ಆಯ್ತು ಇನ್ನೊಂದಿಷ್ಟು ಕೊಡ್ತಾಳೆ ಸೀಮಾ. ಅದು ಮುಗಿಯುತ್ತದೆ ಇನ್ನೂ ಬೇಕೆನ್ನುತ್ತದೆ ಪ್ರಾಣಿ. ಸಾಕು ಊಟ ಮಾಡಿ ಸೀಮಾ ಆರ್ಡರ್ ಮಾಡುತ್ತಾಳೆ. ಅಲ್ಲಿಂದ ಅನಿತಾ ಮಾತು ಆರಂಭವಾಗುತ್ತದೆ. ನಂಗ್ಯಾಕೋ ತುಂಬಾ ಖುಷಿಯಾಗ್ತಾ ಇದೆ. ನನ್ನ ಕೋಲ್ಡ್ ಎಲ್ಲಾ ಹೋದಂಗಿದೆ. ಚೆನ್ನಾಗಿ ಉಸಿರಾಡೋಕೂ ಆಗ್ತಾ ಇದೆ. ಐ ಎಮ್ ಫಿಲಿಂಗ್ ಗ್ರೇಟ್.. ನಿಜಕ್ಕೂ ಗ್ರೇಟ್ ಅನ್ನಿಸ್ತಾ ಇದೆಯಾ…ಎಲ್ಲರೂ ನಗುತ್ತಾರೆ. ಯಾಕೋ ನಂಗೆ ಕುಣಿಯೋಣ ಅನ್ನಿಸ್ತಾ ಇದೆ. ಬೆಳಿಗ್ಗೆಯಿಂದ ತಲೆ ಭಾರ ಇತ್ತು ಈಗ ಹಗುರ ಎನ್ನಿಸ್ತಾ ಇದೆ. ಆದ್ರೂ ನಂಗ್ಯಾಕೋ ಡೌಟು…ಇದು ರೆಗ್ಯುಲರ್ ಸ್ಪ್ರೈಟ್ ಥರ ಇಲ್ಲ ಕಣೆ. ….ಹೀಗೆ ಸುಮಾರು ಹೊತ್ತು ಅವಳ ಮಾತು ಮುಂದುವರಿಯುತ್ತದೆ.

ಆಶ್ಚರ್ಯ ಎಂದ್ರೆ ಅದರ ಬಿಸಿಗೋ ಏನೋ ಅವಳ ಮೂಗು ಸೊರಗುಟ್ಟುವುದು ತಾತ್ಕಾಲಿಕ ಶಮನ ಕಂಡಿತ್ತು. ಒಂಚೂರು ಏರಿದ್ದ ನಶೆ ಇಳಿದ ಬಳಿಕ ಅನಿತಾ ಸುಮ್ಮನೆ ತನ್ನ ಪಾಡಿಗೆ ತಾನೂ ನಕ್ಕು ಈಗ ಹೇಳಿ ಸ್ಪ್ರೈಟ್ ನಲ್ಲಿ ಏನು ಮಿಕ್ಸ್ ಮಾಡಿದ್ರಿ ಅಂತ ಸೀಮಾಳ ಕಿವಿ ಹಿಂಡುತ್ತಾಳೆ. ಏನಿಲ್ಲ ಸ್ವಲ್ಪ ಜಿನ್ ಮಿಕ್ಸ್ ಮಾಡಿದ್ದೆ.ಬೇಜಾರಾ ಏನೂ ಇಲ್ಲ ತುಂಬಾ ಖುಷಿಯಾಯ್ತು. ನೋಡು ನನ್ನ ಮೂಗು ಸುರಿಯೋದು ನಿಂತು ಬಿಟ್ಟಿದೆ. ಇನ್ಮುಂದೆ ದಿನಾ ಒಂದು ರೌಂಡ್ ಈ ಕಡೆ ಬಂದು ಹೋಗ್ತಿನಿ ಕಣೆ. ಏನೂ ಬೇಡಾ. ಸುಮ್ಮನೆ ತಮಾಷೆಗೆ ಇರ್ಲಿ ಅಂಥ. ಇದು ಲೇಡಿಸ್ ಡ್ರಿಂಕ್ ಅಷ್ಟೇ. ನಾನು ಏನೇನೋ ಅಂದ್ಕೊಂಡಿದ್ದೆ. ಇಷ್ಟ್ಟೊಂದು ರುಚಿಯಾಗಿರುತ್ತೆ ಅಂದ್ಕೊಂಡಿರಲಿಲ್ಲ. ಸ್ಪ್ರೈಟ್ ಮಿಕ್ಸ್ ಮಾಡಿದ್ದಕ್ಕೆ ಸಿಹಿಯಾಗಿದೆ. ಇಲ್ದಿದ್ರೆ ಕಹಿ ಇರುತ್ತೆ. ಯಾವೂದು ಅತಿ ಆಗ್ಬಾರ್ದು. ಇದನ್ನು ಕುಡಿದ ಮಾತ್ರಕ್ಕೆ ನಿನ್ನ ಮೂಗು ಸುರಿಯೋದು ನಿಂತ್ಹೋಗತ್ತೆ ಅಂತ ಅಲ್ಲ. ಸ್ವಲ್ಪ ಕಿಕ್ ಇತ್ತಲ್ಲ.ಅದಕ್ಕೆ ಸ್ವಲ್ಪ ಛೆಂಜ್ ಅನ್ನಿಸ್ತಷ್ಚೇ. ತುಂಬಾ ಸಿರೀಯಸ್ ಆಗಿ ಏನೂ ತೆಗೆದುಕೊಳ್ಳಬೇಡ ಎಂದಿದ್ದಳು ಸೀಮಾ. ಹೇಳದೇ ಕೊಟ್ಟಿದ್ದಕ್ಕೆ ಸಾರಿ. ಕೋಪ ಮಾಡ್ಕೋಬೇಡ. ಇಷ್ಟು ದಿನ ಇಂಥದ್ದೊಂದಿದೆ ಅಂಥಾನೆ ನಂಗೆ ಗೊತ್ತಿರ್ಲಿಲ್ಲ. ಥ್ಯಾಂಕ್ಸ್ ಕಣೆ ಎಂದಿದ್ದಳು.

ಮಾರನೆ ದಿನವೂ ಅನಿತಾ ಜಿನ್ ತಂದ ಖುಷಿಯನ್ನು ವರ್ಣಿಸುವುದು ಮುಂದುವರಿದಿತ್ತು. ಅದಾದ ನಂತರ ಸೀಮಾ ಅವಳಿಗೆ ಜಿನ್ ಕೊಟ್ಟಿದ್ದಾಗಲೀ, ಅಥವಾ ಸ್ವತಹ ಅನಿತಾ ಅವಳಿಗೆ ಕೇಳುವುದಾಗಲಿ ಆಗಲಿಲ್ಲ. ಆದರೂ ಆಗಾಗ ನಾವು ಆ ಪ್ರಸಂಗ ನೆನಪಿಸಿಕೊಂಡು ಅವಳಿಗೆ ಹಾಸ್ಯ ಮಾಡುತ್ತಿದ್ವಿ. ಈಗಲೂ ಅನಿತಾ ಸಿಕ್ಕಾಗ ಆಗಾಗ ಕೇಳುತ್ತೇನೆ…

ಸ್ಪ್ರೈಟ್ ಕುಡೀತೀಯಾ….

(ಅನಿತಾ ಅಷ್ಟೊಂದು ಖುಷಿ ಪಟ್ಟ ಮೇಲೆ ನಾನ್ಯಾಕೆ ರುಚಿ ನೋಡಬಾರದು ಎಂದು ತುಂಬಾ ಸಲ ನನಗೆ ಅನ್ನಿಸತೊಡಗಿತ್ತು. ಆದರೆ ನಾನಾಗಿಯೇ ಕೇಳೋದು ಹೇಗೆ ಎಂದು ಸುಮ್ಮನಾಗಿದ್ದೆ. ಇಂಥ ಯಾವುದೇ ಪಾನೀಯವನ್ನು ನಾನು ಮುಟ್ಟಿದವಳಲ್ಲ ಅಥವಾ ನನ್ನ ಸಂಸ್ಕೃತಿಯೂ ಅದಲ್ಲ ಅಂತ ನಾನು ಘೋಷಿಸದಿದ್ದರೂ ಬೇರೆಯವರೂ ಹಾಗೆ ನನ್ನ ಬಗ್ಗೆ ತಿಳಿದುಕೊಂಡ ಕಾರಣ ಅತ್ತ ಕೇಳಲೂ ಆಗದೆ ಬಿಡಲೂ ಆಗದೆ ಗೊಂದಲದ ಸ್ಥಿತಿಯಲ್ಲಿದ್ದೆ.

ಮುಂದೆ ಎಲ್ಲಾದರೂ ಒಂದು ದಿನ ಅವಕಾಶ ಬಂದೇ ಬರುತ್ತೆ ಅನ್ನೋ ವಿಶ್ವಾಸ. ಆಗ ಪರಿಚಯವಾಗಿದ್ದೇ ಗೋಲ್ಕೊಂಡಾ ವೈನ್. ಮುಂದಿನ ಭಾಗದಲ್ಲಿ ಈ ವೈನ್ ಮತ್ತು ನನ್ನ ಸಂಬಂಧ ಗಾಢವಾಗಿದ್ದನ್ನ ವಿವರಿಸ್ತೀನಿ)

‍ಲೇಖಕರು avadhi

November 27, 2008

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

೧ ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ B.A. PuneethCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: