'ಸ್ಮಯಾ' ನಮ್ಮ ವಿಸ್ಮಯ..

rahul dayalu                                                                                             ರಾಹುಲ ದಯಾಳು
ನನ್ನ ತಮ್ಮನ ಮದುವೆ ಹತ್ತಿರ ಬಂದಂತೆ ಮನೆಯಲ್ಲಿನ ಸಂಭ್ರಮವೂ ಹೆಚ್ಚಾಗಿದೆ.
ಮೊದಲೆಲ್ಲಾ ಮನೆತನದ ಹತ್ತಾರು ಮಂದಿಯಲ್ಲಿ ಹತ್ತಾರು ದಿನಗಳು ಆವರಿಸುತ್ತಿದ್ದ ಈ ಸಂಭ್ರಮ ಈಗ ನಾಲ್ಕು ಗೋಡೆಯೊಳಗೆ ನಾಲ್ಕು ಜನರಲ್ಲಿ ನಾಲ್ಕು ದಿನಗಳಿಗೆ ಮಾತ್ರ ಸೀಮಿತವಾಗಿದೆ.
cradleವಧು-ವರರ ಕಡೆಯವರೆಲ್ಲಾ ಕೂಡಿ ಅಂಗಡಿಯಲ್ಲಿ ಹೋಗಿ ಬಟ್ಟೆ ಹರಿಸುವ ಪದ್ಧತಿ ಹೋಗಿ ಒಂದು ದಶಕವೇ ಉರುಳಿವೆ. ಈಗ ವಧು ಕಡೆಯವರು ವರನಿಗೆ, ವರನ ಕಡೆಯವರು ವಧುಗೆ ಇಂತಿಷ್ಟು ದುಡ್ಡು ಕೊಟ್ಟು ಕೈ ತೊಳೆದುಕೊಳ್ಳುತ್ತಾರೆ. ಮುಂದಿನದ್ದೇನಿದ್ದರೂ ರೆಡಿಮೇಡ್ ಮತ್ತು ಆನ್ಲೈನ್ ಶಾಪಿಂಗ್. ಹೈಟೆಕ್ ಕಲ್ಯಾಣ ಮಂಟಪಗಳು ಚಪ್ಪರ ತೋರಣಗಳನ್ನು ಹಿಂದೆ ಸರಿಸಿವೆ.
ಪಂಚಾಯತಿಯ ಸುಪರ್ಧಿಯಲ್ಲಿರುವ ಅಡುಗೆ ಪಾತ್ರೆಗಳನ್ನು ಪಡೆದು, ಬಾಣಸಿಗರನ್ನು ಕರೆಸಿ, ಪಟ್ಟಣದ ಮಾರುಕಟ್ಟೆಯಿಂದ ದಿನಸಿ ತರಿಸಿ ಒಲೆಗಳಿಗೆ ಕೊಳ್ಳಿ ಇಡುತ್ತಿದ್ದ ಕಾಲವು ಸವೆದು, ಈಗ ಕೇಟರಿಂಗ್ ನವರನ್ನು ತಮ್ಮ ಮನೆಗೇ ಕರೆಯಿಸಿ ವ್ಯವಹಾರ ಕುದುರಿಸಿದರೆ ಸಾಕು, ಮದುವೆಯ ದಿನ ವಾಹನಗಳಲ್ಲಿ ಮದುವೆಯ ಔತಣ ಬಂದು ಬೀಳುತ್ತದೆ.
ಮದುವೆಯ ಖರ್ಚಿನ ತೂಕ ಹೊತ್ತುಕೊಂಡವರಿಗೆ ತುಸು ಆಸರೆಯಾಗಲು ಹಣ, ಬೆಳ್ಳಿ, ಚಿನ್ನದ ರೂಪದಲ್ಲಿ ಬೀಳುತ್ತಿದ್ದ ಮುಯ್ಯಿ, ಈಗ ನಿರುಪಯೋಗಿ ಪ್ಲ್ಯಾಸ್ಟಿಕ್ ವಸ್ತುಗಳನ್ನು ಬಂದು ಮನೆಯ ಮೂಲೆ ಸೇರುತ್ತಿವೆ. ಅವು ಕ್ರಮೇಣ ಇತರರ ಸಮಾರಂಭಗಳಲ್ಲಿ ಹಂಚಿಹೋಗುತ್ತವೆ. ಗಾಡಿಯನ್ನು ಕಟ್ಟಿ ಮದುವೆಯ ಕರೆಯೋಲೆಯನ್ನು ಹೊತ್ತೊಯ್ಯುತ್ತಿದ್ದವರು, ಕಾಲ ಕ್ರಮೇಣ ಬಸ್ಸು, ಟ್ರೈನ್ ಏರಿ, ನಂತರ ಬೈಕು-ಕಾರುಗಳಿಗೆ ಸೀಮಿತವಾಗಿ, ಈಗ ಇ-ಮೇಲ್, ಫೇಸ್ಬುಕ್, ವಾಟ್ಸಾಪ್ ಗಳಲ್ಲಿ ಆಮಂತ್ರಿಸುತ್ತಿದ್ದಾರೆ.
ಸಾವಿರಾರು ಜನರನ್ನು ಸೇರಿಸಿ, ಆರತಕ್ಷತೆಯಲ್ಲಿ ನಿಮಂತ್ರಿತರನ್ನು ಗಂಟೆಗಟ್ಟಳೆ ಸರದಿಯಲ್ಲಿ ನಿಲ್ಲಿಸಿ ತಮ್ಮ ಗಣ್ಯತೆಯನ್ನು ತೋರಿಸುವ ಗೀಳು ಬೇರೆ. ಇವೆಲ್ಲಾ ಅಭಿಪ್ರಾಯಗಳು ತಲೆಯಲ್ಲಿ ಸುಳಿದಿದ್ದು ಕಾರಿನಲ್ಲಿ ನನ್ನ ಸತಿ ಮತ್ತು ಅಪ್ಪನನ್ನು ಕೂರಿಸಿಕೊಂಡು, ತಮ್ಮನ ಮದುವೆಯ ಕರೆಯೋಲೆಯನ್ನು ಹೊತ್ತು ಮೈಸೂರಿನ ಗಲ್ಲಿಗಲ್ಲಿಗಳ ತಿರುವಿನಲ್ಲಿ ಕಾರಿನ ಸ್ಟೇರಿಂಗನ್ನು ತಿರುಗಿಸುತ್ತಿದ್ದಾಗ.
10 ತಿಂಗಳ ನಮ್ಮ ಮಗಳು ಸ್ಮಯಾಳನ್ನು ಮೈಸೂರಿನ ಉದಯಗಿರಿಯಲ್ಲಿರುವ ನನ್ನ ಪತ್ನಿ ಪೂಜಾಳ ಅಜ್ಜಿಯ ಮನೆಯಲ್ಲಿ ಬಿಟ್ಟು ಬಂದಿದ್ದೆವು. ಈಗಾಗಲೇ ಅವಳಿಗೆ ನಾನು ಮತ್ತು ಪೂಜಾ ತನ್ನ ಹತ್ತಿರದವರು ಎಂಬ ಭಾವನೆ ಮೂಡಿಯಾಗಿತ್ತು. ಹೊಸಬರ ಜೊತೆ ಒಗ್ಗಿಕೊಳ್ಳಲು ಬಿಟ್ಟರೆ, ತನ್ನ ಅಪ್ಪ-ಅಮ್ಮನ ಹುಡುಕಾಟದಲ್ಲಿ ಅತ್ತ ಇತ್ತ ಇಣುಕುತ್ತಿದ್ದಳು. ತುಸು ಹೊತ್ತಾದರೆ ನಮ್ಮನ್ನು ನೆನಪಿಸಿಕೊಂಡು ರಚ್ಚೆ ಹಿಡಿಯುತ್ತಿದ್ದಳು. ಅವಳ ಅಳುವನ್ನು ನಿಲ್ಲಿಸುವ ಕಲೆಯುಳ್ಳವರು ಗೆಲ್ಲುತ್ತಿದ್ದರು. ಇಲ್ಲದವರು ಗಾಬರಿಯಾಗಿ ನಮಗೆ ಕರೆಮಾಡಿ ತಮ್ಮ ಅಸಹಾಯಕತೆಯನ್ನು ಪ್ರದರ್ಶಿಸುತ್ತಿದ್ದರು.
ಅವಳನ್ನು ಪೂಜಾಳ ಅಜ್ಜಿಯ ಮನೆಯಲ್ಲಿ ಬಿಟ್ಟಾಗಲೂ ಅದೇ ಪರಿಸ್ಥಿತಿ ಉಂಟಾಯಿತು. ಸಂಜೆ ನಾಲ್ಕಾಗುವವರೆಗೆ ಪೂಜಾಳಿಗೆ ಕಡಿಮೆಯೆಂದರೂ 20 ಕರೆಗಳು ಬಂದಿದ್ದವು. ಆಮಂತ್ರಿಸುವ ಕೆಲಸವನ್ನು ಅರ್ಧಕ್ಕೇ ನಿಲ್ಲಿಸಿ, ವಾಪಸ್ಸು ಹೋಗಿ ನೋಡಿದಾಗ ಸ್ಮಯಾ ಅತ್ತು ಕರೆದು ಸುಸ್ತಾದಂತೆ ಕಂಡಳು. ನಮ್ಮನ್ನು ನೋಡಿ ತುಸು ಹರ್ಷವಾದಂತೆ ಕಂಡರೂ, ಎಂದಿನ ಚಟುವಟಿಕೆ ಇರಲಿಲ್ಲ. ರಾತ್ರಿಯ ಹೊತ್ತಿಗೆ ಅವಳ ಮೈ ಬಿಸಿಯಾಗಿತ್ತು. ಹೆತ್ತವರ ಕರಳು ಚುರುಕ್ ಎಂದಿತ್ತು.
ಹಳೆಯ ಪದ್ಧತಿಯಂತೆ ಮದುವೆಯ ಪ್ರಯುಕ್ತ ನಮ್ಮ ಮನೆಯ ಮೂಲೆ ಮೂಲೆಯನ್ನೂ ಸ್ವಚ್ಛ ಮಾಡುವ ಕೆಲಸ. ಪೂಜಾಳಿಗೆ ಮಾಹಿತಿ ತಂತ್ರಜ್ಞಾನದ ಕೆಲಸ. ಅವಳ ಅಜ್ಜಿಯ ಮನೆಯಲ್ಲಿ ಅಜ್ಜಿ-ತಾತಾರನ್ನು ಬಿಟ್ಟರೆ ಎಲ್ಲರದೂ ದುಡಿಯುವ ಕೈಗಳು. ಮುಂದಿನ ಕೆಲವು ದಿನಗಳು ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ಮಗ್ನರಾಗಿ, ಸ್ಮಯಾಳನ್ನು ನೋಡಿಕೊಳ್ಳಲು ಶಿಶು ಪಾಲಕರ ಕೊರತೆ ಎದ್ದು ಕಾಣುತ್ತಿತ್ತು. ಪೂಜಾಳ ಚಡಪಡಿಕೆಯನ್ನು ಗಮನಿಸಿದ ನಾನು, ಕೆಲದಿನಗಳು ಸ್ಮಯಾಳ ಪೂರ್ಣ ಪ್ರಮಾಣದ ಶಿಶು ಪಾಲಕನಾಗಿ ಅವಳ ಅಜ್ಜಿಯ ಮನೆಯಲೇ ಉಳಿಯಲು ಒಪ್ಪಿಕೊಂಡೆ. ದಾದಿಯ ಕೆಲಸ ಅಷ್ಟು ಸುಲಭದ ಮಾತಲ್ಲ. ನಿನಗೆ ಆಗದ ಕೆಲಸ ಎಂದು ಹಲವು ಜನ ಎಚ್ಚರಿಸಿದರು.
ಸ್ಮಯಾ ಹುಟ್ಟಿದಾಗಿನಿಂದ ಅವಳ ಚಟುವಟಿಕೆಗಳನ್ನೆಲ್ಲಾ ಗಮನಿಸಿದ್ದ ನನಗೆ, ಅವಳು ಹೆಚ್ಚು ತೊಂದರೆ ಕೊಡುವುದಿಲ್ಲವೆಂಬ ಪಿತಾ-ವಿಶ್ವಾಸ. ಸಮಯಕ್ಕೆ ಸರಿಯಾಗಿ ಊಟ ನಿದ್ದೆ ಗಿಟ್ಟಿಸಿದರೆ ಸಾಕು, ಸದಾ ಸಂತೋಷದಿಂದ ತನ್ನ ತೆಕ್ಕೆಯಲ್ಲಿಟ್ಟ ನಾಲ್ಕು ಆಟದ ಸಾಮಾನಿನ ಜೊತೆ ಇಡೀ ದಿನವೆಲ್ಲಾ ಕಳೆಯುವಳು. ಬೆಳಗ್ಗೆ ನನಗಿಂತ ಮುಂಚೆ ಎದ್ದು, ನನ್ನ ಮುಖವನ್ನು ಪರಚಿ ಎಚ್ಚರಿಸುತ್ತಿದ್ದನ್ನು ನಾನು ಪ್ರತಿಭಟಿಸಿ ಕಂಬಳಿಯನ್ನು ಮುಖದ ಮೇಲೆ ಹೊದ್ದರೆ, ತನ್ನ ಶಕ್ತಿಯನ್ನೆಲ್ಲಾ ಸೇರಿಸಿ ಅದನ್ನು ಸರಿಸುತ್ತಿದ್ದಳು. ಮುಂದಿನ ಒಂದು ತಾಸು ಹಾಸಿಗೆಯ ಮೇಲೆಯೇ ನನ್ನ ಅವಳ ಚೇಷ್ಟೆ-ತಮಾಷೆ ನಡೆದು, ಕೋಣೆಯ ಕೋನೆ ಕೋನೆಗಳಿಗೆ ಸಂತೋಷ ಹರಡುತ್ತಿತ್ತು.
holding hand babyಹೊರಗಡೆ ಹಸು, ನಾಯಿ, ಬೆಕ್ಕು ಮತ್ತ್ಯಾವುದೇ ಪ್ರಾಣಿಯಿರಲಿ ಆಗಸದಲ್ಲಾರು ಪಕ್ಷಿ ಸಂಕುಲವೇ ಇರಲಿ, ಅವನ್ನು ನೋಡಿ ಗುರುತಿಸಿ ಒಂದೇ ರೀತಿಯಲ್ಲಿ ‘ಅಂಬಾ’ ಎಂದು ಸಂಬೋಧಿಸುತ್ತಿದ್ದಳು. ಅವುಗಳ ಹತ್ತಿರಕ್ಕೆ ಕರೆದೊಯ್ದರೆ, ಕೊಂಚ ಹೆದರಿ, ತಿರುಗಿ ನನ್ನ ಎದೆಯನ್ನಪ್ಪಿ ಹಿಡಿಯುತ್ತಿದ್ದಳು. ಹೆದರಿದಳೇನೋ ಎಂದು ತಿಳಿದು ದೂರ ಹೋದರೆ, ಅವುಗಳ ಹತ್ತಿರವೇ ನಿಲ್ಲುವಂತೆ ಆಜ್ಞಾಪಿಸುತ್ತಿದ್ದನ್ನು ನೋಡಿ ‘ಏನು ಮಾಡಬೇಕೆಂದು’ ತಿಳಿಯದೆ ಗೊಂದಲಕ್ಕೊಳಗಾಗುತ್ತಿದ್ದೆ.
ತಾರಸಿಯಲ್ಲಿ ನೇತಾಗಿದ್ದ ಜೋಕಾಲಿಯಲ್ಲಿ ಕುಳಿತು, ಸ್ಮಯಾಳನ್ನು ನನ್ನ ತೊಡೆಯ ಮೇಲೆ ಮಲಗಿಸಿಕೊಂಡು ಅತ್ತಿತ್ತ ತೂಗುತ್ತಾ, ನನ್ನ ಕಂಠಸಿರಿಯಲ್ಲಿ ಹಳೆ ಕನ್ನಡ ಹಾಡುಗಳನ್ನು ಹರಕು ಮುರುಕಾಗಿ ಹಾಡುತ್ತಾ ಅವಳನ್ನು ನಿದ್ರಾ ಲೋಕಕ್ಕೆ ಜಾರಿಸುವ ತವಕದಲ್ಲಿರುವಾಗ, ನನ್ನ ಹಾಡಿಕೆಯನ್ನು ಕುಹಕವಾಡಲೆಂದೇ ಹತ್ತಿರದ ಯಾವುದೋ ಮರದ ಕೊಂಬೆಯ ಮೇಲೆ ಕುಳಿತು ತನ್ನ ಸ್ವಚ್ಛ ಮಾಧುರ್ಯ ಕಂಠದಿಂದ ಹಾಡುವ ಕೋಗಿಲೆಯ ಸಂಗೀತ ಕಚೇರಿಯನ್ನು ಗುರುತಿಸಿ ಎಚ್ಚರಗೊಳ್ಳುತ್ತಿದ್ದನ್ನು ನೋಡಿ ನನಗಾದ ಆಶ್ಚರ್ಯ ಅಷ್ಟಿಷ್ಟಲ್ಲ.
ನಮ್ಮ ನಿತ್ಯ ಚಟುವಟಿಕೆಗಳ ಶೈಲಿಯನ್ನು ಗ್ರಹಿಸಿ ನಮ್ಮಂತೆಯೇ ಅನುಕರಿಸುವ ಅವಳ ಬುದ್ಧಿಶಕ್ತಿಗೆ ನಾನು ಮಾರುಹೋಗಿದ್ದೆ. ಅದರಂತೆಯೇ ‘ಟಾಟಾ’ ಮಾಡುವುದು, ಚಪ್ಪಾಳೆ ತಟ್ಟುವುದು, ಹ್ಯಾಂಡ್ಸ್-ಅಪ್ಪ್ ಎಂದರೆ ಕಳ್ಳರಂತೆ ತನ್ನ ಎರಡೂ ಕೈಗಳನ್ನು ಎತ್ತಿ ಹಿಡಿಯುವುದು, ಹೊಸಬರು ಕರೆದರೆ ತನ್ನ ತಲೆಯನ್ನ ಅಳ್ಳಾಡಿಸಿ ‘ನಾನು ಬರಲ್ಲಾ’ ಎಂದು ಸೂಚಿಸುವ ಬಗೆ ಎಲ್ಲರಲ್ಲೂ ನಗು ತರಿಸುತ್ತಿತ್ತು. ಸ್ನಾನ ಮಾಡಿಸಿದ ನಂತರ, ಬಕೆಟ್ ನಲ್ಲಿ ಉಳಿದ ಬೆಚ್ಚನೆಯ ನೀರಿನಲ್ಲಿ ಅವಳನ್ನು ಕುಳ್ಳಿರಿಸಿದಾಗ, ಉತ್ಸಾಹಗೊಂಡು ನೀರನ್ನು ತನ್ನ ಎರಡೂ ಕೈಗಳಿಂದ ಪಟಪಟನೆ ಬಡಿಯುತ್ತಾ ಸಂಭ್ರಮಿಸಿದ್ದಳು.
ನಾಯಿ, ಬೆಕ್ಕು, ಕಾಗೆ, ಹದ್ದು ಮತ್ತು ಇತರೆ ಪಕ್ಷಿಗಳಿದ್ದ ಉದ್ಯಾನ ವನಕ್ಕೆ ಪ್ರತಿ ಸಂಜೆ ಅವಳನ್ನು ಯ್ದರೆ, ಜುರಾಸಿಕ್ ಪಾರ್ಕ್ ಕಂಡಷ್ಟೇ ಖುಷಿ ಪಡುತ್ತಿದ್ದಳು. ಮನೆಯಲ್ಲಿ ನೆಲದ ಮೇಲೆ ತವೆಯುತ್ತಿದ್ದ ಅವಳು ಹುಲ್ಲಿನ ಹಾಸಿನ ಮೇಲೆ ಅಂಬೆಗಾಲಿಡುವುದನ್ನು ಕಲಿತು ಇರುವೆಗಳನ್ನು ಹಿಡಿಯುವ ಸರ್ಕಸ್ ಬೇರೆ. ಹುಲ್ಲಿನ ಮಧ್ಯೆ ಸಿಗುವ ಮರದ ತುಂಡುಗಳನ್ನು ಎತ್ತಿಕೊಂಡು ವಿಜ್ಞಾನಿಗಳಂತೆ ಪರಿಶೀಲಿಸುತ್ತಿದ್ದಳು. ಆಕಾಶದಿಂದ ಅವಳ ಮೈಮೇಲೆ ನಾಲ್ಕು ಹನಿಬಿದ್ದರೆ ಪುಳಕಿತಗೊಂಡು, ಅಷ್ಟದಿಕ್ಕಿಗೂ ತನ್ನ ಕಣ್ಣುಗಳನ್ನು ನೆಟ್ಟು ಹನಿಗಳು ಎಲ್ಲಿಂದ ಬೀಳುತ್ತಿರಬಹುದೆಂದು ಪತ್ತೇದಾರಿಕೆ ಕೆಲಸ ಮಾಡುತ್ತಿದ್ದಳು.
ಕಣ್ಣುಗಳನ್ನು ಆಕಾಶಕ್ಕೆ ನೆಟ್ಟು, ಯಾವುದೋ ಯೋಚನಾ ಲಹರಿಯಲ್ಲಿ ಮುಳುಗಿರುತ್ತಿದ್ದ ನನ್ನ ಎದೆಯ ಮೇಲೆ ತನ್ನ ಪುಟ್ಟ ಕೈಗಳಿಂದ ಬಡಿದು ವಾಸ್ತವಕ್ಕೆ ಕರೆತರುತ್ತಿದ್ದಳು. ಟಿವಿಯ ಪರದೆಯ ಮೇಲೆ ಚಲನ ಚಿತ್ರದ ಹಾಡುಗಳನ್ನು ಬಿತ್ತರಿಸಿದರೆ, ತಾನೂ ಹಾಡುವಂತೆ ‘ಯಾ ಯಾ ಯಾ .. ಆ ಆ ಆ’ ಎಂದು ಒದರುತ್ತಿರುವುದನ್ನು ಮೊಬೈಲ್ ನಲ್ಲಿ ಸೆರೆಹಿಡಿದು ಖುಷಿಪಟ್ಟೆ. ಅವಳಿಗೆ ಊಟ ಮಾಡಿಸುವ ಕೆಲಸವಂತೂ, ಯಾವ ವ್ಯಾಯಾಮಕ್ಕೂ ಕಡಿಮೆಯಿಲ್ಲದಂತೆ ನನ್ನ ಮೈಯ ಕೊಬ್ಬನ್ನು ಕರಗಿಸಿತು. ಸದಾ ನಗುತ್ತಿರುವುದನ್ನು ಕಂಡು ಅಸೂಯೆಗೊಂಡು, ಅವಳ ತೊಡೆಯನ್ನು ಚಿವುಟಿದಾಗ ಅವಳು ಅಳುವುದನ್ನು ನೋಡಿ ವಿಕೃತ ಸಂತೋಷ ಪಡುತ್ತಿದ್ದೆ. ನಂತರ ಸಮಾಧಾನ ಪಡಿಸಿ ತಂದೆಯ ಸಹಜ ಕಾಳಜಿಯನ್ನು ಮೆರೆಯುತ್ತಿದ್ದೆ. ನನ್ನ ಮತ್ತು ಸ್ಮಯಾಳ ಕೆಮಿಸ್ಟ್ರಿ ನೋಡಿದ ಪೂಜಾ ಅಸೂಯೆ ಪಟ್ಟಿದ್ದೂ ಉಂಟು.
ಆಕಸ್ಮಿಕವಾಗಿ ಒದಗಿಬಂದ ಈ ಶಿಶು ಪಾಲಕನ ಕೆಲಸದ ಮಧ್ಯೆ ಸ್ಮಯಾಳ ಜೊತೆ ತುಂಟಾಟ ಚೇಷ್ಟೆಗಳೊಂದಿಗೆ ಕಳೆದ ಆ 5 ದಿನಗಳು ನನಗೆ ಹೊಸ ಅನುಭವವನ್ನು ಕೊಟ್ಟು ಬೇರೆಯ ಕಿನ್ನರಿ ಲೋಕಕ್ಕೇ ಕರೆದೊಯ್ದದ್ದಂತೂ ನಿಜ. ಒಬ್ಬ ತಂದೆಯಾಗಿ ಈ ಕ್ಷಣಗಳನ್ನು ಕಳೆದ ನನಗೆ ಮಕ್ಕಳ ಮೇಲಿದ್ದ ಸೂಕ್ಷ್ಮತೆ ಮತ್ತು ಸಂವೇದನೆಯ ಅರಿವು ಹೆಚ್ಚು ಪಕ್ವವಾಗಿದ್ದಂತೂ ನಿಜ.

‍ಲೇಖಕರು avadhi

August 19, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಇವರು ಕಡಿದಾಳು ದಯಾನಂದ್..

ಇವರು ಕಡಿದಾಳು ದಯಾನಂದ್..

ನೆಂಪೆ ದೇವರಾಜ್ ಅಂತರರಾಷ್ಟ್ರೀಯ ಮಟ್ಟದ ವಿಚಾರವಾದಿ ಡಾ.ಕೊವೂರರನ್ನು ತಮ್ಮೂರಿಗೆ ಕರೆಯಿಸಿ ಬಾಬಾಗಳ ಕೈಚಳಕಗಳು ದೇವ ಮಾನವನ ಮಟ್ಟಕ್ಕೆ ಹೋಗುವ...

ಕುಪ್ಪಳಿಯ ಕಾವಳದೊಳಗೆ ಮುಂಬಯಿ ‘ಸೃಜನಾ’

ಕುಪ್ಪಳಿಯ ಕಾವಳದೊಳಗೆ ಮುಂಬಯಿ ‘ಸೃಜನಾ’

ಗಿರಿಜಾಶಾಸ್ತ್ರಿ ಪಡುವಣ ದಿಕ್ಕಿನಲಿ ಕೆಂಪಾದ ಸಂಜೆ ಕರಗುತ್ತಾ ಮೆಲ್ಲ ಮೆಲ್ಲನೆ ಕತ್ತಲು ಗವ್ವೆನ್ನುತ್ತಾ ಒಳಸುರಿಯುತ್ತಿತ್ತು. ಅಲ್ಲೊಂದು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This