ಸ್ವರ್ಣ ಬರಹ: ಉಣ್ಣಲು ಕೇಳಿದ ಮಗುವಿಗೆ ಇಕ್ಕಲಾಗದೇ..

ಸ್ವರ್ಣ ಎನ್ ಪಿ

ಓದುವುದನ್ನು ಆರಂಭಿಸಿದಾಗಿನಿಂದ ಬ್ರಾಹ್ಮಣರ ಬಗ್ಗೆ ಒಂದು ವರ್ಗದ ಆಪಾದನೆಗಳನ್ನು ಕೇಳುತ್ತಲೇ ಬಂದಿದ್ದೇನೆ. ಅದೇನೋ ಎಲ್ಲರೂ ‘ಪುರೋಹಿತ ಶಾಹಿ’ ಅನ್ನೋ ಪದದ ಧಾರಾಳ ಬಳಕೆ ಮಾಡುತ್ತಾರೆ. ಹಾಗಂದರೇನು ಅಂಥ ನಂಗೆ ಗೊತ್ತಿಲ್ಲ.  ಶೋಷಿತವರ್ಗ ಶೋಷಣೆಗಳನ್ನ ಮರೆಯೋದು ಅಷ್ಟು ಸುಲಭವಲ್ಲವೇನೋ? ಆದರೆ ತೆಗಳಿಕೆ ಯಾರಿಗೆ ಇಷ್ಟವಾಗತ್ತೆ? ನಂಗೂ ಬೇಜಾರಾಗ್ತಿತ್ತು. ಈಗ ಅಷ್ಟಾಗಲ್ಲ. ಈ ಘಟನೆ ನಡೆದ ಮೇಲೆ ಬೇಸರದ ಭಾವ ಇನ್ನೂ ಕಡಿಮೆಯಾಗಿದೆ. ‘ಗುಡಿಯ ಸಂಭ್ರಮ’ ಅಂಥ ಒಂದು ಕಾರ್ಯಕ್ರಮವನ್ನ, ಬೆಂಗಳೂರಿನ ಕೆಲವು ಗುಡಿಗಳಲ್ಲಿ ಆಯೋಜಿಸಿದ್ದರು. ಮಲ್ಲೇಶ್ವರದ ವೇಣುಗೋಪಾಲ ಸ್ವಾಮಿಯ ಗುಡಿ ನಾನು ಯಾವಾಗಲೂ ಹೋಗುವ ಗುಡಿಗಳಲ್ಲೊಂದು. ಅಲ್ಲೂ ಗುಡಿಯ ಸಂಭ್ರಮದ ಕಾರ್ಯಕ್ರಮವಿತ್ತು, ಪ್ರಕಾಶ್ ಬೆಳವಾಡಿಯವರ ಒಂದು ನಾಟಕ ಇತ್ತು. ನೋಡೋಕೆ ಹೋಗಿದ್ದೆವು. ಆವತ್ತು ಗುಡಿಯಲ್ಲಿ ಏನೋ ವಿಶೇಷ ಪೂಜೆ. ಸ್ವಾಮಿ ಗರುಡ ವಾಹನದ ಮೇಲೆ ಅಲಂಕೃತ ನಾಗಿ ಮೆರವಣಿಗೆಗೆ ಸಿಧ್ಧನಾಗಿ ಕುಳಿತಿದ್ದ.  

ಉತ್ಸವ ಮುಗಿದ ಮೇಲೆ, ಒಳಗೆ ಗರ್ಭಗುಡಿಯ ದೇವರ ನೋಡಲು ನಾನು ಮತ್ತು ನನ್ನ ಮಗ ಹೋದೆವು. ಅಲ್ಲೇ ಪ್ರಾಂಗಣದಲ್ಲಿ ಸಾಲಾಗಿ ಒಂದಷ್ಟು ಜನ ಕೂತಿದ್ದರು. ಅವರೆಲ್ಲರೂ ಶ್ರೀ ವೈಷ್ಣವರು . ಆ ಗುಡಿಗೆ ಶ್ರೀ ವೈಷ್ಣವ ಭಕ್ತರೇ ಪ್ರಮುಖರು . ಹಾಗೆ ಕೂತವರ ಮುಂದೆ ಎಲೆ ಇತ್ತು, ಪ್ರಸಾದ ಬಡಿಸುತ್ತಿದ್ದರು. ನಾವು ದೇವರ ನೋಡಿ ನಮಸ್ಕಾರ ಮಾಡಿ ಹೊರ ಬರುವಾಗ ಮಗನ ಕಣ್ಣು ಎಲೆಯ ಮೇಲೆ ಹೋಯಿತು. ಎಂದೂ ಬಾಯ್ತೆರೆದು ತಿನ್ನಲು ಕೇಳದ ಮಗ ” ಅಮ್ಮ, ಓರು ಓಲಕ್ಕಿ ತಿಂತಿದಾರೆ, ನಂಗೂ ಬೇಕು” ಅಂದ.

ಹೇಗೆ ಕೇಳೋದು?, ಅಲ್ಲಿ ಸಾರ್ವ ಜನಿಕರನ್ನ ಅವರು ಕರೆಯುತ್ತಿರಲಿಲ್ಲ. ಹಾಗೆ ಮರೆಸಿ ಹೊರಗೆ ಕರಕೊಂಡು ಬಂದೆ. ಅವ ಮರೆಯಲಿಲ್ಲ. ಸರಿ ಎಂದೂ ತಿನ್ನಲು ಕೇಳದ ಮಗ ಕೇಳುತ್ತಿದ್ದಾನೆ, ತಿಂತಾನೇನೋ ಅನ್ನೋ ಆಸೆ ಇಂದ, ನಾನು ನನ್ನ ಪತಿ ಮತ್ತೆ ದೇವಳದ ಒಳಗೆ ಹೋದೆವು. ಅಷ್ಟು ಹೊತ್ತಿಗೆ ಕಚ್ಚೆ ಉಟ್ಟ ಶ್ರೀ ವೈಷ್ಣವ ಹೆಂಗಸರು, ಗಂಡಸರು ತಿಂದ ಎಲೆ ಹಿಡಿದು ಕೊಂಡು ಕೈ ತೊಳೆಯಲು ಹೊರ ಬರುತ್ತಿದ್ದರು. ಆದರೂ ಬಡಿಸುತ್ತಿದ್ದವರನ್ನ “ಸ್ವಲ್ಪ ಪ್ರಸಾದ ಕೊಡ್ತಿರಾ” ಅಂದೆ. “ಖಾಲಿಯಾಯ್ತು” ಅನ್ನೋ ಉತ್ತರ ಬಂತು. ಮತ್ತೆ ಮಗ ಕೇಳಿದ. ಅಲ್ಲೇ ಇದ್ದ ಒಬ್ಬ ಹೆಂಗಸು ಅಲ್ಲಿ ಹಾಲ್ ನ ಒಳಗೆ ಕೊಡ್ತಾರೆ ಹೋಗಿ ಕೇಳಿ ಅಂದರು. ಸರಿ ಅಲ್ಲೂ ಹೋದೆವು. ಮತ್ತೆ ಕೇಳಿದೆವು. ನೋಡ್ತೀನಿ ಅಂದ ಒಬ್ಬ ಪುಣ್ಯಾತ್ಮ ಫೋನ್ ಬಂದು ಮಾಯವಾದರು . ಅಷ್ಟು ಹೊತ್ತಿಗೆ ಮೊದಲು ಕೇಳಿದ್ದ ವ್ಯಕ್ತಿ ಮತ್ತೆ ಬಂದರು. ಈ ಬಾರಿ ನೋಡ್ತೀನಿ ಅಂತ ಒಳ ಹೋದರು. ಹಾಲ್ ನಲ್ಲಿ ಸಾಲಾಗಿ ಎಲೆ ಇಟ್ಟು, ಪುಷ್ಕಳವಾಗಿ ಕದಂಬಂ, ಪೊಂಗಲ್ ಮತ್ತಿನ್ನಿನೇನೋ ಹೆಸರುಗಳ ಪ್ರಸಾದಗಳನ್ನ ಬಡಿಸುತ್ತಿದ್ದರು. ಬಕೆಟ್ ತುಂಬಾ ಇದ್ದ ಪ್ರಸಾದಗಳು ನಮ್ಮ ಕಣ್ಣು ಕುಕ್ಕುತ್ತಿದ್ದವು. ಮುಂದೆಯೇ ರಾಶಿ ಬಾಳೆಯೂ ಬಿದ್ದಿತ್ತು. ಸರಿ ಬಿಡು ಒಂದು ಎಲೆಯಲ್ಲಿ ಕೊಡ್ತಾರೆ ಅಂಥ ನಾವು ನಿಂತೆವು . ಒಳ ಹೋದಾತ ಬಂದರು “ತಗೋಳಮ್ಮ” ಅಂಥ ಒಂದು ಸೌಟಿನಲ್ಲಿ ಪೊಂಗಲ್ ತಂದಿದ್ದರು. ನಾನು ಒಂದು ಬಾಳೆ ಎಲೆ ಕೇಳೋಣ ಅನ್ನೋ ಅಷ್ಟರಲ್ಲಿ, ತುದಿ ಇಂದ ಒಂದು ತುತ್ತು ಪೊಂಗಲನ್ನು ನನ್ನ ಕೈಗೆ ಹಾಕಿ ಹೊರಟು ಹೋದರು . ಮಗ “ಇದು ಓಲಕ್ಕಿ ಅಲ್ಲ, ನಂಗೆ ಬೇಡ” ಅಂಥ ಮೂತಿ ತಿರುವಿದ. ಸರಿ ಹೊರ ಹೋಗಿ ಅವನಿಗೆ ಬೇರೇನೋ ಕೊಡಸಿ ಸಮಾಧಾನ ಮಾಡಿದೆವು. ಅವರು ಒಳಕರೆದು ಪ್ರಸಾದ ಕೊಡಲೆಂದು ನಾ ನೀರಿಕ್ಷಿಸಿರಲಿಲ್ಲ, ಕೇಳಿದ್ದು ನಾನೂ ಅಲ್ಲ. ಒಂದು ಮಗು ಅಷ್ಟು ಸ್ಪಷ್ಟವಾಗಿ ನನಗೆ ಪ್ರಸಾದ ಬೇಕು ಅಂದಾಗಲೂ ಕೊಡದೆ ಹೋದದ್ದು ಎಷ್ಟರ ಮಟ್ಟಿಗೆ ಸರಿ? ಇಂಥ ವರ್ತನೆಗಳು ಬ್ರಾಹ್ಮಣರ ವಿರುಧ್ಧದ ಆರೋಪಗಳಿಗೆ ತುಪ್ಪ ಸುರಿಯಲಾರವೇ? ಭಗವಂತನ ನಾಮವನ್ನ ಎಲ್ಲ ಸ್ತರದವರಿಗೆ ತಲುಪಿಸುವ ಸಲುವಾಗಿ ಗೋಪುರದ ಮೇಲಿಂದ ನಾಮವನ್ನ ಉಚ್ಚರಿಸಿದ ಭಗವದ್ ರಾಮಾನುಜರ ಶಿಷ್ಯ ಪರಂಪರೆ ಇಲ್ಲಿಗೆ ಬಂತೇ? ಕಲ್ಲು ಕೃಷ್ಣನ ಕೈಗೆ ಬೆಣ್ಣೆ ಮುದ್ದೆಯನಿಟ್ಟವರಿಗೆ ಒಂದು ಮಗುವಿನಲ್ಲಿ ಕೃಷ್ಣ ಕಾಣಲಿಲ್ಲವೇ? ಈ ಬರಹದ ಹಿಂದಿನ ಉದ್ದೇಶ ಯಾರನ್ನೂ ಹಳಿಯುವುದಲ್ಲ. ನನಗೆ ವೇಣುಗೋಪಾಲನ ಸನ್ನಿಧಿ ಇಂದಿಗೂ ಪ್ರಿಯವೇ. ಆದರೆ ಪುರದ ಹಿತವನ್ನ ಬಯಸಬೇಕಾದ ಪುರೋಹಿತ , ಒಳಿತನ್ನು ಆಚರಿಸಿ ತೋರಿಸಬೇಕಾದ ಜ್ಞಾನಿ ಆಚಾರ್ಯ ಎಲ್ಲಿ ಕಳೆದು ಹೋದ? ಎಂಬ ಪ್ರಶ್ನೆ ಕಾಡುತ್ತೆ. ಮಾರನೆ ದಿನ ನನ್ನ ಸಹೋದ್ಯೋಗಿಗಳೊಂದಿಗೆ ಈ ಪ್ರಸಂಗ ಹೇಳುತ್ತಿದ್ದೆ . ಒಬ್ಬರೆಂದರು, “ನಾನು ಗುರು ರಾಘವೇಂದ್ರ ವೈಭವ ನೋಡುತ್ತೇನೆ. ಅದರಲ್ಲಿ ಗುರುಗಳು ಎಲ್ಲರನ್ನೂ ಎಷ್ಟು ಪ್ರೀತಿ ಇಂದ ಕಾಣುತ್ತಾರೆ. ಆದರೆ ಇಂದಿನ ರಾಯರ ಮಠಗಳಿಂದ ಅದನ್ನ ನೀರಿಕ್ಷಿಸಬಹುದೇ? ಬಹುಶಃ ದೈವಾಂಶ ಸಂಭೂತರಿಗೆ ಮಾತ್ರ ಎಲ್ಲರಲ್ಲೂ ದೇವರು ಕಾಣುತ್ತಾನೆ”. ಅವರ ಮಾತು ನನ್ನ ಮನಸನ್ನ ಇನ್ನೂ ತಿಳಿಯಾಗಿಸಿತು. ನನಗೆ ಅಲ್ಲಿದ್ದ ಯಾರೂ ವೈಯುಕ್ತಿವಾಗಿ ಪರಿಚಯದವರಲ್ಲಿ. ಯಾವ ವರ್ಗದ ಬಗ್ಗೆಯೂ ನನಗೆ ಸಿಟ್ಟಿಲ್ಲ. ಇದು, ಉಣ್ಣಲು ಕೇಳಿದ ಮಗುವಿಗೆ ಇಕ್ಕಲಾಗದೇ ಹೋದ ತಾಯ ಭಾವ ಮಾತ್ರ.]]>

‍ಲೇಖಕರು G

March 27, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

13 ಪ್ರತಿಕ್ರಿಯೆಗಳು

 1. ವಿ.ಎನ್.ಲಕ್ಷ್ಮೀನಾರಾಯಣ

  ಮಾನ್ಯರೆ
  ನಿಮ್ಮ ಅನುಭವವನ್ನು ಕೇವಲ ತಾಯಿಯಾಗಿ ಅಲ್ಲದೆ ಈ ಸಮಾಜದಲ್ಲಿ ಬದುಕುತ್ತಿರುವ ಮನುಷ್ಯರಾಗಿ ಅರ್ಥೈಸಿಕೊಂಡರೆ ಭಕ್ತಿ, ದೇವರು, ಪುರೋಹಿತಶಾಹಿ ಮುಂತಾದ ಮಾತುಗಳು ಸ್ಪಷ್ಟವಾಗಬಹುದು. ಈ ಕೆಳಗಿನ ಲೇಖನದ ಭಾಗವನ್ನು (ನುಡಿ ಅಕ್ಷರದಲ್ಲಿ) ನೀವು ಓದಬೇಕೆಂದು ಬಯಸುತ್ತೇನೆ.
  ಪರಮಹಂಸರು ಗಂಟಲು ಹುಣ್ಣಿನಿಂದ ನರಳುತ್ತಿದ್ದಾಗ ಕುಡಿಸುತ್ತಿದ್ದ ಗಂಜಿ ಈಗ ರಾಮಕೃಷ್ಣಾಶ್ರಮದ ಸಿರಿವಂತ ಶಾಖೆಗಳಲ್ಲಿ ದ್ರಾಕ್ಷಿ-ಗೋಡಂಬಿ ಹಾಕಿದ ಪಾಯಸವಾಗಿ ಪ್ರಸಾದವೆನಿಸಿದೆ
  ಶಿರಡಿ ಸಾಯಿಬಾಬಾ ಒಣಕಲು ರೊಟ್ಟಿ ತಿಂದು ಜೀವಿಸುತ್ತಿದ್ದ, ನೊಂದವರಿಗೆ ಬೂದಿಯ ಸಾಂತ್ವನ ನೀಡುತ್ತಿದ್ದ ಬಡಸಾಧು.ಇಂದು ಬೆಳ್ಳಿಕಿರೀಟವನ್ನೊಪ್ಪಿಸುವ ಹಣ ಪ್ರಪಂಚದ ಅತ್ಯಂತ ಸಿರಿವಂತ ದೇವರಾಗಿ ಪೂಜೆಗೊಳ್ಳುತ್ತಿದ್ದಾನೆ.
  ಕಡುಬಡತನದಲ್ಲಿ ಮಠದ ಆಶ್ರಯದಲ್ಲಿ ಬದುಕುತ್ತಿದ್ದ ಬ್ರಾಹ್ಮಣನೊಬ್ಬ ಸ್ಫುರದ್ರೂಪಿ ಹೆಂಡತಿಯನ್ನು ತೊರೆದು ಸಂನ್ಯಾಸಿಯಾಗಿ,ಜೀವಂತ ಸಮಾಧಿಯಾದ ಕ್ರಿಯೆಗಳ ಹಿಂದೆ ಇದ್ದ ನೋವು, ನರಳಿಕೆ, ಅನಿವಾರ್ಯತೆಗಳು ಹಣದ ಹೊಳೆ ಹರಿಯುವ ಮಠದ ಭಕ್ತರಿಗೆ ಮುಟ್ಟುತ್ತದೆಯೆ?
  ಗುಲಾಮರ ರಾಜನೆಂದು ಹೀಯಾಳಿಸಿಕೊಂಡು ಕಡುಬಡವರು-ಕುಷ್ಠರೋಗಿಗಳನ್ನು ಸಂತೈಸುತ್ತಿದ್ದ ಬಡ ಸಂತ ಏಸು ಇಂದು ಶ್ರೀಮಂತರ ಕೈಗೊಂಬೆಯಾಗಿದ್ದಾನೆ.
  ಬಡಜನರ ಸಂತ ಸತ್ತು ಶ್ರೀಮಂತರ ದೇವರಾಗುತ್ತಾನೆ
  .ಆರಾಧನೆಯಲ್ಲಿ ನೇಗಿಲಿನ ಮೂಲದ ಆಹಾರ-ಪಾನೀಯಗಳ ಪಾತ್ರ ಹಿರಿದು. ಎಲ್ಲಾ ಬಗೆಯ ಉತ್ಸವ-ಹಬ್ಬಗಳು, ದೇವರ ಆರಾಧನೆಗಳು ಆಹಾರ-ಪಾನೀಯಗಳ ಸಮೃದ್ಧಿಯ ಜೊತೆಗೆ ಭೌತಿಕವಾಗಿ ಇಲ್ಲವೆ ಸಾಂಕೇತಿಕವಾಗಿ ತಳುಕು ಹಾಕಿಕೊಂಡಿವೆ. ಶ್ರಮಿಕರು ತಾವು ಬೆಳೆದ, ಉತ್ಪಾದಿಸಿದ ಆಹಾರವಸ್ತುಗಳನ್ನು, ಅವುಗಳಿಂದ ತಯಾರಿಸಿದ ಪಾನೀಯಗಳನ್ನು ತಮ್ಮ ದೇವರಿಗೆ, ಪೂಜಾರಿ, ಪುರೋಹಿತ, ಧರ್ಮಗುರುಗಳ ಮುಂದಾಳತ್ವ, ಮಧ್ಯವರ್ತನೆಯೊಂದಿಗೆ ಕೃಷಿ ಸಮೃದ್ಧಿಯ ಕಾಲದಲ್ಲಿ ಅಪರ್ಿಸುವುದು ಸಾಮಾನ್ಯ. ಆರಾಧನೆಯೆಂದರೇ ಆಹಾರವನ್ನು ಬಲಿಕೊಟ್ಟು, ಕತ್ತರಿಸಿ, ಪಕ್ವವಾಗಿಸಿ ದೇವರ ಹೆಸರಿನಲ್ಲಿ ಹಂಚಿ ತಿನ್ನುವುದು. ಅವರು ಆರಾಧಿಸುವ ದೇವರು ಎಷ್ಟೇ ರೂಕ್ಷವಾಗಿದ್ದರೂ ಜನರು ಮತ್ತು ಪೂಜಾರಿ-ಪುರೋಹಿತ-ಧರ್ಮಗುರುಗಳು ತಿನ್ನಲಾಗದ, ತಿನ್ನಬಾರದ ಆಹಾರಪಾನೀಯಗಳನ್ನು ಒಪ್ಪಿಸಿಕೊಳ್ಳುವುದಿಲ್ಲ ಎಂಬುದನ್ನು ಗಮನಿಸಬೇಕು. ಜನರು ತಿನ್ನಲಾಗದ ಹುಲಿ-ಸಿಂಹಗಳನ್ನು ಯಾವ ದೇವರೂ, ಪೂಜಾರಿಯೂ ಬಲಿಕೊಡು ಎಂದು ಕೇಳುವುದಿಲ್ಲ. ಹಸು, ಹೋರಿ, ಕೋಣ, ಒಂಟೆ, ಕುದುರೆ, ಆಡು, ಕುರಿ, ಕೋಳಿಗಳನ್ನು ಬಲಿಕೇಳುವುದು ಸಾಮಾನ್ಯ. ಬ್ರಾಹ್ಮಣ ದೇವರು ಮಾಂಸಾಹಾರ, ಮದ್ಯಪಾನೀಯಗಳನ್ನು, ಹಿಂದೂ-ಜೈನ-ಬೌದ್ಧ ದೇವರು ದನವನ್ನು, ಇಸ್ಲಾಂ ದೇವರು ಹಂದಿಯನ್ನು, ಎಂದೂ ಕೇಳುವುದಿಲ್ಲ. ಬುಡಕಟ್ಟಿನ ಜೀವನ ನಶಿಸುತ್ತಾ ನಾಗರಿಕತೆ ವಿಕಾಸವಾಗುತ್ತಾ ಹೋದಂತೆ ದೇವರು, ಪೂಜಾರಿ-ಪುರೋಹಿತ-ಧರ್ಮಗುರುಗಳೂ ಬದಲಾಗುತ್ತಾ ಬಂದಿದ್ದಾರೆ. ನರಭಕ್ಷತೆ ಸಾಮಾನ್ಯವಾಗಿದ್ದ ಬುಡಕಟ್ಟುಗಳ ದೇವರು ನರಬಲಿಯನ್ನೆ ಕೇಳುತ್ತಿದ್ದವು. ನೇಗಿಲು ಮತ್ತು ಬಂದೂಕುಗಳು ಶಿಷ್ಟವಾಗುತ್ತಾ ಹೋದಂತೆ ದೇವರು ಮತ್ತು ಪೂಜಾರಿಗಳು ಜನರಿಗೆ ವಿಧಿಸುವ ಆರಾಧನೆಯ ವಿಧಾನಗಳೂ, ಆಹಾರ-ಪಾನೀಯಗಳ ಸ್ವರೂಪಗಳೂ ಬದಲಾಗಿವೆ. ಕಾಡು-ಮೇಡುಗಳ ಬುಡಕಟ್ಟು ದೇವರುಗಳು ಪೂಜಾರಿಗಳ ಮೂಲಕ ಕಾಡಿನಲ್ಲಿ ಬೆಳೆಯುವ ಹಣ್ಣು-ಹಂಪಲು, ಸೊಪ್ಪು-ಸದೆ ಕೇಳುತ್ತಿದ್ದವು. ನಗರ-ಪಟ್ಟಣಗಳ ಸಂಪರ್ಕಕ್ಕೆ ಬಂದಮೇಲೆ ಬಾಳೆಹಣ್ಣು-ತೆಂಗಿನಕಾಯಿ ಕೇಳಲು ಪ್ರಾರಂಭಿಸಿದವು. ಹಾಗೆಯೇ ಬ್ರೆಡ್ಡು-ವೈನಿನ ಕ್ರೈಸ್ತ ಆರಾಧಕರು ಖಜರ್ೂರ-ಕಲ್ಲುಸಕ್ಕರೆಯ ಮಹಮದೀಯ ಆರಾಧಕರು, ಹೋಳಿಗೆ-ಕಡುಬು-ತಂಬಿಟ್ಟಿನ ಕೃಷಿಕ ಆರಾಧಕರು ಬಂಡವಾಳವಾದೀ ಸಮಾಜಗಳು ಪ್ರಬಲವಾಗುತ್ತಾ ಹೋದಂತೆ ಹಣವನ್ನೇ ನೇರವಾಗಿ ಕಾಣಿಕೆಯೆಂದು ದೇವರಿಗೆ ಪೂಜಾರಿಗಳ ಮೂಲಕ ಅಪರ್ಿಸಿ ಆರಾಧಿಸತೊಡಗಿದ್ದಾರೆ. ರಾಗಿ-ಜೋಳದಂಥ ಬಡವರ ಧಾನ್ಯಗಳನ್ನು ಒಪ್ಪಿಸಿಕೊಳ್ಳುವ ದೇವರುಗಳು, ಸ್ವಾಗತಿಸುವ ಪೂಜಾರಿಗಳು ಕಾಣಸಿಗುವುದಿಲ್ಲ. ಹೆಚ್ಚೆಂದರೆ ಬತ್ತ, ಅಕ್ಕಿ, ಮುಂತಾದ ನಗರ ಆಹಾರಪದ್ಧತಿಯ ಧಾನ್ಯಗಳನ್ನು, ಸ್ಥಳೀಯವಾಗಿ ಬೆಳೆಯುವ ಸೋರೆ, ಕುಂಬಳ, ಬದನೆ ಮುಂತಾದ ತರಕಾರಿಗಳನ್ನು ಒಪ್ಪಿಸಿಕೊಳ್ಳುವ ಮಠ-ಧರ್ಮಕ್ಷೇತ್ರಗಳು ಸಿಗಬಹುದು. ಹಾಗೆಯೇ ಎಷ್ಟೇ ಸಮೃದ್ಧಿಯಿದ್ದರೂ, ಮಾರಿದರೆ ಕೈತುಂಬಾ ಹಣ ಸಿಗಬಹುದಾದ ಪೆಟ್ರೋಲು, ಡೀಸೆಲ್, ಸೀಮೆಣ್ಣೆಗಳನ್ನು ಅಪರ್ಿಸುವಂತೆ ತನ್ನ ಭಕ್ತರನ್ನು ಕೇಳುವ ದೇವರು ಇದ್ದಂತಿಲ್ಲ. ದೇವಸ್ಥಾನ, ಮಠ-ಮಾನ್ಯಗಳಿಗೆ ಸೇರಿದ ಪೆಟ್ರೋಲ್ ಬಂಕ್ ಗಳು, ಸಿನಿಮಾ ಟಾಕೀಸುಗಳು, ಮಾಲ್ ಗಳು ಖಂಡಿತವಾಗಿಯೂ ಇವೆ. ಅದೇ ಹಣದ ಬೆಳೆಗಳಾದ ಏಲಕ್ಕಿ, ಕಾಫಿ, ಮೆಣಸು ಮುಂತಾದ ದುಬಾರಿ ಬೆಲೆಯ ಕೃಷಿ ಉತ್ಪನ್ನಗಳನ್ನು ದೇವರು-ಪೂಜಾರಿ-ಪುರೋಹಿತ-ಧರ್ಮಗುರುಗಳು ಬೇಡವೆನ್ನುವುದಿಲ್ಲ. ಅಂದರೆ ಆರಾಧನೆಗೆ ಬಳಸುವ ವಸ್ತುಗಳು ನೇಗಿಲಿನ ಮೂಲದ ಆಹಾರಧಾನ್ಯಗಳಾಗಿರಬೇಕು, ಅಥವಾ ತಕ್ಕಡಿ ಮೂಲದ ಹಣದ ರೂಪದಲ್ಲಿರಬೇಕು. ಜನರು ಎಷ್ಟೇ ಬಡವರಾದರೂ ಅವರು ಆರಾಧಿಸುವ ದೇವರು, ಮಧ್ಯವತರ್ಿಯಾದ ಪೂಜಾರಿ-ಪುರೋಹಿತ-ಧರ್ಮಗುರುಗಳು ಯಾವತ್ತೂ ಬಡವರಲ್ಲ. ಶ್ರಮಿಕರು ಹೊಟ್ಟೆ-ಬಟ್ಟೆ ಕಟ್ಟಿ ಕೂಡಿಟ್ಟು, ಭಯ-ಭಕ್ತಿಯಿಂದ ಅಪರ್ಿಸಿದ ಕಾಣಿಕೆಗಳು, ಶ್ರಮಶಕ್ತಿಯ ಹೆಚ್ಚುವರಿ ಮೌಲ್ಯವನ್ನು ಶ್ರಮಿಕರಿಂದ ದರೋಡೆಮಾಡಿ ಸಿರಿವಂತರು ತಮ್ಮ ಹೆಸರಿನಲ್ಲಿ ಕಾಣಿಕೆಯಾಗಿ ಕೊಡುವ ಶ್ರಮಿಕರ ಹಣ ದೇವರಿಗೆ ಬೆಳ್ಳಿಯ ಮೀಸೆ, ಮುತ್ತಿನ ಹಾರ, ವಜ್ರಖಚಿತ ಕಿರೀಟ, ಚಿನ್ನದಕತ್ತಿ, ಕಲಾಪತ್ತಿನ ರೇಷ್ಮೆಸೀರೆ, ಬೆಳ್ಳಿಯರಥ, ಚಿನ್ನದ ತಗಡು ಹೊದ್ದಿಸಿದ ಗೋಪುರ, ಅಮೃತಶಿಲೆಯ ರತ್ನಖಚಿತ ದೇವಸ್ಥಾನಗಳಾಗಿ ಕಂಗೊಳಿಸುತ್ತವೆ. ನಯವಂಚನೆಯ ತಕ್ಕಡಿಯ ಮೂಲಕ ಕೊಳ್ಳೆಹೊಡೆದ ಹಣದಿಂದ ಮಾಡಿಸಿದ ಚಿನ್ನ-ಬೆಳ್ಳಿಯ ಗಂಟೆಗಳಾಗಿ ತೂಗುತ್ತವೆ. ಹೀಗೆ ದೇವರ -ಪೂಜಾರಿಗಳ-ಪುರೋಹಿತರ-ಧರ್ಮಗುರುಗಳ ಶ್ರೀಮಂತಿಕೆಯ ರಕ್ಷಣೆಗೆ ಬಂದೂಕನ್ನು ಬೇಡುತ್ತವೆ.
  -ವಿ.ಎನ್.ಲಕ್ಷ್ಮೀನಾರಾಯಣ

  ಪ್ರತಿಕ್ರಿಯೆ
  • Ananda Prasad

   ಬಹಳ ಚೆನ್ನಾಗಿ ವಿಶ್ಲೇಷಿಸಿದ್ದೀರಿ.

   ಪ್ರತಿಕ್ರಿಯೆ
 2. Radhika

  Swarna, though people refuse to accept, cast based discrimination is very much prevalent in our country.

  ಪ್ರತಿಕ್ರಿಯೆ
 3. D.RAVI VARMA

  ಇದು ಈ ವ್ಯವಸ್ತೆಯ ದುರಂತ .ನಾವು ಯಾರು ಅದರ ಬಗ್ಗೆ ಆಲೋಚನೆ ಮಾಡುವುದಿಲ್ಲ ತಲೆ ಕೆದಿಕೊಲ್ಲುವುದಿಲ್ಲ. ಆದರೆ ಅದು ನಮ್ಮ ಅನುಭವವಾದಾಗ ನಮಗೆ ಕಿರಿಕಿರಿ ಅನಿಸುತ್ತದೆ, ನೋವಾಗುತ್ತದೆ. ವ್ಯವಸ್ತೆ ಬದಲಾಗುವವರೆಗೂ ಈ ಸಂಕಟ ಇದ್ದದ್ದೇ. ಬಟ್ ಅದನ್ನು ಬದಲು ಮಾಡುವವರು ಯಾರು,ಬೆಕ್ಕಿಗೆ ಘಂಟೆ ಕಟ್ಟುವವರು ಯಾರು ಎನ್ನುವಸ್ತೆ ಸತ್ಯದ ಪ್ರಸ್ನೆ ಅಲ್ಲವೇ ಮದ, ನಿಮ್ಮ ಗ್ರಹಿಕೆ,ಹಾಗು ಆಲೋಚನೆ ದಿಕ್ಕು ನನಗೆ ಇಸ್ತವಾಯ್ತು
  ರವಿ ವರ್ಮ ಹೊಸಪೇಟೆ

  ಪ್ರತಿಕ್ರಿಯೆ
 4. Ravi

  ಇದು ಬ್ರಾಹ್ಮಣರು ಹಾಗೂ ಪ್ರಸಾದದ ವಿಷಯ ಮಾತ್ರವಲ್ಲ. ನಮ್ಮ ಸಮಾಜದಲ್ಲಿ ಅಗತ್ಯವಿರುವವರಿಗೆ ಏನೂ ಸಿಗುವುದಿಲ್ಲ. ಅಗತ್ಯವಿಲ್ಲದವರಿಗೆ ಎಲ್ಲವೂ ಧಾರಾಳವಾಗಿ ಸಿಗುತ್ತದೆ.

  ಪ್ರತಿಕ್ರಿಯೆ
 5. shama, nandibetta

  “ಕಲ್ಲು ಕೃಷ್ಣನ ಕೈಗೆ ಬೆಣ್ಣೆ ಮುದ್ದೆಯನಿಟ್ಟವರಿಗೆ ಒಂದು ಮಗುವಿನಲ್ಲಿ ಕೃಷ್ಣ ಕಾಣಲಿಲ್ಲವೇ?”ಇದು, ಉಣ್ಣಲು ಕೇಳಿದ ಮಗುವಿಗೆ ಇಕ್ಕಲಾಗದೇ ಹೋದ ತಾಯ ಭಾವ ಮಾತ್ರ.” neevu heliddu ellavu nija…. ee saalugalu thumba kaaditu…

  ಪ್ರತಿಕ್ರಿಯೆ
 6. Swarna

  ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.
  ಲಕ್ಷ್ಮಿ ನಾರಾಯಣ ಅವರೇ, ‘ತಾಯಿ’ ಗೆ ಆ ಪಾತ್ರದ
  ಹೊರಗೆ ನಿಂತು ಬರಿ ವ್ಯಕ್ತಿಯಾಗಿ ಯೋಚಿಸುವುದು ಕಷ್ಟ ಸರ್ :).
  ನಿಮ್ಮ ಆಶಯ ಅರ್ಥವಾಯಿತು. ನನ್ನ ಪ್ರಕಾರ ಇದು ಒಂದು ಜಾತಿಯ ಸಮಸ್ಯೆ ಅಲ್ಲ.
  ಸಂವೇದನೆಯ ಕೊರತೆ. ಇದು ಯಾರಲ್ಲೂ ಇರಬಹುದು. ಆದರೆ ಇಂದು ಬರಿ ಒಂದು ವರ್ಗವನ್ನು
  ಮಾತ್ರ ಅದರ ಅಪರಾಧ ಭಾರದ ಅಡಿಯಲ್ಲಿ ಸಿಲುಕಿಸಲಾಗುತ್ತದೆ.Any way ,
  ಈ ಬರದ ಉದ್ದೇಶ ನಮ್ಮ ಸುತ್ತ ಮುತ್ತ ಇಂಥ ವರ್ತನೆಗಳ ಸಂಖ್ಯೆ ಕಡಿಮೆಯಾಗಲಿ
  ಎಂಬುದೊಂದೇ.
  ಸ್ವರ್ಣಾ

  ಪ್ರತಿಕ್ರಿಯೆ
 7. Gubbachchi Sathish

  ಈ ಅನುಭವ ಮತ್ತೊಂದು ರೂಪದಲ್ಲಿ ನನಗೆ ಮತ್ತು ನನ್ನ ಗೆಳೆಯರಿಗೆ ಅಗಿದೆ. ವೆರಿ ಬ್ಯಾಡ್.

  ಪ್ರತಿಕ್ರಿಯೆ
 8. srinivas deshpande

  nijakkoo nimma maathu noorakke nooru sari. evarige aa bhagavanthane buddhi kodabeku.

  ಪ್ರತಿಕ್ರಿಯೆ
 9. sandhya

  ಸ್ವರ್ಣ,
  ನೀವು ಬರೆದದ್ದು ನಿಜ, ಕೇವಲ ತಾಯಿಯಾಗಿ ಅಷ್ಟೆ ಅಲ್ಲ, ಯಾವುದೇ ಸ೦ಬ೦ಧದಲ್ಲಿ ನಾವು ಆಳವಾಗಿ ಮುಳುಗಿರುವಾಗ, ಹೃದಯದಿ೦ದ ಸ್ಪ೦ದಿಸುತ್ತೇವೆ, ಆಗ ತರ್ಕ, ಮೀಮಾ೦ಸೆ ಸಾಧ್ಯವಾಗುವುದಿಲ್ಲ, ನಿಮ್ಮ ಆ ಸ೦ದರ್ಭದ ಸತ್ಯ ಎ೦ದರೆ ಉಣ್ಣಲು ಕೇಳಿದ ಮಗುವಿಗೆ ಇಕ್ಕಲಾಗದ ತಾಯಿಯ ಅಸಹಾಯಕತೆ… ಹಾಗಾಗೆ ಇದು ಸ೦ವೇದನಾಪೂರ್ಣ ಬರಹ..

  ಪ್ರತಿಕ್ರಿಯೆ
 10. D.RAVI VARMA

  ಈ ಪ್ರಸ್ನೆ ತುಂಬಾ ಗಮ್ಬೀರವಾಗಿದ್ದು ಇದಕ್ಕೆ ಉತ್ತ್ತರವನ್ನು mataadesharugalu ,ನಮ್ಮನ್ನು ಈ ಸಂಸ್ಕೃತಿಗೆ ಕರೆದೊಯ್ದ ಶಿಕ್ಷಣಪದ್ದತಿ ನಮ್ಮ ಸುತ್ತ ನಾವೇ ರೂಪಿಸಿಕೊಂಡಿರುವ ಸಾಂಸ್ಕೃತಿಕ ವಲಯ, ಆಚರಣೆಗಳನ್ನು ಎಲ್ಲವನ್ನು ಪರಾಮರ್ಶಿಸುವ ಹಾಗು ಅದಕ್ಕೊಂದು ಪರಿಹಾರ ಕಂಡುಕೊಳ್ಳುವವರೆಗೂ ಇದು ಒಂದಿಲ್ಲ ಇನ್ನೊಂದು ರೂಪದಲ್ಲಿ ಕಾಡುತ್ತಿರುತ್ತದೆ. ನಾವು ಮಾನವೀಯ ಸಂಸ್ಕೃತಿಯತ್ತ,ಹೆಜ್ಜೆ ಹಾಕಬೇಕಾಗಿದೆ. ಅದು ಕಷ್ಟ ಸಾಧ್ಯವೇನೋ ನಾವು ಬುದ್ದನನ್ನು ,ಬಸವಣ್ಣ ನವರನ್ನು,ಕ್ರಿಸ್ತರನ್ನು, ವಿವೇಕಾನಂದರನ್ನು, ಹೀಎಗೆ,ಹೀಗೆ,ಇನ್ನು ಹಲವು ದಾರ್ಶನಿಕರನ್ನು ಸರಿಯಾಗಿ arthisikollalilla ವೇನೋ ಅಥವಾ ನಮ್ಮ ಶಿಕ್ಷಣ ಪದ್ದತಿಯಲ್ಲಿ ಅದನ್ನು ಒಟ್ಟು ಕೊಟ್ಟು ಕಲಿಸದೆ,ನಮ್ಮನ್ನು ವಂಚಿಸಿದರೆನೋ heeege ಕಾಡುತ್ತದೆ.”ಉಣ್ಣಲು ಕೇಳಿದ ಮಗುವಿಗೆ ಇಕ್ಕಲಾಗದ ಸ್ತಿತಿ ಇನ್ನು ಮುಂದೆ ಯಾರಿಗೂ ಬರದಂತಿರಲಿ ” ,,
  ರವಿ ವರ್ಮ ಹೊಸಪೇಟೆ

  ಪ್ರತಿಕ್ರಿಯೆ
 11. ಎಚ್. ಸುಂದರ ರಾವ್

  ದೇವಸ್ಥಾನಗಳಿಗೆ ಹೋಗಬಾರದು. ಹೋದರೂ ಪ್ರಸಾದ ತೆಗೆದುಕೊಳ್ಳಬಾರದು. ಯಾಕೆ ಕೇಳಿ: ಥರಾವರಿ ಜನ ಅಲ್ಲಿ ಬರುತ್ತಾರೆ: ಕಳ್ಳರು, ಸುಳ್ಳರು, ದಗಲಬಾಜಿಗಳು, ಕೊಲೆಗಡುಕರು ಹೀಗೆ. ಅವರೆಲ್ಲ ಕಾಣಿಕೆ ಹಾಕುತ್ತಾರೆ. ಅಂದಮೇಲೆ ಅವರ ಪಾಪ ಪರಿಹರಿಸುವ ಹೊಣೆ ದೇವರ ಮೇಲೆ ಬಿತ್ತು ತಾನೆ? ದೇವರೇನು ಮಾಡಬೇಕು? ಕಾಯುತ್ತ ಕೂತಿರುತ್ತಾನೆ ಅಲ್ಲೇ. ಸ್ವರ್ಣ ಮೇಡಂನಂಥವರು ಹೋದ ಕೂಡಲೇ ಅವರ ಲೆಕ್ಕ ತೆಗೆದು ನೋಡುತ್ತಾನೆ. ಅಲ್ಲಿ ಎರಡು ಕಾಲಂ. ಒಂದು ಪಾಪದ್ದು ಇನ್ನೊಂದು ಪುಣ್ಯದ್ದು. ನಮ್ಮ ಮೇಡಂ ಥರದವರದ್ದು ಪುಣ್ಯದ ಕಾಲಂ ಅಷ್ಟೋ ಇಷ್ಟೋ ತುಂಬಿರುತ್ತದೆ. ಪಾಪದ ಕಾಲಂ ಖಾಲಿ ಇರುತ್ತದೆ. ಅಂಥವರು ಪ್ರಸಾದ ತೆಗೆದುಕೊಂಡಕೂಡಲೇ ಅದರ ಜೊತೆಗೆ, ಗೊತ್ತೇ ಆಗದ ಹಾಗೆ, ಒಂದಿಷ್ಟು ಪಾಪವನ್ನೂ ಸೇರಿಸಿ, ರಿಜಿಸ್ಟರಿನಲ್ಲಿ ಎಂಟ್ರಿ ಮಾಡಿ, ಕೊಟ್ಟು ಕಳಿಸುತ್ತಾನೆ ದೇವರು (ಎಷ್ಟೆಂದರೂ ಇದು ಕಲಬೆರಕೆ ಯುಗ ತಾನೆ? ಹಾಗೆ ಮಾಡದಿದ್ದರೆ ದೇವರಾದರೂ ಆ ಪಾಪರಾಶಿಯನ್ನು ಹೇಗೆ ವಿಲೇವಾರಿ ಮಾಡುವುದು?)
  ಆದ್ದರಿಂದ ನಾನು ಪೂಜೆ, ಪ್ರಾರ್ಥನೆ ಏನೇ ಇದ್ದರೂ ಮನೆಯಲ್ಲೇ ಮಾಡುವುದು. ಹಾಗಾಗಿ ನನ್ನ ರಿಜಿಸ್ಟರಿನಲ್ಲಿ ನಾನು ಮಾಡಿದ ಪಾಪ, ಪುಣ್ಯಗಳ ಎಂಟ್ರಿ ಮಾತ್ರ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: