ಸ್ವಚ್ಛತೆ ಮತ್ತು ‘ಹರುಕು ಮುರುಕು’ ಕತೆ

‘ಬಾಲ ಒಂದಿಲ್ಲ ಅಷ್ಟೇ..’ ಅನ್ನೋದನ್ನೇ ತಮ್ಮ ವಿಸಿಟಿಂಗ್ ಕಾರ್ಡಿನಂತೆ ನಮ್ಮ ಮುಂದೆ ಹಿಡಿದವರು ಹೇಮಾ ಖುರ್ಸಾಪೂರ. 

ಮಕ್ಕಳ ಕೇಂದ್ರಿತ ಪುಸ್ತಕಗಳ ರೂವಾರಿ ಪ್ರತಿಷ್ಠಿತ ‘ಪ್ರಥಮ್ ಬುಕ್ಸ್’ ನ ಕನ್ನಡ ಸಂಪಾದಕರಾಗಿರುವ ಹೇಮಾ ತನ್ನ ಊರು ಶಿಗ್ಗಾವಿಯಲ್ಲಿ ಗೆಳೆಯರ ದಂಡು ಕಟ್ಟಿಕೊಂಡು ಅಲ್ಲಿಯ ಶಾಲೆಯ ಅಭಿವೃದ್ಧಿಗೂ ಮನ ಕೊಟ್ಟಿದ್ದಾರೆ. 

ಉಳಿದವರೆಲ್ಲಾ ಶಾಲೆ ಅಭಿವೃದ್ಧಿ ಮಾಡ್ತಾರೆ, ನಾನು ಮಕ್ಕಳ ಜೊತೆ ಬಾಲ ಕಟ್ಟಿಕೊಂಡು ಕುಣೀತೀನಿಅಂತ ತಮ್ಮ ಇಂದಿನ ಐಕಾನಿಕ್ ಸ್ಮೈಲ್ ಕೊಡುತ್ತಾರೆ. 

ಹೇಮಾಗೆ ಪುಸ್ತಕ ಎಂದರೆ ಇನ್ನಿಲ್ಲದ ಹುಚ್ಚು. ತಾವು ಓದಿದ ಕೃತಿಗಳ ಪಾತ್ರಗಳು ಇವರನ್ನು ಇನ್ನಿಲ್ಲದಂತೆ ಕಾಡುತ್ತವೆ. ‘ನಿದ್ದೆಯಲ್ಲೂ..’ ಎಂದು ಮಾತು ಸೇರಿಸುತ್ತಾರೆ. ಇಂದಿನಿಂದ ಪ್ರತೀ ವಾರ ಹೇಮಾ ತಮ್ಮನ್ನು ಕಾಡಿದ ಪಾತ್ರಗಳನ್ನು ತಂದು ನಮ್ಮ ಎದುರು ನಿಲ್ಲಿಸಲಿದ್ದಾರೆ.

ಕೆಲವು ವಿಷಯಗಳಲ್ಲಿ ನಾನೆಷ್ಟು ವಿಲಕ್ಷಣವಾಗಿ ಯೋಚಿಸುತ್ತೇನಲ್ಲ ಎಂದು ನನಗೆ ಅನೇಕ ಸಲ ಬೇಸರ ಆಗಿದೆ. ಜೊತೆಗೆ, ಪರವಾಗಿಲ್ಲ ನಾನು ಎಲ್ಲರಿಗಿಂತ ಭಿನ್ನವಾಗಿ ಯೋಚಿಸುತ್ತೇನೆಲ್ಲ ಅಂತ ಖುಷಿಯೂ ಆಗಿದೆ.

ಸ್ವಚ್ಚತೆ ಕುರಿತಾಗಿ ನಾನು ನಿಜಕ್ಕೂ ತುಂಬಾ ವಿಚಿತ್ರವಾಗಿ ಯೋಚಿಸಿ, ಬಟ್ಟೆ ತೊಳೆದು ಒಣಗಿಸುವ ವಿಷಯಕ್ಕೆ ಎಷ್ಟೇ ಆತ್ಮೀಯರಿದ್ದರೂ ನಾನು ಅಪನಂಬಿಕೆಯಿಂದ ವರ್ತಿಸುತ್ತೇನೆ.

ಅಂದಕಾಲತ್ತಿಲೆ.. ಅಕ್ಕನನ್ನು ನೋಡಲು ಬಂದ ಗಂಡನ್ನು ನಾನು ರಿಜೆಕ್ಟ್ ಮಾಡಿದ್ದು, ಅವರು ಕಾಲು ಸ್ವಚ್ಛವಾಗಿ ತೊಳೆಯದೆ ಒಳಗಡೆ ಬಂದು ಕಾಲೊರೆಸುವ ಮ್ಯಾಟಿಗೆ ರಾಡಿಯನ್ನು ತಿಕ್ಕಿದ್ದರು ಎಂದು. ಪಾಪದ ಅಕ್ಕ ನನ್ನ ಮಾತು ಕೇಳಿ ಒಳ್ಳೇ ಹುದ್ದೆಯಲ್ಲಿದ್ದ ಹುಡುಗನ್ನು ಬೇಡಾ! ಎಂದಳು.

ನಾನೇನಾದೂ ಒಂದು ಪುಸ್ತಕ ಬರೆದು, ಅದರಲ್ಲಿ ನನ್ನ ಪರಿಚಯ ಹೇಳುವಾಗ ನಾನು ಮರೆಯದೇ ಬರೆಯುವ ಸಾಲು “ಕುದಿವ ನೀರಿನಲ್ಲಿ ನೆನೆಸುತ್ತ, ಪಾಪ ಬಟ್ಟೆಗಳು ಮರುಕ ಪಡುವುದು ಏನೋ ಮಜಾ ಕೊಡುತ್ತದೆ ನಂಗೆ” ಅಂತ. ಅಂದರೆ ಊಹಿಸಿಕೊಳ್ಳಿ ಬಟ್ಟೆಗಳನ್ನು ನಾನು ಯಾವ ರೇಂಜಿಗೆ ಸ್ವಚ್ಛವಾಗಿ ಒಗೆಯಬಹುದು ಎಂದು.

ಇದು ನನಗೆ ಹೇಗೆ ರೂಢಿಯಾಯಿತು ಎನ್ನುವುದು ನನಗೆ ಅಷ್ಟು ಸರಿಯಾಗಿ ನೆನಪಿಲ್ಲ. ಕೊಳೆ ಬೇಗ ಬಿಡುತ್ತದೆ ಎಂದು ನಮ್ಮ ಶಾಲೆಯ ಬಿಳಿ ಸಮವಸ್ತ್ರಗಳನ್ನು ಅವ್ವ ತುಸು ಬೆಚ್ಚಗಿನ ನೀರಲ್ಲಿ ನೆನೆಸಿಟ್ಟು ತೊಳೆಯುತ್ತಿದ್ದಳು. ನಾನು ಅದನ್ನು ಕುದಿಸುವ ಮಟ್ಟಕ್ಕೆ ಒಯ್ದು ನಿಲ್ಲಿಸಿದೆ ಅಂತ ಕಾಣತ್ತೆ.

ರಾತ್ರಿಯೇ ಕುದಿವ ನೀರಿನಲ್ಲಿ ಬಟ್ಟೆಗಳನ್ನ ನೆನೆಸಿಟ್ಟು, ಬೆಳಗ್ಗೆ ಎದ್ದ ತಕ್ಷಣ ತೊಳೆದು ಹಾಕುವುದು. ಬಿಸಿಲ ಮೊದಲ ಕಿರಣ ನಾನು ತೊಳೆದು ಒಣಗಲು ಹಾಕಿದ ಬಟ್ಟೆಗಳ ಮೇಲೇ ಬೀಳಬೇಕು. ಮಧ್ಯಾಹ್ನ ಎರಡು ಗಂಟೆಯ ಹೊತ್ತಿಗೆ ಬಿಸಿಲಲ್ಲಿ ಗರಿಗರಿಯಾಗಿ ಹಾರಾಡುತ್ತಿದ್ದ ಬಟ್ಟೆಗಳನ್ನು ತಂದು ಮಡಚಿ ಇಟ್ಟರೆ ಏನೋ ಸಂತೃಪ್ತ ಭಾವ.

ಗುಂಡುಮರಿ, ಎಲ್ಲ ಸ್ವಚ್ಛವಾಗಿದೆ ನೀನಿನ್ನು ಆರಾಮಾಗಿ ಮಲ್ಕೋಬಹುದು ಅಂತ ಹೇಳಿಕೊಳ್ಳುವಷ್ಟು ಖುಷಿ. ಮಳೆ ಎಷ್ಟೇ ಇಷ್ಟವಾದರೂ ಮಳೆಗಾಲದಲ್ಲಿ ಬಟ್ಟೆ ಸರಿಯಾಗಿ ಒಣಗುವುದಿಲ್ಲವೆಂದು ನಾನು ಬಹುತೇಕ ಸಲ ಡಿಪ್ರೆಷನ್ ಗೆ ಜಾರುತ್ತೇನೆ.

ಮನೆಯ ಸ್ವಚ್ಛತೆಯ ವಿಷಯವೂ ಅಷ್ಟೇ.. ಎಲ್ಲವೂ ಶುಭ್ರಾತಿಶುಭ್ರವಾಗಿರಬೇಕು. ಪಾತ್ರೆಗಳ ಮೇಲೆ ನೀರಿನ ಕಲೆ ಇರಬಾರದು. ತೊಳೆದ ತಕ್ಷಣ ‘ಪಾತ್ರೆ ಒರೆಸುವ’ ಬಟ್ಟೆಯಿಂದ ಅವನ್ನೆಲ್ಲ ಒರೆಸಿ ಜಾಗದಲ್ಲಿ ಇಟ್ಟು ಬಿಡಬೇಕು.. ಎರಡು ದಿನಕ್ಕೊಮ್ಮೆ ಪಾತ್ರೆ ಒರೆಸುವ ಬಟ್ಟೆಗೆ ಕುದಿನೀರಿನ ಸ್ನಾನ ಆಗಬೇಕು.

ಎರಡು ಟೈಲ್ಸ್ ಮಧ್ಯದ ಗೆರೆ ಮೇಲೆ ಧೂಳು ಕೂತು ಅದು ತಿಳಿಕಂದು ಬಣ್ಣವಾಗಿರಬಾರದು. ಹಾಗೆ ಆಗಬಾರದು ಅಂತ ವಾರಕ್ಕೊಮ್ಮೆ ತುಸು ಹಳೆಯ ಹಲ್ಲುಜ್ಜುವ ಬ್ರಷ್ ತೊಗೊಂಡು ಸೋಪಿನ ಪುಡಿ ನೀರಲ್ಲಿ ಅದ್ದಿ ಅದ್ದಿ ಆ ಗೆರೆಯನ್ನು ಉಜ್ಜಿ ಉಜ್ಜಿ ತೊಳೆಯುವುದು. ಕಿಟಕಿಯ ಕಂಬಿ, ಬಾಗಿಲು, ಬಾಗಿಲ ಚೌಕಟ್ಟು, ಬಾಗಿಲ ಹಿಂದಿನ ಸಂದಿಗಳು ಎಲ್ಲೂ ಧೂಳಿರಬಾರದು.

ನಾನು ಕಸ ಹೊಡೆದು ನೆಲ ಒರೆಸಿದರೆ ನನ್ನಜ್ಜಿ ಹೇಳುತ್ತಿದ್ದ ಒಂದು ಡೈಲಾಗ್.. “ಯವ್ವಾ ನೀ ಕಸಾ ಹೊಡೆದು, ನೆಲ ವರೆಸಿದ್ರ ಕಣ್ಣ್ ರೆಪ್ಪಿಗೆ ಹಚ್ಕೋಬೇಕು ಅಂದ್ರೂ ತುಸು ಧೂಳು ಸಿಗಂಗಿಲ್ಲೇ ತಾಯಿ..”

ಬೆಂಗಳೂರಿಗೆ ಬಂದ ಹನ್ನೊಂದು ವರ್ಷದಲ್ಲಿ ಬೇರೆ ಏನಾದ್ರೂ ಸಾಧಿಸಿದೇನೋ ಇಲ್ಲವೋ ಗೊತ್ತಿಲ್ಲ… ಆದ್ರೆ ನನ್ನ ಮನೆಯಲ್ಲಿ ಒಂದೇ ಒಂದು ದಿನ ಒಂದು ಜಿರಳೆ ಹರಿದಾಡಿಲ್ಲ, ಇಲಿ ಓಡಾಡಿಲ್ಲ, ನೊರಜು ಹಾರಾಡಿಲ್ಲ.. ಜೀವಮಾನ ಸಾಧನೆ… ಅಂತ ಹೆಮ್ಮೆ ಪಡಬಹುದೇನೋ.

ಈ ಸ್ವಚ್ಛಿನ ವಿಪರೀತತನಕ್ಕೆ ಹೆದರಿ ಕಾಯಿಲೆ ಥರ ಅಂಟಿಕೊಂಡು ಬಿಟ್ಟರೆ ಏನ್ ಮಾಡೋದು ಅಂತ ಅತ್ತಿಗೆ ಹತ್ರ, ಮೆಡಿಸಿನ್ ಇದ್ರೆ ಕೊಡಿ ಅಂದೆ. ಮೆಡಿಸಿನ್ ನಿಂದ ಜೀನ್ಸ್ ನಲ್ಲೇ ಬಂದಿದ್ದು ಕಡಿಮೆಯಾಗಲ್ಲ, ನೀವಾಗ್ಲೆ ರೂಢಿಸಿಕೊಂಡಿದ್ದು ಒಂದು ಹಂತಕ್ಕೆ ಕಡಿಮೆ ಆಗತ್ತೆ ಅಂತ ಕೊಟ್ಟರು. ತಗೊಂಡು ಇವತ್ತು ಕಡಿಮೆ ಆಗಹುದು, ನಾಳೆ ಆಗಬಹುದ ಅಂತ ಕಾಯ್ತಾ ಇದ್ದೆ.

ಅಷ್ಟರಲ್ಲಿ, ಎರಡನೇ ಅಕ್ಕನಿಗೆ ಅವಳ ಗಂಡನ ಪೆಟ್ರೋಮ್ಯಾಕ್ಸ್ ವಿಷ್ಯ ಗೊತ್ತಾಗಿ, ಅದು ಇದ್ದದ್ದೇ ಹೌದು ಎನ್ನುವುದಕ್ಕೆ ಸೂಕ್ತ ಸಾಕ್ಷಾಧಾರಗಳೆಲ್ಲ ಸಿಕ್ಕು, ನಾವು ಅವಳನ್ನ ಮದುವೆ ಹೆಣ್ಣನ್ನ ಹಾರಿಸಿಕೊಂಡು ಬಂದಂತೆ ಮನೆಗೆ ಕರೆ ತಂದೆವು. ಅದರ ಮಾರನೇ ದಿನ ನನ್ನ ತಪ್ಪಾಗಿದೆ ಮನೆಗೆ ಬಾ ಅಂತ ಕರೆಯಲು ಬಂದ ಅವಳ ಗಂಡನಿಗೆ ನಾನು ಹೇಳಿದ್ದು, ಸದ್ಯಕ್ಕಂತೂ ನಮಗೆ ಅವಳನ್ನು ಕಳಿಸುವ ಯೋಚನೆ ಇಲ್ಲ. ಅವಳಿಗೂ ಬರುವ ಯೋಚನೆ ಇಲ್ಲ. ಮುಂದೆ ನೋಡೋಣ… ಬರೋ ಪ್ರಸಂಗ ಬಂದ್ರ ಬರ್ತಾಳೆ. ಆದ್ರೆ, ಒಂದು ವಿಷ್ಯ ನೆನಪಿರಲಿ.. ಅವಳು ಈಗ ಇಲ್ಲ ಅಂತ ದಿನ ಬಾತ್ ರೂಮ್, ಟಾಯ್ಲೆಟ್, ಸಿಂಕ್ ತೊಳೆಯದೇ ಇರುವ ಹಾಗಿಲ್ಲ… ತೋಳೀತಾ ಇರಬೇಕು ಅಷ್ಟೇ ಅಂತ…

ಅಯ್ಯೋ ಸ್ವಚ್ಛತೆದು ಏನ್ ಹುಚ್ಚಿದು ಎನಿಸಿದಾಗಲೆಲ್ಲ ನಾನು ‘ಹರುಕು ಮುರುಕು’ ನ ಕತೆ ಓದುತ್ತೇನೆ. ಅದು ಜಪಾನಿ ಕತೆಗಾರ ಹರುಕಿ ಮುರಕಮಿ (Haruki murakami) ನನಗೆ ‘ಹರುಕು ಮುರುಕು’ ಅಂತನ್ನಲೇ ಇಷ್ಟ. ಇವನದೊಂದು short story ಇದೆ “The Kidney-Shaped Stone That Moves Every Day,” ಇತ್ತಿಚೇಗೆ ಇದನ್ನ ಸಚೇತನ ಭಟ್ ‘ಪ್ರತಿದಿನ ಚಲಿಸುತ್ತಿದ್ದ ಕಿಡ್ನಿಯಾಕಾರದ ಕಲ್ಲು’ ಅಂತ ಅನುವಾದಿಸಿದ್ದಾರೆ. ನಿಜಕ್ಕೂ ಚೆಂದದ ಅನುವಾದ.

ಈ ಕತೆಯ ನಾಯಕಿಗೆ ಒಂದು ವಿಲಕ್ಷಣ ಹವ್ಯಾಸವಿರುತ್ತದೆ. ಅದರ ಬಗ್ಗೆ ಆತ್ಮೀಯರ ಹತ್ತಿರವೂ ಹೇಳುತ್ತಿರುವುದಿಲ್ಲ. ಆದರೆ ಒಮ್ಮೆ ಮಾತನಾಡುತ್ತಾ… ತನ್ನ ಕೆಲಸ ಹೇಗೆ ಬ್ಯಾಲೆನ್ಸ್ ಬಯಸುತ್ತದೆ ಎನ್ನುವುದನ್ನು ಪರೋಕ್ಷವಾಗಿ ಹೇಳಲು ಅವಳು ಹೇಳುವ ಮಾತು… “ಕತೆಯಾಗಲಿ, ಸಂಗೀತವಾಗಲಿ, ಚಿತ್ರಕಲೆಯಾಗಲಿ ಎಲ್ಲದಕ್ಕೂ ಸಮತೋಲನ ಅತ್ಯಗತ್ಯ. ಸಮತೋಲನವಿಲ್ಲದ ಯಾವುದನ್ನು ನೋಡಿದರೂ, ನಾನು ನೋಡುತ್ತಿರುವುದು ಅನುಭವಿಸುತ್ತಿರುವುದು ಅಪೂರ್ಣವೆನ್ನುವ ಭಾವ ಹುಟ್ಟಿ, ಹೊಟ್ಟೆ ತೊಳೆಸಿದಂತಾಗಿ ಅಸ್ವಸ್ಥಳಾಗುತ್ತೇನೆ,” ಎಂದು.

ಸ್ವಚ್ಛವಿಲ್ಲದ ಯಾವುದನ್ನ ನೋಡಿದರೂ ಥೇಟ್ ನನಗಾಗುವುದೂ ಇದೇ. ನಾನು ಸಮತೋಲನ ಕಳೆದುಕೊಳ್ಳುತ್ತೇನೆ. ಇದಕ್ಕಾಗಿಯೇ ಎಲ್ಲರಿಂದ ಎಲ್ಲದರಿಂದ ನಾನು ದೂರ ಉಳಿಯುವುದು. ಮೊದಲ ಸಲ ಇದನ್ನು ಓದಿದಾಗ, ಎಷ್ಟೆಲ್ಲ ವಿಚಿತ್ರ ವಿಲಕ್ಷಣ ಪಾತ್ರಗಳು ಇರುತ್ತವೆ ಜಗತ್ತಲ್ಲಿ ಅಂತ ಆಶ್ಚರ್ಯ ಆಗಿತ್ತು. ಮೊನ್ನೆ ಜಗಳದ ದಿನ ಮಾತ್ರ ಈ ಜಗವೆಂಬೋ ರಂಗಮಂಚದಲ್ಲಿ ನಾನೂ ಒಂದು ವಿಚಿತ್ರ ಪಾತ್ರವೇ ಎಂದು ಸಮಾಧಾನವಾಯಿತು.

ಅಯ್ಯೋ ಆಗ್ಲೆ ರಾತ್ರಿ ಹತ್ತು… ನಾ ಬಟ್ಟೆ ನೆನೆಸಲು ನೀರು ಕುದಿಸಬೇಕು. ನಾಳೆ ಜೋರು ಬಿಸಿಲಿರುತ್ತದೆಯಂತೆ!! ಬೈ.

December 3, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅಂದು, ನಾನು ವಿದ್ಯಾರ್ಥಿಗಳ ಮುಂದೆ ತಲೆ ತಗ್ಗಿಸಿದೆ…

ಅಂದು, ನಾನು ವಿದ್ಯಾರ್ಥಿಗಳ ಮುಂದೆ ತಲೆ ತಗ್ಗಿಸಿದೆ…

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ...

‘ಫಿರ್ ಭೀ ದಿಲ್ ಹೈ ಹಿಂದೂಸ್ತಾನಿ’

‘ಫಿರ್ ಭೀ ದಿಲ್ ಹೈ ಹಿಂದೂಸ್ತಾನಿ’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ 'ಅರೇ... ಹೋದ......

೧ ಪ್ರತಿಕ್ರಿಯೆ

  1. Seema Deepak

    ohhh Hema,
    Nimma lekana odida kudale dance mado ashto kushi agoythu. Nannantade innodu prani ide antha jeevakke bhari samadhanaaythu marayti. Thank you.

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ Seema DeepakCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: