ಸ್ವರ ಸಾಧಕನ ಜೀವನ ರಾಗ…

ಅಪೂರ್ವವಾದ ಪ್ರತಿಭಾ ಕೌಶಲದಿಂದ ಸ್ವರ ಪ್ರಪಂಚವನ್ನು ಸೃಷ್ಟಿಸಲು ಸಮರ್ಥರಾದ ಮಲ್ಲಿಕಾರ್ಜುನ ಮನ್ಸೂರ್ ಅವರು ತಮ್ಮ ಕಲಾಸಾಧನೆಯ ಹೆಜ್ಜೆಗಳನ್ನು ಬರಹದ ಮೂಲಕ ಬಿಚ್ಚಿಟ್ಟಿದ್ದಾರೆ ಅದರ ಒಂದು ಲೇಖನ ಇಲ್ಲಿದೆ

ನಾಟ್ಯ ಜಗತ್ತು ನಮ್ಮ ಮನ್ಸೂರದ ಮಕ್ಕಳಿಗೆಲ್ಲ ಆಗ ಗಾಂವಟೀ ಶಾಲೆಯೇ ಗತಿ. ನನಗಿಂತ ಮೊದಲೇ ನಮ್ಮಣ್ಣ ಬಸವರಾಜನನ್ನು ಆ ಶಾಲೆಗೆ ಸೇರಿಸಿದ್ದರು. ನಮ್ಮಣ್ಣ ಶಾಲೆಗೆಂದೂ ನಿಯಮಿತವಾಗಿ ಹೋದವನಲ್ಲ. ಆದರೂ ಆ ಗಾಂವಟೀ ಶಾಲೆಯಲ್ಲಿ ವರುಷಕ್ಕೊಂದು ಇಯತ್ತೆ ಮುಗಿಸಿ ಮುಂದೆ ಹೋಗುವುದು ಕಷ್ಟವೇನಿರಲಿಲ್ಲ. ಅದರಲ್ಲೂ ಭೀಮರಾಯಪ್ಪ ಗೌಡರ ಮಕ್ಕಳೆಂದರೆ ಕೇಳಬೇಕೆ? ಉಳಿದ ಮಕ್ಕಳ ಹಾಗೆ ಗೌಡರ ಮಕ್ಕಳೂ ಓದಿಕೊಂಡೇ ಬರಬೇಕೆಂದು ಒತ್ತಾಯ ಮಾಡುವ ಧೈರ್ಯ ಗಾಂವಟೀ ಶಾಲೆಯ ಮಾಸ್ತರರಿಗಿರಲಿಲ್ಲ. ಅವರು ಚೆನ್ನಾಗಿ ಓದಿಲ್ಲವೆಂದು ’ನಾಪಾಸ’ ಮಾಡುವ ಎದೆಗಾರಿಕೆಯೂ ಅವರಿಗಿರಲಿಲ್ಲ. ಹೀಗಾಗಿ, ನಮ್ಮಣ್ಣ ನಮ್ಮೂರ ಗಾವಂಟೀ ಶಾಲೆಯ ಶಿಕ್ಷಣವನ್ನು ಅನಾಯಾಸವಾಗಿಯೇ ಮುಗಿಸಿದ. ಮೂಲತಃ ಅವನು ಜಾಣ, ಆದರೆ ತುಂಟ. ಅವನಿಗೆ ಹೆಚ್ಚಿನ ಶಿಕ್ಷಣವನ್ನು ಕೊಡಿಸಬೇಕೆಂದು ನನ್ನ ತಾಯಿಯ ತವರೂರಾದ ಧಾರವಾಡಕ್ಕೆ ಕಳಿಸಲಾಯಿತು. ಅಲ್ಲಿ ನಮ್ಮ ಅಜ್ಜನ ’ದೇಖರೇಕಿ’ಯಲ್ಲಿ ಅವನು ದಿನಗಳೆಯಬೇಕಾಗಿತ್ತು. ಆದರೆ ನನ್ನಣ್ಣ, ಕಲಿಯುವುದರಲ್ಲಿ ಚುರುಕಾಗಿದ್ದಷ್ಟೇ, ಉಡಾಳತನದಲ್ಲಿಯೂ ಅಷ್ಟೇ ಮುದುವರಿದವನಾಗಿದ್ದ. ಒಂದು ಮನೆಯ ಮಾಳಿಗೆಯಿಂದ ಇನ್ನೊಂದು ಮನೆಯ ಮಾಳಿಗೆಗೆ ಜಿಗಿಯುವುದು, ತುಂಬಿದ ಕೆರೆಯಲ್ಲಿ ಟಣ್ಣನೇ ಧುಮುಕುವುದು ಇವೆಲ್ಲ ಅವನ ಅಚ್ಚುಮೆಚ್ಚಿನ ಚಟುವಟಿಕೆಗಳು. ನಮ್ಮಜ್ಜನಿಗೆ ಸ್ವಾಭಾವಿಕವಾಗಿಯೇ ಸಿಟ್ಟು ಬರುತ್ತಿತ್ತು. ಬೆತ್ತದಿಂದ ಮೊಮ್ಮಗನ ಬೆನ್ನ ಮೇಲೆ ಬಾರಿಸುತ್ತಿದ್ದ ಅಜ್ಜನ ಹೊಡೆತ ತಿಂದಷ್ಟೂ ನಮ್ಮಣ್ಣನ ತುಂಟತನಕ್ಕೆ ಕೋಡು ಮೂಡುತ್ತಿತ್ತು. ಮೊಮ್ಮಗನಿಗೆ ’ಬುದ್ಧಿ ಕಲಿಸಬೇಕೆಂದು’ ಅಜ್ಜ ಮಾಡಿದ ಶ್ರಮವೆಲ್ಲ ವ್ಯರ್ಥವಾದಂತೆನಿಸಿತು. ಹೊಡೆದೂ ಹೊಡೆದೂ ಅಜ್ಜನ ಬೆತ್ತವೇ ಸೋಲುವಂತಾಯಿತು. ದಿನಗಳೆದಂತೆ, ನಮ್ಮಣ್ಣನಿಗೆ ಅಜ್ಜನ ಮನೆಯಲ್ಲಿರುವುದೇ ಕಷ್ಟಕರವೆನಿಸಲಾರಂಭಿಸಿತು. ಅದಕ್ಕೆ ಬೇರೊಂದು ಕಾರಣವೂ ಇತ್ತು. ನಮ್ಮಜ್ಜನಿಗೆ ಮೊದಲ ಇಬ್ಬರು ಮಡದಿಯರಿಂದ ಪುತ್ರಸಂತಾನವಾಗಿರಲಿಲ್ಲ. ಮೂರನೆಯ ಮಡದಿಯಿಂದ ಆ ಮಹತ್ಕಾರ್ಯ ಫಲಿಸಿತು. ಬಹಳ ದಿನಗಳ ಬಳಿಕ ಮನೆಯಲ್ಲೊಂದು ಗಂಡುಮಗು! ಮನೆಯಲ್ಲಿ ಎಲ್ಲರ ಗಮನ ಆ ವಂಶೋದ್ಧಾರಕನ ಮೇಲೆಯೇ. ಹೀಗಾಗಿ ನಮ್ಮಣ್ಣನಿಗೆ ಮೊದಲು ದೊರೆತಷ್ಟು ಪ್ರೀತಿಯೂ ಅಲ್ಲಿ ದೊರೆಯುವುದು ದುಸ್ಸಾಧ್ಯವಾಯಿತು. ಅಲ್ಲಿಂದ ಕಾಲ್ದೆಗೆಯುವುದೇ ಲೇಸೆಂದೆನಿಸಿತು. ಹೊರಬಿದ್ದು ಊರಿಗೆ ಬಂದ. ಆದರೆ ಊರಲ್ಲಿಯೂ ಅವನಿಗೀಗ ’ಹುರುಹುರಿ’ ಎನಿಸತೊಡಗಿತು. ಮೊದಲಿನಿಂದಲೂ ಅವನಿಗೆ ನಾಟಕ ಹಾಗೂ ಸಂಗೀತದ ಗೀಳು ಇದ್ದೇ ಇತ್ತು. ಕೂತಲ್ಲಿ, ನಿಂತಲ್ಲಿ ಆತ ಗುಣುಗುಣಿಸುತ್ತಲೇ ಇದ್ದ. ಸದಾ ಅವನ ತುಟಿಯ ಮೇಲೇ ಯಾವುದಾದರೊಂದು ಹಾಡು ಬೀಡುಬಿಟ್ಟಿರುತ್ತಿತ್ತು. ಊರಲ್ಲಿದ್ದಾಗಲೂ ಅಷ್ಟೆ; ಧಾರವಾಡದಲ್ಲಿದ್ದಾಗಲೂ ಅಷ್ಟೆ, ಶಾಲೆಯ ಅಂಗಳದಲ್ಲಿದ್ದಾಗಲೂ ಅಷ್ಟೆ, ಕೆರೆಯ ದಂಡೆಯ ಮೇಲೆ ಕುಣಿದಾಡುವಾಗಲೂ ಅಷ್ಟೆ. ಈ ಸಂಗೀತದ ಗೀಳೇ ಧಾರವಾಡದಲ್ಲಿ ಬೀಡುಬಿಟ್ಟಿದ್ದ ವಿಶ್ವಗುಣಾದರ್ಶವೆಂಬ ನಾಟಕ ಮಂಡಳಿಯ ಬಾಗಿಲಿಗೆ ಅವನನ್ನು ಎಳೆದೊಯ್ದಿತು. ಮಂಡಳಿಯಲ್ಲಿ ಪ್ರವೇಶ ದೊರೆತುದೇ ತಡ, ನಮ್ಮಣ್ಣನ ಹವ್ಯಾಸಕ್ಕೆ ರೆಕ್ಕೆಯೊಡೆಯಿತು. ಅವನೊಳಗೊಳಗೇ ಅವಿತುಕೊಂಡಿದ್ದ ಕಲೆಗಾರನ ವಿಕಾಸಕ್ಕೆ ತಕ್ಕ ಅವಕಾಶ ದೊರೆತಂತಾಯಿತು. ತನ್ನ ಮೊದಲಿನ ಸಾಹಸಕಾರ್ಯಗಳೆನ್ನೆಲ್ಲ ಮರೆತು ಆತನೀಗ ನಾಟ್ಯ ಸಂಗೀತದಲ್ಲಿ ಮೈಮರೆಯಲಾರಂಭಿಸಿದ. ಕಂಪನಿಯ ಮಾಲೀಕರಾದ ವಾಮನರಾದ ಅವರು ಸಾಕಷ್ಟು ಪ್ರೋತ್ಸಾಹ ನೀಡಿದ್ದರಿಂದ ನಮ್ಮಣ್ಣ ಬಲು ಬೇಗ ಸಂಗೀತ ಹಾಗೂ ಅಭಿನಯದಲ್ಲಿ ಪರಿಣತಿ ಪಡೆದ; ಒಳ್ಳೆಯ ಕಲಾಕಾರನೆಂದು ಮೆಚ್ಚಿಕೆ ಗಳಿಸಿದ. ಕೆಲಕಾಲದಲ್ಲಿಯೇ ನಾನೂ ನಮ್ಮೂರಿನ ಗಾಂವಟೀ ಶಾಲೆಯ ಶಿಕ್ಷಣ ಮುಗಿಸಿ ಧಾರವಾಡಕ್ಕೆ ಬರಬೇಕಾಯಿತು. ನಾನು ನಮ್ಮ ಹಳ್ಳಿಯಿಂದ ಧಾರವಾಡಕ್ಕೆ ಬಂದುದು ಶಿಕ್ಷಣ ಮುಂದುವರಿಸಲೆಂದು. ಆದರೆ ನನಗಾಗಿ ಬೇರೆ ದಾರಿಯೇ ಕಾದಿತ್ತು. ನಮ್ಮಣ್ಣನ ಉದಾಹರಣೆಯೂ ಕಣ್ಣ ಮುಂದಿತ್ತು. ನಾನೂ ಒಳ್ಳೆಯ ನಟನಾಗಬೇಕೆಂಬ ಹಂಬಲವೊಂದು ಒಳಗೊಳಗೇ ರೂಪುಗೊಂಡಿತ್ತು. ಸರಿ, ನಾನು ಅದೇ ವಿಶ್ವಗುಣಾದರ್ಶ ಮಂಡಳಿಯ ಬಾಗಿಲು ತಟ್ಟಿದೆ. ಬಸವರಾಜನ ತಮ್ಮನಾದ ನನಗೆ ಮಂಡಳಿಯಲ್ಲಿ ಬಲು ಬೇಗ ಪ್ರವೇಶ ದೊರೆಯಿತು. ನನಗೆ ಹಿಗ್ಗೇ ಹಿಗ್ಗು. ಆದರೆ ನಾನು ಧಾರವಾಡದಲ್ಲಿ ನಿಂತು ಹೆಚ್ಚಿನ ವಿದ್ಯಾಭ್ಯಾಸ ಸಂಪಾದಿಸಿ ದೊಡ್ಡವನೆನಿಸಬೇಕೆಂಬ ನಿರೀಕ್ಷೆಯಲ್ಲಿದ್ದ ನನ್ನ ತಂದೆಗೆ ಮಾತ್ರ ದೊಡ್ಡ ಆಘಾತವೇ ಆಯಿತು. ನಾನು ನಾಟಕ ಕಂಪನಿ ಸೇರಿದ್ದೇನೆಂಬ ಸುದ್ದಿ ತಲುಪುವುದೇ ತಡ, ಧಾರವಾಡಕ್ಕೆ ಧಾವಿಸಿ ಬಂದರು. ನನ್ನನ್ನು ನಾಟಕ ಕಂಪನಿಯಿಂದ ಬಿಡಿಸಿ ಮತ್ತೆ ಶಾಲೆಯಲ್ಲಿ ಸೇರಿಸಿದರು. ಆದರೆ ನನ್ನ ಮನಸ್ಸಿನ ತುಂಬೆಲ್ಲ ’ವಿಶ್ವಗುಣಾದರ್ಶವೇ’ ತುಂಬಿ ನಿಂತಿತ್ತು. ತನ್ನ ಎಳೆತನದಿಂದಲೂ ’ಎಳೆ ನಿಂಬೆ ಮಾವು ಮಾದಲಕ್ಕೆ ಹುಳಿ ನೀರನೆರೆದವರಾರಯ್ಯ? ಕಬ್ಬು ಬಾಳೆ ಹಲಸು ನಾರಿಕೇಳಕ್ಕೆ ಸಿಹಿ ನೀರನೆರೆದವರಾರಯ್ಯ? ಎಂದು ಸದಾ ಚನ್ನಮಲ್ಲಿಕಾರ್ಜುನನನ್ನೇ ಧೇನಿಸುತ್ತಿದ್ದ ಅಕ್ಕಮಹಾದೇವಿಗೆ ಕೌಶಿಕ ದೊರೆಯೊಡನೆ ಒತ್ತಾಯದ ಮದುವೆ ಮಾಡಿದಂತೆ ನನ್ನನ್ನು ಎಳೆದೆಳೆದು ಶಾಲೆಯ ನಾಲ್ಕು ಗೋಡೆಗಳ ನಡುವೆ ಯಾಕಾದರೂ ಕೂಡಿಸುತ್ತಾರಪ್ಪಾ ಎನಿಸುತ್ತಿತ್ತು. ಶಾಲೆಯಲ್ಲಿ ಕೂತಾಗಲೆಲ್ಲ ನನ್ನ ಉಸಿರು ಕಟ್ಟಿದಂತಾಗುತ್ತಿತ್ತು. ಆ ಶಾಲೆಯಿಂದ ಯಾವಾಗ ಹೊರಬಿದ್ದೆನೋ, ಯಾವಾಗ ನಾಟ್ಯರಂಗದ ಮೇಲೆ ಒಳ್ಳೆಯ ಕಲಾಕಾರನೆನಿಸಿಕೊಂಡೇನೋ ಎಂದು ಜೀವ ಚಡಪಡಿಸುತ್ತಿತ್ತು. ನನ್ನ ದಾರಿ ಯಾವುದೆಂದು ನನ್ನ ಒಳಗೊಳಗೇ ಖಾತರಿಯಾಗಿತ್ತು. ದಾರಿ ತುಳಿಯದ ಹೊರತು ಗುರಿಯನ್ನು ಸೇರಲಾಗದೆಂಬ ಅರಿವೂ ನನ್ನಲ್ಲಿ ಮೂಡಲಾರಂಭಿಸಿತ್ತು. ಹೀಗೆಯೇ ಯೋಚಿಸುತ್ತ ಮೂರು ನಾಲ್ಕು ತಿಂಗಳು ಉರುಳಿದವು. ನನ್ನ ಮನಸ್ಸಿನಲ್ಲಿ ಸದಾ ಕೊರೆಯುತ್ತಿದ್ದ ಒಂದೇ ಒಂದು ಪ್ರಶ್ನೆಯೆಂದರೆ ’ ನಿನ್ನಠಿಕಾಣ ಯಾವುದು’ ಪಾಠಶಾಲೆಯೋ? ನಾಟ್ಯಶಾಲೆಯೋ? ಈ ಪ್ರಶ್ನೆಗೆ ನನ್ನ ಮನಸ್ಸು ಉತ್ತರವನ್ನೂ ಹುಡುಕಿಕೊಂಡಿತ್ತು. ಆದರೆ, ಆ ಉತ್ತರವೇ ಸರಿಯೆಂದು ಹೇಳಿ ನನ್ನ ಬೆನ್ನು ತಟ್ಟುವ ಒಂದು ಕೈಗಾಗಿ ನಾನು ಕಾತರಿಸಿಕೊಂಡಿದ್ದೆ. ವಿಶ್ವಗುಣಾದರ್ಶ ಮಂಡಳಿಯ ಮ್ಯಾನೇಜರ್ ರಾಮಚಂದ್ರಪ್ಪ ಅವರಿಗೆ ನನ್ನೊಳಗಿನ ಆಕಾಂಕ್ಷೆಯ ಬಗ್ಗೆ ಅರಿಕೆ ಮಾಡಿಕೊಂಡೆ. ಅವರೊಂದಿಗೆ ತಿರುಗಿ ಕಂಪನಿಗೆ ಹೋಗಿ ಸೇರಿದೆ. ಹರಿಯುವ ನೀರಿಗೂ, ಬಿರಿಯುವ ಹೂವಿಗೂ ಬಂಧನ ಹಾಕಿ ಪ್ರಯೋಜನವಿಲ್ಲವೆಂದು ಮನವರಿಕೆಯಾದ ನನ್ನ ತಂದೆ ಮೌನಕ್ಕೆ ಮೊರೆಹೊಕ್ಕರು. ’ಏನಾದರು ಮಾಡಿಕೊಳ್ಳಲಿ’ ಎಂದು ನನ್ನ ದಾರಿಗೆ ನನ್ನನ್ನು ಬಿಟ್ಟುಕೊಟ್ಟರು. ಅಂದಿನಿಂದ ವಿಶ್ವಗುಣಾದರ್ಶ ಮಂಡಳಿಯೇ ನನ್ನ ಗುಣಾದರ್ಶಗಳಿಗೆ ಉತ್ತೇಜನವಿತ್ತ ವಿಶ್ವವೆನಿಸಿತು. ನನ್ನ ಪಾಲಿಗೆ ಅದೇ ಮನೆ, ಶಾಲೆಯಾಯಿತು. ವಿಶ್ವಗುಣಾದರ್ಶ ಮಂಡಳಿಯು ಹೆಸರಿಗೆ ತಕ್ಕಂತೆ ಒಂದು ಆದರ್ಶ ಸಂಸ್ಥೆಯಾಗಿತ್ತು. ಮಂಡಳಿಯ ಪ್ರತಿಯೊಬ್ಬ ಸದಸ್ಯನೂ ಶಿಸ್ತು ಕಾಪಾಡಿಕೊಳ್ಳಬೇಕು; ಸುವ್ಯವಸ್ಥಿತವಾಗಿ ಹಾಗೂ ನಿಯಮಬದ್ಧವಾಗಿ ನಡೆದುಕೊಳ್ಳಬೇಕೆಂದು ವಾಮನರಾಯರು ಆಗ್ರಹದಿಂದ ಹೇಳುತ್ತಿದ್ದರು. ಯಾರಾದರೂ ಸ್ವಲ್ಪವಾದರೂ ಶಿಸ್ತು ಮೀರಿ ವರ್ತಿಸಿದರೆ ಸಿಡಿದೇಳುತ್ತಿದ್ದರು. ನಿತ್ಯವೂ ನಿಯಮಿತ ಸಮಯಕ್ಕೆ ಏಳಬೇಕು, ಸ್ನಾನ-ಪೂಜೆ ಮುಗಿಸಿ ರಿಹರ್ಸಲ್ ಮಾಡಬೇಕು, ಊಟ-ವಿಶ್ರಾಂತಿಯಾದ ನಂತರ ಸಂಜೆಗೆ ಗೊತ್ತುಪಡಿಸಿದ ಹೊತ್ತಿಗೆ ಸರಿಯಾಗಿ ನಾಟಕದ ಪರದೆಯೇಳಬೇಕು ಇತ್ಯಾದಿ ಅವರು ಹಾಕಿಕೊಟ್ಟ ನಿಯಮಗಳು. ಈ ನಿತ್ಯಕ್ರಮದಲ್ಲಿ ವಿನಾಕಾರಣ ವ್ಯತ್ಯಾಸವಾದರೆ ಅವರ ಜೀವ ಚಡಪಡಿಸುತ್ತಿತ್ತು. ಅಭಿನಯವನ್ನೂ ಪರಿಣಾಮಕಾರಿಯಾದ ಸಂಭಾಷಣೆಗಳನ್ನೂ ಕಲಿಯುವುದರಲ್ಲಿ ಅವರು ತುಂಬ ಕುಶಲರು. ಅವರು ಹೇಳಿಕೊಟ್ಟಂತೆ ಕಲಿಯುವ ಕಲಾವಿದರ ಬಗ್ಗೆ ಅಭಿಮಾನಪಡುವವರು. ಕಂಪನಿಯಲ್ಲಿ ಪಾಂಡೋಬಾ ಮಾಸ್ತರ ಮತ್ತು ಸಂಗಬಸಪ್ಪನವರೆಂಬುವರು ನನಗೆ ಪದಗಳನ್ನು ಕಲಿಸುತ್ತಿದ್ದುರು. ನಾಟಕ ಕಂಪನಿಯಲ್ಲಿ ನಾನು ಅನಾಯಾಸವಾಗಿ ಅದೆಷ್ಟೋ ಮಹತ್ವದ ಪಾಠಗಳನ್ನು ಕಲಿತೆ. ಯಾರೋ ಬರೆದ ಸಂಭಾಷಣೆಗಳು ನನ್ನವೆಂದೇ ಭಾವಿಸಿ, ನನ್ನ ಅಂತರಾಳದಿಂದ ಉತ್ಸ್ಪೂರ್ತವಾಗಿ ಮಾತಾಡಿ, ನನಗೆ ಕೊಟ್ಟ ಪಾತ್ರಕ್ಕೆ ಸ್ವಾಭಾವಿಕ ಜೀವಕಳೆ ತುಂಬಬೇಕೆನ್ನುವ ಕಲೆಯನ್ನು ಆ ಕಂಪನಿಯಲ್ಲಿಯೇ ಅರಿತುಕೊಂಡೆ.

ಹಾಗೆಯೇ ಬಾಯಿಪಾಠ ಮಾಡಿದ ಹಾಡುಗಳ ಮೂಲಕ ಶ್ರೋತೃಗಳ ಹೃದಯವನ್ನು ಸ್ಪರ್ಶಿಸುವ ಹದವನ್ನೂ ಅರಿತುಕೊಂಡೆ. ದಿನ ಬೆಳಗಾದರೆ ಅದೇ ಅದೇ ಹಾಡುಗಳನ್ನು ಹಾಡಬೇಕಾಗುತ್ತಿತ್ತು. ನಿಜ ಆದರೆ ಯಾವ ಹಾಡಿನಲ್ಲೂ ಯಾಂತ್ರಿಕತೆಯಾಗಲಿ, ಏಕತಾನತೆಯಾಗಲಿ ಬರಕೂಡದು, ಪ್ರತಿಯೊಂದು ಹಾಡು ಆಗತಾನೆ ಅರಳಿದ ಹೂವಿಂತೆ ಸೌರಭ ಸೂಸುವಂತಾಗಬೇಕೆಂದು ನನಗೆ ಒಳಗೊಳಗೇ ಅನಿಸುತ್ತಿತ್ತು. ಆ ದಿಸೆಯಲ್ಲಿ ನನ್ನ ಸಾದನೆಯೂ ನಡೆಯುತ್ತಿತ್ತು. ಆಟದಿಂದ ಪಾಠ, ಪಾಠದಿಂದ ಪಂದ್ಯಾಟ ಎಂಬಂತೆ ನನ್ನಷ್ಟಕ್ಕೇ ನಾನೇ ದಿನವೂ ಹೆಚ್ಚಿನ ಪ್ರಗತಿ ಸಾಧಿಸಬೇಕೆಂದು ಪ್ರಯತ್ನಿಸುತ್ತಲೇ ಇದ್ದೆ. ಮರದ ಗುಣ ಮೊಳಕೆಯಲ್ಲಿ ಎಂದು ಹಿರಿಯರು ಹೇಳುತ್ತಾರೆ. ತನ್ನ ಎಳೆತನದಲ್ಲಿಯೇ ನನ್ನ ಮನಸ್ಸಿನ ಮೇಲಾದ ಸಂಸ್ಕಾರಗಳು ಹಾಗೂ ರಂಗಭೂಮಿಯ ಮೇಲೆ ನಾನು ಕಲಿತ ಪಾಠಗಳು ನನ್ನೊಳಗಿನ ಕಲಾಪ್ರೇಮಕ್ಕೆ ಸಾಣೆ ಹಿಡಿಯಲು ನೆರವಾದವು. ನನ್ನ ಆಕಾಂಕ್ಷೆಗೆ ತಕ್ಕ ಅವಕಾಶಗಳೂ ಆ ನಾಟಕ ಕಂಪನಿಯಲ್ಲಿ ದೊರೆತವು. ನಾನು ಪ್ರಹ್ಲಾದ, ಧ್ರುವ, ನಾರದ ಮುಂತಾದ ಪಾತ್ರಗಳನ್ನು ನಿರ್ವಹಿಸಬೇಕಾಗಿತ್ತು. ನನ್ನ ಅಭಿನಯ-ಸಂಭಾಷಣೆ-ಹಾಡುಗಳೂ ಪ್ರೇಕ್ಷಕರಿಗೆ ಮೆಚ್ಚಿಗೆಯಾದಾಗ ನನಗೆ ತುಂಬಾ ಸಂತೋಷವೆನಿಸುತ್ತಿತ್ತು. ಜೊತೆಗೆ ಜನಪ್ರಿಯತೆಯೂ ಬಂತು. ಇಷ್ಟೆಲ್ಲ ಆದರೂ, ನನ್ನ ಅಂತರಂಗದಲ್ಲಿ ಒಂದು ವ್ಯಥೆ ಕೀಟದಂತೆ ಕೊರೆಯುತ್ತಿತ್ತು. ರಾತ್ರಿ ನಾಟಕ ಮಾಡಿ, ಮರುದಿನ ಮಧ್ಯಾಹ್ನ ಎಲ್ಲರೂ ಮಲಗಿಕೊಂಡಾಗ ನಾನು ಮಾತ್ರ ಥೇಟರಿನ ಹಿಂದೆ ಒಂದು ಬದಿಯಲ್ಲಿ ಕುಳಿತು ದೇವರನ್ನು ನೆನೆಸುತ್ತ ಬಿಕ್ಕಿ ಬಿಕ್ಕಿ ಅಳುತ್ತಿದ್ದೆ. ಒಮ್ಮೊಮ್ಮೆ ನನ್ನ ಸಂಯಮ ಮೀರಿ ಅಳು ಜೋರಾಗುತ್ತಿತ್ತು. ಅದನ್ನು ಕೇಳಿ ಎಚ್ಚೆತ್ತ ಕೆಲವರು ಇದು ಯಾವ ಪಿಶಾಚಿ? ಯಾರೋ ಅತ್ತಂತೆ ಕೇಳಿಸುತ್ತದೆಯಲ್ಲಾ? ಎಂದು ತಮ್ಮಷ್ಟಕ್ಕೆ ತಾವೇ ದಿಗಿಲಗೊಳ್ಳುತ್ತಿದ್ದರೆಂದು ಬಹು ದಿನಗಳ ಬಳಿಕ ನನಗೆ ತಿಳಿಯಿತು. ಹಾಗೆ ಅಳುತ್ತಿದ್ದವ ನಾನೆಂದು ಅವರಿಗಾಗಲೀ, ಕಂಪನಿಯ ಒಡೆಯರಿಗಾಗಲೀ ತಿಳಿಯದಂತೆ ತುಂಬಾ ಎಚ್ಚರಿಕೆಯಿಂದಿರುತ್ತಿದೆ. ಹೀಗೆ ಅಳುವುದು ಕಂಪನಿಯ ನಿಯಮಗಳಿಗೆ ಬಾಹಿರ; ಶಿಸ್ತಿಗೆ ಸಲ್ಲದ ಸಂಗತಿ. ಅದಕ್ಕೆ ತಕ್ಕ ಸಿಕ್ಷೆ ದೊರೆತೀತೆಂಬ ಭಯವೂ ನನ್ನನ್ನು ಆವರಿಸಿಕೊಂಡಿರುತ್ತಿತ್ತು. ಒಮ್ಮೆ ನಮ್ಮ ಕಂಪನಿಯು ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಕ್ಯಾಂಪು ಹೂಡಿದಾಗ ಮಹತ್ವದ ಘಟನೆಯೊಂದು ನಡೆಯಿತು. ಅಥಣಿಯ ಗಚ್ಚಿನಮಠದಲ್ಲಿ ಪ್ರಸಾದ ಸ್ವೀಕರಿಸಲು ಕಂಪನಿಯ ಜನರಿಗೆಲ್ಲಾ ಕರೆ ಬಂತು. ನಾವೆಲ್ಲ ರೂ ಹೋದೆವು. ಮಠದ ಒಳಭಾಗದಲ್ಲಿ ಕುಳಿತಿದ್ದ ಮಾಹಾಪುರುಷರೊಬ್ಬರ ಬಳಿಗೆ ನಮ್ಮನ್ನು ಕರೆದೊಯ್ಯಲಾಯಿತು. ಅವರ ಮುಖದ ಮೇಲಿನ ದಿವ್ಯ ತೇಜಸ್ಸು ಯಾರ ಮನಸ್ಸಿನಲ್ಲಾದರೂ ಭಕ್ತಿಯ ಸೆಲೆ ಚಿಮ್ಮಿಸುವಂತಿತ್ತು. ಸರದಿಯ ಪ್ರಕಾರ ನಾನೂ ಅವರ ಹತ್ತಿರ ಹೋಗಿ, ಅವರ ಪಾದಕ್ಕೆರಗಿದಾಗ, ಅಲ್ಲಿದ್ದ ರಸಿಕರೊಬ್ಬರು ಈ ಹುಡುಗ ಭಾಳ ಛಲೋ ಪಾರ್ಟ ಮಾಡ್ತಾನ್ರಿ ಎಂದು ಸ್ವಾಮಿಗಳಿಗೆ ಅರಿಕೆ ಮಾಡಿಕೊಂಡರು. ಅಷ್ಟರಲ್ಲಿ ನಾನು ಸ್ವಾಮಿಗಳ ಪಾದ ಮುಟ್ಟಿ ಮೇಲೆದ್ದು ನಿಂತಿದ್ದೆ. ಸ್ವಾಮಿಗಳು ಒಂದು ಕ್ಷಣ ನನ್ನೆಡೆಗೆ ಕೃಪಾದೃಷ್ಟಿ ಬೀರಿ, ಮೆಲುದನಿಯಲ್ಲಿಯೇ ಕೇಳಿದರು: ’ಇಷ್ಟು ಸಣ್ಣ ವಯಸ್ಸಿನೊಳಗೆ ಈ ಬಾಲಕನ ತಂದೆ ತಾಯಿಗಳು ನಾಟಕ ಕಂಪನಿಗೆ ಸೇರಿಸಿದರೋ?’ ಹಾಗೆಯೇ ನನ್ನನ್ನು ಮುಂದೆ ಕರೆದು ಉತ್ತತ್ತಿಯ ಪ್ರಸಾದ ಕೊಟ್ಟು ಆಶೀರ್ವದಿಸಿದರು. ಆ ಮಹಾಪುರುಷರೇ ಅಥಣಿಯ ಶಿವಯೋಗಿಗಳೆಂದು ತಿಳಿದಾಗ ನನಗೆ ಆಶ್ಚರ್ಯವೂ ಆಯಿತು. ಅಭಿಮಾನವೂ ಮೂಡಿತು. ಮುಂದೆ ಕೆಲ ದಿನಗಳಲ್ಲಿಯೇ ಶಿವಯೋಗಿಗಳ ಆಶೀರ್ವಾದದ ಫಲವೂ ನನಗೆ ಮನವರಿಕೆಯಾಯಿತು. ಅಥಣಿಯಿಂದ ನಮ್ಮ ಕಂಪನಿ ಬಾಗಲಕೋಟೆಗೆ ಹೋಯಿತು. ಅಲ್ಲಿರುವಾಗ ಒಂದು ದಿನ ಆಯಾಚಿತವಾಗಿ ಶ್ರೀ ಶಿವಬಸವಸ್ವಾಮಿಗಳ ದರ್ಶನವಾಯಿತು. ಅವರೊಡನೆ ನೀಲಕಂಠ ಬುವಾ ಆಲೂರಮಠ ಎಂಬ ಸಂಗೀತಗಾರರೂ ಇದ್ದರು. ನಮ್ಮ ಕಂಪನಿಯಲ್ಲಿದ್ದ ಹಾರ್ಮೋನಿಯಮ್ ಮಾಸ್ತರ ಪಾಂಡೋಬಾ ನೀಲಕಂಠ ಬುವಾ ಅವರ ಶಿಷ್ಯರು. ಸ್ವಾಮಿಗಳ ಸಂಗಡ ಕಂಪನಿಗೆ ಬಂದ ನೀಲಕಂಠ ಬುವಾ ನಮ್ಮ ಪಾಂಡೋಬಾ ಮಾಸ್ತರನ್ನು ಕರೆದು, ನಿಮ್ಮ ಕಂಪನಿಯೊಳಗ ಒಬ್ಬ ಹುಡುಗ ಪಸಂದಾಗಿ ಹಾಡ್ತಾನಂತಲ್ಲ? ಅಂವ ಎಲ್ಲಿದ್ದಾನ? ಪಾಂಡೋಬಾ ಮಾಸ್ತರರು ಲಗುಬಗೆಯಿಂದ ನನ್ನನ್ನು ಕರೆದು ಅವರಿಗೆ ನನ್ನ ಪರಿಚಯ ಮಾಡಿಕೊಟ್ಟರು. ಹಾಗೆಯೇ ಒಂದುಪದಾ ಹೇಳಿ ತೋರಿಸಪ್ಪಾ ಎಂದು ಅಪ್ಪಣೆಯಿತ್ತರು. ನಾನು ಹಾಡಿದೆ. ನನ್ನ ಹಾಡು ಕೇಳಿ ನೀಲಕಂಠ ಬುವಾ ಅವರ ಮುಖದ ಮೇಲೆ ಆನಂದದ ನಗೆಯರಳಿದಂತೆ ಕಂಡಿತು. ಆ ಕೂಡಲೇ ಅವರು ನಮ್ಮಣ್ಣ ಬಸವರಾಜನನ್ನು ಕರೆದು ಈ ಹುಡುಗನನ್ನು ನನ್ನ ಕಡೆಗೆ ಕೊಟ್ಟು ಬಿಡ್ರಿ. ಒಬ್ಬ ಒಳ್ಳೇ ಸಂಗೀತಗಾರನನ್ನು ತಯಾರಿಸುವೆ. ಇವನು ನಾಟಕ ಕಂಪನಿಯಲ್ಲಿದ್ದು ತನ್ನ ಪ್ರತಿಭೆಯನ್ನು ಹದಗೆಡಿಸಬಾರದು ಎಂದರು. ಅವರ ವಿಶ್ವಾಸವನ್ನು ಕಂಡು ನಮ್ಮಣ್ಣ ಮರುಮಾತನಾಡದೆ ಸಮ್ಮತಿ ನೀಡಬೇಕಾಯಿತು. ಆ ಕ್ಷಣವೇ ನನಗೆ ಅಥಣಿಯ ಶಿವಯೋಗಿಗಳ ಆಶೀರ್ವಾದದ ನೆನಪಾಯಿತು. ಅವರ ಆಶೀರ್ವಾದದಿಂದಲೇ ಈ ಆಕಸ್ಮಿಕ ಘಟನೆಯೊದಗಿ ಬಂತೆಂದು ನನಗನಿಸಿತು. ನಮ್ಮಣ್ಣನ ಸಮ್ಮತಿ ಪಡೆದು ನಾನು ಕಂಪನಿ ಕೆಲಸಕ್ಕೆ ಕೊನೆಯ ನಮಸ್ಕಾರ ಹೇಳಿ ಊರಿಗೆ ಹೊರಟೆ. ನೀಲಕಂಠ ಬುವಾ ಅವರು ಮಿರಜದಲ್ಲಿರುತ್ತಿದ್ದರು. ನಾನು ಮಿರಜಕ್ಕೆ ಹೋಗುವ ಮೊದಲು ತಂದೆ-ತಾಯಿಗಳ ಅನುಮತಿಯನ್ನು ಪಡೆದರೊಳಿತೆಂದು ಊರಿಗೆ ಹೋದೆ. ನನ್ನನ್ನು ಮಿರಜಕ್ಕೆ ಕಳಿಸುವ ಮೊದಲು ನನ್ನ ತಂದೆಯು ನನ್ನನ್ನು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಗಳ ದರ್ಶನಕ್ಕಾಗಿ ಕರೆದೊಯ್ದರು. ನಾವು ಮಠವನ್ನು ತಲುಪಿದಾಗ ಮಧ್ಯಾಹ್ನ ಹನ್ನೆರಡು ಘಂಟೆ. ಮಠದಲ್ಲಿ ಯಾವ ಗದ್ದಲವೂ ಇರಲಿಲ್ಲ. ಪ್ರಶಾಂತವಾದ ವಾತಾವರಣದಲ್ಲಿ ಅಗರಬತ್ತಿಯ ಸುವಾಸನೆ ತುಂಬಿಕೊಂಡಿತ್ತು. ನಾವು ಮಠಕ್ಕೆ ಬಂದ ಸಮಾಚಾರ ತಿಳಿಯುತ್ತಲೇ ಯೋಗೀಶ್ವರ ಸಿದ್ಧಾರೂಢ ಸ್ವಾಮಿಗಳು ಹೊರಗೆ ದಯಮಾಡಿಸಿ ತಮ್ಮ ಆಸನದ ಮೇಲೆ ಕುಳಿತುಕೊಂಡರು. ನಾವು ಸ್ವಾಮಿಗಳಡಿಯಲ್ಲಿ ಹಣ್ಣುಹಂಪಲುಗಳನ್ನು ಸಮರ್ಪಿಸಿ, ಕರ್ಪೂರ ಹೊತ್ತಿಸಿಟ್ಟು ಸ್ವಾಮಿಗಳ ಪಾದಪೂಜೆ ಮಾಡಿದೆವು. ಭಯ-ಭಕ್ತಿಯಿಂದ ಅವರ ಸಮ್ಮುಖದಲ್ಲಿ ನಾನೊಂದು ಪದ ಹಾಡಿದ ನಂತರ ನಮ್ಮ ತಂದೆ, ಸ್ವಾಮಿಗಳಿಗೆ ಮತ್ತೊಮ್ಮೆ ಕೈಜೋಡಿಸಿ ’ನನ್ನ ಮಗನನ್ನು ಸಂಗೀತ ಕಲಿಯಲು ಮಿರಜಿಗೆ ಕಳಿಸುತ್ತಿದ್ದೇನೆ. ತಮ್ಮ ಆಶೀರ್ವಾದ ಬೇಕು’ ಎಂದು ಪ್ರಾರ್ಥಿಸಿದರು. ಸ್ವಾಮಿಗಳು ತಮ್ಮ ಕೈಯೆತ್ತಿ ಅಗತ್ಯ ಕಳಿಸಿರಿ. ಹುಡುಗನ ಕಲ್ಯಾಣವಾಗುತ್ತದೆ. ಎಂದು ಹರಸಿ, ಪ್ರಸಾದವಿತ್ತರು. ಅವರ ಶುಭಾಶೀರ್ವಾದಗಳನ್ನು ಹೊತ್ತು ನಾನು ಮಿರಜದ ದಾರಿ ತುಳಿದೆ. ಅದುವೇ ನನ್ನ ರಸಯಾತ್ರೆಯ ಮೊದಲ ಮಹತ್ವದ ಹಂತ. ಈ ರಸಯಾತ್ರೆಯ ಒಂದೊಂದು ಹಂತದಲ್ಲೂ ಮಹಾಪುರುಷರ, ಸಾಧು ಸತ್ಪುರುಷರ ಆಶೀರ್ವಾದಗಳು ನನ್ನ ಕೈಹಿಡಿದು ನಡೆಸಿರುವ ಸಂಗತಿಯನ್ನು ನಾನೆಂದೂ ಮರೆಯುವಂತಿಲ್ಲ. ನಾಟ್ಯ ಜಗತ್ತುನಮ್ಮ ಮನ್ಸೂರದ ಮಕ್ಕಳಿಗೆಲ್ಲ ಆಗ ಗಾಂವಟೀ ಶಲೆಯೇ ಗತಿ. ನನಗಿಂತ ಮೊದಲೇ ನಮ್ಮಣ್ಣ ಬಸವರಾಜನನ್ನು ಆ ಶಾಲೆಗೆ ಸೇರಿಸಿದ್ದರು. ನಮ್ಮಣ್ಣ ಶಾಲೆಗೆಂದೂ ನಿಯಮಿತವಾಗಿ ಹೋದವನಲ್ಲ. ಆದರೂ ಆ ಗಾಂವಟೀ ಶಾಲೆಯಲ್ಲಿ ವರುಷಕ್ಕೊಂದು ಇಯತ್ತೆ ಮುಗಿಸಿ ಮುಂದೆ ಹೋಗುವುದು ಕಷ್ಟವೇನಿರಲಿಲ್ಲ. ಅದರಲ್ಲೂ ಭೀಮರಾಯಪ್ಪ ಗೌಡರ ಮಕ್ಕಳೆಂದರೆ ಕೇಳಬೇಕೆ? ಉಳಿದ ಮಕ್ಕಳ ಹಾಗೆ ಗೌಡರ ಮಕ್ಕಳೂ ಓದಿಕೊಂಡೇ ಬರಬೇಕೆಂದು ಒತ್ತಾಯ ಮಾಡುವ ಧೈರ್ಯ ಗಾಂವಟೀ ಶಾಲೆಯ ಮಾಸ್ತರರಿಗಿರಲಿಲ್ಲ. ಅವರು ಚೆನ್ನಾಗಿ ಓದಿಲ್ಲವೆಂದು ’ನಾಪಾಸ’ ಮಾಡುವ ಎದೆಗಾರಿಕೆಯೂ ಅವರಿಗಿರಲಿಲ್ಲ. ಹೀಗಾಗಿ, ನಮ್ಮಣ್ಣ ನಮ್ಮೂರ ಗಾವಂಟೀ ಶಾಲೆಯ ಶಿಕ್ಷಣವನ್ನು ಅನಾಯಾಸವಾಗಿಯೇ ಮುಗಿಸಿದ. ಮೂಲತಃ ಅವನು ಜಾಣ, ಆದರೆ ತುಂಟ. ಅವನಿಗೆ ಹೆಚ್ಚಿನ ಶಿಕ್ಷಣವನ್ನು ಕೊಡಿಸಬೇಕೆಂದು ನನ್ನ ತಾಯಿಯ ತವರೂರಾದ ಧಾರವಾಡಕ್ಕೆ ಕಳಿಸಲಾಯಿತು. ಅಲ್ಲಿ ನಮ್ಮ ಅಜ್ಜನ ’ದೇಖರೇಕಿ’ಯಲ್ಲಿ ಅವನು ದಿನಗಳೆಯಬೇಕಾಗಿತ್ತು. ಆದರೆ ನನ್ನಣ್ಣ, ಕಲಿಯುವುದರಲ್ಲಿ ಚುರುಕಾಗಿದ್ದಷ್ಟೇ, ಉಡಾಳತನದಲ್ಲಿಯೂ ಅಷ್ಟೇ ಮುದುವರಿದವನಾಗಿದ್ದ. ಒಂದು ಮನೆಯ ಮಾಳಿಗೆಯಿಂದ ಇನ್ನೊಂದು ಮನೆಯ ಮಾಳಿಗೆಗೆ ಜಿಗಿಯುವುದು, ತುಂಬಿದ ಕೆರೆಯಲ್ಲಿ ಟಣ್ಣನೇ ಧುಮುಕುವುದು ಇವೆಲ್ಲ ಅವನ ಅಚ್ಚುಮೆಚ್ಚಿನ ಚಟುವಟಿಕೆಗಳು. ನಮ್ಮಜ್ಜನಿಗೆ ಸ್ವಾಭಾವಿಕವಾಗಿಯೇ ಸಿಟ್ಟು ಬರುತ್ತಿತ್ತು. ಬೆತ್ತದಿಂದ ಮೊಮ್ಮಗನ ಬೆನ್ನ ಮೇಲೆ ಬಾರಿಸುತ್ತಿದ್ದ ಅಜ್ಜನ ಹೊಡೆತ ತಿಂದಷ್ಟೂ ನಮ್ಮಣ್ಣನ ತುಂಟತನಕ್ಕೆ ಕೋಡು ಮೂಡುತ್ತಿತ್ತು. ಮೊಮ್ಮಗನಿಗೆ ’ಬುದ್ಧಿ ಕಲಿಸಬೇಕೆಂದು’ ಅಜ್ಜ ಮಾಡಿದ ಶ್ರಮವೆಲ್ಲ ವ್ಯರ್ಥವಾದಂತೆನಿಸಿತು. ಹೊಡೆದೂ ಹೊಡೆದೂ ಅಜ್ಜನ ಬೆತ್ತವೇ ಸೋಲುವಂತಾಯಿತು.ದಿನಗಳೆದಂತೆ, ನಮ್ಮಣ್ಣನಿಗೆ ಅಜ್ಜನ ಮನೆಯಲ್ಲಿರುವುದೇ ಕಷ್ಟಕರವೆನಿಸಲಾರಂಭಿಸಿತು. ಅದಕ್ಕೆ ಬೇರೊಂದು ಕಾರಣವೂ ಇತ್ತು. ನಮ್ಮಜ್ಜನಿಗೆ ಮೊದಲ ಇಬ್ಬರು ಮಡದಿಯರಿಂದ ಪುತ್ರಸಂತಾನವಾಗಿರಲಿಲ್ಲ. ಮೂರನೆಯ ಮಡದಿಯಿಂದ ಆ ಮಹತ್ಕಾರ್ಯ ಫಲಿಸಿತು. ಬಹಳ ದಿನಗಳ ಬಳಿಕ ಮನೆಯಲ್ಲೊಂದು ಗಂಡುಮಗು! ಮನೆಯಲ್ಲಿ ಎಲ್ಲರ ಗಮನ ಆ ವಂಶೋದ್ಧಾರಕನ ಮೇಲೆಯೇ. ಹೀಗಾಗಿ ನಮ್ಮಣ್ಣನಿಗೆ ಮೊದಲು ದೊರೆತಷ್ಟು ಪ್ರೀತಿಯೂ ಅಲ್ಲಿ ದೊರೆಯುವುದು ದುಸ್ಸಾಧ್ಯವಾಯಿತು. ಅಲ್ಲಿಂದ ಕಾಲ್ದೆಗೆಯುವುದೇ ಲೇಸೆಂದೆನಿಸಿತು. ಹೊರಬಿದ್ದು ಊರಿಗೆ ಬಂದ. ಆದರೆ ಊರಲ್ಲಿಯೂ ಅವನಿಗೀಗ ’ಹುರುಹುರಿ’ ಎನಿಸತೊಡಗಿತು. ಮೊದಲಿನಿಂದಲೂ ಅವನಿಗೆ ನಾಟಕ ಹಾಗೂ ಸಂಗೀತದ ಗೀಳು ಇದ್ದೇ ಇತ್ತು. ಕೂತಲ್ಲಿ, ನಿಂತಲ್ಲಿ ಆತ ಗುಣುಗುಣಿಸುತ್ತಲೇ ಇದ್ದ. ಸದಾ ಅವನ ತುಟಿಯ ಮೇಲೇ ಯಾವುದಾದರೊಂದು ಹಾಡು ಬೀಡುಬಿಟ್ಟಿರುತ್ತಿತ್ತು. ಊರಲ್ಲಿದ್ದಾಗಲೂ ಅಷ್ಟೆ; ಧಾರವಾಡದಲ್ಲಿದ್ದಾಗಲೂ ಅಷ್ಟೆ, ಶಾಲೆಯ ಅಂಗಳದಲ್ಲಿದ್ದಾಗಲೂ ಅಷ್ಟೆ, ಕೆರೆಯ ದಂಡೆಯ ಮೇಲೆ ಕುಣಿದಾಡುವಾಗಲೂ ಅಷ್ಟೆ. ಈ ಸಂಗೀತದ ಗೀಳೇ ಧಾರವಾಡದಲ್ಲಿ ಬೀಡುಬಿಟ್ಟಿದ್ದ ವಿಶ್ವಗುಣಾದರ್ಶವೆಂಬ ನಾಟಕ ಮಂಡಳಿಯ ಬಾಗಿಲಿಗೆ ಅವನನ್ನು ಎಳೆದೊಯ್ದಿತು.ಮಂಡಳಿಯಲ್ಲಿ ಪ್ರವೇಶ ದೊರೆತುದೇ ತಡ, ನಮ್ಮಣ್ಣನ ಹವ್ಯಾಸಕ್ಕೆ ರೆಕ್ಕೆಯೊಡೆಯಿತು. ಅವನೊಳಗೊಳಗೇ ಅವಿತುಕೊಂಡಿದ್ದ ಕಲೆಗಾರನ ವಿಕಾಸಕ್ಕೆ ತಕ್ಕ ಅವಕಾಶ ದೊರೆತಂತಾಯಿತು. ತನ್ನ ಮೊದಲಿನ ಸಾಹಸಕಾರ್ಯಗಳೆನ್ನೆಲ್ಲ ಮರೆತು ಆತನೀಗ ನಾಟ್ಯ ಸಂಗೀತದಲ್ಲಿ ಮೈಮರೆಯಲಾರಂಭಿಸಿದ. ಕಂಪನಿಯ ಮಾಲೀಕರಾದ ವಾಮನರಾದ ಅವರು ಸಾಕಷ್ಟು ಪ್ರೋತ್ಸಾಹ ನೀಡಿದ್ದರಿಂದ ನಮ್ಮಣ್ಣ ಬಲು ಬೇಗ ಸಂಗೀತ ಹಾಗೂ ಅಭಿನಯದಲ್ಲಿ ಪರಿಣತಿ ಪಡೆದ; ಒಳ್ಳೆಯ ಕಲಾಕಾರನೆಂದು ಮೆಚ್ಚಿಕೆ ಗಳಿಸಿದ. ಕೆಲಕಾಲದಲ್ಲಿಯೇ ನಾನೂ ನಮ್ಮೂರಿನ ಗಾಂವಟೀ ಶಾಲೆಯ ಶಿಕ್ಷಣ ಮುಗಿಸಿ ಧಾರವಾಡಕ್ಕೆ ಬರಬೇಕಾಯಿತು. ನಾನು ನಮ್ಮ ಹಳ್ಳಿಯಿಂದ ಧಾರವಾಡಕ್ಕೆ ಬಂದುದು ಶಿಕ್ಷಣ ಮುಂದುವರಿಸಲೆಂದು. ಆದರೆ ನನಗಾಗಿ ಬೇರೆ ದಾರಿಯೇ ಕಾದಿತ್ತು. ನಮ್ಮಣ್ಣನ ಉದಾಹರಣೆಯೂ ಕಣ್ಣ ಮುಂದಿತ್ತು. ನಾನೂ ಒಳ್ಳೆಯ ನಟನಾಗಬೇಕೆಂಬ ಹಂಬಲವೊಂದು ಒಳಗೊಳಗೇ ರೂಪುಗೊಂಡಿತ್ತು. ಸರಿ, ನಾನು ಅದೇ ವಿಶ್ವಗುಣಾದರ್ಶ ಮಂಡಳಿಯ ಬಾಗಿಲು ತಟ್ಟಿದೆ. ಬಸವರಾಜನ ತಮ್ಮನಾದ ನನಗೆ ಮಂಡಳಿಯಲ್ಲಿ ಬಲು ಬೇಗ ಪ್ರವೇಶ ದೊರೆಯಿತು. ನನಗೆ ಹಿಗ್ಗೇ ಹಿಗ್ಗು. ಆದರೆ ನಾನು ಧಾರವಾಡದಲ್ಲಿ ನಿಂತು ಹೆಚ್ಚಿನ ವಿದ್ಯಾಭ್ಯಾಸ ಸಂಪಾದಿಸಿ ದೊಡ್ಡವನೆನಿಸಬೇಕೆಂಬ ನಿರೀಕ್ಷೆಯಲ್ಲಿದ್ದ ನನ್ನ ತಂದೆಗೆ ಮಾತ್ರ ದೊಡ್ಡ ಆಘಾತವೇ ಆಯಿತು. ನಾನು ನಾಟಕ ಕಂಪನಿ ಸೇರಿದ್ದೇನೆಂಬ ಸುದ್ದಿ ತಲುಪುವುದೇ ತಡ, ಧಾರವಾಡಕ್ಕೆ ಧಾವಿಸಿ ಬಂದರು. ನನ್ನನ್ನು ನಾಟಕ ಕಂಪನಿಯಿಂದ ಬಿಡಿಸಿ ಮತ್ತೆ ಶಾಲೆಯಲ್ಲಿ ಸೇರಿಸಿದರು. ಆದರೆ ನನ್ನ ಮನಸ್ಸಿನ ತುಂಬೆಲ್ಲ ’ವಿಶ್ವಗುಣಾದರ್ಶವೇ’ ತುಂಬಿ ನಿಂತಿತ್ತು. ತನ್ನ ಎಳೆತನದಿಂದಲೂ ’ಎಳೆ ನಿಂಬೆ ಮಾವು ಮಾದಲಕ್ಕೆ ಹುಳಿ ನೀರನೆರೆದವರಾರಯ್ಯ? ಕಬ್ಬು ಬಾಳೆ ಹಲಸು ನಾರಿಕೇಳಕ್ಕೆ ಸಿಹಿ ನೀರನೆರೆದವರಾರಯ್ಯ? ಎಂದು ಸದಾ ಚನ್ನಮಲ್ಲಿಕಾರ್ಜುನನನ್ನೇ ಧೇನಿಸುತ್ತಿದ್ದ ಅಕ್ಕಮಹಾದೇವಿಗೆ ಕೌಶಿಕ ದೊರೆಯೊಡನೆ ಒತ್ತಾಯದ ಮದುವೆ ಮಾಡಿದಂತೆ ನನ್ನನ್ನು ಎಳೆದೆಳೆದು ಶಾಲೆಯ ನಾಲ್ಕು ಗೋಡೆಗಳ ನಡುವೆ ಯಾಕಾದರೂ ಕೂಡಿಸುತ್ತಾರಪ್ಪಾ ಎನಿಸುತ್ತಿತ್ತು. ಶಾಲೆಯಲ್ಲಿ ಕೂತಾಗಲೆಲ್ಲ ನನ್ನ ಉಸಿರು ಕಟ್ಟಿದಂತಾಗುತ್ತಿತ್ತು. ಆ ಶಾಲೆಯಿಂದ ಯಾವಾಗ ಹೊರಬಿದ್ದೆನೋ, ಯಾವಾಗ ನಾಟ್ಯರಂಗದ ಮೇಲೆ ಒಳ್ಳೆಯ ಕಲಾಕಾರನೆನಿಸಿಕೊಂಡೇನೋ ಎಂದು ಜೀವ ಚಡಪಡಿಸುತ್ತಿತ್ತು. ನನ್ನ ದಾರಿ ಯಾವುದೆಂದು ನನ್ನ ಒಳಗೊಳಗೇ ಖಾತರಿಯಾಗಿತ್ತು. ದಾರಿ ತುಳಿಯದ ಹೊರತು ಗುರಿಯನ್ನು ಸೇರಲಾಗದೆಂಬ ಅರಿವೂ ನನ್ನಲ್ಲಿ ಮೂಡಲಾರಂಭಿಸಿತ್ತು.ಹೀಗೆಯೇ ಯೋಚಿಸುತ್ತ ಮೂರು ನಾಲ್ಕು ತಿಂಗಳು ಉರುಳಿದವು. ನನ್ನ ಮನಸ್ಸಿನಲ್ಲಿ ಸದಾ ಕೊರೆಯುತ್ತಿದ್ದ ಒಂದೇ ಒಂದು ಪ್ರಶ್ನೆಯೆಂದರೆ ’ ನಿನ್ನಠಿಕಾಣ ಯಾವುದು’ ಪಾಠಶಾಲೆಯೋ? ನಾಟ್ಯಶಾಲೆಯೋ? ಈ ಪ್ರಶ್ನೆಗೆ ನನ್ನ ಮನಸ್ಸು ಉತ್ತರವನ್ನೂ ಹುಡುಕಿಕೊಂಡಿತ್ತು. ಆದರೆ, ಆ ಉತ್ತರವೇ ಸರಿಯೆಂದು ಹೇಳಿ ನನ್ನ ಬೆನ್ನು ತಟ್ಟುವ ಒಂದು ಕೈಗಾಗಿ ನಾನು ಕಾತರಿಸಿಕೊಂಡಿದ್ದೆ. ವಿಶ್ವಗುಣಾದರ್ಶ ಮಂಡಳಿಯ ಮ್ಯಾನೇಜರ್ ರಾಮಚಂದ್ರಪ್ಪ ಅವರಿಗೆ ನನ್ನೊಳಗಿನ ಆಕಾಂಕ್ಷೆಯ ಬಗ್ಗೆ ಅರಿಕೆ ಮಾಡಿಕೊಂಡೆ. ಅವರೊಂದಿಗೆ ತಿರುಗಿ ಕಂಪನಿಗೆ ಹೋಗಿ ಸೇರಿದೆ. ಹರಿಯುವ ನೀರಿಗೂ, ಬಿರಿಯುವ ಹೂವಿಗೂ ಬಂಧನ ಹಾಕಿ ಪ್ರಯೋಜನವಿಲ್ಲವೆಂದು ಮನವರಿಕೆಯಾದ ನನ್ನ ತಂದೆ ಮೌನಕ್ಕೆ ಮೊರೆಹೊಕ್ಕರು. ’ಏನಾದರು ಮಾಡಿಕೊಳ್ಳಲಿ’ ಎಂದು ನನ್ನ ದಾರಿಗೆ ನನ್ನನ್ನು ಬಿಟ್ಟುಕೊಟ್ಟರು. ಅಂದಿನಿಂದ ವಿಶ್ವಗುಣಾದರ್ಶ ಮಂಡಳಿಯೇ ನನ್ನ ಗುಣಾದರ್ಶಗಳಿಗೆ ಉತ್ತೇಜನವಿತ್ತ ವಿಶ್ವವೆನಿಸಿತು. ನನ್ನ ಪಾಲಿಗೆ ಅದೇ ಮನೆ, ಶಾಲೆಯಾಯಿತು.ವಿಶ್ವಗುಣಾದರ್ಶ ಮಂಡಳಿಯು ಹೆಸರಿಗೆ ತಕ್ಕಂತೆ ಒಂದು ಆದರ್ಶ ಸಂಸ್ಥೆಯಾಗಿತ್ತು. ಮಂಡಳಿಯ ಪ್ರತಿಯೊಬ್ಬ ಸದಸ್ಯನೂ ಶಿಸ್ತು ಕಾಪಾಡಿಕೊಳ್ಳಬೇಕು; ಸುವ್ಯವಸ್ಥಿತವಾಗಿ ಹಾಗೂ ನಿಯಮಬದ್ಧವಾಗಿ ನಡೆದುಕೊಳ್ಳಬೇಕೆಂದು ವಾಮನರಾಯರು ಆಗ್ರಹದಿಂದ ಹೇಳುತ್ತಿದ್ದರು. ಯಾರಾದರೂ ಸ್ವಲ್ಪವಾದರೂ ಶಿಸ್ತು ಮೀರಿ ವರ್ತಿಸಿದರೆ ಸಿಡಿದೇಳುತ್ತಿದ್ದರು. ನಿತ್ಯವೂ ನಿಯಮಿತ ಸಮಯಕ್ಕೆ ಏಳಬೇಕು, ಸ್ನಾನ-ಪೂಜೆ ಮುಗಿಸಿ ರಿಹರ್ಸಲ್ ಮಾಡಬೇಕು, ಊಟ-ವಿಶ್ರಾಂತಿಯಾದ ನಂತರ ಸಂಜೆಗೆ ಗೊತ್ತುಪಡಿಸಿದ ಹೊತ್ತಿಗೆ ಸರಿಯಾಗಿ ನಾಟಕದ ಪರದೆಯೇಳಬೇಕು ಇತ್ಯಾದಿ ಅವರು ಹಾಕಿಕೊಟ್ಟ ನಿಯಮಗಳು. ಈ ನಿತ್ಯಕ್ರಮದಲ್ಲಿ ವಿನಾಕಾರಣ ವ್ಯತ್ಯಾಸವಾದರೆ ಅವರ ಜೀವ ಚಡಪಡಿಸುತ್ತಿತ್ತು. ಅಭಿನಯವನ್ನೂ ಪರಿಣಾಮಕಾರಿಯಾದ ಸಂಭಾಷಣೆಗಳನ್ನೂ ಕಲಿಯುವುದರಲ್ಲಿ ಅವರು ತುಂಬ ಕುಶಲರು. ಅವರು ಹೇಳಿಕೊಟ್ಟಂತೆ ಕಲಿಯುವ ಕಲಾವಿದರ ಬಗ್ಗೆ ಅಭಿಮಾನಪಡುವವರು. ಕಂಪನಿಯಲ್ಲಿ ಪಾಂಡೋಬಾ ಮಾಸ್ತರ ಮತ್ತು ಸಂಗಬಸಪ್ಪನವರೆಂಬುವರು ನನಗೆ ಪದಗಳನ್ನು ಕಲಿಸುತ್ತಿದ್ದುರು. ನಾಟಕ ಕಂಪನಿಯಲ್ಲಿ ನಾನು ಅನಾಯಾಸವಾಗಿ ಅದೆಷ್ಟೋ ಮಹತ್ವದ ಪಾಠಗಳನ್ನು ಕಲಿತೆ. ಯಾರೋ ಬರೆದ ಸಂಭಾಷಣೆಗಳು ನನ್ನವೆಂದೇ ಭಾವಿಸಿ, ನನ್ನ ಅಂತರಾಳದಿಂದ ಉತ್ಸ್ಪೂರ್ತವಾಗಿ ಮಾತಾಡಿ, ನನಗೆ ಕೊಟ್ಟ ಪಾತ್ರಕ್ಕೆ ಸ್ವಾಭಾವಿಕ ಜೀವಕಳೆ ತುಂಬಬೇಕೆನ್ನುವ ಕಲೆಯನ್ನು ಆ ಕಂಪನಿಯಲ್ಲಿಯೇ ಅರಿತುಕೊಂಡೆ. ಹಾಗೆಯೇ ಬಾಯಿಪಾಠ ಮಾಡಿದ ಹಾಡುಗಳ ಮೂಲಕ ಶ್ರೋತೃಗಳ ಹೃದಯವನ್ನು ಸ್ಪರ್ಶಿಸುವ ಹದವನ್ನೂ ಅರಿತುಕೊಂಡೆ. ದಿನ ಬೆಳಗಾದರೆ ಅದೇ ಅದೇ ಹಾಡುಗಳನ್ನು ಹಾಡಬೇಕಾಗುತ್ತಿತ್ತು. ನಿಜ ಆದರೆ ಯಾವ ಹಾಡಿನಲ್ಲೂ ಯಾಂತ್ರಿಕತೆಯಾಗಲಿ, ಏಕತಾನತೆಯಾಗಲಿ ಬರಕೂಡದು, ಪ್ರತಿಯೊಂದು ಹಾಡು ಆಗತಾನೆ ಅರಳಿದ ಹೂವಿಂತೆ ಸೌರಭ ಸೂಸುವಂತಾಗಬೇಕೆಂದು ನನಗೆ ಒಳಗೊಳಗೇ ಅನಿಸುತ್ತಿತ್ತು. ಆ ದಿಸೆಯಲ್ಲಿ ನನ್ನ ಸಾದನೆಯೂ ನಡೆಯುತ್ತಿತ್ತು. ಆಟದಿಂದ ಪಾಠ, ಪಾಠದಿಂದ ಪಂದ್ಯಾಟ ಎಂಬಂತೆ ನನ್ನಷ್ಟಕ್ಕೇ ನಾನೇ ದಿನವೂ ಹೆಚ್ಚಿನ ಪ್ರಗತಿ ಸಾಧಿಸಬೇಕೆಂದು ಪ್ರಯತ್ನಿಸುತ್ತಲೇ ಇದ್ದೆ. ಮರದ ಗುಣ ಮೊಳಕೆಯಲ್ಲಿ ಎಂದು ಹಿರಿಯರು ಹೇಳುತ್ತಾರೆ. ತನ್ನ ಎಳೆತನದಲ್ಲಿಯೇ ನನ್ನ ಮನಸ್ಸಿನ ಮೇಲಾದ ಸಂಸ್ಕಾರಗಳು ಹಾಗೂ ರಂಗಭೂಮಿಯ ಮೇಲೆ ನಾನು ಕಲಿತ ಪಾಠಗಳು ನನ್ನೊಳಗಿನ ಕಲಾಪ್ರೇಮಕ್ಕೆ ಸಾಣೆ ಹಿಡಿಯಲು ನೆರವಾದವು. ನನ್ನ ಆಕಾಂಕ್ಷೆಗೆ ತಕ್ಕ ಅವಕಾಶಗಳೂ ಆ ನಾಟಕ ಕಂಪನಿಯಲ್ಲಿ ದೊರೆತವು. ನಾನು ಪ್ರಹ್ಲಾದ, ಧ್ರುವ, ನಾರದ ಮುಂತಾದ ಪಾತ್ರಗಳನ್ನು ನಿರ್ವಹಿಸಬೇಕಾಗಿತ್ತು. ನನ್ನ ಅಭಿನಯ-ಸಂಭಾಷಣೆ-ಹಾಡುಗಳೂ ಪ್ರೇಕ್ಷಕರಿಗೆ ಮೆಚ್ಚಿಗೆಯಾದಾಗ ನನಗೆ ತುಂಬಾ ಸಂತೋಷವೆನಿಸುತ್ತಿತ್ತು. ಜೊತೆಗೆ ಜನಪ್ರಿಯತೆಯೂ ಬಂತು. ಇಷ್ಟೆಲ್ಲ ಆದರೂ, ನನ್ನ ಅಂತರಂಗದಲ್ಲಿ ಒಂದು ವ್ಯಥೆ ಕೀಟದಂತೆ ಕೊರೆಯುತ್ತಿತ್ತು. ರಾತ್ರಿ ನಾಟಕ ಮಾಡಿ, ಮರುದಿನ ಮಧ್ಯಾಹ್ನ ಎಲ್ಲರೂ ಮಲಗಿಕೊಂಡಾಗ ನಾನು ಮಾತ್ರ ಥೇಟರಿನ ಹಿಂದೆ ಒಂದು ಬದಿಯಲ್ಲಿ ಕುಳಿತು ದೇವರನ್ನು ನೆನೆಸುತ್ತ ಬಿಕ್ಕಿ ಬಿಕ್ಕಿ ಅಳುತ್ತಿದ್ದೆ. ಒಮ್ಮೊಮ್ಮೆ ನನ್ನ ಸಂಯಮ ಮೀರಿ ಅಳು ಜೋರಾಗುತ್ತಿತ್ತು. ಅದನ್ನು ಕೇಳಿ ಎಚ್ಚೆತ್ತ ಕೆಲವರು ಇದು ಯಾವ ಪಿಶಾಚಿ? ಯಾರೋ ಅತ್ತಂತೆ ಕೇಳಿಸುತ್ತದೆಯಲ್ಲಾ? ಎಂದು ತಮ್ಮಷ್ಟಕ್ಕೆ ತಾವೇ ದಿಗಿಲಗೊಳ್ಳುತ್ತಿದ್ದರೆಂದು ಬಹು ದಿನಗಳ ಬಳಿಕ ನನಗೆ ತಿಳಿಯಿತು. ಹಾಗೆ ಅಳುತ್ತಿದ್ದವ ನಾನೆಂದು ಅವರಿಗಾಗಲೀ, ಕಂಪನಿಯ ಒಡೆಯರಿಗಾಗಲೀ ತಿಳಿಯದಂತೆ ತುಂಬಾ ಎಚ್ಚರಿಕೆಯಿಂದಿರುತ್ತಿದೆ. ಹೀಗೆ ಅಳುವುದು ಕಂಪನಿಯ ನಿಯಮಗಳಿಗೆ ಬಾಹಿರ; ಶಿಸ್ತಿಗೆ ಸಲ್ಲದ ಸಂಗತಿ. ಅದಕ್ಕೆ ತಕ್ಕ ಸಿಕ್ಷೆ ದೊರೆತೀತೆಂಬ ಭಯವೂ ನನ್ನನ್ನು ಆವರಿಸಿಕೊಂಡಿರುತ್ತಿತ್ತು.ಒಮ್ಮೆ ನಮ್ಮ ಕಂಪನಿಯು ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಕ್ಯಾಂಪು ಹೂಡಿದಾಗ ಮಹತ್ವದ ಘಟನೆಯೊಂದು ನಡೆಯಿತು. ಅಥಣಿಯ ಗಚ್ಚಿನಮಠದಲ್ಲಿ ಪ್ರಸಾದ ಸ್ವೀಕರಿಸಲು ಕಂಪನಿಯ ಜನರಿಗೆಲ್ಲಾ ಕರೆ ಬಂತು. ನಾವೆಲ್ಲರೂ ಹೋದೆವು. ಮಠದ ಒಳಭಾಗದಲ್ಲಿ ಕುಳಿತಿದ್ದ ಮಾಹಾಪುರುಷರೊಬ್ಬರ ಬಳಿಗೆ ನಮ್ಮನ್ನು ಕರೆದೊಯ್ಯಲಾಯಿತು. ಅವರ ಮುಖದ ಮೇಲಿನ ದಿವ್ಯ ತೇಜಸ್ಸು ಯಾರ ಮನಸ್ಸಿನಲ್ಲಾದರೂ ಭಕ್ತಿಯ ಸೆಲೆ ಚಿಮ್ಮಿಸುವಂತಿತ್ತು. ಸರದಿಯ ಪ್ರಕಾರ ನಾನೂ ಅವರ ಹತ್ತಿರ ಹೋಗಿ, ಅವರ ಪಾದಕ್ಕೆರಗಿದಾಗ, ಅಲ್ಲಿದ್ದ ರಸಿಕರೊಬ್ಬರು ಈ ಹುಡುಗ ಭಾಳ ಛಲೋ ಪಾರ್ಟ ಮಾಡ್ತಾನ್ರಿ ಎಂದು ಸ್ವಾಮಿಗಳಿಗೆ ಅರಿಕೆ ಮಾಡಿಕೊಂಡರು. ಅಷ್ಟರಲ್ಲಿ ನಾನು ಸ್ವಾಮಿಗಳ ಪಾದ ಮುಟ್ಟಿ ಮೇಲೆದ್ದು ನಿಂತಿದ್ದೆ. ಸ್ವಾಮಿಗಳು ಒಂದು ಕ್ಷಣ ನನ್ನೆಡೆಗೆ ಕೃಪಾದೃಷ್ಟಿ ಬೀರಿ, ಮೆಲುದನಿಯಲ್ಲಿಯೇ ಕೇಳಿದರು: ’ಇಷ್ಟು ಸಣ್ಣ ವಯಸ್ಸಿನೊಳಗೆ ಈ ಬಾಲಕನ ತಂದೆ ತಾಯಿಗಳು ನಾಟಕ ಕಂಪನಿಗೆ ಸೇರಿಸಿದರೋ?’ ಹಾಗೆಯೇ ನನ್ನನ್ನು ಮುಂದೆ ಕರೆದು ಉತ್ತತ್ತಿಯ ಪ್ರಸಾದ ಕೊಟ್ಟು ಆಶೀರ್ವದಿಸಿದರು. ಆ ಮಹಾಪುರುಷರೇ ಅಥಣಿಯ ಶಿವಯೋಗಿಗಳೆಂದು ತಿಳಿದಾಗ ನನಗೆ ಆಶ್ಚರ್ಯವೂ ಆಯಿತು. ಅಭಿಮಾನವೂ ಮೂಡಿತು. ಮುಂದೆ ಕೆಲ ದಿನಗಳಲ್ಲಿಯೇ ಶಿವಯೋಗಿಗಳ ಆಶೀರ್ವಾದದ ಫಲವೂ ನನಗೆ ಮನವರಿಕೆಯಾಯಿತು.ಅಥಣಿಯಿಂದ ನಮ್ಮ ಕಂಪನಿ ಬಾಗಲಕೋಟೆಗೆ ಹೋಯಿತು. ಅಲ್ಲಿರುವಾಗ ಒಂದು ದಿನ ಆಯಾಚಿತವಾಗಿ ಶ್ರೀ ಶಿವಬಸವಸ್ವಾಮಿಗಳ ದರ್ಶನವಾಯಿತು. ಅವರೊಡನೆ ನೀಲಕಂಠ ಬುವಾ ಆಲೂರಮಠ ಎಂಬ ಸಂಗೀತಗಾರರೂ ಇದ್ದರು. ನಮ್ಮ ಕಂಪನಿಯಲ್ಲಿದ್ದ ಹಾರ್ಮೋನಿಯಮ್ ಮಾಸ್ತರ ಪಾಂಡೋಬಾ ನೀಲಕಂಠ ಬುವಾ ಅವರ ಶಿಷ್ಯರು. ಸ್ವಾಮಿಗಳ ಸಂಗಡ ಕಂಪನಿಗೆ ಬಂದ ನೀಲಕಂಠ ಬುವಾ ನಮ್ಮ ಪಾಂಡೋಬಾ ಮಾಸ್ತರನ್ನು ಕರೆದು, ನಿಮ್ಮ ಕಂಪನಿಯೊಳಗ ಒಬ್ಬ ಹುಡುಗ ಪಸಂದಾಗಿ ಹಾಡ್ತಾನಂತಲ್ಲ? ಅಂವ ಎಲ್ಲಿದ್ದಾನ? ಪಾಂಡೋಬಾ ಮಾಸ್ತರರು ಲಗುಬಗೆಯಿಂದ ನನ್ನನ್ನು ಕರೆದು ಅವರಿಗೆ ನನ್ನ ಪರಿಚಯ ಮಾಡಿಕೊಟ್ಟರು. ಹಾಗೆಯೇ ಒಂದುಪದಾ ಹೇಳಿ ತೋರಿಸಪ್ಪಾ ಎಂದು ಅಪ್ಪಣೆಯಿತ್ತರು. ನಾನು ಹಾಡಿದೆ. ನನ್ನ ಹಾಡು ಕೇಳಿ ನೀಲಕಂಠ ಬುವಾ ಅವರ ಮುಖದ ಮೇಲೆ ಆನಂದದ ನಗೆಯರಳಿದಂತೆ ಕಂಡಿತು. ಆ ಕೂಡಲೇ ಅವರು ನಮ್ಮಣ್ಣ ಬಸವರಾಜನನ್ನು ಕರೆದು ಈ ಹುಡುಗನನ್ನು ನನ್ನ ಕಡೆಗೆ ಕೊಟ್ಟು ಬಿಡ್ರಿ. ಒಬ್ಬ ಒಳ್ಳೇ ಸಂಗೀತಗಾರನನ್ನು ತಯಾರಿಸುವೆ. ಇವನು ನಾಟಕ ಕಂಪನಿಯಲ್ಲಿದ್ದು ತನ್ನ ಪ್ರತಿಭೆಯನ್ನು ಹದಗೆಡಿಸಬಾರದು ಎಂದರು. ಅವರ ವಿಶ್ವಾಸವನ್ನು ಕಂಡು ನಮ್ಮಣ್ಣ ಮರುಮಾತನಾಡದೆ ಸಮ್ಮತಿ ನೀಡಬೇಕಾಯಿತು. ಆ ಕ್ಷಣವೇ ನನಗೆ ಅಥಣಿಯ ಶಿವಯೋಗಿಗಳ ಆಶೀರ್ವಾದದ ನೆನಪಾಯಿತು. ಅವರ ಆಶೀರ್ವಾದದಿಂದಲೇ ಈ ಆಕಸ್ಮಿಕ ಘಟನೆಯೊದಗಿ ಬಂತೆಂದು ನನಗನಿಸಿತು. ನಮ್ಮಣ್ಣನ ಸಮ್ಮತಿ ಪಡೆದು ನಾನು ಕಂಪನಿ ಕೆಲಸಕ್ಕೆ ಕೊನೆಯ ನಮಸ್ಕಾರ ಹೇಳಿ ಊರಿಗೆ ಹೊರಟೆ. ನೀಲಕಂಠ ಬುವಾ ಅವರು ಮಿರಜದಲ್ಲಿರುತ್ತಿದ್ದರು. ನಾನು ಮಿರಜಕ್ಕೆ ಹೋಗುವ ಮೊದಲು ತಂದೆ-ತಾಯಿಗಳ ಅನುಮತಿಯನ್ನು ಪಡೆದರೊಳಿತೆಂದು ಊರಿಗೆ ಹೋದೆ. ನನ್ನನ್ನು ಮಿರಜಕ್ಕೆ ಕಳಿಸುವ ಮೊದಲು ನನ್ನ ತಂದೆಯು ನನ್ನನ್ನು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಗಳ ದರ್ಶನಕ್ಕಾಗಿ ಕರೆದೊಯ್ದರು. ನಾವು ಮಠವನ್ನು ತಲುಪಿದಾಗ ಮಧ್ಯಾಹ್ನ ಹನ್ನೆರಡು ಘಂಟೆ. ಮಠದಲ್ಲಿ ಯಾವ ಗದ್ದಲವೂ ಇರಲಿಲ್ಲ. ಪ್ರಶಾಂತವಾದ ವಾತಾವರಣದಲ್ಲಿ ಅಗರಬತ್ತಿಯ ಸುವಾಸನೆ ತುಂಬಿಕೊಂಡಿತ್ತು. ನಾವು ಮಠಕ್ಕೆ ಬಂದ ಸಮಾಚಾರ ತಿಳಿಯುತ್ತಲೇ ಯೋಗೀಶ್ವರ ಸಿದ್ಧಾರೂಢ ಸ್ವಾಮಿಗಳು ಹೊರಗೆ ದಯಮಾಡಿಸಿ ತಮ್ಮ ಆಸನದ ಮೇಲೆ ಕುಳಿತುಕೊಂಡರು. ನಾವು ಸ್ವಾಮಿಗಳಡಿಯಲ್ಲಿ ಹಣ್ಣುಹಂಪಲುಗಳನ್ನು ಸಮರ್ಪಿಸಿ, ಕರ್ಪೂರ ಹೊತ್ತಿಸಿಟ್ಟು ಸ್ವಾಮಿಗಳ ಪಾದಪೂಜೆ ಮಾಡಿದೆವು. ಭಯ-ಭಕ್ತಿಯಿಂದ ಅವರ ಸಮ್ಮುಖದಲ್ಲಿ ನಾನೊಂದು ಪದ ಹಾಡಿದ ನಂತರ ನಮ್ಮ ತಂದೆ, ಸ್ವಾಮಿಗಳಿಗೆ ಮತ್ತೊಮ್ಮೆ ಕೈಜೋಡಿಸಿ ’ನನ್ನ ಮಗನನ್ನು ಸಂಗೀತ ಕಲಿಯಲು ಮಿರಜಿಗೆ ಕಳಿಸುತ್ತಿದ್ದೇನೆ. ತಮ್ಮ ಆಶೀರ್ವಾದ ಬೇಕು’ ಎಂದು ಪ್ರಾರ್ಥಿಸಿದರು. ಸ್ವಾಮಿಗಳು ತಮ್ಮ ಕೈಯೆತ್ತಿ ಅಗತ್ಯ ಕಳಿಸಿರಿ. ಹುಡುಗನ ಕಲ್ಯಾಣವಾಗುತ್ತದೆ. ಎಂದು ಹರಸಿ, ಪ್ರಸಾದವಿತ್ತರು. ಅವರ ಶುಭಾಶೀರ್ವಾದಗಳನ್ನು ಹೊತ್ತು ನಾನು ಮಿರಜದ ದಾರಿ ತುಳಿದೆ. ಅದುವೇ ನನ್ನ ರಸಯಾತ್ರೆಯ ಮೊದಲ ಮಹತ್ವದ ಹಂತ. ಈ ರಸಯಾತ್ರೆಯ ಒಂದೊಂದು ಹಂತದಲ್ಲೂ ಮಹಾಪುರುಷರ, ಸಾಧು ಸತ್ಪುರುಷರ ಆಶೀರ್ವಾದಗಳು ನನ್ನ ಕೈಹಿಡಿದು ನಡೆಸಿರುವ ಸಂಗತಿಯನ್ನು ನಾನೆಂದೂ ಮರೆಯುವಂತಿಲ್ಲ.
]]>

‍ಲೇಖಕರು avadhi

August 13, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This