ಸ೦ಡೆ ಸ್ಪೆಷಲ್ : ನಾನ್ ವೆಜ್ ಲು೦ಗಿ!

ನೀಲೀಬಣ್ಣದ ಚೌಕಳೀ ಲುಂಗಿ..

– ಡಾ. ಎಸ್.ಬಿ.ಜೋಗುರ ಮಾತು ಒಡೆದು ಮೀಸೆಮೂಡಿದ ಮೇಲೂ ಚಡ್ಡಿ ಹಾಕುವದಕ್ಕೆ ಹೇಸದಿದ್ದಾಗ ನೆರೆಮನೆಯವರು ಮೊಣಕಾಲಿನ ಗಂಟಕಂಡು, ಹಂಗಿಸಿ ಹಂಪ ಹರದ ಮ್ಯಾಲ ನನ್ನಲ್ಲಿಯೂ ಮುಜುಗರ ಮೊಳಕೆಯೊಡೆದಿತ್ತು.ನಾನು ದೊಡ್ಡವನಾಗಿದ್ದಕ್ಕೆ ನನ್ನ ಜೈವಿಕ ಸಂಗತಿಗಳ ಸಂಗಾತದ ಸಾಕ್ಷಿಗಳಿಗಿಂತಲೂತೊಡುವ ಚಡ್ದಿ ಇಲ್ಲವೇ ಲುಂಗಿಯೇ ನಿರ್ಣಾಯಕವಾಗುತ್ತದೆ ಎಂದು ನಾನಂತೂ ಆಗ ಎಣೆಸಿರಲಿಲ್ಲ. [ಇದು ಲಂಕೇಶರು ಕರೆಯುತ್ತಿದ್ದ ಚಡ್ಡಿಯಲ್ಲ].  ನೆರೆಮನೆಯ ರಾಂಪುರ ಶಂಕ್ರವ್ವನನ್ನ ಅವ್ವನ ಮುಂದ ನಿನ್ನ ಮಗ ಮುದುಕ ಆಗಲಿಕ್ಕ ಬಂದರೂ ಚಡ್ಡೀ ಮ್ಯಾಲೇ ಇರೂದನೂ..? ಅಂತ ಕೇಳಿದ ಮ್ಯಾಲ ಅವ್ವ ತಡ ಮಾಡದೇ ತಾಬಡತೋಬಡ ಜಿಗಿಸತ್ತ ಅಪ್ಪನ ದಡಿ ದೋತರ ಒಂದನ್ನು ಟರ್..ಟರ್.. ಅಂತ ಹರದು, ಲುಂಗಿ ಮಾಡಿಕೊಟ್ಟಿದ್ದೇನೋ ಖರೆ ಖರೆ. ಆದರೆ ಅದು ಕುಂತ ಕುಂತಲ್ಲೇ ಪಸಕ್.. ಅಂತ ಪಿಸುಕಿ ಒಳಗಿರೋ ಪಟ್ಟಾಪಟ್ಟಿ ಚಡ್ಡಿ ಕಾಣೊ ಮಟ್ಟಕ್ಕೆಸೀಳಿ ಹೋದದ್ದಂತೂ ಸುಳ್ಳಲ್ಲ. ದೋತರ ಗೀತರನಿನಗ ಪುರಾಟ ಆಗೂವಂಗಿಲ್ಲ ಸುಮ್ಮ ನಿಮ್ಮಪ್ಪಗ ಹೇಳಿ ಒಂದು ಹೊಸ ಲುಂಗಿನೇ ಇಸಗೂಟತೀನಿ ತಗೊ ಅಂದಿದ್ದಳು. ಅಪ್ಪ ಹೆಚ್ಚಾನು ಹೆಚ್ಚ ಹಸರ ದಡಿ ದೋತರ ಉಡವನು. ಆ ದಡಿ ಬಾಳ ಅಗಲ ಇದ್ದರೂ ಅಪ್ಪಗ ಪಸಂದ್ ಆಗ್ತಿರಲಿಲ್ಲ. ಅಂತದರಾಗ ಅವ್ವ ನಮ್ಮ ಶರಣೂಗ ಒಂದು ಲುಂಗಿ ಇಸಗೂಡರಿ ಅಂವಾ ಚಡ್ದೀ ಮ್ಯಾಲತಿರಗೂದು ನೋಡಿ ಮೊನ್ನೆ ರಾಂಪುರ ಶಂಕರವ್ವ ಹ್ಯಾಂಗ ಬೇಕು ಹಂಗ ಅಡಸ್ಯಾಡಿದ್ದಕ ಅಂವಗ ಬಾಳ ಬ್ಯಾಸರ ಆಗಿತ್ತು ಅಂತ ಹೇಳಿದ ಮ್ಯಾಲ ಅಪ್ಪ ಮುಸಲರಂಗ ಲುಂಗಿ ಸುತಗೊಂಡು ಏನು ತತ್ತೀ ತುಂಬಲಿಕ್ಕ ಹೊಗ್ತಾನನೂ..? ಅಂತ ವ್ಯಾಸೀ ಮಾತಾಡಿದ್ದ. ಅವ್ವ ಹಂಗ್ಯಾಕ ಮಾತಾಡತೀರಿ..? ಈಗಂವ ಎಟ್ಟೇ ಆಗಲಿ ದೊಡ್ದಂವ ಆಗ್ಯಾನ ಅಂತ ಹೇಳದ ಮ್ಯಾಲ ಅಪ್ಪ ಕಿಸೆಯೊಳಗಿಂದು ಹತ್ತು ರೂಪಾಯಿ ತಗದು ನನ್ನ ಕೈಯ್ಯಾಗ ಕೊಟ್ಟು ನಿನಗ ಎಂಥದು ಬೇಕು ಅಂಥದು ತಗೊ ಅಂದಿದ್ದ. ನಾ ಸೀದಾ ಬಜಾರದೊಳಗಿನ ಗೌಡರ ಅಂಗಡಿಗಿ ಹೋಗಿ ಒಂದು ಲುಂಗಿ ತೋರಸರಿ ಅಂದೆ. ಆ ಅಂಗಡಿಯವ ಹತ್ತು ಬಣ್ಣದ್ದು.. ಹತ್ತು ಡಿಜೈನದು ನನ್ನ ಮುಂದ ಸಾಲಾಗಿ ಸುರದು ಬಿಟ್ಟ. ನನಗ ಎಲ್ಲದರಲ್ಲೇ ಹೆಚ್ಚು ಇಷ್ಟ ಆದದ್ದು ನೀಲಿಬಣ್ಣದ ಚೌಕಳೀ ಲುಂಗಿ. ದಂಡೀ ದಡಿ ಕಪ್ಪು ಬಣ್ಣ, ನಡುವ ದೊಡ್ದ ದೊಡ್ಡ ನೀಲಿ ಪಟ್ಟಿ..ಅದರ ಮ್ಯಾಲ ಸಣ್ಣ ಸಣ್ಣ ಬಿಳಿ ಮಿಶ್ರಿತ ನೀಲಿ ಬಣ್ಣದ ಚೌಕಳೀಗಳು. ಇಡೀ ಲುಂಗಿ ತುಂಬಾ ನೀಲಿಪಟ್ಟೀ ತುದಿಗಿ ಹಳದೀ ಬಣ್ಣದ ಸಣ್ಣ ಸಣ್ಣ ಲೈನುಗಳು. ಬಾಳಂದ್ರ ಬಾಳ ಚೆಂದಿತ್ತು.  ಮನಿಗಿಬಂದು ಅಪ್ಪ ಮತ್ತ ಅವ್ವ ಇಬ್ಬರಿಗೂ ತೋರಸಿದ್ದೇ ಅಪ್ಪ ಉಡಲಿಕ್ಕರೇ ಬರತೈತೋ ಇಲ್ಲೋ..? ಅಂತ ಕೆಳಿದ್ದೇ ಅವ್ವ ಅಯ ಮೊನ್ನೆ ನೀವುನೊಡಬೇಕಿತ್ತು.? ನಿಮ್ಮ ದೋತರ ಹರದು ಕೊಟ್ಟ್ತಿದ್ದೆ ಎಂಥಾ ಚಂದ ಉಟ್ಟಿದ್ದ ಅಂತ ನನ್ನ ಪರ ವಹಿಸಿ ಮಾತಾಡಿದ್ದಲು. ಮೊದಲ ಸಿಂಪಗೇರಗೋಪಾಲ ಹತ್ತರ ಅದರ ದಂಡೀ ಹೊಲಸಗೊಂಡು ಬಾ, ನಮ್ಮಪ್ಪ ಹೇಳ್ಯಾನ ಅಂತ ಹೇಳು ಅಂದದ್ದೇ ನಾ ಹೋಗಲಿಕ್ಕಹಿಂದ ಮುಂದ ನೊಡದೆ ಹೋಗು, ನನ್ನ ಹೆಸರಹೇಳು. ರೊಕ್ಕಾ ಕೇಳದರ ನಾನೇ ಬರ್ತನಿ ಅಂದದ್ದೇ ಲುಂಗಿ ಕೈಯಾಗ ಹಿಡ್ಕೊಂಡು ನಡದೆ. ಅಪ್ಪ ನಮ್ಮಮನಿಯೊಳಗಿನ ಎಲ್ಲರ ಬಟ್ಟೆನೂ ಆ ಗೋಪಾಲ ಹತ್ತಿರಾನೇ ಹೊಲಸೂದಿತ್ತು ಆ ಹಕ್ಕಿನಿಂದಲೇಹೋಗಿ ಹೇಳು ಅಂದಿದ್ದಿತ್ತು. ಅಂತೂ ಇಂತೂ ಅವತ್ತು ಲುಂಗಿ ಉಡೊ ಭಾಗ್ಯ ಒದಗಿಬಂದಿತ್ತು. ಆ ನೀಲೀ ಬಣ್ಣದ ಚೌಕಳೀ ಲುಂಗಿ ನಾದೊಡ್ದವನಾಗಿದ್ದಕ್ಕ ಸಾಕ್ಷಿಯಾದಂಗಿತ್ತು. ನಮ್ಮ ಬಾಜೂ ಮನಿಯೊಳಗ ಕಾಲೇಜು ಮೇಸ್ಟ್ರ ಒಬ್ಬರು ಸ್ಟೈಲಾಗಿ ತಾವು ಉಡೋ ಲುಂಗಿನ್ನ ಮಡಚಿ ಮ್ಯಾಲ ಕಟ್ಟತಿದ್ದರು. ಅವರು ಬೆಳಿಗ್ಗೆಹೊರಗ ಹಲ್ಲ ತಿಕ್ಕೂ ಮುಂದ ಅವರು ಮಡಚಿ ಕಟ್ಟಿದ್ದ ಲುಂಗಿನೇ ನೋಡತಿದ್ದೆ. ಆ ಲುಂಗಿ ಅನ್ನೂದು ಅಷ್ಟು ಹಿತ ಆಗತೈತಿ ಅಂತ ಅವಾಗೇ ನನಗ ಗೊತ್ತಾದದ್ದು. ಅದು ಉಟ್ಟರ ಲುಂಗಿಬಿಚ್ಚಿದರ ಹಾಸಿಗೆ.. ಮುಖದ ಮ್ಯಾಲ ಹಾಕೊಂಡರ ಹೊದಕೆ.. ಏನರೇ ತಿನ್ನೂ ಐಟೆಂ ಇದ್ದರ ಜೋಳಿಗೆ.. ಬಾಳ ಬಿಸಲಿದ್ದರೆ ನೆರಳು ನೀಡೊ ಛತ್ರಿ .. ಬೆವರು ಇಲ್ಲಾ ಹಸಿ ಇದ್ದರ ಮುಖಾ ಒರಸ್ಕೊಳ್ಳೊ ಟವಲ್.. ಕೈ ತೊಳಕೊಂಡರ ಒರಸೋ ಕರ್ಚೀಫ಼್.. ತಲಿಗಿ ಬಿಗದರರುಮಾಲು.. ಕಾಳು ಕಡಿ ಏನರೇ ಕಟ್ಟಿದರ ಗಂಟು.. ಕಟ್ಟಿಗಿ, ಹುಲ್ಲಿನ ಹೊರಿ ಸುತ್ತದರಹಗ್ಗ.. ಎಲ್ಲಾ ಮುಗದು ತೂತು ಬಿದ್ದು ಚಿಂದಿ ಆದ ಮ್ಯಾಲ ಮಸಿ ಅರಿವಿ.. ಮತ್ತೊಂದುಮಗದೊಂದು. ಇಂಥಾ ಲುಂಗಿ ಏನೆಲ್ಲಾ ಆಗಿ ಸಲ್ಲತೈತಿ ಅಂತ ನನಗ ತಿಳಿಲಾಕ ಅದರ ಸಹವಾಸಕ್ಕಬಂದ ಮ್ಯಾಲ ತಡ ಆಗಲಿಲ್ಲ. ಇಂಥಾ ನೀಲೀ ಚೌಕಳೀ ಲುಂಗಿ ನನ್ನನ್ನು ನಾನ್ ವೆಜಿಟೇರಿಯನ್ಮಾಡುವಲ್ಲಿ ತನ್ನ ಕರಾಮತ್ತನ್ನ ತೋರಸಿರೋದನ್ನ ಮರೆತೇನಂದರ ನಾ ಮರೆಯುಲಿ ಹ್ಯಾಂಗ..? ಆಗ ನಾನು ಪಿ.ಯು.ಸಿ ಯಲ್ಲಿ ಓದುತ್ತಿರಬೇಕು. ಅವ್ವ ಮನೆಯಲ್ಲಿ ಕೋಳಿಗೂಡ ಮಾಡಿದ್ದರೂ ತತ್ತಿ ಮಾತ್ರ ಹೊರಗ ಮಾರತಿದ್ದಳು, ಇಲ್ಲಾಂದ್ರ ಮರಿ ಕೂಡಸತಿದ್ದಳು. ನಮ್ಮ ಮನಿ ದೇವರು ಖಡೆ ಖಡೆ ವೀರಭದ್ರ. ಮಾತು ಎತ್ತಿದರ ಅವ್ವ ಬೆಂಕಿ ಅಂತ ದೇವರು ಅಂತ ನಮಗೆಲ್ಲಾ ಹೆದರಸತಿದ್ದಳು. ಬ್ಯಾಸಗೀ ದಿಂದಾಗ ಹುಳ ಹುಪಟಿ ಬಂದು ಯಾರಿಗರೆ ಮುಟ್ಟದರ ನೀವು ಎಲ್ಲೋ ಏನೋ ತಿಂದುಬಂದೀರಿ ಅನ್ನೂವಷ್ಟು ಅವ್ವ ಸಾಂಪ್ರದಾಯಿಕವಾಗಿದ್ದಳು. ಹಿಂಗಿರೋ ಅವ್ವ ಗೂಡ ಕಟ್ಟಿಸಿ ಕೋಳಿ ಸಾಕ್ತಿದ್ದ ರೀತಿ ನೆನಪುಮಾಡಿಕೊಂಡ್ರ ಮಾತ್ರ ನನಗ ಈಗಲೂ ವಿಚಿತ್ರ ಅನಸತೈತಿ. ನಾನೂ ಅವಾಗಾವಾಗ ಮಟ ಮಟಮಧ್ಯಾಹ್ನದಾಗ ಅವ್ವ ಹೊಲಕ್ಕ ಹೋದಾಗ, ಕೋಳಿ ತತ್ತಿ ಇಟ್ಟರ ಕಿಸೆ0ೊಳಗ ಹಾಕೊಂಡುಹೋಗಿ ಬೀಡಿ ಅಂಗಡಿ ಇಮಾಮಸಾಬಗ ಚಾರಾಣೆಕ ಮಾರಿ, ಅಂಟೀಲೌಡಿ ಕಟೀತಿದ್ದೆ. ಬರಬರತನನಗೂ ಆ ತತ್ತೀ ಮ್ಯಾಲ ಮೋಹ ಬರಾಕ ಶುರು ಆಯ್ತು. ಆದರ ಮನ್ಯಾಗ ನೋಡದರ ಅವ್ವ ಬೆಂಕಿಯ೦ಥಾ ದೇವರು ಅಂತಾಳ ಹ್ಯಾಂಗ ಮಾಡೂದು..? ಅನ್ನೂದುರೊಳಗ ಒಂದುಕುರಸಾಲ್ಯಾ ಐಡಿಯಾ ನೀಲೀ ಚೌಕಳೀ ಲುಂಗಿಯೊಳಗಿಂದ ಹಾದು ಹೊರಗ ಬಂತು. ವೀರಭದ್ರದೇವರು ಮನ್ಯಾಗ ಅಷ್ಟೇ ಬೆಂಕಿ. ಮಾಳಗಿ ಮ್ಯಾಲ ಮಲಕೊಂಡಾಗ ತಿಂದರ ಬೆಂಕಿಯ೦ಥಾ ದೇವರು ತಣ್ಣೀರಾಗಿ ಸಹಕರಿಸಬಹುದೇನೋ..? ನೋಡೇ ಬಿಡೋಣ ಅಂತ ಆ ದಿನ ಸ್ಕೆಚ್ಹಾಕಿದ್ದೆ. ರಾತ್ರಿ ಊಟ ಮುಗಿಸಿ, ಲುಂಗಿ ಮ್ಯಾಲ ಏರಿಸಿ ಕಟ್ಟಿ ಬಜಾರದೊಳಗೆ ತಿರಗ್ತಾ ಹೊರಟೆ.ಅಷ್ಟೊತ್ತಿಗಾಗಲೇ ಬಜಾರದೊಳಗಿನ ಅರ್ಧ ಅಂಗಡೀ ಬಾಗಿಲು ಮುಚ್ಚಿದ್ದವು. ಆ ಬದಿ ಈ ಬದಿನೋಡಕೊಂತ ತಳ್ಳೊ ಗಾಡಿಯಲ್ಲಿ ಎಗ್ ಮಾರೋ ತುಳಜಪ್ಪನ ಬಳಿ ಹೋಗಿ ತುಸು ದೂರನಿಂತು ಎರಡು ಕುದಸಿದ್ದು ತತ್ತಿಕೊಡು ಅಂದೆ. ಅವನು ಸುಲದು ಕೊಡಲೋ..ಹಂಗೇ ಕೊಡಲೋ..? ಅಂದ. ನನಗೋ ಕಸಿವಿಸಿ. ಯಾರರೇ ನೋಡಿ ಮನ್ಯಾಗ ಸುದ್ದಿ ಆಗಿ.. ಅಂತ ಯೋಚಿಸಿ ಸುಲಿಯೋದು ಬ್ಯಾಡಾ ಏನೂಬ್ಯಾಡ ಹಂಗೇ ಪೇಪರದಾಗ ಲಗೂನೇ ಸುತ್ತಿ ಕೊಡು ಅಂದೆ. ಅಂವಾ ಮತ್ತ ಉಪ್ಪು ಖಾರ ಬೇಕೋಬ್ಯಾಡೊ..? ಅಂದ. ಪಟ್ಟನೇ ಬೇಕು ಎಂದದ್ದೇ ಕೈಲಿ ಹಿಡಿದು ಮಡಚಿದ ಲುಂಗಿಯ ಒಳಗೆ ಹಾಕಿ ಮನೆಯ ಎದುರಿಗಿನ ಬಾಂಡೆ ಅಂಗಡಿಯ ಸಂದಿಯೊಳಗಿಂದ ಸೀದಾ ಮಾಳಿಗೆ ಕಡೆ ಹೊರಟೆ. ಹಿಂಬದಿ ತೊಡೆಯ ಭಾಗವನ್ನು ಆ ತತ್ತಿಗಳು ಹಿತವಾಗಿ ತದಕುತ್ತಿದ್ದವು. ಬೇಸಿಗೆಯಲ್ಲಿ ನಮ್ಮ ಬದಿ [ಸಿಂದಗಿ] ಮಾಳಿಗೆ ಮೇಲೆ ಮಲಗುವದು ಸಾಮಾನ್ಯ.  ಆದರೆ ನಮ್ಮ ಮನೆಯಲ್ಲಿ ನಾನು ನಮ್ಮ ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳು ಮಾತ್ರ ಹಾಗೆ ಮ್ಯಾಲ ಮಲಗುತ್ತಿದ್ದೆವು. ಇನ್ನು ಮಾಳಿಗೆ ಮ್ಯಾಲ ಹೋಗಲಿಕ್ಕೆ ಇನ್ನೊಬ್ಬರ ಮನೆಯ ಗೋಡೆಯ ನಿಚ್ಚಣಿಕೆಯ ಗತಿಯಾಗಿತ್ತು. ಮೆಲ್ಲಗೆ ಹತ್ತಿ ನಾನು ಮಲಗೋ ಜಾಗ ಮುಟ್ಟಿ ಆಯಿತು. ಅದಾಗಲೇ ಆಜೂಬಾಜೂ ಮಾಳಿಗೆಗಳಲ್ಲಿ ಹಾಸಿಗೆಗಳನ್ನು ಚಟಾರ್..ಪಟಾರ್.. ಎಂದು ಝಾಡಿಸಿ ಹಾಸುವ ತಯಾರಿಯಲ್ಲಿದ್ದರು. ನಾನು ಹಾಸಿಗೆಯನ್ನು ಹಾಸಿಕೊಂಡು ಕಳ್ಳ ಬೆಕ್ಕಿನಂತೆ ಮೆಲ್ಲಗೆ ಲುಂಗಿಯ ಒಳಗೆ ಕೈಹಾಕಿ ಆ ಎರಡೂ ತತ್ತಿಗಳನ್ನುತಗದು ಕೆಳಗೆ ಹಾಸಿಗೆಯ ಬದಿ ಇಟ್ಟೆ. ನಮ್ಮದು ಒಕ್ಕಲುತನದ ಮನೆತನ ಹಾಗಾಗಿ ರಾತ್ರಿ ಒಂಬತ್ತಾಗೋವರೆಗೆ ಗೂರಲು ಮುದುಕ ಮುದಕಿಯರನ್ನು ಬಿಟ್ಟರೆ ಎಲ್ಲರದೂ ಬಹುತೇಕಒಂದು ಜೊಂಪು ನಿದ್ದೆಯಾಗಿರುತ್ತಿತ್ತು. ಮಲಗಿದೆ.. ಮುಸುಕು ಹಾಕಿಕೊಂಡೆ. ಆ ಎರಡೂ ತತ್ತಿಗಳನ್ನು ಹಾಸಿಗೆಯಲ್ಲಿ ಮುಸುಕು ಹಾಕಿಕೊಂಡೇ ಸದ್ದಾಗದಂತೆ ಸುಲಿದೆ. ಆ ಗಳಿಗೆಯಲ್ಲಿ ತಪ್ಪಿಯೂ ಬೆಂಕಿಯ೦ಥಾ ದೇವರನ್ನು ನೆನಪು ಮಾಡಿಕೊಳ್ಳಲಿಲ್ಲ. ತುಸು ದೂರದಲ್ಲಿ ನನ್ನ ಚಿಕ್ಕಪ್ಪ, ದೊಡ್ದಪ್ಪನಮಕ್ಕಳು ಮಲಗಿರುವದಿತ್ತು.  ಕೌದಿಯನ್ನು ಹೊದ್ದುಕೊಂಡೇ ಆ ಸುಲಿದ ಎರಡೂ ತತ್ತಿಗಳನ್ನು ಪೇಪರಲ್ಲಿರೋ ಉಪ್ಪು ಖಾರದಲ್ಲಿ ಸುತ್ತಾ ಮುತ್ತಾ ಯಾರೂ ಇಲ್ಲ ನಾನೂ ನೀನು ಇಲ್ಲೇ ಎಲ್ಲ.. ಅನ್ನೋ ಹಾಡು ನೆನಪುಮಾಡ್ಕೊಂತ ಉರುಳಾಡಿಸಿ ನಿಗಟುವದರಲ್ಲಿದ್ದೆ.  ಅಷ್ಟರಲ್ಲಿ ನಮ್ಮ ದೊಡ್ದಪ್ಪನ ಮಗ ಕೆಮ್ಮುತ್ತಾ  ಎದ್ದು ಬಂದು ಶರಣೂ.. ನೀರು ತಂದೀಯೇನೂ..? ಅಂತ ಕೇಳದ. ಮುಸುಕು ತೆಗೆದು ಬೇರೇನೂ ಮಾತಾಡದೇ ತರಲಿಲ್ಲ ಎಂದೆ. ಅವನು ನೀರು ತರಲಿಕ್ಕೆ ನಡದ. ಅವನು ಬರೋದರೊಳಗ ಬಡ ಬಡ ತಿಂದುಮುಗಸಬೇಕು ಅಂತ ಗಪಗಪನೇ ತಿನ್ನತೊಡಗಿದೆ. ಇನ್ನೇನು ಅರ್ಧ ತತ್ತಿ ಮಾತ್ರಉಳಿದಿತ್ತು.  ಖಾರ ನೆತ್ತಿಗೇರಿ ಕೆಮ್ಮು ಶುರುವಾಯತು. ಅಷ್ಟರಲ್ಲಿ ಅವನು ಭಗೀರಥನಂತೆನೀರು ತಂಬಿಗೆ ಹಿಡಿದು ಬಂದೇ ಬಿಟ್ಟ. ನಾನು ನಿಗದಿಗೊಳಿಸಿದ ಕಾರ್ಯಕ್ರಮ ಸುಸೂತ್ರವಾಗಿ ಮುಗಿದಿತ್ತು.  ]]>

‍ಲೇಖಕರು G

July 8, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Nataraju S M

    ಲುಂಗಿಯ ವಿವಿಧ ಉಪಯೋಗಗಳನ್ನು ಕಂಡು ಅಚ್ಚರಿಯಾಯಿತು.. ಬೇರೆಯವರು ನಿತ್ಯ ಕಾಣುವ ವಸ್ತುಗಳಲ್ಲೂ ಏನನ್ನೋ ಭಿನ್ನವಾದುದನ್ನು ಕಾಣುವ ಕಣ್ಣಿರುವ ಲೇಖಕನಿಗೆ ಬರಹಕ್ಕೆ ವಸ್ತುಗಳು ತಾವಾಗಿಯೇ ಸಿಗುತ್ತಿರುತ್ತವೆ. ಶುಭವಾಗಲಿ..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: