ಸ್ವಾಮಿ, ನಮ್ಮಿದುಕ್ಕಿದಾಗೈತೆ ಸ್ವಲ್ಪ ಇದ್ಕೊಡ್ರಿ…

ತುರುವೇಕೆರೆಯಲ್ಲಿ ಪ್ರತಿ ಸೋಮವಾರ ಸಂತೆ. ಅಲ್ಲಿನ ಪಶು ಆಸ್ಪತ್ರೆಯ ಮುಂದೆ ಕೆ ಬಿ ಕ್ರಾಸ್ ಕಡೆ ಹೋಗುವ ಮುಖ್ಯ ರಸ್ತೆಯ ಉದ್ದಕ್ಕೂ ಸಂತೆ ನೆರೆಯುತ್ತದೆ. ಸುತ್ತಮುತ್ತ ನೂರಾರು ಊರುಗಳಿಂದ ನೆರೆಯುವ ಸಾವಿರಾರು ಜನ. ಆಸ್ಪತ್ರೆಯ ವಿಶಾಲವಾದ ಕಾಂಪೌಂಡ್ ಒಳಗೆಲ್ಲ ಜನಜಾತ್ರೆ.

ಗೋಡೆಗೆ ಒರಗಿಕೊಂಡಿರುವವರು, ಮರದ ಕೆಳಗೆ ನೆರಳಿಗೆ ಕುಳಿತವರು, ಹಾಗೆಯೇ ನಿದ್ದೆ ಮಾಡುವವರು, ಅಲ್ಲಿ ಇಲ್ಲಿ ಕೂತು ನಿಂತು ವ್ಯವಹಾರ ಕುದುರಿಸುವವರು, ಅಷ್ಟೊತ್ತಿಗೇ ಪರಮಾತ್ಮನ ಆವಾಹನೆಯಾಗಿ ಜಗದೊಡೆಯನ ಕಂಟ್ರೋಲಿಂದಲೂ ಬಿಡುಗಡೆ ಹೊಂದಿ ಸ್ವತಂತ್ರರಾಗಿದ್ದ ಕೆಲವರು, ಆಸ್ಪತ್ರೆಯ ಕಟ್ಟೆಯ ಮೇಲೇ ಮಲಗಿ ಗೊರಕೆ ಹೊಡೆಯುವ ಚಿಂತಿಲ್ಲದ ಚಿಗಪ್ಪಗಳು, ಅವರನ್ನು ಆಚೆ ಕಳಿಸಲು ಕೈ ಮುಗಿದು ಹೇಳಿ, ಬೈದು, ಜಗಳಾಡಿ ಕೈ ಕೈ ಮಿಲಾಯಿಸಿ, ಸೋತು ಸುಮ್ಮನಾಗಿರುವ ಆಸ್ಪತ್ರೆ ಸಿಬ್ಬಂದಿ!

1992 ರಿಂದ 2001 ರ ತನಕ ತುರುವೇಕೆರೆ ತಾಲೂಕಿನಲ್ಲಿ ಕೆಲಸ ಮಾಡಿ ಇದ್ದನ್ನೆಲ್ಲ ವಿವರವಾಗಿ ಕಂಡವನು ನಾನು. ಔಷಧಿ ತರಲು, ವ್ಯಾಕ್ಸಿನ್‍ಗಳನ್ನು ತರಲು ಅಥವಾ ಮಾಹೆಯ ಪ್ರಗತಿ ಪರಿಶೀಲನಾ ಸಭೆಗೆ, ಖಜಾನೆಗೆ, ಸಂಬಳವಾಗುತ್ತಿದ್ದ ಮೈಸೂರು ಬ್ಯಾಂಕಿನ ಕೆಲಸಕ್ಕೆಂದು, ತುರುವೇಕೆರೆ ಪಶು ಆಸ್ಪತ್ರೆಗೆ ತಿಂಗಳಲ್ಲಿ ಮೂರ್ನಾಲ್ಕು ಬಾರಿಯಾದರೂ ಹೋಗಬೇಕಾಗುತ್ತಿತ್ತು. ಅಕಸ್ಮಾತ್ ಸೋಮವಾರದ ದಿನವೇನಾದರೂ ಹೋದರೆ, ಮೇಲ್ಕಾಣಿಸಿದ ದೃಶ್ಯ ಕಾಣಸಿಗುತ್ತಿತ್ತು.

ಇಷ್ಟೇ ಆಗಿದ್ದರೆ ತೊಂದರೆ ಇರುತ್ತಿರಲಿಲ್ಲ. ಸಂತೆಗೆ ಬಂದವರಲ್ಲಿ ಕನಿಷ್ಠ ಶೇ.10ರಷ್ಟು ಜನ ಎದುರಿಗೇ ಇದ್ದ ಪಶು ಆಸ್ಪತ್ರೆಗೆ ನುಗ್ಗುತ್ತಿದ್ದರು. ನೂರಾರು ವಿಧದ ಔಷಧಿಗಳಿಗೆ ಬೇಡಿಕೆ ಇಡುತ್ತಿದ್ದರು. ದನ, ಎಮ್ಮೆ, ಕುರಿ, ಮೇಕೆ, ನಾಯಿ, ಕತ್ತೆ, ಕೋಳಿಗಳಿಗೆ ಜಂತು, ಕೆಮ್ಮು, ಭೇದಿ, ಹೊಟ್ಟೆ ಉಬ್ಬರ, ಬೆದೆಗೆ ಬಂದಿಲ್ಲ, ಗರ್ಭ ನಿಂತಿಲ್ಲ, ದಿನ ತುಂಬಿದರೂ ಕರು ಹಾಕಿಲ್ಲ, ಹೇನು, ಚಿಗಟ, ಉಣ್ಣೆ ಕಾಟ, ಕಜ್ಜಿ, ಗಾಯ, ಹೆಗಲುಬಾವು, ಹಾಲು ಇಳುವರಿ ಕಡಿಮೆ, ಮೆಲುಕು ಹಾಕಲ್ಲ, ಸಿಡಿಗಾಲು, ಓತಿಬಾಲ, ಕುಂಟು, ಮೂಗುಹುಣ್ಣು, ಕೆಚ್ಚಲುಬಾವು, ಗೆರಸಲು, ಬಾವು, ಲಲ್ಡು, ಎಲ್ಮಂಡ, ಶೆಲೆ, ಕುಂದು, ನೀರ್ಮಡೆ, ರಕ್ತಮಡೆ, ಕೀವುಮಡೆ, ಮೂಕಬೆದೆ, ನಿರಂತರ ಬೆದೆ ಇತ್ಯಾದಿ ಕಾಯಿಲೆಗಳಿಗೆ ಔಷಧ ಕೇಳುತ್ತಿದ್ದರು.

ಪಶುವೈದ್ಯಕೀಯ ವಿಜ್ಞಾನದ ಮೈಕ್ರೋಬಯಾಲಜಿ, ಪೆಥಾಲಜಿ, ಮೆಡಿಸಿನ್, ಸರ್ಜರಿ, ಗೈನಕಾಲಜಿ, ಪ್ಯಾರಾಸೈಟಾಲಜಿ, ಆಹಾರಶಾಸ್ತ್ರ ಮುಂತಾದ ಪುಸ್ತಕಗಳಲ್ಲಿರುವ ಎಲ್ಲ ಕಾಯಿಲೆಗಳನ್ನು ವಿಜ್ಞಾನಿಗಳಂತೆ ವರ್ಣಿಸಿ, ಔಷಧಗಳನ್ನು ಮಕ್ಕಳಂತೆ ರಚ್ಚೆ ಹಿಡಿದು, ಹಿರಿಯರಂತೆ ಗೌರವದಿಂದ, ಮೇಲಧಿಕಾರಿಗಳಂತೆ ದರ್ಪದಿಂದ, ಪುಡಿ ರಾಜಕಾರಣಿಗಳಂತೆ ಜಬರ್ದಸ್ತಿನಿಂದ, ಸರಿ ಸಮಾನರಂತೆ ಹಕ್ಕಿನಿಂದ, ಮತ್ತೆ ಕೆಲವರು ಸ್ನೇಹಿತರಂತೆ ಪ್ರೀತಿಯಿಂದ ಪಡೆದು ತೆರಳುತ್ತಿದ್ದರು.

ಬೆಳಗ್ಗೆ 10-11 ಗಂಟೆಯಿಂದ ಪ್ರಾರಂಭಿಸಿ ಸಾಯಂಕಾಲ ಆಸ್ಪತ್ರೆ ಬಾಗಿಲು ಮುಚ್ಚುವ ಐದು ಐದೂವರೆ ಗಂಟೆಯ ತನಕ ಕೇಳಿದ್ದನ್ನೇ ಕೇಳಿ, ಹೇಳಿದ್ದನ್ನೇ ಹೇಳಿ, ಕೊಟ್ಟಿದ್ದನ್ನೇ ಕೊಟ್ಟು ಸಿಬ್ಬಂದಿ ವರ್ಗದವರೆಲ್ಲರೂ ಹಿಪ್ನೊಟೈಸ್ ಆದವರಂತಾಗುತ್ತಿದ್ದರು.

ಅಲ್ಲೊಬ್ಬ ಡಾ|| ರಾಜಶೇಖರಯ್ಯ ಎಂಬುವ ಸ್ಥಿತಪ್ರಜ್ಞರೊಬ್ಬರು ಸಹಾಯಕ ನಿರ್ದೇಶಕರಾಗಿದ್ದು, ಎಂಥಾ ಸನ್ನಿವೇಶದಲ್ಲಿಯೂ ತಮ್ಮ ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಿರಲಿಲ್ಲ. ಸಂತೆಯ 10% ಜನರ ಬದಲಾಗಿ 110% ರೈತರು ನುಗ್ಗಿದರೂ ಅವರ ಮನಸ್ಥಿತಿಯಲ್ಲಿ ಏರುಪೇರಾಗುತ್ತಿರಲಿಲ್ಲ. ಸ್ಫುರದ್ರೂಪಿಯಾಗಿದ್ದ ಅವರು ಸಿಟ್ಟಾದುದನ್ನು ನಾನೆಂದೂ ನೋಡಲೇ ಇಲ್ಲ. ತಾಲೂಕು ಆಸ್ಪತ್ರೆಗಳಲ್ಲಿ ಸಹಾಯಕ ನಿರ್ದೇಶಕರಲ್ಲದೆ ಸಂಚಾರಿ ಪಶು ಚಿಕಿತ್ಸಾ ಘಟಕದ (MOBILE VETERINARY CLINIC) ಒಬ್ಬ ಪಶುವೈದ್ಯ ಮತ್ತು ವಿಸ್ತರಣಾಧಿಕಾರಿಯೆಂಬ ಮತ್ತೊಬ್ಬ ಪಶುವೈದ್ಯರಿರುತ್ತಾರೆ.

ಡಾ|| ರಾಜಶೇಖರಯ್ಯನವರು ಯುವಕರಾದ ಇವರಿಬ್ಬರ ಮೇಲೆ ಭಾರ ಹಾಕಿ ತಮ್ಮ ಕಚೇರಿಯ ಆಡಳಿತ ಮಾತ್ರ ನೋಡಿಕೊಳ್ಳುತ್ತಿದ್ದರು. ಅಂದರೆ ಇಡೀ ತಾಲ್ಲೂಕಿನ ವಿವಿಧ ಪಶುವೈದ್ಯ ಸಂಸ್ಥೆಗಳ ಮೇಲುಸ್ತುವಾರಿ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿಗಳಿಂದ ಬಂದ ವಂಟನದ (ಬಜೆಟ್) ನಿರ್ವಹಣೆ, ತಾಲೂಕಿಗೆ ನಿಗದಿಯಾದ ಇಲಾಖಾ ಗುರಿಗಳು ಮತ್ತು ಸಾಧನೆ ನೋಡಿಕೊಳ್ಳುವುದು, ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸುವುದು, ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಸಭೆಗಳಿಗೆ ಅಂಕಿ ಸಂಖ್ಯೆಗಳೊಂದಿಗೆ ಸಿದ್ಧರಾಗುವುದು, ಹಾಜರಾಗುವುದು, ಕಂಡ ಕಂಡ ಮೇಲಾಧಿಕಾರಿಗಳಿಂದ ಕಡ್ಡಾಯವಾಗಿ ಉಗಿಸಿಕೊಳ್ಳುವುದು ಮಾಡುತ್ತಾ ಹೆಸರಿಗೆ ಅಧಿಕಾರಿಯಾಗಿದ್ದರೂ ಅಸಲಿಗೆ ಗುಮಾಸ್ತರಾಗಿದ್ದರು.

ತಮ್ಮನ್ನು ತಾವು ‘ಗೆಜೆಟೆಡ್ ಕ್ಲಾರ್ಕ್’ ಎಂದುಕೊಂಡು ನಗುತ್ತಿದ್ದ ರಾಜಶೇಖರಯ್ಯನವರು ಆಸ್ಪತ್ರೆಯಲ್ಲಿ ಎಂದೂ ಒಂದೇ ಒಂದು ದನವನ್ನು ಮುಟ್ಟಿ ಚಿಕಿತ್ಸೆ ನೀಡಿದ್ದು ನಾನು ನೋಡಲಿಲ್ಲ. ಅದಕ್ಕೆ ಅವರಿಗೆ ಸಮಯವೇ ಇರುತ್ತಿರಲಿಲ್ಲ. ಕುರ್ಚಿ ಮೇಲೆ ಕುಳಿತು ಕುಳಿತು ರಾಜಶೇಖರಯ್ಯನವರಿಗೆ ದುಂಡನೆಯ ಬೊಜ್ಜು ಬೆಳೆದು ಬಿಟ್ಟಿತ್ತು. ಅವರ ಗೌರವವರ್ಣವು ಉದ್ದನೆಯ ಮೂಗು ಎಲ್ಲ ಸೇರಿ ನನಗೆ ಸಾಕ್ಷಾತ್ ಗಣಪತಿಯಂತೆ ಕಾಣುತ್ತಿದ್ದರು.

ಇಂಥ ತುರುವೇಕೆರೆ ಆಸ್ಪತ್ರೆಗೆ ಒಮ್ಮೆ ನಾನು ಡಾ. ರಾಜಶೇಖರಯ್ಯನವರು ಕರೆದುದರಿಂದ ಹೋಗಬೇಕಾಯಿತು. ಅದು ಬಹುಶಃ 1993 ಅಥವಾ 1994 ರ ಮಾರ್ಚ್ ತಿಂಗಳ ಕೊನೆಯ ದಿನಗಳು. ಮಾರ್ಚ್ ತಿಂಗಳ ಕೊನೆ ಎಂದರೆ ಆರ್ಥಿಕ ವರ್ಷದ ಕೊನೆ ಎಂದರ್ಥ. ಅಂದು ಇಡೀ ವರ್ಷದ ಪ್ರವಾಸ ಭತ್ಯೆ ಬಿಲ್ಲುಗಳು, ಡಿಸಿ ಬಿಲ್ಲುಗಳನ್ನು ಸಿದ್ಧಪಡಿಸಬೇಕಾಗಿತ್ತು. ಕೆಲವಕ್ಕೆ ಜಿಲ್ಲಾ ಉಪನಿರ್ದೇಶಕರಿಂದ ವಂಟನ (ಬಜೆಟ್) ಹಾಕಿಸಿಕೊಂಡು ಬರಬೇಕಾಗಿತ್ತು. ಸಿದ್ಧವಾದ ಎಲ್ಲ ಬಿಲ್ಲುಗಳನ್ನೂ ಖಜಾನೆಗೆ ಹಾಜರುಪಡಿಸಬೇಕಾಗಿತ್ತು. ಅದೆಲ್ಲ ನಾಲ್ಕಾರು ದಿನಗಳ ಕೆಲಸ. ನಾನು ತಂಡಗ ಆಸ್ಪತ್ರೆಯ ಕೆಲಸವನ್ನು ಹನ್ನೆರಡು ಗಂಟೆಯ ತನಕ ಮಾಡಿ, ಬೈಕಿನಲ್ಲಿ ತುರುವೇಕೆರೆಗೆ ಹೋದೆ. ನನ್ನ ಗೈರು ಹಾಜರಿಯಲ್ಲಿ ತಂಡಗ ಚಿಕಿತ್ಸಾಲಯ ನೋಡಿಕೊಳ್ಳಲು ಒಬ್ಬ ಪಶು ಪರೀಕ್ಷಕರಿದ್ದರು.

ತುರುವೇಕೆರೆ ತಲುಪಿ ಆಸ್ಪತ್ರೆಯ ಬಳಿ ನೋಡುತ್ತೇನೆ, ಅಂದು ಸೋಮವಾರ! ಇಡೀ ಆಸ್ಪತ್ರೆಯ ಆವರಣ ಜನರಿಂದ ಕಿಕ್ಕಿರಿದು ತುಂಬಿತ್ತು. ಆಸ್ಪತ್ರೆ ಎಂಬುದು ಸಂತೆಯ ವಿಸ್ತರಣೆಯಂತಿತ್ತು. ಅದರಲ್ಲಿ ಯಾರು ಯಾರು ಅನ್ನೋದು ಸಹ ಗೊತ್ತಾಗುತ್ತಿರಲಿಲ್ಲ. ಅಂದರೆ ಸಂತೆಗೆ ಬಂದವರ್ಯಾರು ಮತ್ತು ಆಸ್ಪತ್ರೆಗೆ ಬಂದವರ್ಯಾರು ಎಂಬುದು ಗೊತ್ತಾಗುತ್ತಿರಲಿಲ್ಲ. ಜಾನುವಾರು ಮಾಲೀಕರು ಮತ್ತು ಸಂತೆಗೆ ಬಂದ ಕೆಲವರು ಆಸ್ಪತ್ರೆಗೆ ನುಗ್ಗಿ ತಮ್ಮ ತಮ್ಮ ಪ್ರಾಣಿಗಳ ಮತ್ತು ಕಾಯಿಲೆಯ ವಿವರ ಹೇಳಿ, ಔಷಧಗಳನ್ನು (ಪುಡಿ, ಮಾತ್ರೆ, ದ್ರವರೂಪಿ ಔಷಧ ಇತ್ಯಾದಿ) ಇಸಿದುಕೊಂಡು ಮತ್ತೂ ಅಲ್ಲೇ ನಿಲ್ಲುತ್ತಿದ್ದರು. ಯಾರಿಗಾದರೂ ಟಾನಿಕ್‍ಪುಡಿ ಎಂದು ಕೊಟ್ಟರೆ ತಮಗೂ ಬೇಕು ಎಂದು ಅದನ್ನೂ ಇಸಿದುಕೊಳ್ಳುತ್ತಿದ್ದರು. ಒಬ್ಬೊಬ್ಬರೂ ಎರಡು ಮೂರು ಥರದ ಔಷಧ ಪಡೆದು ಹೊರಡುತ್ತಿದ್ದರು!

ಜಂತು ಔಷಧವೆಂದು ಪುಡಿ ಕೊಟ್ಟರೆ ಮಾತ್ರೆ ಕೊಡಿ ಎಂದು ಕೇಳುತ್ತಿದ್ದರು. ಮಾತ್ರೆ ಕೊಟ್ಟರೆ ದ್ರವರೂಪದ ಔಷಧ ಕೊಡಿ ಎಂದು ದುಂಬಾಲು ಬೀಳುತ್ತಿದ್ದರು. ಗಾಯಕ್ಕೆ ಹಾಕಲು ಪುಡಿ ಕೊಟ್ಟರೆ ಟಿಂಚರ್ ಕೊಡಿ ಎನ್ನುತ್ತಿದ್ದರು. ಟಿಂಚರ್ ಕೊಟ್ಟರೆ ಆಯಿಂಟ್‍ಮೆಂಟ್ ಕೊಡಿ ಎನ್ನುತ್ತಿದ್ದರು. ಇವನ್ನೆಲ್ಲ ಕೊಟ್ಟರೆ ಹತ್ತಿ, ಬ್ಯಾಂಡೇಜ್ ಬಟ್ಟೆ, ಬೇವಿನ ಎಣ್ಣೆ, ಫಿನಾಯಿಲ್ ಕೊಡಿ ಎಂದು ಗಂಟು ಬೀಳುತ್ತಿದ್ದರು. ಪುಡಿ, ಮಾತ್ರೆಗಳನ್ನು ಕಾಗದದಲ್ಲಿ ಸುತ್ತಿ ಅಥವಾ ಪುಡಿಕೆ ಮಾಡಿ ಕೊಟ್ಟು ಕಳಿಸಬಹುದಿತ್ತು. ಆದರೆ ದ್ರವರೂಪದ ಔಷಧ ಕೊಡಲು ಶೀಶೆಯೇ ಬೇಕು. ಅಷ್ಟೊಂದು ಶೀಶೆಗಳು ಆಸ್ಪತ್ರೆಯಲ್ಲಿರುವುದು ಅಸಾಧ್ಯ. ರೈತರಿಗೆ ಶೀಶೆಗಳನ್ನು ತರಲು ಹೇಳಿದರೆ ಅವರಿಗೆ ಸಿಟ್ಟು ಬರುತ್ತಿತ್ತು. ಅಲ್ಲೊಂದು ಮಾತಿನ ಚಕಮಕಿ ಶುರುವಾಗುತ್ತಿತ್ತು.

ಸಹಾಯಕನಾಗಿದ್ದ ನಾಗಣ್ಣನಂತೂ ಹಣ್ಣಾಗಿ ಮಾನಸಿಕ ಕ್ಷೋಭೆಗೆ ಒಳಗಾದವನಂತಿರುತ್ತಿದ್ದ. ಈ ಗಲಾಟೆಯ ಮಧ್ಯೆ ವರ್ಷಾಂತ್ಯದ ಕೆಲಸ ಕಾರ್ಯಗಳು ಮುಂದುವರಿಯುತ್ತಲೇ ಇರಲಿಲ್ಲ. ಟೇಬಲ್ ಮೇಲಿದ್ದ ಹೊರ ರೋಗಿ ವಹಿಯಲ್ಲಿ ನಾನೇ ರೈತರ ಹೆಸರು, ಜಾನುವಾರು ವಿವರ, ರೋಗ ಮತ್ತು ಔಷಧದ ವಿವರ ಎಲ್ಲ ಬರೆದುಕೊಳ್ಳುತ್ತಿದ್ದೆ. ಸಹಾಯಕ ನಿರ್ದೇಶಕರು ಎಷ್ಟೇ ತಾಳ್ಮೆ ವಹಿಸಿದರೂ ಬರವಣಿಗೆ ಕಾರ್ಯ ಅಲ್ಲಲ್ಲಿ ನಿಂತು ಬಿಡುತ್ತಿದ್ದುದರಿಂದ ಚಡಪಡಿಸತೊಡಗಿದ್ದರು. ಬೆಟ್ಟದಷ್ಟು ಕೆಲಸ ಬಾಕಿ ಇತ್ತು. ರೈತರು ಪ್ರವಾಹದೋಪಾದಿಯಲ್ಲಿ ಹರಿದು ಬರುತ್ತಿದ್ದರು.

ಆಸ್ಪತ್ರೆಯ ಬಾಗಿಲಾಕುವ ಸಮಯ ಬಂತು. ರೈತರು ಬರುವುದು ನಿಂತಿತು. ಹೊರ ರೋಗಿ ವಹಿಯನ್ನು ತೆಗೆದಿಟ್ಟು ನಾನು ಡಿಸಿ ಬಿಲ್ಲುಗಳನ್ನು ಮಾಡತೊಡಗಿದೆ. ಸಂಚಾರಿ ಘಟಕದ ಡಾಕ್ಟರು, ವಿಸ್ತರಣಾಧಿಕಾರಿ ಮತ್ತು ಅಷ್ಟರಲ್ಲಿ ಆಗಮಿಸಿದ್ದ ಬಾಣಸಂದ್ರ, ಮಾಯಸಂದ್ರ ಮತ್ತು ದಂಡಿನಶಿವರದ ಡಾಕ್ಟರುಗಳು ಕೆಲಸ ಹಂಚಿಕೊಂಡು ಎಷ್ಟು ಕೆಲಸ ಮಾಡಲು ಸಾಧ್ಯವೋ ಅಷ್ಟನ್ನು ಮಾಡತೊಡಗಿದರು. ತುರುವೇಕೆರೆ ಆಸ್ಪತ್ರೆಯ ಸಿಬ್ಬಂದಿಯೆಲ್ಲ ಉಸಿರುಗಳೆದು ಸದ್ಯಕ್ಕೆ ಹಳವಾರಾದರು.

ನಾನು ಕೆಲಸಕ್ಕೆ ಸೇರಿದ ಮೊದಲನೇ ದಿನದಿಂದ ಸೇವೆಯ ಕೊನೆಯ ದಿನದವರೆಗೆ ಗಮನಿಸಿರುವುದು ಇದು; ಪ್ರತಿದಿನವೂ ಕೆಲಸ ಮುಗಿಸಿ ಆಸ್ಪತ್ರೆಯ ಬಾಗಿಲು ಹಾಕುವಾಗ ಅಲ್ಲಿಯೇ ಆಚೀಚೆ ನಿಂತಿರುತ್ತಿದ್ದ ರೈತನೊಬ್ಬ ಓಡಿ ಬಂದು, ತನ್ನ ಮನೆಯ ರಾಸಿಗೆ ಹೀಗೀಗೆ ಆಗಿದೆ. ಅದಕ್ಕೆ ಔಷಧಿ ಕೊಟ್ಟು ಪುಣ್ಯ ಕಟ್ಟಿಕೊಳ್ಳಿ ಸಾ… ಎಂದು ನಮ್ಮನ್ನು ತಡೆ ಹಾಕುವುದು ಕಡ್ಡಾಯವಾಗಿ ನಡೆದುಕೊಂಡು ಬಂದಿದೆ. ಮೊದಮೊದಲೆಲ್ಲ ಸಿಟ್ಟು ಬರುತ್ತಿತ್ತು. ಆದರೆ ಬರುಬರುತ್ತ ಇದು ಅಭ್ಯಾಸವಾಗಿ ಮತ್ತು ಇದು ಪ್ರಕೃತಿ ನಿಯಮವಿರಬೇಕೆಂದುಕೊಂಡು ಭಾವಿಸಿ ಈ ಕೊನೆಯ ರೈತನನ್ನು ನಿಭಾಯಿಸಲು ತಾಳ್ಮೆ ಉಳಿಸಿಕೊಂಡೇ ಇರುತ್ತಿದ್ದೆ.

ಹಾಗೆಯೇ ಇಲ್ಲೂ ಅದೇ ರೀತಿ ಆಸ್ಪತ್ರೆಯ ಬಾಗಿಲು ಹಾಕಿದ ಮೇಲೆ ಒಬ್ಬ ರೈತ ಬಂದು ಬಾಗಿಲು ಬಡಿದ. ಆಸ್ಪತ್ರೆಯ ಒಳಗೆ ಕೂಡಿಹಾಕಿಕೊಂಡು ಬರವಣಿಗೆಯಲ್ಲಿ ಮಗ್ನರಾಗಿದ್ದ ಎಲ್ಲರೂ ‘ಥತ್ತೇರಿಕೆ’ ಎಂದು ಉದ್ಗಾರ ಹೊರಡಿಸಿದರು. ಕಾಂಪೌಂಡರ್ ಚಂದ್ರಯ್ಯ ಬಾಗಿಲು ತೆಗೆದರು. ಒಳ ಬಂದ ಆಸಾಮಿ ನಿಂತಲ್ಲಿ ಒಂದು ಕ್ಷಣ ನಿಲ್ಲದ ಗಡಿಬಿಡಿಯವನಾಗಿದ್ದ. ಅಲ್ಲಿದ್ದ ಎಲ್ಲ ಮೂರ್ನಾಲ್ಕು ಟೇಬಲ್ಲುಗಳ ಬಳಿ ಸಾರಿ, ಎಲ್ಲಿಯೂ ನಿಲ್ಲದೆ ರೂಮಿನ ಮಧ್ಯೆ ನಿಂತು, ‘ಇದರಾಗೆ ಯಾರು ಸ್ವಾಮಿ ಡಾಕ್ಟ್ರು’ ಎಂದನು. ಆಗ ರಾಜಶೇಖರಯ್ಯನವರು ಕಣ್ಣು ಸನ್ನೆ ಮಾಡಿ ರೈತನನ್ನು ಹತ್ತಿರಕ್ಕೆ ಕರೆದರು. ಅವನು ಅವರ ಬಳಿ ಹೋದವನೇ ‘ಸ್ವಾಮಿ, ನಮ್ಮಿದುಕ್ಕಿದಾಗೈತೆ ಸ್ವಲ್ಪ ಇದ್ಕೊಡ್ರಿ’ ಎಂದು ಪ್ರತಿ ಶಬ್ದಕ್ಕೆ ವಿರಾಮ ಕೊಟ್ಟು ಎಳೆದೆಳೆದು ಹೇಳಿ ಎರಡೂ ಹಸ್ತಗಳನ್ನು ಮಸೆದುಕೊಳ್ಳತೊಡಗಿದ!

ರೂಮಲ್ಲಿದ್ದ ನಾವೆಲ್ಲ ರೈತನ ಮಾತು ಕೇಳಿ ಬರೆಯುತ್ತಿದ್ದ ಪೆನ್ನು ಕೆಳಗಿಟ್ಟು ಒಬ್ಬರ ಮುಖವನ್ನೊಬ್ಬರು ನೋಡಿಕೊಳ್ಳತೊಡಗಿದೆವು. ‘ಏನಪ್ಪಾ ಇದು, ನಮ್ಮಿದುಕ್ಕಿದಾಗೈತೆ ಇದ್ಕೊಡ್ರಿ?’

ಬರೆಯುತ್ತಿದ್ದ ಬಿಲ್ಲು ಮತ್ತು ವೋಚರ್ ಗಳನ್ನು ಹೊಂದಿಸಿ ಎಲ್ಲ ಅಂಕಿಗಳನ್ನು ಕೂಡುತ್ತಿದ್ದ ರಾಜಶೇಖರಯ್ಯನವರು ಒಳರೂಮಿನಲ್ಲಿ ಔಷಧಗಳನ್ನು ನೋಡಿಕೊಳ್ಳುತ್ತಿದ್ದ ಚಂದ್ರಯ್ಯಗೆ ‘ಏಯ್ ಇವ್ನೆ, ಇವ್ನಿಗೆ ಸ್ವಲ್ಪ ಆ ಇದು ಕೊಡು’ ಎಂದರು. ಸಹಾಯಕ ನಿರ್ದೇಶಕರಿಗೆ ರೈತ ಹೇಳಿದ್ದು ಪ್ರಜ್ಞೆಗೆ ತಾಕಿರಲಿಲ್ಲ ಮತ್ತು ಅವರು ಹೇಳಿದ್ದೂ ಸಹ ಅವರ ಪ್ರಜ್ಞೆಯಿಂದ ಬಂದಿರಲಿಲ್ಲವೆಂಬುದು ಹೊರನೋಟಕ್ಕೇ ತಿಳಿಯುತ್ತಿತ್ತು. ಅವರು ಅಭ್ಯಾಸ ಬಲದಿಂದಲೂ, ಯಾಂತ್ರಿಕವಾಗಿಯೂ ವರ್ತಿಸಿದ್ದರು.

ಅವರು ಹೇಳಿದ ಕೆಲಸಗಳನ್ನೆಲ್ಲ ಪ್ರಶ್ನೆ ಮಾಡದೆ ಕಣ್ಣು ಮಿಟುಕಿಸುವುದರಲ್ಲಿ ಮಾಡಿ ಮುಗಿಸುತ್ತಿದ್ದ ಚಂದ್ರಯ್ಯ, ಕೂಡಲೇ ರೈತನನ್ನು ಔಷಧಗಳ ರೂಮಿಗೆ ಕರೆದುಕೊಂಡು ಹೋಗಿ ಕಾಗದದಲ್ಲಿ ಸುತ್ತಿದ್ದ ಏನನ್ನೋ ಕೊಟ್ಟು ‘ನೋಡು, ಇದನ್ನ ತಗೊಂಡೋಗಿ ಒಂದುಂಡೆ ಬೆಲ್ಲ, ಒಂದೀರುಳ್ಳಿ ಜೊತೆ ಕುಟ್ಟಿ ತಿನ್ಸು. ನೀನೇನಾರ ತಿಂದೀಯ. ಬಾಳಾ ಸ್ಟ್ರಾಂಗಿದು. ನೀರಲ್ಲಾಕಿ ಕುಡಿಸಬಾರ್ದು. ತಿನ್ನಿಸ್ಬೇಕು. ನೆನಪಿಟ್ಕೋ!’ ಅಂದ್ರು.
ರೈತ: ‘ಸರಿ ಹೋಗುತ್ತ ಸ್ವಾಮಿ?’
ಚಂದ್ರಯ್ಯ: ‘ಓಹೋ ಫಸ್ಟ್ ಕ್ಲಾಸಾಗುತ್ತೆ’
ಹಂಗಂದ ಕೂಡ್ಲೆ ರೈತ ಖುಷಿಯಿಂದ ಕಾಗದದ ಪೊಟ್ಟಣವನ್ನು ಲುಂಗಿ ಪಂಚೆ ಎತ್ತಿ ನಿಕ್ಕರಿನ ಜೇಬಿನಲ್ಲಿಟ್ಟುಕೊಂಡು ಶರವೇಗದಲ್ಲಿ ನಾಪತ್ತೆಯಾದ.

ನಾನಿದ್ದು ಸಹಾಯಕ ನಿರ್ದೇಶಕರಿಗೆ (ಸನಿ) ‘ಅಲ್ಲಾ ಸಾರ್, ಅವನು ಇದ್ಕಿದಾಗೈತೆ, ಇದ್ಕೊಡ್ರಿ ಅಂದ. ಇದು ಅಂದ್ರೆ ದನಾನೋ, ಎಮ್ಮೆನೋ, ಕುರೀನೋ, ಮೇಕೇನೋ, ನಾಯಿನೋ, ಕತ್ತೆನೋ, ಕೋಳಿನೋ! ಇದಾಗೈತೆ ಅಂದ್ರೆ ಗಾಯಾನೋ, ಕೆಮ್ಮೋ, ಭೇದಿನೋ, ಏನು? ನೀವು ಯಾವ್ದೋ ದ್ಯಾಸದಲ್ಲಿ ‘ಇದು’ ಕೊಡು ಅಂದ್ರಿ. ಚಂದ್ರಯ್ಯ ಏನ್ ಕೊಟ್ರೋ ಏನೋ. ರೈತನ್ನ ವಾಪಸ್ ಕರೆಸಿ ವಿಚಾರಿಸೋಣ’ ಅಂದೆ. ಚಂದ್ರಯ್ಯ ಮತ್ತು ಇತರೆ ಸಿಬ್ಬಂದಿ ವರ್ಗದವರಾದ ನಾಗಣ್ಣ, ವಸಂತ, ತಿಮ್ಮಯ್ಯ ಎಲ್ಲ ಹೊರಹೋಗಿ ಹುಡುಕತೊಡಗಿದರು. ಆದರೆ ಗಡಿಬಿಡಿ ರೈತ ಅಲ್ಲೆಲ್ಲೂ ಕಾಣಲಿಲ್ಲ. ಸಂತೆ ಆಗಲೇ ನಿಧಾನವಾಗಿ ಕರಗುತ್ತಿತ್ತು. ಜನ ಒಬ್ಬೊಬ್ಬರೇ ಹೊರಡುತ್ತಿದ್ದರು. ಅರ್ಧಕ್ಕರ್ಧ ಖಾಲಿಯಾಗಿತ್ತು.

ಕೊನೆಗೆ ಆ ರೈತ ಆಸ್ಪತ್ರೆಯ ಹಿಂದಿನ ಕಾಂಪೌಂಡಿಗೆ ಮುಖ ಮಾಡಿ ಕುಕ್ಕರುಗಾಲಲ್ಲಿ ಕೂತು ವಿರಾಮವಾಗಿ ಉಚ್ಚೆ ಉಯ್ಯುತ್ತಿದ್ದುದನ್ನು ವಸಂತನು ಗುರುತಿಸಿ ಅವನು ಮೇಲಕ್ಕೇಳುವ ತನಕ ಕಾದಿದ್ದು ಕರೆದುಕೊಂಡು ಬಂದನು. ಅವನು ಬಂದ ಕೂಡಲೆ ಅವನಿಗೆ ಕೊಟ್ಟಿದ್ದ ಔಷಧದ ಪುಡಿಕೆಯನ್ನು ಚಂದ್ರಯ್ಯ ವಾಪಸ್ ಇಸಿದುಕೊಂಡರು.

ಸನಿ: ಅಲ್ಲಯ್ಯ ನೀನು ಯಾವುದಕ್ಕೆ ಕಾಯಿಲೆಯಾಗಿದೆ, ಏನು ಕಾಯಿಲೆಯಾಗಿದೆ ಎಂದು ಹೇಳಿ ಔಷಧ ಕೇಳಬೇಕೋ ಬೇಡವೋ? ಇದ್ಕಿದಾಗೈತೆ ಇದ್ಕೊಡ್ರಿ ಅಂದ್ರೆ?’

ರೈತ: ನೀವೇನ್ನೂ ಕೇಳ್ಲಿಲ್ಲ, ನಾನೇಳ್ಲಿಲ್ಲ ಸ್ವಾಮಿ! ಬರ್ತಿದ್ದಂಗೆ ಔಷ್ದಿ ಕೊಟ್ರಿ. ನಾನು ತಗಂಡೋದೆ. ಉಚ್ಚೆಗೆ ಬ್ಯಾರೆ ಅವಸರ ಆಗಿತ್ತು ನನಿಗೆ!

ಸನಿ: ಥೂ ನಿನ್ನ. ಏನು ಹೇಳ್ಬೇಕು, ಏನು ಹೇಳ್ಬಾರ್ದು ಅಂತ ಗೊತ್ತಾಗಲ್ವಲ್ಲಯ್ಯ ನಿನಗೆ!

ರೈತ: ಇಷ್ಟೊತ್ತು ಹೇಳ್ಲಿಲ್ಲ ಅಂತ ಬೈದ್ರಿ. ಈಗ ಹೇಳ್ತಿದಿಯ ಅಂತ ಬೈತಿದೀರಿ. ಇರೋ ವಿಷಯ ಹೇಳ್ದೆ ಸಾ!

ಸನಿ: ಮಾರಾಯ, ನಿನ್ನ ಹೆಸರು, ಊರು ಹೇಳು.

ರೈತ: ಬ್ರಹ್ಮದೇವರಹಳ್ಳಿ ಹುಚ್ಚಯ್ಯ ಸಾ.

ಸನಿ: ಹ್ಞಾಂ… ಹುಚ್ಚಯ್ಯ. ಈಗ ಸರಿಯಾತು ನೋಡು! ನಿಮ್ಮಪ್ಪ ಅಮ್ಮ ಸರಿಯಾಗಿ ಸೆಲೆಕ್ಟ್ ಮಾಡಿ ಹೆಸರಿಟ್ಟಿದ್ದಾರೆ ನೋಡು.

ಸನಿ ಹೀಗೆ ಹೇಳಿದ್ದೇ ತಡ ಅಲ್ಲಿ ಕೂತಿದ್ದ ನಾವೆಲ್ಲ ಇದುವರೆಗೂ ನಗುವನ್ನು ಕಷ್ಟಪಟ್ಟು ಬಿಗಿ ಹಿಡಿದುಕೊಂಡಿದ್ದವರು ಗೊಳ್ ಎಂದು ನಗತೊಡಗಿದೆವು. ಹಿಡಿತಕ್ಕೆ ಸಿಗದ ನಗು ಉಕ್ಕಿ ಹರಿಯಿತು.

ಆಮೇಲೆ ಹುಚ್ಚಯ್ಯನ ವಿವರವಾಗಿ ಮಾತನಾಡಿಸಿ ಸೂಕ್ತ ಔಷಧವನ್ನು ಕೊಟ್ಟು ಕಳಿಸಿದೆವು. ಅವನ ಒಂದು ಎತ್ತಿಗೆ ಮೂಗು ಹುಣ್ಣಾಗಿತ್ತು. ಅದಕ್ಕೆ ಕಾಪರ್ ಸಲ್ಫೇಟ್ (ಮೈಲುತುತ್ತ) ಹರಳುಗಳನ್ನು ಕೊಟ್ಟೆವು. ಆ ಔಷಧವನ್ನು ನುಣ್ಣಗೆ ಪುಡಿ ಮಾಡಿ ವದ್ದೆ ಹೆಬ್ಬೆರಳಲ್ಲಿ ಅದ್ದಿಕೊಂಡು ಮೂಗಿನ ಹೊರಳೆಗಳಲ್ಲಿ ತಿಕ್ಕಬೇಕೆಂದು ತಿಳಿಸಿದೆವು. ಮೂಗುಹುಣ್ಣು ಸಂಪೂರ್ಣ ವಾಸಿಯಾಗಲು ಇಂಜೆಕ್ಷನ್ ಸಹ ಮಾಡಿಸಲು ತಿಳಿಸಿ, ಇಂಜೆಕ್ಷನ್ ಬರೆದುಕೊಟ್ಟೆ. ಅವನ ಬ್ರಹ್ಮದೇವರಹಳ್ಳಿಯು ನನ್ನ ಕಾರ್ಯವ್ಯಾಪ್ತಿಯಲ್ಲಿ ಬರುವ ಹಳ್ಳಿಯಾಗಿತ್ತು.

ಅದಾಗಿ ಮೂರ್ನಾಲ್ಕು ತಿಂಗಳ ನಂತರ ಹುಚ್ಚಯ್ಯ ಅಕಸ್ಮಾತ್ ಕೆ ಬಿ ಕ್ರಾಸ್ ಬಳಿ ಭೇಟಿಯಾದ.

ಹುಚ್ಚಯ್ಯ: “ಗುರ್ತು ಸಿಕ್ತಾ ಸಾರ್ ನಂದು?”

ನಾನು: “ಗುರ್ತು ಸಿಗ್ದೇ ಏನು ಹುಚ್ಚಯ್ಯ. ನನ್ನ ಹೆಂಡ್ತಿ ಮಕ್ಳ ಮರೀಬೋದು. ನಿನ್ನ ಮರಿಯಾಕೆ ಆಗಲ್ಲ! ನಾನು ಬರೆದುಕೊಟ್ಟ ಔಷಧ ತರಲೂ ಇಲ್ಲ. ಇಂಜೆಕ್ಷನ್ ಮಾಡಿಸಲೂ ಇಲ್ಲ. ನಿನ್ನ ಎತ್ತುಗಳನ್ನು ಏನು ಮಾಡಿದೆ?”

ಅವನು ತನ್ನ ಎತ್ತಿಗೆ ಕಾಪರ್ ಸಲ್ಫೇಟನ್ನು ಬಳಸಿದ ಮೇಲೆ ಮೂಗುಹುಣ್ಣು ಪೂರ್ಣವಾಗಿ ವಾಸಿಯಾಗದಿದ್ದರೂ ಕಡಿಮೆಯಾಯಿತಂತೆ. ಮೂಗುಹುಣ್ಣು ರೋಗವು ಸಿಸ್ಟೋಜೋಮ ನೇಜೇಲ್ ಎಂಬ ಪರೋಪಜೀವಿಯಿಂದ ಉಂಟಾಗುವ ಖಾಯಿಲೆಯಾಗಿದ್ದು, ಅದರಲ್ಲಿ ದನಗಳಿಗೆ ಮೂಗಿನಲ್ಲಿ ಗುಳ್ಳೆಗಳಾಗುತ್ತವೆ. ಗೊಣ್ಣೆ ಸುರಿಯುತ್ತದೆ. ಕೆರೆತ ಇರುವುದರಿಂದ ಮೂಗು ಉಜ್ಜಿಕೊಳ್ಳುತ್ತಿರುತ್ತವೆ. ಬಹಳ ಕಷ್ಟಪಟ್ಟು ಸಶಬ್ದವಾಗಿಯೇ ಉಸಿರಾಡುತ್ತವೆ.

ಹುಚ್ಚಯ್ಯನ ಎತ್ತಿಗೆ ಮೂಗುಹುಣ್ಣು ಕಡಿಮೆಯಾಗಿ ಉಸಿರಾಟವು ಸರಾಗವಾಗಿ, ಉಸಿರಾಟದ ಶಬ್ದ ಕಡಿಮೆಯಾಗಿದೆ. ಕೂಡಲೇ ಗಿರಾಕಿ ಹುಡುಕಿ ಎತ್ತನ್ನು ಮಾರಿ ಬಿಟ್ಟಿದ್ದಾನೆ! ನಮ್ಮ ರೈತರಲ್ಲಿ ಈ ಥರ ಕಾಯಿಲೆಯಿರುವ ದನಗಳನ್ನು ಗೊತ್ತಾಗದಂತೆ ಬೇರೆಯವರಿಗೆ ಮಾರಾಟ ಮಾಡುವುದು ಸರ್ವೇಸಾಮಾನ್ಯ! ಇದನ್ನು ಮುಂದಿನ ಮನೆಗೆ ದಾಟಿಸುವುದು ಎನ್ನುತ್ತಾರೆ. ಹುಚ್ಚಯ್ಯ ತನ್ನ ಎತ್ತಿನ ಜೋಡಿಯನ್ನು ಮುಂದಿನ ಮನೆಗೆ ದಾಟಿಸಿ ನಿಸೂರಾಗಿದ್ದ.

‍ಲೇಖಕರು Avadhi

January 19, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಚಳಿಗಾಲದ ದೌಲತ್ತಿನಲ್ಲೊಂದು ನಿಮಿಷ!

ಚಳಿಗಾಲದ ದೌಲತ್ತಿನಲ್ಲೊಂದು ನಿಮಿಷ!

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ...

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಕಥೆಗಳನ್ನು ಹುಡುಕಿಕೊಂಡು ಹೀಗೆ ಸಾಗುವುದು ಇತ್ತೀಚಿಗೆ ನನ್ನ ರೂಢಿಯೇ ಆಗಿ ಹೋಗಿದೆ. ಕಥೆಯ ಹುಡುಕಾಟವೆಂದರೆ ಅದು ಬದುಕಿನ...

4 ಪ್ರತಿಕ್ರಿಯೆಗಳು

 1. Sudhakara Battia

  The truth is always outside of all fixed patterns❤️ ಸ್ವಾಮಿ, ನಮ್ಮಿದುಕ್ಕಿದಾಗೈತೆ ಸ್ವಲ್ಪ ಇದ್ಕೊಡ್ರಿ… Thanks for this story for helping us to manage our daily routine humorously

  ಪ್ರತಿಕ್ರಿಯೆ
 2. Dr S B Ravikumar

  ಸಾಮಾನ್ಯವಾಗಿ ಪಶು ಆಸ್ಪತ್ರೆಗಳಲ್ಲಿ ನಡೆಯುವ ಒಂದು ವಿನೋದ ಪ್ರಸಂಗ. ಘಟನೆಯನ್ನು ಸುಂದರವಾಗಿ ಬರಹರೂಪಕ್ಕೆ ಇಳಿಸಿದ್ದೀರಿ. ಅಭಿನಂದನೆಗಳು . ಇಂಥ ಘಟನೆಗಳನ್ನು ಆನಂದಿಸುವ ಮನಸ್ಥಿತಿ ಇಲ್ಲದಿದ್ದರೆ ಪಶುಆಸ್ಪತ್ರೆಗಳಲ್ಲಿ ಕೆಲಸ ಮಾಡುವುದು ಅಕ್ಷರಷಹ ಶಿಕ್ಷೆಯಾಗಿ ಬಿಡುತ್ತದೆ

  ಪ್ರತಿಕ್ರಿಯೆ
 3. ಡಾ.ಟಿ.ವಿ.ಕಾಂತರಾಜು.

  ಡಾ.ರಾಜಶೇಖರಯ್ಯನವರ ನಂತರ ನಾನು ಜೂನ್ 1993 ರಲ್ಲಿ ಸ.ನಿ.ಆಗಿ ತುರುವೇಕೆರೆಗೆ ಬಂದೆ , ಬಹುಪಾಲು ಈ ಪ್ರಸಂಗ ಮಾರ್ಚ್ 1993ರಲ್ಲಿ ನಡೆದಿರಬಹುದು. ಈ ಪ್ರಸಂಗವನ್ನು ಡಾ.ಬಷೀರ್, ನಾನು ಮತ್ತೆ ಉಪನಿರ್ದೇಶಕನಾಗಿ ಹಳ್ಳಿಕಾರ್ ತಳಿ ಸಂವರ್ಧನಾ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಒಮ್ಮೆ ರಾತ್ರಿ ಊಟ ಮಾಡುತ್ತಿದ್ದ ಸಮಯದಲ್ಲಿ ಹೇಳಿದಾಗ ನಾವೆಲ್ಲಾ ಬಿದ್ದೂ ಬಿದ್ದೂ ನಕ್ಕು ನೆತ್ತಿಗೇರಿಸಿಕೊಂಡಿದ್ದೆವು.

  ಪ್ರತಿಕ್ರಿಯೆ
 4. ಡಾ.ಟಿ.ವಿ.ಕಾಂತರಾಜು.

  ನಾನು ಜೂನ್ 1993ರಲ್ಲಿ ಸ.ನಿ.ನಾಗಿ ತುರುವೇಕೆರೆ ಪಶು ಆಸ್ಪತ್ರೆಗೆ ಬಂದೆ. ಬಹುಶಃ ಈ ಪ್ರಸಂಗ ಮಾರ್ಚಿ 1993ರಲ್ಲಿ ನಡೆದಿರಬಹುದು. ಆ ಸಮಯದಲ್ಲಿ ತಾಲ್ಲೂಕಿನ ಪಶುವೈದ್ಯ ರೆಲ್ಲರೂ ತಿಂಗಗಳಿಗೊಂದೆರಡು ಬಾರಿ ಊಟಕ್ಕೆ ಸೇರುತ್ತಿದ್ದೆವು. ಒಮ್ಮೆ ಹೀಗೆ ಊಟ ಮಾಡುವಾಗ ಡಾ.ಬಷೀರ್ ಈ ಪ್ರಸಂಗವನ್ನು ಹೇಳಿದಾಗ ಬಿದ್ದೂ ಬಿದ್ದೂ ನಕ್ಕು ನೆತ್ತಿಗೇರಿಸಿಕೊಂಡಿದ್ದೆವು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: