‘ಸ್ವ್ಯಾನ್’ಗೆ ಬರಗೂರು ಎಂಬ ಗರಿ..

ಕನ್ನಡ ಮುದ್ರಣ ಲೋಕದಲ್ಲಿ ಸ್ವ್ಯಾನ್ ಕೃಷ್ಣಮೂರ್ತಿ ಅವರದ್ದು ಮಹತ್ವದ ಹೆಸರು.

‘ಸ್ವ್ಯಾನ್ ಪ್ರಿಂಟರ್ಸ್’ ಮೂಲಕ ಮುದ್ರಣ ವಿನ್ಯಾಸದಲ್ಲಿ ಬದಲಾವಣೆ ತಂದ ಕೃಷ್ಣಮೂರ್ತಿ ಅವರ ಹೆಜ್ಜೆ ಗುರುತುಗಳು ಇಲ್ಲಿವೆ.

ಒಂದು ದಿನ ಅಂಕಿತ ಪುಸ್ತಕ ಮಳಿಗೆಯಲ್ಲಿ ಪ್ರಕಾಶ್ ಕಂಬತ್ತಳ್ಳಿ ಅವರು ಬರಗೂರು ರಾಮಚಂದ್ರಪ್ಪನವರಿಗೆ ‘ನಮ್ಮ ಪುಸ್ತಕಗಳ ಮುದ್ರಕರು ಇವರೇ’ ಎಂದು ನನ್ನನ್ನು ಪರಿಚಯಿಸಿದರು.

ಹಾಗೇ ಮಾತನಾಡುತ್ತಾ ಬರಗೂರು ರಾಮಚಂದ್ರಪ್ಪನವರು ಕ್ರೌನ್ 1/8 ಅಳತೆಯ ಪುಸ್ತಕವನ್ನು ತೋರಿಸಿ “ಸುಮಾರು 80ರಿಂದ 100 ಪುಟಗಳಷ್ಟು ಅಳತೆಯ ಪುಸ್ತಕ ಡಿಟಿಪಿ ಮಾಡಿ ಮುದ್ರಿಸಲು ನಿಮಗೆ ಎಷ್ಟು ಸಮಯ ಬೇಕಾಗುತ್ತದೆ..?

ಯಾಕೆಂದರೆ, ನಾವು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಮೃತ ಮಹೋತ್ಸವದ ಅಂಗವಾಗಿ 75 ಪುಸ್ತಕಗಳನ್ನು ಹೊರತರುತ್ತಿದ್ದೇವೆ. ಸಮಯಾವಕಾಶ ಬಹಳ ಕಡಿಮೆ ಇದೆ. ಹಾಗಾಗಿ ಮುದ್ರಣ ಕಾರ್ಯವನ್ನು 3-4 ಮುದ್ರಣಾಲಯಗಳಿಗೆ ಹಂಚಲು ತೀರ್ಮಾನಿಸಿದ್ದೇವೆ. ನೀವು ಅವುಗಳಲ್ಲಿ ಎಷ್ಟು ಪುಸ್ತಕಗಳನ್ನು ಮುದ್ರಿಸಲು ಸಾಧ್ಯ?” ಎಂದರು. ನಾನು ಹಿಂದೆ ಮುಂದೆ ಯೋಚನೆ ಮಾಡದೆ “ಸುಮಾರು ಅರ್ಧದಷ್ಟು ಮುದ್ರಿಸಬಹುದು” ಎಂದುಬಿಟ್ಟೆ.

ಕೆಲವು ದಿನಗಳ ನಂತರ ಹಂಪಿ ವಿಶ್ವವಿದ್ಯಾಲಯ ಘಟಿಕೋತ್ಸವ ಭಾಷಣ ಪುಸ್ತಕದ ಪ್ರೂಫ್ ನೋಡಲು ಸುಜ್ಞಾನಮೂರ್ತಿ ಅವರೊಂದಿಗೆ ಮೊದಲ ಬಾರಿಗೆ ನಮ್ಮ ಮುದ್ರಣಾಲಯಕ್ಕೆ ಬರಗೂರು ರಾಮಚಂದ್ರಪ್ಪನವರು ಬಂದೇ ಬಿಟ್ಟರು.

ನಮಗೆಲ್ಲಾ ತುಸು ಗಾಬರಿ, ಭಯ, ಒಳಗೊಳಗೆ ಖುಷಿಯೋ ಖುಷಿ. ಅಂದು ನಮ್ಮ ಮುದ್ರಣಾಲಯವನ್ನು, ಮುದ್ರಣಾಲಯದಲ್ಲಿ ಮುದ್ರಣವಾದ ಪುಸ್ತಕಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದ ಗುರುಗಳು ಎರಡು ಮೂರು ದಿನಗಳ ನಂತರ ಕರೆ ಮಾಡಿ ಚಲನಚಿತ್ರ ವಾಣಿಜ್ಯ ಮಂಡಳಿಯ ಪುಸ್ತಕಗಳ ಹಸ್ತಪ್ರತಿಗಳನ್ನು ಅವರ ಮನೆಗೆ ಹೋಗಿ ಪಡೆಯಲು ಸೂಚಿಸಿದರು.

ಮನೆಗೆ ಹೋದಾಗ ಎರಡು ಪುಸ್ತಕಗಳ ಹಸ್ತಪ್ರತಿಗಳನ್ನು ಕೈಗಿಟ್ಟು “ಎಷ್ಟು ಬೇಗ ಇವುಗಳನ್ನು ಡಿಟಿಪಿ ಮಾಡಿಸಿ ಪ್ರೂಫ್ ಕೊಡುತ್ತೀರೋ ಅಷ್ಟು ಬೇಗ ಮತ್ತೆ ಹೊಸ ಹಸ್ತಪ್ರತಿಗಳನ್ನು ಕೊಡುತ್ತೇನೆ” ಎಂದು ಒಂದು ಸವಾಲನ್ನೇ ಹಾಕಿದ್ದರು.

ನಿಜಕ್ಕೂ ನಮಗೆ ಆಗ ಆ ಕೆಲಸ ಸವಾಲಿನ ಕೆಲಸವೇ ಆಗಿತ್ತು. 2009ರಲ್ಲಿ ನಾವು ಆಗಿನ್ನೂ ಮುದ್ರಣಾಲಯ ಪ್ರಾರಂಭಿಸಿದ ಆರಂಭದ ದಿನಗಳು. ಎರಡು ಮೂರು ದಿನಕ್ಕೆ ಒಂದರಂತೆ ಪ್ರೂಫನ್ನು ಗುರುಗಳಿಗೆ ಕೊಟ್ಟು ಹೊಸ ಹಸ್ತಪ್ರತಿಯನ್ನು ಪಡೆಯುತ್ತ ಹೋದೆವು.

ಅತ್ಯಂತ ಕಡಿಮೆ ಅವಧಿಯಲ್ಲಿ 75 ಪುಸ್ತಕಗಳ ಮುಖಪುಟವನ್ನು ಮುದ್ರಿಸುವುದರ ಜೊತೆಗೆ 41 ಪುಸ್ತಕಗಳನ್ನು ನಮ್ಮ ಮುದ್ರಣಾಲಯದ ಎಲ್ಲಾ ಸಿಬ್ಬಂದಿ ಹಗಲು ರಾತ್ರಿಯೆನ್ನದೆ ಕೆಲಸ ಮಾಡಿ ಮುದ್ರಿಸಿದೆವು.

41 ಪುಸ್ತಕಗಳಲ್ಲಿ ಮೂರು ಪುಸ್ತಕಗಳನ್ನು ಕಾರ್ಯಕ್ರಮ ಆರಂಭವಾಗುವ ಕೆಲವೇ ನಿಮಿಷಗಳಲ್ಲಿ ನೇರವಾಗಿ ಸಮಾರಂಭದ ವೇದಿಕೆಗೆ ತಲುಪಿಸಿದೆವು. ಪುಸ್ತಕಗಳನ್ನು ಘನತೆವೆತ್ತ ರಾಜ್ಯಪಾಲರಾದ ಶ್ರೀ ರಾಮೇಶ್ವರ್ ಠಾಕೂರ್ ಅವರು ಬಿಡುಗಡೆ ಮಾಡಿದರು.

ಇದೇ ಸಂದರ್ಭದಲ್ಲಿ ಹಗಲು ರಾತ್ರಿ ನಿರಂತರವಾಗಿ ಶ್ರಮಿಸಿದ ನಮ್ಮ ಮುದ್ರಣಾಲಯದ ಸಮಸ್ತ ಸಿಬ್ಬಂದಿಯನ್ನು ವೇದಿಕೆ ಮೇಲೆ ಸನ್ಮಾನಿಸಿ ಗೌರವಿಸಿದರು. ಅದು ನಮ್ಮ ಮುದ್ರಣಾಲಯದ ಇತಿಹಾಸದಲ್ಲಿ ಅತ್ಯಂತ ಸಂಭ್ರಮ ಮತ್ತು ಸ್ಮರಣೀಯ ಘಳಿಗೆಗಳಲ್ಲಿ ಒಂದು.

ನಂತರ ಬರಗೂರು ರಾಮಚಂದ್ರಪ್ಪನವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಮೃತ ಮಹೋತ್ಸವದ ಸಂದರ್ಭ ಸಂಚಿಕೆಯನ್ನು ಬಹಳ ವಿಶಿಷ್ಟವಾಗಿ ರೂಪಿಸಿ, ಮುದ್ರಿಸುವ ಅವಕಾಶ ಕಲ್ಪಿಸಿಕೊಟ್ಟರು.

ಕನ್ನಡ ಚಲನಚಿತ್ರದ ಮೊದಲ ಸಿನಿಮಾ ನಿರ್ಮಾಣವಾದ ವರ್ಷ 1934ರಿಂದ 2009ರವರೆಗೆ ಬಂದ ಎಲ್ಲಾ ಸಿನಿಮಾಗಳ ಪೂರ್ಣ ಮಾಹಿತಿಯನ್ನು, ಅಪರೂಪವಾದ ಫೋಟೋಗಳನ್ನು ಮತ್ತು ಲೇಖನಗಳನ್ನು ಒಳಗೊಂಡ ಬೃಹತ್ ಗ್ರಂಥ ಅಮೃತಚಿತ್ರ ನಮ್ಮಲ್ಲೇ ಮುದ್ರಣವಾಯಿತು.

ಅಮೃತ ಮಹೋತ್ಸವದ 41 ಪುಸ್ತಕಗಳನ್ನು ಮತ್ತು ಸಂದರ್ಭ ಗ್ರಂಥವನ್ನು ಮುದ್ರಿಸುವ ಸಮಯದಲ್ಲಿ ಡಿಟಿಪಿ ಶ್ರೀಧರ್ ಅವರು ನೀಡಿದ ಸಹಕಾರವನ್ನು ಮರೆಯುವಂತೆಯೇ ಇಲ್ಲ.

ಹೀಗೆಯೇ ಒಮ್ಮೆ ಆಹ್ವಾನ ಪತ್ರಿಕೆಯೊಂದರ ಮುದ್ರಣದ ಸಮಯದಲ್ಲಿ ಅದರ ವಿನ್ಯಾಸವನ್ನು ಗುರುಗಳೇ ಕಂಪ್ಯೂಟರ್ ಮುಂದೆ ಕುಳಿತು ಮಾಡಿಸಿ, ಪ್ರೂಫ್ ಎಲ್ಲಾ ನೋಡಿ ಅಂತಿಮಗೊಳಿಸಿ, ಮುದ್ರಿಸಲು ಹೇಳಿ ಹೊರಟು ಹೋದರು.

ಟೇಬಲ್ ಮೇಲೆ ಇದ್ದ ಆ ಆಹ್ವಾನ ಪತ್ರಿಕೆಯ ಪ್ರೂಫ್ ಅನ್ನು ನೋಡಿದ ಒಬ್ಬರು ಇದರಲ್ಲಿ ಈ ಶಬ್ದ ಸೇರಿಲ್ಲ, ಕರೆಕ್ಷನ್ ಮಾಡಿಕೊಳ್ಳಿ ಎಂದು ತಿದ್ದಿಕೊಟ್ಟರು. ನಾವು ಒತ್ತಡದಲ್ಲಿ ಅವರು ಹೇಳಿದ ಕರೆಕ್ಷನ್ ಸರಿಪಡಿಸಿ ಆಹ್ವಾನ ಪತ್ರಿಕೆಯನ್ನು ಮುದ್ರಿಸಿದೆವು.

ಮಾರನೇ ದಿನ ಮುದ್ರಿತ ಆಹ್ವಾನ ಪತ್ರಿಕೆಯಲ್ಲಿ ಅದನ್ನು ಗಮನಿಸಿದ ಗುರುಗಳು ಸ್ವಲ್ಪ ಸಿಟ್ಟಾಗಿ ಅವರು ಬರೆದ ಪದಕ್ಕೂ ಬೇರೆಯವರು ಸರಿಪಡಿಸಿದ ಪದಕ್ಕೂ ಬರುವ ಅರ್ಥದ ವ್ಯತ್ಯಾಸವನ್ನು ತಿಳಿಸಿ ಹೇಳಿ, ಮುಂದೆ ನನ್ನ ಹಸ್ತಪ್ರತಿಗಳಲ್ಲಿ ಯಾರೂ ಕೈಯಾಡಿಸದ ಹಾಗೆ ನೋಡಿಕೊಳ್ಳಿ ಎಂದು ಖಡಕ್ ಸೂಚನೆಯನ್ನು ಕೊಟ್ಟಿದ್ದು ನಮ್ಮ ಪಾಲಿಗೆ ಎಂದೂ ಮರೆಯಬಾರದ ಪಾಠವಾಯಿತು.

ಮುಂದೆ 2015ರಲ್ಲಿ ಬರಗೂರು ಅವರ ‘ಭೋಗ ಭಾರತ vs ಸುಖೀ ಭಾರತ’ ಮತ್ತು ‘ಗಾಂಧಿ-ನಾಲಿಗೆಯನ್ನು ನಂಬಿದ ನಾಯಕ’ ಈ ಎರಡು ಪುಸ್ತಕಗಳ ಬಿಡುಗಡೆಗೆ ಹೊರ ರಾಜ್ಯದಿಂದ ಸೀತಾರಾಮ್ ಯೆಚೂರಿಯವರನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸಿದ್ದರು.

ಗುರುಗಳೇ ಪರಿಷ್ಕರಿಸಿದ ‘ಕನ್ನಡ ಚಲನಚಿತ್ರ ಇತಿಹಾಸ’ ಎಂಬ ಎರಡು ಬೃಹತ್ ಸಂಪುಟಗಳು ಹಾಗೂ ನಮ್ಮಲ್ಲಿ ಮುದ್ರಣವಾದ ಐದಾರು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಅಂದೇ ಇದ್ದುದರಿಂದ, ಅಷ್ಟೂ ಪುಸ್ತಕಗಳನ್ನು ಕೊನೆಯ ಹಂತದಲ್ಲಿ ಮುದ್ರಿಸುತ್ತಿದ್ದರಿಂದ ಸ್ವಲ್ಪ ಗಡಿಬಿಡಿಯಾಗಿ, ಮುದ್ರಣಾಲಯದ ಎಲ್ಲರಲ್ಲೂ ಒತ್ತಡ ನಿರ್ಮಾಣವಾಗಿ, ಮುದ್ರಣ ಕಾರ್ಯ ವಿಳಂಬವಾಗಿತ್ತು.

ಕಾರ್ಯಕ್ರಮ ಆರಂಭದ ಮೊದಲು ಮೂರ್ನಾಲ್ಕು ಬಾರಿ ಗುರುಗಳು ಕರೆ ಮಾಡಿದರು. ಇನ್ನೈದು ನಿಮಿಷಗಳಲ್ಲಿ ಬರುತ್ತಾನೆ, ಉಮಾ ಟಾಕೀಸ್ ಸಿಗ್ನಲ್‍ನಲ್ಲಿದ್ದಾನೆ, ರಾಮಕೃಷ್ಣ ಆಶ್ರಮ ಸಿಗ್ನಲ್‍ನಲ್ಲಿದ್ದಾನೆ ಎಂದು ಕರೆ ಮಾಡಿದಾಗಲೆಲ್ಲ ಅಲ್ಲಿ-ಇಲ್ಲಿದ್ದಾನೆ ಎಂದು ಹೇಳುತ್ತಿದ್ದುದರಿಂದ ಪುಸ್ತಕ ಬಾರದೆ ಇದ್ದರೂ ಬೆಳಗ್ಗೆ 10.30ಕ್ಕೆ ಪುಸ್ತಕಕ್ಕೆ ಕಾಯದೇ ಕಾರ್ಯಕ್ರಮವನ್ನು ಆಯೋಜಕರಿಂದ ಶುರು ಮಾಡಿಸಿ ಬಿಟ್ಟಿದ್ದರು.

ಕಾರ್ಯಕ್ರಮದ ವೇದಿಕೆ ಮೇಲೆ ಆಸೀನರಾಗಿದ್ದ ಅತಿಥಿಗಳನ್ನು ಸ್ವಾಗತಿಸುವ ಸಮಯದಲ್ಲಿ ಅಂದರೆ 10.35ಕ್ಕೆ ನಾವು ಪುಸ್ತಕಗಳನ್ನು ಕೊಟ್ಟಿದ್ದರಿಂದ ಆಯೋಜಕರಿಗೆ ಹಾಗೂ ಗುರುಗಳಿಗೆ ಬೇಸರವಾಗಿತ್ತು. ಅದರಿಂದ ಗುರುಗಳ ಕೋಪಕ್ಕೂ ಗುರಿಯಾಗಿದ್ದೆವಾದರೂ, ಅವರು ಬಹಳ ಬೇಗ ಎಲ್ಲವನ್ನು ಮರೆತು ಎಂದಿನಂತೆ ನಮ್ಮನ್ನು ಪ್ರೀತಿಯಿಂದ ಪ್ರೋತ್ಸಾಹಿಸುತ್ತಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯದ ಬಸವ ಅಧ್ಯಯನ ಪೀಠದಿಂದ ಗುರುಗಳು ತಮ್ಮ ಸಂಪಾದಕತ್ವದ 31 ಪುಸ್ತಕಗಳನ್ನು ಮುದ್ರಿಸುವ ಅವಕಾಶವನ್ನು ಕೊಡಿಸಿದರು. ಹೀಗೆ ಬರಗೂರು ಮೇಷ್ಟ್ರ ಬಹುತೇಕ ಎಲ್ಲಾ ಪುಸ್ತಕಗಳು ಹಾಗೂ ಆಹ್ವಾನ ಪತ್ರಿಕೆಗಳ ಮುದ್ರಣ ನಮ್ಮಲ್ಲಿ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಬರಗೂರರ ಕೆಲಸಗಳನ್ನು ಶ್ರದ್ಧೆ ಮತ್ತು ಭಕ್ತಿಯಿಂದ ಮಾಡುತ್ತಾ ಮಾಡುತ್ತಾ ನಮ್ಮ ಮುದ್ರಣಾಲಯದ ಎಲ್ಲಾ ಸಿಬ್ಬಂದಿ ಅವರ ಪ್ರೀತಿಗೆ ಪಾತ್ರರಾಗಿದ್ದಾರೆ.

August 31, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅಂದು, ನಾನು ವಿದ್ಯಾರ್ಥಿಗಳ ಮುಂದೆ ತಲೆ ತಗ್ಗಿಸಿದೆ…

ಅಂದು, ನಾನು ವಿದ್ಯಾರ್ಥಿಗಳ ಮುಂದೆ ತಲೆ ತಗ್ಗಿಸಿದೆ…

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ...

‘ಫಿರ್ ಭೀ ದಿಲ್ ಹೈ ಹಿಂದೂಸ್ತಾನಿ’

‘ಫಿರ್ ಭೀ ದಿಲ್ ಹೈ ಹಿಂದೂಸ್ತಾನಿ’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ 'ಅರೇ... ಹೋದ......

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This